ಆಕಾಶ್ ಮತ್ತು ಅಂಜಲಿಯೇ ಕಥೆಯ ಬಹು ಭಾಗದ ಕೇಂದ್ರ ಬಿಂದುವಾಗಿರುವುದರಿಂದ ಸಂಬಂಧದ ಪರಿಕಲ್ಪನೆ, ಶೂನ್ಯ ಪುರುಷ ಮೇಲರಿಮೆ, ಅವಳ ಖುಷಿಯಲ್ಲಿ ಅವನು ಕಾಣುವ ನೆಮ್ಮದಿ ಎಲ್ಲವೂ ಬದುಕಿಗೊಂದು ಮಾದರಿ. ಬಂಧಗಳು ಬಿಗಿಯಾಗುವುದೇ ತಾನು, ತನ್ನದೆಂಬ ಭಾವ ಶೂನ್ಯವಾಗಿ, ನಿನ್ನ ಸಂತಸವೇ ನನ್ನದು ಎಂಬ ಯೋಚನೆ ಮುನ್ನೆಲೆಗೆ ಬಂದಾಗ ಎಂದು ಸಾರುವ ಕಥೆಯ ತೆರೆಯ ಮೇಲಿನ ಚಿತ್ರಣವೇ ಮನ ಮಿಡಿಯುವಂಥದ್ದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಪ್ರಕಾಶ್ ನಿರ್ದೇಶನದ ‘ಮಿಲನ’ ಸಿನಿಮಾದ ವಿಶ್ಲೇಷಣೆ
ಕಣ್ಣಿಗೆ ಯಾರೂ ಕುಕ್ಕಿದರೂನು
ಕಂಬನಿ ತೊಡೆವುದು ಬೆರಳು
ಜೊತೆ ಇರುವವರೂ ತೊರೆದರೆ ಏನು
ಜೊತೆಗೆ ಬರುವುದು ನೆರಳು…
-ವಿಕಾಸ್ ನೇಗಿಲೋಣಿ
ಸಂಬಂಧಗಳೆಂದರೆ ಸಮಾರೋಪವಿರಬಾರದ ಸಮಾರಂಭ. ಭುವಿಯ ಬಿಟ್ಟಿರಲಾಗದ ಮಳೆ, ತೀರವ ಮರೆಯಲಾಗದ ಅಲೆ, ರವಿಯ ಗೈರು ಬಯಸದ ಚಂದಿರನಂತೆ, ಬಂಧಗಳೆಂದರೆ ಖಾಲಿಯಾಗದ ಒಲವು. ಹಿಡಿದ ಬೆರಳು, ಹೆಗಲ ಮೇಲಿನ ಕೈ, ಕಾಳಜಿಯ ಅಪ್ಪುಗೆ ಎಲ್ಲದರ ಹೂರಣವೇ ಈ ಅನುಬಂಧ. ಎರಡು ದೇಹ ಒಂದು ಆತ್ಮ ಎಂಬ ಭಾವದ ಪ್ರಸ್ತುತಿ. ಬಯಕೆಗಳು, ಆದ್ಯತೆಗಳು, ಇಷ್ಟ -ಕಷ್ಟಗಳಲ್ಲಿ ವಿಭಿನ್ನತೆಯಿದ್ದರೂ, ಹಾಲಿನೊಂದಿಗೆ ಕರಗುವ ಶರ್ಕರದಂತೆ, ಸಾಗರವ ನಿರಪೇಕ್ಷತೆಯಿಂದ ಸೇರುವ ನದಿಗಳಂತೆ ಎರಡು ಜೀವಗಳು ಪ್ರೇಮದ ಮಳೆಯಲ್ಲಿ ತೋಯುತ್ತಲೇ ಇರಬೇಕು, ಪೂರ್ಣ ವಿರಾಮವಿಲ್ಲದ ಹಾಡಿನಂತೆ. ಇಲ್ಲಿಯೂ ಗುಡುಗು ಮಿಂಚುಗಳಿರುತ್ತವೆ, ಸಾಂಗವಾಗಿ ಸಾಗುವ ಬಸ್ಸಿಗೆ ಅಡ್ಡಲಾಗಿ ಮಲಗಿರುವ ಉಬ್ಬುಗಳ ದರ್ಶನವಾದಾಗ, ಪಯಣಿಗನ ಮೇಲೆ ಒತ್ತಡ ಬೀಳುತ್ತದೆ. ಬಿಸಿ ಉಸಿರು, ಕತ್ತಲಿನ ಕನಸುಗಳು ಕಾಡುತ್ತವೆ. ಸಂಬಂಧಗಳ ಗಟ್ಟಿತನದ ಪರೀಕ್ಷೆಯಾಗುತ್ತದೆ. ಅದೆಲ್ಲವ ಎದುರಿಸಿ ‘ಎಂದೆಂದೂ ನಿನ್ನನು ಮರೆತು ನಾನಿರಲಾರೆ’ ಎಂಬ ಭಾವ ಸದಾ ಕಾಲ ಉಳಿದರೆ ಸಾಕು, ವಿಶಿಷ್ಟ ಶ್ರೇಣಿಯ ತೇರ್ಗಡೆ ಎಂದು ಮುದ್ರಣವಾಗುತ್ತದೆ ಆ ಪರೀಕ್ಷೆಯ ಅಂಕಪಟ್ಟಿಯಲ್ಲಿ. ಹೀಗೆ ಸಂಬಂಧಗಳ ಮಧ್ಯೆ ಸುಳಿಯಂತೆ ಬರುವ ಸಂಗತಿಗಳು, ಆಘಾತದಂತೆ ಅಪ್ಪಳಿಸಿದರೂ, ಒಂದು ನಿಸ್ವಾರ್ಥ ವ್ಯಕ್ತಿತ್ವದ ನಿಷ್ಕಲ್ಮಷ ಮನಸ್ಥಿತಿ ಹೇಗೆ ಕತ್ತಲು ಗೂಡು ಕಟ್ಟಿದ ಹೃದಯದೊಳಗೆ ಬೆಳಕಿನ ರಂಗು ಚೆಲ್ಲುತ್ತದೆ ಎನ್ನುವ ಆಶಯದ ಅನಾವರಣವೇ ಪ್ರಕಾಶ್ ನಿರ್ದೇಶನದ ‘ಮಿಲನ’.
ಅವನು ಆಕಾಶ್. ಆಕಾಶವಾಣಿ ಕೇಂದ್ರದಲ್ಲಿ ಆರ್ ಜೆ ಯಾಗಿ ಕಾರ್ಯನಿರ್ವಹಣೆ. ಅವಳು ಅಂಜಲಿ. ತಂದೆ ತಾಯಿಯಂದಿರು ನೋಡಿ ಮಾಡಿದ ಜೋಡಿಯದು. ಮದುವೆಯಾದ ನಂತರ ಕಹಿ ಸತ್ಯವೊಂದು ಆಕಾಶ್ ಕಿವಿಗೆ ಬೀಳುತ್ತದೆ. ಅಂಜಲಿಗೆ ಈ ಮದುವೆ ಎಳ್ಳಷ್ಟು ಇಷ್ಟವಿರುವುದಿಲ್ಲ. ಪೋಷಕರ ಒತ್ತಾಯಕ್ಕೆ ಮಣಿದು ಆದ ನಿರ್ಧಾರವಿದು. ತನಗೆ ಪ್ರಿಯಕರನಿದ್ದು, ಅವನೇ ಅಂಜಲಿಯ ಬಾಳಿನ ಪಾಲುದಾರನಾಗಬೇಕು ಎಂಬುದಾಗಿ ಆಕೆಯ ಬಯಕೆ. ಆದ್ದರಿಂದ ಆಕೆ ವಿಚ್ಚೇದನದ ಬೇಡಿಕೆಯಿಡುತ್ತಾಳೆ ಆಕಾಶ್‌ನ ಬಳಿ. ಆದರೆ ಈ ವಿಚಾರ ಹಿರಿಯರಿಗೆ ತಿಳಿಯದೆ ಗೌಪ್ಯವಾಗಿಯೂ ಇರಿಸಬೇಕಾಗಿರುತ್ತದೆ. ಇವೆಲ್ಲವ ಅರಗಿಸಿಕೊಳ್ಳಲು ಕಠಿಣವಾದರೂ ಆಕಾಶ್ ಅವಳ ಮಾತಿಗೆ ಒಪ್ಪಿಗೆ ಸೂಚಿಸುತ್ತಾನೆ. ಬೇರ್ಪಡುವ ಕ್ರಮಗಳನ್ನು ಆರಂಭಿಸಿಕೊಂಡು, ಅವಳ ಪ್ರಿಯಕರನನ್ನು ಹುಡುಕಿ ಕೊಡುವ ಕೆಲಸವೂ ಆತನೇ ಹೊತ್ತುಕೊಳ್ಳುತ್ತಾನೆ. ಯಾವ ಅಹಂಕಾರ, ಸ್ವಪ್ರತಿಷ್ಠೆಯ ಹಂಗಿಗೆ ಬೀಳದ ಆಕಾಶ್, ಅಂಜಲಿಯನ್ನು ದೇವತೆಯ ತೆರನಾಗಿ ನೋಡಿಕೊಳ್ಳುತ್ತಾನೆ. ಅವಳೆಷ್ಟೇ ಕೋಪಗೊಳ್ಳಲಿ, ಬೇಸರ ಪಡಲಿ, ತನ್ನ ಬದುಕು ಮೂರಾಬಟ್ಟೆಯಾಗಿದೆ ಈ ಒಲ್ಲದ ಮದುವೆಯ ಸಂಕೀರ್ಣತೆಯಿಂದ ಎಂದು ಯೋಚಿಸದೆ, ಸದಾ ಕಾಲ ನಗುವಿನ ಮಳೆ ಹರಿಸಿ ಅವಳಿಗೆ ಚೈತನ್ಯದ ಹಸಿರು ತುಂಬುವ ಕೆಲಸ ಮಾಡುತ್ತಾನೆ. ಈ ನಗುವಿನ ಹಿಂದೆಯೂ ಅವನು ಕಳೆದುಕೊಂಡ ಪ್ರೀತಿಯ ನೆರಳಿರುತ್ತದೆ. ಆದರೆ ಒಮ್ಮೆ ಅಂಜಲಿ ತನ್ನ ಧರ್ಮಪತ್ನಿ ಎಂದಾದ ಮೇಲೆ ಆ ಪ್ರೀತಿಯೆಲ್ಲವೂ ಕೇಂದ್ರೀಕೃತಗೊಂಡಿದ್ದು ಅವಳ ಮೇಲೆಯೇ.
