ಇಂತಹ ಕಥನಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾದುದು. ಸ್ವಲ್ಪ ಎಡವಟ್ಟಾದರೆ ಕತೆ ಹೋಗಿ ಪ್ರಬಂಧವಾಗಿ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಅನಿಲ್ ಗುನ್ನಾಪೂರ ತಮ್ಮ ಮೊದಲ ಕಥಾ ಸಂಕಲನದಲ್ಲಿ ಇಂಥದ್ದೊಂದು ಅಪಾಯಕಾರಿ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇಲ್ಲಿನ ಕತೆಯ ನಿರೂಪಕನೊಂದಿಗೆ,  ತಮ್ಮನ್ನು ಸಮೀಕರಿಸಿಕೊಂಡಂತಿರುವ ಲೇಖಕನ ಕುತೂಹಲ, ಅವನ ಗೆಳೆಯ ಗೌತಮನ ದಿಟ್ಟತನ ಹಾಗೂ ಮುದುಕಿಯ ಅಂತಃಕರಣ ಈ ಮೂರರ ಹದವಾದ ಮಿಶ್ರಣ ಕತೆಗೆ ಒಂದು ತೆರನಾದ ನಯಗಾರಿಕೆಯನ್ನು ತಂದುಕೊಟ್ಟಿವೆ.
ಅನಿಲ್‌ ಗುನ್ನಾಪೂರ ಬರೆದ ‘ಕಲ್ಲು ಹೂವಿನ ನೆರಳು’ ಹೊಸ ಕಥಾಸಂಕಲನಕ್ಕೆ ಚನ್ನಪ್ಪ ಕಟ್ಟಿ ಬರೆದ ಮಾತುಗಳು

 

ಅನಿಲ್ ಗುನ್ನಾಪೂರ ಎನ್ನುವ ಯುವಪ್ರತಿಭೆ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನದ ಮೂಲಕ ಕಥಾಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ. ಇವರು ಕಲಿತದ್ದು ವಿಜ್ಞಾನ ವಿಷಯ. ಬಿ.ಇ. ಓದುತ್ತಿರುವಾಗಲೇ ಸರಕಾರಿ ಭೂಮಾಪನ ಇಲಾಖೆಯಲ್ಲಿ ಉದ್ಯೋಗ ದೊರಕಿಸಿಕೊಂಡು ಸಾಹಿತ್ಯದ ಒಲವು ಬೆಳೆಯಿಸಿಕೊಂಡು ‘ಗುಬ್ಬಚ್ಚಿ ಗೂಡಿನಲ್ಲಿ’ ಕವನ ಸಂಕಲನದ ಮೂಲಕ ಕವಿಯಾಗಿ ಗುರುತಿಸಿಕೊಂಡವರು. ತಮ್ಮ ಇತ್ತೀಚಿನ ನಾಲ್ಕಾರು ವರ್ಷಗಳಲ್ಲಿ ಆಗಾಗ ಬರೆದ ಎಂಟು ಕತೆಗಳನ್ನು ಸೇರಿಸಿ ‘ಕಲ್ಲು ಹೂವಿನ ನೆರಳು’ ಹೆಸರಿನಲ್ಲಿ ಪ್ರಕಟಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಅನಿಲ್ ಗುನ್ನಾಪೂರ ಅವರು ತಮ್ಮ ಬಾಲ್ಯದ ದಿನಗಳಲ್ಲಿ ಪಡೆದ ಹಸಿರಾದ ಅನುಭವ ಲೋಕವನ್ನು ಈ ಸಂಕಲನದ ಮೂಲಕ ಓದುಗರ ಮುಂದೆ ಹಿಡಿದು ನಿಂತಿದ್ದಾರೆ. ಇಲ್ಲಿ ವಾಸ್ತವದ ನಿಗಿ ನಿಗಿ ಬೆಂಕಿಯೂ ಇದೆ; ಇಲ್ಲಿ ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿ ಹಾಡುವ ಬೆಳಕೂ ಇದೆ. ಇಲ್ಲಿನ ಘಟನೆಗಳಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಆ ಭಾಗದ ನೆಲದ ಮಣ್ಣಿನ ಘಮಲು ಇದೆ. ಆ ಘಮಲಿಗೆ ಗುಂಗು ಹಿಡಿಸುವ ತಾಜಾತನವಿದೆ. ತಮ್ಮ ತಾಜಾತನದಿಂದ ಅವೆಲ್ಲಾ ಓದುಗನ ಸ್ಮೃತಿಯಲ್ಲಿ ಬಹುಕಾಲದವರೆಗೆ ಗಂಧವನ್ನು ಸೂರೆಗೊಳ್ಳುತ್ತಲೇ ಇರುವಂಥವಾಗಿವೆ. ಹೀಗೆ, ಹೊಸ ಘಮಲಿನೊಂದಿಗೆ ಕಥಾಸಾಹಿತ್ಯ ಲೋಕ ಪ್ರವೇಶಿಸುತ್ತಿರುವ ಅನಿಲ್ ಗುನ್ನಾಪೂರ ಅವರಿಗೆ ಪ್ರೀತಿಯ ಸ್ವಾಗತವನ್ನು ಕೋರುತ್ತೇನೆ.

