ಎಂತಹ ಒಳ್ಳೆಯ ಕಲಾವಿದರಾದರೂ, ಸಮಾಜಕ್ಕೆ ಬದಲಾವಣೆ ಗಾಳಿ ಬೀಸಲು ಅಹರ್ನಿಶಿ ಆಲೋಚಿಸುವ, ಬರೆಯುವ, ಸೃಜನಶೀಲತೆಯ ಕಲೆಯನ್ನು ಕಟ್ಟುವವರು ತಮ್ಮದೇ ಬದುಕಿನಲ್ಲಿ ಕಹಿ ಬೀಜವನ್ನು ಅಗೆಯಬೇಕಾಗುತ್ತದೆ. 20ನೇ ವಯಸ್ಸಿಗೆ ತನ್ನ ಅತ್ಯುತ್ತಮ ಕಾವ್ಯವನ್ನ ನೀಡಿದ ಫಾರೋಗ್ 1955 ರಲ್ಲಿ ತೀವ್ರ ಖಿನ್ನತೆಗೆ ಒಳಗಾಗಿ ಮಾನಸಿಕ ಆರೋಗ್ಯವನ್ನು ಕಳೆದುಕೊಂಡು ಎಲೆಕ್ಟ್ರಿಕ್ ಶಾಕ್‌ನ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಾಳೆ. ಹೇಗೋ ಸುಧಾರಿಸಿಕೊಂಡ ಮೇಲೂ ತನ್ನ ಸುತ್ತಲಿನ ಪ್ರಪಂಚದ ಜೊತೆ ಸೆಣೆಸಾಡುವುದು ಮಾತ್ರ ತಪ್ಪುವುದಿಲ್ಲ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಫಾರೋಗ್ ಫಾರುಖ್ಜಾದ್ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ
ಇರಾನ್ ದೇಶದ ರಾಜಧಾನಿ ತೆಹ್ರಾನಿನಲ್ಲಿ 5 ಜನವರಿ 1935 ರಲ್ಲಿ ಜನಿಸಿದ ಫಾರೋಗ್ ಫಾರುಖ್ಜಾದ್ ತಮ್ಮ ತಂದೆ ತಾಯಿಯ ಏಳು ಮಕ್ಕಳಲ್ಲಿ ಒಬ್ಬರು. ತಂದೆ ಸೇನೆಯಲ್ಲಿ ಕರ್ನಲ್, ತಾಯಿ ಗೃಹಿಣಿ. ಮನೆಯಲ್ಲಿ ಸುಖದ ಸುಪ್ಪತ್ತಿಗೆಯೇ ಇದ್ದರೂ ತಂದೆ ಮಿಲಿಟರಿ ಪದ್ಧತಿಯಂತೆ ಮಕ್ಕಳನ್ನು ಶಿಸ್ತು ಸಂಯಮದಿಂದ ಬೆಳೆಸಿದ್ದು. ಬಹುಶಃ ಇದೇ ಕಾರಣಕ್ಕೆ ಫಾರೋಗ್ ಸ್ವತಂತ್ರ ಸ್ವಭಾವದವಳಾಗಿ ಬೆಳೆದಳು. ಹದಿಹರೆಯದಲ್ಲಿಯೇ ತೀರಾ ತನಗಿಂತ ವಯಸ್ಸಾದ ತನ್ನ ದೂರದ ಸಂಬಂಧಿಯನ್ನ ಪ್ರೀತಿಸಿ ತಂದೆ ತಾಯಿಯ ವಿರೋಧದ ಮಧ್ಯೆ ಮದುವೆಯಾದಳು. ಗಂಡು ಮಗುವಿಗೆ ಜನ್ಮ ನೀಡಿದರು. ಮುಂದೆ ಕೆಲವೇ ವರ್ಷಗಳಲ್ಲಿ ಫಾರೋಗ್, ಕವಿತೆ ತನ್ನ ಕೈಬೀಸಿ ಕರಿಯುವ ಕಣ್ಸನ್ನೆಯನ್ನು ಅರಿತು ಸಂಸಾರವನ್ನು ತೊರೆದು ಕವಿತೆಯ ತೆಕ್ಕೆಯಲ್ಲಿ ಪರವಶವಾದಳು. “ಬಂಧಿ” (Captive) ಪದ್ಯದಲ್ಲಿ ಇದೆ ಪ್ರಸಂಗವನ್ನ ಕಾಣಬಹುದು :
