ನಿರಂತರ ದುಡಿಮೆ ಹಾಗೂ ಹಣಗಳಿಕೆಯ ಓಟಕ್ಕೆ ಬಿದ್ದು, ಸ್ವಂತ ಸುಖವನ್ನೇ ಕಡೆಗಣಿಸುವುದು, ಅರ್ಥವಿಲ್ಲದ ತ್ಯಾಗದ ಹೊರೆಯನ್ನು ಹೊತ್ತು ಮನೆಯವರ ಹೊಟ್ಟೆ ಉರಿಸುವುದು ಯಾವ ಪುರುಷಾರ್ಥಕ್ಕಾಗಿ? ಸದಾ ತನ್ನ ಸುಖದ ಹುಡುಕಾಟದಲ್ಲೇ ಉಳಿದು ಬೇರೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಹಣವೊಂದೇ ಕಾಡುವ ಬಗೆಯಲ್ಲಿ ಎಷ್ಟೊಂದು ವೈವಿಧ್ಯವಿದೆ ಅಲ್ಲವೇ? ನಾವೆಲ್ಲ ಮಾತಿನ ಭರದಲ್ಲಿ, “ಹೋಗುವಾಗ ಹೊತ್ತುಕೊಂಡು ಹೋಗೋಕೆ ಆಗುತ್ತೇನ್ರೀ? ಎಷ್ಟು ಸಂಪಾದಿಸಿದರೂ ಬರಿಗೈಯಲ್ಲೇ ಹೋಗೋದು. ಹಣದಿಂದ ಸುಖ ಸಿಗತ್ತೆ ಎಂದುಕೊಂಡವರು ಮೂರ್ಖರು. ಹಣದಿಂದ ಸೌಕರ್ಯ ಸಿಗಬಹುದು. ಸುಖ ದುಃಖ ಮನಸ್ಸಿನ ಸ್ಥಿತಿಯಷ್ಟೇ” ಎಂದು ಉದ್ದುದ್ದ ಹೇಳಿಕೆ ಕೊಡುತ್ತೇವೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ
“ಒಂದು ದಿನಕ್ಕೂ ಇದು ಇಷ್ಟ. ಅದು ಕಷ್ಟ ಅಂತ ಹೇಳಿಕೊಂಡವರಲ್ಲ. ರುಚಿಯಾದ ಅಡುಗೆ, ಹಿತವಾದ ನೋಟ, ನಾಲ್ಕುದಿನದ ಸುತ್ತಾಟ ಯಾವುದನ್ನೂ ಬಯಸದೆ, ಸದಾ ದುಡಿಮೆಯಲ್ಲೇ ಬದುಕು ಕಳೆದು ಹೊರಟೇ ಹೋದರು. ಅವರು ಇರಬೇಕಿತ್ತು. ಆಸೆಪಟ್ಟು ಮಾಡಿಸಿಕೊಂಡು ತಿನ್ನಬೇಕಿತ್ತು. ಮಕ್ಕಳ ಏಳಿಗೆ ಕಂಡು ಹೆಮ್ಮೆಪಡಬೇಕಿತ್ತು. ತಾವು ಸಂಪಾದಿಸಿದ ಹಣದ ಉಪಯೋಗ ಪಡೆಯಬೇಕಿತ್ತು. ಏನೆಲ್ಲಾ ಅನ್ನಿಸತ್ತೆ ಗೊತ್ತಾ? ಕೆಲವೊಮ್ಮೆ ಅವರು ದಣಿವರಿಯದೆ ದುಡಿದು, ಜೀವ ತೇದು ನಮ್ಮನ್ನು ತಂಪಾಗಿರಿಸಿ, ತಾವು ಮಾತ್ರ ಸುಖಪಡದೆ ಹೊರಟರಲ್ಲಾ ಎನ್ನಿಸಿ ತುತ್ತು ಗಂಟಲಿಗಿಳಿಯಲ್ಲ.” ಆಕೆ ತನ್ನ ಗಂಡನ ನೆನಪಿನಲ್ಲಿ ಕಣ್ಣೀರಾದರು. ಮಿತಿಮೀರಿದ ತ್ಯಾಗ, ಕಠಿಣ ನಿಲುವುಗಳು ಜೊತೆಯಿದ್ದವರನ್ನು ಬಾಧಿಸುವ ರೀತಿಗೆ ಮೂಕಳಾಗಿದ್ದೆ.
