ಇದನ್ನು ಪುರಾಣದ ಕಾಂಟೆಕ್ಸ್ಟ್ ನಲ್ಲಿ ಓದಿದರೆ ಪುರಾಣವೇ. ಇಂದಿನ ಕಾಲಗತಿಗೆ ಅನ್ವಯಿಸಿಕೊಂಡರೆ ಅನ್ವಯವಾಗುತ್ತದೆ. ನನ್ನ ಈ ಅನ್ವಯ ಕಂಡು ಗೆಳೆಯ ಕೊಂಚ ಮಂಕಾದ. ಕೇವಲ ಕೊರೋನ ಎಂದು ತಿಳಿದಿದ್ದ ಅವನ ಕಣ್ಣುಗಳಲ್ಲಿ ಈಗ ಅದು ಪ್ರಚಂಡ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಬಗೆ ಗುರುತಿಸಿದೆ. ರಂಗ, ನಟನೆ, ಆಗಾಗ ಬ್ಯಾಕ್ ಸ್ಟೇಜ್ ಎಂದು ಓಡಾಡಿಕೊಂಡು ತುಂಬ ಚಟುವಟಿಕೆಯಿಂದಿದ್ದ ಅವನಿಗೆ ರಾವಣ ಅಡ್ಡಿಯಾಗಿರುವುದು ಸಂಕಟದ ಸಂಗತಿಯಾಗಿತ್ತು.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಕಳೆದ ವರ್ಷ ಕೊರೋನ ಜಗದ ರಂಗದ ಮೇಲೆ ತನ್ನ ತಾಂಡವ ನೃತ್ಯ ಆರಂಭಿಸಿದಾಗ ಅದಕ್ಕೆ ‘ಮೊದಲನೆ ಅಲೆ’ ಎಂಬ ಹಣೆಪಟ್ಟಿ ಹಚ್ಚಿರಲಿಲ್ಲ. ಆದರೆ ಅದು ಕೊಂಚ ಸುಧಾರಿಸಿಕೊಂಡು ಮತ್ತೆ ತಾಂಡವವನ್ನು ರುದ್ರವಾಗಿಸಲು ಆರಂಭಿಸಿದಾಗ ಅನಿವಾರ್ಯವಾಗಿ ‘ಎರಡನೆಯ ಅಲೆ’ ಎಂದು ಹೆಸರಿಸಲಾಯಿತು. ಸಾಲದ್ದಕ್ಕೆ ಮೂರನೆ ಅಲೆಯ ಬಗ್ಗೆ ಈಗ ಭಯವನ್ನ ಬಿತ್ತಲಾಗುತ್ತಿದೆ. ನಿತ್ಯ ಸಾವು ನೋವಿನ ಸಮಾಚಾರಗಳನ್ನು ಕೇಳಲು ಮನಸ್ಸಿಗೆ ತಾಟಸ್ಥ್ಯ ಬೇಕು. ಕೊಂಚ ಫಿಲಾಸಫಿಕಲ್ಲಾದರೆ ತಾಂಡವದ ಎದುರಿನ ಬದುಕು ಡಿವಿಜಿ ಅವರು ಹೇಳಿದಂತೆ ‘ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ..’ ಅನಿಸಲು ಶುರುವಾಗುತ್ತದೆ. ಇಂದು ಇದ್ದವರು ನಾಳೆ ಹೊತ್ತಿಗೆ ಧುತ್ತನೆ ಇಲ್ಲವಾಗುವ ಸುದ್ದಿ ನಿತ್ಯ ಕೇಳುವಂತಾದಾಗ ಮತ್ತು ಅಂಥವರ ಮನಸ್ಸು ನಾಟಕೀಯತೆಗೆ ಕೊಂಚ ಸ್ಪಂದಿಸುತ್ತದೆ ಅಂತಾದರೆ ಶೇಕ್ಸ್ಪಿಯರನ “All the world’s the stage, And all the men and women are mere players; They have their exits and entrances..’’ ಸಾಲುಗಳು ಮನಸ್ಸಿನಲ್ಲಿ ಸುಳಿ ತಿರುಗಲು ಆರಂಭವಾಗುತ್ತವೆ.
ಮೊದಲನೆ ಅಲೆ ಎದ್ದು ಅದು ಸಾಮಾನ್ಯರ ಬದುಕು ಮತ್ತು ಸರ್ಕಾರಗಳನ್ನ ಅಸ್ತವ್ಯಸ್ಥಗೊಳಿಸಿದಾಗ ಒಂದು ಸಂಘವೋ ಅಥವಾ ಸಂಸ್ಥೆ- ಕೊರೋನ ಉಂಟುಮಾಡಿರುವ ಆಘಾತ, ಸರ್ಕಾರದ ಅತಂತ್ರತೆ, ವಲಸಿಗರ ನೋವು, ಬೀದಿಗೆ ಬಿದ್ದ ಬದುಕಿನ ಬಗ್ಗೆಯೇ ನಾಟಕ ಬರೆಯಲು ನಾಟಕ ರಚನಾ ಸ್ಪರ್ಧೆಯೊಂದನ್ನು ಏರ್ಪಡಿಸಿತು. ಬರೆದದ್ದು ನಾಟಕವಾಗುತ್ತದೋ ಇಲ್ಲವೋ- ಒಟ್ಟಿನಲ್ಲಿ ನಾಟಕ ಬರೆಯುವ ತುಡಿತ ಇರಿಸಿಕೊಂಡಿರುವ ನಾನು ಕೊರೋನ ಬಗ್ಗೆ ನಾಟಕ ರಚನಾ ಸ್ಪರ್ಧೆಯ ಬಗ್ಗೆ ಕೇಳಿ ನಿರುತ್ಸಾಹಗೊಂಡು ಸುಮ್ಮನಾದೆ. ಅನಂತರದಲ್ಲಿ ಈ ವಿಚಾರ ನನ್ನಲ್ಲಿ ಮರೆವಿಗೂ ಸಂದಿತು.
ಆದರೆ ಭಾರತದಲ್ಲಿ ಎರಡನೆ ಅಲೆ ಜೋರು ಅಪ್ಪಳಿಸುತ್ತಿರುವ ಸಂದರ್ಭದಲ್ಲಿ ಬೇರೆ ರಂಗ ತಂಡದ ಗೆಳೆಯನೊಬ್ಬ ನನಗೆ ಕರೆಮಾಡಿ ಮೇಲೆ ತಿಳಿಸಿದ ಸ್ಪರ್ಧೆಗೆ ‘ಸರ್ ನೀವು ನಾಟಕ ಬರೀಲಿಲ್ವೆ..?’ ಎಂದು ಕೇಳಿದ. ‘ಇಲ್ಲಪ್ಪ’ ಅಂದೆ. ‘ಆ ಕಾಂಪಿಟೇಷನ್ ರಿಸಲ್ಟ್ ಬಂದಿದೆ. ನಿಮ್ಮ ಹೆಸರನ್ನ ಹುಡುಕಿದೆ. ಕಾಣಲಿಲ್ಲ. ಅದಕ್ಕೇ ಕೇಳಿದೆ’ ಅಂದ. ಜೊತೆಗೆ ಯಾರ್ಯಾರಿಗೆ ಯಾವ್ಯಾವ ಬಹುಮಾನ ಬಂದಿದೆ ಅಂತಲೂ ತಿಳಿಸಿದ. ಆ ಪಟ್ಟಿಯಲ್ಲಿ ಒಂದಿಬ್ಬರು ಬಿಟ್ಟರೆ ಉಳಿದವರು ನನಗೆ ಪರಿಚಯವಿದ್ದವರೇ ಇದ್ದರು. ಮತ್ತೆ ಅವನು ‘ನೀವ್ಯಾಕೆ ಸರ್ ಬರೀಲಿಲ್ಲ..?’ ಎಂದು ಕೇಳಿದ.