(ಅನಿಲ್‌ ಗುನ್ನಾಪೂರ)

ಈ ಸಂಕಲನದ ಬಹುಪಾಲು ಕತೆಗಳ ಕೇಂದ್ರದಲ್ಲಿ ಮುಗ್ಧಮಕ್ಕಳಿದ್ದಾರೆ. ಅವರು ತಮ್ಮ ಸುತ್ತಲಿನ ಬದುಕಿನ ಅವಘಡಗಳೊಂದಿಗೆ ಮುಖಾಮುಖಿ ಮಾಡಿಕೊಂಡು ಪ್ರಬುದ್ಧರಾಗುತ್ತ ಹೋಗುತ್ತಾರೆ. ಅನಿಲ್ ಗುನ್ನಾಪೂರ ಅವರು ತಮ್ಮ ಸ್ವಾನುಭವದ ಕತೆಗಳನ್ನು ಓದುಗನೊಂದಿಗೆ ಎದುರಾಬದರು ಕುಳಿತು ಹೇಳಿಕೊಂಡಷ್ಟು ಆಪ್ತತೆ ಇಲ್ಲಿನ ಕತೆಗಳಲ್ಲಿದೆ.  ಅವರ ಸಂಪರ್ಕದಲ್ಲಿ ಬಂದ ಯಾರಾದರೂ ಅವರ ಕೂಸಿನಂತಹ ಮುಗ್ಧಸ್ವಭಾವವನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ ಮುಗ್ಧತೆಯ ನೆಲೆಯಿಂದಲೇ ತಮ್ಮ ಸುತ್ತಲಿನ ಬದುಕನ್ನು ಗ್ರಹಿಸಲು ಹಾಗೂ ಅಭಿವ್ಯಕ್ತಿಸಲು ಅವರು ಹವಣಿಸುತ್ತಾರೆ ಎನ್ನುವುದು ಸುಸ್ಪಷ್ಟ. ಅಷ್ಟೇ ಆಗಿದ್ದರೆ ಅದೊಂದು ಮಿತಿಯಾಗಿ ಉಳಿದುಬಿಡುತ್ತಿತ್ತು. ಆದರೆ ಬಾಹ್ಯದಲ್ಲಿ ಗೋಚರಿಸುವ ಮುಗ್ಧತೆಯ ಹಿಂದೆ ಬದುಕಿನ ಆಳಕ್ಕೆ ಇಳಿದು ತಳದಲ್ಲಿ ತೋಳಿಗೆ ತೋಳು ಬೆಸೆದುಕೊಂಡು ಅಡಗಿಕುಳಿತಿರುವ ಬೆಂಕಿ ಬಿರುಗಾಳಿ, ಬೆಳದಿಂಗಳು ತಂಗಾಳಿ- ಎಲ್ಲವನ್ನೂ ಪಾತಾಳ ಗರಡಿಯ ಮೂಲಕ ಹೆಕ್ಕಿ ತೆಗೆಯಬಲ್ಲರು. ವಾಸ್ತವವನ್ನು ಮುಗ್ಧತೆಯ ಕಣ್ಣುಗಳಿಂದ ಗ್ರಹಿಸುವ ಅವರು ವಾಸ್ತವ ಲೋಕದ ಕೆಂಡದ ಎದುರಿಗೆ ತಲ್ಲಣಿಸುವ, ಹುರುಪಳಿಸಿ ಹೋಗುವ, ದಿಗಿಲುಗೊಳ್ಳುವ, ಎಚ್ಚರಗೊಳ್ಳುವ, ಹೆಚ್ಚು ಹೆಚ್ಚು ಪ್ರಬುದ್ಧರಾಗುವ- ಹೀಗೆ ವಿವಿಧ ಆಯಾಮಗಳಿಗೆ ಅವರು ತೆರೆದುಕೊಳ್ಳುತ್ತಾರೆ. ಹೀಗಾಗಿ, ತೆರೆದ ತೋಳಿನಿಂದ ಅಪ್ಪಿಕೊಳ್ಳಲು ಹಂಬಲಿಸುವ ಮುಗ್ಧಲೋಕದ ಕೋಮಲತೆಯನ್ನು ಬಾಲಕರ ನೆಲೆಯಿಂದ ಕಾಣಿಸುವ ಕತೆಗಳು ಇಲ್ಲಿವೆ. ಅವುಗಳ ಜೊತೆಗೆ ಹಿರಿದ ಕತ್ತಿಯ ಅಲಗನ್ನು ಝಳಪಿಸುತ್ತ ದಾಳಿಯಿಡುವ ವಾಸ್ತವದ ರೂಕ್ಷತೆಯನ್ನು ಬಿಂಬಿಸುವ ಕತೆಗಳೂ ಇಲ್ಲಿವೆ. ಮೊದಲ ಸಂಕಲನದ ಮೂಲಕವೇ ಕೇಡು ಹಾಗೂ ಕರುಣೆ ಎರಡನ್ನೂ ಸಮಚಿತ್ತದಿಂದ ಗ್ರಹಿಸಿ ಬರೆಯಲು ಹೊರಟಿರುವ ಅನಿಲ್ ಗುನ್ನಾಪೂರ ಪಳಗಿದ ಕತೆಗಾರನಂತೆ ಗೋಚರಿಸುತ್ತಾರೆ.

