”ಮಿಣುಕು ಹುಳುವಿನ ಉಪಟಳ ಹೊಸತೇನಲ್ಲ. ಮೊದಮೊದಲಿಗೆ ಆಗೀಗ ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದ ಅದು ಈಗೀಗ ಅವನನ್ನ ಬೆಂಬಿಡದೆ ಹಿಂಬಾಲಿಸುತ್ತಿದೆ. ಚೂರು ಒಂಟಿಯಾದರೂ ಸಾಕು ಗುಯ್ ಗುಯ್ ಅಂತ ಬಂದೇ ಬಿಡುತ್ತದೆ. ಸಾಸಿವೆ ಕಾಳಷ್ಟು ಬೆಳಕಾಗಿ ಹುಟ್ಟಿದ್ದುದು ದೊಡ್ಡ ರಾಕ್ಷಸನಾಗಿ ಬೆಳೆದುಕೊಂಡು ಅವನನ್ನು ಕಿತ್ತು ಕಿತ್ತು ತಿನ್ನತೊಡಗುತ್ತದೆ. ಆಗೆಲ್ಲಾ ಬದುಕು ಎಷ್ಟು ಕಷ್ಟ! ಬೆಳಗ್ಗೆ ಆಫೀಸಿಗೆ ಹೋಗುವಾಗ ಮತ್ತು ರಾತ್ರಿ ವಾಪಸ್ ಬರುವಾಗ ಮೆಟ್ರೋದಲ್ಲಿನ ಗದ್ದಲದಲ್ಲೂ ಆಗಾಗ ಕೆಲವು ಜನರ ತಲೆಯ ಮೇಲೆ ಒಂದೊಂದು ಮಿಣುಕು ಹುಳುಗಳು ಹಾರಾಡುವುದನ್ನು ನೋಡಿದ್ದಾನವನು. ಅಂಥವರು ಆಗೀಗ ಈ ಶಹರದಲ್ಲಿ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ”

ಮಂಜುನಾಯಕ ಚಳ್ಳೂರು ಬರೆದ ಸಣ್ಣ ಕತೆ ಈ ಭಾನುವಾರದ ನಿಮ್ಮ ಓದಿಗಾಗಿ.

 

ದೊಡ್ಡ ಔಷಧದ ಅಂಗಡಿಯ ಮುಂದೆ ನೂಕುನುಗ್ಗುಲಾಗುವಷ್ಟು ಗದ್ದಲ. ಎಲ್ಲಿಂದಲೋ ಸರಸರ ಹೆಜ್ಜೆ ಹಾಕುತ್ತ ಬಂದ ಅವನಿಗೆ ಗದ್ದಲ ನೋಡಿ ಗಾಬರಿಯಾಯಿತು. ಅಲ್ಲಿ ನೆರೆದಿದ್ದ ಜನರನ್ನು ನೋಡಿ ‘ಇವತ್ತೇನು ಇಡೀ ಜಗತ್ತೇ ಅಸ್ವಸ್ಥವಾಗಿಬಿಟ್ಟಂತಿದೆ’ ಎಂದುಕೊಂಡ. ಹಿಂದೆಂದೂ ಇಷ್ಟು ಜನ ಸೇರಿರಲಿಲ್ಲ. ಎಲ್ಲರ ಕೈಯಲ್ಲೂ ಒಂದೊಂದು ಚೀಟಿಯಿದೆ. “ನನ್ನದು ಮೊದಲು, ನನ್ನದು ಮೊದಲು” ಅಂತ ಕೂಗಾಡುತ್ತಿದ್ದಾರೆ. ಅಂಗಡಿಯ ಹುಡುಗರು ಅವಸರ ಮಾಡುತ್ತ ಔಷಧ ಕೊಟ್ಟು ಕಳಿಸುತ್ತಿದ್ದಾರೆ. ತನ್ನ ಚೀಟಿಯನ್ನು ನೋಡಿಕೊಳ್ಳುತ್ತ ‘ಎಲ್ಲರ ಚೀಟಿಗಳನ್ನೂ ಇಸಿದುಕೊಳ್ಳಬೇಕು. ಅದರಿಂದ ಜಗತ್ತಿನಲ್ಲಿ ಇರುವ ನೋವನ್ನು ಲೆಕ್ಕ ಹಾಕಬಹುದು’ ಅಂತ ಯೋಚಿಸುತ್ತ ನಿಂತ. ಯಾರೋ ಭುಜ ಹಿಡಿದು ಅಲುಗಾಡಿಸಿದರು. ಗದ್ದಲದ ಕಡೆಯಿಂದ ಬಂದ ಅಮ್ಮ ‘ಬೇಗ ಹೋಗು ಮಗನೇ ಔಷಧಿಗಳು ಖಾಲಿ ಆದಾವು’ ಅಂತ ಜೋರಾಗಿ ಕೂಗಿ ಅವಸರದಿಂದ ನಡೆಯುತ್ತ ಎತ್ತಲೋ ಹೋದಳು. ಇವನು ಗದ್ದಲವನ್ನು