”ಈ ದೇಶದಲ್ಲೇನು, ಅಲ್ಪ ಸ್ವಲ್ಪ ಕಷ್ಟ ಬಂದರೆ ಇವಳನ್ನುಬಿಟ್ಟು, ಮತ್ತೊಬ್ಬಳು ಎಂದು ಮದುವೆಯಾಗಬಹುದು ಎಂದು ನಾವು ಸುಲಭವಾಗಿ ಅಂದುಕೊಳ್ಳುತ್ತೇವೆ. ಆದರೆ ಕಾಯಿಲೆ ಹಿಡಿದ ತಮ್ಮ ಹೆಂಡತಿ-ಗಂಡಂದಿರೊಂದಿಗೆ ಎಲ್ಲವನ್ನೂ ಸಹಿಸುತ್ತ ಸಕಲವನ್ನೂ ತ್ಯಾಗ ಮಾಡುತ್ತ ಬದುಕುವವರ ಉದಾಹರಣೆಯೂ ಬಹಳ ಸಿಗುತ್ತದೆ. ನಾನು ವೃತ್ತಿ ಆರಂಭಿಸಿದ ನಂತರ ಕಂಡ ಈ ತೆರನಾದ ಹಲವರ ಅನನ್ಯ ಸಂಬಂಧಗಳು ನನ್ನನ್ನು ವಿಸ್ಮಿತವನ್ನಾಗಿ ಮಾಡಿವೆ”
ರಾಜಕುಮಾರ ಹ್ಯಾರಿಯ ಮದುವೆಯ ದಿನದಂದು ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನದ ಮುಂದುವರಿದ ಕಂತು.
ಇವತ್ತು ಇಂಗ್ಲೆಂಡಿನ ರಾಜಕುಮಾರ ಹ್ಯಾರಿ ಮತ್ತು ಮೆಗನ್ ಮಾರ್ಕಲ್ ಳ ಅದ್ಧೂರಿ ಮದುವೆ ವಿಂಡ್ಸರ್ ಕ್ಯಾಸಲ್ಲಿನ, ಸೈಂಟ್ ಜಾರ್ಜ ಚಾಪೆಲ್ಲಿನಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ. ಇಡೀ ಪ್ರಪಂಚವೇ ಈ ಮದುವೆಯನ್ನು ಕಣ್ತುಂಬ ತುಂಬಿಕೊಳ್ಳುತ್ತಿದೆ. ಕೇವಲ 13 ವರ್ಷಗಳ ಹಿಂದೆ ಹ್ಯಾರಿಯ ತಂದೆ ಚಾರ್ಲ್ಸ್, ಕ್ಯಾಮಿಲ್ಲಾ ಪಾರ್ಕರ್ ಳನ್ನು ಎರಡನೇ ಹೆಂಡತಿಯಾಗಿ ಇಲ್ಲಿಯೇ ಮದುವೆಯಾಗಿದ್ದ. ಡಯಾನಳ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಆತ ತನ್ನ ಮೊದಲಿನ ಗೆಳತಿಯ ಜೊತೆ ಇದ್ದುದು ಬ್ರಿಟನ್ನಿನ ಜನಕ್ಕೆ ಗುಪ್ತ ಸಂಗತಿಯೇನಾಗಿರಲಿಲ್ಲ. ಅದೇ ಸಮಯಕ್ಕೆ ಅತ್ತ ಡಯಾನಾ, ದೋದಿ ಫಯಾಜ್ ನ ಜೊತೆ ತನ್ನ ಸಂಬಂಧವನ್ನು ಬಯಲು ಮಾಡಿದಳು.
ಡಯಾನಾಳಿಗೆ ಪ್ರಪಂಚದಾದ್ಯಂತ ತನ್ನ ಚೆಲುವಿನಿಂದ ಎಷ್ಟು ಜನಪ್ರೀಯತೆ ದೊರಕಿತ್ತೋ ಅಷ್ಟೇ ಜನಪ್ರೀಯತೆ ಆಕೆ ಅರಮನೆಯ ಸಂಪ್ರದಾಯಗಳಿಗೆ ಸೆಡ್ಡುಹೊಡೆದು ನಿಂತ ಕಾರಣಕ್ಕೂ ದೊರಕಿತ್ತು. ಇದೇ ವಿಷಯವಾಗಿ ಸಾಮಾನ್ಯ ಜನರ ನಡುವೆ ಆಕೆಯ ಬಗ್ಗೆ ಒಳ್ಳೆಯ ಭಾವನೆಯೂ ಮೂಡಿಸಿತ್ತು. ಇದೇ ರಾಜಕುಮಾರಿ ಡಯಾನಳ ಮಗನಾದ ಹ್ಯಾರಿಯೂ ಅರಮನೆಯ ಸಂಪ್ರದಾಯಗಳಿಗೆ ತಿಲಾಂಜಲಿಯಿತ್ತು, ತಮ್ಮಂತೆ ಯಾವುದೇ ಘನ ಕುಟುಂಬಕ್ಕೂ ಸೇರಿರದ, ಕರಿಯ ಜನಾಂಗದ ತಾಯಿಯ ಮೂಲವಿರುವ, ಅಮೆರಿಕಾದ ಸಾಮಾನ್ಯ ನಟಿಯೊಡನೆ ಮದುವೆಯಾದ. ಈ ಮೂಲಕ ತನ್ನ ತಾಯಿಯಂತೆ ಶತಮಾನಗಳ ಸಂಪ್ರದಾಯಗಳನ್ನು ಮುರಿಯುವ ಕಾರ್ಯವನ್ನು ಮುಂದುವರೆಸಿದ್ದಾನೆ. ಅಷ್ಟೇ ಅಲ್ಲ, ವಿಚ್ಛೆದಿತೆಯಾಗಿರುವ ಮೆಗನ್ ಳಿಗೆ ಇದು ಎರಡನೆ ಮದುವೆ. ಈಕೆಯ ಮದುವೆಯೊಂದಿಗೆ ಬಿಳಿಯ ಚರ್ಮದ ರಾಯಲ್ ಫ್ಯಾಮಿಲಿಯ ನೀಲಿ ರಕ್ತನಾಳಗಳಲ್ಲಿ ಕಾಣುವ ’ಬ್ಲೂಬ್ಲಡ್’ ಈಗ ‘ಕಲುಷಿತ’ ವಾಗುತ್ತದೆ ಎಂಬ ಕೂಗುಗಳು ದೇಶದಾದ್ಯಂತ ಕೇಳಿಬಂದವು. ಆದರೆ, ಹ್ಯಾರಿ ಮತ್ತು ಮೇಗನ್ ಳ ಅದಮ್ಯ ಪ್ರೀತಿಗೆ ರಾಜಮನೆತನವೂ ಬಗ್ಗಲೇಬೇಕಾಯಿತು. ಈ ಹೊಸ ಜೋಡಿಗೆ ಶುಭದಾಂಪತ್ಯಜೀವನವನ್ನು ಹಾರೈಸೋಣ.
