”ಇತ್ತೀಚೆಗೆ ಒಂದು ಹೊಸಾ ಚಾಳಿ ಅಂಟಿತ್ತು. ರಾತ್ರಿಯ ಆ ನರಕದ ಕ್ಷಣಗಳು. ಅವನ ಗಂಡಸುತನದ ವಿಜೃಂಭಣೆ ಮುಗಿದ ಮೇಲೆ ಅವನು ನೇರ ಗೊರಕೆಗೆ ಜಾರುತ್ತಿದ್ದ. ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ”
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಹನ್ನೆರಡನೆಯ ಕಂತು.

 

ಏರಿಳಿತವಿಲ್ಲದ ‘ಸರಿಗ…’ ದಂಥಾ ಬದುಕಿಗೆ ‘ದ..ನಿ..ಸ..’ ಸ್ವರಗಳು ಮರೆತೇ ಹೋಗಿದ್ದವು. ಹಗಲು ರಾತ್ರಿಗಳಿಗೆ ಹೆಚ್ಚೇನೂ ವ್ಯತ್ಯಾಸವಿರಲಿಲ್ಲ. ನಾನು ಕಾದು ಕಾದು ಕದ್ದು ನೋಡುತ್ತಿದ್ದ ಚಂದ್ರ ಕೂಡಾ ತೀರಾ ಶೀತಲವಾಗಿ ಹೋಗಿದ್ದ. ಅವನು ಇತ್ತೀಚೆಗೆ ಮೊದಲಿನಂತೆ ನನ್ನೊಟ್ಟಿಗೆ ಹೆಚ್ಚು ಮಾತಾಡುತ್ತಿರಲಿಲ್ಲ. ಸುತ್ತಿನ ತಾರೆಗಳ ಜೊತೆಗೇ ಮಾತಾಡುತ್ತಾ ನಗುತ್ತಾ ನನಗೆ ಅಸೂಯೆ ಹುಟ್ಟಿಸುತ್ತಿದ್ದ. ನಾನೂ ಸುಮ್ಮನೇ ರಾತ್ರಿಯಾದರೆ ಕುಡಿದು ವಾಲಾಡುತ್ತಾ ಬರುತ್ತಿದ್ದ ಬಕ್ಕ ತಲೆಯವನ ಸೊತ್ತಾಗಿ ಕಾಲ ದೂಡುತ್ತಿದ್ದೆ. ಹಚ್ಚಿದ ಒಲೆಯೊಂದಿಗೆ ದಿನವಿಡೀ ಸೆಣಸುತ್ತಾ ಹೊಟ್ಟೆಗೆ ಬೆಂದದ್ದೇನೋ ತುರುಕುತ್ತಾ ಹೊತ್ತು ಕಳೆದು ನರಕದಂಥಾ ರಾತ್ರಿಗಳಿಗೆ ಸಜ್ಜಾಗುತ್ತಿದ್ದೆ.

ದಿನಗಳು ಹಾಗೂ ಹೀಗೂ ಏನೋ ಸರ್ಕಸ್ಸಿನಲ್ಲಿ ಕಳೆದರೂ ರಾತ್ರಿಯ ಆ ಮನಸಿಗೆ ಒಗ್ಗದ ಕತ್ತಲ ಕ್ಷಣಗಳು ಉಸಿರುಗಟ್ಟಿಸುತ್ತಿದ್ದವು. ‘ಕಟ್ಟಿಕೊಂಡವನು ಇಟ್ಟಂತೆ ಬಾಳಬೇಕು’ ಎಂಬ ಅಮ್ಮನ ಪಾಠ ನೆನಪಾಗಿ ಆ ಕ್ಷಣ ನಾನವಳ ಮಗಳೇ ಆಗಬಾರದಿತ್ತು ಅನ್ನಿಸಿಬಿಡುತ್ತಿತ್ತು. ಕೆಟ್ಟ ಕೋಪವೊಂದು ಆವರಿಸಿಬಿಡುತ್ತಿತ್ತು. ಹಣೆಬರಹಕ್ಕೆ ಹೊಣೆ ಯಾರೆಂದು ಆಗಾಗ ಮಾವ ಹೇಳುತ್ತಿದ್ದ ಮಾತು ನೆನಪಾಗಿ ನನ್ನ ಕೋಪ ಆರುತ್ತಿತ್ತು. ಅಮ್ಮ ಅನ್ನೋದೊಂದು ನೆಪಮಾತ್ರದ್ದು ಎನ್ನುವ ವೈರಾಗ್ಯ ಹುಟ್ಟುತ್ತಿತ್ತು.

