ಇದೆ ಮೊದಲ ಬಾರಿ ಬಿಳಿಯರಲ್ಲದ ಒಬ್ಬ ಮಹಿಳೆ ಅಮೆರಿಕೆಯ ಅಧ್ಯಕ್ಷ ಚುನಾವಣೆಯನ್ನು ಎದುರಿಸುತ್ತಿರುವುದು ಬಹಳ ವಿಶೇಷ. ಈ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಎದುರಿಸುತ್ತಿರುವ ಎದುರಾಳಿ ಸಾಮಾನ್ಯರೇನಲ್ಲ. ಅವರು ಏನನ್ನು ಬೇಕಾದರೂ ಮಾಡುವ, ನ್ಯಾಯನೀತಿಗಳನ್ನು ನಗೆಪಾಟಲು ಮಾಡುವ ಸಾಮರ್ಥ್ಯವಿರುವ ಗಂಡು. ಈ ಗಂಡಿನ ಚಾಣಾಕ್ಷತೆಯನ್ನು ಕಮಲಾ ಹ್ಯಾರಿಸ್ ಹೇಗೆ ಸಂಭಾಳಿಸುತ್ತಾರೆ, ನಿಭಾಯಿಸುತ್ತಾರೆ, ಎದುರಿಸುತ್ತಾರೆ ಎನ್ನುವುದು ಅತ್ಯಂತ ಕುತೂಹಲಕಾರಿಯಾಗಿದೆ. ಬರಲಿರುವ ಮೂರು ತಿಂಗಳುಗಳು ಮತ್ತು ಈ ವಿಶಿಷ್ಟ ಚುನಾವಣಾ ಕಣದ ಕಥೆಗಳು ರೋಚಕವಾಗಿರುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಕಳೆದ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಪ್ಯಾರಿಸ್ ೨೦೨೪ ಒಲಂಪಿಕ್ಸ್ ಮತ್ತು ಆಸ್ಟ್ರೇಲಿಯಾ ಕ್ರೀಡಾಪಟುಗಳ ಸಾಧನೆಯ ಬಗ್ಗೆ ಬರೆದಿದ್ದೆ. ಚುಟುಕಾಗಿ ಆಸ್ಟ್ರೇಲಿಯನ್ ಬ್ರೇಕ್ ಡಾನ್ಸ್ ಸ್ಪರ್ಧಿ ರೇಚಲ್ ಗನ್ ಕುರಿತು ಹೇಳಿದ್ದೆ. ಆಸ್ಟ್ರೇಲಿಯನ್ ಪದ್ಧತಿಯಂತೆ ಅವಳ ಮೊಟಕಾದ ಹೆಸರು ರೇಗನ್. ಈ ಪತ್ರ ಬರೆಯುವಷ್ಟರಲ್ಲಿ ಜುಲೈನಲ್ಲಿ ಹುಲ್ಲಿನಂತಿದ್ದ RayGun ಆಗಸ್ಟ್‌ನಲ್ಲಿ ಸಣ್ಣ ಮರವಾಗಿದ್ದಾಳೆ. ಕಾರಣಗಳು ಕುತೂಹಲ ಕೆರಳಿಸುತ್ತವೆ. ಪ್ಯಾರಿಸ್ ಒಲಂಪಿಕ್ಸ್ ಬ್ರೇಕ್ ಡಾನ್ಸ್ ಸ್ಪರ್ಧೆಯಲ್ಲಿ ಸೊನ್ನೆ ಅಂಕೆ ಗಳಿಸಿದ ಅವಳಿಗೆ ಆಸ್ಟ್ರೇಲಿಯನ್ ಸಾರ್ವಜನಿಕರು ಛೀಮಾರಿ ಹಾಕಿದ್ದರು. ಬರೀ ಸೊನ್ನೆ ಪಡೆದಿದ್ದಕ್ಕಲ್ಲ. ಅವರ ಕೋಪದ ಕಾರಣ ಇನ್ನೂ ಬಲವಾಗಿತ್ತು. ರೇಗನ್ ಅತ್ಯಂತ ಕೆಟ್ಟದಾಗಿ ಬ್ರೇಕ್ ಡಾನ್ಸ್ ಮಾಡಿ, ಸ್ಪರ್ಧೆಯ ತೀರ್ಪುಗಾರರು ನಗಾಡಿ ಅವಳಿಗೆ ಸೊನ್ನೆ ಕೊಟ್ಟು ಕಳಿಸಿದ್ದರು. ರಾತ್ರೋರಾತ್ರಿ ಅವಳ ಡಾನ್ಸ್ ವೀಡಿಯೊ ಪ್ರಪಂಚ ಪೂರ್ತಿ ಹರಿದಾಡಿ ಸಾವಿರಾರು ಜನ ಇನ್ನೂ ನಗಾಡಿ ಲೇವಡಿ ಮಾಡಿ ಕಡೆಗೆ ಅವಳು ಸಾಮಾಜಿಕ ಮಾಧ್ಯಮಗಳ ಹೀರೊಯಿನ್ ಆದಳು. ತಾನು ಹೆಣ್ಣಾಗಿದ್ದರಿಂದ ಜನ ಈ ಪಾಟಿ ಕಿರುಕುಳ ಕೊಡುತ್ತಿದ್ದಾರೆ ಎಂದು ಹೇಳಿ ರೇಗನ್ ಮತ್ತಷ್ಟು ಹೆಸರು ಗಳಿಸಿದ್ದಾಳೆ.
