ಇಂದು ಲಂಕೇಶ್ ಹುಟ್ಟುಹಬ್ಬ. ಈ ಹೊತ್ತಲ್ಲಿ ಬಸವರಾಜು ಬರೆದಿರುವ ಅಪರೂಪದ ಈ ಲೇಖನ.
ಲಂಕೇಶರ ಬಗ್ಗೆ ಲಂಕೇಶರಷ್ಟೇ ಕರಾರುವಾಕ್ಕಾಗಿ ಬರೆಯಬಲ್ಲರು. ಇಪ್ಪತ್ತು ವರ್ಷಗಳ ಕಾಲ ‘ಲಂಕೇಶ್ ಪತ್ರಿಕೆ’ ಆ ಕೆಲಸವನ್ನು ಅವರಿಂದ ಮಾಡಿಸಿದೆ. ಆತ್ಮಕಥನ ‘ಹುಳಿಮಾವಿನಮರ’ ಇನ್ನಷ್ಟು ಬಿಚ್ಚಿಟ್ಟಿದೆ. ಆದರೂ, ‘ಲಂಕೇಶ್ ಅಂದ್ರೆ ಇಷ್ಟೇನಾ, ಸಾಲದು, ಇನ್ನೂ ಬೇಕು’ ಎನ್ನುವ ಬೇಡಿಕೆಗೇನೂ ಬರವಿಲ್ಲ. ಲಂಕೇಶರ ವ್ಯಕ್ತಿತ್ವವೇ ಅಂಥಾದ್ದು; ಯಾರ ಕೈಗೂ ಸಿಗದ್ದು. ಆ ಸಿಗದ್ದು ಎಂಬ ಕಾರಣಕ್ಕೇ ಕುತೂಹಲ, ಇನ್ನೂ ಬೇಕೆಂಬ ಬಯಕೆ.
ಕಳೆದ ವರ್ಷ ತೇಜಸ್ವಿಯವರ ಮೇಲಿನ ವಿಚಾರ ಸಂಕಿರಣದಲ್ಲಿ ಎನ್.ಎಸ್.ಶಂಕರ್, ಲಂಕೇಶರ ‘ಹುಳಿಮಾವಿನ ಮರ’ ಪುಸ್ತಕ ಬಂದಾಗ ಓದಿ ಫೆಂಟಾಸ್ಟಿಕ್ ಅಂದಿದ್ದೆ. ಆದರೆ ಈಗ ಅದನ್ನು ಓದಿದರೆ, ನನಗೆ ಅದು ‘ನವ್ಯ ಆತ್ಮಕಥನ’ದಂತೆ ಕಾಣುತ್ತಿದೆ. ಅಲ್ಲಿರುವುದು ಪೂರ್ಣ ಸತ್ಯ ಅಲ್ಲ ಅನ್ನಿಸುತ್ತಿದೆ…’ ಎಂದರು.
ಲಂಕೇಶರ ಬಗ್ಗೆ ಲಂಕೇಶರು ಬರೆದದ್ದು ಸಾಲದು ಮತ್ತು ಅಷ್ಟು ಸರಿಯಿಲ್ಲ ಎಂಬ ಎರಡು ಬಗೆಯ ಅಭಿಪ್ರಾಯವೂ ಇದೆ. ಅಂದಮೇಲೆ ಅವರ ಜೊತೆ ಇದ್ದ ನನ್ನಂತಹವರು ಕಟ್ಟಿಕೊಡುವ ಚಿತ್ರಣ ಎಷ್ಟರಮಟ್ಟಿಗೆ ಸರಿ ಮತ್ತು ಸತ್ಯ ಎಂಬ ಪ್ರಶ್ನೆ ಬರೆಯಬೇಕೆಂದು ಕೂತಾಗಲೆಲ್ಲ ಕಾಡುತ್ತದೆ. ಹಾಗಾಗಿ ನನ್ನ ತಿಳುವಳಿಕೆಗೆ, ಗ್ರಹಿಕೆಗೆ ದಕ್ಕಿದಷ್ಟನ್ನು ಕೆಲವು ಘಟನೆಗಳ ಮೂಲಕ ಲಂಕೇಶರನ್ನು ಲಂಕೇಶರನ್ನಾಗಿಯೇ ಕಂಡಿರಿಸಲು ಪ್ರಯತ್ನಿಸುತ್ತೇನೆ. ಇಲ್ಲೂ ಸಿಗಲಿಲ್ಲ, ಸಾಲಲಿಲ್ಲ ಅಂದರೆ… ಆ ಲಂಕೇಶರನ್ನೇ ಕೇಳಿ.