ಅದು ಒಂದೆಡೆಯಾದರೆ ಇನ್ನು ನನ್ನ ಸುತ್ತಲ ಪ್ರಪಂಚ ಇನ್ನೂ ವಿಚಿತ್ರ! ಬೆಳಗಾಗೆದ್ದರೆ ಅಕ್ಕಪಕ್ಕದವರ ‘ಆಹಾ..’ ಅನ್ನುವ ನೋಟ, ನಾನೇನೋ ಯಾರಿಗೂ ಸಿಕ್ಕದ್ದೊಂದನ್ನ ಕದ್ದವಳಂತೆ… ಏನೋ ಯಾರೂ ಮಾಡದ ತುಂಟ ತಪ್ಪೊಂದನ್ನು ಮಾಡಿ ಸಿಕ್ಕಿಹಾಕಿಕೊಂಡವಳಂತೆ… ಎಲ್ಲರಿಗೂ ಬೇಕಾದ್ದೊಂದನ್ನು ಒಬ್ಬಳೇ ಗಬಗಬನೆ ತಿಂದುಹಾಕಿದವಳಂತೆ… ಕುಹುಕು ಹುಸಿನಗೆಗಳ ಆಗರದಂತೆ… ಬಟ್ಟೆ ತೊಟ್ಟೂ ಬೆತ್ತಲೆನಿಸಿ ಎರಡೂ ಕೈಗಳಿಂದ ಮಾನ ಮುಚ್ಚಿಕೊಳ್ಳುವ ಇರಾದೆ ಹುಟ್ಟುವಂತಿತ್ತು. ಮೇಲಿನ ಮನೆಯ ಗಂಡಸಿಗೆ ಕಾರಣವಿರದೇ ನಮ್ಮ ಮನೆಗೆ ನುಗ್ಗುವುದೇ ಒಂದು ರೋಗ. ನನ್ನ ಮೇಲಿಂದ ಕೆಳಗೆ ನೋಡಿ ‘ಮೇಡಮ್, ಕೆಲಸ ಆಯಿತಾ..’ ಅನ್ನುವುದೇ ಪರಮ ಗುರಿ! ವಯಸ್ಸು ಹೋದಂತೆ ಚಪಲ ಜಾಸ್ತಿ. ಮೈಮೇಲೆ ಕೆಟ್ಟ ಹುಳುವೊಂದು ಹತ್ತಿ ಚುಚ್ಚಿದಂಥಾ ಅನುಭವ. ಹೊಸ ಜೋಡಿಗೆ ಅಂಥಾದ್ದೊಂದು ಉದ್ದೇಶ ಬಿಟ್ಟರೆ ಬೇರೆ ಬದುಕೇ ಇಲ್ಲವೆಂಬಂತೆ ಇವರೆಲ್ಲರ ಗುಸುಗುಸುವಿಗೆ ನಾವೇ ಆಹಾರ..! ಪಕ್ಕದ ಮನೆಯ ಹೆಂಗಸರಿಗೆ ನನ್ನ ಸರಿ ಮಾಡುವ ಚಟ. ಉಟ್ಟ ಸೀರೆ, ಇಟ್ಟ ರಂಗೋಲಿ, ಮಾಡಿದ ಅಡುಗೆಯ ರುಚಿ, ಹಬ್ಬದ ಪದ್ಧತಿಗಳು, ನೆಂಟರಿಷ್ಟರನ್ನು ಕರೆದು ಕಳಿಸಿ ಮಾಡುವಾಗಿನ ಸೂಕ್ಷ್ಮಗಳು ಎಲ್ಲವೂ ಅವರ ಪಾಠದ ಭಾಗಗಳು. ಸ್ವಲ್ಪವೂ ಎಗ್ಗಿಲ್ಲದೇ ಎಲ್ಲವನ್ನೂ ಬಿಚ್ಚಿಟ್ಟು ಮಾತಾಡುವ ಈ ಹೆಂಗಸರ ಪರಿಗೆ ನಾನು