ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ. ತನ್ನ ತಿರುಗಾಟದ ಜೀವನದಲ್ಲಿ ಯಾವತ್ತೂ ಇವತ್ತಿನ ಸ್ಥಿತಿಯನ್ನು ಅನುಭವಿಸಿರುವುದು ನೆನಪಿಗೆ ಬರಲಿಲ್ಲ. ಅಭಿಮಾನಿ ಕೊಟ್ಟಿದ್ದ ಬನ್ ಹೀಗೊಂದು ಅವಾಂತರಕ್ಕೆ ಕಾರಣವಿರಬಹುದೇ ಎಂದುಕೊಳ್ಳುವಾಗ ಅವನ ಮೇಲೆ ತಪ್ಪನ್ನು ಹೊರಿಸುವುದಕ್ಕೆ ಇಷ್ಟವಾಗಲಿಲ್ಲ.
ರವಿ ಮಡೋಡಿ ಬರೆದ ಈ ಭಾನುವಾರದ ಕತೆ “ಜೀವದೊಳಗಿನ ಆಟ” ನಿಮ್ಮ ಓದಿಗೆ

ಭ್ರೂಮಧ್ಯದಲ್ಲಿ ಕೆಂಪು ತಿಲಕ, ಎಣ್ಣೆಯನ್ನು ಹಚ್ಚಿ ಬಾಚಿಕೊಂಡಿರುವ ತಲೆ, ಗಡ್ಡದ ಕುರೂಹೂ ಇಲ್ಲದ ನೀಟಾಗಿ ಶೇವ್ ಮಾಡಿರುವ ಮುಖ, ಇಸ್ತ್ರಿ ಇಲ್ಲದ ಬಿಳಿ ಜುಬ್ಬಾ, ಕರಪರ ಎನ್ನುವ ಚಪ್ಪಲಿ, ಬಗಲಿಗೆ ಬಟ್ಟೆಯ ಬ್ಯಾಗನ್ನು ಸಿಕ್ಕಿಸಿಕೊಂಡು ಸಂಜೆಯ ಹೊತ್ತಿಗೆ ಬಂದಿದ್ದ ರಮೇಶನಿಗೆ ಚೌಕಿಯಲ್ಲಿ ತನ್ನ ಸಹಕಲಾವಿದರಿಲ್ಲದಿರುವುದನ್ನು ಕಾಣುವಾಗ ಒಮ್ಮೆ ದಿಗಿಲಾಗಿತ್ತು. ಸುತ್ತಲೂ ಒಮ್ಮೆ ನೋಡಿದ. ಚಿಕ್ಕದಾಗಿ ಕಟ್ಟಿರುವ ಚೌಕಿಮನೆ ಎಂಬ ಬಟ್ಟೆಯ ಡೇರೆಯೊಳಗೆ ಪಾತ್ರದ ಆವಾಹನೆಗೆ ಕ್ಷಣ ಹೊತ್ತಂತ್ತಿದ್ದವು. ಮಧ್ಯದಲ್ಲಿ ಕಟ್ಟಿರುವ ಉದ್ದವಾಗಿ ಹಗ್ಗದಿಂದ ಇಳಿಬಿಟ್ಟಿರುವ ಮರದ ಕೋಲು, ಅದಕ್ಕೆ ತೂಗುಬಿಟ್ಟಿರುವ ಬಲ್ಬುಗಳು, ಉದ್ದ ಸಾಲಿನಲ್ಲಿ ಸಾಲಾಗಿ ಜೋಡಿಸಿರುವ ಕಲಾವಿದರ ಪೆಟ್ಟಿಗೆ, ಬಣ್ಣದ ವಸ್ತ್ರಗಳು. ಚಿನ್ನವನ್ನೇ ಹೋಲುವ ಆಭರಣಗಳು, ಎದುರಿನ ಸಿಂಗರಿಸಲ್ಪಟ್ಟ ಮೇಳದ ದೇವರ ವಿಗ್ರಹ, ಅದಕ್ಕೊಂದು ಕಾಣಿಕೆ ಡಬ್ಬ… ಹೀಗೆ ಆ ದಿನದ ಸಂಭ್ರಮಕ್ಕೆ ಸಾಕ್ಷಿಯಾಗುವಂತಿದ್ದವು. ರಮೇಶನು ತಾನು ಬಣ್ಣಗಾರಿಕೆಯನ್ನು ಮಾಡಿಕೊಳ್ಳುವ ಪೆಟ್ಟಿಗೆಯ ಮುಂದೆ ಹೋಗಿ,  ಅದರ ಮೇಲೆ ತನ್ನ ಬ್ಯಾಗನ್ನು ಇರಿಸಿ, ಮೈಯನ್ನು ಮುರಿಯುತ್ತ, ಹಿಂದಿನ ರಾತ್ರಿಯ ನಿದ್ದೆಯಿಲ್ಲದ ಕಣ್ಣುಗಳನ್ನು ಮುಚ್ಚುತ್ತ, ದೀರ್ಘವಾಗಿ ಆಕಳಿಸುತ್ತಿದ್ದ. ರಾತ್ರಿ ಒಂಬತ್ತುವರೆಗೆ ಪ್ರಾರಂಭವಾಗುವ ಆಟಕ್ಕೆ ತಾನು ಐದು ಗಂಟೆಗೆ ಯಾಕೆ ಬಂದೆ ಎಂಬುದು ಕೊನೆಗೂ ಅರ್ಥವಾಗದವನಂತೆ ಎದುರು ಹಾಕಿದ್ದ ಚಾಪೆಯ ಮೇಲೆ ಮಲಗುವುದೇ ವಾಸಿ ಎಂಬುದಾಗಿ ತಿಳಿದು ಮಲಗಿದ. ಅರ್ಧಂಬರ್ದ ನಿದ್ದೆಯನ್ನು ಹೊಂದಿದ್ದ ಕಣ್ಣುಗಳನ್ನು ಮುಚ್ಚಿಕೊಳ್ಳುವುದಕ್ಕೂ ಸಾಧ್ಯವಾಗದೇ, ಆ ಕಡೆ ಬಿಡುವುದಕ್ಕೂ ಆಗದೇ ಎಡಬಿಡಂಗಿ ಸ್ಥಿತಿಯಲ್ಲಿ ನಿದ್ದೆ ಹತ್ತಿರಲಿಲ್ಲ. ಚಾಪೆಯಲ್ಲಿ ಹೊರಳಾಡಿದ, ಮಗ್ಗಲನ್ನು ಬದಲಾಯಿಸಿದ. ಆದರೂ ಸಾಧ್ಯವಾಗಲಿಲ್ಲ. ಇನ್ನು ತನಗೆ ಸಾಧ್ಯವೇ ಇಲ್ಲ ಎಂಬಂತಾದಾಗ ಪ್ಯಾಂಟಿನ ಜೋಬಿನಿಂದ ಮೊಬೈಲನ್ನು ತೆಗೆದು ಫೇಸ್ಬುಕನ್ನು ನೋಡತೊಡಗಿದ. ಯಾರೋ ಒಬ್ಬರು ಫೇಸ್ಬುಕ್ಕಿನಲ್ಲಿ ತನ್ನ ಹಿಂದಿನ ರಾತ್ರಿಯ ಪ್ರದರ್ಶನದ ವಿಡಿಯೋ ಒಂದನ್ನು ಶೇರ್ ಮಾಡಿರುವುದನ್ನು ಕಾಣುವಾಗ ರಮೇಶನಿಗೆ ಕುತೂಹಲ ಹೆಚ್ಚಿತು. ಆ ವೀಡಿಯೋಗೆ ಸಾವಿರಾರು ಲೈಕ್ಸ್, ಕಾಮೆಂಟ್ಸ್‌ಗಳು ಬಿದ್ದಿದ್ದವು. “ರಮೇಶಣ್ಣ ಸೂಪರ್”, “ಎಂತಹ ಅದ್ಭುತ ಅಭಿನಯ”, “ರಮೇಶಣ್ಣನ ಹಾಗೆ ಸಹಜವಾಗಿ ಅಭಿನಯಿಸುವ ಸ್ತ್ರೀಪಾತ್ರಧಾರಿ ಇವತ್ತು ಈ ಯಕ್ಷರಂಗದಲ್ಲಿ ಯಾರೂ ಇಲ್ಲ” ಎಂಬಂತಹ ಕಾಮೆಂಟ್ಸ್‌ಗಳನ್ನು ಅಭಿಮಾನಿಗಳು ಹಾಕಿದ್ದರು. ಅದನ್ನೆಲ್ಲ ಓದುತ್ತ, ಒಂದೊಂದಕ್ಕೂ ಲೈಕ್ ಕೊಡುತ್ತ, ತಾನು ಸ್ತ್ರೀ ಪಾತ್ರಧಾರಿಯಾಗಿದ್ದು  ಸಾರ್ಥಕವಾಯಿತು ಎಂಬ ಭಾವನೆಯನ್ನು ಆ ಕ್ಷಣದಲ್ಲಿ ಮೂಡಿಸಿಬಿಟ್ಟಿತ್ತು. ಹತ್ತು ನಿಮಿಷ ಕಳೆದಿದ್ದರೂ ಉಳಿದ ಕಲಾವಿದರ್ಯಾರೂ ಚೌಕಿಗೆ ಬಂದಿರಲಿಲ್ಲ. ರಮೇಶನಿಗೆ ಫೇಸ್ಬುಕ್ ಕೂಡ ಬೋರ್ ಆಯಿತು.  ಚೌಕಿಯಲ್ಲಿ ತಾನೊಬ್ಬನೇ ಕುಳಿತುಕೊಳ್ಳುವುದಕ್ಕೆ ಕಷ್ಟವಾಗಿ ಎದ್ದು ಟೀಯನ್ನಾದರೂ ಕುಡಿದುಬರೋಣವೆಂದು ಅಲ್ಲಿಯೇ ಸಮೀಪವಿದ್ದ ಅಂಗಡಿಗೆ ಬಂದಿದ್ದ.