ಲಂಕೇಶರಿಗೆ ಡಯಾಬಿಟೀಸ್ ಇತ್ತು. ಬರಹ ಬಲ್ಲವರಾದ್ದರಿಂದ, ಪತ್ರಿಕೆಯಿದ್ದುದರಿಂದ ಆಗಾಗ ಡಯಾಬಿಟೀಸ್ ಬಗ್ಗೆ ಬರೆಯುತ್ತಿದ್ದರು. ಅದು ಒಂದು ರೀತಿಯಲ್ಲಿ ಓದುಗರ ಅನುಕಂಪಕ್ಕೆ ಕಾರಣವಾಗುತ್ತಿತ್ತು. ಆದರೆ ಅದು ಲಂಕೇಶರಿಗೆ ರೇಜಿಗೆ ಹುಟ್ಟಿಸುತ್ತಿತ್ತು. ಅಂತಹ ಪತ್ರಗಳನ್ನು ನೋಡಿದಾಗ, ಫೋನ್ ಕಾಲ್‌ಗಳು ಬಂದಾಗ ಸಿಡಿಸಿಡಿ ಅನ್ನೋರು. ಮುಖ ಊದಿಸಿಕೊಂಡಿದ್ದು ಅವರ ಬೇಸರಕ್ಕೆ ಅವರೇ ಮದ್ದು ಅರೆದುಕೊಳ್ಳುತ್ತಿದ್ದರು.
ಇದೇ ಸಮಯದಲ್ಲಿ ‘ಪತ್ರಿಕೆ’ಗೆ ಮುಂಬೈನಿಂದ ಬರೆಯುತ್ತಿದ್ದ ಉಮಾರಾವ್ ಅವರು, ಮೇಸ್ಟ್ರಿಗೆ ಡಯಾಬಿಟೀಸ್ ಇದೆ ಅಂತ ಗೊತ್ತಾಗಿ ಆಗತಾನೇ ಬಂದಿದ್ದ, ಹೊರದೇಶದಲ್ಲಷ್ಟೇ ಸಿಗುತ್ತಿದ್ದ ಡಯಾಬಿಟೀಸ್ ಚೆಕ್ ಮಾಡುವ ಪುಟ್ಟ ಯಂತ್ರವೊಂದನ್ನು ತಂದು ಕೊಟ್ಟರು. ಅವರು ಬಂದುಹೋದ ಮೇಲೆ, ಆ ಮೆಷಿನ್ ಮ್ಯಾನ್ಯುಯಲ್ ಪೂರ್ತಿ ಓದಿದ ಮೇಸ್ಟ್ರು ಕಾರ್ಯರೂಪಕ್ಕೆ ಇಳಿದೇಬಿಟ್ಟರು. ಅವರ ರೂಮಿನಿಂದ ಪಟ್ ಪಟ್ ಅಂತ ಶಬ್ದ ಬರೋಕೆ ಶುರುವಾಯ್ತು. ಕುತೂಹಲಗೊಂಡ ನಾನು ಅಳುಕುತ್ತಲೇ ರೂಮಿಗೆ ಹೋದ್ರೆ, ಮುಖದಲ್ಲೇನೋ ಧಿಮಾಕು, ದಟ್ಟ ಹುಬ್ಬುಗಳು ನನ್ನನ್ನು ಪ್ರಶ್ನಿಸುವಂತೆ, ಅಣಕಿಸುವಂತೆ ಕುಣಿಯುತ್ತಿವೆ.
‘ಕೈ ಕೊಡು, ಹಿಂಗಿಡಿಯೋ… ಹಿಂಗೆ ಕಣಲೇ…’ ಅಂದು ಪಟ್ ಅಂತ ಚುಚ್ಚಿ, ರಕ್ತ ಬರಿಸಿ, ಆ ಪುಟ್ಟ ಯಂತ್ರಕ್ಕಾಕಿ, ಅದು ತೋರಿಸಿದ ಡಿಜಿಟಲ್ ರಿಸಲ್ಟ್ ನೋಡಿ, ‘ಏನಿಲ್ಲ ಹೋಗು…’ ಅಂದ್ರು. ಎಲ್ಲಾ ಒಂದ್ ನಿಮಿಷದಲ್ಲಿ. ಆಫೀಸ್‌ನಲ್ಲಿ ಇದ್ದವರಿಗೆ, ಹೊರಗಿನಿಂದ ಬಂದವರಿಗೆ ಎಲ್ರಿಗೂ ಡಯಾಬಿಟೀಸ್ ಚೆಕಪ್; ನಿಂತ ನಿಲುವಿನಲ್ಲಿಯೇ ರಿಸಲ್ಟ್. ಮೇಸ್ಟ್ರಿಗೆ ಶುಗರ್ ಇದೆ ಅಂತ ಗೊತ್ತಾದಮೇಲೆ, ಬಂದವರೆಲ್ಲ ಒಂದೊಂದು ಔಷಧಿ ಹೇಳೋರೆ. ಯಾರೋ ಒಬ್ಬರು ‘ಒಣನೇರಳೆ ಬೀಜದ ಪುಡಿ ಇದ್ಯಲ್ಲ ಸಾರ್, ಒಳ್ಳೆ ದೇಸೀ ರಾಮಬಾಣ… ’ಅಂದರು.
