”ಇದು ಕುವೆಂಪು ಎಂಬ ಅಕ್ಕಸಾಲಿಗನ ಕೈಯ್ಯಲ್ಲಿ ವಾಲ್ಮೀಕಿಯ ಚಿನ್ನ ಕರಗಿ ವರ್ತಮಾನದ ಅಪರಂಜಿಯಾಗಿ ಮಿಂಚಿದ ಕಣ್ಣೋಟ. ಕ್ರೌಂಚಪಕ್ಷಿಗಳ ಒಡನಾಟವನ್ನು ಮುರಿಯದೆ ಬದುಕಿಸುವ ಕುವೆಂಪು ಪರಿಕಲ್ಪನೆಯೇ ಜೀವಪರ. ಇದು ರಾಮನ ಓಟವಾದರೂ ಅಪ್ಪಟ ಮಾನವನ ನಿಜನಾಯಕನ ರಾವಣನೊಳಗಿನ ಮನಃಪರಿವರ್ತನೆಯ ಪಾಠ. ಬದುಕು ತಿರುವುಗಳಲ್ಲಿ ನುಲಿದು ಸಿಡಿದ ವಾಲಿ ಸುಗ್ರೀವರ ಒಡನಾಟ. ರಾಮಾಯಣ ನೇಯ್ಗೆಯಲ್ಲಿ ಏಸೊಂದು ಜೀವಗಳು ಪರಿತಪಿಸುತ್ತವೆ. ನೋಯುತ್ತವೆ. ವಿರಾಟ್ ಮನದ ಆಶಯದ ದರ್ಶನಕ್ಕೆ ಎದುರಾಗುತ್ತವೆ”
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಹನ್ನೊಂದನೆಯ ಕಂತು.
ಮಾರೀಚನ ಮಾಯಾಜಿಂಕೆ
ಓಡು, ಓಡು, ಓಡು….. ನೋಡು,
ಬೆನ್ನ ನೋಡು, ಓಡು.
ಎಲ್ಲಿ ಎಲ್ಲಿ? ಹರಿಣಿ
ಅಲ್ಲೀ…. ಗಾಳಿ ತಳಿರು ತರುಣಿ….
ಈಟು ಗಾಳಿ ಗೊರಸೋ….
ದಾಟು ಮೈ ಚಾಚು ಮರಸೋ….
ಹಾಂ! … ಕಂಡೆ…ಅಪರಂಜಿ ಚಿನ್ನ,
ಮೊಟ್ಟೆಯಿಟ್ಟಿದೆ ಬಿಳಿ ಬಣ್ಣ,
ನಿಲ್ಲಲಾರದು ಹರಿಣ
ಸುಳಿವ ನಕ್ಷತ್ರ ಕಣ್ಣ
ಹೂಡು ಬಾಣ….
ನಿಲ್ಲಬಾರದು ಹರಣ
ಮಾಯ!!!
ಮಾಯಾ ಜಿಂಕೆ ಕಣ!
ಕಣ್ಮೀರಿತಲ್ಲ ಹರಿಣ…
ಹಿಗ್ಗಿ ಹಿಗ್ಗಿ ಕಣ್ಣೇ ಕಿವಿಯ ತಾಕಿ…
ಹಾ ರಾಮ… ಹಾ ಲಕ್ಷ್ಮಣ….
ಮಾತಾಡಿತೆ ಜಿಂಕೆ? ಮಾತಾಗಿದ್ದು ಮಾಯೆಯಾಟ….ಮಾರೀಚನ ತೊರೆದ ಮಾಯಾಜಿಂಕೆಯ ಪ್ರಾಣದಾಟ… ಅದರ ಹಿಂದೆಯೇ ಅರಿವೊಂದು ಹೊಳೆಯಿತು, ರಾಮಲಕ್ಷ್ಮಣರ ತಲೆಯೊಳಗೆ. ಓಡು, ಓಡು… ಇದು ಕಾಡ ಬೇಟೆ…ಅಲ್ಲಿ ಬಿಟ್ಟು ಬಂದಲ್ಲಿ!!
ಎಲ್ಲಿ ಹೋದಳೋ ಸೀತೆ? ಎಲ್ಲಿ ಅಡಗಿತೋ ಮಾಯೆ? ವೈದೇಹಿ ಏನಾದಳೋ? ಭಿಕ್ಷಾಂದೇಹಿ….. ಮಾಯಾವಿ ರಾವಣನ ಅಂಗೈ ಮೇಲೆ ಮಿಡಿಯುತ್ತಿಹುದು ಅರಗಿಣಿ. ಜಟಾಯುವನ್ನು ಹರಿದು, ರಾವಣನ ಪುಷ್ಪಕವಿಮಾನ ಹಾರುತ್ತ ಲಂಕೆ ಸೇರಿದೆ, ಕನಸುಗಳ ನೇದು ಜೇಡ ತನ್ನ ಬಲೆಯನ್ನು ತಾನೇ ನೇಯುವಂತೆ….
