ವೃತ್ತಿ, ಪ್ರವೃತ್ತಿಗಳ ನಡುವೆ ಉಯ್ಯಾಲೆಯಾಡುತ್ತಿರುವ ಆಧುನಿಕ ಕಾಲದ ಗೌರಿಯರಿಗೆ ತಿಂಗಳಿಗೆ ಮೊದಲೇ ಹಬ್ಬದ ತಯಾರಿ ಅಸಾಧ್ಯ. ಅಡುಗೆ ಮನೆಯ ನಲ್ಲಿಯ ನೀರಲ್ಲಿ `ಗಂಗೇಚ ಯಮುನೇಚೈವ..’ ಎನ್ನುತ್ತಾ ಗಂಗೆಯನ್ನು ಆವಾಹಿಸಿ ಕಲಶ ತುಂಬುವ ನಮಗೆ ನಗರದ ಪುಟ್ಟ ಪುಟ್ಟ ಮನೆಗಳಲ್ಲಿ ಹಬ್ಬವೆಂದರೆ ನಿತ್ಯದ ಒಂದು ಟಬ್ ಪಾತ್ರೆಗಳ ಬದಲು ಎರಡು ಟಬ್ ಪಾತ್ರೆಗಳು ಎಂದೂ ಒಮ್ಮೊಮ್ಮೆ ಕಾಣುವುದಿದೆ. ಹೀಗೆ ಅನಿಸಿದಾಗಲೇ ನಮ್ಮೊಳಗೆ ತೆಪ್ಪಗಿದ್ದ ಆಧುನಿಕ ಗೌರಿಯರು ಎಚ್ಚರಗೊಳ್ಳುವುದು. ನೈವೇದ್ಯಕ್ಕಷ್ಟೇ ಅವಲಕ್ಕಿಯನ್ನು ಕಲಸಿ ಬಾಕಿ ಉಳಿದ ತಿಂಡಿಗಳನ್ನು ಅಂಗಡಿಯಿಂದ ತಂದು ಸುಧಾರಿಸಿಕೊಳ್ಳುವಷ್ಟು ಗೌರಿಯರ ಮನಸ್ಸು ತಯಾರಾಗಿದೆ.
ಜಗದೆಲ್ಲ ಗೌರಿಯರ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

ಈಗೀಗ ನಗರದ ಮುಖ್ಯ ರಸ್ತೆಗಳಲ್ಲಿ ನಡೆಯುವುದೆಂದರೆ ಕಸರತ್ತು ಮಾಡಿದಂತೇ! ಒಂದು ಕಡೆಯ ದುರಸ್ತಿ ಕೆಲಸಗಳು ಮುಗಿಯುತ್ತಿದ್ದಂತೇ ಇನ್ನೊಂದು ಕಡೆಯಲ್ಲಿ ಆರಂಭವಾಗಿರುತ್ತವೆ. ಹೀಗಾಗಿ ಅಗೆದು ಹಾಕಿರುವ ಪಾದಾಚಾರಿ ಮಾರ್ಗದಲ್ಲಿ ಹಾರುತ್ತಾ ಎಡವುತ್ತಾ ಹೋಗುತ್ತಿದ್ದಂತೇ ಕಣ್ಣಿಗೆ ಬಿದ್ದಳು ಪರಮಸುಂದರಿ ಗೌರಿ. ಅರೇ! ದೇವರೇ ನಮ್ಮ ಬಳಿಗೆ ಬರುವುದೆಂದರೆ ಇದೇನಾ! ಬರೇ ಗೌರಿಯಲ್ಲ, ಜೊತೆಯಲ್ಲೇ ಇದ್ದ ಅವಳಿಗಿಂತಲೂ ಸುಮಾರು ದೊಡ್ಡ ಶರೀರದ ಅವಳ ಕಂದ ಗಣಪ! ಅಂತೆಯೇ ಪಾದಾಚಾರಿ ಮಾರ್ಗದ ಬದಿಯಲ್ಲಿ ಸಾಲಾಗಿ ಕೂತಿದ್ದರು ಘನಗಂಭೀರ ಮುಖಮುದ್ರೆಯ ಭಿನ್ನ ಭಿನ್ನ ದಿರಿಸುಗಳಲ್ಲಿ ಡೊಳ್ಳೊಟ್ಟೆ ಗಣಪ ಮತ್ತವನ ಪಕ್ಕದಲ್ಲಿ ಗುಲಾಬಿ ಮುಖದ ಗೌರವ್ವೆ.

