ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು. ನನಗೆ ತುಂಬ ಭಯವಾಯಿತು, ಅವ್ವ ಮತ್ತೆ ಬಡಿಯುತ್ತಾಳೆಂದು.
 ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ

ಅಪ್ಪನ ತಂಗಿ ಜಯತ್ತೆ ಎಂದರೆ ಜೀವ ನನಗೆ. ಅವಳ ಬಾಯಲ್ಲಿ ಕಾಮನಬಿಲ್ಲಿತ್ತು. ಅವಳು ಬಾಯಲ್ಲಿ ನೀರು ತುಂಬಿಕೊಂಡು ಬಿಸಿಲಿಗೆ ಮುಖ ಮಾಡಿ `ಫೂ…’ ಮಾಡಿದಾಗ ಅದು ಮೂಡುತ್ತಿತ್ತು. ನಾನಾಗ ಚಪ್ಪಾಳೆ ತಟ್ಟುತ್ತಿದ್ದೆ. `ಜಯತ್ತೆ ಫೂ… ಜಯತ್ತೆ ಫೂ…’ ಎಂದು ದಿನವೂ ದುಂಬಾಲು ಬೀಳುತ್ತಿದ್ದೆ. ನಾನೂ ಅವಳಂತೆ ಫೂ… ಮಾಡಿ ಕಾಮನಬಿಲ್ಲು ಮೂಡಿಸಲು ಪ್ರಯತ್ನಿಸುತ್ತಿದ್ದೆ. ಆದರದು ಮೂಡುತ್ತಲೇ ಇರಲಿಲ್ಲ. ಪ್ರಯತ್ನಿಸಿ ಪ್ರಯತ್ನಿಸಿ ನಿರಾಶನಾಗುತ್ತಿದ್ದೆ. ಕಟ್ಟೆಗೆ ಹತ್ತಿ ಮುಖ ದಪ್ಪ ಮಾಡಿಕೊಂಡು ಗಲ್ಲಕ್ಕೆ ಮುಖ ಹಚ್ಚಿ ಕೂರುತ್ತಿದ್ದೆ. ಆಗವಳು `ಅಯ್ಯಾ ನನ್ ರಾಜ್ಕುಮಾರ… ಮಕ ಉಮ್ ಮಾಡಿಕ್ಯಂಡು ಕುಂತ್ರ ಎಷ್ಟ್ ಛಂದ ಕಾಣ್ತೀ’ ಎಂದು ಕಪಾಳ ಗಿಂಡಿ ಗಂಜಿಗುಂಜಿ ಮಾಡುತ್ತಿದ್ದಳು. `ನಿನ್ ಬಾಯಾಗಿನ್ನೂ ಕಾಮನ್‌ಬಿಲ್ ಬೆಳೆದಿಲ್ಲ. ನನ್ನಷ್ಟು ದೊಡ್ಡ ಆಗು. ಅವಾಗ ಮೂಡ್ತೇತಿ’ ಎಂದು ಸಮಾಧಾನ ಮಾಡುತ್ತಿದ್ದಳು.

ಜಯತ್ತೆಗೆ ನಾನು ನಿಂತಲ್ಲಿಂದಲೇ ನಿಲುಕುತ್ತಿದ್ದೆ. ಅಷ್ಟು ಎತ್ತರ ಅವಳು. ಅವಳ ಮುಂದೆ ನಿಂತಾಗ ಅವ್ವ ಆಕೆಯ ತಂಗಿಯಂತೆ ಕಾಣುತ್ತಿದ್ದಳು.

ಹೊಲದಿಂದ ಬಂದಾಗ ಅಂಗಳ ಜೋಗಾಗಿದ್ದುದು ಕಂಡರೆ ಅವ್ವನಿಗೆ ಗೊತ್ತಾಗಿಬಿಡುತ್ತಿತ್ತು ನಾವಿಬ್ಬರು ಫೂ… ಆಟ ಆಡಿದ್ದೀವಿ ಅಂತ. ಗೊತ್ತಾದರೆ ಸಾಕು `ಏಯ್ ದಳಗೇಡಿ. ಲಗ್ನ ಆಗಿದ್ರ ಆರಡದು ಯೋಳಕ್ ಸಜ್ಜಾಗರ‍್ತಿದ್ದಿ. ಸಣ್ಣುಡ್ರು ಕುಡಾ ಆಡದ್ ಬುಡ್ಬಾö್ಯಡ ಮುದೇಕ್ಯಾದ್ರು. ಹಲ್ಬೀರಿ ತಂದೊಯ್ದು’ ಅಂತೆಲ್ಲ ಜಯತ್ತೆಯನ್ನು ಹಂಗಿಸಲಿಕ್ಕೆ ಶುರು ಮಾಡುತ್ತಿದ್ದಳು. ಹಾಗಾಗಿ ಜಯತ್ತೆ ಫೂ… ಮಾಡಿದ ಜಾಗ ಹಸಿ ಕಾಣದಂತೆ ಚಳ್ಳು ಬಾರಿಗೆಯಿಂದ ಗುಡಿಸುತ್ತಿದ್ದಳು. ಆಗ ಹುಡಿಮಣ್ಣು ಹೊಗೆಯಂತೆ ಮೇಲೇಳುತ್ತಿತ್ತು. ನನಗೆ ಹುಡಿಮಣ್ಣಿನ ಹೊಗೆಯೆಂದರೆ ಬಹಳ ಇಷ್ಟ. ಬೊಗಸೆಯಿಂದ ಆ ಮಣ್ಣಿನ ಹೊಗೆಯನ್ನು ಹಿಡಿದಂತೆ ಮಾಡಿ ಬಂಗಿ ಸೇದಿದಂತೆ ಮಾಡುತ್ತಿದ್ದೆ. ಆಗ ಅತ್ತೆ ಸಿಟ್ಟಿನಿಂದ `ಏಯ್ ಕಪಿಯಂತದ’ ಎಂದು ಕೈಗೆ ಚಟ್ ಎಂದು ಬಡಿಯುತ್ತಿದ್ದಳು. ಆಗ ನನ್ನ ಮುಖ ಮತ್ತೆ ಉಮ್ ಆಗುತ್ತಿತ್ತು. ಕಟ್ಟೆ ಹತ್ತಿ ಚಕ್ಕಳ ಮಕ್ಕಳ ಹಾಕಿಕೊಂಡು ಕುಂತುಬಿಡುತ್ತಿದ್ದೆ. ಆಕೆ ಕಸಬರಿಗೆಯನ್ನು ಕಟ್ಟೆಯ ಗುಣೇವಿನೊಳಗಿಟ್ಟು, ಹೂಜಿ ನೀರಲ್ಲಿ ಕೈತೊಳೆದುಕೊಂಡು, ಲಂಗಕ್ಕೆ ಕೈ ಒರೆಸಿಕೊಳ್ಳುತ್ತ ನನ್ನತ್ತ ಬರುತ್ತಿದ್ದಳು. ನಾನು ಮತ್ತಷ್ಟು ಮುಖ ದಪ್ಪ ಮಾಡುತ್ತಿದ್ದೆ. ಮುಖ ಹಿಡಿದು `ಮಣ್ಣಿನ ಹೊಗೆ ಕುಡುದ್ರ… ಹೊಟ್ಯಾಗ ಜಂತು ಆಗ್ತಾವು…’ ಎನ್ನುತ್ತಿದ್ದಳು. ಇನ್ನೂ ಹಸಿಯಿರುತ್ತಿದ್ದ ಅವಳ ಕೈಗಳಲ್ಲಿ ಹುಡಿಯ ಪರಿಮಳ ಉಳಿದಿರುತ್ತಿತ್ತು. ನಾನಂತು ಅವಳು ನನ್ನ ಹಣೆ, ಕಪಾಳಗಳನ್ನು ಸವರಿ ರಮಿಸುವುದಕ್ಕಾಗೇ ಕಾಯುತ್ತಿರುತ್ತಿದ್ದೆ.

ಆದರೆ ಒಮ್ಮೊಮ್ಮೆ ಅವಳೆಷ್ಟೇ ಮುದ್ದು ಮಾಡಿದರೂ ಬಿಗುಮಾನ ಕಡಿಮೆಯಾಗುತ್ತಿರಲಿಲ್ಲ. ಮತ್ತಷ್ಟು ಮತ್ತಷ್ಟು ಹಠ ಮಾಡಬೇಕು ಅನ್ನಿಸುತ್ತಿತ್ತು. ಅವಳು `ತಪ್ಪಾತು ನನಪ್ಪಾ…’ ಅಂತ ಕ್ಷಮೆ ಕೇಳಿದರೂ ಇಲ್ಲ, `ಕಾಲಿಗೆ ಬೀಳ್ಯನು ಯಜ್ಮಾನಾ’ ಅಂತ ಬೇಡಿಕೊಂಡರೂ ಇಲ್ಲ. `ನೀ ಹೆಂಗ್ ಬಡದೀ ನನ್ನಾ’ ಎಂದು ಒಳ್ಳೆಮುಳ್ಳೆ ಅಂದಿದ್ದೇ ಅಂದು ಅವಳ ತಲೆಚಿಟ್ಟು ಹಿಡಿಸುತ್ತಿದ್ದೆ. `ಈಗ ನಿನ್ ಸಿಟ್ಟು ಹೋಗಾಕ ಏನ್ ಮಾಡ್ಲೇಳು?’ ಅಂತ ಕೇಳಿದರೆ, `ಏನೂ ಬ್ಯಾಡ. ಸುಮ್ ಹೋಗತ್ತಾಗ’ ಎಂದು ಕೈಬೀಸುತ್ತಿದ್ದೆ. ಆಗಂತು ಅವಳಿಗೆ ನನ್ನ ಕೊಂದು ಹಾಕುವಷ್ಟು ಸಿಟ್ಟು ಬಂದಿರುತ್ತಿತ್ತು. ಕಣ್ಣು ಕೆಂಪು ಹೊಳೆಯಾಗುತ್ತಿದ್ದವು. ಸರಸರ ಮನೆಯೊಳಕ್ಕೆ ಹೋಗುತ್ತಿದ್ದಳು. ಸ್ವಲ್ಪೊತ್ತು ಬಿಟ್ಟು ವಾಪಸ್ಸು ಬರುತ್ತಿದ್ದಳು. `ನೀ ಹಿಂಗಾ ಮಾಡಿದ್ರ ಬಾವಿಗ್ ಬಿದ್ದು ಸತ್ತೋಗ್ತೇನ್ ನೋಡ್’ ಎಂದು ಚೋಳಿಬಾವಿ ಕಡೆ ಕೈ ಮಾಡುತ್ತಿದ್ದಳು. ಆಗಲೇ ನನಗೆ ಸೋಲುವ ಮನಸಾಗುತ್ತಿತ್ತು. ನನಗೆ ಆ ಚೋಳಿಬಾವಿಯ ಹೆಸರು ಕೇಳಿದರೆ ಹೆದರಿಕೆ ಬರುತ್ತದೆ. ಅದರಲ್ಲಿ ನೀರಿನ ಬದಲಿಗೆ ಬರೀ ಚೋಳುಗಳೇ ಇವೆ ಎಂದು ಸಾಲೆಯಲ್ಲಿ ನನ್ನ ಪಕ್ಕ ಕೂರುವ ಬಾಳ ಹೇಳುತ್ತಿದ್ದ. ನಾನಂತು ಆ ಬಾವಿ ಕಡೆಗೆ ಯಾವತ್ತೂ ಹೋಗಿಲ್ಲ. ಅಲ್ಲೆಲ್ಲಾ ಬೇಲಿ ಬೆಳೆದಿದೆ. ರಾತ್ರಿ ಹೊತ್ತು ದೆವ್ವಗಳು ಕೂರುವ ಉಂಚಿಗಿಡ ಬೇರೆ ಅಲ್ಲೇ ಇದೆ.

ಅತ್ತೆ `ಬಾವಿಗ್ ಬಿದ್ದು ಸಾಯ್ತೇನ್ ನೋಡ್’ ಎಂದಾಗ ಎದಿ ದಸಕ್ ಎನ್ನುತ್ತಿತ್ತು. ಆದರೂ ಸುಮ್ಮನಿದ್ದರೆ `ಖರೆ ಹೊಗ್ತೇನ್ ನೋಡು’ ಎಂದು ಮತ್ತೊಂದು ಎಚ್ಚರಿಕೆ ಕೊಡುತ್ತಿದ್ದಳು. ಆಗಲೂ ಜಗ್ಗದಿದ್ದರೆ ಮುಖ ತಿರುಗಿಸಿ ಹೊಂಟೇಬಿಡುತ್ತಿದ್ದಳು. ನಾನಾಗ ` ನೀ ಫೂ ಮಾಡು ಇನ್ನೊಂದ್ಸಲ. ಹಂಗಾರ ಸಿಟ್ ಹೊಗ್ತೇತಿ ನಂದು’ ಎಂದು ಕೂಗುತ್ತಿದ್ದೆ. ` ನಿಂಗೊಳ್ಳೆ ಚಾಳಿ ಬಿದ್ದೈತಿ.. ಫೂ ಫೂ’ ಎಂದು ಬಯ್ಯುತ್ತ ನನ್ನ ಕಡೆ ಬರುತ್ತಿದ್ದಳು. ಬಂದು ಮುಖ ಕೆಂಪಗಾಗುವಂತೆ ಗಿಂಡಿಬಿಡುತ್ತಿದ್ದಳು.