ದಶಾನನ ಆರ್ಭಟ! ಪೌರುಷ! ದಿನ ದಿನ ಬೆವರಿಳಿಸಿ ನೆಲಕ್ಕೆ ಹನಿಯೊಡೆಯುತ್ತಿದೆ, ಆಸೆಯೊಂದು ಅಂಗೈಲಿ ಬಂದು ಕುಂತಿರುವ ಚಂದಕ್ಕೆ. ಮೊಗ ತಿರುವಿ ದುಃಖಿಸುವ ಮನದನ್ನೆ ಅರಿಯಳೇ ನನ್ನೊಲವ, ಮುರಿಯದಿರುವಳೇ ಹಠವ, ಸೊರಗದಿರು ನನ್ನ ನವಿಲೇ…. ನಿನಗಾಗಿ… ನಿನ್ನ ಚೆಲುವಿಗಾಗಿ… ಒಲವಿಗಾಗಿ…. ನನ್ನ ಬಲವಿದೆ. ಕೊರಗದಿರು ಸೊಬಗೇ… ನನ್ನ ಬಯಕೆಯ ನಾ ಒಲಿದೇ ತೀರುವೆನು ನನ್ನೊಲವೇ…. ಪರಿತಪಿಸುತ್ತದೆ ಹೀಗೆ…. ಶುರುವಿನಲ್ಲಿ ಆಸೆಗಳ ಹೊತ್ತು ಆಗಸದಲ್ಲಿ ಹಾರಿದ ರಾವಣನ ಚಿತ್ತ, ಬೃಹತ್ ಭಿತ್ತಿಯ ಆ ಚಿತ್ತ ದಶಾನನ ಕಾರ್ಯಸಿದ್ಧಿಯ ಕೊನೆಯ ಅಧ್ಯಾಯದಲಿ ತನ್ನ ಲಂಕಾಲಕ್ಷ್ಮಿಯ ಒಪ್ಪಿಗೆಯಿಟ್ಟ ಕನಸಲ್ಲಿ ಇಳಿದಿಳಿದು ಸಣ್ಣ ಮಗುವಾಗಿ ಕೈಕಾಲು ಬಡಿಯುತ್ತ ತಾಯಿ ಸೀತೆಯ ಮೊಲೆ ಕುಡಿವ ಮಗುವಾಗಿ, ಆಡುತ್ತಾಡುತ್ತ ತಪ್ಪಿಸಿಕೊಂಡ ಮಗುವಾಗಿ ಕನವರಿಸಿ ಕಿರಿಚುತ್ತ ಎದ್ದು ‘ಮಂಡೋದರಿ ಮಂಡೋದರಿ’. ಅಪ್ಪುತ್ತದೆ, ತನ್ನ ಹೆಣ್ಣ ನೇವರಿಕೆಯಲ್ಲಿ ಮಗುವಾಗುತ್ತದೆ.
ಬೆಚ್ಚೆದ್ದ ರಾವಣ ಲಂಕೆಯ ಅವನತಿಯಲ್ಲೂ ತಾನೇ ಹತನಾಗುವ ಹಂತದಲ್ಲೂ ಸೀತೆಯನ್ನನುಭವಿಸುವ ಮೋಹವನ್ನು ಕಳೆದುಕೊಂಡಂದದಲ್ಲೂ ಅವಳನ್ನು ಕನವರಿಸುವ ಮಾಯಕದ ಮೋಹದ ಮಾಂತ್ರಿಕತೆಯನ್ನು ಬಿಡದೆ ಕಟ್ಟಕಡೆಯ ಗಳಿಗೆಯಲ್ಲೂ ಕನಸೊಂದನ್ನು ಕಾಣುತ್ತಾನೆ.
‘ರಾಮನನ್ನು ಯುದ್ಧದಲ್ಲಿ ಗೆದ್ದು ತಂದು, ತನ್ನ ಪ್ರೀತಿಗೆ, ತನ್ನ ಮೋಹಕೆ, ತನ್ನ ಮಾಯಕದ ಜಗದ ಮೋಹಿನಿಗೆ ಕಾಣಿಕೆಯನ್ನೀವೆ’ ಎಂದು ಒಳಗೊಳಗೆ ಕನವರಿಸುವ ರಾವಣನ ಮಾತುಗಳು ಮೋಹಕವಾಗಿವೆ. ಇವು ಪ್ರತಿ ಮನದೊಳಗಣದ ಆಸೆಯ ಮೋಹಕದ ಜಗತ್ತಿನ ಮಾತುಗಳಾಗಿವೆ. ಇಡೀ ಜಗತ್ತೇ ಅದರ ಹಿಂದೆ ಓಡುತ್ತಿದೆ. ನಲುಗುತ್ತಿದೆ. ದುರಂತ ಮಹಾಕಾವ್ಯವಾಗುತ್ತಿದೆ.
