”ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು. ಹಾಗಾಗಿ ಇನ್ನು ತಡಮಾಡದೆ ಹೇಳುತ್ತಾ ಹೋಗುತ್ತೇನೆ”.
ಅಬ್ದುಲ್ ರಶೀದ್ ಬರೆದ ಹೊಸ ಕಥೆಲಾರ್ಡ್ ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್‘  ಕಥೆಯ ಪೂರ್ಣರೂಪ  ಭಾನುವಾರದ ನಿಮ್ಮ ಓದಿಗೆ

 


The modest Rose puts forth a thorn:

The humble Sheep, a threatning horn:
While the Lilly white, shall in Love delight,
Nor a thorn nor a threat stain her beauty bright
– William Blake

ಹಾಗೆ ನೋಡಿದರೆ ಈ ಎರಡು ಹೆಸರುಗಳು ನಾನು ಈ ಕಥೆಯಲ್ಲಿ ಹೇಳಲಿರುವ ಈ ಇಬ್ಬರು ಪ್ರೇಮಿಗಳ ನಿಜನಾಮಧೇಯವೇನಲ್ಲ. ಇವು ಆ ಇಬ್ಬರಿಗೆ ಹುಡುಗರಾಗಿದ್ದ ನಾವು ತಮಾಷೆಗಾಗಿ ಇಟ್ಟಿದ್ದ ಅಡ್ಡ ಹೆಸರುಗಳು. ಕಾರ್ನ್ ವಾಲಿಸ್ ಎಂಬುದು ನಮ್ಮ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ನಿವೃತ್ತರಾದ ಹೂವಯ್ಯನವರ ಅಡ್ಡಹೆಸರು. ಕ್ವೀನ್ ಎಲಿಜಬೆತ್ ಎಂಬುದು ನಮ್ಮ ಊರಿನ ಕಿರು ಪುಷ್ಪದ ಭಗಿನಿಯರು ನಡೆಸುತ್ತಿದ್ದ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಮತ್ತು ಆಂಗ್ಲಭಾಷೆ ಕಲಿಸುತ್ತಿದ್ದ ಎಲಿಜಬೆತ್ ಟೀಚರ ಅಡ್ಡ ಹೆಸರು. `ನೆನಪಿಡಲು ಕಷ್ಟವಾಗುವ ಹೆಸರುಗಳನ್ನು ನಿಮಗೆ ಗೊತ್ತಿರುವ ಯಾರಿಗಾದರೂ ಇಡಬೇಕು. ಆದರೆ ಹಾಗೆ ಇಟ್ಟಿರುವುದು ನಿಮ್ಮ ನಿಮ್ಮ ಕಲಿಕಾ ತಂಡದವರಿಗೆ ಮಾತ್ರ ಗೊತ್ತಿರಬೇಕು. ಪರೀಕ್ಷೆ ಮುಗಿದ ಮೇಲೆ ಆ ಅಡ್ಡಹೆಸರುಗಳನ್ನೂ ಮರೆತುಬಿಡಬೇಕು.’ ಇದು ನಮಗೆ ಇಂಗ್ಲಿಷನ್ನೂ, ಸಮಾಜವನ್ನೂ ಕಲಿಸುತ್ತಿದ್ದ ಎಲಿಜಬೆತ್ ಟೀಚರ್ ಹೇಳಿಕೊಟ್ಟಿದ್ದ ಗುಟ್ಟು!

ಅವರನ್ನು ನಾವು ಎಂಟನೆಯಲ್ಲಿದ್ದಾಗ ಎಲಿಜಬೆತ್ ಸಿಸ್ಟರ್ ಎಂದು ಕರೆಯುತ್ತಿದ್ದೆವು. ನಾವು ಬೇಸಗೆ ರಜೆ ಮುಗಿಸಿ ಒಂಬತ್ತಕ್ಕೆ ಬಂದಾಗ ಅವರು ತಮ್ಮ ಕ್ರೈಸ್ತ ಧರ್ಮದ ಕನ್ಯಾಸ್ತ್ರೀಯ ಉಡುಪನ್ನು ತ್ಯಜಿಸಿದ್ದರು. ಎಂಟನೆಯ ತರಗತಿಯಲ್ಲಿ ಅವರ ಬೆಳ್ಳನೆಯ ಮುಖ ಹಾಗೂ ಅವರ ನೀಳವಾದ ಬೆಳ್ಳಗಿನ ಬೆರಳುಗಳನ್ನು ಮಾತ್ರ ನೋಡಿದ್ದೆವು. ಒಂಬತ್ತಕ್ಕೆ ಬಂದಾಗ ಅವರು ತಲೆಗೂದಲನ್ನು ಆಸ್ಪತ್ರೆಯ ಆಯಾಳ ಹಾಗೆ ಜುಟ್ಟು ಕಟ್ಟಿ, ಅದಕ್ಕೊಂದು ಉದ್ದದ ಹೇರುಪಿನ್ನನ್ನೂ ಬಿಗಿದಿದ್ದರು. ಅವರ ಸಣ್ಣಗಿನ ಬೆವರಗುಳ್ಳೆಗಳು ತುಂಬಿದ್ದ ಹಣೆ, ಕಿವಿಯಲ್ಲಿ ತೂಗುತ್ತಿದ್ದ ಲೋಲಾಕು, ಕುತ್ತಿಗೆಗೆ ಇಳಿಬಿದ್ದಿದ್ದ ಅವರ ಮುಂಗುರುಳು ಇವೆಲ್ಲವೂ ಇವರೇನಾ ನಮ್ಮ ಎಲಿಜಬೆತ್ ಸಿಸ್ಟರ್ ಎಂದು ಅಚ್ಚರಿಯಾಗುವ ಹಾಗೆ ಕಾಣಿಸುತ್ತಿದ್ದರು. ನಾವು ಹುಡುಗರೂ ಅಷ್ಟೆ, ಅಂಗಿ-ಚಡ್ಡಿಯ ಸಮವಸ್ತ್ರವನ್ನು ಧರಿಸಲು ಸಂಕೋಚವಾಗಿ ಪ್ಯಾಂಟು ಅಂಗಿ ಧರಿಸಿ ಬರಲು ಶುರುಮಾಡಿದ್ದೆವು. ಹುಡುಗಿಯರೂ ಬೆಳೆದಿದ್ದರು. ಕನ್ಯಾಸ್ತ್ರೀಯಾಗಿದ್ದ ಎಲಿಜಬೆತ್ ಸಿಸ್ಟರು ತಮ್ಮ ಸನ್ಯಾಸತ್ವವನ್ನು ತ್ಯಜಿಸಿ ಹತ್ತಿಯ ಸಾದಾ ಸರಳ ಸೀರೆ ಧರಿಸಿ ಅದರಲ್ಲೇ ತಮ್ಮ ದೇಹವನ್ನು ಮುಚ್ಚಿಟ್ಟುಕೊಳ್ಳಲು ಹೆಣಗುತ್ತಾ ಅಪೂರ್ವ ಸುಂದರಿಯಂತೆ ಹೊಳೆಯುತ್ತಿದ್ದರು.

ನಾವೆಲ್ಲರೂ ಮನೆಯಿಂದ ತಂದ ಬುತ್ತಿಯ ಗಂಟನ್ನು ಶಾಲೆಯ ಮೈದಾನದ ಆಚೆ ಹರಿಯುತ್ತಿದ್ದ ನದಿಯ ನಡುವಿನ ಬಂಡೆಯ ಮೇಲೆ ಕುಳಿತು ತಿನ್ನುತ್ತಿದ್ದೆವು. ನಾವು ಕೂರುತ್ತಿದ್ದ ಬಂಡೆಯ ಹೆಸರು `ಪರಮಹಂಸ’ ಬಂಡೆ. ಅದರ ಪಕ್ಕದಲ್ಲಿ `ಏಸುಕ್ರಿಸ್ತ ಬಂಡೆ, ಅದರ ಪಕ್ಕ `ಮೌಲಾನಾ ಅಜಾದ್’ ಬಂಡೆ. ಇದೆಲ್ಲಾ ಹುಡುಗರ ಕಲಿಕಾ ಗುಂಪಿನ ಹೆಸರುಗಳು. ದೂರದಲ್ಲಿ `ಮದರ್ ಥೆರೆಸಾ ಬಂಡೆ’ ಅದರ ಪಕ್ಕ ‘ಅಬ್ಬಕ್ಕದೇವಿ’ ಬಂಡೆ. ಅವೆರಡು ಹುಡುಗಿಯರು ಊಟಕ್ಕೆ ಕೂರುವ ಬಂಡೆಗಳು. ಹುಡುಗರು ಅಲ್ಲಿಗೆ ಹೋಗುವ ಹಾಗಿರಲಿಲ್ಲವಾದರೂ ನನಗೆ ಹುಡುಗಿಯರ ಜೊತೆಗೆ ಕೂರಬೇಕೆಂದು ಅನಿಸಲು ಶುರುವಾಗಿತ್ತು. ಇದಕ್ಕೆ ಕಾರಣ ನನಗೆ ಹುಡುಗಿಯರನ್ನು ಕಂಡರೆ ಆಕರ್ಷಣೆ ಅಂತ ಅಲ್ಲ. ಅದರ ಬದಲು ನಾನೂ ಅವರ ಹಾಗೇ ಹುಡುಗಿಯಾಗಿರಬಹುದೇ ಎನ್ನುವ ಹುಚ್ಚು ಅನಿಸಿಕೆಗಳು.

`ಊಟಕ್ಕೆ ಕೂತಲ್ಲೂ ಪಾಠದ ಕುರಿತೇ ಮಾತನಾಡಬೇಕು’ ಎಂದು ನಮ್ಮ ಗುಂಪಿನ ಮಾರ್ಗದರ್ಶಕಿಯಾಗಿದ್ದ ಎಲಿಜಬೆತ್ ಟೀಚರು ಹೇಳಿದ್ದರು. ಹೇಗಾದರೂ ಮಾಡಿ ಪರಮಹಂಸ ಗುಂಪಿನ ಹುಡುಗರು ಹತ್ತನೆಯ ಪರೀಕ್ಷೆಯಲ್ಲಿ ಜಿಲ್ಲೆಗೇ ಮೊದಲು ಬರಬೇಕು ಎನ್ನುವುದು ಅವರ ಆಶೆ. ಅದಕ್ಕಾಗಿ ಅವರು ನಮಗೆ ಹೆಸರುಗಳನ್ನು ನೆನಪಿಡುವ ಸೂತ್ರಗಳನ್ನೂ ಹೇಳಿದ್ದರು. ನಾವು ಸೂತ್ರ ನೆನಪಿಡುವ ಬದಲು ಎಲಿಜಬೆತ್ ಟೀಚರು ನಮ್ಮ ನಮ್ಮ ಕನಸಿನಲ್ಲಿ ಹೇಗೆ ಬರುವರು ಎಂದು ಮಾತನಾಡುತ್ತಿದ್ದೆವು. ನನಗಂತೂ ಎಲಿಜಬೆತ್ ಟೀಚರು ಆಕಾಶದಿಂದ ಇಳಿದ ದೇವದೂತೆಯಂತೆ ಕಾಣಿಸುತ್ತಿದ್ದರು. ಅದಕ್ಕಾಗಿ ನಾನು ಅವರಿಗೆ ‘ಕ್ವೀನ್ ಎಲಿಜಬೆತ್’ ಎಂಬ ಹೆಸರಿಟ್ಟಿದ್ದೆ. ಆ ವಯಸ್ಸಲ್ಲೇ ಅವರ ಕುರಿತು ನನಗೆ ವಿಚಿತ್ರ ಕುತೂಹಲಗಳು. ಅವರ ಹಾಗೇ ಕಿವಿಗೆ ಲೋಲಾಕು ಹಾಕಿಕೊಂಡು ಬಿಗಿಯಾದ ರವಿಕೆ ಧರಿಸಬೇಕು ಅನಿಸುತ್ತಿತ್ತು.

ಅಷ್ಟರಲ್ಲಾಗಲೇ ನಮ್ಮ ಪರಮಹಂಸ ಕಲಿಕಾ ಗುಂಪಿನ ಐದು ಜನ ಹುಡುಗರಲ್ಲಿ ನಾಲ್ಕು ಹುಡುಗರ ಕನಸಿನಲ್ಲಿ ಅವರು ಬಂದೂ ಹೋಗಿದ್ದರು. ಆದರೆ ನನ್ನ ಕನಸನ್ನು ಮಾತ್ರ ನಾನು ಯಾರಿಗೂ ಹೇಳಲಿಲ್ಲ. ಏಕೆಂದರೆ ನನ್ನ ಕನಸಿನಲ್ಲಿ ಎಲಿಜಬೆತ್ ಟೀಚರು ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಲ್ಲೂಕು ವಿದ್ಯಾಧಿಕಾರಿಗಳಾದ ಹೂವಯ್ಯನವರ ಜೊತೆ ಸರಕಾರೀ ಗೇರುತೋಟದ ಒಳಗೆ ತರಗೆಲೆಗಳ ಮೇಲೆ ಮಲಗಿದ್ದರು. ಈಗ ಯೋಚಿಸಿದರೆ ನಗು ಬರುತ್ತದೆ. ಕನಸಿನಲ್ಲಿ ಬಂದಿದ್ದ ತಾಲ್ಲೂಕು ವಿದ್ಯಾಧಿಕಾರಿಗಳಾದ ಹೂವಯ್ಯನವರ ಪಕ್ಕ ಎಲಿಜಬೆತ್ ಟೀಚರ ಜೊತೆ ನಾನೂ ಹುಡುಗಿಯಂತೆ ಮಲಗಿದ್ದೆ. ಎದ್ದಾಗ ನನ್ನ ಮುಖ ಬಾಡಿಹೋಗಿತ್ತು. ಕ್ಲಾಸಿನಲ್ಲಿ ಎಲಿಜಬೆತ್ ಟೀಚರನ್ನು ಕಣ್ಣಲ್ಲಿ ತುಂಬಿಕೊಂಡು ಕೂತಿದ್ದೆ. ಅವರ ಕೈಯ ಮೊಣಗಂಟಿನ ಬಳಿ ಏನೋ ಒಂದು ಸಣ್ಣ ಗಾಯ. ಬಹುಶಃ ಕನಸಿನಲ್ಲಿ ಕಲ್ಲುಚೂರುಗಳು ತರಚಿದ ಗಾಯವಿರಬೇಕು. ನನ್ನ ಮೊಣಗಂಟಲ್ಲೂ ಗಾಯವಾದ ಹಾಗೆ ಅನಿಸುತ್ತಿತ್ತು.

