ಪ್ರಾಚೀನ ಭಾರತದ ಪ್ರಸಿದ್ಧ ರಾಜರು ಮತ್ತು ರಾಜವಂಶಗಳನ್ನು ಪಟ್ಟಿ ಮಾಡಿ ಅರ್ಥೈಸಿಕೊಳ್ಳುವುದು ಒಂದು ಸವಾಲೇ ಸರಿ. ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಸವಾಲುಗಳನ್ನು ಎದುರಿಸುತ್ತ, ಪ್ರಜೆಗಳಿಗೆ ಸುವ್ಯವಸ್ಥೆಯನ್ನುಕಲ್ಪಿಸಿದ ಕತೆಗಳು ಸಾವಿರಾರು. ಈ ರಾಜವಂಶಗಳನ್ನು ಅರಿಯುವುದಕ್ಕಾಗಿ ಆ ನಿಟ್ಟಿನಲ್ಲಿ ನಾನು ಮಾಡಿಕೊಂಡ ಒಂದು ಪಟ್ಟಿಯನ್ನು ಇಲ್ಲಿ ಕೊಟ್ಟಿರುವೆ. ಅದರ ಪ್ರಕಾರ, ವಿವರಗಳನ್ನು ಕೊಡುತ್ತ ಹೋಗುತ್ತಿದ್ದೇನೆ. ವೈವಿಧ್ಯತೆಯ ಮಹಾಸಾಗರದತ್ತ ಹರಿದು ಬಂದ ನದಿಗಳೆಷ್ಟೋ, ನದಿಗಳು ನಡೆದು ಬಂದ ದಿಕ್ಕುಗಳೆಷ್ಟೋ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಬರಹ ಇಲ್ಲಿದೆ.
ಮೌರ್ಯರು, ಸಂಗವಂಶ, ತಮಿಳು ಅರಸರು, ಕಳಿಂಗರು, ಶಾತವಾಹನರು, ಕುಶಾನರು,( ಬೆಕ್ಟ್ರಿ ಯಾನರು), ಶಕರು, ವಕಟಕರು, ಗುಪ್ತರು, ಹೂಣರು, ಯಶೋಧರ್ಮ, ಪಲ್ಲವರು, ಕಲಭ್ರರು, ಪುಷ್ಯಭೂತಿ ವಂಶ, ಯಶೋವರ್ಮನ್, ಪಲ್ಲವರ ಪುನರುದಯ, ಪಾಂಡ್ಯರ ಪ್ರಾದುರ್ಭಾವ. ಇನ್ನು ಕನ್ನಡದ ಕಡುಗಲಿಗಳು, ಮೂರು ರಾಜಕುಟುಂಬಗಳು, ರಾಜ್ಯಭಾರಕ್ರಮದಲ್ಲಿ ವೈವಿಧ್ಯವನ್ನು ಗಮನಿಸುವುದಾರೆ, ಮೊದಲಿಗೆ ವಿವಿಧ ಧರ್ಮಗಳು, ಸಾಮಾಜಿಕ ಜೀವನ, ಸಂಸ್ಕೃತಿ, ಕಲೆ, ಸಾಹಿತ್ಯ ದ ಕ್ಷೇತ್ರಗಳನ್ನು ಗಮನಿಸೋಣ.
ಮೌರ್ಯರು
ಚಂದ್ರಗುಪ್ತ ಮೌರ್ಯ (ಕ್ರಿ.ಪೂ. 231-297): ಚಂದ್ರಗುಪ್ತನು ಮೌರ್ಯ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಮೊದಲ ಸಾಮ್ರಾಟ. ರಾಜ್ಯಭಾರವನ್ನು ಚೆನ್ನಾಗಿ ಮಾಡಿ ಪ್ರಜೆಗಳ ಪ್ರೀತಿಗೆ ಪಾತ್ರನಾದವನು. ಚಂದ್ರಗುಪ್ತನು ಜೈನನಾಗಿದ್ದನು, ಅಶೋಕನ ಪಿತಾಮಹ.
ಅಶೋಕ (ಕ್ರಿ.ಪೂ. 273-232): ಅಶೋಕನು ಸ್ವತಃ ಬೌದ್ಧಮತಾನುಯಾಯಿಯಾಗಿದ್ದರೂ, ಪರಮತ ಸಹಿಷ್ಣುವೂ ಆಗಿದ್ದನು. ಅಹಿಂಸೆಯನ್ನು ಒಂದು ವ್ರತದಂತೆ ಪಾಲಿಸುತ್ತಿದ್ದನು. ಅನೇಕ ಸ್ತಂಭಗಳನ್ನು ಕಟ್ಟಿಸಿದನಲ್ಲದೆ ಜನಹಿತ ಕಾರ್ಯಗಳನ್ನು ಕೈಗೊಂಡನು. ಅಶೋಕನ ಅನಂತರ ಅವನಷ್ಟು ಮಹಾತ್ಮರಾದ, ಅಥವಾ ಚಂದ್ರಗುಪ್ತನಷ್ಟು ಪ್ರಭಾವಶಾಲಿಗಳಾದ ರಾಜರು ಆ ವಂಶದಲ್ಲಿ ಹುಟ್ಟಿ ಬರಲಿಲ್ಲ. ಆದ್ದರಿಂದಲೂ ಅಶೋಕನ ಕಟ್ಟುನಿಟ್ಟಿನ ಅಹಿಂಸಾವಾದದ ಪ್ರಚಾರದ ಕಾರಣವಾಗಿಯೂ ಸೈನಿಕರು ದುರ್ಬಲರಾಗಿ ಮೌರ್ಯ ರಾಜ್ಯ ಕ್ರಿ.ಪೂ. 188ರಲ್ಲಿ ಅವಸಾನವಾಯಿತು.
