”ಮೂರು ದಿನ ಕಳೆದು ಮನೆಗೆ ಹೋದರೂ ಮಗುವನ್ನು ನೋಡಲು ಬರದ ಬಕ್ಕತಲೆಯವನ ಸುತ್ತಲೂ ಕತೆಗಳು ಹುಟ್ಟ ತೊಡಗಿದ್ದವು.ಕಿವಿಗೆ ಬೀಳಹತ್ತಿದ ಮಾತುಗಳು ಕಿವಿಯಿಂದ ಹೃದಯಕ್ಕಿಳಿದು ಇರಿಯಲು ಬಹಳ ಸಮಯ ಬೇಕಾಗಲಿಲ್ಲ. ಅಳಿಯಂದಿರು ಕೆಲಸದ ಮೇಲೆ ಹೋಗಿರುವರೆಂದೂ ಬರಲು ನಾಲ್ಕೈದು ದಿನ ತಡವಾಗುವುದೆಂದೂ ಅಮ್ಮ ಬರುಹೋಗುವ ಎಲ್ಲರೊಡನೆ ಸಮರ್ಥಿಸಿಕೊಳ್ಳಲು ಶುರುವಿಟ್ಟಳು.ಆದರೆ ಅವನು ಬರುವುದೇ ಇಲ್ಲವೆಂಬ ಸತ್ಯ ನನಗೂ ಶ್ರೀಧರನಿಗೂ ಎಂದೋ ತಿಳಿದುಹೋಗಿತ್ತು”
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹದಿಮೂರನೆಯ ಕಂತು.
ಹೂ ಅರಳುವ ಕಾಲಕ್ಕೆ ಹೊಸ ಸುಗಂಧವೊಂದು ಮನೆಯ ಸುತ್ತೂ ಹರಡುತ್ತಿತ್ತು. ಹೊಸಾ ಬಡಾವಣೆಯ ಹೊಸ ಮನೆ ನಮ್ಮದು. ಸುತ್ತಲೂ ಹೆಚ್ಚಿನ ಗಿಜಿಗಿಜಿಯಿರಲಿಲ್ಲ. ಅತ್ತತ್ತಲಾಗೆ ದೊಡ್ಡ ದೊಡ್ಡ ಮರಗಳ ತೋಪೊಂದಿತ್ತು. ಕತ್ತಲಾದರೆ ಸಾಕು! ನಾನು ಆ ಕಡೆ ತಿರುಗುತ್ತಲೂ ಇರಲಿಲ್ಲ. ಮುಂದಿನ ಸಾಲಿನ ಮರಗಳಾಚೆ ಎರಡು ಬಿಳೀ ಗೋರಿಗಳು ಕಾಣುತ್ತಿದ್ದವು. ಅಮಾವಾಸ್ಯೆಯ ದಿನಕ್ಕಂತೂ ಸಂಜೆ ಬಾಗಿಲಿಗೆ ಎರಡು ಅಗರಬತ್ತಿ ಸಿಕ್ಕಿಸಿ ಒಳಹೊಕ್ಕುಬಿಟ್ಟರೆ ಇನ್ನು ಬೆಳಗಿನ ಜಾವಕ್ಕೇ ಮಾತು. ಭಯದ ಕುರಿತು ಯಾರಿಗಾದರೂ ಹೇಳಿಕೊಂಡುಬಿಟ್ಟರೆ ಗತ್ತು ತಗ್ಗುವುದೆಂಬ ಸಂಕಟ ಬೇರೆ! ಇಂತಹ ಸುಳ್ಳೇ ಗತ್ತುಗಳ ಪೊರೆಯುವಾಗ ಅಮ್ಮನ ಜಮೀನ್ದಾರೀ ಮನೆತನದ ಸುಳ್ಳೇ ಅಹಂಕಾರಗಳು ನೆನಪಾಗಿ ಸಿಟ್ಟು ಬರಿಸುತ್ತಿದ್ದವು.
