ಅದು, ನಾವು ಸಾಮಾನ್ಯವಾಗಿ ಕಾಣುವ ಆರಡಿ-ಮೂರಡಿಯ ಗೋರಿಯಲ್ಲ; ಅದು ಹಲವಾರು ಕೋಣೆಗಳಿರುವ ಕಟ್ಟಡ. ಒಂದು ಕೋಣೆಯಲ್ಲಿ, ಶವಪೆಟ್ಟಿಗೆ ಇದೆ. ಆ ಶವಪೆಟ್ಟಿಗೆ ಮರದಿಂದ ಮಾಡಿದ್ದಾದರೂ, ಅದಕ್ಕೆ ಚಿನ್ನದ ಹಾಳೆಗಳನ್ನು ಲೇಪಿಸಲಾಗಿದೆ. ಆ ಶವಪೆಟ್ಟಿಗೆಯನ್ನು ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ ಇದೆ. ಅದೂ ಸಹ, ಮೊದಲನೆಯ ಶವಪೆಟ್ಟಿಗೆಯಂತಹುದೇ. ಅದನ್ನೂ ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ! ಆದರೆ, ಈ ಮೂರನೆಯ ಶವಪೆಟ್ಟಿಗೆ ಸಂಪೂರ್ಣ ಚಿನ್ನದಿಂದ ಮಾಡಿದಂತಹುದು. ಅದರೊಳಗೆ, ದೊರೆ ಟುಟಂಕಮೆನ್ ನ ಶವವನ್ನು ಹಾಳಾಗದಂತೆ, “ಮಮ್ಮಿ”ಯಾಗಿ ಸಂರಕ್ಷಿಸಲಾಗಿದೆ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ
1977ರಲ್ಲಿ, ಅಮೆರಿಕದ NASA ಸಂಸ್ಥೆ ಗಗನಕ್ಕೆ ಕಳುಹಿಸಿದ ವಾಯೇಜರ್-೧ ಅಂತರಿಕ್ಷ ವಾಹನ ಇಂದು ನಮ್ಮಿಂದ ಸುಮಾರು ೨೦೦೦ ಕೋಟಿ ಕಿ.ಮಿ.ಗಳಿಗಿಂತ ಹೆಚ್ಚು ದೂರದಲ್ಲಿದೆ. ಅದು ಸೂರ್ಯ ಮಂಡಲವನ್ನು ಬಿಟ್ಟು ಎಷ್ಟೋ ವರ್ಷಗಳೇ ಆಗಿದೆ.
ವಾಯೇಜರ್-೧, ಸುಮಾರು ಮೂವತ್ತು ವರ್ಷಗಳ ಹಿಂದೆ, ಫೆಬ್ರವರಿ ೧೪, ೧೯೯೦ರಂದು, ವಿಶಾಲ ಆಕಾಶದ ದೂರದಿಂದ ಒಂದು ಫೋಟೋ ಕಳುಹಿಸಿತು. ಆ ಸಮಯದಲ್ಲಿ, ಲೇಖಕ ಮತ್ತು ವಿಜ್ಞಾನಿ ಕಾರ್ಲ್ ಸೇಗನ್, ಆ ಫೋಟೋವನ್ನು ಈ ರೀತಿ ಪರಿಚಯಿಸಿದ: “Consider again that dot. That’s here. That’s home. That’s us….The Earth is a very small stage in a vast cosmic arena…. To my mind, there is perhaps no better demonstration of the folly of human conceits than this distant image of our tiny world. To me, it underscores our responsibility to deal more kindly and compassionately with one another and to preserve and cherish that pale blue dot, the only home we’ve ever known.” ಇಂದು “ದ ಪೇಲ್ ಬ್ಲೂ ಡಾಟ್” ಎಂದು ಪ್ರಸಿದ್ಧವಾಗಿರುವ ಫೋಟೋ ಅದು.
