ಅಕ್ಕಮಹಾದೇವಿ ಅಂದಕೂಡಲೇ ಬಹುತೇಕರ ಮನಸ್ಸಲ್ಲಿ ಸುಳಿದಾಡುವ ಚಿತ್ರ ಆಕೆ ಬೆತ್ತಲಾಗಿದ್ದಳು ಎಂಬುದು. ಮತ್ತು ಆ ಬೆತ್ತಲನ್ನು ಅವಳ ನೀಳ ಕೂದಲು ಮರೆಮಾಚಿತ್ತು ಎಂಬುದು. ಆದರೆ ಆ ಬೆತ್ತಲೆ ಎಂಥದ್ದು? ಅಕ್ಕನ ಚೆನ್ನಮಲ್ಲಿಕಾರ್ಜುನ ಎಂಥವನು? ಇಷ್ಟಕ್ಕೂ ಶಿವ ಯಾರು? ಹೀಗೆ ನಾವು ಯೋಚಿಸುವ ಮತ್ತು ಅಕ್ಕನ ವಚನಗಳಲ್ಲಿ ಕಾಣುವ ಬೆತ್ತಲೆ ಪರಿಕಲ್ಪನೆಯನ್ನು ಬಿಟ್ಟು ನಾವು ಕಟ್ಟಿಕೊಂಡಿರುವ ಬೆತ್ತಲೆ ಬಗೆಗಿನ ಕಲ್ಪನೆಯನ್ನು ಅಕ್ಕನಿಗೆ ಉಡಿಸಿ ಮೆರೆಸಲು ಆರಂಭಿಸಿರುತ್ತೇವೆ. ಯಾಕೆಂದರೆ ಬಹುತೇಕರಿಗೆ ಅಕ್ಕನ ವಚನಗಳನ್ನು ಒಳಹೊಕ್ಕು ನೋಡುವುದಕ್ಕಿಂತ ಆಕೆಯ ಸುತ್ತ ಹಬ್ಬಿಸಲಾದ ಶುದ್ಧ ಲೌಕಿಕದ ಕತೆಗಳನ್ನು ಕೇಳಿ ಬೆಳೆಸಿಯೇ ರೂಢಿ.
ಎನ್‌.ಸಿ. ಮಹೇಶ್‌ ಬರೆಯುವ “ರಂಗ ವಠಾರ” ಅಂಕಣ

ಮಾಸ್ಕುಗಳು ಇನ್ನೂ ನಮ್ಮ ಮುಖಕ್ಕೆ ಅಂಟಿಕೊಂಡಂತೆ ಇದ್ದರೂ ಪರಿಸ್ಥಿತಿ ಮಾತ್ರ ಹಿಂದಿನ ಯಥಾಸ್ಥಿತಿಗೆ ಮರಳುತ್ತಿರುವಂತೆ ತೋರುತ್ತಿದೆ. ಬೆಂಗಳೂರಿನಲ್ಲಿ ನಾಟಕಗಳು ನಿಧಾನಕ್ಕೆ ಗರಿಗೆದರಿಕೊಳ್ಳಲು ಆರಂಭಿಸಿವೆ. ಕೋವಿಡ್ ಭಯ, ಆ ವೈರಸ್ ಬಗ್ಗೆ ಇನ್ನೂ ಭಯವಿರಿಸಿಕೊಂಡಿರುವವರು ಮನೆಯಲ್ಲೇ ಉಳಿದು ಗುಂಪಿನ ಜೊತೆಗೂಡಲು ನಿರಾಕರಿಸುತ್ತ ತಾತ್ವಿಕ ಕಾರಣಗಳನ್ನ ಕೊಟ್ಟು ಅವರಿಗೆ ಕಿವಿಗೊಡುವವರಿಗೂ ಕೊಂಚ ಹೆದರಿಕೆ ಹುಟ್ಟಿಸುತ್ತಿದ್ದಾರೆ. ಆದರೆ ಬಹುಸಂಖ್ಯಾತರು ಕೋವಿಡ್‌ಗೆ ಒಗ್ಗಿರುವಂತೆ ಕಾಣಿಸುತ್ತಿದೆ. ಎರಡೂವರೆ ವರ್ಷದ ಹಿಂದೆ ಸ್ಥಗಿತಗೊಂಡ, ಮರೆತೇ ಹೋಗಿದ್ದ ರಂಗಪ್ರಯೋಗಗಳೆಲ್ಲ ನಿಧಾನಕ್ಕೆ ಒಂದೊಂದಾಗಿ ಚಾಲನೆ ಪಡೆದುಕೊಳ್ಳುತ್ತಿವೆ. ಮತ್ತೆ ಕಲಾಕ್ಷೇತ್ರದ ಸುತ್ತ ಹೆಜ್ಜೆ ಕದಲಿಸುವುದಕ್ಕೆ ಅವಕಾಶವಾದಾಗ ‘ನೀವು ಕಾಣಿರೆ..’ ನಾಟಕದ ಬ್ಯಾನರ್ ಕಂಡಿತು. ಮರೆವಿಗೆ ಸಂದಿದ್ದ ಈ ನಾಟಕದ ಸುತ್ತಲಿನ ನೆನಪುಗಳು ಹಾಗೇ ತೆರೆದುಕೊಳ್ಳಲು ಆರಂಭಿಸಿದವು.

ಅದು ಕೋವಿಡ್ ಪೂರ್ವ ಕಾಲ. ಅಭಿನಯ ತರಂಗ ಶಾಲೆಯಲ್ಲಿ ಒಂದು ಭಾನುವಾರ ಕೆವೈಎನ್ ಸರ್ ನಾಟಕ ಓದಲಿದ್ದಾರೆ ಎನ್ನುವ ಮೆಸೇಜ್ ಮೊಬೈಲ್‌ಗೆ ಬಂತು. ಯಾವ ನಾಟಕ ಎಂದು ನೋಡಿದರೆ ನಾಟಕಕ್ಕೆ ಹೆಸರಿರಲಿಲ್ಲ. ಇದೇನು ಹೀಗೆ ಎಂದು ಯೋಚಿಸುತ್ತಿದ್ದ ಸಂದರ್ಭದಲ್ಲೇ ಟೌನ್‍ಹಾಲ್ ಪಕ್ಕ ಇರುವ ಕ್ಯಾಂಟೀನ್ ಬಳಿ ಕೆವೈಎನ್ ಸರ್ ಸಿಕ್ಕರು. ‘ಸರ್ ಯಾವ ನಾಟಕ..?’ ಎಂದು ಕೇಳಿದ್ದೆ.

ಕೆವೈಎನ್ ಸರ್ ವೈಶಿಷ್ಟ್ಯ ಅಂದರೆ ಎಂಥ ಕಳಪೆ ಕೇಳುಗರನ್ನೂ ಕೇಳುಗರನ್ನಾಗಿ ಮಾಡಿಕೊಳ್ಳುವ ಶಕ್ತಿ ಅವರ ಮಾತಿಗೆ ಇದೆ. ಅದು ಅವರ ಮೇಷ್ಟ್ರುತನದ ಹೆಗ್ಗಳಿಕೆ. ಮೇಷ್ಟ್ರಾಗಲಿಕ್ಕೆ ಕ್ಲಾಸ್‌ರೂಮೇ ಆಗಬೇಕಿಲ್ಲ. ನಿಂತ ಕಡೆಯೇ ಮೇಷ್ಟ್ರಾಗಬಹುದು ಎನ್ನುವುದನ್ನು ನಾನು ಕಂಡಿದ್ದು ಕೆವೈಎನ್ ಸರ್ ಅವರಲ್ಲಿಯೇ. ಹಿಂದೊಮ್ಮೆ ಹೀಗೇ  ಸಿಕ್ಕಾಗ ಧುತ್ತನೆ ನನಗೆ ‘ಅಕ್ಕಮಹಾದೇವಿ ವಚನಗಳ ಬಗ್ಗೆ ನಿಮಗೇನ್ರಿ ಅನಿಸುತ್ತೆ..’ ಎಂದು ಕೇಳಿದ್ದರು. ಏಕಾಏಕಿ ಹಾಗೆ ಆ ಜನಜಂಗುಳಿ ಮಧ್ಯೆ ಕೇಳಿದರೆ ಏನು ಹೇಳುವುದು? ನಾನು ಏನು ಹೇಳುವುದೆಂದು ಯೋಚಿಸುತ್ತ ಮಾತಿಗೆ ಅಣಿಯಾಗುವಷ್ಟರಲ್ಲಿ ಅವರನ್ನು ಯಾರೋ ಮಾತಿಗೆ ಎಳೆದು ನಂತರ ಕರೆದುಕೊಂಡು ಹೊರಟೇಬಿಟ್ಟರು. ಆ ಪ್ರಶ್ನೆ ಮತ್ತು ನನ್ನಲ್ಲಿ ಆತುರಾತುರವಾಗಿ ಹುಟ್ಟಿಕೊಂಡಿದ್ದ ಉತ್ತರ ಹಾಗೇ ಮರೆಯಾಗಿತ್ತು.

(ಕೆ.ವೈ. ನಾರಾಯಣಸ್ವಾಮಿ)

ಆದರೆ ಅದು ಟೌನ್‌ಹಾಲ್ ಪಕ್ಕದ ಕ್ಯಾಂಟಿನ್ ಬಳಿ ನಾಟಕವಾಗಿ ಎಕ್ಸ್‌ಟೆನ್ಷನ್ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಕೆವೈಎನ್ ಸರ್ ಮಾತು ಶುರುಮಾಡಿದರು. ಅದು ಅಕ್ಕ ಮಹಾದೇವಿಯ ಕುರಿತ ಜೀವನ ಕಥನವನ್ನು ಅವಳ ಅನನ್ಯ ವಚನಗಳಿಂದಲೇ ಹೆಕ್ಕಿ ಕಟ್ಟಿರುವ ನಾಟಕದ ಬಗೆಗಿನ ಮಾತು. ಅಲ್ಲಿ ಅವತ್ತು ಅವರು ನಮಗೆ ಬೇಳೆ ವಡೆ ಕೊಡಿಸಿ ಮಾತು ಆರಂಭಿಸಿದರು. ಜೊತೆಗೆ ಲೆಮನ್ ಟೀ ಕುಡಿದದ್ದು ಆಯಿತು. ಸಂಜೆ ಕಳೆದು ತೀರಾ ಕತ್ತಲಾಗದಿದ್ದರೆ ಕೆವೈಎನ್ ಸರ್ ಮತ್ತಷ್ಟು ಮಾತಾಡುತ್ತಿದ್ದರೇನೋ. ಹಾಗೆ ಅವತ್ತು ಅನಿವಾರ್ಯವಾಗಿ ಕೊನೆಗೊಂಡ ಮಾತು ಮತ್ತೆ ಮುಂದುವರಿದದ್ದು ಅಭಿನಯ ತರಂಗ ಶಾಲೆಯ ನಾಟಕ ಓದಿನ ಕಾರ್ಯಕ್ರಮದಲ್ಲಿಯೇ.

ಅವತ್ತು ಕೆವೈಎನ್ ಸರ್ ನಾಟಕ ಓದುವ ಆರಂಭದಲ್ಲೂ ಮತ್ತು ಅನಂತರದ ಕೆಲ ಸಮಯದವರೆಗೂ ನಾಟಕಕ್ಕೆ ಶೀರ್ಷಿಕೆ ನಿಗದಿಯಾಗಿರಲಿಲ್ಲ. ಆದರೆ ಓದುತ್ತ ಓದುತ್ತ ಕಡೆಗೊಮ್ಮೆ ಇದಕ್ಕೆ ‘ನೀವು ಕಾಣಿರೆ’ ಎಂದು ಹೆಸರಿಡಬಹುದು’ ಅಂದರು.

ನಾಟಕ ಓದುವುದನ್ನು ಕೇಳಿಸಿಕೊಳ್ಳಲು ತುಂಬ ತಾದಾತ್ಮ್ಯ ಬೇಕು. ಅದೊಂದು ಬಗೆಯ ಧ್ಯಾನವಿದ್ದ ಹಾಗೆ. ಕಣ್ಣು ತೆರೆದಿದ್ದರೂ ಸುತ್ತಲಿನ ಪ್ರಪಂಚ ಮತ್ತು ಅದರ ಆಗುಹೋಗುಗಳಿಗೆ ಕರುಡಾಗಿ ನಾಟಕದ ದೃಶ್ಯಗಳು ಕಣ್ಮುಂದೆ ಚಿತ್ರಿತವಾಗುವಂತೆ ಮಾಡಿಕೊಳ್ಳದಿದ್ದರೆ ಅಲ್ಲಿ ಆ ಕ್ಷಣ ಏನೂ ದಕ್ಕುವುದಿಲ್ಲ. ಆದರೆ ಅಂಗೈಗೆ ಸರಿಯಾಗಿ ಹೊಂದಿಕೊಳ್ಳುವಂತೆ ಮಾಡಿರುವ ಮೊಬೈಲ್ ಫೋನ್‌ಗಳು ಮಾಡುವ ತರಲೆಗಳು ಅಷ್ಟಿಷ್ಟಲ್ಲ. ಅವು ವೈಬ್ರೇಟ್ ಆದಾಗ, ತೀರಾ ತುರ್ತು ಕರೆ ಅಂತ ನಾವೇ ತೀರ್ಮಾನಿಸಿಕೊಂಡಾಗ ಅನಿವಾರ್ಯವಾಗಿ ಅದನ್ನು ಕಿವಿಗೆ ತಾಕಿಸಿಕೊಳ್ಳಲು ಹೊರಗೆ ನಡೆಯಬೇಕಾಗುತ್ತದೆ. ಅವತ್ತು ‘ನೀವು ಕಾಣಿರೆ..’ ನಾಟಕದ ಓದಿನ ಸಂದರ್ಭದಲ್ಲೂ ಹೀಗೇ ಆಗಿ ನಾನು ಎದ್ದು ನಡೆಯಬೇಕಾಗಿ ಬಂದಿತ್ತು. ಮತ್ತೆ ಹೊರಳಿ ಬರುವಷ್ಟರಲ್ಲಿ ದೃಶ್ಯಗಳ ಸಾತತ್ಯ ತಪ್ಪಿಹೋಗಿತ್ತು. ಕೆವೈಎನ್ ಸರ್ ತಾನೇ… ಮತ್ತೆ ಅವರಿಗೆ ಕಿವಿಗೊಟ್ಟರೆ ಸಾಕು ಎನ್ನುವುದು ಮನಸ್ಸು ಹೊಕ್ಕಿತ್ತಾದ್ದರಿಂದ ಧೈರ್ಯದಿಂದ ಇದ್ದೆ. ಯಾಕೆಂದರೆ ಕೆವೈಎನ್ ಸರ್ ಅವರಿಗೆ ಕಿವಿಗೊಡುವುದು ಅಂದರೆ ಆ ಪರಿ ಇಷ್ಟವಾಗುವ ಕೆಲಸ. ಅಂದು ಆ ನಾಟಕವನ್ನು ಕಟ್ಟಲು ಅಣಿಯಾಗಿದ್ದ ಬಿ. ಜಯಶ್ರೀ ಮೇಡಂ ಕೂಡ ರೀಡಿಂಗ್‌ಗೆ ಬಂದಿದ್ದರು.