ಲಾಸ್ ವೇಗಾಸ್ಸಿನ ನೈಟ್ ಟೂರಿಗೆ ಹೋದರೆ, ಇದೇ ಹ್ಯಾರಿ ತಂಗಿದ್ದ, ದಿನಕ್ಕೆ ಹತ್ತುಸಾವಿರ ಡಾಲರುಗಳಷ್ಟು ಚಾರ್ಜು ಮಾಡುವ ಹೋಟೆಲಿನ ಬಗ್ಗೆ ಮತ್ತು ಆತನ ರಾಸಲೀಲೆಯ ಬಗ್ಗೆ, ಗೈಡುಗಳು ಅಪಹಾಸ್ಯಮಾಡುತ್ತ ಎಲ್ಲರೆದುರು ಕೇವಲವಾಗಿ ಮಾತನಾಡುತ್ತಾರೆ. ಮೂರುವರ್ಷದ ಹಿಂದಷ್ಟೇ ಇದನ್ನೆಲ್ಲ ಕೇಳಿದ್ದ ನನಗೆ ಈಗ ಯಾವ ಅಚ್ಚರಿಯೂ ಆಗಿರಲಿಲ್ಲ.
ಇಂಗ್ಲೆಂಡಿನಲ್ಲಿ ಮದುವೆಯೆಂಬುದು ಕೌಟುಂಬಿಕ ಲಾಭಗಳ ಆಧಾರದ ಮೇಲೆ, ಪ್ರತಿಷ್ಠೆ ಮತ್ತು ಅನುಕೂಲಗಳ ಕಾರಣಕ್ಕೆ ಯಾವ ಪ್ರೀತಿ ಅಥವಾ ಇಷ್ಟಗಳ ತಳಹದಿಯಿಲ್ಲದೆ ನಡೆಯುವ ಕಾಲವೊಂದಿತ್ತು. ಆದರೆ ಜನಸಾಮಾನ್ಯರು ಮಾತ್ರ ಈ ವಿಚಾರದಲ್ಲಿ ಕ್ರಾಂತಿಯನ್ನು ಮಾಡುತ್ತಲೇ ಬಂದಿದ್ದಾರೆ. ನಿಂತನೀರು ನಿಂತ ಕಡೆಯೇ ಕೊಳೆಯಲು ಬಿಡದ ಜನ ಇಂಗ್ಲಿಷರು . ಬದಲಾವಣೆಯೇ ಇವರ ಜೀವಾಳ. ಇಲ್ಲಿಯ ಜನರು ಹೋರಾಟ ನಡೆಸಿ 2014 ರಲ್ಲಿ ಸಲಿಂಗಕಾಮಿಗಳ ಸಂಬಂಧಗಳು, ವಿರುದ್ಧ ಲಿಂಗಿಗಳಂತೆಯೇ ಮದುವೆ ಮತ್ತು ವಿಚ್ಛೇದನದ ಕಾನೂನಿನ ಕಾಯ್ದೆಯ ಕೆಳಗೆ ಬರುವಂತೆ ಮಾಡಿದರು. ಆದರೆ 2016 ರಲ್ಲಾಗಲೇ ಸಲಿಂಗಕಾಮಿಗಳ 112 ವಿಚ್ಚೇದನಗಳು ಕಾನೂನುಬದ್ಧವಾಗಿ ನಡೆದಿದ್ದವು. ಇವುಗಳಲ್ಲಿ ಸ್ತ್ರೀಸಲಿಂಗಕಾಮಿಗಳ ವಿಚ್ಚೇದನ ಶೇಕಡಾ 78% ಇತ್ತು!!
ಡಯಾನಾಳಿಗೆ ಪ್ರಪಂಚದಾದ್ಯಂತ ತನ್ನ ಚೆಲುವಿನಿಂದ ಎಷ್ಟು ಜನಪ್ರೀಯತೆ ದೊರಕಿತ್ತೋ ಅಷ್ಟೇ ಜನಪ್ರೀಯತೆ ಆಕೆ ಅರಮನೆಯ ಸಂಪ್ರದಾಯಗಳಿಗೆ ಸೆಡ್ಡುಹೊಡೆದು ನಿಂತ ಕಾರಣಕ್ಕೂ ದೊರಕಿತ್ತು. ಇದೇ ವಿಷಯವಾಗಿ ಸಾಮಾನ್ಯ ಜನರ ನಡುವೆ ಆಕೆಯ ಬಗ್ಗೆ ಒಳ್ಳೆಯ ಭಾವನೆಯೂ ಮೂಡಿಸಿತ್ತು. ಇದೇ ರಾಜಕುಮಾರಿ ಡಯಾನಳ ಮಗನಾದ ಹ್ಯಾರಿಯೂ ಅರಮನೆಯ ಸಂಪ್ರದಾಯಗಳಿಗೆ ತಿಲಾಂಜಲಿಯಿತ್ತು, ತಮ್ಮಂತೆ ಯಾವುದೇ ಘನ ಕುಟುಂಬಕ್ಕೂ ಸೇರಿರದ, ಕರಿಯ ಜನಾಂಗದ ತಾಯಿಯ ಮೂಲವಿರುವ, ಅಮೆರಿಕಾದ ಸಾಮಾನ್ಯ ನಟಿಯೊಡನೆ ಮದುವೆಯಾದ. ಈ ಮೂಲಕ ತನ್ನ ತಾಯಿಯಂತೆ ಶತಮಾನಗಳ ಸಂಪ್ರದಾಯಗಳನ್ನು ಮುರಿಯುವ ಕಾರ್ಯವನ್ನು ಮುಂದುವರೆಸಿದ್ದಾನೆ. ಅಷ್ಟೇ ಅಲ್ಲ, ವಿಚ್ಛೆದಿತೆಯಾಗಿರುವ ಮೆಗನ್ ಳಿಗೆ ಇದು ಎರಡನೆ ಮದುವೆ.
