ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ಹಿಂದಿನ ಸಂಚಿಕೆಗೆ ಮುಕ್ತಾಯ ಹೀಗೇ ಕೊಟ್ಟಿದ್ದೆ…. ನನ್ನ ದೊಡ್ಡ ಬೊಮ್ಮಸಂದ್ರ ಪುರ ಪ್ರವೇಶ ಹೀಗೆ ಆಗಿದ್ದು.

ದೊಡ್ಡ ಬೊಮ್ಮ ಸಂದ್ರ ಮತ್ತು ಅಲ್ಲಿಂದ ಮುಂದೆ ಸೇರಿದ್ದು ವಿದ್ಯಾರಣ್ಯಪುರ. ಇವು ಮುಂದೆ ನನ್ನ ಜೀವನ ರೂಪಿಸಿತು….. ನನ್ನ ಮಗಂದು ಆ ವಿಧಿ ಈ ದಡ್ಡನನ್ನು ಅದ್ಹೇಗೆ ಸಿಕ್ಸಿ ಹಾಕ್ದೆ ಅಂತ ಅದೆಷ್ಟು ಬಿದ್ದು ಬಿದ್ದು ಹೊರಳಾಡಿ ನಗ್ತೋ ಅಂತ ನನಗೆ ಆಶ್ಚರ್ಯ. ಆರುನೂರರಲ್ಲಿ ಬಾಡಿಗೆ ತೆತ್ತು ಜೀವನ ಮಾಡೋದು ಹೇಗೆ ಅಂತ ಚಿಂತೆ ಹತ್ತಿಕೊಂಡು ಒದ್ದಾಡ್ತಾ ಇದ್ದೋನು ನಾನು..

ಅದು ಹೇಗೋ ಸಾಲ ಪಾಲ ಮಾಡಿಕೊಳ್ಳದೆ ಜೀವನ ನಡೆಯಿತು. ನಾನಿಲ್ಲ ಅಂದಿದ್ದರೆ ನಿನ್ನ ಪಾಡು ನಾಯಿ ಪಾಡು ಆಗ್ತಿತ್ತು ಅಂತ ನನ್ನಾಕೆ ಅದೆಷ್ಟೋ ಕೋಟಿ ಸಲ ಹೇಳಿದ್ದಾಳೆ, ನಿಜ ಇರಬೇಕು ಅಂತ ನಾನೂ ನಂಬಿದ್ದೇನೆ.(ಬರೀ ನಾಯಿಪಾಡು ಅಲ್ಲ, ಕಂತ್ರೀ ಕಜ್ಜಿನಾಯಿ ಪಾಡು ಅಂತ ಹೇಳಿ ಅವಳ ಹೇಳಿಕೆಗೆ ನಂಬಿಕೆಗೆ ಬೂಸ್ಟರ್ ಡೋಸ್ ಕೊಟ್ಟಿದ್ದೇನೆ!)

ಮುಂದೆ ದೊಡ್ಡ ಬೊಮ್ಮ ಸಂದ್ರ ಕೆರೆ ಸುತ್ತಾ ಎಷ್ಟು ಸುತ್ತು ಹಾಕಿದೀನಿ ಅಂತ ಲೆಕ್ಕ ಇಲ್ಲ. ಆಗ (1984)ನನ್ನ ಹತ್ತಿರ ಇದ್ದದ್ದು ಒಂದು ಕ್ಲಿಕ್ ತ್ರೀ ಅನ್ನುವ box camera. ಆಗಿನ್ನೂ ಡಿಜಿಟಲ್ ಕ್ಯಾಮೆರಾ ಹೆಸರೇ ಕೇಳಿರಲಿಲ್ಲ. box camera ದಲ್ಲಿ ತೆಗೆದ ಒಂದೆರೆಡು ಫೋಟೋಗಳು ಅಂದಿನ ಆಗಿನ ಕೆರೆಯ ನೆನಪನ್ನು ಆಗಾಗ ತೆರೆಯುತ್ತೆ.

ವಿದ್ಯಾರಣ್ಯಪುರ ಬೆಳೆದು ಬಂದದ್ದು ಒಂದು ರೋಚಕ ಕತೆ ಕೆರೆಗಳ ಹಳ್ಳಿ ಎನ್ನುವ ಅನ್ವರ್ಥ ನಾಮ ಅದಕ್ಕೆ ಕೊಟ್ಟವರು ಅಲ್ಲಿನ ಹುಡುಗರು ಮತ್ತು ಪರಿಸರ ಕಾಳಜಿ ಉಳ್ಳ ನಾಗರಿಕರು. ಮೂರು ವಿಶಾಲವಾದ ಕೆರೆಗಳು ಅದರ ಒಡಲಲ್ಲಿ ಮತ್ತು ಮತ್ತೂ ಹಲವು ಅದರ ಸುತ್ತ…. ಇದರ ಬಗ್ಗೆ ಮುಂದೆ ವಿವರಿಸುತ್ತೇನೆ.