ಜನ ಅದು ಹೇಗೆ ಆಸ್ಟ್ರೇಲಿಯನ್ ಒಲಂಪಿಕ್ಸ್ ತಂಡಕ್ಕೆ ರೇಗನ್ ಆಯ್ಕೆಯಾದಳು ಎಂದು ಪ್ರಶ್ನಿಸಿದ್ದರಿಂದ ಅವಳ ರಕ್ಷಣೆಗೆ ನಿಂತದ್ದು ಪ್ರಧಾನ ಮಂತ್ರಿ, ಆಸ್ಟ್ರೇಲಿಯನ್ ಒಲಂಪಿಕ್ಸ್ ತಂಡದ ಮುಖಂಡರು, ಇತರ ಮಹಿಳಾ ಕ್ರೀಡಾಪಟುಗಳು ಮತ್ತು ಮಹಿಳಾ-ಪರ ಬೆಂಬಲಿಗರು. ಅವಳ ಕೆಟ್ಟ ಬ್ರೇಕ್ ಡಾನ್ಸ್ ಪ್ರದರ್ಶನದ ಬಗ್ಗೆ ಅವರು ಮಾತನಾಡದೆ ಅವಳು ಒಬ್ಬ ಮಹಿಳಾ ಕ್ರೀಡಾಪಟುವೆಂದು ಹೇಳಿ ತಾವು ಅವಳನ್ನು ಬೆಂಬಲಿಸಿದ್ದೀವಿ ಎಂದರು. ಪುರುಷ-ಪ್ರಧಾನ ಬ್ರೇಕ್ ಡಾನ್ಸ್ ವಲಯದಲ್ಲಿ ಅವಳು ಧೈರ್ಯವಾಗಿ ಕಾಲಿಟ್ಟು ಸವಾಲುಗಳನ್ನು ಎದುರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ್ದು ಆಸ್ಟ್ರೇಲಿಯಾಕ್ಕೆ ಒಂದು ಹೆಗ್ಗಳಿಕೆಯ ವಿಷಯ ಅಂದರು. ಜನ ಇದನ್ನೂ ಲೇವಡಿ ಮಾಡಿ ಯಾಕೆ, ದೇಶದಲ್ಲಿ ರೇಗನ್ ಗಿಂತಲೂ ಚೆನ್ನಾಗಿ ನೂರಾರು ಯುವಕ-ಯುವತಿಯರು ಬ್ರೇಕ್ ಡಾನ್ಸ್ ಮಾಡುತ್ತಿಲ್ಲವೆ, ಅವರನ್ನೆಲ್ಲ ಬಿಟ್ಟು ಇವಳನ್ನು ಆರಿಸಿದ್ದು ಯಾಕೆ, ಅದರ ಹಿಂದಿನ ರಹಸ್ಯವೇನು, ಎಂದು ಕೇಳಿದ್ದಾರೆ. ಖಚಿತ ಉತ್ತರಗಳು ಸಿಕ್ಕಿಲ್ಲವಾದರೂ, ಕೆಲ ಊಹಾಪೋಹಗಳು ಹರಿದಾಡುತ್ತಿವೆ.
