”ಕಾಮವೆಂಬ ಪುರುಷಾರ್ಥವನ್ನು ನಿರ್ವಚಿಸುವಲ್ಲಿ ಒಂದು ಸುಸಂಗತ ನೆಲೆಯನ್ನು ಕತೆ ಮತ್ತು ಕಥನಕ್ಕೆ ಒದಗಿಸುವುದು ಕಷ್ಟದ ಕೆಲಸ. ಸುಧೀರ್ ಕಕ್ಕರ್ ಅವರು ತಮ್ಮ ಮನೋವಿಶ್ಲೇಷಕ ಕೃತಿಗಳಲ್ಲಿ ನಿರ್ವಚಿಸಿದಂತೆ ಮೊಗಸಾಲೆಯವರು ಮಾಡಲು ಬರುವುದಿಲ್ಲ. ಒಬ್ಬರು ಮನೋವಿಶ್ಲೇಷಕರಾದರೆ ಇನ್ನೊಬ್ಬರು ಕಥೆಗಾರ, ಕಾದಂಬರಿಕಾರ. ತನ್ನ ಕೃತಿಯೊಂದು ಬೋಧನೆಯಂತೆ ಆಗದಿರುವ ಎಚ್ಚರವನ್ನು ಈ ವಸ್ತುವನ್ನು ಆಯ್ದುಕೊಂಡ ಕಾದಂಬರಿಕಾರ ವಹಿಸಬೇಕು. ಅದಕ್ಕೆಂದೇ ಮೊಗಸಾಲೆ ಒಬ್ಬ ಮನೋವೈದ್ಯನ ಪಾತ್ರವನ್ನು ಸೃಷ್ಟಿಸಿ ತನ್ನನ್ನು ತಾನು ಈ ಗುರುತರ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದಾರೆ”
ನಾ.ಮೊಗಸಾಲೆಯವರ ಹೊಸ ಕಾದಂಬರಿಯ ಕುರಿತು ಆರ್. ವಿಜಯರಾಘವನ್ ಒಳನೋಟಗಳು.
ಜೀವ ಚೈತನ್ಯದ ಬದುಕಿನಲ್ಲಿ ಕಾಮ ನಿರ್ವಹಿಸುವ ಐಂದ್ರಿಯಕ ಮತ್ತು ಇಂದ್ರಿಯಾತೀತ ವ್ಯಾಪಾರಗಳನ್ನು ಕುರಿತ ಜೀವಪರ ಆಲೋಚನೆಗಳನ್ನು ಒಡಲಲ್ಲಿರಿಸಿಕೊಂಡ ಧಾತು ಕಾದಂಬರಿಯ ಕರ್ತೃ ಡಾ. ನಾ ಮೊಗಸಾಲೆಯವರು. ಕಾರ್ಕಳ ತಾಲೂಕಿನ ಕಾಂತಾವರ ಇವರ ಕಾರ್ಯಕ್ಷೇತ್ರ. ವೃತ್ತಿಯಲ್ಲಿ ಮೊಗಸಾಲೆಯವರು ಆಯುರ್ವೇದ ವೈದ್ಯರು. ಸ್ತ್ರೀಪುರುಷ ಸಂಬಂಧಗಳನ್ನು ಅವರು ಆಳವಾಗಿ ಚಿಂತಿಸಿರುವುದನ್ನು ಅವರ ಬಹುತೇಕ ಕೃತಿಗಳಲ್ಲಿ ಕಾಣಬಹುದಾದರೂ ದಾಂಪತ್ಯ ಯೋಗವೆಂಬ ಅವರ ಕೃತಿ ಅದನ್ನು ವೈಜ್ಞಾನಿಕವಾಗಿ ಮಂಡಿಸುತ್ತದೆ. ಮುಂದುವರೆದು ಧಾತು ಕೃತಿಯು ಅವರ ಹಿಂದಿನೆಲ್ಲ ಆಲೋಚನೆಗಳನ್ನು ಸಾಂದ್ರೀಕರಿಸುವತ್ತ ದುಡಿಯುತ್ತದೆ ಮತ್ತು ಖಂಡಿತವಾಗಿಯೂ ಆ ದಿಸೆಯಲ್ಲಿ ಒಂದು ಪ್ರಮುಖ ನಿಲ್ದಾಣವಾಗಿದೆ.
ಕಾಮವೆಂಬುದು ಭಾರತೀಯ ಮನಸ್ಸುಗಳಲ್ಲಿ ಖಚಿತವಾದ ಐಡಿಯಾ ಆಗಿ ಇನ್ನೂ ರೂಪಗೊಂಡಿಲ್ಲವೆನ್ನುವುದು ಕಟುವಾಸ್ತವ ಸಂಗತಿ. ನನ್ನದೇ ಒಂದು ಕತೆಯಲ್ಲಿ ಬರುವ ಒಂದು ಪಾತ್ರ ಹೇಳುತ್ತದೆ: ರಾತ್ರಿಯ ವಿಚಾರಗಳನ್ನು ನಾನು ಇಲ್ಲಿಯವರೆಗೂ ಹಗಲಿನಲ್ಲಿ ನೆನಪು ಸಹ ಮಾಡಿಕೊಂಡಿಲ್ಲ ಎಂದು. ಅದೇ ಪಾತ್ರ ಮತ್ತೊಮ್ಮೆ ಹೇಳುವುದು ಮದುವೆಯಾಗಿ ಹತ್ತು ವರ್ಷಗಳಾದರೂ ತಾನಿನ್ನೂ ತನ್ನ ಹೆಂಡತಿಯ ಬೆತ್ತಲೆ ಶರೀರವನ್ನು ಬೆಳಕಿನಲ್ಲಿ ಕಂಡೇ ಇಲ್ಲ ಎಂದು. ಅಂತೆಯೇ ಒಂದು ಸಮಾಜದ ಹೆಣ್ಣಿನ ಸೆಕ್ಷುಯಾಲಿಟಿಯು ಹಿಂದೂ ಧಾರ್ಮಿಕ ಕಟ್ಟಳೆಗಳಿಂದ ರೂಪುಗೊಂಡಿರುವುದರಿಂದ ಕಾಮದ ವಿಷಯವು ಹೊರನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.