ಸಿಹಿತಿಂಡಿ, ಹೊಸಬಟ್ಟೆ, ಮನೆಗೊಂದು ವಸ್ತು, ವಾಹನ ತರಲು ಹಬ್ಬಕ್ಕೆ ಎದುರು ನೋಡುತ್ತಿದ್ದ ಕಾಲಘಟ್ಟದಿಂದ ಬೇಕೆನಿಸಿದಾಗ, ಬೇಕಾದ್ದನ್ನು ಕೊಳ್ಳುವ, ನಾಳೆಗಾಗಿ ಆಸೆಗಳನ್ನು ಮಿಗಿಸಿಕೊಳ್ಳದ ಈ ಕಾಲದವರೆಗೂ ನಮ್ಮ ನಡುವೆ ಇಂತಹವರಿದ್ದಾರೆ. ದುಡಿಮೆಯ ಓಟದಲ್ಲಿ, ಕೂಡಿಡುವ ಭರದಲ್ಲಿ, ಕಾಸಿಗೆ ಕಾಸು ಉಳಿಸುವುದರಲ್ಲಿ ತಮ್ಮನ್ನೇ ಕಳೆದುಕೊಂಡವರು. ಆರ್ಥಿಕ ಪರಿಸ್ಥಿತಿಯ ಸಬೂಬು ಹೇಳುವಂತಿಲ್ಲ. ಸರಳತೆಯ ಸೊಗಸು ಎನ್ನುವಂತಿಲ್ಲ. ನಿರಂತರ ದುಡಿಮೆಯ ಗಾಣದಲ್ಲಿ ಜೀವ ತೇಯ್ದುಕೊಂಡು, ಸುಖವನ್ನೇ ನಿರಾಕರಿಸುತ್ತಾ ನಡೆಯುವವರ ಕಥೆಯಿದು.
ಪ್ರತಿದಿನ ಮನೆಯಿಂದಲೇ ಊಟದ ಡಬ್ಬಿ ಕಟ್ಟಿಸಿಕೊಂಡು ಹೊರಟು, ನಡುವೆ ಟೀ/ಕಾಫಿಗೂ ಕಾಸು ಬಿಚ್ಚದೆ, ಸಿನಿಮಾ, ಹೋಟೆಲ್ಲು, ಷಾಪಿಂಗಿನ ಕನಸು ಕೂಡ ಕಾಣದೆ, ಸದಾ ಎಲ್ಲಿ ಎಷ್ಟು ಉಳಿಸಿದರೆ ಲಾಭವೆಂದು ಲೆಕ್ಕಾಚಾರದಲ್ಲೇ ಮುಳುಗೇಳುವವರು. ಮನೆಯಿಂದ ಆಚೆ ಕಾಲಿಟ್ಟರೆ ಖರ್ಚಿನ ಬಾಬ್ತು ಎಂದು ಮನೆಯಲ್ಲೇ ರಜೆ ಕಳೆಯುವವರು. ಆಯಾಕಾಲದ ಹಣ್ಣುತರಕಾರಿಗಳ ಬೆಲೆ ಇಳಿಯುವವರೆಗೂ, ಎಷ್ಟೇ ಆಸೆಯಿದ್ದರೂ ಕೊಳ್ಳದೆ ಉಳಿಯುವ, ಇರುವ ಮೂರು ಜೊತೆ ಉಡುಪಿನಲ್ಲೇ ಆಯಸ್ಸು ತೀರಿಸುವ, ಲಾಭ-ನಷ್ಟದ ಚಕ್ರದೊಳಗೆ ಬಂಧಿಯಾದ ಜನರು. ಸುಖಪಡುವುದು, ಹಣ ಖರ್ಚು ಮಾಡುವುದು ಪಾಪವೆಂದೇ ಅವರ ಭಾವನೆ. ಸುಖವೆಂದರೆ ದುಡ್ಡಿನಿಂದ ಕೊಳ್ಳಬಲ್ಲ ವಸ್ತುಗಳೆಂದೇ ಅಲ್ಲ. ಪ್ರಕೃತಿಯ ಸೊಬಗು, ಮುಗ್ಧ ಮಗುವಿನ ನಗು, ಹಿತವಾದ ಓದು, ಒಳ್ಳೆಯ ಸಂಗೀತ, ಅಡುಗೆ… ಹೀಗೆ ಯಾವುದನ್ನೂ ಮನಸಾರೆ ಪ್ರಶಂಸಿಸದ, ಅವುಗಳಿಂದ ಸುಖಪಡೆಯದ, ದುಡಿಮೆ ಹಾಗೂ ಗಳಿಕೆಯೇ ಬದುಕಿನ ಧ್ಯೇಯವಾದ ವ್ಯಕ್ತಿಗಳು.