ಅದೇನೆ ಇರಲಿ, ಈಗ ರೇಗನ್ ಮನೆಮಾತಾಗಿದ್ದಾಳೆ. ಕಾಂಗರೂವನ್ನು ಅನುಕರಿಸುವ ತನ್ನ ಬ್ರೇಕ್ ಡಾನ್ಸ್ ವೈಖರಿ ಬಲು ವಿಶಿಷ್ಟವಾದದ್ದು ಎಂದು ಸಮರ್ಥಿಸಿಕೊಂಡು ಮತ್ತಷ್ಟು ವಿಡಿಯೋಗಳನ್ನು ಹರಿಬಿಟ್ಟಿದ್ದಾಳೆ. ಅವಳ ಗಂಡನೆ ಅವಳ ತರಬೇತುದಾರನಾದ್ದರಿಂದ ಇಬ್ಬರೂ ಸೇರಿ ಈಗ ಹಲವಾರು ಲಾಭಕಾರಿ ಮಾರ್ಕೆಟಿಂಗ್ ಆಮಿಷಗಳನ್ನು ಕೈಗೆತ್ತಿಕೊಂಡಿದ್ದಾರಂತೆ. ತನ್ನ ಬ್ರೇಕ್ ಡಾನ್ಸ್ ಕುಖ್ಯಾತಿಯನ್ನೆ ಬಂಡವಾಳವನ್ನಾಗಿಸಿಕೊಂಡು ಸಿರಿವಂತಳಾಗುವತ್ತ ನಡೆದಿದ್ದಾಳೆ.
ಪ್ರಪಂಚದ ಮತ್ತೊಂದು ಕಡೆ ಇನ್ನೊಬ್ಬ ಮಹಿಳೆ ತನ್ನದೆಲ್ಲವನ್ನೂ ಪಣಕ್ಕಿಟ್ಟು ಸ್ವಾತಂತ್ರ್ಯ, ಘನತೆ, ನ್ಯಾಯಕ್ಕಾಗಿ ತಾನು ಬಂಡವಾಳ ಹೂಡಿದ್ದೀನಿ, ಎಂದಿದ್ದಾಳೆ. ಅಮೆರಿಕೆಯ ಉಪ-ಅಧ್ಯಕ್ಷರಾದ ಕಮಲಾ ಹ್ಯಾರಿಸ್ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಡೆಮೊಕ್ರಟಿಕ್ ಪಾರ್ಟಿಯಿಂದ ಬಹುಮತ ಗಳಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆಕೆಯ ತಾಯಿ ಶ್ಯಾಮಲಾ ಚೆನ್ನೈ ಮೂಲದ ಭಾರತೀಯ ಮಹಿಳೆ, ಭಾರತದಿಂದ ಅಮೆರಿಕೆಗೆ ಹೋಗಿ ಕ್ಯಾನ್ಸರ್ ಸಂಶೋಧನೆಯಲ್ಲಿ ಸಾಧನೆ ಮಾಡಿದ್ದು ನಮಗೆ ಹೆಮ್ಮೆಯ ವಿಷಯ. ಇದೆ ಮೊದಲ ಬಾರಿ ಬಿಳಿಯರಲ್ಲದ ಒಬ್ಬ ಮಹಿಳೆ ಅಮೆರಿಕೆಯ ಅಧ್ಯಕ್ಷ ಚುನಾವಣೆಯನ್ನು ಎದುರಿಸುತ್ತಿರುವುದು ಬಹಳ ವಿಶೇಷ. ಈ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಎದುರಿಸುತ್ತಿರುವ ಎದುರಾಳಿ ಸಾಮಾನ್ಯರೇನಲ್ಲ. ಅವರು ಏನನ್ನು ಬೇಕಾದರೂ ಮಾಡುವ, ನ್ಯಾಯನೀತಿಗಳನ್ನು ನಗೆಪಾಟಲು ಮಾಡುವ ಸಾಮರ್ಥ್ಯವಿರುವ ಗಂಡು. ಈ ಗಂಡಿನ ಚಾಣಾಕ್ಷತೆಯನ್ನು ಕಮಲಾ ಹ್ಯಾರಿಸ್ ಹೇಗೆ ಸಂಭಾಳಿಸುತ್ತಾರೆ, ನಿಭಾಯಿಸುತ್ತಾರೆ, ಎದುರಿಸುತ್ತಾರೆ ಎನ್ನುವುದು ಅತ್ಯಂತ ಕುತೂಹಲಕಾರಿಯಾಗಿದೆ. ಬರಲಿರುವ ಮೂರು ತಿಂಗಳುಗಳು ಮತ್ತು ಈ ವಿಶಿಷ್ಟ ಚುನಾವಣಾ ಕಣದ ಕಥೆಗಳು ರೋಚಕವಾಗಿರುತ್ತವೆ.
