ನಿತ್ಯ ಬದುಕಿನ ಜಂಜಡಗಳನ್ನು ಹಗುರಗೊಳಿಸಿಕೊಳ್ಳುವ ಸಾಧನ ಮಾರ್ಗಗಳಾಗಿ ಇವು ಬಳಕೆಯಲ್ಲಿವೆ. ಇವುಗಳು ವೈಯಕ್ತಿಕ ಬದುಕನ್ನು ರಂಜಿನೀಯಗೊಳಿಸುವಲ್ಲಿ ಮತ್ತು ಸಾಮಾಜಿಕವಾದ ಪರಸ್ಪರವಾದ ಒಂದು ಬಂಧವನ್ನು ಮನುಷ್ಯ ಮನುಷ್ಯರ ನಡುವೆ ರೂಪಿಸುವಲ್ಲಿ ಮಹತ್ವವಾದವು. ಇದನ್ನು ಜಾನಪದ ದಾರಿ ಸಾಬೀತುಪಡಿಸಿದೆ. ಎಂಥದ್ದೇ ಕಷ್ಟ ಕಾರ್ಪಣ್ಯಗಳಲ್ಲೂ ಮನುಷ್ಯ ತನ್ನ ಪಾಡನ್ನೇ ಹಾಡಾಗಿಸಿ ಹಾಡಿ ನಕ್ಕು ಬದುಕಿನ ನಿರ್ದಯತೆಯನ್ನೇ ಅಣಕಿಸುವಂತೆ ಜನಪದರು ಬದುಕಿ ತೋರಿಸಿದ್ದಾರೆ. ಕಷ್ಟಗಳು ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತವೆಯೇ ಎಂಬುದು ಅವರ ಬದುಕಿನ ಪರಮ ದರ್ಶನ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ ಉತ್ತರ ಕರ್ನಾಟಕದ ಬದುಕು ಮತ್ತು ಸಂಸ್ಕೃತಿಯ ಕುರಿತ ಅಂಕಣ “ಉತ್ತರದ ಕತೆಗಳು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

ತರವಲ್ಲ ತಗಿ ನಿನ್ನ ತಂಬೂರಿ

ಊರ ಮುಂದಿನ ಬಾವಿ
ಯಾರು ತೋಡಿದರೇನು
ಕಾಲು ಜಾರಿದರೆ ಕೈಲಾಸ
ಮನಸು ಜಾರಿದರೆ ವನವಾಸ..

ಬದುಕನ್ನು ಸಹಗೊಳಿಸಿಕೊಳ್ಳಲು ಮನುಷ್ಯ ಕಂಡುಕೊಂಡ ಬಗೆಗಳು ಹಲವು; ಹಾಡು, ಕುಣಿತ, ವಾದ್ಯ ವಾದನ, ಹಾಸ್ಯ, ನಗು, ಪ್ರವಾಸ, ಪಯಣ. ನಾಟ್ಯ, ನಟನೆ, ವಿರಾಮ, ವಿಲಾಸ, ಕ್ರೀಡೆ, ಚಾರಣ, ಬರವಣಿಗೆ ಇತ್ಯಾದಿಗಳು. ನಿತ್ಯ ಬದುಕಿನ ಜಂಜಡಗಳನ್ನು ಹಗುರಗೊಳಿಸಿಕೊಳ್ಳುವ ಸಾಧನ ಮಾರ್ಗಗಳಾಗಿ ಇವು ಬಳಕೆಯಲ್ಲಿವೆ. ಇವುಗಳು ವೈಯಕ್ತಿಕ ಬದುಕನ್ನು ರಂಜಿನೀಯಗೊಳಿಸುವಲ್ಲಿ ಮತ್ತು ಸಾಮಾಜಿಕವಾದ ಪರಸ್ಪರವಾದ ಒಂದು ಬಂಧವನ್ನು ಮನುಷ್ಯ ಮನುಷ್ಯರ ನಡುವೆ ರೂಪಿಸುವಲ್ಲಿ ಮಹತ್ವವಾದವು. ಇದನ್ನು ಜಾನಪದ ದಾರಿ ಸಾಬೀತುಪಡಿಸಿದೆ. ಎಂಥದ್ದೇ ಕಷ್ಟ ಕಾರ್ಪಣ್ಯಗಳಲ್ಲೂ ಮನುಷ್ಯ ತನ್ನ ಪಾಡನ್ನೇ ಹಾಡಾಗಿಸಿ ಹಾಡಿ ನಕ್ಕು ಬದುಕಿನ ನಿರ್ದಯತೆಯನ್ನೇ ಅಣಕಿಸುವಂತೆ ಜನಪದರು ಬದುಕಿ ತೋರಿಸಿದ್ದಾರೆ. ಕಷ್ಟಗಳು ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತವೆಯೇ ಎಂಬುದು ಅವರ ಬದುಕಿನ ಪರಮ ದರ್ಶನ.

