ಪೋಸ್ಟ್ಮನ್ನರ ಪ್ರಕಾರ ಈ ಬೆಳವಣಿಗೆಯ ಕೆಡುಕೆಂದರೆ ನಮಗೆ ನೇರವಾಗಿ ಸಂಬಂಧಿಸಿರದ ವಿಷಯಗಳತ್ತ ಹೆಚ್ಚು ಹೆಚ್ಚುಗಮನ ಸೆಳೆಯಲಾಗುತ್ತದೆ ಮತ್ತು ಯಾವ ಆಗುಹೋಗುಗಳು ನಮ್ಮ ಜೀವನಕ್ಕೆ ನೇರ ಸಂಬಂಧ ಹೊಂದಿವೆಯೋ ಅವು ಸುದ್ದಿಯಾಗಿ ನಮ್ಮೆದುರು ಬರದಿರುವುದು. ಯಾವ ವಿಷಯದೊಂದಿಗೆ ನಮಗೆ ನೇರ ಸಂಬಂಧ ಇಲ್ಲವೋ, ಅದರ ಕುರಿತು ನಾವು ಗಂಭೀರವಾಗಿ, ಜವಾಬ್ದಾರಿಯುತವಾಗಿ ಯೋಚಿಸುವ ಅಗತ್ಯ ಇರುವುದೇ ಇಲ್ಲ.
ಕಮಲಾಕರ ಕಡವೆ ಬರೆಯುವ ಅಂಕಣ
ಕೊರೋನಾ ದುರಂತವೇ ಆಗಬೇಕಿಲ್ಲ, ವಿಶ್ವದ ಯಾವುದೇ ಘಟನೆಯನ್ನು ತೆಗೆದುಕೊಂಡರೂ ಸಹ ದಿನವಿಡೀ ಅರಚುತ್ತ ಕಿರುಚುತ್ತ, ಅಸಂಬದ್ಧ ಪ್ರಲಾಪಗಳನ್ನು ಪ್ರಸಾರ ಮಾಡುವ ಟಿವಿಯನ್ನು, ವಿಷಪೂರಿತ ಸಂದೇಶಗಳ ತೊಟ್ಟಿಯಾಗಿರುವ ಸಾಮಾಜಿಕ ಮಾಧ್ಯಮಗಳನ್ನು, ಹಳಿಯದ ದಿನವೇ ಇಲ್ಲವೇನೋ! ಹೆಚ್ಚು ಹೆಚ್ಚು ಜನರಿಗೆ ಅಭಿವ್ಯಕ್ತಿಯ ವೇದಿಕೆಯಾಗಿ ಲಭ್ಯವಾಗಿರುವ ಮಾಧ್ಯಮಗಳೇ ಅಪಾಯಕಾರಿ ಸಾಮಾಜಿಕ ಹವ್ಯಾಸಗಳನ್ನೇಕೆ ಪ್ರದರ್ಶಿಸುತ್ತಿವೆ? ಇಡೀ ವಿಶ್ವದ ಸಮಾಚಾರ ನಮಗಿಂದು ಶಬ್ದಶಃ ಬೆರಳ ತುದಿಯಲ್ಲಿದೆ. ಮಾಹಿತಿಯ ಸಾಗರವೇ ನಮ್ಮನ್ನು ಸುತ್ತುವರಿದಿರುವಾಗ ನಮಗೇಕೆ ಅರಿವಿನ ಬಾಯಾರಿಕೆ ಅತಿಯಾದಂತೆನಿಸುತ್ತಿದೆ? ಈ ವಿಫುಲತೆಗೂ, ವಿಪರೀತಕ್ಕೂ ಏನಾದರೂ ಸಂಬಂಧವಿದೆಯಾ?