“ಓ ಮುಗಿಲೇ,
ಒಂದಿನ ನಾನೇದರೂ ಇಲ್ಲಿಂದ
ಹಾರಿ ಹೋಗಲು ಬಯಸಿದರೆ
ಅಳುವ ಕಂದನ ಕಣ್ಣೀರಿಗೇನು ಹೇಳಲಿ ಹೇಳು
ಬಿಡು ನಾನೇನೋ ಪಂಜರದ ಪಕ್ಷಿ”
ತನ್ನ ಮೊದಲನೇ ಕವನ ಸಂಕಲನ “Captive” ಪ್ರಕಟಿಸಿದಳು. ಹಲವು ಅನಾಮಧೇಯ ಪುರುಷ, ಪುರುಷ ಪ್ರಧಾನ ಆಳ್ವಿಕೆಯನ್ನುದ್ದೇಶಿಯ ಪದ್ಯಗಳನ್ನು ಈ ಸಂಕಲನದಲ್ಲಿ ನೋಡಬೇಕು. ಲೋಕದ ಹೆಣ್ಣುಮಕ್ಕಳು ಹಾತೊರೆಯುವ ಒಂದಿಷ್ಟು ಸ್ವಾತಂತ್ರ್ಯ, ಮುಕ್ತತೆ, ಉಸಿರಾಡಲು ಸ್ವಚ್ಛ ಹವೆ. ಈ ಪದ್ಯಗಳು ಲೋಕದ ಸಕಲ ಹೆಣ್ಣುಮಕ್ಕಳ ದನಿಯೂ ಹೌದು. ಕಾವ್ಯ ನೊಂದವರ ದನಿಯಾಗಬೇಕು ಎಂದು ಬಾಯಿ ಮಾತಿಗೆ ಹೇಳಿಕೆ ಕೊಡುವ ಮತ್ತು ತೋರಿಕೆಗೆ ಕಾವ್ಯ ರಚಿಸುವ, ಕೃತಕ ಭಾವುಕತೆ ತೋರುವ ಕವಿವರ್ಯರು ಮುಖ್ಯವಾಗಿ ತಿಳಿಯಬೇಕಾದ್ದು, ಮೊದಲು ನಾನು ನನಗಾಗಿ ದನಿಯೆತ್ತಬೇಕು, ನನಗೆ ಆಗುವ ಅನ್ಯಾಯದ ವಿರುದ್ಧ ದನಿ ಎತ್ತುವ ಧೈರ್ಯ ಒಟ್ಟುಗೂಡಿಸಬೇಕು, ಆಗ ತಾನೇ ನಾನು ನನ್ನಂತೆ ನೊಂದವರಿಗೆ ದನಿಯಾಗಲು ಸಾಧ್ಯ?
ಫಾರೋಗ್ ಸಹ ಅದನ್ನೇ ಮಾಡಿದ್ದು.
20ನೇ ಶತಮಾನದಲ್ಲೂ ಇರಾನಿನಲ್ಲಿ ಉಳಿದೆಲ್ಲ ದೇಶಗಳಿಗಿಂತ ಹೆಣ್ಣಿಗೆ ಸ್ವಾತಂತ್ರ್ಯ ಕಡಿಮೆ ಅಲ್ಲದೆ ಅದೇ ಸಮಯದಲ್ಲಿ ಹಿಜಾಬ್ ಹಾಕಲು ನಿರಾಕರಿಸಿ ಸಾಕಷ್ಟು ಹೆಣ್ಣು ಮಕ್ಕಳು ದಂಗೆಯೇಳುತ್ತಾರೆ. ಇರಾನ್ ಹೊತ್ತಿ ಉರಿಯುತ್ತದೆ. ಆಗ ಫಾರೋಗ್ ಬಂಡಾಯವೆದ್ದು, ತನ್ನನ್ನು ತಾನು ಸಮಾಜದಿಂದ ಮುಕ್ತವಾಗಿ ಬದುಕಲು ಬಯಸಿದಳು.