ಜನಪದ ಎನ್ನುವುದು ಒಂದು ಅಪರೂಪದ ಲೋಕ ದೃಷ್ಟಿಯಾಗಿದೆ. ಅದಕ್ಕೆ ಲೋಕಮಾನ್ಯ ಇರುವಂತೆ ಲೋಕ ವ್ಯಾಪ್ತಿಯು ಆಗಿದೆ. ಉತ್ತರ ಕರ್ನಾಟಕದ ಜನಪದೀಯ ಸಂಸ್ಕೃತಿ ಮತ್ತು ಪರಂಪರೆ ಅನ್ನುವುದು ಅದರ ಅಗಾಧತೆ ಸ್ವರೂಪ ಮತ್ತು ವ್ಯಾಪಕತೆಯ ದೃಷ್ಟಿಯಿಂದ ಅನನ್ಯವಾದುದು.

ಒಂದು ಕಾಲಕ್ಕೆ ಅಂದರೆ 90ರ ದಶಕದ ಆಚೀಚೆ “ಉತ್ತರ ಕರ್ನಾಟಕದ ಜನಪದ ಗೀತೆಗಳು” ಎಂಬ ಟೈಟಲ್‌ನಲ್ಲಿ ಅನೇಕರು ಸ್ವಯಂ ರಚನೆಗಳನ್ನು ಬರೆದು ಜನಪದ ದಾಟಿ ಲಯ ಬಳಸಿಕೊಂಡು ಜನಮನ್ನಣೆ ಗಳಿಸಿದರು. ಅವುಗಳ ಕ್ಯಾಸೆಟ್ ಮತ್ತು ಸಿಡಿಗಳ ಮಾರಾಟವು ಅಪಾರ ದುಡ್ಡನ್ನು ತಂದುಕೊಟ್ಟಿತು. ಜನಪದವನ್ನು ಮಾರಾಟದ ಸರಕಾಗಿ ಬಳಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಈಗಲೂ ಉತ್ತರ ಕರ್ನಾಟಕದಲ್ಲಿ ಜನಪದ ಹಾಡುಗಾರರ ದಂಡಿಯನ್ನು ಕಾಣಬಹುದು. ಜನಪದದ ಮೂಲ ಸೊಗಡು ಲಯ ಬನ್ನಿ ತಾತ್ವಿಕತೆ, ಈ ಹಾವುಗಳನ್ನು ಹೊಂದದ ಈ ಹಾಡುಗಳು ಉತ್ತರ ಕರ್ನಾಟಕದ ಪ್ರಸಿದ್ಧ ಜನಪದ ಗೀತೆಗಳು ಎಂದು ಬ್ರಾಂಡ್ ಆಗಿದ್ದು ಕಾಲದ ಕುಚೋದ್ಯ. ಇವುಗಳು ಟ್ರ್ಯಾಕ್ಟರ್ ಟಂ ಟಂ ಮೆಟಾಡರ್ ಲಾರಿಗಳಲ್ಲಿ ಸ್ಥಾನ ಪಡೆದು ಲಾವಣಿಗಳು ಸೋಬಾನೆ ಪದಗಳು ನಿಧಾನಕ್ಕೆ ಕಣ್ಮರೆಯಾಗತೊಡಗಿದವು. ಈ ಹಿನ್ನೆಲೆಯಲ್ಲಿ ಸಿನಿಮಾ ಹಾಗೂ ಸಿನಿಮಾ ಹಾಡುಗಳ ಪ್ರಭಾವ ದೊಡ್ಡದು.

90ರ ದಶಕದ ನಂತರ ಮತ್ತೆ 10 ವರ್ಷಗಳ ಕಾಲ ಈ ಹೊಸ ಜನಪದ ದಾಟಿಯ ಹಾಡುಗಳು ಜನಮಾನಸವನ್ನು ಆಳಿದವು. ಬರು ಬರುತ್ತಾ ಅವಳ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಅವುಗಳ ಸ್ಥಾನದಲ್ಲಿ ಡಿಜೆ ಸಾಂಗ್ಸ್ ಪ್ರತಿಸ್ಥಾಪಿತವಾದವು. ಇವುಗಳನ್ನು ಉತ್ಸವಗಳಲ್ಲಿ ಮೆರವಣಿಗೆಗಳಲ್ಲಿ ಜಾತ್ರೆ ಪರೀಷೆಗಳಲ್ಲಿ ಬಳಸಲಾಗುತ್ತಿದೆ. ಮದುವೆಯಲ್ಲೂ ಸೋಬಾನಿಗಳ ಬದಲಾಗಿ ಧ್ವನಿಮುದ್ರಿತ ಸೋಬಾನೆ ಪದಗಳನ್ನು ಬಳಸಲಾಗುತ್ತಿತ್ತು. ಈಗ ಅಲ್ಲೂ ಡಿಜೆ ಬಂದು ವಕ್ಕರಿಸಿದೆ. ಮದುವೆ ಮೆರವಣಿಗೆಯಲ್ಲೂ ಬ್ಯಾಂಡ್ ಬಜ ಓಲಗದ ಬದಲಿಗೆ ಡಿಜೆ ಸ್ಥಾನ ಪಡೆದುಕೊಂಡಿದೆ.

ಒಂದು ಪರಂಪರೆ ಬದಲಾದಂತೆ ಅಲ್ಲಿ ಕೇವಲ ಹಾಡು ಕವಿತೆ ಬದಲಾಗದೆ ಹಾಡುವ ಭಾಷೆ ವರ್ತನೆಯ ರೀತಿ ಸಮೂಹದೊಂದಿಗಿನ ಒಡನಾಡುವ ಬಗೆ ಸಹ ಸಂಬಂಧಗಳ ಸ್ವರೂಪ ಆಹಾರ ವೇಷ ಭೂಷಣ ತಲೆಕೂದಲ ವಿನ್ಯಾಸ ಕೌಟುಂಬಿಕ ವ್ಯವಸ್ಥೆಯ ವಿನ್ಯಾಸ ಹೀಗೆ ಎಲ್ಲವೂ ಬದಲಾವಣೆಗೆ ಒಳಗಾಗುತ್ತಿವೆ.

ಜನಪದ ಹಾಡುಗಳಂತೆ ಉತ್ತರ ಕರ್ನಾಟಕದ ಜನಪದ ನೃತ್ಯಗಳು ಸಹ ವಿಶಿಷ್ಟವಾಗಿವೆ. ಇಲ್ಲಿನ ಕೋಲಾಟ, ಡೊಳ್ಳು ಕುಣಿತ, ಕರಡಿಮಜಲು, ವೀರಗಾಸೆ, ಜೋಗತಿಯ ನೃತ್ಯಗಳು…. ಅಂತಹ ಪದಗಳನ್ನು ಹಾಡದ ಕಾರಣ ಸಂಬಂಧಿತ ನೃತ್ಯಗಳು ಸಹ ಇಲ್ಲವಾಗಿವೆ. ಡೊಳ್ಳು ಕುಣಿತಕ್ಕೆ ಪರ್ಯಾಯ ಎಂಬಂತೆ ಜಾರ್ಜ್ ಮೇಳವು ತನ್ನ ಕರ್ಕಶವನ್ನು ದಾಖಲಿಸಿದೆ. ಮುಂದಿನ ದಿನಮಾನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಕಂಡುಬರುವ ಅಡ್ಡ ಪಲ್ಲಕ್ಕಿ ಉತ್ಸವಗಳನ್ನು ಡಿಜೆ ಕಂಡು ಬಂದರೆ ಅಚ್ಚರಿ ಪಡಬೇಕಿಲ್ಲ.

ಜನಪದವನ್ನು ಮಾರಾಟದ ಸರಕಾಗಿ ಬಳಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಈಗಲೂ ಉತ್ತರ ಕರ್ನಾಟಕದಲ್ಲಿ ಜನಪದ ಹಾಡುಗಾರರ ದಂಡಿಯನ್ನು ಕಾಣಬಹುದು. ಜನಪದದ ಮೂಲ ಸೊಗಡು ಲಯ ಬನ್ನಿ ತಾತ್ವಿಕತೆ, ಈ ಹಾವುಗಳನ್ನು ಹೊಂದದ ಈ ಹಾಡುಗಳು ಉತ್ತರ ಕರ್ನಾಟಕದ ಪ್ರಸಿದ್ಧ ಜನಪದ ಗೀತೆಗಳು ಎಂದು ಬ್ರಾಂಡ್ ಆಗಿದ್ದು ಕಾಲದ ಕುಚೋದ್ಯ. ಇವುಗಳು ಟ್ರ್ಯಾಕ್ಟರ್ ಟಂ ಟಂ ಮೆಟಾಡರ್ ಲಾರಿಗಳಲ್ಲಿ ಸ್ಥಾನ ಪಡೆದು ಲಾವಣಿಗಳು ಸೋಬಾನೆ ಪದಗಳು ನಿಧಾನಕ್ಕೆ ಕಣ್ಮರೆಯಾಗತೊಡಗಿದವು.