ಈ ವಾಸ್ತವವು ಹಲವಾರು ಮನೋವೈಜ್ಞಾನಿಕರನ್ನು ಬಗೆಬಗೆಯ ಚಿಂತನೆಗಳಲ್ಲಿ ತೊಡಗಿಸಿಕೊಂಡಿದೆ. ಸುಧೀರ್ ಕಕ್ಕರ್ ಮೊದಲಾದವರು ಈ ವಿಚಾರವನ್ನು ಆಮೂಲಾಗ್ರ ಶೋಧಿಸಿದ್ದಾರೆ. ಆದರೂ ಈವರೆಗೆ ನಾವು ತಲುಪಿರುವ ನಿಲ್ದಾಣವೆಂದರೆ ಯಾವ ಹಾದಿಯನ್ನು ಹಿಡಿಯಬೇಕು ಎಂಬ ಸಂದಿಗ್ಧತೆಯು ಭಾರತೀಯರ ಅದರಲ್ಲೂ ಧಾರ್ಮಿಕತೆಯ ನಂಟಿರುವವರಲ್ಲಿ, ಅದರಲ್ಲೂ ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಸಂಗತಿಯಾಗಿದೆ. ಉಲ್ಲಂಘನೆಯ ಪ್ರಮಾಣವೆಷ್ಟು ಕಡಿಮೆಯೋ ಹಾಗೆಯೇ ಉಲ್ಲಂಘನೆಯ ಹಿಂದಿರುವ ಅಪವಾದದ ಅಭೀಪ್ಸೆಗಳು ಸಂಕುಚಿತವಾಗಿರುವುದು ಕೂಡ ಅಷ್ಟೇ ನಿಜವಾಗಿದೆ. ನಗರ ಸಂಸ್ಕೃತಿಯ ಮೇಲಿನ ಸ್ತರಗಳಲ್ಲಿ ಇದಕ್ಕೆ ಒದಗಿರುವ ಬದಲಾವಣೆಯನ್ನು ಅಪವಾದದ ಅಭೀಪ್ಸೆ ಎಂದು ಕರೆಯುತ್ತೇನೆ. ಸೈಕೋ ಅನಾಲಿಸಿಸ್ನ ಪರಿಣಾಮಗಳು ಕೆಳಸ್ತರದ, ನಗರೇತರ ಸಂಸ್ಕೃತಿಗಳನ್ನು ಇನ್ನೂ ತಲುಪಿಲ್ಲ ಮತ್ತು ಭಾರತೀಯ ಸಮಾಜದ ಮೇಲೆ ಅದರ ಈವರೆಗಿನ ಪರಿಣಾಮ ನಗಣ್ಯ ಎಂಬುದು ಮಾತ್ರ ಸತ್ಯ.
ಕಾಮವೆಂಬುದು ಭಾರತೀಯ ಮನಸ್ಸುಗಳಲ್ಲಿ ಖಚಿತವಾದ ಐಡಿಯಾ ಆಗಿ ಇನ್ನೂ ರೂಪಗೊಂಡಿಲ್ಲವೆನ್ನುವುದು ಕಟುವಾಸ್ತವ ಸಂಗತಿ. ನನ್ನದೇ ಒಂದು ಕತೆಯಲ್ಲಿ ಬರುವ ಒಂದು ಪಾತ್ರ ಹೇಳುತ್ತದೆ: ರಾತ್ರಿಯ ವಿಚಾರಗಳನ್ನು ನಾನು ಇಲ್ಲಿಯವರೆಗೂ ಹಗಲಿನಲ್ಲಿ ನೆನಪು ಸಹ ಮಾಡಿಕೊಂಡಿಲ್ಲ ಎಂದು. ಅದೇ ಪಾತ್ರ ಮತ್ತೊಮ್ಮೆ ಹೇಳುವುದು ಮದುವೆಯಾಗಿ ಹತ್ತು ವರ್ಷಗಳಾದರೂ ತಾನಿನ್ನೂ ತನ್ನ ಹೆಂಡತಿಯ ಬೆತ್ತಲೆ ಶರೀರವನ್ನು ಬೆಳಕಿನಲ್ಲಿ ಕಂಡೇ ಇಲ್ಲ ಎಂದು. ಅಂತೆಯೇ ಒಂದು ಸಮಾಜದ ಹೆಣ್ಣಿನ ಸೆಕ್ಷುಯಾಲಿಟಿಯು ಹಿಂದೂ ಧಾರ್ಮಿಕ ಕಟ್ಟಳೆಗಳಿಂದ ರೂಪುಗೊಂಡಿರುವುದರಿಂದ ಕಾಮದ ವಿಷಯವು ಹೊರನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ.
