“ಈ ಮಿತವಚನದ, ಸುಂದರ ಕವನಗಳು, ಕಲ್ಪನಾತ್ಮಕವಾಗಿ ಸಮೃದ್ಧವಾದ ಮತ್ತು ಪರಿಣಿತಿಯಿಂದ ಆಸವಿಸಿದ ಕವನಗಳು, ಪ್ರಕ್ಷುಬ್ಧ ತೇಜಸ್ಸಿನಿಂದ ಕಂಪಿಸುತ್ತವೆ. ಈ ಕವನಗಳನ್ನು ಓದುವಾಗ, ಅವುಗಳನ್ನು ರಚಿಸಿದ ಮೌನಗಳನ್ನು, ಮತ್ತು ಈ ಮೌನಗಳು ಹೇಗೆ ಒಂದೊಂದಾಗಿ ಬಂದು ಅಸಲಾದ ಮತ್ತು ಅಗತ್ಯವಾದ ಪದಗಳಾಗಿ ಒಟ್ಟು ಸೇರುವುದನ್ನು ನಾನು ಕೇಳಿಸಿಕೊಂಡಂತೆ ಅನಿಸಿತು ನನಗೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಬಲ್ಗೇರಿಯಾ ದೇಶದ ಕವಿ ವ್ಲದೀಮೀರ್ ಲೆವ್ಚೆವ್-ರ (Vladimir Levchev) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಬಲ್ಗೇರಿಯಾ ದೇಶದ ಖ್ಯಾತ ಕವಿ ಹಾಗೂ ಬರಹಗಾರ ವ್ಲದೀಮೀರ್ ಲೆವ್ಚೆವ್ ಕಮ್ಯುನಿಸ್ಟ್ ಬಲ್ಗೇರಿಯಾದಲ್ಲಿ ಮೊದಲ ಸ್ವತಂತ್ರ ಪತ್ರಿಕೆ “ಗ್ಲಾಸ್”-ನ (Glas ಎಂದರೆ ಬಲ್ಗೇರಿಯನ್ ಭಾಷೆಯಲ್ಲಿ ‘ಧ್ವನಿ’ ಅಥವಾ ‘ಮತ’ ಎಂಬ ಅರ್ಥ ಕೊಡುವ ಪದ) ಸ್ಥಾಪಕರಾಗಿ ಹೆಸರುವಾಸಿಯಾಗಿದ್ದಾರೆ. 1989-ರಲ್ಲಿ ಕಮ್ಯುನಿಸ್ಟ್ ಆಡಳಿತದ ಪತನದ ಮೊದಲು ಅಧಿಕಾರಿಗಳಿಂದ ನಿಷೇಧಿಸಲ್ಪಟ್ಟ ಈ ಪತ್ರಿಕೆಯು ಪ್ರಸಿದ್ಧ ಬಲ್ಗೇರಿಯನ್ ಮತ್ತು ಪೂರ್ವ ಯುರೋಪಿಯನ್ ಭಿನ್ನಮತೀಯರ ಕೃತಿಗಳನ್ನು ಪ್ರಕಟಿಸುತ್ತಿತ್ತು. 1957-ರಲ್ಲಿ ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ (Sofia) ಜನಿಸಿದ ಲೆವ್ಚೆವ್, 1982-ರಲ್ಲಿ ಸೋಫಿಯಾದ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌-ನಿಂದ ತಮ್ಮ ಪದವಿಯನ್ನು ಪಡೆದರು. ಅವರು ನರೋದ್ನಾ ಕಲ್ತುರಾ ಪ್ರಕಾಶನದಲ್ಲಿ (Narodna Kultura Publishers) ಕವನ ಸಂಪಾದಕರಾಗಿ, ಡೆಮೋಕ್ರಾಟ್ಸಿಯಾ (Democratsia) ಮತ್ತು ಲೀಟೆರಾಟುರೆನ್ ವೆಸ್ಟ್ನಿಕ್ (Literaturen Vestnik) ಪತ್ರಿಕೆಗಳಲ್ಲಿ ಪತ್ರಕರ್ತ ಹಾಗೂ ಸಂಪಾದಕರಾಗಿ ಮತ್ತು ಫ್ರೀ ಪೊಯೆಟ್ರಿ ಸೊಸೈಟಿ-ಯ (Free Poetry Society) ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. 1996-ರಲ್ಲಿ ವಾಷಿಂಗ್ಟನ್, DC-ಯ ಅಮೇರಿಕನ್ ವಿಶ್ವವಿದ್ಯಾಲಯದಲ್ಲಿ ‘ಫುಲ್‌ಬ್ರೈಟ್ ಸ್ಕಾಲರ್’ ಆಗಿ ಕ್ರಿಯೇಟಿವ್ ರೈಟಿಂಗ್‌-ನಲ್ಲಿ MFA ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.