‘ಗುಲ್ ಮೊಹರ್ ಹುಡುಗ’ ಕತೆಯೊಂದರಲ್ಲಿ ಮಾತ್ರ ಮಕ್ಕಳ ಮುಗ್ಧಲೋಕವು ಘಾಸಿಗೊಳ್ಳದೆ ಅಖಂಡವಾಗಿ ಉಳಿದಿರುವಂತೆ ಚಿತ್ರಿತವಾಗಿದೆ. ಈ ಕತೆಯ ಪುಟ್ಟಬಾಲಕಿ ಪೂರ್ವಿ ಮತ್ತು ಹತ್ತುಹನ್ನೊಂದು ವರ್ಷದ ಬಾಲಕನ ನಡುವೆ ಅರಳಿಕೊಳ್ಳುವ ಅಂತಃಕರಣವು ಆದರ್ಶದ ಲೇಪನ ಮಾಡಿಕೊಂಡೇ ಗೋಚರಿಸುತ್ತದೆ. ಈ ಕತೆಯಲ್ಲಿ ಗಂಡ ಅರವಿಂದ ಮತ್ತು ಹೆಂಡತಿ ನಳಿನಿಯರ ಮಧ್ಯ ಒಂದಿಷ್ಟು ಘರ್ಷಣೆ ಇದೆಯಾದರೂ ಅದು ಮಕ್ಕಳ ಮನಸ್ಸಿನ ಮೇಲೆ ಯಾವುದೇ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಅದು ಪ್ರತ್ಯೇಕ ಘಟನೆಯಾಗಿಯೇ ಉಳಿಯುತ್ತದೆ. ಹೀಗೆ ಪೂರ್ವಿ ಹಾಗೂ ಗುಲ್ ಮೊಹರ್ ಹುಡುಗನ ಮಧ್ಯ ಒಡಮೂಡುವ ಮುಗ್ಧಲೋಕ ಅಬಾಧಿತವಾಗಿಯೇ ಉಳಿಯುತ್ತದೆ. ‘ಕಮಲಜ್ಜಿ’ ಕತೆಯಲ್ಲಿಯೂ ಮುಗ್ಧ ಮಕ್ಕಳಿದ್ದಾರೆ. ಆದರೆ ಅವರು ಕಥಾ ಕೇಂದ್ರದ ಪರಿಧಿಯಲ್ಲಿಯೇ ಸುಳಿದಾಡುತ್ತಾರೆ. ತಾಯಿ ಕಮಲಜ್ಜಿಯ ಅನಾರೋಗ್ಯ, ಬಡತನ, ಉತ್ತಮ ಫಸಲು ನೀಡದ ಭೂಮಿ, ಉದ್ಯೋಗ ಅರಸಿ ಬೆಂಗಳೂರು ಸೇರಿದ ಮಗ ಪ್ರಕಾಶ ಇವರ ಸಂಕಟಗಳು ಮಕ್ಕಳಾದ ರವಿ ಹಾಗೂ ಚಿನ್ನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಉಳಿದಂತೆ ಬೇರೆ ಕತೆಗಳಲ್ಲಿ ಮಕ್ಕಳ ಕನಸಿನ ಲೋಕವು ವಾಸ್ತವ ಲೋಕದ ಆಘಾತಕ್ಕೆ ತುತ್ತಾಗುತ್ತಲೇ ಇರುವುದು ಕಂಡುಬರುತ್ತದೆ. ‘ಪರಿಮಳ’ ಪಮ್ಮಿಯ ಮಗ್ಧತೆಯ ನಾಶದ ಕತೆಯನ್ನು ಕಲಾತ್ಮಕವಾಗಿ ತೆರೆದಿಡುತ್ತದೆ. ತಿನ್ನಲು ಮೆಕ್ಕಿತೆನಿ ಕೊಡದ ಕಾರಣದಿಂದ ಪಮ್ಮಿಯೊಂದಿಗೆ ಪೀ ಬಿಡುವ ಅಂಗನವಾಡಿಯ ಸಹಪಾಠಿಗಳು, ಮುಖ ಊದಿಸಿಕೊಂಡು ಮನೆ ಸೇರಿ ಕೌದಿ ಹೊಲಿಯಲು ಅಜ್ಜಿಗೆ ಸೂಜಿಯಲ್ಲಿ ದಾರ ಪೋಣಿಸಲು ಸಹಕರಿಸುವ ಪಮ್ಮಿ, ಧಾರಾವಾಹಿಗಳಲ್ಲಿನ ಮೆಲೊಡ್ರಮ್ಯಾಟಿಕ್ ಸನ್ನಿವೇಶಗಳಿಗೆ ಕಣ್ಣೀರಾಗುವ ಪಮ್ಮಿ, ಪಾತರಗಿತ್ತಿಯ ರೆಕ್ಕೆಗಳನ್ನು ಹಿಡಿದರೆ ತಾನು ಬರೆಯುವ ಅಕ್ಷರಗಳು ದುಂಡಾಗುತ್ತವೆ ಎಂದು ನಂಬಿದ ಪಮ್ಮಿಯು ಭಾವ ಪ್ರಪಂಚದಲ್ಲಿ ತೇಲಾಡುತ್ತಿದ್ದಂತೆ ಆ ಲೋಕವನ್ನು ಧ್ವಂಸಮಾಡುವ ಅನೇಕ ಸಂಗತಿಗಳು ಅವಳ ಸುತ್ತಲೂ ಜರಗುತ್ತವೆ. ಅವ್ವನ ಮೇಲೊಬ್ಬ ಸವತಿಯನ್ನು ಮನೆಗೆ ಧುತ್ತನೆ ಕರೆದುಕೊಂಡು ಬರುವ ಅಪ್ಪ, ಗಂಡ ಸವತಿಯ ಮಧ್ಯದಲ್ಲಿ ಹೋಗಿ ಮಲಗಲು ಒತ್ತಾಯಿಸುವ ತಾಯಿ, ಬದುಕಿನಲ್ಲಿ ಹತಾಶೆಗೊಂಡು ನೇಣುಹಾಕಿಕೊಳ್ಳಲು ಹೊರಟುನಿಂತ ಅವ್ವ ಇವೆಲ್ಲ ಪಮ್ಮಿಯ ಭಾವನಾ ಪ್ರಪಂಚದ ಮೇಲೆ ದಂಡೆತ್ತಿ ಬಂದು ಅವಳನ್ನು ನಜ್ಜುಗುಜ್ಜಾಗಿಸುತ್ತವೆ. ಹಸಿರಿನಿಂದ ನಳನಳಿಸುವ ಗೋಧಿಯ ಹೊಲ, ನೀರು ತುಂಬಿ ತುಳುಕುವಂತಹ ಬಾವಿ, ಅದರ ತಿಳಿನೀರಿನಲ್ಲಿ ಕಾಣಿಸುವ ಗೀಜಗನ ಗೂಡಿನ ಪ್ರತಿಬಿಂಬ ಇಂಥೆಲ್ಲ ಸುಂದರ ಎಲ್ಲವೂ ಕಲಕುಮಲಕಾಗಿ ಕಬ್ಬಿನ ಪಡದಲ್ಲಿ ಕಳೆದು ಹೋದ ಬಾಲಕಿಯಂತೆ ವಿಹ್ವಲಗೊಳ್ಳುತ್ತಾಳೆ.