ಮೂಕಳಾಗಿಹೋಗಿದ್ದೆ. ಆಚೆ ಮನೆ ಕಾತ್ಯಾಯಿನಿ ಆಂಟಿಯಂತೂ ನನ್ನ ಮನೆ ವಿಷಯಗಳನ್ನೆಲ್ಲಾ ಬಹುವಾಗಿ ಮನಸಿಗೆ ಹಚ್ಚಿಕೊಂಡು ತಮ್ಮ ಗಂಡ ಮಕ್ಕಳನ್ನೂ ಕಡೆಗಾಣಿಸಿದ್ದರು. ‘ಪಾಪ, ಚಿಕ್ಕೋಳೂರೀ.. ಗೊತ್ತಾಗಲ್ಲಾ.. ನಾವೇ ಹೇಳಿಕೊಡ್ಬೇಕಲ್ವೇ..’ ಅನ್ನುತ್ತಲೇ ಸಂಸಾರಕ್ಕೆ ಸುರಿಯಬಹುದಾದ ಸಮಸ್ತ ವಿಷವಸ್ತುಗಳನ್ನೂ ಕಟ್ಟಿಕೊಡುವರು. ಕೈಸುಟ್ಟ ಮೇಲೆ ನಾನೂ ಅರಿತು ಸುಮ್ಮನಾದೆ. ನನ್ನ ತಂಬೂರಿಯ ಸ್ವರ ನಾನು ಮೀಟಬೇಕಲ್ಲದೇ ಯಾರೋ ಹಾಡಿದ ಸ್ವರಕ್ಕೆ ನನ್ನ ರಾಗ ಹೊಂದಿಸಲು ಹೋದರೆ ಅಪಸ್ವರಕ್ಕೆ ಇನ್ನಷ್ಟು ಯಾತನೆ ಹುಟ್ಟುತ್ತದೆಂಬ ಅನುಭವವಾಯಿತು.

ಅಕ್ಕಪಕ್ಕದ ಪುಟ್ಟ ಕಂದಮ್ಮಗಳನ್ನು ಗುಡ್ಡೆ ಹಾಕಿಕೊಂಡು ಅವುಗಳೊಂದಿಗೆ ಆಟಾಡುವುದು ನನ್ನ ನಿತ್ಯಕರ್ಮವಾಗಿತ್ತು. ಅವುಗಳ ನಿಷ್ಕಲ್ಮಷ ನಗು, ಹೂತು ಹೆಣವಾದ ನೂರಾರು ನೋವುಗಳನ್ನು ಗುಣವಾಗಿಸುವ ಮುಲಾಮಿನಂತಿತ್ತು. ಹಾಗೇ ಮೆಲ್ಲಗೆ ಈ ನನ್ನ ಮಕ್ಕಳ ಸಾಮ್ರಾಜ್ಯ ಒಂದು ಪುಟ್ಟ ಬೇಬಿ ಸಿಟ್ಟಿಂಗ್ ಆಗಲು ಸಮಯವೇ ಹಿಡಿಯಲಿಲ್ಲ. ನೋಡನೋಡುತ್ತಲೇ ಆ ಪುಟಾಣಿಗಳ ಹೆತ್ತವರು
‘ನೀನೇ ಒಂದು ಸೆಂಟರ್ ಮಾಡಮ್ಮಾ.. ನಾವೂ ನೆಮ್ಮದಿಯಾಗಿ ಮಕ್ಕಳನ್ನ ಕಳಿಸ್ತೀವಿ. ಮಕ್ಕಳಿಗೆ ಮೆಡಿಸನ್ ಕೊಟ್ಟು ಸಂಜೆವರೆಗೂ ಹೆಣವಾಗಿಸೋ ಈ ದುಡ್ಡಿನ ರಾಕ್ಷಸರಂಥಾ ಬೇಬಿಸಿಟ್ಟರ್ಸ್ ಕೈಗೆ ಮಕ್ಕಳನ್ನ ಕೊಡೋದು ತಪ್ಪುತ್ತೆ ಕಣೇ..’ ಅಂತ ಅಂದಿದ್ದರು.