ವಾಯೇಜರ್-೧ ನೌಕೆಯಲ್ಲಿ ಒಂದು ಗ್ರಾಮಾಫೋನ್ ರೆಕಾರ್ಡ್ ಇದೆ. ಆ ರೆಕಾರ್ಡ್ ಒಂದು ಕಾಲಕೋಶ. ಭವಿಷ್ಯದಲ್ಲಿ, ಒಂದೊಮ್ಮೆ, ಪರಗ್ರಹವಾಸಿಗಳೇನಾದರೂ ವಾಯೇಜರ್ ಗೆ ಎಡತಾಕಿದರೆ, ಅವರಿಗೆ ಮಾನವರನ್ನು ಪರಿಚಯಿಸುವ ಪ್ರಯತ್ನ ಆ ಕಾಲಕೋಶದಲ್ಲಿದೆ. ಆ ಗ್ರಾಮಾಫೋನ್ ರೆಕಾರ್ಡ್ ಜೊತೆಗೆ, ಅದನ್ನು ಹಾಕಲು ಗ್ರಾಮಾಫೋನ್ ಇಲ್ಲ; ಆದರೆ, ಗ್ರಾಮಾಫೋನ್ ಗೆ ಬೇಕಿರುವ ಮುಳ್ಳು ಇದೆ; ಆ ಮುಳ್ಳನ್ನು ಬಳಸಿ ಸರಳವಾದ ಗ್ರಾಮಾಫೋನ್ ನಿರ್ಮಿಸಲು ಬೇಕಿರುವ “ಇನ್‌ಸ್ಟ್ರಕ್ಷನ್ಸ್” ಸಹ ಇದೆಯಂತೆ. ಆ ಪರಗ್ರಹವಾಸಿಗಳು, ಆ “ಇನ್‌ಸ್ಟ್ರಕ್ಷನ್”ಗಳನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಭೃತಿಗಳಾಗಿದ್ದರೆ, ಅವರು ಅಂತಹ ಗ್ರಾಮಾಫೋನ್ ನಿರ್ಮಿಸಿದರೆ, 16 ⅔ RPM ವೇಗದಲ್ಲಿ ಆ ರೆಕಾರ್ಡ್ ಅನ್ನು “ಪ್ಲೇ” ಮಾಡಿದರೆ, ಅವರಿಗೆ ಮಾನವರ ೫೫ ಭಾಷೆಗಳ ಕೆಲವೊಂದು ಪದಗಳ ಪರಿಚಯವಾಗಲಿದೆ. ಅದರಲ್ಲಿ, “ನಮಸ್ತೆ” ಎನ್ನುವುದೂ ಒಂದು.
******
ನೆನಪುಗಳ ಮೂಲಕ ಕಾಲಯಾನ ಮಾಡಿ ಭೂತವನ್ನು ಮತ್ತೊಮ್ಮೆ ಕಾಣುವುದು ಎಲ್ಲರಿಗೂ ತಿಳಿದದ್ದೇ. ಹೊಸ ನೆನಪುಗಳನ್ನು ನಿರ್ಮಿಸಿಕೊಳ್ಳಲಾರದ ಹೆನ್ರಿ ಮೊಲಾಯ್ಸನ್ ಅಂತಹವರಿಗೆ ಕಾಲದ ಪ್ರವಾಹವೇ ನಿಲ್ಲುವುದರಿಂದ, ಅವರದು ಇನ್ನೊಂದು ತರಹದ ಕಾಲ ಪ್ರಯಾಣ. ಆದರೆ, ಮಾನವರಿಗೆ, ಕಾರ್ಲ್ ಸೇಗನ್ ಹೇಳುವ “folly of human conceits” (ಮಹಾನತೆಯ ಅಹಂಕಾರದ ಹುಂಬತನ) ಸಹ ಇದೆ. ಹೀಗಾಗಿ, ನೆನಪುಗಳ ಮೂಲಕ ಕಾಲಪ್ರಯಾಣ ಮಾಡಿದರೆ ಸಾಲದು; ಕಾಲಕೋಶಗಳ ಮೂಲಕ ತಮ್ಮ ನೆನಪುಗಳಿಗೇ ಕಾಲಪ್ರಯಾಣ ಮಾಡಿಸುವ ಪ್ರಯತ್ನಗಳೂ ನಡೆಯುತ್ತಲೇ ಇರುತ್ತವೆ. ಅವು ಇತ್ತೀಚಿನ ಯುಗದಲ್ಲಿ ಮತ್ತಷ್ಟು ಹೆಚ್ಚಿವೆ.