1994-ಮತ್ತು 2007-ರ ಮಧ್ಯೆ, ಲೆವ್ಚೆವ್ ಅವರು ವಾಷಿಂಗ್ಟನ್, DC- ಯಲ್ಲಿ ವಾಸವಾದ್ದರು; ಅಲ್ಲಿ ಅವರು ಸಾಹಿತ್ಯದ ಪ್ರಾಧ್ಯಾಪಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಅನುವಾದಕರಾಗಿ, ಮತ್ತು ಪುಸ್ತಕ ಮಾರಾಟಗಾರರಾಗಿ ಹಲವು ಬಗೆಯ ಕೆಲಸಗಳನ್ನು ಮಾಡಿದರು. 2007-ರಲ್ಲಿ ತಮ್ಮ ತಾಯ್ನಾಡು ಬಲ್ಗೇರಿಯಾಗೆ ಮರಳಿ ಬಂದ ಲೆವ್ಚೆವ್ ಪ್ರಸ್ತುತ ಬಲ್ಗೇರಿಯಾದ ಬ್ಲಾಗೋವ್‌ಗ್ರಾಡ್-ನಲ್ಲಿರುವ “ಅಮೇರಿಕನ್ ಯೂನಿವರ್ಸಿಟಿ ಇನ್ ಬಲ್ಗೇರಿಯಾ”-ದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಲೆವ್ಚೆವ್ ಅವರ ಕವನಗಳು ಹಾಗೂ ಪ್ರಬಂಧಗಳು ಹಲವಾರು ಸಂಗ್ರಹಗಳು ಮತ್ತು ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಬಲ್ಗೇರಿಯಾದಲ್ಲಿ ಹದಿನೈದು ಕವನ ಸಂಕಲನಗಳು, ಎರಡು ಪ್ರಬಂಧ ಸಂಗ್ರಹಗಳು ಮತ್ತು ಎರಡು ಕಾದಂಬರಿಗಳನ್ನು ಹಾಗೂ ಅಮೇರಿಕಾದಲ್ಲಿ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಲೆವ್ಚೆವ್ ಅವರ ಕವನಗಳನ್ನು ರಷ್ಯನ್, ಜರ್ಮನ್, ಫ್ರೆಂಚ್, ಗ್ರೀಕ್, ಟರ್ಕಿಶ್, ಪೋಲಿಷ್, ಹಂಗೇರಿಯನ್, ಪಂಜಾಬಿ ಮತ್ತು ಹೀಬ್ರೂ ಭಾಷೆಗಳಿಗೆ ಅನುವಾದಿಸಲಾಗಿದೆ. ಅನುವಾದಕರಾಗಿ ಅವರು ಆ್ಯಲನ್ ಗಿನ್ಸ್‌ಬರ್ಗ್, ಸ್ಟಾನ್ಲಿ ಕುನಿಟ್ಜ್ ಮತ್ತು ಇತರ ಅಮೇರಿಕನ್ ಕವಿಗಳ ಕವನಗಳನ್ನು ಬಲ್ಗೇರಿಯನ್ ಭಾಷೆಗೆ ಅನುವಾದಿಸಿದ್ದಾರೆ.