ಮೊಗಸಾಲೆಯವರ ಸಾಹಿತ್ಯ ಕೃತಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಕಾದಂಬರಿಗಳಲ್ಲಿ ಕಾಮ ಎಂದೂ ಗೈರುಹಾಜರಿಯಾಗಿಲ್ಲ. ಅದನ್ನೊಂದು ದೈಹಿಕ ಅಗತ್ಯವೆಂದು ಅವರ ಹಿಂದಿನ ಕೃತಿಗಳಲ್ಲಿನ ಪಾತ್ರಗಳು ಬಗೆಯುತ್ತವೆ. ಮುಖಾಂತರ ಮತ್ತು ಉಲ್ಲಂಘನೆ ಕೃತಿಗಳಲ್ಲಿ ಇದಕ್ಕೆ ಉದಾಹರಣೆಗಳನ್ನು ಕಾಣಬಹುದು. ಧಾತುವಿಗೆ ಸಂಬಂಧಿಸಿದಂತೆ ಈ ವ್ಯಾಖ್ಯೆಯು ಮನೋದೈಹಿಕ ಅಗತ್ಯಗಳ ಪಾತಳಿಗೆ ನೆಗೆಯುತ್ತದೆ. ಓದುಗನು ಮತ್ತು ಲೇಖಕ ಈ ಪಾತ್ರಗಳ ನಿರ್ವಹಣೆಯಲ್ಲಿ ಅನುಭವಿಸುವುದು ಅರ್ಜೆಂಟೈನೀ ಲೇಖಕ ಎಡ್ವರ್ಡೋ ಸಚೇರಿಯ ತೊಳಲಾಟದಂತೆ: ನಮ್ಮ ಸಮಸ್ಯೆಗಳು ಇಲ್ಲಿ ಪಾತ್ರಗಳ ಸಮಸ್ಯೆಗಳಾಗಿವೆ. ಇಲ್ಲಿನ ಕೆಲವು ಪಾತ್ರಗಳಿಗೆ ಇತಿಹಾಸವೆಂದರೆ ಗತವಲ್ಲ, ಅದು ಗತವನ್ನು ಕುರಿತು ನಮ್ಮಲ್ಲಿರುವ ನೆನಪು. ಈ ನೆನಪುಗಳ ನಿರ್ವಹಣೆಯಂತೆ ಧಾತು ನಿರೂಪಿತವಾಗಿದೆ. ಸುಬ್ರಾಯ ಚೊಕ್ಕಾಡಿಯವರ ಬೆನ್ನುಡಿ ನೆನಪಿಸುವಂತೆ ಬಹಿರಂಗದ ಬೃಹತ್ ಕ್ಯಾನ್ವಾಸಿನ ಮೇಲೆ ದೊಡ್ಡದೊಡ್ಡ ಚಿತ್ರಗಳನ್ನು ಚಿತ್ರಿಸುತ್ತಿದ್ದ, ಅದನ್ನು ನಿರ್ವಚಿಸುತ್ತಿದ್ದ ಮೊಗಸಾಲೆಯವರು ಅಂತರಂಗದ ಜಗತ್ತಿನ ಮಬ್ಬು ಬೆಳಕಿನ ಇಕ್ಕಟ್ಟಾದ ಹಾದಿಯಲ್ಲಿ (ಇಲ್ಲಿ) ಆಳಕ್ಕಿಳಿಯುತ್ತಿದ್ದಾರೆ.
ಕಾಮವೆಂಬ ಪುರುಷಾರ್ಥವನ್ನು ನಿರ್ವಚಿಸುವಲ್ಲಿ ಒಂದು ಸುಸಂಗತ ನೆಲೆಯನ್ನು ಕತೆ ಮತ್ತು ಕಥನಕ್ಕೆ ಒದಗಿಸುವುದು ಕಷ್ಟದ ಕೆಲಸ. ಸುಧೀರ್ ಕಕ್ಕರ್ ಅವರು ತಮ್ಮ ಮನೋವಿಶ್ಲೇಷಕ ಕೃತಿಗಳಲ್ಲಿ ನಿರ್ವಚಿಸಿದಂತೆ ಮೊಗಸಾಲೆಯವರು ಮಾಡಲು ಬರುವುದಿಲ್ಲ. ಒಬ್ಬರು ಮನೋವಿಶ್ಲೇಷಕರಾದರೆ ಇನ್ನೊಬ್ಬರು ಕಥೆಗಾರ, ಕಾದಂಬರಿಕಾರ. ತನ್ನ ಕೃತಿಯೊಂದು ಬೋಧನೆಯಂತೆ ಆಗದಿರುವ ಎಚ್ಚರವನ್ನು ಈ ವಸ್ತುವನ್ನು ಆಯ್ದುಕೊಂಡ ಕಾದಂಬರಿಕಾರ ವಹಿಸಬೇಕು. ಅದಕ್ಕೆಂದೇ ಮೊಗಸಾಲೆ ಒಬ್ಬ ಮನೋವೈದ್ಯನ ಪಾತ್ರವನ್ನು ಸೃಷ್ಟಿಸಿ ತನ್ನನ್ನು ತಾನು ಈ ಗುರುತರ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಇಲ್ಲಿ ಬರುವ ಆ ವೈದ್ಯ ಡಾ. ಪ್ರದೀಪ ವಕೀಲ ನಾರಾಯಣರಾಯರಿಗೆ ಹೇಳುವ ಮಾತು: ನಮ್ಮ ಜನಸಮೂಹದಲ್ಲಿ ಲಕ್ಷದಲ್ಲಿ ಒಬ್ಬನಿಗೂ ಲೈಂಗಿಕತೆ ಎಂದರೆ ಅದು ಆರ್ಟೂ ಹೌದು, ವಿಜ್ಞಾನವೂ ಹೌದು ಎಂದು ಗೊತ್ತಿರುವುದಿಲ್ಲ. ಅಂದರೆ ಈ ಕಾದಂಬರಿಯು ಉದ್ದೇಶಿಸಿರುವುದು ಆ ತೊಂಬತ್ತೊಂಬತ್ತು ಸಾವಿರದ ಒಂಭೈನೂರ ತೊಂಬತ್ತೊಂಬತ್ತು ಜನರನ್ನು. ಆದ್ದರಿಂದ ಈ ಕೃತಿಯು ಸಮರ್ಥನೀಯವೂ ಆಗಿದೆ; ಇದಕ್ಕೊಂದು ಸಾಂಸ್ಕೃತಿಕ ಚೌಕಟ್ಟೂ ದೊರೆತಿರುವುದರಿಂದ ಅಪೇಕ್ಷಣೀಯವೂ ಆಗಿದೆ.