ಅಂದು ಸುಮ್ಮನಿದ್ದವಳಿಗೆ ಒಟ್ಟಿಗೇ ಆರೆಂಟು ಮಕ್ಕಳ ಜವಾಬ್ದಾರಿ ಹೆಗಲೇರಿಸಿಬಿಟ್ಟರು. ಸುಮ್ಮನಾದರೂ ಅವರಿಗೆಲ್ಲಾ ತಿಂಡಿಕೊಟ್ಟು ನಿದ್ದೆ ಮಾಡಿಸಿ ಆಟಾಡಿಕೊಂಡು ಹೇಗೋ ನಗು ಕಂಡುಕೊಂಡವಳಿಗೆ ಇದೇ ಕೆಲಸಕ್ಕೆ ಈಗ ಸಂಬಳ ಸಿಗೋದು ಕೌತುಕವೆನಿಸಿದರೂ ಒಂಥರಾ ಒಳ್ಳೆಯದೇ ಆಗಿತ್ತು. ಮನೆ ಮುಂದೆ ಹೂ ಕೊಳ್ಳಲೂ ಬಕ್ಕತಲೆಯವನ ಎದುರು ಕೈಚಾಚುವುದೋ, ಕುಂಕುಮದಲ್ಲಿ ಬಂದ ಕಾಸಿನ ಮೇಲೆ ಅವಲಂಬಿಸೋದೋ ತಪ್ಪಿತ್ತು. ಯಾರಿಗೂ ವಿಷಯವಸ್ತುವಾಗದ ನನ್ನ ಅಸ್ಥಿತ್ವ ನಿಧಾನ ರೂಪುಗೊಳ್ಳುವುದು ನನಗಷ್ಟೇ ಅರಿವಾಗಿತ್ತು. ಪುಟಾಣಿಗಳೋ, ಸಂಜೆಗಾದರೂ ನನ್ನ ಬಿಟ್ಟುಹೋಗುವುದೇ ಕಷ್ಟ!

ಮನೆಯ ಒಂದು ಗೋಡೆಯನ್ನು ಮಕ್ಕಳಿಗೆಂದೇ ಗೊಂಬೆಗಳ ಚಿತ್ರಗಳಿಂದ ತುಂಬಿಸುವ ಕೆಲಸ ನಡೆದಿತ್ತು. ಆದರೆ ಒಳಗೆ ಬದುಕಲ್ಲಿ ಗಂಡನೆಂಬ ವ್ಯಕ್ತಿಯ ನಡುವೆ ಎದ್ದಿದ್ದ ಗೋಡೆ ಮಾತ್ರ ದಿನದಿನಕ್ಕೂ ಬೆಳೆಯುತ್ತಲೇ ಇತ್ತು. ಇತ್ತೀಚೆಗೆ ನಮ್ಮ ದನಿಗಳೂ ಗೋಡೆಯ ಆಚೆಬದಿಗೆ ತಲುಪುತ್ತಿರಲಿಲ್ಲ.
* * * *
ಇಷ್ಟಾದರೂ ಬೆಳಗು ಊಟಕ್ಕೆ ರಾತ್ರಿ ದೇಹಕ್ಕೆ ಸೀಮಿತವಾದ ನನ್ನ ಅಪೂರ್ವ ದಾಂಪತ್ಯ ಸುಖದ ಬಗ್ಗೆ ಬೇರಾರಿಗೂ ತಿಳಿಯದಂತೆ ಎಚ್ಚರವಹಿಸಿದ್ದೆ. ಆದಷ್ಟೂ ನಗುವಿನ ಮುಖವಾಡದ ಕೆಳಗೇ ದಿನಗಳೆಯುತ್ತಿತ್ತು. ಆದರೂ ಆಗೊಮ್ಮೆ ಈಗೊಮ್ಮೆ ಕಾಲೇಜಿಗೆ ಹೋಗುವಾಗ ದಿನವೂ ನನ್ನನ್ನು ಪ್ರೀತಿಸುವೆನೆಂತಲೂ, ಮದುವೆ ಆಗೆಂತಲೂ ಕಾಲಿಗೆ ಬಿದ್ದು ಕಾಡುತ್ತಿದ್ದ ಆ ಎತ್ತರದ ನಿಲುವಿನ ತಿದ್ದಿದ ರೂಪಿನ ಬಟ್ಟಲುಗಂಗಳ ಹುಡುಗ ಪ್ರಶಾಂತನ ನೆನಪಾಗುತ್ತಿತ್ತು. ಅವನು ದಿನವೂ ಬಣ್ಣಬಣ್ಣದ ಕಾಗದಗಳಲ್ಲಿ ಬರೆದುಕೊಡುತ್ತಿದ್ದ ಪ್ರೇಮಪತ್ರಗಳನ್ನು ಕಾಲೇಜು ಕ್ಯಾಂಟೀನಿನಲ್ಲಿ ಕೂತು ಗೆಳತಿಯರಿಗೆ ಓದಿ ಹೇಳುತ್ತಿದ್ದೆ. ಒಮ್ಮೆ ಸಂಜೆ ಮನೆಗೆ ಹೋಗುವ ದಾರಿಯಲ್ಲಿ ನಿಂತಿದ್ದ ಅವನನ್ನು ಗುರುತಿಸಿ ಕ್ಲಾಸ್ ಮೇಟ್ ಅನಿತಾ ಅಂದಿನ ಕಾಗದದಲ್ಲಿದ್ದ ಸಾಲೊಂದನ್ನು ಜೋರಾಗಿ ಹೇಳಿದ್ದು ಕೇಳಿ ನಾಚಿ ಓಡಿಹೋಗಿದ್ದ ಅವನು ಒಂದು ವಾರ ಕಣ್ಣಿಗೇ ಬಿದ್ದಿರಲಿಲ್ಲ. ಆಮೇಲೊಂದು ದಿನ ಬಂದು “ನನಗೆ ಹೀಗೆ ಅವಮಾನ ಮಾಡುವ ಬದಲು ಇಷ್ಟವಿಲ್ಲ ಅಂತ ಮುಖದ ಮೇಲೆ ಹೇಳಬಾರದಿತ್ತೇನ್ರೀ..” ಅಂತ ಮೆಲುದನಿಯಲ್ಲಿ ರೇಗಿಹೋಗಿದ್ದ. ಮತ್ತೆ ತಿಂಗಳುಗಳ ಕಾಲ ಕಾಣಲೇ ಇಲ್ಲ. ಆ ಮಧ್ಯೆ ಪ್ರಹ್ಲಾದನ ಪ್ರಹಸನ ನಡೆದಿದ್ದರಿಂದ ನಾನೂ ಇದೆಲ್ಲವನ್ನೂ ಮರೆತೇ ಹೋಗಿದ್ದೆ. ಆದರೆ ಅದೇಕೆ ಈ ಒಂಟಿ ಸಂಜೆಗಳು ಅಥವಾ ಹಾಸಿಗೆ ಮೇಲೆ ಹಾದರ ಮಾಡುವ ಕ್ಷಣಗಳು ಇಂಥಾ ನೆನಪುಗಳು ಕಾಡುತ್ತಿದ್ದವೋ ಗೊತ್ತಿಲ್ಲ. ಥಟ್ಟನೆ ಒಮ್ಮೊಮ್ಮೆ ಪ್ರಶಾಂತನೇ ಬೇಕೆಂದು ಮನಸು ಹಠ ಹಿಡಿಯುತ್ತಿತ್ತು. ಆಮೇಲೆ ಆ ಹಠವು ಕಣ್ಣೀರಿನ ರೂಪದಲ್ಲಿ ಸೋರಿಹೋಗುತ್ತಿತ್ತು.

ಅಸಹಾಯಕತೆ ಅತೀ ಕಾಡಿದಾಗ ಅಂಗೈ ಪಕ್ಕದಲ್ಲೋ ಕಾಲು ಮೀನುಖಂಡದ ಮೇಲೋ ಸೊಂಟದ ಬಲಭಾಗದಲ್ಲೋ ಸುಟ್ಟ ಗಾಯಗಳು ಮೂಡುತ್ತಿದ್ದವು. ಮತ್ತು ಅವುಗಳನ್ನು ಯಾರೂ ಗುರುತಿಸದೇ ಹೋಗುವುದರಿಂದಾಗಿ ಹಾಗೇ ಆ ಹಾದರದ ಕತ್ತಲ ಗಮಟು ರಾತ್ರಿಗಳಲ್ಲಿ ಅವು ಕಳೆದೇ ಹೋಗುತ್ತಿದ್ದವು. ನನ್ನನ್ನು ನಾನೇ ಹಿಂಸಿಸಬಾರದೆಂದು ಬೆಳಗೆಲ್ಲಾ ಪಾಠ ಹೇಳುವ ಮನಸು ರಾತ್ರಿಗಳಲ್ಲಿ ಇಷ್ಟು ರೊಚ್ಚಿಗೇಳುವುದೇಕೆಂದು ನನಗೇ ತಿಳಿದಿರಲಿಲ್ಲ. ಅಬಚಿ ಒಮ್ಮೆ ಹೇಳಿದ್ದ ನೆನಪಿತ್ತು, ‘ಮನಸಿಗೆ ತುಂಬಾ ನೋವಾಗಿ ಯಾರೊಟ್ಟಿಗೂ ಹೇಳೋಕಾಗದೇ ವೇದನೆ ಪಡುವಾಗ ಸಾಯುವ ಯೋಚನೆಗಳೋ, ಹಿಂಸಿಸಿಕೊಳ್ಳುವ ಯೋಚನೆಯೋ ಬಂದರೆ ಸಮಾಧಾನವಾಗುವಷ್ಟು ಹೊತ್ತು ಕೂತು ಕೈಗೆ ಸಿಕ್ಕ ಪೇಪರುಗಳನ್ನೆಲ್ಲಾ ಹರಿದು ಸಾಧ್ಯವಾದಷ್ಟೂ ಸಣ್ಣಸಣ್ಣ ಚೂರು ಮಾಡಿಬಿಡಬೇಕು. ಅದರೊಟ್ಟಿಗೆ ಅಸಹಾಯಕ ಕೋಪ ತಣ್ಣಗಾಗುತ್ತೆ. ಮನಸಿಗೆ ಕೆಟ್ಟ ಯೋಚನೆಗಳು ಬರೋದಿಲ್ಲ..’ ಮನೆಯಲ್ಲಿದ್ದ ಡೈರಿಗಳೂ ಕ್ಯಾಲೆಂಡರುಗಳೂ ಹಳೇ ಮ್ಯಾಗಜೀನುಗಳೂ ಎಲ್ಲವೂ ಚೂರುಚೂರಾಗಿ ಕಸ ಸೇರಿ ಆಗಿತ್ತು.
* * *
ಇತ್ತೀಚೆಗೆ ಒಂದು ಹೊಸಾ ಚಾಳಿ ಅಂಟಿತ್ತು. ರಾತ್ರಿಯ ಆ ನರಕದ ಕ್ಷಣಗಳು ಅವನ ಗಂಡಸುತನದ ವಿಜೃಂಭಣೆ ಮುಗಿದ ಮೇಲೆ ಅವನು ನೇರ ಗೊರಕೆಗೆ ಜಾರುತ್ತಿದ್ದ. ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.

ಆಗೆಲ್ಲಾ ಮನೆ ಮುಂದಿನ ದೊಡ್ಡ ಅರಳಿ ಮರವೊಂದು ನನ್ನ ಮಾತಾಡಿಸುವಂತೆ ಅನಿಸುತ್ತಿತ್ತು. ಮತ್ತು ಸರಿರಾತ್ರಿಗಳ ಎಷ್ಟೋ ಗುಟ್ಟನ್ನು ನನ್ನೊಟ್ಟಿಗೆ ಹಂಚಿಕೊಳ್ಳುತ್ತಿತ್ತು. ಬೆಳಕಲ್ಲಿ ಬೆಳ್ಳಗೆ ನಿಚ್ಚಳ ಹೊಳೆಯುತ್ತಿದ್ದ ಹಲವು ಮುಖಗಳು ರಾತ್ರಿಯಲ್ಲಿ ಮಸಿ ಬಳಿದ ಕೆಲಸ ಮಾಡಿಕೊಂಡು ಮುಖಮುಚ್ಚಿ ತಿರುಗುವ ಹಲವು ಕಥೆಗಳನ್ನೂ ನನಗೆ ಗುಟ್ಟಾಗಿ ಹೇಳಿತ್ತು ಹಾಗೂ ತೋರಿಸಿತ್ತು. ಅದು ‘ನೋಡಿಲ್ಲಿ.. ಬುದ್ಧಿಹೀನಳಾಗಿ ಕೊರಗುವ ಹುಚ್ಚು ಹುಡುಗಿಯೇ.. ನಿನ್ನ ನೋವಿಗೆ ಮೀರಿದ ಬದುಕೊಂದನ್ನು ಅನುಭವಿಸಿ ಕಡೆಗೆ ಸಾಕಾಗಿ ತಮಗೆ ಬೇಕಾದಂತೆ ಬದುಕಿ ನೆಮ್ಮದಿಯಾಗಿರುವ ಕಲೆಯೊಂದನ್ನು ಈ ಜಗತ್ತು ಅರಗಿಸಿಕೊಂಡಿದೆ. ಇಲ್ಲಿ ಯಾರೂ ಮನಸಿನ ಗಾಯಗಳಿಗೆ ಬರೆಯೆಳೆದಿಲ್ಲ. ಬದಲಾಗಿ ಔಷಧಿ ಹುಡುಕಿದ್ದಾರೆ. ನಗುವಿನ ನಶೆಯಲ್ಲಿ ಮುಳುಗಲು ಎಲ್ಲೆಲ್ಲೋ ಪರದಾಡುತ್ತಿದ್ದಾರೆ. ನೋಡು..ನಿನ್ನ ನೆಮ್ಮದಿ ಹುಡುಕುವ ಹೊಣೆ ನಿನ್ನದು.’ ಎಂದು ಬುದ್ಧಿ ಹೇಳುತ್ತಿತ್ತು. ಒಮ್ಮೊಮ್ಮೆ ಮರದಿಂದ ಸರಸರನೆ ಹಲವು ಎಲೆಗಳು ಉದುರಿ ಮರ ಹೇಳಿದ ಸತ್ಯಕ್ಕೆ ಹೂಂಗುಟ್ಟಿದವೋ ಎಂದು ಭ್ರಮಿಸುವಂತೆ ಮಾಡುತ್ತಿದ್ದವು.