ಆಸಿರ್(Captive – 1955)
ದಿವಾರ್ ( The wall – 1956)
ಎಸಿಯನ್ ( Rebellion – 1958)
ಹೀಗೆ ಕ್ರಮವಾಗಿ ಮೂರು ಸಂಕಲನಗಳು ಪ್ರಕಟವಾದವು. ವಿಪರ್ಯಾಸವೆಂದರೆ, ಎಂತಹ ಒಳ್ಳೆಯ ಕಲಾವಿದರಾದರೂ, ಸಮಾಜಕ್ಕೆ ಬದಲಾವಣೆ ಗಾಳಿ ಬೀಸಲು ಅಹರ್ನಿಶಿ ಆಲೋಚಿಸುವ, ಬರೆಯುವ, ಸೃಜನಶೀಲತೆಯ ಕಲೆಯನ್ನು ಕಟ್ಟುವವರು ತಮ್ಮದೇ ಬದುಕಿನಲ್ಲಿ ಕಹಿ ಬೀಜವನ್ನು ಅಗೆಯಬೇಕಾಗುತ್ತದೆ. 20ನೇ ವಯಸ್ಸಿಗೆ ತನ್ನ ಅತ್ಯುತ್ತಮ ಕಾವ್ಯವನ್ನ ನೀಡಿದ ಫಾರೋಗ್ 1955 ರಲ್ಲಿ ತೀವ್ರ ಖಿನ್ನತೆಗೆ ಒಳಗಾಗಿ ಮಾನಸಿಕ ಆರೋಗ್ಯವನ್ನು ಕಳೆದುಕೊಂಡು ಎಲೆಕ್ಟ್ರಿಕ್ ಶಾಕ್‌ನ ಟ್ರೀಟ್ಮೆಂಟ್ ಪಡೆದುಕೊಳ್ಳುತ್ತಾಳೆ. ಹೇಗೋ ಸುಧಾರಿಸಿಕೊಂಡ ಮೇಲೂ ತನ್ನ ಸುತ್ತಲಿನ ಪ್ರಪಂಚದ ಜೊತೆ ಸೆಣೆಸಾಡುವುದು ಮಾತ್ರ ತಪ್ಪುವುದಿಲ್ಲ. ಪುರುಷರು ಮಾತ್ರ, ಕಟ್ಟಿಕೊಂಡ ಹೆಂಡತಿಯನ್ನು ತೊರೆದು ಅದೆಷ್ಟೇ ಮದುವೆಗಳಾದರೂ ಸಹ ತಪ್ಪಿಲ್ಲ ಆದರೆ ಅದೇ ಹೆಣ್ಣು ಕುಟುಂಬ ತೊರೆದು ತನ್ನ ಆತ್ಮಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಹೊರ ನಡೆದರೆ, ಅದೇ ಸಮಾಜ ಅವಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನರಳಿಸಿ ಕೊಂದು ಬಿಡುವ ಸ್ಥಿತಿಯನ್ನು ನಾವು ಇಂದಿಗೂ ನೋಡಬಹುದಾಗಿದೆ. “ಕ್ಷಮಿಸಿ ಬಿಡಿ ಅವಳನ್ನು” (Forgive Her) ಪದ್ಯದ ಮೊದಲ ಸಾಲುಗಳು ಸಾರವತ್ತಾಗಿ ಇದನ್ನೇ ಚಿತ್ರಿಸಿವೆ.
“ಕ್ಷಮಿಸಿ ಬಿಡಿ ಅವಳನ್ನು,
ಮರೆಯುತ್ತಾಳೆ ಕೆಲವೊಮ್ಮೆ ನಿಂತ ನೀರಿನಂತೆ
ಖಾಲಿ ಕೊಳದಂತೆಯೇ ಅವಳು
ಎನ್ನುವ ಕಟು ಸತ್ಯವನ್ನು
ತನಗೂ ಜೀವಿಸುವ ಹಕ್ಕಿದೆಯೆನ್ನುವ ಹುಚ್ಚು ಕಲ್ಪನೆ “
ಸೂಕ್ಷ್ಮವಾಗಿ ಗಮನಿಸಿದರೆ ಫಾರೋಗ್ ಅಮೇರಿಕಾದ ಸಿಲ್ವಿಯಾ ಪ್ಲಾತ್‌ಳ ಪರ್ಷಿಯನ್ ಅವತರಣಿಕೆಯಂತೆ ಕಾಣುತ್ತಾಳೆ. ಒಂದೇ ಕಾಲಘಟ್ಟದ ಇಬ್ಬರು ಹೆಣ್ಣು ಮಕ್ಕಳು ಉಣ್ಣುವ ಬಹುತೇಕ ಒಂದೇ ತರಹದ ನೋವು, ಹತಾಶೆ, ತವಕ, ತಲ್ಲಣಗಳಿಂದ ಬದುಕು ಕಾವ್ಯವಾಗಿ ಅರಳಿರುವುದು ಒಂದು ಸೋಜಿಗ.
ಸಿನಿಮಾ ಲೋಕಕ್ಕೆ ಕಾಲಿಟ್ಟ ಫಾರೋಗ್ ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ತನ್ನ ತಾನು ತೊಡಗಿಸಿಕೊಂಡಳು. ಆಗ ಪರಿಚಯವಾದವರು ಆಗಿನ ಪ್ರಸಿದ್ಧ ಚಿತ್ರ ನಿರ್ದೇಶಕ ಇಬ್ರಾಹಿಂ ಗೊಲ್ಡಸ್ಟೇನ್. ಪರಿಚಯ ಪ್ರೇಮವಾಗಿ ಅವನೊಳಗೆ ಅನುರಕ್ತಳಾದಳು. ಉನ್ನತ ವ್ಯಾಸಂಗಕ್ಕಾಗಿ ಯೂರೋಪಿಗೆ ತೆರಳಿದಳು. 1962 ರಲ್ಲಿ ಅದ್ಭುತವಾದ ಒಂದು ಇಪ್ಪತ್ತು ನಿಮಿಷಗಳ ಕಿರುಚಿತ್ರ “The House is Black” ಅತ್ಯಂತ ಕಾವ್ಯಾತ್ಮವಾಗಿ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ದಮನಿತರ ದನಿಯಾಗಿ ಆ ಚಿತ್ರವನ್ನು ಬಿಡುಗಡೆಗೊಳಿಸಿದಳು. ಈ ಕಿರುಚಿತ್ರ ಇರಾನಿನಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತು. 1963 ರಲ್ಲಿ Oberhausen Film Festival ಪಶ್ಚಿಮ ಜರ್ಮನಿಯಲ್ಲಿ ಈ ಚಿತ್ರ ಗ್ರಾಂಡ್ ಪ್ರೈಜ್ ತನ್ನ ಮುಡಿಗೆ ಏರಿಸಿಕೊಂಡು ಬೀಗಿತು.
“The Sin” ಪದ್ಯವಂತೂ ಅವಳ ದಿಟ್ಟತನಕ್ಕೆ ಸಾಕ್ಷಿಯಾಗಿದೆ.
“ಕತ್ತಲೆಯ ನೀರವ ಏಕಾಂತದಲ್ಲಿ
ಸುಮ್ಮನೆ ಅವನ ಮಗ್ಗುಲು ಮಲಗಿರುವೆ
ಅವನ ತುಟಿ ನನ್ನ ತುಟಿಗಳ ಮೇಲೆ
ಕಡುಬಯಕೆಯನ್ನು ಸುರಿದವು
ಆಗಲೇ, ಈ ಹುಚ್ಚುಖೋಡಿ
ನಾನು ಕೊರಗುವುದು ಬಿಟ್ಟು ಮೇಲೆದ್ದೆ “
1964 ರಲ್ಲಿ “Another Birth” ಸಂಕಲನ ಅವಳನ್ನ ಹೊಸ ದನಿಯ ಪರ್ಷಿಯನ್ ಕವಿಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಸಿತು. ಫಾರೋಗ್ ಹಿಂದಣ ರೂಢಿಯನ್ನು ಮುಂದಣ ಅನಂತವನು ಸದಾ ಕಣ್ಣಂಚಲ್ಲಿ ಇಟ್ಟುಕೊಂಡೆ ಬರೆಯುವ, ಬದುಕುವ ಕಲೆ ಕರಗತ ಮಾಡಿಕೊಂಡಿದ್ದಳು.
1979ರ ದಂಗೆಯ ಸಮಯದಲ್ಲಿ ಇರಾನಿನ ಕವಿ ಫತೇಮೇಹ್ ಶಮ್ಸ್ “ಇರಾನನ್ನು ಬಿಡುವ ಯಾರದೇ ಕೈಯಲ್ಲಾದರೂ ಈ ಮೂರು ಪುಸ್ತಕಗಳು ಇದ್ದೆ ಇರುತ್ತವೆ.
I. ಸಾದಿ
II. ರೂಮಿ
III. ಫಾರೋಗ್
14 ಫೆಬ್ರವರಿ 1967 ರಂದು ತನ್ನ ತಾಯಿಯ ಮನೆಯಿಂದ ಮಧ್ಯಾಹ್ನದ ಊಟ ಮುಗಿಸಿಕೊಂಡು ವಾಪಾಸಾಗುವಾಗ ರಸ್ತೆ ಅಪಘಾತದಲ್ಲಿ ಬದುಕಿನ ಋಣ ಮುಗಿಸುವಾಗ ಕೇವಲ 32 ವಯಸ್ಸಿನ ತರುಣಿ ಫಾರೋಗ್. ತೆಹರಾನಿನ ಝಹೀರ್ – ಅಲ್ – ಡೌಲೆಹ್ ರುದ್ರಭೂಮಿಯಲ್ಲಿ, ಫೆಬ್ರವರಿಯ ಹಿಮದ ಹಾಸಿನ ಕೆಳಗೆ ತಣ್ಣಗೆ ಮಲಗಿದಳು.
ಅವಳು ಕಾಲವಾದಳು ಎನ್ನುವಾಗಲೇ ಅವಳ ಕೊನೆಯ ಸಂಕಲನ “Let Us Believe in the Beginning of the Cold Season” ಪ್ರಕಟವಾಯಿತು. 13ನೇ ಶತಮಾನದ ಪರ್ಷಿಯನ್ ಅನುಭವಿ ಕವಿ ರೂಮಿಯ ಓದಿನ ಗಾಢ ಛಾಯೆ ಈ ಸಂಕಲನದ ಪದ್ಯಗಳ ಮೇಲಿರುವುದು ಕಾಣಬಹುದು.