ಈ ಕಾದಂಬರಿ ಮೂರು ಭಾಗಗಳಲ್ಲಿ ವರ್ಣಿತವಾಗಿದೆ. ಮೊದಲನೆಯ ಭಾಗದ ಕಥಾನಾಯಕ ನಾರಾಯಣರಾಯರು. ಇವರು ವಕೀಲಿ ವೃತ್ತಿ ನಡೆಸುತ್ತಿರುವವರು. ಮೊಗಸಾಲೆಯವರ ಮಾಲ್ಗುಡಿಯಾದ ಸೀತಾಪುರದಲ್ಲಿ ಅವರ ಪ್ರಾಕ್ಟೀಸು. ಅವರು ಇಲ್ಲಿಗೆ ಅಂಟಿಕೊಂಡ ಪ್ರದೇಶವಾದ ಮೋಂಟುಗುಡ್ಡೆಯವರು. ಇವರು ಸಾಹಿತ್ಯದಲ್ಲಿ ಕೃಷಿಮಾಡುತ್ತಾ ನಾಮೋ ಎಂಬ ಗುಪ್ತನಾಮದಲ್ಲಿ ಪ್ರಕಟಿಸಿದವರು. ರಾಜ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದವರು. (ನಾಮೋ ಮಾತ್ರ ನಾ. ಮೊಗಸಾಲೆಯವರಿರಬೇಕು, ಬೇಕಂತಲೇ ಮೋಗೆ ದೀರ್ಘವೊಂದನ್ನು ಬಳಸಿದ್ದಾರೆ ಎಂದು ನನಗೆ ತೋರಿದೆ.) ನಾರಾಯಣರಾಯರು ತಮಗೆ ಅರವತ್ತೊಂದು ವರ್ಷ ವಯಸ್ಸಾದಾಗ ಹೆಂಡತಿಯನ್ನು ಕಳೆದುಕೊಳ್ಳುತ್ತಾರೆ. ಇನ್ನೊಂದು ಮದುವೆ ಮಾಡಿಕೊಳ್ಳಲು ಆಪ್ತೇಷ್ಟರ ಸಲಹೆ. ರಾಯರಿಗೂ ಹಾಗೇ ಅನ್ನಿಸಿದೆ. ಇಲ್ಲಿಂದ ಕತೆ ತನ್ನ ಉದ್ದೇಶಕ್ಕೆ ದುಡಿಯಲು ಶುರುವಿಟ್ಟುಕೊಳ್ಳುತ್ತದೆ.
ನಮ್ಮ ಸಮಸ್ಯೆಗಳು ಇಲ್ಲಿ ಪಾತ್ರಗಳ ಸಮಸ್ಯೆಗಳಾಗಿವೆ. ಇಲ್ಲಿನ ಕೆಲವು ಪಾತ್ರಗಳಿಗೆ ಇತಿಹಾಸವೆಂದರೆ ಗತವಲ್ಲ, ಅದು ಗತವನ್ನು ಕುರಿತು ನಮ್ಮಲ್ಲಿರುವ ನೆನಪು. ಈ ನೆನಪುಗಳ ನಿರ್ವಹಣೆಯಂತೆ ಧಾತು ನಿರೂಪಿತವಾಗಿದೆ. ಸುಬ್ರಾಯ ಚೊಕ್ಕಾಡಿಯವರ ಬೆನ್ನುಡಿ ನೆನಪಿಸುವಂತೆ ಬಹಿರಂಗದ ಬೃಹತ್ ಕ್ಯಾನ್ವಾಸಿನ ಮೇಲೆ ದೊಡ್ಡದೊಡ್ಡ ಚಿತ್ರಗಳನ್ನು ಚಿತ್ರಿಸುತ್ತಿದ್ದ, ಅದನ್ನು ನಿರ್ವಚಿಸುತ್ತಿದ್ದ ಮೊಗಸಾಲೆಯವರು ಅಂತರಂಗದ ಜಗತ್ತಿನ ಮಬ್ಬು ಬೆಳಕಿನ ಇಕ್ಕಟ್ಟಾದ ಹಾದಿಯಲ್ಲಿ (ಇಲ್ಲಿ) ಆಳಕ್ಕಿಳಿಯುತ್ತಿದ್ದಾರೆ.
ಮೊಗಸಾಲೆಯವರಿಗೆ ಈ ಕೃತಿ ರಚನೆಗೆ ದೊರೆತ ಪ್ರೇರಣೆಗಳು ಎರಡು: ಮೊದಲನೆಯದು ಇದಕ್ಕೆ ಆಧಾರವಾದ ಮನದ ಮಂದಿನ ಮಾಯೆ ಎಂಬ ಅವರದೇ ಸಣ್ಣಕತೆಗೆ ದೊರೆತ ಪ್ರೇರಣೆ. ಈ ಕತೆ ಪ್ರಜಾವಾಣಿಯಲ್ಲಿ ಬಂದಿತ್ತು. ಆ ಕತೆ ಇಡೀ ಕಾದಂಬರಿಯಲ್ಲಿ ಪುನರುಕ್ತವಾಗಿದೆ. ಅದರ ಉಳಿದ ಆಯಾಮಗಳು ಆಗ ಸ್ಪಷ್ಟವಾಗಿರಲಿಲ್ಲ. ಆದರೆ ಅದೊಂದು ಅವಸರದ ಮುಕ್ತಾಯವೆಂಬ ಭಾವ ಮನಸಿಗೆ ಬಂದಿತ್ತು. ಇದು ಒಮ್ಮೊಮ್ಮೆ ಅಭಿವ್ಯಕ್ತಿಯಲ್ಲಿನ ಅಸ್ಪಷ್ಟತೆಯಂತೆ. ಇನ್ನೊಂದು: ಆ ಕಥಾನಕದ ಮೂಲಕ ಸ್ತ್ರೀ ಪಾತ್ರವೊಂದನ್ನು ಅವರು ಸೃಷ್ಟಿಸಿದ್ದರು. ಈಗ ಅದನ್ನು ವಿಸ್ತರಿಸಿದ್ದಾರೆ. ಅದರ ಮೂಲಕ ಪುರುಷಾರ್ಥದ ವಿವರಣೆಗೆ ತೊಡಗಿಕೊಳ್ಳುವುದಕ್ಕೆ ಅವರಿಗೆ ಸಮರ್ಥವಾದ ವಿಶಾಲವಾದ ಭೂಮಿಕೆಯೊಂದು ಲಭಿಸಿದೆ. ಆ ಸ್ತ್ರೀ ಪಾತ್ರವೊಂದು ಮಾಯಾಜಿಂಕೆಯಂತೆ ಕಾದಂಬರಿಯಲ್ಲಿ ಸೃಷ್ಟಿಯಾಗಿದೆ. ಇದೊಂದು ತಾಂತ್ರಿಕ ಅನುಕೂಲವಾಗಿದೆ.