ಈಗ ಮುಂದಕ್ಕೆ…

ದೊಡ್ಡ ಬೊಮ್ಮಸಂದ್ರ ಮೂಲಕ ವಿದ್ಯಾರಣ್ಯಪುರ ಪ್ರವೇಶ, ನೀವು BEL ಕಡೆಯಿಂದ ಬಂದರೆ. ವಿದ್ಯಾರಣ್ಯಪುರ ಮೊದಲು ನರಸೀಪುರ ಅಂತ ಆಗಿತ್ತು. ನರಸೀಪುರದ ಒಂದು ಸುಮಾರು ದೊಡ್ಡ ಸ್ಥಳವನ್ನು ಮುಂಬೈನ ದೀನ್ ಶಾ ಎನ್ನುವವರು ಖರೀದಿಸಿದ್ದರು. ಈ ಸ್ಥಳದಲ್ಲಿ ಅವರು ಮಾವಿನ ತೋಪು ಮಾಡಿದ್ದರು. ಉತ್ಕೃಷ್ಟ ಜಾತಿಯ ಮಾವಿನ ಹಣ್ಣು ಇಲ್ಲಿ ಬೆಳೆಸುತ್ತಿದ್ದರು. ಇದು ಹೊರದೇಶಗಳಿಗೆ ರಫ್ತು ಆಗುತ್ತಿತ್ತು. ಮಾವಿನ ತೋಪಿಗೆ ನೀರಿಗಾಗಿ ಆರೇಳು ದೊಡ್ಡ ವ್ಯಾಸದ ಬಾವಿ ಇತ್ತು ಮತ್ತು ಬಡಾವಣೆ ಆದ ನಂತರ ಈ ಬಾವಿಯಿಂದ ನೀರು ಅಲ್ಲಿನ ಮನೆಗಳಿಗೆ ಸರಬರಾಜು ಆಗುತ್ತಿತ್ತು. ಇದಕ್ಕಾಗಿ ಆರೇಳು ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ ಆಗಿತ್ತು. ಎರಡು ಸಾವಿರದ ಎರಡರಲ್ಲಿ ಬಡಾವಣೆಗೆ ಕಾವೇರಿ ಹರಿಯಲು ಶುರು ಆಯಿತು. ನಿಧಾನಕ್ಕೆ ಬಾವಿಯ ಅವಶ್ಯಕತೆ ಬೇಡವಾಯಿತು. ಇದರಲ್ಲಿ ಐದು ಬಾವಿ ನೆಲಸಮ ಆಯಿತು. ಒಂದು ಬಾವಿ ನವೀಕರಣಗೊಂಡು ಮುಖ್ಯರಸ್ತೆಯ ನಮ್ಮ ನೀರು ಸರಬರಾಜು ಕಚೇರಿಯಲ್ಲಿದೆ. ಇನ್ನೊಂದು ಬಾವಿ IECHS ಬಡಾವಣೆ ಅವರು ಉಳಿಸಿಕೊಂಡು ಅದನ್ನು ಮುಚ್ಚಿ ನೀರನ್ನು ಗೃಹ ಉಪಯೋಗಕ್ಕೆ ನೀಡುತ್ತಿದ್ದಾರೆ. ಒಂದು ಹಾಳು ಬಿದ್ದ ಬಾವಿಯ ಅವಶೇಷ ನಮ್ಮ ಮುಖ್ಯ ರಸ್ತೆಯ SBI ಎದುರು ಇದೆ. ಆಗಾಗ ಬ್ಯಾಂಕಿಗೆ ಹೋಗುವ ನನ್ನಂತಹವರನ್ನು ನೋಡಿ ಅಣಕಿಸಿ ಓಹೋ ಬಂದ್ಯಾ ಪರಿಸರ ಪ್ರೇಮಿ…. ಅನ್ನುತ್ತಾ ನಿರಾಶೆಯಿಂದ ನಗುತ್ತೆ ಅಂತ ಅನಿಸುತ್ತದೆ. ಈಗೊಂದು ವರ್ಷದಲ್ಲಿ ಆಗ ಕಟ್ಟಿದ್ದ ಓವರ್ ಹೆಡ್ ಟ್ಯಾಂಕ್‌ಗಳೂ ಸಹ ನಿರುಪಯೋಗವಾಗಿ ನೆಲಸಮಗೊಂಡಿವೆ. ಇದು ಈಗಿನ ಬೆಳವಣಿಗೆ. ಕಣ್ಣೆದುರೇ ಬೆಳೆದ ಮರಗಳು ಎಲೆಕ್ಟ್ರಿಕ್ ಕೊಡಲಿ ಏಟಿಗೆ ತುಂಡು ತುಂಡು ಆಗೋದು, ಸಮೃದ್ಧವಾಗಿದ್ದ ನೀರಿನ ಬಾವಿ ಪಾಳು ಬಿದ್ದು ಮುಚ್ಚುವ ಹಂತ ತಲುಪುವುದು, ನೋಡ ನೋಡುತ್ತಿದ್ದ ಹಾಗೆ ಸಾಲು ಸಾಲು ಬಹು ಅಂತಸ್ತಿನ ಕಟ್ಟಡಗಳು ಮೇಲೆದ್ದು ನಿಲ್ಲುವುದು, ಹೊಸ ಪರಿಚಯವೇ ಇಲ್ಲದ ಮುಖಗಳು ಎದುರು ನಿಲ್ಲುವುದು, ಈವರೆಗೆ ಕೇಳಿರದ ಹೊಸ ಭಾಷೆ ಕಿವಿಗೆ ಅಪ್ಪಳಿಸುವುದು…. ಇವೆಲ್ಲಾ ನಾಗರಿಕತೆಯ ಮುಂದುವರೆದ ಗುರುತು ಮತ್ತು ನಾವು ಅದಕ್ಕೆ ಸಾಕ್ಷಿ! ಇಲ್ಲಿನ ಎಸ್ಟೇಟ್‌ನಲ್ಲಿ ಒಂದು ನೇಮ್ ಪ್ಲೇಟ್ ಇತ್ತು. ಅದರಲ್ಲಿ Sir HC Din Shaws Diary and Live Stock Farm, Anchipura and Singapura ಎನ್ನುವ ಹೆಸರು ಇದೆ. ಅಂದರೆ ಈ ಸ್ಥಳಕ್ಕೆ ಮೊದಲು ಅಂಚೀಪುರ ಮತ್ತು ಸಿಂಗಾಪುರ ಎನ್ನುವ ಹೆಸರಿದ್ದವು. ಈಗ ಸಿಂಗಾಪುರ ಎನ್ನುವ ಹಳ್ಳಿ ಈ ಸ್ಥಳದಿಂದ ಮೂರು ಕಿಮೀ ದೂರದಲ್ಲಿ ಒಂದು ಪ್ರತಿಷ್ಠಿತ ಬಡಾವಣೆ ಆಗುತ್ತಿದೆ. ತಮಾಷೆ ಅಂದರೆ ಉತ್ತರದ ಒಬ್ಬ ರಾಜಕಾರಣಿ ಹೆಸರು ಅಲ್ಲಿನ ಒಂದು ಬಡಾವಣೆ ಹೊಂದಿದೆ. ಅದು ಕಾನ್ಷಿ ರಾಮ್ ನಗರ! ದಲಿತ ನಾಯಕರು ಹಾಗೂ ಅಂಬೇಡ್ಕರ ಅವರ ಅನುನಯಿ ಆಗಿದ್ದ ಕಾನ್ಶಿ ರಾಮ ಅವರು ತಮ್ಮ ಬೆಂಬಲಿಗರನ್ನು ಇಲ್ಲಿ ಸಹ ಹೊಂದಿರುವುದು ಒಂದು ವಿಶೇಷ.

(ಈಚಲು ಮರ bts ಸ್ಟಾಪ್. ಹಳೇ ಮರ ಗೆದ್ದಲು ಹಿಡಿದು ಬಿದ್ದ ನಂತರ ನಮ್ಮ ಪರಿಸರವಾದಿ ಯುವಕರು ಒಂದು ಸಸಿ ತಂದು ನೆಟ್ಟರು. ಈಗ ಸಸಿ, ಮರದ ರೂಪು ತಳೆಯುತ್ತಿದೆ)