ಒಂದಿನ ವಿಪರೀತವಾದ ಸುಸ್ತು ಹಾಗೂ ಈ ಲೋಕದ್ದಲ್ಲದಂಥಾ ಸಂಕಟವೊಂದು ಮಡಿಲು ತುಂಬಿತ್ತು. ಬೆಳಗ್ಗೆ ಮಲಗಿದವಳು ಸಂಜೆಗೂ ಮೇಲೆದ್ದಿರಲಿಲ್ಲ. ಯಾರಾದರೂ ತಲೆಯ ಬಳಿ ಕುಳಿತು ಮುಂಗುರುಳು ನೇವರಿಸಬಹುದೆಂಬ ಬಯಕೆ. ರಾತ್ರಿ ದುರ್ನಾತದ ದೇಹ ಹೊತ್ತು ಬಾಗಿಲು ಇದೆಯೆಂಬ ಕಾರಣಕ್ಕೆ ಮನೆ ಹೊಕ್ಕುತ್ತಿದ್ದ ಆ ಆಸಾಮಿಯನ್ನು ಬಿಟ್ಟರೆ ಇಡೀ ದಿನ ಒಂದು ನೊಣವೂ ನನ್ನ ಬಳಿಗೆ ಬರಲಿಲ್ಲ. ಸೌಹಾರ್ದವಿಲ್ಲದ ದಾಂಪತ್ಯವೊಂದು ಎಷ್ಟು ರಸಹೀನವಾಗಿರಲು ಸಾಧ್ಯವೋ ಅಷ್ಟೂ ಪೇಲವ ಸಮಯ ಕಳೆಯುವುದು ಅಗಾಧವಾಗಿತ್ತು. ಎರಡು ದಿನ ಯುಗಗಳಂತೆ ಕಳೆದು ಅಮ್ಮನಿಗೆ ಫೋನು ಮಾಡಿದಾಗ ಅವಳು ಹಾಗೆ ಒಂದೇ ಉಸಿರಿಗೆ ಓಡಿ ಬರುವಳು ಅಂತ ಎಣಿಸಿರಲೇ ಇಲ್ಲ. ಹಾಗೆ ಬಂದವಳು ಆಸ್ಪತ್ರೆಗೆ ತೋರಿಸಿ ನಿಜದ ಸಂಕಟವೊಂದನ್ನು ಮಡಿಲಿಗೆ ತುಂಬುವಳೆಂದೂ ಗೊತ್ತಿರಲಿಲ್ಲ. ನನ್ನ ಉಸಿರೇ ಭಾರವಾಗಿದ್ದ ಭೂಮಿಗೆ ನಾನೇ ಉಸಿರು ಹೊತ್ತು ತರುವ ಸಮಯ ಬಂದಿದೆ ಎಂದು ತಿಳಿದು ಬಂದಾಗ ಅತೀತ ಆನಂದ ಅನುಭವಿಸುವ ಬದಲು ಅಗಾಧ ನೋವು ಹತ್ತಿದ್ದೇಕೋ ಇಂದಿಗೂ ಅರಿವಿಲ್ಲ. ಆದರೆ ಆಸ್ಪತ್ರೆಯಿಂದ ಹೊರಬರುವ ದಾರಿಯಲ್ಲಿ ಅಮ್ಮ ಹಿಂದೆಂದೂ ಇಲ್ಲದ ಮಮತೆಯೊಂದಿಗೆ ಏನೇನೋ ವಿಚಾರಗಳನ್ನು ಕೆದಕಿ ಕೇಳುವಾಗ ಇವಳು ಯಾವತ್ತೂ ಹೀಗೇ ಇದ್ದಿದ್ದರೆ… ಅನ್ನಿಸಿತ್ತು. ಅವಳ ಅವಕಾಶವಾದಿ ಪ್ರೀತಿ ಹಾಗೂ ಸಂತಸ ಹೇಸಿಗೆಯೆಸಿತು.
ಮಡಿಲು ತುಂಬಿತ್ತಾದರೂ ಮನಸು ಭಗ್ನವಾಗಿತ್ತು. ತಾಯಾಗುವ ದಿನಗಳು ಮುದ ನೀಡುವ ಬದಲು ಖೇದವನ್ನೇ ಪಕ್ಕಾಗಿಸಿದ್ದವು. ನನ್ನ ಮಡಿಲ ಭಾರಕ್ಕೆ ಕಾರಣನಾದವನು ನಿರಾಕಾರನಾಗಿ ನನ್ನ ಸಾಂಗತ್ಯ ಬಿಟ್ಟು ಬದುಕತೊಡಗಿದ್ದ. ಅಮ್ಮ ಊರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದಳು. ಮಾವ ಬಾಣಂತನದ ಭಾರ ಬರದಂತೆ ನಿಭಾಯಿಸಲು ಅಣಿಯಾಗುತ್ತಿದ್ದ. ಶ್ರೀಧರನು ಎಲ್ಲವೂ ಸರಿಯಾಗಿ ನಡೆಯುತ್ತಿದೆಯೆಂಬ ಭ್ರಮೆ ಹುಟ್ಟಿಸುವಲ್ಲೇ ನಿರತನಾಗಿದ್ದ. ವಾಸ್ತವ ನನಗೆಷ್ಟು ಕಹಿಯಾಗಿತ್ತೋ ಅವನಿಗೂ ಅಷ್ಟೇ ನುಂಗಲಾರದ ತುತ್ತಾಗಿತ್ತು. ಅಮ್ಮನಿಗೆ ಧಿಡೀರೆಂದು ಕರ್ತವ್ಯವ್ಯಾಪ್ತಿ ನೆನಪಾಗಿ ಬಾಣಂತನದ ತಯಾರಿಗೆ ತೊಡಗಿದಳು. ‘ಅಳಿಯಂದಿರಿ’ಗೆ ತುಸು ಹೆಚ್ಚೇ ಉಪಚಾರ ಗೋಚರವಾಗತೊಡಗಿತು. ನಾನು ಮತ್ತೊಮ್ಮೆ ಎಲ್ಲರ ಘನತೆಗೆ ಗೌರವಕ್ಕೆ ಕಾರಣಳಾಗಿದ್ದೆ. ಕೆಲವರ ಅಹಮ್ಮಿನ ಬಣ್ಣಗಳು ಚಿತ್ತಾರವಾಗಿ ಮಾರ್ಪಡಲು ಸಹಾಯವಾಗಿದ್ದೆ.