ರಮೇಶ ತಾನೊಂದು ಚಾವನ್ನು ಆರ್ಡರ್ ಮಾಡುವಾಗ ಅಲ್ಲಿದ್ದವರು ಅವನನ್ನು ಗುರುತಿಸಿ, ನೀವು ಸ್ತ್ರೀವೇಷಧಾರಿಗಳಲ್ಲವೇ ಎಂದು ಕೇಳಿದಾಗ ಅವನು ಸಂಕೋಚದ ಮುದ್ದೆಯಾಗಿ ಹೌದೆಂಬಂತೆ ತಲೆಯಾಡಿಸಿದ್ದ. ತಮ್ಮ ಮೆಚ್ಚಿನ ನಟನನ್ನು ಎದುರು ಕಾಣುವಾಗ ಅವರೆಲ್ಲರು ಗೌರವ ಭಾವನೆಯಿಂದ ನಮಸ್ಕಾರ ಮಾಡಿ,  ಎದುರಿನ ಬೆಂಚನ್ನು ಬಿಟ್ಟುಕೊಟ್ಟಿದ್ದರು. “ರಮೇಶಣ್ಣ, ನಿಮ್ ಅಭಿಮಾನಿಗಳು ನಾವ್. ನಿಮ್  ಅಂಬೆ, ಸೀತಿ, ದ್ರೌಪದಿ, ಚಂದ್ರಮತಿ, ದಾಕ್ಷಾಯಿಣಿ ಎಷ್ಟ್ ಪಾತ್ರ ಕಂಡಿತ್ ಮರ್ರೆ. ಅವೆಲ್ಲ ಬಾರೀ ಲಾಯ್ಕ್ ಆತ್, ನಿಮ್  ಪಾತ್ರು ಬಹ್ಳ ಇಷ್ಟ ನಮ್ಗೆ. ನನ್ನ ಹೆಂಡತಿಯಂತೂ ಆಟ ಕಾಂಬೊಳೆ ಅಲ್ಲ. ಆದ್ರು ನಿಮ್ ಪಾತ್ರ ಕಾಣ್ಕ್ ಅಂತ್ಲೆ ಆಟಕ್ಕೆ ಬತ್ತಾಳು. ಅವಳಿಗೆ ನಿವ್ ಹೆಣ್ಣಾಯಿ ಭಾವನೆಗಳನ್ನು ಅರ್ಥಮಾಡಿಕೊಂಡು ಆಕ್ಟ್ ಮಾಡ್ತ್ರೆಲೆ ಅದು ಬಹಳ ಖುಷಿಯಾತ್ತು . ನನ್ನ ಹತ್ರ ಜಗಳು ಮಾಡುವಾಗಲೆಲ್ಲ ರಮೇಶಣ್ಣನ ಪಾತ್ರ ಕಾಣಿ, ಹೆಣ್ ಮಕ್ಕಳು ಮನಸ್ಸು ಹೆಂಗೆ ಇರತ್ ಅಂದೇಳಿ ನಿಮ್ಗು ಗೊತ್ತಾತ್ತು, ನೋಡಿ ಕಲ್ಕಣಿ ಅಂತ ಹೇಳ್ತು ಗೊತಿತ” ಎಂದು ಅಭಿಮಾನಿಯೊಬ್ಬ ಹಲ್ಕಿರಿದು ನುಡಿದಿದ್ದ. ರಮೇಶನಿಗೆ ಆ ಸಹೃದಯತೆಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ತನ್ನ ಪಾತ್ರಗಳೆಲ್ಲ ಜನರನ್ನು ಹೀಗೆ ಕಾಡಬಹುದು ಎಂಬುದನ್ನು ಅವನು ಯಾವತ್ತೂ ಊಹಿಸಿರಲಿಲ್ಲ. ಆ ಅಭಿಮಾನಿ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ “ಸ್ತ್ರೀ ಪಾತ್ರ ಮಾಡುವುದು ಕಷ್ಟ್ ಮರ್ರೆ. ಅದಕ್ಕೆ ಹೆಣ್ಣಿನ ಭಾವನೆ, ಸಂಕಷ್ಟಗಳು, ಯೋಚ್ನಿ ಮಾಡುವ ಕ್ರಮ ಎಲ್ಲಾ ಗೊತ್ತಿರ್ಕು.  ಹಿಂಗೆ ಪಾತ್ರು ಮಾಡಿ ಮಾಡಿ ನಂಗೂ ತಿಳದ್ದು. ಅದು ನಿಮಗೆಲ್ಲ ಇಷ್ಟ ಆಪುವಂಗೆ ಆಯ್ತು. ಎಲ್ಲಾ ದೇವರ ಅನುಗ್ರಹ. ನಿಮ್ಮಂತಹ ಅಭಿಮಾನಿಗಳ ಹಾರೈಕೆ ಬಿಟ್ರೆ ನಮ್ದು ಎಂತ ಇಲ್ಯೆ” ಎಂದು ನಿಸ್ಪೃಹವಾಗಿ ನುಡಿದಿದ್ದ. ಮಾತನ್ನಾಡುತ್ತಿರುವಾಗಲೇ ಅಂಗಡಿಯವ ಅವರಿಬ್ಬರಿಗೂ  ಚಾವನ್ನು ತಂದು ಕೊಟ್ಟ.  ಆ ಅಭಿಮಾನಿ ಚಾವನ್ನು ಮಾತ್ರವೇ ಹೇಗೆ ಕುಡಿಯುವುದೆಂದು ಗ್ರಹಿಸಿ, ಅಂಗಡಿಯ ಮುಂದಿನ ಸಾಲಿನಲ್ಲಿಟ್ಟಿದ್ದ ಡಬ್ಬಗಳಿಂದ ಬನ್ನುಗಳನ್ನು, ಬಿಸ್ಕೆಟ್‌ಗಳನ್ನು ತೆಗೆದು,  ರಮೇಶನಿಗೂ ಕೊಡುವುದಕ್ಕೆ ಮುಂದಾದ. ರಮೇಶ ಎಷ್ಟು ಬೇಡವೆಂದರೂ, ತನಗೆ ಹಸಿವಿಲ್ಲವೆಂದರೂ ಅವನು ಕೇಳಿರಲಿಲ್ಲ. ಕೊನೆಗೆ ಅಭಿಮಾನಿಯ ಒತ್ತಾಯಕ್ಕೆ ಶರಣಾದವನಂತೆ ಬನ್ನು ಬಿಸ್ಕೆಟ್ ಸ್ವೀಕರಿಸಿದಾಗ ಅವನಿಗೂ ಸಮಾಧಾನವಾಗಿತ್ತು. ಇಬ್ಬರೂ ಚಾ ಕುಡಿಯುತ್ತ, ಬನ್/ಬಿಸ್ಕೆಟ್‌ಗಳನ್ನು ತಿಂದರು. ಒಂದಷ್ಟು ಹೊತ್ತು ಹರಟಿದರು. ಆ ಅಭಿಮಾನಿಗೆ ಹೊರಡುವ ಸಮಯ ಬಂದಿರಬೇಕು. ಗಡಿಬಿಡಿಯಲ್ಲಿ “ಮನೆಯಲಿ ಸ್ವಲ್ಪ ಕೆಲ್ಸು ಇತ್ತು.  ಇವತ್ತು ಆಟ ಕಾಂಬುಕೆ ಹೆಣ್ತಿ ಬತ್ತೆ ಅಂತಿದ್ದಾಳು. ಕಡಿಕೆ ಕರಕ ಬತ್ತೆ” ಎನ್ನುತ್ತ ಹೊರಟರೆ ರಮೇಶನೂ ಡೇರೆಯತ್ತ ಹೊರಡುವುದಕ್ಕೆ ಸಿದ್ಧನಾಗಿದ್ದ.