ದೀನ್ ಶಾ ಅವರಿಗೆ ಇಲ್ಲಿನ ಅಂದಿನ ಸಾಹುಕಾರರು ಜಮೀನು ಮಾರಿದ್ದರು. ಮಾವಿನ ತೋಪಿನ ಜತೆಗೆ ಇದೇ ಜಾಗದಲ್ಲಿ ಪಶು ಸಂಗೋಪನೆ ಸಹ ನಡೆಯುತ್ತಿತ್ತು. ಹೇರಳವಾಗಿ ಸಿಗುತ್ತಿದ್ದ ಹಾಲನ್ನು ಇಲ್ಲಿಂದ ಎರಡು ಮೂರು ಕಿಮೀ ದೂರದ ಮಿಲಿಟರಿ ಏರಿಯಾಗೆ ಕಳಿಸುತ್ತಿದ್ದರು. ಎತ್ತಿನ ಬಂಡಿಯಲ್ಲಿ ನೂರು ಗ್ಯಾಲೋನ್ ಹಿಡಿಯುವ ದೊಡ್ಡ ದೊಡ್ಡ ಕಂಟೈನರ್‌ಗಳಲ್ಲಿ ಈ ಹಾಲು ಸರಬರಾಜು ಆಗುತ್ತಿತ್ತು. ಎತ್ತಿನ ಬಂಡಿಯ ಎರಡೂ ಚಕ್ರಗಳು ಸೇರಿ ಮಾಡಿದ್ದ ಕರುಕಲು ರಸ್ತೆಗೆ ಬಂಡಿ ರಸ್ತೆ ಎನ್ನುವ ಹೆಸರು ಅನ್ವರ್ಥವಾಗಿತ್ತು. ಈ ರಸ್ತೆ ರಾಮಚಂದ್ರಪುರದ ಮೂಲಕ ಹಾದು ಮಿಲಿಟರಿ ಕ್ಯಾಂಪ್ ಸೇರುತ್ತಿತ್ತು. ಎಪ್ಪತ್ತರ ದಶಕದಲ್ಲಿ ಈ ರಸ್ತೆ ಹಾಗೆಯೇ ಇದ್ದು ನಂತರ ತನ್ನ ಬಾಹ್ಯ ರೂಪು ಬದಲಾಯಿಸಿಕೊಂಡಿತು. ತನ್ನ ಕೃಷಿ ಕಾರ್ಮಿಕರಿಗಾಗಿ ಈಚಲ ಮರಗಳನ್ನು ತೋಪಿನ ಸುತ್ತಲೂ ಬೆಳೆಸಿದ್ದರು. ಬಡಾವಣೆ ನಿರ್ಮಾಣವಾದ ಸುಮಾರು ವರ್ಷ ಈ ಚಲು ಮರಗಳು ಇದ್ದವು, ಹೆಂಡ ಇಳಿಸುವವರು ಕಾಣಿಸುತ್ತಾ ಇರಲಿಲ್ಲ. ಕೆರೆ ಅಂಗಳದಲ್ಲಿ ಹತ್ತಾರು ಈ ಚಲ ಮರ ಹಾಗೂ ಕೆಲವು ಹೊರೆ ಇರಿಸುವ ಕಲ್ಲು ಚಪ್ಪಡಿ ಇದ್ದವು. ಈಗಲೂ ಮುಖ್ಯ ರಸ್ತೆಯ ಒಂದು ಬಸ್ ಸ್ಟಾಪ್ ನ ಹೆಸರು ಈಚಲು ಮರ ಸ್ಟಾಪ್ ಅಂತ! ಇಲ್ಲಿಂದ ಕೊಂಚ ದೂರದಲ್ಲಿ ಮಿಲಿಟರಿ ಕ್ಯಾಂಪ್. ಮಿಲಿಟರಿ ಕ್ಯಾಂಪ್ ಸುತ್ತಲೂ ಎತ್ತರದ ಗೋಡೆಗಳಿದ್ದವು. ಅಲ್ಲಿನ ಹುಡುಗರು ಕಾವಲಿನವರ ಕಣ್ಣು ತಪ್ಪಿಸಿ ಆಗಾಗ್ಗೆ ಕಾಂಪೌಂಡ್ ಹಾರಿ ಈ ಭಾಗಕ್ಕೆ ಬರುತ್ತಿದ್ದರು.
ಈ ದೀನ್ ಶಾ ಅವರಿಗೆ ಬ್ರಿಟಿಷ ಸರ್ಕಾರ ಸರ್ ಪದವಿ ನೀಡಿತ್ತು. ಇವರು ದೇಶದ ಮೊದಲ ಹತ್ತಿ ಗಿರಣಿ ಸ್ಥಾಪಿಸಿದವರು ಎನ್ನುವ ಹೆಗ್ಗಳಿಕೆ. ಇವರ ಕಂಪನಿ ತಯಾರಿಸುತ್ತಿದ್ದ ದೀನ್ ಶಾ ಎನ್ನುವ ಐಸ್ ಕ್ರೀಂ ಸಹ ತುಂಬಾ ಹೆಸರು ಮಾಡಿತ್ತು. ದೀನ್ ಶಾ ಅವರ ಮೊಮ್ಮಗಳು ರತನ ಬಾಯಿ ಪೆಟಿಟ್ ಪಾಕಿಸ್ತಾನದ ಜನಕ ಮೊಹಮ್ಮದ್ ಆಲಿ ಜಿನ್ನಾ ಅವರನ್ನು ಮದುವೆ ಆಗಿದ್ದರು. ದೀನ್ ಶಾ ಅವರ ಪೀಳಿಗೆಗೆ ಸೇರಿದವರು ಭಾರತದ ಪ್ರಮುಖ ವಿಜ್ಞಾನಿ ಹೋಮಿ ಜೆ ಬಾಬಾ ಅವರು. ಹೀಗೆ ನರಸೀಪುರದ ನಂಟು ಜಿನ್ನಾವರೆಗೆ ಹಬ್ಬಿತ್ತು. ವಕ್ರವಾಗಿ ಚಿಂತಿಸುವ ಹಾಗಿದ್ದರೆ, ನರಸೀಪುರ ಮತ್ತು ಸುತ್ತಮುತ್ತಲಿನ ಹಲವು ಕಿಮೀ ಪ್ರದೇಶ ವಕ್ಫ್ ಆಸ್ತಿ.

ದೀನ್ ಶಾ ಬಗ್ಗೆ ಕೆಲವು ಸಂಗತಿ ತಿಳಿಸಿ ಮುಂದಕ್ಕೆ ಹೋಗಲೇ.. ದೀನ್ ಶಾ ಅವರಿಗೆ ಸೇರಿದ ಜಮೀನು ಕೊಂಡು ಲೇಔಟ್ ಮಾಡಿದರು ಅಂತ ಹೇಳಿದೆ. ಅಲ್ಲಿನ ಹಲವು ಎಕರೆ ಜಾಗವನ್ನು ದೀನ್ ಶಾ ಕಡೆಯವರೆ ಇಟ್ಟುಕೊಂಡಿದ್ದರು. ಅದರಲ್ಲಿ ಮಾವಿನ ತೋಪು ಇತ್ತು. ದೊಡ್ಡ ವ್ಯಾಸದ ಬಾವಿ ಇತ್ತು, ಹಸುಗಳನ್ನು ಸಾಕುತ್ತಿದ್ದ ವಿಶಾಲ ಕೊಟ್ಟಿಗೆ ಇತ್ತು ಮತ್ತು ಅದನ್ನು ನೋಡಿಕೊಳ್ಳುವ ಸಿಬ್ಬಂದಿ ಸಹ ಇತ್ತು… ಮೊದಲು ಅಲ್ಲಿ ಒಂದು ದೇವಾಲಯ ಸಹ ಇತ್ತು. ಬಡಾವಣೆ ನಿರ್ಮಾಣ ಆದಂತೆ ಅಲ್ಲಿನ ಸಿಬ್ಬಂದಿ ಕ್ಷೀಣಿಸಿತು ಮತ್ತು ಅಲ್ಲಿನ ವಿಗ್ರಹಗಳನ್ನು ನಗರದ ದೇವಸ್ಥಾನಕ್ಕೆ ಕೊಟ್ಟುಬಿಟ್ಟರು ಎಂದು ಕೇಳಿದ್ದೆ. ಅಲ್ಲಿನ ಮಾವಿನ ತೋಪಿನಲ್ಲಿ ಉತ್ಕೃಷ್ಟ ಜಾತಿಯ ಮಾವಿನ ಹಣ್ಣು ಬೆಳೆಯುತ್ತಿದ್ದರು. ಒಂದು ಬುಟ್ಟಿಯಲ್ಲಿ ಮೂರೋ ನಾಲ್ಕೋ ಹಣ್ಣುಗಳನ್ನು ಇಟ್ಟು ಅದರ ಮೇಲೆ ಗೋಣಿ ಚೀಲ ಕಟ್ಟಿ ಅದನ್ನು ಹೊರದೇಶಗಳಿಗೆ ಎಕ್ಸಪೋರ್ಟ್ ಮಾಡುತ್ತಿದ್ದರು. ಸ್ಥಳೀಯರಿಗೆ ಅದರ ರುಚಿ ನೋಡುವ ಅವಕಾಶ ಒದಗಬೇಕು ಅಂತ ಅಲ್ಲಿನ ಸಿಬ್ಬಂದಿ ಜತೆ ಮಾತು ಕತೆ ಆದ ನಂತರ ಇಂತಹ ಬುಟ್ಟಿ ಐವತ್ತು ರುಪಾಯಿಗೆ ಮಾರಾಟ ಆಗುತ್ತಿತ್ತು. ಇದರಲ್ಲಿ ಇಂತಹ ಮೂರು ನಾಲ್ಕು ಹಣ್ಣು ಇರುತ್ತಿತ್ತು. ಅಲ್ಲಿಂದ ಬುಟ್ಟಿ ಹಣ್ಣು ತಂದು ತಿಂದು ಹಣ್ಣಿನ ವೋಟೆಯನ್ನ ಹಿತ್ತಲಲ್ಲಿ ಹಾಕುತ್ತಿದ್ದೆ. ಸುಮಾರು ಸಸಿಗಳು ಅಲ್ಲಿ ಹುಟ್ಟಿದವು. ಅದರಲ್ಲಿ ಕೆಲವು ತೆಗೆದು ರಸ್ತೇಲಿ ಹಾಕಿದೆ. ಇದು ಮೂವತ್ತು ವರ್ಷಕ್ಕೂ ಮೊದಲು. ಒಂದೇ ಒಂದು ಮರ ಉಳಿದುಕೊಂಡಿತು. ಅದು ಕಾಯಿ ಬಿಡಲು ಶುರು ಆದ ನಂತರ ಕಾಯಿ ಇದ್ದಾಗ ಹುಳಿ ಅಂದರೆ ಹುಳಿ. ಹಣ್ಣಾದ ನಂತರ ಸಿಕ್ಕಾಪಟ್ಟೆ ಸಿಹಿ! ಯುಗಾದಿ ಹಬ್ಬದಲ್ಲಿ ಚಿತ್ರಾನ್ನ ಇದೇ ಕಾಯಿಯಿಂದ ತಯಾರು..