1582 ರಲ್ಲಿಯೇ ಇಲ್ಲಿನ ಕವಿ ಶೇಕ್ಸಪಿಯರ್ ತನಗಿಂತ 8 ವರ್ಷ ದೊಡ್ಡವಳಾಗಿದ್ದು ಬೇರೊಬ್ಬನಿಗೆ ಬಸಿರಾಗಿದ್ದ ಆನ್ ಹಾತವೇಯಳನ್ನು ಮದುವೆಯಾಗಿದ್ದ. ಗೌರವಿತ ಕುಟುಂಬದವನೇ ಆದ ಶೇಕ್ಸಪಿಯರ್ಗೆ ಮದುವೆಯಾದಾಗ ಆತನಿಗೆ ಕೇವಲ 18 ವರ್ಷಗಳು. ಮೂರು ಮಕ್ಕಳನ್ನು ಪಡೆದ ನಂತರ ಈತ ಹೆಂಡತಿಯನ್ನು ತೊರೆದು ಇತರೆ ಹಲವು ಹೆಂಗಸರ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಇವರಲ್ಲಿ ಕರಿಯ ಜನಾಂಗದ ಮಹಿಳೆಯೂ ಇದ್ದಳೆಂಬ ವಿವಾದ ಈಗಲೂ ಇದೆ. ಇಂತಹ ಕಥೆಗಳನ್ನು ಕೇಳುತ್ತಲೇ ಇರುವ ಕಾರಣ, ಇಂಗ್ಲೆಂಡಿನಲ್ಲಿ ಮದುವೆಯೆನ್ನುವುದು ಬರೇ ಹೆಸರಿಗೆ ಮಾತ್ರ; ಡೈವೋರ್ಸ್ಗಳು, ಅಕ್ರಮ ಸಂಬಂಧಗಳೇ ಈ ದೇಶದಲ್ಲಿ ಜಾಸ್ತಿ ಎಂಬೆಲ್ಲ ಪೂರ್ವಾಗ್ರಹಗಳೊಂದಿಗೆ ನಾನು ಇಲ್ಲಿಗೆ ಬಂದಿದ್ದು ನಿಜ. ಅದೂ ಅಲ್ಲದೇ ಇಲ್ಲಿನ ಗಂಡು-ಹೆಣ್ಣಿನ ಸ್ವೇಚ್ಚಾಚಾರ ಹೇಗಿರುತ್ತದೋ ಎಂಬ ಕುತೂಹಲವೂ ಇತ್ತು.
ಸಾಮಾನ್ಯವಾಗಿ ಬ್ರಿಟಿಷರ ಸಂಭಾಷಣೆಗಳು ಪ್ರತಿದಿನವೂ ಹವಾಮಾನದ ವಿಚಾರವಾಗಿ ಶುರುವಾಗುತ್ತದೆ. ಪ್ರತಿಗಂಟೆಗೂ ಬದಲಾಗುವ ಇಲ್ಲಿನ ಹವಾಮಾನ ಅತ್ಯಂತ ಚಂಚಲ. ಹಾಗೆಯೇ ಇಂಗ್ಲೆಂಡಿನ ಮನುಷ್ಯ ಸಂಬಂಧಗಳು ಕೂಡ ಇರಬಹುದೇ ಎಂದು ನನಗೆ ಹಲವು ಬಾರಿ ಅನಿಸಿದ್ದಿದೆ.ಇಂಗ್ಲೆಂಡಿನ ಶೇಕಡ 42% ಮದುವೆಗಳು ವಿಚ್ಛೇದನದಲ್ಲಿ ಕೊನೆಯಾಗುತ್ತವೆ. ಇದಕ್ಕೆ ಸಂಬಂಧಿಸಿದಂತೆ ‘ಮದುವೆಯೆನ್ನುವುದು ಏಳುವರ್ಷದ ತುರಿಕೆ’ ( Marriage is a seven years itch ) ಎನ್ನುವ ಗಾದೆಯೇ ಇಲ್ಲಿದೆ. ಇವತ್ತಿನ ಸರಾಸರಿ ಲೆಕ್ಕದಲ್ಲಿ ಇಲ್ಲಿನ ಪ್ರತಿ ಮದುವೆಗಳ ಬಂಧ ಕೇವಲ 11 ವರ್ಷ ಮತ್ತು ಆರು ತಿಂಗಳು ಮಾತ್ರವೇ ನಿಲ್ಲುತ್ತದೆ. ಆದ್ದರಿಂದ ಗಾದೆಯನ್ನು ‘ಟ್ವೆಲ್ ಯಿಯರ್ಸ್ ಇಚ್’ ಎಂದು ಈಗ ಅಟ್ ಡೇಟ್ ಮಾಡಬಹುದೇನೋ!