ಅಪ್ಪನಿಗೆ ಯಾವ ಕಾರಣಕ್ಕೆ ಸಿಟ್ಟು ಬಂದರೂ ಜಯತ್ತೆಯ ಬೆನ್ನಿಗೆ ಗುದ್ದುತ್ತಿದ್ದ. ಅವ್ವ `ನಿನ್ನಿಂದನ ನಮ್ಮನಿ ನಾಶ್ನಾಗಿ ಹೋಗಾಕತ್ತೇತಿ. ಏನ್ ಶನಿ ಗಂಟ್‌ಬಿದ್ದಿ’ ಎಂದು ದಿನಕ್ಕೊಂದು ಸಲವಾದರೂ ಅತ್ತೆಗೆ ಬಯ್ಯುತ್ತಿದ್ದಳು. ನಾನೇನಾದರು ಅತ್ತೆಯ ಪರ ವಹಿಸಿದರೆ ನನಗೂ ಗುದ್ದು ಬೀಳುತ್ತಿದ್ದವು. ಅದೊಂದು ಸಲ ಅತ್ತೆಯನ್ನು ವಹಿಸಿಕೊಂಡು ಮಾತಾಡಿದ್ದಕ್ಕೆ ಅತ್ತೆಯ ಕೈಗೆ ಬರೆ ಬಿದ್ದಿತು. ಆಗಿನಿಂದ ನಾನು ತುಟಿ ಎರಡು ಮಾಡುತ್ತಿರಲಿಲ್ಲ. ಅತ್ತೆಯನ್ನು ಹೊಡೆಯುವಾಗ ನೆಲ್ಲಿನ ಚೀಲ ಒಟ್ಟುತ್ತಿದ್ದ ಕೋಣೆ ಸೇರಿ ಬಿಡುತ್ತಿದ್ದೆ.

ಅಪ್ಪ ಅವ್ವ ಅತ್ತೆಯನ್ನು ಯಾವಾಗಲೂ `ಜಯ್ಯಿ, ದಳಗೇಡಿ, ಇದಿಗೇಡಿ, ಹಲ್ಬೀರಿ’ ಅಂತ ಕೂಗುತ್ತಿದ್ದರು. ಯಾರಾದರೂ ಅತಿಥಿಗಳು ಬಂದಾಗ ಮಾತ್ರ `ಜಯಮ್ಮಾ’ ಎಂದು ಕರೆಯುತ್ತಿದ್ದರು. ಅವ್ವ ಯಾರಾದರು ಮನೆಗೆ ಬರುವವರಿದ್ದ ದಿನ ಮಾತ್ರ ಅತ್ತೆಗೆ ಜಾಂಬಳಿ ಕುಬಸ ಮತ್ತು ಹಸಿರು ಹೂವಿನ ಚಿತ್ರಗಳಿದ್ದ ಬಿಳಿ ಗಗ್ಗರಿ ಉಡಲಿಕ್ಕೆ ಕೊಡುತ್ತಿದ್ದಳು. ಉಳಿದ ದಿನಗಳಲ್ಲಿ ಅತ್ತೆ ಯಾವಾಗಲೂ ಹಳದಿ ಕುಬಸ ಮತ್ತು ನೀಲಿ ಗಗ್ಗರಿಯಲ್ಲಿರುತ್ತಿದ್ದಳು. ಅಪ್ಪ ಅತಿಥಿಗಳ ಮುಂದೆ `ಆಕಿ ಹಣಿಬರನ ಇಷ್ಟಾ ಅಂತ ಸುಮ್ಮಾಗಿಬಿಟ್ಟೇವ್ ನೋಡ್ರಿ…’ ಎನ್ನುತ್ತಿದ್ದ. ಅವ್ವ `ನಮ್ ಜಯಮ್ಮನ್ ಬಾಳೆ ಹಿಂಗ್ಯಾಕ್ ಮಾಡಿದ್ನೋ ಪರಮಾತ್ಮ’ ಎನ್ನುತ್ತ ಕಣ್ಣೀರು ತರಿಸಿಕೊಳ್ಳುತ್ತಿದ್ದಳು. ಮಾತಿಗೊಮ್ಮೆ `ಜಯಮ್ಮ ನಮ್ ಮಗಳಿದ್ದಂಗ’ ಎನ್ನುತ್ತಿದ್ದಳು. ಅತಿಥಿಗಳು ಹೋದದ್ದೆ `ಇದೊಂದು ಹಲ್ಬೀರಿ ಯಾವಾಗ್ಲೂ ಜತಿ ನಮಿಗೆ’ ಎಂದು ಅತ್ತೆಯ ಮುಖಕ್ಕೆ ಕೈ ತಿವಿಯುತ್ತಿದ್ದಳು.

ಅದೊಂದು ಆಯಿತ್ವಾರ ಬೈರಾಪುರದ ಸಂಬಂಧಿಕ ತಾತ ಒಬ್ಬರು ಮನೆಗೆ ಬಂದಿದ್ದರು. ಅವರಿಗೆ ಚಾ ಮಾಡಲಾಗಿತ್ತು. ಅವ್ವ ಅಪ್ಪ ಅವತ್ತು ಕೂಡ `ಜಯಮ್ಮ ನಮ್ ಮಗಳಿದ್ದಂಗ’ ಎಂದರು. ಅಂದು ಅತ್ತೆ ಅಡುಗೆಮನೆ ಕಂಬಕ್ಕೆ ಆತು ಕುಂತಿದ್ದಳು. ನಾನು ಆಕೆಯ ಪಕ್ಕ ಶಾಲೆಯಲ್ಲಿ ಕೂರುವಂತೆ ಕೈಕಟ್ಟಿ ಕೂತಿದ್ದೆ. ನಮ್ಮ ಎದುರಿನ ಗೋಡೆಗೆ ಅತುಕೊಂಡು ಅವ್ವ ಕೂತಿದ್ದಳು. ಅಪ್ಪ ಮತ್ತು ಬೈರಾಪುರದ ಅಜ್ಜ ಹೊರಗೆ ಬಂಕದಲ್ಲಿ ಕೂತು ಮಾತಾಡುತ್ತಿದ್ದರು. ನನಗೂ ಅತ್ತೆಗೂ ಅವರ ಮಾತು ಕೇಳುತ್ತಿದ್ದವು. ಆದರೆ ಅವರ ಮುಖ ಕಾಣುತ್ತಿರಲಿಲ್ಲ. ಬಾಗಿಲ ದಾರಿಗೆ ಕೂತಿದ್ದ ಅವ್ವನಿಗೆ ಮಾತ್ರ ಅವರಿಬ್ಬರು ಕಾಣುತ್ತಿದ್ದರು. ಅಜ್ಜ ಅವತ್ತು `ಜಯಮ್ಮ ಮಾಡಿದ್ ಚಾ ಅನ್ಸತ್ ಇದು. ಎಷ್ಟು ಕಮ್ಮಗಾಗೇತಿ’ ಎಂದು ಪ್ರಶಂಸಿಸಿದರು. `ಜಯಮ್ಮ ಜಗ್ಗು ಸೊರಗಿದಂಗ್ ಕಾಣ್ತಾಳ’ ಅಂತಲೂ ಅಂದರು. ಮುಂದುವರಿದು `ಕೈಗೇನ ಸುಟ್ ಗಾಯಾ ಆಗ್ಯೇತಲ್ಬೇ ಜಯಮ್ಮ?’ ಎಂದು ಪ್ರಶ್ನಿಸಿದರು. ಆಗ ಅವ್ವನ ಮುಖ ಗಂಟಾಯಿತು. ಅತ್ತೆ `ಮೊನ್ನೆ ಗಂಜಿ ಬೀಳಿಸ್ಕ್ಯಂಡ್ಯ ತಾತಾ…’ ಎಂದು ಕೂಗಿದಳು. `ಹೌದನು. ಹುಷಾರ್ ನಮವ್ವ…’ ಎಂದು ತಾತ ಹೊರಡಲನುವಾದರು. ಆಗ ಅವ್ವಯನ್ನುದ್ದೇಶಿಸಿ `ಶಿವಾ ನಡಿಸಿದಂಗಾಗ್ತೇತಿ… ಹೊಟ್ಟ್ಯಾಗುಟ್ಟಿದ ಮಗಳ ಅನ್ಕೊಂಡು ನೀನೇ ಜ್ವಾಪಾನು ಮಾಡು ತಾಯಿ’ ಎಂದು ನಿಟ್ಟುಸಿರು ಬಿಟ್ಟರು. ಅವರು ಹೊರಟ ಮೇಲೆ ಅವ್ವ, `ಚಂದ್ರಾ… ಅದು ಚಾ ವಾಟಗಾ ಐತ್ಯಲ ಹೊರಗ. ತಗೊಂಬಾ’ ಎಂದಳು. ನಾನು ತೆಗೆದುಕೊಂಡು ಬಂದು ಅವಳ ಕೈಗಿಟ್ಟೆ. ಅವ್ವ ಅದನ್ನು ಸಟ್ಟಂತ ಅತ್ತೆ ಕಡೆಗೆ ಬೀಸಿದಳು. ಮುಂದೆ ಬಂದಿದ್ದ ಅತ್ತೆಯ ಎರಡು ಹಲ್ಲುಗಳಿಗೆ ಅದು ಬಡಿದು ಟಕ್ ಎಂದು ಶಬ್ದ ಮಾಡಿತು. ಮೇಲ್ದುಟಿ ಹರಿದು ರಕ್ತ ಬರತೊಡಗಿತು. ಅತ್ತೆ ಗಗ್ಗರಿ ಬಾಯಿಗಿಟ್ಟುಕೊಂಡು ಅಳತೊಡಗಿದಳು.

ಆದರೆ ಅತ್ತೆ ಅವ್ವ ಅಪ್ಪರಿಗೆ ಎದುರಾಡುತ್ತಿರಲಿಲ್ಲ. ಅಳುವಷ್ಟು ಅತ್ತು ಸುಮ್ಮನಾಗುತ್ತಿದ್ದಳು. ಗಾಯವಾದರೆ ಅರಿಶಿಣ ಪುಡಿ ಹಚ್ಚಿಕೊಳ್ಳುತ್ತಿದ್ದಳು. ಅವ್ವ ಅಪ್ಪ ಊಟಕ್ಕೆ ಕರೆಯುವವರೆಗೆ ಸುಮ್ಮನೆ ಕೂತಿರುತ್ತಿದ್ದಳು. ಆಗಲೂ ಬರದಿದ್ದರೆ ಅವ್ವ ತಾಟಿನಲ್ಲಿ ಅನ್ನ ಸಾರು ಸುರಿವಿ ಅತ್ತೆಯ ಮುಂದೆ ದಪ್ಪೆನ್ನುವಂತೆ ಇಟ್ಟು ಬರುತ್ತಿದ್ದಳು. ಆಗಲೂ ಉಣ್ಣದಿದ್ದರೆ ಬೈಗಳು ಶುರುವಾಗುತ್ತಿದ್ದವು. ಒಂದೊಂದು ಸಾರಿಯಂತು ಅತ್ತೆಯ ಮುಂದಿಟ್ಟಿದ್ದ ಅನ್ನ ಬೆಳಕು ಹರಿದರೂ ಹಾಗೇ ಇರುತ್ತಿತ್ತು.

ಮರುದಿನ ಸಾಯಂಕಾಲ ಹುಸೇನಿ ದರ್ಗಾಕ್ಕೆ ಲೋಭಾನ ಹಾಕಿ ಬರಲು ಹೋಗುವಾಗ ನಾನು ಕೇಳುತ್ತಿದ್ದೆ, `ರಾತ್ರಿ ಪೂರ ಮಕ್ಕಳ್ಳದೆ ಏನ್ ಮಾಡಿದಿ?’ ಎಂದು. ಆಗ ಅವಳು, `ಹುಸೇನಿ ದೇವ್ರ ಜೊತಿ ಮಾತಾಡ್ತಿದ್ದೆ’ ಎನ್ನುವಳು.

`ಏನ್ ಮಾತಾಡ್ತಿದ್ರಿ?’

`ಅದ… ಮದ್ವಿ ಸುದ್ದಿ ಮಾತಾಡ್ತಿದ್ವಿ?’

`ಹೌದನು.. ಮತ್ಯಾವಾಗ್ ನಿಂದ್ ಮದ್ವಿ?’

`ನಾ ಅವಂತಾಕ್ ಹೋದ್ರ ಇವತ್ತಾ ಮಾಡುಸ್ತಾನಂತ’

`ಮತ್ ಹೋಗಲ್ಲ…’

`ಅಯ್ಯ… ಹೋದ್ರ ನಿಂಗ್ ಫೂ ಮಾಡಿ ಕಾಮನ್‌ಬಿಲ್ಯಾರ್ ತೋರ್ಸ್ತಾರ್’

`ಹೌದಲ…’ ಎಂದು ನಾನು ಬಾಯಿ ತೆರೆಯುತ್ತಿದ್ದೆ.