ದೀನ್ ಶಾ ಎಸ್ಟೇಟ್‌ನಲ್ಲಿದ್ದ ಸಾವಿರಾರು ಮರಗಳ ಪೈಕಿ ಅದರ ವಂಶದ ಒಂದು ಕುಡಿಯಾಗಿ ಈಗ ನಮ್ಮ ಮನೆ ಮುಂದಿನ ಮರ ಮಾತ್ರ ಉಳಿದಿದೆ. ದೀನ್ ಶಾ ಮುಂದುವರೆದ ಕತೆ ಹೇಳುವಾಗ ಭೂತ ಕಾಲದಲ್ಲಿ ಹೇಳಿದೆ. ಯಾಕೆ ಅಂತ ಅಚ್ಚರಿ ಆಯಿತಾ ನಿಮಗೆ?

ದೀನ್ ಶಾ ಎಸ್ಟೇಟ್‌ನ ಮಿಕ್ಕ ಜಾಗವನ್ನು ಅಂದರೆ ಮಾವಿನ ತೋಪುಗಳನ್ನು ಹೊಂದಿದ್ದ ಜಾಗವನ್ನು ಪ್ರೆಸ್ಟೀಜ್‌ನವರು ಕೊಂಡು ಅಲ್ಲಿ ಜಾಗ ಸಂಪೂರ್ಣ ಸಾಫ್ ಮಾಡಿ ಬಹು ಮಹಡಿ ಹೌಸಿಂಗ್ ಕಾಂಪ್ಲೆಕ್ಸ್ ಕಟ್ಟಿದ್ದಾರೆ. ಅದರಲ್ಲಿನ ಮನೆಗಳು ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟ ಆದಾಗ ಅದರ ಸುದ್ದಿ ಕೇಳಿದಾಗ ಕಣ್ಣು ಬಾಯಿ ಬಿಟ್ಟುಕೊಂಡು ಕೇಳಿದವರು ನಾವು. ನಮ್ಮ ಪೀಳಿಗೆ ಮುಗಿದ ನಂತರ ಇಲ್ಲೊಂದು ಮಾವಿನ ತೋಪು ಇತ್ತು ಎನ್ನುವುದು ಇತಿಹಾಸ ಸೇರುತ್ತದೆ.

(ದೀನ್ ಶಾ ಎಸ್ಟೇಟಿನಲ್ಲಿ ಇದ್ದ ಸಿಮೆಂಟಿನ ನೇಮ್ ಪ್ಲೇಟ್. ಆಲ್ಲಿ ಇದ್ದ ಮಾವಿನ ತೋಪು, ಬಾವಿ ಹೋದ ನಂತರ ಬಹು ಮಹಡಿ ಕಟ್ಟಡಗಳು ಬಂದವು. ಈಗ ಮೇಲಿನ ಮಾನ್ಯುಮೆಂಟ್ ಅನ್ನು ಪ್ರೆಸ್ಟೀಜ್ ಸಿಬ್ಬಂದಿ ಒಂದು ಕಡೆ ಇರಿಸಿದ್ದಾರೆ)

ನರಸೀಪುರ ತನ್ನ ಹೆಸರು ಬದಲಾಯಿಸಿಕೊಂಡ ಸಂಗತಿ ಮೊದಲು ಹೇಳಿಬಿಡುತ್ತೇನೆ. ಎಪ್ಪತ್ತರ ದಶಕದ ಆರಂಭದಲ್ಲಿ ಬೆಂಗಳೂರಿನ ತುಂಬಾ ಹೌಸ್ ಬಿಲ್ಡಿಂಗ್ ಸೊಸೈಟಿಗಳು ಆಕ್ಟಿವ್ ಆಗಿದ್ದ ಕಾಲ. ಬೆಂಗಳೂರಿನ ಎಲ್ಲಾ ಸಾರ್ವಜನಿಕ ಉದ್ದಿಮೆಗಳ ನೌಕರರು ಸೇರಿಕೊಂಡು ತಮ್ಮದೇ ಆದ ತಮ್ಮ ಕಾರ್ಖಾನೆಯ ಹೆಸರಿನ ಹೌಸ್ ಬಿಲ್ಡಿಂಗ್ ಸೊಸೈಟಿಗಳನ್ನು ಮಾಡಿಕೊಂಡಿದ್ದರು. ಅವುಗಳ ಮುಖ್ಯ ಉದ್ದೇಶ ತನ್ನ ಸದಸ್ಯರಿಗೆ ಸೈಟುಗಳನ್ನು ಒದಗಿಸುವುದು. ಇದಕ್ಕಾಗಿ ಬೆಂಗಳೂರು ಸುತ್ತಮುತ್ತ ಹಲವಾರು ಲೇಔಟ್‌ಗಳು ಇಂತಹ ಸೊಸೈಟಿಗಳಿಂದ ಶುರುವಾಯಿತು. BDA ಅಂದೂ ಸಹ ತುಂಬಾ ನಿಷ್ಕ್ರಿಯವಾಗಿದ್ದು ತನ್ನ ಅಗತ್ಯಕ್ಕೆ ತಕ್ಕಂತೆ ನಿವೇಶನ ನಿರ್ಮಿಸಲು ಅಸಮರ್ಥವಾಗಿತ್ತು. ಇಡೀ ಬೆಂಗಳೂರಿನ ತುಂಬಾ ಇಂತಹ ಖಾಸಗಿಯವರು ನಿರ್ಮಿಸಿದ ಬಡಾವಣೆಗಳು ಹೇರಳವಾಗಿ ಇವೆ. ಮತ್ತು ಮುಂದೆ ಇವುಗಳು ಇತಿಹಾಸ ಶೋಧನೆಗೆ ನೆರವಾಗುತ್ತದೆ. ಒಂದೆರೆಡು ಉದಾಹರಣೆ ಅಂದರೆ ವಿಜಯಾ ಬ್ಯಾಂಕ್ ಕಾಲೋನಿ. ವಿಜಯಾ ಬ್ಯಾಂಕ್ ಈಗ ಬರೋಡ ಬ್ಯಾಂಕ್ ಜತೆ ಸೇರಿದೆ. ಇನ್ನೊಂದು ಹಲವು ವರ್ಷಗಳ ನಂತರ ವಿಜಯಾ ಬ್ಯಾಂಕ್ ಅನ್ನುವ ಹೆಸರು ಯಾಕೆ ಬಂತು ಎಂದು ತಲೆ ಕೆರೆಯುವ ನೋವು ಶುರು. ಅದೇ ರೀತಿ ಮೈಸೂರು ಬ್ಯಾಂಕ್ ಕತೆ.