ಇಂದು ರಮೇಶ ಯಕ್ಷಗಾನದಲ್ಲಿ ಬಹಳ ದೊಡ್ಡ ಸ್ತ್ರೀ ವೇಷಧಾರಿ. ಅವನು ಮಾಡುವ ಸ್ತ್ರೀ ಪಾತ್ರಗಳಿಗಂತೂ ಇನ್ನಿಲ್ಲದ ಬೇಡಿಕೆ. ಅವನ ವೇಷವನ್ನು ನೋಡುವುದಕ್ಕೆಂದೇ ದೂರದ ಊರಿನಿಂದ ಜನರು  ಮೇಳದ ಆಟಕ್ಕೆ ಬಂದು, ಪಾತ್ರವನ್ನು ಆಸ್ವಾದಿಸುತ್ತಿದ್ದರು. ಜೊತೆಗೆ ಅವನ ಜತೆ  ಸೆಲ್ಪಿಯಂದೋ, ಫೋಟೋವೆಂದೋ ತೆಗೆದುಕೊಂಡು ಸಂತೋಷಪಡುತ್ತಿದ್ದರು. ಅದನ್ನೆಲ್ಲ ನೋಡುವಾಗ ರಮೇಶನಿಗೆ ತಾನು ಕಲಾವಿದನಾಗಿದ್ದು ಸಾರ್ಥಕ ಎನ್ನುವ ಭಾವನೆ ವ್ಯಕ್ತವಾಗುತ್ತಿತ್ತು. ಅವನಿಗೆ ಯಾವತ್ತು ತನ್ನನ್ನು ಪ್ರೀತಿಸುವ ಅಭಿಮಾನಿಗಳ ಮನಸ್ಸು ನೋಯಿಸುವುದಕ್ಕೆ ಇಷ್ಟವಾಗುತ್ತಿರಲಿಲ್ಲ. ಮುಂಚಿನ ತರ ಅಷ್ಟೊಂದು ಆರೋಗ್ಯ ಸರಿಯಿಲ್ಲದಿದ್ದರೂ ಅವನ ಪಾತ್ರಗಳು ಪ್ರೇಕ್ಷಕರಿಗೆ ಮೋಸವನ್ನು ಮಾಡುತ್ತಿರಲಿಲ್ಲ. ಎಷ್ಟೋ ಸಲ ಅವನಿಗೆ ಅನ್ನಿಸುತ್ತಿತ್ತು. ಈ ಮೇಳದ ತಿರುಗಾಟ ಸಾಕೆಂದು. ದಿನಕ್ಕೊಂದು ಊರಿಗೆ ತಿರುಗಬೇಕು. ಎಲ್ಲೋ ಶಾಲೆಯಲ್ಲೋ, ದೇವಸ್ಥಾನದಲ್ಲೋ, ಆ ಊರಿನ ಯಾರದ್ದೋ ಮನೆಯಲ್ಲಿಯೋ, ಇನ್ನೆಲ್ಲಿಯೋ ಉಳಿದುಕೊಳ್ಳಬೇಕು. ಊಟ, ನಿದ್ದೆ, ಸ್ನಾನ ಎಲ್ಲವೂ ಅನಿಶ್ಚಿತವಾಗಿರುತ್ತವೆ. ಆ ಸಂಕಷ್ಟವನ್ನು ಮೀರಿ ಪಾತ್ರವನ್ನು ಕಟ್ಟಿಕೊಡಬೇಕಾಗುತ್ತದೆ. ಅವನ ಹೆಂಡತಿಗೆ ಈ ತಿರುಗಾಟದ ಬಗ್ಗೆ ಆಸಕ್ತಿಯಿಲ್ಲದೇ ಬೇಡ ಎನ್ನುತ್ತಿದ್ದಳು.  ಆದರೆ ಕಲೆ ಎಂಬ ಮೋಹ ಮಾಯೆ ಅವನನ್ನು ಬಿಗಿದಪ್ಪಿ ಸೆಳೆಯುತ್ತಿರುವ ಕಾರಣವೋ,  ಖ್ಯಾತಿ ಎಂಬ ಭ್ರಮಾಲೋಕದ ವಿಚಾರವೋ ಒಂದು ತಿಳಿಯದೇ ತಿರುಗಾಟವನ್ನು ಮುಂದುವರೆಸಿದ್ದ.
ರಮೇಶ ಅಂಗಡಿಯಿಂದ ಡೇರೆಯತ್ತ ಬರುತ್ತಿದ್ದ.  ನೂರು ಹೆಜ್ಜೆ ಸಾಗಿರಬಹುದು. ಇದ್ದಕ್ಕಿದ್ದ ಹಾಗೆ ರಮೇಶನಿಗೆ ಹೊಟ್ಟೆ ಗುಳುಗುಳು ಅನ್ನುವುದಕ್ಕೆ ಪ್ರಾರಂಭವಾಗಿತ್ತು. ಏನೋ  ಒಂದು ರೀತಿಯಲ್ಲಿ ಹೊಟ್ಟೆ ತೊಳಸಿದಂತಾಗಿ ಸಂಕಟ ಪ್ರಾರಂಭವಾಗಿತ್ತು. ಇತ್ತೀಚೆಗೆ ಅವನಿಗೆ ಅಸಿಡಿಟಿ ಶುರುವಾಗಿತ್ತು. ನೀರನ್ನು ಕುಡಿದರೆ ಹೊಟ್ಟೆಯ ಉರಿ ಕಡಿಮೆಯಾಗುತ್ತಿತ್ತು. ನೀರು ಕುಡಿಯೋಣವೆಂದರೆ ಕೈಯಲ್ಲಿ ಬಾಟಲಿ ಇರಲಿಲ್ಲ. ಚೌಕಿಯಲ್ಲಿ ತನ್ನ ಬ್ಯಾಗ್ ಇರುವುದು ನೆನಪಾಯಿತು. ಇನ್ನೈದು ನಿಮಿಷಕ್ಕೆ ಕಾಲೇಜು ಮೈದಾನದಲ್ಲಿ ಹಾಕಿದ್ದ ಮೇಳದ ಡೇರೆಗೆ ಹೋಗಬಹುದಿತ್ತಾಗಿದ್ದರೂ ನಡೆಯುವುದಕ್ಕೆ ಕಷ್ಟಪಡುತ್ತಿದ್ದ.
ಡೇರೆಗೆ ಕಟ್ಟಿದ್ದ ಮೈಕ್‌ನಲ್ಲಿ ಒಂದೇ ಸಮನೇ ಅಂದಿನ ಆಟದ ಬಗ್ಗೆ ಪ್ರಚಾರವನ್ನು ಮಾಡುತ್ತಿದ್ದರು. “ನಿಮ್ಮೂರಿನಲ್ಲಿ ಒಂದೇ ಒಂದು ಆಟ. ರಸಿಕರಿಗೆ ರಸದೂಟ. ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ. ನಿಮ್ಮೂರಿನಲ್ಲಿ ಪ್ರಥಮ ಬಾರಿಗೆ, ಹೆಣ್ಣನ್ನೇ ನಾಚಿಸುವ ಯಕ್ಷವಿಶಾರದೆ ರಮೇಶವರ ಚಂದ್ರಮತಿ ಪಾತ್ರವನ್ನು ನೋಡಲು ಮರೆಯದಿರಿ” ಎಂದು ಹೇಳುತ್ತಿದ್ದರು. ರಮೇಶನಿಗೆ ತನ್ನ ಬಗ್ಗೆಯ ಪ್ರಚಾರವೆಂದು ತಿಳಿದರೂ ಖುಷಿಪಡುವುದಕ್ಕೆ ಸಾಧ್ಯವಾಗದೇ, ಹೊಟ್ಟೆ ಉರಿಯ ಕಾರಣದಿಂದ ಅದು ಮನಸ್ಸಿಗೆ ನಾಟುತ್ತಿರಲಿಲ್ಲ. ಚೌಕಿಗೆ ದೌಡಾಯಿಸುತ್ತಲೇ ತನ್ನ ಬ್ಯಾಗಿನಿಂದ ನೀರನ್ನು ತೆಗೆದು ಒಮ್ಮೆಲೇ ಕುಡಿದ. ಒಮ್ಮೆಗೆ ಹೊಟ್ಟೆ ತಣ್ಣಗಾದಂತೆ ಅನ್ನಿಸಿ ಸ್ವಲ್ಪ ಸಮಾಧಾನವಾಗಿತ್ತು. ರಮೇಶ ಮೇಳದ ದೇವರ ಮುಂದಿಟ್ಟ ಗಡಿಯಾರನ್ನು ನೋಡಿದ. ಇನ್ನೂ ಆರು ಗಂಟೆಯಾಗಿರಲಿಲ್ಲ. ವೇಷ ಮಾಡಿಕೊಳ್ಳುವುದಕ್ಕೆ ಬಹಳ ಸಮಯವೇ ಇದ್ದುದರಿಂದ ಸ್ವಲ್ಪಹೊತ್ತು ಚಾಪೆಯ ಮೇಲೆ ಮಲಗೋಣವೆಂದು ನಿರ್ಧರಿಸಿ ಮಲಗಿದ. ಆದರೆ ಇನ್ನೈದು ನಿಮಿಷಕ್ಕೆ ಹೊಟ್ಟೆಯ ಸೆಳೆತ ಜೋರಾಗಿ ಪ್ರಾರಂಭವಾಗಿ,  ಹಿಂಡಿದಂತೆ ಅನ್ನಿಸಿ, ತಡೆದುಕೊಳ್ಳುವುದಕ್ಕೆ ಅಸಾಧ್ಯವೆನಿಸುತ್ತಿತ್ತು. ಅದರ ನೋವಿಗೆ ಕಣ್ಣೀರು ಬರುವುದೊಂದು ಬಾಕಿಯಿತ್ತು. ಅವನಿಗಿದು ಶೌಚಕ್ಕೆ ಹೋಗದೆ ಪೂರ್ತಿಯಾಗಿ ಗುಣವಾಗುವುದಿಲ್ಲ ಎಂಬುದು ತಿಳಿದುಹೋಯಿತು. ಹೋಗುವುದಾದರೂ ಎಲ್ಲಿ ಹೋಗುವುದು ಎಂಬ ಸಂದಿಗ್ಧತೆ ಆ ಕ್ಷಣಕ್ಕೆ ಎದುರಾಯಿತು. ಆಧುನಿಕ ಮೊಬೈಲ್ ಶೌಚಾಲಯದಂತಹ ಸಂಗತಿಗಳು ಡೇರೆಯಲ್ಲಿ ಇಲ್ಲದಿರುವುದರಿಂದ ಅನಿವಾರ್ಯವಾಗಿ ಹೊರಕ್ಕೆ ಹೋಗಬೇಕಿತ್ತು. ರಮೇಶನಿಗೆ ಡೇರೆಯ ಸಮೀಪದಲ್ಲಿ ಬಸ್ ನಿಲ್ದಾಣವಿರುವುದು ನೆನಪಾಯಿತು. ಅದರ ಪಕ್ಕದಲ್ಲಿ ಶೌಚಾಲಯ ಇತ್ತೋ ಇಲ್ಲವೋ ಎಂಬುದು ಸರಿಯಾಗಿ ನೆನಪಿಗೆ ಬರಲಿಲ್ಲ. ಆದರೂ ಒಮ್ಮೆ ನೋಡಿಬರೋಣವೆಂದು ಗಡಿಬಿಡಿಯಲ್ಲಿ ಆ ಕಡೆಗೆ ಹೊರಟುಬಿಟ್ಟಿದ್ದ.
