ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ. ಒಳ್ಳೆಯ ವಿಷಯಗಳಿರಲಿ, ಕೆಟ್ಟ ವಿಚಾರಗಳಿರಲಿ ಅದು ಮೊದಲು ಹುಟ್ಟುವುದು ಮನಸ್ಸಿನಲ್ಲಿ. ನಂಬಿಕೆಗೂ ಮನಸ್ಸಿಗೂ ಅವಿನಾಭಾವ ಸಂಬಂಧ ಅಲ್ಲವೇ.. ವಿಶ್ವನಾಥ ನೇರಳೆಕಟ್ಟೆ ಅವರು ಮನಸ್ಸಿನ ಅಗಾಧತೆಯ ಕುರಿತು ಬರೆದ ಲೇಖನ ಇಂದಿನ ಓದಿಗಾಗಿ.
ಒಬ್ಬ ವ್ಯಕ್ತಿ ಮರಳುಗಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಅದೆಷ್ಟೋ ಸಮಯದಿಂದ ಕಾಲುಗಳಿಗೆ ಕೆಲಸ ಕೊಟ್ಟಿದ್ದ ಕಾರಣ ಅವನಿಗೆ ಸುಸ್ತಾಗಿತ್ತು. ಆ ಕ್ಷಣಕ್ಕೆ ಅವನಿಗೆ ಬೇಕಿದ್ದದ್ದು ನೆರಳು. ‘ಇಲ್ಲೊಂದು ಮರ ಇದ್ದಿದ್ದರೆ ಅದೆಷ್ಟು ಚೆನ್ನಾಗಿತ್ತು!’ ಎಂದುಕೊಂಡ. ಅವನಿಗೆ ಅಚ್ಚರಿ ಹುಟ್ಟಿಸುವಂತೆ ಅಲ್ಲೊಂದು ಮರ ಪ್ರತ್ಯಕ್ಷವಾಯಿತು. ಆಟವಾಡಿ ಬಂದ ಪುಟ್ಟ ಮಗು ತಾಯಿಯ ಕಾಲಿನ ಬಳಿಯಲ್ಲಿ ಕುಳಿತುಕೊಂಡಂತೆ ಮರದ ನೆರಳಿನಲ್ಲಿ ವಿಶ್ರಮಿಸಿದ. ದೇಹಕ್ಕೊಂದಷ್ಟು ನಿರಾಳತೆ ದೊರಕಿತು. ‘ಈ ಮರದಲ್ಲಿ ಒಂದಷ್ಟು ಹಣ್ಣುಗಳಿದ್ದಿದ್ದರೆ! ಕಿತ್ತುಕೊಂಡು ಹೊಟ್ಟೆತುಂಬ ತಿನ್ನಬಹುದಿತ್ತು’ ಎಂದುಕೊಂಡಿತು ಅವನ ಮನಸ್ಸು. ತಕ್ಷಣವೇ ಮರದ ಕೊಂಬೆ ಕೊಂಬೆಗಳಲ್ಲಿಯೂ ಹಣ್ಣುಗಳು ತುಂಬಿಕೊಂಡವು. ಆಶ್ಚರ್ಯವನ್ನು ಹೊಟ್ಟೆಯೊಳಗಿರಿಸಿಕೊಂಡೇ ಅವನು ಹಣ್ಣುಗಳನ್ನು ಒಂದೊಂದಾಗಿ ಹೊಟ್ಟೆಗಿಳಿಸತೊಡಗಿದ. ಹಣ್ಣಿನ ಚಿಕ್ಕ ಚೂರು ಗಂಟಲಿನಲ್ಲಿ ಸಿಕ್ಕಿಕೊಂಡಂತಾಯಿತು. ‘ನೀರಿರಬಾರದಿತ್ತೇ’ ಎಂದು ಮನಸ್ಸಿನಲ್ಲಿಯೇ ಹಲುಬಿದ. ತಕ್ಷಣವೇ ಅವನೆದುರಲ್ಲೊಂದು ಕೊಳ ಕಾಣಿಸಿಕೊಂಡು, ‘ದಾಹ ನೀಗಿಸಿಕೋ’ ಎಂದು ಬಳಿ ಕರೆಯಿತು. ಬೊಗಸೆಯಲ್ಲಿ ನೀರನ್ನು ಮೊಗೆಮೊಗೆದು ದಾಹವನ್ನು ನೀಗಿಸಿಕೊಂಡ. ಈಗ ಅವನ ಮನಸ್ಸಿಗೆ ಬಂದ ಯೋಚನೆ- ‘ನಾನು ಅಂದುಕೊಂಡದ್ದೆಲ್ಲವೂ ಆಗುತ್ತಿದೆ. ಇದೇನಾದರೂ ಯಾವುದೋ ರಕ್ಕಸನ ಕೈವಾಡವಾಗಿದ್ದರೆ?! ಅವನೀಗ ನನ್ನ ಮುಂದೆ ಪ್ರತ್ಯಕ್ಷನಾಗಿ ನನ್ನನ್ನು ತಿಂದುಬಿಟ್ಟರೆ?!’ ತಕ್ಷಣವೇ ಚೂಪು ಉಗುರುಗಳ, ಕೋರೆದಾಡೆಯ, ಕೆಂಪು ಕಣ್ಗಳ ದೈತ್ಯನೊಬ್ಬ ಅವನ ಮುಂದೆ ಬಂದ. ಅವನು ಬಾಯಿ ಬಡಿದುಕೊಳ್ಳುತ್ತಿದ್ದಾಗಲೇ ಅವನನ್ನು ಬಡಿದು ಬಾಯಿಗೆ ಹಾಕಿಕೊಂಡು ಬಾಯಿ ಚಪ್ಪರಿಸಿದ. ಮನಸ್ಸಿನ ಬಗ್ಗೆ ತಿಳಿಸಹೊರಟಾಗಲೆಲ್ಲ ನನಗೆ ಮೊದಲಿಗೆ ನೆನಪಾಗುವುದು ಇದೇ ಕಥೆ. ಅದೆಷ್ಟೋ ವರ್ಷಗಳ ಹಿಂದೆ ಓದಿದ್ದ ಈ ಕಥೆ ಇಂದಿಗೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ.
ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಇತ್ತೀಚೆಗೆ ಒಂದು ಆಡಿಯೋ ಬುಕ್ ಸಂಸ್ಥೆಯವರು ನಾನು ಬರೆದ ಒಂದಷ್ಟು ಕಥೆಗಳನ್ನು ಕಳುಹಿಸಿಕೊಡುವಂತೆ ತಿಳಿಸಿದ್ದರು. ಆ ಕಥೆಗಳನ್ನು ಧ್ವನಿ ರೂಪದಲ್ಲಿ ಹೊರತರುವ ಉದ್ದೇಶ ಅವರದ್ದು. ಸಂತಸದಿಂದಲೇ ಕಳುಹಿಸಿಕೊಟ್ಟಿದ್ದೆ. ಏಳು ದಿನಗಳಲ್ಲಿಯೇ ಕಥೆಗಳಷ್ಟನ್ನೂ ಓದಿ ಮುಗಿಸಿದ ಅವರು ಕರೆ ಮಾಡಿ ನನ್ನಲ್ಲಿ ಕೇಳಿದ ಮೊದಲ ಪ್ರಶ್ನೆ- “ಎಲ್ಲಾ ಕಥೆಗಳೂ ದುಃಖಾಂತವಾಗಿಯೇ ಇವೆಯಲ್ಲಾ ಸರ್! ಯಾಕೆ ಹಾಗೆ ಬರೆದಿದ್ದೀರಿ?” ಸ್ಪಷ್ಟವಾದ ಉತ್ತರ ನನ್ನಲ್ಲಿತ್ತು- “ಅದೊಂದು ಕಥೆಯ ತಂತ್ರ ಸರ್. ಸುಖಾಂತವಾದ ಕಥೆಗಳು ಹೆಚ್ಚು ಕಾಲ ಓದುಗರ ಮನಸ್ಸಿನಲ್ಲಿರುವುದಿಲ್ಲ. ಆ ಕ್ಷಣಕ್ಕೆ ಓದಿನ ಸುಖ ಕೊಡುತ್ತವೆ ಅಷ್ಟೇ. ಆದರೆ ದುಃಖದಲ್ಲಿ ಕೊನೆಗೊಳ್ಳುವ ಕಥೆಗಳು ಓದುಗರ ಮನಸ್ಸಿನಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಅದಕ್ಕಾಗಿಯೇ ದುಃಖಾಂತ ಕಥೆಗಳನ್ನೇ ಬರೆದಿದ್ದೇನೆ” ಪೋನಿಟ್ಟ ಮೇಲೆ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ- ‘ಕಥೆಯ ತಂತ್ರವಾಗಿ ಮಾತ್ರ ನಾನು ಕಥೆಗಳನ್ನು ದುಃಖಾಂತಗೊಳಿಸಿದ್ದೇನೆಯೇ? ಇನ್ನೇನೋ ಕಾರಣ ಇರಬೇಕಲ್ಲಾ’ ಕಾರಣ ಶೋಧಿಸಿ ಹೊರಟ ನನಗೆ ಹೊಳೆದದ್ದಿಷ್ಟು- ನಾನು ಮೂರ್ನಾಲ್ಕು ವರ್ಷಗಳ ಮಗುವಾಗಿದ್ದಾಗ ನನ್ನ ತಾಯಿಯ ಆರೋಗ್ಯ ಹದಗೆಟ್ಟಿತ್ತು. ಯಾವಾಗ ನೋಡಿದರೂ ಆಸ್ಪತ್ರೆಗೆ ಅಲೆದಾಟ. ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ. ಕೆಲವು ಸಲ ಅದು ಯಾರ‍್ಯಾರಿಂದಲೋ ಬೈಗುಳ, ಅವಮಾನ. ಎಷ್ಟೋ ಸಲ ಮಲಮೂತ್ರ ವಿಸರ್ಜನೆಗಾಗಿ ಅಮ್ಮನನ್ನು ನಾನೇ ಶೌಚಾಲಯಕ್ಕೆ ಕರೆದುಕೊಂಡು ಹೋಗಬೇಕಾಗುತ್ತಿತ್ತು. ಇದನ್ನೆಲ್ಲಾ ಕಂಡ ಅಮ್ಮನಿಗೆ ದುಃಖ. ಅಮ್ಮನ ಅಳು ನನ್ನಲ್ಲೂ ದುಃಖ ಮೂಡಿಸುತ್ತಿತ್ತು. ಹೀಗೆ ನನ್ನ ಸುಪ್ತ ಪ್ರಜ್ಞೆಯಲ್ಲಿ ಉಳಿದುಕೊಂಡ ದುಃಖ ಈಗ ಕಥೆ ಬರೆಯುವ ಸಂದರ್ಭದಲ್ಲಿ ಹೊರಬರುತ್ತಿತ್ತು. ಅಂತರ್ಗತವಾಗಿರುವ ಭಾವನೆಗಳು ಬರಹದಲ್ಲಿ ವ್ಯಕ್ತಗೊಳ್ಳುವುದು ಸಹಜವಾದ ಸಂಗತಿಯಾಗಿದೆ.
ಪೋನಿಟ್ಟ ಮೇಲೆ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ- ‘ಕಥೆಯ ತಂತ್ರವಾಗಿ ಮಾತ್ರ ನಾನು ಕಥೆಗಳನ್ನು ದುಃಖಾಂತಗೊಳಿಸಿದ್ದೇನೆಯೇ? ಇನ್ನೇನೋ ಕಾರಣ ಇರಬೇಕಲ್ಲಾ’ ಕಾರಣ ಶೋಧಿಸಿ ಹೊರಟ ನನಗೆ ಹೊಳೆದ ವಿಷಯಕ್ಕೆ ಇನ್ನೊಂದು ಆಯಾಮ ಗೋಚರಿಸಿತು.
ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ. ಒಳ್ಳೆಯ ವಿಷಯಗಳಿರಲಿ, ಕೆಟ್ಟ ವಿಚಾರಗಳಿರಲಿ ಅದು ಮೊದಲು ಹುಟ್ಟುವುದು ಮನಸ್ಸಿನಲ್ಲಿ. ಒಬ್ಬ ಇಂಜಿನಿಯರ್ ಅದ್ಭುತ ಕಟ್ಟಡವೊಂದನ್ನು ಕಟ್ಟಬೇಕಾದರೆ ಆ ಕಟ್ಟಡ ಮೊದಲು ನಿರ್ಮಾಣ ಆಗಬೇಕಾದದ್ದು ಅವನ ಮನಸ್ಸಿನಲ್ಲಿ, ಅವನ ಕಲ್ಪನೆಯಲ್ಲಿ. ಆ ಕಲ್ಪನೆ ಚಿತ್ರದ ರೂಪದಲ್ಲಿ ನೀಲನಕ್ಷೆಯಾಗಿ ಕಾಗದದ ಮೇಲೆ ರೂಪು ಪಡೆಯುತ್ತದೆ. ಅದಾದ ಮೇಲೆ ಸುಂದರ ಕಟ್ಟಡ ಭೂಮಿಯಿಂದ ಮೈಕೊಡವಿ ಎದ್ದುನಿಲ್ಲುತ್ತದೆ. ಭಯೋತ್ಪಾದಕನೊಬ್ಬ ಹೋಟೆಲೊಂದನ್ನು ಸ್ಫೋಟಿಸಿ, ನೂರಾರು ಜನರ ಸಾವಿಗೀಡಾಗುತ್ತಾನೆ ಎಂದಾದರೆ ಮೊದಲ ಸ್ಫೋಟ ಸಂಭವಿಸುವುದು ಅವನ ಮನಸ್ಸಿನಲ್ಲಿ.