ವ್ಲದೀಮೀರ್ ಲೆವ್ಚೆವ್ ಅವರ “ದ ರೆಯಿನ್ಬೊವ್ ಮೇಸನ್” (The Rainbow Mason) ಕವನ ಸಂಕಲನದ ಬಗ್ಗೆ ಮಾತನಾಡುತ್ತಾ, ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ‘ಆಸ್ಥಾನಕವಿ’ ಗೌರವ ಪಡೆದ ಮೈಕಲ್ ಕೋಲಿಯರ್-ರವರು ಹೀಗನ್ನುತ್ತಾರೆ: “ಈ ಕವನ ಸಂಕಲನವು ದೇಹ ಮತ್ತು ಆತ್ಮದ ಹಸಿವು ಮತ್ತು ಹಾತೊರೆಯುವಿಕೆಗಳು ಮನೆಮಾಡಿರುವ ಒಂದು ಅಪೂರ್ವವಾದ ಕಟ್ಟಡವನ್ನು ಹೋಲುತ್ತದೆ. ಲೆವ್ಚೆವ್ ತಮ್ಮ ಕವಿತೆಗಳನ್ನು “ಬಲವಾದ ಬಂಡೆ” ಮತ್ತು “ಆಕಾಶ”ಗಳಿಂದ ನಿರ್ಮಿಸುತ್ತಾರೆ ಮತ್ತು ಈ ವಿರೋಧಾತ್ಮಕ ಅಂಶಗಳಿಂದ ಪೂರ್ಣತೆ ಮತ್ತು ಏಕತೆಯನ್ನು ಪಡೆಯುತ್ತಾರೆ. ಲೆವ್ಚೆವ್‌ ಅವರ ತೀಕ್ಷ್ಣವಾದ ಕಣ್ಣು ಮತ್ತು ಚುರುಕಾದ ಕುತೂಹಲದಿಂದ ಸ್ಫುಟವಾಗಿ ಉಲ್ಲಸಿತವಾದ ಭಾಷೆಯನ್ನು “ದ ರೆಯಿನ್ಬೊವ್ ಮೇಸನ್” ನಲ್ಲಿ ಓದುಗರು ಕಂಡುಕೊಳ್ಳುತ್ತಾರೆ.”


ಇಲ್ಲಿ ಅನುವಾದವಾಗಿರುವ ಹಲವಾರು ಕವನಗಳು 2011-ರಲ್ಲಿ ಪ್ರಕಟಿಸಲಾದ ಅವರ ‘ದ ರೆಫ಼್ಯೂಜಿ’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಖ್ಯಾತ ಅಮೇರಿಕನ್ ಕಾದಂಬರಿಕಾರ ಹಾಗೂ ಕವಿಗಳಾದ ರಿಚರ್ಡ್ ಮೆಕ್‌ಕಾನ್-ರವರ ಪ್ರಕಾರ, “ಈ ಮಿತವಚನದ, ಸುಂದರ ಕವನಗಳು, ಕಲ್ಪನಾತ್ಮಕವಾಗಿ ಸಮೃದ್ಧವಾದ ಮತ್ತು ಪರಿಣಿತಿಯಿಂದ ಆಸವಿಸಿದ ಕವನಗಳು, ಪ್ರಕ್ಷುಬ್ಧ ತೇಜಸ್ಸಿನಿಂದ ಕಂಪಿಸುತ್ತವೆ, ‘The Refugee’ ಕವನದಲ್ಲಿ (‘ಆಶ್ರಯಾರ್ಥಿ’ ಎಂದ ಇಲ್ಲಿ ನಾನು ಅನುವಾದಿಸಿರುವೆ) ಬರುವ ಲೆವ್ಚೆವ್-ರ ಈ ಸಾಲುಗಳನ್ನು – ಪ್ರತಿಯೊಂದು ನಿಮಿಷಕ್ಕೂ / ಕತ್ತಲ ಕೋಣೆಗಳತ್ತ ಕೊಂಡೊಯ್ಯುವ / ಅದರದ್ದೇ ಗುಪ್ತ ದಾರಿಗಳಿವೆ – ನೆನಪಿಸುತ್ತದೆ. ಈ ಕವನಗಳನ್ನು ಓದುವಾಗ, ಅವುಗಳನ್ನು ರಚಿಸಿದ ಮೌನಗಳನ್ನು, ಮತ್ತು ಈ ಮೌನಗಳು ಹೇಗೆ ಒಂದೊಂದಾಗಿ ಬಂದು ಅಸಲಾದ ಮತ್ತು ಅಗತ್ಯವಾದ ಪದಗಳಾಗಿ ಒಟ್ಟು ಸೇರುವುದನ್ನು ನಾನು ಕೇಳಿಸಿಕೊಂಡಂತೆ ಅನಿಸಿತು ನನಗೆ.”