ರಮೇಶ ಅಂದುಕೊಂಡ ಹಾಗೆ ಬಸ್ ನಿಲ್ದಾಣದ ಪಕ್ಕದಲ್ಲಿ ಶೌಚಾಲಯವೊಂದು ಇದ್ದಿತ್ತು. ಬಂದು ಅದರ ಸ್ಥಿತಿಯನ್ನು ಕಾಣುವಾಗ ರಮೇಶನಿಗೆ ತಲೆಬಿಸಿ ಪ್ರಾರಂಭವಾಯಿತು. ನೋಡಿದರೆ ಸುತ್ತಲೂ ಲಂಟಾನಾ  ಗಿಡಗಳಿಂದ ತುಂಬಿಹೋಗಿದ್ದವು. ಅದರ ಹಂಚುಗಳು ಒಡೆದಿದ್ದವು. ಬಾಗಿಲು ಅರ್ಧ ಮುರಿದು, ಒಳಗೆ ಕಾಣುವಂತಿತ್ತು. ಏನಾದರಾಗಲಿ  ಎನ್ನುತ್ತ ರಮೇಶ ಗಿಡಗಳ ಸಂದಿಯಲ್ಲಿ ನುಗ್ಗಿ, ಶೌಚಾಲಯದ ಎದುರಿನಲ್ಲಿ ನಿಂತಿದ್ದ. ಗೋಡೆಯ ಮೇಲೆ ಮಸಿಯಲ್ಲಿ ರಾಮ್ ಲವ್ಸ್ ರಾಧಿಕಾ, ಕೆಲವು ಸಂಭೋಗದ ಚಿತ್ರಗಳು, ಹುಡುಗಿ ಬೇಕಿದ್ದರೆ ಸಂಪರ್ಕಿಸಿ ಎನ್ನುವ ಯಾರದ್ದೋ ನಂಬರುಗಳೆಲ್ಲ ಇದ್ದವು. ರಮೇಶನಿಗೆ ಅದನ್ನೆಲ್ಲ ನೋಡುವ ತಾಳ್ಮೆಯಂತೂ ಇರಲಿಲ್ಲ. ತುರ್ತಾಗಿ ತನ್ನ ಕಾರ್ಯವನ್ನು ಮುಗಿಸುವ ಧಾವಂತದಲ್ಲಿದ್ದ. ತಡಮಾಡದೇ ನಿಧಾನವಾಗಿ ಬಾಗಿಲನ್ನು ತೆರೆಯುವುದಕ್ಕೆ ಯತ್ನಿಸಿದ. ನೋಡಿದರೆ ಯಾವುದೋ ಶತಮಾನದ ಹಿಂದೆ ಕೊನೆಯ ಬಾರಿ ತೆರೆದಂತೆ ಗಟ್ಟಿಯಾಗಿ ಹಿಡಿದುಕೊಂಡಿತ್ತು. ಶಕ್ತಿ ಮೀರಿ ಆ ಬಾಗಿಲನ್ನು ಒತ್ತಿದ್ದ. ಒತ್ತಿದ ರಭಸಕ್ಕೆ  ಕರ್ ಕರ್ ಎಂದು ಜೋರಾಗಿ ಸದ್ದನ್ನು ಮಾಡಿ ಬಾಗಿಲು ತೆರೆಯಿತು.  ಆ ಸದ್ದಿಗೆ ಗೋಡೆಗಳಲ್ಲಿ ಬಲೆಯನ್ನು ಕಟ್ಟಿ ಬೇಟೆಗಾಗಿ ಕಾಯುತ್ತಿದ್ದ ಜೇಡಗಳೆಲ್ಲ ಹೆದರಿ ಮಾಡನ್ನು ಸೇರಿಬಿಟ್ಟವು.
ಕಕ್ಕಸು ಮನೆಯಿಂದ ಕೆಟ್ಟದಾಗಿ ವಾಸನೆ ಬರುತ್ತಿತ್ತು.  ಬರುತ್ತಿದ್ದ ವಾಸನೆಗೆ ರಮೇಶನಿಗೆ ಸಹಿಸುವುದಕ್ಕೆ ಸಾಧ್ಯವಾಗದೇ ವಾಕರಿಕೆ ಬರುವಂತಾಯಿತು. ಆದರೂ ಸಹಿಸಿಕೊಂಡು ಒಳ ಪ್ರವೇಶಿಸುವುದಕ್ಕೆ ನೋಡಿದರೆ, ಕಿತ್ತು ಹೋಗಿದ್ದ ನೆಲದಲ್ಲಿ ಮಣ್ಣು, ಎಲೆಗಳಿಂದ ತುಂಬಿ ಹೋಗಿದ್ದವು. ಇಲ್ಲಿ ಹಾವು, ಚೇಳುಗಳಿದ್ದರೆ ಎಂದೆಣಿಸುವಾಗ ರಮೇಶನಿಗೆ ಅರಿವಿಲ್ಲದ ಹಾಗೆ ಮೈಯಲ್ಲಿ ಗುಳ್ಳೆಗಳೆದ್ದವು. ಇದನ್ನೆಲ್ಲ ಕಾಣುವಾಗ ಇಂತಹ ಸ್ಥಿತಿಯಲ್ಲಿ ಬರ್ಹಿದೆಸೆ ತನ್ನಿಂದ ಸಾಧ್ಯವೇ ಇಲ್ಲ ಎಂದೆನಿಸಿ ಅಲ್ಲಿಂದ ಹೊರಡುವುದಕ್ಕೆ ಮುಂದಾದ. ಶೌಚಾಲಯದ ಪಕ್ಕದಲ್ಲಿ ಸ್ವಚ್ಚ ಭಾರತದ ಉದ್ದೇಶಗಳೆಲ್ಲ ಹಾಕಿರುವ ದೊಡ್ಡ ಬೋರ್ಡು, ಅದು ರಮೇಶನನ್ನು ಅಣಕಿಸುವಂತೆ ಕಾಣಿಸಿದ್ದು, ವಸ್ತುಸ್ಥಿತಿಯ ವೈರುಧ್ಯದಂತೆ  ಕಾಣಿಸುತ್ತಿತ್ತು.
ಬಸ್ ನಿಲ್ದಾಣದಲ್ಲಿ ಒಂದಿಬ್ಬರಲ್ಲಿ ಊರಿನಲ್ಲಿ ಶೌಚಾಲಯವಿರುವ ಬಗ್ಗೆ ವಿಚಾರಿಸಿದರೆ, ಯಾರಿಂದಲೂ ಇದೇ ಎನ್ನುವ ಉತ್ತರವಂತೂ ಸಿಗಲಿಲ್ಲ. ರಮೇಶನಿಗಂತೂ ಹೊಟ್ಟೆಯ ನೋವನ್ನು ತಡೆದುಕೊಳ್ಳುವುದಕ್ಕೆ ಕಷ್ಟವಾಗುತ್ತಿತ್ತು. ಆ ಊರಿನಲ್ಲಿ ತನಗೆ ಗೊತ್ತಿದ್ದವರು ಯಾರೂ ಇರಲಿಲ್ಲ. ಯಾರೋ ಅಪರಿಚಿತರ ಮನೆಗೆ ಹೋಗಿ, ನಿಮ್ಮನೆಯ ಟಾಯ್ಲೆಟ್ ನ್ನು ಬಳಸಿಕೊಳ್ಳುತ್ತೇನೆ ಎನ್ನುವುದಕ್ಕೆ ಅವನಿಂದ ಸಾಧ್ಯವಾಗಲಿಲ್ಲ.  ತನ್ನ ಭಾರವನ್ನು ಇಳಿಸಿಕೊಳ್ಳುವುದಕ್ಕೆ ಎಲ್ಲಿಯಾದರೂ ಬಯಲಿನಲ್ಲಿ ಹೋಗುವುದಕ್ಕೆ ನಿಶ್ಚಯಿಸಿದ್ದ. ಆದರೆ ಆಕೇರಿಯಾಗಿದ್ದರಿಂದ ಸಂಜೆಯ ಬೆಳಕು ಇನ್ನೂ ಚೆನ್ನಾಗಿಯೇ ಇರುವಾಗ ಅಸಾಧ್ಯವೆನಿಸಿತ್ತು.  ಜೊತೆಗೆ ಅದು ಸಣ್ಣ ಪೇಟೆಯಾಗಿದ್ದರಿಂದ ಸುತ್ತಲೂ ಮನೆಗಳಿದ್ದರಿಂದ ಎಲ್ಲೆಂದರಲ್ಲಿ ಶೌಚಕ್ಕೆ ಹೋಗುವುದು ತೀರ ಮುಜುಗರದ ಸಂಗತಿಯಾಗಿತ್ತು. ಇದಕ್ಕಿಂತ ಹೆಚ್ಚಾಗಿ ತಾನು ರಂಗದ ಜನಪ್ರಿಯ ಕಲಾವಿದನಾಗಿದ್ದರಿಂದ ಹಾಗೆ ಬಯಲಿನಲ್ಲಿ ಕುಳಿತುಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ.

ಹಿಂದಿನ ರಾತ್ರಿ ಕ್ಯಾಂಪನ್ನು ಮುಗಿಸಿ, ದೂರದ ನೆಂಟರ ಮನೆಯಲ್ಲಿ ಉಳಿದುಕೊಂಡಿದ್ದ ರಮೇಶನಿಗೆ, ಇವತ್ತು ಉಳಿದ ಸಹಕಲಾವಿದರು ಎಲ್ಲಿದ್ದಾರೆ ಎಂಬುದು ತಿಳಿದಿರಲಿಲ್ಲ. ಬಹುಶಃ ಅಲ್ಲಿ ಹೋದರೆ ಶೌಚದ ವ್ಯವಸ್ಥೆ ಇರಬಹುದು ಎಂದುಕೊಂಡ. ಆದರೆ ಅದು ಆ ಊರಿನಲ್ಲಿ ಮೇಳದ ಹೊಸದಾಗಿ ಮಾಡಿಕೊಂಡಿರುವ ಕ್ಯಾಂಪ್ ಆಗಿತ್ತು.  ಸಾಮಾನ್ಯವಾಗಿ ಮೇಳದ ಕಲಾವಿದರು ಎಲ್ಲಿ ವಾಸ್ತವ್ಯವಿರುತ್ತಾರೆ ಎಂಬ ಮಾಹಿತಿಯೂ ಇರಲಿಲ್ಲ. ಒಂದಿಬ್ಬರು ಸಹಕಲಾವಿದರಿಗೆ, ಮೇಳದ ಮೇನೆಜರ್‌ಗೆ ಕಾಲನ್ನು ಮಾಡಿದರೂ ಅವರ್ಯಾರು ಕರೆಯನ್ನು ಸ್ವೀಕರಿಸಲಿಲ್ಲ. ರಮೇಶನಿಗೆ ಹೊಟ್ಟೆಯ ನೋವು ಇನ್ನಷ್ಟು ಜಾಸ್ತಿಯಾದಂತೆ ಅನ್ನಿಸುತ್ತಿತ್ತು. ಏನು ಮಾಡುವುದೆಂದು  ತಿಳಿಯದೇ ಒದ್ದಾಡುತ್ತಿದ್ದ. ರಾತ್ರಿಯ ಆಟಕ್ಕೆ  ಕೆಲಸಗಾರರು ಇನ್ನೂ ಡೇರೆಯನ್ನು ಕಟ್ಟುತ್ತಿದ್ದರು. ಅವರಿಗೆ ಉಳಿದವರು ಎಲ್ಲಿದ್ದಾರೆ ಎಂಬುದು ತಿಳಿದಿರಬಹುದು ಎಂದುಕೊಂಡು ಕೇಳುವುದಕ್ಕೆ ಮುಂದಾಗಿದ್ದ. ಅಸ್ಸಾಮಿನ ಕಡೆಯವರಾದ ಅವರಲ್ಲಿ ಮಾತಾಡುವುದಕ್ಕೆ ಅವರ ಭಾಷೆ ತಿಳಿಯದಿದ್ದರೂ ಅರ್ಧಂಬರ್ದ ಹಿಂದಿಯಲ್ಲಿ “ಓ ಆದ್ಮಿ ಕಿದರ್ ಜಾನ” ಎಂದು ಕೇಳಿದ್ದ. ಪಾಪ ಅವರಿಗೆ ರಮೇಶ ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗದೇ ಮುಖಮುಖ ನೋಡಿಕೊಂಡರು. ರಮೇಶ ತನ್ನ ಪ್ರಯತ್ನವನ್ನು ಬಿಡದೇ ಮತ್ತೆ ಮತ್ತೆ ಕೇಳಿದರೂ ಅವರಿಂದ ಸಮರ್ಪಕ ಉತ್ತರವೇನೂ ಸಿಗಲಿಲ್ಲ.

ರಮೇಶನಿಗೆ ತನ್ನ ಬಗ್ಗೆಯ ಪ್ರಚಾರವೆಂದು ತಿಳಿದರೂ ಖುಷಿಪಡುವುದಕ್ಕೆ ಸಾಧ್ಯವಾಗದೇ, ಹೊಟ್ಟೆ ಉರಿಯ ಕಾರಣದಿಂದ ಅದು ಮನಸ್ಸಿಗೆ ನಾಟುತ್ತಿರಲಿಲ್ಲ. ಚೌಕಿಗೆ ದೌಡಾಯಿಸುತ್ತಲೇ ತನ್ನ ಬ್ಯಾಗಿನಿಂದ ನೀರನ್ನು ತೆಗೆದು ಒಮ್ಮೆಲೇ ಕುಡಿದ. ಒಮ್ಮೆಗೆ ಹೊಟ್ಟೆ ತಣ್ಣಗಾದಂತೆ ಅನ್ನಿಸಿ ಸ್ವಲ್ಪ ಸಮಾಧಾನವಾಗಿತ್ತು. ರಮೇಶ ಮೇಳದ ದೇವರ ಮುಂದಿಟ್ಟ ಗಡಿಯಾರನ್ನು ನೋಡಿದ. ಇನ್ನೂ ಆರು ಗಂಟೆಯಾಗಿರಲಿಲ್ಲ. ವೇಷ ಮಾಡಿಕೊಳ್ಳುವುದಕ್ಕೆ ಬಹಳ ಸಮಯವೇ ಇದ್ದುದರಿಂದ ಸ್ವಲ್ಪಹೊತ್ತು ಚಾಪೆಯ ಮೇಲೆ ಮಲಗೋಣವೆಂದು ನಿರ್ಧರಿಸಿ ಮಲಗಿದ. 

ರಮೇಶನಿಗೆ ಹೊಟ್ಟೆಯ ನೋವು ತೀವ್ರವಾಗಿ ಬಾಧಿಸುತ್ತಿದ್ದರೂ ನಿಲ್ಲುವಷ್ಟು ಶಕ್ತಿ ಇನ್ನೂ ಉಳಿದಿತ್ತು.  ಅದು ಕಾಲೇಜಿನ ಮೈದಾನವಾಗಿದ್ದರಿಂದ ಅಲ್ಲಿ ಎಲ್ಲಾದರೂ ಶೌಚದ ಮನೆ ಇರಬಹುದು ಎಂಬ ಯೋಚನೆ ಹರಿಯಿತು. ತಡಮಾಡದೇ ಮೈದಾನದ ಮೆಟ್ಟಿಲನ್ನು ಏರಿ, ಕಾಲೇಜು ಕ್ಯಾಂಪಸ್ ಕಡೆಗೆ  ಹೆಜ್ಜೆ ಹಾಕಿದ. ಅಂದು ಭಾನುವಾರವಾಗಿದ್ದರಿಂದ ಕಾಲೇಜಿನ ಸುತ್ತ ಯಾರೂ ಇರದಿದ್ದದ್ದು ರಮೇಶನಿಗೆ ಒಳ್ಳೆದೆನಿಸಿತು. ಕಾಲೇಜಿನ ಕಾಂಪೌಂಡಿನ ಹತ್ತಿರಬಂದು, ಗೇಟನ್ನು ಸರಿಸಿ ಇನ್ನೇನು ಒಳಕ್ಕೆ ಹೋಗಬೇಕೆಂದಾಗ ಸೆಕ್ಯೂರಿಟಿಯವನೊಬ್ಬ  ಅವನ್ನತ್ತ ಓಡಿ ಬರುತ್ತಿದ್ದ. ರಮೇಶ ಏಕಾಏಕಿ ಒಳಗೆ ನುಗ್ಗುತ್ತಿರುವುದಕ್ಕೆ ಅವನು ಸಹಿಸದಾಗಿದ್ದ. ರಮೇಶ ತನ್ನ ನೋವಿನಲ್ಲಿಯೂ ತನ್ನ ಕಷ್ಟವನ್ನು ಅವನಲ್ಲಿ ಹೇಳಿಕೊಂಡರೂ ಆತ ಮಾತ್ರ ಕರಗಿದಂತೆ  ಕಾಣಿಸಲಿಲ್ಲ. ಮುಖಕ್ಕೆ ಹೊಡೆದಂತೆ  ಕೋಪದಿಂದ ಇದು ಸಾರ್ವಜನಿಕ ಶೌಚಾಲಯವಲ್ಲ, ಮುಂದೆ ಎಲ್ಲಿಯಾದರೂ ಹೋಗು ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಮುಗಿಸಿದ್ದ. ರಮೇಶನಿಗೆ ಏನು ಮಾಡುವುದೆಂದು ತೋಚದೆ  ದುಃಖವೇ ಒತ್ತರಿಸಿಬರುತ್ತಿತ್ತು.