ಇಂಥ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ. ಬರಹಗಾರನಾದವನಿಗೆ ತನ್ನ ಕಣ್ಣೆದುರು ಸುಡುತ್ತಿರುವ ವಾಸ್ತವವನ್ನು ಚಿತ್ರಿಸುವುದು ಸುಲಭದ ಕೆಲಸ. ಜನರ ದೈನ್ಯ ಸ್ಥಿತಿ, ಸರ್ಕಾರದ ಅಪಸವ್ಯಗಳ ಬಗ್ಗೆ ವ್ಯಂಗ್ಯವಾಡುತ್ತ ತನ್ನ ಧೋರಣೆಗನುಸಾರ ನಾಟಕ ಬರೆದು ಮುಗಿಸಬಹುದು. ವರ್ತಮಾನದ ತಲ್ಲಣಗಳೇ ಅದರಲ್ಲಿ ತುಂಬಿರುತ್ತವೆಯಾದ್ದರಿಂದ ಜನಕ್ಕೆ ಅದು ಹತ್ತಿರವೂ ಆಗಬಲ್ಲದು. ಮತ್ತು ಅದು ಉತ್ತಮ ಕೃತಿಯೂ ಆಗಿಬಿಡಬಹುದು.
ಆದರೆ ಇದರಲ್ಲೊಂದು ಅಪಾಯವೂ ಇದೆ. ಕನ್ನಡಿ ಹಿಡಿದು ಕಾಣಿಸುವುದು ಚೆಂದದ ಕೆಲಸ ಹೌದು; ಆದರೆ ಕನ್ನಡಿಯೊಳಗಿನ ಬದುಕು ಸ್ಥಾಯಿ ಅಲ್ಲ. ಅದು ಕ್ರಮೇಣ ಬದಲಾಗುತ್ತದೆ. ಹಾಗಾದಾಗ ಹಳೆಯ ಚಿತ್ರ ಕನ್ನಡಿಯ ಹೊಸ ಚಿತ್ರದೊಂದಿಗೆ ಹೊಂದಿಕೊಳ್ಳುವುದು ಕಷ್ಟ. ಮ್ಯಾಚ್ ಆಗದಿದ್ದರೆ ನಾವು ಚಿತ್ರಿಸಿದ ಜಗತ್ತು ಕಳೆಗುಂದುತ್ತದೆ. ವಾಸ್ತವ ಅಂತನ್ನುವುದು ಆರಂಭಗೊಂಡು ಬೇಗ ಅಂತ್ಯವೂ ಕಂಡುಬಿಡುತ್ತದೆ. ಆದರೆ ಕ್ಲಾಸಿಕ್ ಬರವಣಿಗೆಯ ಬಗೆ ಬೇರೆ. ಅದು ಈ ಅಪಾಯದಿಂದ ತಪ್ಪಿಸಿಕೊಂಡಿರುತ್ತದೆ. ಯಾರು ತನ್ನ ಕಾಲದ ವಾಸ್ತವವನ್ನ ಎಲ್ಲ ಕಾಲದ ವಾಸ್ತವನ್ನಾಗಿಸುತ್ತಾನೆಯೋ ಅವನು ನಿಜವಾದ ಬರಹಗಾರ ಮತ್ತು ಅದು ನಿಜವಾದ ಬರವಣಿಗೆ.
ಇಷ್ಟನ್ನು ಗೆಳೆಯನಿಗೆ ಹೇಳಿದೆ. ನಾನು ಹೇಳಿದ್ದು ಸರಿ ಅನಿಸುತ್ತಿದ್ದರೂ ಅವನ ಆತ್ಮ ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿತ್ತು. ಯಾಕೆಂದರೆ ಅವನು ಆಗಲೇ ಕೊರೋನ ಕುರಿತ ಬಹುಮಾನ ವಿಜೇತ ನಾಟಕಗಳ ಸ್ಕ್ರಿಪ್ಟ್ ಗಳನ್ನ ತರಿಸಿಕೊಂಡು ತಿರುವಿ ಹಾಕಿ ಕೊಂಚ ಪ್ರಭಾವಿತನೂ ಆಗಿದ್ದ. ಇಂದಿನ ವಾಸ್ತವ ಕಾಲಕ್ರಮದಲ್ಲಿ ಹೇಗೆ ಫೇಡ್ ಆಗಲು ಆರಂಭಿಸುತ್ತದೆ ಎಂದು ನಾನು ಹೇಳಿದ್ದು ಅವನ ಮನಸ್ಸನ್ನ ಕಲಕಿ ಚಿಂತನೆಗೆ ಹಚ್ಚುತ್ತಿದೆ ಎನ್ನುವುದು ಅವನ ಮಾತು ಮತ್ತು ಮೌನ ಅರ್ಥಮಾಡಿಸುತ್ತಿದ್ದವು. ನನ್ನನ್ನ ಕೆದಕಿ ಕೊಂಚ ತಬ್ಬಿಬ್ಬು ಮಾಡುವ ಉಮೇದು ಅವನಲ್ಲಿ ಹುಟ್ಟಿ ‘ನೀವು ಹೇಳುವ ಅಂಥಾ ಕ್ಲಾಸಿಕ್ ನಾಟಕ ಯಾವುದು ಹೇಳ್ಬಿಡಿ ಸರ್ ನೋಡುವ..’ ಎಂದು ಸವಾಲು ಹಾಕಿದ.
ನಾನು ನಗುತ್ತ ‘ಕಣಗಾಲ್ ಪ್ರಭಾಕರ ಶಾಸ್ತ್ರಿಗಳು 1950ರ ದಶಕದಲ್ಲಿ ಬರೆದ ‘ಪ್ರಚಂಡ ರಾವಣ’ ನಾಟಕ’ ಅಂದೆ. ‘ಸರ್ ಜೋಕ್ ಮಾಡ್ತಿದ್ದೀರಾ..? ನೀವು ಯಾವುದಾದರೂ ಬ್ಯೂಟಿಫುಲ್ ಇಂಗ್ಲಿಷ್ ಡ್ರಾಮಾ ಹೆಸರು ಹೇಳ್ತೀರಾ ಅಂದುಕೊಂಡರೆ ಮೈಥಾಲಜಿ ಡ್ರಾಮ ಹೇಳ್ತಿದ್ದೀರಲ್ಲ ಸರ್..!’ ಎಂದ.
‘ಏನೋಪಾ… ಬರೀ ಮಿಥ್ ಅಂತ ಓದಿದರೆ ಅದು ಮಿಥ್ ಆಗೇ ಕಾಣುತ್ತದೆ. ಆದರೆ ನನಗೆ ಅದರಲ್ಲಿ ಇಂದಿನ ಮಿಡಿತಗಳಿವೆ ಅನಿಸ್ತು. ಮತ್ತು ನಾಳೆ ಇನ್ನೊಂದು ವಿಪತ್ತಿಗೂ ಇವು ಅನ್ವಯವಾಗ್ತವೆ ಅನಿಸ್ತು. ಕೊರೋನ ನನಗೆ ಪ್ರಚಂಡ ರಾವಣನಂತೇ ಭಾಸವಾಗ್ತಿದೆ…. ಫೋನಲ್ಲಿ ಕ್ಲಾಸ್ ಮಾಡೋಕೆ ನನಗೆ ಇಷ್ಟ ಇಲ್ಲ. ಬಿಡುವು ಮಾಡಿಕೊಂಡು ಬಾ… ಇವತ್ತಿಗೆ ‘ಪ್ರಚಂಡ ರಾವಣ’ ನಾಟಕ ಹೇಗೆ ಅನ್ವಯವಾಗುತ್ತೆ ಅಂತ ವಿವರಿಸ್ತೀನಿ’ ಅಂದೆ.
