ಈ ಪಾತ್ರಗಳು ನಾರ್ಮಲ್ ಅಲ್ಲವಾದ್ದರಿಂದ ಅವರು ಮಾಡುವ ಕ್ರಿಯೆ, ಹೇಳುವ ಮಾತು–ಸೂಚಿಸುವ ವಿಚಾರ ಎಲ್ಲವೂ ಅಸಾಧಾರಣವಾಗಿರುತ್ತವೆ. ಒಂದು ಚೌಕಟ್ಟಿನೊಳಗೆ ಪ್ರತಿಭಟಿಸಲು ಭಾರತಿ, ಸಂಸಾರ, ಅದರ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ನಿಭಾಯಿಸುತ್ತಲೇ ಈ ರೀತಿಯ ಪಾತ್ರಗಳಿಂದ ಚೌಕಟ್ಟಿನ ಸೀಮೋಲ್ಲಂಘನ ಮಾಡುತ್ತಾರೆ. ಒಂದು ಮಟ್ಟದಲ್ಲಿ ಈ ಪಾತ್ರಗಳು ಅತಿರೇಕದ ಪಾತ್ರಗಳು –ಹುಚ್ಚು ಪಾತ್ರಗಳೆನ್ನುವಂತೆ ತೆಗೆದುಹಾಕುವ ಸಾಧ್ಯತೆಯನ್ನು ನೀಡುತ್ತಲೇ, ಅವು ಗಹನ ಪಾತ್ರಗಳೆಂದೂ, ಇರುವ ಚೌಕಟ್ಟಿನಲ್ಲೇ ಇರುತ್ತಾ, ತಮ್ಮ ವಿಲಕ್ಷಣತೆಯಿಂದಾಗಿ ಸಿಡಿದೇಳುತ್ತಿರುವ ಪಾತ್ರಗಳಂತೆ ಕಾಣುತ್ತವೆ.
ಕೆಂಡಸಂಪಿಗೆಯಲ್ಲಿ ಪ್ರಕಟಗೊಂಡ ಭಾರತಿ ಹೆಗಡೆಯವರ ಅಂಕಣ ಬರಹಗಳ ಸಂಕಲನ “ಸೀತಾಳೆದಂಡೆಯ ಸದ್ದಿಲ್ಲದ ಕತೆಗಳು” ಪುಸ್ತಕಕ್ಕೆ ಎಂ.ಎಸ್ ಶ್ರೀರಾಮ್ ಮುನ್ನುಡಿ

 

‘ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ ಭಾರತಿ ಹೆಗಡೆಯವರ ಮೊದಲ ಪುಸ್ತಕವಲ್ಲದಿದ್ದರೂ ಮೊದಲ ಕಥಾ ಸಂಕಲನವಾಗಿದೆ. ಈ ಸಂಕಲನಕ್ಕೆ ಮುನ್ನುಡಿ ಬರೆದುಕೊಡಲು ಅವರು ಕೇಳಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈ ಸಂದರ್ಭದಿಂದಾಗಿ ಅವರ ಕಥೆಗಳನ್ನು ಓದಲು ಸಾಧ್ಯವಾಯಿತು. ಸಿನೇಮಾದ ಬಗೆಗಿನ ಅವರ ಬರವಣಿಗೆಯಲ್ಲಿ ಗಟ್ಟಿಯಾದ ಸ್ತ್ರೀಪರ-ಸ್ತ್ರೀವಾದಿ ನಿಲುವನ್ನು ತೆಗೆದು ನಿಂತಿರುವ ಭಾರತಿಯವರ ಕಥೆಗಳಲ್ಲೂ ಆ ಎಳೆ ಗಟ್ಟಿಯಾಗಿ ಕಾಣಬಹುದೆಂದು ನಾನಂದುಕೊಂಡಿದ್ದೆ. ಪೂರ್ವನಿರ್ಧಾರಿತ ನಂಬಿಕೆ, ನಿಲುವನ್ನು ವ್ಯಕ್ತಪಡಿಸಿದ ಲೇಖಕರ ಬಗ್ಗೆ ಯಾವುದೇ ಪೂರ್ವಗ್ರಹವಿರ ಕೂಡದು ಎನ್ನುವುದನ್ನು ಭಾರತಿ ತಮ್ಮ ಕಥೆಗಳ ಮೂಲಕ ನಿರೂಪಿಸಿದ್ದಾರೆ. ಹಾಗೆಂದು ಈ ಕಥೆಗಳಲ್ಲಿ ಗಟ್ಟಿ ಸ್ತ್ರೀ ಪಾತ್ರಗಳಿಲ್ಲವೆಂದಲ್ಲ. ಆದರೆ ಆ ಪಾತ್ರಗಳು ಪೂರ್ವ ನಿರ್ಧಾರಿತವಾಗಿರದೆ ಸಹಜವಾಗಿ ರೂಪುಗೊಂಡಿವೆ.

ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಭಾರತಿ ನನ್ನನ್ನೇ ಏಕೆ ಕೇಳಿದರು ಎನ್ನುವುದನ್ನು ನಾನು ಯೋಚಿಸುತ್ತಿದ್ದೇನೆ. ನನ್ನ ಕಥನದ ಜಾಯಮಾನಕ್ಕೂ ಅವರದ್ದಕ್ಕೂ ಬಹಳ ಭಿನ್ನತೆಯಿದೆ. ಸ್ತ್ರೀಕೇಂದ್ರಿತ-ಪುರುಷಪ್ರಧಾನ, ಗ್ರಾಮ-ನಗರ, ಗ್ರಾಮ್ಯ-ನಾಗರಿಕ, ಸಂಪ್ರದಾಯ-ಆಧುನಿಕ, ಸಹಜ ಹವ್ಯಕ ಕನ್ನಡ – ಇಂಗ್ಲಿಷ್ ಬೆರೆತ ಕನ್ನಡ – ಹೀಗೆ ಯಾವ ರೀತಿಯಿಂದ ನೋಡಿದರೂ ನಮ್ಮಿಬ್ಬರ ಆಲೋಚನಾ ವಿಧಾನ ಮತ್ತು ಬರವಣಿಗೆಯಲ್ಲಿ ಭಿನ್ನತೆಯಿದೆ. ಅವರು ಆಯ್ದುಕೊಳ್ಳುವ ವಸ್ತು, ಪಾತ್ರಗಳು, ಪರಿಸರ, ನಿರೂಪಣೆಯ ತಂತ್ರ ಎಲ್ಲವೂ ಭಿನ್ನವಾದದ್ದು. ಹೀಗಾಗಿ ಈ ಕಥೆಗಳಿಗೆ ಪ್ರವೇಶಿಕೆ ನೀಡಲು ವೈದೇಹಿಯವರಂತಹ ಹಿರಿಯ ಲೇಖಕರು ಸಮರ್ಪಕವಾಗಿರುತ್ತಿದ್ದರು ಅನ್ನಿಸುತ್ತಿರುವಾಗಲೇ ನನ್ನಿಂದ ಮುನ್ನುಡಿ ಬರೆಸುವುದರಲ್ಲಿ ಯಾವುದೋ ಅರ್ಥವಿರಬಹುದು…

(ಭಾರತಿ ಹೆಗಡೆ)

ಒಂದು ಭಿನ್ನ ದೃಷ್ಟಿಕೋನದಿಂದ ಈ ಕಥೆಗಳು ಹೇಗೆ ಕಾಣಬಹುದೆನ್ನುವ ಕುತೂಹಲ ಭಾರತಿಯವರಿಗೆ ಇದ್ದಿರಬಹುದು. ಅಥವಾ ಅವರ ಕಥೆಗಳನ್ನು ನನ್ನಂತಹವರು ಹೇಗೆ ಅಪಾರ್ಥೈಸಬಹುದೆನ್ನುವುದನ್ನು ನೋಡುವ ದುಷ್ಟ ಕುತೂಹಲವೂ ಭಾರತಿಯವರಿಗೆ ಇದ್ದಿರಬಹುದು. ಏನೇ ಇರಲಿ ಈಗ ಈ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ.