ಒಂದು ಕಾಲಕ್ಕೆ ನಸುಕಿನ ಕನಸಿನಲ್ಲಿ ನಾದ ನೀನಾದ ಹುಣ್ಣಿಸುವಂತೆ ಊರಿನ ಗುಡಿಗಳಲ್ಲಿ ಕೇಳಿ ಬರುತ್ತಿದ್ದ ಬಜನಾ ಪದಗಳು ಈಗ ಕಡಿಮೆಯಾಗಿವೆ. ಪ್ರತಿ ಊರಲ್ಲಿ ಎರಡರಿಂದ ಮೂರು ಭಜನಾ ಮೇಳ ಮಂಡಳಿಗಳು ಇರುತ್ತಿದ್ದವು. ಈಗ ಅಲ್ಲೋ ಇಲ್ಲೋ ಉಳಿದುಕೊಂಡಿವೆ. ಇದ್ದರು ಪ್ರಸಿದ್ಧರನ್ನು ಹೊಗಳುವ ಭಜನಾ ಮಂಡಳಿಗಳು ಮಾತ್ರ. ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲದೆ ಎಲ್ಲಾ ಕಡೆಯೂ ವ್ಯಾಪಿಸಿವೆ.

ಭಕ್ತಿ ಮತ್ತು ಶಬ್ಬೆಯ ಸಂಕೇತದೊಂದಿದ್ದ ಭಜನಾ ಮಂಡಳಿಗಳಲ್ಲಿ ಎಲ್ಲ ಜಾತಿಯವರು ಇರುತ್ತಿದ್ದರು. ಊರಿನಲ್ಲಿ ಯಾರ ಸಾವು ಆದರೂ ಒಂದು ತೆಂಗಿನ ಕಾಯಿ ಅಡಿಕೆ ಎಲೆ ರೂ. 50 ನೋಟು.. ಇಷ್ಟು ವೀಳ್ಯ ಕೊಟ್ಟು ಬಂದರೆ ಮುಗೀತು. ಪಜನಾ ಮಂಡಳಿಯವರು ಬಂದು ತಮ್ಮ ನುಡಿ ಸೇವೆ ಸಲ್ಲಿಸಿ ಹೋಗುತ್ತಿದ್ದರು. ಅದು ಈಗ ಈ ಸಾದಾ ವೀಳ್ಯದ ವಾಹನದ ಬದಲಿಗೆ ಇಂತಿಷ್ಟು ದುಡ್ಡು ಕೊಟ್ಟರೆ ಮಾತ್ರ.. ಎಂಬಲ್ಲಿಗೆ ಬಂದು ತಲುಪಿದೆ. ಈಗ ಬೆಳಗಾಗುವ ತನಕ ಹಾಡುವರು ಇಲ್ಲ ಹಾಡುಗಳು ಉಳಿದಿಲ್ಲ. ಗಜವದನ ಪಾಲಿಸು ಎಂದು ಶುರು ಮಾಡಿ ಈ ದೇಹದಿಂದ ದೂರವಾದೆ ಏಕೆ ಆತ್ಮವೇ.. ಎಂಬ ಎರಡೇ ಎರಡು ಪದಗಳಿಗೆ ಭಜನೆ ಬಂದು ನಿಂತಿದೆ. ತಾಳ ಹಾಕುವುದನ್ನು ದಗ್ಗಾ (ಒಂಟಿ ತಬಲ) ಬಡಿ (ಬಾರಿಸು )ಯುವವರನ್ನು ಹುಡುಕಿ ಹುಡುಕಿ ಭಜನೆ ಶುರು ಮಾಡಬೇಕಿದೆ. ಇದು ಒಂದು ಕಾಲಕ್ಕೆ ಊರು ಊರು ಕೇರಿ ಕೇರಿಗಳನ್ನು ಬೆಸೆಯುವ ಸಾಮಾಜಿಕ ಸಾಮರಸ್ಯವನ್ನು ಹಾಡು ನುಡಿಗಳ ಮೂಲಕ ಕಟ್ಟಿಕೊಡುತ್ತಿದ್ದ ಜನಪದ ಪರಂಪರೆಯ ಅವಸಾನದ ಕಥೆ.