ಮೂವತ್ತು ವರ್ಷಕ್ಕೆ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಪಡೆದಿರುವ ಸಾವಿರಾರು ಜನರಿದ್ದಾರೆ ಇಲ್ಲಿ. ಅದಕ್ಕೂ ಕುತೂಹಲಕರ ವಿಷಯವೆಂದರೆ, ಕೇವಲ ಹದಿಮೂರು-ಹದಿನಾಲ್ಕನೆಯ ಸಣ್ಣ ವಯಸ್ಸಿಗೇ ಬಸಿರಾಗುವ ಹೆಂಗಸರಲ್ಲದ ಹೆಂಗಸರ ಸಂಖ್ಯೆಯೂ ಅಷ್ಟೇ ಹೆಚ್ಚಿದೆ. ಮತ್ತು ಇದಿಲ್ಲಿ ಸಾಮಾನ್ಯ ಸಂಗತಿ ಅಷ್ಟೇ. ಇಂತಹವರೇನಾದರೂ ಪಾರ್ಕಿನಲ್ಲಿ ಮಕ್ಕಳೊಡನೆ ಆಡುತ್ತಿದ್ದು “ನಿಮ್ಮಮಗುವೇ?” ಅಂದರೆ, ಇಲ್ಲ ನನ್ನ ಮೊಮ್ಮಗು ಎಂದು ಸಣ್ಣಗೆ ನಗುತ್ತಾರೆ. ಇಪ್ಪತ್ತೈದಕ್ಕೆಲ್ಲ ಹತ್ತುವರ್ಷದ ಮಗಳಿದ್ದ ನರ್ಸ್ ಒಬ್ಬಳ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ನನ್ನ ಅಮ್ಮನಿಗೇ ಹದಿನಾರಕ್ಕೆ ಮದುವೆಯಾಯ್ತು ಅಂತ ಕೇಳಿದಾಗೆಲ್ಲ ‘ಅಯ್ಯೋ’ ಎನ್ನುತ್ತಿದ್ದ ನಾನು, ಇವತ್ತಿನ ಕಾಲದ, ಇಂತಹ ಮುಂದುವರೆದ ದೇಶದಲ್ಲಿ ಕೂಡ ಅರೆಪ್ರಾಪ್ತ ವಯಸ್ಸಿಗೆ ಗರ್ಭ ಹೊತ್ತು ನಿಲ್ಲುವುದನ್ನು ಕಂಡು ಆಶ್ಚರ್ಯಪಡುತ್ತೇನೆ. ಸಾಮಾನ್ಯವಾಗಿ ಇಂಥವರೆಲ್ಲ ಬಡತನದ ಹಿನ್ನೆಲೆಯಿಂದ ಬಂದ ದಡ್ಡ ಹುಡುಗಿಯರು ಅಂತ ಬಹಳ ಬಾರಿ ಅನ್ನಿಸಿದೆ. ಇವರನ್ನು ಯಾರೂ ಬಲವಂತವಾಗಿ ಮದುವೆ ಮಾಡಿರುವುದಿಲ್ಲ. ಸ್ವಂತ ಇಷ್ಟಕ್ಕೆ ಅಥವಾ ತಿಳಿಯದೆಯೇ ಅಥವಾ ಹಲವು ಬಾರಿ ಸ್ವಾರ್ಥದ ಪೋಷಕರ ಬದುಕಿಗೆ ಬಲಿಯಾಗಿ ಹುಡುಗ –ಹುಡುಗಿಯರು ಹೀಗೆ ಮಾಡುವುದು ಜಾಸ್ತಿ. ಬಸಿರಾಗಲು ಇಲ್ಲಿ ಮದುವೆ ಆಗಬೇಕೆಂಬ ನಿಯಮವಿಲ್ಲ. ಹಾಗಂತಲೇ ನಲವತ್ತರವರೆಗೆ ಮದುವೆ, ಮಕ್ಕಳೆಂದು ತೊಡಗಿಕೊಳ್ಳದೆ ಬದುಕನ್ನು ಸ್ವಚ್ಛಂದವಾಗಿ ಅನುಭವಿಸಿ ನಿಧಾನವಾಗಿ ಸಂಸಾರದಲ್ಲಿ ತೊಡಗಿಕೊಳ್ಳುವ ಜನರ ಸಂಖ್ಯೆ ಸಾಕಷ್ಟಿದೆ ಇಲ್ಲಿ. ಬಹುತೇಕರು ಒಬ್ಬರಲ್ಲ ಬದಲು ಹಲವರೊಡನೆ ಕೂಡಿಬಾಳಿದ ನಂತರವೇ ಮದುವೆಯ ಮಾತಾಡುವುದು; ಅದರ ಬಗ್ಗೆ ಯೋಚಸುವುದು. ಇಂತಹ ಹಲವರ ಮಕ್ಕಳು ತಮ್ಮ ತಂದೆ-ತಾಯಿಯರ ಮದುವೆಯಲ್ಲಿ ಭಾಗಿಗಳಾಗುವುದು ಸರ್ವೇಸಾಮಾನ್ಯ ಸಂಗತಿ. ಸರಾಸರಿ 42% ವಿವಾಹಗಳು ವಿಚ್ಚೇದನದಲ್ಲಿ ಕೊನೆಯಾಗುವ ಕಾರಣ ಮಕ್ಕಳಿಗೆ ಮಲತಂದೆ- ತಾಯಿಯರಿರುವುದು ಕೂಡ ಅತಿ ಸಾಮಾನ್ಯ. ಇಲ್ಲಿಯ ಜನರ ಸಾವಿರಾರು ವರ್ಷಗಳ ನಡವಳಿಕೆಗಳಿಗೆ ತಕ್ಕಂತೆ ಇವರದು ಒಂದುರೀತಿಯ ವ್ಯವಸ್ಥಿತ ಸಾಮಾಜಿಕ ಒಪ್ಪಂದ ಎನ್ನಬಹುದು. ನನ್ನ ಮತ್ತೊಬ್ಬ ಪ್ರೊಟೆಷ್ಟಂಟ್ ಸಹೋದ್ಯೋಗಿಯ ಒಂದೇ ಜೋಡಿ ತಂದೆ ತಾಯಿಗಳಿಗೆ ಒಟ್ಟು 16 ಜನ ಮಕ್ಕಳಿದ್ದರು. ಇವರೆಲ್ಲ ತಮ್ಮ ಗಂಡ-ಹೆಂಡಿರು- ಮಕ್ಕಳ ಜೊತೆ ಹಬ್ಬಕ್ಕೋ, ಮತ್ತೊಂದಕ್ಕೋ ಜೊತೆಗೆ ಸೇರುವುದಾದರೆ ದೊಡ್ಡ ಸಭಾಂಗಣವನ್ನೇ ಪ್ರತಿಬಾರಿ ಬಾಡಿಗೆ ತೆಗೆದುಕೊಳ್ಳುತ್ತಿದ್ದರು.
ಇಂಗ್ಲೆಂಡಿನಲ್ಲಿ ಮದುವೆಯೆಂಬುದು ಕೌಟುಂಬಿಕ ಲಾಭಗಳ ಆಧಾರದ ಮೇಲೆ, ಪ್ರತಿಷ್ಠೆ ಮತ್ತು ಅನುಕೂಲಗಳ ಕಾರಣಕ್ಕೆ ಯಾವ ಪ್ರೀತಿ ಅಥವಾ ಇಷ್ಟಗಳ ತಳಹದಿಯಿಲ್ಲದೆ ನಡೆಯುವ ಕಾಲವೊಂದಿತ್ತು. ಆದರೆ ಜನಸಾಮಾನ್ಯರು ಮಾತ್ರ ಈ ವಿಚಾರದಲ್ಲಿ ಕ್ರಾಂತಿಯನ್ನು ಮಾಡುತ್ತಲೇ ಬಂದಿದ್ದಾರೆ. ನಿಂತನೀರು ನಿಂತ ಕಡೆಯೇ ಕೊಳೆಯಲು ಬಿಡದ ಜನ ಇಂಗ್ಲಿಷರು . ಬದಲಾವಣೆಯೇ ಇವರ ಜೀವಾಳ. ಇಲ್ಲಿಯ ಜನರು ಹೋರಾಟ ನಡೆಸಿ 2014 ರಲ್ಲಿ ಸಲಿಂಗಕಾಮಿಗಳ ಸಂಬಂಧಗಳು, ವಿರುದ್ಧ ಲಿಂಗಿಗಳಂತೆಯೇ ಮದುವೆ ಮತ್ತು ವಿಚ್ಛೇದನದ ಕಾನೂನಿನ ಕಾಯ್ದೆಯ ಕೆಳಗೆ ಬರುವಂತೆ ಮಾಡಿದರು. ಆದರೆ 2016 ರಲ್ಲಾಗಲೇ ಸಲಿಂಗಕಾಮಿಗಳ 112 ವಿಚ್ಚೇದನಗಳು ಕಾನೂನುಬದ್ಧವಾಗಿ ನಡೆದಿದ್ದವು.
ತಲಾತಲಾಂತರಗಳಿಂದ ಇದು ಮುಕ್ತ ಸಮಾಜ. ಇಲ್ಲಿ ಒಬ್ಬಳೇ ಹೆಂಡತಿ ಅಥವಾ ಗಂಡನೊಡನೆ ಐವತ್ತು-ಅರವತ್ತು ವರ್ಷದ ಮದುವೆಯ ಬಂಧ ಇರುವವರೂ ಇದ್ದಾರೆ. ಹಾಗೆಯೇ, “ಓಹ್, ಮೈಲವ್ಲೀ ಕ್ರಿಸ್ (ಕ್ರಿಷ್ಟೋಫರ್)” ಎಂದು ಲೊಚಲೊಚನೆ ಮುತ್ತಿಡುತ್ತಲೇ ಮುಂದಿನ ಹತ್ತು ವರ್ಷಗಳಲ್ಲಿ ಇವನಜೊತೆ ಇರುವುದನ್ನು ಊಹಿಸಲೂ ಸಾದ್ಯವಿಲ್ಲವೆಂದು ಕಿಸಕಿಸನೆ ನಗುವವರೂ ಇದ್ದಾರೆ!! ಇಲ್ಲಿನ ಜನರಲ್ಲಿ ಕೇವಲ ತಮ್ಮ ದೇಶದವರನ್ನಷ್ಟೇ ಅಲ್ಲ, ಆಫ್ರಿಕನ್ನರು, ಭಾರತೀಯರು, ಚೀನೀಯರು, ಅಮೆರಿಕನ್ನರು , ಪಾಕಿಸ್ತಾನಿಗಳು ಎಂದು ನಾನಾದೇಶದ ಜನರನ್ನು ಮದುವೆಯಾಗಲು ಇಚ್ಚಿಸುವವರ ಸಂಖ್ಯೆಯೂ ಸಾಕಷ್ಟಿದೆ. ಬರೀ ಜಾತಿ, ಸಂಪ್ರದಾಯ ಮತ್ತು ಧರ್ಮವಲ್ಲದೆ ಎಲ್ಲವೂ ಭಿನ್ನವಿರುವ ಸಂಗಾತಿಗಳೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಜನರು ಹಲವರಿದ್ದಾರೆ. ಈ ದೇಶದಲ್ಲೇನು, ಅಲ್ಪ-ಸ್ವಲ್ಪ ಕಷ್ಟ ಬಂದರೆ ಇವಳನ್ನುಬಿಟ್ಟು, ಮತ್ತೊಬ್ಬಳು ಎಂದು ಮದುವೆಯಾಗಬಹುದು ಎಂದು ನಾವು ಸುಲಭವಾಗಿ ಅಂದುಕೊಳ್ಳುತ್ತೇವೆ. ಆದರೆ ಕಾಯಿಲೆ ಹಿಡಿದ ತಮ್ಮ ಹೆಂಡತಿ-ಗಂಡಂದಿರೊಂದಿಗೆ ಎಲ್ಲವನ್ನೂ ಸಹಿಸುತ್ತ ಸಕಲವನ್ನೂ ತ್ಯಾಗ ಮಾಡುತ್ತ ಬದುಕುವವರ ಉದಾಹರಣೆಯೂ ಬಹಳ ಸಿಗುತ್ತದೆ. ನಾನು ವೃತ್ತಿ ಆರಂಭಿಸಿದ ನಂತರ ಕಂಡ ಈ ತೆರನಾದ ಹಲವರ ಅನನ್ಯ ಸಂಬಂಧಗಳು ನನ್ನನ್ನು ವಿಸ್ಮಿತವನ್ನಾಗಿ ಮಾಡಿವೆ.
ಒಬ್ಬ ವ್ಯಕ್ತಿಯ ಜೀವನ ಹೀಗಿದೆ: ಈತ ಮೆಚ್ಚಿಕೊಂಡ ಹುಡುಗಿಯನ್ನೇ ಮದುವೆಯಾಗಿದ್ದ. ಮೊದಲೆಲ್ಲ ತನ್ನ ಹುಡುಗಿಯ ವಿಚಿತ್ರ ಭಾವಗಳನ್ನು ಕಂಡು, ಏನೋ ಅವಳಿಗೆ ಹುಡುಗಾಟ ಜಾಸ್ತಿ, ಹುಡುಗಾಟಿಕೆಗೆ ಹೀಗೆಲ್ಲ ಆಡುತ್ತಾಳೆ ಎಂದುಕೊಂಡಿದ್ದನಂತೆ. 20 ವರ್ಷಗಳ ಹಿಂದೆ ವೈದ್ಯಕೀಯ ರಂಗಕ್ಕೆ ಹಲವು ಮಾನಸಿಕ ಖಾಯಿಲೆಗಳ ಬಗ್ಗೆ ತಿಳಿದಿರಲಿಲ್ಲ. ಅವನು ಪ್ರೀತಿಸಿದ ಹುಡುಗಿ, ತಾನು ಓದುತ್ತಿದ್ದ ಶಾಲೆಯಲ್ಲಿ ತನ್ನನ್ನು ಕುರ್ಚಿಮೇಜಿನ ಕಾಲುಗಳಿಗೆ ಕಟ್ಟಿಹಾಕುತ್ತಿದ್ದರು ಎಂದು ಆಕೆ ಹೇಳಿದರೂ ಇವನಿಗೆ ಅದೇನೂ ವಿಶೇಷವಾದ್ದೆಂದು ಅನ್ನಿಸಿರಲಿಲ್ಲ. ಹೇಗೋ ಸಂಸಾರ ಮಾಡುತ್ತ, ಜಗಳವಾಡುತ್ತ ಮೂರು ಮಕ್ಕಳನ್ನು ಪಡೆದಮೇಲೆ, ಮೂವರಲ್ಲಿ ಇಬ್ಬರಿಗೆ ಮಾನಸಿಕ ಖಾಯಿಲೆಗಳಿವೆ ಎಂದು ತಿಳಿಯುವ ಹೊತ್ತಿಗೆ ಕಾಲ ಬದಲಾಗಿತ್ತು. ಅತಿ ಉಲ್ಬಣಮಟ್ಟದ ಎ.ಡಿ.ಹೆಚ್ .ಡಿ (ADHD) ಖಾಯಿಲೆ, ತಾಯಿಯಿಂದ ಮಕ್ಕಳಿಗೂ ಬಂದಿತ್ತು ಎಂದು ಆತನಿಗೆ ತಿಳಿಯಿತು. ಮೊದಲು ಚಿಂತೆಗೆ ಬಿದ್ದ ಆತ ದಿನಕ್ಕೆ ನಲವತ್ತು ಸಿಗರೇಟು ಸೇದಿದಲಾರಂಭಿಸಿದ. ಇನ್ನಿಲ್ಲದಂತೆ ಕುಡಿಯಲಾರಂಭಿಸಿದ. ಆನಂತರ ಏನಾಯಿತೋ ಗೊತ್ತಿಲ್ಲ; ಎಲ್ಲ ಜವಾಬ್ದಾರಿ ತನ್ನದೇ ಅಂತ ತಿಳಿದ ಆತ ಎಲ್ಲ ಕೆಟ್ಟ ಅಭ್ಯಾಸಗಳನ್ನೂ ತೊರೆದು, ವೈದ್ಯಕೀಯ ಚಿಕಿತ್ಸೆಯೇ ಇಲ್ಲದ ಮಾನಸಿಕ ಖಾಯಿಲೆಗಳಿರುವ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದೇ ಆತನ ಬದುಕಿನ ಧ್ಯೇಯವೆಂಬಂತೆ ಬದುಕಲಾರಂಭಿಸಿದ.
15 ವರ್ಷದ ಅವನ ಮಗ ಆತನನ್ನು ಹೊಡೆಯಲು ಬರುತ್ತಾನಂತೆ, ಕೆಲವೊಮ್ಮೆ ಚಾಕು-ಚೂರಿಯನ್ನು ಹಿಡಿದು ಕೊಲ್ಲಲು ಮುನ್ನುಗ್ಗುತ್ತಾನಂತೆ. ಆದರೆ ಇದೇ ಮಗನಿಗೆ ಈಗಲೂ ಒಬ್ಬನೇ ರಸ್ತೆದಾಟಲು ಭಯ; ಸಮಾಜದಲ್ಲಿ ಬೆರೆಯಲಾಗದ ಈತ ಮಾನಸಿಕ ಖಾಯಿಲೆಯಿರುವ ಮಕ್ಕಳಿಗೆಂದೇ ಇರುವ ಶಾಲೆಗೆ ಹೋಗುತ್ತಾನೆ. ಇವನನ್ನು ಒಂದೆಡೆ ಕೂಡಿಸಲು ಐದು- ಆರು ಜನರ ಸಹಾಯ ಬೇಕಂತೆ. ಇನ್ನೊಂದೆಡೆ ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಅವನ ಮಗಳು ಒಮ್ಮೆ ಈತನನ್ನು ಹಿಂದಿನಿಂದ ಬಂದು ಉರಿಯುತ್ತಿದ್ದ ಓವನ್ನಿಗೆ ತಟ್ಟನೆ ನೂಕಿದ್ದಳಂತೆ. ಇತ್ತೀಚೆಗೆ ಇವನ ಹೆಂಡತಿಗೆ ಕಾಲಿನ ಕ್ಯಾನ್ಸರ್ ಕೂಡ ಬಂದು ಮಲಗಿದ್ದಲ್ಲಿ ಮಲಗಿರುತ್ತಾಳಂತೆ. ಮಾನಸಿಕ ಖಾಯಿಲೆಯಿರುವ ಮತ್ತೊಬ್ಬ ಮಗಳಂತೂ, ಹಾಸಿಗೆ ಹಿಡಿದಿರುವ ಅಮ್ಮನ ಕಾಲಿಗೆ ಕೈಗೆಸಿಕ್ಕ ವಸ್ತುವನ್ನು ತಗೊಂಡು ಹೊಡೆದುಬಿಡುತ್ತಾಂತೆ. ಇವನ್ನೆಲ್ಲ, ಇವರನ್ನೆಲ್ಲ ಇವನೊಬ್ಬನೇ ತಡೆಯುತ್ತ, ಸಂಭಾಳಿಸುತ್ತ ಈಗಲೂ ಅವರೊಡನೆ ಬದುಕಿರುವ ಈತನಿಗೆ ಅವರನ್ನು ಬಿಟ್ಟುಬಿಡುವ, ಓಡಿಹೋಗುವ ಮನಸ್ಸಿಲ್ಲ; ಅಂಥ ಯೋಚನೆಯೂ ಇಲ್ಲ. ಅಥವಾ ಬೇರೆದಾರಿ ಕಾಣಿಸುತ್ತಲೂ ಇಲ್ಲ. ಮತ್ತೊಂದು ಮದುವೆಯ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ಇಂತಹ ಹಲವು ದೊಡ್ಡ ಮನಸ್ಸಿನ ಸಮಾಧಾನಿಗಳು ಕೂಡ ಇಲ್ಲಿನ ಸಮಾಜದಲ್ಲಿದ್ದಾರೆ. ಅಳಬೇಕೆಂದರೂ ಕಣ್ಣೀರು ಇಂಗಿಹೋಗಿದೆ ಎನ್ನುವ ಈತ ವಿಚ್ಛೇದಿತನಾದರೂ ಮಕ್ಕಳು ಈತನ ಜವಾಬ್ದಾರಿಯೇ ಆಗುವ ಕಾರಣ ಈತನನ್ನು ಮದುವೆಯಾಗಬಲ್ಲ ದೇವತೆ ಇವನಿಗೆ ಸಿಗಲಿ ಎಂದು ಮನಸಾ ಹಾರೈಸಿದೆ. ಒಂದು ಸಮಾಜದಲ್ಲಿ ಎಷ್ಟೆಲ್ಲ ವೈವಿಧ್ಯಮಯ ಜನರಿರುತ್ತಾರೆ, ಸಂಬಂಧಗಳಿರುತ್ತವೆ, ಮದುವೆಗಳಾಗುತ್ತವೆ ಎಂದು ಎಲ್ಲ ದೇಶಗಳಂತೆ ಇಂಗ್ಲೆಂಡಿನಲ್ಲಿ ಕೂಡ ನೋಡಲು ಸಾಧ್ಯವಿದೆ.
ಇನ್ನೊಬ್ಬನ ಕತೆ ಹೀಗಿದೆ: ಐವತ್ತರ ಆಸುಪಾಸಿನಲ್ಲಿದ್ದ ಒಬ್ಬ ಗಂಡ ತನ್ನ ಹೆಂಡತಿಯೊಡನೆ ನನ್ನನ್ನು ನೋಡಲು ಬಂದ. ಈತ ‘ಅವನಲ್ಲ ’ಬದಲು ‘ಅವಳಾ’ದ ವ್ಯಕ್ತಿ. ಗಂಡಸಿನ ದೇಹದಲ್ಲಿ ಹೆಣ್ಣು ಮನಸ್ಸಿನ ವ್ಯಕ್ತಿ. ನೋಡಲು ಗಂಡಸಿನಂತೆಯೇ ಇದ್ದು, ಗಡ್ಡ, ಮೀಸೆಗಳಿದ್ದರೂ ಕುತ್ತಿಗೆಗೆ ಆಭರಣ, ತಲೆಗೂದಲನ್ನು ಉದ್ದವಾಗಿ ಬೆಳೆಸಿಕೊಂಡಿರುವವ. ತನ್ನ ಹೆಸರನ್ನೂ ಸಹ ಹೆಂಗಸಿನ ಹೆಸರಿಗೆ ಬದಲಿಸಿಕೊಂಡಿದ್ದ. ನಾನು ಕೂಡ ವೃತ್ತಿಪರವಾಗಿ ಹೆಂಗಸಿನ ಹೆಸರಿನಲ್ಲೇ ಮಾತನಾಡಿಸಿದೆ. ಬಹುತೇಕ ಇಂಗ್ಲಿಷರ ತುಟಿಗಳು ಬಹಳ ತೆಳುವಾದ, ಗೆರೆಗಳಂತಿರುತ್ತವೆ. ಇವನವೂ ಹಾಗೆಯೇ ಇದ್ದವು. ಆದರೆ ಈತನಿಗೆ (ಇವಳಿಗೆ) ಅವುಗಳಿಗೆ ಲಿಪ್ ಸ್ಟಿಕ್ ಹಚ್ಚುವ ಆಸೆ. ತುಟಿಯೇ ಇರದಿದ್ದರೆ ಬಣ್ಣ ಹಚ್ಚುವುದಾದರೂ ಎಲ್ಲಿಗೆ? ಅದಕ್ಕೆಂದೇ ಆತ ತುಟಿಗಳ ಗಾತ್ರ ಮತ್ತು ಆಕಾರವನ್ನು ಬದಲಿಸಿಕೊಳ್ಳಲು ನನ್ನಲ್ಲಿಗೆ ಬಂದಿದ್ದ. ಆತನ (ಅವಳ) ಆಸೆಯನ್ನು ಮುಂದೆ ನಿಂತು ನೆರವೇರಿಸಿದ್ದು ಅವನು ಮದುವೆಯಾಗಿದ್ದ ಧರ್ಮಪತ್ನಿಯೇ. ಮುಂದೆ ತನ್ನ ಜನನಾಂಗ ಬದಲಾವಣೆಯ ಸರ್ಜರಿಯನ್ನು ಮಾಡಿಸಿಕೊಳ್ಳುವ ಬಗ್ಗೆ ಆತ ಮುಕ್ತವಾಗಿ ನನ್ನೊಂದಿಗೆ ಮಾತನಾಡಿದ. ಅದಕ್ಕೂ ಹೆಂಡತಿಯ ಅಸ್ತು ಸಿಕ್ಕಿದೆಯಂತೆ. ಆದರೂ ಇವರಿಬ್ಬರ ಮದುವೆ ಮುರಿದಿರಲಿಲ್ಲ. ಹೆಂಡತಿಗೆ ಸಮಾಜದಲ್ಲಿ ತನ್ನ ಗಂಡ ಹೀಗಂತ ಹೇಳಿಕೊಳ್ಳಲು ಹಿಂಜರಿಕೆಯಿರಲಿಲ್ಲ.
ಹದಿನೈದು ವರ್ಷಗಳ ಈ ಅವಧಿಯಲ್ಲಿನ ಬ್ರಿಟಿಷ್ ಸಮಾಜವನ್ನು ಅರ್ಥೈಸಿಕೊಳ್ಳುವ ಪ್ರಯತ್ನದಲ್ಲಿ, ಇಂತಹ ನೂರಾರು ಭಿನ್ನ ವಿಭಿನ್ನ ಬಂಧಗಳನ್ನು ಕಂಡಿದ್ದೇನೆ. ಈ ಇಂಗ್ಲಿಷರ ಸಮಾಜದ ಬಗ್ಗೆ ನನಗಿದ್ದ ಪೂರ್ವಾಗ್ರಹಗಳು ಕಳೆದು ಅದೆಷ್ಟೋ ವರ್ಷಗಳು ಉರುಳಿವೆ. ಮದುವೆಯ ಬಗ್ಗೆ ನಮ್ಮ ಭಾರತೀಯರ ಕಟುಸಂಪ್ರದಾಯಗಳಂತೆಯೇ ಇಲ್ಲಿನ ಸಮಾಜದಲ್ಲಿಯೂ ಇನ್ನೊಂದು ಬಗೆಯ ತೆರೆದ ವ್ಯವಸ್ಥೆ ಇದೆ ಎನ್ನುವುದು ಅರಿವಾಗಿದೆ. ನಮ್ಮಲ್ಲಿ ಅನ್ಯಾಯವಾಗುವಂತೆಯೇ, ಇಲ್ಲಿಯೂ ಕೆಲವರಿಗೆ ಅನ್ಯಾಯಗಳಾಗುತ್ತವೆ, ಎರಡೂ ಬಗೆಯ ವ್ಯವಸ್ಥೆಗಳಲ್ಲಿ ಅನುಕೂಲ, ಅನಾನುಕೂಲ ಎರಡೂ ಇವೆ. ಹಾಗೆಯೇ ಭಾರತೀಯ ಮತ್ತು ಇಂಗ್ಲೀಷು ಜನರಲ್ಲಿ ಒಬ್ಬರಿಗೆ ಇನ್ನೊಬ್ಬರ ವೈವಾಹಿಕ ವ್ಯವಸ್ಥೆಗಳ ಬಗ್ಗೆ ಪೂರ್ವಾಗ್ರಹಗಳು, ತಾತ್ಸಾರಗಳು, ಕುತೂಹಲಗಳು ಮತ್ತು ಪ್ರಶಂಸೆಯೂ ಮನೆಮಾಡಿವೆ.
ನನ್ನದು ಪೋಷಕರು ನಿರ್ಧರಿಸಿದ ವಿವಾಹವೇ. ತುಮಕೂರಿನಲ್ಲಿ ನನ್ನದೇ ಅಂತ ಮನೆಮಾಡಿದ ಮೊದಲಲ್ಲಿ, ನಮ್ಮಮ್ಮನ ಮನೆಗೆ ಹೋಗುವಾಗೆಲ್ಲ ‘ನಮ್ಮನೆಗೆ ಹೋಗೋಣ’ ಅಂತಲೇ ನಾನು ಹೇಳುತ್ತಿದ್ದೆ. ಅದಕ್ಕೆ ನನ್ನ ಗಂಡ ‘ಇದು ನಿನ್ನ ಮನೆ, ಅದು ನಿಮ್ಮಮ್ಮನ ಮನೆ’ ಅಂತ ತಿದ್ದಬೇಕಾಗಿತ್ತು. ಈ ವಿಚಾರ ಅಥವಾ ಬದಲಾವಣೆ ನನ್ನಲ್ಲಿ ಆಳಕ್ಕೆ ಇಳಿಯಲು ಬಹಳಕಾಲ ಬೇಕಾಯಿತು. ಆದರೆ ಈಗ ಹೊಸಮನೆಗಲ್ಲ ಬದಲು ಹೊಸದೇಶಕ್ಕೆ ಬಂದಾಗಿತ್ತು. ಕಾಲು ಮುರಿದಿತ್ತು, ಕೈಲೊಂದು ಮಗುವಿತ್ತು. ನಾನು ಪ್ರೀತಿಸುತ್ತಿದ್ದ ನನ್ನ ವೃತ್ತಿ ನಿಂತುಹೋಗಿತ್ತು. ಈ ದೇಶದಲ್ಲಿ ಕೆಲಸ ಮಾಡಲು ಪರೀಕ್ಷೆಗಳನ್ನು ಬರೆಯಬೇಕಿತ್ತು. ಆದರೆ ಮನಸ್ಸಿನಲ್ಲಿ ಒಂದು ಬಲವಾದ ನಂಬಿಕೆಯಿತ್ತು.
ಈ ಪರದೇಶ ವಾಸ ಕೇವಲ ಕೆಲವು ವರ್ಷಗಳು ಮಾತ್ರ. ಒಂದಷ್ಟು ಗಂಟು ಮಾಡಿಕೊಂಡು, ಅನುಭವ ಗಳಿಸಿಕೊಂಡು, ಪರದೇಶವನ್ನೆಲ್ಲ ಸುತ್ತಿನೋಡಿಕೊಂಡು ಮುಂದಿನ ಕೆಲವೇ ವರ್ಷಗಳಲ್ಲಿ ಹಿಂತಿರುಗಿ ಹೋಗಿಬಿಡೋಣ ಎನ್ನುವುದೇ ಯೋಜನೆಯಾಗಿತ್ತು. ಆದರೆ ಬದುಕನ್ನು ಬದುಕದೆ ಫಾಸ್ಟ್ ಫಾರ್ವಡ್ ಮಾಡಲು ಸಾಧ್ಯವಿರಲಿಲ್ಲವಲ್ಲ?
(ಮುಂದುವರಿಯುವುದು)
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.