ಸುಮಾರು ನೂರು ವರ್ಷಗಳ ಹಿಂದೆ ಈಜಿಪ್ಟಿನ ನೈಲ್ ನದಿಯ ಆಸುಪಾಸಿನ ಮರಳುಗಾಡಿನಲ್ಲಿ ತಡಕಾಡುತ್ತಿದ್ದ ಬ್ರಿಟಿಷರಿಗೆ ಹಲವಾರು ಸಮಾಧಿಗಳು ಕಂಡವು. ಅವುಗಳಲ್ಲಿ ಮುಖ್ಯವಾದದ್ದು ಸಮಾಧಿ ನಂಬರ್ ೬೨. ಅದು, ಪ್ರಾಚೀನ ಈಜಿಪ್ಟಿನ ದೊರೆ ಟುಟಂಕಮೆನ್ ನ ಸಮಾಧಿ. ಅವನನ್ನು ಹೂತ ಸುಮಾರು ಮೂರವರೆ ಸಾವಿರ ವರ್ಷಗಳ ನಂತರ, ಅವನ ಸಮಾಧಿಯನ್ನು ಕೆದಕಿ ನೋಡಿದ ಬ್ರಿಟಿಷರಿಗೆ ಕಂಡದ್ದೇನು?
ಅದು, ನಾವು ಸಾಮಾನ್ಯವಾಗಿ ಕಾಣುವ ಆರಡಿ-ಮೂರಡಿಯ ಗೋರಿಯಲ್ಲ; ಅದು ಹಲವಾರು ಕೋಣೆಗಳಿರುವ ಕಟ್ಟಡ. ಒಂದು ಕೋಣೆಯಲ್ಲಿ, ಶವಪೆಟ್ಟಿಗೆ ಇದೆ. ಆ ಶವಪೆಟ್ಟಿಗೆ ಮರದಿಂದ ಮಾಡಿದ್ದಾದರೂ, ಅದಕ್ಕೆ ಚಿನ್ನದ ಹಾಳೆಗಳನ್ನು ಲೇಪಿಸಲಾಗಿದೆ. ಆ ಶವಪೆಟ್ಟಿಗೆಯನ್ನು ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ ಇದೆ. ಅದೂ ಸಹ, ಮೊದಲನೆಯ ಶವಪೆಟ್ಟಿಗೆಯಂತಹುದೇ. ಅದನ್ನೂ ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ! ಆದರೆ, ಈ ಮೂರನೆಯ ಶವಪೆಟ್ಟಿಗೆ ಸಂಪೂರ್ಣ ಚಿನ್ನದಿಂದ ಮಾಡಿದಂತಹುದು. ಅದರೊಳಗೆ, ದೊರೆ ಟುಟಂಕಮೆನ್ ನ ಶವವನ್ನು ಹಾಳಾಗದಂತೆ, “ಮಮ್ಮಿ”ಯಾಗಿ ಸಂರಕ್ಷಿಸಲಾಗಿದೆ. ಆ ಸಮಾಧಿಯ ಉಳಿದ ಕೋಣೆಗಳಲ್ಲಿ, ರಾಜನಿಗೆ ಸೂಕ್ತವಾದ ಉಡುಗೆ-ತೊಡುಗೆಗಳು, ಆಭರಣಗಳು, ಶಸ್ತ್ರಗಳು ಮತ್ತಿತರ ಪರಿಕರಗಳನ್ನು ಅತ್ಯಂತ ಜಾಗರೂಕತೆಯಿಂದ ಕಾದಿರಿಸಲಾಗಿದೆ; ಮುಂದೊಮ್ಮೆ ಟುಟಂಕಮೆನ್ ಎದ್ದಾಗ ಅವನಿಗೆ ಸುಲಭವಾಗಿ ದೊರಕುವಂತೆ.
ಇಂತಹ ಸಮಾಧಿಗಳು, ಕಾಲಕೋಶಗಳಲ್ಲ. ಅವು ಸ್ಮಾರಕಗಳೂ ಅಲ್ಲ. ಅವು ಆ ಕಾಲದ ಜನರ ಕೆಲವೊಂದು ವಿಷಯಗಳನ್ನು, ಅದರಲ್ಲೂ ಅವರ ನಂಬಿಕೆಗಳನ್ನು ನಮಗೆ ತಿಳಿಸುತ್ತವಾದರೂ, ಅವುಗಳ ಉದ್ದೇಶ ಅದಲ್ಲ.