ಮತ್ತೆ ಆಸ್ಟ್ರೇಲಿಯಾಕ್ಕೆ ಬರೋಣ. ಮಹಿಳಾ ವಿರುದ್ಧ ನಡೆಯುತ್ತಿರುವ ಕೌಟುಂಬಿಕ ಶೋಷಣೆ, ಹಿಂಸೆಗಳ ಬಗ್ಗೆ ಇನ್ನಷ್ಟು ಮಾತುಕತೆ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರಕಾರಗಳು ಇನ್ನಷ್ಟು ಬದ್ಧತೆ ತೋರಬೇಕು, ಮತ್ತಷ್ಟು ಬಂಡವಾಳ ಹೂಡಬೇಕು, ಇರುವ ಕಾರ್ಯನೀತಿಗಳು ಚುರುಕಾಗಬೇಕು, ಗಂಡಸಿನ ಶೋಷಣೆ, ಹಿಂಸೆಗಳಿಂದ ಒಬ್ಬ ಹೆಂಗಸು ಸಾಯುವುದು ನಿಲ್ಲಬೇಕು ಎನ್ನುವ ಕೂಗು ಜೋರಾಗುತ್ತಿದೆ.
ಮಹಿಳಾ ವಿಷಯಗಳನ್ನು ಮಾತನಾಡುವಾಗ ಈ ಸುದ್ದಿ ಗಮನ ಸೆಳೆಯುತ್ತದೆ. ಇದು ದೇಶೀಯ ಮಟ್ಟದ ಸುದ್ದಿಯಾಗಿದೆ. ರೊಕ್ಸಾನ್ ಟಿಕಲ್ ಎನ್ನುವ transgender ಮಹಿಳೆ ತನ್ನ ಲೈಂಗಿಕ ಅಸ್ಮಿತೆಯ ವಿರುದ್ಧ ತಾರತಮ್ಯ ನಡೆದಿದೆ ಎಂದು ವಾದಿಸಿ ಹೂಡಿದ್ದ ದಾವೆಯಲ್ಲಿ ಜಯ ಗಳಿಸಿದ್ದಾರೆ. Transgender ಅಂದರೆ ಕನ್ನಡದಲ್ಲಿ ಮಂಗಳಮುಖಿ ಅನ್ನಬಹುದೇನೋ. ಈ ರೊಕ್ಸಾನ್ ಟಿಕಲ್ ಎನ್ನುವಾಕೆ ತನ್ನನ್ನು ಹೆಣ್ಣು ಎಂದು ಗುರುತಿಸಿಕೊಳ್ಳುವುದು. ೨೦೨೧ರಲ್ಲಿ ಈಕೆ Giggle for Girls ಎನ್ನುವ ಒಂದು app ಉಪಯೋಗಿಸಲು ಹೊರಟಿದ್ದಳು. ಈ app ಕೇವಲ ಹೆಂಗಸರಿಗಾಗಿ ಮಾತ್ರ ಇರುವುದು, ಇಲ್ಲಿ ಗಂಡಸರಿಗೆ ಪ್ರವೇಶವಿಲ್ಲ. app ನಲ್ಲಿ ಸದಸ್ಯತ್ವ ಪಡೆಯಲು ಇಚ್ಚಿಸುವಾಕೆ ತನ್ನ ಸೆಲ್ಫಿ ಫೋಟೋ ಹಾಕಬೇಕು. ಈ ಸೆಲ್ಫಿಯನ್ನು ಪರೀಕ್ಷಿಸುವುದು ಒಂದು ಸಾಫ್ಟ್‌ವೇರ್. ಸೆಲ್ಫಿ ಫೋಟೋ ಹೆಣ್ಣಿನದೆ ಎಂದು ಈ ಸಾಫ್ಟ್‌ವೇರ್ ತೀರ್ಮಾನಿಸುತ್ತದೆ. ರೊಕ್ಸಾನ್ ಟಿಕಲ್ ಸದಸ್ಯತ್ವ ಪಡೆದಳು ಆದರೆ ಏಳು ತಿಂಗಳ ನಂತರ ಅದನ್ನು ಅನರ್ಹಗೊಳಿಸಲಾಯಿತು.