ಬಿಟ್ಟು ಬಿಟ್ಟು ಬರುತ್ತಿರುವ ಈ ಚಿಟಿಚಿಟಿ ಮಳೆಗೆ ಅವರಿಗೆ ಲೇಪಿಸಿದ ಬಣ್ಣ ಇಳಿಯಬಾರದೆಂದು ಹೊದೆಸಿದ ಪ್ಲಾಸ್ಟಿಕ್! ರಕ್ಷಿಸುವವನಿಗೇ ರಕ್ಷಣೆ. ಇದೆಂಥ ಪಾಡು ಇಬ್ಬರದೂ! ಲೌಕಿಕದ ಗೆಲುವಿಗೆ ಪರಸ್ಪರರು ಮಾಡಿಕೊಂಡಿರುವ ಇದೆಂಥ ವ್ಯವಸ್ಥೆಯ ರೂಪ. ನೀ ನನಗಿದ್ದರೆ ನಾ ನಿನಗೆ ಅಂದರೆ ಇದೇ ಇರಬೇಕು. ಹೋಗಲಿ, ಹೀಗೆ ಸಾಲಾಗಿ ಕೂತವರಿಗೆ ಅವರ ಮುಂದೆ ದಿನವಿಡೀ ಅಡ್ಡಾಡುತ್ತಿರುವವರ ಕಷ್ಟದ ನಿಟ್ಟುಸಿರೇನಾದರೂ ತಟ್ಟಿತೇ, ಊಹುಂ! ಇಬ್ಬರ ಮುಖದ ಮಂದಸ್ಮಿತ ಚೂರೂ ಮುಕ್ಕಾಗಿರಲಿಲ್ಲ. ಬದಲಿಗೆ, ನಮ್ಮನ್ನೇ ನೋಡಿ ನಗುತ್ತಿರುವಂತೇ ಭಾಸವಾಯಿತು.
ವರ್ಷದ ಆರಂಭದಿಂದಲೂ ಸುತ್ತಲೂ ಕಂಡಂತಹ ಎಲ್ಲ ಅನಾಹುತಗಳಿಂದ ಮನಸ್ಸಿಗಾದ ಗಾಯಗಳನ್ನು ಮಾಯಿಸಲೆಂದೇ ಬಹುಷಃ ಹಬ್ಬಗಳು ಬರುತ್ತವೆ. ನಮಗೆ ಅನಿವಾರ್ಯವಾಗಿ ಬೇಕಾಗಿರುವ ವಿಸ್ಮೃತಿಯನ್ನು ಮೂಡಿಸಿ ಮತ್ತೆ ಸಂಭ್ರಮವನ್ನು ಮನತುಂಬಿಕೊಳ್ಳಲು ಈ ಹಬ್ಬಗಳು ಅನುವು ಮಾಡಿಕೊಡುತ್ತಿವೆ. ಆದ್ದರಿಂದಲೇ ಕೈಯಲ್ಲಿ ನೂರಿರಲಿ, ಸಾವಿರವಿರಲಿ ಗುಡಿಸಲೇ ಆಗಲಿ, ಅರಮನೆಯಾಗಲಿ ಹಬ್ಬ ಬಂತೆಂದರೆ ಮನಸ್ಸು ಸಂಭ್ರಮವನ್ನು ಎಳೆದುಕೊಂಡು ಕ್ಷಣದಲ್ಲಿ ಬದುಕಿ ಮುಕ್ತವಾಗಲು ಬಯಸುತ್ತದೆ.