ನಾನು ವಿದ್ಯಾರ್ಥಿಯಾಗಿದ್ದಾಗ ಓದಿದ್ದ ಗ್ರಂಥವೊಂದು ಈ ಸನ್ನಿವೇಶವನ್ನು ಅದೆಷ್ಟು ಚೆನ್ನಾಗಿ ವಿಶ್ಲೇಷಣೆ ಮಾಡಿತ್ತು ಎಂದು ನೆನಪಾಗಿ, ಆ ಪುಸ್ತಕವನ್ನು ಹುಡುಕಿ ತೆಗೆದೆ. ಅದು 1985ರಲ್ಲಿ ಪ್ರಕಟವಾದ, ನೀಲ್ ಪೋಸ್ಟ್ಮನ್ ಎಂಬ ಲೇಖಕನ “ಅಮ್ಯೂಸಿಂಗ್ ಅವರ್ಸೆಲ್ವ್ ಟು ಡೆಥ್” (ಮರಣದತ್ತ ಒಯ್ಯುವ ಮನರಂಜನೆ) ಕೃತಿ. ಈ ಗ್ರಂಥದಲ್ಲಿ ಲೇಖಕರು ಮುದ್ರಣ ಮಾಧ್ಯಮದಿಂದ ಟಿವಿ ಮಾಧ್ಯಮಕ್ಕೆ ಹೊರಳಿಕೊಂಡ ಅಮೇರಿಕಾದ ಸಂಸ್ಕೃತಿಯಲ್ಲಿ ಸಾರ್ವಜನಿಕ ಮಾತುಕತೆ, ವಿಚಾರ-ವಿನಿಮಯಗಳು, ಚರ್ಚೆ-ವಿಮರ್ಶೆಗಳು (ಪಬ್ಲಿಕ್ ಡಿಸ್ಕೋರ್ಸ್) ಹೇಗೆ ಅರ್ಥಹೀನ, ಮೌಲ್ಯಹೀನವಾಗುತ್ತ, ಅಸಂಬದ್ಧವಾಗುತ್ತಿವೆ ಎನ್ನುವುದರ ವಿಶ್ಲೇಷಣೆ ಮಾಡುತ್ತಾರೆ. ಇಂದು ಟಿವಿಯನ್ನೂ ಮೀರಿದ ವಿದ್ಯುನ್ಮಾನ ಮಾಧ್ಯಮಗಳ ಮರ್ಕಟಮುಷ್ಟಿಗೆ ಮನಸ್ಸುಗಳನ್ನು ಒಪ್ಪಿಸಿ, ಪ್ರತಿಕ್ಷಣವೂ ಮನರಂಜನೆಯ ತಕ್ಷಣದ ತೃಪ್ತಿಗಾಗಿ ಬಹುಕೃತವೇಶಕ್ಕೆ ಮರುಳಾಗಿರುವ ನಾವು ಒಮ್ಮೆ ಕಂಪಿಸಿಬಿಡಬೇಕು ಅಷ್ಟು ಮುನ್ನೋಟಗಳುಳ್ಳ ಗ್ರಂಥವಿದು.
“ಅಮ್ಯೂಸಿಂಗ್ ಅವರ್ಸೆಲ್ವ್ ಟು ಡೆಥ್” ಕೃತಿಯಲ್ಲಿ ನೀಲ್ ಪೋಸ್ಟ್ಮನ್ ಮುಂದಿಡುವ ವಾದ ಸ್ಥೂಲವಾಗಿ ಹೀಗಿದೆ: ಸಂಸ್ಕೃತಿಯೊಂದು ಮೌಖಿಕತೆಯಿಂದ ಬರವಣಿಗೆಗೆ, ಮುದ್ರಣಕ್ಕೆ, ವಿದ್ಯುನ್ಮಾನ ಸಂವಹನ ಮಾಧ್ಯಮದತ್ತ ಸರಿದಂತೆ, ಆ ಸಂಸ್ಕೃತಿಯಲ್ಲಿ ಸುದ್ದಿ, ಸತ್ಯ, ವಿವೇಕದ ಕುರಿತಾಗಿರುವ ನಿಲುವೂ ಬದಲಾಗುತ್ತಲಿರುತ್ತದೆ. ತರ್ಕ, ಸುಸಂಬದ್ಧತೆ, ಪ್ರಸ್ತುತಿ ಪ್ರಧಾನವಾಗಿದ್ದ ಮುದ್ರಣ ಮಾಧ್ಯಮದಿಂದ ಟಿವಿ ಮಾಧ್ಯಮದತ್ತ ತಿರುಗಿದಂತೆ, ಸುದ್ದಿಯೆನ್ನುವುದೂ ಕೂಡ ಬದಲಾಗಿ, ಆಕರ್ಷಣೆ, ಮನರಂಜನೆಗೆ ಪ್ರಾಶಸ್ತ್ಯ ಹೆಚ್ಚಾಗುತ್ತದೆ. ಹೀಗೆ ಮಾಧ್ಯಮಗಳ ಜೊತೆಗೆ ಸಂದೇಶಗಳೂ ಬದಲುತ್ತ ಹೋಗುವುದನ್ನು ಮಾಧ್ಯಮ ತತ್ವಜ್ಞ ಮಾಲ್ಕಂ ಮ್ಯಾಕ್-ಲೂಹನ್ “ಮಾಧ್ಯಮವೇ ಸಂದೇಶ”ವೆಂಬ (ಮೀಡಿಯಂ ಇಸ್ ದ ಮೆಸೇಜ್) ಪ್ರಮೇಯದ ಮೂಲಕ ಸೂಚಿಸಿದ್ದಾರೆ. ಟಿವಿ ಮಾಧ್ಯಮ ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಭಾವಿ ಸ್ಥಾನ ಗಳಿಸಿದ ಹಾಗೇ, ಸಮಾಜದಲ್ಲಿ ಟಿವಿ ಮಾಧ್ಯಮದ ಸ್ವಭಾವಕ್ಕನುಗುಣವಾಗಿ ಪ್ರದರ್ಶನಭಾವ ಹೆಚ್ಚು ಮುಖ್ಯವಾಗುತ್ತದೆ, ಸಾರ್ವಜನಿಕ ಸಂಕಥನಗಳಲ್ಲಿ ವಿಷಯ-ವಿಚಾರ-ವಿವೇಕ-ಮೌಲ್ಯಗಳು ಅನಾಕರ್ಷಕಗೊಂಡು ಮೂಲೆಗೊತ್ತಲ್ಪಡುತ್ತವೆ. ಇದನ್ನೇ ನೀಲ್ ಪೋಸ್ಟ್ಮನ್ ಸಂಸ್ಕೃತಿಯ ಪತನವೆಂದು ಕರೆದಿದ್ದಾರೆ.
ಗುಟನ್ಬರ್ಗ್ ಬೈಬಲ್ಲಿನೊಂದಿಗೆ ಮೊದಲಾಗುವ ಪ್ರಕಟಣೆಯ ಇತಿಹಾಸದುದ್ದಕ್ಕೂ ಒಂದು ಸುತ್ತು ಹೊಡೆಸಿ, ಟೆಲಿಗ್ರಾಫಿ ಮತ್ತು ಕ್ಯಾಮರಾದ ಆವಿಷ್ಕಾರ, ಮುಂದೆ ಬಂದ ಚಲನಚಿತ್ರಗಳು ಹಾಗೂ ಅಂತಿಮವಾಗಿ ದೂರದರ್ಶನದ ತಂತ್ರಜ್ಞಾನಗಳು ಹೇಗೆ ಕ್ರಮ-ಕ್ರಮೇಣ ಮುದ್ರಿತ ಶಬ್ದದ ಪ್ರಾಮುಖ್ಯವನ್ನು ಕುಂದಿಸಿದವು ಎನ್ನುವುದನ್ನು ಪೋಸ್ಟ್ಮನ್ ಚರ್ಚಿಸುತ್ತಾರೆ. ಮಾನವನ ಪ್ರಧಾನ ಸಾರ್ವಜನಿಕ ಚಟುವಟಿಕೆಗಳಾದ ರಾಜಕೀಯ, ಶಿಕ್ಷಣಗಳಷ್ಟೇ ಅಲ್ಲದೇ ಧರ್ಮವೂ ಸಹ “ಶೋ ಬಿಸಿನೆಸ್” ಆಗುತ್ತ ಸಾಗಿರುವುದರ ಪರಿಣಾಮ ಏನು ಅನ್ನುವುದು ಈ ಗ್ರಂಥ ನಡೆಸುವ ಜಿಜ್ಞಾಸೆ.
ಪೋಸ್ಟ್ಮನ್ನರ ವಾದದ ತಿರುಳು ಹೀಗಿದೆ: ಟೆಲಿಗ್ರಾಫ್ ತಂತ್ರಜ್ಞಾನಕ್ಕೂ ಮುನ್ನ, ಸುದ್ದಿಪತ್ರಿಕೆಗಳಲ್ಲಿ ಸ್ಥಳೀಯ ವೃತ್ತಾಂತವೇ ಇರುತ್ತಿದ್ದವು. ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸುದ್ದಿಗಳು ಕ್ಷಿಪ್ರವಾಗಿ ದೊರಕುವಂತೆ ಮಾಡಿದ ಟೆಲಿಗ್ರಾಫಿಯಿಂದಾಗಿ ದೂರ ದೂರದ ಸುದ್ದಿಗಳು ಸಹ, ವಾರ-ತಿಂಗಳುಗಟ್ಟಲೇ ತಡೆದು ಸಿಗುವ ಬದಲು, ಕೆಲವೇ ನಿಮಿಷಗಳಲ್ಲಿ ಸಿಗುವಂತಾಯಿತು. ಕ್ರಮೇಣವಾಗಿ, ಸುದ್ದಿಪತ್ರಿಕೆಗಳಲ್ಲಿ, ಸ್ಥಳೀಯ ಸುದ್ದಿಗಳ ಬದಲು ಜಾಗತಿಕ ವಿಷಯ-ವೃತ್ತಾಂತಗಳು ಜಾಗ ಪಡೆಯತೊಡಗಿದವು. ಪೋಸ್ಟ್ಮನ್ನರ ಪ್ರಕಾರ ಈ ಬೆಳವಣಿಗೆಯ ಕೆಡುಕೆಂದರೆ ನಮಗೆ ನೇರವಾಗಿ ಸಂಬಂಧಿಸಿರದ ವಿಷಯಗಳತ್ತ ಹೆಚ್ಚು ಹೆಚ್ಚುಗಮನ ಸೆಳೆಯಲಾಗುತ್ತದೆ ಮತ್ತು ಯಾವ ಆಗುಹೋಗುಗಳು ನಮ್ಮ ಜೀವನಕ್ಕೆ ನೇರ ಸಂಬಂಧ ಹೊಂದಿವೆಯೋ ಅವು ಸುದ್ದಿಯಾಗಿ ನಮ್ಮೆದುರು ಬರದಿರುವುದು. ಯಾವ ವಿಷಯದೊಂದಿಗೆ ನಮಗೆ ನೇರ ಸಂಬಂಧ ಇಲ್ಲವೋ, ಅದರ ಕುರಿತು ನಾವು ಗಂಭೀರವಾಗಿ, ಜವಾಬ್ದಾರಿಯುತವಾಗಿ ಯೋಚಿಸುವ ಅಗತ್ಯ ಇರುವುದೇ ಇಲ್ಲ.