ಆವತ್ತು ಶನಿವಾರ. ಎಲಿಜಬೆತ್ ಟೀಚರು ಲಗುಬಗೆಯಿಂದ ಇತಿಹಾಸದ ಪಾಠ ಮಾಡುತ್ತಿದ್ದರು. ‘೧೭೮೬ನೇ ಇಸವಿ ಸೆಪ್ಟೆಂಬರ್ ೧೨ ರಂದು ಲಾರ್ಡ್ ಕಾರ್ನ್ ವಾಲಿಸ್ ಬಂಗಾಳದ ಗವರ್ನರ್ ಜನರಲ್ಲನಾಗಿ ಅಧಿಕಾರ ಸ್ವೀಕರಿಸಿದನು. ಆತ ಬನಾರಸಿನಲ್ಲಿ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದನು. ಕಲ್ಕತ್ತಾದಲ್ಲಿ ಟಂಕಸಾಲೆಯನ್ನು ತೆರೆದನು. ಜಮೀನ್ದಾರೀ ಪದ್ಧತಿಯನ್ನು ಜಾರಿಗೆ ತಂದನು….’ ನಾನು ಎಲಿಜಬೆತ್ ಟೀಚರ ಬೆನ್ನನ್ನೇ ನೋಡುತ್ತಿದ್ದೆ. ಟೀಚರು ಬೋರ್ಡಿನಲ್ಲಿ ಕಾರ್ನ್ ವಾಲೀಸನ ಕುರಿತ ಮುಖ್ಯ ವಿಷಯಗಳನ್ನು ಬರೆಯುತ್ತಿದ್ದರು. ಅಷ್ಟು ಹೊತ್ತಿಗೆ ಹೊರಗೆ ಜೀಪಿನ ಸದ್ದಾಯಿತು. ಜೀಪಿನಿಂದ ಇಳಿದ ಹೂವಯ್ಯನವರನ್ನು ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಮೇರಿ ಸಿಸ್ಟರು ಹೂಹಾರ ಹಾಕಿ ಸ್ವಾಗತಿಸಿದರು. ಜೊತೆಗೆ ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ ಇದ್ದರು. ತಾಲ್ಲೂಕು ವಿದ್ಯಾಧಿಕಾರಿಗಳಾದ ಹೂವಯ್ಯನವರಿಗೆ ಬಡ್ತಿ ದೊರೆತು ಜಿಲ್ಲಾ ಉಪನಿರ್ದೇಶಕರಾಗಿದ್ದರು. ಹೂವಯ್ಯನವರು ಬಡ್ತಿ ದೊರೆತ ಕೂಡಲೇ ನಮ್ಮ ಶಾಲೆಯ ಪರಿವೀಕ್ಷಣೆಗೆ ಬಂದಿದ್ದರು. ಅವರು ಇದಕ್ಕೆ ಮೊದಲು ತಾಲ್ಲೂಕು ವಿದ್ಯಾಧಿಕಾರಿಗಳಾದಾಗಲೂ ಅದಕ್ಕೂ ಮೊದಲು ವಿಷಯ ಪರಿವೀಕ್ಷಕರಾಗಿದ್ದಾಗಲೂ ನಮ್ಮ ಶಾಲೆಯ ಪರಿವೀಕ್ಷಣೆ ನಡೆಸುತ್ತಿದ್ದರು.

ಈ ಹೂವಯ್ಯನವರಿಗೆ ಇದೇ ಊರಿನ ದಾರಿಯಲ್ಲಿ ಆರು ಎಕರೆ ಅಡಿಕೆ ತೋಟವೂ, ಅಷ್ಟೇ ಭತ್ತದ ಗದ್ದೆಯೂ, ಹತ್ತಾರು ಎಕರೆ ಪೈಸಾರಿ ಭೂಮಿಯೂ ಇದೆ. ಮಡಿಕೇರಿ ಘಾಟಿ ಇಳಿದು ತೋಟ ನೋಡಲು ಬರುವಾಗಲೆಲ್ಲ ನಮ್ಮ ಶಾಲೆಯ ಪರಿವೀಕ್ಷಣೆಯನ್ನೂ ನಡೆಸುತ್ತಾರೆ. ಅದರಲ್ಲೂ ಎಲಿಜಬೆತ್ ಟೀಚರ ತರಗತಿಯನ್ನು ವಿಶೇಷವಾಗಿ ಗಮನಿಸುತ್ತಾರೆ. ಮಕ್ಕಳನ್ನು ಆಟಕ್ಕೆ ಹೊರಗೆ ಕಳುಹಿಸಿ ಟೀಚರ ಜೊತೆ ಬಹಳ ಹೊತ್ತು ಮಾತನಾಡುತ್ತಾರೆ. ಇವರ ಮಾತುಗಳನ್ನು ನಂಬಿ ಎಲಿಜಬೆತ್ ಟೀಚರು ತಮ್ಮ ಕನ್ಯಾಶ್ರಮವನ್ನೂ ತ್ಯಜಿಸಿದ್ದಾರೆ. ಅದರಿಂದಾಗಿ ತಮ್ಮ ಧರ್ಮಪ್ರಾಂತ್ಯದಿಂದ ಬಹಳ ಕಿರುಕುಳಗಳಿಗೂ ಬಲಿಯಾಗಿದ್ದಾರೆ. ಆದರೂ ಹೂವಯ್ಯನವರು ನಿಖರವಾಗಿ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಎಲಿಜಬೆತ್ ಟೀಚರು ಅವರಿವರಲ್ಲಿ ಹೇಳಿ ಅಳುತ್ತಾರೆ. ಅದಕ್ಕಾಗಿ ಈವತ್ತು ಹೂವಯ್ಯನವರು ಕೊರಳಲ್ಲಿ ಹೂಮಾಲೆ ಹಾಕಿಕೊಂಡೇ ತರಗತಿಯನ್ನು ಪ್ರವೇಶಿಸಿದರೂ ಟೀಚರು ಬೆನ್ನು ತಿರುಗಿಸದೆ ಬೋರ್ಡಿನಲ್ಲಿ ಬರೆಯುತ್ತಲೇ ಇದ್ದಾರೆ.

ಹೂವಯ್ಯನವರು ನಮ್ಮನ್ನು ಉದ್ದೇಶಿಸಿ, ‘ನಾನು ನಿಮ್ಮ ಜಿಲ್ಲೆಯ ಯಾರು ಗೊತ್ತಾ ಮಕ್ಕಳೇ?’ ಎಂದು ಕೇಳಿದರು. ನಾವು ಯಾರೂ ಉತ್ತರಿಸಲಿಲ್ಲ. ಯಾಕೆಂದರೆ ನಮಗೆ ಅವರ ಕುರಿತು ಒಳಗೊಳಗೆ ಕೋಪವಿದೆ. `ನಾನು ನಿಮ್ಮ ಜಿಲ್ಲೆಯ ಶಿಕ್ಷಣ ಇಲಾಖೆಯ ಹೊಸ ಉಪನಿರ್ದೇಶಕ ಮಕ್ಕಳೇ’ ಎಂದು ಅವರೇ ಉತ್ತರಿಸಿದರು. ಆಗ ಎಲಿಜಬೆತ್ ಟೀಚರು ಬೋರ್ಡಿನಲ್ಲಿ ಬರೆಯುವುದನ್ನು ನಿಲ್ಲಿಸಿ ಈ ಕಡೆ ತಿರುಗಿದರು. ತಿರುಗಿದ ಅವರ ಮುಖದಲ್ಲಿ ಏನೋ ಖುಷಿ.

`ನನ್ನ ಹೆಸರು ಏನು ಗೊತ್ತಾ ಮಕ್ಕಳೇ…?’ ಹೂವಯ್ಯನವರು ನಮ್ಮನ್ನು ಕೇಳಿದರು.

‘ಲಾರ್ಡ್ ಕಾರ್ನ್ ವಾಲಿಸ್’ ಎಂದು ನಾನು ಗಟ್ಟಿಯಾಗಿ ಉತ್ತರಿಸಿದೆ.

ಸ್ವಲ್ಪ ಹೊತ್ತು ಅಲ್ಲಿ ಮೌನವಿತ್ತು. ಆಮೇಲೆ ಹುಡುಗಿಯರು ಜೋರಾಗಿ ನಕ್ಕರು.

‘ಕಾರ್ನ್ ವಾಲಿಸ್ ಅಂತೆ ನಿನ್ನ ತಲೆ’ ಎಲಿಜಬೆತ್ ಟೀಚರು ನನ್ನನ್ನು ಬೈದರು. ಅವರಿಗೆ ನನ್ನ ಬಗ್ಗೆ ಖುಶಿಯಾದ ಹಾಗೆಯೂ ಅನಿಸಿತು.

ಹೂವಯ್ಯನವರು, ‘ಇದೇನಾ ನೀನು ಮಕ್ಕಳಿಗೆ ಸಮಾಜ ಕಲಿಸುವುದು’ ಎಂದು ಎಲಿಜಬೆತ್ ಟೀಚರನ್ನು ಕೆಕ್ಕರಿಸಿ ನೋಡಿ ಮುಂದಿನ ತರಗತಿಯ ಕಡೆ ಹೋದರು.

ಅಷ್ಟು ಹೊತ್ತಿಗೆ ಶನಿವಾರ ಮಧ್ಯಾಹ್ನದ ಬೆಲ್ಲು ಹೊಡೆದು ನಾವು ಚೀಲ ಎತ್ತಿಕೊಂಡು ನದಿಯ ಕಡೆ ನಡೆದೆವು.

ಪರಮಹಂಸ ಬಂಡೆಯ ಮೇಲೆ ಬುತ್ತಿ ಬಿಚ್ಚಿ ಕೂತಿದ್ದಾಗ ನಮ್ಮ ಗುಂಪಿನ ಹುಡುಗರಿಗೆ ನಾನು ವಿಷಯ ಹೇಳಿದೆ. ನನ್ನ ಕನಸಲ್ಲಿ ಕಾರ್ನ್ ವಾಲಿಸ್ ಹೂವಯ್ಯನವರು ನಮ್ಮ ಎಲಿಜಬೆತ್ ಟೀಚರಿಗೆ ಗೇರು ಮರಗಳ ಕೆಳಗೆ ಒಣಗಿದ್ದ ತರಗೆಲೆಗಳ ಮೇಲೆ ಏನು ಮಾಡುತ್ತಿದ್ದರು ಎಂಬುದನ್ನೂ ಹೇಳಿದೆ. ಆ ಕನಸಿನಲ್ಲಿ ನಾನೂ ಹುಡುಗಿಯ ಹಾಗೆ ಮಲಗಿದ್ದೆ ಎಂಬುದನ್ನು ಹೇಳಲಿಲ್ಲ.

ಒಂದು ತಿಂಗಳ ಹಿಂದೆ ನಿಜವಾಗಿಯೂ ಕಾರ್ನ್ ವಾಲಿಸ್ ಹೂವಯ್ಯನವರು ಶಾಲೆಯ ತಪಾಸಣೆಗೆ ಬಂದಿದ್ದರು. ಬಂದವರು ಎಲಿಜಬೆತ್ ಟೀಚರ್ ಆಂಗ್ಲ ಭಾಷಾ ತರಗತಿಗೂ ಬಂದಿದ್ದರು. ಆಗ ಎಲಿಜಬೆತ್ ಟೀಚರು ನಮಗೆ ಲಿಲ್ಲಿ ಹೂವಿನ ಪದ್ಯ ಮಾಡುತ್ತಿದ್ದರು. `ಮಕ್ಕಳೇ ಗುಲಾಬಿ ನೋಡಲು ಸುಂದರವಲ್ಲವಾ… ಆದರೆ ಅದರ ಕೆಳಗೆ ಮುಳ್ಳು ಇರುತ್ತದೆ, ಆಡಿನ ಮರಿ ನೋಡಲು ಚಂದ ಇರುತ್ತದಲ್ಲವಾ. ಆದರೆ ಬೆಳೆದು ದೊಡ್ಡದಾಗುವಾಗ ಅದಕ್ಕೆ ಕೊಂಬು ಬರುತ್ತದೆ. ನಮ್ಮನ್ನು ಗುದ್ದಿ ನೋವು ಮಾಡುತ್ತದೆ. ಆದರೆ ಮಲ್ಲಿಗೆ ನೋಡಿ. ಅದು ನೋಡಲೂ ಬಿಳಿ, ಮುಟ್ಟಲೂ ಮೃದು, ಪರಿಮಳವೂ ಚಂದ, ಮುಳ್ಳೂ ಇಲ್ಲ, ಕೊಂಬೂ ಇಲ್ಲ. ನಾವು ಮಲ್ಲಿಗೆಯ ಹಾಗೆ ಇರಬೇಕಾಗುತ್ತದಲ್ಲವಾ ಮಕ್ಕಳೇ’ ಎಂದು ತಮ್ಮ ಮಲ್ಲಿಗೆಯ ಹಾಗಿರುವ ಮುಖವನ್ನು ಇನ್ನೂ ಚೂಪು ಮಾಡಿಕೊಂಡು ಹೇಳುತ್ತಿದ್ದರು.