ಶ್ರಾವಣ ಕಾಲಿಟ್ಟಂತೇ ಹಬ್ಬಗಳ ದರ್ಬಾರು ಶುರು. ಮೊನ್ನೆ ಮೊನ್ನೆಯಷ್ಟೇ ವರಮಹಾಲಕ್ಷ್ಮಿಗೆ ಸೀರೆ ಉಡಿಸಿ ಒಡವೆ ಇಟ್ಟು ಧಾಂಧೂಂ ಎಂದು ಪೂಜಿಸಿ ಕಳಿಸಿಕೊಟ್ಟು ತಿಂಗಳೂ ಕಳೆದಿಲ್ಲ, ಅಷ್ಟರಲ್ಲಿ ಗೌರಿ ಬಂದೇ ಬಿಟ್ಟಿದ್ದಾಳೆ. ಜೊತೆಯಲ್ಲಿ ತಿಂಡಿಪೋತ ಮಗನನ್ನು ಕರೆದುಕೊಂಡು ಬಂದಿದ್ದಾಳೆ. ಹೀಗಾಗಿ ಅಮ್ಮ-ಮಗನ ಔತಣಕ್ಕೆ ಮನೆಮನೆಯ ಗೌರಿಯರು ಹಿಟ್ಟು ನಾದುತ್ತಿದ್ದಾರೆ, ಚಕ್ಕುಲಿ ಕರಿಯುತ್ತಿದ್ದಾರೆ, ಡಬ್ಬಿಗಳ ತುಂಬಾ ಘಮ್ಮೆನ್ನುವ ತಾಜಾ ಬೆಲ್ಲದ ಸಿಹಿ ಮೋದಕಗಳನ್ನೂ ತುಂಬಿಡುತ್ತಿದ್ದಾರೆ.

ಭಾದ್ರಪದ ಮಾಸದ ಈ ಎರಡೂ ಹಬ್ಬಗಳ ಬಗ್ಗೆ ಜನಮಾನಸದಲ್ಲಿ ಇರುವ ಐತಿಹ್ಯಗಳಿಗೇನು ಕೊರತೆಯಿಲ್ಲ. ಅದರಲ್ಲೂ ಗೌರಿಯ ಸುತ್ತ ಜಾನಪದ, ಪೌರಾಣಿಕ ಮತ್ತು ಕಾಲ್ಪನಿಕ ಕತೆಗಳು ಸಮೃದ್ಧವಾಗಿವೆ. ಕಾಳಿದಾಸನ ಕುಮಾರಸಂಭವದ ನಾಯಕಿ ಪರ್ವತಪುತ್ರಿ ಪಾರ್ವತಿಯೇ ಗೌರಿಯೆನ್ನುವುದರಿಂದ ಹಿಡಿದು ಜಾನಪದದಲ್ಲಿ ಕೆರೆಗೆ ಹಾರವಾದ ಹಿರಿಸೊಸೆ ಗೌರಿಯ ತನಕ ಹಲವು ಗೌರಿಯರ ಕತೆಗಳು ದಾಖಲಾಗಿವೆ. ಈ ಎಲ್ಲ ಕತೆಗಳ ಹೂರಣವಿರುವುದು ಗೌರಿ ಕುಟುಂಬವನ್ನು ಕಟ್ಟಿದವಳು ಎಂದು. ಮಸಣವಾಸಿಯಾದ ಶಿವನಿಗೆ ಕುಟುಂಬವನ್ನು ತೋರಿದವಳು ಪಾರ್ವತಿಗೌರಿಯಾದರೆ, ಕೆರೆಗೆ ಹಾರದ ಗೌರಿ ಕುಟುಂಬದ ಗೌರವವನ್ನು ಉಳಿಸುವುದು ತನ್ನ ಹೊಣೆಯೆಂದು ಸಾವನ್ನೇ ಎಳೆದುಕೊಂಡವಳು, ಒಟ್ಟಿನಲ್ಲಿ ಕುಟುಂಬವೆಂದರೆ ಅದು ಗೌರಿಯಿಂದಲೇ ಎಂದು ಅನಿಸುವಂತಿದೆ ಗೌರಿ ಹೆಸರಿನ ಇತಿಹಾಸ. ಪುರಾಣದ ಗೌರಿಕಥನದಲ್ಲೂ ಅವಳ ಚಿತ್ರಣ ಸಿಗುವುದು ಭೂಮಿ ಮೇಲಿನ ಕುಟುಂಬವೊಂದರ ಚಿತ್ರದಂತೇ. ಗಂಡ ಮಕ್ಕಳೊಂದಿಗೆ ಇರುವ ಕಲ್ಪನೆಯನ್ನು ನಮ್ಮ ಹೃನ್ಮನಗಳಲ್ಲಿ ಬಿತ್ತಿರುವ ಕಾರಣ ಲಕ್ಷ್ಮೀ, ಸರಸ್ವತಿಯರಿಗಿಲ್ಲದ ಕೌಟುಂಬಿಕ ನೋಟ ಗೌರಿಯ ಕತೆಯಲ್ಲಿ ಸಿಗುತ್ತದೆ. ಹೀಗೆ ಪುರಾಣ, ಜಾನಪದ ಮತ್ತು ಕಾಲ್ಪನಿಕ ಈ ಎಲ್ಲ ನೆಲೆಗಳಲ್ಲಿ ಗೌರಿಯರ ಕತೆಗಳನ್ನು ಇದೇ ರೀತಿಯಲ್ಲಿ ಕಟ್ಟಲು ಇದ್ದ ಕಾರಣವೆಂದರೆ ಕೌಟುಂಬಿಕ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳುವ ಆಶಯ. ಆದ್ದರಿಂದ ಯಾವ ನೆಲೆಗಟ್ಟಾದರೂ ಸರಿಯೇ ಗೌರಿಯರು ಎಲ್ಲ ಕಾಲದಲ್ಲಿ ಎಲ್ಲ ಗೌರವಕ್ಕೆ ಅರ್ಹರೆಂದೇ ಆಕೆಯನ್ನು ವಿಧವಿಧವಾಗಿ ಪೂಜಿಸುವ ಸಂಪ್ರದಾಯ ಹುಟ್ಟಿರುವುದು. ಅವಳು ಸ್ವರ್ಣಗೌರಿಯಿರಲಿ, ಹರತಾಳ ಗೌರಿಯಿರಲಿ, ಮೌನಗೌರಿಯೇ ಇರಲಿ ಅವಳನ್ನು ಪೂಜಿಸಿ ಗೆಲ್ಲುವ ಯತ್ನ ಮಾಡಿಕೊಂಡು ಬರಲಾಗಿದೆ.

ವರ್ಷದಿಂದ ವರ್ಷಕ್ಕೆ ಹಬ್ಬಗಳ ಆಚರಣೆಯ ವಿಧಾನದಲ್ಲಿ ಕಿಂಚಿತ್ತಾದರೂ ಬದಲಾವಣೆ ಬರುವುದು ಸಹಜವೇ ಆಗಿದೆ. ಕಾಲದೊಂದಿಗೆ ಹೆಜ್ಜೆಯಿಡಲು ಅವಸರಿಸುವ ನಾವೆಲ್ಲರೂ ಹಬ್ಬಗಳು ಬಂದೊಡನೇ ಹಳೆಯ ರೀತಿಯಲ್ಲೇ ಆಚರಿಸುವುದು ಕಷ್ಟಸಾಧ್ಯ. ಅಷ್ಟಕ್ಕೂ ಈ ನೆಲದ ಮಹಿಮೆಯ ಪಟ್ಟಿಯಲ್ಲಿ ಜಗದಗಲವಿರುವ, ಅನಂತವಿರುವ ದೈವವನ್ನು ಭಾವದಲ್ಲಿ ನೋಡಿದ್ದೂ ಸೇರಿದೆ ಅಲ್ಲವೇ! ಅಲ್ಲಮನ `ಭಾವದಲ್ಲೊಬ್ಬ ದೇವರ ಮಾಡಿ, ಮನದಲ್ಲೊಂದು ಭಕ್ತಿಯ ಮಾಡಿದರೆ’ ಎನ್ನುವ ಮಾತನ್ನು ಹಿಡಿದುಕೊಂಡು ಶಕ್ತ್ಯಾನುಸಾರ ನಡೆದುಕೊಳ್ಳುವುದು ಈ ಹೊತ್ತಿನ ಜರೂರತ್ತಿನಲ್ಲಿ ಮುಖ್ಯವಾದುದು. ಬಾಹ್ಯಪೂಜೆಯಷ್ಟೇ ಭಾವಪೂಜೆಯೂ ಮುಖ್ಯವಾದರೆ ಒಳಿತು. ವೃತ್ತಿ, ಪ್ರವೃತ್ತಿಗಳ ನಡುವೆ ಉಯ್ಯಾಲೆಯಾಡುತ್ತಿರುವ ಆಧುನಿಕ ಕಾಲದ ಗೌರಿಯರಿಗೆ ತಿಂಗಳಿಗೆ ಮೊದಲೇ ಹಬ್ಬದ ತಯಾರಿ ಅಸಾಧ್ಯ. ಅಡುಗೆ ಮನೆಯ ನಲ್ಲಿಯ ನೀರಲ್ಲಿ `ಗಂಗೇಚ ಯಮುನೇಚೈವ..’ ಎನ್ನುತ್ತಾ ಗಂಗೆಯನ್ನು ಆವಾಹಿಸಿ ಕಲಶ ತುಂಬುವ ನಮಗೆ ನಗರದ ಪುಟ್ಟ ಪುಟ್ಟ ಮನೆಗಳಲ್ಲಿ ಹಬ್ಬವೆಂದರೆ ನಿತ್ಯದ ಒಂದು ಟಬ್ ಪಾತ್ರೆಗಳ ಬದಲು ಎರಡು ಟಬ್ ಪಾತ್ರೆಗಳು ಎಂದೂ ಒಮ್ಮೊಮ್ಮೆ ಕಾಣುವುದಿದೆ. ಹೀಗೆ ಅನಿಸಿದಾಗಲೇ ನಮ್ಮೊಳಗೆ ತೆಪ್ಪಗಿದ್ದ ಆಧುನಿಕ ಗೌರಿಯರು ಎಚ್ಚರಗೊಳ್ಳುವುದು. ನೈವೇದ್ಯಕ್ಕಷ್ಟೇ ಅವಲಕ್ಕಿಯನ್ನು ಕಲಸಿ ಬಾಕಿ ಉಳಿದ ತಿಂಡಿಗಳನ್ನು ಅಂಗಡಿಯಿಂದ ತಂದು ಸುಧಾರಿಸಿಕೊಳ್ಳುವಷ್ಟು ಗೌರಿಯರ ಮನಸ್ಸು ತಯಾರಾಗಿದೆ.

ಬಹುರಾಷ್ಟ್ರೀಯ ಕಂಪೆನಿ ಒಂದರ ಉನ್ನತ ಹುದ್ದೆಯ ಗೌರಿಯೊಬ್ಬಳು ಸಂಜೆ ನಂತರ ಬರುವ ಅಂತರಾಷ್ಟ್ರೀಯ ಕರೆಗಳನ್ನು ಸ್ವೀಕರಿಸುತ್ತಲೇ ನಡುನಡುವೆ ತನ್ನ ಮೈಕ್ ಅನ್ನು ಮ್ಯೂಟ್ ಮಾಡಿಕೊಂಡು ಕುಕರ್ ಏರಿಸುತ್ತಾ ಇಳಿಸುತ್ತಾ ಕಡುಬಿಗೆ ಸಿದ್ಧತೆ ಮಾಡಿಕೊಳ್ಳುತ್ತಾ ತನ್ನ ಲ್ಯಾಪ್ ಟ್ಯಾಪಿನ ಪರದೆಯ ಇನ್ನೊಂದು ಟ್ಯಾಬಿನಲಿ ಅಮೆಝಾನಿನಿಂದ ತನ್ನಿಷ್ಟದ ಸೀರೆ ಆರ್ಡರ್ ಮಾಡುತ್ತಾ ಹಬ್ಬದ ದಿನ ತಾನು ಸೋತು ಸುಣ್ಣವಾಗಲಾರೆ ಎಂದು ಆದಷ್ಟು ಕೆಲಸಗಳನ್ನು ಕಡಿಮೆಗೊಳಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದಾಳೆ.

ಮಲ್ಲೇಶ್ವರದ ಎಂಟನೇ ಕ್ರಾಸಿನಲ್ಲಿ ಮಾವಿನ ಸೊಪ್ಪನ್ನು ಹರಡಿಟ್ಟುಕೊಂಡು ಕಟ್ಟಿಗೆ ಇಪ್ಪತ್ತು ರೂಪಾಯಿಯಂತೆ ಮಾರುತ್ತಿದ್ದ ಹಿಂದೂಪುರದ ಗೌರಿಯೊಬ್ಬಳು ಕೊಡಲು ದುಡ್ಡಿಲ್ಲ ಕೇವಲ ಆನ್ಲೈನಿನಲ್ಲಿ ಪಾವತಿಸುವೆ ಎಂದ ಮತ್ತೊಬ್ಬಳು ಗೌರಿಯ ಮುಂದೆ ಮೆಲ್ಲಗೆ ತನ್ನ ಬ್ಯಾಗಿನಿಂದ ಕ್ಯೂ ಆರ್ ಕೋಡಿದ್ದ ಮೊಬೈಲನ್ನು ತೋರುತ್ತಾಳೆ.

ಕಳೆದ ಹಲವು ತಿಂಗಳಿಂದ ಮನೆಯಲ್ಲಿದ್ದ ಹಿರಿಯರ ಆರೈಕೆಯಲ್ಲಿ ನಿರಂತರ ವ್ಯಸ್ತಳಾಗಿ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳಲೂ ಕ್ಷಣ ಸಿಗದಿದ್ದ ಗೌರಿಯೊಬ್ಬಳು ಕುಂಕುಮಕ್ಕೆ ಬನ್ನಿ ಎಂದ ಪಕ್ಕದ ಮನೆಯ ಗೌರಿಯ ಆಹ್ವಾನದಿಂದ ಒಂದು ಕ್ಷಣವಾದರೂ ಉಸಿರಾಡಲು ಸಮಯ ಸಿಕ್ಕಿತೆಂದು ಚಿಟಿಕೆ ಹೊಡೆಯುವಷ್ಟರಲ್ಲಿ ಸೀರೆಯುಟ್ಟು ಅಲಂಕಾರ ಮಾಡಿಕೊಂಡು ಗೆಳತಿಗೆ ಸೆಲ್ಫಿ ಕಳಿಸಿ ಹಗುರವಾಗುವಳು.