ಭಾರತಿಯವರ ಕಥೆಗಳಲ್ಲಿನ ಅನೇಕ ಪಾತ್ರಗಳು ಯಾವುದೋ ರೀತಿಯ ಬಿಡುಗಡೆಯನ್ನು ಪಡೆಯಲು ಪ್ರಯತ್ನಿಸುತ್ತಿವೆ. ಆ ಬಿಡುಗಡೆಯು ಒಂದು ಚೌಕಟ್ಟಿನೊಳಗೇ ಇರುವ ಕಟ್ಟುಪಾಡುಗಳನ್ನು ಧಿಕ್ಕರಿಸುವ, ಚೌಕಟ್ಟನ್ನು ಮೀರದೆಯೇ ಪ್ರತಿಭಟಿಸುವ, ಅನಂತಮೂರ್ತಿಯವರು ಹೇಳುತ್ತಿದ್ದ ಕ್ರಿಟಿಕಲ್ ಇನ್ಸೈಡರ್ ರೀತಿ ನಿರೂಪಣೆಗೆ ಒಳಗಾಗಿವೆ. ಒಂದು ರೀತಿಯಿಂದ ಸಂಪ್ರದಾಯವನ್ನು ಪ್ರಶ್ನಿಸುವ ಮಟ್ಟಕ್ಕೆ ಯಾವುದೇ ಕಥೆಗಳು ಏರುವುದಿಲ್ಲ. ಬದಲಿಗೆ ಆ ಸಂಪ್ರದಾಯಗಳು ಆಯಾ ಪಾತ್ರಗಳಿಗೆ ಸರಿಯಾಗಿ ವರ್ತಿಸದಿದ್ದಾಗ ಆಗುವ ಘರ್ಷಣೆಯನ್ನೂ, ಆ ಘರ್ಷಣೆಯನ್ನು ಆ ಪಾತ್ರಗಳು ನಿಭಾಯಿಸುವ ರೀತಿಯನ್ನು ಭಾರತಿ ಸಶಕ್ತವಾಗಿ ಗ್ರಹಿಸಿ ಬರೆಯುತ್ತಾರೆ.

ಯಥಾಸ್ಥಿತಿವಾದವನ್ನು ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನಲ್ಲೂ, ಬರವಣಿಗೆಯಲ್ಲೂ ಪ್ರಶ್ನಿಸುತ್ತಲೇ ಬಂದಿದ್ದೇವೆ. ದಲಿತ-ಬಂಡಾಯ ಸೆಲೆಯ ಈ ಬೆಳವಣಿಗೆಯಲ್ಲಿ ಯಥಾಸ್ಥಿತಿ ವಾದವನ್ನು ಕ್ರಾಂತಿಕಾರಿ ಕಾರ್ಯಗಳ ಮೂಲಕ, ಸಾಂಪ್ರದಾಯಿಕ ಪದ್ಧತಿಗಳನ್ನು ಪ್ರಶ್ನಿಸುವ ಮೂಲಕ ಅನುಸಂಧಾನ ಮಾಡಿದರೆ, ನವ್ಯರು ಅದಕ್ಕೆ ಅಂತರಂಗದಲ್ಲೇ– ಕಾಮ ಮತ್ತು ವ್ಯಕ್ತಿಗತ ಸಂಬಂಧಗಳ ಮೂಲಕ ಅದಕ್ಕೊಂದು ಅಭಿವ್ಯಕ್ತಿಯನ್ನು ಕಂಡುಕೊಂಡರು. ಆದರೆ ಬಹಿರಂಗವಾಗಿ ಯಥಾಸ್ಥಿತಿ ವಾದವನ್ನು ಪ್ರಶ್ನಿಸದೆಯೇ, ಅದರಲ್ಲಿದ್ದೇ ಅದನ್ನು ಧಿಕ್ಕರಿಸುವಂತೆ ಕಾಣುವ ಹಾಗೆ ಬರೆದವರಲ್ಲಿ ಮುಖ್ಯರಾಗಿ ವೈದೇಹಿ ಉಳಿಯುತ್ತಾರೆ. ಭಾರತಿ ಆ ಪರಂಪರೆಗೆ ಸೇರುವ ಲೇಖಕರು.

