Advertisement
ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು. ಆಗತಾನೇ ಅಮ್ಮನ ಅಸ್ಥಿ ವಿಸರ್ಜಿಸಿದ ನಮಗೆ ಮಿಶ್ರಭಾವ. ಆದರೂ ಹೊಟ್ಟೆ ಕೇಳಬೇಕಲ್ಲ. ನಮ್ಮ ಬಂಧುಗಳು ಇದನ್ನು ಮುಂಚೆಯೇ ನಿರೀಕ್ಷಿಸಿ ಶ್ರೀರಂಗಪಟ್ಟಣದ ಉತ್ತರಾದಿ ಮಠದಲ್ಲಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು”
ಗುರುಪ್ರಸಾದ್ ಕಾಗಿನೆಲೆ ಪ್ರಬಂಧ ಸಂಕಲನ ‘ಸಾವೆಂಬ ಲಹರಿ’ ಯಿಂದ ಕೆಲವು ಪುಟಗಳು.

 

ಅಮ್ಮ ರಕ್ತ ಮಾಂಸ ತುಂಬಿಕೊಂಡು ಚೆನ್ನಾಗಿದ್ದಾಗ ಆಕೆಗೆ ಒಂದು ಅಭ್ಯಾಸ ಇತ್ತು. ಮನೆಯ ಡ್ರೈವರುಗಳಿಗೆ, ಕೆಲಸದವರಿಗೆ, ಕಕ್ಕಸ್ಸು ತೊಳೆಯುವವಳಿಗೆ, ಕಸ ತೆಗೆಯುವವರಿಗೆ ಎಲ್ಲರಿಗೂ ಮನೆಯಲ್ಲಿ ಮಾಡಿದ್ದು, ಇದ್ದದ್ದು, ಮುಸುರೆ, ಮೈಲಿಗೆ, ತಿಂಡಿ ತೀರ್ಥಗಳನ್ನೆಲ್ಲಾ ಸಮವಾಗಿ ಹಂಚುವುದು. ಆದರೆ, ಎಲ್ಲರನ್ನೂ ಮನೆಯ ಹೊರಗಿನ ಜಗಲಿಯ ಮೇಲೆ ಕೂರಿಸಿ ಬಾಳೆಎಲೆಯಲ್ಲೋ ಅಡಿಕೆಯ ಹಾಳೆಯಲ್ಲೋ ತುಂಬಿಸಿ ಹದಿನಾಲ್ಕಿಂಚು ದೂರದಿಂದ ಅವರುಗಳಿಗೆ ಕ್ಯಾಚ್ ಹಾಕುವುದು. ಪ್ರತಿಬಾರಿ ಕ್ಯಾಚ್ ಹಾಕಿದಾಗಲೂ ಮೈಮೇಲೆ ಏನಾದರೂ ಮುಸುರೆ ಹಾರಿತೇ ಎಂದು ಅನುಮಾನ ಪಡುವುದು. ಮತ್ತೊಮ್ಮೆ ಸ್ನಾನ ಮಾಡಿ ಡ್ರೈವರ್ ‘ಸರತ್’ ಜತೆ ರಾಯರ ಮಠಕ್ಕೆ ಹೋಗುವುದು. ಸರತ್ ತನ್ನ ಗೋರಿಪಾಳಯದ ಕಷ್ಟ ಸುಖವನ್ನೆಲ್ಲಾ ಅಮ್ಮನೊಂದಿಗೆ ಹೇಳುತ್ತಿದ್ದನಂತೆ. ‘ಎಂತ ಪಾಡು ಪಡ್ತಾವಪ್ಪ, ಈ ಹುಡುಗರು’ ಎಂದು ಅಲವತ್ತುಕೊಂಡು ಐವತ್ತೋ ನೂರೋ ಸಾಲ ಕೊಡುವುದು.

