”ಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ.ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ. ಆದರೆ ಈ ದಪ್ಪ ಚರ್ಮದ ಕೋಟು ಹಾಕ್ಕೊಂಡಿರೋ ದ್ವಾರಪಾಲಕನ ನೋಡಿದರೆ,ಅವನ ಚೂಪಾದ ದೊಡ್ಡ ಮೂಗು,ಅವನ ಉದ್ದದ ಸಪೂರದ ಕಪ್ಪು ಗಡ್ಡ ನೋಡಿದರೆ,ಅವನೇ ಅನುಮತಿ ಕೊಡೋ ತನಕ ಕಾಯೋದು ಒಳ್ಳೇದು ಅಂತ ತೀರ್ಮಾನಿಸಿಕೋತಾನೆ”
ಫ್ರಾನ್ಸ್ ಕಾಫ್ಕ ಬರೆದ ‘ಭಿಫೋರ್ ದ ಲಾ’ ಕಥೆಯ ಅನುವಾದ ಈ ಭಾನುವಾರದ ನಿಮ್ಮ ಓದಿಗಾಗಿ.ಅನುವಾದಿಸಿದ್ದಾರೆ ಅನಿವಾಸಿ ಸುದರ್ಶನ್.

 

ಕಾನೂನಿನ ಎದುರು ಒಬ್ಬ ದ್ವಾರಪಾಲಕ ನಿಂತಿದ್ದಾನೆ. ಹಳ್ಳಿಯವನೊಬ್ಬ ಅವನ ಹತ್ತಿರ ಬಂದು ಕಾನೂನಿನ ಬಳಿಗೆ ಬಿಡು ಅಂತ ಕೇಳಿದ್ದಕ್ಕೆ ಆ ದ್ವಾರಪಾಲಕ ‘ಈವಾಗ ಬಿಡೋಕೆ ಆಗಲ್ಲ’ ಅಂತಾನೆ. ಬಂದವನು ಯೋಚಿಸಿ, ‘ಹಾಗಾದರೆ ಆಮೇಲೆ ಬಿಡಬಹುದು ಅಂತ ಅರ್ಥಾನ’ ಅಂತ ಕೇಳ್ತಾನೆ. ದ್ವಾರಪಾಲಕ ‘ಆಗಬಹುದೇನೋ, ಆದರೆ ಈಗಲ್ಲ’ ಅನ್ತಾನೆ. ಕಾನೂನಿನ ಹತ್ತಿರ ಬಿಡೋ ಗೇಟು ತೆಕ್ಕೊಂಡೇ ಇರೋದರಿಂದ, ದ್ವಾರಪಾಲಕ ಪಕ್ಕಕ್ಕೆ ನಿಂತಿದ್ದರಿಂದ, ಇವನು ಬಾಗಿಲಿಂದ ಒಳಕ್ಕೆ ಇಣುಕಿ ನೋಡಲು ಬಗ್ಗುತ್ತಾನೆ. ಅದನ್ನು ನೋಡಿ ದ್ವಾರಪಾಲಕ ‘ನಿನಗೆ ಅಷ್ಟೊಂದು ಆಸೆ ಇದ್ದರೆ ನನ್ನ ಮಾತು ಮೀರಿ ಒಳಗೆ ಹೋಗು ನೋಡಣ. ಆದರೆ ನೆನಪಿಟ್ಕೊ: ನಾನು ಬಲಶಾಲಿ. ಅಲ್ಲದೆ ನಾನು ಅತಿ ಕೆಳಗಿನ ಕಾವಲಿನವನು. ಒಳಗೆ ಒಂದೊಂದು ಕೋಣೆಲೂ ಕಾವಲಿನವರು ಇದ್ದಾರೆ. ಒಬ್ಬೊಬ್ಬರೂ ಮುಂಚಿನವರಿಗಿಂತ ಬಲಶಾಲಿಗಳು. ಮೂರನೇ ಕಾವಲುಗಾರನ್ನ ನಾನು ಕಣ್ಣೆತ್ತಿ ನೋಡೋಕೆ ಕೂಡ ಆಗಲ್ಲ.’ ಅಂತ ನಗುತ್ತಾನೆ.

ಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ. ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ. ಆದರೆ ಈ ದಪ್ಪ ಚರ್ಮದ ಕೋಟು ಹಾಕ್ಕೊಂಡಿರೋ ದ್ವಾರಪಾಲಕನ ನೋಡಿದರೆ, ಅವನ ಚೂಪಾದ ದೊಡ್ಡ ಮೂಗು, ಅವನ ಉದ್ದದ ಸಪೂರದ ಕಪ್ಪು ಗಡ್ಡ ನೋಡಿದರೆ, ಅವನೇ ಅನುಮತಿ ಕೊಡೋ ತನಕ ಕಾಯೋದು ಒಳ್ಳೇದು ಅಂತ ತೀರ್ಮಾನಿಸಿಕೋತಾನೆ. ದ್ವಾರಪಾಲಕ ಅವನಿಗೆ ಒಂದು ಬೆನ್ನಿಲ್ಲದ ಕುರ್ಚಿಕೊಟ್ಟು ಬಾಗಿಲ ಒಂದು ಪಕ್ಕ ಕೂತುಕೊಳ್ಳೋಕೆ ಬಿಡುತಾನೆ. ಅಲ್ಲಿ ಆ ಹಳ್ಳಿಯವನು ತುಂಬಾ ದಿನಗಳು, ವರ್ಷಗಳು ಕೂತುಕೊಂಡೇ ಇರ್ತಾನೆ. ಬೇಕಾದಷ್ಟು ಸಲ ಅನುಮತಿಗಾಗಿ ಪ್ರಯತ್ನ ಪಡ್ತಾನೆ, ಮೇಲಿಂದ ಮೇಲೆ ಇವನ ಬೇಡಿಕೆಗಳಿಂದ ದ್ವಾರಪಾಲಕನನ್ನ ಬೇಜಾರು ಮಾಡಿಬಿಡ್ತಾನೆ. ಕಾವಲುಗಾರ ಇವನಿಗೆ ಆಗಾಗ ಚಿಕ್ಕ ಪುಟ್ಟ ಪರೀಕ್ಷೆ ಮಾಡ್ತಾ ಅವನ ಊರು ಮನೆ ಬಗ್ಗೆ, ಆಮೇಲೆ ಇನ್ನೂ ಏನೇನೋ ಕೇಳ್ತಾನೆ. ಆದರೆ ಆ ಪ್ರಶ್ನೆಗಳಾವುದೂ ಆಪ್ತವಾದ್ದಲ್ಲ. ಬರೇ ಸಭ್ಯರು ಕೇಳೋ ಹಾಗೆ. ಪ್ರತಿಸಲಾನೂ ಕೊನೆಗೆ ಮತ್ತೆ ‘ಒಳಗೆ ಬಿಡೋಕೆ ಆಗಲ್ಲ’ ಅಂತ ಮಾತು ಮುಗಿಸ್ತಾ ಇದ್ದ. ಹಳ್ಳಿಯವನು ಈ ಪ್ರಯಾಣಕ್ಕೆ ಚೆನ್ನಾಗೇ ತಯಾರಾಗಿ ಬಂದಿದಾನೆ. ತನ್ನ ಬಳಿ ಇದ್ದ ಬೆಲೆ ಬಾಳೋದನ್ನೆಲ್ಲಾ ದ್ವಾರಪಾಲಕನಿಗೆ ಲಂಚ ಕೊಟ್ಟು ಕೊಟ್ಟು ಕೈ ಖಾಲಿ ಮಾಡಿಕೊಂಡಿದಾನೆ. ದ್ವಾರಪಾಲಕ ಕೊಟ್ಟಿದ್ದೆಲ್ಲಾ ಒಪ್ಪಿಸ್ಕೊಂಡು, ತಗೊಳ್ತಾ ‘ನಾನು ತಗೊಳ್ತಾ ಇರೋದು, ನೀನು ಯಾವುದೋ ಪ್ರಯತ್ನ ಮಾಡದೆ ಬಿ‌ಟ್ಟೆನಲ್ಲ ಅಂತ ಬೇಜಾರು ಮಾಡ್ಕೋಬಾರ್ದು ಅದಕ್ಕೆ’ ಅಂತ ಹೇಳ್ತಾನೆ.

