ಸಾವು ನಮ್ಮಲ್ಲಿ ಉಳಿಸಬೇಕಾದ್ದು ಒಂದು ವಿಷಾದ ಮತ್ತು ಖಾಲಿತನ ಎನ್ನುವುದು ಅವರಿಗೆ ಅರ್ಥವಾಗಲಿ ಎನ್ನುವುದು ನನ್ನ ಆಸೆ ಮತ್ತು ಕೋರಿಕೆ. ತಮ್ಮ ನಾಟಕಗಳುದ್ದಕ್ಕೂ ಮಿಂಚುಹುಳುಗಳಂತಹ ಸಾಲುಗಳನ್ನು ಕೂರಿಸಿ ನಮ್ಮ ಯೋಚನೆಗಳಿಗೆ ಹಣತೆ ಹಚ್ಚುತ್ತಿದ್ದ ಗಿರೀಶ್ ಕಾರ್ನಾಡ್ ಇನ್ನಿಲ್ಲ. ಈ ವಿಷಯ ಈಗ ಇನ್ನೂ ಮನಸ್ಸಿನ ಆಳಕ್ಕೆ ಇಳಿಯುತ್ತಿದೆ. ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ’ ಎನ್ನುವುದು ಯಾವಾಗ ನನ್ನ ಸೊಲ್ಲಾಗಿ ಹೋಯಿತು ಗೊತ್ತಿಲ್ಲ…
ಇಂದು ತೀರಿಕೊಂಡ ನಾಟಕಕಾರ ಗಿರೀಶ್ ಕಾರ್ನಾಡರ ಕುರಿತು ಲೇಖಕಿ ಸಂಧ್ಯಾರಾಣಿಯವರ ಬರಹ

 

ಒಬ್ಬ ವ್ಯಕ್ತಿ ನಿರ್ಗಮಿಸಿದಾಗ ಆತನೊಂದಿಗೆ ನಮ್ಮ ಒಂದು ಭಾಗವೂ ಸತ್ತು ಹೋಗುತ್ತದೆ. ಆನಂತರ ನಾವು ಮೊದಲಿನಂತೆ ಇರಲು ಸಾಧ್ಯವೇ ಆಗುವುದಿಲ್ಲ. ಮುಂಜಾನೆ ಗಿರೀಶ್ ಕಾರ್ನಾಡ್ ಇನ್ನಿಲ್ಲ ಆಂದಾಗ ಆ ಸುದ್ದಿ ಅನಿರೀಕ್ಷಿತವಾದದ್ದೇನೂ ಆಗಿರಲಿಲ್ಲ. ಎರಡು ವರ್ಷಗಳ ಹಿಂದೆ ‘ಸಾಹಿತ್ಯ ಸಂಭ್ರಮ’ದಲ್ಲಿ ಭಾಗವಹಿಸಿದ್ದಾಗಲೇ ಅವರು ತಮ್ಮ ಪಾಲಿನ ಆಮ್ಲಜನಕವನ್ನು ತಾವೇ ಹೊತ್ತು ನಡೆಯುತ್ತಿದ್ದರು, ಒಂದು ಪುಟಾಣಿ ನಳಿಕೆ ಅವರನ್ನು ಈ ಜಗತ್ತಿನೊಡನೆ ಬಂಧಿಸಿತ್ತು. ಅವರ ನಿರ್ಗಮನಕ್ಕೆ ಇದು ನಮ್ಮನ್ನು ತಯಾರು ಮಾಡಬೇಕಿತ್ತು, ಆದರೆ ಸುದ್ದಿ ಕೇಳಿದ ತಕ್ಷಣ ಎದುರಾದದ್ದು ಒಂದು ಬೃಹತ್ ಶೂನ್ಯ. ಹಾಗೆ ನೋಡಿದರೆ ಕಾರ್ನಾಡರು ಭಾವವಾಗಿ ತಾಕಿದ್ದಕ್ಕಿಂತ ಆಲೋಚನೆಗಳಾಗಿ ಅರ್ಥವಾಗುತ್ತಿದ್ದದ್ದೇ ಹೆಚ್ಚು. ಅವರೆಂದರೆ ಖಚಿತ, ಸ್ಪಷ್ಟ ಮಾತುಗಳು. ಎಷ್ಟೋ ಸಲ ಅವರ ನುಡಿಗಳಲ್ಲಿ ಆರ್ದ್ರತೆಗಿಂತ ಖಚಿತತೆಯೇ ಹೆಚ್ಚು ಕಾಣುತ್ತಿತ್ತು. ಆದರೆ ಆ ಎಲ್ಲಾ ಭಾವನೆಗಳೂ, ಸಂಘರ್ಷಗಳೂ, ನೆಲದ ನಂಟು ಅವರ ನಾಟಕಗಳಲ್ಲಿರುತ್ತಿದ್ದವು. ಪ್ರತಿ ಸಲ ಅವುಗಳನ್ನು ಓದಿದಾಗ, ನೋಡಿದಾಗ ಬದುಕು ಇನ್ನಷ್ಟು ಹೆಚ್ಚು ಅರ್ಥವಾಗುತ್ತಿತ್ತು. ‘ತುಘಲಕ್’ ನನ್ನ ಅತ್ಯಂತ ಇಷ್ಟದ ನಾಟಕ, ನಂತರ ‘ಹಯವದನ’, ಆಮೇಲೆ ‘ಯಯಾತಿ’, ‘ನಾಗಮಂಡಲ’ ಮುಂದೆ…ಹೀಗೆ ಪಟ್ಟಿ ಮಾಡುತ್ತಲೇ ಹೋಗಬಲ್ಲೆ.