ಮುಂದೆ ಹೇಮಂತ್ ಉರುಫ್ ಅಂಜಲಿಯ ಪ್ರಿಯತಮನ ಪುನರಾಗಮನ ಅಂಜಲಿಯ ಬಾಳಿಗಾಗುವಂತೆ ಮಾಡುತ್ತಾನೆ ಆಕಾಶ್. ಆದರೆ ಹೇಮಂತ್, ಪ್ರೀತಿಯೆಂಬ ಕೊಂಬೆಯ ಹಿಡಿದು ನಾಟಕವಾಡಿದ ಕುಕ್ಕುವ ಹದ್ದಾಗಿರುತ್ತಾನೆ. ಆತನ ಮುಖವಾಡ ಕಳಚಿ ಬೀಳುತ್ತಿದ್ದಂತೆಯೇ, ಅಂಜಲಿ ಬದುಕಿನ ಬಗ್ಗೆ ಜಿಗುಪ್ಸೆ ಹೊಂದಿ ಉಸಿರು ನಿಲ್ಲಿಸುವ ಯತ್ನವ ಮಾಡುತ್ತಾಳೆ. ಸಮಯಕ್ಕೆ ಸರಿಯಾಗಿ ಆಗಮಿಸಿದ ಆಕಾಶ್, ಅವಳ ಈ ಕೃತ್ಯವ ಖಂಡಿಸಿ, ಭಾವನಾತ್ಮಕ ಬೆಂಬಲವ ಧಾರೆಯೆರೆಯುತ್ತಾನೆ. ಅನಿಯಮಿತ ಪ್ರೇಮ, ಎಂದೂ ಜೊತೆಯಾಗದ ಪುರುಷಹಂಕಾರ, ಕೋಪ, ತಾಪ, ಆಕ್ರೋಶಗಳು ಇಲ್ಲದ ಪದಕೋಶದಂತಿದ್ದ ಆಕಾಶ್ ವ್ಯಕ್ತಿತ್ವ ಅಂಜಲಿಗೆ ಅನುದಿನವೂ ತುಸು ಮೆಲ್ಲಗೆ ಇಷ್ಟವಾಗುತ್ತಿದ್ದರೂ, ವಿಚ್ಛೇದನದ ನಿರ್ಣಯದಿಂದ ಹಿಂದೆ ಸರಿಯಲು ಸಾಧ್ಯವಾಗಲಿಲ್ಲ. ತನ್ನಲ್ಲಿ ಹುಟ್ಟಿದ ಒಲವನ್ನು, ಅವನೇ ಗಮನಿಸಿ ಹೃದಯದ ಬಾಗಿಲ ಮರುತೆರೆಯಬೇಕು ಎಂಬ ಬಯಕೆ ಅವಳದು. ಕೊನೆಗೆ ವಿಚ್ಚೇದನ ಮಂಜೂರಾಗುತ್ತದೆ. ನ್ಯಾಯಾಲಯದಿಂದ ತಡೆಗೋಡೆ ಬೀಳುತ್ತಲೇ, ಅಂಜಲಿ ವಿದೇಶಕ್ಕೆ ಓದಲೆಂದು ತೆರಳಲು, ವಿಮಾನ ನಿಲ್ದಾಣದತ್ತ ಸಾಗುತ್ತಾಳೆ. ‘ಮಳೆ ನಿಂತು ಹೋದ ಮೇಲೆ, ಹನಿಯೊಂದು ಮೂಡಿದೆ’ ಎಂಬಂತೆ ಹಾಡಿನ ಪಲ್ಲವಿ ಮುಗಿದರೂ, ಮತ್ತೆ ತನ್ನ ಆಕಾಶ್ ಪಲ್ಲವಿಯಿಂದ ಆರಂಭಿಸಬಹುದು ಎಂಬ ಭರವಸೆ ಅವಳದು. ಅತ್ತ ಆಕಾಶ್‌ನ ತನ್ನ ಇಷ್ಟದ ಸ್ನೇಹಿತೆ ತೊರೆದ ನೋವಿನ ನಿರ್ವಾತದಲ್ಲಿ ಸಾಗುತ್ತಿರುವಾಗ ಕಿಟಕಿಯ ಸಂದಿನಿಂದ ಒಳಗಿಣುಕಿದ ಬೆಳಕಿನ ಕಣ್ಣೋಟದಂತೆ, ಅಂಜಲಿ ಅಂತಿಮ ವಿಚ್ಛೇದನದ ಅರ್ಜಿಯಲ್ಲಿ ‘ಅಂಜಲಿ ಆಕಾಶ್’ ಎಂದು ಸಹಿ ಹಾಕಿರುವುದು ನೆನಪಾಗುತ್ತದೆ. ಇನ್ನೂನು ಉಳಿದಿದೆ ಒಲವು, ಮಳೆಗಾಲದಲ್ಲಿ ಬಂದು ಬಾಗಿಲು ತಟ್ಟುವ ಬಿಸಿಲಕೋಲಿನಂತೆ ಎಂದು, ಮುಗಿದ ಕಥೆಗೆ ತಾಜಾ ಆರಂಭವ ನೀಡಲು ಆಕಾಶ್ ವಿಮಾನದ ನಿಲುಗಡೆಯತ್ತ ದಾಪುಗಾಲಿಡುತ್ತಾನೆ. ಅತ್ತ ವಿಮಾನ ಆಕಾಶವ ಅಪ್ಪಿಕೊಂಡರೆ, ಇತ್ತ ಅಂಜಲಿ ಆಕಾಶನ ‘ಅಪ್ಪು’ಗೆಯ ವಶವಾಗುತ್ತಾಳೆ. ಹೀಗೆ ಸಂಬಂಧಗಳು ಮುಗಿಯದ ನೆನಪುಗಳಂತೆಯೇ ಸದಾ ಚಿರಂತನ, ಚಿರ ನೂತನ ಎಂದುಸುರುವ ಸಾದೃಶ್ಯವೇ ‘ಮಿಲನ’.
ಸಾಮಾನ್ಯವಾಗಿ, ಕಮರ್ಷಿಯಲ್ ಚಿತ್ರಗಳೆಂದರೆ ಸಿನಿಮಾ ವಿಮರ್ಶಕ-ವ್ಯಾಮೋಹಿಗಳಲ್ಲಿ ಒಂದು ಸಣ್ಣ ಆಕ್ಷೇಪವಿರುತ್ತದೆ. ಸೂತ್ರಕ್ಕೆ ಕಟ್ಟಿಬದ್ಧವಾದ ಕಥೆಗಳು ಅಲ್ಲಿರುತ್ತವೆ. ಮೂರರಿಂದ ನಾಲ್ಕು ಹೊಡೆದಾಟ, ಮರ ಸುತ್ತುವ ಹಾಡುಗಳು, ಕೃತಕ ಭಾವನಾತ್ಮಕತೆ ಇತ್ಯಾದಿ. ಆದರೆ ‘ಮಿಲನ’ ಚಿತ್ರದಲ್ಲಿ ಹಾಡುಗಳು, ಹೊಡೆದಾಟಗಳಿದ್ದರೂ, ಕಥೆ ಹೇಳುವ ವಿಷಯದ ಮಹತ್ವವನ್ನು ಅವು ಆಕ್ರಮಿಸಿಕೊಳ್ಳುವುದಿಲ್ಲ. ಆಕಾಶ್ ಮತ್ತು ಅಂಜಲಿಯೇ ಕಥೆಯ ಬಹು ಭಾಗದ ಕೇಂದ್ರ ಬಿಂದುವಾಗಿರುವುದರಿಂದ ಸಂಬಂಧದ ಪರಿಕಲ್ಪನೆ, ಶೂನ್ಯ ಪುರುಷ ಮೇಲರಿಮೆ, ಅವಳ ಖುಷಿಯಲ್ಲಿ ಅವನು ಕಾಣುವ ನೆಮ್ಮದಿ ಎಲ್ಲವೂ ಬದುಕಿಗೊಂದು ಮಾದರಿ. ಬಂಧಗಳು ಬಿಗಿಯಾಗುವುದೇ ತಾನು, ತನ್ನದೆಂಬ ಭಾವ ಶೂನ್ಯವಾಗಿ, ನಿನ್ನ ಸಂತಸವೇ ನನ್ನದು ಎಂಬ ಯೋಚನೆ ಮುನ್ನೆಲೆಗೆ ಬಂದಾಗ ಎಂದು ಸಾರುವ ಕಥೆಯ ತೆರೆಯ ಮೇಲಿನ ಚಿತ್ರಣವೇ ಮನ ಮಿಡಿಯುವಂಥದ್ದು. ಬದುಕಿನ ಪ್ರಮುಖ ಅಂಗವಾದ ಸಂಸಾರದಲ್ಲಿ, ಅನಂತ ವೈರುಧ್ಯಗಳ ಮಧ್ಯೆಯೂ, ಎರಡು ಜೀವಗಳು ಪರಸ್ಪರರ ಖುಷಿಗಾಗಿ ತನ್ನ ಸಮಯ ಮೀಸಲಿಟ್ಟರೆ ಸಾಕು, ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತಬೇಕಿಲ್ಲ ಎಂದು ಸೊಗಸಾಗಿ ಪಾಠ ಹೇಳಿ ಕೊಡುತ್ತದೆ ಈ ಚಿತ್ರ.