ಸೀತೆ ಉತ್ತರ ಹಾಗೂ ದಕ್ಷಿಣ ಸಾಮ್ರಾಜ್ಯಗಳ ಎರಡು ತೀರಗಳ ಘರ್ಷಣೆಯಲ್ಲಿ ನೊಂದು ಹರಿವ ನದಿಯಾಗಿ, ಮಂಡೋದರಿ ತ್ರಿಜಟೆಯರಲ್ಲದೆ ಸ್ತ್ರೀ ಸಮುದಾಯದ ಮನದಾಳದ ಪ್ರತಿರೂಪಿಯಾಗಿ, ಜಗತ್ತಿನ ಕಟ್ಟುಪಾಡಿನ ಕಟ್ಟಳೆಯಾಗಿ ಬೆಂಕಿಗೆ ಹಾಯುತ್ತಾಳೆ. ಕುವೆಂಪು ತಟ್ಟನೆ ಎಚ್ಚೆತ್ತು…. ಪುರುಷ ಪ್ರಜ್ಞೆಯ ರಾಮನನ್ನೂ ಅಗ್ನಿಯಲ್ಲಿ ಹಾಯಿಸಿ ಕಾಯಿಸಿ ಬಡಿಯುತ್ತಾರೆ. ಗೂನು ಬೆನ್ನಿನ ಅಸಡ್ಡಾಳ ರೂಪಿನ ಮಂಥರೆಯನ್ನು ಸುಂದರ ರೂಪಿನ ಪುತ್ಥಳಿಯನ್ನಾಗಿಸಿ, ಅಗ್ನಿಯ ಅಚ್ಚಿನಿಂದ ತಂದು ರಾಮಾಯಣದ ಸಾವಯವ ಕೃಷಿಗೆ ಸುರಿಯುತ್ತಾರೆ.
ಇದು ಕುವೆಂಪು ಎಂಬ ಅಕ್ಕಸಾಲಿಗನ ಕೈಯ್ಯಲ್ಲಿ ವಾಲ್ಮೀಕಿಯ ಚಿನ್ನ ಕರಗಿ ವರ್ತಮಾನದ ಅಪರಂಜಿಯಾಗಿ ಮಿಂಚಿದ ಕಣ್ಣೋಟ. ಕ್ರೌಂಚಪಕ್ಷಿಗಳ ಒಡನಾಟವನ್ನು ಮುರಿಯದೆ ಬದುಕಿಸುವ ಕುವೆಂಪು ಪರಿಕಲ್ಪನೆಯೇ ಜೀವಪರ. ಇದು ರಾಮನ ಓಟವಾದರೂ ಅಪ್ಪಟ ಮಾನವನ ನಿಜನಾಯಕನ ರಾವಣನೊಳಗಿನ ಮನಃಪರಿವರ್ತನೆಯ ಪಾಠ. ಬದುಕು ತಿರುವುಗಳಲ್ಲಿ ನುಲಿದು ಸಿಡಿದ ವಾಲಿ ಸುಗ್ರೀವರ ಒಡನಾಟ. ರಾಮಾಯಣ ನೇಯ್ಗೆಯಲ್ಲಿ ಏಸೊಂದು ಜೀವಗಳು ಪರಿತಪಿಸುತ್ತವೆ. ನೋಯುತ್ತವೆ. ವಿರಾಟ್ ಮನದ ಆಶಯದ ದರ್ಶನಕ್ಕೆ ಎದುರಾಗುತ್ತವೆ.
ರಾಮನನ್ನು ಯುದ್ಧದಲ್ಲಿ ಗೆದ್ದು ತಂದು, ತನ್ನ ಪ್ರೀತಿಗೆ, ತನ್ನ ಮೋಹಕೆ, ತನ್ನ ಮಾಯಕದ ಜಗದ ಮೋಹಿನಿಗೆ ಕಾಣಿಕೆಯನ್ನೀವೆ’ ಎಂದು ಒಳಗೊಳಗೆ ಕನವರಿಸುವ ರಾವಣನ ಮಾತುಗಳು ಮೋಹಕವಾಗಿವೆ. ಇವು ಪ್ರತಿ ಮನದೊಳಗಣದ ಆಸೆಯ ಮೋಹಕದ ಜಗತ್ತಿನ ಮಾತುಗಳಾಗಿವೆ. ಇಡೀ ಜಗತ್ತೇ ಅದರ ಹಿಂದೆ ಓಡುತ್ತಿದೆ. ನಲುಗುತ್ತಿದೆ.
ದೇವರಾಕ್ಷಸವಾನರನ್ನೂ ಮೀರಿದ ಕುಲಪ್ರೀತಿಯ ಜೀವಗಳು, ತಂದೆಮಕ್ಕಳು, ಅಣ್ತಮ್ಮರು, ಎಲ್ಲರಿಗೂ ನೋವು ತಪ್ಪಿದ್ದಲ್ಲ. ಆದರೆ ಎಲ್ಲವನ್ನೂ ಮೀರಿದ ಒಂದು ಸಾಮಾಜಿಕ ನ್ಯಾಯ ಇಲ್ಲಿದೆ. ಈ ಶತಮಾನದ ಕವಿ ಕಾಲವೆಂಬ ಅಳತೆಗೋಲನ್ನೇ ಹಿಡಿದು ಹುಟ್ಟು ಹಾಕಿ ಸೀತೆಯೆಂಬ ಪ್ರತಿರೂಪದ ಹೊಳೆಯನ್ನು ದಾಟಿಸಿ ‘ಶ್ರೀ ರಾಮಾಯಣ ದರ್ಶನಂ’ ಈಜಿಸಿ, ನಮ್ಮನ್ನು ತಂದು ದಡಕ್ಕಿಳಿಸುತ್ತಾರೆ. ಇದು ಮಹಾಕವಿಯ ಶಕ್ತಿ.
