“ಜಾಗತಿಕ ಪ್ರಭುತ್ವ”ದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯ ಈ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ “ಎಲ್ಲರೂ ಎಲ್ಲರ ಸಂಬಂಧಿ”. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತ “ಕಾವುಮನೆ”ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಹಕ್ಸಲೀಯವರ ಈ ಕಲ್ಪಿತ ಸಮಾಜದಲ್ಲಿ ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಎಪ್ಸಿಲಾನ್ ಎಂಬ ನಾಲ್ಕು ವರ್ಗಗಳಿವೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

 

ಆಲ್ಡಸ್ ಹಕ್ಸಲೀ 1932ರಲ್ಲಿ ಬರೆದ “ಬ್ರೇವ್ ನ್ಯೂ ವರ್ಲ್ಡ್” (ಭವ್ಯ ನವ ಜಗತ್ತು) ಕ್ರಿ.ಶ. 2540ರ ಕತೆ ಹೇಳುತ್ತದೆ. ಭವಿತವ್ಯದ ಸಮಾಜವನ್ನು ಕಲ್ಪಿಸಿಕೊಳ್ಳುವ ಈ ಕೃತಿ, ರಚಿತವಾಗಿ ತೊಂಭತ್ತು ವರ್ಷಗಳ ನಂತರವೂ ಓದುಗರಿಗೆ ಅಷ್ಟೇ, ಅಥವಾ ಇನ್ನೂ ಹೆಚ್ಚಿನ, ರೋಮಾಂಚನ ಕೊಡುತ್ತದೆ. ಸಾಮಾಜಿಕ ಮಾಧ್ಯಮಗಳ ಜೀತಕ್ಕೆ ನಮ್ಮನ್ನು ನಾವು ಒಪ್ಪಿಸಿಕೊಂಡಿರುವ ತಲೆಮಾರಿನವರಾದ ನಮಗಂತೂ ಈ ಕಾದಂಬರಿಯಲ್ಲಿ ಎಚ್ಚರಿಕೆಯೂ ಇದೆ, ಮುನ್ನೋಟವೂ ಇದೆ. ವಿಜ್ಞಾನ ತಂತ್ರಜ್ಞಾನಗಳು ಅಭಿವೃದ್ಧಿ ತರುವ ಹೆದ್ದಾರಿಗಳೆಂಬ ಹುಂಬ ನಂಬಿಕೆಯಲ್ಲಿ ಬಂಡವಾಳಶಾಹಿ ರಾತ್ರಿ ತೋಡಿದ ಗುಂಡಿಯಲ್ಲಿ ಹಗಲಲ್ಲಿ ಹೋಗಿ ಬೀಳುತ್ತಿರುವ ನಮ್ಮ ಪೀಳಿಗೆ, ಖಂಡಿತ “ಭವ್ಯ ನವ ಜಗತ್ತಿನಲ್ಲಿ” ಬದುಕುತ್ತಿದೆ. ಆದರೆ, ಈ ನುಡಿಗಟ್ಟನ್ನು ಟಂಕಿಸಿದ ಶೇಕ್ಸ್‌ಪಿಯರ್ ಮಹಾಶಯನೇ ಬಳಸಿರುವಂತೆ, ಇದೊಂದು ಸ್ಪಷ್ಟ ವ್ಯಂಗ್ಯೋಕ್ತಿ.

“ಬ್ರೇವ್ ನ್ಯೂ ವರ್ಲ್ಡ್‌” ಕೃತಿಯನ್ನು ಸಾಮಾನ್ಯವಾಗಿ ಕರಾಳ ಜಗತ್ತನ್ನು ದರ್ಶಿಸುವ ಕಾದಂಬರಿಯನ್ನಾಗಿ ಓದಲಾಗುತ್ತದೆ. ಇಲ್ಲಿ ಕರಾಳ ಜಗತ್ತು ಎಂದರೆ, ಡಿಸ್ಟೋಪಿಯಾ, ಅಥವಾ ಆದರ್ಶ ಸಮಾಜದ ತದ್ವಿರೋಧೀ ಕಲ್ಪನೆಯೆಂದು ಅರ್ಥ. ತಂತ್ರಜ್ಞಾನದ ಕುರಿತಾಗಿ ಅತೀವ ಹುರುಪು ಇದ್ದ, ಮೊದಲನೇ ಮಹಾಯುದ್ಧದ ನಂತರದ ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ ಈ ಕಾದಂಬರಿಯನ್ನು ಬರೆಯಲಾಗಿದೆ. ಇಪ್ಪತ್ತನೇ ಶತಮಾನದ ಈ ಅವಧಿ, ಇಪ್ಪತ್ತೊಂದನೇ ಶತಮಾನದಲ್ಲಿ ನಾವಿರುವ ಕಾಲಮಾನಕ್ಕಿಂತ ಬಹಳ ಬೇರೆಯದಾಗಿರಲಿಲ್ಲ. ಜಗತ್ತಿನಲ್ಲಿ ಯುದ್ಧೋನ್ಮಾದ, ಸಂಘರ್ಷ, ಶೋಷಣೆ, ಹಿಂಸಾತ್ಮಕ ಮನೋಭಾವಗಳು ಸಕ್ರಿಯವಾಗಿದ್ದ ದಿನಗಳು. ಇಂದಿನಂತೆಯೇ, ಭವಿಷ್ಯವನ್ನು ಸರಿಪಡಿಸಲು ತಂತ್ರಜ್ಞಾನವೇ ಸೂಕ್ತ ದಾರಿ ಎಂಬ ನಂಬಿಕೆಯೇ ಆಳುತ್ತಿದ್ದ ಕಾಲ. ತಂತ್ರಜ್ಞಾನ ಮತ್ತು ಬಂಡವಾಳಶಾಹಿ ತಾಂತ್ರಿಕ ಸಾಧನಗಳ ನಡುವಿನ ಭಿನ್ನತೆಗೆ ಜನರು ಹೆಚ್ಚು ಗಮನ ಕೊಡದೇ ಒಂದರ ಹಂಬಲದಲ್ಲಿ ಇನ್ನೊಂದಕ್ಕೆ ದಾಸರಾಗುತ್ತಿದ್ದ ಕಾಲ. ಹಕ್ಸಲೀಯ ದೃಷ್ಟಿಯಲ್ಲಿ ಬಂಡವಾಳಶಾಹಿ ತಾಂತ್ರಿಕತೆಯನ್ನು ಹೀಗೆ ನೆಚ್ಚಿಕೊಳ್ಳುವುದು ಒಂದು ಬಗೆಯ ಕುರುಡುತನ, ಒಂದು ಬಗೆಯ ದಾಸ್ಯ. ಈ ಗುಲಾಮಿ ಮನೋಭಾವವನ್ನು ಪ್ರಶ್ನಿಸಿ ಬರೆದ ಕಾದಂಬರಿ ಹಕ್ಸಲೀಯ “ಬ್ರೇವ್ ನ್ಯೂ ವರ್ಲ್ಡ್‌”.