ಡೊನಾಲ್ಡ್ ಟ್ರಂಪ್ ಚೀನಾದ ಕುರಿತಾಗಿ ಏನೋ ಅಂದಿರುತ್ತಾನೆ. ನಮ್ಮ ನಗರ ಪರಿಷತ್ತಿನೊಡನೆ ಕೋಲಾ ಕಂಪನಿಯೊಂದು ನೀರು ಪಡೆಯುವ ಕರಾರು ಮಾಡಿಕೊಳ್ಳುತ್ತದೆ. ಇವೆಋೆಡರಲ್ಲಿ ನಮಗೆ ನಿಜವಾಗಿ ಗಂಭೀರತೆಯಿಂದ ಪ್ರತಿಸ್ಪಂದಿಸಲು ಸಾಧ್ಯವಾಗ ಬೇಕಿರುವುದು ಎರಡನೆಯ ವಿಚಾರ; ಆಮೇಲೆ ಬೇಕಿದ್ದರೆ ಜಾಗತಿಕ ವಿಚಾರ. ಆದರೆ, ಮಾಧ್ಯಮಗಳ ಗಮನ ಈ ಜಾಗತಿಕ ಸುದ್ದಿಯ ಕಡೆ. ಇದರಿಂದಾಗಿ ನಮ್ಮ ಗಮನಹರಣವಾಗುತ್ತದೆಯೇ ವಿನಃ ಬೇರೆನೂ ಅಲ್ಲ.
ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಯ ಕುರಿತು ಇತ್ತೀಚೆಗೆ ಬಹಳ ಜನ ತುಂಬ ಉತ್ಸುಕರಾಗಿದ್ದಾರೆ. ಕೊಠಡಿಯೊಳಗಿನ ಅಧ್ಯಾಪನದ ಬದಲಿಗೆ ವಿಧ್ಯಾರ್ಥಿಗಳು ಬೇಕೆಂದಾಗ ನೋಡಿಕೇಳಬಹುದಾದ ಸಂಪನ್ಮೂಲಗಳನ್ನು ತಯಾರಿಸಿ, ಶಿಕ್ಷಣವನ್ನು ಅಂತರ್ಜಾಲದ ಮೂಲಕ ಒದಗಿಸ ಬೇಕೆಂದು ಹೊಸ ಶಿಕ್ಷಣ ನೀತಿಯ ಮಹತ್ವಾಕಾಂಕ್ಷೆ. ಅದಕ್ಕೆಂದು ಬ್ಲೆಂಡೆಡ್ ಅಧ್ಯಾಪನವೆಂಬ ಫ್ಯಾಷನ್ ಮೊದಲಾಗಿರುವ ಈ ಸಂದರ್ಭದಲ್ಲಿ, ಪೋಸ್ಟ್ಮನ್ ಅವರ ಎಚ್ಚರಿಕೆಯ ಮಾತುಗಳು ತುಂಬ ಸಕಾಲಿಕ.
ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಕಲಿಕೆಗಿಂತ ರಂಜನೆಗೆ ಹೆಚ್ಚೆಚ್ಚು ಒತ್ತು ಕೊಡುವ ಬಗೆಗೆ ಪೋಸ್ಟ್ಮನ್ ಎಚ್ಚರಿಸುತ್ತಾರೆ. ಕಷ್ಟಪಟ್ಟು ಓದಿ ಕಲಿಯುವ ಅಭ್ಯಾಸದ ಬದಲು, ಶಿಕ್ಷಣ ಎಕ್ಸೈಟಿಂಗ್ ಆಗಿರಬೇಕೆಂಬ ಅಪೇಕ್ಷೆ ಮಾನವರಲ್ಲಿ ಬೇಜವಬ್ದಾರಿ, ಕ್ಷುಲ್ಲಕತೆ, ಸೋಮಾರಿತನಗಳನ್ನು ಹೆಚ್ಚಿಸುತ್ತದೆಯೇ? ತಂತ್ರಜ್ಞಾನ ತಂತಾನೆ ಕೆಡುಕೆನ್ನಬೇಕಾಗಿಲ್ಲ. ಆದರೆ, ಖಂಡಿತವಾಗಿ, ತಂತ್ರಜ್ಞಾನದ ಬಳಕೆ ಹೇಗೆ ಆದರೆ ಸಮಾಜಕ್ಕೆ ಒಳಿತು ಎನ್ನುವ ಪ್ರಜ್ಞೆ ಬೇಕು. ಪ್ರತಿ ತಂತ್ರಜ್ಞಾನವೂ ತನ್ನದೇ ಆದ ರೀತಿಯಲ್ಲಿ ಜ್ಞಾನದ ಪ್ರಸಾರಣೆ ಮಾಡುವುದರಿಂದ, ಜನರ ಜ್ಞಾನಗ್ರಹಣೆಯ ಮೇಲೆಯೇ ತಂತ್ರಜ್ಞಾನದ ಪ್ರಭಾವ ಇರುತ್ತದೆ.