ಫಾರೋಗ್ ಫಾರುಖ್ಜಾದಳ ಬಹುತೇಕ ಕವಿತೆಗಳನ್ನು ಪರ್ಷಿಯನ್ ನಿಂದ ಇಂಗ್ಲಿಷಿಗೆ ತರ್ಜುಮೆ ಮಾಡಿದವರು ಶೋಲೇ ವಾಲ್ಫೇ. ಒಂದಿಷ್ಟು ಕನ್ನಡ ಅವತರಣಿಕೆಗಳು ನಿಮ್ಮ ಓದಿನ ಅವಗಾಹನೆಗೆ…
1. ಉಡುಗೊರೆ (The Gift)
*ಆಂಗ್ಲಮೂಲ: ಶೋಲೇ ವಾಲ್ಫೇ
ನಿನ್ನೊಂದಿಗೆ ಮಾತನಾಡುವೆ
ಕತ್ತಲ ರಾತ್ರಿಯಂಚಿನಿಂದ
ಇರುಳು ಮುಗಿಯುವುದರ ಕುರಿತು
ಕರಾಳ ರಾತ್ರಿ ಕೊನೆಯಾಗುವುದರ ಕುರಿತು
ಪ್ರಿಯ,
ನನ್ನ ಭೇಟಿಗೆ ಬರುವಾಗ
ಒಂದು ಟಾರ್ಚು ಹಿಡಿದು ಬಾ
ನನಗಾಗಿ ಪುಟ್ಟ ಕಿಟಕಿ ಕೊರೆ
ನಾನಾಗ ಕಣ್ತುಂಬಿಕೊಳ್ಳುವೆ
ಭಾಗ್ಯವಂತರೆಲ್ಲಾ ಗಿಜಿಗುಡುವ ಓಣಿಯನ್ನು
2. ಬಂಧಿ (The Captive)
ನೀನೇ ಬೇಕು
ಮನಸಿಗೆ ತೃಪ್ತಿಯಾಗುವಷ್ಟು
ನಿನ್ನ ಗಟ್ಟಿಯಾಗಿ ತಬ್ಬಿಕೊಳ್ಳಲಾರೆ
ಗೊತ್ತಿದೆ ನನಗೆ
ನೀನು ಬೆಳಗುವ ಬಾನಬಯಲು
ನಾನು ಇಲ್ಲೆಲ್ಲೋ ಪಂಜರದ
ಮೂಲೆಯ ಹಕ್ಕಿ
ತಣ್ಣನೆಯ ಕಪ್ಪು ಸರಳುಗಳ ಹಿಂದೆ ನಿಂತು
ನಿನ್ನೆಡೆಗೆ ಎಸೆಯುವೆ ನನ್ನ ಬೆರಗು ಕಂಗಳ
ಎಲ್ಲಿಂದಲಾದರೂ ಬಿಡಿಸುವ ಕೈಯೊಂದು ಬರಬಾರದೆ
ನಾನು ಥಟ್ಟನೆ ನಿನ್ನೆಡೆಗೆ ಹಾರಿ ಬರುವೆ!
ಒಂದು ನಿರ್ಲಕ್ಷ್ಯ ಗಳಿಗೆಯಲ್ಲಿ
ಈ ನೀರವ ಸೆರೆಮನೆಯಿಂದ ತಪ್ಪಿಸಿಕೊಂಡು
ನನ್ನನ್ನು ಬಂಧಿಸಿದ
ಆ ಜೈಲರ್ ಕಣ್ಣಲಿ ಕಣ್ಣಿಟ್ಟು
ನಕ್ಕು
ನಿನ್ನೊಡನೆ ಹೊಸ ಬದುಕು ಬಾಳುವೆ
ಹೀಗೆಲ್ಲಾ ಅಂದುಕೊಂಡರೂ
ತಿಳಿದಿದೆ ನನಗೆ
ಖುದ್ದು ಜೈಲರ್
ನನ್ನನ್ನು ಮುಕ್ತಗೊಳಿಸುವೆನೆಂದರೂ
ಸೆರೆಮನೆಯಿಂದ ಹೊರಬರುವ ಧೈರ್ಯ ಮಾಡಲಾರೆ
ನನ್ನ ಹಾರಾಟಕ್ಕೀಗ ಯಾವ ಉಸಿರೂ ಇಲ್ಲ
ಉಯಿರೂ* ಉಳಿದಿಲ್ಲ
ಪ್ರತಿ ಬೆಳಗಿನ ಸರಳುಗಳ ಹಿಂದೆ ನಿಂತು
ಮಗುವಿನಂತೆ ನಗುವೆ
ನಲಿವಿನ ರಾಗ ಹಾಡಲು
ಅವನ ತುಟಿ ಮುತ್ತಿಕ್ಕಲು ಬರುವುದು
ನನ್ನ ಕಡೆಗೇ
ಓ ಮುಗಿಲೇ,
ಒಂದಿನ ನಾನೇನಾದರೂ ಇಲ್ಲಿಂದ
ಹಾರಿ ಹೋಗಲು ಬಯಸಿದರೆ
ಅಳುವ ಕಂದನ ಕಣ್ಣೀರಿಗೇನು ಹೇಳಲಿ ಹೇಳು
ಬಿಡು ನಾನೇನೋ ಪಂಜರದ ಪಕ್ಷಿ
ಹಾಳೂರು ಬೆಳಗುವ
ಅವಳೆದೆಯುರಿಯ ಸೂಡಿನ ಬೆಳಕು ನಾನು
ಕತ್ತಲೆಯ ಮೌನ ಬಯಸಿದರೆ
ಗೂಡು ಗುಡಿಸಿ ಬಿಡುವೆ
*ಉಯಿರು- ಗಾಳಿ
3. ಹಕ್ಕಿ ಸಾಯಬಹುದು… (The Bird may die)
*ಆಂಗ್ಲಮೂಲ: ಮರ್ಯಮ್ ದಿಲ್ಮಾಘಾನಿ
ನನಗೆ ದುಃಖವಾಗ್ತಿದೆ,
ಬೇಸರವಾಗ್ತಿದೆ,
ಅಂಗಳದಲ್ಲಿ ನಿಂತು
ನಿಶಬ್ದ ರಾತ್ರಿಯ ಮಿದುವಿಗೆ
ತಣ್ಣನೆಯ ಬೆರಳುಜ್ಜುವೆ
ದೀಪಗಳೆಲ್ಲವೂ ಆರಿಹೋಗಿವೆ
ಸೂರ್ಯನಿಗೂ
ಯಾರೂ ನನ್ನ ಪರಿಚಯ ಮಾಡಿಸುವುದಿಲ್ಲ
ಕಲರವದ ಹಂಸಗಳ ಬಳಿಗೂ
ಯಾರೂ ನನ್ನ ಕರೆದೊಯ್ಯುವುದಿಲ್ಲ
ನೆನಪಿಟ್ಟುಕೊಳ್ಳಿ ಈಗ ಹಾರುವುದನ್ನು
ಇನ್ನೂ ಹಕ್ಕಿ ಸತ್ತರೂ ಸಾಯಬಹುದು
4. ಕ್ಷಮಿಸಿ ಬಿಡಿ ಅವಳನ್ನು (Forgive her)
*ಆಂಗ್ಲಮೂಲ: ಶೋಲೇ ವಾಲ್ಫೇ
ಕ್ಷಮಿಸಿಬಿಡಿ ಅವಳನ್ನು
ಮರೆಯುತ್ತಾಳೆ ಕೆಲವೊಮ್ಮೆ ನಿಂತ ನೀರಿನಂತೆ,
ಖಾಲಿ ಕೊಳದಂತೆಯೇ ಅವಳು
ಎನ್ನುವ ಕಟು ಸತ್ಯವನ್ನು
ತನಗೂ ಜೀವಿಸುವ ಹಕ್ಕಿದೆಯೆನ್ನುವ ಹುಚ್ಚು ಕಲ್ಪನೆ
ಕ್ಷಮಿಸಿ,
ರೂಹಿಲ್ಲದ ಚಿತ್ರಕ್ಕೆ ಲೆಕ್ಕಕ್ಕಿಲ್ಲದ ಸಿಟ್ಟನ್ನು
ಹಾಗೇ ಕಾಗದದ ಕಣ್ಣಲ್ಲಿ ಕರಗಿ ಹೋಗುವ
ಆ ಮಿಸುಕಾಡುವ ಹಂಬಲವನು
ಕ್ಷಮಿಸಿ,
ಅವಳ ಕರಡಿಗೆಯನು,
ಕೆಂಪು ಚಂದಿರನ ಹೊಳೆ
ಹರಿದು ನೀರಾಗಿ ಹೋಗಿದೆ
ಇರುಳ ಬಿರುಗಾಳಿಯ ಘಮಲು
ಅವಳ ಯುಗದ ನಿದ್ದೆ ಕದಡಿದೆ
ಕ್ಷಮಿಸಿ,
ತನ್ನೊಳಗೇ ನುಚ್ಚುನೂರಾಗುವ ಕಣ್ಣಾಲಿಗಳಲಿ
ಬೆಳಕ ಕನಸಿನ್ನೂ ಮಿಸುಕಾಡಿದೆ
ಪ್ರೇಮದ ಉಸಿರನ್ನು ಆವಾಹಿಸಿಕೊಂಡ
ಕೆಲಸಕ್ಕೆ ಬಾರದ ಮುಡಿ
ಇನ್ನೂ ಮನಸಿಗೆ ಬಂದಂತೆ ಹಾರಾಡುತಿದೆ
ಓ ಸುಖದೂರಿನ ಬಂಧುಗಳೇ
ನೀವೇನೋ ಮಳೆಗೆ ಕಿಟಕಿ ತೆರೆದಿಡುವಿರಿ
ಕ್ಷಮಿಸಿ,
ಅವಳನ್ನ ಕ್ಷಮಿಸಿ ಬಿಡಿ
ಅವಳೀಗ ಮರುಳಾಗಿದ್ದಾಳೆ
ಯಾಕೆ ಗೊತ್ತಾ,
ನಿಮ್ಮ ಬದುಕಿನ ಈಟುಳ್ಳ ಬೇರುಗಳು
ಅವಳ ಬಂಜರು ನೆಲದೆದೆಯಲ್ಲಿ ಹುದುಗಿ
ಪಾಪದ ಎದೆ ಬಾಯುವವರೆಗೂ
ಮೀಟುವುದು ಕರುಬುವ ಕೊರಡು
5. ಪ್ರೇಮಿಸುವುದು (On Loving)
*ಆಂಗ್ಲಮೂಲ: ಶೋಲೇ ವಾಲ್ಫೇ
ಈ ರಾತ್ರಿ
ನಿನ್ನ ಕಣ್ಣ ಬಯಲಿಂದ
ಸುರಿಯುವುದು ನಕ್ಷತ್ರ ಮಳೆ
ನನ್ನ ಕವಿತೆಯ ಮೇಲೆ
ಬೆರಳ ತುದಿಯ ಕಿಡಿ ಹಾರಿ
ಖಾಲಿ ಪುಟದ ಖಾಲಿತನ ಜ್ವಲಿಸಿದೆ
ಮಿತಿ ಮೀರಿದ ಬಿಸಿಯುಸಿರಿನ ಕವಿತೆ
ಬಯಕೆಯ ಅತಿರೇಕಕೆ ನಾಚಿ
ಉರಿಯ ನಾಲಗೆಯೊಳಗೆ
ಮತ್ತೆ ಬಚ್ಚಿಟ್ಟುಕೊಳ್ಳುವುದು
ಈ ಜ್ವಾಲೆಯದು ನಿಲ್ಲದ ಅಬ್ಬರ
ಹೌದು,
ಪ್ರೀತಿ ಇನ್ನೂ ಆರಂಭ
ಬೀದಿಯಂಚಿನ ತಿರುವು ಕಾಣದು
ಕೊನೆಯಾಗುವ ಯೋಚನೆಯಿಲ್ಲ
ಪ್ರೀತಿಸುವುದನ್ನು ಮಾತ್ರ ಪ್ರೀತಿಸುವೆ
ಕತ್ತಲೆಯಿಂದೇಕೆ ದೂರ ಓಡಬೇಕು
ಈ ರಾತ್ರಿ ಲೆಕ್ಕವಿಲ್ಲದಷ್ಟು ವಜ್ರದನಿಗಳ ಕೂಡಿಸಿದೆ
ಮಲ್ಲಿಗೆಯ ಘಮಲು ನಿಧನಿಧಾನಕ್ಕೆ
ಇರುಳ ಮೈಯೆಲ್ಲಾ ತುಂಬುವುದು
ನಿನ್ನೊಳಗೆ ಕಳೆದುಹೋಗಲು ಬಿಡು
ಯಾರಿಗೂ ನನ್ನ ಸುಳಿವೂ ಸಿಗದಿರಲಿ
ನಿನ್ನ ಹಸಿಯುಸಿರು
ಬಿಸಿ ರೂಹ್
ಆಹ್!