 

ವಿಜ್ಞಾನ ತಂತ್ರಜ್ಞಾನಗಳು ಅಭಿವೃದ್ಧಿ ತರುವ ಹೆದ್ದಾರಿಗಳೆಂಬ ಹುಂಬ ನಂಬಿಕೆಯಲ್ಲಿ ಬಂಡವಾಳಶಾಹಿ ರಾತ್ರಿ ತೋಡಿದ ಗುಂಡಿಯಲ್ಲಿ ಹಗಲಲ್ಲಿ ಹೋಗಿ ಬೀಳುತ್ತಿರುವ ನಮ್ಮ ಪೀಳಿಗೆ, ಖಂಡಿತ “ಭವ್ಯ ನವ ಜಗತ್ತಿನಲ್ಲಿ” ಬದುಕುತ್ತಿದೆ. ಆದರೆ, ಈ ನುಡಿಗಟ್ಟನ್ನು ಟಂಕಿಸಿದ ಶೇಕ್ಸ್‌ಪಿಯರ್ ಮಹಾಶಯನೇ ಬಳಸಿರುವಂತೆ, ಇದೊಂದು ಸ್ಪಷ್ಟ ವ್ಯಂಗ್ಯೋಕ್ತಿ.

 

ಹಕ್ಸಲೀಯ ಕಾದಂಬರಿಯ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ದಕ್ಷತೆಗಳಿಗೆ ಅಪಾರ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಈ ಭವಿತವ್ಯದ ಸಮಾಜದಲ್ಲಿ, ಬಾಲ್ಯದಿಂದಲೇ ಜನರಲ್ಲಿ ಭಾವನೆಗಳನ್ನು ಹತೋಟಿಗೆ ತರಲಾಗಿದೆ; ಹಾಗೆಯೇ, ಸ್ವಂತಿಕೆಯನ್ನು ಸಹ. “ಜಾಗತಿಕ ಪ್ರಭುತ್ವ”ದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ “ಎಲ್ಲರೂ ಎಲ್ಲರ ಸಂಬಂಧಿ”. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತ “ಕಾವುಮನೆ”ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಹಕ್ಸಲೀಯವರ ಈ ಕಲ್ಪಿತ ಸಮಾಜದಲ್ಲಿ ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಮತ್ತು ಎಪ್ಸಿಲಾನ್ ಎಂಬ ನಾಲ್ಕು ವರ್ಗಗಳಿವೆ. ಸಮಾಜದಲ್ಲಿ ಈ ವರ್ಗಗಳಿಗಿರುವ ಕರ್ತವ್ಯಕ್ಕೆ ಅನುಗುಣವಾಗಿ ಅವರಿಗೆ ದೈಹಿಕ, ಮಾನಸಿಕ ವಿಕಾಸಕ್ಕೆ ಸೂಕ್ತ ಹಾರ್ಮೋನುಗಳನ್ನು ಕೊಡಲಾಗುತ್ತದೆ. ಆಲ್ಫಾ ವರ್ಗ ಆಳಲೆಂದು, ಎಪ್ಸಿಲಾನ್ ವರ್ಗ ದುಡಿಯಲೆಂದು ತಯಾರಾಗುತ್ತಿರುತ್ತದೆ ಈ ಸಮಾಜದಲ್ಲಿ.