* * * *
‘ಸರಿಯಾದ ಡೇಟ್ ಗೊತ್ತಿಲ್ವಲ್ಲಾ ನಿಂಗೆ.. ಇನ್ನೇನು ಹೇಳೋದು.’ ಅಂದ ಡಾಕ್ಟರ ದೇಶಾವರಿ ಮುಖಚಹರೆ ಕಂಡು ಮಾತೇ ಹೊರಡದೇ ಸುಮ್ಮನಿದ್ದೆ. ವಕ್ರದಾಂಪತ್ಯದ ಸುಖವನ್ನೇ ಅರಗಿಸಿಕೊಳ್ಳಲಾಗದ ಮನಸಿಗೆ ಈ ಹೇಸಿಗೆಯ ದಿನಗಳಿಗೆ ಮಗುವನ್ನೂ ಹಡೆದು ತಂದಿಡುವ ಬಯಕೆಯಿರಲಿಲ್ಲ. ‘ಸರ್, ಏನಾದರೂ ಮಾಡಿ ಈ ಮಗು ಹುಟ್ಟದ ಹಾಗೆ ಮಾಡಿ. ಅದೇನೋ ಅಬಾರ್ಶನ್ ಅಂತಾರಲ್ಲಾ ಅದು ಮಾಡೋಕೆ ಆಗಲ್ವಾ ಸರ್?’ ಡಾಕ್ಟರು ಕ್ಷಣಕಾಲ ನನ್ನ ಮುಖವನ್ನೇ ದಿಟ್ಟಿಸಿದರು. ನನ್ನ ಕಣ್ಣಲ್ಲಿ ಹನಿಯಿದ್ದರೂ ನೋಟ ದಿಟ್ಟವಾಗಿತ್ತು. ಏನನ್ನಿಸಿತೋ… ‘ಜೊತೆಗೆ ಗಂಡನೋ ಅಪ್ಪ ಅಮ್ಮನೋ ಯಾರೂ ಇಲ್ಲದೇ ಹೀಗೆ ಬಂದಿದ್ದೀಯಲ್ಲಾ ಏನು ವಿಷಯ?’ ಎಂದವರೇ ಏನೋ ಕಳ್ಳತನ ಹುಡುಕುವವರಂತೆ ನನ್ನ ಚಲನವಲನವನ್ನೇ ನೋಡುತ್ತಿದ್ದರು. ಏನೂ ಉತ್ತರಿಸಲು ತೋರದೇ ‘ಮನೇಲಿ ಪರಿಸ್ಥಿತಿ ಸರಿಯಿಲ್ಲ ಸರ್. ನನಗೇ ಕಷ್ಟ ಇದೆ. ಅದರಲ್ಲಿ ಈ ಮಗೂನೂ ಸಾಕೋದು ಕಷ್ಟವಾಗಬಹುದು. ಅದಕ್ಕೆ ಇದು ಬೇಡ ಸರ್..’ ಎಂದು ಧೈರ್ಯವಾಗಿ ಉತ್ತರಿಸಿದವಳನ್ನ ದಿಟ್ಟಿಸಿದ ಅವರು ‘ಸರೀ… ಇಷ್ಟೆಲ್ಲಾ ತಿಳಿದೋಳು ಮೊದಲೇ ಬರಬೇಕು ತಾನೇ..? ಈಗ ಬಂದಿದೀಯಲ್ಲಾ… ನಾಲ್ಕು ತಿಂಗಳು ಕಳೆದೇ ಹೋಗಿದೆ. ಈಗ ಆಗಲ್ಲ..’ ಆ ಕ್ಷಣ ಆ ಡಾಕ್ಟರೆಂಬೋ ಮಹಾನುಭಾವನ ಕಾಲಾದರೂ ಹಿಡಿದರೆ ತಪ್ಪಿಲ್ಲ ಅನ್ನಿಸಿತ್ತು. ಒಂದು ಸತ್ಯ ಏನೆಂದರೆ ಅದುವರೆಗೂ ಬದುಕಲ್ಲಿ ಇಂತಹ ಅಸಹಾಯಕತೆ ಕಾಡಿದ್ದಿಲ್ಲ. ಏನಾದರೂ ಗೆದ್ದೇನು, ಮತ್ತೆ ಜೀವಿಸಿಯೇನು, ಸಾವು ಎದುರು ಕಂಡರೂ ಬದುಕಿಗಾಗಿ ಅಂಗಲಾಚಿಯೇ ತೀರುವೆನು ಎಂದು ತಿಳಿದ ಗಟ್ಟಿಗಿತ್ತಿಯನ್ನು ಇದೊಂದು ಕ್ಷಣ ಹೀಗೆ ಅಪಾಹಿಜ್ ಮಾಡಿಬಿಡುವುದೆಂಬ ಸುಳಿವಿರಲಿಲ್ಲ. ಒಂದು ಗಂಟೆಯ ಕಾಲ ತಿಳಿದ ಜಾಣತನವೆಲ್ಲಾ ಉಪಯೋಗಿಸಿ ದೈವವೆಂದು ಬಗೆದಿದ್ದ ಡಾಕ್ಟರರ ಬಳಿ ಮಾತಾಡಿದ್ದೇ ಬಂತು ವಿನಃ ಭಾರ ಹೊರದೇ ಬೇರೆ ದಾರಿಯಿರಲಿಲ್ಲ.
ಮನೆಗೆ ಹೋಗಿ ದಿನಗಟ್ಟಲೇ ಪಪ್ಪಾಯಿ ಹಣ್ಣು ತಿಂದು ಮೆಣಸು ಕಾಳಿನ ಕಷಾಯ ಕುಡಿದು ಹಸಿಮೆಣಸಿನ ಚಟ್ನಿ ಅನ್ನ ಮೆದ್ದು… ಯಾವುದೂ ಫಲ ನೀಡದೇ ಮಡಿಲಿಗೆ ಜೀವ ಬಂದ ಮೇಲೆ ಮೆಲ್ಲನೆ ಎದೆಯ ಬೆಂಕಿಗೆ ತಾಯ್ತನದ ಉದಕಾಭಿಷೇಕವಾಗಿ ನಾನು ಕರಗತೊಡಗಿದೆ. ಹೊಟ್ಟೆಯೊಳಗಿನ ಸಣ್ಣವೇ ಮಿಸುಕಾಟಗಳೂ ಈಗ ಗೋಚರಿಸತೊಡಗಿದವು. ಅಲುಗಿದ್ದು ಕಾಲೋ ಕೈಯೋ ಮೈಯ ಯಾವ ಭಾಗವೋ ಗೊತ್ತಾಗದೇ ರೋಮಾಂಚನ ಮೂಡಿ ಚಿಂತೆಗೆ ಹಚ್ಚುತ್ತಿತ್ತು. ಮಗುವಿನ ಹುಟ್ಟು, ಆಕಾರ ಹಾಗೂ ನವಿರು ಇರುವಿಕೆಯ ಊಹೆಗೆ ರೆಕ್ಕೆ ಮೂಡುತ್ತಿತ್ತು. ಮಡಿಲಲ್ಲಿ ಮಲಗಿ ಎದೆಹಾಲಿಗೆ ತಲ್ಲಣಿಸುವ ಆ ಪುಟ್ಟ ಆಕಾರವೊಂದರ ಚಹರೆಯ ಊಹೆ ಹೊಸ ಲೋಕವೊಂದನ್ನೇ ಸೃಷ್ಟಿಸುತ್ತಿತ್ತು. ಮುಷ್ಠಿಗಟ್ಟಿದ ಕೈ… ಸದಾ ಒದೆಯುವ ಕಾಲುಗಳು… ಹಲ್ಲಿಲ್ಲದ ಮುಗುಳು ನಗುವ ಬಾಯಿ… ಅಳುವಿಗೂ ನಗುವಿಗೂ ಅಂತರವಿಲ್ಲದ ನಿರ್ಮಮತ್ವದ ಮುದ್ದೆ… ನಾಳೆ ನನ್ನದೇ ಭಾಗವೆಂದು ಗುರುತಿಸಿಕೊಳ್ಳುವ ಆ ಜೀವ…
* * * *
ಏಳು ತುಂಬಿದರೂ ಉಬ್ಬಿ ಕಾಣದ ಹೊಟ್ಟೆ ನನ್ನದೆಂಬ ಗತ್ತು ಇತ್ತು. ನಾನೇ ನಾನಾಗಿ ಹೇಳದ ವಿನಃ ಯಾರೂ ಗುರುತಿಸದ ಹೊಟ್ಟೆ ಎಂಬ ಹೆಮ್ಮೆ ಬೇರೆ! ಅಮ್ಮ, ‘ಒಳ್ಳೆ ಮಗುವಿದೆ ಹೊಟ್ಟೆ ಒಳಗೆ, ನಿಂಗೆ ತೊಂದರೇನೇ ಕೊಡ್ತಿಲ್ಲ ನೋಡು..’ ಅನ್ನುವಾಗ ಏಳು ತಿಂಗಳು ಕಳೆಯುವ ತನಕ ವಾಂತಿ ಮಾಡಿಕೊಂಡು ಮೂಲೆ ಹಿಡಿದು ಕೂರುತ್ತಿದ್ದ ನನ್ನ ಕಷ್ಟ ಇವಳು ಯಾವ ಲೆಕ್ಕದಲ್ಲಿ ಇಡುತ್ತಿರುವಳೆಂದು ತಿಳಿಯದೇ ಇವಳು ನನ್ನ ಅಮ್ಮನೋ ಅಥವಾ ಯಾವುದೋ ಕಟುಕನ ಮನೆಯೊಡತಿಯೋ ತಿಳಿಯದೇ ಕೋಪ ಉಕ್ಕಿ ಬರುತ್ತಿತ್ತು.