ಅವನ ಅಹಂ ನನ್ನ ಮಾತಿನಿಂದ ಕೊಂಚ ಪೆಟ್ಟು ತಿಂದಿತ್ತಾದ್ದರಿಂದ ಬಂದೇ ಬರುತ್ತಾನೆ ಎಂದು ನನಗೆ ಗೊತ್ತಿತ್ತು. ಬರಲಿ ಅಂತ ಮನಸ್ಸಿನಲ್ಲಿ ದಿಟ್ಟವಾಗಿ ಅಂದುಕೊಂಡರೆ ಅದು ಮತ್ತೆ ಅಹಂಕಾರವಾಗಿ ನನ್ನಲ್ಲಿ ಅರಳಿಕೊಳ್ಳುತ್ತದೆ ಅನಿಸಿ, ಅವನು ಬಂದಾಗ ವಿವರಣೆಗೆ ಹೇಗೆ ತೊಡಗಬೇಕು ಎಂದು ಯೋಚಿಸಲು ಆರಂಭಿಸಿದೆ. ಸಂಜೆ ಸೂರ್ಯ ಮುಳುಗಿದರೂ ಮನೆ ಒಳಗೆ ಧಗೆ. ಫ್ಯಾನ್ ತನ್ನ ತಲೆಗೆ ರೆಕ್ಕೆಗಳನ್ನ ಸಿಕ್ಕಿಸಿಕೊಂಡು ತಿರುತಿರುಗಿ ಬಿಸಿ ಗಾಳಿ ದಬ್ಬಲು ಆರಂಭಿಸಿತ್ತು. ನಾನು ಬಾಲ್ಕನಿಗೆ ಬಂದು ನಿರಾಳ ಕುರ್ಚಿಗೆ ಬೆನ್ನು ಒರಗಿಸಿ ಕೂತು ‘ಪ್ರಚಂಡ ರಾವಣ’ ಸ್ಕ್ರಿಪ್ಟ್ ಹಿಡಿದು ತಿರುವಲು ಆರಂಭಿಸಿದೆ. ಓದುತ್ತಾ ಓದುತ್ತಾ ಮೈಥಾಲಜಿ ಅಂದರೆ ಒಂದು ಕಾಲಘಟ್ಟದ ಹೆಸರುಗಳು, ಪೋಷಾಕು ಮತ್ತು ಭಾಷಾ ಶೈಲಿ ಆಧರಿಸಿ ನಿರ್ಧಾರಿತವಾಗುವಂಥದ್ದೇ ಎಂದು ಕೇಳಿಕೊಂಡೆ. ಅದನ್ನ ನಾವು ಒಂದು ಕಾಲದ ಗೂಟಕ್ಕೆ ಕಟ್ಟಿಹಾಕುವುದರಿಂದ ಅದು ಹಾಗೆ ಕಾಣಿಸುತ್ತಿದೆ ಅನಿಸಿತು. ಅಷ್ಟರಲ್ಲಿ ಗೆಳೆಯ ಬಂದ. ಜೊತೆಗೆ ಎರಡು ಪ್ಲೇಟಿನ ತುಂಬ ಹಲಸಿನ ತೊಳೆಗಳನ್ನು ತಂದು ಅಮ್ಮ ನಮ್ಮಿಬ್ಬರ ಮುಂದಿಟ್ಟರು. ನನಗೆ ಅಚ್ಚರಿಯಾಯಿತು. ‘ಹಣ್ಣಾಗಿಲ್ಲ ಹಣ್ಣಾಗಿಲ್ಲ ಅಂತಿದ್ರಿ. ನೋಡಿದ್ರೆ ಆಗಿರೋ ಹಾಗಿದೆ..’ ಅಂದೆ ಅಮ್ಮನಿಗೆ. ‘ಮೂರು ದಿನ ಬಿಸಿಲಿಗೆ ಇಟ್ಟರೂ ಉಸಿರು ಬಿಟ್ಟಿಲ್ಲ ಬಿಸಾಕ್ತೀನಿ ಅಂತಿದ್ರು ನಿಮ್ಮಪ್ಪ. ಮೊದಲು ಬಿಡಿಸಿ ನೋಡಿ ಅಂದೆ. ನೋಡಿದ್ರೆ ಹಣ್ಣಾಗಿದೆ.. ಎಲ್ಲಾ ಹಿಂಗೇ ಅವರದು..’ ಅಂತಂದು ಅಮ್ಮ ಒಳಹೋದರು.
ನಾನು ಹಲಸಿನ ತೊಳೆಗಳಿದ್ದ ತಟ್ಟೆಯನ್ನ ಗೆಳೆಯನ ಬಳಿಗೆ ಸರಿಸಿ ತಿನ್ನಲು ಸೂಚಿಸುತ್ತ ‘ಮಿಥ್ ಕೂಡ ನಮ್ಮನೆ ಹಲಸಿನ ಹಣ್ಣಿನ ಹಾಗೆ ಉಸಿರುಬಿಡದೆ ಸುಮ್ಮನಿದೆ ಅನ್ಸುತ್ತೆ. ನಾವು ಬಿಡಿಸಿ ನೋಡಬೇಕು- ಮುಖ್ಯವಾಗಿ ‘ಪ್ರಚಂಡ ರಾವಣ..’ ಅಂತಂದು ನಕ್ಕೆ. ಗೆಳೆಯ ಕೂಡ ನಗುತ್ತ ಹಣೆ ಘಟ್ಟಿಸಿಕೊಂಡ.
‘ನಾನೀಗ ಹಲಸಿನ ಹಣ್ಣು ಬಿಚ್ತೀನಿ… ನನ್ನ ಮೂಗಿಗೆ ಅದರ ಘಮ ಬಡಿದಿದೆ. ಹಣ್ಣೋ ಕಾಯೋ ಬಿಡಿಸಿದ ಮೇಲೆ ಹೇಳು’ ಅಂತಂದು ನಾನೂ ನಕ್ಕೆ.
‘ಪ್ರಚಂಡ ರಾವಣ’ ನಾಟಕದ ಸ್ಥೂಲ ಕಥೆ ಹೀಗಿದೆ: ರಾವಣ ಪ್ರಚಂಡ ರಾವಣನಾಗಿ ಮೆರೆಯಲು ಆರಂಭಿಸಿದ್ದಾನೆ. ಸ್ವತಃ ಬ್ರಹ್ಮ ರಾವಣನ ಅರಮನೆಯ ಪಂಚಾಂಗದ ಪುರೋಹಿತನಾಗಿದ್ದಾನೆ. ನವಗ್ರಹಗಳು ರಾವಣನ ಸಿಂಹಾಸನದ ಮೆಟ್ಟಿಲುಗಳಾಗಿ ಅವನಿಂದ ಹೆಗಲು ಮುರಿಸಿಕೊಳ್ಳುತ್ತಿದ್ದಾರೆ. ಅಷ್ಟ ದಿಕ್ಪಾಲಕರೂ ರಾವಣನ ಸೆರೆಯಾಗಿದ್ದಾರೆ. ರಾವಣ ಜಗ್ಜಜೇತನಾಗಿ ಮೆರೆಯುತ್ತಿದ್ದಾನೆ. ಬ್ರಹ್ಮ, ನವಗ್ರಹಗಳು ಮತ್ತು ಅಷ್ಟದಿಕ್ಪಾಲಕರು ಸೆರೆಯಾಗಿರುವುದು ರಾವಣನ ಪರಾಕ್ರಮಕ್ಕೆ ಹೆದರಿ ಹೌದಾದರೂ ಈ ಎಲ್ಲಕ್ಕೂ ಕಾರಣಕರ್ತನಾಗಿರುವವನು ಕಾಲಭೈರವ. ಅಂದರೆ ಭೈರವರೂಪದ ‘ಕಾಲ’ ಅನ್ನುವುದು ಮುಖ್ಯ. ರಾವಣನೂ ಇದಕ್ಕೆ ಅಧೀನ. ಆದರೆ ಇದರ ಅರಿವು ಅವನಿಗೆ ಇಲ್ಲ. ಇದೂ ಕಾಲದ ಮಹಿಮೆ ಮತ್ತು ಮಾಯೆ. ಇಂಥ ರಾವಣ ಸೀತೆಯನ್ನ ಅಪಹರಿಸಿ ತಂದು ಅಶೋಕವನದಲ್ಲಿ ಇರಿಸುತ್ತಾನೆ. ಅತ್ತ ರಾಮ ಲಕ್ಷ್ಮಣರು ಪರಿತಪಿಸುತ್ತಾರೆ. ರಾಮಚಂದ್ರ, ಸೀತೆಯ ಸಾನ್ನಿಧ್ಯಕ್ಕೆ ಹಂಬಲಿಸುತ್ತಾನೆ. ವಾನರರು ನೆರವಿಗೆ ಧಾವಿಸುತ್ತಾರೆ. ಸೀತೆಗೆ ತಾನು ರಾವಣನ ಮಗಳು ಎಂದು ಕಾಲನಿಂದ ತಿಳಿಯುತ್ತದೆ. ಆದರೂ ರಾವಣ ಹಠ ಬಿಡುವುದಿಲ್ಲ. ತಾನು ರಣರಂಗದಲ್ಲಿ ಮಡಿದರೂ ಸರಿ ಸೆಣೆಸುತ್ತೇನೆ ಅನ್ನುತ್ತಾನೆ. ಅದೇ ಹೊತ್ತು ರಾವಣ ಯುದ್ಧಕ್ಕೆ ಮೊದಲು ಲಂಕೆಯಲ್ಲಿ ಮಹಾಬ್ರಾಹ್ಮಣನಾಗಿ ಮತ್ತು ಪುರೋಹಿತನಾಗಿ ಖುದ್ದು ತಾನೇ ಹೋಗಿ ರಾಮನಿಗೆ ವಿಜಯದ ಕಂಕಣ ಕೂಡ ಕಟ್ಟುತ್ತಾನೆ. ಇಷ್ಟಾದ ಮೇಲೂ ತನ್ನ ಪ್ರಚಂಡ ರೂಪವನ್ನ ಮಂಡೋದರಿಗೆ ಕಾಣಿಸಿ ಭಯಹುಟ್ಟಿಸುತ್ತಾನೆ…
‘ಇದು ಕಥೆ. ಇದನ್ನ ನಮ್ಮ ಇಂದಿನ ಕಥೆಗೆ ಅನ್ವಯ ಮಾಡಿಕೊ. ಕೊರೋನವನ್ನ ರಾವಣ ಅಂದುಕೊ. ಸೀತೆ ಮಾಯಾಜಿಂಕೆಯಿಂದ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಲು ಒಪ್ಪದ ಕಾರಣ ರಾವಣನೆಂಬ ಕೊರೋನ ಬಳಿ ಬಂದ. ಅಪಹರಿಸಿಯೂ ಬಿಟ್ಟ. ಸೀತೆ ಈಗ ಐಸೊಲೇಷನ್ ನಲ್ಲಿದ್ದಾಳೆ. ತಳಮಳಿಸುವ ನಮ್ಮ ಮನಸ್ಸೇ ರಾಮ. ಆದರೆ ರಾಮನಿಗೂ ಈಗ ಸೀತೆ ಎಲ್ಲಿ ಐಸೊಲೇಟ್ ಆಗಿದ್ದಾಳೆ ಎಂದು ಗೊತ್ತಿಲ್ಲ. ತುಡಿವ ಮನಸ್ಸಿನ ಮರ್ಕಟವೇ ಹನುಮಂತ. ಆ ಮನಸ್ಸು ಸಮುದ್ರ ದಾಟುವಷ್ಟು ಶಕ್ತ. ಸೀತೆಯನ್ನ ದರ್ಶಿಸಿ ವಾಪಸ್ಸು ಬರಬಲ್ಲದು. ಕೊರೋನ ಎಂಬ ರಾವಣನಿಗೆ ಸೋಷಿಯಲ್ ಡಿಸ್ಟೆನ್ಸ್ ಬಗ್ಗೆ ಒಲವಿರದ ಸೀತೆ ಮತ್ತು ಆಕೆಯಂಥವರ ಬಗ್ಗೆ ಅತೀವ ಒಲವು. ಆಗಾಗ ಭೇಟಿಕೊಟ್ಟು ವಿಚಾರಿಸಿ ಪ್ರಾಣ ತಿನ್ನುತ್ತಾನೆ. ತುಡಿವ ಮತ್ತು ಧೀಶಕ್ತಿಯ ಪ್ರತೀಕವಾದ ರಾಮನಿಗೆ ಖುದ್ದು ರಾವಣನೇ ಕಂಕಣ ಕಟ್ಟಿ ಗೆಲ್ಲು ಎಂದು ಸವಾಲೊಡ್ಡಿ ಪ್ರಚಂಡವಾಗಿ ನಿಲ್ಲುತ್ತಾನೆ- ಅಂಡ್ ದಟ್ಸ್ ಪ್ರಚಂಡ ರಾವಣ…’ ಎಂದು ನಕ್ಕೆ ಹಲಸು ಮೆಲ್ಲುತ್ತ.
‘ಅನ್ವಯ ಹೇಗೆಬೇಕಾದರೂ ಮಾಡಬಹುದು. ಸ್ಕ್ರಿಪ್ಟ್ ಒಳಗಿನ ಕಂಟೆಂಟ್ ಅಪ್ಲೈ ಆಗಬೇಕಲ್ಲ’ ಅಂದ.
‘ಆಗುತ್ತೆ, ವಿವರಿಸ್ತೀನಿ. ಕೊರೋನ ಎಂಬ ರಾವಣ ತನ್ನ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅಟ್ಟಹಾಸ ಮೆರೀತಿದ್ದಾನೆ. ಹೀಗಾಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಕಾಲಕ್ಕೆ ನಮ್ಮ ಮೇಲೆ ಸಿಟ್ಟಿದೆ. ನಾವೇ ಸೃಷ್ಟಿಕರ್ತರು ಎಂಬಂತೆ ಆಡುತ್ತಿದ್ದವರ ಅಹಂಕಾರ ತಗ್ಗಿಸಲು ಅದು ಸನ್ನದ್ಧವಾಗಿ ನಿಂತಂತಿದೆ. ನಾಟಕದಲ್ಲಿ ಕಾಲಭೈರವ ಅಥವಾ ಕಾಲ ಹೇಳುವ ಮಾತು ಕೇಳಿಸಿಕೊ –
“ಈ ಮರ್ತ್ಯಲೋಕದಲ್ಲಿ ಮುಂದಾಗುವುದೆಲ್ಲ ಮಾನವರಿಗೆ ಮೊದಲೇ ಅರಿವಾಗುವಂತಿದ್ದರೆ ಜನಸಾಮಾನ್ಯರೆಲ್ಲ ಜನಾರ್ಧನರಾಗಿಬಿಡುತ್ತಿದ್ದರು. ಕಷ್ಟ ನಷ್ಟದ ಇಳೆ ಬಾಳು ಇಷ್ಟಾರ್ಥ ಸಿದ್ಧಿಯ ಅಷ್ಟೈಶ್ವರ್ಯದ ಅಮರಾವತಿ ಆಗಿಬಿಡುತ್ತಿತ್ತು. ಈ ಕಾಲನನ್ನು ಕಸದಂತೆ ತಳ್ಳಿಬಿಡುತ್ತಿತ್ತು. ಆದರೆ ಈಗ ಅನ್ಯತಾ ಶರಣಂ ನಾಸ್ತಿ. ಈ ಕಾಲನ ತಾಳಕ್ಕೆ ತಕ್ಕಂತೆ ಇಡೀ ಸೃಷ್ಟಿಯೇ ಸಿಡಿದೆದ್ದು ನರ್ತಿಸಬೇಕು….”
‘ಈ ಮಾತು ಪ್ರಭಾಕರ ಶಾಸ್ತ್ರಿಗಳು ಬರೆದ ಕಾಲಘಟ್ಟ 1950 ಕ್ಕೆ ಮಾತ್ರ ಅನ್ವಯವಾಗುತ್ತಾ ಹೇಳು..? ಈ ಮಾತಲ್ಲಿ ಇವತ್ತಿನ ಧ್ವನಿತ ಇಲ್ಲವೆ?’ ಎಂದು ಗೆಳೆಯನ ಮುಖ ನೋಡಿದೆ. ಹೌದು ಎಂಬಂತೆ ತಲೆ ಗುಮುಕು ಹಾಕಿದ.