ಸಮಾಜದ ಸರ್ವ ವರ್ಗಕ್ಕೂ ಪ್ರಿಯವಾಗುವ, ಆದರ್ಶವ ಹೇಳುವ ಕಥೆಯ ಸೂತ್ರಧಾರ ಪ್ರಕಾಶ್ ಪ್ರಶಂಸಾರ್ಹರು. ಏಕೆಂದರೆ, ಸಿನಿಮಾ ಬಿಡುಗಡೆಯಾಗಿ, ವರುಷದ ಮೇಲೆ ಚಿತ್ರಮಂದಿರಗಳನ್ನು ಆಳಿ, 17 ಸಂವತ್ಸರಗಳು ದಾಟಿದರೂ, ಇಂದಿಗೂ ಜನರು ಅದೇ ಆಸ್ಥೆಯಿಂದ ಚಿತ್ರವನ್ನು ದೂರದರ್ಶನದಲ್ಲಿ ಮರಳಿ ಮರಳಿ ವೀಕ್ಷಿಸುತ್ತಾರೆ ಎಂದರೆ ಚಿತ್ರದ ಒಟ್ಟು ಪರಿಣಾಮದ ಗುರುತ್ವ ಅದೆಷ್ಟರ ಮಟ್ಟಿಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಚಿತ್ರದ ಪಾತ್ರವರ್ಗದಲ್ಲಿ ಆಕಾಶ್ ಆಗಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಆತ್ಯಂತಿಕ ಅಭಿನಯ. ಮೃದು ಮನಸ್ಸು ಮತ್ತು ನಗು ವ್ಯಕ್ತಿತ್ವದಲ್ಲಿ ಅಡಕವಾಗಿರುವುದರಿಂದ ಆಕಾಶನ ಪಾತ್ರಕ್ಕೆ ಹೆಚ್ಚು ಶ್ರಮದ ಅಗತ್ಯವಿರಲಿಲ್ಲ. ಇವರಿಗೆ ಸಮನಾಗಿ ನಟಿಸಿರುವುದು ಮತ್ತು ಮನಸೆಳೆಯುವುದು ಅಂಜಲಿಯಾಗಿ ಪಾರ್ವತಿ ತಿರುವೊತ್ತು ತಮ್ಮ ಸರಳ ಸಹಜ ಅಭಿವ್ಯಕ್ತಿಯಿಂದ. ನೈಜ ಜೋಡಿಯೇನೋ ಎಂದು ಭಾಸವಾಗುವಂತೆ ಮಾಡುವ ನಟನೆ ಈರ್ವವರದ್ದು ಎಂದರೆ ಸಮರ್ಪಕವಾದೀತೇನೋ. ಈ ಕಥೆಯ ಪಯಣಕ್ಕೆ, ಸೊಬಗಿನ ಅಲಂಕಾರ ಮನೋ ಮೂರ್ತಿ ಸಂಗೀತ, ಜಯಂತ ಕಾಯ್ಕಿಣಿ ಸಾಹಿತ್ಯ. ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ’, ‘ನೀನೆ ನೀನೆ’, ‘ಕಿವಿ ಮಾತೊಂದು ಹೇಳುವೆ ನಾನಿಂದು’, ‘ನಿನ್ನಿಂದಲೇ ಕನಸೊಂದು ಶುರುವಾಗಿದೆ’, ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ’ ಹೀಗೆ ಎಲ್ಲಾ ಹಾಡುಗಳು ಪೈಪೋಟಿಗೆ ಬಿದ್ದ ಪೋರರ ಪ್ರದರ್ಶನದಂತೆ, ಒಂದಕ್ಕಿಂತ ಒಂದು ಕರ್ಣಕ್ಕೆ ಆನಂದ. ಅಂದು ‘ಬಂಗಾರದ ಮನುಷ್ಯ’ ಚಿತ್ರವನ್ನು ನೋಡಿ ಅದೆಷ್ಟೋ ಮಂದಿ ರೈತರಾದರಂತೆ. ಅದೇ ರೀತಿ ‘ಮಿಲನ’ ಚಿತ್ರವನ್ನು ನೋಡಿದರೆ, ಸಂಬಂಧಗಳನ್ನು ಸೆರೆಮನೆ ಮಾಡಿಕೊಂಡವರ ಬದುಕು ಬದಲಾಗಬಹುದು ಎಂದರೆ ಅತಿಶಯೋಕ್ತಿಯಲ್ಲ.
ಮುಗಿಸುವ ಮುನ್ನ:
‘ಸಂ’ಸಾರಗಳು, ‘ಸಂ’ಬಂಧಗಳಲ್ಲಿ ‘ಸಂ’ಕಟಗಳು ಮತ್ತು ‘ಸಂ’ತಸಗಳ ಆಗಮನ, ನಿರ್ಗಮನ ಸಾಮಾನ್ಯ. ಆದರೆ, ಸಂಬಂಧಗಳು ಎಂದೂ ಮುಗಿಯದ ಸಮಸ್ಯೆಯಾಗಬಾರದು. ಜಾಮೀನು ದೊರೆಯದ ಸೆರೆಮನೆವಾಸವೂ ಆಗಬಾರದು. ಬದಲಾಗಿ, ಎಲ್ಲಾ ತೆರನಾದ ಭಿನ್ನತೆ, ವೈರುಧ್ಯಗಳ ನಡುವೆ ಹೊಂದಾಣಿಕೆಯೆಂಬ ಹೊದಿಕೆಯನ್ನೆಳೆದು, ನೀ ಎನಗೆ, ನಾ ನಿನಗೆ ಎನ್ನುತ್ತಾ ಬಾಳುವಂತಾಗಬೇಕು ನಾನು ಎಂಬ ಅಹಂ ಅನ್ನು ಅಳಿಸುತ್ತಾ …
ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….
ನಿಮ್ಮ ಗದ್ಯವೂ ಪದ್ಯದಂತೆ ಹೃದ್ಯವಾಗಿದೆ. ಎಲ್ಲಾ ವಿಮರ್ಶೆಗಳನ್ನು ಓದುತ್ತೇವೆ ನಾವು ದಂಪತಿಗಳು. ಬಹಳ ಖುಷಿಯಾಗುತ್ತದೆ. ಕಾರಣ ನೀವು ವಿಮರ್ಶಿಸಿದ ಎಲ್ಲಾ ಕನ್ನಡ ಸಿನಿಮಾಗಳು ನೋಡಲು ಕಾತರಿಸಿ ನೋಡಿ ಸಂತಸಪಟ್ಟಿರುವಂತದ್ದು. ಶುಭವಾಗಲಿ. ಹೀಗೆ ಮುಂದುವರೆಯಲಿ ನಿಮ್ಮ ಕಾಯಕ.