ಬೆಳಗೆದ್ದು ಆ ಎಲೆಗಳನ್ನು ಗುಡಿಸಿ ಹಾಕುವಾಗ ಮನೆಯೊಳಗಿದ್ದ ಆ ವ್ಯಕ್ತಿಯ ಕಡೆಗೊಂದು ಕಳ್ಳ ಕುಹುಕದ ನಗೆ ಬೀರುವಂತಾಗುತ್ತಿತ್ತು. ಕಾಲಕ್ರಮೇಣ ಮರವು ನಾನು ಕದ್ದು ಮುಚ್ಚಿ ಸ್ನೇಹ ಬೆಳೆಸಿರುವ ನನ್ನ ಇನಿಯನೋ ಎಂಬಂತಾಗಿ ಪ್ರತಿರಾತ್ರಿ ಕಿಟಕಿಯಿಂದಾಗಿ ಅವನನ್ನು ಅವಚುವ ಹಾಗೂ ಅವನ ಹರವಾದ ಎದೆಮೇಲೆ ಒರಗಿ ಮಲಗಿ ಅವನ ಮುದ್ದು ಮಾತುಗಳಿಗೆ ಕಿವಿಗೊಟ್ಟು ನೆಮ್ಮದಿಯ ನಿಟ್ಟುಸಿರೊಂದನ್ನು ಹೊರಗೆಡಹುವ ಕಳ್ಳ ಹುಡುಗಿಯಂತೆ ಭಾಸವಾಗುತ್ತಿತ್ತು. ನಮ್ಮ ಕಳ್ಳ ಪ್ರೇಮವು ಲೋಕಕ್ಕೆ ನಿಲುಕದ್ದು ಎಂಬಂತೆ ಮರವನ್ನು ಬೆಳಗಿನ ಬೆಳಕಲ್ಲಿ ಮುಟ್ಟಿ ಮುಟ್ಟಿ ನೋಡಿ ನಕ್ಕು ಆನಂದಿಸುತ್ತಿದ್ದೆ. ಅಮ್ಮ ಮಾವ ಅತ್ತೆ ಅಬಚಿ ಶ್ರೀಧರ ಎಲ್ಲರಿಂದ ದೂರಾದ ಹಾಗೂ ಬೇರೆಯದೇ ಆದ ಲೋಕವೊಂದು ನಿಧಾನದಲ್ಲಿ ತನ್ನ ಅಸ್ಥಿತ್ವವನ್ನು ಹರಡುತ್ತಾ ನನ್ನ ಸುತ್ತಲೂ ಹುತ್ತದಂತೆ ಬೆಳೆಯುತ್ತಿತ್ತು. ಮತ್ತು ನಾನು ಅದರ ಒಳಗೆಲ್ಲೋ ಲೋಕಕ್ಕೆ ಕೇಳದ ಧ್ವನಿಯಾಗಿ ಬರೀ ಕಾಣುವ ಕಣ್ಣಾಗಿ ಉಳಿದಂತೆನ್ನಿಸಿ ನಾನೂ ನನ್ನ ಮರವೂ ಅಡಗಿ ಕುಳಿತು ಎಲ್ಲರನ್ನೂ ನೋಡಿ ನಕ್ಕಂತೆ ದಿನಗಳೆಯುತ್ತಿತ್ತು.