ಸಂಗ ವಂಶ (ಸುಂಗರು / ಶುಂಗರು)
ಪುಷ್ಯಮಿತ್ರ ಸಂಗ: ಕಾಳಿದಾಸನ “ಮಾಲವಿಕಾಗ್ನಿಮಿತ್ರ” ನಾಟಕದಿಂದ ಈ ವಂಶದ ಕೆಲವು ವಿಷಯಗಳು ತಿಳಿಯುತ್ತವೆ.
ಮೌರ್ಯರ ಮಂತ್ರಿಯಾಗಿದ್ದ ಪುಷ್ಯಮಿತ್ರನು ವಿದರ್ಭವನ್ನು ಮೌರ್ಯ ಆಡಳಿತದಿಂದ ಕಿತ್ತು, ಅರಸ ಬೃಹದ್ರಥನನ್ನು ಕೊಂದು ಕ್ರಿ,ಪೂ. 1886ರಲ್ಲಿ ಪಟ್ಟಕ್ಕೆ ಬಂದನು, ಪಾಟಲೀಪುತ್ರವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಬ್ಯಾಕ್ಟ್ರಿಯನ್ ದೊರೆ ಡಿಮಿಟ್ರಿಯಸ್ ಉತ್ತರ ಭಾರತವನ್ನು ಆಕ್ರಮಿಸಿದಾಗ ಅದನ್ನು ಎದುರಿಸುವಲ್ಲಿ ಮುಖ್ಯ ಪಾತ್ರ ವಹಿಸಿದನು. ಇದೇ ಸಂದರ್ಭದಲ್ಲಿ ತನ್ನ ಸಾಮ್ರಾಜ್ಯವನ್ನೂ ವಾಯವ್ಯದ ಕಡೆ ವಿಸ್ತರಿಸಿಕೊಂಡನು. ಆದರೆ ಕಳಿಂಗದ ಅರಸ ಖರವೇಲನಿಂದ ಪರಾಜಯಗೊಂಡನು. ಪುಷ್ಯಮಿತ್ರನು ಬ್ರಾಹ್ಮಣ ಪಕ್ಷಪಾತಿಯಾಗಿದ್ದು ಅನೇಕ ಯಜ್ಞ ಯಾಗಾದಿಗಳನ್ನು ಕೈಗೊಂಡನು. ಇವನ ಮಗ ಅಗ್ನಿಮಿತ್ರ, ವಸುಮಿತ್ರ (ಅಗ್ನಿಮಿತ್ರನ ಮಗ) ಪ್ರಭಾವಶಾಲಿಗಳಾಗಿ ರಾಜ್ಯವಾಳಿದರು. ಇವರ ರಾಜ್ಯವು ದಕ್ಷಿಣದಲ್ಲಿ ನರ್ಮದಾ ನದಿ ತನಕ ವಿಸ್ತರಿಸಿತ್ತು, ಈ ವಂಶದ ಕೊನೆಯ ರಾಜನನ್ನು ಅವನ ಮಂತ್ರಿಯಾದ ಸುದೇವನೆಂಬ ಕಣ್ವ ವಂಶದ ಬ್ರಾಹ್ಮಣನೊಬ್ಬನು ಕೊಂದು ಪಟ್ಟಕ್ಕೆ ಬಂದನು.
ತಮಿಳು ಅರಸರು
ಕ್ರಿ.ಶ. 1ನೇ ಶತಮಾನದಿಂದ ಕ್ರಿ.ಶ. 3ನೇ ಶತಮಾನದ ಕಾಲವನ್ನು ಸಂಗಂ ಕಾಲವೆನ್ನುವರು. ಈ ಯುಗದಲ್ಲಿ ಚೋಳರು, ಚೇರರು, ಮತ್ತು ಪಾಂಡ್ಯರು ಎಂಬ ಮೂರು ಅರಸು ಮನೆತನದವರು ಪ್ರಸಿದ್ಧರು.