`ನಮ್ಮ ಊರಿನಲ್ಲಿ ಲಿಲ್ಲಿ ಇಲ್ಲ. ಆದರೆ ಮಲ್ಲಿಗೆ ಇದೆ. ನೀವು ಮಲ್ಲಿಗೆಗೆ ‘ಲಿಲ್ಲಿ’ ಎಂದು ಹೆಸರಿಡಿ. ಆಗ ನಿಮಗೆ ಪರೀಕ್ಷೆಗೆ ಮರೆತು ಹೋಗುವುದಿಲ್ಲ’ ಎಂದು ಹೇಳುತ್ತಿರುವಾಗ ಹೂವಯ್ಯನವರು ಜೀಪಿನಲ್ಲಿ ಬಂದು ಇಳಿದರು. ಆಗ ಅವರು ಇನ್ನೂ ತಾಲ್ಲೂಕು ವಿದ್ಯಾಧಿಕಾರಿಗಳಾಗಿದ್ದರು ಮತ್ತು ಆಗ ಅವರಿಗೆ ನಾನು ಇನ್ನೂ ಕಾರ್ನ್ ವಾಲಿಸ್ ಎಂಬ ಹೆಸರಿಟ್ಟಿರಲಿಲ್ಲ. ಅವರು ಕ್ಲಾಸಿನೊಳಗೆ ತಪಾಸಣೆಗೆ ಬಂದ ತಕ್ಷಣ ಶನಿವಾರ ಮಧ್ಯಾಹ್ನದ ಗಂಟೆಯೂ ಹೊಡೆದಿತ್ತು. ಎಲಿಜಬೆತ್ ಟೀಚರು ನಮ್ಮನ್ನೆಲ್ಲ ಮನೆಗೆ ಹೋಗಲು ತಿಳಿಸಿದರು. ಅವರಿಬ್ಬರು ತುಂಬ ಹೊತ್ತು ತರಗತಿಯೊಳಗೆ ಜೋರು ಸದ್ದಿನಲ್ಲಿ ಮಾತನಾಡುತ್ತಿದ್ದರು. ಅವರು ವಾಪಾಸು ಮಡಿಕೇರಿಗೆ ಹೋಗುವಾಗ ಶನಿವಾರವಾದರೆ ಎಲಿಜಬೆತ್ ಟೀಚರನ್ನೂ ಕತ್ತಲಲ್ಲಿ ಹತ್ತಿಸಿಕೊಂಡು ಹೋಗುವುದನ್ನು ನಾನು ಬಹಳ ಸಲ ನೋಡಿದ್ದೆ. ನಮ್ಮ ಪರಮಹಂಸ ಗುಂಪಿನ ಇತರ ಹುಡುಗರೂ ನೋಡಿದ್ದರು. ಆದರೆ ಅವರೊಡನೆ ಶನಿವಾರ ಎಲಿಜಬೆತ್ ಟೀಚರು ಯಾಕೆ ಹೋಗುವರು ಎಂದು ನಮಗೆ ಗೊತ್ತಾಗುತ್ತಿರಲಿಲ್ಲ. ಆದರೆ ಆ ಶನಿವಾರ ಎಲಿಜಬೆತ್ ಟೀಚರು ಆಂಗ್ಲ ಭಾಷಾ ತರಗತಿಯಲ್ಲಿ `ಲಿಲ್ಲಿ’ ಪದ್ಯದ ಅರ್ಥವನ್ನು ಮತ್ತೆ ಮತ್ತೆ ಪುನರುಚ್ಚರಿಸುವಾಗ ನನಗೆ ಏನೋ ಅನುಮಾನ ಕಾಡಲು ತೊಡಗಿತ್ತು.

`ನೀನು ಹುಟ್ಟುವಾಗಲೇ ಹೊಟ್ಟೆಯೊಳಗೆ ಅನುಮಾನಗಳನ್ನು ಇಟ್ಟುಕೊಂಡು ಹುಟ್ಟಿರುವ ಮನುಷ್ಯ’ ಎಂದು ಈಗ ಮೈಸೂರಿನಲ್ಲಿ ನನ್ನೊಡನೆ ಸಹಬಾಳ್ವೆ ನಡೆಸುತ್ತಿರುವ ಕೃಷ್ಣಕುಮಾರಿ ಹೇಳುತ್ತಾಳೆ. ಅವಳೂ ನನ್ನ ಹಾಗೆಯೇ. ಗಂಡೂ ಅಲ್ಲ ಹೆಣ್ಣೂ ಅಲ್ಲ. ಆದರೂ ನಾವಿಬ್ಬರು ಗಂಡಹೆಂಡತಿಯರ ಹಾಗೆ ಬದುಕುತ್ತಿದ್ದೇವೆ. ಕೃಷ್ಣಕುಮಾರಿ ಮತ್ತು ನನ್ನ ಪ್ರೇಮ ಕಥೆಯನ್ನು ಆಮೇಲೆ ಹೇಳುತ್ತೇನೆ. ಈಗ ಎಲಿಜಬೆತ್ ಟೀಚರ್ ಮತ್ತು ಕಾರ್ನ್ ವಾಲೀಸರ ಶನಿವಾರದ ಸಂಜೆಯ ಪ್ರಣಯ ಕಥೆ ಮುಗಿಸುತ್ತೇನೆ.

ಆವತ್ತು ಶನಿವಾರ ಸಂಜೆ. ನನಗೆ ಇನ್ನೂ ನೆನಪಿದೆ. ಸಣ್ಣಗೆ ಮಳೆ ಬಿದ್ದು ನಿಂತು ಹೋಗಿತ್ತು. ಆದರೆ ಆಕಾಶದಲ್ಲಿ ಇನ್ನೂ ಬೀಳದೇ ಉಳಿದುಕೊಂಡಿರುವ ತುಂತುರು ಹನಿಗಳ ನಡುವಿಂದ ಸಂಜೆಯ ಸೂರ್ಯನ ಬೆಳಕು ಹಾದು, ಎಡಕ್ಕೆ ನಿಶಾನೆ ಬೆಟ್ಟದಿಂದ ಬಲಕ್ಕೆ ಕರಡಿಬೆಟ್ಟದವರೆಗೆ ಅಷ್ಟು ಉದ್ದದ ಕಾಮನಬಿಲ್ಲು ಚಾಚಿಕೊಂಡಿತ್ತು. ನಾನು ಅದಾಗಲೇ ಮಡಿಕೇರಿಯ ದಾರಿಯಲ್ಲಿ ದೇವರಕೊಲ್ಲಿಯ ತನಕ ಏರುದಾರಿಯಲ್ಲಿ ನನ್ನ ಅಟ್ಲಾಸು ಸೈಕಲ್ಲು ಹೊಡೆಯುತ್ತಾ ಬಂದು ಬಿಟ್ಟಿದ್ದೆ. ಇನ್ನು ಕತ್ತಲಾಗುವುದು ಅನಿಸಿದಾಗ ಇಳಿದಾರಿಯಲ್ಲಿ ವಾಪಾಸು ಹೊರಟೆ. ದೇವರಕೊಲ್ಲಿ ಕೊನೆಯ ತಿರುವು ಮುಗಿದ ಮೇಲೆ ಸಿಗುವ ಸರಕಾರಿ ಗೇರುತೋಟದ ಕಳ್ಳದಾರಿಯ ಬದಿಯಲ್ಲಿ ತಾಲ್ಲೂಕು ವಿದ್ಯಾಧಿಕಾರಿಗಳಾದ ಹೂವಯ್ಯನವರ ಜೀಪು ನಿಂತಿತ್ತು. ನಾನು ಜೀಪಿಗೆ ಸೈಕಲ್ಲು ಒರಗಿಸಿ ಕಳ್ಳದಾರಿಯೊಳಗೆ ನುಸುಳಿದೆ. ಅಲ್ಲಿ ದೊಡ್ಡದೊಂದು ಗೇರುಮರದ ಕೆಳಗೆ ಮಳೆಯಲ್ಲಿ ನೆನೆದ ತರಗೆಲೆಗಳ ಮೇಲೆ ಎಲಿಜಬೆತ್ ಟೀಚರು ತಮ್ಮ ಸೆರಗನ್ನು ಹಾಸಿದ್ದರು. ಹಾಸಿದ್ದ ಸೆರಗಿನ ಮೇಲೆ ಹೂವಯ್ಯನವರು ತಲೆಯಿಟ್ಟು ಮಲಗಿದ್ದರು. ಎಲಿಜಬೆತ್ ಟೀಚರ ಅಷ್ಟುದ್ದದ್ದ ಮುಡಿಯೂ ಅವರ ಮುಖವೂ ಆಗ ತಾನೇ ನಿಂತುಹೋಗಿದ್ದ ಮಳೆಯ ಹನಿಗಳು ಬಿದ್ದು ಒದ್ದೆಯಾಗಿತ್ತು. ಸೆರಗಿಲ್ಲದ ಎಲಿಜಬೆತ್ ಟೀಚರ ಎದೆ ಹೂವಯ್ಯನವರ ಮುಖಕ್ಕೆ ತಾಗಿಕೊಂಡಿರುವ ಹಾಗೆ ಆ ಸಂಜೆಗತ್ತಲಲ್ಲಿ ಕಾಣಿಸುತ್ತಿತ್ತು. ನಾನು ಸದ್ದಿಲ್ಲದೆ ಹಿಂತಿರುಗಿ ನಿಂತಿದ್ದ ಜೀಪಿಗೆ ಒರಗಿಸಿದ್ದ ಸೈಕಲ್ಲು ಹತ್ತಿ ಇಳಿಜಾರಿನಲ್ಲಿ ಸೈಕಲ್ಲು ಬಿಟ್ಟುಕೊಂಡು ವಾಪಾಸು ಮನೆ ತಲುಪಿದಾಗ ಪೂರ್ತಿ ಕತ್ತಲಾಗಿತ್ತು. ಆವತ್ತಿನಿಂದ ನನಗೆ ಎಲಿಜಬೆತ್ ಟೀಚರು ಮತ್ತು ಹೂವಯ್ಯನವರು ಕನಸಿನಲ್ಲಿ ಬರುತ್ತಿದ್ದರು. ಕನಸಿನಲ್ಲಿ ಅವರ ಜೊತೆಗೆ ನಾನೂ ಹುಡುಗಿಯ ಹಾಗೆ ಮಲಗಿರುತ್ತಿದ್ದೆ. ಕಾಣುವ ಆ ಕನಸುಗಳು ನಿಜವಾ ಅಥವಾ ನಾನು ನಿಜವಾಗಿ ನೋಡಿದ್ದು ಕನಸಾ ಎಂಬುದು ಅರಿವಾಗದೆ ನಾನು ಕನಲಿದ್ದೆ. ಪರಮಹಂಸ ಬಂಡೆಯ ಮೇಲೆ ಬುತ್ತಿ ಬಿಚ್ಚಿಕೊಂಡು ಕುಳಿತಾಗ ಇದನ್ನು ಕನಸೆಂದು ಹೇಳುವುದಾ ಅಥವಾ ನಿಜವೆಂದು ಹೇಳುವುದಾ ಎಂದು ಗೊತ್ತಾಗದೆ ಕೊನೆಗೆ ಏನೊಂದೂ ಹೇಳದೆ ಸುಮ್ಮನಿರುವುದು ಎಂದು ತೀರ್ಮಾನಿಸಿಕೊಂಡು ಸುಮ್ಮನಿದ್ದೆ.

ಇನ್ನೊಂದು ಶನಿವಾರ ಬಂಡೆಯ ಮೇಲೆ ಬುತ್ತಿ ಬಿಚ್ಚಿಕೊಂಡು ಕುಳಿತಿದ್ದಾಗ ಎಲಿಜಬೆತ್ ಟೀಚರ್ ಮತ್ತು ಹೂವಯ್ಯನವರ ಗೇರು ತೋಟದ ಪ್ರಣಯವನ್ನು ಅರ್ಧ ಕನಸು ಮತ್ತು ಅರ್ಧ ನಿಜ ಎನ್ನುವ ಹಾಗೆ ಹೇಳಿದ್ದೆ. ಬೇರೆ ಬೇರೆ ಊರುಗಳಿಂದ ಸೈಕಲ್ಲು ಹತ್ತಿ ಶಾಲೆಗೆ ಬರುವ ಹುಡುಗರು ನಾವು. ಶನಿವಾರವೂ ಬುತ್ತಿ ತರುತ್ತಿದ್ದೆವು. ಶನಿವಾರ ಬುತ್ತಿ ಮುಗಿಸಿ ನಾವು ಶಾಲೆಯ ಮೈದಾನದಲ್ಲಿ ರಬ್ಬರ್ ಟೆನಿಸ್ ಬಾಲಿನಲ್ಲಿ ಕೈಯ್ಯ ಕೆಳಗಿಂದ ಚೆಂಡು ಎಸೆಯುವ ಕ್ರಿಕೆಟ್ ಆಡುತ್ತಿದ್ದೆವು. ಕ್ರಿಕೆಟ್ ಆಡಿ ಮುಗಿಸಿ ಹೊಳೆಯಲ್ಲಿ ಈಜುತ್ತಿದ್ದೆವು. ಎಲ್ಲರೂ ಅಂಗಿ ಬಿಚ್ಚಿ ಹೊಳೆಗೆ ಹಾರಿದರೆ ನಾನು ಅಂಗಿಯಲ್ಲೇ ನೀರಿಗೆ ಇಳಿಯುತ್ತಿದ್ದೆ. ಹುಡುಗರ ಮುಂದೆ ಅಂಗಿ ಬಿಚ್ಚಲು ಸಂಕೋಚ ನನಗೆ.

ಮೈಸೂರಿನಲ್ಲಿ ನನ್ನ ಸಂಗಾತಿಯಾಗಿರುವ ಕೃಷ್ಣಕುಮಾರಿಗೂ ಹೀಗೇ ಆಗಿತ್ತಂತೆ. ಬಹುಶಃ ಜೀವನದಲ್ಲಿ ನನಗೆ ಆಗಿರುವುದೆಲ್ಲಾ ಅವಳಿಗೂ ಆಗಿದೆ. ಅದಕ್ಕೇ ನಾವಿಬ್ಬರು ಜೊತೆಯಲ್ಲಿ ಇದ್ದೇವೆ. ನಾನು ಹೆಂಡತಿಯ ಪಾತ್ರ ವಹಿಸಿದ್ದೇನೆ. ಅವಳು ಗಂಡನ ಪಾತ್ರ. ಆದರೆ ನಮಗಿಬ್ಬರಿಗೂ ಗಂಡಸಿನ ಅಥವಾ ಹೆಂಗಸಿನ ಅಂಗಗಳಿಲ್ಲ. ಆದರೆ ನಾವಿಬ್ಬರೂ ಎಲ್ಲ ಗಂಡು ಹೆಣ್ಣುಗಳಿಗಿಂತ ಸುಖಿಗಳಾಗಿದ್ದೇವೆ. ಅವಳದು ಸಿಂಹ ರಾಶಿಯಂತೆ. ಸಿಂಹದ ಹಾಗೇ ಆಡುತ್ತಾಳೆ. ನನ್ನದು ಮೀನರಾಶಿ. ಮೀನಿನ ಹಾಗೆ ಜಾರುತ್ತೇನೆ. ಸಾಹಿತ್ಯ, ಸಂಗೀತ, ನಾಟಕ, ಪ್ರತಿಭಟನೆ… ಇರುಳಾದರೆ ಪ್ರಾಣಿಗಳ ಹಾಗೆ ಸಾಂಗತ್ಯ. ಮೈಸೂರಿನ ಎಲ್ಲ ನಿಧಾನ ವಂಶಸ್ಥರ ಕಣ್ಣು ಕುಕ್ಕುವ ಹಾಗೆ ದಿನಾ ಬೆಳಗು ಸಂಜೆ ನಾವಿಬ್ಬರು ಕುಕ್ಕರಕೆರೆಗೆ ಮೂರು ಸುತ್ತು ಓಡುತ್ತೇವೆ.

ಆವತ್ತು ಶನಿವಾರ. ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಿಗೆ ನಾನು ಸಿಟ್ಟಲ್ಲಿ, ‘ಲಾರ್ಡ್ ಕಾರ್ನ್ ವಾಲಿಸ್’ ಎಂದು ನಾಮಕರಣ ಮಾಡಿದ ದಿನ. ನಾವು ಪರಮಹಂಸ ಕಲಿಕಾ ಗುಂಪಿನ ಹುಡುಗರು ಬಂಡೆಯ ಮೇಲೆ ಬುತ್ತಿ ತಿಂದು ಮುಗಿಸಿ, ಟೆನ್ನಿಸ್ ಬಾಲಿನ ಕ್ರಿಕೆಟ್ಟೂ ಆಡಿ, ಹೊಳೆಯಲ್ಲೂ ಈಜಿ ಕತ್ತಲಾಗುತ್ತಿತ್ತು. ಕಾರ್ನ್ ವಾಲಿಸ್ ಹೂವಯ್ಯನವರ ಜೀಪಿನಲ್ಲಿ ಎಲಿಜಬೆತ್ ಟೀಚರು ಮುದುಡಿ ಕುಳಿತುಕೊಂಡು ಮಡಿಕೇರಿ ರಸ್ತೆಯಲ್ಲಿ ಹೋಗುತ್ತಿರುವುದು ಹೊಳೆಯಲ್ಲಿ ಈಜುತ್ತಿದ್ದ ನಮಗೆ ಕಂಡಿತ್ತು. ನಾವು ಈಜು ಮುಗಿಸಿ ನೀರಿನಿಂದ ಎದ್ದೆವು. ಅವರು ನಾಲ್ಕೂ ಜನ ಹುಡುಗರು ಸಾಲಾಗಿ ಅವರವರ ಗಿಡಗಳಿಗೆ ಉಚ್ಚೆ ಹೊಯ್ಯಲು ನಿಂತರು. ಇದು ಅವರು ನಾಲ್ವರ ದಿನನಿತ್ಯದ ಅಭ್ಯಾಸ. ಹೊಳೆಯ ಬದಿಯಲ್ಲಿ ದೊಡ್ಡಕ್ಕೆ ಬೆಳೆದಿದ್ದ ಕಮ್ಯುನಿಸ್ಟ್ ಅಥವಾ ಕಾಂಗ್ರೆಸ್ ಎಂದು ಕರೆಯಲ್ಪಡುವ ನಾಲ್ಕು ಗಿಡಗಳನ್ನು ಅವರು ಆಯ್ದುಕೊಂಡಿದ್ದರು. ಶಾಲೆಯಲ್ಲಿ ಉಚ್ಚೆ ಹುಯ್ಯಲು ಬಿಟ್ಟಾಗಲೆಲ್ಲ ಅದಕ್ಕೆ ಉದ್ದಕ್ಕೆ ರಭಸದಲ್ಲಿ ಹುಯ್ಯುತ್ತಿದ್ದರು. ಅವರ ಉಚ್ಚೆಯ ಲವಣದಿಂದಾಗಿ ಯಾರ ಗಿಡ ಮೊದಲು ಸಾಯುವುದು ಎಂಬುದು ಅವರ ಸ್ಪರ್ಧೆ. ನಾನು ಸ್ಪರ್ದೆಗೆ ಇರಲಿಲ್ಲ. ಯಾಕೆಂದರೆ ನಾನು ನದಿಯಲ್ಲಿ ಈಜುವಾಗಲೇ ಗೊತ್ತಾಗದ ಹಾಗೆ ನೀರಿನಲ್ಲಿ ಹುಯ್ದುಬಿಡುತ್ತಿದ್ದೆ. ಹುಡುಗರ ಹಾಗೆ ದೂರಕ್ಕೆ ರಭಸದಲ್ಲಿ ಹುಯ್ಯುವುದು ನನಗೆ ಸಾಧ್ಯವಿರಲಿಲ್ಲ. ಅದಕ್ಕಾಗಿ ನಾನು, `ನನ್ನ ಅಪ್ಪ ಕಮ್ಯುನಿಸ್ಟು, ನನ್ನ ಅಮ್ಮ ಕಾಂಗ್ರೆಸ್ಸು. ಅದಕ್ಕಾಗಿ ನಾನು ಹುಯ್ಯುವುದಿಲ್ಲ’ ಎಂದು ಸುಳ್ಳು ಹೇಳುತ್ತಿದ್ದೆ.

ಆವತ್ತು ಅವರು ಗಿಡಗಳಿಗೆ ರಭಸದಲ್ಲಿ ಹುಯಿದು ಮುಗಿಸಿದ ಮೇಲೆ ನಾನು ನನ್ನ ಕನಸಿನ ಕುರಿತು ಹೇಳಿದ್ದೆ. ‘ಅದು ಕನಸಲ್ಲ ನಿಜ, ಬೇಕಾದರೆ ತೋರಿಸುತ್ತೇನೆ’ ಎಂದು ಹೇಳಿದ್ದೆ. ಅವರು ನಂಬಲಿಲ್ಲ. ಅವರೆಲ್ಲ ಆಗಲೇ ನನ್ನನ್ನು ಕವಿ ಮತ್ತು ಸುಳ್ಳುಗಾರ ಮತ್ತು ಚಕ್ಕಾ ಎಂದು ತಮಾಷೆ ಮಾಡುತ್ತಿದ್ದರು. ‘ಇಲ್ಲ ಇದು ನಮ್ಮ ಮನೆ ದೇವರಾಣೆಗೂ ನಿಜ. ಬೇಕಾದರೆ ತೋರಿಸುತ್ತೇನೆ’ ಎಂದು ಅವರನ್ನು ನಂಬಿಸಿದೆ. ನಾವು ಐದು ಜನರೂ ನಮ್ಮ ಐದು ಸೈಕಲ್ಲು ಹತ್ತಿ ಮಡಿಕೇರಿಯ ಏರುದಾರಿಯಲ್ಲಿ ಸೈಕಲ್ಲು ಹೊಡೆದೆವು. ನನಗಿನ್ನೂ ನೆನಪಿದೆ, ಪೂರ್ವದ ಬೆಟ್ಟಗಳ ನಡುವಿಂದ ಚಂದ್ರ ಮೇಲೆ ಎದ್ದಿದ್ದ. ದಾರಿಯಲ್ಲೆಲ್ಲ ಹಿತವಾದ ಕಾವಳ.

ಸರಕಾರೀ ಗೇರು ತೋಟದ ಕಳ್ಳದಾರಿಯ ಬದಿಯಲ್ಲಿ ಕಾರ್ನ್ ವಾಲಿಸ್ ಹೂವಯ್ಯನವರ ಜೀಪು ತಣ್ಣಗಾಗಿ ನಿಂತುಕೊಂಡಿತ್ತು. ನಾವು ಐದೂ ಸೈಕಲ್ಲುಗಳನ್ನು ಜೀಪಿಗೆ ಒರಗಿಸಿ ಕಳ್ಳದಾರಿಯೊಳಗೆ ನುಸುಳಿ ಇನ್ನೊಂದು ಗೇರುಮರದ ಅಡಿಯಲ್ಲಿ ಅಡಗಿಕೊಂಡು ನೋಡಿದೆವು. ಹೂವಯ್ಯನವರು ಶಾಲಾ ಮಂಡಳಿಯವರು ತಮಗೆ ತೊಡಿಸಿದ್ದ ಹೂವಿನಹಾರವನ್ನು ಎಲಿಜಬೆತ್ ಟೀಚರ ಕೊರಳಿಗೆ ತೊಡಿಸಿದ್ದರು. ಎಲಿಜಬೆತ್ ಟೀಚರು ಹೂವಯ್ಯನವರ ತಲೆಗೆ ಮಂಜು ಸುರಿಯದ ಹಾಗೆ ತಮ್ಮ ಬಿಚ್ಚಿದ ಸೆರಗನ್ನು ಹೊದಿಸಿದ್ದರು. ಈಗ ನನಗೆ ಅನಿಸುತ್ತದೆ ಅದು ಒಂದು ದಿವ್ಯವಾದ ಗಳಿಗೆಯಾಗಿತ್ತು ಮತ್ತು ನಾನೂ ಅಲ್ಲಿ ಮಲಗಿರಬೇಕಿತ್ತು. ಆದರೆ ನಾವು ಕಾಡುಕೋಳಿ ಹಿಂಡನ್ನು ಕಂಡ ಬೇಟೆಗಾರ ಗುಳ್ಳೆನರಿಗಳ ಹಾಗೆ ಆ ಗೇರು ತೋಟವೆಲ್ಲ ಪ್ರತಿಧ್ವನಿಸುವ ಹಾಗೆ ಕೇಕೆಹಾಕಿ ಬಿಟ್ಟಿದ್ದೆವು. `ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್’ ಎಂದು ಜೋರಾಗಿ ಅರಚಿಕೊಂಡು ಆ ಕಾವಳದಲ್ಲಿ ಸೈಕಲ್ಲು ಹತ್ತಿ ಕಾಣೆಯಾಗಿದ್ದೆವು.

ಇದಾಗಿ ಒಂದು ವಾರದಲ್ಲೇ ಅಂದರೆ, ಹತ್ತನೆಯ ತರಗತಿಯ ಅರ್ಧವಾರ್ಷಿಕ ಪರೀಕ್ಷೆಗೆ ಮೊದಲೇ ಎಲಿಜಬೆತ್ ಟೀಚರು ಶಾಲಾಭಿವೃದ್ಧಿ ಮಂಡಳಿಯ ಆಪೇಕ್ಷೆಯ ಮೇರೆಗೆ ರಾಜೀನಾಮೆ ಸಲ್ಲಿಸಿ ತಮ್ಮ ಊರಾದ ಕೋಲಾರದ ಕಡೆ ಹೊರಟರು. ಹೊರಡುವ ಮೊದಲು, `ಮಕ್ಕಳೇ ದೊಡ್ಡವರಾದ ಮೇಲೆ ನನ್ನನ್ನು ಮರೆಯಬೇಡಿ, ನನ್ನನ್ನು ‘ಕ್ವೀನ್ ಎಲಿಜಬೆತ್’ ಎಂಬ ಅಡ್ಡ ಹೆಸರಿನಿಂದ ನೆನಪಿಟ್ಟುಕೊಳ್ಳಿ. ಆಗ ನೆನಪಿರುತ್ತದೆ’ ಎಂದು ಸ್ವಲ್ಪ ಅತ್ತಿದ್ದರು. ಅವರಿಗೆ ನಮ್ಮ ಮೇಲೆ ಒಂದು ಚೂರೂ ಸಿಟ್ಟಿರಲಿಲ್ಲ. ಯಾಕೆಂದರೆ ಸರಕಾರೀ ಗೇರು ತೋಟದ ಆ ಕಾವಳದಲ್ಲಿ ನಮ್ಮ ಯಾರ ಮುಖವೂ ಅವರಿಗೆ ಕಾಣಿಸಿರಲಿಲ್ಲ. ಪರಮಹಂಸ ಕಲಿಕಾ ಗುಂಪಿನ ಮಕ್ಕಳು ಹಾಗೆ ಪೋಲಿಗಳಾಗುವುದು ಸಾಧ್ಯವಿಲ್ಲ ಎಂಬುದು ಅವರ ಮುಗ್ಧವಾದ ನಂಬಿಕೆಯಾಗಿತ್ತು ಮತ್ತು ಆ ಇರುಳು ಅವರನ್ನು ಕ್ವೀನ್ ಎಲಿಜಬೆತ್ ಎಂದು ಕೂಗಿದ ಕೆಟ್ಟ ಹುಡುಗರ ಆತ್ಮ ಪರಿವರ್ತನೆ ಮಾಡುವುದು ಅವರ ಆಶಯವಾಗಿತ್ತು.