BDA ಅಗತ್ಯಕ್ಕೆ ತಕ್ಕಂತೆ ನಿವೇಶನ ಸಿದ್ಧ ಮಾಡಲು ಆಗಲಿಲ್ಲವಲ್ಲಾ. ಇದೇ ಕಾರಣಕ್ಕೆ ಸರ್ಕಾರವು ಸಹ ಖಾಸಗಿ ಬಡಾವಣೆ ನಿರ್ಮಾಣಕ್ಕೆ ಉತ್ತೇಜಿಸಿತು. BDA ಅನುಮತಿ ಬಡಾವಣೆ ನಿರ್ಮಿಸಲು ಬೇಕಿತ್ತು. ಹಾಗೇ ಹಲವು ಎಕರೆ ಜಾಗ ಕೊಂಡು ಅದರಲ್ಲಿ ಸೈಟುಗಳನ್ನು ಮಾಡಿ ಮಾರುವ ಉದ್ಯಮವೂ ಸಹ ಶುರುವಾಯಿತು. ಹಲವಾರು ಇಂತಹ ಉದ್ದಿಮೆಗಳು ಆರಂಭವಾದವು. ಇಂತಹ ಒಂದು ಗುಂಪು ಚಲನಚಿತ್ರ ನಿರ್ಮಾಪಕ ಸಿ ವಿ ಎಲ್ ಶಾಸ್ತ್ರಿ ಅವರದಾಗಿತ್ತು. ಅವರ ಮೂಲಕ ಎಕರೆ ಎಕರೆ ಜಮೀನನ್ನು ಹಲವು ಹೌಸ್ ಬಿಲ್ಡಿಂಗ್ ಸೊಸೈಟಿಗಳು ಕೊಂಡವು ಮತ್ತು ಬಿಡಿಎ ರೀತ್ಯಾ ಲೇಔಟ್ ಮಾಡಲು ಅಧಿಕಾರ ಸಹ ನೀಡಿದವು. ಎಕರೆ ಎಕರೆ ಜಮೀನುಗಳು ಸೈಟುಗಳು ಆದವು ಮತ್ತು ಆಯಾಯ ಸೊಸೈಟಿಗಳ ಮೂಲಕ ಸದಸ್ಯರಿಗೆ ಮಾರಾಟ ಸಹ ಆಯಿತು. ಏಳನೇ ದಶಕದ ಮಧ್ಯ ಭಾಗದಲ್ಲಿ ಇಲ್ಲಿ ನಿವೇಶನ ಸದಸ್ಯರುಗಳಿಗೆ ಅಲಾಟ್ ಆಯಿತು. ಆಗ ಇದರ ಬೆಲೆ ಚದರ ಗಜಕ್ಕೆ (ಗಮನಿಸಿ ಚದರ ಗಜದ ಲೆಕ್ಕ) ಇಪ್ಪತ್ತೊಂದು ರುಪಾಯಿ..!

ರಸ್ತೆ, ದೀಪ ಮೊದಲಾದ ಸಾರ್ವಜನಿಕ ಅವಶ್ಯಕತೆಗಳು ಇನ್ನೂ ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಬೆಂಗಳೂರಿನ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದವರು ಸಾಲ ಸೋಲ ಮಾಡಿ, ಪಿಎಫ್ ಹಣ ತೆಗೆದು ಇಲ್ಲಿ ನಿವೇಶನ ಕೊಂಡರು. BEL, hmt, nti, iechs.. ಮೊದಲಾದ ಗೃಹ ನಿರ್ಮಾಣ ಸಂಘಗಳು ಇಲ್ಲಿನ ನಿವೇಶನಗಳನ್ನು ಸದಸ್ಯರಿಗೆ ಮಾರಿದವು.

ನಿವೇಶನ ಮಾಡುವಲ್ಲಿ ಮತ್ತು ಜಮೀನು ಕೊಳ್ಳುವಲ್ಲಿ ಅವ್ಯವಹಾರ ನಡೆದಿದೆ ಎನ್ನುವ ದೊಡ್ಡ ಸುದ್ದಿ ಹುಟ್ಟಿತು ಮತ್ತು ವಿಧಾನ ಸಭೆಯಲ್ಲಿ ದೊಡ್ಡ ಗಲಾಟೆ ಆಯಿತು. ನಂತರ ನ್ಯಾಯಮೂರ್ತಿ ಗ್ರೋವರ್ ಆಯೋಗ ರಚನೆಯಾಯಿತು. ನ್ಯಾಯಮೂರ್ತಿ ಗ್ರೋವರ್ ಆಯೋಗ ಸುದೀರ್ಘ ವಿಚಾರಣೆ ನಡೆಸಿತು. ಅಂತಿಮವಾಗಿ ಅರಸು ಅವರ ಸರ್ಕಾರ ನಿರ್ದೋಷಿ ಎನ್ನುವ ತೀರ್ಪು ನೀಡಿತು .

ಈ ಮಧ್ಯೆ BEL ಗೃಹ ನಿರ್ಮಾಣ ಸಂಘದ ಮೂಲಕ ನಿವೇಶನ ಪಡೆದಿದ್ದ ಹಲವಾರು ಸದಸ್ಯರು ತಾವು ಮುಂದೆ ವಾಸ ಮಾಡುವ ಸ್ಥಳಕ್ಕೆ ನರಸೀಪುರ ಎನ್ನುವ ಹೆಸರು ಸೂಕ್ತವಲ್ಲ ಎನ್ನುವ ಅಭಿಪ್ರಾಯ ಹೊಂದಿದ್ದರು.

ನಾಲ್ಕು ಸೊಸೈಟಿಗಳು ಇಲ್ಲಿ ಮುಖ್ಯವಾಗಿ ನಿವೇಶನ ಹೊಂದಿದ್ದರೂ ಮೊದಲು BEL ನವರು ಬಂದು ವಾಸ ಆರಂಭಿಸಿದ್ದು ಅವರ ಧ್ವನಿ ಜೋರಿತ್ತು. ನಾನು ಪತ್ರ ಬರೆಯುವಲ್ಲಿ ಎಕ್ಸ್ ಪರ್ಟ್ ಅನ್ನುವ ಹೆಸರು ಗಳಿಸಿದ್ದೆ. ಸ್ನೇಹಿತರು ಬಂದು ಒಂದು ಲೆಟರ್ ಬರಕೊಡು ಸ್ಟ್ರಾಂಗ್ ಆಗಿ ಸರ್ಕಾರಕ್ಕೆ ಅಂತ ಎದುರು ಕೂತರು. ಸರ್ಕಾರಕ್ಕೆ ನರಸೀಪುರ ಎನ್ನುವ ಹೆಸರು ಬದಲಾಯಿಸಿ ಎನ್ನುವ ಕೋರಿಕೆ ಒಂದಿಗೆ ವಿದ್ಯಾರಣ್ಯಪುರ ಎನ್ನುವ ಹೆಸರನ್ನು ಇಡಿ ಎಂದೂ ಸಹ ಕೋರಲಾಗಿತ್ತು. ವಿದ್ಯಾರಣ್ಯರ ಬಗ್ಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಲ್ಲಿ ಅವರ ಪಾತ್ರ ವಿವರಿಸಿ ಬೆಂಗಳೂರಿನ ಯಾವ ಪ್ರದೇಶಕ್ಕೂ ಇಂತಹ ನಾಡು ಕಟ್ಟಿದವರ ನೆನಪಿಗೆ ಒಂದೇ ಒಂದು ಜೋಪಡಿ ಸಹ ಇಲ್ಲದಿರುವ ಬಗ್ಗೆ ಮತ್ತು ನಮ್ಮ ಹೆಮ್ಮೆಯ ಸಂತ ಜ್ಞಾನಿ ಒಬ್ಬರು ಹೆಸರಿಲ್ಲದೇ ಅಜ್ಞಾತರಾಗಿ ಉಳಿದಿರುವ ಬಗ್ಗೆ ದೀರ್ಘ ಉಲ್ಲೇಖ ಇತ್ತು….. ಬೆಂಗಳೂರಿಗೆ ಸ್ವಲ್ಪ ದೂರದಲ್ಲಿ ವಿದ್ಯಾರಣ್ಯ ನಗರ ಎನ್ನುವ ಪುಟ್ಟ ಬಡಾವಣೆ ಒಂದಿದೆ. ಈ ಪತ್ರದ ಪ್ರಭಾವವೋ ಅಥವಾ ಸರಕಾರಕ್ಕೆ ಮನ ಒಲಿಕೆ ಆದ ಕಾರಣವೋ ನಿಧಾನಕ್ಕೆ ನರಸೀಪುರ ವಿದ್ಯಾರಣ್ಯಪುರ ಆಯಿತು. ವಿದ್ಯಾರಣ್ಯಪುರದ ಯಾವುದೇ ಅಂಗಡಿ ಮುಂಗಟ್ಟು ಮುಂದೆ ನರಸೀಪುರ ಎನ್ನುವ ಹೆಸರು ಕಾಣದು. ನರಸೀಪುರ ಎನ್ನುವ ಹೆಸರು ಈಗಿನ ಪೀಳಿಗೆಗೆ ಗೊತ್ತಿಲ್ಲ. ನರಸೀಪುರ ಎನ್ನುವ ಒಂದು ಅನಾಥ ಬೋರ್ಡು ವಿದ್ಯಾರಣ್ಯಪುರದ ಮುಖ್ಯರಸ್ತೆಯ ಒಂದು ಬದಿಯಲ್ಲಿ ಕಾಣಿಸುತ್ತದೆ.