ತಳ್ಳಿ ತಳ್ಳಿ ಭೇದಿಸಿಕೊಂಡು ಹೋಗಿ ಹುಡುಗನೊಬ್ಬನನ್ನು ಕರೆದ. ಹುಡುಗ ಬಂದು ಇವನ ಕೈಲಿದ್ದ ಚೀಟಿ ತೆಗೆದುಕೊಂಡು ಅದನ್ನು ಪರಿಶೀಲಿಸಿದ್ದೇ ಗಹಗಹಿಸಿ ನಗತೊಡಗಿದ. ಮತ್ಯಾವನೋ ಆ ಚೀಟಿಯನ್ನು ಕಸಿದುಕೊಂಡು ನೋಡಿ ನಗತೊಡಗಿದ. ಚೀಟಿಯನ್ನು ಒಬ್ಬರಿಗೊಬ್ಬರು ದಾಟಿಸುತ್ತ ನಗತೊಡಗಿದರು. ಇವನ ಕೈಗೆ ಆ ಚೀಟಿಯೇ ಸಿಗುತ್ತಿಲ್ಲ. ಎಲ್ಲರೂ ಅಂಗಡಿ ಉರುಳಿ ಬೀಳುವಂತೆ ನಗುತ್ತಿದ್ದಾರೆ. ಏನು ಬರೆದಿದೆ ಆ ಚೀಟಿಯಲ್ಲಿ? ಯಾಕಿಷ್ಟು ನಗುತ್ತಿದ್ದಾರೆ? ಬೇರೆ ಯಾವುದಾದರು ಚೀಟಿ ಕೊಟ್ಟುಬಿಟ್ಟೆನಾ? ಇಲ್ಲವಲ್ಲ. ಜೇಬಿನಲ್ಲಿ ಇದ್ದದ್ದೇ ಅದೊಂದು ಚೀಟಿ. ಏನಾಯ್ತು..? ಅವರ ನಗು ಕೇಕೆಯಾಗಿ ಮಾರ್ಪಟ್ಟು ತಲೆ ಚಿಟ್ಟು ಹಿಡಿಸುತ್ತಿದೆ… ಎರಡೂ ಕಿವಿಗಳಿಗೆ ಕೈಗಳನ್ನು ಗಟ್ಟಿಯಾಗಿ ಒತ್ತಿಕೊಂಡು ಕಣ್ಣು ಮುಚ್ಚಿದ.

ಕಣ್ಣು ತೆರೆದವನಿಗೆ ಪಕ್ಕದಲ್ಲಿ ಹಸಿರು ಮಿಣುಕು ಹುಳು ಮಲಗಿರುವುದು ಕಂಡು ಅಸಾಧ್ಯ ಸಿಟ್ಟು ಬಂದಿತು. ಅದನ್ನು ಅಮುಕಿ ಸಾಯಿಸಲು ನೋಡಿದ. ಫೋನ್ ಕೈಗೆ ಸಿಕ್ಕಿತು. ಲಾಕ್ ತೆಗೆದು ನೋಡಿದ. ಏರ್‌ ಟೆಲ್ ನವರು ಏನೋ ಆಫರ್ ಮಾಡಿ ಮೆಸೇಜ್ ಮಾಡಿದ್ದರು. ಸಮಯ ನೋಡಿದ. ಒಂದು ನಲವತ್ಮೂರು. ಡಾಟಾ ಆನ್ ಮಾಡಿದ. ಒಂದಷ್ಟು ವಾಟ್ಸಾಪ್ ಮೆಸೇಜುಗಳು ಜುಳುಜುಳು ಮಾಡಿದುವು. ಮಲಗಿ ಮೂರು ತಾಸುಗಳೂ ಆಗಿಲ್ಲವೆಂದು ನೆನಪಾಯಿತು. ಡಾಟಾ ಆಫ್ ಮಾಡಿ, ಫೋನ್‌ ಲಾಕ್ ಮಾಡಿ ಮುಸುಕೆಳೆದುಕೊಂಡ. ನಿದ್ದೆ ಹತ್ತಲಿಲ್ಲ. ಕನಸು ನೆನಪಾಯಿತು. ಅರೆ ಏನಿತ್ತು ಆ ಚೀಟಿಯಲ್ಲಿ?! ಅದು ಗೊತ್ತಾಗುವವರೆಗಾದರೂ ಕನಸು ಮುಂದುವರಿಯಬೇಕಿತ್ತು.. ಅದೇ ಕನಸು ಈಗ ಮುಂದುವರಿಯಲಿ… ಎಂದುಕೊಳ್ಳುತ್ತ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ನಿದ್ದೆ ತಂದುಕೊಳ್ಳಲು ಪ್ರಯತ್ನಿಸಿದ. ಮಿಣುಕು ಹುಳು ಬಂದು ತಲೆತುಂಬ ಗುಯ್‌ ಗುಡತೊಡಗಿತು. ಎದ್ದು ಕುಳಿತ. ಫೋನ್ ಲಾಕ್ ತೆಗೆದ. ಮುಂದೇನು ಮಾಡಬೇಕು ಗೊತ್ತಾಗಲಿಲ್ಲ. ಫೋನ್‌ಲಾಕ್ ಮಾಡಿದ. ತೆಗೆದ. ಲಾಕ್ ಮಾಡಿದ… ಐಕಾನ್‌ಗಳನ್ನು ಅತ್ತಿ೦ದಿತ್ತ ಸರಿಸಾಡಿದ. ಮತ್ತೆ ಲಾಕ್ ಮಾಡುವುದು, ತೆಗೆಯುವುದು ಮಾಡತೊಡಗಿದ. ಸಮಾಧಾನವಾಗಲಿಲ್ಲ. “ನೋವೇ ನನ್ನ ಮೇಲೆ ನಿನಗೇಕಿಷ್ಟು ಪ್ರೀತಿ?” ಎಂದು ಸ್ಟೇಟಸ್ ಹಾಕಿದ. ಡಿಪಿಯ ಫೋಟೋ ರಿಮೂವ್ ಮಾಡಿದ. ಇಯರ್ ಫೋನ್ ಕಿವಿಗಿಟ್ಟುಕೊಂಡು ಜೋರಾಗಿ ಹಾಡು ಹಚ್ಚಿಕೊಂಡ. ‘ನೀಲನಭಕೆ ನೂಲ ಏಣಿ… ಕಣ್ಣಂಚಲಿ ಬಿಗಿದೆಯಾ…’ ಕಣ್ಮುಚ್ಚಿ ಕುಳಿತುಕೊಂಡ. ಯಾವುದೋ ನದಿಯಲ್ಲಿ ಕುಳಿತುಕೊಂಡಿರುವಂತೆ, ತನ್ನೆದೆಯೊಳಗೂ ಒಂದು ನದಿ ಹಿಮಗಟ್ಟಿರುವಂತೆ ಎದೆಯಲ್ಲೇನೋ ಮಣಭಾರ.. ಪಾಪೆಗಳು ದಿಕ್ಕೆಟ್ಟವರಂತೆ ಅಲ್ಲಲ್ಲೇ ಸರಿದಾಡುತ್ತಿದ್ದವು. ತಲೆ ತುಂಬ ಮಿಣುಕು ಹುಳು ಅಸಾಧ್ಯ ಗದ್ದಲ ನಡೆಸಿತ್ತು. ಎದೆ ಭಾರವಾಗುತ್ತಲೇ ಇತ್ತು.

ಎಷ್ಟೋ ಹೊತ್ತು ಕಳೆದ ಮೇಲೆ ಕಣ್ಣೀರು ತಂದುಕೊಳ್ಳುವಲ್ಲಿ ಸಫಲನಾದ. ಸಮಾಧಾನವಾಯಿತು. ನೀರ್ಗಲ್ಲು ಕರಗಿ ಮನಸು ಹಗುರವಾಯಿತು.. ವಾಟ್ಸಾಪ್ ತೆಗೆದು ಹೈಸ್ಕೂಲ್ ಫ್ರೆಂಡ್‌ ಗಳ ಗ್ರೂಪಿನಲ್ಲಿ ಬಂದು ಬಿದ್ದಿದ್ದ ಜೋಕೊಂದನ್ನು ನೋಡಿದ. ನಗು ಬಂತು. ಆ ಜೋಕು ಕಳಿಸಿದ ಶರಣನಿಗೆ ಫೋನು ಮಾಡಬೇಕು ಅಂದುಕೊಳ್ತಾನೇ ಇದ್ದಾನೆ. ಆದರೆ ಆಗುತ್ತಿಲ್ಲ. ಯಾಕೋ ಯಾರನ್ನೂ ಮಾತನಾಡಿಸುವ ಮನಸಿಲ್ಲ.. ಡಿಪಿಗೆ ತನ್ನದೊಂದು ನಗುತ್ತಿರುವ ಚಿತ್ರ ಹಾಕಿದ. ಮೊದಲಿನ ಸ್ಟೇಟಸ್ ತೆಗೆದು ನಗುವ ಬೊಂಬೆಯೊಂದನ್ನಿಟ್ಟ. ಮತ್ತೆ ಸ್ಟೇಟಸ್ ಬದಲಾಯಿಸಬೇಕು ಅನ್ನಿಸಿತು. ನಗುವ ಬೊಂಬೆ ಬೇಡ, ಅಳುವುದನ್ನಿಡಬೇಕು ಎಂಬ ಹಂಬಲ ಹೆಚ್ಚಾಯಿತು. ಹಾಗೇ ಮಾಡಿದ. ಮತ್ತೇನೇನೋ ಯೋಚನೆ ಬಂದು ಡಿಪಿ ಮತ್ತು ಸ್ಟೇಟಸ್ ಎರಡನ್ನೂ ಖಾಲಿ ಇಟ್ಟು ಫೋನ್‌ ಲಾಕ್ ಮಾಡಿಟ್ಟ. ಅಮ್ಮಾ… ಎಂದು ನಿಟ್ಟುಸಿರುಬಿಟ್ಟು ಕಣ್ಣುಮುಚ್ಚಿದರೆ “ಏನಿತ್ತು ಆ ಚೀಟಿಯಲ್ಲಿ?” ಎಂಬ ಪ್ರಶ್ನೆ ಮತ್ತೆ ಎದ್ದು ಬಂದಿತು. ಹಲ್ಲುಕಚ್ಚಿಕೊಂಡು “ಥೂ ನನ್ ಕರ್ಮ” ಎಂದು ಶಪಿಸಿ ಮೇಲಕ್ಕೆದ್ದು ಟಾಯ್ಲೆಟ್ ಕಡೆ ನಡೆದ.

