ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು. ʻಅದ್ಯಾರೆ ಅಷ್ಟು ಚಂದಾಗಿ ಹಾಡು ಹೇಳೋಳು?ʼ ಎನ್ನುವ ಮಾತು ಕೇಳಿದರೆ ಸಾಕು, ತಾನು ಹಾಡಿದ್ದು ಸಾರ್ಥಕ ಎನ್ನುವ ಭಾವನೆ ಮೂಡುತ್ತಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ
ಸಭಾಭವನದ ತುಂಬ ಜಗಮಗಿಸುವ ಬಣ್ಣಬಣ್ಣದ ದೀಪಾಲಂಕಾರ. ವಿವಿಧ ಬಗೆಯ ಹೂಗಳಿಂದ ಅಲಂಕಾರಗೊಂಡ ಮಂಟಪ. ಅಲ್ಲಲ್ಲಿ ಕುಳಿತು ಹರಟುತ್ತಿರುವ ಆಹ್ವಾನಿತರು. ಮದುವೆ ಹಿಂದಿನ ದಿನದ ಆರತಿ ಅಕ್ಷತೆಯ ಸಂಭ್ರಮದ ದೃಶ್ಯ. ಸುಮಾರು ಐನೂರಕ್ಕೂ ಹೆಚ್ಚು ಜನರಿದ್ದ ಆ ಸಭಾಂಗಣದ ಸುತ್ತಲೂ ಕಣ್ಣಾಡಿಸಿದರೆ ಹತ್ತೋ ಹದಿನೈದೋ ಮಕ್ಕಳು ಅವರ ಹಿರಿಯರ ಬಾಲವಾಗಿ ಕಂಡುಬಂದರು. ʻಎಲ್ಲಿ ನಿಮ್ಮ ಮಗ ಕಾಣುಸುತ್ತಿಲ್ಲ?ʼ ʻಅವನಾ? ಈ ವರ್ಷ ಎಸ್. ಎಸ್. ಎಲ್ ಸಿ ಅಲ್ವಾ? ಮನೆಲ್ಲಿ ಓದಿಕೊಳ್ತಿದಾನೆʼ ಎನ್ನುವ ಉತ್ತರ ಒಂದೆಡೆಯಾದರೆ, ʻಮಗಳು ಯಾವ ಕ್ಲಾಸು?ʼ ಎನ್ನುವ ಪ್ರಶ್ನೆಗೆ ʻಅವಳು ಸೆಕೆಂಡ್ ಪಿಯುಸಿ, ಕಾಲೇಜು ಟ್ಯೂಷನ್ ಅಂತ ಅವಳಿಗೆ ಪುರುಸೊತ್ತೇ ಇರಲ್ಲʼ ಎನ್ನುವ ತಾಯಿಯ ಮಾತು ಇನ್ನೊಂದೆಡೆ. ʻಎಲ್ಲಿ ನಿಮ್ಮ ಪುಟಾಣಿ ಕಾಣುಸ್ತಿಲ್ಲ?ʼ ʻಈ ವರ್ಷ ಯುಕೆಜಿಗೆ ಸೇರ್ಷಿದೇವೆ, ಅಜ್ಜಿ ಮೊಮ್ಮಗ ಹಾಯಾಗಿ ಮನೆಲ್ಲಿದಾರೆʼ ಎನ್ನುವ ಉತ್ತರ ಮತ್ತೊಬ್ಬರದು. ಎಲ್ಲರಿಗೂ ಅವರವರದೇ ಆದ ಕಾರಣಗಳಿದ್ದವು.
