ಮಳೆಗಾಲದಲ್ಲಿ ದಟ್ಟ ಮಂಜು ಆವರಿಸಿಬಿಟ್ಟರೆ ಐದಾರು ಮೀಟರುಗಳು ಸ್ಪಷ್ಟವಾಗಿ ಕಂಡರೆ ಹೆಚ್ಚು. ಉಳಿದಂತೆ ಮಂಜನ್ನೆ ಸೀಳಿಕೊಂಡು ಹೋಗಬೇಕಾಗಿರುತ್ತಿತ್ತು ಆಗ ಒಂಥರಾ ಥ್ರಿಲ್ ಆಗಿರುತ್ತಿತ್ತು. ವಾಹನ ಅಪಘಾತಗಳು ಸಂಭವಿಸುತ್ತಿದ್ದವು. ಮಳೆ ಜೋರಾಗಿ ಬಂದರೆ ಮಂಜು ಎಲ್ಲಿ ಹೋಗುತ್ತಿತ್ತೋ? ಬಹುಶಃ ಮಳೆಯ ರಭಸಕ್ಕೆ ಎಲ್ಲಿಯಾದರೂ ಅಡಗುತ್ತಿತ್ತೋ ತಿಳಿಯದು ರಣ ಮಳೆ ಚಚ್ಚಿ ಹೋದನಂತೆ ಯಾವುದೋ ಬಿಲದಿಂದ ಮೆಲ್ಲನೆ ಆಚೆ ಬಂದು ತಾಯಿ ಮಗುವನ್ನು ತಬ್ಬುವಂತೆ ಇಡೀ ಮಡಿಕೇರಿ ನಗರವನ್ನು ತಬ್ಬಿಬಿಡುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

ಭೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಹಳ್ಳ ತಿಟ್ಟಿಲ್ದಂಗೆ
ಮಡಿಕೇರಿ ಮೇಲ್ ಮಂಜು

ಈ ಸಾಲುಗಳು ಮಡಿಕೇರಿಯ ಮಂಜಿನ ಕುರಿತಾಗಿರುವ ಜಿ.ಪಿ ರಾಜರತ್ನಂ ಅವರ ಅದ್ಭುತ ಸಾಲುಗಳು ಆಕಾಶ ಭೂಮಿಗಳು ಮಂಜಿನ ಹೊದಿಕೆಯಲ್ಲಿಯೇ ಬಂಧಿಯಾಗಿವೆಯೇನೋ ಅನ್ನುವಷ್ಟು ಹಳ್ಳದಿಣ್ಣೆಗಳು ರಸ್ತೆ ಮನೆಗಳೆಲ್ಲ ಏಕ ಪ್ರಕಾರವಾಗಿ ಕಾಣುವಂತೆ ಮಂಜಿನ ಹೊದಿಕೆ ಹೊದ್ದು ಮಲಗುವ ಅಲ್ಲ ಕ್ರಿಯಾಶೀಲವಾಶಗಿರುವ ನಗರಿ ಮಡಿಕೇರಿ. ಮಳೆ ಬಂದು ನಿಂತು ಬಿಸಿಲು ಪ್ರಾರಂಭವಾಗುತ್ತಿದ್ದಂತೆ ಎಲ್ಲಾ ಕಚಡವನ್ನು ಒಟ್ಟು ಮಾಡಿ ಯಾರೋ ಬೆಂಕಿ ಇಟ್ಟು… ಆ ಹೊಗೆ ಹೀಗೆ ಸುರುಳಿ ಸುರುಳಿಯಾಗಿ ಸುತ್ತುತ್ತಿದೆಯೇ ಎನ್ನುವಂತೆ ಮಡಿಕೇರಿ ಮಂಜು ಬಿಸಿಲಿಗೆ ಆವಿಯಾಗುತ್ತಿತ್ತು.