ಪ್ರತಿ ಊರಿನ ಭಜನಾ ಮಂಡಳಿಗೆ ಒಬ್ಬ ಮಾಸ್ತರ್ ಇರುತ್ತಿದ್ದ. ಆತನೇ ನಿಜವಾದ ಮಾಸ್ಟರ್. ಆತ ನಿರೀಕ್ಷೆಯಾಗಿದ್ದರೂ ಹಾಡು ವಾದನ ಮಾತ್ರದಿಂದ ಭಜನೆ ಮಾಸ್ತರೆಂದು ಜನ ಮನ್ನಣೆಗೆ ಪಾತ್ರವಾಗಿರುತ್ತಿದ್ದ. ನಾಟಕದ ಮಾಸ್ತರನಂತೆ ಇವನು ಒಬ್ಬ ಮಾಸ್ತರ್. ಗರಡಿ ಮನೆಗೂ.. ರಾತ್ರಿ ಸಾಲಿಗೂ.. ಓಲಗದವರಿಗೂ… ಹೀಗೆ ಒಬ್ಬೊಬ್ಬ ಮಾಸ್ತರ್ ಇರುತ್ತಿದ್ದರು. ಹಾರ್ಮೋನಿಯಂ ಬಾರಿಸುವವರನ್ನು (ನಮ್ಮಲ್ಲಿ ನುಡಿಸುವುದು ಇಲ್ಲೇ ಇಲ್ಲ.. ಏನಿದ್ದರೂ ಬಾರಿಸುವುದು ಮಾತ್ರ!) ಪೆಟ್ಟಿಗೆ ಮಾಸ್ತರ್.. ಎಂತಲೂ ಕರೆಯುತ್ತಿದ್ದರು. ಹೀಗೆ ಪ್ರತಿ ಊರಲ್ಲೂ ಮಾಸ್ತರುಗಳು ಅಲ್ಲದ ಮಾಸ್ತರು ಇರುತ್ತಿದ್ದರು. ಯಾಕೋ ಏನು ತಬಲ ಬಾರಿಸುವವ ಮಾತ್ರ ಮಾಸ್ತರ್ ಆಗದೆ ತಬಲಾಜಿ ಆಗಿ ಉಳಿದ.

ಇಂತಹ ಮಾಸ್ತರಗಳಿಗೆ ಊರಲ್ಲಿ ಒಂದು ಬಗೆಯ ವಜನತ್ವ ಇರುತ್ತಿತ್ತು. ಹಾಗೆಯೇ ಹೆಂಡತಿಯ ದೃಷ್ಟಿಯಲ್ಲಿ ಅವರು ವೀರ ಸಿಂಧೂರ ಲಕ್ಷ್ಮಣರ ದಿಖಾವ್.

ಈಗೇನಿದೆ?

ಭಜನೆ ಇಲ್ಲವಲ್ಲ ಈಗ. ಕೇವಲ ರಾಜಕೀಯ ಭಜನೆ ಶುರುವಾಗಿದೆ. ಮಾಸ್ತರರು ಇಲ್ಲ ಗವಾಯಿಗಳೂ ಇಲ್ಲ. ಭಜನೆಯ ಸ್ಥಾನವನ್ನು ಈಗ ಸವಾಲು ಜವಾಬ್ ಎಂಬ ಅಷ್ಟಾವಕ್ರ ಆಕ್ರಮಿಸಿಕೊಂಡಿದ್ದಾನೆ. ಇದು ಈಗ ಆಯಾ ಊರುಗಳ ಪ್ರತಿಷ್ಠೆಯ ಸಂಕೇತವಾಗಿ ಬಿಂಬಿತವಾಗುತ್ತಿದೆ. 10000 ದಿಂದ ಲಕ್ಷಗಳವರೆಗೆ ಬಹುಮಾನಗಳು ಪ್ರಾಯೋಗಿತವಾಗುತ್ತವೆ. ಇದನ್ನು ಆಯಾ ಕ್ಷೇತ್ರದ ಎಂಎಲ್ಎ ರಾಜಕೀಯ ಪುಢಾರಿಯೋ ಪ್ರಾಯೋಜನೆ ಮಾಡುತ್ತಾನೆ. ಊರೂರಲ್ಲೂ ಈಗ ಹೊಸ ಬಜನೆ ಮಾಸ್ತರುಗಳು ಹುಟ್ಟಿಕೊಂಡಿದ್ದಾರೆ. ಇವರುಗಳು ಹೊಸ ತಲೆಮಾರಿನ ಚಿಗುರು ಮೀಸೆ ಹುಡುