(ನಿಝಾರ್ ಖಬ್ಬಾನಿ)

ಭಯೋತ್ಪಾದನೆಯೊಂದಿಗೆ ನಾನು….

ನಾವು ಭಯೋತ್ಪಾದನೆಯ ಶಾಪಕ್ಕೆ ತುತ್ತಾಗುವೆವು:
ಒಂದು ಗುಲಾಬಿ,
ಒಬ್ಬ ಮಹಿಳೆಯನ್ನು ಸಂರಕ್ಷಿಸಿದರೆ,
ತೀವ್ರತರ ಪದ್ಯ ಬರೆದರೆ,

ಆಗಸದ ನೀಲವರ್ಣ
ಮತ್ತು ಸರ್ವಾಧಿಕಾರವ ಹೊರತುಪಡಿಸಿ ಇನ್ನೇನೂ ಉಳಿದುಕೊಂಡಿಲ್ಲ.
ನೀರಿಲ್ಲ
ಗಾಳಿಯಿಲ್ಲ
ಒಂಟಿ ಡೇರೆ,
ಒಂಟೆಯೂ ಇಲ್ಲ
ಕನಿಷ್ಠಪಕ್ಷ ಒಂದು ಕಪ್ಪು
ಅರೇಬಿಕಾ ಕಾಫಿಯಾದರೂ..!

ನಾವು ಭಯೋತ್ಪಾನೆಯ ಶಾಪಕ್ಕೆ ತುತ್ತಾಗುವೆವು:
ಒಂದು ವೇಳೆ ಧೈರ್ಯ ಮಾಡಿ
‘ಬಲ್ಕಿಸ್’ಳ ಕೂದಲು,
‘ಮೇಜನ್’ನ ತುಟಿಗಳ
ಪರವಾಗಿ ನಿಂತೆವೋ;
‘ಹಿಂಡ್’, ‘ಲುಬ್ನಾ’, ‘ರಬಾಬ್’
(ಸಿರಿಯನ್ ಮಹಿಳೆಯರ ಹೆಸರುಗಳು)….
ಸುರಮಾದ ತೊರೆಗಳು
ಅವರ ರೆಪ್ಪೆಗಳಿಂದ
ಬಹಿರಂಗ ಕವಿತೆಯ ಸಾಲುಗಳಂತೆ
ಧುಮುಕುತ್ತವೆ…

ನೀನು ನನ್ನಲ್ಲಿ ಕಾಣಲಿಕ್ಕಿಲ್ಲ
ಗುಟ್ಟಾದ ಕವಿತೆಗಳು,
ಗುಪ್ತ ಸಂಕೇತಗಳು,
ಅಥವ ಬಾಗಿಲ ಹಿಂದೆ ಅಡಗಿಸಿಟ್ಟ ಪುಸ್ತಕಗಳು.
ನನ್ನಲ್ಲಿ ಒಂದೂ ಪದ್ಯ ಇಲ್ಲ
ಗಲ್ಲಿಗಳಲ್ಲಿ ಬುರ್ಖಾ ತೊಟ್ಟು ತಿರುಗಲು

ನಾವು ಭಯೋತ್ಪಾನೆಯ ಶಾಪಕ್ಕೆ ತುತ್ತಾಗುವೆವು:
ನಮ್ಮ ತಾಯ್ನೆಲದ ಚಿಂದಿಗೊಂಡ ನಿಶ್ಶಕ್ತ
ಅವಶೇಷಗಳ ಕುರಿತು ಬರೆದರೆ…
ವಿಳಾಸವಿಲ್ಲದ ತಾಯ್ನೆಲ
ಹೆಸರುಗಳೇ ಇಲ್ಲದ ಒಂದು ದೇಶ ನನ್ನದು

(ಸಿರಿಯಾದ ಸೂಕ್ಷ್ಮ ಸಂವೇದನಾತ್ಮಕ ಕವಿ ‘ನಿಝಾರ್ ಖಬ್ಬಾನಿ’ 1981ರ ಡಿಸೆಂಬರ್ 15 ರಂದು ರಸ್ತೆಮಧ್ಯೆ ನಡೆದ ಬಾಂಬ್ ದಾಳಿಯಲ್ಲಿ ಶಿಕ್ಷಕಿಯಾಗಿದ್ದ ತನ್ನ ಹೆಂಡತಿ ‘ಬಾಲ್ಕಿಸ್’ಳನ್ನು ಕಳೆದುಕೊಂಡ ದುಃಖದಲ್ಲಿ ಬರೆದ ಸುದೀರ್ಘವಾದ ಕವಿತೆಯ ತುಣುಕು…)
ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ

 

(ಚಿತ್ರ: ವ್ಯಾನ್ ಗಾಗ್)