(ದೀನ್ ಶಾ ಎಸ್ಟೇಟಿನ ಮಾವಿನ ಮರಗಳಲ್ಲಿ ಉಳಿದಿರುವ ಕೊನೇ ತಳಿ)

ನಾನು ಇಲ್ಲಿ ಹೇಗೆ ಸೈಟು ಮಾಲೀಕ ಆದೆ ಎನ್ನುವ ಬಗ್ಗೆ ಒಂದು ವಿವರಣೆ ಕೊಡಲೇಬೇಕು. ಕಾರಣ ಕೋಟಿ ಕೊಟ್ಟರೂ ಇಂತಹ ಜಾಗಕ್ಕೆ ಬರೋಲ್ಲ ಎಂದು ಮಾಡಿದ್ದ ಪ್ರತಿಜ್ಞೆ ತಲೆಯಲ್ಲಿ ಆಳವಾಗಿ ಕೂತು ಬಿಟ್ಟಿತ್ತು. ಆಗಾಗ ನೆನಪಿಗೆ ಬಂದು ವಿಧಿ ನನ್ನ ತಲೆ ಕೊರೆಯುತ್ತಿತ್ತು. ಸೊಸೈಟಿ ಅವರು ಹೀಗೆ ನಿವೇಶನ ಮಾರಾಟಕ್ಕೆ ಇದೆ. ಸದಸ್ಯರ ಸೀನಿಯಾರಿಟಿ ಮೇಲೆ ನಿವೇಶನ ಅಲಾಟ್ ಆಗುತ್ತೆ, ನಿವೇಶನ ಬೇಕಿದ್ದ ಸದಸ್ಯರು ಅರ್ಜಿ ಜತೆಗೆ ಇಷ್ಟು ಹಣ ಪಾವತಿಸಿ ಎಂದು ಒಂದು ಬುಲೆಟಿನ್ ಹೊರಡಿಸಿತ್ತು. ಬುಲೆಟಿನ್ ಎನ್ನುವ ಪದ ನಾನು ಕಾರ್ಖಾನೆಗೆ ಸೇರಿದ ಹೊಸದರಲ್ಲಿ ಬಹು ಬಳಕೆಯ ಪದ. ಟ್ರೇಡ್ ಯೂನಿಯನ್‌ಗಳು ಸುದ್ದಿ ಪ್ರಸರಣಕ್ಕೆ ಮಾಡುತ್ತಿದ್ದ ಕರಪತ್ರಗಳಿಗೆ ಬುಲೆಟಿನ್ ಎನ್ನುವ ಹೆಸರು ಚಾಲ್ತಿಯಲ್ಲಿತ್ತು. ಟ್ರೇಡ್ ಯೂನಿಯನ್‌ಗಳು ತಮ್ಮ ಕರಪತ್ರಕ್ಕೆ ಬುಲೆಟಿನ್ ನಂ ಎಂದು ಒಂದು ಅಂಕೆ ಸಹ ಮೆನ್ಶನ್ ಮಾಡುತ್ತಿದ್ದರು. ಕಾಲಾ ನಂತರ ಈ ಬುಲೆಟಿನ್ ಪದದ ಅರ್ಥ ಅಪಭ್ರಂಶಗೊಂಡು ಸುಳ್ಳು ಸುದ್ದಿ ಹರಡಲು ಬುಲೆಟಿನ್ ಬಿಡ್ತಾರೆ ಎನ್ನುವ ಹಂತ ತಲುಪಿತು. ಅದರ ಮುಂದಿನ ಹಂತ ಬಾತ್ ರೂಮ್ ಬುಲೆಟಿನ್ ಎಂದಾಯಿತು! ಬಾತ್ ರೂಮಿನಲ್ಲಿ ಕೂತು ಬಿಡುವ ಆಧಾರವೇ ಇಲ್ಲದ ಬೇಸ್ ಲೆಸ್ ಸುದ್ದಿಗಳಿಗೆ ಈ ಹೆಸರು ಬಂದು ಯಾರೋ ಬುರುಡೆ ಬಿಡ್ತಾರೆ ಅನಿಸಿದರೆ ಹೊ ಬಾತ್ ರೂಮ್ ಬುಲೆಟಿನಾ ಎಂದು ಕೇಳುವಷ್ಟರ ಮಟ್ಟಿಗೆ ಈ ಪದ ಪ್ರಯೋಗಗೊಂಡಿತು. ತೊಂಬತ್ತರ ದಶಕದ ಉತ್ತರಾರ್ಧದಲ್ಲಿ ಈ ಬುಲೆಟಿನ್ ಪದ ನಮ್ಮ ಸಂಘಟನೆಗಳ ಕರಪತ್ರಗಳಲ್ಲಿ ಮಾಯವಾಯಿತು. ಈಚೆಗೆ ಈ ಪದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎಂದು ಕಾಣುತ್ತದೆ. ಐವತ್ತರ ದಶಕದ ಕೊನೆಯಲ್ಲಿ ಕೊರವಂಜಿ ಪತ್ರಿಕೆಯಲ್ಲಿ ಬೆಳಕು ಕಂಡ ಬುಲೆಟಿನ್ ಕುರಿತ ಒಂದು ನಗೆ ಲೇಖನ ಇನ್ನೂ ಮನಸ್ಸಿನಲ್ಲಿದೆ.