“ನೋವೇ ನನ್ನ ಮೇಲೆ ನಿನಗೇಕಿಷ್ಟು ಪ್ರೀತಿ?” ಎಂದು ಸ್ಟೇಟಸ್ ಹಾಕಿದ. ಡಿಪಿಯ ಫೋಟೋ ರಿಮೂವ್ ಮಾಡಿದ. ಇಯರ್ ಫೋನ್ ಕಿವಿಗಿಟ್ಟುಕೊಂಡು ಜೋರಾಗಿ ಹಾಡು ಹಚ್ಚಿಕೊಂಡ. ‘ನೀಲನಭಕೆ ನೂಲ ಏಣಿ… ಕಣ್ಣಂಚಲಿ ಬಿಗಿದೆಯಾ…’ ಕಣ್ಮುಚ್ಚಿ ಕುಳಿತುಕೊಂಡ. ಯಾವುದೋ ನದಿಯಲ್ಲಿ ಕುಳಿತುಕೊಂಡಿರುವಂತೆ, ತನ್ನೆದೆಯೊಳಗೂ ಒಂದು ನದಿ ಹಿಮಗಟ್ಟಿರುವಂತೆ ಎದೆಯಲ್ಲೇನೋ ಮಣಭಾರ.. ಪಾಪೆಗಳು ದಿಕ್ಕೆಟ್ಟವರಂತೆ ಅಲ್ಲಲ್ಲೇ ಸರಿದಾಡುತ್ತಿದ್ದವು.

ಮಿಣುಕು ಹುಳುವಿನ ಉಪಟಳ ಹೊಸತೇನಲ್ಲ. ಮೊದಮೊದಲಿಗೆ ಆಗೀಗ ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದ ಅದು ಈಗೀಗ ಅವನನ್ನ ಬೆಂಬಿಡದೆ ಹಿಂಬಾಲಿಸುತ್ತಿದೆ. ಚೂರು ಒಂಟಿಯಾದರೂ ಸಾಕು ಗುಯ್ ಗುಯ್ ಅಂತ ಬಂದೇ ಬಿಡುತ್ತದೆ. ಸಾಸಿವೆ ಕಾಳಷ್ಟು ಬೆಳಕಾಗಿ ಹುಟ್ಟಿದ್ದುದು ದೊಡ್ಡ ರಾಕ್ಷಸನಾಗಿ ಬೆಳೆದುಕೊಂಡು ಅವನನ್ನು ಕಿತ್ತು ಕಿತ್ತು ತಿನ್ನತೊಡಗುತ್ತದೆ. ಆಗೆಲ್ಲಾ ಬದುಕು ಎಷ್ಟು ಕಷ್ಟ! ಬೆಳಗ್ಗೆ ಆಫೀಸಿಗೆ ಹೋಗುವಾಗ ಮತ್ತು ರಾತ್ರಿ ವಾಪಸ್ ಬರುವಾಗ ಮೆಟ್ರೋದಲ್ಲಿನ ಗದ್ದಲದಲ್ಲೂ ಆಗಾಗ ಕೆಲವು ಜನರ ತಲೆಯ ಮೇಲೆ ಒಂದೊಂದು ಮಿಣುಕು ಹುಳುಗಳು ಹಾರಾಡುವುದನ್ನು ನೋಡಿದ್ದಾನವನು. ಅಂಥವರು ಆಗೀಗ ಈ ಶಹರದಲ್ಲಿ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ. ಅವರೊಂದಿಗೆ ಈ ಕುರಿತು ಮಾತಾಡಬೇಕು ಎಂದುಕೊಳ್ಳುತ್ತಾನೆ. ಆದರೆ ನನಗೆ ಕಾಣುತ್ತಿರುವುದೆಲ್ಲ ಭ್ರಮೆಯಿರಬಹುದು, ನಾನು ಹೇಳುವುದನ್ನು ಕೇಳಿದರೆ ಅವರು ನನ್ನ ಹುಚ್ಚ ಎಂದುಕೊಳ್ಳಬಹುದು