ಚೋಳರು – ಕರಿಕಾಲ ಚೋಳ: ಕಾವೇರಿ ನದಿಯ ಮುಖಜ ಭೂಮಿ ಮತ್ತು ಸುತ್ತು ಮುತ್ತಲ ಪ್ರದೇಶಗಳೇ ಈತನ ರಾಜ್ಯ. ಉರೈಯಾರ್ ಎಂಬುದು ರಾಜಧಾನಿಯಾಗಿತ್ತು. ಪುಹಾರ್ ಉಪರಾಜಧಾನಿಯಾಗಿತ್ತು. ಪಾಂಡ್ಯ ಮತ್ತು ಚೋಳರನ್ನು ಸೋಲಿಸಿದನು. ಧರ್ಮದಲ್ಲಿ ಹಿಂದೂ ಆಗಿದ್ದನು. ಉರೈಯಾರ್ ಮತ್ತು ಪುಹಾರ್ ರಾಜಕುಟುಂಬಗಳೊಳಗೆ ಪಟ್ಟಕ್ಕಾಗಿ ಜಗಳವಾದ್ದರಿಂದ ಚೋಳ ಸಾಮ್ರಾಜ್ಯ ನಶಿಸಿಹೋಯಿತು.
ಚೇರರು – ಸೆಂಗುಟ್ಟುವನ್: ಇವನು ‘ಶಿಲಪ್ಪದಿಕಾರಂ’ನ ನಾಯಕನು. ರಾಜಧಾನಿಯು ವಾಂಜಿ ಅರ್ಥಾತ್ ತಿರುವಂಜಿಕಾಲಂ. ಸಮುದ್ರ ಕಳ್ಳರನ್ನು ಅಣಗಿಸಿ ಕ್ರೇಂಗನೂರ್ (ಎಂದರೆ ಮುಸಿರಿ) ಬಂದರವನ್ನು ರಕ್ಷಿಸಿದನು.
ತೊಂಡಿ ರಾಜಕುಟುಂಬಕ್ಕೆ (ವಾಂಜಿಯು ಇನ್ನೊಂದು ಕುಟುಂಬ) ಸೇರಿದ ಮಂತರಂ ಚೆರಾಲನು ಮತ್ತಿನ ಅಧಿಕಾರಿಯಾಗಿದ್ದನು. ತಲೈಲಂಗಣನಟ್ಟು ಪಾಂಡ್ಯನಿಂದ ಸೋಲಿಸಲ್ಪಟ್ಟನು.
ಪಾಂಡ್ಯರು – ನೆಡುಂಜೆಲಿಯನ್: ಚೇರ, ಚೋಳರನ್ನು ಸೋಲಿಸಿದನು. ತಲೈಲಂಗಣಂ ಎಂಬಲ್ಲಿನ ಐದು ಕುಪ್ರಸಿದ್ಧ ದಂಗೆಕೋರರನ್ನು ಅಣಗಿಸಿ ತಲೈಲಂಗಣನಟ್ಟು ಎಂಬ ಬಿರುದನ್ನು ಪಡೆದನು. ಬ್ರಾಹ್ಮಣಧರ್ಮವನ್ನು ಪ್ರೋತ್ಸಾಹಿಸಿದನು. ಮಧುರೆಯು ಈತನ ರಾಜಧಾನಿಯಾಗಿತ್ತು. ಕೋರ್ಕೆಯು ಬಂದರು ಆಗಿತ್ತು.
ಕಳಿಂಗರು
ಖರವೇಲ (ಕ್ರಿ.ಪೂ. 176-163): ಮಹಾವೇಗವಾಹನನ ಮಗನಾದ ಖರವೇಲನು ನಾಣ್ಯ ಪದ್ಧತಿ, ನ್ಯಾಯಶಾಸ್ತ್ರ, ಧರ್ಮಸಾಸ್ತ್ರಗಳಲ್ಲಿ ಪ್ರವೀಣನು. ಪಟ್ಟಕ್ಕೆ ಬಂದೊಡನೆಯೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದನು. ಮೂಷಿಕರನ್ನೂ, ರಾಷ್ಟ್ರೀಕರನ್ನೂ, ಭೋಜಕರನ್ನೂ ಸೋಲಿಸಿದನು. ತಮಿಳರನ್ನೂ, ಪುಷ್ಯಮಿತ್ರ ಸಂಗನನ್ನೂ ಪರಾಭವಗೊಳಿಸಿದನು. ಜೈನ ಮತಾವಲಂಬಿಯಾದ ಖರವೇಲನು ಜೈನ ಪರಿಷತ್ತುಗಳನ್ನು ನಡೆಸುತ್ತಿದ್ದನಲ್ಲದೆ, ಜೈನರಿಗೂ ಜೈನ ದೇವಸ್ಥಾನಗಳಿಗೂ ಸಹಾಯ ಮಾಡುತ್ತಿದ್ದ. ಪರಮತ ದ್ವೇಷಿಯಾಗಿರದೆ ಪ್ರಜಾರಂಜಕನಾಗಿದ್ದನು.