`ನೀ ಬಡಾನ್ ಫೂ ಮಾಡಿ ಕಾಮನ್‌ಬಿಲ್ ಮೂಡ್ಸಾದ್ ಕಲ್ಕೋ. ಹಂಗಾರ್ ನಾ ಹೊಕ್ಕೇನಿ’

`ನಾ ಹಂಗಾರ ಒಟ್ಟಂದ್ರ ಒಟ್ಟ ಕಲಿಯಲ್ಲ’ ಎಂದು ಮುಖ ಊದಿಸಿಕೊಳ್ಳುತ್ತಿದ್ದೆ.

`ಅಯ್ಯಾ ನಮಪ್ಪ ಸುಳ್ಳಾ ಅಂದ್ನೇಳು’

ಆಗವಳಿಗೆ ತುಂಬ ಮುದ್ದು ಬರುತ್ತಿತ್ತು. ನನ್ನ ಎತ್ತಿಕೊಂಡು ಸೊಂಟಕ್ಕಿಟ್ಟುಕೊಳ್ಳುತ್ತಿದ್ದಳು. ನನಗಂತೂ ಜಗ್ಗು ನಾಚಿಕೆಯಾಗುತ್ತಿತ್ತು. ನಮ್ ಕ್ಲಾಸ್‌ಮೇಟ್‌ಗಳು ನೋಡಿದರೆ ಎಂಬ ಯೋಚನೆ ಬಂದು ದಿಗಿಲಾಗುತ್ತಿತ್ತು. `ಅತ್ತಿ ಕೆಳಗಿಳ್ಸಾ… ಕೈಮುಗಿತೇನ್ ನಿಂಗ’ ಎಂದಾಗಲೇ ಅವಳು ಕೆಳಗಿಳಿಸುತ್ತಿದ್ದಳು.

ಅವತ್ತು ಆಯಿತ್ವಾರ. ಶಾಲೆಗೆ ರಜ. ಅತ್ತೆ ಜ್ವಾಳ ಬೀಸುತ್ತಿದ್ದಳು. ಬಲಗೈಯಿಂದ ಬೀಸುಕಲ್ಲಿನ ತೂತಿಗೆ ಜ್ವಾಳ ಸುರುವುತ್ತ ಎಡಗೈಯಿಂದ ಕಲ್ಲನ್ನು ತಿರುವುತ್ತಿದ್ದಳು. ನಾನು ಜ್ವಾಳದ ಬುಟ್ಟಿಯಲ್ಲಿ ಅ ಆ ಇ ಈ ಬರೆಯುತ್ತಿದ್ದೆ. ಕಲ್ಲಿನ ಸುತ್ತ ಬೀಳುತ್ತಿದ್ದ ಹಿಟ್ಟಿನಲ್ಲೂ ಅಕ್ಷರ ಬರೆವ ಆಸೆಯಾಯಿತು. ಅತ್ತೆ ಬೈಯುತ್ತಾಳೆಂದು ಸುಮ್ಮನಾದೆ. ಆಗೊಂದು ಯೋಚನೆ ಬಂತು. `ಅತ್ತೀ… ಜ್ವಾಳದ ಹಿಟ್ಟಿನಿಂದ ಫೂ ಮಾಡಿ ನೋಡಮಾ? ಗಟ್ಯಂದು ಕಾಮನ್‌ಬಿಲ್ ಮೂಡ್ಬೊದು’ ಅಂದೆ. ಆಕೆ `ಸುಮ್ಕರ‍್ಪಾ. ಹಂಗೆಲ್ಲ ಮೂಡಲ್ಲದು. ಹಿಟ್ಟು ಚೆಲ್ಲಾಡಿದ್ರ ನಿಮವ್ವ ಕಸಮರಿಗೆ ತಗೊಂಡೇ ಜಾಡಸ್ತಾಳ್ ನನ್ನ’ ಎಂದು ನನ್ನ ಆಸೆಗೆ ನೀರೆರೆಚಿದಳು. ನನಗೋ ಹಿಟ್ಟು ಫೂ ಮಾಡಲೇಬೇಕೆಂಬ ಹಂಬಲ. ಆದರೆ ಅತ್ತೆ ಮಾತು ಕೇಳುತ್ತಿಲ್ಲ. ಅತ್ತೆ ಅದೇನೋ ಹಾಡುತ್ತ ಬೀಸುವುದರಲ್ಲಿ ಮಗ್ನವಾಗಿದ್ದಾಗ ಒಂದಿಷ್ಟು ಹಿಟ್ಟು ಮುಷ್ಟಿಲಿಡಿದುಕೊಂಡು ಹೊರಕ್ಕೆ ಓಡಿದೆ. ಅತ್ತೆ, `ಚಂದ್ರಾ… ಅಂಗಳದಾಗ್ ಚೆಲ್ಬಾö್ಯಡ. ಪುಣ್ಯಾ ಬರುತ್ ನಿಂಗ’ ಎಂದು ಕೂಗುತ್ತಿರುವುದು ಕೇಳಿಸಿತಾದರೂ ನನಗೆ ಆಕೆಯ ಮಾತು ಪಾಲಿಸುವಷ್ಟು ವ್ಯವಧಾನವಿರಲಿಲ್ಲ. ಅಂಗಳದಲ್ಲಿ ನಿಂತು ಫೂ ಮಾಡಿದೆ. ಏನೆಂದರೆ ಏನೂ ಮೂಡಲಿಲ್ಲ. ಹಿಟ್ಟು ಮುಖಕ್ಕೆ ಸಿಡಿಯಿತು. ಅತ್ತೆ ಕಸಬರಿಗೆ ಹಿಡಿದುಕೊಂಡೇ ಹೊರ ಬಂದಳು. ನನ್ನ ಮುಖ ನೋಡಿ ನಗತೊಡಗಿದಳು. ಹಿಟ್ಟು ಗುಡಿಸುತ್ತ `ಅಚ್ಚಳ್ಳಿ ಆದಂಗಾಗಿ…’ ಎಂದು ಮತ್ತಷ್ಟು ನಕ್ಕಳು. ಅಷ್ಟರಲ್ಲಿ ಅವ್ವ ಬಂದಳು. ನನಗಂತು ಎದಿ ಧಸಕ್ ಅಂದಿತು. ಮುಖ ಒರೆಸಿಕೊಳ್ಳುತ್ತ ತಾಯಮ್ಮನ ಗುಡಿ ಕಡೆಗೆ ಓಡಿದೆ. ಅವ್ವ `ನಿಲ್ಲೋ ಜಿಟ್ಯಾ…’ ಅಂದದ್ದು ಮೆಲ್ಲಗೆ ಕೇಳಿಸಿತು.