ʻಈಗಿನ ಮಕ್ಕಳಿಗೆ ಮನೆಯವರನ್ನ ಬಿಟ್ಟರೆ ಬಂಧು ಬಾಂಧವರ ಗುರುತೇ ಇರೋದಿಲ್ಲ. ಅವರಿಗೆ ಯಾರೂ ಬೇಕಾಗಿಯೂ ಇಲ್ಲʼ ಎನ್ನುವ ಸಾಧಾರಣೀಕರಣದ ಮಾತು ಎಲ್ಲೆಡೆ ಕೇಳಿಬರುತ್ತದೆ. ಹೀಗೆ ಹೇಳುವ ಹಿರಿಯರು ತಾವು ಮಕ್ಕಳನ್ನು ಎಲ್ಲವುಗಳಿಂದ ದೂರವಿಟ್ಟು ಹೇಗೆ ಬೆಳೆಸುತ್ತಿದ್ದೇವೆ ಎನ್ನುವತ್ತ ಗಮನಹರಿಸುವುದಿದೆಯೇ? ಎನ್ನುವ ಪ್ರಶ್ನೆ ಕಾಡಿತು. ಮನಸ್ಸು ಬಾಲ್ಯಕ್ಕೆ, ಊರಿಗೆ ಹಾರಿತು. ಆ ಕಾಲವೇ ದಿವ್ಯ ತಾನಾಗಿತ್ತು ಅಂತಲ್ಲ. ಒಂದಿಷ್ಟು ಹಳೆಯ ನೆನಪುಗಳು. ನಮ್ಮ ಮನೆಯಲ್ಲಿಯೇ ಆಗಬೇಕೆಂದಿಲ್ಲ, ಊರಿನ ಯಾರದೋ ಮನೆಯಲ್ಲಿಯೋ ಅಥವಾ ಸಂಬಂಧಿಕರ ಮನೆಯಲ್ಲೋ ಮದುವೆ, ಚೌಲ, ಮುಂಜಿ, ಊರಹಬ್ಬ ಯಾವುದೇ ಸಂಭ್ರಮಗಳಿದ್ದರೂ ಅಲ್ಲಿ ನಮ್ಮ ಹಾಜರಾತಿ ಇರುತ್ತಿತ್ತು. ಈಗಿನಂತೆ ವಾಹನ ಸವಲತ್ತು ಇರಲಿಲ್ಲ. ಹಾಗಾಗಿ, ಹತ್ತಿರವಿದ್ದರೆ ನಡೆದುಕೊಂಡು ಹೋಗಬೇಕಿತ್ತು. ತುಸು ದೂರವಿದ್ದರೆ ಎತ್ತಿನಗಾಡಿಯಲ್ಲಿನ ಪಯಣ. ಮಣ್ಣಿನ ರಸ್ತೆಯಲ್ಲಿ ಅಲ್ಲಾಡುತ್ತ ಸಾಗುತ್ತಿದ್ದ ಗಾಡಿಯಲ್ಲಿ ಕುಳಿತು ತಲೆಗೋ ಭುಜಕ್ಕೋ ತಾಗುತ್ತಿದ್ದ ಗಾಡಿಯ ಪಟ್ಟಿಯ ನೋವನ್ನು ಕಡೆಗಣಿಸಿ ಮದುವೆಗೆ ಹೋಗುತ್ತಿದ್ದೇನೆ ಎನ್ನುವ ಹೆಮ್ಮೆಯಿಂದ ಬೀಗುತ್ತಿದ್ದೆವು. ಯಾರ ಮದುವೆ ಎನ್ನುವುದು ನಮಗೆ ಮುಖ್ಯವಾಗಿರಲಿಲ್ಲ. ಕೆಲವೊಮ್ಮೆ ನಮಗೆ ತಿಳಿದಿರುತ್ತಿತ್ತು ಎನ್ನುವಂತೆಯೂ ಇರಲಿಲ್ಲ.
• ಯಾರದೇ ಮನೆಯಲ್ಲಿ ಮದುವೆ ಇರಲಿ, ಊರಿನವರೆಲ್ಲ ಅದರಲ್ಲಿ ಭಾಗಿಗಳಾಗುತ್ತಿದ್ದರು. ʻಆಳಿಗೊಂದು ಕೈ ಹಾಕಿದ್ರೆ ಭಾವಂಗೊಂದು ಕಂಬಳಿʼ ಎನ್ನುವ ಹಾಗೆ ಎಲ್ಲವೂ ನಡೆಯುತ್ತಿದ್ದವು. ಅಂಗಳ ಚೊಕ್ಕಗೊಳಿಸುವುದಿರಲಿ, ಬಾಳೆಯೆಲೆಗಳನ್ನು ಕೊಯ್ದು ಸೋಸುವ ಕೆಲಸವಿರಲಿ ಗಂಡಸರು ಮುಂದಾಗಿ ಮಾಡುತ್ತಿದ್ದರು. ಆಗೆಲ್ಲ ದೊನ್ನೆಯ ಬಳಕೆ ಇತ್ತು. ಕೆಲವರದು ದೊನ್ನೆ ತಯಾರಿಯಲ್ಲಿ ಪಳಗಿದ ಕೈ. ʻಹೆಗಡೇರು ಸುದ್ದಿ ಹೇಳ್ತಾ ಅವರೆಕಾಯಿ ಕೊಯ್ದುʼ ಅನ್ನೋ ಹಾಗೆ ಅಲ್ಲಿ ಸುದ್ದಿಯ ಗಂಟು ಬಿಚ್ಚುತ್ತಿದ್ದರು. ಯಾರ ಮನೆಯ ಮದುವೆಯಲ್ಲಿ ಯಾರ್ಯಾರು ಯಾವ ಕೆಲಸ ಮಾಡಿದರು ಎನ್ನುವುದರಿಂದ ಹಿಡಿದು ಏನೇನು ತಮಾಶೆಗಳು