Giggle for Girls ಆಪ್ ಮತ್ತು ಅದರ ಕಂಪನಿಯ ಮುಖ್ಯಸ್ಥೆ ತನ್ನ ವಿರುದ್ಧ ತಾರತಮ್ಯ ತೋರಿದ್ದಾರೆ, ತಾನು ಹೆಣ್ಣು ಎಂದು ಗುರುತಿಸಿಕೊಂಡಿದ್ದರೂ ಅದನ್ನು ಅಲ್ಲಗಳೆಯಲಾಗಿದೆ ಎಂದು ರೊಕ್ಸಾನ್ ಟಿಕಲ್ ಕೋರ್ಟಿನಲ್ಲಿ ದಾವೆ ಹೂಡಿದರು. ಕಂಪನಿಯ ತಾರತಮ್ಯದಿಂದ ತನಗೆ ಮಾನಸಿಕ ಆತಂಕ ಹೆಚ್ಚಾಗಿ ಆತ್ಮಹತ್ಯೆ ಆಲೋಚನೆಗಳು ಬಂದವು, ಇದಕ್ಕೆಲ್ಲ ಕಂಪನಿಯ ನಿಲುವು ಕಾರಣ ಎಂದು ಆಕೆ ವಾದಿಸಿದರು. ತನಗೆ ೨೦೦,೦೦೦ ಆಸ್ಟ್ರೇಲಿಯನ್ ಡಾಲರ್ ಪರಿಹಾರ ಕೊಡಿಸಬೇಕು ಎಂದರು. ಕಂಪನಿಯ ಮುಖ್ಯಸ್ಥೆ ಸಾಲ್ ಗ್ರೋವರ್ ಕೊಟ್ಟಿರುವ ಹೇಳಿಕೆಗಳು ತನಗೆ ಅವಮಾನ ಮಾಡಿವೆ, ಆಕೆಯ ಹೇಳಿಕೆಗಳಿಂದ ತನ್ನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ, ಸಮುದಾಯದಲ್ಲಿ ಅಪಮಾನಕಾರಿ ಮನೋಭಾವ ಉಂಟಾಗಿದೆ. ಇದರಿಂದ ತಾನು ಕ್ಷೇಮವಾಗಿಲ್ಲ ಎಂದು ರೊಕ್ಸಾನ್ ಹೇಳಿದರು.
ಈ ದಾವೆ ಪ್ರಸಿದ್ಧಿಯಾಯ್ತು. ಏಕೆಂದರೆ ‘ಹೆಣ್ಣು ಅಂದರೆ ಏನು’ ಎನ್ನುವ ಪ್ರಶ್ನೆಯನ್ನು ಅದು ಹುಟ್ಟಿಹಾಕಿತ್ತು. ಇದನ್ನು ಹಿಡಿದುಕೊಂಡು ಚರ್ಚೆಗಳಾದವು. ಹೆಣ್ಣು ಎಂದರೆ ಅದು ದೈಹಿಕವಾಗಿ ಕಾಣುವ ಗುರುತುಗಳೆ (ಕಂಠ, ಮಾತನಾಡುವ ಶೈಲಿ, ಹಾವಭಾವ, ದೇಹ ಕುರುಹುಗಳು ಇತ್ಯಾದಿ), ಅವು ಹೀಗೆ ಹಾಗೆ ಇರಬೇಕು ಎಂದು ಅವನ್ನು ನಿರ್ಧರಿಸುವವರು ಯಾರು, ಅದಕ್ಕಿರುವ ಮಾನದಂಡ ಏನು, ಎಂದೆಲ್ಲಾ ಪ್ರಶ್ನೆಗಳು ಎದ್ದವು. ಎಲ್ಲವೂ ಕೇಳತಕ್ಕದ್ದೇ.