‘ಶ್ಯಾರಿಯ ಗಲ್ಲಾ ಡೆಬ್ಬಿ’ಯಲ್ಲಿ ಮುಗ್ಧತೆಯ ನಾಶದ ಕತೆ ನಿಗಿ ನಿಗಿ ಕೆಂಡದ ಹಾಗೆ ಓದುಗನ ಬೊಗಸೆಗೆ ಬಿದ್ದು ಶ್ಯಾರಿಯ ಯಾತನೆಯ ರಾಗಾಲಾಪ ದೀರ್ಘಕಾಲದವರೆಗೆ ಕೇಳಿಸುತ್ತದೆ. ಬಡತನದ ಬದುಕಿನಲ್ಲಿ ಶಿಕ್ಷಣ ಮೊಟಕುಗೊಳ್ಳದಿರಲಿ ಎಂದು ಜಾಗ್ರತೆವಹಿಸಿ ಶ್ಯಾರಿಯು ಕಬ್ಬಿನ ಗದ್ದೆಗಳಲ್ಲಿ ದುಡಿಯುತ್ತ ವಾಡಿ ಮಾರಾಟ ಮಾಡುತ್ತ ಕೂಲಿಹಣ ಪಡೆಯುತ್ತ ಗಲ್ಲಾಡೆಬ್ಬಿಯಲ್ಲಿ ಹಣ ಕೂಡಿಡುತ್ತಾಳೆ. ಅವಳ ತಾಯಿಯೂ ಅವಳ ಕನಸಿಗೆ ನೀರೆರೆದು ಪೋಷಿಸುತ್ತಾಳೆ. ಆದರೆ ಮೊಕಾದಮಿಕೆ ಮಾಡುವ ಅಪ್ಪ ಹೊರಚಾಳಿಗೆ ಬಿದ್ದು ತಾಯಿ ಮಗಳ ಕನಸುಗಳ ಕುಡಿಗಳನ್ನು ಚಿವುಟುತ್ತಲೇ ಹೋಗುತ್ತಾನೆ. ಅವನು ಕುಡಿತದ ಚಟಕ್ಕೆ ಬಲಿಯಾದುದೇ ನೆವವಾಗಿ ಶಾರಿಯ ಕನಸು ಸಂಪೂರ್ಣವಾಗಿ ಭಗ್ನವಾಗಿ ಹೋಗುತ್ತದೆ. ಭಗ್ನತೆಯ ಶಿಖರ ಸನ್ನಿವೇಶವೆನ್ನುವಂತೆ ಶ್ಯಾರಿಯ ಮಾನಭಂಗವೂ ಆಗುತ್ತದೆ ಮತ್ತು ಎದೆಯಲ್ಲಿ ಕಲಿಯುವ ಕನಸನ್ನಿಟ್ಟುಕೊಂಡೇ ಅವಳು ಅಸುನೀಗುತ್ತಾಳೆ.

ಇಲ್ಲಿನ ಘಟನೆಗಳಿಗೆ ಮತ್ತು ಇಲ್ಲಿನ ಪಾತ್ರಗಳಿಗೆ ಆ ಭಾಗದ ನೆಲದ ಮಣ್ಣಿನ ಘಮಲು ಇದೆ. ಆ ಘಮಲಿಗೆ ಗುಂಗು ಹಿಡಿಸುವ ತಾಜಾತನವಿದೆ. ತಮ್ಮ ತಾಜಾತನದಿಂದ ಅವೆಲ್ಲಾ ಓದುಗನ ಸ್ಮೃತಿಯಲ್ಲಿ ಬಹುಕಾಲದವರೆಗೆ ಗಂಧವನ್ನು ಸೂರೆಗೊಳ್ಳುತ್ತಲೇ ಇರುವಂಥವಾಗಿವೆ.