ಭಾರತಿಯವರ ಬರವಣಿಗೆಯ ಮುಖ್ಯ ಲಕ್ಷಣ ಅವರ ನಿರೂಪಣಾ ಶೈಲಿಯ ಏಕತಾನತೆ. ಇಲ್ಲಿ ಏಕತಾನತೆ ಎನ್ನುವುದನ್ನು ಒಂದು ಸಕಾರಾತ್ಮಕ ನೆಲೆಯಲ್ಲಿ ಬಳಸುತ್ತಿದ್ದೇನೆ. ಆಕೆಯ ನಿರೂಪಣೆ ಹೊರಗಿದ್ದು ಎಲ್ಲವನ್ನೂ ಕಾಣುವ–ಅದಕ್ಕೊಂದು ಟಿಪ್ಪಣಿಯನ್ನು ಕೊಡುವ ರೀತಿಯದ್ದು. ಹೀಗಾಗಿಯೇ, ಎಲ್ಲ ಪಾತ್ರಗಳೂ ಒಂದೇ ರೀತಿ ಮಾತಾಡುತ್ತವೆ. ಎಲ್ಲ ಕಥೆಗಳ ನಿರೂಪಣಾ ಶೈಲಿಯೂ ನೇರವಾಗಿ ಯಾವುದೇ ಕಾಲ ಪಲ್ಲಟವಿಲ್ಲದೇ ತಂತ್ರಗಾರಿಕೆಯಲ್ಲಿಲ್ಲದೇ ಇವೆ. ಅವರ ಎಲ್ಲ ಕಥೆಗಳೂ ಒಂದು ಪುಟ್ಟ ಹವ್ಯಕ ಸಮಾಜದೊಳಗಣ ಗಿರಕಿ ಹೊಡೆಯುತ್ತಿರುತ್ತವೆ. ಆಕೆ ಈ ಚೌಕಟ್ಟನ್ನು ಮೀರಿ ಕಥೆಗಳನ್ನು ಈ ಸಂಕಲನದಲ್ಲಿ ಬರೆದಿಲ್ಲವಾದರೂ ಆ ಒಂದು ಚೌಕಟ್ಟಿನಲ್ಲಿಯೇ ನಿಜಕ್ಕೂ ಎಷ್ಟೊಂದು ವಿಭಿನ್ನ ಅನುಭವಗಳಿದ್ದಾವೆ ಎನ್ನುವುದನ್ನು ಕಂಡು ನಾನು ಚಕಿತನಾಗಿದ್ದೇನೆ.

ಭಾರತಿಯವರ ಕಥೆಗಳಲ್ಲಿನ ಅನೇಕ ಪಾತ್ರಗಳು ಯಾವುದೋ ರೀತಿಯ ಬಿಡುಗಡೆಯನ್ನು ಪಡೆಯಲು ಪ್ರಯತ್ನಿಸುತ್ತಿವೆ. ಆ ಬಿಡುಗಡೆಯು ಒಂದು ಚೌಕಟ್ಟಿನೊಳಗೇ ಇರುವ ಕಟ್ಟುಪಾಡುಗಳನ್ನು ಧಿಕ್ಕರಿಸುವ, ಚೌಕಟ್ಟನ್ನು ಮೀರದೆಯೇ ಪ್ರತಿಭಟಿಸುವ, ಅನಂತಮೂರ್ತಿಯವರು ಹೇಳುತ್ತಿದ್ದ ಕ್ರಿಟಿಕಲ್ ಇನ್ಸೈಡರ್ ರೀತಿ ನಿರೂಪಣೆಗೆ ಒಳಗಾಗಿವೆ.

ಒಂದು ಚೌಕಟ್ಟಿನಲ್ಲೇ ಉಳಿದಂತಿದ್ದು ಸಿಡಿದೇಳುವುದು ಸುಲಭದ–ಸಹಜವರ್ತನೆಯಲ್ಲ. ಆದರೆ ಆ ಚೌಕಟ್ಟಿನಲ್ಲಿದ್ದು ಒಂದು ಸಾಂಪ್ರದಾಯಿಕತೆಯೊಳಗೇ ಸಿಡಿದೇಳುವುದನ್ನು ಭಾರತಿಯವರು ಸಹಜವಾಗಿ–ಯಾವುದೇ ಭಾವಾತಿರೇಕವಿಲ್ಲದೇ ನಿರೂಪಿಸಬಲ್ಲರು. ಭಾವಾತಿರೇಕವಿಲ್ಲದಾಗ ಕಥೆಗಳು ಬೌದ್ಧಿಕವಾಗುವ–ಒಂದು ಸರಣಿ ಟಿಪ್ಪಣಿಯಾಗುವ ಅಪಾಯವಿದೆ. ಹೀಗೆ ಬೌದ್ಧಿಕವಾಗಿಯೂ ಕಾಣದಂತೆ, ಭಾವಾತಿರೇಕವೂ ಇಲ್ಲದಂತೆ, ಆದರೆ ವ್ಯವಸ್ಥೆಯ ವಿರುದ್ಧ ತಮ್ಮದೇ ರೀತಿ ಸಿಡಿಯುವ ಪಾತ್ರಗಳನ್ನು ಭಾರತಿ ಸಶಕ್ತವಾಗಿ ನಿಭಾಯಿಸಿದ್ದಾರೆ. ಇದೇ ಅವರ ಕಥನದ ಜಾಯಮಾನದ ಪ್ರಮುಖವಾದ ಗುಣ.

ಭಾರತಿಯವರ ಹಲವು ಕಥೆಗಳಲ್ಲಿ ಮುಖ್ಯ ಪಾತ್ರಕ್ಕೆ ಯಾವುದೋಒಂದು ವಿಲಕ್ಷಣತೆಯ ಗುಣವಿರುತ್ತದೆ. ಒಂದು ರೀತಿಯಿಂದ ರೋಗಪೀಡಿತ ಸಮಾಜವನ್ನು ಸಂಕೇತಿಸಲು ಅವರು ಈ ರೀತಿಯ ಪಾತ್ರಗಳನ್ನು ಸೃಷ್ಟಿಸುತ್ತಾರೋ ಏನೋ.

ಕೊಂಕಣಿ ಚೌಡಿ, ಜಲದೇವತೆ ಕಲಾವತಕ್ಕ, ಜಯಮಾಲಿನಿ ಹುಚ್ಚಿನ ಹಾವು ಗಣಪ, ಬೀಡಿ ಸುಬ್ಬಮ್ಮ, ದಿಗ್ಭ್ರಮೆ ವಂಕಟರಮಣ–ಹೀಗೆ ಹಲವು ಪಾತ್ರಗಳು ತಮ್ಮದೇ ಕೆಲ ಐಬುಗಳೊಂದಿಗೆ ಕಥೆಗಳಲ್ಲಿ ಬಂದು ಹೋಗುತ್ತವೆ. ಇಂಥ ಪಾತ್ರಗಳಿಂದ ಅಸಾಧಾರಣವಾದದನ್ನು ಭಾರತಿ ಮಾಡಿಸುತ್ತಾರೆ. ಈ ಪಾತ್ರಗಳು ನಾರ್ಮಲ್ ಅಲ್ಲವಾದ್ದರಿಂದ ಅವರು ಮಾಡುವ ಕ್ರಿಯೆ, ಹೇಳುವ ಮಾತು–ಸೂಚಿಸುವ ವಿಚಾರ ಎಲ್ಲವೂ ಅಸಾಧಾರಣವಾಗಿರುತ್ತವೆ. ಒಂದು ಚೌಕಟ್ಟಿನೊಳಗೆ ಪ್ರತಿಭಟಿಸಲು ಭಾರತಿ, ಸಂಸಾರ, ಅದರ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ನಿಭಾಯಿಸುತ್ತಲೇ ಈ ರೀತಿಯ ಪಾತ್ರಗಳಿಂದ ಚೌಕಟ್ಟಿನ ಸೀಮೋಲ್ಲಂಘನ ಮಾಡುತ್ತಾರೆ. ಒಂದು ಮಟ್ಟದಲ್ಲಿ ಈ ಪಾತ್ರಗಳು ಅತಿರೇಕದ ಪಾತ್ರಗಳು –ಹುಚ್ಚು ಪಾತ್ರಗಳೆನ್ನುವಂತೆ ತೆಗೆದುಹಾಕುವ ಸಾಧ್ಯತೆಯನ್ನು ನೀಡುತ್ತಲೇ, ಅವು ಗಹನ ಪಾತ್ರಗಳೆಂದೂ, ಇರುವ ಚೌಕಟ್ಟಿನಲ್ಲೇ ಇರುತ್ತಾ, ತಮ್ಮ ವಿಲಕ್ಷಣತೆಯಿಂದಾಗಿ ಸಿಡಿದೇಳುತ್ತಿರುವ ಪಾತ್ರಗಳಂತೆ ಕಾಣುತ್ತವೆ. ಹೀಗಾಗಿ ಈ ತಂತ್ರದಿಂದ ಒಳಗೇ ಇರುವುದಕ್ಕೆ ಒಂದು ಸಮಜಾಯಿಷಿಯೂ, ಹಾಗೂ ಸಿಡಿದೇಳುವುದಕ್ಕೆ ಒಂದು ಸಂದರ್ಭವನ್ನೂ ಒದಗಿಸಿಕೊಟ್ಟಂತಾಗುತ್ತದೆ.