ನಡೆದವು ಎಲ್ಲವನ್ನೂ ನೆನೆಪಿಸಿಕೊಳುತ್ತಿದ್ದು ಅವೂ ಅದರ ಭಾಗವಾಗಿರುತ್ತಿದ್ದವು. ಕೆಲವೊಮ್ಮೆ ಬೀಗರ ಮನೆಯಲ್ಲಿ ತಮಗೆ ಹಾಕಿದ ಬಾಳೆ ಚಿಕ್ಕದಿತ್ತು ಅಂತಲೋ ಅವರ ದೊಡ್ಡಸ್ತಿಕೆಯ ವರ್ಣನೆಗಳೊ ಜಾಗಪಡೆಯುತ್ತಿದ್ದವು. ನಾವೆಲ್ಲ ಅಂತಹ ಮಾತುಗಳನ್ನು ಕೇಳಿಸಿಕೊಳ್ಳುವುದೂ ಇತ್ತು. ಅರ್ಥವಾಗದಿದ್ದರೂ ಒಂಥರ ಮಜಾ ಎನಿಸುತ್ತಿತ್ತು. ಯಾರು ಯಾವ ಬಗೆಯ ಕೆಲಸಗಳನ್ನು ಮಾಡುತ್ತಿರಲಿ ಅಲ್ಲಿ ಮಕ್ಕಳ ಗುಂಪು ಒಮ್ಮೆ ಹಣಕಿಕ್ಕಿ ತಮ್ಮದೇ ಆದ ಖುಶಿಯಲ್ಲಿ ವಾರಿಗೆಯವರೊಂದಿಗೆ ಆಡಲು ಹೋಗುತ್ತಿತ್ತು. ಹೆಂಗಸರು ಮಾಡುವ ಕೆಲಸಗಳು ನಮಗೆ ಆಸಕ್ತಿದಾಯಕವಾಗಿರಲಿಲ್ಲ. ರವೆ ಹುರಿಯುವ, ಅವಲಕ್ಕಿ ಹಸನುಗೊಳಿಸುವ, ಹಸೆಬರೆಯುವ ಕೆಲಸಗಳತ್ತ ತಲೆಹಾಕದಿದ್ದರೂ ಹಲಸಿನಕಾಯಿಯದು ಅಥವಾ ಬಾಳೆಕಾಯಿಯದೋ ಸಂಡಿಗೆ ಮಾಡುವಲ್ಲಿ ನಮ್ಮ ಹಾಜರಾತಿ ತಪ್ಪದೆ ಇರುತ್ತಿತ್ತು. ರುಚಿ ನೋಡುವ ನೆವದಲ್ಲಿ ಒಂದಿಷ್ಟು ಹೊಟ್ಟೆಗೆ ಸೇರುತ್ತಿತ್ತು. ಇವೆಲ್ಲವೂ ಮಕ್ಕಳಿಗೆ ಸಿಗುತ್ತಿದ್ದ ಅವಕಾಶಗಳು.
ಮದುಮಕ್ಕಳಿಗೆ ತಂದಿರುವ ಜವಳಿಯನ್ನೋ ಒಡವೆಗಳನ್ನೋ ಕುತೂಹಲದಿಂದ ನೋಡುತ್ತಿದ್ದ ಹೆಂಗಸರ ಗುಂಪಿನಲ್ಲಿ ನಮಗೆ ಜಾಗವಿರುತ್ತಿರಲಿಲ್ಲ. ಒಮ್ಮೆ ನಾವು ಮೂಗುತೂರಿಸಿದರೆ ʻನಡಿರಿ ಆಚೆ, ಮಕ್ಕಳಿಗೆಲ್ಲ ಬೆಕ್ಕಿನ ಪಳದ್ಯʼ ಎಂದು ನಮ್ಮನ್ನು ಅಟ್ಟುತ್ತಿದ್ದರು. ಮದುವೆ ದಿನ ಮತ್ತು ವಧುವನ್ನು ಮನೆ ತುಂಬಿಸುವ ದಿನಗಳಂದು ನಮಗೆ ಬಾಲಬಿಚ್ಚಲು ಅವಕಾಶವಿರುತ್ತಿತ್ತು. ಮದುವೆಯ ಕಾರ್ಯಕಲಾಪಗಳಲ್ಲಿ ಅಥವಾ ಆರತಿ ಅಕ್ಷತೆಯ ಸಂದರ್ಭದಲ್ಲಿ ಒಂದೆಡೆ ಕುಳಿತಿದ್ದ ಮದುಮಕ್ಕಳ ಹಿಂದೆ ಹೋಗಿ ಮಾವಿನ ಚಂಡೆಯನ್ನು ಅಥವಾ ಹೂವಿನ ಮಾಲೆಯನ್ನು ಅವರ ಸೆರಗಿಗೆ ಕಟ್ಟುತ್ತಿದ್ದೆವು. ಕೆಲವೊಮ್ಮೆ ಇಬ್ಬರ ಸೆರಗನ್ನೂ ಸೇರಿಸಿ ಕಟ್ಟುವುದೂ ಇತ್ತು. ಅಲ್ಲಿಂದ ಎದ್ದಾಗ ಅವರ ಗಮನಕ್ಕೆ ಬರುತ್ತಿತ್ತು. ಕೆಲವೊಮ್ಮೆ ಮತ್ಯಾರೋ ಗಮನಿಸಿ ಅದನ್ನು ಬಿಚ್ಚಿ ಬಿಸಾಕುತ್ತಿದ್ದರು. ಬೀಗರಿಗೋ, ಬೀಗಿತ್ತಿಯರಿಗೋ ಹೀಗೆ ಕಟ್ಟುವುದೂ ಇತ್ತು. ʻಅದ್ಯಾವ ಕೆಟ್‌ಹುಡುಗ್ರೋ, ಬರೀ ಕಿತಾಪತಿʼ ಎಂದು ಬೈದುಕೊಳ್ಳುತ್ತಿದ್ದರು.