ಅಪ್ಪನಿಗೆ ಯಾವ ಕಾರಣಕ್ಕೆ ಸಿಟ್ಟು ಬಂದರೂ ಜಯತ್ತೆಯ ಬೆನ್ನಿಗೆ ಗುದ್ದುತ್ತಿದ್ದ. ಅವ್ವ `ನಿನ್ನಿಂದನ ನಮ್ಮನಿ ನಾಶ್ನಾಗಿ ಹೋಗಾಕತ್ತೇತಿ. ಏನ್ ಶನಿ ಗಂಟ್‌ಬಿದ್ದಿ’ ಎಂದು ದಿನಕ್ಕೊಂದು ಸಲವಾದರೂ ಅತ್ತೆಗೆ ಬಯ್ಯುತ್ತಿದ್ದಳು. ನಾನೇನಾದರು ಅತ್ತೆಯ ಪರ ವಹಿಸಿದರೆ ನನಗೂ ಗುದ್ದು ಬೀಳುತ್ತಿದ್ದವು. ಅದೊಂದು ಸಲ ಅತ್ತೆಯನ್ನು ವಹಿಸಿಕೊಂಡು ಮಾತಾಡಿದ್ದಕ್ಕೆ ಅತ್ತೆಯ ಕೈಗೆ ಬರೆ ಬಿದ್ದಿತು.

ರಾತ್ರಿ ಮನೆಗೆ ಬಂದಾಗ ಅಪ್ಪ ಅವ್ವ ಉಣ್ಣುತ್ತಿದ್ದರು. ಅತ್ತೆ ನೆಲ್ಲು ಕೋಣೆಯಲ್ಲಿ ಚೀಲಗಳಿಗೊರಗಿ ಕಣ್ಮುಚ್ಚಿ ಕುಳಿತಿದ್ದು ಕಾಣಿಸಿತು. ಬಾಗಿಲಲ್ಲೇ ನಿಂತು ನೋಡಿದೆ. ಆಕೆಯ ಕಣ್ಣುಗಳು ಕೊಳೆತ ಟೊಮೇಟೋದಂತಾಗಿದ್ದವು. ಅವ್ವ ತುಂಬ ಬಡಿದಿರಬೇಕು ಎಂದುಕೊಂಡೆ. ಅವ್ವ ಅಪ್ಪ ಯಾಕೋ ಅವತ್ತು ನನ್ನನ್ನು ಬಯ್ಯಲಿಲ್ಲ. ಅವ್ವ ಊಟಕ್ಕಿಟ್ಟಳು. ಅಪ್ಪನದಿನ್ನೂ ಊಟ ಮುಗಿದಿರಲಿಲ್ಲ. ಇಬ್ಬರೂ ಏನೊಂದೂ ಮಾತಾಡಲಿಲ್ಲ. ಯಾರದೋ ಮನೆಗೆ ಬಂದಿರುವಂತೆ ಎನಿಸಿತು. ಹಾಲೂ ಅನ್ನ ಮತ್ತು ಉಪ್ಪಿನ ಕಾಯಿ ನನಗೆ ತುಂಬ ಇಷ್ಟ. ಮೂರೊಪ್ಪತ್ತು ಅದನ್ನೇ ತಿನ್ನು ಎಂದರೆ ತಿನ್ನುತ್ತೇನೆ. ಆದರೆ ಅವತ್ತು ಊಟ ಒಂಚೂರೂ ರುಚಿಸಲಿಲ್ಲ . ಅರ್ಧಕ್ಕೆ ಮುಗಿಸುವ ಎನಿಸಿತ್ತು. ಬೈತಾರೆಂದು ಇಷ್ಟಿಷ್ಟೇ ತುರುಕಿಕೊಳ್ಳುತ್ತಿದ್ದೆ. ಅವ್ವ `ಸಾಕಾಗಿದ್ರ ಮುಗಿಸಿಟ್ಟು, ಹೋಗಿ ಮಕ್ಕ’ ಎಂದಳು. ನಾನು ಕೈತೊಳೆದುಕೊಂಡು ಎದ್ದೆ. ಮತ್ತೊಮ್ಮೆ ನೆಲ್ಲುಕೋಣೆಗೆ ಇಣುಕಬೇಕೆನಿಸಿತು. ಕೊಳೆತ ಟೊಮೆಟೋಗಳ ನೆನಪಾಗಿ ಸುಮ್ಮನಾದೆ.

ಬೆಳಗ್ಗೆ ನಾನಿನ್ನು ಕೌದಿಯೊಳಗೇ ಕಣ್ಬಿಟ್ಟುಕೊಂಡು ಮಲಗಿದ್ದೆ.

ಅಪ್ಪ,`ಹಂಗ್ಯಾಕನ್ನಾಕೋಗಿದ್ದೆ ಆಕಿಗೆ. ಕೂಳು ತಿನ್ಲರ‍್ದ ಸತ್ಗಿತ್ರೆ ಏನ್ ಮಾಡ್ತಿ?’ ಎಂದ

ಅವ್ವ, `ಸತ್ರ ಸಾಯ್ಲಿ. ನಿಂಗ್ಯಾಕಷ್ಟ್ ಕಾಜೀ’ ಎಂದುತ್ತರಿಸಿದಳು. ಆಗವಳ ಮೂಗು ಎಷ್ಟು ವಿಕಾರ ಆಗಿರುತ್ತದೆಂದು ಕಲ್ಪನೆಗೆ ಬಂದು ಕಣ್ಮುಚ್ಚಿಕೊಂಡೆ.