ಹಾಗೆ ವಿಲಕ್ಷಣವಾಗಿರುವ ಪಾತ್ರಗಳನ್ನು ಸೃಷ್ಟಿಸಿ ಅವುಗಳನ್ನು ಕೋಡಂಗಿಯಾಗಿಸಬಹುದು. ಆದರೆ ಭಾರತಿಯವರ ಕಥನದ ಸಂಯಮದಿಂದಾಗಿ ಆ ಪಾತ್ರಗಳು ಬಹಳ ಗಟ್ಟಿಯಾಗಿ ತಮ್ಮದೇ ನಿಲುವನ್ನು ತೆಗೆದು–ಸಮಾಜದ ಕಟ್ಟುಪಾಡುಗಳಿಗೆ ಒಗ್ಗದೆ–ಜೀವನವನ್ನು ತಮ್ಮದೇ ನಿಯಮಾನುಸಾರ ಮುಂದುವರೆಸುವ ಗಟ್ಟಿಪಾತ್ರಗಳಾಗಿವೆ. ಆ ಪಾತ್ರಗಳು ವಿಲಕ್ಷಣವಾಗಿರುವುದರಿಂದ, ಹಾಗೆ ವರ್ತಿಸಲು ಒಂದು ಬಲವಾದ ತಾರ್ಕಿಕ ಹಿನ್ನೆಲೆಯನ್ನು ಸೃಷ್ಟಿಸುವ ಅವಶ್ಯಕತೆಯಿಲ್ಲ. ಈ ಸುಲಭ ಮಾರ್ಗವನ್ನು ಭಾರತಿ ಸಹಜವಾಗಿ ದುಡಿಸಿಕೊಳ್ಳುತ್ತಾರೆ. ಆದರೆ ಈ ತಂತ್ರ ಅವರ ಕಥನದಲ್ಲಿ ಮರುಕಳಿಸುತ್ತಾ ಹೋದರೆ ಅದು ಒಂದು ದೌರ್ಬಲ್ಯವಾಗಬಹುದಾದ ಅಪಾಯವನ್ನು ಭಾರತಿ ಮನಗಾಣಬೇಕಾಗಿದೆ. ಈ ವಿಲಕ್ಷಣ ಪಾತ್ರಗಳಲ್ಲಿ ಹೆಚ್ಚಿನ ಪಾತ್ರಗಳು ಸ್ತ್ರೀ ಪಾತ್ರಗಳಾದರೂ, ಇಲ್ಲಿ ಮಹಿಳಾ ಸಶಕ್ತೀಕರಣದ ಚೌಕಟ್ಟನ್ನು ಬಳಸದೆಯೇ ಸಹಜವಾಗಿ ಪುರುಷರೂ, ಸ್ತ್ರೀಯರೂ ತಮ್ಮ ಸ್ಥಾನಗಳನ್ನು ಕಾಪಾಡುವ, ಅದಕ್ಕೆ ಬೇಕಾದ ಪ್ರತಿಭಟನೆಯನ್ನು ಒಡ್ಡುವ ಕ್ರಿಯೆಯನ್ನು ನಾವು ಕಾಣುತ್ತೇವೆ.