ನಾನು ಇಲ್ಲಿ ಕನ್ನಡಕ್ಕೆ ಅನುವಾದ ಮಾಡಿರುವ ವ್ಲದೀಮೀರ್ ಲೆವ್ಚೆವ್-ರ ಎಂಟು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ಹೆನ್ರಿ ಟೇಯ್ಲರ್ (Henry Taylor) ಹಾಗೂ ಕವಿ ವ್ಲದೀಮೀರ್ ಲೆವ್ಚೆವ್, ನಾಲ್ಕನೆಯ ಕವನವನ್ನು ಹೆನ್ರಿ ಟೇಯ್ಲರ್, ಐದು ಮತ್ತು ಆರನೆಯ ಕವನಗಳನ್ನು ಕವಿ ವ್ಲದೀಮೀರ್ ಲೆವ್ಚೆವ್, ಏಳನೆಯ ಕವನವನ್ನು ಥಿಯೊಡೋರಾ ಲಾಲೊವಾ (Theodora Lalova) ಹಾಗೂ ಎಂಟನೆಯ ಕವನವನ್ನು ಅಲಿಶಿಯಾ ಸುಸ್ಕಿನ್ ಓಸ್ಟ್ರಿಕರ್ (Alicia Suskin Ostriker) ಹಾಗೂ ಕವಿ ವ್ಲದೀಮೀರ್ ಲೆವ್ಚೆವ್ ಅವರುಗಳು ಮೂಲ ಬಲ್ಗೇರಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

1. ಆಶ್ರಯಾರ್ಥಿ
ಮೂಲ: The Refugee

1
ಪ್ರತಿಯೊಂದು ನಿಮಿಷಕ್ಕೂ
ಅದರದ್ದೇ ಅಗಣಿತ ಶಹರುಗಳಿವೆ,
ಆಕಾಶಗಳಿವೆ,
ಅಲ್ಪಕಾಲ ಬೆಳಗುವ ಮೋಡಗಳಿವೆ,
ಮುಳುಗುವ ಸೂರ್ಯ ಹೊತ್ತಿಸುವ ಕಿಟಕಿಗಳಿವೆ…
ಪ್ರತಿಯೊಂದು ನಿಮಿಷಕ್ಕೂ
ಕತ್ತಲ ಕೋಣೆಗಳತ್ತ ಕೊಂಡೊಯ್ಯುವ
ಅದರದ್ದೇ ಗುಪ್ತ ದಾರಿಗಳಿವೆ.

ಯಾರು ವಾಸವಾಗಿದ್ದಾರೆ ಅಲ್ಲಿ?
ಏನು ಹೇಳಿದ್ದಿರಬಹುದು ನಾವು ಒಬ್ಬರಿನ್ನೊಬ್ಬರನ್ನು ಕಂಡಾಗ?
ಹೇಗೆ ಬದುಕಿದ್ದಿರಬಹುದು ನಾವು ಅಲ್ಲಿ?

ಪ್ರತಿ ನಿಮಿಷ ನಾನು
ಚಿರಜೀವನದತ್ತ ಕೊಂಡೊಯ್ಯುವ
ಅಗಣಿತ ದ್ವಾರಗಳನ್ನು ಹಾದು ಹೋಗುವೆ …

2
ನನ್ನ ಆತ್ಮವೇ,
ನಮ್ಮ ಒಂಟಿತನದ ಬಗ್ಗೆ, ಅಂತ್ಯದ ಬಗ್ಗೆ
ಪಾಪ ಮಾಡಿದವರ ಅರಿವಿದೆ ನಮಗೆ.
ಮತ್ತೆ ನಮ್ಮ ಈ ಪಾಪ ಪ್ರಜ್ಞೆ ನಮ್ಮನ್ನು
ಸ್ವರ್ಗದಿಂದ ಹೊರಗಿರಿಸುತ್ತೆ.