ಕೋವಿಡ್ ಸಮಯದಲ್ಲಿ ಮನೆಯ ಮುಂದಿನ ಅಂಗಳದಲ್ಲಿಯೇ ನಡೆದ ಮದುವೆಯೊಂದಕ್ಕೆ ಹೋಗಿದ್ದೆ. ಈಗಿನ ಮಕ್ಕಳಿಗೆ ಇವುಗಳ ಪರಿಚಯ ಇದ್ದಂತೆ ಕಾಣಲಿಲ್ಲ. ಈಗೀಗ ಗ್ರಾಮೀಣ ಭಾಗದಲ್ಲಿಯೂ ಮದುವೆಗಳು ದೇವಸ್ಥಾನ, ಕಲ್ಯಾಣಮಂಟಪಗಳತ್ತ ಮುಖಮಾಡಿವೆ. ಒಮ್ಮೆ ಮನೆಯಲ್ಲಿ ಮದುವೆ ನಡೆದರೂ ಎಲ್ಲವನ್ನೂ ಗುತ್ತಿಗೆಗೆ ನೀಡುವ ಪದ್ಧತಿ ಬೆಳೆಯುತ್ತಿದೆ. ಮನೆಯವರಿಗೆ ಹೆಚ್ಚಿನ ಜವಾಬ್ದಾರಿ ಇರುವುದಿಲ್ಲ.
ಮದುವೆ ಹಿಂದಿನ ಸಂಜೆಯಿಂದ ಮದುವೆ ಚಪ್ಪರ ಮತ್ತು ಮಂಟಪದ ಕೆಲಸಕ್ಕೆ ಚಾಲನೆ ಸಿಗುತ್ತಿತ್ತು. ಊರಿನ ಯುವಕರು, ಗಂಡಸರು ಅಡಿಕೆ ಕಂಬವೋ ಅಥವಾ ಬಾಳೆಕಂಬವೊ ನಿರ್ಧರಿಸಿ ಮಂಟಪದ ರಚನೆಗೆ ತೊಡಗುತ್ತಿದ್ದರು. ಮಧ್ಯರಾತ್ರಿಯವರೆಗೆ ಮಾತು ಕೆಲಸ ಎರಡೂ ಸಾಗುತ್ತಿದ್ದವು. ಅವರಿಗೆ ಚಹಾ, ಅವಲಕ್ಕಿ ಸರಬರಾಜು ಆಗುತ್ತಿತ್ತು. ಮೊದಲೇ ತಿಳಿಸಿದಂತೆ ವಸ್ತುಗಳನ್ನು ಮನೆಯ ಯಜಮಾನ ಸಿದ್ಧಗೊಳಿಸಿಟ್ಟಿರುತ್ತಿದ್ದರು. ಚಪ್ಪರದ ಮೇಲ್ಗಟ್ಟಿಗೆ ಹೆಂಗಸರ ಸೀರೆಗಳನ್ನು ಕಟ್ಟಿ ಕಲಾತ್ಮಕವಾಗಿ ವಿನ್ಯಾಸಗೊಳಿಸುತ್ತಿದ್ದರು. ತರಬೇತಿ ಇಲ್ಲದೆ ಕಲ್ಪನೆಯ ಮೂಲಕ ಮಾಡುತ್ತಿದ್ದ ಅಲಂಕಾರ ಮನಸೆಳೆಯುವಂತಿರುತ್ತಿದ್ದವು.