ಪೂಜೆಗೆ ಹೂ ಕೊಳ್ಳಲೆಂದು ಬಂದ ಗೌರಿಯೊಬ್ಬಳು ಬಸಿರಿಯೆಂದು ಅರಿತ ಹೂಮಾರುವ ಗೌರಿ, ಅಕ್ಕರೆಯಿಂದ ಒಂದು ಮೊಳ ಹೆಚ್ಚುವರಿ ಹೂ ಕೊಟ್ಟು ಮುಡಿದುಕೊ ಎಂದು ಕಣ್ಣಲ್ಲೇ ಸೂಚಿಸುತ್ತಾಳೆ. ಉದ್ದಕ್ಕೂ ತರಹೇವಾರಿ ಹೂಗಳನ್ನು ಹಣ್ಣು ತರಕಾರಿಗಳನ್ನು ಮಾರಲು ಕೂತಿದ್ದ ಹತ್ತು ಹಲವು ಮಾತಾಡುವ ಜೀವಂತ ಗೌರಿಯರು. ಅವರ ಸ್ವಲ್ಪ ಆಚೆ ಮಾರಾಟಕ್ಕಿಟ್ಟ ಮಣ್ಣಿನ ಮೌನ ಗೌರಿಯರು. ಹಬ್ಬ ಬಂದೊಡನೇ ಮಾತಿನ ಗೌರಿಯರ ಮೊಗದಲ್ಲಿ ಅನಿವಾರ್ಯವಾಗಿ ಎಳೆದುಕೊಂಡ ಮಂದಸ್ಮಿತ ಮತ್ತು ಮೌನದ ಗೌರಿಯರ ಮೊಗದಲ್ಲಿ ಸೃಷ್ಟಿಸಿದ ಮಂದಸ್ಮಿತ. ಈ ಹಬ್ಬಗಳು ಎಷ್ಟೆಲ್ಲ ಗೌರಿಯರ ಏನೆಲ್ಲ ರೂಪಗಳನ್ನು ಬಗೆದು ತೋರುತ್ತಿವೆ.

ಹೀಗೆ ಆಧುನಿಕ ಗೌರಿಯರ ಪುರಾಣದ ಕೆಲವು ನಿದರ್ಶನಗಳನ್ನು ನೀಡುವಾಗ ದುಃಖವೇನು ಗೌರಿಯದಷ್ಟೇ ಸೊತ್ತೇ! ಎನ್ನುವ ಪ್ರಶ್ನೆ ಹಾಗೆ ಸುಳಿದೂ ಹೋಗಬಹುದು. ನಿಜ, ದುಃಖಕ್ಕೆ ದೇಶಕಾಲವಿಲ್ಲ, ಲಿಂಗಭೇದವೂ ಇಲ್ಲವೆಂದುಕೊಂಡರೂ ಗೌರಿಯರಿಗೆ ದೇಶಕಾಲದ, ಹೊತ್ತು ಗೊತ್ತಿನ ಅರಿವಿರಬೇಕೆಂಬ ಸೂಚನೆಯಿದೆ. ತನ್ನ ದೇಹ ಮನಸ್ಸುಗಳನ್ನು ಈ ದೇಶಕಾಲ ಅಥವಾ ಹೊತ್ತು ಗೊತ್ತಿನ ಚೌಕಟ್ಟಿನಲ್ಲಿ ನೋಡಿಕೊಳ್ಳಬೇಕೆಂಬ ಅಲಿಖಿತ ಆಜ್ಞೆಯೂ ಇದೆ. ಇದಕ್ಕೆ ತಪ್ಪಿದರೆ ಬದುಕಿಡೀ ದುಃಖಿಸುವ ಪ್ರಾಪ್ತಿಯೂ ಗೌರಿಯರದ್ದೇ! ಗೌರಿಯರಿಗೆ ಇಷ್ಟೇ ವಯೋಮಾನದಲ್ಲಿ ವಿವಾಹವೂ ಇಷ್ಟೇ ಹೊತ್ತಿನೊಳಗೇ ಸಂತಾನವೂ ಆಗಬೇಕೆಂಬ ಅಂಕೆಯನ್ನೂ ಹೇಳಲಾಗಿದೆ. ಏಕೆಂದರೆ ಗೌರಿಯರ ದೇಹ ಆಯಾ ಹಂತಗಳಲ್ಲಿ ಆಯಾ ಅವಸ್ಥೆಗಳಿಗೆ ಬದಲಾಗುತ್ತಿರುತ್ತದೆ. ಆ ಅವಸ್ಥೆಗಳಲ್ಲಿಯೂ ಎಲ್ಲ ಗೌರಿಯರು ಜಗದ ನಡೆಗೆ ಸರಿಯಾಗಿ ಬದುಕುವ ಒಡಂಬಡಿಕೆಗೆ ಹುಟ್ಟುವಾಗಲೇ ಸಹಿ ಹಾಕಿಕೊಂಡು ಹುಟ್ಟುತ್ತಾರೆ. ಮತ್ತು ಬದುಕುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಆದ್ದರಿಂದಲೇ ಗೌರಿಯರಿಗೆ ಬದುಕೆಂದರೆ ನಿತ್ಯ ಹಬ್ಬ. ನಿತ್ಯವೂ ಒಂದಲ್ಲ ಒಂದು ಹೊಸ ಹೊಣೆ ಹೆಗಲೇರುತ್ತದೆ. ಅವಳೂ ದೇವರನ್ನು ಹೊತ್ತು ನರ್ತಿಸುವ ದರ್ಶನ ಪಾತ್ರಿಯಂತೆ ಅವುಗಳನ್ನು ಹೊತ್ತುಕೊಂಡೇ ಬದುಕು ಸುತ್ತುತ್ತಾಳೆ.