ಆಟದಲ್ಲಿ ಮನುಷ್ಯತ್ವ, ಮಾನವೀಯತೆಯ ಬಗ್ಗೆ ಮಾತುಗಳನ್ನಾಡುತ್ತಿದ್ದ ರಮೇಶನಿಗೆ, ದೇಹದ ಮಾಲಿನ್ಯವನ್ನು ವಿಸರ್ಜಸಿಕೊಳ್ಳುವುದಕ್ಕೆ ನೆರವಾಗುವುದು ಕೂಡ ಅದರಲ್ಲಿ ಬರುವುದೋ ಇಲ್ಲವೋ ಎಂಬ ಸಂದೇಹ ಆ ಕ್ಷಣದಲ್ಲಿ ಒಡಮೂಡಿದ್ದು ಅವನ ಸಂಕಟಗಳನ್ನು ಪ್ರತಿಪಾದಿಸುವಂತಿತ್ತು. ಶೌಚಾಲಯಕ್ಕೆ ಸೆಕ್ಯೂರಿಟಿ ಬಿಡುವುದಿಲ್ಲ ಎಂದಿದ್ದು ಅವನ ಪರಮಾಧಿಕಾರದ ಚಲಾವಣೆಯೋ ಅಥವಾ ಕರ್ತವ್ಯಪ್ರಜ್ಞೆಯೋ ಎಂದು ಊಹಿಸುವುದಕ್ಕೆ ಅವನಿಂದ ಸಾಧ್ಯವಾಗಲಿಲ್ಲ. ಏನೆಂದುಕೊಂಡರೂ ತನಗೆ ಸ್ಥಳ ದೊರೆಯಲಿಲ್ಲ ಎಂಬ ಸತ್ಯವನ್ನು ಅರಿಯುವಾಗ ಹೊಟ್ಟೆಯ ನೋವು ಹೆಚ್ಚಿದಂತೆ ಅನ್ನಿಸುತ್ತಿತ್ತು. ಗೊತ್ತುಗುರಿಯಲ್ಲಿದೇ ಇದ್ದ ದಾರಿಯೊಂದರಲ್ಲಿ ಗುಪ್ತ ಸ್ಥಳವನ್ನು ಹುಡುಕುವವನಂತೆ ನಡೆಯುವುದಕ್ಕೆ ಪ್ರಾರಂಭಿಸಿದ್ದ. ರಸ್ತೆಯ ಎರಡು ಬದಿಗಳಲ್ಲಿಯೂ ಮನೆಗಳಿದ್ದದ್ದರಿಂದ ಮಾನ, ಒತ್ತಡ ಎಂಬ ದಂದ್ವದ ನಡುವೆ ಸಿಲುಕಿ, ಮಾನವೇ ಮುನ್ನೆಲೆಯಲ್ಲಿ ಕಾಣಿಸುವಾಗ ತನಗಿದು ಯೋಗ್ಯವಾದ ಸ್ಥಳವಲ್ಲವೆಂದು ತಿಳಿದು  ಮುಂದೆ ಮುಂದೆ ಸಾಗುತ್ತಿದ್ದ. ಒಂದಷ್ಟು ದೂರ ಸಾಗಿದಂತೆ ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಸಂದೇಹ ಮನಸ್ಸಿನಲ್ಲಿ ಮೂಡತೊಡಗಿದ್ದು ಉರಿಯುವ ಬಾಣಲೆಗೆ ತಪ್ಪುವನ್ನು ಹಾಕಿದಂತಾಗಿತ್ತು. “ಅಯ್ಯೋ ತನ್ನ ಕಷ್ಟ ತನಗಿರುವ ನನ್ನನ್ನು ಯಾಕೆ ಹಿಂಬಾಲಿಸುತ್ತಿದ್ದಾರೆ ಎಂದುಕೊಂಡ. ಆದರೆ ಬರುತ್ತಿರುವವರು ಯಾರು? ತನಗೆ ಗೊತ್ತಿರುವವರೇ? ಯಾರಾದರೂ ಅಭಿಮಾನಿಗಳೇ? ಗೊತ್ತಿರುವ ಮಂದಿಯಾಗಿದ್ದರೆ ತನ್ನನ್ನು ಕರೆಯಬಹುದಿತ್ತು. ಅರ್ಧ ಪರ್ಲಾಂಗದಿಂದ ಹೀಗೆ ನಡೆದುಕೊಂಡು ಬಂದರೆ ಏನೆಂದು ತಿಳಿದುಕೊಳ್ಳುವುದು ಎಂದು ಬೈದುಕೊಂಡ. ಅವರ ಎದುರಿನಲ್ಲಿ ಬಹಿರ್ದೆಸೆಗೆ ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಒಮ್ಮೆ ತಿರುಗಿ ಯಾರೆಂದು ನೋಡೋಣವೆನಿಸಿತು. ಆದರೆ ಯಾರಾದರೂ ಹೆಣ್ಣುಮಕ್ಕಳಾಗಿದ್ದರೆ  ಹಾಗೆ ನೋಡುವುದು ಔಚಿತ್ಯವಲ್ಲ ಎಂದುಕೊಂಡ. ಯಾರೇ ಆಗಲಿ ತನ್ನ ಪಾಡಿಗೆ ತಾನು ನಡೆಯುವುದಕ್ಕೆ ನಿಶ್ಚಯಿಸಿಬಿಟ್ಟ. ನಾಲ್ಕು ಹೆಜ್ಜೆ ಹಾಗೆ ನಡೆದ. ಅವರು ಕೂಡ ತನ್ನೊಂದಿಗೆ ಹೆಜ್ಜೆ ಹಾಕಿದಂತೆ ಅನಿಸತೊಡಗಿತು. ಈ ಬಾರಿ ರಮೇಶನಿಗೆ ಕುತೂಹಲ ತಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಹೇಗಾದರೂ ಅವರು ಮುಂದೆ ಸಾಗಲಿ. ತಾನು ಹಿಂದೆ ಉಳಿದು ಬಿಡುತ್ತೇನೆ ಎಂದುಕೊಂಡ. ಮೊಬೈಲ್‌ನಲ್ಲಿ ಮಾತಾಡುತ್ತಿರುವಂತೆ  ರಸ್ತೆಯ ಬದಿಯಲ್ಲಿ ನಿಂತುಬಿಟ್ಟರೆ ಅವರಿಗೂ ಅನುಮಾನ ಬರುವುದಿಲ್ಲ ಎಂಬ ತೀರ್ಮಾನಕ್ಕೂ ಬಂದ. ಪಕ್ಕನೇ ತನ್ನ ಪ್ಯಾಂಟಿನ ಜೋಬಿಗೆ ಕೈ ಹಾಕಿ, ಕಾಲ್ ಸ್ವೀಕರಿಸಿದಂತೆ ನಟಿಸಿ ಹಲೋ ಎಂದುಬಿಟ್ಟ. ಮಾತಾಡುತ್ತಿರುವಂತೆ ಗಾಬರಿಯಲ್ಲಿ ಇರುವವನಂತೆ ನಟಿಸಿ, ಗಕ್ಕನೇ ರಸ್ತೆಯ ಹೊರಕ್ಕೆ ಮುಖವನ್ನು ತಿರುಗಿಸಿ ನಿಂತುಬಿಟ್ಟ. ಹಿಂದೆ ಬರುತ್ತಿರುವ ಮುಂದೆ ಸಾಗಿಹೋಗಲಿ ಎನ್ನುವುದು ಅವನ ಉದ್ದೇಶವಾಗಿತ್ತು. ಮೂವತ್ತು ಸೆಕೆಂಡುಗಳು ಕಳೆದಿರಬಹುದು. ಯಾಕೋ ಹಿಂದಿದ್ದವರು ಮುಂದೆ ಹೋದಂತೆ ಅನ್ನಿಸಲಿಲ್ಲ. ಅರೇ ಇಷ್ಟು ಹೊತ್ತಿಗೆ ಅವರು ಮುಂದೆ ಹೋಗಬೇಕಿತ್ತು.  ಇನ್ನೂ ಯಾಕೆ ಹೋಗಿಲ್ಲ. ಎಂಬ ಪ್ರಶ್ನೆ ಎದುರಾಗಿತ್ತು. ನಾಚಿಕೆ ಬಿಟ್ಟಾದರೂ ಸರಿ, ತಾನೇ ಯಾರೆಂದು ನೋಡಬೇಕು ಎಂದು ತೀರ್ಮಾನಿಸಿದ. ನಿಧಾನವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಲೇ, ಸ್ವಲ್ಪ ಸ್ವಲ್ಪವಾಗಿ ತಲೆಯನ್ನು ತಿರುಗಿಸುತ್ತ, ಬಂದ ರಸ್ತೆಯ ಕಡೆಗೆ ಕತ್ತನ್ನು ತಿರುಗಿಸಿದ. ನೋಡಿದರೆ ರಸ್ತೆಯಲ್ಲಿ ಮನುಷ್ಯರ್ಯಾರು ಕಾಣಿಸಲಿಲ್ಲ. ಅರೇ ತಾನು ಅಂದುಕೊಂಡಿದ್ದು ಹೇಗೆ ಸುಳ್ಳಾಯಿತು ಎಂಬುದು ಅರ್ಥವಾಗಲಿಲ್ಲ.  ಹತ್ತು ಹೆಜ್ಜೆಯ ಹಿಂದೆ ಎಮ್ಮೆಯೊಂದು ನಿಂತು ರಮೇಶನನ್ನೇ ದಿಟ್ಟಿಸಿ ನೋಡುತ್ತಿತ್ತು. ಅರೇ ಇಷ್ಟು ಹೊತ್ತು ಕಾಡಿದ್ದು ಈ ಎಮ್ಮೆಯೆಂದುಕೊಳ್ಳುವಾಗ ಅದರ ಮೇಲೆ ಕೋಪ ಬಂದಿತ್ತು. ಆದರೆ ಹೊಟ್ಟೆ ಮತ್ತೆ ಗುಳುಗುಳು ಸುದ್ದು ಮಾಡಿ ಎಚ್ಚರಿಸಿದ್ದರಿಂದ ಇದರ ಸಹವಾಸವೇ ಅಲ್ಲವೆಂದು ತಿಳಿದು ಮುಂದಕ್ಕೆ ತೆರಳಿದ.