ಎಂದು ಯೋಚಿಸಿ ಸುಮ್ಮನಾಗುತ್ತಾನೆ. ಆಗೆಲ್ಲಾ ಅವನು ಸಾಧ್ಯವಾದರೆ ಅವರೊಂದಿಗೆ ಮಾತಿಗೆ ಶುರುವಿಟ್ಟುಕೊಳ್ಳುತ್ತಾನೆ. ಆಗ ಅಂಥವರ ತಲೆಮೇಲಿನ ಮಿಣುಕು ಹುಳುವೂ, ತನ್ನ ಜೀವ ತಿನ್ನುತ್ತಿರುವ ಮಿಣುಕು ಹುಳುವೂ ಮಾಯವಾಗುತ್ತವೆ. ಆದರೆ ಆ ಸಮಾಧಾನ ಜಾಸ್ತಿ ಸಮಯ ಉಳಿದಿದ್ದೇ ಇಲ್ಲ. ಇತ್ತೀಚಿಗೆ ಅವನೊಂದು ಹೊಸ ಉಪಾಯ ಕಂಡುಕೊಂಡಿದ್ದಾನೆ. ಮಿಣುಕು ಹುಳು ಬರುವ ಸೂಚನೆ ಕಂಡಿದ್ದೇ ಸಾಕು ಮೊಬೈಲ್ ತೆಗೆದು “ಜಸದಹದಹದಹಜಸಸಗಕಲಕಲ” ಅಂತ ಮನಸಿಗೆ ಬಂದಂತೆ ಟೈಪ್ ಮಾಡಲು ಶುರುವಿಟ್ಟುಕೊಳ್ಳುತ್ತಾನೆ. ಆಗ ಮಿಣುಕು ಹುಳು ಇಷ್ಟಿಷ್ಟೇ ಸಣ್ಣದಾಗುತ್ತ ಮಾಯವಾಗಿಬಿಡುತ್ತದೆ.

ಒಂದೆರಡು ವಾರದ ಹಿಂದೆ, ಮೆಟ್ರೊದಲ್ಲಿ ಕಂಡ ತನ್ನಂಥ ಮಿಣುಕುಹುಳುವಿನ ಗಿರಾಕಿಗೆ ಈ ತನ್ನ ಹೊಸ ಐಡಿಯಾವನ್ನು ಹೇಳಲೇಬೇಕು, ಆದದ್ದಾಗಲಿ ಎನ್ನಿಸಿತು. ಆಫೀಸಿಗೆ ತಡವಾದರೂ ಚಿಂತೆಯಿಲ್ಲ ಎಂದುಕೊಂಡು ಆ ಮನುಷ್ಯನನ್ನು ಹಿಂಬಾಲಿಸಿದ. ಆ ಮನುಷ್ಯ ಒಂದು ಗೂಡಂಗಡಿಯ ಮುಂದೆ ನಿಂತು ಸಿಗರೇಟ್, ಚಹಾ ತೆಗೆದುಕೊಂಡು ಹೊಗೆಯುಗುಳುತ್ತ ನಿಂತ. ಇವನೂ ಒಂದು ಚಹಾ ತೆಗೆದುಕೊಂಡು ಅವನತ್ತ ಮುಗುಳ್ನಗೆ ಬೀರಿ “ಇವತ್ತು ತುಂಬ ಛಳಿ ಅಲ್ವಾ?” ಅಂತ ಪೀಠಿಕೆ ಹಾಕಿದ. ಅದೂ ಇದು ಮಾತಾಡುತ್ತ ಅವನನ್ನು ಮಾತಿನ ಲಹರಿಗೆ ತಂದ. ಅವನ ಸಿಗರೇಟು ಮುಗಿಯಲಿಕ್ಕೆ ಬಂದದ್ದೇ ತನ್ನ ಉಪಾಯ ಹೇಳಿಬಿಡಬೇಕೆಂಬ ಆತುರವಾಯಿತು. ಮೆಲ್ಲಗೆ ಪಿಸುಮಾತಿನಲ್ಲಿ ಆ ಮನುಷ್ಯನಿಗೆ, “ನಿಮಗೂ ಮಿಣುಕು ಹುಳದ ಕಾಟವಾ?” ಎಂದು ಕೇಳಿದ. ಆ ಮನುಷ್ಯ, “ಹ್ಞಾ? ಮಿನರ್ವ ಸರ್ಕಲ್ಲಾ?” ಎಂದು