ಕವಿಗಳಾಗಿರುವವರ ಮನಸ್ಸು ಉಳಿದವರ ಮನಸ್ಸಿಗಿಂತಲೂ ಹೆಚ್ಚು ಸಂವೇದನಾಶೀಲವಾದದ್ದು ಎನ್ನುವುದು ನನ್ನ ಸ್ವಾನುಭವ. ಕಾರಿನಡಿಗೆ ಬಿದ್ದು ನಾಯಿಯೊಂದು ಸತ್ತುಹೋಗಿರುವುದನ್ನು ನೂರಾರು ಜನ ನೋಡುತ್ತಾರೆ. ಆದರೆ ಮನಸ್ಸಿನಲ್ಲಿ ಉಳಿಸಿಕೊಳ್ಳುವವರು ಕೆಲವರು. ಹಾಗೆ ಮನಸ್ಸಿನಲ್ಲಿ ಉಳಿದದ್ದನ್ನು ಉಳಿದವರಿಗೂ ತಿಳಿಸಬೇಕೆನ್ನುವ ಸಂವೇದನೆ ನಮ್ಮದ್ದಾದರೆ ಕವಿಮನಸ್ಸು ನಮ್ಮಲ್ಲಿದೆಯೆಂದರ್ಥ. ಮನಸ್ಸು ಭಾವಶೀಲವಾಗಿದ್ದಾಗ ಕವಿತೆ ಹುಟ್ಟುತ್ತದೆ. ಮನಸ್ಸು ಯಾವಾಗ ಬುದ್ಧಿಪೂರ್ವಕವಾಗಿ ಯೋಚಿಸಲಾರಂಭಿಸುತ್ತದೆಯೋ ಆಗ ವೈಚಾರಿಕ ಲೇಖನ, ಸಂಶೋಧನೆ, ವಿಮರ್ಶೆ ಇಂಥವುಗಳ ಸೃಷ್ಟಿ ಸಾಧ್ಯವಾಗುತ್ತದೆ. ನನ್ನ ಅನುಭವವನ್ನೇ ಹೇಳುವುದಾದರೆ, ಮೊದಲಿದ್ದಷ್ಟು ಸಂವೇದನೆಯನ್ನು ನನ್ನ ಮನಸ್ಸು ಈಗ ಉಳಿಸಿಕೊಂಡಿಲ್ಲ. ಪಿಯುಸಿ, ಡಿಗ್ರಿ ಓದುತ್ತಿದ್ದಾಗ ಚಿಕ್ಕ ಚಿಕ್ಕ ವಿಚಾರಗಳೂ ಕೂಡಾ ನನ್ನ ಮನಸ್ಸಿನಲ್ಲಿ ಸಂವೇದನೆಯ ಅಲೆಗಳನ್ನು ಎಬ್ಬಿಸುತ್ತಿದ್ದವು. ಬಸ್ಸಿನಲ್ಲಿ ಸಾಗುತ್ತಿದ್ದಾಗ ಕಣ್ಣಿಗೆ ಬಿದ್ದ ಭಿಕ್ಷುಕ ಹುಡುಗಿಯೊಬ್ಬಳ ಪರಿಸ್ಥಿತಿಯನ್ನು ಕಾವ್ಯವಸ್ತುವಾಗಿಸಿಕೊಂಡು ‘ಚಿಂದಿ ಆಯ್ವ ಹುಡುಗಿ’ ಎನ್ನುವ ಕವಿತೆ ಬರೆದಿದ್ದೆ. ವೈದ್ಯರ ಕ್ಲಿನಿಕ್‌ಗೆ ಹೋಗಿದ್ದಾಗ ಏಳೆಂಟು ವರ್ಷ ಪ್ರಾಯದ ಹುಡುಗನೊಬ್ಬ ಪುಟ್ಟ ಚಿಟ್ಟೆಯೊಂದನ್ನು ಕಾಲಿನಲ್ಲಿ ಹೊಸಕಿಹಾಕಿ ಕೊಂದದ್ದನ್ನು ನೋಡಿದ್ದೆ. ಆ ಹುಡುಗ ಮಾಡಿದ ಕೆಲಸ, ಅದನ್ನು ನೋಡಿಯೂ ಸುಮ್ಮನಿದ್ದ ಅವನ ತಾಯಿಯ ಮೌನ ನನ್ನನ್ನು ಗಾಢವಾಗಿ ಕಾಡಿದ್ದವು. ‘ಆಗ ಇತ್ತು, ಈಗಿಲ್ಲ, ನಮಗೇನು ನೋವಿಲ್ಲ’ ಎನ್ನುವ ಸಾಲುಗಳು ನನ್ನಿಂದ ಹೊರಹೊಮ್ಮಿದ್ದು ಆ ಸನ್ನಿವೇಶದಲ್ಲಿ. ಈಗಲೂ ನನ್ನ ಮನಸ್ಸು ಅಷ್ಟೇ ಸಂವೇದನಾಶೀಲವಾಗಿದೆಯೇ ಎಂದರೆ ಸಿಗುವ ಉತ್ತರ- ಖಂಡಿತವಾಗಿಯೂ ಇಲ್ಲ. ಬದುಕಿನ ಗಡಿಬಿಡಿಯ ಪಯಣದಲ್ಲಿ ವ್ಯಸ್ತನಾಗಿರುವ ನನ್ನಲ್ಲಿ ಕವಿಮನಸ್ಸು ಕಳೆದುಹೋಗಿದೆ. ಆ ಕಾರಣದಿಂದಲೇ ನಾನು ಕವಿತೆ ಬರೆಯುವುದನ್ನು ಕಡಿಮೆ ಮಾಡಿದ್ದೇನೆ. ಹೂವರಳುವ ಸದ್ದಿಗೂ ಕಿವಿಯಾಗುವ ಸಂವೇದನಾಶೀಲ ಮನಸ್ಸು ಇರದ ಹೊರತು ಉತ್ತಮ ಕವಿಯಾಗುವುದು ಸಾಧ್ಯವಿಲ್ಲ. ಸುಮಾರು ಒಂದು ವರ್ಷದ ಹಿಂದೆ ಈಗಿನ ತಲೆಮಾರಿನ ಕಾವ್ಯಾಸಕ್ತರೆದುರು ಮಾತನಾಡುವ ಸಂದರ್ಭ ಬಂದಾಗಲೂ ಇದೇ ಮಾತನ್ನು ಹೇಳಿದ್ದೆ. ಉಳಿದೆಲ್ಲ ಬರವಣಿಗೆಗಿಂತಲೂ ಕವನದ ಬರವಣಿಗೆ ಕಷ್ಟ. ಕವಿಮನಸ್ಸನ್ನು ಹೊಂದುವುದು, ಅದನ್ನು ಜತನದಿಂದ ಕಾಪಾಡಿಕೊಳ್ಳುವುದು ಬಹಳ ಕಷ್ಟ.
ಮನಸ್ಸಿನ ದೌರ್ಬಲ್ಯ ಅದೆಂತಹ ವೀರನನ್ನು ಬೇಕಿದ್ದರೂ ಕುಗ್ಗಿಸಬಹುದು ಎನ್ನುವುದಕ್ಕೆ ಮಹಾಭಾರತದಲ್ಲಿ ಬರುವ ದ್ರೋಣಾವಸಾನ ಸನ್ನಿವೇಶವೇ ಸಾಕ್ಷಿ. ಕೌರವ ಸೇನೆಯ ಅಧಿಪತ್ಯವನ್ನು ವಹಿಸಿಕೊಂಡ ದ್ರೋಣಾಚಾರ್ಯರು ಅಪ್ರತಿಮವಾಗಿ ಹೋರಾಟ ನಡೆಸುತ್ತಾರೆ. ಅವರ ಶೌರ್ಯದೆದುರು ಪಾಂಡವ ಸೇನೆ ಕಳೆಗುಂದುತ್ತದೆ. ಇಂತಹ ಸಂದರ್ಭದಲ್ಲಿ ಶ್ರೀಕೃಷ್ಣ ಪ್ರಯೋಗಿಸಿದ ತಂತ್ರ- ದ್ರೋಣಾಚಾರ್ಯರ ಮನಸ್ಸನ್ನು ದುರ್ಬಲಗೊಳಿಸುವುದು. ಅಶ್ವತ್ಥಾಮ ಹೆಸರಿನ ಆನೆ ಹತವಾದುದ್ದನ್ನೇ ನೆಪವಾಗಿಟ್ಟುಕೊಂಡು ಧರ್ಮರಾಯನ ಮೂಲಕ ‘ಹತೋ ಅಶ್ವತ್ಥಾಮ ಕುಂಜರಃ’ ಎಂದು ಹೇಳಿಸುತ್ತಾನೆ. ಕೊನೆಯ ಶಬ್ಧ ಕೇಳಿಸದಂತೆ ಪಾಂಚಜನ್ಯದ ನಾದವನ್ನು ಮೊಳಗಿಸುತ್ತಾನೆ. ತನ್ನ ಮಗ ಅಶ್ವತ್ಥಾಮನೇ ಸತ್ತುಹೋಗಿದ್ದಾನೆ ಎಂದು