ಕನ್ನಡಿ ಹಿಡಿದು ಕಾಣಿಸುವುದು ಚೆಂದದ ಕೆಲಸ ಹೌದು; ಆದರೆ ಕನ್ನಡಿಯೊಳಗಿನ ಬದುಕು ಸ್ಥಾಯಿ ಅಲ್ಲ. ಅದು ಕ್ರಮೇಣ ಬದಲಾಗುತ್ತದೆ. ಹಾಗಾದಾಗ ಹಳೆಯ ಚಿತ್ರ ಕನ್ನಡಿಯ ಹೊಸ ಚಿತ್ರದೊಂದಿಗೆ ಹೊಂದಿಕೊಳ್ಳುವುದು ಕಷ್ಟ.
‘ಕ್ರಿಮಿಟೋರಿಯಂ ಮುಂದೆ ‘ಹೌಸ್ ಫುಲ್’ ಬೋರ್ಡ್ ಹಾಕುತ್ತಿದ್ದಾರೆ. ಅಲ್ಲಿನ ಚಿತ್ರಣ ಕಂಡರೆ ಕರಳು ಹಿಂಡುವಂತೆ ಆಗುತ್ತದೆ. ನಾವೇ ನವಜಗತ್ತಿನ ಬ್ರಹ್ಮರು ಎಂಬ ಅಹಂನಲ್ಲಿದ್ದ ನಾವು ಈ ಹೊತ್ತು ಕಾಲನ ಕಾಲು ಹಿಡಿಯಲು ಮುಂದಾಗುತ್ತಿದ್ದೇವೆ. ಆದರೆ ಕಾಲನಿಗೆ ಕರುಣೆ ಇದೆ ಅನಿಸುತ್ತಿದೆಯೇ..? ನಾಟಕದಲ್ಲಿ ಬ್ರಹ್ಮ ಕಾಲಭೈರವನ ಕಾಲಿಗೆ ಬೀಳಲು ಹೋದಾಗ ಕಾಲಭೈರವ ಹೇಳುವ ಡೈಲಾಗ್-
“ಎಂಬತ್ಮೂರು ಕೋಟಿ ಜೀವರಾಶಿಗಳ ಹಣೆಯ ಮೇಲೆ ತೋಚಿದ್ದನ್ನು ಗೀಚುವ ಜಾಣ ಕರ್ತಾರ.. ಈಗ ಈ ಕಾಲನ ಕಾಲನ್ನು ಹಿಡಿಯುತ್ತೀಯ? ಬೇಡವಯ್ಯಾ ಬೇಡ. ಈ ನಿಡುಗಾಲ್ಗಳೇ ಒಡೆಯುವ ಸಿಡಿಲ್ಗಲ್ಲು. ಈ ನೀಳ್ಗೈಗಳೋ ಎಳೆ ಬಿಸಿಲ್ಕೋಲ್. ಈ ಒಡಲಂತೂ ಭಯಾನಕ ಬಿರುಗಾಳಿ. ಈ ಉರಿಗಣ್ಣು ಮರಗಿವಿಗಳೋ ಕಠಿಣ ಕರ್ಕಶ ಕರಾಳ ಘೋರ ನರಕಗಳ ಪ್ರತೀಕ. ಕರುಣೆಯ ಕರುಳಿಲ್ಲ. ದಯಾಹೃದಯವೆಂಬುದು ಇಲ್ಲವೇ ಇಲ್ಲ…”
ಕೇಳಿದೆ: ‘ಇದು 1950 ಕ್ಕೆ ಸೀಮಿತವಾಗಿವೆ ಅನಿಸ್ತಿವೆಯಾ ಡೈಲಾಗ್?’. ಗೆಳೆಯ ಗಂಭೀರನಾಗತೊಡಗಿದ್ದ. ಅವನಿಗೆ ನಾನು ವಿವರಿಸುವ ಮೊದಲು ಹೀಗೆ ಒಮ್ಮೆ ‘ಪ್ರಚಂಡ ರಾವಣ’ಸ್ಕ್ರಿಪ್ಟ್ ತೆಗೆದುಕೊಂಡು ಓದಲು ಆರಂಭಿಸಿದಾಗ ನನಗೆ ಅಚ್ಚರಿಯಾಗಿತ್ತು.
ಕಡೆಗೆ ಬ್ರಹ್ಮ ಕಾಲಭೈರವನಿಗೆ ಹೇಳುವ ಮಾತು- ‘ನಾನು ನನ್ನ ಮಕ್ಕಳು ನಿನ್ನಾಟದ ಕೀಲು ಗೊಂಬೆಗಳು…’
ಇಂಥ ಸಂಗತಿಗಳು ನಾಟಕದಲ್ಲಿ ಸಾಕಷ್ಟು ಇವೆ. ಸೀತೆ ರಾವಣನಿಗೆ ಹೀಗೆ ಕೇಳುತ್ತಾಳೆ: “ಇಂಥ ಪ್ರಚಂಡ ರಾವಣನಾದ ನಿನಗೆ ಪಾಪ ಪುಣ್ಯಗಳ ವಿವೇಚನೆ ಇಲ್ಲವೆ..?” ಅದಕ್ಕೆ ರಾವಣ ಉತ್ತರ: “ಪಾಪ ಪುಣ್ಯಗಳ ಪರಿಶೀಲನೆ ವಿಚಾರದಲ್ಲಿ ಮಾತ್ರ.. ಆಚಾರದಲ್ಲಿಲ್ಲ…”. ಇದು ಕೊರೋನ ನಮಗೆ ಹೇಳುತ್ತಿಲ್ಲ ಎಂದು ಸಾಧಿಸುವುದು ಹೇಗೆ?
ಸರ್ಕಾರ ನಮ್ಮನ್ನ ರಕ್ಷಿಸುತ್ತದೆ ಎಂದು ನಂಬಿಕೊಳ್ಳೋಣ ಅಂದುಕೊಂಡರೆ ಅದಕ್ಕೆ ತತ್ಸಂಬಂಧದ ಮಾತು ನಾಟಕದಲ್ಲಿ ಬರುತ್ತದೆ-
‘ಅಧಿಕಾರ ಆಡಳಿತ ರಾಜ್ಯಾಂಗ ಸೂತ್ರ
ಸ್ವಾರ್ಥ ವ್ಯರ್ಥ ಚಿತ್ರವಿಚಿತ್ರ
ಏನೀ ಕಾಲದ ವ್ಯವಹಾರ..
ಎಲ್ಲೆಲ್ಲೂ ತುಂಬಿಹುದು ಅಪಚಾರ..’
ನಾಟಕದಲ್ಲಿ ಏಕನೇತ್ರಾಸುರ ಹಾಡುವ ಹಾಡು ಇದು. ಇದನ್ನ ಮಿಥಾಲಜಿ ಎಂದು ಕರೆದು ಒಂದು ಕಾಲಕ್ಕೆ ಕಟ್ಟಿಕೊಂಡು ಕೂರುವುದು ಹೇಗೆ ಎಂದು ಯೋಚಿಸಿದ್ದೆ. ಆಸ್ಪತ್ರೆ, ಬೆಡ್ ಸ್ಕ್ಯಾಮ್ ಜೋರು ನಡೆಯುತ್ತ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ವಾಕರಿಕೆ ತರಿಸುತ್ತಿರುವ ಈ ಹೊತ್ತನ್ನು ನಾಟಕದ ಹಾಡು ನೆನಪಿಸಿತು.
ಇದನ್ನು ಗೆಳೆಯನಿಗೆ ಹೇಳಿದೆ. ಈ ಪರಿ ವ್ಯವಸ್ಥೆ ಇರೋದರಿಂದಲೇ ಕೊರೋನ ಎಂಬ ರಾವಣ ಕುಣೀತಿದ್ದಾನೆ. ನಾಟಕದ ಕಡೆಯಲ್ಲಿ ರಾವಣ ಹೇಳ್ತಾನೆ –
“ಬ್ರಹ್ಮಾಂಡದ ಭಾಂಡಗಳೆಲ್ಲ ಬರಸಿಡಿಲಿನಂತೆರಗಿ ಎನ್ನೊಡನೆ ಕಾದಲಿ
ಬ್ರಹ್ಮವೇ ತಾನಾದ ಮಹದಾದಿ ಶಕ್ತಿ ಕಾಲ್ಕೆರೆದು ಕರೆಯಲಿ
ಬ್ರಹ್ಮಾದಿ ಹರಿಹರರು ಒಂದಾಗಿ ಎನ್ನೆದುರು ಸೆಣೆಸಾಡಲಿ
ಅಂಜುವೆನೆ ಅಳುಕುವೆನೆ ಹಮ್ಮೀರ ದಶಕಂಠ ರಾವಣಾ….”