‘ಚುಕ್ಕಿ ಕೇಳಿದ ಕತೆ’ ಮತ್ತು ‘ಚಿನ್ಮಯ ನಿಲಯ’ಕತೆಗಳಲ್ಲಿಯೂ ಮಕ್ಕಳೇ ಕೇಂದ್ರದಲ್ಲಿದ್ದರೂ ಈ ಎರಡೂ ಕತೆಗಳಿಗೆ ಬೇರೆ ತೆರನಾದ ಆಯಾಮಗಳಿವೆ. ಇವೆರಡೂ ಕತೆಗಳು ಮಕ್ಕಳ ಮನೋಲೋಕದ ವಿಲಕ್ಷಣತೆಯನ್ನು ಮತ್ತು ವೈಪರಿತ್ಯವನ್ನು ಚಿತ್ರಿಸುತ್ತವೆ. ‘ಚುಕ್ಕಿ ಕೇಳಿದ ಕತೆ’ಯ ಚುಕ್ಕಿ ತನಗೊಬ್ಬ ತಂಗಿ ಹುಟ್ಟಿ ಬಂದಳು ಎನ್ನುವ ಕಾರಣದಿಂದ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾಳೆ. ತಂಗಿ ಸಿರಿಯ ಆಗಮನ ಅಕ್ಕ ಚುಕ್ಕಿಯಲ್ಲಿ ಅನಾಥಪ್ರಜ್ಞೆಯನ್ನು ಉದ್ದೀಪಿಸುತ್ತದೆ. ತಂಗಿಯನ್ನು ವಿನಾಕಾರಣ ಪೀಡಿಸಲು ಪ್ರಾರಂಭಿಸುತ್ತಾಳೆ. ತಾಯಿಯನ್ನು ವೈರಿಯ ಹಾಗೆ ಕಾಣತೊಡಗುತ್ತಾಳೆ. ಅಜ್ಜಿಯ ಮನೆಗೆ ಹೋದ ಅವಳು ಮರಳಿ ತಾಯಿಯಲ್ಲಿಗೆ ಬರಲು ನಿರಾಕರಿಸುತ್ತಾಳೆ. ಇಂಥ ಚುಕ್ಕಿಗೆ ಜನಪದ ಕತೆಯಲ್ಲಿ ಬರುವ ಯುವರಾಣಿಯ ಕತೆಯನ್ನು ಹೇಳಿ ಅವಳ ಮನಃಪರಿವರ್ತನ ಮಾಡುವ ಕೆಲಸವನ್ನು ತಾಯಿ ಮಾಡುತ್ತಾಳೆ. ಇಲ್ಲಿನ ಮುಗ್ಧತೆಯಿಂದ ಪ್ರಬುದ್ಧತೆಯ ಕಡೆಗಿನ ಪಯಣ ಕತ್ತಲೆಯಿಂದ ಬೆಳಕಿನ ಕಡೆಗಿನ ಪಯಣದ ಹಾಗೆ ಇದೆ. ಆದರೆ ‘ಚಿನ್ಮಯ ನಿಲಯ’ ಕತೆಯಲ್ಲಿನ ಪಯಣ ಕತ್ತಲೆಯಿಂದ ಕತ್ತಲೆಯ ಕಡೆಗೆ ಎನ್ನುವಂತೆ ಅಲ್ಲಿಯೇ ಸುರಳಿ ಸುತ್ತುತ್ತ ಹೋಗುತ್ತದೆ. ಮೆಂಟಲಿ ರೆಟಾರ್ಟೆಡ್ ಆದ ಚಿನ್ಮಯನ ಕಳವಳದ ಕತೆ ಇಲ್ಲಿದೆ. ಮಗುವಿವ ಮನೋರೋಗದ ಕಹಿ ಫಲವನ್ನು ಪಾಲಕರು ಅನುಭವಿಸುವಂತಾಗಿದೆ. ಹುಟ್ಟಿ ಮೂವತ್ತು ವರ್ಷಗಳಾದರೂ ಶೈಶವ ಸ್ಥಿತಿಯಿಂದ ಬಿಡುಗಡೆಗೊಳ್ಳದೆ ಇದ್ದ ಚಿನ್ಮಯನು ಕೆಲಸದಾಳು ಚಂದ್ರವ್ವ ಎನ್ನುವ ಯುವತಿಯ ದೈಹಿಕ ಸ್ಪರ್ಶದ ಮೂಲಕ ಪುರುಷತ್ವವನ್ನು ಜಾಗ್ರತಗೊಳಿಸಿಕೊಳ್ಳುತ್ತಾನೆ. ಆದರೆ ಈ ಜಾಗ್ರತಿಯು ಕೆಸರಲ್ಲಿ ಕಾಲಾಡಿಸಿ ಮತ್ತಷ್ಟು ಗೊಡಗೆಬ್ಬಿಸಿಕೊಂಡಂತೆ ಗೋಜಲನ್ನು ಇನ್ನಷ್ಟು ಇನ್ನಷ್ಟು ಜಟಿಲಗೊಳಿಸುತ್ತದೆ. ಪಾಲಕರು ಬೇರೊಂದು ರೀತಿಯ ತಲೆಬಿಸಿಯನ್ನು ಅನುಭವಿಸುವಂತಾಗುತ್ತದೆ.