ಮಂಜು ಮುಸುಕಿದ ಮಯಾನಗರಿ ಮಡಿಕೇರಿ ರಾಜಾಸೀಟಿನ ಮೂಲಕವೇ ಹೆಚ್ಚು ಪ್ರಸಿದ್ಧ ಇದರ ಹೊರತಾಗಿಯೂ ಅನೇಕ ಬೆಟ್ಟ ಪ್ರದೇಶಗಳು ಸೂರ್ಯಾಸ್ತ ಸೂರ್ಯೋದಯಗಳನ್ನು ನೋಡಲು ಇವೆ. ಪ್ರಥಮ ಮಳೆ ಬಂದಾಗಂತೂ ಹನಿ ಹನಿಯ ಸ್ಪರ್ಶ ಮೈ ತಾಗುತ್ತಿದ್ದಂತೆ ಎದೆ ಝಲ್ಲೆನಿಸುತ್ತಿತ್ತು ರೋಮಾಂಚನವಾಗುತ್ತಿತ್ತು. ಏಕ ಕಾಲಕ್ಕೆ ಮೈ ಮನಗಳನ್ನು ಪ್ರಫುಲ್ಲವಾಗಿಸುವ ಶಕ್ತಿ ಇರುವುದು ಪ್ರಕೃತಿಗೆ ಮಾತ್ರ. ಸೋತ ಮನಸ್ಸಿಗೆ ಉತ್ತೇಜನದ ಗುಳಿಗೆಗಳು ಮಳೆ ಎನ್ನಬಹುದು. ಮಳೆ ಕೆಲವರಿಗೆ ವರ್ಜ್ಯ ಕಾರಣ ದೈಹಿಕ ಕ್ಷಮತೆಯ ಕೊರತೆ ಇನ್ನೂ ಕೆಲವರಿಗೆ ಅಂದರೆ ಮಳೆಯನ್ನೆ ನಂಬಿ ಮಾಡುವ ಕೊಡೆ ರೈನ್ ಕೋಟ್ ವ್ಯಾಪಾರಿಗಳಿಗೆ ಅನಿವಾರ್ಯ. ಅಂತೂ ಮಡಿಕೇರಿಯಲ್ಲಿ ಹುಚ್ಚು ಮಳೆ, ಕೊಚ್ಚು ಮಳೆ, ಕೆಚ್ಚು ಮಳೆ ಹೆಚ್ಚು ಮಳೆ ಹೆಚ್ಚಾಗಿ ಬಿಡುವಿನಲ್ಲಿ ದಟ್ಟ ಮಝು ಆವರಿಸಿ ಮಠಮಠ ಮಧ್ಯಾಹ್ನವೂ ವಾಹನಗಳ ಹೆಡ್ ಲೈಟ್ ಹಾಕಿಕೊಂಡು ಓಡಾಡಬೇಕಾದ ಅನಿವಾರ್ಯತೆ ಈ ನಗರಿಗಿರುತ್ತದೆ.

ಮಳೆಗಾಲದಲ್ಲಿ ದಟ್ಟ ಮಂಜು ಆವರಿಸಿಬಿಟ್ಟರೆ ಐದಾರು ಮೀಟರುಗಳು ಸ್ಪಷ್ಟವಾಗಿ ಕಂಡರೆ ಹೆಚ್ಚು. ಉಳಿದಂತೆ ಮಂಜನ್ನೆ ಸೀಳಿಕೊಂಡು ಹೋಗಬೇಕಾಗಿರುತ್ತಿತ್ತು ಆಗ ಒಂಥರಾ ಥ್ರಿಲ್ ಆಗಿರುತ್ತಿತ್ತು. ವಾಹನ ಅಪಘಾತಗಳು ಸಂಭವಿಸುತ್ತಿದ್ದವು. ಮಳೆ ಜೋರಾಗಿ ಬಂದರೆ ಮಂಜು ಎಲ್ಲಿ ಹೋಗುತ್ತಿತ್ತೋ? ಬಹುಶಃ ಮಳೆಯ ರಭಸಕ್ಕೆ ಎಲ್ಲಿಯಾದರೂ ಅಡಗುತ್ತಿತ್ತೋ ತಿಳಿಯದು ರಣ ಮಳೆ ಚಚ್ಚಿ ಹೋದನಂತೆ ಯಾವುದೋ ಬಿಲದಿಂದ ಮೆಲ್ಲನೆ ಆಚೆ ಬಂದು ತಾಯಿ ಮಗುವನ್ನು ತಬ್ಬುವಂತೆ ಇಡೀ ಮಡಿಕೇರಿ ನಗರವನ್ನು ತಬ್ಬಿಬಿಡುತ್ತಿತ್ತು. ನೋಡಲು ಅಷ್ಟು ಖುಷಿ ಅನ್ನಿಸುತ್ತಿತ್ತು. ಇನ್ನು ಅದೇ ಮಂಜು ಬೆಟ್ಟಗಳ ಹತ್ತಿರವಿದ್ದರಂತೂ ಬೆಟ್ಟವನ್ನು ಚುಂಬಿಸಲು ಮಂಜು ಅಣಿಯಾಗಿದೆಯೇ? ಎಂದೆನಿಸುತ್ತಿತ್ತು.