ಶಾತವಾಹನರು
ಭಾರತದ ಅತಿ ಪ್ರಾಚೀನ ರಾಜವಂಶಗಳಿಗೆ ಸೇರಿದ ಇವರನ್ನು ಆಂಧ್ರರೆಂದೂ ಕರೆಯುತ್ತಾರೆ, ಪೌರಾಣಿಕ ಉಲ್ಲೇಖಗಳ ಪ್ರಕಾರ. ಪುರಾತನದ ಪ್ರತಿಷ್ಠಾನ (ಇಂದಿನ ಪೈಥಾನ್, ಔರಂಗಾಬಾದ್) ಶಾತವಾಹನರ ರಾಜಧಾನಿಯಾಗಿತ್ತು. ಕ್ರಿ.ಶ. ಆಚೀಚಿನ ಒಟ್ಟು ಸುಮಾರು ಆರು ಶತಮಾನಗಳ ಕಾಲ ಇವರು ಆಂಧ್ರ, ತೆಲಂಗಾಣವನ್ನು ಮತ್ತು ಕರ್ನಾಟಕ, ಮಹಾರಾಷ್ಟ್ರ ಇತ್ಯಾದಿ ಸುತ್ತ ಮುತ್ತಲ ಪ್ರದೇಶಗಳನ್ನು ಆಳಿದರು.
ಶಿಮುಖನು ಕ್ರಿ.ಪೂ. 226ಕ್ಕೆ ಪಟ್ಟಕ್ಕೆ ಬಂದು ಸತತವಾಗಿ 22 ವರ್ಷ ಆಳ್ವಿಕೆ ನಡೆಸಿದನು. ಬಳಿಕ ಕೃಷ್ಣ ಮತ್ತು ಶತಕರ್ಣಿ ಗೋದಾವರಿ ಕಣಿವೆಯಿಂದ ನಾಸಿಕ ತನಕದ ಪ್ರದೇಶವನ್ನು ಹಾಗೂ ಕೊಂಕಣ ಭಾಗಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು.
ಗೌತಮಿಪುತ್ರ ಶತಕರ್ಣಿ (ಕ್ರಿ.ಶ. 106-130): ಈ ಅರಸನು ಆಂಧ್ರ ಸಾಮ್ರಾಜ್ಯವನ್ನು ಬಹಳವಾಗಿ ವಿಸ್ತರಿಸಿದನು. ಕೊಂಕಣ, ಮಹಾರಾಷ್ಟ್ರ, ಬೀರಾರ್, ಗುಜರಾಥ್, ಕಾಥಿಯವಾಡ್, ಮಾಳವವೇ ಮುಂತಾದ ಪ್ರದೇಶಗಳು ಇವನ ಸಾಮ್ರಾಜ್ಯಕ್ಕೆ ಸೇರ್ಪಡೆಯಾದುವು. ಆದರೆ ಪುಲುಮಾಯಿಯ ಒಂದನೇ ರುದ್ರದಾಮನ್‌ನಿಂದ ಪರಾಜಯಗೊಂಡು, ಮಾಳವ, ಕಾಥಿಯವಾಡ, ಮಾಳವ, ಉತ್ತರ ಕೊಂಕಣಗಳನ್ನು ಕಳೆದುಕೊಂಡನು.
“ಗಾಥಾ ಸಪ್ತಶತಿ”ಯನ್ನು ಬರೆದ ಹಲನು ಶಾತವಾಹನ ವಂಶದ ಹದಿನೇಳನೆ ಅರಸ. ಇದೊಂದು ಪ್ರಾಕೃತದಲ್ಲಿ ರಚಿಸಿದ ಶೃಂಗಾರ ಕಾವ್ಯ.
ಕುಶಾನರು, ಬ್ಯಾಕ್ಟ್ರಿಯಾನರು
ಮಿನಾಂದರ (ಕ್ರಿ.ಪೂ. 180-130): ಅಶೋಕನ ಅನಂತರ ಮೌರ್ಯ ಸಾಮ್ರಾಜ್ಯದ ಗಡಿನಾಡುಗಳಲ್ಲಿ ಸೇನಾಬಲವು ಕಡಿಮೆಯಾದುದರಿಂದ ಇಂಡೋ-ಗ್ರೀಕ್ ಮಿನಾಂದರನಿಗೆ ಗಾಂಧಾರದಿಂದ ಮಥುರೆಯ ತನಕ ಮತ್ತು ಸಿಂಧೂ ನದೀ ಕಣಿವೆಯಿಂದ ಬ್ರೋಚ್ ತನಕದ ರಾಜ್ಯವನ್ನಾಳಲು ಸಾಧ್ಯವಾಯಿತು. ಇವನು ಪುಷ್ಯಮಿತ್ರ ಸಂಗನಿಂದ ಎದುರಿಸಲ್ಪಟ್ಟನು. ಮಿನಾಂದರನು ಬೌದ್ಧಮತದ ಅನುಯಾಯಿಯಾಗಿದ್ದು ಬೌದ್ಧ ಯತಿ ನಾಗಸೇನನೊಂದಿಗೆ ಆ ಧರ್ಮದ ವಿಷಯವಾಗಿ ನಡೆಸಿದ ಚರ್ಚೆಯು “ಮಿಲಿಂದ ಪನ್ನ” (‘ಮಿಲಿಂದ ಪ್ರಶ್ನೆ’) ಎಂಬ ಪಾಲಿ ಭಾಷೆಯ ಗ್ರಂಥದಲ್ಲಿ ಸಂಗ್ರಹಿಸಲ್ಪಟ್ಟಿದೆ. ಕ್ರಿ.ಪೂ. 60ರಲ್ಲಿ ದಂಡೆತ್ತಿ ಬಂದ ಶಕರು ಕುಶಾನ ಮಿನಾಂದರನ ಬಲವನ್ನು ನಾಶಪಡಿಸಿದರು.