ತರ್ಕ, ಸುಸಂಬದ್ಧತೆ, ಪ್ರಸ್ತುತಿ ಪ್ರಧಾನವಾಗಿದ್ದ ಮುದ್ರಣ ಮಾಧ್ಯಮದಿಂದ ಟಿವಿ ಮಾಧ್ಯಮದತ್ತ ತಿರುಗಿದಂತೆ, ಸುದ್ದಿಯೆನ್ನುವುದೂ ಕೂಡ ಬದಲಾಗಿ, ಆಕರ್ಷಣೆ, ಮನರಂಜನೆಗೆ ಪ್ರಾಶಸ್ತ್ಯ ಹೆಚ್ಚಾಗುತ್ತದೆ.
ಮುದ್ರಣ ಸಂಸ್ಕೃತಿ ಚರ್ಚೆ, ಗಂಭೀರ ಚಿಂತನೆ, ವಿಚಾರ-ವಿಮರ್ಶೆಗಳಿಗೆ ಸೂಕ್ತವಾದ ಮಾಧ್ಯಮ. ಬರವಣಿಗೆಯು ಅವಸರವಿಲ್ಲದ ಚಿಂತನೆಯ ಸಾಧ್ಯತೆ ಉಳ್ಳದ್ದು. ಅಭಿವ್ಯಕ್ತಿಯಲ್ಲಿ ವೇಗ ವೃದ್ಧಿಸುವ ತಂತ್ರಜ್ಞಾನಗಳು ಬಂದಂತೆ, ಯೋಚನೆಗೆ ಅವಕಾಶ ಕಮ್ಮಿಯಾಗುತ್ತಿದ್ದು, ವಿಷಯವೊಂದರ ಗ್ರಹಿಕೆ, ಸಾಧಕಬಾಧಕಗಳ ಯೋಚನೆ, ಮಾಹಿತಿ-ವಿವರಗಳ ಸಂಶೋಧನೆಗಳಾವುದಕ್ಕೂ ವ್ಯವಧಾನವೇ ಇರದಂತಾಗುತ್ತದೆ. ಇದರಿಂದಾಗಿ ಚಿಂತನೆಗೆ ಹುರುಳಿಲ್ಲದಂತಾಗುತ್ತದೆ. ಈ ಬೆಳವಣಿಗೆಯ ಪರಿಣಾಮವನ್ನು ನಾವು ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರವಲ್ಲ, ನಮ್ಮ ಒಟ್ಟಾರೆ ಸಾರ್ವಜನಿಕ ಮಾತುಕತೆಗಳಲ್ಲಿ ಕಾಣಬಹುದು. ಉದಾಹರಣೆಗೆ ರಾಜಕಾರಣಿಗಳ ಭಾಷಣಗಳನ್ನು ಗಮನಿಸಬಹುದು. ಅಥವಾ ಟಿವಿ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಹೆಸರಿನ ಕೆಸರೆರಚಾಟವನ್ನು ಪೋಸ್ಟಮನ್ನರ ದೃಷ್ಟಿಯಲ್ಲಿ, ಮುದ್ರಣ ತಂತ್ರಜ್ಞಾನವನ್ನು ಹಿಂದಿಕ್ಕಿದ ಟಿವಿಯಂತ ವಿದ್ಯುನ್ಮಾನ ತಂತ್ರಜ್ಞಾನವು (ಅವರ ಕಾಲದಲ್ಲಿ, ಈಗ ವಿವಿಧ ಸಂಕ್ಷಿಪ್ತಾತಿ ಸಂಕ್ಷಿಪ್ತ ಸಂವಹನದ ಸಾಮಾಜಿಕ ಮಾಧ್ಯಮಗಳು) ನಮ್ಮ ಸಾರ್ವಜನಿಕ ಸಂವಹನದ, ಚರ್ಚೆಗಳ, ಮಾತುಕತೆಗಳ ಆಂತರ್ಯವನ್ನೇ ಖೊಟ್ಟಿಯಾಗಿಸಿದೆ. ಮತ್ತು ಈ ತಿರುಳಿಲ್ಲದ, ಕ್ಷುದ್ರ ಸಂವಹನಗಳ ಪರಿಣಾಮ ಲೋಕತಂತ್ರದ ಮೇಲೂ ಆಗಿದೆ ಎನ್ನುವುದು ಅವರ ವಾದ.