ಹಿಂದೆಲ್ಲ ಮದುವೆ ಎರಡು ಕುಟುಂಬಗಳ ನಡುವಿನ ಸಂಬಂಧ ಎಂದಷ್ಟೆ ತಿಳಿಯುತ್ತಿರಲಿಲ್ಲ. ಅದೊಂದು ಸಾಮಾಜಿಕ ಸಮಾರಂಭವಾದ್ದರಿಂದ ಅಲ್ಲಿ ಎಲ್ಲರ ಭಾಗವಹಿಸುವಿಕೆ ಇರುತ್ತಿತ್ತು. ಯಾರ ಮನೆಯಲ್ಲಿ ಮದುವೆಯಾದರೂ ಊರಿಗೆಲ್ಲ ಸಂಭ್ರಮವೇ. ಮದುವೆಯಾಗುವ ಹುಡುಗ ಹುಡುಗಿಯರನ್ನು ಗೋಳುಹೊಯ್ದುಕೊಳ್ಳುತ್ತಿದ್ದರು. ಆಗ ಸಾಧಾರಣವಾಗಿ ಇಪ್ಪತ್ತೋ ಇಪ್ಪತ್ತೊಂದಕ್ಕೋ ಹುಡುಗಿಯರ ಮದುವೆ ನಡೆಯುತ್ತಿತ್ತು. ನಾಚಿಕೆ, ಸಂಕೋಚಗಳು ಇದ್ದ ಕಾಲವದು. ಮದುವೆ ನಿಶ್ಚಯವಾಗುತ್ತಲೇ ಮನೆಯಲ್ಲಿದ್ದ ಚಿಕ್ಕಪ್ಪ, ದೊಡ್ಡಪ್ಪ ಅಥವಾ ಅಜ್ಜ ಯಾರಾದರೂ ʻಬಾಯಿಲ್ಲಿ ಮದ್ವೆ ಹಾಡು ಹೇಳ್ಕೊಡ್ತಿʼ ಎಂದು ಕರೆಯುವುದಿತ್ತು. ʻಗಂಡ ಗಂಡ ಬಾರಯ್ಯ ಗಿಂಡಿಲ್ಲಿ ಉದಕ ತಾರಯ್ಯ ಹಾಸು ಮಂಚ ಹಾಸಯ್ಯ ಕೂಸಿನ ತೊಟ್ಲು ತೂಗಯ್ಯʼ ಎಂದು ಅವರು ನಾಚುವಂತೆ ಮಾಡುತ್ತಿದ್ದರು. ʻಹಾಕುವೆ ಹೂವಿನ ಹಾರ ಸುಂದರ ಕೊರಳಿಗೆ ಈಗʼ ಎನ್ನುವ ಹಾಡು ʻಹಾಕುವೆ ಹಗ್ಗದ ಹಾರ ಜೋಕ್ಮಾರನ ಕೊರಳಿಗೆ ಈಗʼ ಎಂದು ಅಪಭ್ರಂಶಗೊಳ್ಳತ್ತಿತ್ತು. ಮದುವೆ ಮುಗಿದ ಮೇಲೆ ಅರಿಸಿನೆಣ್ಣೆ ಶಾಸ್ತ್ರ ಮಾಡುತ್ತಿದ್ದರು. ವರ ಮತ್ತು ವಧು ಪರಸ್ಪರ ಅರಶಿನ ಹಚ್ಚಬೇಕಿತ್ತು. ʻಒಂದು ಸೇರಸಿನವ ಎಮ್ಮೆ ಮೂತ್ರದಿ ಕಲಸಿ ಎಮ್ಮೆ ಮುಖದ ಬಾವಯ್ಯಗೆ ಹಚ್ಚುವೆನರಿಸಿನವʼ ಎಂದು ಮದುವೆ ಹುಡುಗಿಗೆ ತಮಾಶೆಯಾಗಿ ಮೊದಲೇ ಹೇಳಿಕೊಡುವುದರ ಮೂಲಕ ಅವಳನ್ನು ರೇಗಿಸುತ್ತಿದ್ದರು. ಮದುವೆ ಮುಗಿದ ಮೇಲೆ ನಡೆಯುವ ಅರಿಶಿನೆಣ್ಣೆ ಶಾಸ್ತ್ರದಲ್ಲಿ ಹಾಡು ಒಗಟು ಎಲ್ಲವೂ ಹೊರಬರುತ್ತಿದ್ದವು. ಅದರಲ್ಲಿ ಇತರರೂ ಭಾಗಿಗಳಾಗುತ್ತಿದ್ದರು. ಮದುಮಕ್ಕಳಿಗೆ ಎಣ್ಣೆ ಅರಶಿನ ಹಚ್ಚಲು ಬಂದ ಹೆಂಗಸರ ಸೆರಗು ಹಿಡಿದು ʻಗಂಡನ ಹೆಸರು ಹೇಳಿದ್ರೇ ಸೆರಗು ಬಿಡದುʼ ಎನ್ನುತ್ತಿದ್ದರು. ಹೇಳುವವರೆಗೆ ಸೀರೆಯ ಚುಂಗನ್ನು