ಅದಾಗಿ ಆರು ತಿಂಗಳ ಆಜುಬಾಜಿನಲ್ಲೇ ಲಾರ್ಡ್ ಕಾರ್ನ್ ವಾಲಿಸರಿಗೂ ಶಿಕ್ಷಣ ಇಲಾಖೆಯ ಶಿಸ್ತಿನ ಕ್ರಮವಾಗಿ ಹಿಂಬಡ್ತಿಯ ರೂಪದಲ್ಲಿ ಬಳ್ಳಾರಿಗೆ ವರ್ಗಾವಣೆಯಾಗಿತ್ತು. ಅದಾಗಿ ಒಂದು ವರ್ಷದಲ್ಲಿ ಮರುಬಡ್ತಿ ಪಡೆದು ಅವರು ಮೈಸೂರಿನಲ್ಲಿ ಮುಂದುವರೆದಿದ್ದರು. ಆಗ ನಾನೂ ಮೈಸೂರಿಗೆ ಬಂದು ಬಿಟ್ಟಿದ್ದೆ. ಬಹುಶಃ ಎಲಿಜಬೆತ್ ಟೀಚರ ಶಾಪವಿರಬೇಕು. ಪರಮಹಂಸ ಕಲಿಕಾ ಗುಂಪಿನ ನಾವು ಐದು ಜನ ಹುಡುಗರೂ ಜೀವನದಲ್ಲಿ ಮುಂದೆ ಬರಲಿಲ್ಲ. ನಾನು ಹೆಣ್ಣೋ ಅಥವಾ ಗಂಡೋ ಎಂದು ಗೊತ್ತಾಗದ ತಳಮಳದಲ್ಲಿ ಊರು ಬಿಟ್ಟವನು ಮೈಸೂರಿಗೆ ಬಂದು ಇಲ್ಲಿ ಸ್ಟುಡಿಯೋ ಕಸುಬು ಕಲಿತು ಸಣ್ಣಗಿನ ಫೋಟೋಗ್ರಾಫರನಾಗಿಬಿಟ್ಟಿದ್ದೆ.

ಇಷ್ಟೆಲ್ಲ ಹೇಳಿದ ಮೇಲೆ ಈ ಕತೆಯನ್ನು ಇಷ್ಟು ಕಾಲದ ನಂತರ ನೆನಪಿಸಿಕೊಂಡು ಯಾಕೆ ಹೇಳುತ್ತಿರುವೆ ಎಂದು ನೀವು ಕೇಳಬಹುದು. ನಿಮ್ಮ ಈ ಪ್ರಶ್ನೆಯಲ್ಲೇ ಈ ಕತೆಯ ಈ ಇಬ್ಬರು ಕಥಾಪಾತ್ರಗಳ ಜೀವನದ ಸೌಂದರ್ಯ ಮತ್ತು ಸಾರ್ಥಕತೆಯೂ ಇದೆ.

ಇಷ್ಟು ಕಾಲದ ನಂತರ ಅಂದರೆ ಸುಮಾರು ಮೂವತ್ತು ವರ್ಷಗಳ ನಂತರ ಕಳೆದ ಶನಿವಾರ ನಾನು ಇವರಿಬ್ಬರನ್ನು ಮೈಸೂರಿನಲ್ಲಿ ನೋಡಿದೆ. ಅದೂ ಸಂಜೆಯ ಹೊತ್ತು ಸಣ್ಣಗಿನ ಜಿನುಗು ಮಳೆ. ಕುಕ್ಕರ ಕೆರೆಯ ಪಶ್ಚಿಮ ತಟದಲ್ಲಿ ನಾನು ಮತ್ತು ಕೃಷ್ಣಕುಮಾರಿ ಓಡುತ್ತಿದ್ದೆವು. ಓಟದ ಮೊದಲ ಸುತ್ತಿನಲ್ಲಿ ಅವರಿಬ್ಬರು ಎದುರಿನಿಂದ ನಡೆದು ಬರುತ್ತಿದ್ದರು. ಲಾರ್ಡ್ ಕಾರ್ನ್ ವಾಲೀಸರ ನಿವೃತ್ತಿಯ ನಂತರ ಮೈಸೂರಿನ ಕುವೆಂಪು ಬಡಾವಣೆಯಲ್ಲೇ ಇರುವುದರಿಂದ ಅವರ ಗುರುತು ಹಿಡಿಯುವುದು ನನಗೆ ಕಷ್ಟವಿರಲಿಲ್ಲ. ಆದರೆ ಅವರ ಜೊತೆಗೆ ನಡೆದು ಬರುತ್ತಿರುವುದು ಕ್ವೀನ್ ಎಲಿಜಬೆತ್ ಎಂದು ನನಗೆ ನಂಬಲಾಗಲಿಲ್ಲ. ನಿಂತು ಹಿಂತಿರುಗಿ ನೋಡಿ ಮತ್ತೆ ಓಡುತ್ತ ಕೃಷ್ಣಕುಮಾರಿಯನ್ನು ಸೇರಿಕೊಂಡೆ. `ನೀನು ಈಗ ನೋಡಿರುವುದೂ ಕನಸಲ್ಲಿ ಆಗಿರಬಹುದು ಸುಮ್ನೆ ಮುಚ್ಕೊಂಡು ಓಡು’ ಎಂದು ಗದರಿದ್ದಳು.

`ಮಕ್ಕಳೇ ಗುಲಾಬಿ ನೋಡಲು ಸುಂದರವಲ್ಲವಾ… ಆದರೆ ಅದರ ಕೆಳಗೆ ಮುಳ್ಳು ಇರುತ್ತದೆ, ಆಡಿನ ಮರಿ ನೋಡಲು ಚಂದ ಇರುತ್ತದಲ್ಲವಾ. ಆದರೆ ಬೆಳೆದು ದೊಡ್ಡದಾಗುವಾಗ ಅದಕ್ಕೆ ಕೊಂಬು ಬರುತ್ತದೆ. ನಮ್ಮನ್ನು ಗುದ್ದಿ ನೋವು ಮಾಡುತ್ತದೆ. ಆದರೆ ಮಲ್ಲಿಗೆ ನೋಡಿ. ಅದು ನೋಡಲೂ ಬಿಳಿ, ಮುಟ್ಟಲೂ ಮೃದು, ಪರಿಮಳವೂ ಚಂದ, ಮುಳ್ಳೂ ಇಲ್ಲ, ಕೊಂಬೂ ಇಲ್ಲ. ನಾವು ಮಲ್ಲಿಗೆಯ ಹಾಗೆ ಇರಬೇಕಾಗುತ್ತದಲ್ಲವಾ ಮಕ್ಕಳೇ’ ಎಂದು ತಮ್ಮ ಮಲ್ಲಿಗೆಯ ಹಾಗಿರುವ ಮುಖವನ್ನು ಇನ್ನೂ ಚೂಪು ಮಾಡಿಕೊಂಡು ಹೇಳುತ್ತಿದ್ದರು.

ಎರಡನೆಯ ಸುತ್ತಲ್ಲಿ ಅವರಿಬ್ಬರು ಕೆರೆಯ ದಂಡೆಯ ಮೇಲಿರುವ ಲತಾಮಂಟಪದಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರು. ಎಲಿಜಬೆತ್ ಟೀಚರು ಕೊಂಚ ದಪ್ಪಗಾಗಿದ್ದರು. ಅವರ ಮುಖದಲ್ಲಿ ಕಪ್ಪುಕಲೆಗಳು ಹರಡುತ್ತಿರುವುದು ಮತ್ತು ವಯಸ್ಸಾಗಿರುವುದು ಎಂಬುದನ್ನು ಬಿಟ್ಟರೆ ಲಿಲ್ಲಿ ಹೂವಿನ ಹಾಗೇ ಇದ್ದರು. ಅಲ್ಲಲ್ಲಿ ಬೆಳ್ಳಗಾಗಿದ್ದ ಕೂದಲನ್ನು ಎದೆಯವರೆಗೂ ಬಿಟ್ಟುಕೊಂಡು ಕುಳಿತಿದ್ದರು. ಅವರ ಮುಖದಲ್ಲಿ ಅದೇ ಉಲ್ಲಾಸದ ನಗು. ಕಾರ್ನ್ ವಾಲಿಸರು ಬಹುಶಃ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದಾಗಿ ಪೇಲವವಾಗಿ ಬಿಳಿಚಿಕೊಂಡಿದ್ದರು. ಟೀಚರು ಬಳಿಯಲ್ಲಿ ಇರುವುದರಿಂದ ಏನೋ ಸಾಂತ್ವನಗೊಂಡವರಂತೆ ಅವರ ಮುಖಭಾವವಿತ್ತು. `ಮೂವತ್ತು ವರ್ಷಗಳ ಹಿಂದಿನ ಹಾಗೆ ಅವರ ಮುಂದೆ ಗುಳ್ಳೆನರಿ ತರಾ ಕಿರ್ಚಬೇಡ. ಮುಚ್ಚಿಕೊಂಡು ಓಡ್ತಾ ಇರು, ಅವರ ಪಾಡಿಗೆ ಅವರನ್ನ ಬಿಡು’ ಕೃಷ್ಣಕುಮಾರಿ ತಾಕೀತು ಮಾಡಿದ್ದಳು. ಹಾಗಾಗಿ ಮಾತಾಡದೇ ಅವರನ್ನು ಹಾದು ಓಡಿದೆ. ಮೂರನೇ ಸುತ್ತು ಬರುವ ಹೊತ್ತಿಗೆ ಕತ್ತಲಾಗಿತ್ತು. ಅವರಿಬ್ಬರೂ ಅಲ್ಲಿರಲಿಲ್ಲ. `ಬಹುಶಃ ಮಕ್ಕಳು ಆಡುವ ಅರಳಿ ಮರದ ಕೆಳಗಿನ ಉಯ್ಯಾಲೆಯ ಬಳಿ ಕ್ವೀನ್ ಎಲಿಜಬೆತ್ ತಮ್ಮ ಸೆರಗಿನಿಂದ ಲಾರ್ಡ್ ಕಾರ್ನ್ ವಾಲೀಸ್ ಹೂವಯ್ಯನವರ ಸುಸ್ತಾದ ಮುಖಕ್ಕೆ ಗಾಳಿ ಬೀಸುತ್ತಿರಬಹುದು’ ಎಂದು ನಾನು ಕೃಷ್ಣಕುಮಾರಿಗೆ ಹೇಳಿದ್ದೆ.

ಅವಳು ಮಾದಕವಾಗಿ ನಕ್ಕಿದ್ದಳು.

೨.