ಸರತ್ ಕಂಡರೆ ಅಮ್ಮನಿಗೆ ಕೊಂಚ ಹೆಚ್ಚೇ ಪ್ರೀತಿ. ಆತನಿಗಾಗಿಯೇ ಒಂದು ಸ್ಟೀಲ್ ಲೋಟವಿತ್ತು. ಅಮ್ಮ ಮಾಡಿದ ಫಿಲ್ಟರ್ ಕಾಫಿ ಮುಂದೆ ಬೈಟುಕಾಫಿಯ ಕಾಫಿ ವೇಸ್ಟು ಎಂದು ಸುರಿಸಿಕೊಂಡು ಕಾಫಿ ಕುಡಿಯುತ್ತಿದ್ದ, ಆತ. ಅನಂತರ ಕುಡಿದ ಲೋಟವನ್ನು ತೊಳೆದು ಹೊರಗೇ ಕಿಟಕಿಯಲ್ಲಿ ಬೋರಲಾಕುತ್ತಿದ್ದ. ಒಮ್ಮೆ ಬೆಂಗಳೂರಿಗೆ ಬಂದಾಗ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ನನ್ನ ಮಗ ಅಲ್ಲಿಯೇಇ ದ್ದ ಸರತ್ ನ ಲೋಟದಲ್ಲಿ ನಲ್ಲಿ ನೀರು ಹಿಡಕೊಂಡು ಕುಡಿದ ತಪ್ಪಿಗಾಗಿ ಅಜ್ಜಿಯಿಂದ ಬೈಸಿಕೊಂಡಿದ್ದ.

ನನ್ನ ಮಗಳು ‘ಅಜ್ಜಿ, ದಿಸ್ ಈಸ್ ಟೋಟಲೀ ರಾಂಗ್’ ಎಂದು ಅಜ್ಜಿಯ ಜತೆ ಜಗಳವಾಡಿ ಕೆಲಸದ ಹುಡುಗಿ ರತ್ನಳಿಗೂ ತನಗೂ ಒಟ್ಟಿಗೆ ತಿಂಡಿಕೊಡಬೇಕೆಂದು ಹಠ ಮಾಡಿದಾಗ ಅಮ್ಮ ಆಕೆಯನ್ನೂ ರತ್ನನ ಜತೆ ಹೊರಗೆ ಕೂರಿಸಿ ದೋಸೆ ಕೊಟ್ಟಿದ್ದಳು. ತಿಂಡಿ ತಿನ್ನುತ್ತಿದ್ದಾಗ ರತ್ನಳಿಗೆ ‘ನೀನು ಇದನ್ನು ಸಹಿಸಿಕೊಳ್ಳಬಾರದು. ಇದು ತಪ್ಪು.’ ಎಂದು ಹೇಳಿದಳಂತೆ. ನನ್ನ ಹತ್ತಿರ ಹೇಳಿದ್ದಳು. ‘ಡ್ಯಾಡಿ, ಅಜ್ಜಿ ಇರೋದೇ ಹಾಗೆ. ಅದರ ಜತೆಜತೆಗೂ ಶಿ ಹ್ಯಾಸ್ ಅ ಬಿಗ್ ಹಾರ್ಟ್ ಅಂತೆ. ಅದು ಸಾಕಾ. ಟ್ರಂಪ್ ಏನು ಮಾಡಿದರೂ ಎಕಾನಮಿ ಸುಧಾರಿಸಿದ್ಯಲ್ಲ ಸಾಕು ಎಂದ ಹಾಗಲ್ವ, ಈ ವಾದ’ ಎಂದಿದ್ದಳು. ನಾನು ಮಾತಾಡಿರಲಿಲ್ಲ. ಹಿಂದೆಲ್ಲಾ ಅಮ್ಮನ ಜತೆ ಮಾತಾಡಿ ಸೋತಿದ್ದೆ.

ಅಮ್ಮರಕ್ತ ಮಾಂಸ ಕಳಕೊಂಡು ಆರು ತಿಂಗಳಾಗಿತ್ತು. ಇದ್ದದ್ದು ಬರೀಚರ್ಮ ಮತ್ತು ಮೂಳೆ. ಕಾಯಿಲೆ, ಮೂಗಿನ ನಳಿಕೆಯಿಂದ ಸಿಗುವ ದ್ರವ ಮಾತ್ರ ಆಹಾರ. ಎಲ್ಲವೂ ಆಕೆಯನ್ನು ಜರ್ಝರಿತಗೊಳಿಸಿದ್ದವು. ಆದರೂ ಬಂದವರಿಗೆ ಕಾಫಿ ಕುಡಕೊಂಡು ಹೋಗಿ ಎನ್ನುವುದನ್ನು ಸಂಜ್ಞೆಯಿಂದಲೇ ಸೂಚಿಸುತ್ತಿದ್ದಳು. ಅಮ್ಮನ ಆಸರೆಯಾಗಿದ್ದ ಮನೆಯ ಹುಡುಗಿಗೆ ಒಂದು ಲುಕ್ ಕೊಡುತ್ತಿದ್ದಳು. ಆ ಲುಕ್ ಬಂದಾಕ್ಷಣ ಆ ಹುಡುಗಿ ಸರತ್ ಇತ್ಯಾದಿಗಳು ಕಾಫಿಕುಡಿದ ಲೋಟವನ್ನು ಹೊರಗೆ ಬೋರಲು ಹಾಕಿದ್ದಾರೆ ಎಂದು ನೋಡಿಕೊಂಡು ಬಂದು ಇನ್ನೊಂದು ಲುಕ್ ಕೊಟ್ಟಾಗ ಮಾತ್ರ ಆಕೆಗೆ ಸಮಾಧಾನ.