ಮಡಿಕೇರಿ ಮಳೆಗಾಲದ ಇನ್ನೊಂದು ಗುರುತು ಎಂದರೆ ಅಲ್ಲಿ ಬೇರೆ ಬೇರೆ ವರ್ಗದವರು ಧರಿಸುತ್ತಿದ್ದ ಶೂಗಳು ಕೆಲವರು ಪ್ಯಾಂಟ್ ಕಾಣದಂತೆ ಗಂಬೂಟ್ ಧಸಿದರೆ ಇನ್ನು ಕೆಲವು ಪ್ಯಾಂಟ್ ಕಾಣುವಂತೆ ಬಟನ್ ಶೂಧರಿಸುತ್ತಿದ್ದರು. ಜಿಪ್, ಲೇಸ್ ಶೂಗಳು ಅಂದರೆ ಬಿಸಿಲಿಗೆ ಧರಿಸುವ ಶೂಗಳು ಎಂದು ಮತ್ತೇ ಹೇಳಬೇಕಿಲ್ಲ. ಶಾಲೆಗೆ ಬರುವ ಮಕ್ಕಳೂ ಮಳೆಗಾಲದ ಶೂಗಳನ್ನು ಧರಿಸಿ ಬರುತ್ತಿದ್ದರು. ಆ ಮಕ್ಕಳಿಗೂ ಅಷ್ಟೊಂದು ನಯವಾದ ಚಂದದ ಶೂಗಳನ್ನು ತಯಾರಿಸಿರುವರಲ್ಲ ಎಂದನ್ನಿಸುತ್ತಿತ್ತು. ಮಹಿಳೆಯರಿಗೂ ಯುವತಿಯರಿಗೂ ಮಳೆಗಾಲಕ್ಕೆ ಹೇಳಿದಂತೆ ಬಂದ ಶೂಗಳು ಚಪ್ಪಲಿಗಳು ಹೊಸ ಟ್ರೆಂಡನ್ನು ಸೃಷ್ಟಿಸುತ್ತಿದ್ದವು. ಹೆಂಗಳೆಯರು ಚಂದದ ಸ್ವೆಟರ್ ಜೊತೆಗೆ ಶಾಲ್‌ಗಳನ್ನು ಧರಿಸಿ ವುಲನ್ ಸ್ಕಾರ್ಫ್ ಕಟ್ಟುತ್ತಿದ್ದರು. ಇನ್ನು ಗಂಡಸರು ಒಳ್ಳೆಯ ಆಫ್ ಫುಲ್ ಸ್ವೆಟರ್ ಜೊತೆಗೆ ಕೋಟಿನ ಮಾದರಿ ಸ್ವೆಟರ್ ಜೊತೆಗೆ ಮಂಕಿ ಕ್ಯಾಪ್ ಮಫ್ಲರ್ ಧರಿಸುತ್ತಿದ್ದರು. ಇನ್ನು ಚಿಕ್ಕ ಹುಡುಗಿಯರು ಕಲರ್ ಕಲರ ಶ್ರಗ್, ಕೇಪ್‌ಗಳನ್ನು ಧಸುತ್ತಿದ್ದರು. ಇನ್ನು ಅವರ ಟೋಪಿಗಳು ಕೇಳಬೇಕೆ? ಕಾರ್ಟೂನ್ ಮೂತಿಗಳೊಂದಿಗೆ ಸಿಂಗಲ್ ಡಬಲ್ ಜಡೆಗಳು ಟೋಪಿಗಳಲ್ಲೆ ಇನ್ಬಿಲ್ಟ್ ಇರುತ್ತಿದ್ದವು. ಅವರವರು ಧರಿಸುವ ಸ್ವೆಟರ್ ಕೋಟ್‌ಗಳು ಅವರ ಶ್ರೀಮಂತಿಕೆಯ ಸಂಕೇತ ಎನ್ನುವಂತೆ ಇರುತ್ತಿದ್ದವು. ನಮ್ಮ ಶಾಲೆಯಲ್ಲಿ ಶನಿವಾರಗಳಂದು ಮಾತ್ರ ಇವುಗಳಿಗೆ ಅವಕಾಶವಿತ್ತು,. ಸೋಮವಾರದಿಂದ ಶುಕ್ರವಾರದವೆರಗೆ ಯೂನಿಫಾರ್ಮ್ ಸ್ವೆಟರ್‌ಗಳನ್ನು ಹಾಕಬೇಕಿತ್ತು. ಮಳೆ ಅಂದರೆ ಶೀತ ಜ್ವರವೂ ಇರಬೇಕು ಅಲ್ವೆ! ಮನೆಮದ್ದುಗಳನ್ನು ಹೆಚ್ಚಾಗಿ ಕೊಡುತ್ತಿದ್ದರು. ತೀರ, ಜ್ವರ, ತಲೆನೋವು ಬಿಡುತ್ತಿಲ್ಲ ಎಂದರೆ ಅನಾಸಿನ್, ಕ್ರೋಸಿನ್, ನಂತರದ ದಿನಗಳಲ್ಲಿ ಆಕ್ಷನ್‌ ಫೈವ್ ಹಂಡ್ರೆಡ್ ತಂದು ಕೊಡುತ್ತಿದ್ದರು. ಶೀತದ ಸಮರದ ನಡುವೆಯೇ ಟೆಸ್ಟ್ ಸಮರವೂ ನಡೆದು ಉತ್ತಮ ಫಲಿತಾಂಶ ಬಂದರಂತೂ ಶಾಲಾ ಜೀವನ ಶಾಲ್ಯಾನ್ನ ತಿಂದಷ್ಟು ಖುಷಿ……

ಶಾಲೆಗೆ ಹೋಗುವ ಮಕ್ಕಳಲ್ಲಿ ಶಾಲೆ ಕಂಡರೆ ಅತೀವ ದುಃಖ ಇರಬಹುದು. ಆದರೆ ಶಾಲಾ ಬದುಕೇ ಇಡೀ ಜೀವನದ ಮರೆಯಲಾಗದ ಅನುಭೂತಿಗಳಲ್ಲಿ ಒಂದಾಗಿರುತ್ತದೆ. ನಮ್ಮ ಶಾಲೆಯಲ್ಲಂತೂ ತೀವ್ರ ಮಳೆಯಾದರೆ ಮಕ್ಕಳನ್ನು ಪೋಷಕರ ಸುಪರ್ದಿಗೆ ಮಕ್ಕಳನ್ನು ಒಪ್ಪಿಸುವವರೆಗೆ ಶಾಲಾ ಸಿಬ್ಬಂದಿಗಳು ಮನೆಗೆ ಹೋಗದೆ ಕಾಳಜಿ ವಹಿಸುತ್ತಿದ್ದುದು ಜವಾಬ್ದಾರಿ ಎನ್ನುವುದಕ್ಕೆ ಮಾದರಿ ಎಂಬಂತೆ ಇತ್ತು. ಇಂಥ ಮಳೆಗಾಲದಲ್ಲಿ ಪಕ್ಕದ ಮನೆಯಲ್ಲಿಯೂ ಏನಾಗುತ್ತಿತ್ತೋ ತಿಳಿಯುತ್ತಿರಲಿಲ್ಲ. ಮಡಿಕೇರಿ ಭಾಗದಲ್ಲಿ ಮಳೆಗಾಲದಲ್ಲಿ ನಾಡು ತರಕಾರಿಗಳು ಹೆಚ್ಚು. ಹಾಗಾಗಿ ವಿನಿಮಯಕ್ಕಾಗಿ ಆಚೆ ಬರುತ್ತಿದ್ದರು ಅಷ್ಟೆ. ಒಂದು ರೀತಿಯ ಗೃಹಬಂಧನ ಈ ಮಳೆಗಾಲದಲ್ಲಿ ಎಂದರೂ ತಪ್ಪಿಲ್ಲ. ನಾವು ಚಿಕ್ಕವರಿದ್ದಾಗ ಇದ್ದ ಮಳೆಗಾಲ ಈಗಿಲ್ಲ ಎನ್ನುತ್ತಾರೆ. ಈಗ ಮಳೆಗಾಲ ಅಂದರೆ ಪ್ರವಾಸಿಗಳ ಕಲರವ ಎನ್ನಬಹುದು. ಉದ್ಯಮದ ಹೆಸರಿನಲ್ಲಿ ಮಡಿಕೇರಿ ಸೌಂದರ್ಯ ಮಾರಾಟವಾಗುತ್ತಿದೆ ಎಂದರೂ ತಪ್ಪಿಲ್ಲ. ರಾಜಾಸೀಟು, ಹೋಟೆಲ್ ವ್ಯಾಲಿ ವ್ಯೂ, ಮಾಂದಲಪಟ್ಟಿ ಇವೆಲ್ಲಾ ಪ್ರಕೃತಿ ಸೊಬಗನ್ನು ಸವಿಯಲು ಇರುವ ಎತ್ತರದ ತಾಣಗಳು. ಯಥೇಚ್ಛ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹೋಂ ಸ್ಟೇ ಎಂಬ ಹೊಸ ಉದ್ಯಮ ಪ್ರಾರಂಭವಾಗಿದ್ದು ಬಹಳ ಸಂತಸವೇ; ಆದರೆ ಅಲ್ಲಿಯೂ ಕೃತಕತೆ ಇದೆ. ನನ್ನ ಆತ್ಮೀಯರೊಬ್ಬರದು ಹೋಂ ಸ್ಟೇ ಇದೆ. ಅವರು ಬರುವ ಗ್ರಾಹಕರಿಗೆ ಬೆಳಗ್ಗಿನ ತಿಂಡಿ ಕೊಡಬೇಕಾಗಿ ಬಂದಾಗ ರೆಡಿ ಸಿಗುವ ಶ್ಯಾವಿಗೆಯಲ್ಲಿ ಉಪ್ಪಿಟ್ಟು ತಯಾರಿಸಿ ಕೊಟ್ಟೆ ಎಂದಾಗ ಹೋಂ ಮೇಡ್ ಅನ್ನುವ ಪರಿಕಲ್ಪನೆ ಕ್ಷಣಕ್ಕೆ ಕಣ್ಮರೆಯಾಯಿತು. ಹೋಂ ಮೇಡ್ ಚಾಕಲೇಟ್, ವೈನ್, ಕಾಚುಂಪುಳಿ, ಮಸಾಲ ಪದಾರ್ಥಗಳು ಜೇನು, ಚೆರ್ರಿ, ಕಾಫಿಪುಡಿ ಮೊದಲಾದ ವಸ್ತುಗಳು ಹೋಂ ಸ್ಟೇ, ಅದಕ್ಕೆಂದೆ ಇರುವ ಔಟ್ಲೆಟ್‌ಗಳ ಮೂಲಕವೇ ತಮ್ಮ ಪ್ರಚಾರ ಮತ್ತು ಬೇಡಿಕೆಯನ್ನು ಹಿಗ್ಗಿಸಿಕೊಂಡಿವೆ ಎಂದರೆ ತಪ್ಪಿಲ್ಲ.