ಇದನ್ನು ಪುರಾಣದ ಕಾಂಟೆಕ್ಸ್ಟ್ ನಲ್ಲಿ ಓದಿದರೆ ಪುರಾಣವೇ. ಇಂದಿನ ಕಾಲಗತಿಗೆ ಅನ್ವಯಿಸಿಕೊಂಡರೆ ಅನ್ವಯವಾಗುತ್ತದೆ. ನನ್ನ ಈ ಅನ್ವಯ ಕಂಡು ಗೆಳೆಯ ಕೊಂಚ ಮಂಕಾದ. ಕೇವಲ ಕೊರೋನ ಎಂದು ತಿಳಿದಿದ್ದ ಅವನ ಕಣ್ಣುಗಳಲ್ಲಿ ಈಗ ಅದು ಪ್ರಚಂಡ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಬಗೆ ಗುರುತಿಸಿದೆ. ರಂಗ, ನಟನೆ, ಆಗಾಗ ಬ್ಯಾಕ್ ಸ್ಟೇಜ್ ಎಂದು ಓಡಾಡಿಕೊಂಡು ತುಂಬ ಚಟುವಟಿಕೆಯಿಂದಿದ್ದ ಅವನಿಗೆ ರಾವಣ ಅಡ್ಡಿಯಾಗಿರುವುದು ಸಂಕಟದ ಸಂಗತಿಯಾಗಿತ್ತು. ‘ಬೇರೆ ದೇಶಗಳಲ್ಲಿ ಈಗ ಪರಿಸ್ಥಿತಿ ಹೇಗೆ?’ ಎಂದು ಕೇಳಿದ.
‘ಐರ್ಲೆಂಡಿನ ಡಬ್ಲಿನ್ ನಲ್ಲಿ ಕಿಂಗ್ ಲಿಯರ್ ವ್ಯಾನ್ ನಲ್ಲಿ ಥಿಯೇಟರ್ ಟೂರ್ ಆರಂಭಿಸಿದ್ದಾನೆ.’ ಅಂದೆ.
ನಿಜ, ರಾವಣ ಅಲ್ಲೂ ಹೆಜ್ಜೆ ಹಾಕಿ ನಡುಗಿಸಿದ್ದಾನೆ. ಆದರೆ ಅಲ್ಲಿ ಈ ಹೊತ್ತು ರಂಗಚಟುವಟಿಕೆ ಅರಳಿಕೊಳ್ಳುತ್ತಿರುವ ಪರಿಯೇ ಒಂದು ಚೆಂದ. ಡಬ್ಲಿನಿನ ಎಲಿ ಪ್ಲೇಸ್ ನ ಕಾರ್ ಪಾರ್ಕ್ ಅಥವಾ ಲೋಡಿಂಗ್ ಬೇನಲ್ಲಿ Royal Hibernian Academy (RHA) ತನ್ನ ‘ ಕಿಂಗ್ ಲಿಯರ್ ಇನ್ ವ್ಯಾನ್’ ಪ್ರಯೋಗದಿಂದ ಸದ್ದು ಮಾಡಲು ಆರಂಭಿಸಿದೆ. ಮತ್ತು ಲಿಯರ್ ಪಾತ್ರ ನಿರ್ವಹಿಸುತ್ತಿರುವ ಆರ್ಥರ್ ರಿರ್ಡೋನ್ ಎಂಬ ನಟ ತುಂಬ ಉತ್ಸುಕರಾಗಿದ್ದಾರೆ. ಐರಿಷ್ ಟೈಂಸ್ ಕಾಂಟ್ರಿಬ್ಯೂಟರ್ ‘ಗೆಮ್ಮ ಟಿಪ್ಟನ್’ ಪ್ಯಾನ್ಡೆಮಿಕ್ ಸಮಯದಲ್ಲಿ ನಾಟಕವನ್ನ ವ್ಯಾನ್ ನಲ್ಲಿ ಮಾಡಿದರೆ ಹೇಗೆ ಎಂದು ಯೋಚಿಸಿದ್ದಾರೆ. ಬಸವಣ್ಣ ಹೇಳಿದ ಹಾಗೆ ಸ್ಥಾವರಕ್ಕೆ ಅಳಿವುಂಟು. ಆದರೆ ಜಂಗಮಕ್ಕೆ? ಬ್ಯಾಂಕ್ ಆಫ್ ಐರ್ಲೆಂಡ್, ಬ್ಯುಸಿನೆಸ್ ಟು ಆರ್ಟ್ ಫೆಸ್ಟಿವಲ್ ಹಾಗೂ ಬ್ಯಾಕ್ ವಾಟರ್ ಅಪೆರಾ ಫೆಸ್ಟಿವಲ್ ಸಹಾಯ ಹಸ್ತದಿಂದ ‘ಕಿಂಗ್ ಲಿಯರ್ ಇನ್ ವ್ಯಾನ್’ ಈ ವರ್ಷ ತನ್ನ ಅಭಿಯಾನ ಆರಂಭಿಸಿ ಶಾಲೆಗಳಲ್ಲಿ ಪ್ರಯೋಗಗಳನ್ನ ನಡೆಸುವ ಯೋಜನೆ ಹಾಕಿಕೊಂಡಿದೆ.
ರಂಗೋತ್ಸವವನ್ನ ವ್ಯಾನ್ ನಲ್ಲಿ ಮಾಡಬೇಕು ಅಂದುಕೊಂಡ ಗೆಮ್ಮ ಟಿಪ್ಟನ್, ಪ್ರೊಡಕ್ಷನ್ ಮ್ಯಾನೇಜರ್, ಆರೋಗ್ಯ ಮತ್ತು ಸುರಕ್ಷತಾ ತಜ್ಞರೊಬ್ಬರನ್ನ ತಮ್ಮ ಜೊತೆಗಿರಿಸಿಕೊಂಡು ಒಂದು ವ್ಯಾನ್ ಕೊಂಡುಕೊಳ್ಳುತ್ತಾರೆ. ನಂತರ ಮತ್ತೆರಡು ವ್ಯಾನ್ ಗಳನ್ನ ಬಾಡಿಗೆಗೆ ಪಡೆದುಕೊಳ್ಳುತ್ತಾರೆ. ಮತ್ತು ಅವುಗಳ ಒಳಗೆ ಹಿಡಿಸುವಂಥ ಸೆಟ್ ಗಳನ್ನ ಮಾಡಿಸುತ್ತಾರೆ. ಹತ್ತೇ ನಿಮಿಷದಲ್ಲಿ ಮಡಚಿ ಇಡಬಲ್ಲ ಸೆಟ್ಗಳು.