ನಾವು ಅನಂತದೆಡೆಗೆ ಪಯಣಿಸಬಹುದಾಗಿದ್ದ
ನಿಮಿಷಗಳಿಂದ ಕಟ್ಟಿದ ರಸ್ತೆಗೆ ಅಡ್ಡವಾಗಿ
ಗಡಿಯಾರವು ತನ್ನ ಎರಡು ಖಡ್ಗಗಳನ್ನು ಏರಿಸುತ್ತೆ.

2. ನೆಲೆಬಿಟ್ಟ ಬದುಕು
ಮೂಲ: Exile

ಮಳೆ ಬಂದು ಹೋದ ಮೇಲೆ
ನನ್ನ ಕತ್ತಲ ಕೋಣೆಯ ನೆಲದ ಮೇಲೆ
ಸೂರ್ಯಬೆಳಕಿನ ಪಿರಮಿಡ್ ಒಂದು ಬಂದು ಬಿತ್ತು.
ನಾನು ಕಿಟಕಿಯಿಂದ ಹೊರಗೆ ನೋಡಿದೆ
ಪೂರ್ವದಲ್ಲಿ ಕಾಮನಬಿಲ್ಲೊಂದನ್ನು ಕಂಡೆ.

ಈ ಪಿರಮಿಡ್‌ನ ಬೆಳಕಿನಲ್ಲಿ
ನಾನು ಬಾಳಲು ಬಯಸುವೆ.
ಆಕಾಶದಲ್ಲಿರುವ ಈ ಸೇತುವೆ
ದೂರದಲ್ಲಿರುವ
ನನ್ನ ಮನೆಗೆ ಹೋಗುವ ದಾರಿ.

3. ಹೆರಿಂಗ್ ಗಲ್ ಹಕ್ಕಿಗಳು
ಮೂಲ: Herring Gulls

ಮುಸ್ಸಂಜೆಯ ಹೊತ್ತು ಕಡಲತೀರದಲ್ಲಿ
ಹೆರಿಂಗ್ ಗಲ್ ಹಕ್ಕಿಗಳು,
ನೀಳ ನೆರಳುಗಳ ಬೀರುವ ಬಿಳಿಯರಿವೆ
ತೊಟ್ಟ ಮುದುಕರಂತೆ,
ಜಂಬ-ನಡೆಯುತ್ತಾ, ತಮ್ಮ-ತಮ್ಮೊಳಗೆ ಹರಟೆಹೊಡೆಯುತ್ತವೆ.

ಅವುಗಳ ಭಾಷೆ ನಮಗೆ ಬರುವುದಿಲ್ಲ.
ಆದರೆ ನಾವು ಕೂತು ಕೇಳುತ್ತೇವೆ.

ಕನಸಿನಲ್ಲಿ ಬಂದಂತೆ ಸಮುದ್ರ ಆಗಮಿಸುತ್ತೆ
ನಾಟಕೀಯ ವರದಿಯೊಂದನ್ನು ಒಪ್ಪಿಸುತ್ತೆ.

ಗಾಳಿ, ಸೂರ್ಯಾಸ್ತ, ನಕ್ಷತ್ರಗಳು
ಇವುಗಳ ಭಾಷೆ ನಮಗೆ ಬರುವುದಿಲ್ಲ.
ಆದರೂ ನಾವು ಕೂತು ಕೇಳುತ್ತೇವೆ.

ಚಿಕ್ಕವರಿದ್ದಾಗ
ನಾವು “ಮುರಿದ ಟೆಲಿಫೋನ್” ಎಂಬ ಒಂದು ಆಟ ಆಡುತ್ತಿದ್ದೆವು.
ನಿನ್ನ ಕಿವಿಯಲ್ಲಿ ಒಬ್ಬ ಪದಗಳನ್ನು ಪಿಸುಗುಡುತ್ತಿದ್ದ,
ನೀನು ಆ ಪದಗಳ ಅರ್ಥ ಊಹಿಸಿ
ಮತ್ತೊಬ್ಬನಿಗೆ ಪಿಸುಗುಡಬೇಕು.

ಮೊದಲ ಪದ ಯಾವುದೆಂದು ನಮಗೆ ಗೊತ್ತಿಲ್ಲ.
ಆದರೆ ನಾವು ಕೂತು ಕೇಳುತ್ತೇವೆ.

ಹೀಗೆ ನಾವು ನಮ್ಮ ನಮ್ಮ ಸಮಾನಾಂತರ
ಲೋಕಗಳನ್ನು ಸೃಷ್ಟಿಸಿಕೊಳ್ಳುತ್ತೇವೆ.

* ಗಲ್ ಹಕ್ಕಿ – ಉದ್ದ ರೆಕ್ಕೆಯ, ಜಾಲಪಾದದ, ವಿಶೇಷವಾಗಿ ಕಡಲಂಚಿನಲ್ಲಿ ವಾಸಿಸುವ, ಸಾಮಾನ್ಯವಾಗಿ ಬಿಳಿ ಬಣ್ಣದ, ಮುತ್ತಿನ ಬಣ್ಣದಿಂದ ಹಿಡಿದು ಕಪ್ಪು ಬಣ್ಣದವರೆಗೂ ವಿವಿಧ ಬಣ್ಣದ ಮೈಹೊದಿಕೆಯುಳ್ಳ, ಹೊಳಪು ಕೊಕ್ಕಿನ ಕಡಲ ಹಕ್ಕಿಯ ಜಾತಿ. ಹೆರಿಂಗ್ ಗಲ್ ಹಕ್ಕಿಯ ಕುತ್ತಿಗೆ ಮತ್ತು ಬೆನ್ನಿಗೆ ಬೂದು-ಬೆಳ್ಳಿಯ ಹೊಳಪಿರುತ್ತದೆ, ಕೊಕ್ಕು ಕೆಂಪಾಗಿರುತ್ತರದೆ.

4. ಕೋಳಿ ಮತ್ತು ಮೊಟ್ಟೆ
ಮೂಲ: Hen and Egg

ಕೋಳಿಯೊಂದು ಬಾತುಕೋಳಿಯ
ಮೊಟ್ಟೆಗಳನ್ನು ಇಟ್ಟಿದೆ.
ಅವಳು ತನ್ನ ಮರಿಗಳನ್ನು ನದಿಯ
ಕಡೆಗೆ ನಡೆಸಿಕೊಂಡು ಹೋಗುತ್ತಾಳೆ.
ಹೇಳದೇ ಕೇಳದೆ ಮರಿಗಳು ನೀರಿನೊಳಗೆ
ಧುಮುಕಿ ಈಜಲಾರಂಭಿಸುತ್ತವೆ.
ಕೋಳಿಯು ರೆಕ್ಕೆಬಡಿಯುತ್ತಾ ನದಿಯ
ಬದಿಯಲ್ಲಿ ದಿಗಿಲಿನಿಂದ ಕ್ಲಕ್ಕಿಸುತ್ತದೆ.

ರಾತ್ರಿಯಲ್ಲಿ ನೀನು ನೀರ ಮೇಲೆ ನಡೆಯುವೆ,
ಅಥವಾ ಕೆಸರಿನಲ್ಲಿ ಕುಸಿಯುವೆ,
ಅಥವಾ ಹದಿನೈದನೆಯ ಮಹಡಿಯಿಂದ ಧುಮುಕುವೆ
ಬೆವರುತ್ತಾ, ನಿನ್ನನ್ನೇ ನೋಡಿ ನೀನು ಬೆದರುತ್ತಾ.

ನಿನ್ನ ಕನಸಿನಲ್ಲಿ ನೀನು ಯಾರಾಗಿರುವೆಯೋ
ಅದು ನಿನ್ನದಲ್ಲ.
ಅದು ನದಿಯಲ್ಲಿ ಧುಮುಕಿ ಈಜಿಕೊಂಡು ಹೋಗುತ್ತದೆ
ಯಾವುದೋ ಗೊತ್ತಿಲ್ಲದ ಭಾಷೆಯಲ್ಲಿ ಮಾತನಾಡುತ್ತಾ.