ಸ್ಥೂಲವಾಗಿ, ಈ ಕಾದಂಬರಿಯ ಹೂರಣ ಹೀಗಿದೆ: ಆಲ್ಫಾ ವರ್ಗಕ್ಕೆ ಸೇರಿದ ಬರ್ನಾರ್ಡ್ ಮಾರ್ಕ್ಸ್ ಮತ್ತವನ ಸಂಗಾತಿ ಲೆನಿನಾ ಕ್ರೌನ್ ಅನಾಗರಿಕರ ಮೀಸಲುಕ್ಷೇತ್ರಕ್ಕೆ ಹೋಗುತ್ತಾರೆ. ಅಲ್ಲಿಯ ಜನರ ನಡವಳಿಕೆ, ಅವರ ನಡೆನುಡಿ ಆಚರಣೆಗಳು ಅವರಿಗೆ ವಿಚಿತ್ರವಾಗಿ ತೋರುತ್ತವೆ. ಮಾರ್ಕ್ಸನ ನಾಯಕನಾದ ಡೈರೆಕ್ಟರ್ ಈ ಅನಾಗರಿಕ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ತನ್ನ ಸಂಗಾತಿಯನ್ನು ಕಳೆದು ಕೊಂಡಿರುತ್ತಾನೆ. ಮಾರ್ಕ್ಸ್ ಮತ್ತು ಲೆನಿನಾ ಇಲ್ಲಿ ಡೈರೆಕ್ಟರನ ಸಂಗಾತಿಯಾಗಿದ್ದ ಲಿಂಡಾಳನ್ನು ಭೇಟಿ ಮಾಡುತ್ತಾರೆ. ಅವಳ ಮಗ ಜಾನ್. ಅವರಿಬ್ಬರನ್ನೂ ಮಾರ್ಕ್ಸ್ ತನ್ನೊಂದಿಗೆ ಕರೆದು ತರುತ್ತಾನೆ. ಲಿಂಡಾ ಮತ್ತು ಜಾನ್ ಡೈರೆಕ್ಟರನ್ನು ಭೇಟಿ ಆದಾಗ, ಜಾನ್ ಅವನನ್ನು “ಅಪ್ಪಾ” ಎಂದು ಕರೆಯುತ್ತಾನೆ. ಅವನು ಡೈರೆಕ್ಟರ್ ಮತ್ತು ಲಿಂಡಾ ನಡುವಿನ ದೈಹಿಕ ಸಂಬಂಧದ ಪರಿಣಾಮವಾಗಿ ಹುಟ್ಟಿದವ ಎನ್ನುವ ಸತ್ಯ ಹೊರಬಿದ್ದಾಗ, ಡೈರೆಕ್ಟರ್ ತನ್ನ ಜಾಗ ಖಾಲಿ ಮಾಡಬೇಕಾಗಿ ಬರುತ್ತದೆ. ಯಾಕೆಂದರೆ, ಆ ಸಮಾಜದಲ್ಲಿ ಎರಡು ಜೀವಗಳ ನಡುವೆ ದೈಹಿಕ ಸಂಪರ್ಕದ ಮೇಲೆ ನಿರ್ಭಂಧವಿರುತ್ತದೆ. ಈ ನಿಯಮ ಮುರಿದದ್ದು ಅವನ ಅಪರಾಧ. ಜಾನ್ ಈ ಭವ್ಯ ನವ ಜಗತ್ತಿನಲ್ಲಿಯೇ ಇರಲು ಅನುಮತಿ ಕೊಡಲಾದರೂ ಕೂಡ, ಲಿಂಡಾಳನ್ನು ಆಸ್ಪತ್ರೆಗೆ ಕಳಿಸಲಾಗುತ್ತದೆ. ಯಾಕೆಂದರೆ ಅವಳು ಸೋಮಾ ಎಂಬ ಮಾದಕ ಪದಾರ್ಥಕ್ಕೆ ಅಡಿಯಾಳಾಗಿರುತ್ತಾಳೆ. ಕೊನೆಗೆ, ಅದರಿಂದಾಗಿಯೇ ಅವಳು ನಿಧನಳಾಗುತ್ತಾಳೆ. ಅವಳ ನಿಧನನಿಂದಾಗಿ, ಜಾನ್ ವ್ಯಗ್ರನಾಗುತ್ತ ಸಾಗುತ್ತಾನೆ. ಮುಂದೆ, ಎಲ್ಲರಿಂದ ದೂರವಾಗಿ, ಒಂದು ಲೈಟ್‌ಹೌಸಿನಲ್ಲಿ ಒಂಟಿಯಾಗಿರುತ್ತಾನೆ. ಅವನು ಒಂಟಿಯಾಗಿರಲು ಪ್ರಯತ್ನಿಸಿದರೂ, ಅವನನ್ನು ಒಂದು ವಿಚಿತ್ರವೆನ್ನುವಂತೆ ನೋಡುವ ಪ್ರವಾಸಿಗರು ಹೆಚ್ಚಾಗುತ್ತಾರೆ. ವ್ಯಗ್ರತೆಯಲ್ಲಿ ಮೊದಲು ತನ್ನನ್ನು ತಾನು, ಆಮೇಲೆ ಇನ್ನೋರ್ವ ಮಹಿಳೆಯನ್ನು ಹಿಂಸಿಸಲು ಶುರುಮಾಡುತ್ತಾನೆ. ಅದನ್ನು ನೋಡಲೂ ಜನ ಸೇರುತ್ತಾರೆ. ಸೋಮಾ ಸೇವನೆಯ ನಂತರ ಅವನು ಶಾಂತವಾಗಿ, ನಿದ್ದೆಗೆ ಬೀಳುತ್ತಾನೆ, ನಿದ್ದೆಯಿಂದೆದ್ದಾಗ, ತನ್ನ ಹಿಂಸ್ರ ನಡವಳಿಕೆಯಿಂದ ತಾನೇ ಹೇಸಿ, ನೇಣು ಹಾಕಿಕೊಂಡು ಜಾನ್ ಸಾಯುತ್ತಾನೆ.