ಪಂಜೆಮಂಗೇಶರಾಯರ ಗೀತೆಯಲ್ಲಿ ಅಲ್ಲಿ ಆ ಕಡೆ ನೋಡಲಾ ಅಲ್ಲಿ ಕೊಡವರ ಬೀಡಲಾ ಅಲ್ಲಿ ಕೊಡವರ ನಾಡಲಾ ಎಂಬ ಸಾಲುಗಳು ಬರುತ್ತವೆ. ಆದರೆ ಇಂದು ಎಲ್ಲಿ ನೋಡಿದರೂ ಹೋಂ ಸ್ಟೇಗಳೆ ಕಾಣಬರುತ್ತವೆ. ಗುಡ್ಡಗಳು ಜೆಸಿಬಿಗಳ ಅಬ್ಬರಕ್ಕೆ ಕರಗಿ ನೆಲಸಮವಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಆದ ಲ್ಯಾಂಡ್ ಸ್ಲೈಡಿಂಗಿಗೂ ಇದೆ ಮೂಲ ಕಾರಣವಾಗಿದ್ದು ವಿಷಾದಕರ.

ಆಟಿ ತಿಂಗಳು ಒಂದು ತಿಂಗಳು ಮಡಿಕೇರಿ ಸಂಪೂರ್ಣ ಸ್ತಬ್ಧ. ನಂತರ ಸಾಂಸ್ಕೃತಿಕ ಧಾರ್ಮಿಕ ಚಟುವಟಿಕೆಗಳು ಗರಿಗೆದರುತ್ತವೆ. ಹಸಿ ಬಾಣಂತಿ ಬಾಣಂತನ ಮಿಗಿಸಿ ಮುಸುಕು ತೆಗೆಯುವಂತೆ, ಹಾವು ಪೊರೆ ಕಳಚಿದ ಹಾವು ಹೊಸ ಚರ್ಮದೊಂದಿಗೆ ಬಿಸಿಲಿಗೆ ಬಂದಂತೆ ಮಳೆಗಾಲ ಮುಗಿಯುವಾಗ ಭಾಸವಾಗುತ್ತದೆ. ಅಂಥ ಚೆಲುವು ಮಳೆಗಾಲಕ್ಕೆ ಇರುತ್ತದೆ. ಮಳೆಗಾಲ ಮುಗಿಯುತ್ತಿದ್ದಂತೆ ಎಳೆ ಬಿಸಿಲಿಗೆ ಮೈಯೊಡ್ಡೊವ ಎಳೆ ಮಕ್ಕಳಂತೆ ಗಿಡಗಳು ಹೊಸದಾಗಿ ಚಿಗುರೊಡೆದು ಮೈಚಾಚಲು ಪ್ರಾರಂಭವಾಗುತ್ತವೆ. ಹಾಗೆ ಹಾವುಗಳು ಕೂಡ ಬಿಲದಿಂದ ಆಚೆ ಬಂದು ಅಲ್ಲಲ್ಲಿ ಸರಿದಾಡುತ್ತಿರುತ್ತವೆ. ಮಳೆ ನಂತರವೂ ಹೊಸ ಬ್ಯುಸಿನೆಸ್ ಪ್ರಪಂಚ ತೆರೆದುಕೊಳ್ಳುತ್ತದೆ. ಬಿಸಿಲು ಎಂದರೆ ಅದು ಬೆಳಕು ಅನ್ನಿಸುವಷ್ಟು ಮಾತ್ರ ಮೈಗೆ ಶಾಖವೇ ತಾಗದ ಬಿಸಿಲು.