ಇದೆಲ್ಲ ಆಗಿ ನಾಟಕ ಇನ್ನೇನು ರಂಗವೇರುತ್ತದೆ ಅಂದುಕೊಳ್ಳುವಷ್ಟರಲ್ಲಿ ಕೋವಿಡ್ ಬಿರುಸು ಆರಂಭವಾಯಿತು. ಅಷ್ಟರಲ್ಲಿ ‘ನೀವು ಕಾಣಿರೆ..’ ಒಂದೆರೆಡು ಕಡೆ ಪ್ರಯೋಗಗೊಂಡದ್ದು ನಂತರ ತಿಳಿಯಿತು. ಇದೇನು ಸರಿಯಾದ ಪ್ರಚಾರವಿಲ್ಲ.. ಏನಿಲ್ಲ ಎಂದು ಗೊಣಗಿಕೊಳ್ಳುವ ಹೊತ್ತಿಗೆ ಕೋವಿಡ್ ಶಕೆ ಆರಂಭ. ರಂಗದ ಮೇಲಿನ ಬದುಕು ಹಾಗಿರಲಿ, ಮನೆಯಲ್ಲಿನ ಮೆಲೊ ಡ್ರಾಮಾಗಳು, ನೂತನ ಅಡುಗೆ ಕಾರ್ಯಕ್ರಮಗಳು ಇತ್ಯಾದಿ ಇತ್ಯಾದಿ ಹೊಸ ಲೋಕ ಅನಾವರಣವಾಗಲಿಕ್ಕೆ ಆರಂಭಿಸಿತ್ತು. ಇದೆಲ್ಲ ಇನ್ನೇನು ಕಳೆದುಬಿಡುತ್ತದೆ ಅಂದುಕೊಳ್ಳುವ ಹೊತ್ತಿಗೆ ಟಿವಿ ನಮ್ಮನ್ನು ಭಯಕ್ಕೆ ದೂಡಲು ಆರಂಭಿಸಿತ್ತು. ಹಲವರು ತೆರಳುತ್ತಿರುವ ಸುದ್ದಿ. ಮುಂದಿನ ಸರದಿ ಯಾರದು ಎಂದು ಕ್ರಾಸ್‌ಚೆಕ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ನಾಟಕದ ಬಗೆಗೆ ಯೋಚಿಸುವುದು ಹೇಗೆ? ಇಷ್ಟರ ನಡುವೆ ಸಾಲುಸಾಲು ನಿರ್ಗಮನದ ಸುದ್ದಿಗಳು ನಿತ್ಯ ಕಿವಿಗೆ ನಿಲುಕುತ್ತಿದ್ದಾಗ ರಂಗಕಲಾವಿದರ ಬದುಕು ಬವಣೆಗಳ ಸುದ್ದಿ ಮಾತ್ರ ಹೆಚ್ಚು ಚುರುಕಾಗುತ್ತಿತ್ತು. ಈ ಎಲ್ಲವನ್ನು ದಾಟಲಿಕ್ಕೆ ಒಂದು ಮಾರ್ಗವಿದೆಯೇ ಎಂದು ಪ್ರಶ್ನೆ ಎದ್ದದ್ದು ನಂತರ ನಿಧಾನಕ್ಕೆ ಚಿತ್ರ ಬದಲಿಸಿದ್ದು ಕೊಂಚ ಉಸಿರಾಡುವಂತೆ ಮಾಡಿತು.

ಇಷ್ಟರ ನಡುವೆ ‘ನೀವು ಕಾಣಿರೆ..’ ಪೋಸ್ಟರ್ ಕಂಡಾಗ ಮತ್ತು ಅದರ ಹಿಂದೆ ಒಂದು ನೆನಪುಗಳ ಸಂತೆಯೇ ಇರುವಾಗ ಅದನ್ನು ಕಾಣದೆ ಉಳಿಯುವುದು ಹೇಗೆ? ಸರಿ ಎಂದು ಹೋದೆ. ಕೂತೆ.

ಹನ್ನೆರಡನೆಯ ಶತಮಾನದಲ್ಲಿ ನಡೆದ ವಚನ ಚಳವಳಿ ಬಗ್ಗೆ, ಶರಣರ ಬಗ್ಗೆ ಈವರೆಗೆ ಹಲವರು ಬರೆದಿದ್ದಾರೆ ಮತ್ತು ಚಿತ್ರಿಸಿದ್ದಾರೆ. ಅದೊಂದು ಅನನ್ಯ ಕಾಲಘಟ್ಟ. ಒಬ್ಬೊಬ್ಬ ಶರಣನ ಬದುಕೂ ಅನನ್ಯ ಅನಿಸುವಂಥದ್ದೇ. ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣನಂತೆ ಅಕ್ಕ ಕೂಡ ತನ್ನ ಪ್ರಭೆಯಿಂದ ಬೆಳಗಿ ಮಾತಾದವಳು. ವಚನ ಚಳವಳಿ ನಡೆದ ಕಾಲಕ್ಕೆ ತುಂಬ ಹತ್ತಿರದಲ್ಲಿದ್ದ ಹರಿಹರ ಇದೇ ಶರಣರನ್ನು ಚಿತ್ರಿಸುವಾಗ ಮೈದುಂಬಿಕೊಳ್ಳುತ್ತಾನೆ. ಬಸವಣ್ಣ, ಅಲ್ಲಮರೇನಾದರೂ ಹರಿಹರನಿಗೆ ಕಿವಿಗೊಟ್ಟಿದ್ದರೆ ಏನು ಹೇಳುತ್ತಿದ್ದರೋ ಎನ್ನುವ ಕುತೂಹಲ ನನಗೆ ಇಂದಿಗೂ ಇದೆ. ಯಾಕೆಂದರೆ ಹರಿಹರ ಚಿತ್ರಿಸುವ ಬಗೆಯೇ ಅಂಥದ್ದು. ದೈವದ ಪ್ರಭೆ, ಪ್ರಭಾವಳಿ ಕಟ್ಟಿ ಶರಣರನ್ನು ತಾರಕದಲ್ಲಿ ಕಾಣುವಂತೆ ಮಾಡುತ್ತಾನೆ ಹರಿಹರ. ಇದು ಒಂದು ಬಗೆ. ಮತ್ತೊಂದು ಬಗೆಯೆಂದರೆ ಶರಣರ ವಚನಗಳಲ್ಲಿ ಅಡಕಗೊಂಡಿರುವ ವಿಚಾರಗಳ ಮೂಲಕವೇ ಆಯಾ ಶರಣರ ಬದುಕನ್ನು ಅವರ ಭಕ್ತಿಯ ಆವರಣದಲ್ಲಿಯೇ ವಾಸ್ತವ ಬೆರೆಸಿ ಚಿತ್ರಿಸುವುದು. ಕೆವೈಎನ್ ಸರ್ ಈ ಕೆಲಸವನ್ನು ‘ನೀವು ಕಾಣಿರೆ..’ಯಲ್ಲಿ ಮಾಡಿದ್ದಾರೆ. ಅವರು ಅಕ್ಕನ ವಚನಗಳನ್ನು ಅಧ್ಯಯನ ಮಾಡಿರುವ ಕ್ರಮ ಹಾಗೂ ಅವರ ನೋಟಕ್ರಮ ಒಟ್ಟು ಸೇರಿ ‘ನೀವು ಕಾಣಿರೆ..’ ಯನ್ನು ರೂಪಿಸಿದೆ.