ಯಾರಾದರೂ ನನ್ನೊಡನೆ, ‘ನೀನು ಯಾರು?’ ಎಂದು ಕೇಳಿದರೆ ನನಗೆ ನಗು ಬರುತ್ತದೆ. ‘ನೀನು ಗಂಡಾ ಅಥವಾ ಹೆಣ್ಣಾ? ಎಂದು ಕೇಳಿದರೂ ಹಾಗೆಯೇ. `ನೀನು ಹಿಂದುವಾ? ಮುಸಲ್ಮಾನನಾ? ಕಿರಿಸ್ತೀಯನಾ?’ ಎಂದರೂ ನಗು ಬರುತ್ತದೆ. `ನೀನು ಭಾರತೀಯನಾ?’ ಎಂದು ಕೇಳಿದರೂ ಸುಲಭವಾಗಿ ಉತ್ತರಿಸಲಾಗುವುದಿಲ್ಲ. ಏಕೆಂದರೆ ಉತ್ತರಿಸುವ ಮೊದಲು ಒಂದಿಷ್ಟು ಇತಿಹಾಸ ಹೇಳಬೇಕಾಗುತ್ತದೆ. ನಾನು ಸಿಂಹಳದಿಂದ ದೋಣಿ ಹತ್ತಿ ಬಂದ ತಮಿಳು ನಿರಾಶ್ರಿತ ತಂದೆಗೆ ಹುಟ್ಟಿದವನು. ನನ್ನ ತಾಯಿ ಸಿಂಹಳದ ಬೌದ್ಧ ಹೆಂಗಸು. ಅವರಿಬ್ಬರು ಸಿಂಹಳದಿಂದ ನಿರಾಶ್ರಿತರಾಗಿ ಮೀನುಗಾರರ ದೋಣಿ ಹತ್ತಿ ತಮಿಳುನಾಡಿನ ರಾಮೇಶ್ವರಂ ತಲುಪಿ ಅಲ್ಲಿಂದ ಈ ಕಥೆಯ ಮೊದಲಲ್ಲಿ ಬರುವ ದಕ್ಷಿಣಕನ್ನಡ ಮತ್ತು ಕೊಡಗಿನ ಗಡಿಯ ಊರಿನ ಸರಕಾರೀ ಗೇರು ತೋಟಕ್ಕೆ ಬಂದು ತಲುಪಿದಾಗ ನಾನು ನನ್ನ ತಾಯಿಯ ಹೊಟ್ಟೆಯಲ್ಲಿದ್ದೆ. ಅದು ಬಹುಶಃ ೧೯೬೫ನೇ ಇಸವಿ. ಭಾರತದ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿಗಳು ಕಾಲವಾಗಿ ಇಂದಿರಾಗಾಂಧಿ ಅಧಿಕಾರಕ್ಕೆ ಬಂದಿದ್ದರು. ಸಿಂಹಳದಲ್ಲಿ ಕೊಲೆಯಾಗಬೇಕಿದ್ದ ತಮ್ಮಿಬ್ಬರನ್ನು ರಕ್ಷಿಸಿ ಈ ಗೇರು ತೋಟಕ್ಕೆ ತಂದು ಬಿಟ್ಟಿದ್ದು ಇಂದಿರಾಗಾಂಧಿಯೇ ಎಂದು ಅವರು ನಂಬಿಕೊಂಡಿದ್ದರು. ಮಗು ಹೆಣ್ಣಾಗಿದ್ದರೆ ‘ಇಂದಿರಾ’ ಎಂದೇ ಹೆಸರಿಡಬೇಕೆಂದುಕೊಂಡಿದ್ದರಂತೆ. ಗಂಡಾಗಿದ್ದರೆ ‘ಬಹದ್ದೂರ್’. ಆದರೆ ಎರಡೂ ಆಗಿರದ ನನಗೆ ‘ವಿಜಯ’ ಎಂಬ ಹೆಸರಿಟ್ಟಿದ್ದರು. ಶಾಲೆಗೆ ಸೇರಿಸುವಾಗ ಮೇರಿ ಸಿಸ್ಟರ್ `ಬರೀ ವಿಜಯ ಆಗುವುದಿಲ್ಲ. ವಿಜಯಕುಮಾರ್ ಮಾಡುತ್ತೇನೆ’ ಎಂದು ನನ್ನನ್ನು ದಾಖಲೆಯಲ್ಲಿ `ಗಂಡು’ ಎಂದು ಬರೆದಿದ್ದರು. ರಾಷ್ಟ್ರೀಯತೆ ಎಂದು ಕೇಳಿದಾಗ ನನ್ನ ಅಪ್ಪ ತಡವರಿಸಿದ್ದರು. ಆಮೇಲೆ ‘ಶ್ರೀಲಂಕಾ ನಿರಾಶ್ರಿತ’ ಎಂದು ಬರೆಸಿದ್ದರು. ನನ್ನ ತಾಯಿಗೆ ಇನ್ನೂ ತವರಿನ ಮಮತೆ ಉಳಿದಿತ್ತು. ಎಂದಾದರೂ ಸಿಂಹಳಕ್ಕೆ ವಾಪಾಸು ಹೋಗಬೇಕು ಎಂಬ ಆಶೆ ಇತ್ತು. ನಾನು ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ನನ್ನ ತಂದೆ ಕುಡಿದು ರಸ್ತೆ ದಾಟುತ್ತಿರುವಾಗ ಮರದ ದಿನ್ನೆಗಳನ್ನು ಸಾಗಿಸುವ ಲಾರಿಯೊಂದರ ಚಕ್ರಕ್ಕೆ ಸಿಲುಕಿ ತೀರಿಹೋದರು. ಆ ಲಾರಿಯ ಹೆಸರು ನನಗೆ ಇನ್ನೂ ನೆನಪಿದೆ. ಅದರ ಹೆಸರು ಬಾಹುಬಲಿ. ಪುತ್ತೂರಿನ ಕಡೆಯ ಜೈನ ಮಾಲಿಕರೊಬ್ಬರಿಗೆ ಸೇರಿದ್ದು. ಅವರು ಕೇಸು ಹಾಕಿಸಲು ಬಿಡದೆ ಒಂದಿಷ್ಟು ಪರಿಹಾರ ಕೊಟ್ಟು ಲಾರಿಯನ್ನು ಬಿಡಿಸಿಕೊಂಡರು. ಆ ಹಣವನ್ನು ಇಸಿದುಕೊಂಡು ನಾನು ಮತ್ತು ತಾಯಿ ಮೈಸೂರು ಸೇರಿಕೊಂಡೆವು. ನಾನು ಸ್ಟುಡಿಯೋ ಕೆಲಸಕ್ಕೆ ಸೇರಿಕೊಂಡೆ. ಕೈಯಲ್ಲಿದ್ದ ಕಾಸನ್ನು ತಾಯಿಗೆ ಕೊಟ್ಟು ಮದರಾಸಿಗೆ ರೈಲು ಹತ್ತಿಸಿದೆ. ಬಹುಶಃ ಅವಳು ಸಿಂಹಳ ತಲುಪಿರಬೇಕು. ನಾನು ತಮಿಳನಾಗಿರುವುದರಿಂದ ಅಲ್ಲಿಗೆ ಹೋಗಲು ಭಯ ಹಾಗಾಗಿ ಇಲ್ಲೇ ಉಳಿದಿರುವೆ. ಒಂದಲ್ಲ ಒಂದು ದಿನ ಅಲ್ಲಿ ತಮಿಳು ಈಳಂ ಉದಯವಾಗಬಹುದು ಎನ್ನುವ ಕನಸು ಹಾಗೇ ಉಳಿದುಬಿಟ್ಟಿದೆ. `ನೀನು ಗಂಡೂ ಅಲ್ಲ, ಹಿಂದುವೂ ಅಲ್ಲ, ಇಂಡಿಯನ್ನೂ ಅಲ್ಲ. ನೀನು ಅಪ್ಪಟ ತಾಜಾ ಹೆಣ್ಣು’ ಎಂದು ಮೂವತ್ತು ವರ್ಷಗಳ ಸಹಬಾಳ್ವೆಯ ನಂತರವೂ ಅದೇ ಉದ್ರೇಕದಲ್ಲಿ ಕೃಷ್ಣಕುಮಾರಿ ಈಗಲೂ ಮೈಮೇಲೆ ಮುಗಿಬೀಳುತ್ತಾಳೆ. ನಾನೂ ಒಡ್ಡಿಕೊಳ್ಳುತ್ತೇನೆ.

ಆಕೆ ನಂಜನಗೂಡಿನ ಕಡೆಯ ಉಪ್ಪು ಮಾರಿ ಬದುಕುವ ಕುಲಕ್ಕೆ ಸೇರಿದವಳು. ದೊಡ್ಡವಳಾದ ಮೇಲೂ ಆಕೆಯ ಎದೆ ಸಪಾಟಾಗಿಯೇ ಇತ್ತು. ತೊಡೆಯ ನಡುವಿಂದ ಎದೆಯವರೆಗೂ ಹುಲ್ಲುಗಾವಲಿನಂತೆ ಬೆಳೆದಿರುವ ಬಲಿಷ್ಟ ರೋಮ. ಎದೆಗೆ ಪ್ಯಾಡು ಧರಿಸಿ, ರೋಮವನ್ನು ಬೋಳಿಸಿ ಗುಬ್ಬಿಯ ಬಳಿಯ ಯಾವುದೋ ನಾಟಕ ಕಂಪೆನಿಯಲ್ಲಿ ನರ್ತಕಿಯ ರೋಲು ಮಾಡಿಕೊಂಡಿದ್ದಳು. ಬಳುಕುವ ಬಳ್ಳಿಯ ದೇಹದಲ್ಲಿ ರಾಕ್ಷಸ ಬಲ ಇಟ್ಟುಕೊಂಡೇ ನನ್ನ ಹೀರುವ ಜಿಗಣೆಯಂತವಳು. ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆ’ ಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು. ಹಾಗಾಗಿ ಇನ್ನು ತಡಮಾಡದೆ ಹೇಳುತ್ತಾ ಹೋಗುತ್ತೇನೆ.

ಈ ಕಥೆಯ ಮೊದಲಲ್ಲಿ ನಾನು ಹೇಳಿದ ಊರು ಒಂದು ತರಹದ ವಿಚಿತ್ರ ಪ್ರದೇಶ. ಇಲ್ಲಿರುವ ಬಹುತೇಕರು ಇಲ್ಲಿನವರಲ್ಲ. ನನ್ನ ತಂದೆಯ ಹಾಗೆಯೇ ಎಲ್ಲೆಲ್ಲಿಂದಲೋ ಯಾವುಯಾವುದೋ ಕಾರಣಗಳಿಗಾಗಿ ಇಲ್ಲಿ ಬಂದವರು. ಅತ್ತ ಕಾಡೂ ಅಲ್ಲದ, ಇತ್ತ ಊರೂ ಅಲ್ಲದ ಊರದು. ಕಾಡಿನ ನಡುವೆ ಸರಕಾರೀ ಗೇರು ತೋಟ. ನದಿಯ ಅಂಚಿನಿಂದ ಶುರುವಾಗುವ ಈ ತೋಟದ ಒಂದು ಕೊನೆ ಊರ ಮೇಲೆ ತಲೆಯಂತೆ ಕಾಣಿಸುವ ಕಲ್ಲಾಳ ಮಲೆಯ ತನಕ ಹರಡಿಕೊಂಡಿದೆ. ಇನ್ನೊಂದು ಕೊನೆ ಕರಡಿಬೆಟ್ಟದ ಬುಡದಿಂದ ಹಿಡಿದು ಮಡಿಕೇರಿ ರಸ್ತೆಯ ಉದ್ದಕ್ಕೆ ದೇವರಕೊಲ್ಲಿಯವರೆಗೆ ಚಾಚಿಕೊಂಡಿದೆ. ಈ ಕಲ್ಲಾಳ ಬೆಟ್ಟದ ಮೇಲೆ ಸದಾ ಧುಮುಕುವ ಒಂದು ಜಲಪಾತ. ಈ ಜಲಪಾತದ ಕೆಳಗೆ ಕೊಂಚ ದೂರದಲ್ಲಿ ಸರಕಾರ ನನ್ನ ತಂದೆಗೆ ಇರಲು ಕೊಟ್ಟಿದ್ದ ಕಾವಲುಗಾರನ ಬಿಡಾರ. ಯಾವಾಗಲೂ ಕಿವಿಯಲ್ಲಿ ಮೊರೆಯುವ ಜಲಪಾತದ ಸದ್ದು. ಬಿಡಾರದ ಮೇಲೆ ಸದಾ ಬೀಳುವ ಜಲಪಾತದ ತುಂತುರು ಹನಿಗಳು ಮತ್ತು ಬಿಸಿಲುಗಾಲದ ಹಗಲೆಲ್ಲ ಚಾಚಿಕೊಂಡೇ ಇರುವ ಕಾಮನಬಿಲ್ಲು. ಇದನ್ನು ಓದಿ ನಾನು ಕವಿಯಾಗಬೇಕಿತ್ತು ಎಂದು ನಿಮಗೆ ಅನ್ನಿಸಬಹುದು. ಆದರೆ ಕವಿಯಾಗುವ ಆಸೆಗಿಂತ ನನಗೆ ಇದ್ದುದು ಕಾಡಾನೆಗಳ ಹೆದರಿಕೆ. ಅದಕ್ಕೆ ಕಾರಣ ನನ್ನ ತಂದೆ ಭಟ್ಟಿ ಇಳಿಸುತ್ತಿದ್ದ ಗೇರು ಹಣ್ಣಿನ ಸಾರಾಯಿಯ ಪರಿಮಳಕ್ಕೆ ಹಿಂಡುಹಿಂಡಾಗಿ ಬರುತ್ತಿದ್ದ ಕಾಡಾನೆಗಳ ಗುಂಪು. ಆತ ಜಲಪಾತದ ಕೆಳಗೆ ನೆಲದಲ್ಲಿ ಹೊಂಡ ತೋಡಿ ಭಟ್ಟಿ ಇಳಿಸಿದ ಸಾರಾಯಿಯ ಬಾಂಡಲಿಗಳನ್ನು ಮಳೆಗಾಲದ ಬಳಕೆಗಾಗಿ ಹುದುಗಿಸಿಡುತ್ತಿದ್ದ. ಉಳಿದದ್ದನ್ನು ಬೆಟ್ಟ ಇಳಿದು ಕೆಳಗೆ ಊರಿಗೆ ಹೋಗಿ ಮಾರಿ ವಾಪಾಸು ಹಾಡುತ್ತಾ ಬರುತ್ತಿದ್ದ. ಸಾರಾಯಿ ಸಿಗದವರು ಅವನನ್ನು ಹಿಂಬಾಲಿಸಿಕೊಂಡು ಬೆಟ್ಟ ಏರಿ ಬಂದು ಕುಡಿದು ಮತ್ತಾಗಿ ವಾಪಾಸು ಊರಿಗೆ ಉರುಳುತ್ತಾ ಇಳಿಯುತ್ತಿದ್ದರು. ಅವರು ಇಳಿದು ಹೋದ ಮೇಲೆ ಜಲಪಾತದ ಕಡೆಯಿಂದ ಕಾಡಾನೆಗಳು ಘೀಳಿಡುವ ಸದ್ದು ಕೇಳುತ್ತಿತ್ತು. ಗೇರು ಸಾರಾಯಿಯ ಬಾಂಡಲಿಗಳನ್ನು ಕಂಡುಹಿಡಿದು ಕುಡಿದು ಮತ್ತಾದ ಕಾಡಾನೆಗಳ ಸದ್ದು. ಅಪ್ಪ ಯಾವುದಕ್ಕೂ ಹೆದರುತ್ತಿರಲಿಲ್ಲ. ನಾನು ತಮಿಳು ಹುಲಿ ಎಂದು ಆಕಾಶಕ್ಕೆ ತಲುಪುವಷ್ಟು ಎತ್ತರಕ್ಕೆ ಬೆಂಕಿಹಾಕಿಕೊಂಡು ಬಿಡಾರದ ಮುಂದೆ ಕುಳಿತಿರುತ್ತಿದ್ದ. ಅವನು ಹುಲಿಯೇ ಇರಬೇಕು. ಒಂದು ದಿನವೂ ಕಾಡಾನೆಗಳು ಬಿಡಾರದ ಹತ್ತಿರ ಬರಲಿಲ್ಲ. ಆದರೆ ಹುಲಿಯಂತಹ ಅವನು ಬಾಹುಬಲಿ ಲಾರಿಯ ಚಕ್ರಕ್ಕೆ ಸಿಲುಕಿ ಸತ್ತೇ ಹೋದ. ಅವನು ಹೋದ ಮೇಲೆ ಸಾರಾಯಿ ಸಿಗದ ಕಾಡಾನೆಗಳು ಬಿಡಾರದವರೆಗೂ ಬಂದು ಗಲಾಟೆ ಎಬ್ಬಿಸಿ ಹೋಗುತ್ತಿದ್ದವು. ಪಾಪ ಸಿಂಹಳದ ಬೌದ್ಧ ಹೆಂಗಸು ನನ್ನ ತಾಯಿ ನನ್ನ ಅವುಚಿಕೊಂಡು ಸತ್ತೇ ಹೋದವಳಂತೆ ಬೆಳಗಿನ ತನಕ ಕಣ್ಣುಮುಚ್ಚಿಕೊಂಡು ಮಲಗಿರುತ್ತಿದ್ದಳು.