ಇಲ್ಲಿನ ಸ್ತ್ರೀ ಪಾತ್ರದ ನಿರ್ವಚನವನ್ನು ಕುರಿತು ಎಂ ಎಸ್ ಆಶಾದೇವಿ ತಮ್ಮ ಮುನ್ನುಡಿಯಲ್ಲಿ ಸವಿವರವಾಗಿ ಪ್ರಸ್ತಾಪಿಸಿದ್ದಾರೆ. ಗಂಡು ಹೆಣ್ಣಿನ ಸಂಬಂಧದ ಸ್ಥಾಪಿತ ಸಮೀಕರಣವು ಬದಲಾಗುವ ಏಕೈಕ ದಾರಿಯೆಂದರೆ ಇಬ್ಬರ ಸ್ವಗ್ರಹಿಕೆಗಳು ಮತ್ತು ಸಂವೇದನೆಗಳು ಪರಸ್ಪರ ಬದಲಾಗುವಿಕೆ ಎಂದು ಸಮಕಾಲೀನ ಮಹಿಳಾ ಸಂಕಥನವು ನಂಬಿದೆ ಎನ್ನುವ ಅವರು ಈ ಕಾದಂಬರಿಯ ನಾಯಕ ಪಾತ್ರ ಆ ನಿಟ್ಟಿನಲ್ಲಿ ಆತ್ಮವಿಮರ್ಶೆಗೆ ಒಟ್ಟಿಕೊಳ್ಳುವುದು ಮತ್ತು ಆ ಆತ್ಮ ವಿಮರ್ಶೆಯೇ ಮೂಲವಾದ ಬದಲಾವಣೆಗೂ ಒಡ್ಡಿಕೊಳ್ಳುವುದನ್ನು ಗಮನಿಸಿ ಅದನ್ನು ಅತಿ ಮುಖ್ಯವೆಂದು ಭಾವಿಸುತ್ತಾರೆ.
ಮದುವೆಯಾದ ಮಗನಿರುವ ರಾಯರಿಗೆ ಮತ್ತೆ ಮದುವೆಯಾಗುವ ಆಲೋಚನೆಯೊಂದು ಬರುತ್ತದೆ. ಅದು ಬಾಹ್ಯ ಪರಿಣಾಮಗಳಿಂದ ಮೂಡಿರುವುದು ನಿಜವಾದರೂ ಅದನ್ನು ಮನೋವೈಜ್ಞಾನಿಕ ನಿಕಷಕ್ಕೊಡ್ಡಿ ತೀರ್ಮಾನಿಸುವ ಒಂದು ತರ್ಕಕ್ಕೆ ರಾಯರ ಮನಸ್ಸು ಸಜ್ಜಾಗುತ್ತದೆ. ತನ್ನ ಆಪ್ತಮಿತ್ರ ಡಾ. ಪ್ರದೀಪನ ಮುಂದೆ ಈ ಪ್ರಸ್ತಾವವನ್ನಿಡುವ ರಾಯರಿಗೆ ಎದುರಾಗುವುದು ತಮಗೆ ಮದುವೆ ಬೇಕಿರುವುದು ದೈಹಿಕ ಅಗತ್ಯಕ್ಕೋ, ಆತ್ಮ ಸಂಗಾತಕ್ಕೋ ಎಂಬ ಪ್ರಶ್ನೆ. ಇದರ ಮೂಲಕವೇ ಅವರು ತಮ್ಮ ಅರಿವನ್ನು ಶೋಧಿಸಿಕೊಳ್ಳುತ್ತಾರೆ. ತಮ್ಮ ಮತ್ತು ತಮ್ಮ ತೀರಿಕೊಂಡ ಹೆಂಡತಿಯ ನಡುವೆ ಇದ್ದಿದ್ದು ಸುಖೀ ಸಂಸಾರವೆಂದು ತಾವು ಭಾವಿಸಿಕೊಂಡಿದ್ದದ್ದು ಸುಳ್ಳೆಂದು ಅವರಿಗೆ ಅರಿವಾಗುವುದು ಆಘಾತದ ವಿಚಾರವಾಗುತ್ತದೆ. ತಾವೀಗ ಘಟಿಸಿಹೋಗಿದ್ದ ಪ್ರಮಾದವನ್ನು ಸರಿಪಡಿಸುವ ಯಾವ ಹಾದಿಯೂ ಇಲ್ಲ. ಹಾಗಾಗಿಯೇ ಅವರಲ್ಲಿದ್ದ ಪುರುಷಾಹಂಕಾರವು ನಿರಸನಗೊಳ್ಳುತ್ತದೆ. ಮದುವೆಯ ವಿಚಾರವನ್ನವರು ಇತಿಶ್ರೀ ಹಾಡಿ ಮುಗಿಸಿ ಆಗ್ಗೆ ನಿರುಮ್ಮಳವಾಗುತ್ತಾರೆ ನಿಜ. ಆದರೆ, ರಾಯರ ಸೋಲೂ ಆಗುವ ಈ ನಿರ್ಣಯವು ಮುಂದೆ ರಾಧೆಯೆಂಬ ಅವರ ಸಾಹಿತ್ಯಾಭಿಮಾನಿಯೆಂದು ಕರೆದುಕೊಳ್ಳುವ ಹೆಣ್ಣಿನ ಮುಂದೆ ಕ್ಷೀಣಿಸಿಬಿಡುತ್ತದೆ. ಅವರ ಮನೋಸಂಸ್ಕಾರದಲ್ಲಿ ಬೇರೆ ಮಗ್ಗುಲ ಪ್ರೀತಿಯೊಂದು ಠಿಕಾಣಿ ಹೂಡಿಬಿಡುತ್ತದೆ. ಆಗ ಅವರಿಗೆ ಡಾ. ಪ್ರದೀಪರ ಸಲಹೆಯ ಅಗತ್ಯ ಬೀಳುವುದಿಲ್ಲ.