ಒಂದು ಘಟ್ಟದಲ್ಲಿ ಪ್ರಖರವಾಗಿ ಮಿನುಗಿದ ಯಾರೇ ಆಗಲಿ ಕಾಲಕ್ರಮದಲ್ಲಿ ಚಿತ್ರವಿಚಿತ್ರ ಕಥೆಗಳಿಗೆ ಗುರಿಯಾಗುತ್ತ ಮಿಥ್ ಆಗುತ್ತಲೇ ಇರುತ್ತಾರೆ. ಅವರ ಕಥೆಗಳು ರೂಪುತಳೆಯುವ ಪರಿಯೇ ಚೆಂದ. ಇದು ವಾಸ್ತವಕ್ಕೆ ಹತ್ತಿರ ಹೇಗೆ ಎಂದು ಯೋಚಿಸುವ ಗೋಜಿಗೆ ಯಾರೂ ಹೋಗುವುದಿಲ್ಲ.

ಆದರೆ ಕೆವೈಎನ್ ಸರ್ ಅವರಲ್ಲಿರುವ ಮೇಷ್ಟ್ರುತನ ಅಕ್ಕಮಹಾದೇವಿಯನ್ನು ಆಕೆಯ ವಚನಗಳಿಂದ ಎದುರುಗೊಂಡಿರುವ ರೀತಿಯೇ ಬೇರೆ ಬಗೆಯದು. ಅದು ಮಾಗಿರುವ ಅಧ್ಯಯನದ ಫಲಿತ ಅನ್ನುವುದು ಗೊತ್ತಾಗುತ್ತದೆ.

ರಂಗದ ಮೇಲಿನ ಬದುಕು ಹಾಗಿರಲಿ, ಮನೆಯಲ್ಲಿನ ಮೆಲೊ ಡ್ರಾಮಾಗಳು, ನೂತನ ಅಡುಗೆ ಕಾರ್ಯಕ್ರಮಗಳು ಇತ್ಯಾದಿ ಇತ್ಯಾದಿ ಹೊಸ ಲೋಕ ಅನಾವರಣವಾಗಲಿಕ್ಕೆ ಆರಂಭಿಸಿತ್ತು. ಇದೆಲ್ಲ ಇನ್ನೇನು ಕಳೆದುಬಿಡುತ್ತದೆ ಅಂದುಕೊಳ್ಳುವ ಹೊತ್ತಿಗೆ ಟಿವಿ ನಮ್ಮನ್ನು ಭಯಕ್ಕೆ ದೂಡಲು ಆರಂಭಿಸಿತ್ತು.

ಅಕ್ಕಮಹಾದೇವಿ ಅಂದಕೂಡಲೇ ಬಹುತೇಕರ ಮನಸ್ಸಲ್ಲಿ ಸುಳಿದಾಡುವ ಚಿತ್ರ ಆಕೆ ಬೆತ್ತಲಾಗಿದ್ದಳು ಎಂಬುದು. ಮತ್ತು ಆ ಬೆತ್ತಲನ್ನು ಅವಳ ನೀಳ ಕೂದಲು ಮರೆಮಾಚಿತ್ತು ಎಂಬುದು. ಆದರೆ ಆ ಬೆತ್ತಲೆ ಎಂಥದ್ದು? ಅಕ್ಕನ ಚೆನ್ನಮಲ್ಲಿಕಾರ್ಜುನ ಎಂಥವನು? ಇಷ್ಟಕ್ಕೂ ಶಿವ ಯಾರು? ಹೀಗೆ ನಾವು ಯೋಚಿಸುವ ಮತ್ತು ಅಕ್ಕನ ವಚನಗಳಲ್ಲಿ ಕಾಣುವ ಬೆತ್ತಲೆ ಪರಿಕಲ್ಪನೆಯನ್ನು ಬಿಟ್ಟು ನಾವು ಕಟ್ಟಿಕೊಂಡಿರುವ ಬೆತ್ತಲೆ ಬಗೆಗಿನ ಕಲ್ಪನೆಯನ್ನು ಅಕ್ಕನಿಗೆ ಉಡಿಸಿ ಮೆರೆಸಲು ಆರಂಭಿಸಿರುತ್ತೇವೆ. ಯಾಕೆಂದರೆ ಬಹುತೇಕರಿಗೆ ಅಕ್ಕನ ವಚನಗಳನ್ನು ಒಳಹೊಕ್ಕು ನೋಡುವುದಕ್ಕಿಂತ ಆಕೆಯ ಸುತ್ತ ಹಬ್ಬಿಸಲಾದ ಶುದ್ಧ ಲೌಕಿಕದ ಕತೆಗಳನ್ನು ಕೇಳಿ ಬೆಳೆಸಿಯೇ ರೂಢಿ.