ಕತೆ ಎಲ್ಲೆಲ್ಲಿಗೋ ಹೋಗ್ತಾ ಇದೆ ಅನಿಸಿದರೆ ಕ್ಷಮೆ ಇರಲಿ ಸಾರ್, ಮೇಡಂ. ನೀರು ಹರೀತಾ ಹರೀತಾ ಅತ್ತ ಇತ್ತ ಹೋಗಿ ಮುಖ್ಯ ವಾಹಿನಿಗೆ ಸೇರುತ್ತೆ ಅಂತ ಎಲ್ಲೋ ಓದಿದ ನೆನಪು. ನೀರಿಗೇ ಆ ಗುಣ ಇದ್ದ ಮೇಲೆ ನಾವು ಹುಲು ಮಾನವರು ಯಾವ ಲೆಕ್ಕ? ನಾವೂ ಸಹ ಅದರ ಹಾಗೇ ಅತ್ತ ಇತ್ತ ಹೊರಳಬೇಕು! ಸೊಸೈಟಿ ನಿವೇಶನ ಮಾರಾಟಕ್ಕೆ ಇದೆ. ನಿವೇಶನ ಬೇಕಿದ್ದ ಸದಸ್ಯರು ಅರ್ಜಿ ಜತೆಗೆ ಇಷ್ಟು ಹಣ ಪಾವತಿಸಿ ಎಂದು ಒಂದು ಬುಲೆಟಿನ್ ಹೊರಡಿಸಿತ್ತು ಅಂತ ಹೇಳಿದೆ ತಾನೇ. ಶನಿವಾರ ಶಿಫ್ಟ್ ಮುಗಿಸಿ ಬಂದೆನಾ? ಭಾನುವಾರ ಕಾರ್ಖಾನೆಗೆ ರಜಾ. ಬಟ್ಟೆ ಒಗೀಬೇಕು ತಾನೇ. ಜೇಬಲ್ಲಿದ್ದ ಪೆನ್ನು, id ಕಾರ್ಡು, ಚಿಲ್ರೆ, ಕ್ಯಾಂಟಿನ್ ಕೂಪನ್ನು, ಜೇಬಿನ ತುಂಬಾ ತುಂಬಿದ್ದ ಪೇಪರು… ಹೀಗೆ ಸರ್ವಸ್ವವನ್ನೂ ತೆಗೆದು ಟೇಬಲ್ಲಿನ ಮೇಲಿಟ್ಟು ಬಟ್ಟೆಯನ್ನು ಒಗೆಯೋ ಕಲ್ಲಿಗೆ ಬದಲಾಯಿಸಿದೆ. ಪ್ರತಿ ಶನಿವಾರ ಟೇಬಲ್ ಮೇಲೆ ಹೀಗೆ ಪೇರಿಸಿದ ಪೇಪರುಗಳು ಒಂದೆರೆಡು ತಿಂಗಳಲ್ಲಿ ದೊಡ್ಡ ಕಸದ ರಾಶಿ ಆಗುತ್ತಿತ್ತು. ಆಗಿನ್ನೂ ವಾಷಿಂಗ್ ಮೆಶಿನ್ ಬಂದಿರಲಿಲ್ಲ ಮತ್ತು ದೋಬಿಗೆ ಬಟ್ಟೆ ತುಂಬಾ ಕೊಳೆ ಆಗಿದ್ದರೆ, ನಾವು ಒಗೆದರೂ ಹೋಗದಿರುವ ಕರೆ ಆಗಿದ್ದರೆ ಮಾತ್ರ ದೋಬಿಗೆ ಕೊಡುವ ಅಭ್ಯಾಸ ಇತ್ತು… ಹೀಗೆ ಪೇರಿಸಿದ ಹಲವಾರು ಕಾಗದದ ತುಂಡುಗಳು ಅರ್ಧ ಮುಕ್ಕಾಲು ಓದಿದ ಪುಸ್ತಕದ ಮಧ್ಯೆ ಮಾರ್ಕ್ ಕಾರ್ಡ್‌ಗಳಂತೆ ಉಳಿದು ಎಷ್ಟೋ ವರ್ಷದ ನಂತರ ಪುಸ್ತಕ ತೆರೆದರೆ ಅಂದಿನ bts ಟಿಕೇಟು, ರೈಲು ಟಿಕೇಟು, ಸಿನೆಮಾ ಟಿಕೇಟು… ಹೀಗೆ ಸಿಕ್ಕಿವೆ ಮತ್ತು ನೆನಪಿನ ಆಳಕ್ಕೆ, ಮದುವೆ ಮುಂಚಿನ ಸುಖದ ದಿವಸಗಳಿಗೆ ಎಳೆದೊಯ್ದಿದೆ. ಒಂದೇ ಸಿನಿಮಾದ ಎರಡೆರಡು ಅಕ್ಕಪಕ್ಕದ ಟಿಕೆಟ್‌ಗಳು ಸಿಕ್ಕು ಹೆಂಡತಿಯ ಕೋರ್ಟ್ ಮಾರ್ಷಲ್ ಗೂನು ಒಳಗಾಗಿರುವ ಹಲವಾರು ಪ್ರಸಂಗಗಳಿವೆ. bts ಟಿಕೆಟುಗಳು ಅಂದಿನ ದರ ತೋರಿಸುತ್ತೆ… ಹೀಗೆ ಹದಿನೈದು ಪೈಸೆ, ನಲವತ್ತು ಪೈಸೆ, ಆಗಿನ ಇಡೀ ದಿನದ ಪಾಸು ಮೂರು ರುಪಾಯಿಯ bts ಟಿಕೆಟ್‌ಗಳು… ಹೀಗೆ ಸಿಕ್ಕಿವೆ. ಇಂತಹ ರೋಚಕ ಸಂಗತಿ ಅದೆಷ್ಟೋ ವರ್ಷಗಳ ನಂತರ ಸಿಕ್ಕಿದರೆ ನೀವೇನು ಮಾಡ್ತೀರಿ? ನಾನೂ ಅದನ್ನೇ ಅದನ್ನೇ ಅದನ್ನೇ ಮಾಡಿದ್ದು. ಅದರ ಫೋಟೋಗಳು ತೆಗೆದು ಫೇಸ್ ಬುಕ್ಕು ವಾಟ್ಸಾಟ್‌ಗಳಲ್ಲಿ 1970 ನಲ್ಲಿ bts ಟಿಕೆಟ್ ದರ ಇಲ್ಲಿಂದ ಅಲ್ಲಿಗೆ ಇಷ್ಟು ಅಂತ ಹಾಕುತ್ತಿದ್ದೆ. ಸಿನಿಮಾ ಟಿಕೆಟ್ ಇಷ್ಟಿತ್ತು ಅಂತ ಹಾಕುತ್ತಿದ್ದೆ… ಹೀಗೆ ರಾಶಿ ರಾಶಿ ಹಾಕಿ ಹಾಕಿ ಫೆಮಸ್ ಆಗಿಬಿಟ್ಟೆ…..! ಇದು ಹಾಗಿರಲಿ ಬಿಡಿ…

ನಮ್ಮ ದೊಡ್ಡಣ್ಣ ಟೇಬಲ್ಲಿನ ಮೇಲಿನ ಈ ರಾಶಿ ನೋಡಿದ. ಅವನಿಗೆ ಈ ನಿವೇಶನದ ಬುಲೆಟಿನ್ ಕಣ್ಣಿಗೆ ಬಿತ್ತು. ಎಷ್ಟಂತೆ ಸೈಟು ಬೆಲೆ? ಎಲ್ಲಿ ಬರುತ್ತೆ ಈ ಜಾಗ ಮೊದಲಾದ ವಿವರ ಸಹಜವಾಗಿ ಕುತೂಹಲಕ್ಕೆ ಎನ್ನುವಂತೆ ಕೇಳಿದ. ನಾನೂ ನನಗೆ ತಿಳಿದ ಸುಳ್ಳು ಪಳ್ಳು ಹೇಳಿ ಅವನಿಗೆ ಉತ್ತರಿಸಿದೆ. ಸೈಟ್‌ಗೆ ಅಪ್ಲೈ ಮಾಡು ಅಂದ. ಕಾಸಿಲ್ಲವೇ ಅಂದೆ.

ಕಾಸು ಬೇಕಿದ್ದರೆ ನಾನು ಕೊಡ್ತೀನಿ ಅಂದ.

ಮಾರನೇ ದಿವಸ ಸೋಮವಾರ ಕೆನರಾ ಬ್ಯಾಂಕ್‌ನಿಂದ ಕಾಸು ತೆಗೆದೆ. ಅತಿ ಕಡಿಮೆ ಅಳತೆಯ ಸೈಟ್ ಎಂದರೆ ಮೂವತ್ತು, ಐವತ್ತು. ಅದಕ್ಕಿಂತಲೂ ಚಿಕ್ಕದು ಇರಲಿಲ್ಲ. ಅದನ್ನೇ ಆಯ್ಕೆ ಮಾಡಿದೆ..(ಈಗ ಇಷ್ಟು ವರ್ಷ ಆದಮೇಲೆ ಸೈಟಿನ ಬೆಲೆ ಕೋಟಿ ಕೋಟಿ ಆಗಿರುವಾಗ ನನಗೆ ಅನಿಸುತ್ತಿರುವುದು ತಗೊಳ್ತಾ ತಗೊಳ್ತಾ ದೊಡ್ಡ ಸೈಟೇ ತಗೊಬಹುದಾಗಿತ್ತು, ಕೈಲಿ ಕಾಸೂ ಇತ್ತು ಅಂತ! ಆಗ ಯಾಕೆ ನನ್ನ ತಲೆಗೆ ಇದು ಹೊಳೆಯಲಿಲ್ಲ ಅನಿಸುತ್ತೆ! ಈಗ ಇದು ತುರುಬು ನೆನೆಸಿಕೊಂಡು ಅತ್ತ ಹಿರಿ ಅಜ್ಜಿ ಕತೆ !) ಮಧ್ಯಾಹ್ನ ಸೆಕೆಂಡ್ ಶಿಫ್ಟ್ ಹೋದವನು ದುಡ್ಡು ಕಟ್ಟಿದೆ ಮತ್ತು ಮರೆತೂ ಬಿಟ್ಟೆ.