ಮಡಿಲು ತುಂಬಿತ್ತಾದರೂ ಮನಸು ಭಗ್ನವಾಗಿತ್ತು. ತಾಯಾಗುವ ದಿನಗಳು ಮುದ ನೀಡುವ ಬದಲು ಖೇದವನ್ನೇ ಪಕ್ಕಾಗಿಸಿದ್ದವು. ನನ್ನ ಮಡಿಲ ಭಾರಕ್ಕೆ ಕಾರಣನಾದವನು ನಿರಾಕಾರನಾಗಿ ನನ್ನ ಸಾಂಗತ್ಯ ಬಿಟ್ಟು ಬದುಕತೊಡಗಿದ್ದ. ಅಮ್ಮ ಊರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದಳು. ಮಾವ ಬಾಣಂತನದ ಭಾರ ಬರದಂತೆ ನಿಭಾಯಿಸಲು ಅಣಿಯಾಗುತ್ತಿದ್ದ.
ಸೀಮಂತದ ದಿನಗಳು ಹತ್ತಿರಾಗುತ್ತಿದ್ದವು. ನೆಂಟರಿಷ್ಟರ ಬರುಹೋಗುವಿಕೆ ಏನೇನೋ ಮಾತುಕತೆ, ನಡುನಡುವೆ ಅಮ್ಮನ ವಿಜಯೋತ್ಸಾಹದ ವಿಕಟಾಟ್ಟಹಾಸ, ಇವೆಲ್ಲಾ ರಂಗದ ಮೇಲೆ ಒಂದರ ಹಿಂದೊಂದು ಸರಿದುಹೋಗುವ ಪಾತ್ರಗಳಂತೆ ತೋರುತ್ತಿದ್ದವು. ನಾನು ಮೂಕಳಾಗಿ ಎಲ್ಲವನ್ನೂ ನೋಡುತ್ತಾ ನಗುತ್ತಾ ಪ್ರಶಾಂತ ಸರೋವರದಂತಿದ್ದೆ. ‘ನನ್ನ ಮನೆ’ಯೆಂಬ ಬಂದೀಖಾನೆಯಿಂದ ಹೊರಬಿದ್ದು ಅಮ್ಮನ ಮನೆಯಲ್ಲಿ ಇರಲು ಶುರುವಿಟ್ಟಾಗಿನಿಂದ ಅವ್ಯಕ್ತ ನೆಮ್ಮದಿಯ ಅಲೆಯೊಂದು ಎಲ್ಲ ನೋವುಗಳನ್ನೂ ಮೀರಿ ಹರಿದಿತ್ತು. ಶ್ರೀಧರ ಆ ಹೊತ್ತಿಗಾಗಲೇ ಮಾವನ ಮನೆಯಿಂದ ಅಮ್ಮನ್ನ ಕರೆತಂದು ಬೇರೆ ಸೂರು ಮಾಡಿಯಾಗಿತ್ತು. ನನ್ನ ಬಾಣಂತನದ ಭಾರ ಹೊರುವ ಭಯಕ್ಕೋ ಏನೋ ಮಾವನೂ ಸಾರಾಸಗಟು ಹೂಂಗುಟ್ಟಿದ್ದು ಅನುಕೂಲವೇ ಆಗಿತ್ತು. ನನಗೂ ನೆಮ್ಮದಿಯ ದಿನಗಳು ಅವು. ಬೆಳಗಾದರೆ ನಾನಾಯಿತು, ನನ್ನ ಪ್ರಪಂಚವಾಯಿತು. ಸಂಜೆಯಾದರೆ ಶ್ರೀಧರನೊಟ್ಟಿಗೆ ಒಂದಷ್ಟು ಮಾತು, ನಗು… ಹೊಟ್ಟೆಗೆ ಹಿಡಿ ಅನ್ನ ಮನಸಿಗೆ ಇಂಚು ನೆಮ್ಮದಿ… ನನ್ನ ಪ್ರಪಂಚ ಮತ್ತೆ ಹಸಿರಾಗಿತ್ತು. ನೆಮ್ಮದಿಯ ದಿನಗಳಿಗೋ ಏನೋ ಹೊಟ್ಟೆಯೊಳಗೆ ಬಂದಿರೋದು ಒಳ್ಳೇ ಜೀವವೇ ಇರಬಹುದೆಂದು ಬಗೆದಿದ್ದೆ. ಖುಷಿಯಿತ್ತು. ಶ್ರೀಧರ ಮೂರ್ನಾಲ್ಕು ಕೆಜಿ ಉಲ್ಲನ್ ತಂದಿಟ್ಟು ಶಾಲು ಹಾಕೆಂದು ಹೇಳಿದ್ದ. ದಿನಕ್ಕೆರಡು ಬಾರಿ ವಾಕಿಂಗ್ ನಡೆದಿತ್ತು. ಹಾಗೇ ನಡೆಯುತ್ತಾ ಹಡೆಯುವ ದಿನವೂ ಬಂದೇಬಿಟ್ಟಿತು.
ರಾತ್ರಿಯೆಲ್ಲಾ ಹೊಟ್ಟೆ ನೋವು ಸಣ್ಣಗೆ ಕಾಡುತ್ತಲೇ ಇತ್ತು. ಬೆಳಗಿನ ಜಾವದ ಹೊತ್ತಿಗೆ ನೋವು ಹೆಚ್ಚತೊಡಗಿತು. ರಾತ್ರಿ ಯಾರೂ ನಿದ್ದೆಗೆಡುವುದು ಇಷ್ಟವಿಲ್ಲದೇ ಸುಮ್ಮನೇ ನೋವು ಸಹಿಸಿದವಳಿಗೆ ಬೆಳಗು ಮೂರಕ್ಕೆ ತಡೆಯಲು ಅಸಾಧ್ಯವೆಂಬ ಯಮಯಾತನೆ ಶುರುವಾಗಿತ್ತು. ಗಡಬಡಿಸಿ ಆಸುಪತ್ರೆಗೆ ನಡೆದಾಯಿತು. ದಿನವೆರಡು ಕಳೆಯೋ ಹೊತ್ತಿಗೆ ಹಾಸಿಗೆಯ ಪಕ್ಕ ತೊಟ್ಟಿಲೊಳಗೆ ಕಿಚಿಕಿಚಿ ಸದ್ದಿನ ಪುಟ್ಟ ಆಕಾರ ತನ್ನ ಇರುವನ್ನು ಗಟ್ಟಿಗೊಳಿಸಿತ್ತು. ಕೂಸು ಬಹಳ ಚಂದಿರುವುದೆಂದೂ ಬಣ್ಣವು ಹಾಲಿನಷ್ಟೇ ಶುಭ್ರವೆಂದೂ ಅಮ್ಮ ಸಿಕ್ಕಾಪಟ್ಟೆ ಸಂತಸದಲ್ಲಿದ್ದಳು. ಶ್ರೀಧರನಂತೂ ಮಂಚದ ಪಕ್ಕದಲ್ಲಿ ಕೂತು ಆ ಹೊಸ ವ್ಯಕ್ತಿತ್ವದ ಹೊಗಳಿಕೆಯಲ್ಲೇ ಕಾಲ ಕಳೆದಿದ್ದ. ‘ಏನಾದರೇನು ಬಿಡೇ.. ಕೈಬೆರಳು ನೀಳವಿಲ್ಲ ನಿನ್ನ ಕೂಸಿಗೆ.. ಅಜ್ಜ ಹೇಳ್ತಿದ್ದ ಹಾಗೆ ವಿದ್ಯೆ ಹತ್ತಲ್ಲ.’ ಅಂತ ಕಿಚಾಯಿಸುವ ಅಧಿಕಾರ ಅವನಿಗೆ ಮಾತ್ರ ಇದ್ದಂತೆ ಆಡುತ್ತಿದ್ದವನು ಬಂದು ಹೋಗುವವರು ಮಗುವಿಗೆ ಒಂದೇ ಒಂದು ಹೆಸರಿಟ್ಟರೂ ಬುಸುಗುಟ್ಟಿ ಕೆಂಡವಾಗುತ್ತಿದ್ದ. ‘ಶ್ರೀಧರಾ… ಹುಡುಗನೇನೋ.?’ ಮೆಲ್ಲಗೆ ಕೇಳಿದೆ. ‘ಮಹಾಲಕ್ಷ್ಮಿ ಕಣೇ… ನಿನ್ಹಾಗೇ..’ ಅಂದಿದ್ದ. ಅದ್ಯಾಕೋ ಅಪ್ರಯತ್ನವಾಗಿ ಕಣ್ಣಿಂದ ಎರಡು ಹನಿ ಜಾರಿ ದಿಂಬಿನ ಮೇಲೆ ಸಮಾಧಿಯಾಯಿತು. ದೊಡ್ಡದೊಂದು ಉಸಿರು ತೆಗೆದು ನೋಟವನ್ನು ತೊಟ್ಟಿಲ ಸೆಲೆಯಿಂದ ತಿರುಗಿಸಿ ಕಿಟಕಿಯಾಚೆಗೆ ನೆಟ್ಟೆ.
* * * *
ಮೂರು ದಿನ ಕಳೆದು ಮನೆಗೆ ಹೋದರೂ ಮಗುವನ್ನು ನೋಡಲು ಬರದ ಬಕ್ಕತಲೆಯವನ ಸುತ್ತಲೂ ಕತೆಗಳು ಹುಟ್ಟ ತೊಡಗಿದ್ದವು. ಮಲಗಿದ ಜಾಗದಲ್ಲೇ ಕಿವಿಗೆ ಬೀಳಹತ್ತಿದ ಮಾತುಗಳು ಕಿವಿಯಿಂದ ಹೃದಯಕ್ಕಿಳಿದು ಇರಿಯಲು ಬಹಳ ಸಮಯ ಬೇಕಾಗಲಿಲ್ಲ. ಅಳಿಯಂದಿರು ಕೆಲಸದ ಮೇಲೆ ಹೋಗಿರುವರೆಂದೂ ಬರಲು ನಾಲ್ಕೈದು ದಿನ ತಡವಾಗುವುದೆಂದೂ ಅಮ್ಮ ಬರುಹೋಗುವ ಎಲ್ಲರೊಡನೆ ಸಮರ್ಥಿಸಿಕೊಳ್ಳಲು ಶುರುವಿಟ್ಟಳು. ಆದರೆ ಅವನು ಬರುವುದೇ ಇಲ್ಲವೆಂಬ ಸತ್ಯ ನನಗೂ ಶ್ರೀಧರನಿಗೂ ಎಂದೋ ತಿಳಿದುಹೋಗಿತ್ತು. ಅಮ್ಮನ ಪೊಳ್ಳು ಅಹಮ್ಮಿಗೆ ಧಕ್ಕೆಯಾಗದಿರಲೆಂದು ಇಬ್ಬರೂ ಮೌನ ಮುರಿಯಲಿಲ್ಲ. ಅಮ್ಮ ತನಗೆ ಬೇಕಾದಂತೆ ವಾಸ್ತವವನ್ನು ತಿರುಚಲು ಹರಸಾಹಸ ಪಡುತ್ತಿದ್ದಳು. ಅವಳ ಮಗುತನಕ್ಕೆ ನಗುವುದೋ ಅಳುವುದೋ ತೋಚದೇ ನಾನೂ ಶ್ರೀಧರನೂ ಸುಮ್ಮಗಾದೆವು. ಮೂರು ತಿಂಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ತೊಡೆಗೆ ಅಂಟಿದ್ದ ಕಂದಮ್ಮನು ಬಗಲಿಗೆ ಬಂದು ಕೂತಿತ್ತು. ಈಗದು ನನ್ನನ್ನು ಅಪ್ಪಟ ಅದರದ್ದೇ ಆಸ್ತಿಯೆಂಬಂತೆ ಗುರುತಿಸುತ್ತಿತ್ತು. ನನ್ನ ನೋಡಿ ಬೊಚ್ಚುಬಾಯಿ ತೆಗೆದು ನಗುತ್ತಿತ್ತು. ಮೊಲೆ ಕಚ್ಚಿ ಹಿಡಿದು ಬೇಕಾದಷ್ಟು ಹಾಲು ಹೀರಿ ಕಿಲಕಿಲ ನಕ್ಕು ಆಟವಾಡುತ್ತಿತ್ತು. ನನಗೂ ಅದರೊಟ್ಟಿಗೆ ಯಾರ ಹಂಗೂ ಪರಿವೆಯೂ ಇಲ್ಲದೇ ದಿನಗಳೆಯುತ್ತಿತ್ತು.