ಟೌನ್‌ಹಾಲ್ ಕ್ಯಾಂಟೀನ್ ಬಳಿ ಲೆಮನ್ ಟೀ ಹೀರುತ್ತಿದ್ದಾಗ ನಾನು ಅಕ್ಕನ ವಿಚಾರಕ್ಕೆ ಸಂಬಂಧಿಸಿದಂತೆ ಕೆವೈಎನ್ ಸರ್ ಬಳಿ ಇದೇ ‘ಬೆತ್ತಲೆ’ ವಿಚಾರವನ್ನ ‘ನೀವು ಹೇಗೆ ಹ್ಯಾಂಡಲ್ ಮಾಡಿದ್ದೀರಿ?’ ಎಂದೇ ಕೇಳಿದ್ದೆ. ಆಗ ಅವರು ಹೇಳಿದ್ದು ಇಂಟ್ರೆಸ್ಟಿಂಗ್ ಅನಿಸಿತ್ತು. ‘ಬೆತ್ತಲೆ ಅಂದರೆ ಪೂರಾ ಬೆತ್ತಲೇ ಆಗಬೇಕಿಲ್ಲ. ಅರೆಬೆತ್ತಲೆಯಾಗಿ ಹುಚ್ಚನಂತೆ ತಿರುಗಾಡುತ್ತಿದ್ದರೂ ‘ಯಾಕೆ ಹೀಗೆ ಬೆತ್ತಲಾಗಿ ಅಲೀತಿದ್ಯಾ..?’ ಅಂತಲೇ ಕೇಳ್ತಾರೆ. ಹಾಗೇ ಅಕ್ಕ ಕೂಡ ಇರುತ್ತಾಳೆ. ಆದರೆ ಕಾಲಕ್ರಮದಲ್ಲಿ ಬೆತ್ತಲೆ ಅಂದರೆ ಪೂರಾಪೂರಾ ಎನ್ನುವಷ್ಟರ ಮಟ್ಟಿಗೆ ಅಕ್ಕನ ಸಂಗತಿ ತಂದಿರಿಸಿದ್ದಾರೆ. ಶಿವನ ಸಾಂಗತ್ಯ, ಅನುಭಾವವನ್ನು ಕರುಣಿಸಿದ ಗುರು ಕಾಡಿನಲ್ಲಿ ಮಾಯವಾದಾಗ ದಿಕ್ಕುಗೆಟ್ಟವಳಂತೆ ಅಕ್ಕ ಆ ಗುರುವನ್ನು ಹುಡುಕುತ್ತಿದ್ದಾಗ ಕಪಟ ಸನ್ಯಾಸಿಯ ಕಣ್ಣಿಗೆ ನಿಲುಕಿ ಅವನ ಮೂಲಕ ಒಂದು ವೇಶ್ಯಾಗೃಹ ಸೇರಿಕೊಳ್ಳಬೇಕಾದ ಅನಿವಾರ್ಯ ಉಂಟಾಗುತ್ತದೆ. ಅಲ್ಲಿನವರು ಅಕ್ಕನಿಗೆ ಸೀರೆ ಉಟ್ಟುಕೊಳ್ಳಲು ಕೊಟ್ಟರೆ ಆಕೆ ‘ಎನಗೆ ಲಜ್ಜೆಯ ತೊಡಿಸು ನೋಡುವಾ..’ ಎನ್ನುತ್ತಾಳೆ.

ಅಕ್ಕನನ್ನು ಆಕೆಯ ಸುತ್ತ ಹಬ್ಬಿಸಿರುವ ಕಥೆಗಳ ಮೂಲಕ ಸರಳ ಅಂದುಕೊಂಡುಬಿಟ್ಟರೆ ಸರಳ. ಆದರೆ ಅವಳ ಒಂದೊಂದು ಸಾಲಿನ ಬೆನ್ನು ಹತ್ತಲು ಆರಂಭಿಸಿದರೆ ತೆರೆದುಕೊಳ್ಳುವ ಪ್ರಪಂಚವೇ ಬೇರೆ. ಇದು ವಸ್ತುನಿಷ್ಠ ಅಧ್ಯಯನದಿಂದ ಮಾತ್ರ ಬರುವಂಥದ್ದು.

ತುಂಬ ಹೆಮ್ಮೆಯ ಸಂಗತಿಯೆಂದರೆ ಕೆವೈಎನ್ ಸರ್ ಅವರಂತೆಯೇ ನಾನೂ ಮೇಷ್ಟ್ರಾಗಿ ಕ್ಲಾಸಲ್ಲಿ ಪಾಠಕ್ಕೆ ನಿಂತವನೇ. ಯಾರು ಏನೊಂದೂ ಗಂಭೀರ ಪ್ರಶ್ನೆ ಕೇಳದ ಕ್ಲಾಸಲ್ಲಿ ಮೇಷ್ಟ್ರಾಗಿ ಮುಂದುವರಿಯುವುದು ಸುಲಭ. ಅಲ್ಲಿ ನಮ್ಮ ಅಧ್ಯಯನ ವಿಸ್ತರಿಸುವುದಿಲ್ಲ. ಮೊಟಕಾಗುತ್ತಾ ಬರುತ್ತದೆ. ಆದರೆ ಕ್ಲಾಸಲ್ಲಿ ನಾವು ನಿರೀಕ್ಷಿಸದ ಪ್ರಶ್ನೆಯೊಂದು ಧುತ್ತನೆ ಬಂದಾಗ ನಿಜವಾದ ಮೇಷ್ಟ್ರುತನ ಮತ್ತು ಅಧ್ಯಯನ ಆರಂಭವಾಗುತ್ತದೆ. ಒಂದು ತಾತ್ವಿಕ ಜಿಜ್ಞಾಸೆ ಹುಟ್ಟುಹಾಕುವ ಪ್ರಶ್ನೆ ಮತ್ತು ಅಂಥ ಪ್ರಶ್ನೆಗಳು ಮುಂದಕ್ಕೆ ಹುಟ್ಟಬಹುದು ಎನ್ನುವ ಭಯ ಒಬ್ಬ ಒಳ್ಳೆಯ ಮೇಷ್ಟ್ರನ್ನು ರೂಪಿಸುತ್ತದೆ ಎಂದು ನಾನು ಕಂಡುಕೊಂಡಿದ್ದೇನೆ. ಇದು ಅಕ್ಕನ ವಿಚಾರವಾಗೇ ನಡೆದದ್ದು ಅನ್ನುವುದೂ ಮತ್ತೊಂದು ವಿಶೇಷವೇ.