ಆರು ತಿಂಗಳು ನಳಿಕೆಯಿಂದ ಊಟ ಮಾಡಿಸುತ್ತಿದ್ದುದು ಶಾರದಾ ಎಂಬ ನರ್ಸ್. ಮದ್ದೂರಿನ ಕಡೆಯವಳು. ಬಹಳ ಚೆನ್ನಾಗಿ ನೋಡಿಕೊಂಡಳು. ಆದರೆ ಅಮ್ಮ ಆಕೆಯನ್ನು ಕರೆಯುತ್ತಿದ್ದುದು ರಾಧಿಕಾ ಎಂದು. ಅಮ್ಮನ ಅನೇಕ ಹೆಲುಸಿನೇಶನ್ನುಗಳಲ್ಲಿ ಇದೂ ಒಂದು ಎಂದು ನಾನು ನನ್ನ ಡಾಕ್ಟರೀ ಅಭಿಪ್ರಾಯವನ್ನು ಕೊಟ್ಟರೆ ನನ್ನ ತಮ್ಮ, ನಾಗಮಂಗಲದಲ್ಲಿದ್ದಾಗ ನಮ್ಮ ಮನೆಯ ಪಕ್ಕದಲ್ಲಿದ್ದ ರಾಘವೇಂದ್ರರಾಯರ ಮಗಳ ಹೆಸರು ರಾಧಿಕಾ ಎಂದು ಹೇಳುತ್ತಿದ್ದ. ಇದರ ಹಿಂದಿನ ಸತ್ಯವನ್ನು ನಿರೂಪಿಸುವುದು ಕಷ್ಟ. `ಪಿತೃಪಕ್ಷದ ಬಾಡೂಟ’ವನ್ನು ಒಮ್ಮೆಯೂ ತಪ್ಪಿಸದ ಶಾರದಾ ರಾಘವೇಂದ್ರರಾಯರ ಮಗಳು ರಾಧಿಕಾ ಆದದ್ದು ಅಮ್ಮನ ಅಸಹಾಯಕ ಮತ್ತು ಅನುಕೂಲದ ವಿಸ್ಮೃತಿಗಳಲ್ಲೊಂದು.

ಹೋದ ಬಾರಿ ನಾನು ಬಂದಾಗ ಅಮ್ಮನಿಗೆ ತೆಳ್ಳಗಿನ ಸಜ್ಜಿಗೆ ಮಾಡಬೇಕೆಂದು ಪ್ರಯತ್ನಿಸುತ್ತಿದ್ದೆ. ಅಡುಗೆಮನೆಯ ಬಾಗಿಲಲ್ಲಿಯೇ ನಿಂತ ಶಾರದಾ ನನಗೆ ಹೇಗೆ ಮಾಡಬೇಕೆಂದು ನಿರ್ದೇಶಿಸುತ್ತಿದ್ದಳು. ‘ನಾನು ಈ ಮಡಿ ಮೈಲಿಗೆ ಎಲ್ಲ ನೋಡೊಲ್ಲ. ನೀನೇ ಮಾಡು, ಬಾ’ ಎಂದು ಕರೆದಾಗ ಆಕೆ, ‘ಬೇಡ ಸರ್, ಆಂಟಿ ಮನಸ್ಸಿಗೆ ಬೇಜಾರು ಆಗಬಹುದಲ್ಲವಾ?’ ಎಂದಳು. ಅಮ್ಮನಿಗೆ ಯಾರು ಏನು ತಿನ್ನಿಸುತ್ತಿದ್ದಾರೆ ಕುಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುವುದು ಸಾಧ್ಯವೇ ಇರಲಿಲ್ಲ.
ಅಮ್ಮ ಸತ್ತಿದ್ದಳು.