‘ಕೇರ್ ಹೋಮ್ ಗಳು ಹಾಗೂ ಡೈರೆಕ್ಟ್ ಪ್ರಾವಿಷನ್ ಸೆಂಟರ್ಗಳ ಕಡೆ ಯಾರಿಗೆ ಕಾಳಜಿ ಇದೆ? ವ್ಯಾನ್ ಯೋಚನೆ ಬರುತ್ತಿದ್ದಂತೆ ನನಗೆ ದೇಶದ ಹಲವು ಕಡೆ ಚದುರಿ ಹೋಗಿರುವ ಕೇರ್ ಹೋಮ್‌ಗಳ ಚಿತ್ರ ಕಣ್ಮುಂದೆ ಬಂತು. ನಮ್ಮ ಯೋಜನೆಗೆ ಇಲ್ಲಿ ಅವಕಾಶ ಇದೆ ಅನಿಸ್ತು. ಈ ಪ್ಯಾಂಡೆಮಿಕ್ ಸಂದರ್ಭದಲ್ಲಿ ಕಲೆ ಮತ್ತು ಸಂಗೀತದಿಂದ ವಂಚಿತರಾದವರ ಬಳಿ ವ್ಯಾನ್ ನಲ್ಲಿ ಹೋಗಿ ನಾಟಕ ಮಾಡುವುದು ಉತ್ತಮ ಅನಿಸಿತು. ಕೋವಿಡ್ ನಿಂದ ಆದ ಒಂದು ಒಳ್ಳೆಯ ಕೆಲಸ ಅಂದರೆ ನಾವು ಮರೆತುಹೋಗಿದ್ದ ಜಾಗಗಳ ಕಡೆಗೆ ಗಮನ ಹರಿಯಿತು’ ಅಂತಾರೆ ಟಿಪ್ಟನ್.
ಇದಕ್ಕೆ ಕಾರಣ ಮತ್ತು ಸ್ಫೂರ್ತಿ ಏನು? ಟಿಪ್ಟನ್ ಗೆ ಎಮಿಲಿ ಸೇಂಟ್ ಜಾನ್ ಮಂಡೇಲ್ ಅವರ ‘ ಸ್ಟೇಷನ್ ಇಲೆವೆನ್’ ಎನ್ನುವ ಕಾದಂಬರಿ ಸ್ಫೂರ್ತಿ ತಂದಿದೆಯಂತೆ. ಅಮೆರಿಕದಲ್ಲಿ ಭಯಾನಕ ಸೋಂಕಿನ ನಂತರ ಅಲ್ಲಿನ ಶೇಕ್ಸ್ ಪಿಯರ್ ಪ್ಲೇಯರ್ಸ್ (ನಟರು) ಹೇಗೆ ಟೂರ್ ಆರಂಭಿಸಿದರು ಎನ್ನುವ ವಸ್ತುವನ್ನು ಒಳಗೊಂಡ ಕಾದಂಬರಿಯಂತೆ ಅದು.
‘ಕಿಂಗ್ ಲಿಯರ್ ಇನ್ ವ್ಯಾನ್’ ನಾಟಕ ಮಾಡಿಸುತ್ತಿರುವ ನಿರ್ದೇಶಕ ಕಾನರ್ ಹಾನರಟಿ ವ್ಯಾನ್ ನಲ್ಲಿ ನಾಟಕದ ಸೆಟ್ ಗಳನ್ನ ಸುಲಭವಾಗಿ ಸಾಗಿಸಿಕೊಂಡು ನಾಟಕ ಮಾಡುತ್ತಿರುವುದು ಖುಷಿ ತಂದಿದೆ. ಜೊತೆಗೆ ನಾಟಕದಲ್ಲಿ ಮೂವರೇ ನಟರು. ಅವರೇ ನಾಟಕದ ಹಲವು ಪಾತ್ರಗಳನ್ನ ನಿರ್ವಹಣೆ ಮಾಡುತ್ತಾರೆ..
ಭಾರತದಲ್ಲಿ ಈ ಪ್ರಜ್ಞೆ ಮಾಯವಾದದ್ದರಿಂದಲೇ ರಾವಣ ತನ್ನ ಹೆಜ್ಜೆಗಳ ಧೀಂಕಿಟವನ್ನ ಹೆಚ್ಚುಮಾಡಿದ. ನಾಟಕ ಮಾಡಲು ಅದೇ ರಂಗಮಂದಿರ ಬೇಕು. ಶೇ. 50ರಷ್ಟು ಮಾತ್ರ ಮಂದಿರ ತುಂಬಿಸಬೇಕು ಎಂದು ನಿಬಂಧನೆ ಇದ್ದರೂ ಅದನ್ನ ಮರೆತು ಒಟ್ಟೊಟ್ಟಿಗೆ ಕೂರಿಸಲಾಯಿತು. ರೆಸ್ಟ್ ತೆಗೆದುಕೊಳ್ಳುತ್ತಿದ್ದ ರಾವಣನಿಗೆ ಬಲ ಬಂದದ್ದೇ ಆಗ.
ಐರ್ಲೆಂಡ್ ನಲ್ಲಿ ಹಾಗಾಗುತ್ತಿಲ್ಲ. ‘ಇದು ನಿಮ್ಮ ಗ್ರಾಂಡ್ ರಾಯಲ್ ಥಿಯೇಟರ್ ಕೆನಾಲ್ ಅಲ್ಲ. ಇದು ನಿಮ್ಮ ಭವ್ಯ ಫಾಯರ್ ಅಲ್ಲ’ ಎಂಬ ಅರಿವು ಮೂಡಿಸಲಾಗಿದೆ. ‘It’s the words that you rely on whether you’re in the van or a proscenium arch stage..’ ಎನ್ನುವ ಅರಿವು ನಟರಿಗೆ ಇದೆ. ಹಾಗಾಗಿ ಮಾತು ಇಲ್ಲಿ ಪ್ರಧಾನ.
ಹಾಗಾಗಿ ಕಿಂಗ್ ಲಿಯರ್ ನಾಟಕದಲ್ಲೂ ಪಾತ್ರಗಳ ನಡುವೆ ಸೋಷಿಯಲ್ ಡಿಸ್ಟನ್ಸ್ ಇರಿಸಿಕೊಂಡು ನಟಿಸುವ ನಿಬಂಧನೆ ವಿಧಿಸಿಕೊಂಡಿದ್ದಾರೆ. ಇದು ಕಡ್ಡಾಯ. ಹಾಗಾಗಿ ನಾಟಕದಲ್ಲಿ ಪತ್ರಗಳನ್ನ ಕೈಯಿಂದ ಕೈಗೆ ರವಾನಿಸುವ ದೃಶ್ಯವಿದ್ದರೂ ಹಾಗೆ ರವಾನಿಸುವ ಹಾಗಿಲ್ಲ. ಅಥವಾ ಆಲಂಗಿಸುವ, ಕಪ್ಪಾಳಕ್ಕೆ ಬಾರಿಸುವಂತೆ ಇಲ್ಲ. ಪಾತ್ರಗಳು ಕೆನ್ನೆಗೆ ಹೊಡೆಸಿಕೊಳ್ಳುವ ದೃಶ್ಯವಿದ್ದರೂ ಹೊಡೆಸಿಕೊಳ್ಳದಂತೆ ದೃಶ್ಯಗಳನ್ನ ಕಟ್ಟಿಕೊಂಡಿದ್ದಾರೆ.
ಇಷ್ಟಲ್ಲದೆ ಪ್ರದರ್ಶನ ನಡೆವ ವೇಳೆ ವ್ಯಾನ್ ಸುತ್ತ ನಿತ್ಯ ಐದು ಮೀಟರ್ ಪೆರಿಮೀಟರ್ ನಲ್ಲಿ ಕಣ್ಗಾವಲು ತಾವೇ ಹಾಕಿಕೊಳ್ಳುತ್ತಾರೆ. ನಟರ ತಂಡ ಸೌಂಡ್ ಇಂಜಿನಿಯರ್ ಹಾಗೂ ಕೋವಿಡ್ ಕಾಂಪ್ಲಯನ್ಸ್ ಆಫೀಸರ್ ಜೊತೆಯೇ ಪ್ರಯಾಣ ಬೆಳೆಸುವುದು.
ಇಷ್ಟಾದರೂ ಸಮಸ್ಯೆ ತಲೆದೋರಿದರೆ ಏನು ಮಾಡ್ತೀರಿ ಎಂದು ಕೇಳಿದರೆ ಅವರು ಶೇಕ್ಸ್ಪಿಯರ್ ಮಾತನ್ನು ಉಲ್ಲೇಖಿಸಿ ನಗುತ್ತಾರೆ-
“The weight of this sad time we must obey. Speak what we feel, not what we ought to say. The oldest hath borne most. We that are young shall never see so much nor live so long..”