ಬೆಳಗ್ಗೆ ಎಂಟಾದರೂ ಫ್ರಿಡ್ಜ್ ತೆಗೆದಾಗ ಬರುವ ತಣ್ಣನೆ ಗಾಳಿ ಎಲ್ಲೆಡೆ ಬೀಸಿದಂತೆ ಸುತ್ತಲೂ ಗಾಳಿ ಬೀಸುತ್ತಿದೆ ಅನ್ನಿಸುತ್ತಿತ್ತು. ಅಷ್ಟರಲ್ಲಿ ಶ್ರಾವಣ ಮಾಸ ಮುಗಿದು ಗೌರಿ ಹಬ್ಬದ ಕಾಲ ಗೌರಿ ಹೂ, ಡೇಲಿಯಾ, ಹಳದಿ, ನೇರಳೆ, ತಿಳಿನೀಲಿ, ತಿಳಿಗುಲಾಬಿ ಗೊರಟೆ ಇಲ್ಲವೆ ಸ್ಫಟಿಕ ಹೂಗಳ ಕಾಲ ಹೈಬ್ರೀಡ್ ದಾಸವಾಳ ಹೂಗಳು ಅರಳಿದರೆ ಆ ನಿತ್ಯ ಸುಂದರಿಯರನ್ನು ನೋಡುತ್ತಲೇ ನಿಲ್ಲಬೇಕೆನಿಸುತ್ತಿತ್ತು. ಹೂಗಳಿರುವುದು ಅದರ ಸೌಂದರ್ಯವನ್ನು ಗಿಡದಲ್ಲಿಯೇ ಸವಿಯುವುದು ಚೆನ್ನಾಗಿರುತ್ತದೆ. ಚಿಗುರಿನಲ್ಲಿ ಒಡಮೂಡಿದ ಮೊಗ್ಗು ಬಿರಿದು ತುಸು ಬಿರಿದು ನಸು ಬಿರಿದು ಗೆಲುವಾಗೆಲೆ ಮನ ಎನ್ನುವಂತೆ ಪೂರ್ಣ ಅರಳಿನಿಂತು ಬಾಗಿ ಬಳುಕುತ್ತಿದ್ದರೆ ಬಾಲೆಯೊಬ್ಬಳು ಬ್ಯಾಲೆ ನೃತ್ಯ ಮಾಡುತ್ತಿದ್ದಂತೆ ಅನ್ನಿಸುತ್ತದೆ. ನಂತರ ಪಕಳೆಗಳು ಒಂದೊಂದೆ ಉದುರುತ್ತಿದ್ದರೆ ಅದರ ಬೋಳು ತೊಟ್ಟನ್ನು ಕತ್ತರಿಸದರೆ ಮತ್ತೆ ಎರಡು ಕವಲಾಗಿ ಚಿಗುರೊಡೆಯುವುದು, ಮತ್ತೆ ಯೌವ್ವನವನ್ನು ಬಯಸುವ ಗಿಡದ ಹಂಬಲ ವರ್ಣನಾತೀತ. ಹಾಗೆ ಜೀವನವೂ…. ಜೀವನದ ಉತ್ಕರ್ಷವನ್ನು ತಲುಪಿದ ಬಳಿಕ ಹಿರಿಯರು ಕಿರಿಯರಿಗೆ ಅವಕಾಶ ಕೊಡಬೇಕು ಎನ್ನುವ ಪ್ರಕೃತಿ ನಿಯಮ ತನ್ನಿಂದಲೆ ಪ್ರಮಾಣುವಾಗುತ್ತದೆ.

ಕೊಡಗಿ ವರ್ಷಕಾಲದ ವರ್ಣನೆ ಪದಗಳಿಗೆ ನಿಲುಕದ್ದು ಮಾತಿನ ಬಂಧಕ್ಕೂ ಒಳಪಡದ ವಿಶೇಷ ಅನುಭೂತಿ. ಅದನ್ನು ಅನುಭವಿಸಿಯೇ ತೀರಬೇಕು. ವರ್ಷದಿಂದ ವರ್ಷಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ವಿಶೇಷ ಅನುಭವವನ್ನು ಹರಳಾಗಿಸಿಕೊಂಡು ಸೊಗಯಿಸುತ್ತದೆ.