(ಗುರುಪ್ರಸಾದ್ ಕಾಗಿನೆಲೆ)

ಯಥಾಪ್ರಕಾರ ಐಸ್ ಬಾಕ್ಸ್, ಬೆಂಗಳೂರಿನ ಡಿಮ್ ಅಂಡ್ ಡಿಪ್ ವಿದ್ಯುತ್ತಿಗೆ ಅನುಸರಿಸಿದ ಯುಪಿಎಸ್, ತುರ್ತು ವಿಮಾನ ಹಿಡಿದು ಬಂದ ನಾವುಗಳು. ಬಂದು ನೋಡಿದಾಗ ಅಮ್ಮನಿಗೆ ತಂದಿದ್ದ ಐಸ್ ಬಾಕ್ಸು ಭಾರಿದೊಡ್ಡದಾಗಿ ಕಾಣಿಸಿತು. ಅಮ್ಮ ಇದ್ದಿದ್ದು ಕೇವಲ ಮೂವತ್ತು ಕಿಲೋ.

ಅಮ್ಮ ಬಹಳ ಕಾಲ ಅನಾರೋಗ್ಯದಿಂದ ಇದ್ದುದರಿಂದ ನೋಡಿಕೊಂಡು ಹೋಗಲು ಬಂದಿದ್ದವರೆಲ್ಲ ‘ಹೋಗಲಿ ಬಿಡು, ಮುಕ್ತಿ.’ ‘ಗೆದ್ದುಕೊಂಡಳು, ಆಕೆ’ ಎನ್ನುವುದರಜತೆಗೆ ಇನ್ನಾರೋ ಒಬ್ಬರು, ‘ಗೆದ್ದುಕೊಂಡಿರಿ ಬಿಡ್ರಪ್ಪ ನೀವು’ ಎಂದರು. ನಾನು ಆ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಯೋಚಿಸುತ್ತಿದ್ದೆ.

ನೆಂಟರೆಲ್ಲ ಅಮ್ಮನ ಬಾಯಿಗೆ ಅಕ್ಕಿಕಾಳು ಹಾಕುತ್ತಿದ್ದರು. ಬಂದ ಸಂಬಂಧಿಗಳಲ್ಲಿ ಅಕ್ಕತಂಗಿಯರಿಬ್ಬರು ಪುರೋಹಿತರಜತೆ ಧರ್ಮಜಿಜ್ಞಾಸೆ ನಡೆಸಿದ್ದರು. ಅಕ್ಕ ಉತ್ತರಾದಿ ಮಠ, ತಂಗಿರಾಯರ ಮಠ. ಅಂದುಉತ್ತರಾದಿ ಮಠಕ್ಕೆ ಏಕಾದಶಿಯಂತೆ. ರಾಯರ ಮಠಕ್ಕೆ ದ್ವಾದಶಿ. ಏಕಾದಶಿ ಇದ್ದವರು ಅಮ್ಮನ ಬಾಯಿಗೆ ಅಕ್ಕಿಕಾಳು ಹಾಕಬಾರದಂತೆ. ಆದರೆ ಹಿರಿಮಗಳು, ಅಕ್ಕಿ ಹಾಕಲೇಬೇಕೆಂದು ಹಟ. ತನ್ನನ್ನು ಅವರಪ್ಪ, ಅಮ್ಮ ಉತ್ತರಾದಿ ಮಠಕ್ಕೆ ಯಾಕೆ ಕೊಟ್ಟರೋ ಎಂದು ಪೇಚಾಡಿಕೊಂಡಳು. ಪುರೋಹಿತರಿಗೆ ಇಲ್ಲಿ ಏನಾದರೂ ಶಾರ್ಟ್ಕಟ್ ಇದೆಯಾ ಎಂದು ಕೇಳಿದಾಗ ಪ್ರಗತಿಪರ ಪುರೋಹಿತರು ‘ನಿಮಗೆ ಮಠ ಮುಖ್ಯಾನೋ, ಸತ್ತವರು ಮುಖ್ಯಾನೋ’ ಎಂದು ರಾಮಾಚಾರಿಯ ಚಾಮಯ್ಯ ಮೇಷ್ಟರು ಮಧ್ವಾಚಾರ್ಯರಿಗೆ ಕೇಳಿದಂತೆ ಕೇಳಿದರು. ಸದ್ಯ ಆಕೆ ರಾಮಾಚಾರಿಯ ಅಪ್ಪನಷ್ಟು ಕರ್ಮಠಳಾಗಿರದೇ ಇದ್ದುದರಿಂದ ಅಕ್ಕಿಕಾಳು ಹಾಕಿ ಹೋದಳು.

ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು. ಆಗತಾನೇ ಅಮ್ಮನ ಅಸ್ಥಿ ವಿಸರ್ಜಿಸಿದ ನಮಗೆ ಮಿಶ್ರಭಾವ. ಆದರೂ ಹೊಟ್ಟೆ ಕೇಳಬೇಕಲ್ಲ. ನಮ್ಮ ಬಂಧುಗಳು ಇದನ್ನು ಮುಂಚೆಯೇ ನಿರೀಕ್ಷಿಸಿ ಶ್ರೀರಂಗಪಟ್ಟಣದ ಉತ್ತರಾದಿ ಮಠದಲ್ಲಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಇದರ ಹಿಂದಿನ ಸತ್ಯವನ್ನು ನಿರೂಪಿಸುವುದು ಕಷ್ಟ. `ಪಿತೃಪಕ್ಷದ ಬಾಡೂಟ’ವನ್ನು ಒಮ್ಮೆಯೂ ತಪ್ಪಿಸದ ಶಾರದಾ ರಾಘವೇಂದ್ರರಾಯರ ಮಗಳು ರಾಧಿಕಾ ಆದದ್ದು ಅಮ್ಮನ ಅಸಹಾಯಕ ಮತ್ತು ಅನುಕೂಲದ ವಿಸ್ಮೃತಿಗಳಲ್ಲೊಂದು.

ಉತ್ತರಾದಿ ಮಠಕ್ಕೆ ಹೋದಾಗ ಅಲ್ಲಿ ನಮ್ಮನ್ನೇ ನಿರೀಕ್ಷಿಸಿದ್ದಂತೆ, ಒಬ್ಬರು ಮಡಿಹೆಂಗಸರು ‘ಮೈಲಿಗೆಯವರಾ ಬನ್ನಿ, ಬನ್ನಿ. ಏನನ್ನೂ ಮುಟ್ಟಿಸಿಕೊಳ್ಳಬೇಡಿ. ಈ ಕಡೆಯಿಂದ ಬಂದು ಆ ಗೋಡೆಬದಿಯಲ್ಲಿ ಏನನ್ನೂ ಮುಟ್ಟದಂಗೆ ಕೂತುಕೊಳ್ಳಿ’ ಎಂದು ಕೂರಿಸಿ ಐದು ಬಾಳೆಲೆಯನ್ನು ನಮ್ಮತ್ತ ದೂರದಿಂದ ಸೋಕದಂತೆ ಹಾಕಿದರು.

ಎಲೆಗಳನ್ನು ನೆಲಕ್ಕೆ ಬೀಳದಂತೆ ಹಿಡಿದ ನಾವು ಎಲೆ ಒರೆಸಿ ಕೂತೆವು. ಒಳಗಿನಿಂದ ಇನ್ನೊಬ್ಬರು ಹೆಂಗಸು ಅಂಗಾರ ಇಟ್ಟುಕೊಂಡು ಬಂದರು. ಪಕ್ಕದಲ್ಲಿ ಕೂತಿದ್ದ ನಮ್ಮ ಭಾವ ‘ಆಕೆಯ ಗಂಡ ಸನ್ಯಾಸಿಯಾದರಂತೆ. ಆದರೆ ಪೀಠ ಸಿಕ್ಕಲಿಲ್ಲ. ಹರಿಚಿತ್ತ ಸರಿಇರದೆ ಬೃಂದಾವನಸ್ಥರಾದರು. ಹಾಗಾಗಿ ಈಗ ಮಠದ ಕೆಲಸ ಮಾಡಿಕೊಂಡಿದ್ದಾರೆ’ ಎಂದರು.

ನಾನು ‘ಮಠದ ಕೆಲಸ ಎಂದರೆ?’

‘ಹೀಗೇ ಮೈಲಿಗೆಯವರಿಗೆ ಅಡುಗೆ ಮಾಡುವುದು. ಬಡಿಸುವುದು, ಇತ್ಯಾದಿ’ ಎಂದರು, ಭಾವ.