ಒಂದು ರೀತಿಯಿಂದ ವೈದೇಹಿಯವರ ಪರಂಪರೆಯಲ್ಲಿ ಭಾರತಿಯವರು ತಮ್ಮ ಕಥಾಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎನ್ನಿಸುತ್ತಿರುವಾಗಲೇ ಆ ರೀತಿಯಾಗಿ ಅವರನ್ನೊಂದು ಪೆಟ್ಟಿಗೆಯಲ್ಲಿ ಕೂಡ್ರಿಸುವುದು ಸರಿಯಲ್ಲವೆಂದೂ ಅನ್ನಿಸುತ್ತದೆ. ಒಂದು ರೀತಿಯಿಂದ ನೋಡಿದರೆ, ಸಮಾಜದ ಕಟ್ಟಲೆಗಳಿಂದ ಮುಕ್ತಿ ಪಡೆದ ಭಾರತಿಯವರ ಅನೇಕ ಪಾತ್ರಗಳು ಕಟ್ಟುಪಾಡಿನ ಸಂಬಂಧಗಳನ್ನು ಮೀರಿ ನಿಲ್ಲುತ್ತವೆ. ಇದರಲ್ಲಿ ದೈಹಿಕ ಸಂಬಂಧವೂ ಒಳಗೊಂಡಿದೆ. ಹಾದರವೂ, ಅನೈತಿಕ ಎನ್ನುವಂತಹ ಸಂಬಂಧದ ಸಂದರ್ಭಗಳೂ ಸಹಜವಾಗಿಯೇಇದೆ. ಮನುಷ್ಯ ವ್ಯಾಪಾರದಲ್ಲಿ ಆಗುವಷ್ಟೇ ಸಹಜವಾಗಿ ಇದು ಅವರ ಕಥಾಲೋಕದಲ್ಲೂ ಘಟಿಸುತ್ತದೆ.

ಇದನ್ನು ಕಂಡಾಗ ತಟ್ಟನೆ ನೆನಪಾಗುವುದು ಚಂದ್ರಶೇಖರ ಕಂಬಾರರು. ಕಂಬಾರರ ಕಥೆ ನಾಟಕಗಳಲ್ಲಿರುವ ಗ್ರಾಮ್ಯದ ಸೊಗಡು, ಅರ್ಬೇನ್ ಅಥವಾ ಶಿಷ್ಟ ಎನ್ನಿಸುವ ಸೋಗಲಾಡಿತನಕ್ಕೆ ವಿರುದ್ಧವಾದದ್ದು. ಹೌದೋ ಅಲ್ಲವೋ ಎನ್ನುವ ಹಾಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನಿರೂಪಿಸುವ ಸಂಬಂಧಗಳಿಗೆ ವಿರುದ್ಧವಾಗಿ ನಡೆದಿರಬಹುದಾದದ್ದನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುವ ಸಹಜ ಪ್ರಾಮಾಣಿಕ ಗ್ರಾಮ್ಯವು ಭಾರತಿಯವರ ಕಥೆಗಳಲ್ಲೂ ಕಾಣಿಸುತ್ತದೆ.