ಪ್ರಶ್ನಿಸಿದ. ಇವನು “ಮಿಣುಕು ಹುಳಾ ರೀ… ಫೈರ್‌ ಫ್ಲೈ… ಮೆಟ್ರೊದಲ್ಲಿದ್ದಾಗ ನಿಮ್ ತಲೆ ಸುತ್ತ ಸುತ್ತಿರ್ಲಿಲ್ವಾ?” ಎಂದು ಕೇಳಿದಾಗ ಆ ಮನುಷ್ಯ ಯಾಕೋ ಸುಮ್ಮನಾದ. ಏನೋ ಯೋಚನೆಗೆ ಬಿದ್ದವನಂತೆ ಕಂಡ. ಆಮೇಲೆ ಬಿಲ್ ಕೊಟ್ಟು ಬರುವಾಗ ಮೆಲ್ಲಗೆ ಗುಟ್ಟಿನಲ್ಲಿ ಎಂಬಂತೆ “ಅದು ಮಿಣುಕು ಹುಳ ಅಲ್ಲಾ ರೀ… ಗಿಣಿಮರಿ ಅದು” ಎಂದಾಗ ಇವನಿಗೆ ಆಶ್ಚರ್ಯವಾಯಿತು. ಇವನು, “ದಿನಾಲು ಬಂದು ಕಾಡ್ತದಾ ಅದು?” ಎಂದು ಪ್ರಶ್ನಿಸಿದ. ಆ ಮನುಷ್ಯ, “ಹೌದು ರೀ.. ದಿನಾಲೂ ಇದ್ದದ್ದೇ ಇದರ ಕಾಟ. ಅದು ಬಂದಾಗ್ಲೆಲ್ಲ ನಾನು ಸ್ಮೋಕ್ ಮಾಡೋಕ್ ಶುರು ಮಾಡ್ತೇನೆ. ಸಿಗರೇಟ್ ಹೋಗೇಗೇನೋ ಅದು ಮಾಯವಾಗಿಬಿಡತ್ತೆ” ಎಂದು ನಕ್ಕ. ಇವನಿಗೆ ತನಗಿಂತಲೂ ವಿಚಿತ್ರವಾಗಿ ಇದ್ದಾನಲ್ಲ ಈ ಮನುಷ್ಯ ಎನ್ನಿಸಿತು. “ಅಂದ್ಹಾಗೆ ಈ ವಿಷ್ಯ ಯಾರಿಗೂ ಹೇಳ್ಬೇಡಿ. ಪ್ಲೀಸ್… ನನ್ ಹೆಂಡ್ತಿಗೂ ಗೊತ್ತಿಲ್ಲ ಈ ಗಿಣಿಮರಿ ವಿಷ್ಯ…” ಎಂದನವನು. ಇವನು, “ಇಲ್ಲ ಇಲ್ಲ” ಎಂದು ಭರವಸೆ ಕೊಟ್ಟ. ಅದಕ್ಕವನು ಒಂದು ಥ್ಯಾಂಕ್ಸ್ ಕೂಡ ಹೇಳದೆ, ಮುಂದೆ ಬಂದ ಆಟೋವೊಂದನ್ನು ಏರಿ ಹೊರಟುಹೋದ. ಇವನಿಗೊಂದು ಬಾಯ್ ಕೂಡ ಹೇಳಲಿಲ್ಲ. ಅವನ ಮುಖವೂ ಜ್ಞಾಪಕ ಬರಲಿಲ್ಲ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಇವನಿಗೆ ಇಷ್ಟರವರೆಗೆ ನಡೆದದ್ದು ಕನಸೋ, ಇಲ್ಲಾ ತನ್ನ ಭ್ರಮೆಯೇ ಆಗಿರಬೇಕು ಎನ್ನಿಸುವಷ್ಟು ಕ್ಷಿಪ್ರವಾಗಿ ಈ ಘಟನೆಗಳು ನಡೆದುಹೋದವು. ಅಯ್ಯೋ ನಾನವನಿಗೆ ನನ್ನ ಹೊಸ ಐಡಿಯಾ ಹೇಳಲಿಲ್ಲ ಎಂದು ಗಿಣಿಮರಿ ಕೇಸ್ ಹೋದ ದಾರಿಯನ್ನೇ ನೋಡುತ್ತ ನಿಂತ.