ಟಿವಿ ಸಂಸ್ಕೃತಿಯಲ್ಲಿ ಸಮಾಲೋಚನೆಗಳಿಗೆ, ವಿಚಾರಗಳ ಗಂಭೀರ ಪರಿಗಣನೆಗಳಿಗೆ ಆಸ್ಪದವಿರುವುದಿಲ್ಲ. ಬದಲಿಗೆ, ಕ್ಷಣಕ್ಷಣಕ್ಕೂ ಉತ್ತೇಜನ ನೀಡುವಂತ, ವೀಕ್ಷಕರನ್ನು ಉದ್ರೇಕಿಸುವಂತ, ಮನರಂಜನೆ ಒದಗಿಸುವಂತ, ಸೆನ್ಸೇಷನಲ್ ಅನ್ನುತ್ತಾರಲ್ಲ, ಅಂತಹ ವಸ್ತು ಟಿವಿ ಮಾಧ್ಯಮಕ್ಕೆ ಬೇಕಾಗಿರುತ್ತೆ. ವಿದ್ಯುನ್ಮಾನ ಮಾಧ್ಯಮವು ವಿಷಯವನ್ನು ವರುಷವರುಷಕ್ಕೂ ಹೆಚ್ಚು ಹೆಚ್ಚು ಪುಟ್ಟ ಘಟಕಗಳಲ್ಲಿ ಒದಗಿಸುತ್ತ, ಕ್ರಮೇಣ ಇದು “ಫಟಾಫಟ್ ಸುದ್ದಿಗಳ” ಸ್ತರಕ್ಕೆ ಬಂದು ತಲುಪಿದೆ. ಇದು ಸುದ್ದಿಯು ಬರಿಯ ಮಾಹಿತಿ ಮಾತ್ರವಾಗುವ ಪರಿಸ್ಥಿತಿ – ಅಂದರೆ ಯಾವುದರ ಕುರಿತು ಜ್ಞಾನವಾಗಲಿ, ಗಂಭೀರತೆಯಾಗಲಿ, ಒಲವಾಗಲಿ, ಗಮನವಾಗಲೀ ಅವಶ್ಯವಿಲ್ಲವೋ, ಯಾವುದು ‘ಟೈಂ ಪಾಸಿಗೆ’ ಹೆಚ್ಚು ಸೂಕ್ತವೋ ಅಂತಹ ಪರಿಸ್ಥಿತಿ.
ಮನರಂಜನೆ-ಕೇಂದ್ರಿತ ಟಿವಿ ಹುಟ್ಟುಹಾಕುವ ಸಂಸ್ಕೃತಿಯಲ್ಲಿ ಮಾಹಿತಿ, ವಿಚಾರ, ಜ್ಞಾನಗಳೆಲ್ಲ ಪ್ರದರ್ಶನಸುಖದ ಭಾಗ ಮಾತ್ರವಾಗಿರುತ್ತದೆ. ವಾಸ್ತವವನ್ನು ಒಂದು ಬಗೆಯ ಪ್ರದರ್ಶನವಾಗಿ – “ರಿಯಾಲಿಟಿ ಶೋ”ಗಳನ್ನು ನೆನಪಿಸಿಕೊಳ್ಳಿ – ಅನುಭವಿಸಬೇಕೆನ್ನುವ ಸಂದೇಶ ಸಮಾಜದಲ್ಲಿ ಹರಿಬಿಡಲಾಗುತ್ತದೆ. ಹಾಗಾಗಿಯೇ, ಪೋಸ್ಟ್ಮನ್ ಹೇಳುತ್ತಾರೆ, ಮನರಂಜನೆಯ ವಿಪರೀತ ವಾಂಛೆಯು ವಿಷಪೂರಿತ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದೆಯೆಂದು. ಟಿವಿ (ವಿದ್ಯುನ್ಮಾನ) ಮಾಧ್ಯಮಗಳ ಈ ಜಗತ್ತಿನಲ್ಲಿ ಪ್ರದರ್ಶಕ ಪ್ರತಿಮೆಗಳಿಗಿರುವ ಸೊಕ್ಕಿನೆದುರು, ವಿವೇಕ ಮತ್ತು ವಿಮರ್ಶಾತ್ಮಕ ನಿಲುವುಗಳು ನಲುಗಿಹೋಗುತ್ತವೆ. ಇದರ ಪರಿಣಾಮವೆಂದರೆ ಸಂಸ್ಕೃತಿ, ರಾಜಕಾರಣಗಳೆಲ್ಲ ಕ್ಷುಲ್ಲಕತೆಯ ಗುಣ ಪಡೆಯುತ್ತ ಹೋಗುತ್ತವೆ.