ಎದ್ದು ಶಾಲೆಗೆ ಹೋಗಲು ತಯಾರಾದೆ. ಅತ್ತೆಯಿನ್ನೂ ಕೋಣೆಯಿಂದ ಹೊರಬಂದಿರಲಿಲ್ಲ. ಹೋಗಿ ಇಣುಕಿದೆ. ನನ್ನ ನೋಡಿ ನಕ್ಕಳು. `ತಡಿ’ ಎಂದು ಮೇಲೆದ್ದು ಬಂದು ಕೈ ಹಿಡಿದಳು. ಅಂಗಳಕ್ಕೆ ಕರೆದುಕೊಂಡು ಬಂದು ನಿಲ್ಲಿಸಿದಳು. ಹೂಜಿಯಿಂದ ಚೊಂಬಿನಲ್ಲಿ ನೀರು ತುಂಬಿಕೊಂಡು ನಾಲ್ಕೈದು ಸಲ ಫೂ ಮಾಡಿದಳು. ಅವ್ವ ಬಂಕದಲ್ಲಿ ನಿಂತು ನೋಡುತ್ತಿರುವಾಗಲೇ ಅತ್ತೆ ಫೂ ಮಾಡುತ್ತಿರುವುದು ನನಗೆ ಆಶ್ಚರ್ಯವೆನಿಸಿತು. ಭಯವೂ ಆಯಿತು. ಅತ್ತೆ `ಸಾಕಾ? ಇನ್ನಷ್ಟ್ ಸಲ ಮಾಡ್ಲ್ಯಾ?’ ಎಂದು ಕೇಳಿದಳು. ನಾನು `ಸಾಕು’ ಅಂದೆ. ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು. ನನಗೆ ತುಂಬ ಭಯವಾಯಿತು, ಅವ್ವ ಮತ್ತೆ ಬಡಿಯುತ್ತಾಳೆಂದು. ಅದೇ ಮೊದಲು ಅತ್ತೆ ಅವ್ವನಿಗೆ ಎದುರಾಡಿದ್ದು. ಆಗಂತು ಆಕೆಯ ಧ್ವನಿ ಅಪ್ಪನ ದನಿಯಷ್ಟು ಗಡುಸಾಗಿತ್ತು. ಅವ್ವನಿಗೆ ಏನನ್ನಿಸಿತೋ ಸೀದಾ ಮನೆಯೊಳಕ್ಕೆ ಹೋದಳು. ಕೈಗೆ ಸಿಕ್ಕಿದ್ದು ತಗೊಂಡು ಬೀಸುತ್ತಾಳೆಂದುಕೊಂಡಿದ್ದೆ ನಾನು. ಅತ್ತೆ ಮತ್ತೊಂದು ಬಾರಿ ಫೂ ಮಾಡಿ ಮುಖ ಸವರಿ ಕಳಿಸಿದಳು ನನ್ನ.

ಸಾಲೆಯಲ್ಲಿ ವಿರಾಮದ ಸಮಯದಲ್ಲಿ ನಲ್ಲಿ ಕಡೆ ಬಂದು ಒಂದೆರಡು ಸಾರಿ ಫೂ ಮಾಡುವ ಚಾಳಿ ನನಗೆ. ಇವತ್ತು ಫೂ ಮಾಡಿದಾಗ ಕಾಮನಬಿಲ್ಲು ಮೂಡಿಬಿಟ್ಟಿತು. ಸೀದಾ ಮನೆಗೆ ಓಡಿ ಅತ್ತೆಗೆ ಹೇಳಬೇಕೆನ್ನಿಸಿತು. ಮತ್ತೆ ಮತ್ತೆ ಮಾಡಿದಾಗಲೂ ಕಾಮನಬಿಲ್ಲು ಮೂಡಿತು. ಕೀ ಹೋ ಎಂದು ಕೂಗಿದೆ. ನೀರು ಕುಡಿಯಲು ಈ ಕಡೆ ಬರುತ್ತಿದ್ದ ಬಾಳ `ಏನಾತ್ಲೇ?’ ಎಂದ. `ಬಾ ಇಲ್ಲಿ’ ಎಂದು ಅವನಿಗೂ ಕಾಮನಬಿಲ್ಲು ತೋರಿಸಿದೆ. ಅವನು ಆಶ್ಚರ್ಯದಿಂದ ಚಪ್ಪಾಳೆ ತಟ್ಟಿದ. `ಲೇ ಬಾಯಾಗ ಬಣ್ಣಾಗಿಣ್ಣಾ ಹಾಕ್ಕೊಂಡು ಉಗುಳಾಕತ್ತೀಯನು?’ ಎಂದು ಕೇಳಿದ. ನನಗೆ ನಗು ಬಂತು. `ಎಷ್ಟ್ ಬುಲ್ಡಿ ಮಾತಾಡ್ತಾನಿವ’ ಎನ್ನಿಸಿತು. `ಲೇ ಅಷ್ಟ್ ಥರದ್ ಬಣ್ಣ ಬಾಯಾಗಿಟ್ಕೊಳ್ಳಾಕ್ ಹೆಂಗ್ ಬರುತ್ಲೇ?’ ಎಂದೆ. ಅವನು, `ಮತ್ ಬೆಳ್ಳಗಿರ ನೀರು ಅದೆಂಗ್ ಕಾಮನಬಿಲ್ಲಾಗುತ್ತ?’ ಎಂದು ಪ್ರಶ್ನಿಸಿದ. `ಏನನ್ಲೆಪ್ಪ. ನಮತ್ತಿ ಹೇಳ್ತಾಳ್ ದೊಡ್ಡೋರಾದ್ಮಾö್ಯಗ್ ಬಾಯಾಗ ಕಾಮಣಬಿಲ್ ಮೂಡ್ತೆÊತಂತ. ಫೂ ಮಾಡಿದ್ರ ಹೊರಾಗ್ ರ‍್ತೇತಂತ. ನಾನಿವತ್ ದೊಡ್ಡಾತಾಗೇನನ್ಸತ್’ ಎಂದೆ. `ಸುಳ್ಳಪಕ್ಕ ಹೇಳಾಕತ್ತಿ ನೀ… ನೀನೂ ನನ್ನಷ್ಟ ಅದಿ. ದೊಡ್ಡೇನ್ ಆಗಿಲ್ಲ’ ಎಂದ ಬಾಳ. ನಾನು, `ನಂಬಿದ್ರ ನಂಬ್ ಬುಟ್ರ ಬುಡ್ ನಂಗೇನು?’ ಎಂದು ಸುಮ್ಮನಾದೆ.