ದೊರೆ ಟುಟಂಕಮೆನ್ ನ ಬಗೆಗೆ, ಇಂದು ಯಾರಿಗೂ ಹೆಚ್ಚು ಗೊತ್ತಿಲ್ಲ. ಅವನ ಪ್ರಸಿದ್ಧಿ ಬಹು ಮಟ್ಟಿಗೆ ಅವನ ಸಮಾಧಿಯಿಂದಷ್ಟೇ. ಪುರಾತನ ಈಜಿಪ್ಟಿನ ಇತಿಹಾಸದಲ್ಲಿ ಅವನಿಗಿಂತ ಹೆಚ್ಚಿನ ಛಾಪನ್ನು ಮೂಡಿಸಿರುವ ಇನ್ನೆಷ್ಟೋ ದೊರೆಗಳಿದ್ದಾರೆ. ಅವರ ದೇಹ ಮತ್ತು ಸಮಾಧಿಗಳು ಇಂದು ಮರೆಯಾಗಿದ್ದರೂ.
******
ಈಜಿಪ್ಟಿನಲ್ಲಿ ಇಂತಹ ಸಮಾಧಿಗಳು ಕಾಣಲಾರಂಭಿಸಿದನಂತರ, ಅವುಗಳನ್ನು ನಿರ್ಮಿಸಿದವರ ಉದ್ದೇಶ ಏನೇ ಆದರೂ – ಕಾಲಕೋಶಗಳನ್ನು ನಿರ್ಮಿಸಿ ಅವುಗಳನ್ನು ಹೂಳುವ ಪರಿಪಾಠ ಬೆಳೆದದ್ದು ಕಾಕತಾಳೀಯವೇನಲ್ಲ.
ಸಾವಿರಾರು ವರ್ಷಗಳ ಹಿಂದಿನ ಸಮಾಧಿಗಳನ್ನು ಹೊರತೆಗೆದು, ಅದರಲ್ಲಿರುವುದು ಏನೆಂದು ತಿಳಿದು, ಆ ಕಾಲದ ಕುರಿತು ವಿಶ್ಲೇಷಿಸುವ ಪುರಾತತ್ವ ಶಾಸ್ತ್ರಜ್ಞರ ಪ್ರಯತ್ನಗಳು ಹೆಚ್ಚಿದಂತೆ, ನಮ್ಮ ದೈನಂದಿನ ಬಳಕೆಯ ವಸ್ತುಗಳನ್ನು ಕಾಲಕೋಶಗಳಲ್ಲಿರಿಸಿ ಸಮಾಧಿ ಮಾಡಿ, ಸಾವಿರಾರು ವರ್ಷಗಳ ನಂತರದ, ಭವಿಷ್ಯದ ಪುರಾತತ್ವಶಾಸ್ತ್ರಜ್ಞರಿಗೆ ಕೆಲಸ ನೀಡುವ ಪ್ರಯತ್ನಗಳೂ ಹೆಚ್ಚಾದವು.
ಟುಟಂಕಮೆನ್ ನ ಸಮಾಧಿ ಪತ್ತೆಯಾದದ್ದು, ೧೯೨೦ರ ದಶಕದಲ್ಲಿ. ೧೯೩೦ರ ದಶಕದಲ್ಲಿ, ಅಮೆರಿಕದಲ್ಲಿ ಥಾರ್ನ್‌ವೆಲ್ ಜೇಕಬ್ಸ್ ಎನ್ನುವ ಶಿಕ್ಷಣವೇತ್ತ ಮತ್ತು ಕ್ರೈಸ್ತ ಪ್ರಚಾರಕ ದೊಡ್ಡದೊಂದು ಕಾಲಕೋಶವೊಂದನ್ನು ನಿರ್ಮಿಸಲಾರಂಭಿಸಿದ. ಇಂದು ಆ ಕಾಲಕೋಶ, ಅಮೆರಿಕದ ಅಟ್ಲಾಂಟ ನಗರದ ಓಗಲ್‌ಥಾರ್ಪ್ ವಿಶ್ವವಿದ್ಯಾಲಯದಲ್ಲಿದೆ. ಜೇಕಬ್ಸ್ ನ ಅಣತಿಯ ಪ್ರಕಾರ, ಆ ಕಾಲಕೋಶವನ್ನು ಕ್ರಿ.ಶ.೮೧೧೩ರ ವರೆಗೂ ತೆರೆಯುವಂತಿಲ್ಲ.
ಕ್ರಿ.ಶ.೮೧೧೩ ಏಕೆ?!
ಆ ಕಾಲಕೋಶವನ್ನು ನಿರ್ಮಿಸಲಾರಂಭಿಸಿದ್ದು ೧೯೩೬ರಲ್ಲಿ. ಕ್ರೈಸ್ತಮತದ ಒಂದು ನಂಬಿಕೆಯ ಪ್ರಕಾರ ಆ ವೇಳೆಗೆ ಭೂಮಿಯ ಸೃಷ್ಟಿಯಾಗಿ ೬೧೭೭ ವರ್ಷಗಳಾಗಿದ್ದವು. ಅದರಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಜೇಕಬ್ಸ್, ಮುಂದಿನ ೬೧೭೭ ವರ್ಷಗಳ ನಂತರವಷ್ಟೇ ಆ ಕಾಲಕೋಶವನ್ನು ಹೊರತೆರೆಯುವಂತೆ ಸೂಚನೆ ನೀಡಿದ.
ಆ ಕಾಲಕೋಶದಲ್ಲಿ ಏನೇನಿದೆ? ಎನ್‌ಸೈಕ್ಲೋಪಿಡಿಯಾಗಳು, ಬೈಬಲ್, ಕುರಾನ್ ಸೇರಿದಂತೆ ಹಲವಾರು ಪುಸ್ತಕಗಳು, ಚ್ಯೂಯಿಂಗ್ ಗಮ್ ಸೇರಿದಂತೆ ಹಲವಾರು ಆಹಾರ ಪದಾರ್ಥಗಳು, ಬಡ್‌ವೀಸರ್ ಬಿಯರ್ ಸೇರಿದಂತೆ ಹಲವಾರು ಪಾನೀಯಗಳು, ಡೋನಲ್ಡ್ ಡಕ್ ಸೇರಿದಂತೆ ಹಲವಾರು ಪ್ಲಾಸ್ಟಿಕ್ ಆಟಿಗೆಗಳು, ರೂಸ್‌ವೆಲ್ಟ್, ಸ್ಟಾಲಿನ್, ಹಿಟ್ಲರ್ ಸೇರಿದಂತೆ ಹಲವಾರು ನಾಯಕರ ಚಿತ್ರಗಳು ಮತ್ತು ಅವರ ಧ್ವನಿ ಮುದ್ರಿಕೆಗಳು ಇತ್ಯಾದಿ.. ಇತ್ಯಾದಿ..
ಕಾಲಕೋಶಗಳ ಪ್ರಚಾರ ಹೆಚ್ಚಾದಂತೆ, ಅಮೆರಿಕದ ವೆಸ್ಟಿಂಗ್‌ಹೌಸ್ ಅದರ ಬ್ಯುಸಿನೆಸ್ ವಾಲ್ಯೂ ಮನಗಂಡಿತು. ೧೯೩೯ರಲ್ಲಿ, ಅದು ತಾನೂ ಒಂದು ಕಾಲಕೋಶವನ್ನು ನಿರ್ಮಿಸಿತು. ಆ ಕಾಲಕೋಶವನ್ನು, “ಐದು ಸಾವಿರ ವರ್ಷಗಳಾದರೂ ತುಕ್ಕು ಹಿಡಿಯದ” ಕಪಾಲಾಯ್ ಎಂಬ ಹೊಸದೊಂದು ಲೋಹದಿಂದ ನಿರ್ಮಿಸಲಾಯಿತು. ಅದು, ಥಾರ್ನ್‌ವೆಲ್ ಜೇಕಬ್ಸ್ ನ ಕಾಲಕೋಶದಷ್ಟು ದೊಡ್ಡದಿರಲಿಲ್ಲ. ಹೀಗಾಗಿ, ಅದರಲ್ಲಿರಿಸಬೇಕಾದ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆಮಾಡಲಾಯಿತು. ಅದರಲ್ಲಿ ಚ್ಯೂಯಿಂಗ್ ಗಮ್ ಗೆ ಜಾಗವಿರಲಿಲ್ಲ; ಕ್ಯಾಮೆಲ್ ಸಿಗರೇಟ್ ಪ್ಯಾಕ್ ಗೆ ಜಾಗವಿತ್ತು.
ಇಂತಹ ಸಮಾಧಿಗಳು, ಕಾಲಕೋಶಗಳಲ್ಲ. ಅವು ಸ್ಮಾರಕಗಳೂ ಅಲ್ಲ. ಅವು ಆ ಕಾಲದ ಜನರ ಕೆಲವೊಂದು ವಿಷಯಗಳನ್ನು, ಅದರಲ್ಲೂ ಅವರ ನಂಬಿಕೆಗಳನ್ನು ನಮಗೆ ತಿಳಿಸುತ್ತವಾದರೂ, ಅವುಗಳ ಉದ್ದೇಶ ಅದಲ್ಲ.