ಬಿಡುತ್ತಿರಲಿಲ್ಲ. ಅಲ್ಲೊಂದು ತಮಾಶೆಯ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಯಾರು ಯಾವ ಒಗಟನ್ನು ಹೇಳುತ್ತಾರೆ ಎನ್ನುವ ಕುತೂಹಲ ಉಳಿದವರದು. ಕೆಲವರದು ಆಶುಕವಿತ್ವದಂತೆ ಆಶು ಒಗಟು ಹುಟ್ಟುತ್ತಿತ್ತು. ಒಮ್ಮೆ ಯಮುನಾ ಎನ್ನುವ ಮಹಿಳೆಯೊಬ್ಬರು ʻಯಮುನಾ ನದಿಗೆ ಸದಾನಂದ ನೌಕೆಯೇ ಭೂಷಣʼ (ಅವರ ಗಂಡನ ಹೆಸರು ಸದಾನಂದ) ಎನ್ನುತ್ತಿದ್ದಂತೆ ಸೂರು ಹಾರುವಂತೆ ಎಲ್ಲರೂ ನಕ್ಕಿದ್ದರು. ಹೀಗೆ ಆ ಸಮಯಕ್ಕೆ ತಮಗೆ ತೋಚಿರುವುದನ್ನು ಒಗಟು ಮಾಡಿ ಹೇಳುವುದಿತ್ತು. ಮದುಮಕ್ಕಳು ಮಾತ್ರ ಪರಸ್ಪರ ಹೆಸರನ್ನು ಸೇರಿಸಿ ಒಗಟನ್ನು ಹೇಳಬೇಕಿತ್ತು. ʻಬೆಳದಿಂಗಳ ಬೆಳಕು ಕಲ್ಸಕ್ರೆ ಹೊಳಕು ನನ್ನ ಹೆಂಡತಿ (ಇಲ್ಲಿ ಅವಳ ಹೆಸರು) ಬಲು ಚುರುಕುʼ. ʻಪಾಂಡವರಲ್ಲಿ ಹರಿಯು ಭೀಮನ ಕೈವಾರಿ ಸರಸದಿ (ಗಂಡನ ಹೆಸರು ಇಲ್ಲಿ ಬರಬೇಕು) ಹೆಸರ ಹೇಳುವೆನು ಬಿಡಿರಿ ದಾರಿʼ
ಹೆಣ್ಣುಮಕ್ಕಳಿಗೆ ಹಾಡು ಶೇಡಿ (ರಂಗೋಲಿ) ಬರಲೇಬೇಕೆನ್ನುವ ನಿರೀಕ್ಷೆಯಿತ್ತು. ಒಮ್ಮೆ ಗೊತ್ತಿಲ್ಲದಿದ್ದರೆ ʻಅಕ್ಕತಂಗೇರು ಚಕ್ರಪಾಣೇರು ಹಾಡು ಬಾರದ ಶೇಡಿ ಬಾರದ ದುರ್‌ದುಣ್ಣೇರುʼ ಎಂದು ಛೇಡಿಸುತ್ತಿದ್ದರು. ಕೆಲವರು ಇದಕ್ಕೆಲ್ಲ ಸೊಪ್ಪುಹಾಕುತ್ತಿರಲಿಲ್ಲ. ʻಹಾಡೆಲ್ಲ ಕಲ್ತಿದ್ದಿ ಬೇರಡಿಗೆ ಇಟ್ಟಿದ್ದಿ ಹೊಸಮಳೆ ಬಂದು ತೊಳದ್ಹೋತುʼ ಎಂದು ಸರಿಯಾದ ಉತ್ತರ ಕೊಡುವುದೂ ಇತ್ತು. ಹುಡುಗಿಯ ತಾಯಿ ಸ್ವಲ್ಪ ಜೋರಿನವಳಾದರೆ ʻಮದುವೆ ಮನೆಯಲಿ ಮಾವಿನ ಗೊರಟೆ ಮದುವೆ ಕೂಸಿಂತಾಯಿ ಜಗಳಕೆ ಹೊರಟೆʼ ಎಂದು ಪರೋಕ್ಷವಾಗಿ ಎಚ್ಚರಿಸುವುದೂ ಇತ್ತು. ಈಗಿನಂತೆ ಒಂದು ದಿನದಲ್ಲಿ ಮದುವೆಯ ಕಲಾಪಗಳು ಮುಗಿಯುತ್ತಿರಲಿಲ್ಲ. ಮರುದಿವಸ ನಾಗೋಲಿಯಂದು ನಡೆಯುತ್ತಿದ್ದ ಓಕುಳಿ ಬಹಳ ವಿಶೇಷವಾಗಿರುತ್ತಿತ್ತು. ದೊಡ್ಡ ಕಡಾಯಿಯಲ್ಲಿ ಅರಿಶಿನದ ನೀರು ತಯಾರಾಗಿರುತ್ತಿತ್ತು. ಅದರಲ್ಲಿ ಉಂಗುರವನ್ನು ಹಾಕುತ್ತಿದ್ದರು. ವಧುವರರಿಬ್ಬರೂ ಕೈಹಾಕಿ ಒಳಗಿರುವ ಉಂಗುರವನ್ನು ತೆಗೆಯಬೇಕು. ಮೂರು ಬಾರಿ ಹೀಗೆ ನಡೆದು ಒಂದಕ್ಕಿಂತ ಹೆಚ್ಚು ಬಾರಿ ಉಂಗುರವನ್ನು ತೆಗೆದವರಿಗೆ ಆ ಉಂಗುರ ಸೇರುತ್ತಿತ್ತು. ವರನ ಕಡೆಯವರು ʻಬೇಗ ಕೈಹಾಕಿ ಉಂಗುರ ತೆಗಿ ಮಾರಾಯʼ ಎಂದು ವರನನ್ನು, ವಧುವಿನ ಬಂಧುಗಳು ʻಗಂಡಂಗೆ ಅವಕಾಶ ಕೊಡಡ, ನೀನೆ ಬೇಗ ಬೇಗ ಉಂಗುರ ಹುಡುಕಿ ತೆಗಿʼ ಎಂದು ವಧುವನ್ನು ಹುರಿದುಂಬಿಸುತ್ತಿದ್ದರು. ಇಬ್ಬರೂ ಪರಸ್ಪರ ಈ ನೀರನ್ನು ಎರಚಬೇಕಿತ್ತು. ಕೆಲವೊಮ್ಮೆ ಅಕ್ಕತಂಗಿಯರೂ ಭಾಗಿಗಳಾಗುತ್ತಿದ್ದರು.
ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು. ʻಅದ್ಯಾರೆ ಅಷ್ಟು ಚಂದಾಗಿ ಹಾಡು ಹೇಳೋಳು?ʼ ಎನ್ನುವ ಮಾತು ಕೇಳಿದರೆ ಸಾಕು, ತಾನು ಹಾಡಿದ್ದು ಸಾರ್ಥಕ ಎನ್ನುವ ಭಾವನೆ ಮೂಡುತ್ತಿತ್ತು. ಸೊಸೆಯನ್ನು ನೋಡಿ ಎಂದು ತಮ್ಮ ಮಗಳನ್ನು ಹಾಡಿಹೊಗಳುವ ಹಾಡುಗಳು ಕೇಳಿಬರುತ್ತಿದ್ದವು. ʻಸೊಸೆಯ ನೋಡಿಕೊ ಜಾಣೆ ವಾಸು ಪ್ರವೀಣೆ ಶಶಿಮುಖಿಯಳಿಗೆಣೆ ಯಾರಿಲ್ಲಕಾಣೆʼ ಎನ್ನುವುದಕ್ಕೆ ʻಇಂದು ಬಂದ ಸೊಸೆಯ ಇಂದು ನೋಡ್ವದೇನೆ ಕುಂದು ಇಲ್ಲದಿರಲು ಎಂದು ನೋಡ್ದರೇನೆʼ ಎನ್ನುವ ಉತ್ತರವೂ ಸಿದ್ಧವಿರುತ್ತಿತ್ತು.
ಗಂಡಿನವರು ಮದುವೆ ಮುಗಿಸಿ ದಿಬ್ಬಣ ತಿರುಗಿ ಬಂದ ಮೇಲಿನ ಹಾಡು ಒಂಥರಾ ಮಜಾ ಇರುತ್ತಿತ್ತು. ಮನೆಯಲ್ಲಿದ್ದವರಿಗೆ ಬೀಗರನ್ನು ವರ್ಣಿಸುತ್ತಿದ್ದುದು ಹೀಗೆ;
ʻಬೀಗರ ಮನೆ ಸುದ್ದಿಯ ನಿಂತು ಕೇಳೇ ಅಕ್ಕಯ್ಯ ನಾಲ್ಕೂ ಬಾಗಿಲಿಗೂ ಕದವುಂಟು
ಕದವುಂಟು ಸಿರಿಯುಂಟು ಬೀಗರ ಮನೆ ಸುದ್ದಿ ಸಮ ಉಂಟುʼ ಅಂತಲೋ
ʻನೆಂಟರ ಮನೆ ಸುದ್ದಿಯ ನಿಂತು ಕೇಳೋ ಅಣ್ಣಯ್ಯ ಬೀಗ ಬೀಗಿತ್ತಿ ಸಮತೂಕ
ಸಮತೂಕ ಅಣ್ಣಯ್ಯ ಬೀಗರೊಳ್ಯವರು ದೊರಕಿದʼ
ಎಂದು ತಮ್ಮ ಬೀಗರ ದೊಡ್ಡಸ್ತಿಕೆಯನ್ನು ಬಿಂಬಿಸುತ್ತಿದ್ದರು. ಅಷ್ಟೆ ಅಲ್ಲ,