‘ಹುಚ್ಚಯ್ಯನ ಲೀಲೆ’ ಮತ್ತು ‘ಅವನಿ’ ಕತೆಗಳು ತಮ್ಮ ಆಶಯ ಮತ್ತು ಅಭಿವ್ಯಕ್ತಿಯ ಕ್ರಮದಿಂದ ಇಲ್ಲಿನ ಉಳಿದ ಆರು ಕತೆಗಳಿಗಿಂತ ಭಿನ್ನವಾಗಿ ತೋರುತ್ತವೆ. ಪಾತ್ರಧಾರಿಯೊಬ್ಬ ತಾನು ಅಭಿನಯಿಸಿದ ಪಾತ್ರದಲ್ಲಿ ಪ್ರವೇಶ ಮಾಡಿ ತನ್ನ ವ್ಯಕ್ತಿತ್ವದಲ್ಲಿ ದೊಡ್ಡ ಪ್ರಮಾಣದ ಪರಿವರ್ತನೆಯನ್ನು ತಂದುಕೊಳ್ಳುವ ಕತೆಯನ್ನು ‘ಹುಚ್ಚಯ್ಯನ ಲೀಲೆ’ ಹೇಳುತ್ತದೆ. ಬದುಕಿನ ಸರ್ವ ಚಟುವಟಿಕೆಗಳನ್ನು ದುಡ್ಡಿನಿಂದಲೇ ಅಳೆಯುತ್ತಿದ್ದ ಕಿರಾಣಿ ಅಂಗಡಿಯ ಚೆನ್ನಪ್ಪ ಕಲೆ ಎಂದರೆ ಸಹಕಲಾವಿದೆಯರೊಂದಿಗೆ ಮೋಜು ಮಸ್ತಿ ಮಾಡುವ ಸಾಧನ ಎಂದು ಬಗೆದವನಾಗಿದ್ದ. ಒಂದು ಕಾಲಘಟ್ಟದಲ್ಲಿ ಪಾತ್ರವನ್ನು ಅಭಿನಯಿಸುವದು ಎಂದರೆ ಭೋಗಲೋಕಕ್ಕೆ ಪಯಣಿಸಲು ದೊರೆತ ಪರವಾನಿಗೆ ಪತ್ರವೆಂದು ಕಿರಾಣಿ ಅಂಗಡಿಯ ಮಾಲಿಕ ಚೆನ್ನಪ್ಪ ಭಾವಿಸಿದ್ದ. ಆದರೆ ತನ್ನ ಎಂಬಂತ್ತನೆಯ ವಯಸ್ಸಿನಲ್ಲಿ ಹುಚ್ಚಯ್ಯನ ಪಾತ್ರಮಾಡಲು ಒಪ್ಪಿಕೊಳ್ಳುವ ಮೂಲಕ ಆಂತರಿಕವಾಗಿ ಹೊಸ ಬದಲಾವಣೆಯನ್ನು ಕಾಣಲು ಪ್ರಾರಂಭಿಸುತ್ತಾನೆ. ಸಹಜೀವಿಗಳನ್ನು ಅಗಾಧವಾಗಿ ಪ್ರೀತಿಸುವ, ಬಿತ್ತುವ ಬೀಜಗಳನ್ನು ಹಸಿದು ಬಂದವರಿಗೆ ದಾನ ಮಾಡುವ ಅವಧೂತನಂತಹ ಹುಚ್ಚಯ್ಯನ ಪಾತ್ರವನ್ನು ರಂಗತಾಲೀಮನಲ್ಲಿ ಅಭಿನಯಿಸುತ್ತ ಅಭಿನಯಿಸುತ್ತ ಅವನಲ್ಲಿ ಆಂತರಿಕ ಪರಿವರ್ತನೆಯ ಉಪಕ್ರಮ ತೀವ್ರಗೊಳ್ಳುತ್ತ ಹೋಗುತ್ತದೆ. ನಾಟಕವಾಡಿ ಮುಗಿಸುವಷ್ಟರಲ್ಲಿಯೇ ಮಹಾಜಿಪುಣನಾಗಿದ್ದ ಚೆನ್ನಪ್ಪನ ಎದೆಯೊಳಗೆ ಸಹಜೀವಿಗಳನ್ನು ಪ್ರೀತಿಸುವ ಜೀವಸೆಲೆಯೊಡೆಯುತ್ತದೆ. ಹುಚ್ಚಯ್ಯನ ಪಾತ್ರದಲ್ಲಿ ಚೆನ್ನಪ್ಪ ಲೀನವಾಗಿ ಹೊಸ ಮನುಷ್ಯನಾಗಿ ರೂಪಗೊಳ್ಳುತ್ತಾನೆ. ಕಿರಾಣಿ ಕೊಳ್ಳಲು ಬಂದ ಗಿರಾಕಿಗಳಿಗೆ ಕೈಗೆ ಬಂದಷ್ಟು ಸಾಮಾನುಗಳನ್ನು ಕೊಡುತ್ತ ಹೋಗುತ್ತಾನೆ. ಮಾತು ಕಡಿಮೆಯಾಗಿ ಕೊರಳಿಗೆ ರುದ್ರಾಕ್ಷಿಮಾಲೆ ಬರುತ್ತದೆ. ಪೊರೆಹರಿದುಕೊಂಡು ಬೆಳಗುವ ಹಾವಿನ ಹಾಗೆ ಚೆನ್ನಪ್ಪ ರೂಪಾಂತರಗೊಳ್ಳುತ್ತಾನೆ. ಈವರೆಗೆ ತಾನು ನಂಬಿಕೊಂಡಿದ್ದ ಬದುಕಿನ ಆಚೆಗೆ ಇರುವ ಹೊಸಲೋಕದ ಕರೆಗೆ ಅವನು ಕಿವಿಗೊಡುತ್ತಾನೆ. ಎರಡೂ ಲೋಕಗಳ ನಡುವೆ ಅಡ್ಡಲಾಗಿ ಹರಿವ ನದಿಯನ್ನು ದಾಟಿ ಹೊಸಲೋಕವನ್ನು ಅವನು ತಲಪುತ್ತಾನೆ. ಈ ಕತೆಯನ್ನು ಅನಿಲ್ ಗುನ್ನಾಪೂರ ಅವರು ನಿರ್ವಹಿಸಿದ ರೀತಿ ಅನನ್ಯವಾಗಿದೆ. ಮನುಷ್ಯನ ಆಂತರಂಗಿಕ ಬೆಳವಣಿಗೆಯನ್ನು ನವೋದಯ ಮಾದರಿಯ ಕತೆಗಾರರ ಶೈಲಿಯಲ್ಲಿ ನಿರೂಪಿಸುವ ಮೂಲಕ ಅವರೊಬ್ಬ ಭರವಸೆಯ ಯುವ ಕತೆಗಾರರಾಗಿ ಕಾಣಿಸಿಕೊಂಡಿದ್ದಾರೆ.