ಕುಶಾನ ವಂಶದ ಒಂದನೇ ಕಡ್‌ಫಿಸಸ್ ಸಿಂಧೂ ನದಿಯನ್ನು ದಾಟಿ ತನ್ನ ದೇಶದ ಗಡಿಯನ್ನು ವಿಸ್ತರಿಸಿದನು. ಅವನ ಮಗನಾದ ಎರಡನೇ ಕಡ್‌ಫಿಸಸ್ ರಾಜ್ಯವನ್ನು ಮಥುರಾದ ತನಕ ವಿಸ್ತರಿಸಿದನು.
ಉರೈಯಾರ್ ಎಂಬುದು ರಾಜಧಾನಿಯಾಗಿತ್ತು. ಪುಹಾರ್ ಉಪರಾಜಧಾನಿಯಾಗಿತ್ತು. ಪಾಂಡ್ಯ ಮತ್ತು ಚೋಳರನ್ನು ಸೋಲಿಸಿದನು. ಧರ್ಮದಲ್ಲಿ ಹಿಂದೂ ಆಗಿದ್ದನು. ಉರೈಯಾರ್ ಮತ್ತು ಪುಹಾರ್ ರಾಜಕುಟುಂಬಗಳೊಳಗೆ ಪಟ್ಟಕ್ಕಾಗಿ ಜಗಳವಾದ್ದರಿಂದ ಚೋಳ ಸಾಮ್ರಾಜ್ಯ ನಶಿಸಿಹೋಯಿತು.
ಕಣಿಷ್ಕ (ಕ್ರಿ.ಶ. 78-120): ಯುದ್ಧಾಕಾಂಕ್ಷಿಯೂ ಅತಿ ಪ್ರಬಲನೂ ಆಗಿದ್ದ ಕಣಿಷ್ಕನು ಪಾಟಲೀಪುತ್ರ, ಬೋಧ್‌ಗಯಾ, ಮಾಳವ, ಮತ್ತು ಸಿಂಧೂ ಕಣಿವೆಯವರೆಗೆ ತನ್ನ ರಾಜ್ಯವನ್ನು ವಿಸ್ತಾರಗೊಳಿಸಿದನು. ಪುರುಷಪುರ ಅರ್ಥಾತ್ ಪೇಶಾವರವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡು ಅಲ್ಲಿಂದ ರಾಜ್ಯಭಾರವನ್ನು ನಡೆಸಿದನು, ಇವನು ಪಶ್ಚಿಮ ಏಶಿಯಾದಲ್ಲಿಯೂ ರಾಜ್ಯವನ್ನು ವಿಸ್ತರಿಸಿದನಲ್ಲದೆ, ಚೀನಾದ ಸಾಮ್ರಾಟನನ್ನು ತನ್ನ ಎರಡನೆಯ ಪ್ರಯತ್ನದಲ್ಲಿ ಸೋಲಿಸಿ ಕಾಶ್ಗರ್, ಯಾರ್ಖಂಡ್, ಖೋಟಾನ್‌ಗಳನ್ನು ಅವನಿಂದ ಕಿತ್ತುಕೊಂಡನು.
ಬೌದ್ಧ ಧರ್ಮದಲ್ಲಿ ಕಣಿಷ್ಕನ ಕೈವಾಡ. ಕಣಿಷ್ಕನು ಮೊದಲು ಗ್ರೀಕ್ ಮತ್ತು ಹಿಂದೂ ದೇವತೆಗಳನ್ನು ನಂಬುತ್ತಿದ್ದರೂ, ಕ್ರಮೇಣ ಬೌದ್ಧಮತವನ್ನು ಸ್ವೀಕರಿಸಿ ಅದರ ಪ್ರಚಾರದಲ್ಲಿ ಬಹಳಷ್ಟು ಆಸಕ್ತನಾದನು. ಬೌದ್ಧ ಧರ್ಮದ ಪ್ರಚಾರದಲ್ಲಿ ಅಶೋಕನನ್ನು ಮೀರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ದಿಸೆಯಲ್ಲಿ ತುಂಬಾ ಕೆಲಸಗಳನ್ನು ಮಾಡಿದನು. ಬುದ್ಧನು ಉಪದೇಶಿಸಿದುದಕ್ಕಿಂತ ಹಲವು ವಿಷಯಗಳಲ್ಲಿ ಭಿನ್ನವಾದ ಮಹಾಯಾನ ಪಂಥವನ್ನು ಕಣಿಷ್ಕನು ಬೆಂಬಲಿಸಿದನು. ಪಾರ್ಶ್ವ, ವಸುಮಿತ್ರ, ಅಶ್ವಘೋಷ, ಮತ್ತು ನಾಗಾರ್ಜುನರೇ ಮುಂತಾದವರ ಸಹಾಯದಿಂದ ಕಾಶ್ಮೀರದ ಕುಂಡರವನ ಎಂಬಲ್ಲಿ ಒಂದು ಬೌದ್ಧ ಪರಿಷತ್ತನ್ನು ಕರೆಸಿ, ಅಲ್ಲಿ ತೆಗೆದ ತತ್ವಗಳನ್ನು ತಾಮ್ರದ ಹಾಳೆಗಳಲ್ಲಿ ಬರೆಸಿ ಮಣ್ಣಿನಲ್ಲಿ ಹೂತು ಹಾಕಿಸಿದನು. ಆದರೆ ಕಣಿಷ್ಕನು ಪರಮತ ಸಹಿಷ್ಣುವೂ ಆಗಿದ್ದನು.
ಕಣಿಷ್ಕನು ಗಾಂಧಾರ ಶಿಲ್ಪಕಲೆಯನ್ನು ಪ್ರೋತ್ಸಾಹಿಸಿದನು, ಅವನ ರಾಜ್ಯವು ಸಂಪತ್ಸಮೃದ್ಧವಾಗಿದ್ದಿತು. ನೆಲದಾರಿಯಾಗಿ ಚೈನಾದಿಂದ ರೋಮಿನವರೆಗೆ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದುವು.
ಕ್ರಿ,ಶ. 120ರಲ್ಲಿ ಪಟ್ಟವೇರಿದ ಹುವಿಷ್ಕನು ತನಗೆ ಬಂದ ಆ ಬೃಹತ್ ಸಾಮ್ರಾಜ್ಯವನ್ನು ಸಾಧ್ಯವಿದ್ದಷ್ಟೂ ಕಾಪಾಡಿಕೊಂಡನು, ಆದರೆ ಒಂದನೇ ರುದ್ರದಾಮನ್ (ಶಕ ಅರಸ) ಇವನಿಂದ ಮಾಳವ ಮತ್ತು ಸಿಂಧನ್ನು ಗೆದ್ದುಕೊಂಡನು.
ಹುವಿಷ್ಕನು ಬೌದ್ಧ ಧರ್ಮೀಯನಾಗಿದ್ದು, ಮಥುರೆಯಲ್ಲಿ ಒಂದು ಸ್ತೂಪವನ್ನೂ, ಕಾಶ್ಮೀರದಲ್ಲಿ ಹುವಿಷ್ಕಪುರ ಎಂಬ ಒಂದು ಪಟ್ಟಣವನ್ನೂ ಕಟ್ಟಿಸಿದನು. ವಾಸುದೇವನ ಕಾಲದಲ್ಲಿ ರಾಜ್ಯವು ಕ್ಷೀಣಿಸಿತು, ಇವನು ಶೈವನಾಗಿದ್ದು ಹಲವು ಶಿವ ದೇವಾಲಯಗಳನ್ನು ಕಟ್ಟಿಸಿದನು.
ಶಕರು
ಸ್ಕಿತಿಯನರೆಂದೂ ಶಕರೆಂದೂ ಕರೆಯಲ್ಪಡುವ ಈ ಮಧ್ಯ ಏಶಿಯದ ಅಲೆಮಾರಿ ಜನಾಂಗದವರು ಉತ್ತರ ಮತ್ತು ಪಶ್ಚಿಮ ಭಾರತಕ್ಕೆ ಕ್ರಿ.ಪೂ. ಎರಡನೇ ಶತಮಾನದಲ್ಲಿ ಪ್ರವೇಶ ಮಾಡಿ ಎರಡೂ ಕಡೆ ರಾಜ್ಯ ಸ್ಥಾಪನೆ ಮಾಡಿ ಪ್ರಬಲರಾದರು. ಕ್ರಿ.ಪೂ. ಎರಡನೇ ಶತಮಾನದ ಮಧ್ಯದಿಂದ ಕ್ರಿ.ಶ. ನಾಲ್ಕನೇ ಶತಮಾನದ ತನಕ ಇವರ ಅಧಿಕಾರವಿತ್ತು.
ನಾಸಿಕದ ಶಕರು
ಕ್ರಿ.ಪೂ. ಒಂದನೇ ಶತಮಾನದಲ್ಲಿ ನಾಸಿಕದ ಭೂಮಕನು ಪ್ರಬಲನಾದನು. ಇವನ ಮಗ ನಹಪಾನನು ಪೂನಾದಿಂದ ಅಜ್ಮೀರದ ತನಕ ರಾಜ್ಯ ವಿಸ್ತರಿಸಿದನು. ಬ್ರಾಹ್ಮಣರಿಗೆ ಮತ್ತು ಸಾಧು ಸಂತರಿಗೆ ದಾನಧರ್ಮಗಳನ್ನು ಮಾಡುತ್ತಿದ್ದ ಹಿಂದೂ ಅರಸ ಈತನು.