ಅವರನ್ನು ಯಾರೆದುರಿಗೂ ದೂಷಿಸುವಂತಿಲ್ಲ. ತಪ್ಪೆಂದು ಕಟಕಟೆಯಲ್ಲಿ ನಿಲ್ಲಿಸುವ ಹಾಗಿಲ್ಲ. ಒಂದು ಹಿಡಿ ಅನ್ನ ಮಿಕ್ಕಿದರೆ, ಅರ್ಧ ಕ್ಯಾರೆಟ್ ಕೊಳೆತು ಹೋದರೆ, ಹಾಲಿನ ದರ ಎರಡು ರೂಪಾಯಿ ಹೆಚ್ಚಾದರೆ, ಆಸೆಪಟ್ಟು ಅವರಿಗಾಗಿ ಹೊಸಬಟ್ಟೆ ತಂದರೆ, ಹಳೇ ಪೇಪರ್ ಕೊಳ್ಳುವವನು ಹತ್ತು ರುಪಾಯಿ ಕಡಿಮೆಗೆ ಕೇಳಿದರೆ ತಲ್ಲಣಿಸಿ ಹೋಗಿರುತ್ತಾರೆ. ಅದಕ್ಕೆ ಬಡತನ ಕಾರಣವಲ್ಲ. ಸಾಕಷ್ಟು ಸ್ಥಿತಿವಂತರಾಗಿದ್ದರೂ, ಅರೆಕಾಸನ್ನೂ ಕಳೆದುಕೊಳ್ಳದೆ ಉಳಿಸಿಡಬೇಕೆಂಬ ಹಠ ಹಾಗಾಡಿಸುತ್ತದೆ. ಊರವರ ಕಣ್ಣಿಗೆ ದುಶ್ಚಟಗಳಿಲ್ಲದ, ಆಸ್ತಿಪಾಸ್ತಿ ಮಾಡಿಟ್ಟಿರುವ ಸದ್ಗೃಹಸ್ಥರು, ಮನೆಯವರ ಕಣ್ಣಿನಲ್ಲಿ ಕಾಡಿಸುವ ಭೂತವೆನ್ನಿಸಿರುತ್ತಾರೆ. ಇವರಿಗೆ ವಿರುದ್ಧ ದಿಕ್ಕಿನಲ್ಲಿ ನಡೆಯುವವರೂ ನಮ್ಮ ನಡುವಿದ್ದಾರೆ. ವಾರದಲ್ಲಿ ಐದು ದಿನ, ದಿನಕ್ಕೆ ಹತ್ತು ಹನ್ನೆರಡು ಗಂಟೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ, ತಿಂಗಳಾದರೆ ಬರುವ ಸಂಬಳ ಆಕಾಶದಿಂದ ಉದುರಿದ್ದೇನೋ ಎನ್ನುವಂತೆ ಖರ್ಚುಮಾಡಲು ನೆಪ ಹುಡುಕುವವರು. ವಾರಾಂತ್ಯದಲ್ಲಿ ಕುಡಿತ, ಮೋಜು, ಪ್ರವಾಸ, ಬಗೆಬಗೆಯ ಊಟತಿಂಡಿ ಎಂದು ಖರ್ಚು ಮಾಡಿದರಷ್ಟೇ ಸುಖ ಹೊಂದಲು ಸಾಧ್ಯ ಎಂದು ಭಾವಿಸಿರುವವರು. ಇರುವುದೊಂದೇ ಬದುಕು. ಇನ್ನೆಷ್ಟು ಘಂಟೆ ಮಿಕ್ಕಿದೆಯೋ ಎಂದು ನಾಳಿನ ಚಿಂತೆಯೇ ಇಲ್ಲದೆ, ಪೋಲು ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಅವರ ಪ್ರಕಾರ ಬದುಕು ಇರುವುದೇ, ದುಡಿಯುವುದೇ ನಮಗಾಗಿ ಮತ್ತು ನಮಗೋಸ್ಕರ ಮಾತ್ರ. ಮನೆಯವರ ಪಾಲಿಗೆ ಇಂತಹವರು ಬಿಸಿತುಪ್ಪ.