ಗೌರಿ, ಗೌರ ಎಂದರೆ ಬಿಳುಪು. ಬಿಳುಪೆಂದರೆ ವಿಮಲ, ನಿರ್ಮಲವಾಗಿರುವುದು. ಈ ಹೊತ್ತಿನಲ್ಲಿ ಗೌರಿಯರ ಆತ್ಮಗೌರವ, ವ್ಯಕ್ತಿಘನತೆಗೆ ಕೊಂಚ ಹೆಚ್ಚೇ ಕುಂದಾಗುತ್ತಿರುವ ಆತಂಕ ಸೃಷ್ಟಿಯಾಗಿರುವಾಗ ಮನುಷ್ಯನಾಗಿ ಹುಟ್ಟಿದ ಎಲ್ಲ ಜೀವಗಳು ಲಿಂಗಭೇದವಿಲ್ಲದೇ ಮಾನಸಿಕವಾಗಿ ಗೌರಿಯರಾಗಲಿ. ಗೌರಿಯಂತೇ ನಿರ್ಮಲ ಮನದವರಾಗಲಿ. ಗೌರಿಯರಿಂದಲೇ ನಮ್ಮ ಹುಟ್ಟೆನ್ನುವ ಮೂಲಭೂತ ಜ್ಞಾನವನ್ನು ಪಡೆದು ಸಮಾನ ಅವಕಾಶಕ್ಕಿಂತಲೂ ಅವಳೂ ತಮ್ಮಷ್ಟೇ ಮಾನವಿಯೆನ್ನುವ ಪ್ರಜ್ಞೆ ಜಾಗೃತವಾಗಲಿ. ಸಹಜೀವನವೆಂದರೆ ಶಿವಶಿವೆಯರ ಜೀವನ. ತನ್ನ ಶರೀರದ ಅರ್ಧಭಾಗದಲ್ಲಿ ಶಿವೆಯನ್ನು ತೋರಿದ ಪರಶಿವನಂತೇ ಎಲ್ಲ ಗೌರಿಯರಿಗೆ ಸಿಗಬೇಕಾದ ಸಮಾನ ಗೌರವ ದೊರೆಯುವಂತಾಗಲಿ. ಎಲ್ಲ ಗೌರಿಯರಿಗೂ ಅವರ ಶಕ್ತಿಯ ಅಷ್ಟೂ ಪ್ರಮಾಣವನ್ನು ಬಳಕೆ ಮಾಡುವಂತಹ ಬದುಕು ಸಿಗಲಿ, ಬಹುಮುಖ್ಯವಾಗಿ ಸುರಕ್ಷತೆಯ ಬಾಗಿನ ಜಗದ ಎಲ್ಲಾ ಗೌರಿಯರಿಗೆ ಸಿಗುವಂತಾಗಲಿ.