ಶಾಲೆ ಬಿಟ್ಟದ್ದೇ ಮನೆಕಡೆಗೆ ದಿಕ್ಕಪಲ ಓಡಿದೆ. ಕಾಮನಬಿಲ್ಲು ಮೂಡಿದ್ದನ್ನು ಅತ್ತೆಗೆ ಹೇಳಬೇಕು ಎಂಬ ಆತುರ. ಮನೆ ಮುಂದೆ ಬಂದು ನಿಂತಾಗ ದಮ್ಮು ಹತ್ತಿತ್ತು. ಕಟ್ಟೆಯ ಗುಣೇವಿನ ಕಡೆ ನೋಡಿದೆ. ಅವ್ವ ಅಪ್ಪರ ಚಪ್ಪಲುಗಳಿರಲಿಲ್ಲ. ಬೇಸಾತು ಅನ್ನಿಸಿತು. `ಅತ್ತೀ ಗುತ್ತೀ’ ಎಂದು ಜೋರಾಗಿ ಕೂಗಿದೆ. `ಏನೋ ಚಂದಪ್ಪಾ…’ ಎಂಬ ಪ್ರತಿಕ್ರಿಯೆ ಬರಲಿಲ್ಲ. `ಯೋಯ್.. ಅತ್ತೀ’ ಎಂದು ಅರಚಿದೆ. `ಕತ್ತೀ..’ ಎಂದು ಮತ್ತಷ್ಟು ಚೀರಿದೆ. ಆಗಲೂ ಏನೂ ಪ್ರತಿಕ್ರಿಯೆ ಇಲ್ಲ. ನೆಲ್ಲು ಕೋಣೆ ಕಡೆಗೆ ಮೆಲ್ಲಗೆ ನಡೆದೆ. ಅತ್ತೆ ಎಲ್ಲೋ ಅವಿತು `ಔಕ್’ ಮಾಡಿ ಹೆದರಿಸಲು ಕಾಯುತ್ತಿದ್ದಾಳೆ ಎಂದು ಬಹಳ ಎಚ್ಚರಿಕೆಯಿಂದ ನಡೆದೆ. ಆದರೆ ಅತ್ತೆ ನೆಲ್ಲು ಕೋಣೆಯಲ್ಲೂ ಇರಲಿಲ್ಲ. ದಡ್ಡಿಗೇನರ ಹೋಗಿರಬೋದು ಎಂದುಕೊಂಡು ಹೂಜಿ ಕಡೆ ನೋಡಿದೆ. ಕೆಂಪು ಚಂಬು ಹಾಗೇ ಇತ್ತು.

ಅಷ್ಟರಲ್ಲಿ ಓಡಿಕೊಂಡು ಬಂದ ದ್ಯಾಮ ದಮ್ಮು ಆರಿಸಿಕೊಳ್ಳುತ್ತ ನಿಂತ. ಉಸ್ ಉಸ್ ಮಾಡುತ್ತ `ಹುಡ್ಗಾ ಹಗ್ಗ ತಗೊಂಬಾ ಬಡಾನ` ಅಂದ. ನಾನು `ಯದಕಾ?’ ಎಂದು ಕೇಳಿದೆ. `ತಗಂಡಂದೇ ತಗಂಡ್‌ಬಾ ಹೇಳ್ತೇನಿ?’ ಎಂದು ಅವಸರ ಮಾಡಿದ. ನಾನು ಅಟ್ಟವೇರಿ ಹಗ್ಗ ತಂದು ಅವನ ಕೈಗಿತ್ತೆ. ಅವನು `ನಿಮ್ ಅತ್ತಿ ಚೋಳಿಬಾಯಾಗ್ ಬಿದ್ದಾಳ… ಆಕಿನೆತ್ತಾಕಿದು’ ಎಂದು ಒಂದೇ ಉಸುರಿನಲ್ಲಿ ಹೇಳಿ, ಓಡತೊಡಗಿದ. ನಾನೂ ಅವನ ಹಿಂದೆ ಓಡಿದೆ.

ಎಂಟತ್ತು ಜನ ಸೇರಿದ್ದರು ಅಲ್ಲಿ. ಅವ್ವ ಅಪ್ಪರೂ ಇದ್ದರು. ಅವ್ವ ಸೊಂಟ ಕೈಗಿಟ್ಟುಕೊಂಡು ಬಾವಿ ಇಣುಕಿ ನೋಡುತ್ತಿದ್ದಳು. ಅಪ್ಪ ಬಾವಿಯೊಳಗಿದ್ದ ಯಾರಿಗೋ `ಲೇ ಗಟ್ಯಾಗ್ ಹಿಡುಕ ಬುಡುಬ್ಯಾಡ. ಹಗ್ಗಾ ಬಂತು…’ ಎಂದು ಹೇಳುತ್ತಿದ್ದ. ನಾನೂ ಹೋಗಿ ಅವರ ಹತ್ತಿರ ನಿಂತೆ. ಇಣುಕಿ ನೋಡಿದೆ. ಚೋಳುಗಳೇನು ಇರಲಿಲ್ಲ. ಬಾವಿಯಲ್ಲಿ ಮ್ಯಾಲಿನಮನಿ ಸೋಮಣ್ಣ ಅತ್ತೆಯನ್ನು ಗೋಡೆಗೊರಗಿಸಿ ಹಿಡಿದು ಕಾಲು ಬಡಿಯುತ್ತಿದ್ದ. ಅಪ್ಪ ದ್ಯಾಮ ಸೇರಿ ಹಗ್ಗ ಕೆಳಕ್ಕೆ ಬಿಟ್ಟರು. ಸೋಮಣ್ಣ ಅದನ್ನು ಹಿಡಿದುಕೊಂಡು ಮೇಲೇರತೊಡಗಿದ. ಅವನು ಅತ್ತೆಯಯನ್ನು ಒಂದು ಕೈಯಲ್ಲಿ ಎತ್ತಿಕೊಂಡಿದ್ದ; ಅತ್ತೆ ನನ್ನ ಹುಸೇನಿ ದರ್ಗಾಕ್ಕ ಹೋಗುವಾಗ ಒಮ್ಮೊಮ್ಮೆ ಎತ್ತಿಕೊಳ್ಳುತ್ತಿದ್ದಂತೆ. ಅತ್ತೆಯ ಕೋಲು ಮುಖ ಮತ್ತಷ್ಟು ಕೆಂಪಗಾಗಿತ್ತು. ಅವಳ ಕಣ್ಣುಗಳು ಮುಚ್ಚಿದ್ದವು. ಆಕೆ ಸ್ನಾನ ಮಾಡಿದಾಗ ಬೆಳ್ಳಗೆ ಹೊಳೆಯುತ್ತಿದ್ದ ಕಣ್ಣುಗಳ ನೆನಪಾಯಿತು.

ಸೋಮಣ್ಣ ಅತ್ತೆಯನ್ನು ಕಟ್ಟೆಗೆ ಮಲಗಿಸಿ ಹೊಟ್ಟೆ ಅಮುಕತೊಡಗಿದ. ಅತ್ತೆಯ ಬಾಯಿಂದ ನೀರು ಬರತೊಡಗಿದವು. ಸೋಮಣ್ಣ ಅಪ್ಪನತ್ತ ನೋಡಿ `ಕಾಕಾ ಹೋಗ್ಯೇತಿದು’ ಎನ್ನುತ್ತ ಮತ್ತೊಮ್ಮೆ ಜೋರಾಗಿ ಅಮುಕಿದ. ಅತ್ತೆ ಫೂ… ಎಂದಳು. ಬಗ್ಗಿ ನೋಡುತ್ತಿದ್ದ ಅವ್ವ ಅಪ್ಪರ ಮುಖಕ್ಕೆ ಬಿರುಸಿಂದ ನೀರು ಸಿಡಿದವು. ಅವ್ವ ಮುಖ ಒಂಥರ ಮಾಡಿದಳು.