ಆಫೀಸಲ್ಲಿದ್ದ. ಇವತ್ತೇನು ಅಷ್ಟೊಂದು ಕೆಲಸಗಳಿರಲಿಲ್ಲ. ಇದ್ದ ಚೂರುಪಾರು ಕೆಲಸ ಮುಗಿಸಿ ಖಾಲಿ ಆಗಿದ್ದ. ಖಾಲಿಯಾಗಿಬಿಟ್ಟರೆ ಭಯ ಶುರುವಾಗುತ್ತದೆ ಅವನಿಗೆ. ಮಿಣುಕು ಹುಳು ಬಂದುಬಿಡುತ್ತದೆಂಬ ಭಯ. ಮಿಣುಕು ಹುಳು ಬಂದು ಸಣ್ಣಗೆ ಮಿಂಚಿತಾದರೂ ಬೆಳೆವ ಸೂಚನೆಗಳು ಕಾಣುವ ಮೊದಲೇ ಎದ್ದು ಕ್ಯಾಂಟೀನಿಗೆ ಬಂದು ಟೀ ಹೀರತೊಡಗಿದ. ಅಲ್ಲೂ ಬಿಡಲಿಲ್ಲ. ಇವನು ಮಗ್ನನಾಗಿ ಚಹಾ ಹೀರುತ್ತಿರಬೇಕಾದರೆ ಬಂದ ಮಿಣುಕು ಹುಳು ಚಹಾ ಕಪ್‌ ನ ಸುತ್ತ ತಿರುಗತೊಡಗಿತು. ಅದರೊಳಗೆ ಬಿದ್ದೇ ಬಿಡುವಷ್ಟು ಹತ್ತಿರದಲ್ಲಿ ಹಾರಾಡತೊಡಗಿತು. ಅವನಿಗೆ ಕೈಲಿದ್ದ ಟೀ ಕಪ್‌ ಅನ್ನು ತಲೆಗೆ ಚಚ್ಚಿಕೊಳ್ಳಬೇಕು ಎನ್ನಿಸಿತು. ಹಲ್ಲುಕಚ್ಚಿಕೊಂಡು ಟೀ ಅಲ್ಲೆ ಇಟ್ಟು ಸಹೋದ್ಯೋಗಿ ಸ್ನೇಹಿತ ಕೂತಿರುವಲ್ಲಿಗೆ ಹೋಗಿ ನಗುತ್ತ ಮಾತಾಡತೊಡಗಿದ. ಏನೇನೋ ಅಸಂಬದ್ಧವಾಗಿ ಹರಟತೊಡಗಿದ. ಸ್ವಲ್ಪ ಸಮಯದಲ್ಲಿ ಮಿಣುಕುಹುಳು ಮೆಲ್ಲಗೆ ದೂರವಾಯಿತು. ವಾಪಾಸು ಬಂದು ತನ್ನ ಕಂಪ್ಯೂಟರ್ ಹತ್ತಿರ ಕುಳಿತ ತಕ್ಷಣ ಮತ್ತೆ ಬಂದು ತಲೆ ತಿನ್ನತೊಡಗಿತು. ಫೋನ್ ತೆಗೆದು ಅದರಲ್ಲಿ “ಜಸದಹದಹದಹಜಸಸಗಕಲಕಲ” ಅಂತ ಟೈಪ್ ಮಾಡತೊಡಗಿದ. ಬೆರಳಿಗೆ ಸಾಕಾಗುವವರೆಗೂ ಹಂಗೇ ಮಾಡಿದ. ಅಷ್ಟೊತ್ತಿಗೆ ಮಿಣುಕು ಹುಳು ಎಲ್ಲಿಗೋ ಓಡಿ ಹೋಗಿತ್ತು. ಅದೇ ಖುಷಿಯಲ್ಲಿ ಗಡದ್ದಾಗಿ ಬಿರಿಯಾನಿ ತಿಂದು ಮಲಗಿದ. ನಿದ್ದೆಯೂ ಬಂತು.

ಯಾರನ್ನೋ ಅಟ್ಟಿಸಿಕೊಂಡು ಓಡುತ್ತಿದ್ದಾನೆ? ಅವರ ಕೈಲೊಂದು ಚೀಟಿ. ಓಡುತ್ತಿರುವವರು ದಾರಿಯಲ್ಲಿ ಸಿಕ್ಕ ಮತ್ಯಾರಿಗೋ ಆ ಚೀಟಿ ಕೊಟ್ಟು ಓಡಿ ಹೋದರು. ಅವರು ಅದರೊಳಗೆ ಬರೆದದ್ದನ್ನು ನೋಡಿ ನಗತೊಡಗಿದರು. ಇವನಿಗೆ ಅಸಾಧ್ಯ ಸಿಟ್ಟು. ಅವರೂ ಓಡತೊಗಿದರು. ಇವನ ಕೈಗೆ ಸಿಗುತ್ತಿಲ್ಲ. ದಾರಿಯಲ್ಲಿ ಸಿಕ್ಕ ಕಲ್ಲೊಂದನ್ನು ತೆಗೆದು ಅವರ ತಲೆಗೆ ಗುರಿ ಮಾಡಿ ಬೀಸಿದ. ಪುಣ್ಯಕ್ಕೆ ಗುರಿತಪ್ಪಿತು. ಹೆದರಿ ನಿಂತವರು ಚೀಟಿಯನ್ನು ಇವನ ಕೈಗಿತ್ತು ಹೋದರು. ಇವನಿಗೋ ಅದರೊಳಗಿರುವುದನ್ನು ಆದಷ್ಟು ಬೇಗ ನೋಡಬೇಕೆಂಬ ಆತುರ. ಅಮ್ಮಾ! ಅಂತೂ ಸಿಕ್ಕಿತು! ಎಂದು ಚೀಟಿ ಬಿಡಿಸತೊಡಗಿದ.