ಬಿಡುಗಡೆ ಹೊಂದಿದ ಹೆಣ್ಣಿನ ಕೈಯಲ್ಲಿ ಸಂಕಲೆಗಳ ಗುರುತುಗಳಿವೆ ಎಂಬ ಮಾತಿದೆ. ಅವಳ ಮನಸ್ಸಿನಲ್ಲೂ ಮಾಯದ ಕರೆಗಳಿವೆ. ಪ್ರತಿ ಹೆಣ್ಣಿಗೂ ಒಂದು ಮಾಯದ ಕರೆ ಕಾಣುತ್ತದೆ; ಒಂದು ಮಾಯದ ಕರೆ ಕೇಳಿಸುತ್ತದೆ. ಕೇಳಿಸುವ ಕರೆ ಉಲ್ಲಂಘನೆಯನ್ನು ಬಯಸುತ್ತದೆ. ಕಾಣುವ ಕರೆಯನ್ನು ಅರಿಯಬಲ್ಲಾತ ಪುರುಷಾಹಂಕಾರವು ನಿರಸನಗೊಂಡವನು. ಆದ್ದರಿಂದಲೇ ಒಬ್ಬ ವಯಸ್ಸಾದವನಿಗೂ, ಹುಡುಗಿಯೊಬ್ಬಳಿಗೂ ನಡುವೆ ಅನೈತಿಕ ಸಂಬಂಧವೊಂದು ಉಂಟೆಂಬ ಗುಮಾನಿ ಕೇಳಿಬಂದಾಗ ರಾಯರು ಯೋಚಿಸುವುದು ಆ ಹುಡುಗಿಯ ಲೈಂಗಿಕ ದಾಂಪತ್ಯದ ಭವಿಷ್ಯವನ್ನು. ಈ ಪಾರ್ಶ್ವಿಕ ಅರಿವು ಹೆಣ್ಣನ್ನು ಪದಾರ್ಥವೆಂದು ಬಗೆಯುವ ಪುರುಷಾಹಂಕಾರ ಪಡೆದುಕೊಳ್ಳುವ ಬಿಡುಗಡೆಯಾಗಿ ತೋರುತ್ತದೆ. ಇನ್ನೂ ರಾಯರಲ್ಲಿ ಆ ಮಾನಸಿಕ ಅರಿವು ಮೂಡಿಲ್ಲವೆಂಬ ಅನುಮಾನಕ್ಕೂ ಅದು ಕಾರಣವಾಗುತ್ತದೆ.
ಮದುವೆಯ ವಿಚಾರವನ್ನವರು ಇತಿಶ್ರೀ ಹಾಡಿ ಮುಗಿಸಿ ಆಗ್ಗೆ ನಿರುಮ್ಮಳವಾಗುತ್ತಾರೆ ನಿಜ. ಆದರೆ, ರಾಯರ ಸೋಲೂ ಆಗುವ ಈ ನಿರ್ಣಯವು ಮುಂದೆ ರಾಧೆಯೆಂಬ ಅವರ ಸಾಹಿತ್ಯಾಭಿಮಾನಿಯೆಂದು ಕರೆದುಕೊಳ್ಳುವ ಹೆಣ್ಣಿನ ಮುಂದೆ ಕ್ಷೀಣಿಸಿಬಿಡುತ್ತದೆ. ಅವರ ಮನೋಸಂಸ್ಕಾರದಲ್ಲಿ ಬೇರೆ ಮಗ್ಗುಲ ಪ್ರೀತಿಯೊಂದು ಠಿಕಾಣಿ ಹೂಡಿಬಿಡುತ್ತದೆ. ಆಗ ಅವರಿಗೆ ಡಾ. ಪ್ರದೀಪರ ಸಲಹೆಯ ಅಗತ್ಯ ಬೀಳುವುದಿಲ್ಲ.
ಇದೊಂದು ಸಂಕೀರ್ಣ ಪ್ರಕ್ರಿಯೆ. ಇದರ ದಾಖಲೆಯಾದ ಕತೆಯನ್ನು ಸೊಸೆ ಅರ್ಥಮಾಡಿಕೊಳ್ಳದೇ ಹೋಗುವುದು ಆಕೆಗೆ ಈ ಸಂಕೀರ್ಣತೆಯ ಅರಿವಿನ ಸ್ಫೋಟವಾಗಿಲ್ಲ ಎನ್ನುವುದನ್ನು ತೋರುತ್ತದೆ. ಲಕ್ಷದಲ್ಲೊಬ್ಬರು ಎಂದ ಡಾ. ಪ್ರದೀಪರ ಮಾತಿಗೆ ಇದು ಪುಷ್ಟಿಯೊದಗಿಸುತ್ತದೆ. ಈ ಅರಿವಿನ ಸ್ಫೋಟವು ಭಾರತದ ಅನುಭಾವಿಗಳಲ್ಲಿ ಕಂಡುಬರುವುದಕ್ಕಿಂತ ಭಿನ್ನವೂ ಅಭಿನ್ನವೂ ಆಗಿರುವಂಥ ಎರಡು ಪಾತಳಿಗಳನ್ನು ಹೊಂದಿರುತ್ತದೆ. ಈ ಹಂತದಲ್ಲಿ ರಾಯರ ಬದುಕಿನಲ್ಲಿ ತಿರುವೊಂದು ಎದುರಾಗುತ್ತದೆ. ಅದಕ್ಕೆ ಕಾರಣ ರಾಧಾ ಎಂಬ ಸದ್ಯ ಮರೀಚಿಕೆಯ ಪ್ರವೇಶ. ಈ ಪ್ರವೇಶಕ್ಕೆ ಕಾರಣ ರಾಯರ ಕತೆ; ಮನದ ಮುಂದಣ ಮಾಯೆ ಕಥೆ ಪ್ರಕಟವಾಗಿ ಅದು ಬಹಳ ಜನರ ಗಮನವನ್ನು ಸೆಳೆದಿರುವುದು.