5. ಅಮರತ್ವ
ಮೂಲ: Immortality

ಚಂದ್ರನಿಲ್ಲದ ರಾತ್ರಿಯಲ್ಲಿ
ಹುಲ್ಲುಗಾವಲುಗಳ ಮೇಲೆ ಆಕಾಶದಲ್ಲಿ
ಗಾಳಿಯು ಖಾಲಿ ಪ್ಲಾಸ್ಟಿಕ್ ಚೀಲಗಳನ್ನು
ಚದುರಿಸುತ್ತದೆ.
ಅವು ದೆವ್ವಗಳ ಹಾಗೆ ಕಾಣಿಸುತ್ತವೆ.
ಆದರೆ ಅವು ಆತ್ಮವಿಲ್ಲದ ಜೀವಗಳು:
ಅವು ಎಂದೂ ಕೊಳೆತು ಹೋಗಲ್ಲ.

ಇದು ಮಾನವ ಅಮರತ್ವದ ಬಗ್ಗೆ
ಭವಿಷ್ಯಸೂಚಕ ಕನಸೇನು?

6. ತಂತಿ ಸಿದ್ಧಾಂತ
ಮೂಲ: The String Theory

ಸೂರ್ಯಾಸ್ತದ ಕಡೆಗೆ ಹೋಗುವ ಈ ರಸ್ತೆ
ಹುಲ್ಲುಮೈದಾನದ ಮೇಲೆ ಕಾಣುತ್ತಿರುವ ತಂತಿಯ
ಹಾಗೆ ಹೊಳೆಯುತ್ತಿದೆ.
ಅದರ ಪಕ್ಕದ ರಸ್ತೆ ಒಂದು ಕಾಂಕ್ರೀಟ್ ಕಟ್ಟಡದ
ನೆರಳಿನಲ್ಲಿದೆ –
ಕಟ್ಟಡದ ಕಿಟಕಿಗಳು ಪ್ರಕಾಶಮಾನವಾಗಿವೆ …
ನೀವು ಬಲಬದಿಯ ರಸ್ತೆಯನ್ನು ಹಿಡಿದರೆ
ಇಪ್ಪತ್ತು ವರ್ಷಗಳಲ್ಲಿ ನೀವು
ಎರಡು ಮೊಮ್ಮಕ್ಕಳ ಅಜ್ಜನಾಗುವಿರಿ.
ನೀವು ಎಡಬದಿಯ ರಸ್ತೆಯನ್ನು ಹಿಡಿದರೆ –
ಒಂದೇ ನಿಮಿಷದಲ್ಲಿ ಒಂದು ತಿಪ್ಪೆ-ಲಾರಿ ಬಂದು
ನಿಮ್ಮನ್ನು ಅಪ್ಪಳಿಸಿ ಹೋಗುತ್ತೆ.

ಮತ್ತೆ ನೀವು
ಕಣ್ಣು ಮುಚ್ಚಿಕೊಂಡು, ಜನವರಿ ತಿಂಗಳ
ವಸಂತಗಾಳಿಯನ್ನು ಆಘ್ರಾಣಿಸುತ್ತಾ,
ನಿಲ್ಲದೆ ಮುನ್ನೆಡೆದರೆ,
ಇಷ್ಟೊಂದು ಕೊಳಕು ತುಂಬಿದ ಚೌಕಗಳಲ್ಲಿ
ಯಾವುದನ್ನು ಆಯುವಿರಿ?

ನಿಮ್ಮ ಅಂತರ್ಬೋಧೆಯೇ ನಿಮ್ಮ
ಅತಿ ವಿಶ್ವಾಸಾರ್ಹ ಜಿ.ಪಿ.ಎಸ್. ಇಲ್ಲಿ.
ಆದರೆ ನೀವು ಎಲ್ಲಿಗೆ ಹೋಗುತ್ತಿದ್ದೀರೆಂದು
ನಿಮಗೆ ನಿಜವಾಗಿಯೂ ಗೊತ್ತಿಲ್ಲ …

ಜಾರು ರಸ್ತೆ, ಕೊರೆಯುವ ಛಳಿ,
ತಂತಿಯ ಮೇಲೆ ರಕ್ತಸೋರುವ ನಿನ್ನ ಬೆರಳುಗಳು …
ಆಲಿಕಲ್ಲುಮಳೆ, ಏಕಾಂತ, ಮತ್ತು ಕಸ …
ಯಾವ ಒಂದು ವಸ್ತುವೂ ಪರಿಪೂರ್ಣವಾಗಿಲ್ಲ!