ಮಹಾಕವಿಯ ಮಹಾಕಾವ್ಯ ‘ಶ್ರೀ ರಾಮಾಯಣ ದರ್ಶನಂ’
ಈ ಪರಿಯ ಸೊಬಗಾವ ದೇವರಲ್ಲಿ ನಾ ಕಾಣೆ…. ಎಂದು ೫೦ವರುಷದ ಹಿಂದಿನ ಕುವೆಂಪು ವಿರಚಿತ ಕೃತಿಯ ನಾಟಕವೊಂದು ಇಂದಿಗೂ ಸಾಮಾಜಿಕ ನ್ಯಾಯವನ್ನು ಹಾಗೂ ಜೀವಪರ ಕಾಳಜಿಯನ್ನು ಸಲಹುತ್ತ ರಾಜ್ಯಾದ್ಯಂತ ಸಂಚಾರಕ್ಕೆ ಸಜ್ಜಾಗಿದೆ.
ಒಮ್ಮೆ ಗಣೇಶ್ ಉಡುಪಿ ಎಂಬ ರಂಗಕರ್ಮಿಯ ಓದೊಂದು ನಡೆದಿತ್ತು. ಅದು ಎಷ್ಟು ಆಕರ್ಷಕವಾಗಿತ್ತೆಂದರೆ ಅದುವರೆಗೂ ಮುಟ್ಟಲೂ ಹೆದರುತ್ತಿದ್ದ ಆ ಭಾಷೆ ಹಾಗೂ ಮೇರುನುಡಿಗಳು ಅಂದು ಜೀವಹಿತವಾಗಿ ಆ ಯುವಕನ ಬಾಯಲ್ಲಿ ಸಣ್ಣ ಆಂಗಿಕ ಹಾಗೂ ಧ್ವನಿಗಳ ಏರಿಳಿತಗಳಲ್ಲಿ ಕೇಳುಗರ ಒಳಹೊಕ್ಕಿದ್ದವು. ಇಂಥ ಹಿತನುಡಿಕಟ್ಟುಗಳನ್ನು ಕುಳಿತು ಕೇಳಿದ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಅವರ ತಲೆಯನ್ನೂ ಗುಂಗಿಹುಳುವಾಗಿ ಕೊರೆದು…. ಇದರ ದೃಷ್ಯ ರೂಪಕವೊಂದು ಜನಸಾಮಾನ್ಯರೆಡೆಗೆ ತಲುಪಿದರೆ ಹೇಗೆ? ಎಂಬ ಪರಿಕಲ್ಪನೆ ಅವರೊಳಗೆ ಹುಟ್ಟಿತು.
ಈ ಕೃತಿಗೆ ಜ್ಞಾನಪೀಠ ಬಂದು ೫೦ ವರುಷಗಳು ಸಂದ ಈ ಕಾಲದಲ್ಲಿ ಕಾಲವೇ ನಿಂತು ತನ್ನ ಮಾರು ರೂಪವನ್ನು ಕೇಳಿ ಪಡೆದಂತೆ… ನಿರ್ದೇಶಕರ ಆಶಯದಂತೆ…. ಅವರ ಪರಿಕಲ್ಪನೆಯಲ್ಲಿ ಪರಿಪೂರ್ಣ ಕಲಾಪ್ರಕಾರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಈ ಕಲಾಲೋಕ…. ಜನರ ಮುಂದೆ ಓಡುವ ಮಾಯಾ ಜಿಂಕೆಯಾಗಿ ರಂಗರೂಪವಾಗಿ ಮೈ ತಳೆದು ನಿಂತಿತು. ಈ ಪರಿಕಲ್ಪನೆಗೆ ತಮ್ಮನ್ನು ತಾವು ಕಳೆದುಕೊಳ್ಳುವಂತೆ ತೊಡಗಿಸಿಕೊಂಡವರು ಮೈಸೂರು ರಂಗಾಯಣದ ಇಡೀ ಆಡಳಿತಗಾರರು ಹಾಗೂ ಕಲಾವಿದರುಗಳು.
ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿಯವರ ಉತ್ಸಾಹದಲ್ಲಿ, ರಂಗಾಯಣ ನಿರ್ದೇಶಕರಾದ ಭಾಗೀರತಿಬಾಯಿ ಕದಂರವರ ನಿರ್ವಹಣೆಯಲ್ಲಿ, ರಂಗಾಯಣದ ಹಿರಿಯ ಕಲಾವಿದರ ನೇತೃತ್ವದಲ್ಲಿ, ನುರಿತ ಕಿರಿಯ ಕಲಾವಿದರ ಅಭಿನಯ ಹಾಗೂ ಕುವೆಂಪು ಭಾಷೆಯ ದೃಷ್ಯಗಳ ಸರಾಗ ವೇಗವನ್ನೊಮ್ಮೆ ಎಲ್ಲರೂ ನೋಡಲೇಬೇಕು.
ಈ ಭಾಷೆ, ದೃಷ್ಯ ಸಾಂದ್ರತೆ, ನಾಟಕ ನಡೆಯುವ ಐದು ಗಂಟೆಗಳ ಉದ್ದದ ಕಾಲ, ಅದಕ್ಕೆ ಮುಗಿಬಿದ್ದು ನಿಲ್ಲುವ ಉದ್ದದ ಕ್ಯೂ ಜನಸಾಮಾನ್ಯ ವೀಕ್ಷಕರ ತಾಳ್ಮೆಯನ್ನು ಕೇಳುತ್ತದೆ. ಮರೆಯುವಂತಿಲ್ಲ. ಇದು ಅತ್ಯಂತ ಗಂಭೀರ ಕೃತಿಯೊಂದರ ಗಂಭೀರ ರಂಗಪ್ರದರ್ಶನ. ಅಂತೆಯೇ ಅದರ ಚೆಲುವನ್ನು ಮೈಗೂಡಿಸಿಕೊಳ್ಳಲು ಪ್ರಮೋದ್ ಶಿಗ್ಗಾಂವ್ ರ ವಸ್ತ್ರವಿನ್ಯಾಸ, ರವಿ ಮುರೂರರ ಅತ್ಯಂತ ಶುಶ್ರಾವ್ಯ ಸಂಗೀತ ಹಿನ್ನೆಲೆಯಲ್ಲಿ, ಯಕ್ಷಗಾನದ ಚೆಲುವಿಕೆಯನ್ನು ಹೊತ್ತ ಅಭಿನಯದಲ್ಲಿ ಕುವೆಂಪುರವರ ಗಾಂಭೀರ್ಯವೇ ಮೈವೆತ್ತಂತೆ ಎಲ್ಲಿಯೂ ಎಡವದೆ ಕೃತಿ ತನ್ನ ಮೈ ತೆರೆಯುತ್ತದೆ. ಆದರೇ…. ಇಂದಿನ ವೇಗದ ಹಾಗೂ ಸುಲಭಸಾಧ್ಯತೆಗಳ ಕಾಲದಲ್ಲಿ ಇದು ರಂಗಾಸಕ್ತರ ಕಣ್ಣು ಹಾಗೂ ಮೆದುಳನ್ನು ಜಾಗೃತಗೊಳಿಸಲೇಬೇಕಾದ ಒಂದು ಸಿದ್ಧತೆಯನ್ನೂ ಬೇಡುತ್ತದೆ.
ಮಾಯಾವಿ ಮಾರೀಚನ ಮಾಯಾಜಿಂಕೆಯದು. ರಸಋಷಿಯ ತಪಸ್ಸಿನ ಒಳಗಣ್ಣಿಗೆ ಅದರ ಓಟದ ಸಾರ್ಥಕತೆ ದಕ್ಕಿದಂತೆ ನೋಡುವವರಿಗೆ ಸಿಕ್ಕಬೇಕೆಂದರೆ ಒಳಗೊಂದು ಹುಡುಕಾಟವಿರಬೇಕು. ಹಳೆಯ ಗಾದೆ ಮಾತನ್ನು ನಾವು ಮರೆಯದಿರೋಣ. ‘ರಾತ್ರೆಲ್ಲ ರಾಮಾಯಣ ಕೇಳಿ ಬೆಳಿಗ್ಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದಂಗೆ….’ ನೋಡುತ್ತ ಕುಳಿತವರ ಮನಸ್ಸಿಗೆ ಸಿಕ್ಕಿದಷ್ಟು… ನಮ್ಮೊಳಗೆ ದಾಖಲಾಗಿದ್ದಷ್ಟೇ…. ರಾಮಾಯಣ.
ಕುವೆಂಪು ಏನೋ ಹಲವಾರು ಕಡೆ ಜನ ಸಾಮಾನ್ಯನಿಗೆ ಬೇಕಾದ ದರ್ಶನಗಳನ್ನು ಸೃಷ್ಟಿಸಿ, ತಮ್ಮ ವ್ಯಕ್ತಿತ್ವದ ಮಹದಾಶಯ ‘ಪಾಪಿಗೂ ಉದ್ಧಾರಮಿಹುದು’ ಅನ್ನುತ್ತಾರೆ. ನಿಜ, ಎಲ್ಲರನ್ನೂ ಒಳಗೊಂಡ ಇದೊಂದು ಜಗತ್ತಿನ ಸಂಪೂರ್ಣ ಸ್ವರೂಪದ ರಂಗದರ್ಶನವೇ ಸೈ.