ಭಾವಿಸಿಕೊಂಡ ದ್ರೋಣಾಚಾರ್ಯರ ರಣೋತ್ಸಾಹ ಇನ್ನಿಲ್ಲವಾಗುತ್ತದೆ. ಮಗನೇ ಇಲ್ಲವಾದಮೇಲೆ ಈ ಯುದ್ಧ ಯಾಕೆ? ಗೆಲುವು ಯಾಕೆ? ಎಂಬ ವೈರಾಗ್ಯಕ್ಕೆ ಒಳಗಾದವರು ಶತ್ರುವಿನ ಮಗ ದೃಷ್ಟದ್ಯುಮ್ನನ ಕೈಯ್ಯಲ್ಲಿ ಸಾವನ್ನು ದರ್ಶಿಸುವಂತಾಗುತ್ತದೆ. ‘ಕರ್ಣಭೇದನ ಪ್ರಸಂಗ’ದಲ್ಲಿಯೂ ಮನಸ್ಸನ್ನು ದುರ್ಬಲಗೊಳಿಸುವ ಚಿತ್ರಣವಿದೆ. ಸೂತಪುತ್ರನೆಂದು ಪದೇ ಪದೇ ಹೀಗಳಿಕೆಗೆ ಗುರಿಯಾಗುತ್ತಿದ್ದ ಕರ್ಣನನ್ನು ರಥದಲ್ಲಿ ತನ್ನ ಬಳಿಯಲ್ಲಿಯೇ ಕುಳ್ಳಿರಿಸಿಕೊಂಡು, “ಭೇದಿಸುವುದಕ್ಕಾಗಿ ಇದನ್ನೆಲ್ಲಾ ಹೇಳುತ್ತಿದ್ದೇನೆ ಎಂದುಕೊಳ್ಳಬೇಡ” ಎಂದು ನಯವಾಗಿ ಹೇಳುತ್ತಲೇ ಕರ್ಣನ ಜನ್ಮರಹಸ್ಯವನ್ನೆಲ್ಲಾ ಹೇಳಿ, ದುರ್ಯೋಧನನ ನಿಜಮುಖವನ್ನು ತೋರಿಸಿದ ಶ್ರೀಕೃಷ್ಣನ ಬುದ್ಧಿವಂತಿಕೆ ಕರ್ಣನ ಮನಸ್ಸನ್ನು ದುರ್ಬಲಗೊಳಿಸುವ ಪ್ರಯತ್ನವಲ್ಲದೆ ಇನ್ನೇನಾಗಿರಲು ಸಾಧ್ಯ?
ಮನಸ್ಸಿನಲ್ಲಿ ಉಳಿದುಕೊಂಡ ನಂಬುಗೆಯೊಂದು ನಮ್ಮನ್ನು ಸಾವಿನಂಚಿಗೆ ತರಬಹುದು. ಇದಕ್ಕೆ ಉದಾಹರಣೆಯೆಂಬಂತೆ ನನ್ನಜ್ಜ ಹೇಳಿದ ಘಟನೆಯೊಂದು ನನಗೆ ನೆನಪಾಗುತ್ತಿವೆ. ನನ್ನ ಅಜ್ಜ, ಅಂದರೆ ತಾಯಿಯ ತಂದೆ, ಯುವಕರಾಗಿದ್ದಾಗ ತಮ್ಮ ಇಬ್ಬರು ಗೆಳೆಯರ ಜೊತೆ ಜಾತ್ರೆಗೆ ಹೋಗಿದ್ದರಂತೆ. ಆಗಿನ ಕಾಲದಲ್ಲಿ ಜಾತ್ರೆಗೆ ಹೋದವರಿಗೆ ಗೋಲಿ ಸೋಡಾ ಕುಡಿಯುವ ಹುಮ್ಮಸ್ಸು. ನನ್ನ ಅಜ್ಜ ಮತ್ತು ಅವರ ಇಬ್ಬರು ಗೆಳೆಯರು ಹೀಗೆಯೇ ಗೋಲಿ ಸೋಡಾ ಕುಡಿದಿದ್ದಾರೆ. ಕುಡಿದಾದ ಮೇಲೆ ಗೋಲಿಯನ್ನು ನೋಡಿದ ಅಜ್ಜನ ಗೆಳೆಯರಿಗೆ ಕಂಡದ್ದು- ಒಂದು ಬದಿ ಕೆತ್ತುಹೋದಂತಿದ್ದ ಗೋಲಿ. ತಕ್ಷಣವೇ ಅಜ್ಜನ ಇನ್ನೊಬ್ಬ ಗೆಳೆಯರು ತಮಾಷೆಯಾಗಿ ಹೇಳಿದರಂತೆ- “ಗೋಲಿಯ ಚೂರು ನಿನ್ನ ಹೊಟ್ಟೆಗೆ ಹೋಗಿದೆ. ನೀನು ಕುಡಿದ ಸೋಡಾದಲ್ಲಿಯೇ ಅದು ಇದ್ದಿರಬೇಕು” ಅಂದಿನಿಂದಲೇ ಅಜ್ಜನ ಆ ಗೆಳೆಯನಿಗೆ ಹೊಟ್ಟೆನೋವು ಶುರು. ಹೊಟ್ಟೆಯೊಳಗೆ ಗಾಜು ಚುಚ್ಚಿದ ಅನುಭವ. ಏನನ್ನಾದರೂ ತಿಂದರೆ ಹೊಟ್ಟೆನೋವು ಮತ್ತಷ್ಟು ಜಾಸ್ತಿಯಾಗುತ್ತಿತ್ತು. ದಪ್ಪಗಿದ್ದವನು ಕೆಲವೇ ತಿಂಗಳುಗಳಲ್ಲಿ ಸಣಕಲಾಗಿದ್ದ. ಮನೆಯವರು ಅದೆಷ್ಟೋ ಜನ ವೈದ್ಯರ ಬಳಿಗೆ ಕರೆದುಕೊಂಡು ಹೋದರು. ಅವನ ಖಾಯಿಲೆ ಸರಿಮಾಡುವ ಔಷಧ ಯಾರಲ್ಲಿಯೂ ಇರಲಿಲ್ಲ. ಕೊನೆಗೊಬ್ಬ ವೈದ್ಯರು ತಾನು ಔಷಧ ಕೊಡುವುದಾಗಿ ಭರವಸೆ ಕೊಟ್ಟರು. ತನ್ನೆದುರು ಕುಳಿತ ಆ ಯುವಕನಿಗೆ ಏನನ್ನೋ ಕುಡಿಯಲು ಕೊಟ್ಟು, “ನಿನ್ನ ಹೊಟ್ಟೆಯಲ್ಲಿ ಗಾಜಿನ ಚೂರು ಇರುವುದೇ ಆದರೆ ಇದನ್ನು ಕುಡಿದು ಅರ್ಧ ಗಂಟೆಯಲ್ಲಿಯೇ ವಾಂತಿಯಾಗಿ ಹೊರಬರುತ್ತದೆ” ಎಂದರು. ಕುಡಿದ ಆ ಯುವಕ ವೈದ್ಯರು ಮೊದಲೇ ಕೊಟ್ಟಿದ ಪ್ಲಾಸ್ಟಿಕ್ ಕವರ್‌ನೊಳಗಡೆ ವಾಂತಿ ಮಾಡಿದ. ಆ ವಾಂತಿಯನ್ನು ಅವನೆದುರೇ ಪರಿಶೀಲಿಸಿದ ವೈದ್ಯರು ಗಾಜಿನ ಎರಡು ಸಣ್ಣಪುಟ್ಟ ಚೂರುಗಳನ್ನು ಹೊರದೆಗೆದು ತೋರಿಸಿದರು. ಅವನಿಗೆ ಅದೆಷ್ಟು ಸಮಾಧಾನವಾಯಿತೆಂದರೆ ಆ ಕ್ಷಣದಿಂದಲೇ ಅವನ ಹೊಟ್ಟೆನೋವು ಮಂಗಮಾಯವಾಗಿತ್ತು. ವಾಸ್ತವವಾಗಿ ವೈದ್ಯರು ಮಾಡಿದ್ದಿಷ್ಟೇ- ಮೊದಲೇ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಜಿನ ಚೂರುಗಳನ್ನು ಹಾಕಿಟ್ಟು, ಅವನಿಗೆ ಕೊಟ್ಟಿದ್ದಾರೆ. ವಾಂತಿ ಮಾಡಿದ ಮೇಲೆ ಅದೇ ಗಾಜಿನ ಚೂರುಗಳನ್ನು ಅವನಿಗೆ ತೋರಿಸಿದ್ದಾರೆ. ಮನಸ್ಸಿನಲ್ಲಿ ನೆಲೆನಿಂತ ನಂಬಿಕೆ ಅವನನ್ನು ಸಾವಿನಂಚಿನವರೆಗೂ ತಂದಿತ್ತು ಎನ್ನುವುದು ನಿಜ.