ಎರಡನೆಯ ಭಾಗವು ಈ ರಾಧಾ ಆಗಿದ್ದ ಶಶಿ ಉಡುಪ ಎಂಬ ಸ್ಪಿನ್ಸ್ಟರ್ನ ಕತೆ. ಇಲ್ಲಿಯವರೆಗೆ ಜಿಜ್ಞಾಸೆಯಲ್ಲಿ ತೊಡಗಿದ್ದ ಕಥನವು ಸಂಘರ್ಷದತ್ತ ಮುಖಮಾಡುತ್ತದೆ. ಮೊದಲಿಗೇ ನಮ್ಮನ್ನು ಎದುರುಗೊಳ್ಳುವುದು ಸಮುದ್ರವನ್ನು ನೋಡಲು ಬಿಡದ ನೀನು ಎಂಥದು ನೋಡಲಿಕ್ಕಿದೆ ಸಮುದ್ರದಲ್ಲಿ ಎಂದ ಶಶಿಯ ಹಿರಿಯರು. ಈ ಸಂಘರ್ಷಮಯ ಬದುಕಿನ ನಾಯಕಿಯಾದ ಫೋನಿನ ರಾಧೆಯು ಅರಿವಿನ ಹಾದಿ ಕ್ರಮಿಸಿದವಳು ಮತ್ತು ಈ ಜಗವೊಡ್ಡುವ ಕಾರ್ಪಣ್ಯಗಳಿಗೆ ಜಗ್ಗದೆ ಬದುಕಿದವಳು. ಆಕೆ ಮೊದಲ ಸಲ ಸಮುದ್ರ ನೋಡುವುದು ತಾಯಿಯ ನಿಧನದ ಸಂದರ್ಭದಲ್ಲಿ. ಶ್ರಾದ್ಧಕ್ರಿಯೆ ನಡೆಯುವಲ್ಲಿ. ಈ ಶಶಿ ಅಲಿಯಾಸ್ ರಾಧಳ ಅರವತ್ತು ವರ್ಷಗಳ ಬದುಕಿನಲ್ಲಿ ಆಕೆ ಪುರುಷಾಹಂಕಾರವನ್ನು ನಿವಾರಿಸಿಕೊಳ್ಳುವುದರಲ್ಲೇ ಕಳೆಯುತ್ತಾಳೆ. ನಿಜವಾಗಿಯೂ ಈ ಭಾಗದ ಕಥನ ಕ್ರಮ ಬಹಳ ಸುಂದರವೂ, ಭಾವತೀವ್ರವೂ, ಬಣ್ಣನೆಯ ಸ್ವರೂಪದ್ದೂ ಆಗಿದೆ. ಅದರಿಂದಲೇ ನಾನು ಜಿಜ್ಞಾಸೆ ಮತ್ತು ಸಂಘರ್ಷವೆಂಬ ಎರಡು ಪರಿಭಾಷೆಗಳನ್ನು ಶಶಿ ಉಡುಪರಿಗೆ ಸಂಬಂಧಿಸಿ ಬಳಸಲು ಬಯಸುತ್ತೇನೆ. ಈ ಸಂಘರ್ಷಗಳಲ್ಲಿ ಆಕೆ ತೊಳಲುವ ಬಗೆ ಆಕೆ ವಿವಾಹ ಬದುಕಿಗೆ ತಿರುಗದಿರಲು ಪ್ರೇರಣೆಗಳಾಗುತ್ತವೆ. ಈಕೆಯ ಬದುಕಿನ ಆಲೋಚನೆಗೆ ಹೊಸ ನೋಟವನ್ನು ಒದಗಿಸುವುದು ಗೆಳತಿ ಹೇಳುವ ಮನುಷ್ಯನಾಗಿ ಹುಟ್ಟಿ ಬಂದ ಮೇಲೆ ಗಂಡಿಗೆ ಹೆಣ್ಣು ಅಂದರೆ, ಹೆಣ್ಣಿಗೆ ಗಂಡು ಅಂದರೆ ಏನು ಎಂದು ಗೊತ್ತಿರಬೇಕು. ಇಲ್ಲವಾದರೆ ಜೀವನ ಎನ್ನುವುದು ಅಪೂರ್ಣವಾದ ಹಾಗೆ ಎಂಬ ಮಾತು ಹಾಗೂ ಅಜ್ಜಿ ಹೇಳಿದ ಅಜ್ಜನ ಮಾತು ಮತ್ತು ಸಮಯೋಚಿತವಾಗಿ ಓದಲೊದಗಿದ ಮನದ ಮುಂದಿನ ಮಾಯೆ ಎಂಬ ಕತೆ. ಮೂರನೆ ಭಾಗದ ಕೊನೆಯಲ್ಲಿ ಇವರು ಪರಸ್ಪರ ಆತ್ಮ ಸಂಗಾತರಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.