ಹರಿದಾಡಲಿ ನನ್ನ ರಾಗಗಳ ಮೇಲೆ
ನಿದಿರಿಗೆ ರೇಶಿಮೆ ಸುತ್ತಿ
ಬೆಳಕ ರೆಕ್ಕೆ ಮೂಡಲು ಬಿಡು
ಹಾರುವೆ ತೆರೆದ ಬಾಗಿಲಿನಾಚೆ
ಲೋಕದ ಗೋಡೆ ಬೇಲಿಗಳಾಚೆ
ಗೊತ್ತೇನು ನನ್ನ ಬಯಕೆ
ನಿನ್ನೊಡನಾಟ,
ನೀನು,
ಇಡಿಯಾಗಿ ನೀನು
ಸಾವಿರ ಬಾರಿ ಜನಿಸಿದರೂ ನೀನು,
ನೀನು
ಮತ್ತೇ ನೀನೇ ಬೇಕೆನಗೆ
ನನ್ನೊಳಗೊಂದು ಕಡಲಿದೆ
ಹೇಗೆ ಅಡಗಿಸಲಿ
ನನ್ನೊಳಗಿನ ತೂಫಾನನ್ನು
ಹೇಗೆ ಬಣ್ಣಿಸಲಿ
ನೀನೇ ತುಂಬಿರುವೆ ನನ್ನೊಳಗೆ
ಚಿಗುರು ಹುಲ್ಲುಹಾಸಿನ ತುಂಬೆಲ್ಲಾ ಓಡಾಡಬೇಕು
ಬೆಟ್ಟಕ್ಕೆ ತಲೆಯಪ್ಪಳಿಸಿ
ಕಡಲ ಅಲೆಗಳಿಗರ್ಪಿಸಿ
ನೀನೇ ತುಂಬಿರುವೆ ನನ್ನೊಳಗೆ
ಮುದುರುವೆ ಧೂಳಿನ ಕಣದಂತೆ
ಮೆಲ್ಲ ಪಾದಕೆ ಹಣೆ ಮಣಿಯುವೆ
ನಿನ್ನ ಚಿಟ್ಟೆ ನೆರಳ ಬಿಗಿದಪ್ಪುವೆ
ಹೌದು,
ಪ್ರೀತಿ ಇನ್ನೂ ಆರಂಭ
ಬೀದಿಯಂಚಿನ ತಿರುವು ಕಾಣದು
ಕೊನೆಯಾಗುವ ಯೋಚನೆಯಿಲ್ಲ
ಪ್ರೀತಿಸುವುದನ್ನು ಮಾತ್ರ ಪ್ರೀತಿಸುವೆ
6. ಅಲೆ (The Wave)
*ಆಂಗ್ಲಮೂಲ: ಮರ್ಯಮ್ ದಿಲ್ಮಾಘಾನಿ
ನೀನೊಂದು ಅಲೆ
ಇಲ್ಲೂ ಇಲ್ಲದ, ಅಲ್ಲೂ ಇಲ್ಲದ
ನೀನು,
ಈಗಲೂ ಎಲ್ಲೂ ನಿಲ್ಲದವ
ಬರ ಸೆಳೆದು
ಓಡಿ ಹೋಗುವೆ
ಬಲುಬೇಗನೆ ಹರಡುವೆ
ಥೇಟ್ ಪ್ಲೇಗಿನಂತೆ
ಕಾಣದೂರನು ತಲುಪುವ ಧಾವಂತದಲ್ಲಿರುವ
ನಿನಗೆ ಗಮ್ಯವಿಲ್ಲ
ದೂರದಿಂದ ಕಣ್ಣು ಸಣ್ಣದು
ಮಾಡಿ ದಿಟ್ಟಿಸುವೆ ನಿನ್ನನ್ನೇ
ಅನಂತದಲ್ಲಿ ತೇಲುವ
ಹಠಮಾರಿ ಅಲೆಯುಬ್ಬರ ನೀನು
ರಚ್ಚೆ ಹಿಡಿವ,
ತಾಳ್ಮೆಯಿರದ ಸಿಡುಕ
ಸಮಾಧಾನಿಯಾದರೂ ಸಿಟ್ಟು ಮಾತ್ರ ಬಿಡದವ
ಈಗ ನನಗೆ ಗೊತ್ತಾಗಿ ಹೋಗಿದೆ
ಕಣ್ಣೀರ ಕಡಲು ನಿನ್ನ ತವರೂರು
ಹೌದು!
ನೀನೊಂದು ಉಪದ್ರವಿ ಅಲೆಯುಬ್ಬರ
ಸದಾಕಾಲವೂ ಓಡುವ, ಅನಂತದಲ್ಲಿ ತೇಲುವವ
ಒಂದಿರುಳು,
ದೂರ ತೀರದ
ನಿರ್ಜನ ನಾಡಿನ ದಾಹದ ಮುಖವಾಡ ಧರಿಸುವೆ
ಹಿಡಿದಿಟ್ಟುಕೊಳ್ಳುವೆ ನನ್ನ ಹುದುಲೊಳಗೆ
ಎಂದೆಂದಿಗೂ ದೂರ ನಿನ್ನಿಂದಲೇ ಬಲುದೂರ
ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ “ಪೆಟ್ರಿಕೋರ್”(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.
What an amazing but a tearful biography of Iranian writer Forugh Farrokhzad.
Writer Chaitra Shivayogimath has excellently captures the best and worst moments of Forugh’s life in her column.
The poet, who died in a road accident at the age of 32, fought for the cause of women and their rights. She marries a distant relative, gives up family life and takes to writing.
She brings out 3 collection of poems that reflect social status of women in Iran during her time. Sadly she becomes depressed and undergoes shock treatment.
Chaitra’s narration encapsulates every emotional moments that the poet undergoes during her journey as a writer.
An amazing article.