‘ಅವನಿ’ ಪೂರ್ಣಚಂದ್ರ ತೇಜಸ್ವಿ ಅವರ ದಟ್ಟ ಪ್ರಭಾವದಲ್ಲಿ ಆಕಾರ ಪಡೆದ ಕತೆಯಾಗಿದೆ. ಬಯಲು ಸೀಮೆಯ ಬಟಾಬಯಲನ್ನು ದಾಟಿ ಮಲೆನಾಡಿನ ನಿಗೂಢವಾದ ದಟ್ಟ ಕಾಡಿನ ಲೋಕದತ್ತ ಅನಿಲ್ ಗುನ್ನಾಪೂರ ಪಯಣ ಬೆಳೆಯಿಸಿದ್ದಾರೆ. ಕಾಡಿನ ಗೂಢತೆ, ಅವನಿ ಧಾರಾವಾಹಿಯ ಪಾತ್ರದ ಬಗೆಗೆ ಅಪಾರ ವ್ಯಾಕುಲತೆಯನ್ನು ತೋಡಿಕೊಳ್ಳುವ ಮುದುಕಿಯೊಬ್ಬಳ ಗೂಢ ಬದುಕಿನ ವಿವರ, ಕತ್ತಲೆಯಲ್ಲಿ ಹೊಳೆವ ಕಣ್ಣುಗಳೊಂದಿಗೆ ಧುತ್ತೆಂದು ಕಾಣಿಸಿಕೊಳ್ಳುವ ಹುಲಿ ಇತ್ಯಾದಿ ವಿವರಗಳನ್ನು ಕತೆಗಾರ ಅನಿಲ್ ಗುನ್ನಾಪೂರ ಅವರು ಇದೊಂದು ಸ್ವಾನುಭವ ಎನ್ನುವ ಹಾಗೆ ಚಿತ್ರಿಸಿದ್ದಾರೆ. ಇಂತಹ ಕಥನಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾದುದು. ಸ್ವಲ್ಪ ಎಡವಟ್ಟಾದರೆ ಕತೆ ಹೋಗಿ ಪ್ರಬಂಧವಾಗಿ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಅನಿಲ್ ಗುನ್ನಾಪೂರ ತಮ್ಮ ಮೊದಲ ಕಥಾ ಸಂಕಲನದಲ್ಲಿ ಇಂಥದ್ದೊಂದು ಅಪಾಯಕಾರಿ ಪ್ರಯೋಗ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇಲ್ಲಿನ ಕತೆಯ ನಿರೂಪಕನೊಂದಿಗೆ ತಮ್ಮನ್ನು ಸಮೀಕರಿಸಿಕೊಂಡಂತಿರುವ ಲೇಖಕನ ಕುತೂಹಲ, ಅವನ ಗೆಳೆಯ ಗೌತಮನ ದಿಟ್ಟತನ ಹಾಗೂ ಮುದುಕಿಯ ಅಂತಃಕರಣ ಈ ಮೂರರ ಹದವಾದ ಮಿಶ್ರಣ ಕತೆಗೆ ಒಂದು ತೆರನಾದ ನಯಗಾರಿಕೆಯನ್ನು ತಂದುಕೊಟ್ಟಿವೆ.

(ಚನ್ನಪ್ಪ ಕಟ್ಟಿ)

‘ಅವನಿ’ ಕತೆಯೊಂದನ್ನು ಹೊರತುಪಡಿಸಿ ಉಳಿದವುಗಳು ಇಂಡಿ ತಾಲೂಕಿನ ಚಿಕ್ಕಹಳ್ಳಿಯಾದ ಹಿರೇಮಸಳಿ, ಕಬ್ಬಿನ ಪಡಗಳ ನಾಡು ಜಮಖಂಡಿ ಹಾಗೂ ಅರೆ ನಗರದಂತಿರುವ ಬಾಗಿಲುಕೋಟೆಯ ನವನಗರ- ಇವುಗಳ ಕ್ಯಾನ್ವಾಸಿನಲ್ಲಿ ಜೀವ ತಳೆದಿವೆ. ಹಿರೇಮಸಳಿಯಂತಹ ಚಿಕ್ಕಗ್ರಾಮದ ಜನರ ನಂಬಿಕೆ ಆಚರಣೆ, ಅಲ್ಲಿನ ಬಡತನ ದಾರಿದ್ರ್ಯ, ಅಲ್ಲಿನ ಕ್ರೌರ್ಯ, ಅಲ್ಲಿನ ಹಗಲು ಹಾದರಗಳು ಹಾಗೂ ಈ ಎಲ್ಲವುಗಳ ತಳದಲ್ಲಿ ನಿತಾಂತ ಹರಿವ ಜೀವಪ್ರೀತಿಯ ತೊರೆಗಳು ಈ ಸಂಕಲನದ ಮೂಲಕ ಪ್ರಥಮಬಾರಿಗೆ ಅನಾವರಣಗೊಂಡಿವೆ. ಹೆಂಡತಿಯಿದ್ದಾಗಲೂ ಇನ್ನೊಬ್ಬಳೊಂದಿಗೆ ಓಡಿಹೋಗುವ ಪುರುಷರು, ಗಂಡ ಬಿಟ್ಟುಹೋಗಿದ್ದಾನೆ ಎಂದು ತಿಳಿದಮೇಲೆ ಪರಿತ್ಯಕ್ತ ಮಡದಿಯ ಮೇಲೆ ಕಣ್ಣು ಹಾಯಿಸುವ ಪರಪುರುಷರು, ಸಹಕಲಾವಿದೆಯೊಂದಿಗೆ ಮೇಕಪ್ ರೂಮಿನಲ್ಲಿಯೇ ರಾಸಲೀಲೆಗೆ ಇಳಿವ ಕಚ್ಚೆಹರುಕರು, ಸಾಲದ ಮೇಲಿನ ಬಡ್ಡಿ ತೀರಿಸಲಾಗದ ಬಡವರನ್ನು ಶೋಷಿಸುವ ಶ್ರೀಮಂತರು, ಕುಡಿವ ಚಟಕ್ಕೆ ಬಲಿಯಾದ ವ್ಯಕ್ತಿಗೆ ನೂರರ ಗರಗರಿ ನೋಟನ್ನು ಕೊಟ್ಟು ಅವನ ಮಗಳನ್ನು ಭೋಗಿಸುವ ಲಂಪಟರು ಮತ್ತು ಇವರೆಲ್ಲರ ದಬ್ಬಾಳಿಕೆಯನ್ನು ಎದುರಿಸುತ್ತ ಬದುಕನ್ನು ಕಟ್ಟಿಕೊಳ್ಳಲು ಸೆಣಸಾಡುವ ಬಡವರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಇಲ್ಲಿನ ಕಥಾಲೋಕದಲ್ಲಿ ಇಡುಕಿರಿದು ತುಂಬಿದ್ದಾರೆ. ಇಂತಹ ಪಾತ್ರ ಸನ್ನಿವೇಶಗಳನ್ನು ಅನಿಲ್ ಗುನ್ನಾಪೂರ ಅವರು ಒಬ್ಬ ನುರಿತ ಕತೆಗಾರನ ಹಾಗೆ ನಿರ್ವಹಿಸಿದ್ದಾರೆ.

ಇಂಡಿ ಭಾಗದಲ್ಲಿ ಚಲಾವಣೆಯಲ್ಲಿರುವ ನುಡಿಗಟ್ಟುಗಳು ಈ ಸಂಕಲನದಲ್ಲಿ ಪ್ರವೇಶಪಡೆದುಕೊಂಡು ಕತೆಗಳಿಗೆ ಸ್ಥಳೀಯತೆಯ ಸ್ಪರ್ಶವನ್ನು ನೀಡಿವೆ. ಭಾಷೆ ಆಗಾಗ ಕಾವ್ಯದ ಗುಂಗಿನೊಂದಿಗೆ ನುಗ್ಗಿ ಬರುತ್ತದೆ. ಆದರೆ ಕಾವ್ಯಭಾಷೆ ಎನ್ನುವುದು ಕೇವಲ ಅಲಂಕಾರದ ಸಾಮಗ್ರಿಯಾಗಿ ಬಳಕೆಯಾಗದ ಹಾಗೆ ಅನಿಲ್ ಗುನ್ನಾಪೂರ ಅವರು ಎಚ್ಚರವಹಿಸಿದ್ದಾರೆ. ಸಮಯ ಸಂದರ್ಭ ಬಯಸಿದಾಗ ಮಾತ್ರ ಇಲ್ಲಿನ ಭಾಷೆ ಗದ್ಯದ ಪೊರೆಹರಿದುಕೊಂಡು ಪದ್ಯದ ಹೊಳಪನ್ನು ಪಡೆದುಕೊಳ್ಳುತ್ತದೆ. ಅದೇ ಕಾಲಕ್ಕೆ ಸಹಜವೆನ್ನುವಂತೆ ಬರುವ ಸನ್ನಿವೇಶಗಳು ರೂಪಕ ಸಂಕೇತಗಳಾಗಿ ಅರಳಿಕೊಳ್ಳುತ್ತವೆ. ಇಂಥೆಲ್ಲ ಕಾರಣದಿಂದ ಇಲ್ಲಿನ ಕತೆಗಳು ಓದುಗನನ್ನು ಅಪ್ರಜ್ಞಾಪೂರ್ವಕವಾಗಿ ಸಮ್ಮೋಹನಗೊಳಿಸುತ್ತಲೇ ಹೋಗುತ್ತವೆ. ಈ ತೆರನಾದ ಸಹಜ ಲಯದ ಕಥಾ ಬರವಣಿಗೆಯನ್ನು ಮುಂದುವರೆಯಿಸಿಕೊಂಡು ಹೋದರೆ ಅನಿಲ್ ಗುನ್ನಾಪೂರ ಅವರು ವಿಜಯಪುರ ಜಿಲ್ಲೆಯ ಒಬ್ಬ ಸಮರ್ಥ ಕತೆಗಾರರಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

(ಕೃತಿ: ಕಲ್ಲು ಹೂವಿನ ನೆರಳು (ಕಥಾ ಸಂಕಲನ), ಲೇಖಕರು: ಅನಿಲ್‌ ಗುನ್ನಾಪೂರ, ಪ್ರಕಾಶಕರು: ವೈಷ್ಣವಿ ಪ್ರಕಾಶನ, ಬೆಲೆ : 120 ರೂ/-)