ಹಕ್ಸಲೀ ಪಾಶ್ಚಾತ್ಯ ಲೋಕತಂತ್ರಗಳು ಸ್ವ-ಇಚ್ಛೆಯಿಂದ ಪ್ರಜಾತಂತ್ರದ ಉದಾತ್ತ ಆದರ್ಶಗಳನ್ನು ಬದಿಗಿಟ್ಟು, ನಿರಂಕುಶ ಪ್ರಭುತ್ವದತ್ತ ಸಾಗುತ್ತಿರುವ ಐತಿಹಾಸಿಕ ಸಂದರ್ಭವನ್ನು ಕಲ್ಪಿಸಿಕೊಂಡು ಈ ಕಾದಂಬರಿ ಬರೆದಿದ್ದಾನೆ. ಯಾರೋ ಹೊರಗಿನಿಂದ ಬಂದು ತಮ್ಮ ಆಳ್ವಿಕೆಯನ್ನು ಹೇರುವ ವಸಾಹತುಶಾಹಿಯಂತಹ ವ್ಯವಸ್ಥೆಯಂತಲ್ಲ ಇದು. ಇಲ್ಲಿ ಪ್ರಜಾತಂತ್ರದಲ್ಲಿದ್ದು, ಅದು ಆಗಗೊಳಿಸಿರುವ ಸ್ವಾತಂತ್ರ್ಯ, ನ್ಯಾಯ, ರಾಜಕೀಯ ಅವಕಾಶ, ಉದಾತ್ತ ಮಾನವೀಯ ಆದರ್ಶಗಳು ಇವೆಲ್ಲವನ್ನೂ ತಳ್ಳಿಹಾಕಿ, ಜನರು ಸರ್ವಾಧಿಕಾರಿಯ ಆಳ್ವಿಕೆಯನ್ನು ತಮ್ಮ ಮೇಲೆ ತಾವು ಆರೋಪಿಸಿ ಕೊಳ್ಳುವುದನ್ನು ಹಕ್ಸಲೀ ಈ ಕಾದಂಬರಿಯಲ್ಲಿ ವಿಮರ್ಶಿಸಿದ್ದಾನೆ.

ಸಾಮಾನ್ಯವಾಗಿ, ಹಕ್ಸಲೀಯ ಈ ಡಿಸ್ಟೋಪಿಯಾದ ಕಾದಂಬರಿಯ ಜೊತೆ ನೆನಪಾಗುವ ಇನ್ನೊಂದು ಕಾದಂಬರಿ ಎಂದರೆ ಜಾರ್ಜ್ ಆರ್ವೆಲ್ಲನ “1984”. ಶೀತಲ ಸಮರದ ಜಾಗತಿಕ ರಾಜಕಾರಣದ ಹಿನ್ನೆಲೆಯಲ್ಲಿ ಆರ್ವೆಲ್ 1949ರಲ್ಲಿ ಬರೆದ “1984” ಎಂಬ ಕಾದಂಬರಿಯೂ ಕೂಡ ಡಿಸ್ಟೋಪಿಯಾದ ಕಥನವೇ. ಆರ್ವೆಲ್ ನಿರಂಕುಶ ಅಧಿಪತ್ಯಗಳನ್ನು ಟೀಕಿಸಿ ಬರೆದ ಈ ಕಾದಂಬರಿ ಸ್ಟಾಲಿನ್ ಮತ್ತು ನಾಜೀಗಳ ಮಾದರಿಯಲ್ಲಿ ಹಿಂಸೆ ಮತ್ತು ಭಯದ ಮೂಲಕ ಜನರನ್ನು ವಿಧೇಯರನ್ನಾಗಿರಿಸಿಟ್ಟುಕೊಳ್ಳುವ ದೇಶವೊಂದನ್ನು ಕಲ್ಪಿಸಿಕೊಂಡು ಬರೆದ ಕತೆ. ಶೀರ್ಷಿಕೆಯೇ ಸೂಚಿಸುವಂತೆ, ಇದೂ ಸಹ ಭವಿಷ್ಯದ ಸಮಾಜದ ಕಥನವೇ. ಆರ್ವೆಲ್ಲನ “1984”ರ ಜಗತ್ತಿನಲ್ಲಿ ಎಲ್ಲೆಡೆ ಯುದ್ಧ ನಿತ್ಯಸತ್ಯವಾಗಿದೆ. ಜನರು ಏನು ಹೇಳಬೇಕು, ಏನು ಯೋಚಿಸಬೇಕು ಎನ್ನುವುದೆಲ್ಲವನ್ನೂ ನಿಯಂತ್ರಿಸ ಬಯಸುವ ಸರಕಾರ ತಾಂತ್ರಿಕ ಸಾಧನಗಳ ಮೂಲಕ ಎಲ್ಲರನ್ನೂ ಕಣ್ಗಾವಲಡಿ ಇಟ್ಟಿದೆ. “1984” ಕಾದಂಬರಿಯ ಓಶಾನಿಯಾ ರಾಜ್ಯದಲ್ಲಿ ಥಾಟ್ ಪೋಲಿಸರು ಜನರ ಚಿಂತನೆ, ಕಲ್ಪನೆಗಳನ್ನು ಹತೋಟಿಯಲ್ಲಿಡುತ್ತಾರೆ. ಓಶಿಯಾನಾದ ಸರ್ವಾಧಿಕಾರಿ, “ಬಿಗ್ ಬ್ರದರ್” ಜನರ ತಲೆತುಂಬ ಸುಳ್ಳುಮಾಹಿತಿ ತುಂಬಿಸಿ, ಎಲ್ಲರೂ ಸಂಪೂರ್ಣ ವಿಧೇಯತೆಯಲ್ಲಿ ನಿಷ್ಕ್ರಿಯರಾಗಿ ಬದುಕುವಂತೆ ಪ್ರಚೋದಿಸುತ್ತಾನೆ.