ಏಕಾಂತದಲ್ಲಿದ್ದಾಗ ಕಾಡುವ ಅನೇಕ ವಿಚಾರಗಳಲ್ಲಿ ಇದೂ ಒಂದು. ನಿರಂತರ ದುಡಿಮೆ ಹಾಗೂ ಹಣಗಳಿಕೆಯ ಓಟಕ್ಕೆ ಬಿದ್ದು, ಸ್ವಂತ ಸುಖವನ್ನೇ ಕಡೆಗಣಿಸುವುದು, ಅರ್ಥವಿಲ್ಲದ ತ್ಯಾಗದ ಹೊರೆಯನ್ನು ಹೊತ್ತು ಮನೆಯವರ ಹೊಟ್ಟೆ ಉರಿಸುವುದು ಯಾವ ಪುರುಷಾರ್ಥಕ್ಕಾಗಿ? ಸದಾ ತನ್ನ ಸುಖದ ಹುಡುಕಾಟದಲ್ಲೇ ಉಳಿದು ಬೇರೆಯವರ ಭಾವನೆಗಳನ್ನು ನಿರ್ಲಕ್ಷಿಸುವುದು ಎಷ್ಟು ಸರಿ? ಹಣವೊಂದೇ ಕಾಡುವ ಬಗೆಯಲ್ಲಿ ಎಷ್ಟೊಂದು ವೈವಿಧ್ಯವಿದೆ ಅಲ್ಲವೇ? ನಾವೆಲ್ಲ ಮಾತಿನ ಭರದಲ್ಲಿ, “ಹೋಗುವಾಗ ಹೊತ್ತುಕೊಂಡು ಹೋಗೋಕೆ ಆಗುತ್ತೇನ್ರೀ? ಎಷ್ಟು ಸಂಪಾದಿಸಿದರೂ ಬರಿಗೈಯಲ್ಲೇ ಹೋಗೋದು. ಹಣದಿಂದ ಸುಖ ಸಿಗತ್ತೆ ಎಂದುಕೊಂಡವರು ಮೂರ್ಖರು. ಹಣದಿಂದ ಸೌಕರ್ಯ ಸಿಗಬಹುದು. ಸುಖ ದುಃಖ ಮನಸ್ಸಿನ ಸ್ಥಿತಿಯಷ್ಟೇ” ಎಂದು ಉದ್ದುದ್ದ ಹೇಳಿಕೆ ಕೊಡುತ್ತೇವೆ. ನಾಳೆ ಕಂಡವರು ಯಾರು ಎನ್ನುತ್ತಲೇ, “ನಾಳಿನ ಚಿಂತೆ ಇಲ್ಲದೆ ಹೀಗೆ ಖರ್ಚು ಮಾಡಿದ್ರೆ, ಮೂರೇ ತಿಂಗಳಲ್ಲಿ ಬೀದಿಗೆ ಬರ್ತಾನೆ. ದುಡ್ಡಿದ್ದಾಗ ಮುಖ್ಯ ಎನ್ನಿಸದಿರಬಹುದು. ಇಲ್ಲವಾದಾಗ ಒಂದೊಂದು ಪೈಸೆ ಬೆಲೆ ಗೊತ್ತಾಗುತ್ತೆ. ಇವತ್ತು ಜೈಕಾರ ಹಾಕಿದವರ್ಯಾರೂ ನಾಳೆ ಒಪ್ಪೊತ್ತು ಊಟ ಹಾಕಲ್ಲ.” ಎಂದು ನಿಷ್ಠುರವಾಗುತ್ತೇವೆ.
ಗಳಿಕೆ-ಉಳಿಕೆಯ ಈ ಹಾವು ಏಣಿ ಆಟದಲ್ಲಿ ನಾವು ಉರುಳಿಸುವ ದಾಳಗಳು ನಮ್ಮ ಕೈಲಿದ್ದರೂ, ಗರ ಮಾತ್ರ ವಿಧಿಯದ್ದು. ಹಾಗೆಂದು ಎಲ್ಲವನ್ನೂ ವಿಧಿಯ ಹೆಸರಿಗೆ ಬರೆಯದೆ, ಹದವರಿತು ಮುದ ಕಾಣುವ ಬಯಕೆ. ಜಿಪುಣರಾದರೂ, ದುಂದುಗಾರರಾದರೂ ಈ ಬದುಕಿನ ಭವ್ಯ ಸೌಂದರ್ಯವನ್ನು ಆರಾಧಿಸುವ ಪ್ರಜ್ಞೆಯೊಂದು ಜಾಗೃತವಿರಲಿ. ಮಿಕ್ಕೆಲ್ಲವೂ ತನ್ನ ಭಿನ್ನತೆಯಿಂದಲೇ ಸಹಜವೆನಿಸುವುದು. ಸಹನೀಯವಾಗುವುದು.
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.