ಅಜ್ಜಿ, ‘ಚೆನ್ನಾಗಿ ಊಟಮಾಡಿ, ಏ ಮೀನಾಕ್ಷೀ… ತೊವ್ವಿ, ಪಲ್ಯದ ಬಟ್ಟಲೆಲ್ಲ ಖಾಲಿ ಮಾಡಿಬಿಡು. ಇಂದು ಬೇರೆಯಾರೂ ಇಲ್ಲ. ಬರೇ ಇಷ್ಟು ಜನ ಮಾತ್ರ.’ ಎಂದರು. ಮೀನಾಕ್ಷಿಯವರು ಯಾವುದೂ ದಂಡವಾಗದಂತೆ ಎಲ್ಲ ಬಡಿಸಿದರು.

ನಮ್ಮ ಪಕ್ಕದಲ್ಲಿಯೇ ನಮ್ಮನ್ನು ಕಾಯುತ್ತಾಕೂತ ಅಜ್ಜಿ ಪುಷ್ಕಳವಾದ ಊಟದ ಅನಂತರ ನಾನು ಹಿಂದೆಮುಂದೆ ನೋಡದೇ ಏಳಲು ಹೋದಾಗ ‘ಹಾಗೇ ಏಳೋದಲ್ಲ. ನಿಮ್ಮ ಎಲೆ ಎತ್ತಬೇಕು’ ಎಂದರು. ನಾನು ಎಲೆ ಮುದುರಿ ಕೈಗೆತ್ತಿಕೊಂಡಾಗ ‘ಏ ಒಂದು ನಿಮಿಷ ಹೋಗಬೇಡಿ, ಅಲ್ಲೇ ನಿಲ್ಲಿ.’ ಎಂದು ನನ್ನ ತಮ್ಮನಿಗೆ, ‘ನೀ ಹೋಗಿ ಅಲ್ಲಿ ಹೊರಗಿರೋ ಪ್ಲಾಸ್ಟಿಕ್ ಟಬ್ ತಗಂಬಾಪ್ಪಾ’ ಎಂದರು. ಅಲ್ಲಿ ಪಾತ್ರೆ ತೊಳೆಯುತ್ತಾ ಕೂತಿದ್ದ ಇನ್ನೊಬ್ಬ ಕಚ್ಚೆಸೀರೆಯಾಕೆ ಟಬ್ ತೋರಿಸಿ ಅದರ ಮೇಲಿದ್ದ ಹಳೇ ಒರೆಸುವ ಬಟ್ಟೆಯನ್ನೂ ತೆಗೆದುಕೊಂಡು ಹೋಗಿ ಎಂದು ಹೇಳಿದರು.

ಟಬ್ ಬಂದ ಮೇಲೆ ಐದೂ ಎಲೆ ಎತ್ತಿ ನನ್ನತಮ್ಮ ಗೋಮಯ ಮಾಡಿದ. ನಾನು ನೀಟಾಗಿ ಒರೆಸಿದೆ. ಹೊರಗೆ ಹೋಗಬೇಕಾದರೆ ಅಲ್ಲಿ ಪಾತ್ರೆ ತೊಳೆಯುತ್ತಿದ್ದ ಹೆಂಗಸೊಬ್ಬರು ‘ನೀವು ಕುಡಿದ ನೀರಿನ ಲೋಟವನ್ನು ತೊಳೆದು ಬೋರಲು ಹಾಕಿಬಿಡಿ. ಮತ್ತು ಆ ಒರೆಸುವ ಬಟ್ಟೆಯನ್ನು ಚೆನ್ನಾಗಿ ಕಸಗಿ ಹಿಂಡಿ ಆ ಬೋರಲು ಟಬ್ಬಿನ ಮೇಲೇ ಒಣಹಾಕಿ ಹೋಗ್ರಪ್ಪ’ ಎಂದರು.

ಆಗ ತಾನೇ ಅಸ್ಥಿ ವಿಸರ್ಜನೆ ಮಾಡಿದ್ದ ಅಮ್ಮರಕ್ತ ಮಾಂಸತುಂಬಿಕೊಂಡು ಮತ್ತೆ ಪ್ರತ್ಯಕ್ಷಳಾದಳು ಅನ್ನಿಸಿತು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಆರತಿ ಘಟಿಕಾರ್

    ಸಂಪ್ರದಾಯಗಳ ಸುಳಿಯಲ್ಲಿ…ಲೇಖನ ಚೆನ್ನಾಗಿದೆ .

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