 

ಶೀತಲ ಸಮರದ ಜಾಗತಿಕ ರಾಜಕಾರಣದ ಹಿನ್ನೆಲೆಯಲ್ಲಿ ಆರ್ವೆಲ್ 1949ರಲ್ಲಿ ಬರೆದ “1984” ಎಂಬ ಕಾದಂಬರಿಯೂ ಕೂಡ ಡಿಸ್ಟೋಪಿಯಾದ ಕಥನವೇ. ಆರ್ವೆಲ್ ನಿರಂಕುಶ ಅಧಿಪತ್ಯಗಳನ್ನು ಟೀಕಿಸಿ ಬರೆದ ಈ ಕಾದಂಬರಿ ಸ್ಟಾಲಿನ್ ಮತ್ತು ನಾಜೀಗಳ ಮಾದರಿಯಲ್ಲಿ ಹಿಂಸೆ ಮತ್ತು ಭಯದ ಮೂಲಕ ಜನರನ್ನು ವಿಧೇಯರನ್ನಾಗಿರಿಸಿಟ್ಟುಕೊಳ್ಳುವ ದೇಶವೊಂದನ್ನು ಕಲ್ಪಿಸಿಕೊಂಡು ಬರೆದ ಕತೆ. ಶೀರ್ಷಿಕೆಯೇ ಸೂಚಿಸುವಂತೆ, ಇದೂ ಸಹ ಭವಿಷ್ಯದ ಸಮಾಜದ ಕಥನವೇ.

 

ಹಕ್ಸಲೀ ಮತ್ತು ಆರ್ವೆಲ್ ಕಲ್ಪಿಸಿಕೊಂಡ ಭವಿಷ್ಯ ಹೆಚ್ಚು ಕಡಿಮೆ ಅವರು ಕಲ್ಪಿಸಿಕೊಂಡಂತೆಯೇ ವಾಸ್ತವವಾಗಿರುವ ಕಾಲದಲ್ಲಿ ನಾವಿದ್ದೇವೆ. ಕುತೂಹಲಕಾರಿ ಅಂಶವೆಂದರೆ, ಆರ್ವೆಲ್ ಒಂದು ಕಾಲದಲ್ಲಿ ಹಕ್ಸಲೀಯ ವಿಧ್ಯಾರ್ಥಿಯಾಗಿದ್ದ. ಆರ್ವೆಲ್ಲನ ಕಾದಂಬರಿ “1984” ಪ್ರಕಟವಾದಾಗ, ಹಕ್ಸಲೀ ಅವನಿಗೊಂದು ಪತ್ರ ಬರೆಯುತ್ತಾನೆ. ಕಾದಂಬರಿಯನ್ನು ಅದ್ಭುತ ಕೃತಿಯೆಂದು ಹೊಗಳಿದರೂ ಕೂಡ, ಹಕ್ಸಲೀಯ ಪ್ರಕಾರ ಭವಿಷ್ಯದ ಕರಾಳ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಜನರನ್ನು ಹೆದರಿಸಿ ಬೆದರಿಸಿ ಹತೋಟಿಯಲ್ಲಿಡುವ “1984”ರ ಬಿಗ್ ಬ್ರದರ್ ತಂತ್ರದ ಬದಲು, ನಿರಂತರವಾಗಿ ಅವರ ಗಮನವನ್ನು ಗೊಂದಲದಲ್ಲಿರಿಸುವ, ಮನರಂಜನಾತ್ಮಕ ತಂತ್ರಗಳ ಮೂಲಕ ಅವರನ್ನು ಮಾದಕ ನಶೆಯಲ್ಲಿರಿಸುವ ತಂತ್ರಗಳ ಮೂಲಕ ಜನರನ್ನು ನಿಯಂತ್ರಿಸುವ ಸಾಮಾಜಿಕ ಇಂಜಿನಿಯರಿಂಗ್ ಚಾಲ್ತಿಯಲ್ಲಿರುತ್ತದೆ.