ಪಾಶ್ಚಾತ್ಯ ರಂಗಭೂಮಿಯ ನಾಟಕಗಳ ಗುಂಗಿನಿಂದ ನಮ್ಮನ್ನು ನಮ್ಮ ಬೇರುಗಳೆಡೆಗೆ ಸೆಳೆದವರಲ್ಲಿ ಪ್ರಮುಖರಾದವರು ಚಂದ್ರಶೇಖರ ಕಂಬಾರ ಮತ್ತು ಗಿರೀಶ್ ಕಾರ್ನಾಡರು. ನಮ್ಮದೇ ಪುರಾಣಗಳ, ಜನಪದದ ಪ್ರಸಂಗಗಳನ್ನು ಕೈಗೆತ್ತಿಕೊಂಡ ಕಾರ್ನಾಡರು ಅದನ್ನು ನಮ್ಮ ಇಂದಿಗೆ ಮುಖಾಮುಖಿಯಾಗಿಸಿದ ರೀತಿ ಅನನ್ಯವಾದದ್ದು. ಹಾಗಾಗಿಯೇ ಅವು ಬರೆದ ಕಾಲಕ್ಕೂ, ಓದಿದ ಕಾಲಕ್ಕೂ, ನೋಡುವ ಎಲ್ಲಾ ಕಾಲಕ್ಕೂ ಸಲ್ಲುವಂಥಾದ್ದು. ಹಾಗೆ ನಿರಂತರವಾಗಿ ತನ್ನನ್ನು ತಾನು ಬದಲಾದ ಕಾಲಮಾನಗಳಿಗೆ ಪ್ರಸ್ತುತವಾಗಿಸಿಕೊಳ್ಳುವುದು ಒಂದು ಮಹಾಕಾವ್ಯದ ಲಕ್ಷಣ.