ಮುಂದೆ ಮುಂದೆ ಸಾಗಿದರೂ ಮನೆಗಳು ಮುಗಿಯುವ ಲಕ್ಷಣ ಕಾಣಿಸಿರಲಿಲ್ಲ. ರಮೇಶ ತಾನು ಈ ದಾರಿಯಲ್ಲಿ ಬರಲೇಬಾರದಿತ್ತು, ಬೇರೆಯೊಂದು ದಾರಿಯಲ್ಲಿ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ತನ್ನ ಕೆಲಸವನ್ನು ಪೂರೈಸಿಕೊಳ್ಳಬಹುದಿತ್ತೋ ಏನೋ ಎಂದುಕೊಳ್ಳುತ್ತ ಹಳಿದುಕೊಂಡ. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಯಾವಾಗಲೂ ಹೇಳಿಕೊಳ್ಳುತ್ತಿದ್ದ ಮಾತು ಸತ್ಯವೆನಿಸಿ ಯೋಚಿಸುವುದಕ್ಕೆ ತೊಡಗಿದ. ತನ್ನ ತಿರುಗಾಟದ ಜೀವನದಲ್ಲಿ ಯಾವತ್ತೂ  ಇವತ್ತಿನ ಸ್ಥಿತಿಯನ್ನು ಅನುಭವಿಸಿರುವುದು ನೆನಪಿಗೆ ಬರಲಿಲ್ಲ. ಅಭಿಮಾನಿ ಕೊಟ್ಟಿದ್ದ ಬನ್ ಹೀಗೊಂದು ಅವಾಂತರಕ್ಕೆ ಕಾರಣವಿರಬಹುದೇ ಎಂದುಕೊಳ್ಳುವಾಗ ಅವನ ಮೇಲೆ ತಪ್ಪನ್ನು ಹೊರಿಸುವುದಕ್ಕೆ ಇಷ್ಟವಾಗಲಿಲ್ಲ. ಆತನೂ ಕೂಡ ಬನ್ನನ್ನು ತಿಂದಿರುವಾಗ ಅವನಿಗೇನಾದರೂ  ಆಗಿರಬಹುದೇ ಎಂದುಕೊಂಡ. ಪಾಪ, ಆತ ಹೆಂಡತಿಯೊಂದಿಗೆ ಆಟಕ್ಕೆ ಬರುತ್ತೇನೆ ಹೇಳಿದ್ದ. ಈಗ ಬರುವುದಕ್ಕೆ ಸಾಧ್ಯವಾಗುವುದೋ ಇಲ್ಲವೋ ಎಂದು ಸಂಕಟಪಟ್ಟ. ಹೀಗೆ ಯೋಚಿಸುತ್ತ ಸಾಗುತ್ತಿರುವಾಗಲೇ ಖುಷಿಯ ವಿಚಾರವೊಂದು ಕಾಣಿಸಿತು. ಆ ರಸ್ತೆಯ ಭಾಗದಲ್ಲಿ ಮಾತ್ರವೇ ಮನೆಗಳಿದ್ದು ಮತ್ತೊಂದು ಕಡೆಯಲ್ಲಿ ಯಾವುದೇ ಮನೆಗಳಿರದೇ ಅಲ್ಲಿ ಸಣ್ಣ ಗಿಡಗಳು, ಹಳುಕಲು ಹುಲುಸಾಗಿ ಬೆಳೆದಿತ್ತು. ಅದರೊಳಗೆ ಹೋದರೆ ಯಾರಿಗೂ ಕಾಣಿಸುವುದು ಸುಳ್ಳಾಗಿತ್ತು. ರಮೇಶ ತನ್ನ ಕೆಲಸಕ್ಕೆ ಇದು ಸರಿಯಾದ ಸ್ಥಳವೆಂದು ಗ್ರಹಿಸಿದ. ತಕ್ಷಣವೇ ರಸ್ತೆಯಿಂದಿಳಿದು ಆ ಕಡೆಗೆ ಹೊರಡುವುದಕ್ಕೆ ಅಣಿಯಾದ. ಆದರೆ ಅವನ ಗ್ರಹಚಾರಕ್ಕೆ ಹೆಂಗಸೊಬ್ಬಳು ನಾಯಿಯನ್ನು ಹಿಡಿದು ಆ ಕಡೆಗೆ ಸಾಗಿಬಿಟ್ಟದ್ದಳು. ರಮೇಶನಿಗೆ ಏನು ಮಾಡುವುದೆಂದು ತಿಳಿಯದೇ ಗಕ್ಕನೇ ನಿಂತುಬಿಟ್ಟ.  ನಾಯಿಯನ್ನು ನೋಡುತ್ತಿರುವಂತೆ, ಅದು ತನ್ನ ಕೆಲಸಕ್ಕೆ ಮುಂದಾಯಿತು. ಅದನ್ನು ನೋಡುವಾಗ ರಮೇಶನಿಗೆ ಅಚ್ಚರಿ ಎನಿಸಿತು. ಅಂಜಿಕೆ, ಜನಪ್ರಿಯತೆ, ಮಾನ, ಮಾರ್ಯದೆ ಯಾವುದನ್ನೂ ಲೆಕ್ಕಿಸದೇ ಅದು ಎಷ್ಟು ಸಲೀಸಾಗಿ ತನ್ನ ಕೆಲಸವನ್ನು ಪೂರೈಸಿಕೊಳ್ಳುವಾಗ ಮಾನವನಿಗೇಕೆ ಈ ಬಂಧಗಳು ಎಂಬುವುದು ಅರ್ಥವಾಗಲಿಲ್ಲ. ಅದರ ಮುಖವನ್ನೊಮ್ಮೆ ನೋಡಿದ. ಅದು ತನ್ನ ಭಾರವನ್ನು ಇಳಿಸಿಕೊಂಡ ತೃಪ್ತಿಯನ್ನು ಅದರ ಮುಖದಲ್ಲಿ ಚೆಲ್ಲುತ್ತಿರುವಾಗ ರಮೇಶನಿಗೆ ಹೊಟ್ಟೆಕಿಚ್ಚಾಯಿತು. ದೇಹದ ವಿಸರ್ಜನ ಕ್ರಿಯೆಗಳು ಸಹಜವಾಗಿ ನಡೆಯುವಾಗ ಸಿಗುವ ಆನಂದ ಮತ್ತು ಅದಕ್ಕೆ ತಡೆಯನ್ನು ಒಡ್ಡುವಾಗ ಆಗುವ ಹಿಂಸೆ ಎಲ್ಲವನ್ನು ಆ ದೃಶ್ಯ ಹೇಳುವಂತಿತ್ತು.
ಸಂಜೆಯ ನಸುಗೆಂಪನ್ನು ಮರೆಸುತ್ತ, ಕತ್ತಲು ತನ್ನ ಕಬಂಧಬಾಹುವನ್ನು ಚಾಚಿ ನಿಂತಿತ್ತು. ಆ ರಸ್ತೆಯ ಸ್ಟ್ರೀಟ್ ಲೈಟ್ ಕೂಡ ಆನ್ ಆಗಿದ್ದವು.  ಒಂದಷ್ಟು ಮಕ್ಕಳು ರಸ್ತೆಯಲ್ಲಿ ಆಟವನ್ನು ಆಡುತ್ತಿದ್ದರೆ ಅವರ ತಾಯಂದಿರು ಪಕ್ಕದಲ್ಲಿ ನಿಂತಿದ್ದರು. ರಮೇಶ ತನ್ನ ಪಾಡಿಗೆ ತಲೆಯನ್ನು ತಗ್ಗಿಸಿ ಅವರನ್ನು ದಾಟಿ ಮುಂದೆ ಹೋದ. ಅವರುಗಳೆಲ್ಲ ಅವನನ್ನೇ ನೋಡುತ್ತಿದ್ದದ್ದು ರಮೇಶನಿಗೊಮ್ಮೆ ಗಾಬರಿಯಾಯಿತು. ತನ್ನ ಪರಿಚಯವಿರಬಹುದೇ ಅವರಿಗೆ ಎಂಬ ಸಂಶಯದಲ್ಲಿ ತನ್ನ ಎಂದಿನ ಹೆಜ್ಜೆಯ ವೇಗಕ್ಕಿಂತ ಜಾಸ್ತಿಯೇ ಹೆಜ್ಜೆಯನ್ನು ಹಾಕತೊಡಗುತ್ತಿರುವಾಗ ಅವನ ಮೊಬೈಲ್ ರಿಂಗ್ ಆಗುತ್ತಿತ್ತು. ನೋಡಿದರೆ ಹೆಂಡತಿಯ ಫೋನ್. ಇಷ್ಟು ಹೊತ್ತಿಗೆ ಇವಳ್ಯಾಕೆ ಫೋನ್ ಮಾಡುತ್ತಿದ್ದಾಳೆ. ಹೀಗೆಲ್ಲ ಫೋನ್ ಮಾಡದವಳು ಈಗೇಕೆ ಮಾಡಿದಳು ಎಂಬ ಪ್ರಶ್ನೆ ಎದುರಾಗಿತ್ತು. ಸ್ವೀಕರಿಸಲೋ ಬೇಡವೋ ಎಂಬ ಸಂದಿಗ್ಧತೆ ಉಂಟಾಯಿತು.  ಏನಾದರೂ ತುರ್ತು ಸಂಗತಿಗಳಾಗಿದ್ದರೇ ಎಂಬ ಭಯವೂ ಕಾಡಿತು. ಏನಾದರಾಗಲಿ ಎಂದುಕೊಳ್ಳುತ್ತ ಕರೆಯನ್ನು ಸ್ವೀಕರಿಸಿದ.
“ಹಲೋ, ನಾನ್”
“ಎಂತ”
“ಎಂತಾ ಚೌಕಿಲಿ ಇದ್ರ್ಯಾ?”
ರಮೇಶನಿಗೆ ತಾನು ಎಲ್ಲಿದ್ದೇನೆ ಎಂದು ಹೇಳುವುದೆಂದು ಗೊತ್ತಾಗದೆ
“ಹಾ. ಎಂತ ಹೇಳ್”
“ನಮ್ಮನಿ ಗಂಡಿಗೆ ನಿವ್ ಬೆಸ್ತ್ವಾರ ಬಪ್ಪತಿಗೆ, ಶ್ಯಾಲಿಗೆ  ಎಂತ ಕ್ಯಾಂಪೋಸ್ ಬೇಕಂಮ್ರು. ತಕಬತ್ರ್ಯಾ?”