ಬ್ರಿಟೀಶ್ ತತ್ವಜ್ಞಾನಿ ಬರ್ಟ್ರಾಂಡ್ ರಸೆಲ್ 1958ರಲ್ಲಿ ಹೇಳಿದ್ದ: “ವಿಜ್ಞಾನ ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳು ಪ್ರತಿ ವ್ಯಕ್ತಿಯ ಮನಸ್ಸನ್ನೂ ಹತೋಟಿಗೆ, ವಿಧೇಯತೆ ಒಳಪಡಿಸುವ ತಂತ್ರಗಳನ್ನು, ತಂತ್ರಜ್ಞಾನಗಳನ್ನು ಆಳುವವರಿಗೆ ಒದಗಿಸಲಿವೆ.” ಬರಲಿರುವ ಪ್ಯಾಗಸಸ್ ಬಗೆಯ ನಿಯಂತ್ರಣ ತಂತ್ರಗಳ ಕುರಿತು ಅನೇಕ ವಿಜ್ಞಾನಿಗಳು, ರಾಜಕೀಯ ಶಾಸ್ತ್ರಜ್ಞಾರು ಇಪ್ಪತ್ತನೇ ಶತಮಾನದಲ್ಲಿಯೇ ಎಚ್ಚರಿಕೆಯ ಗಂಟೆ ಬಾರಿಸಿದ್ದರು. ಫ್ರಾಂಕಫರ್ಟ್ ತತ್ವಜ್ಞಾನಿಗಳು ಕಲ್ಚರಲ್ ಇಂಡಸ್ಟ್ರಿಯ ವಿಮರ್ಶೆ ನಡೆಸಿದ್ದು ಇದೇ ಹಿನ್ನೆಲೆಯಲ್ಲಿ. ಹಕ್ಸಲೀಯಂತೆಯೇ ಅಡಾರ್ನೊರಂತ ತತ್ವಜ್ಞಾನಿಗಳೂ ಕೂಡ ರಂಜನಾ ವ್ಯವಸ್ಥೆಗಳು ಹೇಗೆ ಜನರ ಮಾನಸಿಕ ಹತೋಟಿಯ ಸಾಧನಗಳಾಗುತ್ತವೆಯೆಂದು ಚರ್ಚಿಸಿದ್ದರು. ನಿರಂತರ ಮನರಂಜನೆಯ ಗೀಳು ಹತ್ತಿಸಿ ಚಿಂತನೆಗೆ ಆಸ್ಪದವೇ ಇರದಂತ ಸಮಾಜವನ್ನು ಸೃಷ್ಟಿಸುವ ಮೂಲಕ ಸಾರ್ವತ್ರಿಕ ಗುಲಾಮಗಿರಿಯನ್ನು ಸಹಜ-ಸಾಮಾನ್ಯವಾಗಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಇಪ್ಪತ್ತನೇ ಶತಮಾನದ ಮಾಧ್ಯಮ ಶಾಸ್ತ್ರಜ್ಞರೂ ಕೂಡ ಕೊಟ್ಟಿದ್ದರು. ಅದು ನಮ್ಮ ಕಾಲದಲ್ಲಿ ವಾಸ್ತವಾಗಿ ಪರಿವರ್ತಿತವಾಗಿದೆ ಎನ್ನಬಹುದೇ?

ಹಕ್ಸಲೀ ಅಥವಾ ಆರ್ವೆಲ್ ತಮ್ಮ ಕಾದಂಬರಿಗಳಲ್ಲಿ ಕಲ್ಪಿಸಿಕೊಂಡ ಭವಿಷ್ಯದ ಸಮಾಜ, ತತ್ವಜ್ಞಾನಿಗಳು, ಮಾಧ್ಯಮ ಮತ್ತು ಸಾಂಸ್ಕೃತಿಕ ಶಾಸ್ತ್ರಜ್ಞಾರು ತಮ್ಮ ಬರಹಗಳಲ್ಲಿ ನಿರೂಪಿಸಿದ ಅಧಿಕಾರಮತ್ತ ಪ್ರಭುತ್ವದ ಪ್ರಮುಖ ಆಸಕ್ತಿಯೆಂದರೆ ಜನರನ್ನು ಸಮಾಜವಿಮುಖರನ್ನಾಗಿಸಿ, ಆಳುವ ವರ್ಗಕ್ಕೆ ವಿಧೇಯತೆಯೇ ಪರಮ ಮೌಲ್ಯವೆಂಬ ನಂಬಿಕೆಯನ್ನು ಮೂಡಿಸಿ, ಸಾರ್ವತ್ರಿಕ ವಿಧೇಯತೆಯನ್ನು ಸ್ಥಾಪಿಸುವುದು. ಆರ್ವೆಲ್ಲನ ಕಲ್ಪಿತ ಪ್ರಭುತ್ವ ಇದನ್ನು ಬಲದ ಮೂಲಕ, ಭಯದ ಮೂಲಕ, ತಾಂತ್ರಿಕ ಪರಿಕರಗಳ ಮೂಲಕ ಸಾಧಿಸಲು ಪ್ರಯತ್ನಿಸುತ್ತದೆ. ಸ್ಟಾಲಿನ್, ಮುಸಲೋನಿ, ಹಿಟ್ಲರುಗಳನ್ನು ಕಂಡ ಇಪ್ಪತ್ತನೇ ಶತಮಾನದ ಮಧ್ಯಾವಧಿಯಲ್ಲಿ ಈ ಕಲ್ಪನೆ ಸರಿಯೆಂದೇ ಬಹಳಷ್ಟು ಜನ ಅಂದುಕೊಂಡರು. ಇಪ್ಪತ್ತೊಂದನೇ ಶತಮಾನದಲ್ಲಿ ನಿಂತು ಹಿಂದಕ್ಕೆ ನೋಡಿದರೆ, ಆರ್ವೆಲ್ಲನ ಕಲ್ಪನೆಯನ್ನು ವಾಸ್ತವವನ್ನಾಗಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.