‘ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವ ಪಂಪ ನಮ್ಮ ಇಂದುಗಳಿಗೆ ಸಲ್ಲುವ ಹಾಗೆ, ಕಾರ್ನಾಡರು ಬದಲಾದ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳಿಗೆ ತಮ್ಮ ನಾಟಕಗಳ ಮೂಲಕ ಹೊಸ ಬೆಳಕು ಚೆಲ್ಲುತ್ತಲೇ ಬಂದಿದ್ದಾರೆ. ಕಾರ್ನಾಡರದು ಬಹುಮುಖ ಪ್ರತಿಭೆ. ನಾಟಕಕಾರರಾಗಿ, ನಟರಾಗಿ, ನಿಷ್ಠುರ ಮಾತಿನ, ಸಾಮಾಜಿಕ ಕಾಳಜಿ ಮತ್ತು ಬದ್ಧತೆಯ ಮನುಷ್ಯರಾಗಿ ಅವರು ನಮಗೆ ಮುಖ್ಯರಾಗುತ್ತಾರೆ. ಯು ಆರ್ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿ ಚಿತ್ರವಾದಾಗ ಕಾರ್ನಾಡರು ಅದರ ಭಾವವಲಯಕ್ಕೆ ಸಂಪೂರ್ಣವಾಗಿ ಸಲ್ಲುವ ಚೌಕಟ್ಟಿನಂತಹ ಚಿತ್ರಕಥೆ ಬರೆದದ್ದಲ್ಲದೆ, ಅದರಲ್ಲಿ ನಟಿಸಿದರು ಸಹ. ಇಂದಿಗೂ ಪ್ರಾಣೇಶಾಚಾರ್ಯರು ಎಂದರೆ ಕಣ್ಣ ಮುಂದೆ ನಿಲ್ಲುವುದು ಗಿರೀಶರ ಬಿಂಬ. ಆ ಚಿತ್ರ ಕನ್ನಡಕ್ಕೆ ಮೊದಲ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟಿತು. ನಂತರ ಅವರು ನಿರ್ದೇಶನಕ್ಕೆ ಕೈ ಇಟ್ಟರು. ‘ವಂಶವೃಕ್ಷ’ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು. ಅದಂತೂ ಕಲಾತ್ಮಕ ಚಿತ್ರ, ಆದರೆ ವ್ಯಾಪಾರಿ ಚಿತ್ರಗಳಲ್ಲಿ ನಟಿಸುವಾಗಲು, ಆ ಪಾತಳಿಯ ಯಾವುದೇ ದೃಶ್ಯದಲ್ಲೂ ಗಿರೀಶ್ ಸಲ್ಲುತ್ತಿದ್ದರು. ಅವರ ನಟನೆ ಚಿತ್ರದೊಳಗೆ ಸೇರಿದ್ದೂ ಪ್ರತ್ಯೇಕವಾಗಿಯೂ ನಿಲ್ಲುತ್ತಿತ್ತು. ಯಾವುದೇ ಪಾತ್ರಕ್ಕಾಗಲೀ ಅದಕ್ಕೊಂದು edge ಕೊಡುವ ಕಲೆ ಅವರಿಗೆ ಸಿದ್ಧಿಸಿತ್ತು. ಅದಕ್ಕೆ ಅವರ ಧ್ವನಿಯ ಆಳ ಮತ್ತು ಧಾರವಾಡ ಕನ್ನಡದ ಬನಿ ಎರಡರ ಕೊಡುಗೆಯೂ ಇತ್ತು.

ನಮ್ಮದೇ ಪುರಾಣಗಳ, ಜನಪದದ ಪ್ರಸಂಗಗಳನ್ನು ಕೈಗೆತ್ತಿಕೊಂಡ ಕಾರ್ನಾಡರು ಅದನ್ನು ನಮ್ಮ ಇಂದಿಗೆ ಮುಖಾಮುಖಿಯಾಗಿಸಿದ ರೀತಿ ಅನನ್ಯವಾದದ್ದು. ಹಾಗಾಗಿಯೇ ಅವು ಬರೆದ ಕಾಲಕ್ಕೂ, ಓದಿದ ಕಾಲಕ್ಕೂ, ನೋಡುವ ಎಲ್ಲಾ ಕಾಲಕ್ಕೂ ಸಲ್ಲುವಂಥಾದ್ದು.