ಉಜ್ಜಯಿನಿಯ ಶಕರು
ಚಸ್ಥಾನ ಎಂಬವನಿಂದ ಉಜ್ಜಯಿನಿಯಲ್ಲಿ ಸ್ಥಾಪಿಸಲ್ಪಟ್ಟ ಸಿಂಹಾಸನವನ್ನು ಏರಿದ ಅವನ ಮೊಮ್ಮಗ ಒಂದನೇ ರುದ್ರದಾಮನ್ ಪ್ರಸಿದ್ಧನು. ಅವನ ವಿಷಯವು ಗಿರ್ನಾರ್ (ಜುನಾಗಢ್) ಶಿಲಾ ಶಾಸನದಲ್ಲಿ ಸಿಗುತ್ತದೆ. ಅವನು ನ್ಯಾಯಶಾಸ್ತ್ರ. ರಾಜ್ಯನೀತಿ, ಸಂಗೀತ, ಸಾಹಿತ್ಯ. ದಂಡನೀತಿಗಳಲ್ಲಿ ಪಾರಂಗತನಿದ್ದನಲ್ಲದೆ, ಸ್ವತಃ ಕವಿಯಾಗಿದ್ದನು. ಪುಲುಮಾಯಿಯನ್ನು ಪರಾಭವಗೊಳಿಸಿದನು. ಸುದರ್ಶನ ಸರೋವರಕ್ಕೆ ಅಣೆಕಟ್ಟನ್ನು ಕಟ್ಟಿಸಿದನು. ಕ್ರಿ,ಶ. 395ರಲ್ಲಿ ಅವನ ರಾಜ್ಯವು ಗುಪ್ತರ ವಶವಾಯಿತು.
ವಕಟಕರು
ಒಂದನೇ ಪ್ರವರಸೇನ (300-330). ವಿಂಧ್ಯಶಕ್ತಿಯಿಂದ ಸ್ಥಾಪಿತವಾದ ಬೀರಾರಿನ ರಾಜ್ಯವು ಅವನ ಮಗ ಪ್ರವರಸೇನನಿಂದ ವಿಸ್ತರಿಸಲ್ಪಟ್ಟಿತು. ಅವನು ನಾಲ್ಕು ಅಶ್ವಮೇಧ ಮತ್ತು ರಾಜಪೇಯವೆಂಬ ಯಾಗಗಳನ್ನು ಮಾಡಿ ಸಾಮ್ರಾಟ್ ಪದವಿಯನ್ನು ಗಳಿಸಿದನು.
ಮುಂದಿನ ಒಂದನೇ ರುದ್ರಸೇನನ (330-340) ಕಾಲದಲ್ಲಿ ರಾಜ್ಯವು ಕಳೆಗುಂದಿದರೂ, ಅನಂತರ ಪೃಥ್ವಿಸೇನನ ಕಾಲದಲ್ಲಿ ಮತ್ತೆ ಅಭಿವೃದ್ಧಿಗೊಂಡಿತು. ಹರಿಸೇನನು (460-477) ಈ ವಂಶದ ಕೊನೆಯ ಅರಸನು. ಮಾಳವ, ದಕ್ಷಿಣ ಕೋಸಲ, ತ್ರಿಕೂಟ, ಲಾಟ, ಮತ್ತು ಆಂಧ್ರ ದೇಶಗಳನ್ನು ಗೆದ್ದುಕೊಂಡು ವಿಶಾಲವಾದ ಸಾಮ್ರಾಜ್ಯಕ್ಕೆ ಒಡೆಯನಾದನು. 17 ವರ್ಷಗಳ ತನ್ನ ಆಡಳಿತ ಕಾಲದಲ್ಲಿ ಅವನು ವಾಸ್ತುಶಿಲ್ಪ ಮತ್ತು ಕಲೆಯಲ್ಲಿ ಮಾಡಿದ ಸಾಧನೆಗಳು ಅಗಾಧವಾದುವು. ತಾನು ಸ್ವತಃ ಹಿಂದುವಾಗಿದ್ದರೂ, ಅಜಂತದ ಹಲವು ಬೌದ್ಧ ಗುಹಾಚಿತ್ರಗಳಿಗೆ ಹರಿಸೇನನೇ ಕಾರಣ. ಅವನ ಮಗನಿಂದ ಇದು ಯಾವುದೂ ಸಾಧ್ಯವಾಗದೆ ರಾಜ್ಯ ಛಿನ್ನವಾಯಿತು.
ಗುಪ್ತರು
ಪ್ರಸಿದ್ಧರಾದ ಗುಪ್ತರು ಭಾರತವನ್ನು ಕ್ರಿ.ಶ, 300-600ರ ಮುನ್ನೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಆಳಿದರು. ಗುಪ್ತರ ಆಳಿಕೆಯನ್ನು ಭಾರತದ ಸುವರ್ಣ ಯುಗವೆಂದು ಕರೆಯಲಾಗುತ್ತದೆ.