ಪೋಸ್ಟ್ಮನ್ ತಮ್ಮ ವಿಶ್ಲೇಷಣೆಯನ್ನು ಎರಡು ಸ್ತರಗಳಲ್ಲಿ ಮಾಡುತ್ತಾರೆ. ಮೊದಲನೆಯದು ಪ್ರತಿಮೆಗಳ ಪ್ರದರ್ಶನವನ್ನಾಧರಿಸಿದ ಟಿವಿ ಮಾಧ್ಯಮ ಸಮಾಜದಲ್ಲಿ ಪಡೆವ ಪ್ರಾಮುಖ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮ. ಎರಡನೆಯದು, ಸಂವಹನ ಮಾಧ್ಯಮಗಳು ಅಂತರಗಳನ್ನು ಕ್ಷೀಣಿಸುತ್ತ ಹೋದಹಾಗೆ, ಸ್ಥಳೀಯ ಸುದ್ದಿಗಳ ಜಾಗದಲ್ಲಿ ಬರುವ ಜಾಗತಿಕ, ದೂರದೂರದ ಸುದ್ದಿಮಾಹಿತಿಗಳು – ಆಸ್ಟ್ರಿಯಾದ ರಾಜಮನೆತನದಲ್ಲಿ ನಡೆದ ವಿವಾಹ, ಆಸ್ಟ್ರೇಲಿಯಾದ ಸಿನೆಮಾ ತಾರೆಯ ಘಟಸ್ಫೋಟ, ಅಮೇರಿಕಾದ ಅಧ್ಯಕ್ಷರ ಅಸಂಬದ್ಧ ಹೇಳಿಕೆ, ಅಂಟಾರ್ಟಿಕಾದ ವಿಪರೀತ ವಾತಾವರಣ. ಹೀಗೆ, ನಮ್ಮ ಪ್ರಸ್ತುತ ಅಸ್ತಿತ್ವದೊಂದಿಗೆ ಅಥವಾ ಒಂದಕ್ಕೊಂದು ಸಂಬಂಧವೇ ಇಲ್ಲದ ಸುದ್ದಿಯ ತುಣುಕುಗಳು ನಮ್ಮಿಂದ ಭಾವನಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆಯೇ ಹೊರತೂ, ವಿವೇಕಯುತ ವಿಚಾರ-ವಿಮರ್ಶೆಯನ್ನಲ್ಲ.
ಟಿವಿಯಲ್ಲಿ ಬರುವ ಅರ್ಥಹೀನ ಕಾರ್ಯಕ್ರಮಗಳೇ ವಾಸಿ ಎನ್ನುತ್ತಾರೆ ಪೋಸ್ಟ್ಮನ್. ಯಾಕೆಂದರೆ, ಜನ ಹೇಗಿದ್ದರೂ ಅವುಗಳನ್ನು ಅರ್ಥಹೀನತೆಯ ಸ್ತರದಲ್ಲಿಯೇ ಗ್ರಹಿಸುತ್ತಾರೆ. ಆದರೆ, ಸುದ್ದಿಯೂ ಮನರಂಜನೆಯಾದಾಗ, ಚರ್ಚೆಯೂ ಮನರಂಜನೆಯಾದಾಗ, ಶಿಕ್ಷಣ, ಪ್ರವಚನ, ರಾಜಕಾರಣ ಹೀಗೆ ಎಲ್ಲವೂ ಮನರಂಜನೆಯ ಮಾಧ್ಯಮದ ಮೂಲಕವೇ ನಮ್ಮನ್ನು ತಲುಪತೊಡಗಿದರೆ, ನಾವು ವಿಷಯಗಾಂಭೀರ್ಯವನ್ನೇ ಮರೆತುಬಿಡುತ್ತೇವೆ. ಮಾಹಿತಿ ಎನ್ನುವುದು ಅಸಂಬದ್ಧವೂ, ಅಸಂಬಧಿತವೂ ಆಗಿ, ತಪ್ಪು ಮಾಹಿತಿ, ಅಸತ್ಯಗಳೊಂದಿಗೆ ಕಲಸುಮೇಲೋಗರವಾಗಿ, ಕೇವಲ ಅರಿವಿನ ಭಾಸವನ್ನಷ್ಟೇ ವೀಕ್ಷಕರಲ್ಲಿ ಉಂಟುಮಾಡುತ್ತವೆ ಎನ್ನುತ್ತಾರೆ ಅವರು. ಅಜ್ಞಾನವೇ ಜ್ಞಾನವೆಂಬ, ಅಭಿಪ್ರಾಯವೇ ಅರಿವು ಎಂಬ, ವಾದವೇ ತರ್ಕವೆಂಬ ಗೊಂದಲಗಳನ್ನು ಈ ತೋರಿಕೆಯ, ರಂಜನೆಯ ಸಂಸ್ಕೃತಿ ಹುಟ್ಟಿಹಾಕುತ್ತದೆ ಎನ್ನುತ್ತಾರೆ.
ಟಿವಿ ಕೇವಲ ವಾರ್ತೆ ಯಾವ ರೂಪದಲ್ಲಿ ವೀಕ್ಷಕನನ್ನು ತಲುಪುವುದೆಂದು ಮಾತ್ರ ತೀರ್ಮಾನಿಸುವುದಿಲ್ಲ; ಇದಕ್ಕೂ ದೊಡ್ಡ ದುರಂತವೆಂದರೆ, ಅದು ಇತರ ಮಾಧ್ಯಮಗಳು ಹೇಗೆ ವ್ಯವಹರಿಸುವವು ಎನ್ನುವುದರ ಮೇಲೂ ಪ್ರಭಾವ ಬೀರುವುದರಿಂದ, ಒಟ್ಟಾರೆ ಸುದ್ದಿಯ ಸನ್ನಿವೇಶವೇ, ವಾರ್ತೆಯ ವಾತಾವರಣವೇ, ಆಕರ್ಷಣೆಯತ್ತ, ರಂಜನೆಯತ್ತ, ಸೆನ್ಸೇಷನಲಿಸಂನತ್ತ ಹೊರಳಿಕೊಳ್ಳುತ್ತದೆ ಎನ್ನುವುದು.