ಪರದೆಯ ಹಿಂದಿನ ರಂಗತಯ್ಯಾರಿ
ನಿರ್ದೇಶಕರ ಕೋರಿಕೆಯಂತೆ ಮೊದಲನೇ ಸುತ್ತಿನ ಮೀಟಿಂಗ್ ಮುಗಿಯಿತು. ಹಿರಿಯ ಸಾಹಿತಿಗಳು, ಕಲಾವಿದರು, ಪರಿಣಿತರ ಅಭಿಪ್ರಾಯಗಳು ತೇಲಿ ಬಂದವು. ಎರಡನೇ ಬಾರಿ ರಂಗರೂಪದ ಚರ್ಚೆ ನಡೆದು ತೀರ್ಮಾನವೊಂದು ಎಲ್ಲರೊಳಗೆ ರೂಪುಗೊಂಡು ಓದು ಶುರುವಾಯಿತು.
ಆದರೆ ಜಗದೀಶ್ ಮನೆವಾರ್ತೆ ಕೃಷ್ಣಕುಮಾರ್ ನಾರ್ಣಕಜೆಯವರ ಕುವೆಂಪು ಕನ್ನಡದ ಓದು ಇಡೀ ರಂಗಾಯಣದ ಮನಸ್ಸನ್ನು ಕುವೆಂಪುರವರ ದಟ್ಟ ಪ್ರಭಾವದ ಆಳಕ್ಕಿಳಿಸಿತು. ಇವರಿಬ್ಬರ ರಂಗರೂಪ ಬರಹದ ತಯ್ಯಾರಿ ಶುರುವಾಯಿತು. ಮೈಸೂರು ರಂಗಾಯಣ ಇಡೀ ನಾಟಕದ ಹೊಣೆಗಾರಿಕೆ ಹೊತ್ತು ದೊಡ್ಡ ಕನಸಿನ ಬೆನ್ನ ಹಿಂದೆ ಓಡುತ್ತ ಹಳೆಗನ್ನಡದ ಪರಿಣಿತರಾದ ಮಹಾಬಲೇಶ್ವರರನ್ನು ಹೆಗ್ಗೋಡಿನಿಂದ ಕರೆತಂದು ನಿರ್ದೆಶನದ ಹೊಣೆಗಾರಿಕೆಯನ್ನ ವಹಿಸಿತು. ಸಹ ನಿರ್ದೇಶನಕ್ಕೆ ಉಮೇಶ್ ಸಾಲಿಯಾನ ಕೈ ಜೋಡಿಸಿದರು.
ರವಿ ಮುರೂರು ಎಂಬ ಯಕ್ಷಗಾನ, ಸುಗಮ ಹಾಗೂ ಶಾಸ್ತ್ರೀಯ ಸಂಗೀತ ತಿಳಿದ ಯುವ ಸಂಗೀತ ನಿರ್ದೇಶಕನನ್ನು ಮೂರು ತಿಂಗಳ ಕಾಲ ತಮ್ಮಲ್ಲೇ ಹಿಡಿದು ನಿಲ್ಲಿಸಿತು. ವಾದ್ಯ ಹಾಗೂ ಸಂಗೀತ ನಿರ್ವಹಣೆಯನ್ನು ಹಿರಿಯರಾದ ಶ್ರೀನಿವಾಸ್ ಭಟ್ ಹೊತ್ತರು. ರಂಗ ವಿನ್ಯಾಸವನ್ನು ಪ್ರತಿಭಾವಂತ ಹೆಚ್. ಕೆ. ದ್ವಾರಕಾನಾಥ್ ವಹಿಸಿಕೊಂಡರು.
ನಿರ್ದೇಶನ ಹಾಗೂ ವಸ್ತ್ರವಿನ್ಯಾಸ ಪರಿಣಿತರಾದ ಪ್ರಮೋದ್ ಶಿಗ್ಗಾಂವ್ ಒಳಮನೆಯಲ್ಲಿ ಉಡುಪು ವಿನ್ಯಾಸಕ್ಕೆ ಹಾಗೂ ಪರಿಕರದ ತಯ್ಯಾರಿಗೆ ನಿಂತರು. ಪ್ರಚಾರ ವಿನ್ಯಾಸಕ್ಕೆ ಕೆ.ಜೆ. ಸಚ್ಚಿದಾನಂದ ಹಾಗೂ ಬೆಳಕಿನ ವಿನ್ಯಾಸವನ್ನು ಮಹೇಶ್ ಕಲ್ಲತ್ತಿ ನಿರ್ವಹಿಸಿದರು. ರಂಗ ನಿರ್ವಹಣೆ ಕೃಷ್ಣಕುಮಾರ್ ನಾರ್ಣಕಜೆ ಮಾಡಿದರೆ ರಂಗ ಚಲನೆಗೆ ಗಣೇಶ್ ಎಂ. ಅಂಜುಸಿಂಗ್ ಕೆ. ನಯನಾ ರೈ, ಸ್ವಸ್ತಿಕ್ ಶೆಟ್ಟಿ ಕೈ ಜೋಡಿಸಿ ಚಂದ ಮಾಡಿದರು. ಇಡೀ ಪ್ರಚಾರ ಹಾಗೂ ಮಾಧ್ಯಮದ ಹೊಣೆಯನ್ನು ಪ್ರಶಾಂತ್ ಹಿರೇಮಠ್, ಗೀತಾ ಕೈಗೆತ್ತಿಕೊಂಡರೆ ಪ್ರಸಾಧನವನ್ನು ನಂದಿನಿ, ಮಹಾದೇವ್ ರವರು ಪ್ರಸಾಧನಕ್ಕೆ ಗಮನ ಕೊಟ್ಟರು. ಕಛೇರಿಯ ರಾಜೇಶ್, ದೊಡ್ದನಿಂಗಪ್ಪರವರ ಜೊತೆ ಇಡೀ ಸಿಬ್ಬಂದಿ ಟೊಂಕ ಕಟ್ಟಿ ನಿಂತಿತು. ಕೃಷ್ಣಪ್ರಸಾದ್ ಧ್ವನಿಗೆ ಹಿನ್ನೆಲೆಯಾದರು.
ಈ ಭಾಷೆ, ದೃಷ್ಯ ಸಾಂದ್ರತೆ, ನಾಟಕ ನಡೆಯುವ ಐದು ಗಂಟೆಗಳ ಉದ್ದದ ಕಾಲ, ಅದಕ್ಕೆ ಮುಗಿಬಿದ್ದು ನಿಲ್ಲುವ ಉದ್ದದ ಕ್ಯೂ ಜನಸಾಮಾನ್ಯ ವೀಕ್ಷಕರ ತಾಳ್ಮೆಯನ್ನು ಕೇಳುತ್ತದೆ. ಮರೆಯುವಂತಿಲ್ಲ. ಇದು ಅತ್ಯಂತ ಗಂಭೀರ ಕೃತಿಯೊಂದರ ಗಂಭೀರ ರಂಗಪ್ರದರ್ಶನ.
ರಂಗ ಸಜ್ಜಿಕೆಯಲ್ಲಿ ಪ್ರಮೀಳಾ ಬೇಂಗ್ರೆ ಹಾಗೂ ಸರೋಜಾ ಹೆಗ್ಗಡೆಯ ನಾಯಕತ್ವವಾದರೆ, ವಸ್ತ್ರಾಲಂಕಾರಕ್ಕೆ ವಿನಾಯಕ ಭಟ್ ಹಾಸಣಗಿ ಹಾಗೂ ಹುಲಿಗಪ್ಪ ಕಟ್ಟೀಮನಿಯವರ ನೇತೃತ್ವ. ಪರಿಕರದ ಜೋಡಣೆಗೆ ಬಿ. ಎನ್. ಶಶಿಕಲಾ, ಚಂದ್ರಶೇಕರ್ ಹಾಗೂ ರಾಮು ನಿಂತರು. ಇಷ್ಟೆಲ್ಲ ಕಲಾವಿದರೊಂದಿಗೆ ಎಲ್ಲಾ ಕಿರಿಯ ಕಲಾವಿದರು ಶ್ರಮಿಸಿ ಜನರ ಕಣ್ಣಿಗೆ ನಾಟಕದ ರೂಪು ಬಂದು ನಿಂತಿತು. ರಂಗಾಯಣದ ಗೋಡೆಗಳು ರಾಮನ ಪಾತ್ರಧಾರಿಗೆ ಬಟ್ಟೆ ಅಳತೆ ತೆಗೆಯುವ ಚಿತ್ರವನ್ನು ಚಿತ್ರಿಸಿತು. ಪ್ರಚಾರ ಸ್ಮರಣಿಕೆ ಸುಂದರ ಕಲಾಕೃತಿಯಾಗಿ ಇಳಿದವು. ರಂಗಾಯಣದಂಥ ಚಿತ್ತಧ್ಯಾನದ ಚಿತ್ರವೇದಿಕೆಯಲ್ಲಿ ಮಾತ್ರ ಇದು ಸಾಧ್ಯ.
ಮೈಸೂರಿನಲ್ಲಿ ಬಿ. ವಿ. ಕಾರಂತರ ಕನಸೊಂದು ಸಾಕಾರಗೊಂಡ ಭೂಮಿಕೆಯಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರಿದ್ದಾರೆ. ಮೈಸೂರು ರಂಗಾಯಣದ ಹಿರಿಯ ಕಲಾವಿದರು ನಿವೃತ್ತಿಯ ಹಂತಕ್ಕೆ ಬಂದು ನಿಂತಿದ್ದಾರೆ. ಇದರೊಡನೆಯೇ ಅವರೊಳಗೆ ಒಂದು ಕಾಣದ ಕೊರಗಿದೆ. ‘ನಾವು ಕಲಿತ ಈ ಕಲಾಭಾರವನ್ನು ಧಾರೆಯಿಳಿಸಿಕೊಂಡು ಮುನ್ನಡೆಸುವವರಾರು?’
ಇದು ಪಠ್ಯದ ಕಲಿಕೆಯಲ್ಲ. ಚಲನಾತ್ಮಕ, ಕ್ರಿಯಾತ್ಮಕ ಕಲಿಕೆ. ಒಂದೆಡೆ ನೆಲೆನಿಂತು ಕಲಿಯಲು ಮುಂದಿನ ಪೀಳಿಗೆಗೆ ಸಾಧ್ಯವೇ? ಹೇಳಿ… ಅನ್ನುವ ಅವರ ಒಳಾಂತರ್ಯದ ಮಾತುಗಳು ನಮ್ಮ ಮಾತುಗಳನ್ನು ನಿಲ್ಲಿಸುತ್ತವೆ. ಈಗಿನ ಸಧ್ಯದ ಆಡಳಿತದಲ್ಲಿ ಮಲ್ಲಿಕಾರ್ಜುನಸ್ವಾಮಿಯವರ ಒತ್ತಾಸೆಯಿದೆ. ನಟನೆಯ ಜೊತೆಗೆ ಸಾಗಿ ರಂಗಾಯಣದ ಮುನ್ನೆಡೆಯಲ್ಲಿ ಭಾಗೀರಥಿಬಾಯಿ ಕದ್ಂರವರ ಆಸಕ್ತಿ ಹಾಗೂ ನಗು ಮೊಗವಿದೆ.
ಹಿರಿಯನಟರ ಜೊತೆಯಲ್ಲಿ ಕಿರಿಯರ ನಟನೆ ಮಿಳಿತವಾಗಿ ಅನುಭವ ಹಾಗೂ ಉತ್ಸಾಹಗಳ ಮಾಯಾಜಿಂಕೆ ರಾಜ್ಯಾದ್ಯಂತ ಸಂಚಾರ ಹೊರಟಿದೆ. ಡಿಸೆಂಬರ್ ೫ ರಿಂದ ಜನವರಿ ೯ ರವರೆಗೆ. ಇದುವರೆಗೂ ಬೆಂಗಳೂರಿನಲ್ಲಿ ಹಾಗೂ ಮೈಸೂರಿನಲ್ಲಿ ಏಳೆಂಟು ಪ್ರದರ್ಶನ ಕಂಡಿದೆ. ‘ದರ್ಶನ ಭಾಗ್ಯದಿಂದ ನನ್ನ ಜನ್ಮ ಸಾರ್ಥಕವಾಯಿತು ಅದೇನು ಸಂಗೀತದ ಫಲುಕುಗಳು, ಆ ವಿಶೇಷ ಕನ್ನಡದ ಸುಲಲಿತ ಉಚ್ಛಾರಣೆ ‘ ಎಂಬುದು ಪ್ರವಚನ ದಾಸರಾದ ಲಕ್ಶ್ಮಣದಾಸರ ಉದ್ಘಾರ.
‘ನಾನು ಇಂಥದ್ದೊಂದು ಪ್ರದರ್ಶನ ಕಂಡೆನಲ್ಲ ನನ್ನ ಕೊನೆಗಾಲದಲ್ಲಿ’ ಅಂತ ನಮ್ಮ ನಿಷ್ಠುರ ವಿಮರ್ಶಕಾರರಾದ ಜಿ. ಹೆಚ್. ನಾಯಕರು ಕಣ್ಣೀರಿಟ್ಟರಂತೆ. ಅಂತೆಯೇ ಕುವೆಂಪು ಹಾಗೂ ಕನ್ನಡ ಸಾಹಿತ್ಯವನ್ನು ಓದಿಕೊಂಡ ನೋಡುಗರೊಬ್ಬರು ಹೇಳಿದ್ದು. ‘ಒಮ್ಮೆ ಇಂಥ ಕನಸೊಂದನ್ನು ಕಣ್ತುಂಬಿಕೊಂದು ಬಂದಿದ್ದೇನೆ. ಮತ್ತೊಮ್ಮೆ ನೀವು ಕರೆದರೂ ಬರಲಾರೆ. ಆ ಚಿತ್ರಗಳು ನನ್ನಲ್ಲಿ ಹಾಗೇ ಉಳಿದು ಹೋಗಲಿ. ಸತತ ಐದು ಗಂಟೆಯೂ ಒಂದು ನಿಮಿಷವೂ ಒಬ್ಬರೂ ಅಲುಗದಂತೆ ನಾಟಕ ನೋಡಿದರು. ನನ್ನ ಕಾಲುನೋವು ನನಗೆ ಮರೆತೇ ಹೋಗಿತ್ತು’ ಎಂದರು.
ಇದು ಯಾರ ಕನಸು? ಕುವೆಂಪುರವರದೋ? ಆಗು ಮಾಡಿದವರದೋ? ಅಥವಾ ನೋಡುಗರದೋ?
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.