ಅವಳು ಅವನೆಡೆಗೆ ಬರುವುದನ್ನು ಪಂಪ ಹೇಳುವಾಗ ಬಳಸುವ ಒಂದು ಪ್ರತಿಮೆ ನೋಡಿ “ಆಕೆ ಮದನನ ಕಯ್ಯಿಂ ಬದುರ್ಂಕಿದ ಅರಲಂಬು ಬಪರ್ಂತೆ ಬಂದು, ಭೀಮಸೇನನ ಕೆಲದೊಳ್ ನಿಂದಿರೆ” ಪಕ್ಕದಲ್ಲಿ ನಿಂತು ಬಿಡುತ್ತಾಳೆ. ಅಂಬು ತನ್ನ ಕಾರ್ಯ ಪ್ರಾರಂಭ ಮಾಡಿದ ಸ್ಥಾನ ಮತ್ತು ಅದರ ಕೊನೆಯನ್ನು ಇಷ್ಟು ಅದ್ಭುತವಾಗಿ ಕಾರಣ ಸಹಿತ ಹೇಳುವುದು ಬಹಳ ಕಷ್ಟದ ವಿಷಯವೇ ಸರಿ. ಕಾರ್ಯ ಕಾರಣದ ಸಂಬಂಧದ ಈ ನಡೆಯಲ್ಲಿ ಅವಳಿಗೆ ಪ್ರಾರಂಭ ಮತ್ತು ಅದರ ಗಮ್ಯವಷ್ಟೇ ತಿಳಿದಿರುವುದು, ಉಳಿದೆಲ್ಲವೂ ಅಂಬು ನಾಟಿದುದರ ಪರಿಣಾಮದ ಮಾತುಗಳೇ. ನಂತರ ಒಂದು ಸಂವಾದವನ್ನು ವಚನದಲ್ಲಿ ಪಂಪ ಕೊಡುತ್ತಾನೆ.
ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ
(ಎರಡಱಿಯದೆ ಒಲ್ದು ನಿನ್ನೊಳ್ ಎರಡುಂ ನುಡೊಯಲಾಗದು)
‘ಹಿಡಿಂಬೆ’ ಎಂದ ತಕ್ಷಣ ರಕ್ಕಸಿ, ಕುರೂಪಿ, ಅನ್ನುವ ಎಲ್ಲಾ ಭಾವಗಳೂ ಮನಸ್ಸಿನಲ್ಲಿ ಬರುವ ಹಾಗೆ ಚಿತ್ರಣವಾಗಿದ್ದರೂ ಅವಳಿಗೆ ‘ಕಮಲಪಾಲಿಕೆ’ ಅನ್ನುವ ಮತ್ತೊಂದು ಸುಂದರವಾದ ಹೆಸರೂ ಇದೆ. (ಪುರಾಣನಾಮ ಚೂಡಾಮಣಿ-ಬೆನಗಲ್ ರಾಮರಾವ್, ಪಾನ್ಯಂ ಸುಂದರಂಶಾಸ್ತ್ರಿ) ಹಿಂಡಿಂಬನೆಂಬ ರಾಕ್ಷಸನ ತಂಗಿ ಇವಳು. ವಾರಣಾವತದಲ್ಲಿ ಹತ್ತಿಸಿದ ಅರಗಿನಮನೆಯ ಬೆಂಕಿಯಿಂದ ತಪ್ಪಿಸಿಕೊಂಡು ಬರುವಾಗ ದಣಿದು ರಾತ್ರಿಯ ಸಮಯ ಪಾಂಡವರು ಉಳಿದಿದ್ದು ಇದೇ ಹಿಡಿಂಬೆಯ ಅಣ್ಣನ ಸ್ವತ್ತಾದ ಹಿಡಿಂಬವನದಲ್ಲಿ. ಅಲ್ಲಿಗೆ ಬಂದಿದ್ದ ಇವರನ್ನು ದೇಹದ ವಾಸನೆಯಲ್ಲೆ ಜಾಡನ್ನು ಹಿಡಿದು ತನ್ನ ತಂಗಿಯಾದ ಹಿಡಿಂಬೆಗೆ ‘ಅವರನ್ನೆಲ್ಲಾ ಕೊಂದು ಅಡಿಗೆ ಮಾಡಿ ತಾ ಇಬ್ಬರೂ ತಿನ್ನಬಹುದು’ ಎಂದು ಸಲಹೆ ಕೊಟ್ಟು ಕಳಿಸಿದವನು ಹಿಡಿಂಬನೇ.
ಒಂದರ್ಥದಲ್ಲಿ ಭೀಮ ಹಿಡಿಂಬೆಯ ಮೊದಲ ಭೇಟಿಗೆ ಉದ್ದೇಶವನ್ನು ತುಂಬಿದ ಕಾರಣ ಕರ್ತ ಇದೇ ಹಿಡಿಂಬ. ಕೊಲ್ಲುವ ತಿನ್ನುವ ಉದ್ದೇಶದಿಂದ ಬಂದವಳು ಭೀಮನನ್ನು ನೋಡಿ ಮೋಹಗೊಂಡು ಅವನ ಮುಂದೆ ಎಲ್ಲವನ್ನೂ ಮರೆತು ಶರಣಾಗಿ ಪ್ರೇಮನಿವೇದನೆಗಾಗಿ ನಿಂದವಳು. ಅವಳಿಗೆ ಮೊದಲ ನೋಟದಲ್ಲೇ ಅಂಕುರಿಸಿದ ಪ್ರೇಮ ಅದು. ಅವನೆದುರು ಬರುವುದಕ್ಕೆ ನಿಲ್ಲುವುದಕ್ಕೆ ಮೂಲ ಉದ್ದೇಶವೇ ಬೇರೆಯಾದರೂ, ಇಲ್ಲಿಗೆ ಬಂದು ಅವನನ್ನು ಕಂಡ ತಕ್ಷಣ ಅವಳಲ್ಲಿ ಸುಪ್ತವಾಗಿದ್ದ ಭಾವಗಳು ಕೆರಳುವುದು ಇಲ್ಲಿನ ಮುಖ್ಯ ಅಂಶವಾಗಿದೆ. ಎಲ್ಲಿಯ ಕೊಲ್ಲುವ ಉದ್ದೇಶ? ಎಲ್ಲಿಯ ಪ್ರೇಮ? ಹೀಗೆ ಎರಡು ವಿರುದ್ಧ ದಿಕ್ಕಿನ ಭಾವಗಳಿಗೆ ತೀಕ್ಷ್ಣವಾಗಿ ಮುಖಾಮುಖಿಯಾಗಿ ಸಿಕ್ಕು ನರಳಿ ಒರಲಿ ಒಲಿದು ಕೊನೆಗೆ ಶರಣಾದವಳು ಈ ಹಿಡಿಂಬೆ.
ಒಂದು ಉದ್ದೇಶದಿಂದ ಬಂದು ಮತ್ತೊಂದು ತನಗರಿವಿಲ್ಲದೇ ತನ್ನೊಳಗೇ ಘಟಿಸಿದಾಗ ಅದನ್ನು ತಡೆ ಹಿಡಿಯಲಾರದ ಅವಳಲ್ಲಿ ಆಗುವ ತೀವ್ರತರವಾದ ಆಂತರಿಕ ಮತ್ತು ಬಾಹ್ಯ ಬದಲಾವಣೆಯು ತಿಳಿಸುತ್ತದೆ. ಈ ಬದಲಾವಣೆ ಅವಳ ವ್ಯಕ್ತಿತ್ವದಲ್ಲಿ ಆದ ಬದಲಾವಣೆಯನ್ನು ತಿಳಿಸುವುದರ ಜೊತೆಗೇ ಇಂದಿಗೊಂದು ದೊಡ್ಡ ತತ್ವವನ್ನು ತಿಳಿಸುವುದಕ್ಕಾಗಿ ಮಹಾಭಾರತದಲ್ಲಿ ಈ ಘಟನೆ ನಿಂತಿದೆ. ಎದುರಿನವರಿಗೆ ಕೆಡುಕನ್ನು ಬಯಸುವ ಉದ್ದೇಶ ಹೊತ್ತೇ ಬಳಿ ಬಂದರೂ ಅವರಲ್ಲಿನ ರೂಪ, ಗುಣಗಳಿಗೆ ಮಾರು ಹೋಗಿ ತನಗರಿವಿಲ್ಲದೆಯೇ ಶರಣಾಗುವುದು ಬಹಳ ಮುಖ್ಯ ಅನಿಸುವುದನ್ನು ತಿಳಿಸುತ್ತಿದೆ. (ಗಮನಿಸಿ – ಕರ್ಣರಸಾಯನಮಲ್ತೆ ಭಾರತಂ) ಈ ಗುಣಕ್ಕೆ ಹಿಡಿಂಬೆಯ ಪಾತ್ರ ನಿಂತಿದೆ, ಈ ಘಟನೆಯನ್ನು ಕಾವ್ಯದಲ್ಲಿ ರಚಿಸುವಾಗ ಪಂಪ ವಹಿಸುವ ಸೂಕ್ಷ್ಮತೆ ಮತ್ತು ಆ ಸಂದರ್ಭದಲ್ಲಿನ ಭಾವ ತೀವ್ರತೆ, ಅವಳಾಡುವ ಮಾತು, ಅವಳ ವರ್ತನೆಯಿಂದ ಮತ್ತೆ ಮತ್ತೆ ಈ ಭಾಗವು ಕಾಡಿಸುತ್ತಲೇ ಓದಿಸಿಕೊಳ್ಳುತ್ತದೆ.
ಪುರುಷನು ಸ್ತ್ರೀಯನ್ನು ವಶಪಡಿಸಿಕೊಳ್ಳಲು ಅವಳಿಗೆ ಹತ್ತಿರವಾದವಳಿಂದ ಪುರುಷನ ಬಗೆಗೆ ಅವಳೆದುರು ಹೊಗಳಿಸಿ, ದೂತಿಯಿಂದ ಮಾತಿನಿಂದ ವಶವಾಗುವಂತೆ ಮಾಡುವುದು. ಹಾಗೆ ವಶವಾಗದ ಪಕ್ಷದಲ್ಲಿ ಅವಳನ್ನು ಹೊತ್ತೊಯ್ದು ವಿವಾಹವಾಗುವುದು ರಾಕ್ಷಸ ವಿವಾಹದ ಕ್ರಮ. ಆದರೆ ರಾಕ್ಷಸ ವಿವಾಹದ ಲಕ್ಷಣವು ಇಲ್ಲಿ ಅದಲು ಬದಲಾಗಿದೆ. ಕಾಮಶಾಸ್ತ್ರದಲ್ಲಿ ಹೇಳುವ ಪುರುಷನಷ್ಟೇ ರಾಕ್ಷಸ ವಿವಾಹದ ನೇತಾರ ಅನ್ನುವ ಕ್ರಮದಲ್ಲಿನ ವಿಪರ್ಯವು ಇಲ್ಲಿನ ವಿಶೇಷ. ಇಲ್ಲಿ ವಶವಾಗುವಂತೆ ಮಾಡುವಲ್ಲಿ ತನ್ನ ಪ್ರಭಾವ ಬೀರಲು ವೇಷ ಬದಲಿಸಿ ಮಾತು ಪ್ರಾರಂಭ ಮಾಡುವವಳು ಹಿಡಿಂಬೆ, ಕೊನೆಗೆ ಒಪ್ಪದಿದ್ದಾಗ ತಾಯಿಯಾದ ಕುಂತಿಯ ಮಾತಿಗೆ (ಅವಳು ಮಾಡಿದ ದೂತಿ ಕಾರ್ಯ!) ಬೆಲೆಕೊಟ್ಟು ವಿವಾಹವಾಗುವುದು ಭೀಮ.
ಈ ಒಂದು ಘಟನೆಯು ಪಂಪನಿಗೂ ಮುಂಚಿತವಾಗಿ ರಚನೆಯಾದ ವಾತ್ಸ್ಯಾಯನನ ಕಾಮಶಾಸ್ತ್ರದಲ್ಲಿ ಹೇಳಿರುವ ವಿವಾಹ ಕ್ರಮದಲ್ಲಿ ಪಲ್ಲಟಗೊಂಡದ್ದನ್ನು ತಿಳಿಸುತ್ತಲೇ ಮಹಾಭಾರತದ ಚಿತ್ರವನ್ನ ಕಟ್ಟಿಕೊಡುತ್ತಿದೆ. (ನೋಡಿ – ಪಂಪ ಭಾರತದಲ್ಲಿ ಕ್ರಮವಿಪರ್ಯ ಅನ್ನುವುದನ್ನು ಮೊದಲಬಾರಿಗೆ ವಿಮರ್ಶೆಯಲ್ಲಿ ತೋರಿಸಿಕೊಟ್ಟವರು ಪ್ರೊ. ಜಿ. ಹೆಚ್. ನಾಯಕರು. ಪಂಪನ ಕಾವ್ಯದ ಕುರಿತಾದ ವಿಮರ್ಶೆಗಳ ಸಂಕಲನ ಮತ್ತೆ ಮತ್ತೆ ಪಂಪ) ಪಂಪ ರಚಿಸಿದ ವಿಕ್ರಮಾರ್ಜುನ ವಿಜಯದ ವಸ್ತುವಿನ್ಯಾಸದಲ್ಲಿ ಈ ಕ್ರಮವಿಪರ್ಯವೇ ಮುಖ್ಯ ಧ್ವನಿ. ಕ್ರಮವಿಪರ್ಯವೇ ಕಾವ್ಯದ ಆಂತರಿಕ ಧ್ವನಿಯಾಗಿ ಮಹಾಭಾರತದ ಬೇರೆ ಬೇರೆ ಪಾತ್ರ, ಘಟನೆಗಳ ಮುಖಾಂತರ ಅಭಿವ್ಯಕ್ತಿ ಪಡೆದುಕೊಳ್ಳುತ್ತಿರುವುದೇ ಪಂಪನ ಕಾವ್ಯವನ್ನು ಸಾರ್ಥಕ್ಯಗೊಳಿಸಿದೆ. ಕ್ರಮವಿಪರ್ಯದ ದೃಷ್ಟಿಯ ಬೀಜ ಅಂಕುರಿಸಿದ್ದೇ ಅವನು ಕಥೆಯ ವಸ್ತುವನ್ನು ಪಡೆಯುವ ಸಂದರ್ಭದಲ್ಲಿ. ಪಂಪ ತನ್ನ ಎರಡು ಕಾವ್ಯದ ವಸ್ತುವಿನ ಆಯ್ಕೆಯ ಬಗೆಗೆ ಮಾತಾಡುವಾಗ ಆಡುವ ಮಾತುಗಳನ್ನು ಗಮನಿಸಿ, ಹೋಲಿಸಿ ನೋಡಿ.
ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನ್ “ಈಸುವೆಂ”
ಕವಿ ವ್ಯಾಸನೆನ್ ಎಂಬ ಗರ್ವಮೆನಗಿಲ್ಲ’
(ಸರಳ ಪಂಪಭಾರತ – ಆಶ್ವಾಸ 1, ಪದ್ಯ 13)
‘ಪುರುದೇವಾದಿ ಜಿನೇಂದ್ರ ಮಾಲೆ
ಗುಣಭೃತ್ ಸಂತಾನಮ್ ಎಂದು ಈ ಪರಂಪರೆಯಿಂ
ವಿಶ್ರುತ ವೀರಸೇನ ಜಿನಸೇನಾಚಾರ್ಯ ಪಯರ್ಂತಮಾಗಿರೆ
ಬಂದ ಈ ಕಥೆ ಗುಣ್ಪುವೆತ್ತುದು
ಅವರು ಜ್ಞಾನಾರ್ಧಿ ಸಂಪನ್ನರ್ ಎಂದು ಇರದೆ
ಆಂ ದೃಷ್ಟನೆನ್
ಈ ಕಥಾಬ್ಧಿಯುಮನ್
“ಏನ್ ಈಸಲ್ ಮನಂದಂದೆನೋ”?’
(ಸರಳ ಆದಿಪುರಾಣ – ಆಶ್ವಾಸ 1, ಪದ್ಯ 34)
ಈ ಮೇಲೆ ಕಾಣಿಸಿದ ಪದ್ಯಗಳಲ್ಲಿನ ‘ಈಸುವೆಂ’ ಮತ್ತು ‘ಈಸಲ್ ಮನಂದಂದೆನೋ’ ಅನ್ನುವಾಗಿನ ಪಂಪನ ಒಲವು, ನಿಲುವುಗಳೇ ಕಾವ್ಯ ರಚನೆಯ ಹಿಂದೆ ಯಶಸ್ವಿಯಾಗಿ ಕೆಲಸ ಮಾಡಿದೆ ಅನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತಿದೆ. ಇದೆಲ್ಲವೂ ಪಂಪನು ತನ್ನ ಕಾಲದಲ್ಲಿ ನಿಂತು ಕಾಲಾತೀತವಾದ ಧ್ವನಿಯನ್ನು ಹೊರಡಿಸುವ ಮಹಾಭಾರತವನ್ನು ‘ಕ್ರಮವಿಪರ್ಯ’ವಾಗಿ ಕಾಣುವ ಅವನ ದೃಷ್ಟಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.
ಕವಿಯೊಬ್ಬ ತನಗೂ ಹಿಂದೆ ಬಂದ ವಸ್ತುವನ್ನು ತನ್ನ ಕಾವ್ಯದ ವಸ್ತುವಾಗಿ ಪಡೆದು ಕಟ್ಟುವಾಗ ಕೆಲವು ಮುಖ್ಯವಾದ ಕಾಣ್ಕೆಯ ಅಂಶಗಳನ್ನು ಬಳಸಿ ತನ್ನನ್ನೂ ತನ್ನ ಕಾವ್ಯವನ್ನು ತನ್ನ ಕಾಲದಲ್ಲಿ ಕಟ್ಟಿಕೊಳ್ಳುತ್ತಾ ಗಟ್ಟಿಯಾಗಿ ನಿಲ್ಲುತ್ತಾನೆ. ಈ ಸ್ಪಷ್ಟ ಗ್ರಹಿಕಾ ನಿಲುವುಗಳೇ ಅವನ ಕಾವ್ಯದ ಪಾತ್ರ, ಸಂದರ್ಭಗಳಲ್ಲಿನ ಸತ್ವವಾಗಿ ಸೂಕ್ಷ್ಮ ಕಲಾತ್ಮಕ ಅಭಿವ್ಯಕ್ತಿಯಾಗಿ ಅಲ್ಲಲ್ಲಿ ಗೋಚರಿಸಿ ಮೂಲಕ್ಕಿಂತ ವಿಭಿನ್ನವಾಗಿ ಯಶಸ್ವಿಯಾಗಿದೆ.
ಮೇಲಿನ ಅಂಶಗಳಲ್ಲಿ ಮೊದಲೇ ಹೇಳಿದಂತೆ ಹಿಡಿಂಬೆ ಮತ್ತು ಭೀಮನ ಮೊದಲ ಭೇಟಿಯ ಸಂದರ್ಭವೂ ಮುಖ್ಯವಾದುದು. ಒಂದು ಪರಂಪರಾಗಿತ ವಿವಾಹ ಪದ್ಧತಿಯಲ್ಲಿನ ಕ್ರಮವನ್ನು ಪಲ್ಲಟಗೊಳಿಸಿ ಕಟ್ಟಿರುವುದು ಮತ್ತು ಅದರಲ್ಲಿ ಹೊರಡಿಸಿರುವ ಭಾವ ಮತ್ತು ಧ್ವನಿಪೂರ್ಣ ತೀವ್ರತೆಯ ಅಭಿವ್ಯಕ್ತಿ ಕ್ರಮದಿಂದ.
ಭೀಮ ಅಳುವುದು ಬಹಳ ಮುಖ್ಯವಾದ ವಿಷಯ. ನಮಗೆಲ್ಲಾ ತಿಳಿದಿರುವಂತೆ ವಸ್ತ್ರಾಪಹರಣದ ಸಂದರ್ಭ, ಕೀಚಕ ವಧೆ ಇಂತಹಾ ಸಂದರ್ಭಗಳಲ್ಲಿನ ಭೀಮನ ವರ್ತನೆ ಕಾವ್ಯದ ಓದಿನಲ್ಲಿ ಬೆರಗಾಗಿಸುತ್ತದೆ. ಅಲ್ಲೆಲ್ಲಾ ರೌದ್ರ ಭಯಾನಕಗಳ ಪ್ರತಿರೂಪವಾಗಿ ನಿಲ್ಲುವವನು, ಸೌಗಂಧಿಕಾ ಕಮಲಹರಣದಲ್ಲಿಯಂತೂ ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲೆ ಅನ್ನುವಷ್ಟು ತೀವ್ರ ಭಾವನಾತ್ಮಕವಾಗಿ ಚಿತ್ರಿತವಾಗಿದ್ದಾನೆ. ಹಾಗೇ ಈ ಹಿಡಿಂಬವನದಲ್ಲಿ ಅವನಂತೂ ಕಣ್ಣೀರಾಗಿ ನಿಲ್ಲುತ್ತಾನೆ. ಭರತ ವಂಶದವರಾದ ಇವರೆಲ್ಲರೂ ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದು ಕಾಡಿನಲ್ಲಿ ಮಲಗಿ, ಕ್ರೂರ ಮೃಗಗಳ ದನಿಗೆ ಎಚ್ಚರವಾಗುವ ಹಾಗಾಯಿತೇ ಅನ್ನುವಾಗಿನ ಅವನಸ್ಥಿತಿ ಎಂತವರನ್ನೂ ಬೆರಗಾಗಿಸುತ್ತದೆ.
ಭರತ ವಂಶದೊಳ್ ನೆಗೞ್ದ ಪಾಂಡುಂಗೆ ಪುಟ್ಟಿಯುಮ್
ಈ ಸಮಸ್ತ ಸಾಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುಮ್
ಈ ಮಹೋಗ್ರ ಕೇಸರಿ ಕರಿ ಕಂಠಗರ್ಜಿತ ಮಹಾಟವಿಯೊಳ್
ಮಱಕೆಂದಿ ನೀಮುಮೀ ಮರದಡಿಯೊಳ್
ಶಿವಾಶಿವ ರವಂಗಳಿನ್ ಎೞ್ಚಱುವಂತುಂಟಾದುದೇ
ಅಣ್ಣನ ಮಾತಿಗೆ ಒಪ್ಪಿ ಇವರನ್ನೆಲ್ಲಾ ಕೊಂದು ತಿನ್ನಲು ಬಂದವಳು ಬರುವಾಗಲೇ ಇವನನ್ನು ನೋಡಿ ಮೋಹಕ್ಕೆ ಒಳಗಾಗುತ್ತಾಳೆ. ಬರುವಾಗಲಂತೂ
ಆಗಸದೊಳಗೊಂದು
ಮಹೀಭಾಗದೊಳಿನ್ನೊಂದು ದಾಡೆಯಾಗಿರೆ
ಮನದಿಂ ಬೇಗಂ ಬರ್ಪಳ
ದಿಟ್ಟಿಗಳಾಗಳೆ ಪತ್ತಿದವು ಗೆಂಟಱೊಳ್ ಮಾರುತಿಯಂ ( 3.13 )
ಬರುವಾಗಲೇ ದೃಷ್ಟಿ ಭೀಮನ ಮೇಲೆ ಬಿದ್ದಿದೆ. ಬಿದ್ದ ತಕ್ಷಣ ಅವಳಲ್ಲಾದ ಬದಲಾವಣೆ “ಅಂತು ಒಂದಂಬುವೀಡಿನೆಡೆಯೊಳ್, ಕಾಮನಂಬುವೀಡಿಂಗೊಳಗಾಗಿ” ಅಣ್ಣ ಹೇಳಿದ ಮಾತನ್ನೂ ಕೇಳಿದಾಗ ಉದಿಸಿದ ಭಾವಕ್ಕಿಂತ ಅವನನ್ನು ನೋಡಿದಾಗ ಉಂಟಾದ ಭಾವ ಅತೀ ಹೆಚ್ಚಾಗುತ್ತಾದೆ. ರೌದ್ರತೆಯನ್ನು ಮನದಲ್ಲಿ ಇಟ್ಟುಕೊಂಡು ಬಂದವಳು ಶೃಂಗಾರಕ್ಕೆ ಮುಖಮಾಡುತ್ತಾಳೆ. ಇದೂ ಅದಾಗದೆ ಕೇವಲ ಮೊದಲ ನೋಟದಲ್ಲಿ ಘಟಿಸುವುದು. ಇದನ್ನೇ ಕಾವ್ಯ ಮೀಮಾಂಸಕರು “ಭಾವಶಬಲತೆ” ಎಂದು ಕರೆದಿರುವುದು. ಯಾವ ಭಾವ ವರ್ಣಿತವಾಗುತ್ತಿರುತ್ತದೋ ಅದನ್ನ ಮೀರಿ ಮತ್ತೊಂದು ಭಾವ ಉಂಟಾಗುವುದು ಅಷ್ಟು ಮನುಜನಲ್ಲಿ ಅಷ್ಟು ಸುಲಭವಲ್ಲ. ಒಂದಕ್ಕೆ ಮುಖಮಾಡಿದವನು ಆ ಭಾವ ತೀವ್ರತೆಯಲ್ಲಿಯೇ ತನ್ನೆಲ್ಲಾ ಪ್ರಜ್ಞೆಗೆ ಕೇಂದ್ರ ಮಾಡಿಕೊಂಡವನು ತತ್ ಕ್ಷಣದಲ್ಲಿ ಮತ್ತೊಂದಾಗಿ ಬದಲಾಗುತ್ತಾನೆಂದರೆ ಅದರ ಪ್ರಭಾವ ಮೊದಲಿನದಕ್ಕಿಂತ ಹೆಚ್ಚಿರಬೇಕು.
ಪುರುಷನು ಸ್ತ್ರೀಯನ್ನು ವಶಪಡಿಸಿಕೊಳ್ಳಲು ಅವಳಿಗೆ ಹತ್ತಿರವಾದವಳಿಂದ ಪುರುಷನ ಬಗೆಗೆ ಅವಳೆದುರು ಹೊಗಳಿಸಿ, ದೂತಿಯಿಂದ ಮಾತಿನಿಂದ ವಶವಾಗುವಂತೆ ಮಾಡುವುದು. ಹಾಗೆ ವಶವಾಗದ ಪಕ್ಷದಲ್ಲಿ ಅವಳನ್ನು ಹೊತ್ತೊಯ್ದು ವಿವಾಹವಾಗುವುದು ರಾಕ್ಷಸ ವಿವಾಹದ ಕ್ರಮ. ಆದರೆ ರಾಕ್ಷಸ ವಿವಾಹದ ಲಕ್ಷಣವು ಇಲ್ಲಿ ಅದಲು ಬದಲಾಗಿದೆ.
ಇಲ್ಲಿ ಆ ಭಾವ ಹೆಚ್ಚಾಗಲಿಕ್ಕೆ ಮಾತು, ಸಂವಾದ, ವಾಗ್ವಾದಗಳಿಗಿಂತ ನೋಟ ಒಂದೇ ಕಾರಣವಾಗಿ ನಿಲ್ಲುತ್ತದೆ. ಪಾತ್ರಗಳ ನಡೆ, ಮುಂದಿನ ಕಥೆಯ ನಡೆ ಇವೆಲ್ಲವೂ ಕಾವ್ಯ ಸಂದರ್ಭದಲ್ಲಿ ಬಹಳ ಮುಖ್ಯ ಅಲ್ಲವೇ. ಉತ್ತಮನಾದ ಕವಿ ಆ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಾನೆ. ಒಂದೇ ಸಾಲಿನಲ್ಲಿ ಭಾವಶಬಲತೆಯನ್ನು ತಂದು ಮುಂದಿನ ಮಾತೆಲ್ಲವೂ ಅವಳಲ್ಲಿ ಉಂಟಾದ ಎರಡನೆಯ ಭಾವದ ಹೊಡೆತಕ್ಕೆ ಸಿಕ್ಕು ಶರಣಾಗಿ ಬಂದ ಮಾತುಗಳೇ ಆಗಿದೆ.
ಮೊದಲು ಅಳುತ್ತಿದ್ದವನು ಅವಳನ್ನು ನೋಡಿದ ತಕ್ಷಣ ಬೆರಗಾಗುತ್ತಾನೆ.
ಖೇಚರಿಯೋ ಭೂಚರಿಯೊ ನಿಶಾಚರಿಯೋ
ರೂಪು ಬಣ್ಣಿಸಲ್ಕೆ
ಆಗರ್ಂ ಅವಾಗ್ಗೋಚರಮ್
ಈ ಕಾನನಮುಮ್ ಅಗೋಚರಮ್
ಇವಳಿಲ್ಲಿಗೇಕೆ ಬಂದಳೋ ಪೇೞಿಂ ( 3.14 )
ಎಂದ ತಕ್ಷಣ ಅವಳ ಮಾತು ಪ್ರಾರಂಭ – ಅಣ್ಣ ಹೇಳಿದುದು, ಕೊಲ್ಲುವುದು, ತಿನ್ನುವುದು ಈ ಎಲ್ಲಾ ಕಾರ್ಯಗಳನ್ನು ಮರೆತು ಒಮ್ಮೆಲೆ ಮಾತು ಪ್ರಾರಂಭ ಮಾಡುತ್ತಾಳೆ. ಅವಳು ಅವನೆಡೆಗೆ ಬರುವುದನ್ನು ಪಂಪ ಹೇಳುವಾಗ ಬಳಸುವ ಒಂದು ಪ್ರತಿಮೆ ನೋಡಿ “ಆಕೆ ಮದನನ ಕಯ್ಯಿಂ ಬದುರ್ಂಕಿದ ಅರಲಂಬು ಬಪರ್ಂತೆ ಬಂದು, ಭೀಮಸೇನನ ಕೆಲದೊಳ್ ನಿಂದಿರೆ” ಪಕ್ಕದಲ್ಲಿ ನಿಂತು ಬಿಡುತ್ತಾಳೆ. ಅಂಬು ತನ್ನ ಕಾರ್ಯ ಪ್ರಾರಂಭ ಮಾಡಿದ ಸ್ಥಾನ ಮತ್ತು ಅದರ ಕೊನೆಯನ್ನು ಇಷ್ಟು ಅದ್ಭುತವಾಗಿ ಕಾರಣ ಸಹಿತ ಹೇಳುವುದು ಬಹಳ ಕಷ್ಟದ ವಿಷಯವೇ ಸರಿ. ಕಾರ್ಯ ಕಾರಣದ ಸಂಬಂಧದ ಈ ನಡೆಯಲ್ಲಿ ಅವಳಿಗೆ ಪ್ರಾರಂಭ ಮತ್ತು ಅದರ ಗಮ್ಯವಷ್ಟೇ ತಿಳಿದಿರುವುದು, ಉಳಿದೆಲ್ಲವೂ ಅಂಬು ನಾಟಿದುದರ ಪರಿಣಾಮದ ಮಾತುಗಳೇ. ನಂತರ ಒಂದು ಸಂವಾದವನ್ನು ವಚನದಲ್ಲಿ ಪಂಪ ಕೊಡುತ್ತಾನೆ. ಕೇವಲ ಸಂವಾದವಷ್ಟೇ ಅಲ್ಲ ಅವನ ಮನಸ್ಸಿನಲ್ಲಿ ಆದ ಭಾವವನ್ನೂ ತಿಳಿಸುತ್ತಾ ಸಂವಾದಕ್ಕೆ ಮುಂದಾಗುತ್ತಾನೆ. ಅದನ್ನು ಸಂವಾದದೋಪಾದಿಯಲ್ಲೆ ಬಿಡಿಸಿಡುವೆ.
(ಮದನನ ಕಯ್ಯಿಂ ಬದುರ್ಂಕಿದ ಅರಲಂಬು ಬಪರ್ಂತೆ ಬಂದು, ಭೀಮಸೇನನ ಕೆಲದೊಳ್ ನಿಂದಿರೆ, ಕಂಡು)
ಭೀಮ – ನೀನಾರ್ಗೆ ? ಏನೆಂಬೆ ? ಏಕೆ ಬಂದೆ ?
ಹಿಡಿಂಬೆ – ಎರಡೆಯದೆ ಒಲ್ದು ನಿನ್ನೊಳ್ ಎರಡಂ ನುಡಿಯಲಾಗದು ಎನಗೆ, ಈ ವನಂ ಹಿಡಿಂಬವನಮೆಂಬುದು, ಇದನಾಳ್ವಂ ಹಿಡಿಂಬನೆಂಬ ಅಸುರನ್ ಎಮ್ಮಣ್ಣನ್, ಆನುಂ ಹಿಡಿಂಬೆಯೆನೆಂಬೆನ್,
ಇಷ್ಟಾದ ಮೇಲೆ ಸುಮ್ಮನಿರದೆ ಮತ್ತೆ ಮಾತು ಪ್ರಾರಂಭ ಮಾಡುತ್ತಾಳೆ, ತಾ ಬಂದ ಕಾರಣವನ್ನು ಸ್ಪಷ್ಟವಾಗಿ ಹೇಳುತ್ತಾಳೆ.
ಪಿಡಿದು ಆಡಿಸಿ ತಿನಲ್ ಬಂದಿರ್ದೆಡೆಯೊಳ್
ನಿನಗಾಗಿ ಮದನನ್ ಎನ್ನನೆ ತಿನೆ
ಕೇಳ್ ಪಡೆನೋಡ ಬಂದವರಂ
ಗುಡಿವೆರಸಿದರೆಂಬುದಾಯ್ತ
ನಿನ್ನ ಎನ್ನ ಎಡೆಯೊಳ್ ( 3.15 )
ಇಲ್ಲಿನ ಮಾತಲ್ಲಿನ ಬಹಳ ತೀವ್ರತೆಯನ್ನು ಸ್ಪಷ್ಟತೆಯನ್ನೊಮ್ಮೆ ಗಮನಿಸಿ. ಅವನು ಒಂದೇ ಸಾಲಿನಲ್ಲಿ ಕೇಳಿದ ತಕ್ಷಣ ಅವಳೋ ಮೊದಲೇ ಭಾವತೀವ್ರತೆಗೆ ಸಿಕ್ಕವಳು. ತಾನು, ತನ್ನಣ್ಣ, ಅವಳನ್ನು ಕಳುಹಿಸಿದ ಕಾರ್ಯ, ಅವಳಲ್ಲಿ ಆದ ಭಾವ ಪಲ್ಲಟ, ಅದಕ್ಕೆ ಕಾರಣ ಎಲ್ಲವನ್ನೂ ಬಿಡಿಸಿ ಹೇಳಲು ಪ್ರಾರಂಭ ಮಾಡಿಬಿಡುತ್ತಾಳೆ. ಕೊನೆಗೆ ಒಂದು ಗಾದೆಯನ್ನೂ ಬಳಸುತ್ತಾಳೆ; “ಪಡೆನೋಡ ಬಂದವರಂ ಗುಡಿವೆರಸಿದರೆಂಬುದಾಯ್ತ”. ‘ಯುದ್ಧಕ್ಕೆ ಹೊರಟ ಸೈನ್ಯವನ್ನು ನೋಡಲು ಬಂದವರ ಕೈಗೆ ಅಲ್ಲಿನ ಭಾವುಟಗಳನ್ನು ಹೊರಸಿದರು ಅನ್ನುತ್ತಾರಲ್ಲ ಹಾಗಾಗಿದೆ ನನ್ನ ಸ್ಥಿತಿ ನಿನ್ನ ನೋಡಿ’ ಅನ್ನುವುದು ಇಲ್ಲಿನ ಗಾದೆಯ ಅರ್ಥ. (ಪಂಪ ಭಾರತ ದೀಪಿಕೆ – ಆಚಾರ್ಯ ಡಿ ಎಲ್ ನರಸಿಂಹಾಚಾರ್ಯ)
ಭೀಮ ಒಂದಿಡೀ ಸೈನ್ಯದಷ್ಟು ಅವಳ ಕಣ್ಣಿಗೆ ಕಂಡಿದ್ದವನು. ಕಾಮನೆಂಬುವವನು ನೋಡಲಿಕ್ಕೆ ಬಂದ ಇವಳ ಕೈಗೆ ಬಾವುಟ ಕೊಟ್ಟು ಕಳುಹಿಸಿದ. ಇವನ ಕಣ್ಣ ನೋಟಕ್ಕೆ ಸಿಕ್ಕು ಬಾವುಟ ತನ್ನ ಹಾರಾಟವನ್ನು ಪ್ರಾರಂಭ ಮಾಡಿದೆ. ಆ ಹಾರಾಟದ ಪ್ರಭಾವವೇ ಇವಳ ಮಾತುಗಳು. (ಇಲ್ಲೊಂದು ವಿಶೇಷ ಗಮನಿಸಿ ಅವಳು ಆಗಸದ ಮಾರ್ಗದಲ್ಲಿ ಬಂದವಳು, ಆಗಸದಲ್ಲಿ ಒಂದು ತುದಿ ಭೂಮಿಯಲ್ಲಿ ಒಂದು ಬಾಯ ತೆರೆದು ಬಂದವಳು. ಬಾವುಟವೂ ಹಾಗೆ ಅಲ್ಲವೇ. ಅದರ ಸ್ಥಾನ ನೆಲ ಆದರೆ ಹಾರಾಟ ಆಗಸದಲ್ಲಿ) ಇವಳ ಭಾವದ ಮೂಲ ಗಮನ ಸ್ಥಾನ ನಿರ್ದೇಶನ ಮಾಡುತ್ತಿದೆ ಆ ಬಾವುಟ. ಅದಲ್ಲದೆ ಆ ಕಾರ್ಯ ಪಂಪನ ಕಾಲದಲ್ಲಿ ಚಲಾವಣೆಯಲ್ಲಿದ್ದುದೇ ಆಗಿದೆ. ಸಮಕಾಲೀನ ಸಮಾಜವನ್ನು ಗಮನಿಸುತ್ತಲೇ ಕಥೆಗೆ ಅದನ್ನು ತಂದಿಟ್ಟು ಬೆಳೆಸುವ ಪಂಪನ ಪ್ರಜ್ಞೆಯೇ ಬೆರಗಾಗಿಸುತ್ತದೆ. ತನ್ನ ಕಾವ್ಯದ ಮೂಲಕ ಕಾಲದ ಸತ್ಯಕ್ಕೆ ಮುಖ ಮಾಡುವುದು ಎಷ್ಟು ಸುಲಭದ ಕಾರ್ಯ ಗಮನಿಸುವವನಿಗೆ ಅನ್ನುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಇಷ್ಟಾದ ನಂತರ ಸುಮ್ಮನಿರದೆ ಮತ್ತೆ ನಾನು ಪ್ರಶ್ನೆಗಳನ್ನು ಭೀಮನಿಗೆ ಹಾಕುತ್ತಾಳೆ.
ಹಿಡಿಂಬೆ – ಈ ಮಱಿಲುಂದಿದರ್ ಆರ್ಗೆ ?
ಭೀಮ – ಎನ್ನ ತಾಯ್ವರುಮ್, ಒಡವುಟ್ಟಿದರ್
ಹಿಡಿಂಬೆ – ( ಎಂದೊಡೆ – ಎಂದ ತಕ್ಷಣ ) ಹಿಡಿಂಬಂ ಬಂದು ಅವರಂ ತಿಂದೊಡೆ ತಿನ್ಗೆ, ನೀನೆನ್ನ ಪೆಗಲನೇನು, ಗಗನ ತಳಕ್ಕೆ ಒಯ್ವೆನ್
ಭೀಮ – ( ಎನೆ ಭೀಮಸೇನನ್ ಆ ಮಾಂತಿಗೆ ಮುಗುಳ್ನಗೆ ನಕ್ಕು )
ಇಲ್ಲಿಗೆ ಅವಳ ಮಾತು ಮುಗಿದು, ತನಗೆ ತನ್ನ ಕುಟುಂಬಕ್ಕೆ ತೊಂದರೆ ಕೊಟ್ಟರೆ ಹಿಡಿಂಬನನ್ನೂ ಕೊಲ್ಲುವೆ ಎಂದು ಸ್ಪಷ್ಟ ನಿರ್ಣಯ ಮಾಡುತ್ತಾನೆ. ಇದಾದ ನಂತರ ಅವರಿಬ್ಬರ ಮಲ್ಲಯುದ್ಧ, ಹಿಡಿಂಬನ ಸೋಲು ಮತ್ತು ಸಾವು ಸಂಭವಿಸುತ್ತದೆ.
ಈ ಸಂಭಾಷಣೆಯಲ್ಲಿನ ಒಂದು ಪದ “ಮುಗುಳ್ನಗೆ ನಕ್ಕು” ವನ್ನು ಗಮನಿಸಿ. ಹಾಗೇ ಶಂತನು ಮತ್ತು ಸತ್ಯವತಿಯರ ಸಂದರ್ಭದ ಬಹು ಚರ್ಚಿತ ವೃತ್ತದಲ್ಲಿನ “ಮೆಲ್ಲನೆ ನಾಣ್ಚಿ” (1.70) ಯನ್ನು ಗಮನಿಸಿ. ಗಂಡು ಹೆಣ್ಣಿನ ಸ್ಥಾನ ಮಾತ್ರ ಬದಲಾಗಿದೆ. ಕೊಡುವ ಉತ್ತರವು ಒಂದೇ ಆಗಿದೆ. ಆದರೆ ಪಂಪ ತನ್ನ ಕಾಲವನ್ನು ಮತ್ತು ಮಹಾಭಾರತ ಕೃತಿಯನ್ನು ಗಮನಿಸಿರುವ ಕ್ರಮವಿದೆಯಲ್ಲ ಅದು ಬೆರಗಾಗಿಸುತ್ತದೆ. ಸತ್ಯವತಿ ಶಂತನುವಿಗೆ ಒಂದೇ ಮಾತು ಹೇಳುವುದು “ಬೇಡುವೊಡೆ ನೀವೆಮ್ಮಯ್ಯನಂ ಬೇಡಿರೇ” ಆದರೆ ಅದಕ್ಕೂ ಮುಂಚಿನ ಒಂದು ಪದ ಕಾವ್ಯದಲ್ಲಿ ಕೊಕ್ಕೆಯ ಹಾಗೆ ಹಿಡಿದು ಮಿಲ್ಲಿಸುತ್ತದೆ “ತತ್ ಕನ್ಯಕೆ” ಆ ಪದ.
ಪಂಪ ತನ್ನ ಕಾವ್ಯದಲ್ಲಿ ಆ ಪದವನ್ನು ಬಳಸಿರುವುದು ಮಹಾಭಾರತದ ಅವನ ಗ್ರಹಿಕೆಯ ದಿಕ್ಕನೇ ಹಿಡಿದು ಸಾಕ್ಷೀಕರಿಸಿದಂತಿದೆ. ಇಲ್ಲೊಂದು ಸಣ್ಣ ವ್ಯಂಗ್ಯ, ಸತ್ಯ ಎಲ್ಲವೂ ಇದೆ. ಹಾಗೆಯೇ ಭೀಮನು ಇಲ್ಲಿ “ಮುಗುಳ್ನಗೆ” ನಗುತ್ತಾನೆ. ಇದು ಕಾಲಾತೀತವಾದ ಪ್ರೀತಿಯ ಸತ್ಯವನ್ನು ಬಗೆಗೆ ಹೇಳುತ್ತಿದೆ. ತತ್ ಕ್ಷಣದಲ್ಲಿ ಮುಖಾಮುಖಿಯಾದ ಒಂದು ಗಂಡು-ಹೆಣ್ಣುಗಳಲ್ಲಿ ಯಾರಾದರೂ ಒಬ್ಬರು ನೇರ ಮದುವೆಯ ವಿಷಯಕ್ಕೆ ಬಂದರೆ ಉತ್ತರ ಕೊಡದೆ ನಗುವುದಿದೆಯಲ್ಲ ಅದು ಎದುರಿನವರಿಗೆ ಉಂಟು ಮಾಡುವ ಭಾವ ಯಾವುದಾಗಿರಬಹದು? ಅಂತಹಾ ಭಾವಕ್ಕೆ ಸಿಕ್ಕು ಅಣ್ಣನ ಅಂತ್ಯವನ್ನೂ ಗಮನಿಸಿಯೂ ಗಮನಿಸದವಳ ಹಾಗೆ ಸುಮ್ಮನಾದವಳು ಅನಿಸುತ್ತದೆ.
ಹೀಗೆ ಒಂದು ಸಣ್ಣ ಘಟನೆ ನಾಲಕ್ಕು ವೃತ್ತ ಒಂದಷ್ಟು ವಚನದಿಂದ ಕೂಡಿದ್ದು ಬಹುದೊಡ್ಡ ಸೂಕ್ಷ್ಮತೆ ಮತ್ತು ಸತ್ಯವನ್ನು ತನ್ನೊಳಗೆ ಅಡಗಿಸಿಟ್ಟುಕೊಂಡು ಇಂದಿಗೂ ಓದಿಗೆ ಹಚ್ಚುತ್ತಿದೆ. ರೌದ್ರದಿಂದ ಪ್ರಾರಂಭಗೊಂಡು ಶೃಂಗಾರಕ್ಕೆ ಬಂದು ನಿಂತು, ಅಲ್ಲಿಂದ ಮತ್ತೆ ರೌದ್ರಕ್ಕೆ ಚಲನೆ ಪಡೆದು ನಂತರ ಮತ್ತೆ ಸಂಭೋಗ ಶೃಂಗಾರಕ್ಕೆ ಬಂದು ನಿಲ್ಲುತ್ತದೆ. ಹೀಗೊಂದು ರಸಗಳ ದೊಡ್ಡ ಚಲನೆಯನ್ನು ಬಹಳ ವೇಗವಾಗಿ ಮತ್ತಷ್ಟು ತೀವ್ರವಾಗಿ ಕಡಿಮೆ ಪದಗಳಲ್ಲಿ ಕಟ್ಟಿಕೊಡುವ ಪಂಪನ ಸೃಜನ ಶಕ್ತಿ ನಿಜವಾಗಿಯೂ ಮಹತ್ತರವಾದದ್ದು. ಹೀಗೆ ಭಾವದಿಂದ ಭಾವಕ್ಕೆ, ರಸದಿಂದ ರಸಕ್ಕೆ ವೇಗವಾಗಿ ಚಲನೆ ಪಡೆದರೂ ಅದೆಲ್ಲೂ ಓದುಗನಿಗೆ ಹಿಂಸೆ ಅನಿಸುವುದಿಲ್ಲ, ಕಥೆ, ಸಂವಿಧಾನ, ಕವಿಯ ಉದ್ದೇಶ ಒಂದಕ್ಕೊಂದು ಸಾಯುಜ್ಯ ಸಂಬಂಧದಿಂದ ಯಶಸ್ವಿಯಾಗುತ್ತದೆ.
ಆರ್ . ದಿಲೀಪ್ ಕುಮಾರ್ ಮೂಲತಃ ಚಾಮರಾಜನಗರದವರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಕಾವ್ಯ ರಚನೆ ಮತ್ತು ಭಾಷಾಂತರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.