ಯಾವುದೇ ಒಂದು ಗಟ್ಟಿ ಬುನಾದಿಯಿಲ್ಲದೇ, ಅದರ ಹಿಂದಿನ ತಲ್ಲಣಗಳನ್ನು ನಿಭಾಯಿಸದೇ, ದ್ವಂದ್ವ ಮತ್ತು ಪಾಪಭಾವನೆಯಿಲ್ಲದ ಅನೈತಿಕ ಸಂಬಂಧಗಳು, ಅಸಹಜ ಸಾವುಗಳು (ಆತ್ಮಹತ್ಯೆ, ಕೊಲೆ) ಈ ಕಥೆಗಳಲ್ಲಿ ನಮಗೆ ಕಾಣಸಿಗುತ್ತವೆ. ಒಂದು ನೆಲೆಯಲ್ಲಿ ಸಾಂಪ್ರದಾಯಿಕ ಸಮಾಜದ ಕಟ್ಟುವಿಕೆಯಲ್ಲಿರುವ ಸರಿ-ತಪ್ಪುಗಳ ತುರ್ತು ಪರಿಷ್ಕಾರದ ಫಲವಾಗಿ ಇವು ಸಹಜವಾಗಿ ಘಟಿಸುವಂತೆ ಕಾಣುವ ಮನೋಧರ್ಮ ಕಂಬಾರರ ಕರಿಮಾಯಿ, ಸಿಂಗಾರೆವ್ವಗಳನ್ನು ಕಾಣುತ್ತದೆ. ಅದೇ ಮನೋಧರ್ಮ ಭಾರತಿಯವರ ಕಥೆಗಳಲ್ಲೂ ನನಗೆ ಕಂಡವು. ಈ ಒಂದು ನಿಟ್ಟಿನಲ್ಲಿ ಭಾರತಿ ವೈದೇಹಿಯ ಪರಂಪರೆಯಿಂದ ಭಿನ್ನರಾಗಿ ನಿಲ್ಲುತ್ತಾರೆ. ಬಹುಶಃ ನಗರ ಕೇಂದ್ರಿತ, ಆಧುನಿಕ ನ್ಯಾಯ ವ್ಯವಸ್ಥೆಯೊಂದಿಗಿನ ಜೊತೆ ವ್ಯವಹರಿಸಿದಾಗ ಈ ತಲ್ಲಣಗಳಿಗೆ ಬೇರೊಂದೇ ರೂಪ ಸಿಗಬಹುದೇನೋ. ಮಲೆನಾಡಿನಲ್ಲಿಯೇ ಬೇರುಬಿಟ್ಟಿರುವ ಈ ಕಥೆಗಳನ್ನು ಬೆಂಗಳೂರಿಗೆ ಭಾರತಿಯವರು ಕರೆತಂದರೆ ಹೇಗಿರಬಹುದು, ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ನನ್ನಲ್ಲಿದೆ.

ಮೊದಲ ಕಥಾಸಂಗ್ರಹದಲ್ಲಿಯೇ ಸಶಕ್ತವಾದ ಕಥೆಗಳನ್ನು ಕೊಡುತ್ತಾ ತಮ್ಮ ದನಿಯನ್ನು ಗಮನಿಸುವಂತೆ ನಮ್ಮನ್ನು ಒತ್ತಾಯಿಸುವ ಈ ಬರವಣಿಗೆಯನ್ನು ಕನ್ನಡ ಕಥಾಲೋಕ ಸ್ವಾಗತಿಸುತ್ತದೆಂದು ನಾನು ನಂಬಿದ್ದೇನೆ. ಮೂಲತಃ ಕಥೆಗಾರನಾಗಿರುವ ನಾನು ಭಾರತಿಯವರನ್ನು ಈ ಲೋಕಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ಅವರಿಂದ ಹೀಗೇ ನಮ್ಮನ್ನು ಕಾಡುವಂತಹ, ನಮ್ಮ ಚಿಂತನೆಯನ್ನು ಒರೆಗೆ ಹಚ್ಚುವಂತಹ ಕಥೆಗಳು ಬರಲೆಂದು ನಾನು ಆಶಿಸುತ್ತೇನೆ. ಈ ಎರಡು ಮಾತುಗಳನ್ನು ಬರೆಯಲು ಅವಕಾಶ ಮಾಡಿಕೊಟ್ಟ ಭಾರತಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.