ಬೆಳಗೆ ಎದ್ದರೆ ಬೆಟ್ಟದ ಬಿಡಾರದ ಮೇಲಿಂದ ಊರು ಕಾಣಿಸುತ್ತಿತ್ತು. ಕಪ್ಪು ಟಾರಿನ ಹೆದ್ದಾರಿಗೆ ಸಮಾನಾಂತರವಾಗಿ ಹರಿಯುತ್ತಿದ್ದ ನದಿಯ ಮೇಲೆ ಉದ್ದಕ್ಕೆ ಎದ್ದು ನಿಂತಿರುವ ಕಾವಳ, ಸೇತುವೆಯ ಪಕ್ಕ ಇರುವ ಶಿವನ ದೇವಾಲಯದ ಕಳಸ, ಸೇತುವೆ ಕಳೆದು ಊರ ನಡುವಲ್ಲಿ ಕಾಣಿಸುವ ಮುಸಲ್ಮಾನರ ಮಸೀದಿಯ ಮಿನಾರು, ಊರು ಮುಗಿಯುವ ಕೊನೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ಸಂತ ಅನ್ನಮ್ಮನವರ ಚರ್ಚಿನ ಶಿಲುಬೆ. ಅದಕ್ಕೆ ಒತ್ತಿಕೊಂಡಂತಿರುವ ಕಿರು ಪುಷ್ಪದ ಭಗಿನಿಯರು ನಡೆಸುತ್ತಿದ್ದ ಕನ್ನಡ ಮಾಧ್ಯಮ ಪ್ರೌಢಶಾಲೆ, ಅದರ ಪಕ್ಕದಲ್ಲೇ ಆಟದ ಮೈದಾನ, ಅಡಿಕೆ ತೆಂಗು ಕರಿಮೆಣಸಿನ ತೋಟಗಳು ಮತ್ತು ಹೊಳೆಯುವ ಭತ್ತದ ಗದ್ದೆಗಳು. ರಸ್ತೆಯ ಉದ್ದಕ್ಕೆ ಮೈಸೂರಿನಿಂದ ಬಂದು ನಿಲ್ಲುವ ಮರ ಸಾಗಿಸುವ ಲಾರಿಗಳು ಮತ್ತು ಸಣ್ಣಸಣ್ಣಗೆ ಕಾಣಿಸುವ ಮನುಷ್ಯರು. ಎದುರಿಗೆ ಕಾಣಿಸುವ ಕಾಡಿಲ್ಲದ ಬೋಳುಬೋಳು ಮಲೆಗಳು. ಅಲ್ಲೂ ಇನ್ನೊಂದು ಗೇರು ತೋಟ ಏಳುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು.

ನಾನು ಶಾಲೆಯ ಚೀಲ ಬೆನ್ನಿಗೆ ಏರಿಸಿಕೊಂಡು ಬೆಟ್ಟ ಇಳಿದು ಊರಿಗೆ ಬರುತ್ತಿದ್ದೆ. ಆ ಊರೆಂದರೆ ನನಗೆ ಈಗಲೂ ಪ್ರೀತಿ ಮತ್ತು ಅಷ್ಟೇ ರೇಜಿಗೆ. ಪ್ರೀತಿ ಏಕೆಂದರೆ ಅಲ್ಲಿ ಎಲ್ಲರೂ ಇದ್ದರು. ಕ್ವೀನ್ ಎಲಿಜಬೆತ್ ಟೀಚರು, ಮೇರಿ ಟೀಚರು, ನಮ್ಮ ಪರಮಹಂಸ ಬಂಡೆಯ ಗೆಳೆಯರು ಮತ್ತು ನಾವು ಇತಿಹಾಸವನ್ನು ನೆನಪಿಡುವ ಸಲುವಾಗಿ ನಾವು ನಾನಾ ಹೆಸರುಗಳಿಂದ ಕರೆಯುತ್ತಿದ್ದ ಮನುಷ್ಯರು. ರೇಜಿಗೆ ಯಾಕೆಂದರೆ ಆ ಊರಿನ ಮಲೆಗಳ ಕಾಡುಕಡಿದು ಮರ ಸಾಗಿಸಲು ಎಲ್ಲೆಲ್ಲಿಂದಲೋ ಬಂದಿರುವ ಗಂಡಸರು ಹುಡುಗರಾದ ನಮ್ಮ ಸಖ್ಯ ಬಯಸುತ್ತಿದ್ದರು. ಲಾರಿಗಳ ಚಾಲಕರು, ಮರ ಕುಯ್ಯುವ ಗರಗಸದ ಕೆಲಸದವರು, ಮರದ ಕೂಪಿನ ಮೇಸ್ತ್ರಿಗಳು, ಲಾರಿಗಳಿಗೆ ಲೋಡು ಮಾಡುವ ಲೋಡರುಗಳು, ಅವರಿಗಾಗಿ ಹೋಟೆಲುಗಳನ್ನು ಇಟ್ಟಿರುವ ಮಾಲಕರು, ಅಲ್ಲಿಯ ಕೆಲಸದವರು ಎಲ್ಲರೂ… ಎಲ್ಲೆಲ್ಲಿಂದಲೋ ಬಂದು ತಂಗಿರುವ ಗಂಡಸರು ನಮ್ಮ ಗೆಳೆತನ ಬಯಸುತ್ತಿದ್ದರು. ನಾವು ಪರಮಹಂಸ ಬಂಡೆಯ ಗೆಳೆಯರು ಇದನ್ನು ಅರ್ಧ ಭಯದಲ್ಲಿ, ಅರ್ಧ ತಮಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅಷ್ಟು ಹೊತ್ತಿಗೆ ನಾವು ಒಂಬತ್ತು ಪಾಸಾಗಿ ಹತ್ತಕ್ಕೆ ತಲುಪಿದ್ದೆವು.

(ಇಲ್ಲಸ್ಟ್ರೇಷನ್ ಕಲೆ: ಪ್ರಕಾಶ್ ಬಾಬು)

ಶಾಲೆಯಲ್ಲಿ ಎಲಿಜಬೆತ್ ಟೀಚರಿಲ್ಲದ ನನಗೂ ಮಂಕು ಕವಿದಿತ್ತು. ಕಾರ್ನ್ ವಾಲಿಸ್ ಹೂವಯ್ಯನವರ ಮುಖವೂ ಮನಸಿನೊಳಗಿಂದ ಮರೆಯಾಗಲು ತೊಡಗಿತ್ತು. ನನ್ನನ್ನು ಬಿಟ್ಟು ಉಳಿದವರಿಗೆ ಸಣ್ಣಗೆ ಗಡ್ಡವೂ ಮೀಸೆಯೂ ಬರಲು ಶುರುವಾಗಿತ್ತು. ನಮ್ಮ ಗುಂಪಿನ ಹುಡುಗನೊಬ್ಬನ ಮನೆಯಲ್ಲಿ ಬಾಡಿಗೆಗೆ ಇದ್ದ ಮಲಯಾಳಿ ಮೇಸ್ತ್ರಿಯೊಬ್ಬ ಆ ಹುಡುಗನ ಚಡ್ಡಿಯೊಳಗೆ ಕೈಹಾಕಲು ಹೋಗಿ ಕಚ್ಚಿಸಿಕೊಂಡೂ ಆಗಿತ್ತು. ಅದನ್ನು ಕೇಳಿ ನಮಗೆ ಭಯವೂ ಆಗಿತ್ತು, ನಗುವೂ ಬಂದಿತ್ತು. ನನಗೂ ಹೇಳಲು ಭಯ ಮತ್ತು ಮುಜುಗರ. ಒಂದಿಷ್ಟು ಗಂಡಸರು ನನ್ನ ಹಿಂದೆಯೂ ಬಿದ್ದಿದ್ದರು. ಅದಾಗಲೇ ನಮ್ಮ ಊರಿನ ಒಂದಿಷ್ಟು ತರುಣರು ಲಾರಿ ಕ್ಲೀನರುಗಳಾಗಿ ಮೈಸೂರಿಗೂ ಹೋಗಿ ಬಂದಿದ್ದರು. ಮೈಸೂರಿನ ದೊಡ್ಡ ದೊಡ್ಡ ಮನೆಗಳು, ಅರಮನೆಗಳು, ದೊಡ್ಡ ದೊಡ್ಡ ರಸ್ತೆಗಳು ಮತ್ತು ಅವರು ಭೇಟಿ ಕೊಟ್ಟ ವೇಶ್ಯಾಗೃಹಗಳು. ಭೇಟಿ ಕೊಟ್ಟು ಬಂದವರು ಕಥೆಗಳನ್ನು ಹೇಳುತ್ತಿದ್ದರು. ನಂಬಲೂ ಆಗದ ಬಿಡಲೂ ಆಗದ ಕಥೆಗಳು. ನಾನು ಅಷ್ಟೂ ಕಥೆಗಳನ್ನು ತಲೆಯೊಳಗೆ ಇಟ್ಟುಕೊಂಡು ಬೆಟ್ಟ ಹತ್ತಿ ಒಬ್ಬನೇ ಜಲಪಾತದ ಕೆಳಗಿರುವ ಬಿಡಾರವನ್ನು ತಲುಪುತ್ತಿದ್ದೆ. ದಾರಿಯಲ್ಲಿ ಕಾಡಾನೆಗಳ ಹೆದರಿಕೆ. ತಂದೆಯಿಲ್ಲದ ಬಿಡಾರದ ಮುಂದೆ ತಾನೂ ಒಂದಿಷ್ಟು ಬೆಂಕಿ ಹಾಕಿಕೊಂಡು ತಾಯಿ ನನಗಾಗಿ ಕಾಯುತ್ತಿದ್ದಳು. ಈಗಲೂ ತಾಯಿಯೆಂದರೆ ನೆನಪಾಗುವುದು ಸಂಜೆಗತ್ತಲಲ್ಲಿ ಆ ಬೆಂಕಿಯ ಮುಂದೆ ನನ್ನ ಕಾಯುತ್ತ ನಿಂತ ಅವಳ ಭಯದ ಮುಖ.

ಇದೇ ಸಮಯದಲ್ಲಿ ಜನವರಿ ತಿಂಗಳ ಒಂದು ಮಧ್ಯಾಹ್ನ ಸುಮಾರು ನಲವತ್ತು ವರ್ಷಗಳ ಹಿಂದೆ ಮೈಸೂರಿನಿಂದ ಬಂದ ಸರಕಾರೀ ಕೆಂಪು ಬಸ್ಸಿನಲ್ಲಿ ಸುಂದರಿಯಾದ ಕೃಷ್ಣಕುಮಾರಿ ನಮ್ಮ ಊರಿಗೆ ಬಂದು ಇಳಿದಳು. ಆವತ್ತು ನಮ್ಮ ಕಿರು ಪುಷ್ಪದ ಭಗಿನಿಯರು ನಡೆಸುತ್ತಿದ್ದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಮತ್ತು ರಜತ ಮಹೋತ್ಸವ. ಊರಿನ ದೊಡ್ಡವರು ಎಚ್ಚಮನಾಯಕ ಎಂಬ ನಾಟಕ ಆಡಬೇಕಿತ್ತು. ಶಿಸ್ತಿನ ಕ್ರಮವಾಗಿ ಹಿಂಬಡ್ತಿಯ ರೂಪದಲ್ಲಿ ಬಳ್ಳಾರಿಗೆ ಹೋಗಿ ಮತ್ತೆ ಮುಂಬಡ್ತಿ ಪಡೆದು ಮೈಸೂರಿಗೆ ಬಂದಿದ್ದ ಕಾರ್ನ್ ವಾಲಿಸ್ ಹೂವಯ್ಯನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲು ಸಂಜೆ ಬಂದು ತಲುಪುವವರಿದ್ದರು. ಅದಕ್ಕೂ ಮೊದಲೇ ಮಧ್ಯಾಹ್ನದ ಕೆಂಪು ಬಸ್ಸಿನಲ್ಲಿ ಕೃಷ್ಣಕುಮಾರಿ ಬಂದು ತಲುಪುವವಳಿದ್ದಳು. ಅವಳಿಗೆ ಎಚ್ಚಮನಾಯಕನ ಆಸ್ಥಾನದಲ್ಲಿ ನೃತ್ಯ ಮಾಡುವ ಪಾತ್ರ. ಮೈಸೂರಿನ ಮರದ ಮಿಲ್ಲಿನ ಮಾಲಿಕರು ವಾರ್ಷಿಕೋತ್ಸವದ ಕೊಡುಗೆಯಾಗಿ ಕೃಷ್ಣಕುಮಾರಿಯನ್ನು ಕಳುಹಿಸಲು ಒಪ್ಪಿದ್ದರು. ಶಾಲೆಯ ಒಂದೊಂದು ಗುಂಪಿನ ಮಕ್ಕಳಿಗೆ ಒಂದೊಂದು ಕರ್ತವ್ಯವನ್ನು ನಿಗದಿ ಪಡಿಸಲಾಗಿತ್ತು. ಪರಮಹಂಸ ಗುಂಪಿನ ನಮಗೆ ಅತಿಥಿಗಳ ಆರೈಕೆಯ ವ್ಯವಸ್ಥೆ. ನನಗೆ ಕೃಷ್ಣಕುಮಾರಿಯ ಆತಿಥ್ಯ ನೋಡಿಕೊಳ್ಳುವ ಕರ್ತವ್ಯ.