ಇಷ್ಟಕ್ಕೂ ಅಕ್ಕನನ್ನು ಕ್ಲಾಸಲ್ಲಿ- ಅದೂ ಪಿಯು ಕ್ಲಾಸಲ್ಲಿ ಪರಿಚಯಿಸುವುದು ಹೇಗೆ? ಪಠ್ಯಪುಸ್ತಕದಲ್ಲಿ ಕೊಟ್ಟಿರುವ ಪರಿಚಯ ಓದಿ ಹೇಳಿ ಮುಗಿಸಿದರೆ ಆಯಿತೆ? ಕಣ್ಣುಗಳಲ್ಲಿ ಕೇಳುವ ಇಂಗಿತ ಹೆಚ್ಚು ಇರುವ ಕ್ಲಾಸಲ್ಲಿ ಪಠ್ಯದ ಪರಿಚಯ ಮೀರಿ ಕೊಂಚ ತಾತ್ವಿಕವಾಗಿ ವಿವರಣೆಗೆ ತೊಡಗುವ ಮನಸ್ಸಾಗುತ್ತಿತ್ತು. ಬೆತ್ತಲೆ ಅಂದರೆ ಅದು ಹೇಗೆ ಎಂದು ಹೆಣ್ಣುಮಕ್ಕಳ ಹುಬ್ಬುಗಳು ಮೇಲೆದ್ದು ಪ್ರಶ್ನಿಸುತ್ತಿದ್ದವು. ರಾಜ ಸಿಕ್ಕರೂ ಅವನನ್ನ ಮದುವೆ ಆಗದೆ ಆತನಿಗೆ ಸಹಕರಿಸದೆ ಇರುವ ಅಕ್ಕನದು ತುಂಬ ಆ್ಯಟಿಟ್ಯೂಡ್ ಎಂದು ಹುಡುಗರು ವಾದಿಸಿದ್ದೂ ಇದೆ. ಇವರ ಎದುರು ಮೇಷ್ಟ್ರಾಗುವುದು ನಿಜಕ್ಕೂ ಚಾಲೆಂಜಿಂಗ್. ಹುಡುಗರು ಆ್ಯಟಿಟೂಡ್ ಅಂದದ್ದಕ್ಕೆ ಹುಡುಗಿಯರು ನನ್ನನ್ನು ತಮ್ಮ ವಕೀಲನನ್ನಾಗಿಸಿಕೊಳ್ಳಲು ನೋಡಿ ನನಗೆ ವಾದ ಮಂಡಿಸಲಿಕ್ಕೆ ಬಿಟ್ಟರು. ಎಷ್ಟಂತ ತೆಳು ಕಥೆಗಳ ಸುತ್ತ ಸುತ್ತುವುದು? ಅಕ್ಕನ ವಚನಗಳನ್ನು ಮುಂದೆ ಹರವಿಕೊಂಡು ಕೂತಿದ್ದೆ. ಅಕ್ಕ ಅಂದರೆ ‘ತರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ… ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ…’ ಎಂತಷ್ಟೇ ಉದಾಹರಿಸಿ ಪಾಠ ಹೇಳಿ ನಿರಾಳವಾಗಿದ್ದ ನನಗೆ ಅಕ್ಕನನ್ನು ಮತ್ತೊಂದು ಹಂತಕ್ಕೆ ಓದಿ ತಿಳಿಯಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ಹಾಗೆ ಓದುತ್ತಿದ್ದಾಗ ನನಗೆ ಸಿಕ್ಕ ಒಂದು ವಚನ ಹೀಗಿತ್ತು. ಸಂಸಾರದ ಬಗ್ಗೆ ಅಕ್ಕನ ಕಲ್ಪನೆ ಹೀಗಿತ್ತು-

ಅತ್ತೆ ಮಾಯೆ, ಮಾವ ಸಂಸಾರಿ, ಮೂವರು
ಮೈದುನರು ಹುಲಿಯಂತವದಿರು, ನಾಲ್ವರು
ನಗೆವೆಣ್ಣು ಕೇಳು ಕೆಳದಿ. ಐವರು
ಭಾವದಿರನೊಯ್ವ ದೈವವಿಲ್ಲ. ಆರು
ಪ್ರಜೆಯತ್ತಿಗೆಯರ ಮೀರಲಾರೆನು. ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿನ ಕಾಹು.
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನಕೂಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರಚೆಲುವ ಶ್ರೀಶೈಲ
ಚೆನ್ನಮಲ್ಲಿಕಾರ್ಜುನನೆಂಬ ಸಜ್ಜನ ಗಂಡನ
ಮಾಡಿಕೊಂಡೆ.

ಇದನ್ನು ಉದಾಹರಿಸಿ ಕ್ಲಾಸಲ್ಲಿ ಹೇಳಿದ್ದೆ. ಆಗ ಮತ್ತೆ ಹೆಣ್ಣುಮಕ್ಕಳು ಕೆಲವರು ಮುಖ ಸಿಂಡರಿಸಿಕೊಂಡರು. ಯಾಕೆ ಏನಾಯಿತು ಅಂತ ವಿಚಾರಿಸಿದರೆ ‘ಹರನ ಕೂಡೆ ಹಾದರ..!’ ಎಂದು ಕಣ್ಣರಳಿಸಿದ್ದರು. ‘ಈ ಫಿಲಾಸಫಿ ಎಲ್ಲ ಸಾಕು.. ಏನಾದರೂ ರೆಲೆವೆಂಟಾಗಿರೋದು ಹೇಳಿ ಸರ್..’ ಎಂದು ಹುಡುಗರು ನಗೆಬೀರಿದರು.

ಯಾಕೆ ರಿಲೆವೆಂಟ್ ಅಲ್ಲ…? ನಾನೂ ಸವಾಲು ಹಾಕಿದ್ದೆ. ಅಕ್ಕನ ವಚನಗಳಿಂದ ಮತ್ತೊಂದನ್ನು ವಿವರಿಸಿ ಹೇಳಬೇಕಾಯಿತು-

ಅನ್ನವ ನೀಡುವವರಿಂಗೆ ಧಾನ್ಯವೆಸೆವ
ಲೋಕ. ಅರ್ಥವ ಕೊಡುವವರಿಗೆ
ಪಾಷಾಣವೆಸೆವ ಲೋಕ. ಹೆಣ್ಣು ಹೊನ್ನು
ಮಣ್ಣು ಮೂವರನೂ ಕಣ್ಣಿನಲಿ ನೋಡಿ
ಕಿವಿಯಲಿ ಕೇಳಿ, ಕೈಯಲಿ ಮುಟ್ಟಿ
ಮಾಡುವ ಭಕ್ತಿ ಸಣ್ಣವರ ಸಮಾರಾಧನೆ
ಯಾಯಿತ್ತು. ತನ್ನನ್ನಿತ್ತು ತುಷ್ಟಿವಡೆವರವೆನಗೆ
ತೋರಾ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ

ಇದು ಹೇಳಿದಾಗ ಕ್ಲಾಸು ಕೊಂಚ ಕನ್ವಿನ್ಸಿಂಗ್ ಅನಿಸಿತ್ತು. ಆದರೆ ಹೆಣ್ಣುಮಕ್ಕಳು ‘ಹಾದರ’ಪದದ ಮೇಲೆಯೇ ಹೆಚ್ಚು ಒತ್ತುಕೊಟ್ಟಂತೆ ಇತ್ತು. ಅವರು ಆಳದಲ್ಲಿ ಬಂಡಾಯ ಏಳುತ್ತಿದ್ದದ್ದು ಗೊತ್ತಾಗುತ್ತಿತ್ತು. ‘ಯಾರೂ ಈ ಥರ ಹೇಳಲ್ಲ ಸರ್…’ ಎಂದು ಕೆಲವರು ಬಂದು ನನ್ನ ಬಳಿ ಸ್ಟಾಫ್ ರೂಂನಲ್ಲಿ ಹೇಳಿ ಜಗಳಕ್ಕೆ ನಿಂತಿದ್ದರು. ಅಕ್ಕನ ಪರಿಕಲ್ಪನೆಯ ಹಾದರವನ್ನು ನಾನು ಅವರಿಗೆ ವಿವರಿಸಿ ಅರ್ಥಮಾಡಿಸುವಷ್ಟರಲ್ಲಿ ದಣಿದಿದ್ದೆ. ಅದೊಂಥರಾ ಸಾರ್ಥಕದ ದಣಿವು ಎಂದು ಈಗ ಅನಿಸುತ್ತಿದೆ. ಅಕ್ಕನ ವಚನಗಳನ್ನು ಓದುವುದೇ ಒಂದು ಚೆಂದದ ಅನುಭವ. ನಮ್ಮೊಳಗಿನ ರೂಢಿಗತ ವಿಚಾರಗಳನ್ನು ಅವು ಇನ್ನಿಲ್ಲದಂತೆ ಕಲಕಲು ಆರಂಭಿಸುತ್ತವೆ.