ಹಕ್ಸಲೀಯ ದೃಷ್ಟಿಕೋನ ಸ್ವಲ್ಪ ಬೇರೆ. ಜನರಲ್ಲಿ ಕೆಲವು ಹವ್ಯಾಸಗಳನ್ನು ರೂಢಿಗೊಳಿಸುವ ಮೂಲಕ ಅವರು ಸ್ವ-ಇಚ್ಛೆಯಿಂದ ತಮ್ಮನ್ನು ತಾವು ವಿಧೇಯತೆಗೆ, ಜೀತಕ್ಕೆ, ಒಡ್ಡಿಕೊಳ್ಳುವ ಪ್ರಭುತ್ವವನ್ನು ಅವನು ಕಲ್ಪಿಸಿಕೊಂಡಿದ್ದ. ಸ್ವಾತಂತ್ರ್ಯ, ಗೌಪ್ಯತೆಗಳನ್ನು ಜನರು ತಾವಾಗಿಯೇ ಸಲ್ಲಿಸಿಬಿಡುವ, ವಿಧೇಯತೆಗೆ ಶರಣಾಗಲು ಒಪ್ಪಿಕೊಳ್ಳುವ, ಸರಕು-ಭೋಗದ ಆಮಿಷಕ್ಕೆ ಒಳಗಾಗಿ, ಸ್ವಾಯತ್ತ ಚಿಂತನೆ, ವಿಮರ್ಶಕ ಗುಣಗಳನ್ನು ತ್ಯಾಗಮಾಡಿಬಿಡುವ ಸಂದರ್ಭವನ್ನು “ಬ್ರೇವ್ ನ್ಯೂ ವರ್ಲ್ಡ್” ಚಿತ್ರಿಸುತ್ತದೆ. ತಂತ್ರಜ್ಞಾನದ ಮೂಲಕ ನಿಯಂತ್ರಣಕ್ಕೆ ಒಳಪಟ್ಟಿರುವ ಈ ಸಮಾಜದಲ್ಲಿ ಜನರು ತಮ್ಮ ದಾಸ್ಯದಲ್ಲಿಯೇ ಸುಖ ಕಂಡುಕೊಳ್ಳುತ್ತಾರೆ, ಅವರಿಗೆ ದಬ್ಬಾಳಿಕೆ ಕಾಣುವುದಿಲ್ಲ; ಅವರಿಗೆ ಪ್ರಭುತ್ವದ ಅಧಿಕಾರದ ಮದ ಕಾಣುವುದಿಲ್ಲ; ಅನ್ಯಾಯವೂ ಕಾಣುವುದಿಲ್ಲ. ಆರ್ವೆಲ್ಲನ ಕಾದಂಬರಿಯ ವಿನ್ಸಟನ್ ಸ್ಮಿತ್ ಎಂಬ ಪಾತ್ರವನ್ನು ಓಬ್ರಾಯನ್ ಎಂಬವನು ಹಿಂಸಿಸಿ ಹತೋಟಿಗೆ ತರಲು ಯತ್ನಿಸಿದರೆ, ಹಕ್ಸಲೀಯ ಮುಸ್ತಫಾ ಮಾಂಡ್ ಎಂಬ ಪ್ರಭುತ್ವದ ರಾಯಭಾರಿಗೆ, “ಅನಾಗರಿಕ” ಜಾನ್-ನಿಗೆ ಯಾಕಾಗಿ ಭೂಮಿ ಮೇಲಿನ ಸ್ವರ್ಗ ಇಷ್ಟವಾಗುವುದಿಲ್ಲವೆಂದೇ ಅರ್ಥವಾಗದು. ಚಿಂತೆಯೂ ಇಲ್ಲದ, ಚಿಂತನೆಯೂ ಇಲ್ಲದ, ಜವಾಬ್ದಾರಿಯೂ ಇಲ್ಲದ, ಸ್ವಾತಂತ್ರ್ಯವೂ ಇಲ್ಲದ, ಮೌಲ್ಯವೂ ಇಲ್ಲದ, ಮಾನವೀಯ ಗುಣವೂ ಇಲ್ಲದ ಸುಖಲೋಲುಪ ವ್ಯಕ್ತಿಯಾಗಿರುವುದನ್ನು, ಕಣ್ಣೀರನ್ನೇ ಕಾಣದ ಸಮಾಜವನ್ನು, ಜಾನ್ ಯಾಕೆ ತಿರಸ್ಕರಿಸುವುದು ಎಂದು ಮಾಂಡ್ ಅಚ್ಚರಿ ಪಡುತ್ತಾನೆ.