ಮತ್ತೆ ನಿನಗೆ ಉಳಿದಿರುವುದೇನೆಂದರೆ,
ಸ್ವರ್ಗದಲ್ಲಿ ಎಲ್ಲಾ ತಂತಿಗಳೂ ಒಂದಾಗಿ
ಮೀಟುವುದೆಂಬ ನಂಬಿಕೆ ಮಾತ್ರ …

ನಿನಗೆ ಆಗಾಗ ಕೇಳಿಸುತ್ತದೆಯೇ
ಸೂರ್ಯಾಸ್ತದ ಕಡೆ ಮುಖಮಾಡಿದ
ಕಿಟಕಿಯೊಂದರಿಂದ ಬರುವ ಮರೆತುಹೋದ ಸಂಗೀತ?
ನಿನಗೆ ಆಗಾಗ ಕೇಳಿಸುತ್ತದೆಯೇ
ಆ ದಿವ್ಯ ಸಂಗೀತ?

7. ಮಂಗಳಗ್ರಹದಿಂದ ನೀರು
ಮೂಲ: Water from Mars

ಮಳೆ ಬಂದು ನನ್ನ ಕಿಟಕಿ ಬಾಗಿಲನ್ನು
ಬಡಿಯುತ್ತದೆ,
ನೆರಳುಗಳನ್ನು ಗಾಬರಿಪಡಿಸುತ್ತದೆ.
ಮಂಗಳಗ್ರಹದ ಆಕಾಶ
ತುಕ್ಕುಹಿಡಿದಂತಿದೆ, ಗುಲಾಬಿಯಾಗಿದೆ.
ಸೂರ್ಯ ಸಣ್ಣಗೆ ಕಾಣಿಸುತ್ತಿದೆ, ದೂರದಲ್ಲಿದೆ.
ರಾತ್ರಿಯಾಗುತ್ತಿದ್ದಂತೆ ಪೃಥ್ವಿ ಅಲ್ಲಿ ಮೇಲೆ ಕಣ್ಣು ಮಿಟುಕಿಸುತ್ತದೆ,
ಮರೆತೇಹೋಗಿದ್ದ ಏನೋ ಒಂದು ಬಂದು
ನನ್ನ ಕಿಟಕಿ ಬಾಗಿಲನ್ನು ಬಡಿಯುತ್ತದೆ.

8. ಲಕ್ಷಾಂತರ ಗುಬ್ಬಿಗಳು
ಮೂಲ: Millions of Sparrows

ಕಡು ಹಳದಿಯಾಗಿದ್ದಾನೆ ಸೂರ್ಯ.
ವಿಲೋ ಎಲೆಗಳು
ಕನ್ನಡಿಗಳಂತೆ ಮಿಂಚುತ್ತಿವೆ
ಬೆಳಗುವ ನೀರುಗಳ ಮೇಲುಗಡೆ.

ಸೂರ್ಯ ಉಬ್ಬುತ್ತಿದ್ದಾನೆ,
ಕೆಂಪಾಗುತ್ತಿದ್ದಾನೆ ಅಲ್ಲಿ ಪಶ್ಚಿಮದ ಕೆಳಗೆ ತಗ್ಗಿನಲ್ಲಿ.
ಅದೊಂದು ಅಂತರೀಕ್ಷನೌಕೆಯಾಗಿ ಮಾರ್ಪಡುತ್ತೆ.
ಲಕ್ಷಾಂತರ ಗುಬ್ಬಿಗಳು
ಇಳಿಯುತ್ತವೆ ನೌಕೆಯಿಂದ.

ನನ್ನನ್ನು ನೋಡಿ ಬೊಬ್ಬೆಹೊಡೆಯುತ್ತವೆ,
ಈ ಇಡೀ ಗ್ರಹ ಅಪಾಯದಲ್ಲಿದೆಯಂತೆ
ಮತ್ತೆ ಅದಕ್ಕೆ ನಾನೇ ಕಾರಣವಂತೆ.