ಇದಕ್ಕೆ ವೈರುದ್ಯವೆಂಬಂತೆ ಇನ್ನೊಂದು ಘಟನೆ ನಡೆದದ್ದೂ ನನಗೆ ಗೊತ್ತಿದೆ. ನನ್ನ ಅಜ್ಜನ ತಮ್ಮನಿಗೆ ಕ್ಯಾನ್ಸರ್ ಬಂದಿತ್ತು. ಹೆಚ್ಚೆಂದರೆ ಇನ್ನು ಮೂರು ತಿಂಗಳುಗಳಷ್ಟೇ ನಿಮ್ಮ ಆಯುಷ್ಯ ಎಂದು ವೈದ್ಯರೂ ಕೈಚೆಲ್ಲಿಯಾಗಿತ್ತು. ಅವರಿಗೆ ಪುಟ್ಟಪರ್ತಿ ಸಾಯಿಬಾಬಾರ ಬಗ್ಗೆ ಅಪರಿಮಿತ ಭಕ್ತಿಯಿತ್ತು. ಪುಟ್ಟಪರ್ತಿಗೆ ಹೋಗಿ ಬಾಬಾರನ್ನು ಭೇಟಿ ಮಾಡಿದ್ದಾಗ ಅವರು ಕೊಟ್ಟಿದ್ದ ವಿಭೂತಿಯನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿ ಇರಿಸಿಕೊಂಡಿದ್ದರು. ಪ್ರತೀದಿನ ಬೆಳಗ್ಗೆ ಚಿಟಿಕೆ ವಿಭೂತಿ ತೆಗೆದುಕೊಂಡು ಅದನ್ನು ನೀರಿನ ಜೊತೆಗೆ ಬೆರೆಸಿ, ತೀರ್ಥದ ರೂಪದಲ್ಲಿ ಕುಡಿಯಲಾರಂಭಿಸಿದರು. ಆ ಸಮಯದಲ್ಲಿ ಅವರ ಮನಸ್ಸಿನಲ್ಲಿದ್ದ ನಂಬಿಕೆ- ಪುಟ್ಟಪರ್ತಿ ಸಾಯಿಬಾಬಾರವರು ನನ್ನ ಕೈ ಬಿಡುವುದಿಲ್ಲ. ನನ್ನನ್ನು ಉಳಿಸುತ್ತಾರೆ. ಇದಾಗಿ ಕೆಲವು ತಿಂಗಳುಗಳ ನಂತರ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್‌ನ ಸುಳಿವೇ ಇರಲಿಲ್ಲ. ವೈದ್ಯರಿಗೇ ಅಚ್ಚರಿಯಾಗಿತ್ತು. ಇದಾಗಿ ಹಲವು ವರ್ಷ ಅವರು ಆರೋಗ್ಯದಿಂದಲೇ ಇದ್ದರು. ಕೊನೆಗೂ ಅವರು ಸಾವನ್ನಪ್ಪಿದ್ದು ಕ್ಯಾನ್ಸರ್‌ನಿಂದ ಅಲ್ಲ, ಹೃದಯಾಘಾತದಿಂದ. ಮೌಢ್ಯದಿಂದ ಈ ಘಟನೆಯನ್ನು ನಾನಿಲ್ಲಿ ಉಲ್ಲೇಖಿಸಿಲ್ಲ. ನನ್ನ ಪ್ರಕಾರ ಸಾಯಿಬಾಬಾರ ಕುರಿತು ಅವರಿಗಿದ್ದ ದೃಢನಂಬಿಕೆ ಅವರ ಮನಸ್ಸಿನ ಶಕ್ತಿಯನ್ನು, ಸಕಾರಾತ್ಮಕತೆಯನ್ನು ಹೆಚ್ಚಿಸಿದೆ. ಮನಸ್ಸಿನ ಸಾಮರ್ಥ್ಯ ದೇಹಕ್ಕೂ ಶಕ್ತಿ ನೀಡಿದೆ. ಇದರಿಂದಾಗಿ ಅವರು ಕ್ಯಾನ್ಸರ್ ರೋಗವನ್ನು ಗೆಲ್ಲುವಂತಾಗಿದೆ. ಮನಸ್ಸಿಗೂ ದೇಹಕ್ಕೂ ನೇರ ಸಂಬಂಧವಿದೆ. ಮನಸ್ಸು ಗಟ್ಟಿಯಿದ್ದರೆ ದೇಹಕ್ಕೆ ಬಂದಿರುವ ಖಾಯಿಲೆಯಿಂದ ಗುಣಮುಖವಾಗಬಹುದು. ದೇಹಕ್ಕೆ ಕೊಟ್ಟ ಔಷಧ ಫಲಿಸಬೇಕಾದರೆ ಮನಸ್ಸಿನ ಸಹಾಯ ಬೇಕು ಎನ್ನುವುದು ಪಾರಂಪರಿಕ ವೈದ್ಯಪದ್ಧತಿ ಮತ್ತು ಆಧುನಿಕ ವೈದ್ಯಲೋಕಗಳೆರಡೂ ಒಪ್ಪಿಕೊಂಡ ಸತ್ಯವೇ ಆಗಿದೆ. ಮನಸ್ಸು ನಮ್ಮನ್ನು ಕೊಲ್ಲಲೂಬಹುದು, ಮನಸ್ಸು ಮಾಡಿದರೆ ಜಗತ್ತನ್ನೇ ಗೆಲ್ಲಲೂಬಹುದು. ಮನಸ್ಸಿನ ಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
ಒಳ್ಳೆಯ ಲೇಖನ. “ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ.” 100 ಕ್ಕೆ 100% ನಿಜ.
ಒಳ್ಳೆಯ ಲೇಖನ. “ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ” ….ಈ ಮಾತು ನೂರಕ್ಕೆ ನೂರು % ನಿಜ.