ಒಂದನೇ ಚಂದ್ರಗುಪ್ತ (320-330): ವಂಶ ಸಂಸ್ಥಾಪಕ. ಲಚ್ಛಾವಿ ಜನರ ರಾಜಕುಮಾರಿ ‘ಕುಮಾರಿ ದೇವಿಯನ್ನು ಮದುವೆಯಾಗಿ, ಲಚ್ಛಾವಿ ಜನರ ಸಹಾಯದಿಂದ ಮಗಧ, ಅಲಹಾಬಾದು, ಪಾಟಲೀಪುತ್ರಗಳನ್ನು ಸೇರಿಸಿ ರಾಜ್ಯ ವಿಸ್ತರಣೆ ಮಾಡಿದನು, ಕ್ರಿ.ಶ. 320ರಲ್ಲಿ ಹೀಗೆ ಗುಪ್ತ ರಾಜವಂಶ ಆರಂಭವಾಯಿತು.
ಸಮುದ್ರಗುಪ್ತ (330-380): ಗುಪ್ತ ಅರಸರಲ್ಲಿ ಸಮುದ್ರಗುಪ್ತನು ಪ್ರಬಲನು. ಮಧ್ಯ ಭಾರತ, ಪೂರ್ವ ಭಾರತ, ಗಂಗಾನದೀಪಥದ ರಾಜ್ಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ ಸಮುದ್ರಗುಪ್ತನು ಕೃಷ್ಣಾ, ನೆಲ್ಲೂರು, ಗೋದಾವರೀ ಜಿಲ್ಲೆಗಳ ಮಾರ್ಗವಾಗಿ ಕಾಂಚೀಪುರದ ತನಕ ದಕ್ಷಿಣಾಪಥದ ದಿಗ್ವಿಜಯವನ್ನು ಕೈಗೊಂಡು, ಅಪಾರ ಕಪ್ಪ ಕಾಣಿಕೆಗಳೊಂದಿಗೆ, ಸತಾರಾ, ಮಂಡಲಗಳ ದಾರಿಯಾಗಿ ಪಾಟಲೀಪುತ್ರಕ್ಕೆ ಮರಳಿದನು. ದಕ್ಷಿಣದಲ್ಲಿ ಗೆದ್ದ ರಾಜ್ಯಗಳನ್ನೆಲ್ಲ ಅವನು ಆಯಾ ರಾಜರುಗಳಿಗಿತ್ತನು. ಇವನ ವಿಚಾರವು ಅಲಹಾಬಾದಿನ ಅಶೋಕಸ್ತಂಭದಲ್ಲಿರುವ ಮಹಾದಂಡನಾಯಕ ಹರಿಸೇನರಚಿತ ಹರಿಸೇನ ಪ್ರಶಸ್ತಿಯಿಂದ ತಿಳಿದುಬರುತ್ತದೆ. ಸಮುದ್ರಗುಪ್ತನು ವೈಷ್ಣವನಾಗಿದ್ದರೂ ಪರಮತಸಹಿಷ್ಣುವೂ ಆಗಿದ್ದನು. ಪರಾಕ್ರಮಿಯೂ, ನ್ಯಾಯಶೀಲನೂ, ಧಾರ್ಮಿಕನೂ. ತೀಕ್ಷ್ಣಮತಿಯೂ, ಗಮಕಿಯೂ ಆಗಿದ್ದನು.
ಎರಡನೇ ಚಂದ್ರಗುಪ್ತನು (380-415): ಪಶ್ಚಿಮದ ಕ್ಷಾತ್ರಪರನ್ನು ಗೆದ್ದು ಹಿಮಾಲಯದಿಂದ ನರ್ಮದಾ ಮಹಾನದಿಗಳ ತನಕವೂ, ಹುಗ್ಲಿ ನದಿಯಿಂದ ಯಮುನಾ-ಚೆಂಬಲ್ ನದಿಗಳ ತನಕವೂ ತನ್ನ ರಾಜ್ಯವನ್ನು ವಿಸ್ತರಿಸಿದನು. ಇವನು ವಿಕ್ರಮಾದಿತ್ಯನೆಂಬ ಬಿರುದನ್ನು ಧರಿಸಿದನು. ಉಜ್ಜಯಿನಿಯನ್ನು ರಾಜಧಾನಿಯಾಗಿ ಮಾಡಿದನು.
ಕುಮಾರಗುಪ್ತನು (415-455): ಅಶ್ವಮೇಧ ಯಾಗವನ್ನು ಮಾಡಿ ಮಹೇಂದ್ರಾದಿತ್ಯನೆಂಬ ಬಿರುದನ್ನು ಗಳಿಸಿದನು. ಇವನ ಕಾಲದಲ್ಲಿ ಪುಷ್ಯಮಿತ್ರ ಸಂಗನು ದಂಗೆಯೆದ್ದನು.
ಸ್ಕಂದಗುಪ್ತನು (455-467): ಟೈಬರ್, ಬೋರಾನ್ ಮೊದಲಾದ ವಾಯವ್ಯ ಕಣಿವೆಗಳ ಮೂಲಕ ದಂಡೆತ್ತಿ ಬಂದ ಹೂಣರನ್ನು ತಡೆದು ರಾಜ್ಯವನ್ನು ರಕ್ಷಿಸಿದನು, ಆದರೆ 545ರಲ್ಲಿ ಮೌಖಾರಿಗಳಿಂದ ಗುಪ್ತವಂಶವು ಅಂತಿಮವಾಯಿತು.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.