ನೆನೆಸಿಕೊಂಡರೆ ಈಗಲೂ ನನಗೆ ಮೈಯಲ್ಲಿ ರೋಮಾಂಚನದ ಮುಳ್ಳುಗಳು ಏಳುತ್ತವೆ. ಅವಳು ಮೈಸೂರಿನಿಂದ ಬಂದ ಕೆಂಪು ಬಸ್ಸು ಇಳಿದಾಗ ಜನವರಿಯ ಚಳಿ ಮತ್ತು ಮಧ್ಯಾಹ್ನದ ತಿಳಿಬಿಸಿಲು. ಅವಳು ಪುಟ್ಟ ಹುಡುಗಿಯಾಗಿದ್ದರೂ ಮೈತುಂಬ ನರ್ತಕಿಯ ವೇಷಭೂಷಣಗಳನ್ನು ಧರಿಸಿಕೊಂಡೇ ಬಸ್ಸು ಇಳಿದಿದ್ದಳು. ಅವಳು ಬಹುಶಃ ನನಗಿಂತ ಎರಡು ಮೂರು ವರ್ಷ ದೊಡ್ಡವಳು. ಮಾಮೂಲಿ ಮನುಷ್ಯರೂ, ಕುಡುಕರೂ, ವ್ಯಭಿಚಾರಿಗಳೂ ಹುಡುಗರನ್ನು ಕಾಡಿಸುತ್ತಿದ್ದ ಮೇಸ್ತ್ರಿಗಳೂ, ಕಾಂಟ್ರಾಕ್ಟುದಾರರೂ, ಲಾರಿಚಾಲಕರೂ, ಲೋಡರುಗಳೂ, ಗರಗಸದ ಕಾರ್ಮಿಕರೂ ಓಡಾಡುತ್ತಿದ್ದ ಹೆದ್ದಾರಿಯ ಬದಿಗೆ ನಿಲ್ಲಿಸಿದ ಬಸ್ಸಿನಿಂದ ಇಳಿದ ಅವಳು ಹೆಣ್ಣು ದೇವರ ಹಾಗೆ ಕಾಣಿಸುತ್ತಿದ್ದಳು. ತುಟಿಗೆ ಕೆಂಪು ಹಚ್ಚಿ, ಕೆನ್ನೆಗೆ ಗುಲಾಬಿಯ ರಂಗು ಬಳಿದು, ಹುಬ್ಬಿಗೆ ಕಾಡಿಗೆ ತೀಡಿ, ಎದೆಯನ್ನು ಬಿಗಿದು ಕಟ್ಟಿ ನಾಟಕದ ದಿರಿಸು ಧರಿಸಿ ಬಸ್ಸು ಇಳಿದ ಅವಳು ಕಕ್ಕಾವಿಕ್ಕಿಯಾಗಿ ನನ್ನೂರನ್ನು ನೋಡುತ್ತಿದ್ದಳು. ನಿಂತ ಬಸ್ಸು ಹೋದ ಮೇಲೆ ರಸ್ತೆ ದಾಟಿ, ನಾನು ಅವಳ ಬಳಿ ಹೋಗಿದ್ದೆ. ಅವಳು ಯಾವುದೋ ಪುಟ್ಟ ಬಾಲಕನ ಹಾಗೆ ಕಾಣುತ್ತಿದ್ದ ನನ್ನನ್ನು ನಿರ್ಲಕ್ಷದಿಂದ ನೋಡಿ ದೊಡ್ಡವರಿಗೆ ಕಾಯುತ್ತಿದ್ದಳು. ನಾನು ಅವಳನ್ನು ‘ಅಕ್ಕ ಅಕ್ಕ’ ಎಂದು ಕರೆದಿದ್ದೆ. ಹಾಗೆ ಕರೆದಾಗ ಅವಳಿಗೆ ನಗು ಬಂದಿತ್ತಂತೆ. ಆಮೇಲೆ ಅವಳು ನನ್ನ ಕೈಹಿಡಿದುಕೊಂಡಿದ್ದಳು. ‘ನನ್ನ ಕೈ ಹಿಡಿದ ಹೆಣ್ಣು ದೇವರು’ ಎಂದು ಆಮೇಲೆ ನಾನೂ ನಕ್ಕಿದ್ದೆ.

ಕೈಹಿಡಿದ ಅವಳನ್ನು ರಸ್ತೆ ದಾಟಿಸಿ, ಹೋಟೆಲ್ಲಿನಲ್ಲಿ ಬಿರಿಯಾನಿ ತಿನ್ನಿಸಿ, ಸುಲೈಮಾನಿ ಟೀ ಕುಡಿಸಿ ಶಾಲೆಗೆ ಕರೆದುಕೊಂಡು ಹೋಗಿದ್ದೆ. ದಾರಿಯುದ್ದಕ್ಕೂ ಅವಳು ಒಂದು ಕೈಯಲ್ಲಿ ನನ್ನ ಕೈಹಿಡಿದು ಇನ್ನೊಂದು ಕೈಯಲ್ಲಿ ತನ್ನ ನರ್ತಕಿಯ ವಸ್ತ್ರ ನೆಲಕ್ಕೆ ತಾಗದ ಹಾಗೆ ಎತ್ತಿಕೊಂಡು ಲಜ್ಜಾವತಿಯ ಹಾಗೆ ನಡೆದಿದ್ದಳು. ಶಾಲೆ ತಲುಪುವ ಮೊದಲೇ ಅವಳಿಗೆ ಮೂತ್ರ ಮಾಡಬೇಕಿತ್ತು. ನಾನು ಪರಮಹಂಸ ಬಂಡೆಯ ಬಳಿಯ ಕುರುಚಲು ಕಮ್ಯುನಿಸ್ಟ್ ಪೊದೆಗಳನ್ನು ತೋರಿಸಿದ್ದೆ. ಅವಳು ನನ್ನ ಕಣ್ಣ ಮುಂದೆಯೇ ನನಗೆ ಬೆನ್ನು ಮಾಡಿಕೊಂಡು ತನ್ನ ನರ್ತಕಿಯ ದಿರಿಸನ್ನು ಕೊಂಚ ಮೇಲೆತ್ತಿ ಗಂಡಸರ ಹಾಗೆ ನಿಂತುಕೊಂಡೇ ಹುಯ್ದಿದ್ದಳು. `ಕೂತರೆ ದಿರಿಸು ಹಾಳಾಗುತ್ತಿತ್ತಲ್ಲ ಮಂಕೇ, ಅದಕ್ಕೆ ನಿಂತುಕೊಂಡು ಮಾಡಿದ್ದೆ’ ಎಂದು ಈಗಲೂ ನೆನಪು ಮಾಡಿಕೊಂಡು ನಗುತ್ತಾಳೆ.

ನನಗಿನ್ನೂ ನೆನಪಿದೆ. ಕಾರ್ನ್ ವಾಲಿಸ್ ಹೂವಯ್ಯನವರು ಜೀಪಿನಲ್ಲಿ ಬಂದಿಳಿದು ವೇದಿಕೆ ಹತ್ತಿ ಭಾಷಣ ಮಾಡಿ ಮುಗಿಸಿ ನಾಟಕ ಆರಂಭವಾಗುವರೆಗೂ ಕೃಷ್ಣಕುಮಾರಿ ನನ್ನ ಬಳಿಯೇ ಇದ್ದಳು. ನಿಜ ಹೇಳಬೇಕೆಂದರೆ ನಾನೇ ‘ಅಕ್ಕ ಅಕ್ಕ’ ಎಂದು ಅವಳಿಗೆ ಅಂಟಿಕೊಂಡಿದ್ದೆ. ಹೂವಯ್ಯನವರ ಭಾಷಣ ಮಂಕಾಗಿತ್ತು. ಬಹುಶಃ ಅವರು ಎಲಿಜಬೆತ್ ಟೀಚರನ್ನು ಕಾಣದ ಬೇಸರದಲ್ಲಿದ್ದಾರೆ ಎಂದು ನನಗೆ ನಾನೇ ಅಂದುಕೊಂಡು ಕೃಷ್ಣಕುಮಾರಿಗೆ ಇನ್ನಷ್ಟು ಅಂಟಿಕೊಂಡು ನಿಂತಿದ್ದೆ. ಯೋಚಿಸಿದರೆ ನಗು ಬರುತ್ತದೆ. ಕೃಷ್ಣಕುಮಾರಿಯ ಮೈಯ ಪರಿಮಳ ಅಂಟಿಸಿಕೊಂಡು ನಾನು ಎಲ್ಲವನ್ನೂ ಮರೆತಿದ್ದೆ. ಕಾಡಾನೆಗಳ ಭಯಕ್ಕೆ ಹೆದರಿಕೊಂಡು ಬಿಡಾರದ ಮುಂದೆ ಬೆಂಕಿ ಹಾಕಿಕೊಂಡು ಕಾಯುತ್ತಿರುವ ತಾಯಿಯನ್ನೂ, ಪರಮಹಂಸ ಗುಂಪಿನ ಗೆಳೆಯರನ್ನೂ ಎಲ್ಲರನ್ನೂ ಎಲ್ಲವನ್ನೂ ಮರೆತು ಎಳೆಯ ಕೃಷ್ಣಕುಮಾರಿಯ ಆಸ್ಥಾನ ನೃತ್ಯವನ್ನು ನೋಡುತ್ತಿದ್ದೆ. ನಾಟಕ ಮುಗಿಯುವುದರೊಳಗೆ ಮೂರ್ನಾಲ್ಕು ನೃತ್ಯಗಳನ್ನು ಮಾಡಿದ್ದಳು ಆಕೆ. ನನ್ನ ಹಾಗೆಯೇ ಇದ್ದ ಪುಟ್ಟಹುಡುಗಿ ನಾಟಕದ ಪರದೆಯ ಮುಂದೆ ಬಣ್ಣದ ದೀಪಗಳ ಬೆಳಕಿನಲ್ಲಿ ರಾಜನರ್ತಕಿಯಂತೆ ಕಾಣಿಸುತ್ತಿದ್ದಳು.

ನಾಟಕ ಮುಗಿದು ರಾತ್ರಿಯಲ್ಲಿ ಮಂಜು ಮುಸುಕಿದ ದಾರಿಯಲ್ಲಿ ಚಂದ್ರನ ಬೆಳಕಿನ ಕೆಳಗೆ ಮೈಸೂರಿಗೆ ವಾಪಾಸು ಹೊರಟಿದ್ದ ಕಾರ್ನ್ ವಾಲಿಸ್ ಹೂವಯ್ಯನವರ ಜೀಪಿನಲ್ಲಿ ಮಡಿಕೇರಿಯವರೆಗೆ ಕೃಷ್ಣಕುಮಾರಿ ತೆರಳಿದ್ದಳು.

ಕುಕ್ಕರಕೆರೆಯ ತಟದಲ್ಲಿ ಹೂವಯ್ಯನವರನ್ನೂ ಎಲಿಜಬೆತ್ ಟೀಚರನ್ನೂ ಕಂಡು ಬಂದ ಮೇಲೆ ನಾನು ಕೃಷ್ಣಕುಮಾರಿಯನ್ನು ಕೆಣಕಿದ್ದೆ.

‘ಆವತ್ತು ನನ್ನೂರಿನಿಂದ ನಿನ್ನನ್ನು ಜೀಪು ಹತ್ತಿಸಿ ಮಡಿಕೇರಿಯವರೆಗೆ ಬಿಟ್ಟವರು ಇದೇ ಕಾರ್ನ್ ವಾಲೀಸರು ಎಂದು ಕೃಷ್ಣಕುಮಾರಿಗೆ ಹೇಳಿದ್ದೆ. ಅಷ್ಟೆಲ್ಲ ಗಂಡಸರನ್ನು ಕಂಡಿರುವ ಅವಳಿಗೆ ಆ ಕುರಿತು ಹೆಚ್ಚೇನೂ ನೆನಪಿರಲಿಲ್ಲ. ಅವರು ಹಳೆಯ ಹಿಂದಿ ಸಿನೆಮಾ ಹಾಡುಗಳನ್ನು ಗುಣುಗುಣಿಸುತ್ತಾ ಜೀಪು ಓಡಿಸುತ್ತಿದ್ದರಂತೆ. ಮಡಿಕೇರಿ ಬಸ್ಸು ನಿಲ್ದಾಣದ ಬಳಿ ಜೀಪು ನಿಲ್ಲಿಸಿ ತಾವೂ ಇಳಿದು ಮೈಸೂರಿನ ಬಸ್ಸು ಹತ್ತಿಸಿ ಟಿಕೆಟ್ಟೂ ಕೊಡಿಸಿ ಇಳಿದು ಹೋದರಂತೆ.

‘ಬೆಳದಿಂಗಳ ರಾತ್ರಿ, ಜನವರಿಯ ಚಳಿ, ಜೊತೆಯಲ್ಲಿ ನರ್ತಕಿಯ ದಿರಿಸು ಧರಿಸಿದ್ದ ಸುಂದರಿ ಕೃಷ್ಣಕುಮಾರಿ! ಸರಕಾರೀ ಗೇರು ತೋಟದ ಬಳಿ ಜೀಪು ನಿಲ್ಲಿಸಿ, ಗೇರು ತೋಪಿನ ಒಳಗೆ ನಿನ್ನನ್ನು ಮೆತ್ತಗೆ ಎತ್ತಿಕೊಂಡು ಹೋಗಿ ಉದುರಿದ ಎಲೆಗಳ ಮೇಲೆ ನಿನ್ನನ್ನು ಪವಡಿಸಿ ನಿನ್ನ ಮೊಲೆಗಳ ನಡುವೆ ಕಾರ್ನ್ ವಾಲೀಸರು ತಲೆಯಿಟ್ಟು ಸಣ್ಣಗೆ ನಿದ್ದೆ ಹೋಗಲಿಲ್ಲವೇ?’ ಎಂದು ಕೆಣಕಿದ್ದೆ.

‘ಥೂ, ನಿನ್ ಬಾಯಿಗೆ ಮಣ್ಣಾಕ ಮಾನಗೆಟ್ಟೋಳೇ’ ಎಂದು ಬೈದಳು.

ಕೃಷ್ಣಕುಮಾರಿ, ‘ಮಾನಗೆಟ್ಟೋಳೇ’ ಅಂತ ಬೈದರೆ ಅದೊಂಥರಾ ಆಹ್ವಾನ. ನನಗೂ ಅದೇ ಬೇಕಾಗಿತ್ತು. ಕುಕ್ಕರಕೆರೆಯಲ್ಲಿ ಅವರಿಬ್ಬರನ್ನು ಅಷ್ಟು ವರ್ಷಗಳ ನಂತರ ಮತ್ತೆ ನೋಡಿ ನನಗೂ ತಲೆಕೆಟ್ಟು ಹೋಗಿತ್ತು.

ಮಾನಗೆಡಲು ತಯಾರಾಗತೊಡಗಿದೆ.

(ಈ ಕಥೆಯ ಮೊದಲ ಭಾಗ ಆಂದೋಲನ `ಹಾಡುಪಾಡು’ ಸಂಚಿಕೆಯಲ್ಲಿ ಪ್ರಕಟವಾಗಿತ್ತು)