ಆರ್ವೆಲ್ಲನ ಕರಾಳ ಜಗತ್ತಿನಲ್ಲಿ ಅಧಿಕಾರಮತ್ತ ಪ್ರಭುತ್ವ ಪುಸ್ತಕಗಳನ್ನು ನಿಷೇಧಿಸಿದರೆ, ಹಕ್ಸಲೀಯ ಕರಾಳ ಜಗತ್ತಿನಲ್ಲಿ ಈ ನಿಷೇಧದ ಅವಶ್ಯಕತೆಯೇ ಇಲ್ಲ. ಅಂತಹ ನಿಷೇಧವನ್ನು ಜನರೇ ಖುದ್ದು ಆರೋಪಿಸಿಕೊಳ್ಳುವಂತೆ ಅವರ ಮನಸ್ಸನ್ನು ರೂಪಿಸಿಯಾಗಿದೆ. ಇದು ದಲೂಶ್ ಹೇಳುವ “ನಿಯಂತ್ರಿತ ಸಮಾಜ”ದ ಲಕ್ಷಣ. ಇಲ್ಲಿ ಜೈಲುಗಳು ಸಹ ಬೇಕಿಲ್ಲ, ಸೆರೆಮನೆಯ ಶಿಸ್ತನ್ನು ಜನ ತಾವೇ ಪಾಲಿಸುತ್ತಾರೆ. ಫೂಕೋ ನಿಗಾ ಇಡುವ ಮೂಲಕ ಜನರನ್ನು ನಿಯಂತ್ರಿಸುವ ಪ್ರಭುತ್ವವನ್ನು ಚರ್ಚಿಸಿದ್ದ. ದಲೂಶ್ ಈ ನಿಗಾ ಜನರ ಅಂತರಾಳದಲ್ಲಿಯೇ ಸ್ಥಾಪಿಸಿಬಿಡುವ ತಂತ್ರಗಳನ್ನು ಚರ್ಚಿಸಿದ್ದಾನೆ. ಆರ್ವೆಲ್ಲನಿಗೆ ಅನಿಸಿತ್ತು ಸರ್ವಾಧಿಕಾರಿ ಮನೋಭಾವದ ಪ್ರಭುತ್ವ ಜನರಿಗೆ ಮಾಹಿತಿ ಕೊಡಲು ನಿರಾಕರಿಸುತ್ತದೆ ಎಂದು. ಹಕ್ಸಲೀಯ ಭೀತಿ ಏನೆಂದರೆ, ಮಾಹಿತಿಯ ವಿಪರೀತದಿಂದಾಗಿ ಜನರಿಗೆ ಅದರ ಉಪಯೋಗವೇ ಇರದಂತಾಗಿಬಿಡುವ ಸನ್ನಿವೇಶ. ಆರ್ವೆಲ್ ಪ್ರಭುತ್ವ ನಮ್ಮಿಂದ ಸತ್ಯವನ್ನು ಮರೆಮಾಚುವುದನ್ನು ಬಣ್ಣಿಸಿದರೆ, ಅಸಂಬದ್ಧತೆಗಳ ಗೌಜಲ್ಲಿ ಸತ್ಯದ ದನಿಯೇ ಅಡಗಿಬಿಡುವುದನ್ನು ಹಕ್ಸಲೀ ವಿಶ್ಲೇಷಿಸುತ್ತಾನೆ. ಆರ್ವೆಲ್ಲನ ಕತೆ ಬಂಧಿತ ಸಮಾಜದ ಕುರಿತು ಬರೆದರೆ, ಹಕ್ಸಲೀ ಕ್ಷುಲ್ಲಕ ಸಮಾಜದ ಕುರಿತು ಬರೆದಿದ್ದಾನೆ.

ಇಪ್ಪತ್ತೊಂದನೇ ಶತಮಾನದ ಶುರುವಾತಿನ ಅತಿ-ತಂತ್ರಜ್ಞಾನದ ನಮ್ಮ ಸಮಾಜದಲ್ಲಿ ಆರ್ವೆಲ್ಲನ ಕಾದಂಬರಿಯ ವಾಸ್ತವವೂ ನಮ್ಮನ್ನು ಸುತ್ತುವರಿದಿದೆ; ಹಕ್ಸಲೀಯ ಕ್ಷುಲ್ಲಕತೆಯ ಸಂಸ್ಕೃತಿಯೂ ನಮ್ಮನ್ನು ಆವರಿಸಿದೆ. ಇಂದು ಪೋಲೀಸರ ಭಯವೂ ಸಮಾಜದ ಮೇಲಿದೆ, ಹಾಗೆಯೇ ಭೀತಿಯನ್ನೇ ಆಂತರ್ಯದಲ್ಲಿ ಇಳಿಸಿಕೊಂಡು ಸ್ವ-ಪೋಲೀಸುಗಿರಿಗೆ ಒಪ್ಪಿಸಿಕೊಳ್ಳುವ ಮನೋಭಾವವೂ ನಮ್ಮಲ್ಲಿದೆ. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿಯೇ, ಸುಮಾರು ನೂರು ವರುಷಗಳ ನಂತರದ ನಮ್ಮ ಈ ಅವಸ್ಥೆಯನ್ನು ಈ ಇಬ್ಬರು ಕಾದಂಬರಿಕಾರರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ಪ್ರತಿಭೆ ಮಾತ್ರ ಗಮನಾರ್ಹವಾದುದು. ಮಾನವೀಯ ಗುಣಗಳನ್ನು ಗೌರವಿಸುವ ಸಮಾಜದಲ್ಲಿ ಈ ಕಾದಂಬರಿಗಳು ಸದಾಕಾಲ ಜಾಗರೂಕತೆಯನ್ನು ಜ್ಞಾಪಿಸುವ ಗೋಡೆ ಗಡಿಯಾರಗಳಂತೆ.