ಆ ಹಲವು ವರ್ಷಗಳುದ್ದಕ್ಕೂ ಹಳ್ಳಿಯವನು ದ್ವಾರಪಾಲಕನ್ನ ಎಡೆಬಿಡದೆ ಗಮನಿಸ್ತಾನೇ ಇದ್ದಾನೆ. ಅವನಿಗೆ ಬೇರೆ ಕಾವಲುಗಾರರೆಲ್ಲಾ ಮರತೇ ಹೋದರು, ಈ ಮೊದಲನೆಯವನೇ ಕಾನೂನಿನ ಹತ್ತಿರ ಹೋಗೋಕೆ ಇರೋ ಅಡ್ಡಿ ಅನ್ನೋ ಹಾಗೆ ಕಾಣತ್ತೆ. ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ, ದ್ವಾರಪಾಲಕನನ್ನ ಉದ್ದಕ್ಕೂ ಗಮನಿಸ್ತಾ ಅವನ ಮೇಲಂಗಿಯ ಕೊರಳಪಟ್ಟಿಲಿ ಹುಳಗಳು ಇರೋದು ಕಂಡುಹಿಡಕೊಳ್ತಾನೆ. ಕಾವಲಗಾರನ ಮನಸ್ಸು ಬದಲಾಯಿಸೋಕೆ ನೆರವಾಗಿ ಅಂತ ಅವುಗಳ ಹತ್ತಿರಾನೂ ಬೇಡ್ಕೋಳ್ತಾನೆ. ಕೊನೆಗೆ ಅವನ ಕಣ್ಣು ಮಂದ ಆಗ್ತಾ ಆಗ್ತಾ ಸುತ್ತಲೂ ಕತ್ತಲಾಗ್ತಾ ಇದೆಯಾ ಅಥವಾ ಅವನು ಕಣ್ಣು ಮೋಸ ಮಾಡ್ತಾ ಇದೆಯಾ ಅಂತಲೂ ಅವನಿಗೆ ಗೊತ್ತಾಗಲ್ಲ. ಆದರೂ ಕತ್ತಲಲ್ಲಿ ಕಾನೂನಿನ ಬಾಗಲಿಂದ ಮುಚ್ಚಿಹಾಕೋಕೆ ಆಗದಂತ ಬೆಳಕಿನ ಹೊಳೆ ಬರ್ತಿದ್ದುದ್ದು ಗೊತ್ತಾಗತ್ತೆ.

ಇನ್ನು ಹೆಚ್ಚು ದಿನ ಅವನು ಬದುಕಲ್ಲ. ಸಾಯೋಕೆ ಮುಂಚೆ, ಅಷ್ಟು ವರ್ಷದ ಅನುಭವ ಎಲ್ಲಾ ಅವನ ತಲೇಲಿ ಠಳಾಯಿಸಿ ದ್ವಾರಪಾಲಕನ್ನ ಯಾವತ್ತೂ ಕೇಳದೇ ಇರೋ ಒಂದು ಪ್ರಶ್ನೆಯ ರೂಪ ಪಡಿಯತ್ತೆ. ಅವನು ಕಾವಲಗಾರನನ್ನ ಕೂತ್ತಲ್ಲಿಂದಲೇ ಕರಿತಾನೆ. ಯಾಕಂದರೆ ಅವನಗೀಗ ತನ್ನ ಸೆಟಕೊಂಡ ಮೈನ ಎತ್ತೊಕೂ ಅಗ್ತಿಲ್ಲ. ದ್ವಾರಪಾಲಕ ಈಗ ಬಗ್ಗಿ ಅವನನ್ನ ನೋಡಬೇಕು. ಹಳ್ಳಿಯವನಿಗೆ ಅನುಕೂಲವಲ್ಲದಂತೆ ಅವರಿಬ್ಬರ ನಡುವಿನ ಎತ್ತರದ ಅಂತರ ತುಂಬಾ ಜಾಸ್ತಿ ಆಗಿದೆ. ‘ಈಗಲೂ ನಿನಗೆ ಅದೇನು ತಿಳಕೊಳೋ ಕಾತರ?’ ಅಂದು ದ್ವಾರಪಾಲಕ ‘ನಿನ್ನ ದಾಹ ಯಾವತ್ತಿಗೂ ಆರಲ್ಲ!’ ಅನ್ನುತ್ತಾನೆ. ಅದಕ್ಕೆ ಹಳ್ಳಿಯವನು ‘ಎಲ್ಲರೂ ಕಾನೂನನ್ನು ತಲುಪಬೇಕು ಅಂತ ಕಷ್ಟ ಪಟ್ಟೇ ಪಡ್ತಾರೆ, ಆದು ಹೇಗೆ ಇಷ್ಟು ವರ್ಷ ನನ್ನ ಬಿಟ್ಟು ಬೇರೆ ಯಾರೂ ಒಳಗೆ ಹೋಗಬೇಕು ಅಂತ ಕೇಳಿಲ್ಲ?’ ಅಂತ ಕೇಳ್ತಾನೆ. ದ್ವಾರಪಾಲಕನಿಗೆ ಆ ಹಳ್ಳಿಯವನ ಕೊನೆಗಾಲ ಬಂದಿದೆ ಅಂತ ಗೊತ್ತಾಗಿ, ಅವನ ಮಂದ ಕಿವಿಗೆ ಕೇಳಲಿ ಅಂತ ದನಿಯೇರಿಸಿ ‘ಬೇರೆ ಯಾರನ್ನೂ ಇಲ್ಲಿ ಬಿಡೋ ಹಾಗಿರಲಿಲ್ಲ ಯಾಕೆಂದರೆ ಈ ದ್ವಾರ ನಿನಗೆ ಮಾತ್ರ ಮೀಸಲಾಗಿತ್ತು. ಈಗ ಅದನ್ನು ನಾನು ಮುಚ್ತೀನಿ’ ಅಂತ ಕೂಗಿ ಹೇಳ್ತಾನೆ.