“ಅಲ್ಲೆ ತಗಕಂಬುದು ಅಲ್ದಾ. ಕಪಾಟಲಿ ದುಡ್ ಬಚ್ಚಿನಲೆ”
“ಅದೆಲ್ಲ ಇಲ್ ಸಿಗುತ್ತೋ ಇಲ್ಯೋ. ನಂಗೆ ಗೊತ್ತಾಯ್ಕಿಲೆ”
ಅವಳ ಮಾತನ್ನು ಕೇಳುತ್ತಿದ್ದ ರಮೇಶನಿಗೆ ಕೋಪ ಉಕ್ಕೇರಿತು.

“ಅಲ್ಲಾ ಮಾರೈತಿ. ಅದನ್ನು ನಾನ್ ಇಲ್ಲಿಂದ ತಂದುಕೊಡ್ಕ. ಅಲ್ಲೇ ತಗೋ. ಅಲ್ಲೆ ಎಲ್ಲಾ ಸಿಗತ್” ಎಂದು ಸಿಟ್ಟಿನಲ್ಲಿ ಕರೆಯನ್ನು ತುಂಡರಿಸಿಬಿಟ್ಟ. ಕೊನೆಯಲ್ಲಿ ಅವಳ ಮಾತುಗಳು ಇನ್ನೂ ಮುಂದುವರೆಸಿರುವುದು ರಮೇಶನಿಗೆ ಕೇಳಿಸಿದ್ದರೂ ಹೊಟ್ಟೆಯ ನೋವಿನಲ್ಲಿ ಮತ್ತೆ ಕರೆ ಮಾಡಿ ಮಾತನಾಡುವ ಮನಸ್ಸಾಗಿರಲಿಲ್ಲ. ರಮೇಶನಿಗೆ ತನ್ನ ಇಂದಿನ ಅಸಹನೆಯ ಬಗ್ಗೆ ತನಗೆ ಖೇದವಾಯಿತು. ತನ್ನ ಸ್ಥಿತಿಯನ್ನು ಅವಳಿಗೆ ಹೇಳಿಬಿಡಬೇಕಿತ್ತು ಎಂದೆನಿಸಿತು. ಆದರೆ ಹೇಳಿದರೆ ಮೇಳವನ್ನು ಬಿಟ್ಟುಬಿಡಿ ಎನ್ನುವ ಅವಳ ಉತ್ತರ ನೆನಪಿಸಿಕೊಂಡಿದ್ದ ಕಾರಣದಿಂದಲೋ ಏನೋ ಅದು ಗಂಟಲಿನಲ್ಲಿಯೇ ಉಳಿದುಬಿಟ್ಟಿತ್ತು. ಮೇಳವನ್ನೆಲ್ಲ ಬಿಡುವುದಕ್ಕೆ ತನ್ನಿಂದ ಸಾಧ್ಯವಿಲ್ಲ. ಯಾರು ಏನೇ ಹೇಳಲಿ, ಆ ಸಾಂಗತ್ಯದಿಂದ ದೂರ ಉಳಿಯುವುದಕ್ಕೆ ತನ್ನಿಂದ ಅಸಾಧ್ಯವೆಂದು ಹಲವು ಬಾರಿ ಹೇಳಿಕೊಂಡ. ಆದರೂ ಇದನ್ನೆಲ್ಲ ಸಹಿಸುವುದಕ್ಕೆ ತನ್ನಿಂದ ಅಸಾಧ್ಯವೆಂದೂ ಅನಿಸಿತು. ರಮೇಶ ಅದೇ ದಾರಿಯಲ್ಲಿ ಮುಂದುವರೆಯುತ್ತಿದ್ದಂತೆ ಮನೆಗಳು ಕಡಿಮೆಯಾಗಿ ಸಣ್ಣ ಕಾಡಿನ ಪ್ರದೇಶ ಆರಂಭವಾಗಿತ್ತು. ದೂರದ ಸ್ಟ್ರೀಟ್ ಲೈಟಿನ ಸಣ್ಣ ಸಣ್ಣ ಬೆಳಕುಗಳು ಮರದ ಸಂಧಿಯಲ್ಲಿ ಹರಿಯುತ್ತಿದ್ದದ್ದು ಬಿಟ್ಟರೇ ಉಳಿದಿದೆಲ್ಲವೂ ಕತ್ತಲಾಗಿತ್ತು. ರಸ್ತೆಯ ಆ ಕಡೆ ಈ ಕಡೆ ನೋಡುತ್ತ, ಯಾರೂ ಬರುತ್ತಿಲ್ಲ ಎಂದು ಖಾತ್ರಿಪಡಿಸಿಕೊಂಡು  ಸಣ್ಣ ಪೊದೆಯ ಹತ್ತಿರದಲ್ಲಿ ಕುಳಿತು, ತನ್ನ ಕಾರ್ಯವನ್ನು ಮುಗಿಸುವಾಗ ಒಮ್ಮೇಲೆ ದೇಹ ಲಘುವಾದಂತೆ ಸಮಾಧಾನವಾಗಿತ್ತು.

ತನ್ನ ಸ್ಥಿತಿಯನ್ನು ತಾನೇ ಹಳಿದುಕೊಳ್ಳುತ್ತ ರಮೇಶ ಮತ್ತೆ ಡೇರೆಯ ಕಡೆಗೆ ಭರದಿಂದ ಹೆಜ್ಜೆ ಹಾಕತೊಡಗಿದ. ಏನನ್ನೋ ಯೋಚಿಸುತ್ತ ಬರುತ್ತಿದ್ದ ರಮೇಶನಿಗೆ ಇದ್ದಕ್ಕಿದ್ದ ಹಾಗೆ ಒಮ್ಮೆಗೆ ಭಯವಾಯಿತು. ಒಂದೊಮ್ಮೆ ವೇಷ ಮಾಡಿದಾಗ ಈ ಹೊಟ್ಟೆ ನೋವು ಬಂದಿದ್ದರೆ ಏನು ಮಾಡಬೇಕಿತ್ತು ಎಂದುಕೊಳ್ಳುವಾಗ ತಿಳಿಯದೇ ಒದ್ದಾಡಿಬಿಟ್ಟ. ಹಾಗೆ ಯಾವತ್ತು ಆಗದಿರಲಿ ಎಂದು ಮತ್ತೆ ಮತ್ತೆ ದೇವರನ್ನು ಕೇಳಿಕೊಳ್ಳುತ್ತ ಆಟ ನಡೆಯುವ ಮೈದಾನದ ಬಳಿ ಸಾಗಿಬರುತ್ತಿದ್ದ.  ಮೈಕ್‌ನಲ್ಲಿ ಅಂದಿನ ಆಟದ ಬಗ್ಗೆ ಮತ್ತೆ ಜೋರಾಗಿ ಪ್ರಚಾರವನ್ನು ಮಾಡುತ್ತಿದ್ದರು. “ನಿಮ್ಮೂರಿನಲ್ಲಿ ಇಂದು ರಾತ್ರಿ ಒಂಬತ್ತು ಮೂವತ್ತಕ್ಕೆ ಸರಿಯಾಗಿ ಹೆಣ್ಣನ್ನೇ ನಾಚಿಸುವ ಯಕ್ಷವಿಶಾರದೆ ರಮೇಶರವರ ಚಂದ್ರಮತಿ ಪಾತ್ರವನ್ನು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ”  ಎಂದು ಜೋರಾಗಿ ಪ್ರಚಾರವನ್ನು ಮಾಡುತ್ತಿದ್ದರು. ರಮೇಶನಿಗೆ ಅದೆಲ್ಲವೂ ಮತ್ತೆ ಮತ್ತೆ ಕೇಳಿದ ಧ್ವನಿಗಳಾಗಿದ್ದರೂ ಈ ಬಾರಿ ಅವು ಭಿನ್ನವಾಗಿರುವಂತೆ ಅನಿಸಿತು.  ಕಿವಿಯೊಳಗಿಂದ  ಅಂತರಂಗವನ್ನು ಪ್ರವೇಶಿಸುತ್ತಿರುವಂತೆ ಅವನ ಯೋಚನೆಗಳು ಬದಲಾಗುವಂತ್ತಿದ್ದವು. ತನ್ನನ್ನೇ ತಾನು ಕೇಳಿಕೊಂಡ.  ಹೆಣ್ಣಿನಂತೆ ಆಳಂಗವನ್ನು ಹೊಂದಿ, ವೇಷಭೂಷಣ, ನಡೆನುಡಿಯಿಂದ ಪಾತ್ರವನ್ನು ಮಾಡಿ, ರಸಿಕರ ಎದೆಯಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡುತ್ತೇನೆ. ಅದೆಲ್ಲವೂ  ಪಾತ್ರದಲ್ಲಿ,  ರಂಗದಲ್ಲಿ, ನಾಲ್ಕು ಕಂಬಗಳ ಮಧ್ಯದಲ್ಲಿ ಮಾತ್ರ. ಆದರೆ ವಾಸ್ತವದಲ್ಲಿ ನಿಜಜೀವನದಲ್ಲಿ ಹೆಣ್ಣಾಗಿ ಹುಟ್ಟಿ, ಇವತ್ತಿನ ಸ್ಥಿತಿಯೊಂದನ್ನು ಎದುರಿಸುವಂತಿದ್ದರೆ ಏನಾಗಬಹುದಿತ್ತು ಎಂದೆಲ್ಲ ಯೋಚಿಸುವಾಗ ತಣ್ಣಗೆ ಮೈ ನಡುಗಿಬಿಟ್ಟಿತು. ಯಾಕೋ ಹೆಣ್ಣೆಂಬ ಜೀವದೊಳಗಿನ ಆಟ ಬೇರೆಯದೇ ಎಂದೆನಿಸಿಬಿಟ್ಟಿತು.