ಉತ್ತರವಾಗಿ Giggle for Girls ಆಪ್ ಕಂಪನಿ ಹೇಳಿದ್ದು ಒಬ್ಬ ವ್ಯಕ್ತಿ ತನ್ನ ಲೈಂಗಿಕ ಅಸ್ಮಿತೆಯನ್ನು (ಜೆಂಡರ್) ಹೇಗೆ ಬೇಕಾದರೂ ಆರಿಸಿಕೊಳ್ಳಬಹುದು. ತಮ್ಮ ಆಪ್ ಪ್ರಕಾರ ವ್ಯಕ್ತಿಯ ಹುಟ್ಟಿನಲ್ಲಿ ಇದ್ದ ಜೈವಿಕ ಲಿಂಗ ಹೆಣ್ಣು ಎನ್ನುವುದನ್ನು ತಮ್ಮ ಸದಸ್ಯರು ಖಚಿತಪಡಿಸಬೇಕು. ರೊಕ್ಸಾನ್ ಟಿಕಲ್ ಹುಟ್ಟಿದಾಗ ಅವರು ಗಂಡು ಲಿಂಗ ಹೊಂದಿದ್ದರು. ಕಳೆದ ಏಳು ವರ್ಷಗಳಿಂದ ತನ್ನನ್ನು ಹೆಣ್ಣು ಎಂದು ಗುರುತಿಸಿಕೊಂಡರೂ ಅವರ ಜೈವಿಕ ಲಿಂಗ ಗಂಡು. ಆದ್ದರಿಂದ ಅವರ ಸದಸ್ಯತ್ವವನ್ನು ತೆಗೆದುಹಾಕಲಾಯಿತು. ತಮ್ಮ ಆಪ್ ಇರುವುದು ಜೈವಿಕವಾಗಿ ನಿರ್ಧರಿಸಲಾದ ಹೆಣ್ಣಿಗಾಗಿ ಮಾತ್ರ ಎಂದು ಕಂಪನಿ ಹೇಳಿತು.
ನ್ಯಾಯಾಲಯವು ರೊಕ್ಸಾನ್ ಟಿಕಲ್ ಪರವಾಗಿ ತೀರ್ಪು ಕೊಟ್ಟಿದೆ. ವ್ಯಕ್ತಿಯೊಬ್ಬರು ತಮ್ಮ ಲಿಂಗವನ್ನು ಬದಲಾಯಿಸಿಕೊಳ್ಳಬಹುದು, ಲಿಂಗವು ಕೇವಲ ಗಂಡು-ಹೆಣ್ಣು ಎನ್ನುವುದು ಅಲ್ಲ, ಎಂದು ನ್ಯಾಯಾಧೀಶರು ಹೇಳಿದರು. ಮಾಧ್ಯಮಗಳ ಜೊತೆ ಮಾತನಾಡುತ್ತ ರೊಕ್ಸಾನ್ ಟಿಕಲ್ ನ್ಯಾಯಾಲಯದ ತೀರ್ಪಿನಿಂದ ಟ್ರಾನ್ಸ್ ಮತ್ತು ಲಿಂಗ-ಬಹುತ್ವ (gender diverse) ಅಸ್ಮಿತೆಯಿರುವ ಎಲ್ಲರಿಗೂ ಸಮಾಧಾನವಾಗಿದೆ, ಎಂದರು. ನ್ಯಾಯಾಲಯ ಅವರಿಗೆ ಹತ್ತು ಸಾವಿರ ಡಾಲರ್ ಪರಿಹಾರ ಕೊಟ್ಟಿದೆ. ಈ ಕೇಸ್ ಟಿಕಲ್ ವರ್ಸಸ್ ಗಿಗಲ್ ಎಂದು ಪ್ರಸಿದ್ಧಿಯಾಗಿದೆ. Tickle vs Giggle – ಇದರ ಪ್ರಾಸ ಮತ್ತು ಅರ್ಥಗಳನ್ನು ಗಮನಿಸಿದಾಗ ನಗು ಬಂತು.
Giggle for Girls ಕಂಪನಿ ಮುಖ್ಯಸ್ಥೆ ಸಾಲ್ ಗ್ರೋವರ್ ತಾವುಗಳು ನಿರೀಕ್ಷಿಸಿದಂತೆಯೆ ತೀರ್ಪು ಬಂದಿದೆ, ಆಶ್ಚರ್ಯವೇನಿಲ್ಲ. ಆದರೆ ಇದರಿಂದ ಮಹಿಳೆಯರ ಹಕ್ಕುಗಳಿಗೆ, ಅವರ ದನಿಗೆ ಮತ್ತಷ್ಟು ಹಾನಿಯಾಗಿದೆ, ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಈ ವಿಷಯದ ಬಗ್ಗೆ ಗಂಭೀರವಾದ ಚರ್ಚೆಗಳಾಗುವ ಚಿಹ್ನೆಗಳು ಇವೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.