ಜೇಕಬ್ಸ್ ನ ಕಾಲಕೋಶದಲ್ಲಿ, ರಾಜಕೀಯ ನಾಯಕರುಗಳ ಧ್ವನಿಮುದ್ರಣವಿದ್ದರೆ, ವೆಸ್ಟಿಂಗ್‌ಹೌಸ್ ಕಂಪೆನಿ, ಆ ಕಾಲದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಇಪ್ಪತ್ತನೆಯ ಶತಮಾನದ ಹಲವಾರು ಗಣ್ಯವ್ಯಕ್ತಿಗಳನ್ನು ಆಹ್ವಾನಿಸಿತು. ಅಂತಹ ಗಣ್ಯವ್ಯಕ್ತಿಗಳಲ್ಲಿ ಆಲ್ಬರ್ಟ್ ಐನ್‌ಸ್ಟೈನ್ ಸಹ ಒಬ್ಬ. ಐದು ಸಾವಿರ ವರ್ಷಗಳ ನಂತರದವರಿಗೆ, ತನ್ನ ಕಾಲದ ಬಗೆಗೆ ಐನ್‌ಸ್ಟೈನ್ ಹೇಳಿದ್ದಾದರೂ ಏನು? “ದೇಶ-ದೇಶಗಳ ಜನರು ಒಬ್ಬರೊನ್ನಬ್ಬರು ಕೊಲ್ಲುತ್ತಾರೆ. ಹೀಗಾಗಿ ಭವಿಷ್ಯದ ಬಗೆಗೆ ಯೋಚಿಸಿದವರಿಗೆ ಮೂಡುವುದು ಭಯ-ಭೀತಿ ಅಷ್ಟೇ. ಇದನ್ನು ತಿಳಿದ ನೀವು ನಿಮ್ಮ ಕಾಲವೇ ಉತ್ತಮವೆಂದು ಹೆಮ್ಮೆ ಪಟ್ಟರೆ, ಅದರಲ್ಲಿ ತಪ್ಪೇನೂ ಇಲ್ಲ”
******
ಕ್ಯಾಪಿಟಲಿಸ್ಟ್ ಅಮೆರಿಕನ್ನರು ಕಂಡ ಕಂಡಲ್ಲೆಲ್ಲಾ ಕಾಲಕೋಶಗಳನ್ನು ಹೂಳುತ್ತಿದ್ದರೆ, ಕಮ್ಯೂನಿಸ್ಟರಿಗೆ ಸುಮ್ಮನೆ ಕೂರಲಾದೀತೇ?! ಸೋವಿಯೆತ್ ರಷ್ಯಾದ ಹಲವಾರು ಜಾಗಗಳಲ್ಲಿ ಇಂತಹ ಕಾಲಕೋಶಗಳನ್ನು ಹೂಳಲಾಯಿತು. ಸೋವಿಯತ್ ರಷ್ಯಾದ ಪತನದ ನಂತರ, ಹಲವೆಡೆ, ಇಂತಹ ಕಾಲಕೋಶಗಳನ್ನು ಹೊರ ತೆರೆಯಲಾಗುತ್ತಿವೆ.
ಸೈಬಿರಿಯಾದಲ್ಲಿ ಹೊರತೆಗೆದ ಇಂತಹದೊಂದು ಕಾಲಕೋಶದಲ್ಲಿ, ಆ ಪ್ರದೇಶದ ಕಮ್ಯೂನಿಸ್ಟ್ ನಾಯಕರು ಭವಿಷ್ಯದ ತಮ್ಮ ವಂಶಜರಿಗೆ ಬರೆದ ಪತ್ರವೊಂದು ಹೀಗಿದೆ: “ಪ್ರಿಯ ವಂಶಜರೇ… ನಾವು ಕಮ್ಯೂನಿಸ್ಟ್ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ. ನೀವು ಅದರಲ್ಲಿ ವಾಸಿಸುತ್ತಿದ್ದೀರಿ. ನೀವು ಈಗಾಗಲೇ ಚಂದ್ರನ ಮೇಲೆ ಕಾಲನಿಯನ್ನು ಕಟ್ಟಿರಬಹುದು. ಮಂಗಳನ ಮೇಲೆ ಕಾಲಿಟ್ಟಿರಬಹುದು. ಹೊಸ ಗೆಲಾಕ್ಸಿಗಳಲ್ಲಿ ವಾಸಿಸುತ್ತಿರುವವರೊಂದಿಗೆ ಸಾಂಸ್ಕೃತಿಕ ಒಡನಾಟ ಬೆಳೆಸುವತ್ತ ಯೋಚಿಸುತ್ತಿರಬಹುದು…”
೧೯೬೯ರಲ್ಲಿ ಅಮೆರಿಕದ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲಿಟ್ಟ ಹೆಜ್ಜೆಯ ಗುರುತು ಇನ್ನೂ ಇದೆ. ಮಳೆ-ಗಾಳಿಯೇ ಇಲ್ಲದ ಚಂದ್ರನಂಗಳದಲ್ಲಿ, ಧೂಳು ಏಳದೆ ಇರುವುದರಿಂದ, ಕೋಟಿ-ಕೋಟಿ ವರ್ಷಗಳು ಆ ಗುರುತು ಹಾಗೆಯೇ ಉಳಿಯಬಹುದು. ಅದನ್ನು ರಕ್ಷಿಸಲು ಯಾವುದೇ ತುಕ್ಕು ಹಿಡಿಯದ ಕಾಲಕೋಶ ಬೇಕಿಲ್ಲ.