ಬಹುಶಃ ಮೊದಲೇ ಮನದ ಮುಂದಿನ ಮಾಯೆ ಕತೆಯನ್ನು ಓದಿದ್ದರಿಂದಲೋ ಏನೋ, ಬೀಜರೂಪಿ ಗ್ರಹಿಕೆಯ ಲಂಬಿತ ಪ್ರಸ್ತುತಕ್ಕೆ ಪಾತ್ರಗಳನ್ನು ದುಡಿಸಲಾಗಿದೆ ಎನ್ನಿಸುತ್ತದೆ. ಇದು ಇಂತಹ ಪ್ರಯತ್ನಗಳನ್ನೆಲ್ಲ ಕಾಡುವ ಸಮಸ್ಯೆಯೇ. ಆಶಾದೇವಿಯವರು ಸರಿಯಾಗಿಯೇ ಗ್ರಹಿಸಿರುವಂತೆ ಧಾರವಾಡದ ಸಾಹಿತ್ಯ ಸಂಭ್ರಮದ ಭಾಗ ಕಾದಂಬರಿಗೆ ಅನಿವಾರ್ಯವಾಗಿರಲಿಲ್ಲ. ಆದರೆ ರಾಯರು ಮತ್ತು ಶಶಿ ಕಾರವಾರದ ರೆಸ್ಟುರಾದಲ್ಲಿ ಭೇಟಿಯಾಗುವುದು ಸಹನೀಯವಾಗಿದೆ. ಮುಕ್ತಾಯವು ಉಚಿತವೂ ಆಗಿದೆ.
ಧಾತು ಕಾದಂಬರಿ ಪ್ರಾಯಶಃ ಕನ್ನಡಕ್ಕೆ ಹೊಸಬಗೆಯ ಓದು. ಉಲ್ಲಂಘನೆ ಮತ್ತು ಮುಖಾಮುಖಿಯ ನರೇಟಿವ್ಗಳಿಂದ ಈ ಕೃತಿ ದೂರ ಸರಿದಿಲ್ಲ. ಬದಲಾವಣೆ ಇರುವುದು ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ. ಈ ಹಿನ್ನೆಲೆಯಲ್ಲಿ ಕಾದಂಬರಿ ಅನನ್ಯವಾಗಿದೆ.
ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.
ನಾನು ಕಾದಂಬರಿ ಯನ್ನು ಓದಿಲ್ಲ. ನಿಮ್ಮ ವಿಮರ್ಶೆ ಓದಿದ ಮೇಲೆ ಕಾದಂಬರಿಯ ಬಗೆಗೆ ಕುತೂಹಲ ಹುಟ್ಟಿದೆ. ಲೈಂಗಿಕತೆ ಬಗ್ಗೆ ಕಾದಂಬರಿ ಬರೆಯುವುದಾಗಲೀ ನೀವು ಹೇಳಿದಂತೆ ಮಾತನಾಡುವುದು ಅಷ್ಟು ಸರಳವಲ್ಲ, ಇದನ್ನು ನಾ ಮೊಗಸಾಲೆಯವರು ನಿಭಾಯಿಸಿದ ರೀತಿಯನ್ನು ನೀವು ಮೆಚ್ಚಿಕೊಂಡಿದ್ದೀರೆಂದರೆ ಕಾದಂಬರಿ ಚೆನ್ನಾಗಿಯೇ ಇರಬೇಕು. ನಾನು ಕಾದಂಬರಿ ಓದದಿದ್ದರೂ ಎಂದಿನಂತೆ ನಿಮ್ಮ ವಿಮರ್ಶೆಯ ಭಾಷೆ, ಶೈಲಿ ಹಾಗೂ ಅದರ ಪ್ರಬುದ್ಧತೆಯಿಂದಾಗಿ ಕಾದಂಬರಿ ಓದಬೇಕೆನಿಸಿದೆ.
ಅಭಿನಂದನೆಗಳು
ಇದು ಗಿರಿಜಾ ಶಾಸ್ತ್ರಿ ಅವರ ಪ್ರತಿಕ್ರಿಯೆ
ನಾ. ಮೊಗಸಾಲೆ ಅವರ ‘ಧಾತು’ ಕಾದಂಬರಿಯ ವಿಶ್ಲೇಷಣೆ ಆರ್ . ವಿಜಯರಾಘವನ್ ಬಹಳ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. ಕಥಾವಸ್ತು, ಕಥನದ ವಿಧಾನ,
ಮುಖ್ಯ ಪಾತ್ರಗಳ ಸ್ವಭಾವ ಸಂಘರ್ಷದ ಕಡೆ ನಮ್ಮ ಗಮನ ಸೆಳೆದು ‘ಧಾತು’ ವನ್ನು ಬೇಗ ಓದಬೇಕಂಬ ಧಾವಂತ ಹುಟ್ಟಿಸಿದ್ದಾರೆ.
—-ಮಾಲೂರು ವೆಂಕಟಸ್ವಾಮಿ
ಇವತ್ತು ನಿನ್ನ ಲೇಖನ ಓದಿದೆ. ‘ಧಾತು’ವನ್ನು ನೀನು ಗ್ರಹಿಸಿರುವ ರೀತಿ ಸರಿಯಾಗಿದೆ. ಸಣ್ಣಕತೆಯೊಂದು ಕಾದಂಬರಿಯಾದಾಗ ಅದರ ಒಟ್ಟು ಸಂವಿಧಾನದಲ್ಲಿ ಸ್ವಲ್ಪಮಟ್ಟಿಗೆ ಸಡಿಲತೆಯ ಸಾಧ್ಯತೆ ನಿರೀಕ್ಷಿತವೇ. ಇನ್ನು ಕಾಮವನ್ನು ಕತೆಯೊಂದರಲ್ಲಿ ಗಂಭೀರವಾಗಿ ಬೆರೆಸಿ ಹೇಳುವುದರ ನಿನ್ನ ಕಷ್ಟವನ್ನು ಮೊಗಸಾಲೆಯವರಲ್ಲೂ ಸಹಜವಾಗಿ ಗುರುತಿಸಿರುವುದು ಪ್ರಾಮಾಣಿಕ ವಿಮರ್ಶೆಯಾಗಿದೆ. ಲೇಖನದ ಕೊನೆಯ ಮಾತುಗಳು ಇಷ್ಟವಾದುವು. ? ಇದು ಎನ್. ನರಹರಿ ಅವರ ಇಮೇಲ್