ಎಚ್ಚರವಾಯಿತು. ಮುಖ ಹಸಿ ಹಸಿಯಾಗಿತ್ತು. ಹಸಿರು ಮಿಣುಕು ಹುಳು ಪಕ್ಕದಲ್ಲೇ ಮಲಗಿತ್ತು. ಇದನ್ನಿವತ್ತು ಸಾಯಿಸದೆ ಬಿಡಬಾರದೆಂಬಷ್ಟು ರೊಚ್ಚಾಯಿತು. ಕೈಯಿಂದ ಟಪ್ ಎಂದು ಬಡಿದ. ಹೊಸಕಿ ಹಾಕಲು ನೋಡಿದ. ಸಾಯಲಿಲ್ಲ ಅದು. ಮಿಣುಕುತ್ತ ದೊಡ್ಡದಾಗತೊಡಗಿತು. ಅದು ಬೆಳೆದು ರಾಕ್ಷಸಿಯಾಗಿ ತನ್ನನ್ನು ಕಿತ್ತು ತಿನ್ನುವುದರೊಳಗೆ ಕೊಲ್ಲಬೇಕೆಂದು ನಿರ್ಧರಿಸಿದ. ಅದನ್ನೆತ್ತಿ ಗೋಡೆಗೆಸೆದ. ಫೋನು ಮೂರು ಹೋಳಾಯಿತು. ಮಿಣುಕು ಹುಳು ಬೆಳೆಯುತ್ತಲೇ ಇತ್ತು. ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡ. ಮೊಂಡ ಇದೆ ಚಾಕು ಅನ್ನಿಸಿತು. ಗೊಡೆಗೆ ಉಜ್ಜತೊಡಗಿದ. ಮಿಣುಕು ಹುಳು ಬೆಳೆಯುತ್ತಲೇ ಇತ್ತು. ಇನ್ನೇನು ರಾಕ್ಷಸಿಯಾಗಿ ತನಗೆ ಬಾಯಿ ಹಾಕುತ್ತದೆ ಎನ್ನುವಾಗ ಚಾಕುವಿನಿಂದ ಚುಚ್ಚತೊಡಗಿದ. ಮಿಂಚು ಹುಳು ಸುಮ್ಮನೆ ಚುಚ್ಚಿಸಿಕೊಳ್ಳುತ್ತ ನಿಂತಿತ್ತು.


ಬೆಳಗಾಗುವಷ್ಟರಲ್ಲಿ ರಕ್ತ ಬಡ್ ರೂಮ್ ದಾಟಿ ಹಾಲ್‌ ನ ಕಾಲೊರಸನ್ನು ಪೂರ್ತಿ ಒದ್ದೆ ಮಾಡಿ ಹೊಸ್ತಿಲು ದಾಟಿ ಅಲ್ಲೇ ಮಲಗಿದ್ದ ನಾಯಿಮರಿಯ ಮೈಗೆ ತಾಗಿ ಅದನ್ನು ಎಚ್ಚರಿತು. ರಾತ್ರಿಯ ಹಸಿವನ್ನೆಲ್ಲ ಈಗಲೇ ತೀರಿಸಿಕೊಳ್ಳುವಂತೆ ನಾಯಿಮರಿ ಆ ರಕ್ತವನ್ನು ನೆಕ್ಕತೊಡಗಿತು. ಒಂದೆರಡು ಗುಟುಕಷ್ಟೇ ಬಿದ್ದಿರಬೇಕು ಹೊಟ್ಟೆಗೆ, ಅಷ್ಟರಲ್ಲಿ ಏನೋ ಗುಯ್ ಗುಯ್ ಸದ್ದು ನಾಯಿಯ ಕಿವಿ ತುಂಬಿ ಅದರ ತಲೆಚಿಟ್ಟು ಹಿಡಿಯತೊಡಗಿತು. ಮಿಣುಕು ಹುಳು ಅದರ ಕಣ್ಣ ಸುತ್ತ ಸುಳಿ ಸುಳಿ ಸುತ್ತುತ್ತ ಹುಚ್ಚೆಬ್ಬಿಸತೊಡಗಿತು. ನಾಯಿಮರಿ ಕೆಂಡದ ಮೇಲೆ ಕಾಲಿಟ್ಟಂತೆ ಅಲ್ಲಿಂದ ಓಡತೊಡಗಿತು. ಎಲ್ಲಿಯೂ ನಿಲ್ಲದೆ ಓಡತೊಡಗಿತು. ಓಡುತ್ತ ಓಡುತ್ತ ಕಾಲಿಗೆ ಯಾವುದೋ ನಿಲ್ಲದ ಆವೇಗ ಬಂದುಬಿಟ್ಟಿತು. ಈ ಶಹರದ ಬಸ್ಸುಗಳಿಗಿಂತ, ಮೆಟ್ರೋಗಿಂತ, ಕಾರು, ಮೋಟಾರುಗಳಿಂತ ವೇಗವಾಗಿ ನಾಯಿಮರಿ ಓಡತೊಡಗಿತು, ಓಡಿದಷ್ಟೂ ಅದರ ಆವೇಗ ಹೆಚ್ಚತೊಡಗಿತು.