******
ಕ್ಯಾಪಿಟಲಿಸ್ಟ್ ಕಂಪೆನಿಗಳು, ಕಮ್ಯೂನಿಸ್ಟ್ ಕಾಮ್ರೇಡರು ಕಾಲಕೋಶಗಳನ್ನು ಹೂಳುತ್ತಿದ್ದರೆ, ಪ್ರಜಾತಂತ್ರದ ಚುನಾಯಿತ ಪ್ರಭುಗಳು ಸುಮ್ಮನೆ ಕೂರಲಾಗುತ್ತದೆಯೇ?!
೧೯೭೭ರಲ್ಲಿ, ಅತ್ತ NASAದವರು ವಾಯೇಜರ್ ಅಂತರಿಕ್ಷ ನೌಕೆಯನ್ನು ದೂರದ ಆಕಾಶಕ್ಕೆ ಕಳುಹಿಸಿದರೆ, ಇತ್ತ ದೆಹಲಿಯಲ್ಲಿ, ಕೆಂಪು ಕೋಟೆಯ ಮುಂದೆ, ಹುಗಿದಿದ್ದ ಕಾಲಕೋಶವೊಂದನ್ನು ಹೊರ ತೆಗೆಯಲಾಯಿತು.
ಆ ಕಾಲಕೋಶವನ್ನು ಕೇವಲ ನಾಲ್ಕೇ ವರ್ಷಗಳ ಹಿಂದೆ, ಭಾರತದ ಇಪ್ಪತ್ತೈದನೆಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹೂಳಲಾಗಿತ್ತು. ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಸೂಚನೆಯಂತೆ, ಆ ಕಾಲಕೋಶ ಮುಂದಿನ ಐದು ಸಾವಿರ ವರ್ಷಗಳು ಅಲ್ಲಿಯೇ ಇರಬೇಕಿತ್ತು. ಆ ಕಾಲಕೋಶದಲ್ಲಿ, ಹಲವಾರು ಮೈಕ್ರೋಫಿಲ್ಮ್ ಇತ್ಯಾದಿಗಳೊಂದಿಗೆ, ಹತ್ತು ಸಾವಿರ ಪದಗಳ ಐತಿಹಾಸಿಕ ಪ್ರಬಂಧವೊಂದನ್ನೂ ಇರಿಸಲಾಗಿತ್ತು. ಆದರೆ, ಆ ಪ್ರಬಂಧವನ್ನು ಗುಟ್ಟಿನಲ್ಲಿ ರಚಿಸಲಾಗಿತ್ತು. ಹಲವರ ಪ್ರಕಾರ, ಅದರ ಗುರಿ, ಇಂದಿರಾ ಗಾಂಧಿ ಮತ್ತು ನೆಹರೂರವರ ಸಾಧನೆಗಳನ್ನು ಹೊಗಳುವುದಷ್ಟೇ ಆಗಿತ್ತು. ಆ ಪ್ರಬಂಧವೂ ಸೇರಿದಂತೆ, ಆ ಕಾಲಕೋಶದಲ್ಲಿ ಇರಿಸುತ್ತಿರುವ ವಸ್ತುಗಳ ಕುರಿತು ವಿವರ ನೀಡುವಂತೆ, ಲೋಕಸಭೆಯಲ್ಲಿ ಚರ್ಚೆಗಳಾದವಾದರೂ, ಜನಪ್ರಿಯತೆಯ ಉತ್ತುಂಗದಲ್ಲಿದ್ದ ಶ್ರೀಮತಿ ಗಾಂಧಿ ಅಂತಹ ಬೇಡಿಕೆ-ಒತ್ತಾಯಗಳಿಗೆ ಕಿವಿಗೊಡಲಿಲ್ಲ.