ಆದರೆ ನೆರಳೇ ನೂರ್ಕಾಲ ಉಳಿದುಹೋದರೆ ಬಿಸಿಲಿಗೆ ಪಾರುಪತ್ಯೆ ಬರುವುದು ಯಾವಾಗ..!? ಬಿಸಿಲೇ ಎರಚಿ ನಾವು ನುಜ್ಜುಗುಜ್ಜಾಗದೇ ನೆರಳ ಬೆಲೆ ತಿಳಿಯುವುದು ಯಾವಾಗ..? ಆರು ತಿಂಗಳು ಕಳೆದರೂ ಅಮ್ಮನ ಅಳಿಯ ಮಗುವಿನ ಹೆಸರೂ ಕೇಳದೇ ಉಳಿದಾಗ ಅಮ್ಮ ಗಂಭೀರವಾಗತೊಡಗಿದಳು. ಮುಂದೇನೆಂಬ ಚಿಂತೆ ಮೆಲ್ಲಗೆ ಅವಳ ಮುಖದ ಸುಕ್ಕುಗಳ ಮರೆಯಲ್ಲಿ ಕಾಣತೊಡಗಿತು. ‘ನೀನೊಮ್ಮೆ ಹೋಗಿ ಕರಕೊಂಡು ಬಾರೋ..’ ಎಂದು ಅವಳು ಶ್ರೀಧರನಿಗೆ ಕದ್ದು ಹೇಳಿದ್ದು ನನಗೆ ಕೇಳಿಲ್ಲವೆಂದು ಸಮಾಧಿನಿಸಿಕೊಂಡಳು. ನಾನು ಯಾವ ಆವಾಹನೆ ವಿಸರ್ಜನೆಗಳಿಲ್ಲದೇ ಸುಮ್ಮನೇ ಎಲ್ಲವನ್ನೂ ಸೂಕ್ಷ್ಮವಾಗಿ ಲೆಕ್ಕ ಹಾಕತೊಡಗಿದ್ದೆ. ಮನಸು ಮುಂದೆ ನಡೆಯಬಹುದಾದ ಮಹಾಯುದ್ಧದ ಒಂದೊಂದು ಘಳಿಗೆಗಳನ್ನೂ ನಿಚ್ಚಳವಾಗಿ ತೆರೆದಿಡತೊಡಗಿತ್ತು. ನಾನು ಒಳಗೇ ಶಸ್ತ್ರಾಸ್ತ್ರಗಳನ್ನು ತೊಟ್ಟು ಸಿದ್ಧಳಾಗುತ್ತಿದ್ದೆ. ಶ್ರೀಧರನಿಗೆ ನನ್ನ ನಿರ್ಲಿಪ್ತತೆ ಭಯ ಹುಟ್ಟಿಸುವಂತೆ ತೋರಿರಬಹುದು. ಆಗಾಗ ಅವನು ಮೌನಿಯಾಗಿ ಬಂದು ನನ್ನ ಕೈ ಹಿಡಿದು ಕೂರುವನು. ನಾನು ಸುಮ್ಮಗೆ ಅವನ ಅಂಗೈ ಒತ್ತಿ ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಾನು ಸಜ್ಜಾಗಿರುವೆನೆಂದು ಮೌನದಲ್ಲೇ ಅರುಹುವೆನು. ಅಮ್ಮನು ಇದಾವುದರ ಪರಿವೆಯೂ ಇಲ್ಲದೇ ಬಂದವರಿಗೆ ಕಾರಣ ಹೇಳುವಲ್ಲಿ ತಲ್ಲೀನಳಾಗಿರುವಳು.
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.
Very touching…i could feel it completely. Anand