ಒಂದೆರೆಡು ತಿಂಗಳು ಆದಮೇಲೆ ಸೊಸೈಟಿ ಅವರು ಪೋನ್ ಮಾಡಿದರು. ಸೊಸೈಟಿ ಆಫೀಸ್‌ಗೆ ಹೋದೆ. ಸೈಟು ಕೊಳ್ಳಲು ದುಡ್ಡು ಸಾಲದೇ ಬಂದರೆ ನಿಮ್ಮ pf (Provident Fund)ನಿಂದ ದುಡ್ಡು ಇಲ್ಲಿಗೆ ಅಂದರೆ ಸೊಸೈಟಿ ಲೆಕ್ಕಕ್ಕೆ ಟ್ರಾನ್ಸ್ಫರ್ ಆಗುವ ಹಾಗೆ ಮ್ಯಾನೇಜ್ಮೆಂಟ್ ಹತ್ತಿರ ಮಾತು ಆಡಿದೀವಿ. ಈ ಫಾರ್ಮ್‌ಗೆ ಸೈನ್ ಮಾಡು ಅಂತ ನನ್ನ ಮುಂದೆ ಒಂದು ಪತ್ರ ಇಟ್ಟರು. ಸೈನೂ ಮಾಡಿದೆ ಅಂತ ಇಟ್ಕೊಳ್ಳಿ. ಸೈಟು ಅಲಾಟ್ ಆದ ಪತ್ರ ಬಂತು. ಸೊಸೈಟಿಯಲ್ಲಿ ಡೈರೆಕ್ಟರ್ ಆಗಿದ್ದ ನನ್ನ ಗೆಳೆಯರು ಸತ್ಯನಾರಾಯಣ ಮತ್ತು ಸುಬ್ಬರಾಮಯ್ಯ ಇಂತಹ ದಿವಸ ರಿಜಿಸ್ಟ್ರೇಶನ್ನು. ಬರೋಕ್ಕೆ ಆಗುತ್ತಾ ರಜಾ ಹಾಕಬೇಕು ಅಂದರು. ರಜಾ ಹಾಕದೇ ಇದ್ದರೆ…? ಅಂತ ಕೇಳಿದೆ.

ರಿಜಿಸ್ಟ್ರೇಷನ್ ನಾವೇ ಮಾಡಿಸತೀವಿ, ಮೂವತ್ತು ಫೀಸ್ ಅಂದರು! ಇದು ಅಂದರೆ ಕೊಳ್ಳುವವನ ಗೈರು ಹಾಜರಿಯಲ್ಲಿ ರಿಜಿಸ್ಟ್ರೇಷನ್ ಮಾಡುವುದು ಅಂದು ಚಾಲ್ತಿಯಲ್ಲಿದ್ದ ಕಾನೂನಿನಲ್ಲಿ ಇದು ಸಾಧ್ಯ ಇತ್ತು. ಇದು ಎಪ್ಪತ್ತರ ನಡುವೆ. ಮೂವತ್ತು ರೂಪಾಯಿ ಅಂದರೆ ದೊಡ್ಡದು. ನನಗೆ ಎರಡು ದಿವಸದ ಸಂಬಳ ಇರಬೇಕು. ಅದರ ಜತೆಗೆ ಸಾರ್ವಜನಿಕ ಸೇವೆಗೆ ಇಳಿದವರು ಲಂಚ ಪಂಚ ಸಕತ್ತಾಗಿ ಹೊಡಿತಾರೆ ಎಂದು ಪ್ರಚಲಿತವಾಗಿದ್ದ ಪಿಸು ಮಾತು. ನಾನೇ ಬರ್ತೀನಿ ಕಣ್ರಪ್ಪ ಅಂತ ಹೋದೆ.

ಉದ್ದಕ್ಕೆ ಕ್ಯೂ ಇತ್ತು. ಸಾಲಿನ ಕೊನೆಗೆ ಅಂಟಿಕೊಂಡೆನಾ..

ಕೈ ಬೆರಳಿಗೆ ಮಸಿ ಬಳಿದು ಅದನ್ನು ಸೇಲ್ ಡೀಡ್ ಮೇಲೆ ಒತ್ತಬೇಕು. ಇದಕ್ಕೆ ಒಬ್ಬ ಅಟೆಂಡರ್ ನಿಯೋಜಿತ ಆಗಿರ್ತಾನೆ. ಸಣ್ಣಗೆ ಹಂಚಿ ಕಡ್ಡಿ ಹಾಗೆ ಇರ್ತಾನೆ ಮತ್ತು ಮುಂದಿನ ಎರಡು ಹಲ್ಲು ಇರುಲ್ಲ. ನನ್ನ ಸರದಿ ಬಂತಾ, ಕೈ ಬೆರಳಿಗೆ ಮಸಿ ಬಳಿದ. ಪೇಪರು ಮೇಲೆ ಅದನ್ನ ಒತ್ತುವ ಮೊದಲು ಎಡಗೈ ಚಾಚಿ ಹೂಂ ಹೂಂ ಜಲ್ದಿ ಜಲ್ದಿ ಅಂದ! ಬಲಗೈಯಲ್ಲಿ ನನ್ನ ಎಡಗೈ ಬಲವಾಗಿ ಹಿಡಿದಿದ್ದಾನೆ. ಬಲಗೈ ಮಾತ್ರ ಫ್ರೀ! ಜಲ್ದಿ ಜಲ್ದಿ ಅಂದನಲ್ಲಾ ಏನು ಜಲ್ದಿ ಅಂದೆ. ಆಫೀಸರು ಎದುರೇ ಕೂತಿದ್ದ. ಇವನು ಅವರ ಶಿಷ್ಯ ಲಂಚ ಕೇಳ್ತಾ ಇದಾನೆ ಅಂತ ದೂರು ಹೇಳಿದರೆ ಹ್ಯಾಗೆ? ಅವನ ಕಡೆ ನೋಡಿದೆ. ಆಫೀಸರ್ ಅವನೂ ಅವಸರ ಮಾಡಬೇಕೆ? ಇಬ್ಬರಿಗೂ ಅಂಡರ್ ಸ್ಟ್ಯಾಂಡಿಂಗ್ ಇದೆ ಅನಿಸಿತು. ದೂರು ಕೊಡಲಿಲ್ಲ, ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ. ಈ ಪ್ರಯೋಗಕ್ಕೆ ಒಳಗಾದ ನನ್ನ ಬೆರಳು ಒಂದು ವಾರ ನೋವಿನಿಂದ ನರಳಿತ್ತು ಮತ್ತು ಈ ಕಾರಣಕ್ಕಾಗಿ ಇರಬೇಕು ಮತ್ಯಾವುದೂ ಆಸ್ತಿ ಪಾಸ್ತಿ ಕೊಳ್ಳುವ ಯೋಜನೆಯನ್ನು ಸುಮಾರು ವರ್ಷ ಮಾಡಲೇ ಇಲ್ಲ!

ಸೈಟಿನ ದಾಖಲೆ ಪತ್ರ ಬಂತಾ, ಅದನ್ನು ಸಂಪೂರ್ಣ ಮರೆತೇ ಬಿಟ್ಟಿದ್ದೆ. ಅದರ ನೆನಪು ಹೇಗಾಯಿತು ಎನ್ನುವುದು ಮತ್ತೊಂದು ರೋಚಕ ಕತೆ.

ಮುಂದಿನ ಸಂಚಿಕೆಯಲ್ಲಿ…