ಐದು ಸಾವಿರ ವರ್ಷ ನೆಲದಲ್ಲಿ ಹುದುಗಿರಬೇಕಿದ್ದ ಆ ಕಾಲಕೋಶ, ಐದು ವರ್ಷವೂ ಒಳಗಿರಲಿಲ್ಲ. ತುರ್ತುಪರಿಸ್ಥಿತಿಯ ನಂತರ ಕಾಂಗ್ರೆಸ್ ಸೋತು, ಮೊರಾರ್ಜಿ ದೇಸಾಯಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಅದನ್ನು ಹೊರ ತೆಗೆಯಲಾಯಿತು. ಕೆಲವು ವರದಿಗಳ ಪ್ರಕಾರ, ಆ ಕಾಲಕೋಶವನ್ನು ಹೊರತೆಗೆಯಲು ಅದರ ನಿರ್ಮಾಣದ ಖರ್ಚಿಗಿಂತ ಎಷ್ಟೋ ಪಟ್ಟು ಹಣವನ್ನು ಖರ್ಚು ಮಾಡಲಾಯಿತಂತೆ. ಇಂದು ಆ ಕಾಲಕೋಶವೂ ಇಲ್ಲ. ಆ ಪ್ರಬಂಧವೂ ಇಲ್ಲ. ಆ ಪ್ರಬಂಧದಲ್ಲಿ ಏನಿತ್ತೋ ಅದು ಯಾರಿಗೂ ತಿಳಿದಿಲ್ಲ. ಆದರೆ, ನೀವು ಓದುತ್ತಿರುವ ಈ ಪ್ರಬಂಧ, ಇಂಟರ್ನೆಟ್ ಆರ್ಕೈವ್, ದ ವೇ ಬ್ಯಾಕ್ ಮಷೀನ್, ಗೂಗಲ್ ಇತ್ಯಾದಿಗಳ ಮೂಲಕ ಯಾವುದೇ ಕಾಲಕೋಶದ ಸಹಾಯವಿಲ್ಲದೆಯೇ ಎಷ್ಟೋ ವರ್ಷಗಳು ಉಳಿಯಬಹುದು ಯಾರೂ ಓದದಿದ್ದರೂ!
೨೦೧೧ರಲ್ಲಿ, ಗುಜರಾತಿನ ಮುಖ್ಯಮಂತ್ರಿ ಶ್ರೀ ನರೇಂದ್ರ ಮೋದಿಯವರು, ಗಾಂಧಿನಗರದಲ್ಲಿ “ಕಾಲ ಸಂದೂಕ” ಅಥವಾ “ಸ್ಮೃತಿ ಮಂಜೂಷ” ಎಂಬ ಹೆಸರಿನ ೯೦ ಕೆ.ಜಿ. ಕಾಲಕೋಶವನ್ನು ಭುವಿಗಿಳಿಸಿದರು. ಅದು, ಮುಂದಿನ ಸಾವಿರ ವರ್ಷಗಳ ಕಾಲ ನೆಲದೊಳಗಿರುತ್ತದಂತೆ. ಶ್ರೀ. ಮೋದಿಯವರೂ ಸೇರಿದಂತೆ ಗುಜರಾತಿನ ಹಲವು ಮುಖ್ಯಮಂತ್ರಿಗಳ, ಜನ ನಾಯಕರ ಸಾಧನೆಗಳ ಪರಿಚಯವನ್ನು ಸಾವಿರ ವರ್ಷಗಳ ನಂತರದ ಜನರಿಗೆ ನೀಡುತ್ತದಂತೆ. ಅದರ ವಿವರಗಳು ಈ ಕಾಲದಲ್ಲಿರುವವರಿಗೆ ತಿಳಿಯದಿದ್ದರೇನಂತೇ!
ಕಾರ್ಲ್ ಸೇಗನ್ ಹೇಳಿದ “ಮಹಾನತೆಯ ಅಹಂಕಾರದ ಹುಂಬತನ”ದ ಮಾತು ನೆನಪಿದೆಯೇ?!
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.