ʻಲಾಡನ್ನು ಮಾಡಿದ್ದ ಬುಟ್ಟಿಯಲಿ ತುಂಬಿದ್ದ ನೀ ಬಪ್ಪೆಂದ್ಹೇಳಿ ಮಡಗಿದ್ದ
ಮಡಗಿದ್ದ ಅಣ್ಣಯ್ಯ ಬೀಗರೊಳ್ಳೆವರು ದೊರಕಿದʼ
ಎಂದು ಅವರ ಒಳ್ಳೆಯತನವನ್ನು ತಿಳಿಸಲು ಮರೆಯುತ್ತಿರಲಿಲ್ಲ. ಇನ್ನೊಂದು ಸನ್ನಿವೇಶ ಬಂಧುತ್ವವನ್ನು ಗಟ್ಟಿಗೊಳಿಸುವಂಥದು. ಗಂಡಿನ ಮನೆಯಲ್ಲಿ ಹೊಸ್ತಲು ಪೂಜೆ ನೆರವೇರಿಸಿ ಹೆಣ್ಣನ್ನು ಮನೆತುಂಬಿಸಿಲೊಳ್ಳುವ ಸಂದರ್ಭದಲ್ಲಿ ಅಕ್ಕತಂಗಿಯರು ಬಾಗಿಲು ತಡೆಯುತ್ತಿದ್ದರು. ಅಣ್ಣನಿಗೆ ತನ್ನ ಅಹವಾಲನ್ನು ಸಲ್ಲಿಸುತ್ತಿದ್ದರು. ಹೊಸಮದುಮಕ್ಕಳನ್ನು ಒಳಗೆ ಹೋಗಲು ಬಿಡುತ್ತಿರಲಿಲ್ಲ.
ʻಮತಿಯುತ ಸೋದರ ಸತಿಯೊಳು ಜನಿಸಿದ ಸುತೆಯನೆನ್ನೆಯ ಸುತಗೆ
ಈಯುವೆನೆಂದು ಕತಿಸಿದರಾನು ಈಗ ಬಿಡುವೆನು ನಿನಗೆʼ ಎಂದು ಸವಾಲು ಹಾಕುತ್ತಿದ್ದರು.
ʻಮುಂದಿನ ಮಾತನು ಇಂದೇನ ಪೇಳಲಿ ಸುಂದರಿ ನಿನ್ನೊಳಾನು ನೀ ಬೇಡಿದುದ
ಸಂದೇಹವಿಲ್ಲದೆಯೆ ಕೊಡುವೆನು ನಿನಗೆʼ ಎಂದು ಮದುಮಗ ಭರವಸೆ ಕೊಡುತ್ತಲೇ ಅವರಿಗೆ ಮುಕ್ತ ಪ್ರವೇಶ ದೊರಕುತ್ತಿತ್ತು. ಹೀಗೆ ಬಾಗಿಲು ತಡೆದವರಿಗೆ ಉಡುಗೊರೆ ಕೊಟ್ಟು ಗೌರವಿಸುವ ರೂಢಿಯೂ ಇತ್ತು.
ಮದುವೆ ಎನ್ನುವುದು ಎರಡು ಕುಟುಂಬಗಳ ನಡುವಿನ ಬಾಂಧವ್ಯವಷ್ಟೆ ಅಲ್ಲದೆ, ಉಳಿದ ಸಂಬಂಧಿಗಳ ಒಡನಾಟವನ್ನು ವೃದ್ಧಿಸುವ ಅವಕಾಶವೂ ಆಗಿತ್ತು. ಶ್ರೀಮಂತಿಕೆಯ ಮೆರೆತ, ದೊಡ್ಡಸ್ತಿಕೆಯ ಪ್ರದರ್ಶನಗಳು ಅಷ್ಟಾಗಿ ಮುನ್ನೆಲೆಗೆ ಬಂದಿರದ ಕಾಲವದು. ಎಲ್ಲವನ್ನು ಹಂಚಿಕೊಂಡು ಖುಶಿಯಿಂದ ಅಂದಗಾಣಿಸುತ್ತಿದ್ದರು. ಮಕ್ಕಳು, ಹಿರಿಯರು, ಮಾತ್ರವಲ್ಲ, ಮನೆಯ ಆಳುಗಳೂ ಭಾಗಿಗಳಾಗುತ್ತಿದ್ದರು. ಚಪ್ಪರ, ತೋರಣಗಳಲ್ಲಿ ಅವರ ಕೈಚಳಕ ಎದ್ದು ಕಾಣುತ್ತಿತ್ತು. ಅವರಿಗೆ ಬಟ್ಟೆ, ತಿಂಡಿ, ತೀರ್ಥಗಳನ್ನು ನೀಡಿ ಖುಶಿಪಡಿಸುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.