ಶೇಕ್ಸ್ ಪಿಯರ್ ನಿಂದ ನಿತ್ಯನೂತನವಾದದ್ದನ್ನು ಸದಾ ಪಡೆಯುತ್ತಿರಬಹುದು ಎಂಬುದು ಅವರ ವಿಶ್ವಾಸ. “The weight of this sad time we must obey..” ಎಂಬುದನ್ನು ನಾವು ಕಲಿಯುವ ವಿನಯ ದಕ್ಕಿಸಿಕೊಳ್ಳುವವರೆಗೂ ಭಾರತದಲ್ಲಿ ರಾವಣ ಪ್ರಚಂಡನಾಗುತ್ತಲೇ ಇರುತ್ತಾನೆ. ಕಲಿತ ದೇಶದಲ್ಲಿ ಕಿಂಗ್ ಲಿಯರ್ ವ್ಯಾನ್ ನಲ್ಲಿ ತನ್ನ ತಿರುಗಾಟ ಮುಂದುವರೆಸುತ್ತಾನೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ‘ಬೆಳಕು ಸದ್ದುಗಳನ್ನು ಮೀರಿ’, ‘ ಸರಸ್ವತಿ ಅಕಾಡಮಿ’ (ಕಥಾಸಂಕಲನ) ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ ‘ಡ್ರಾಮಾಟ್ರಿಕ್ಸ್’ ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.
ಪ್ರಚಂಡ ರಾವಣನ ನಾಟಕವನ್ನ ಕೊರೊನಗೆ ಹೊಂದಿಸಿರುವುದು ಒಳ್ಳೆಯ ಕ್ರಿಯೇಟಿವಿಟಿ..ಜೊತೆಗೆ ವ್ಯಾನಲ್ಲಿ ನಾಟಕ ಮಾಡುತ್ತಿರುವುದರ ಬಗ್ಗೆ ನಮಗೆ ತಿಳಿಸಿದಕ್ಕೆ ಮಹೇಶ್ ಸರ್ ಗೆ ಧನ್ಯವಾದಗಳು. ನಮ್ಮ ರಂಗಭೂಮಿಯಲ್ಲೂ ಯಾಕೆ ಅದೇ ತರದ ಯೂನಿಕ್ ಐಡಿಯಾಗಳು ಕಾರ್ಯರೂಪಕ್ಕೆ ಬರಲ್ಲ ಅನ್ನೋದು ಪ್ರಶ್ನೆ.
ಅಂದಿನ ಪ್ರಚಂಡ ರಾವಣ ಹಾಗು ಇಂದಿನ ಪ್ರಚಂಡ ಕೊರೊನ ಗಳ ಸಮ್ಮಿಲನಗೈದು ತುಲನೆ ಮಾಡಿರುವುದು ನಿಜಕ್ಕು ಬರಹಗಾರರಾದ ಮಹೇಶ್ ಸರ್ ಅವರ ದೂರದೃಷ್ಟಿ ಚಿಂತನೆಯ ಬರಹಕ್ಕೆ ಮೆಚ್ಚಲೇಬೇಕು. ನಿಮ್ಮ ಬರಹಗಳನ್ನು ಇನ್ನು ಹೆಚ್ಚು ಹೆಚ್ಚು ಓದುವ ಸದವಕಾಶ ನಮ್ಮದಾಗಲಿ ಸರ್.
ತುಂಬಾ ವಿಚಾರಪೂರ್ಣ ಬರಹ .
ಮಹೇಶ್ ರವರ ವಿಷಯ ಮಂಡಿಸುವ ಶೈಲಿಯೇ ಆಕರ್ಷಕವಾದದ್ದು .
ಪುರಾಣ ವಸ್ತುವಿಗೆ ಆಧುನಿಕ ಪ್ರಜ್ಞೆಯಿಂದ ಸೂಕ್ಷ್ಮದರ್ಶಕದ ಚಿಂತನೆ ಇಲ್ಲದಿದ್ದರೆ ರಂಗಭೂಮಿಯಲ್ಲಿ ಪ್ರಯೋಗಶೀಲತೆ ಕಾಣಲು ಸಾಧ್ಯವೇ ಇಲ್ಲ .ರಂಗಭೂಮಿ ಇವತ್ತಿನವರೆಗೂ ದೀರ್ಘವಾಗಿ ತನ್ನ ಶಕ್ತಿಯನ್ನು ಕಾಯ್ದುಕೊಂಡಿರುವುದು ಈ ಗುಣಗಳಿಂದ !
ನಿಮ್ಮ ವ್ಯಾಖ್ಯಾನ ಸಮರ್ಥನೀಯವಾಗಿದೆ .
ಹಲಸಿನ ತೊಳೆಯ ಉಪಮೆ ಅದ್ಭುತ !
ರಾವಣನನ್ನು ,ಕೊರೋನಾವನ್ನು ,ಕಿಂಗ್ ಲಿಯರ್ನನ್ನು, ಕಾಲಭೈರವನನ್ನು ಒಂದೇ ನಾಟಕದ ಲೇಖನದಲ್ಲಿ ಕಟ್ಟಿಹಾಕಿ ಗೆಲ್ಲುವುದು ಸುಲಭಸಾಧ್ಯವಲ್ಲ .
ನಿಮ್ಮ ಚಿಂತನೆಗೆ ಅಡ್ಡಬಿದ್ದೆ? ನಮೋ ನಮಹ ?
-ಮಂಡ್ಯ ರಮೇಶ್ ನಟನ ರಂಗಶಾಲೆ ಮೈಸೂರು
ತುಂಬಾ ಚಂದವಾಗಿ ಕಣ್ಣಿಗೆ ಕಥೆಯನ್ನು ಕಟ್ಟುತ್ತಾ ನಿಮ್ಮಿಬ್ಬರ ಮಾತುಕಥೆಗಳನ್ನು ಈಗಿನ ಕಾಲಘಟ್ಟಕ್ಕೆ ಅನ್ವಯಸಿದ್ದೀರಿ ಅದು ಒಂದೊಂದು ಬಾರಿ ಸತ್ಯವೆನಿಸುತ್ತೆ ಆದರೆ ಇಂದಿನ ರಾಜಕೀಯವನ್ನು ಕೂಡ ನಾವು ಮರೆಯಬರದಲ್ಲವೇ ಸರ್ ಈ ಪ್ರಚಂಡ ರಾವಣನ ಕಥೆಯಲ್ಲಿ ನಮ್ಮನ್ನಾಳುವ ರಾಜಕೀಯವನ್ನು ಮರೆತಿದ್ದೀರಿ ಅನ್ಸುತ್ತೆ ಆದರೆ ಈ ಪ್ರಚಂಡ ರಾವಣ ಕಥೆ ಸದ್ಯಕ್ಕೆ ಸದ್ಯದ ಪರಿಸ್ಥಿತಿಗೆ ಅಳವಡಿಕೆ ಆಗುತ್ತೆ ಸರ್ ಒಳ್ಳೆ ಚರ್ಚೆ ಮತ್ತು ಒಳ್ಳೆ ಸಂದೇಶ ಸರ್
– ವಿಕಾಸ್ ವಿಷ್ಣು
ಹೌದಲ್ಲವೇ? ರಾವಣನ ಬಹುರೂಪಿ ಇರುವಿಕೆಯನ್ನು ಗಮನಿಸಬಹುದು. ಒಳ್ಳೆಯ ಬರಹ.
ಹೊಸ ರೀತಿಯ ರಂಗ ಪ್ರಯೋಗಗಳಿಗೆ ಪ್ರೋತ್ಸಾಹದ ಅಗತ್ಯ ಇದೆ.
ಹೌದಲ್ಲವೇ? ರಾವಣನ ಬಹುರೂಪಿ ಇರುವಿಕೆಯನ್ನು ಗಮನಿಸಬಹುದು. ಒಳ್ಳೆಯ ಬರಹ.
ಈ ರೀತಿಯ ಹೊಸ ರಂಗ ಪ್ರಯೋಗಗಳಿಗೆ ಪ್ರೋತ್ಸಾಹದ ಅಗತ್ಯ ಇದೆ.