ಹೀಗೆ ಪ್ರಶ್ನೆಗಳ ಮೂಲಕ ನನ್ನನ್ನು ಬೆಚ್ಚಿಸುತ್ತ ನನ್ನನ್ನು ಅಧ್ಯಯನದಲ್ಲಿ ಬೆಚ್ಚಗಿರಿಸಿದ್ದ ಕಾಲವೂ ಒಂದಿತ್ತು. ಅದು ಚೆಂದದ ಕಾಲ. ಮತ್ತು ನಾನು ಯಾವತ್ತಿಗೂ ನೆನೆಯುವ ಕಾಲ. ಕೂತು ಪಾಠ ಕೇಳುತ್ತಿರುವವರ ಕಣ್ಣುಗಳನ್ನು ಓದುವವನು ಮಾತ್ರ ಒಳ್ಳೆಯ ಮೇಷ್ಟ್ರಾಗುತ್ತಾನೆ ಎನ್ನುವ ನಂಬಿಕೆ ನನ್ನದು. ಆ ಕಣ್ಣುಗಳಲ್ಲಿ ನಿಜವಾದ ತಾತ್ವಿಕ ಪ್ರಶ್ನೆಗಳಿದ್ದರೆ ಗೊತ್ತಾಗುತ್ತದೆ. ಮತ್ತು ಅವು ನಮ್ಮನ್ನು ಬೆಳೆಸುತ್ತದೆ.

(ಬಿ. ಜಯಶ್ರೀ)

ಆದರೆ ಬರಬರುತ್ತ ಕ್ಲಾಸಲ್ಲಿ ಕಣ್ಣುಗಳನ್ನು ಓದುವುದಕ್ಕೇ ಭಯಗೊಳ್ಳುವ ಕಾಲವೂ ಬಂತು. ಮೊಬೈಲ್‌ಗಳು ಕೈಗಳಿಗೆ ಇನ್ನೂ ದಕ್ಕದೆ ಇದ್ದ ಕಾಲದಲ್ಲಿ ಅಕ್ಕನ ಬೆತ್ತಲೆ ಬಗ್ಗೆ ಕ್ಲಾಸಲ್ಲಿ ತಾತ್ವಿಕ ಚರ್ಚೆಗಳಾಗುತ್ತಿತ್ತು. ಮೊಬೈಲ್‌ಗಳು ಕೈಗೆ ಬಂದು ಅವುಗಳಲ್ಲಿ ಬೆತ್ತಲೆ ಯಾವಾಗಂದರೆ ಆಗ ಚಿತ್ರವಾಗಿ ಕದಲಿ ಕಣ್ಣುಗಳಿಗೆ ನಿಲುಕುತ್ತದೆ ಎಂದು ಖಾತ್ರಿಯಾಯಿತೋ ಅಂದಿನಿಂದ ನಾನು ಕಣ್ಣುಗಳನ್ನು ಓದುವುದನ್ನು ಬಿಟ್ಟೆ. ಅಕ್ಕನ ಕಲ್ಪನೆಯ ಬೆತ್ತಲೆಗೂ ಮೊಬೈಲ್‌ನನಲ್ಲಿರುವ ಬೆತ್ತಲೆಗೂ ಸಂಬಂಧವಿಲ್ಲ. ವಯಸ್ಸಿಗೆ ಬೇಕಾದದ್ದು ಕಣ್ಣಿಗೆ ಢಾಳಾಗಿ ಕಾಣುವ ಘಟ್ಟದಲ್ಲಿ ತಾತ್ವಿಕತೆಯೆಲ್ಲ ಯಾಕೆ? ಪ್ರಶ್ನೆಗಳು ಮತ್ತು ಜಗಳಗಳು ಯಾಕೆ? ಎದುರು ಕೂತವರ ಕಣ್ಣುಗಳಲ್ಲಿ ಕದಲುತ್ತಿರುವುದೇನು ಎಂದು ಸ್ಪಷ್ಟವಾಗಿ ತಿಳಿಯುವಾಗ ಪಾಠ ಮಾಡುವುದು ಖುಷಿಯೂ ಹೌದು ವ್ಯಸನವೂ ಹೌದು. ಅದು ಕಣ್ಣುಗಳಲ್ಲಿ ಕದಲುವ ಚಿತ್ರಗಳನ್ನು ಅವಲಂಬಿಸಿರುತ್ತದೆ. ಬೆತ್ತಲೆಯನ್ನು ಬೇರೆಯಾಗಿಯೇ ಕಣ್ಣಲ್ಲಿ ನಿತ್ಯ ತುಂಬಿಕೊಳ್ಳುತ್ತಿರುವವರಿಗೆ ಅಕ್ಕನ ಬೆತ್ತಲೆ ಹೇಗೆ ಅರ್ಥೈಸುವುದು?

ಕಾಲವು ತಂದೊಡ್ಡಿದ ಈ ಅಪಸವ್ಯದ ನಡುವೆ ಬೇಸರಿಸಿಕೊಳ್ಳುವ ಘಟ್ಟ ನಿರ್ಮಾಣವಾಗಿರುವಾಗ ನಿಜದ ಬೆತ್ತಲೆ ಮತ್ತು ಅಕ್ಕನ ಬಗ್ಗೆ ಪ್ರಶ್ನೆ ತರುವವರನ್ನು ಕಾಯಬೇಕಾಗಿದೆ.

ನಾನು ಕ್ಲಾಸಲ್ಲಿ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಅಕ್ಕನ ವಚನಗಳ ಲೋಕ ಪ್ರವೇಶಿಸಿ ಆಕೆಯ ಜಗತ್ತನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದೆ. ಅದು ಸೀಮಿತ. ಆದರೆ ಕೆವೈಎನ್ ಸರ್ ತುಂಬ ವಿಸ್ತೃತವಾಗಿ ಅಧ್ಯಯನ ಮಾಡಿ ಅಕ್ಕನನ್ನು ಆಕೆಯ ವಚನಗಳಲ್ಲಿನ ವಿಚಾರಗಳ ಮೂಲಕವೇ ಮುಖಾಮುಖಿಯಾಗಿ ಒಂದು ಪ್ರಯೋಗ ಅಣಿಮಾಡಿದ್ದಾರೆ. ಕೆವೈಎನ್ ಸರ್ ಅವರದು ಕವಿ ಮನಸ್ಸು. ಜೊತೆಗೆ ಜನಪದರ ನುಡಿಗಟ್ಟು, ಅವರ ಲಯಗಾರಿಕೆಗೆ ಮನಸೋತಿರುವ ಮನಸ್ಸು. ಹಾಗಾಗಿ ಅವರು ನಾಟಕ ಕಟ್ಟುವ ಬಗೆಯಲ್ಲಿ ಕವಿಹೃದಯದ ಚಿತ್ತಾರಗಳು ಜನಪದರ ನುಡಿಗಟ್ಟಿನಲ್ಲಿ ಮೈದುಂಬಿಕೊಂಡು ಅರಳುತ್ತವೆ. ಅಕ್ಕನ ಬಾಲ್ಯ, ಅವಳ ಭಾವಜಗತ್ತಿನಲ್ಲಿ ಶಿವ ಒಳಹೊಕ್ಕ ಬಗೆ, ಅವಳು ತಾತ್ವಿಕತೆಯಲ್ಲಿ ತೀವ್ರವಾಗಲು ಆರಂಭಿಸಿದ ಘಟ್ಟ, ಮದುವೆ ವಿಚಾರ ಬಂದಾಗ ‘ಇಹಕ್ಕೊಬ್ಬ ಪರಕ್ಕೊಬ್ಬ ಗಂಡನೇ..?’ ಎಂದು ಕೇಳಿದ ಅವಳ ಛಾತಿ, ಅಂಗದ ಬಗೆಗೆ ಅವಳ ವಿಚಾರ ಎಲ್ಲವನ್ನೂ ಅವಳ ವಚನಗಳ ಸಾಲುಗಳ ಮೂಲಕವೇ ಒಳಹೊಕ್ಕು ತಮ್ಮ ಕವಿಹೃದಯದ ಮೂಲಕ ಕಟ್ಟಿರುವುದು ಈ ಪ್ರಯೋಗದ ವಿಶಿಷ್ಟತೆ.

ಆದರೆ ಹಾಳೆ ಮೇಲೆ ಇಳಿದ ದೃಶ್ಯಗಳಿಗೆ ಚೆಂದದ ರೂಪ ಕಲ್ಪಿಸಬೇಕಿರುವುದು ನಿರ್ದೇಶಕರ ಕೆಲಸ. ಪ್ರಯೋಗ ನೋಡಿದಾಗ ಈ ಕೆಲಸ ಸರಿಯಾಗಿ ಆಗಿದೆಯೇ ಎಂದು ಪ್ರಶ್ನಿಸಿಕೊಳ್ಳುವಂತೆ ಆಯಿತು. ಪರಿಕಲ್ಪನೆ ಮತ್ತು ನಿರ್ದೇಶನ ಬಿ.ಜಯಶ್ರೀ ಅವರದು. ವಿನ್ಯಾಸ ಎಂ.ಎಸ್ ಸತ್ಯು ಅವರದು. ಜಯಶ್ರೀ ಅವರ ರಂಗಸಾಧನೆಯ ಬಗ್ಗೆ ಚಕಾರ ಎತ್ತಬೇಕಾಗಿಯೇ ಇಲ್ಲ. ಅವರ ನಾಟಕಗಳು ಅಂದರೆ ಬೇರೆ ಬಗೆಯ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಯಾಕೆಂದರೆ ಅವರು ಈ ಹಿಂದೆ ನಿರ್ದೇಶಿಸಿದ ನಾಟಕಗಳು ಹಾಗಿವೆ. ಚಿತ್ರಪಟ ರಾಮಾಯಣ, ಲಕ್ಷಾಧಿಪತಿ ರಾಜನಕಥೆ, ಸದಾರಮೆ ಇತ್ಯಾದಿ. ಅವುಗಳಲ್ಲಿ ಇರುವ ವೈಬ್ರೆಂಟ್ ಗುಣ ‘ನೀವು ಕಾಣಿರೆ’ಯಲ್ಲಿ ಮಾಯವಾಗಿತ್ತು. ಮೇಳ ತುಂಬ ಪೇಲವ ಅನಿಸಿತು. ಹಾಡುಗಳ ಸಾಹಿತ್ಯ ಚೆಂದವಿದ್ದರೂ ಮೇಳದ ದನಿ ಬತ್ತಿಹೋದಂತೆ ಅನಿಸುತ್ತಿತ್ತು. ವಾದ್ಯ ಸಹಕಾರವೂ ಅಷ್ಟು ಇರಲಿಲ್ಲ. ವಿನ್ಯಾಸ ಮತ್ತು ನಿರ್ದೇಶನ ಒಟ್ಟಾಗಿ ಸರಿಯಾದ ಹದದಲ್ಲಿ ಬೆರೆಯದೆ ಹೀಗಾಯಿತೇನೊ ಅನಿಸಿತು. ಜಯಶ್ರೀ ಅವರ ಕಂಠಕ್ಕೆ ಮುಪ್ಪು ಬಂದೇ ಇಲ್ಲ ಎನ್ನುವುದು ಚೆಂದದ ಸಂಗತಿ. ಆದರೆ ಪ್ರಯೋಗಕ್ಕೆ ಯಾಕೆ ಬಂತು ಎಂದು ಕೇಳಕೊಳ್ಳುವಂತೆ ಮಾಡಿದೆ. ರಮೇಶ್ ಪಂಡಿತ್ ಚೇತೋಹಾರಿ ಅನಿಸಿದರು. ಶ್ರೀನಿವಾಸ ಮೇಷ್ಟ್ರುಗೆ ಅದು ತಕ್ಕುದಲ್ಲದ ಪಾತ್ರ ಮತ್ತು ತುಂಬ ಕಿರಿದಾದ ಪಾತ್ರ. ಅಕ್ಕನ ಪಾತ್ರ ನಿರ್ವಹಿಸಿದ್ದ ಹೆಣ್ಣುಮಕ್ಕಳು ಚೆನ್ನಾಗಿ ಅರ್ಥೈಸಿಕೊಂಡು ನಟಿಸಿದರು. ಆದರೆ ಅಕ್ಕನನ್ನು ಹಾಗೆ ಕಾಡಿನಲ್ಲಿ ಮರಳುಗೊಂಡವಳಂತೆ ಚಿತ್ರಿಸಿದ್ದು ಅವಳ ವಚನಗಳಲ್ಲೂ ಅ ಮರಳುತನ ಇದೆಯೇ ಎಂದು ಮತ್ತೊಮ್ಮೆ ಅವಳ ವಚನಗಳಲ್ಲಿ ನೋಡಬೇಕು. ಈ ಪ್ರಯೋಗ ಹೊಸದಾದ್ದರಿಂದ ಇದು ಕುದುರಿಕೊಳ್ಳುವವರೆಗೂ ಕಾಯಬೇಕೋ ಅಥವಾ ಇದು ಸುಧಾರಣೆಗೊಂಡಿರುವ ಪ್ರಯೋಗವೋ ತಿಳಿಯಲಿಲ್ಲ.

ಅಕ್ಕನ ಬಗೆಗೆ ತಾತ್ವಿಕ ಪ್ರಶ್ನೆಗಳನ್ನ ಇರಿಸಿಕೊಂಡಿರುವವರು ನೋಡಲೇಬೇಕಿರುವ ಪ್ರಯೋಗ ಇದು. ಯಾಕೆಂದರೆ ಕೆವೈಎನ್ ಸರ್ ಇಲ್ಲಿ ಒಂದು ನೋಟಕ್ರಮದ ಎಕ್ಸ್‌ಟೆನ್ಷನ್ ಕಲ್ಪಿಸಿಕೊಟ್ಟಿದ್ದಾರೆ. ಈ ಎಕ್ಸ್‌ಟೆನ್ಷನ್‌ನನ್ನು ನೀವೂ ಕಾಣಿರೆ ಎನ್ನುವುದು ನನ್ನ ಆಶಯ…