‘ತಬ್ಬಲಿಯು ನೀನಾದೆ ಮಗನೆ’, ‘ಕಾನೂರು ಹೆಗ್ಗಡತಿ’, ‘ನಿಶಾಂತ್’, ‘ಮಂಥನ್’, ‘ಆ ದಿನಗಳು’ ಜೊತೆಜೊತೆಯಲ್ಲಿಯೇ ‘ಎಕೆ 47’ ಮತ್ತು ಟೈಗರ್ ಚಿತ್ರದ ಪಾತ್ರಗಳಲ್ಲೂ ಅವರು ಅಷ್ಟೇ ಸಲ್ಲುತ್ತಿದ್ದರು. ಎರಡು ಪ್ರದ್ಮ ಪ್ರಶಸ್ತಿಗಳು, ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕಾಳಿದಾಸ ಸಮ್ಮಾನ್… ಹೀಗೆ ಅವರು ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಇವುಗಳೆಲ್ಲದರ ನಡುವೆ ಎಲ್ಲೋ ಒಂದು ಕಿಸುರಿನಂತೆ ಉಳಿದದ್ದು ‘ನಾಗಮಂಡಲ’ದ ಹಾಡುಗಳ ಪ್ರಕರಣ. ಅದೇ ವಿಷಯಕ್ಕೆ ಗೋಪಾಲ ವಾಜಪೇಯಿ ಮತ್ತು ಅವರ ನಡುವೆ ತಗಾದೆಯೂ ಆಗಿತ್ತು. ಅದು ಆಗಬಾರದಿತ್ತು. ಅದೊಂದು ಅದ್ಭುತವಾದ ಚಿತ್ರ ಮತ್ತು ಅವು ಅಷ್ಟೇ ಅದ್ಭುತವಾದ ಹಾಡುಗಳು. ಅವುಗಳನ್ನೆಲ್ಲಾ ಹೆಣೆದು ಮಾಲೆಯಾಗಿಸಿದ ಮೂರು ಪ್ರತಿಭೆಗಳು ಶಂಕರ್ ನಾಗ್, ಗೋಪಾಲ ವಾಜಪೇಯಿ ಮತ್ತು ಗಿರೀಶ್ ಕಾರ್ನಾಡ್, ಇಂದು ಎಲ್ಲರೂ ನಮ್ಮನ್ನು ಅಗಲಿದ್ದಾರೆ. ಮತ್ತು ಈ ಶೂನ್ಯ ನಮ್ಮೊಂದಿಗೇ ಉಳಿಯಲಿದೆ. ಇವೆಲ್ಲದರ ಜೊತೆಗೇ ನಮ್ಮೊಂದಿಗೆ ಉಳಿಯಬೇಕಾದ್ದು ಕಾರ್ನಾಡರು ತಮ್ಮ ಸುತ್ತಲಿನ ಘಟನೆಗಳಿಗೆ ಸ್ಪಂದಿಸುತ್ತಿದ್ದ ರೀತಿ. ಅದನ್ನು ಕೇಳುವ ಕಿವಿಗಳ ಜೊತೆಯಲ್ಲಿ ಸ್ಪಂದಿಸುವ ಹೃದಯವೂ ಅವರಿಗಿತ್ತು. ಹಾಗಾಗಿಯೇ ಯಾವುದೇ ಚಳವಳಿಗಳ ಸಂದರ್ಭದಲ್ಲಿ ಅವರ ದನಿ ಅತ್ಯಂತ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಇಂತಹವರು ನಮ್ಮನ್ನು ಅಗಲಿದಾಗ ನಾವು ಹೇಗೆ ಪ್ರತಿಕ್ರಯಿಸುತ್ತೇವೆ ಎನ್ನುವುದು ಹೋದವರ ಬಗ್ಗೆ ಅಷ್ಟೇ ಅಲ್ಲ, ನಮ್ಮ ಬಗ್ಗೆಯೂ ಬಹಳಷ್ಟನ್ನು ಹೇಳುತ್ತದೆ. ಅವರು ಇನ್ನಿಲ್ಲದ

ಆಗ ಆದ ನೋವಿಗಿಂತ ನನ್ನನ್ನು ಹೆಚ್ಚು ಸ್ಥಬ್ಧವಾಗಿಸಿದ್ದು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳು. ‘ಇಂಡಿಯಾ ಟುಡೆ’ ಯಂತಹ ಸುದ್ದಿ ಮಾಧ್ಯಮ ‘TIger Zinda Hai actor Girish Karnad dies at 81 in Bengaluru’ ಎನ್ನುವ ತಲೆಬರಹ ಕೊಟ್ಟು ಸುದ್ದಿ ಪ್ರಕಟಿಸಿತು. ನನಗೆ ಪರಿಚಯದ, ಒಳ್ಳೆಯ ಹುಡುಗನೊಬ್ಬ ‘Another self proclaimed intellectual ‘left’ the world today’ ಎಂದು ಬರೆದು ಅದಕ್ಕೆ ‘!’ ಅನ್ನು ಸಹ ಲಗತ್ತಿಸಿದ್ದ. ಇನ್ನೂ ಕೆಲವು ಪ್ರತಿಕ್ರಿಯೆಗಳಂತೂ ಮರುನುಡಿಯಲೂ ಅರ್ಹವಲ್ಲದ್ದು. ಕಣ್ಣಮುಂದಿನ ಚಿಕ್ಕ ಹುಡುಗರು ಹೀಗೆ ಪ್ರತಿಕ್ರಯಿಸುವುದನ್ನು ಕಂಡಾಗ ಸಂಕಟವಾಗುತ್ತದೆ. ಕಾರ್ನಾಡರ ಹಾಗೆ ಬರೆಯುವುದಿರಲಿ, ಅದನ್ನು ಓದಲು, ಅರ್ಥೈಸಿಕೊಳ್ಳಲೂ ಸಿದ್ಧತೆ ಬೇಕು ಎಂದು ಈ ಮಕ್ಕಳಿಗೆ ಅರ್ಥ ಮಾಡಿಸುವುದು ಹೇಗೆ? ಇಷ್ಟು ದ್ವೇಷವನ್ನು ಮನಸ್ಸಿನೊಳಗೆ ತುಂಬಿಕೊಳ್ಳಬೇಡಿ ಎಂದು ಅವರಿಗೆ ತಿಳಿಸಿ ಹೇಳುವುದು ಹೇಗೆ? ಭಿನ್ನತೆ ಎಂದರೆ ಅನ್ಯತೆ ಅಲ್ಲ, ಅದನ್ನು ಧ್ವೇಷಿಸುವುದು ಸಲ್ಲ ಎಂದು ವಿವರಿಸುವುದು ಹೇಗೆ. ಇದು ನನ್ನನ್ನು ಹೆಚ್ಚು ಖಿನ್ನಳನ್ನಾಗಿಸಿದೆ.

ಸಾವು ನಮ್ಮಲ್ಲಿ ಉಳಿಸಬೇಕಾದ್ದು ಒಂದು ವಿಷಾದ ಮತ್ತು ಖಾಲಿತನ ಎನ್ನುವುದು ಅವರಿಗೆ ಅರ್ಥವಾಗಲಿ ಎನ್ನುವುದು ನನ್ನ ಆಸೆ ಮತ್ತು ಕೋರಿಕೆ. ತಮ್ಮ ನಾಟಕಗಳುದ್ದಕ್ಕೂ ಮಿಂಚುಹುಳುಗಳಂತಹ ಸಾಲುಗಳನ್ನು ಕೂರಿಸಿ ನಮ್ಮ ಯೋಚನೆಗಳಿಗೆ ಹಣತೆ ಹಚ್ಚುತ್ತಿದ್ದ ಗಿರೀಶ್ ಕಾರ್ನಾಡ್ ಇನ್ನಿಲ್ಲ. ಈ ವಿಷಯ ಈಗ ಇನ್ನೂ ಮನಸ್ಸಿನ ಆಳಕ್ಕೆ ಇಳಿಯುತ್ತಿದೆ. ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ’ ಎನ್ನುವುದು ಯಾವಾಗ ನನ್ನ ಸೊಲ್ಲಾಗಿ ಹೋಯಿತು ಗೊತ್ತಿಲ್ಲ… ‘ಹಯವದನ’ದ ಪದ್ಮಿನಿ ಯಾವಾಗ ಲೋಕ ಹೊದಿಸಿದ ಪರಂಪರೆಯನ್ನು ಮುರಿದು ನಿಂತು, ಅದೇ ಕಾರಣಕ್ಕೆ ಹೆಚ್ಚು ಮನುಷ್ಯಳಾದಳು ಗೊತ್ತಿಲ್ಲ.

ತುಘಲಕ್ ನ ತಲೆಯಲ್ಲಿನ ಹತ್ತಾರು ಯೋಚನೆಗಳು ಹೇಗೆ ಚದುರಂಗದ ಮನೆಗಳಾಗಿ, ಅವನನ್ನು ಬಂಧಿಸುವ ಸೆರೆಮನೆಯ ಸರಳುಗಳಾಗಿ ಮಾರ್ಪಾಟಾದವೋ ಗೊತ್ತಿಲ್ಲ.. ಸರ್, ನೀವು ಹೋದ ನಂತರವೂ ನಮ್ಮೊಡನೆಯೇ ಇರುತ್ತೀರಿ.. ನನ್ನ ಅಂಗೈ ಮೇಲಿನ ಪುಸ್ತಕವಾಗಿ, ಕಣ್ಣೆದುರಿಗಿನ ದೃಶ್ಯವಾಗಿ, ನನ್ನೊಳಗಿನ ಎಚ್ಚರವಾಗಿ, ರಂಗಶಂಕರದಲ್ಲಿನ ದನಿಯಾಗಿ….