ಕಳೆದ ಏಳೆಂಟು ವರುಷಗಳಿಂದ ಟಿವಿ ಸುದ್ದಿಮಾಧ್ಯಮಗಳನ್ನು ನೋಡುವ ಹವ್ಯಾಸವನ್ನೇ ತೊರೆದಿರುವ ನನಗೆ, ಪೋಸ್ಟ್ಮನ್ನರ ವಾದವೇನೋ ಸಮಂಜಸವೆನಿಸುತ್ತದೆ. ಆದರೆ, ನನಗೂ ಗೊತ್ತು, ಇದು ಅಷ್ಟು ಸರಳ ಸಮಸ್ಯೆಯಲ್ಲವೆಂದು. ಟಿವಿಯನ್ನಾಗಲೀ, ಸಾಮಾಜಿಕ ಮಾಧ್ಯಮಗಳನ್ನಾಗಲೀ ಬಿಟ್ಟುಬಿಡಬೇಕು ಎನ್ನುವುದು ವ್ಯಾವಹಾರಿಕ ಉತ್ತರವಲ್ಲವೆಂದೇ ನಾನು ಭಾವಿಸುತ್ತೇನೆ. ಇದೇ ಮಾಧ್ಯಮಗಳು ಇತ್ತೀಚೆಗೆ ಕೋವಿಡ್ ಮಹಾರೋಗದ ಸಂದರ್ಭದಲ್ಲಿ ಅದೆಷ್ಟು ಪರಿಣಾಮಕಾರಿ ಪಾತ್ರ ವಹಿಸಿದ್ದವು ಎಂದು ನಾವೆಲ್ಲ ನೋಡಿದ್ದೇವೆ. ಅಲ್ಲದೇ, ಹಿಂದೆಂದೂ ಅಸಾಧ್ಯವಾದ ಮಟ್ಟಿಗೆ, ಅತಿಸಾಮಾನ್ಯರಿಗೂ ಅಭಿವ್ಯಕ್ತಿಯ ಅವಕಾಶ, ವಿಶಾಲ ಸಂಪರ್ಕ ಸಾಧ್ಯತೆಯನ್ನು ಏರ್ಪಡಿಸಿರುವ ಈ ಮಾಧ್ಯಮಗಳು ಪ್ರಜಾಪ್ರಭುತ್ವವಾದಿಯಾದ ಸಂವಹನ ಮಾಧ್ಯಮಗಳು ಎಂದೇ ನನ್ನ ಅನಿಸಿಕೆ.
ಆದರೂ, ವಿದ್ಯುನ್ಮಾನ ಮಾಧ್ಯಮಗಳು ನಮ್ಮ ಮೇಲೆ ಸಾಧಿಸಿರುವ ಹಿಡಿತಕ್ಕೆ ಬದಲು ಈ ಮಾಧ್ಯಮಗಳು ನಮ್ಮ ಹಿಡಿತದಲ್ಲಿರಬಹುದಾದ ಸನ್ನಿವೇಶವನ್ನು ನಾವು ಕಲ್ಪಿಸಿಕೊಳ್ಳಬೇಕಾಗಿದೆ. ನಮ್ಮ ಮನಸ್ಸು ಕೇವಲ ಮನರಂಜನೆಗೆ ಮಾತ್ರ ಪ್ರತಿಸ್ಪಂದಿಸುವ ಅಪಾಯವನ್ನು ಬದಿಗಿಟ್ಟು, ಮಾನವೀಯ ವಿವೇಕವನ್ನು ಕ್ಷುದ್ರತೆಗೆ ಇಳಿಸದ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಬಹುದಾದ ಸಾಧ್ಯತೆಯನ್ನು ನಾವು ಮನಗಾಣಬೇಕಿದೆ. ಯಾಕೆಂದರೆ, ಪೋಸ್ಟ್ಮನ್ ತಮ್ಮ ಪುಸ್ತಕದಲ್ಲಿ ಸೂಚ್ಯವಾಗಿ ಸೂಚಿಸಿರುವಂತೆ, ಮಾಹಿತಿ ಮನರಂಜನೆಯಾದಲ್ಲಿ, ಮನಸ್ಸು ಉತ್ತೇಜನೆಯನ್ನು ಮಾತ್ರ ಅಪೇಕ್ಷಿಸುವಲ್ಲಿ, ಮನುಷ್ಯ ಕೇವಲ ಭೌತಿಕ ವಸ್ತುವಾಗಿಬಿಡಬಹುದು.
#tellkamalakar@gmail.com
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