‘ಹೌದಾ, ಹ್ಯೆಂಗೆ, ಎಲ್ಲಿ ಸಿಗುತ್ತೆ?’
‘ಗ್ರಂಧಿಗೆ ಅಂಗಡೀಲಿ ಸಿಗುತ್ತೆ, ತಂದ್ಕೊಂಡ್ತಿನಿ ಬಿಡಿ ಸಾರ್, ಸಡನ್ನಂತ ಇಳಿದೋಯ್ತದೆ’ ಅಂದ್ರು.
ಏನ್ ಇಳಿತದೋ ಅಂತ ಆತಂಕದಿಂದ ಮೇಸ್ಟ್ರು ಹೇಳಿದವರ ಮುಖ ನೋಡಿದರು!
‘ಲೇ, ಗಿರಿ ಬಾರಲೇ ಇಲ್ಲಿ, ಆ ಗ್ರಂಧಿಗೆ ಅಂಗಡಿಗೋಗ್ಬಾ…’ ಅಂದು ಒಣನೇರಳೆ ಬೀಜದ ಪುಡಿ ಎಂದು ಒಂದು ಚೀಟಿಯಲ್ಲಿ ಬರೆದು ಕೊಟ್ಟರು. ಬೇಕಾಗಿದ್ದು ಐದತ್ತು ಗ್ರಾಮು, ನಮ್ಮ ಗಿರಿ ತಂದಿದ್ದು ೨೫೦ ಗ್ರಾಮು. ಶುರುವಾಯ್ತು ಮತ್ತೆ… ಬಂದವರಿಗೆಲ್ಲ ಚೆಕಪ್, ಬೀಜದ ಪುಡಿ ವಿತರಣೆ. ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು ಏನೂ ಗೊತ್ತಿಲ್ಲ. ಆ ಸಮಯದಲ್ಲಿ ಮೇಸ್ಟ್ರ ದೇಹ ತುಂಬಾನೇ ಜಂಕ್ಲಾಗಿತ್ತು. ಹಿಂದುಮುಂದು ನೋಡದೆ ತಿಂದ್ರು, ಭೇದಿಯಾಯ್ತು. ಕೂರಕ್ಕಾಗ್ತಿಲ್ಲ, ಮಲಗಲಿಕ್ಕಾಗ್ತಿಲ್ಲ, ಪಂಚೆಯೆಲ್ಲ ಒದ್ದೆ… ತಿನ್ನಿ ಅಂತ ಹೇಳಿದೋರಿಗೆ ಅವತ್ತೆಲ್ಲ ಬೈದ್ರು. ಸಿಡಿಸಿಡಿ ಅಂದ್ಕೊಂಡೇ ಇದ್ರು.
ಉಮಾರಾವ್ ತಂದುಕೊಟ್ಟದ್ದು ಮಾಡರ್ನ್ ಡಿಜಿಟಲ್ ಮೆಷಿನ್, ಅದು ಅನುಕೂಲವಾಗಿದ್ದು ಡಯಾಬಿಟೀಸ್ ಡೇಟಾಕ್ಕೆ. ಮೇಸ್ಟ್ರಿಗೆ ಭಾರೀ ಬಾಯ್ಚಪಲ; ಯಾವುದನ್ನೂ ಕಂಟ್ರೋಲ್ ಮಾಡ್ತಿರಲಿಲ್ಲ. ಹೋಳಿಗೆ ಅಂದ್ರೆ ತುಂಬಾ ಇಷ್ಟ, ತುಪ್ಪ ಸುರಿದುಕೊಂಡು, ಮುಖಮೂತಿನೆಲ್ಲ ಮಾಡಿಕೊಂಡು ಚಿಕ್ಕಮಕ್ಕಳಂತೆ ತಿನ್ನೋರು. ಮಾವಿನಹಣ್ಣಿನ ಬುಟ್ಟಿಯನ್ನೇ ರೂಮಿನಲ್ಲಿಟ್ಟುಕೊಂಡಿದ್ದರು. ಇಷ್ಟವಾದ, ರುಚಿಕಟ್ಟಾದ ತಿಂಡಿಗಳನ್ನು ತಿನ್ನೋದು, ತಿಂದಾದ ಮೇಲೆ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳೋದು. ಯಾವುದನ್ನು ತಿನ್ನಬಾರದು ಅಂತ ಡಾಕ್ಟ್ರು ಹೇಳಿದ್ರೋ ಅವೆಲ್ಲವನ್ನು ತಿನ್ನುತ್ತಾ, ಚೆಕ್ ಮಾಡಿಕೊಳ್ಳುತ್ತಾ, ಯಾವ್ಯಾವುದನ್ನು ತಿಂದರೆ ಶುಗರ್ ಲೆವೆಲ್ ಎಷ್ಟೆಷ್ಟು ಏರುತ್ತೆ ಅಂತೆಲ್ಲ ಬರೆದಿಟ್ಟುಕೊಳ್ಳತೊಡಗಿದರು. ಆ ಮೆಷಿನ್ ಬಂದಿದ್ದೆ ತಡ ಅವರ ರೂಮು ಪ್ರಯೋಗಶಾಲೆಯಾಯ್ತು, ಅವರ ಕೈಗೆ ಸಿಕ್ಕವರು ಪ್ರಯೋಗಪಶುಗಳಾದರು. ಯಾರೂ ಸಿಗದಿದ್ದಾಗ ಅವರೇ…
ನನಗ್ಯಾಕೋ ಅತಿಯಾಯ್ತು ಅನ್ನಿಸಿತು. ಸುಮ್ಮನೆ ಹೋಗಿ ನಿಂತೆ. ‘ಪ್ರಯೋಗಶೀಲ’ ಲಂಕೇಶ್… ಹ್ಯಂಗೆ ಎಂದು ಭುಜ ಕುಣಿಸಿದರು. ಅವರ ಮಾತು ಅವರನ್ನೇ ಗೇಲಿ ಮಾಡಿಕೊಳ್ಳುವಂತಿತ್ತು.
‘ಹಂಗೆಲ್ಲ ತಿನ್ನಬಾರ್‍ದು ಸಾರ್, ಹೆಚ್ಚುಕಡಿಮೆ ಆದ್ರೆ…’ ಅಂದೆ.
ಗೇಲಿ, ವ್ಯಂಗ್ಯಗಳಿಂದ ಮುಖದ ಮೇಲೆ ಕುಣಿಯುತ್ತಿದ್ದ ನಗು ಮರೆಯಾಗಿ, ಸೀರಿಯಸ್ಸಾದರು. ನನ್ನ ಮುಖ ನೋಡಿ, ‘ನೀನು ಡಾಕ್ಟ್ರ?’ ಅಂದ್ರು.
ಸುಮ್ನೆ ನಿಂತಿದ್ದೆ, ‘ನೀನ್ ಡಾಕ್ಟ್ರೇನೋ’ ಅಂದ್ರು. ದನಿ ಸ್ವಲ್ಪ ಗಡುಸಾಗಿತ್ತು.
ಏನು ಹೇಳಬೇಕೋ ಗೊತ್ತಾಗಲಿಲ್ಲ, ಭಯ ಆಯ್ತು, ಯಾಕಾದ್ರು ಹೇಳುದ್ನೋ ಅನ್ನಿಸಿ ಸುಮ್ಮನೆ ನಿಂತೆ.
‘ನೀನ್ ಪೇಷಂಟಾ?’
ಸುಮ್ನೆ ನಿಂತೇ ಇದ್ದೆ…
‘ಡಾಕ್ಟ್ರೂ ಅಲ್ಲ, ಪೇಷಂಟೂ ಅಲ್ಲ, ಅಂದ್ಮೇಲೆ ತಿಕ ಮುಚ್ಕೊಂಡ್ ಇರು…’
ಪೇಷಂಟಾಗಿ ಕಷ್ಟನೂ ಗೊತ್ತಿಲ್ಲ, ಡಾಕ್ಟ್ರಾಗಿ ಪರಿಹಾರ ಮಾಡೋದು ತಿಳಿದಿಲ್ಲ, ಸುಮ್ನೆ ಮಾತಾಡದ್ರಿಂದ ಏನು ಪ್ರಯೋಜನವಿಲ್ಲ, ಅನ್ನುವುದು ಅವರ ಕಾಮನ್‌ಸೆನ್ಸ್.
*****
ವಾರಕ್ಕೆರೆಡು-ಮೂರು ಸಲ ಪತ್ರಿಕೆಯ ಕಚೇರಿಯಲ್ಲಿಯೇ ರಾಮಚಂದ್ರ ಶರ್ಮ, ಮೈಸೂರು ಮಠ್, ಶೂದ್ರ ಶ್ರೀನಿವಾಸ್, ಬಸವರಾಜ ಅರಸು, ಡಾ.ಶ್ರೀನಿವಾಸಗೌಡ, ಪ್ರಸನ್ನ, ಪ್ರಕಾಶ್ ಬೆಳವಾಡಿ, ಸತ್ಯ, ಮುಕುಂದ್ರಾಜ್ ಜೊತೆಗೆ ಲಂಕೇಶರು ಇಸ್ಪೀಟು ಆಡೋರು. ಅಪರೂಪಕ್ಕೊಮ್ಮೆ ಗೌರಿ, ಚಿದಾನಂದ ರಾಜಘಟ್ಟ ಕೂಡ ಬರೋರು. ಆಟದ ನಂತರ ಪಾನಕೂಟ. ಅಲ್ಲಿಗೆ ಆವತ್ತಿನ ದಿನ ಅರ್ಥಪೂರ್ಣ.
ಅದೇ ಸಮಯದಲ್ಲಿ ಮೇಸ್ಟ್ರ ಆರೋಗ್ಯ ಕೆಡಲಿಕ್ಕೆ ಶುರುವಾಗಿ ಸಿಗರೇಟ್, ಕುಡಿತ ಬಿಟ್ಟಿದ್ದರು. ಆದರೆ ಇಸ್ಪೀಟು, ರೇಸು ಹಾಗೇ ಇದ್ದವು. ಮೇಸ್ಟ್ರ ಆರೋಗ್ಯವನ್ನು ಹತ್ತಿರದಿಂದ ಗಮನಿಸುತ್ತಿದ್ದ, ಲಂಕೇಶರ ಆಪ್ತ ಬಳಗದವರೂ ಆಗಿದ್ದ ಡಾ. ಗೌಡರು, ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿದ್ದ, ಕಿಮ್ಸ್‌ನಲ್ಲಿ ಪೆಥಾಲಜಿ ಸಬ್ಜೆಕ್ಟ್ ಟೀಚ್ ಮಾಡುತ್ತಿದ್ದ ಡಾ.ವೆಂಕಟೇಶ್ ಎಂಬುವವರನ್ನು ಮೇಸ್ಟ್ರ ಹೆಲ್ತ್ ಚೆಕಪ್‌ಗೆ ನೇಮಿಸಿದರು.
ಈ ಡಾಕ್ಟರ್ ವೆಂಕಟೇಶ್ ಅವರಿಗೆ ಲಂಕೇಶರನ್ನು ಕಂಡರೆ ತುಂಬಾನೆ ಪ್ರೀತಿ; ಅದಕ್ಕಿಂತಲೂ ಹೆಚ್ಚಾಗಿ ಭಯ. ಜೊತೆಗೆ ಬಾಸ್ ಶ್ರೀನಿವಾಸಗೌಡರ ಹುಕುಂ ಬೇರೆ. ಪ್ರತಿದಿನ ಸಂಜೆ ಪತ್ರಿಕೆಯ ಕಚೇರಿಗೆ ಬಂದು ನಮ್ಮನ್ನೆಲ್ಲ ನಗಿಸಿ, ಕಾಫಿ ಕುಡಿಸಿ ಲವಲವಿಕೆಯಿಂದಿರುತ್ತಿದ್ದ ಡಾ.ವೆಂಕಟೇಶ್, ಮೇಸ್ಟ್ರ ರೂಮಿಗೆ ಹೋಗಬೇಕೆನ್ನುವಾಗ, ಸಿಂಹನ ಗುಹೆಗೆ ಹೋಗುತ್ತಿರುವ ಕುರಿಯಂತಾಗಿಬಿಡುತ್ತಿದ್ದರು. ಅವರು ಕಣ್ಣುಬಿಟ್ಟು ನೋಡಿದರೆ ಸಾಕು ಬೆವೆತುಹೋಗೋರು. ಆದರೆ ಲಂಕೇಶರು ಮಾತ್ರ ಅವರನ್ನು ಗೌರವದಿಂದ ಕಾಣುತ್ತಿದ್ದರು ಮತ್ತು ಅವರು ಹೇಳಿದಂತೆ ಕೇಳುತ್ತಿದ್ದರು. ಮೇಸ್ಟ್ರು ಹೋಗಿ ಮಲಗುವುದು, ಅವರು ಬಂದು ತೋಳಿಗೆ ಬ್ಲಡ್ ಪ್ರೆಷರ್ ಪಟ್ಟಿ ಸುತ್ತುವುದು, ರೀಡಿಂಗ್ ಬರೆದುಕೊಳ್ಳುವುದು, ಮಾತ್ರೆ, ಔಷಧಿ ಯಾವುದನ್ನು ಯಾವಾಗ ತೆಗೆದುಕೊಳ್ಳಬೇಕು ಎಂದೆಲ್ಲ ಹೇಳೋರು… ಎಲ್ಲಾ ನಾರ್ಮಲ್ಲಾಗಿಯೇ- ಪೇಷಂಟು-ಡಾಕ್ಟರ್ ಹೇಗಿರಬೇಕೋ ಹಾಗೆಯೇ.
ಆದರೆ, ಡಾಕ್ಟರ್ ಅತ್ತ ಹೋಗುತ್ತಿದ್ದಂತೆ ಇತ್ತ ಅವರು ಅವರೇ. ಇಷ್ಟ ಬಂದಂತೆ, ಮನಸ್ಸಿಗೆ ತೋಚಿದಂತೆ ಉಣ್ಣೋದು, ತಿನ್ನೋದು, ತಿರುಗೋದು ಎಲ್ಲಾ ನಾರ್ಮಲ್ಲಾಗಿಯೇ- ಪೇಷಂಟೂ ಇಲ್ಲ, ಡಾಕ್ಟ್ರೂ ಇಲ್ಲ.
ಲಂಕೇಶರು ಇರುವುದೇ ಹಾಗೆ ಎಂದು ಗೊತ್ತಿದ್ದ ನನಗೆ ಇದೇನು ಹೊಸದು ಅನ್ನಿಸಲಿಲ್ಲ. ಹಾಗಂತ ಸುಮ್ಮನಿರುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ನನಗೆ ತೋಚಿದ್ದನ್ನು ಹೇಳುತ್ತಿದ್ದೆ, ಅವರೂ ಅಷ್ಟೇ ಕೇಳಿಸಿಕೊಳ್ಳುತ್ತಿದ್ದರು… ಶ್ರೀನಿವಾಸಗೌಡ್ರು ಹೇಳಿರುವುದರಿಂದ ಡಾಕ್ಟ್ರು ಚೆಕಪ್‌ಗೆ ಬಂದುಹೋಗುತ್ತಿದ್ದರೂ ಲಂಕೇಶರು ಮಾತ್ರ, ‘ಏ, ಬಸುರಾಜ ಅವರಿಗೆ ತಿಂಗಳಿಗೆ ಇಷ್ಟು ದುಡ್ಡು ಅಂತ ಫಿಕ್ಸ್ ಮಾಡೋ… ಫ್ರೀಯಾಗೆಲ್ಲ ಬೇಡ’ ಅನ್ನೋರು. ‘ಪಾಪ ಏನೋ ಓದ್ಕಂಡಿರ್ತರ್ ಕಣೋ, ನೊಬೆಲ್ ಪ್ರೊಫೆಷನ್… ವೆರಿ ಹಂಬಲ್ ಫೆಲೋ, ಸ್ವಲ್ಪ ಜಾಸ್ತಿನೆ ಕೊಡು… ಸ್ವಲ್ಪ pause ಕೊಟ್ಟು, ‘ಅವುನ್ ಚೆಕ್ ಮಾಡದು, ನಾನ್ ಮಾಡಿಸ್ಕಳದು- ಎಲ್ಲ ನಾನ್ಸೆನ್ಸ್ ಕಣಲೆ. ಅಷ್ಟಕ್ಕೂ ಅವುನ್ಗೇನ್ ಗೊತ್ತಾಯ್ತದೆ, ನನ್ ಬಾಡಿ ನನಗ್ಗೊತ್ತು… ಇವರು ಹೇಳ್ದಂಗೆಲ್ಲ ಕೇಳಿದ್ರೆ, ಮುಗೀತು ನಮ್ ಕತೆ, ನಮ್ಮವ್ವ ಡಾಕ್ಟ್ರನ್ನೇ ನೋಡ್ಲಿಲ್ಲ, ಬದುಕಿರಲಿಲ್ವ? ದುಡೈತಲ್ಲ… ಭಾರೀ ವರ್ಸ್ಟು, ಮನುಷ್ಯನಿಗೆ ದುಡ್ಡು ಬಂತು ಅಂದ್ರೆ ಸಾವು ಬಂತು ಅಂತ ಅರ್ಥ… ‘ಎಂದು ಕತ್ತು ಬಗ್ಗಿಸಿದರು.
ಒಂದೇ ಒಂದು ಕ್ಷಣ ಏನನ್ನಿಸಿತೋ ಅಥವಾ ನಾನೇನ್ ಯೋಚಿಸ್ತಿದೀನೋ ಎಂದು ಊಹಿಸಿದರೋ, ‘ನಾನೇನ್ ಸಾಯಲ್ಲ, ಸಾಯೋವಸ್ಟ್ ದುಡ್ಡಲ್ಲೈತೋ ನಮ್ಮತ್ರ…. ಅವರ ಜೊತೆಗೆ ನನ್ನನ್ನು ಸೇರಿಸಿಕೊಂಡುಬಿಟ್ಟರು! ‘
******
ಶುಗರ್ ಜಾಸ್ತಿಯಾಗಿ ಒಂದು ಕಣ್ಣು ತೊಂದರೆ ಕೊಡ್ತಾಯಿತ್ತು. ಯಾರೋ ಚೆನ್ನೈನ ಶಂಕರ್ ನೇತ್ರಾಲಯ ಚೆನ್ನಾಗಿದೆ, ಅಲ್ಲಿ ಎಕ್ಸ್‌ಪರ್ಟ್ ಡಾಕ್ಟರ್‌ಗಳಿದ್ದಾರೆ, ಅಲ್ಲಿಗೆ ಹೋಗಿ ಆಪರೇಷನ್ ಮಾಡಿಸಿಕೊಳ್ಳಿ ಎಂದು ಹೇಳಿದರು. ಆದರೆ ಆಫೀಸ್ ಬಿಟ್ಟು ಹೋಗಬೇಕಲ್ಲ ಜೀವ. ಹಲವಾರು ವರ್ಷಗಳ ಕಾಲ ಪಟ್ಟಾಗಿ ಕೂತು ಕೆಲಸ ಮಾಡಿದ್ದರು. ಪತ್ರಿಕೆಯೇ ಅವರ ಜೀವವಾಗಿತ್ತು. ಅದರಿಂದ ಬರುತ್ತಿದ್ದ ಹಣ ಮತ್ತು ಖ್ಯಾತಿ ಅವರಿಗೆ ಚೈತನ್ಯ, ಹುಮ್ಮಸ್ಸು ನೀಡುತ್ತಿದ್ದವು. ಆದರೆ ವಯಸ್ಸು, ದೇಹ ಕೇಳಬೇಕಲ್ಲ? ಕಣ್ಣಿನ ತೊಂದರೆ ಜಾಸ್ತಿಯಾಯ್ತು. ಚೆನ್ನೈಗೆ ಹೋಗುವುದೆಂದು ನಿರ್ಧರಿಸಿದರು. ಜೊತೆಗಿರಲು ಮೈಸೂರಿನಿಂದ ಪ್ರೊ.ಕೆ. ರಾಮದಾಸ್‌ರನ್ನು ಕರೆಸಿಕೊಂಡರು.
ಹೋಗಲಿಕ್ಕೆ ಮನಸ್ಸಿಲ್ಲ, ಹೋಗದೆ ಇರಲಿಕ್ಕೂ ಆಗ್ತಿಲ್ಲ. ಸಿಂಹಾಸನ, ಸಾಮ್ರಾಜ್ಯ ಬಿಟ್ಟುಹೋಗುತ್ತಿರುವೆನೇನೋ ಎಂಬ ತಳಮಳ, ಹೇಳಿಕೊಳ್ಳಲಿಕ್ಕಾಗದ ಕಸಿವಿಸಿ. ಅಂತೂ ಹೊರಟ್ರು. ಹೋಗಿ ಒಂದೇ ದಿನಕ್ಕೆ ಚೆನ್ನೈನಿಂದ ಪತ್ರ, ‘ಈವಾರ ಟೀಕೆ-ಟಿಪ್ಪಣಿ ಆಗಲ್ಲ ಅಂತ ಕಾಣುತ್ತೆ, ಏನ್ ಮಾಡ್ತಿಯೋ ನೋಡು, ಎಲ್ರೂ ಕೂತು ಯೋಚಿಸಿ ಪತ್ರಿಕೆಯನ್ನು ರೂಪಿಸಿ, ಇನ್ಯಾವಾಗ ಕಲಿಯೋದು ನೀವೆಲ್ಲ…’
ಆ ವಾರ ನಮ್ಮ ದ್ವಾರಕಾನಾಥ್ ಒಂದು ಸ್ಕೂಪ್ ರಿಪೋರ್ಟ್ ಮಾಡಿದ್ದರು- ವೀರಪ್ಪನ್ ಕೂದಲೆಳೆಯ ಅಂತರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ವರದಿ. ಜೊತೆಗೆ ಅಪರೂಪದ ಫೋಟೋಗಳಿದ್ದವು. ಅದನ್ನು ಸೆಂಟರ್‌ಸ್ಪ್ರೆಡ್‌ಗೆ ಹಾಕಿದ್ದೋ, ಇನ್ನೂ ಎಲ್ಲೂ ಬಂದಿರಲಿಲ್ಲ. ಮೇಸ್ಟ್ರೇ ಮೇನ್- ಅವರಿಲ್ಲ ಅಂದರೆ ಹೇಗೆ? ಎಲ್ಲಾ ಕಾಲಕ್ಕೂ ಸಲ್ಲುವಂತಹ ಟೀಕೆಟಿಪ್ಪಣಿಯೊಂದನ್ನು ಹುಡುಕಿ ಹಾಕಿದೋ. ಇತರ ವರದಿಗಳೂ ಚೆನ್ನಾಗಿದ್ದವು. ಒಟ್ಟಾರೆ ಇಷ್ಯೂನೇ ನಮಗೆ ಖುಷಿ ಕೊಟ್ಟಿತ್ತು. ಲಂಕೇಶರಿಲ್ಲದ ಕೊರತೆ ಎಲ್ಲೂ ಕಾಣ್ತಿರಲಿಲ್ಲ.
ಅಂತೂ ಲಂಕೇಶರಿಲ್ಲದೆ ‘ಲಂಕೇಶ್ ’ಪತ್ರಿಕೆ ಮಾರುಕಟ್ಟೆಗೆ ಬಂದಿತ್ತು. ಮಂಗಳವಾರ ಬೆಳಗ್ಗೆ ಹತ್ತೂವರೆ ಮೇಷ್ಟ್ರು ಕಣ್ಣಿಗೆ ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ನಿಧಾನವಾಗಿ ಮೆಟ್ಟಿಲು ಹತ್ತಿ ಬರುತ್ತಿದ್ದರು. ಹಿಂದೆ ರಾಮದಾಸ್ ಇದ್ದರು. ಆ ಸ್ಥಿತಿಯಲ್ಲಿ ಅವರನ್ನು ನೋಡಿದಾಗ, ಕರುಳು ಚುರ್ರೆಂದಿತು. ಸುಮ್ಮನೆ ಹೋಗಿ ನನ್ನ ಜಾಗದಲ್ಲಿ ಕೂತುಬಿಟ್ಟೆ. ಮೇಸ್ಟ್ರು ಬಂದವರೆ ರೂಮಿಗೆ ಹೋದರು. ಹಿಂದಿದ್ದ ರಾಮದಾಸ್ ನನ್ನ ನೋಡಿ, ‘ಬಸುರಾಜ್ ಹೇಗಿದ್ದೀರಿ…’ ಎಂದು ಕೇಳಿ ಅವರನ್ನು ಫಾಲೋ ಮಾಡಿದರು.
ಇದೀಗತಾನೆ ಬಂದಿದ್ದಾರೆ, ಟೇಬಲ್ ಮೇಲೆ ಪತ್ರಿಕೆ ಇದೆ, ನೋಡಲಿ, ನಿಧಾನಕ್ಕೆ ಹೋದರಾಯಿತು ಎಂದು ನಾನು, ಅವರ ಆ ಸ್ಥಿತಿ ನೆನೆಸ್ಕೊಂಡು ಖಿನ್ನನಾಗಿ ಕೂತಿದ್ದೆ.
ಅರ್ಧಗಂಟೆಯಾಗಿರಬಹುದು, ಹೋಗಿ ಅವರ ಮುಂದೆ ನಿಂತೆ. ನನ್ನ ಮುಖ ನೋಡದೆ, ರಾಮದಾಸ್‌ರನ್ನು ನೋಡಿಕೊಂಡು, ‘ನೋಡಿ… ಬಂದು ಎಷ್ಟೊತ್ತಾಯ್ತು… ಸೂಳೆಮಕ್ಕಳು ನಾನ್ ಸಾಯದ್ನೆ ಕಾಯ್ತಿದಾರೆ… ಲೋಫರ್ಸ್…’ ಇದ್ದಕ್ಕಿದ್ದಂತೆ ಸ್ಫೋಟಿಸಿಬಿಟ್ಟರು.
ಆ ಕ್ಷಣ ಏನನ್ನಿಸಿತೋ, ಅವರ ಮಾತು ಮುಗಿಯುವ ಮೊದಲೇ, ‘ಎಷ್ಟ್ ಕರೆಕ್ಟಾಗಿ ಗೆಸ್ ಮಾಡಿದಿರ ಸಾರ್, ಬರ್ತಿನಿ…’ ಎಂದು ಒಂದರೆಗಳಿಗೆಯೂ ನಿಲ್ಲದೆ ದಡದಡ ಅಂತ ಮೆಟ್ಟಿಲಿಳಿದು ಹೋಗಿಯೇಬಿಟ್ಟೆ. ನನ್ನಷ್ಟೇ ವೇಗವಾಗಿ ರಾಮದಾಸ್ ಕೂಡ, ‘ಏ ಬಸುರಾಜ್, ಬಸುರಾಜ್, ಹಂಗಲ್ಲ ಕಣ್ರಿ ಅದು…’ ಅಂತ ಕೂಗುತ್ತಾ ಓಡಿಬಂದರು. ನಾನು ಅವರ ಮಾತನ್ನೂ ಕೇಳದೆ, ‘ಇಲ್ಲಾ ಸಾರ್, ಅವರು ಯೋಚ್ನೆ ಮಾಡಿರೋದು ಸರಿಯಾಗಿದೆ…’ ಅಂದು ಬೈಕ್ ಹತ್ತಿ ಹೋಗಿಯೇಬಿಟ್ಟೆ.
ಲಂಕೇಶರಿಗೆ, ನಾನಿಲ್ಲದೆ ನಮ್ಮ ಹುಡುಗರು ಪತ್ರಿಕೆಯನ್ನು ತರಬೇಕು ಎಂಬ ಆಸೆಯೂ ಇತ್ತು; ನಾನಿಲ್ದೆ ತಂದೆಬಿಟ್ರಲ್ಲ, ನನ್ನನ್ನೇ ನಗಣ್ಯ ಮಾಡಿದ್ರಲ್ಲ ಎಂಬ ಸಹಿಸಲಾರದ ಸಂಕಟವೂ ಇತ್ತು. ಒಂದೇ ಸಮಯದಲ್ಲಿ ಎರಡೆರೆಡಲ್ಲ ಹೆಸರಿಗೆ ತಕ್ಕಂತೆಯೇ ಹತ್ತಾರು ವ್ಯಕ್ತಿತ್ವ. ಅದನ್ನು ಅಕ್ಷರಗಳಲ್ಲಿ ಅಡಗಿಸಿಡುವುದು ಕಷ್ಟವೇ..
ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು.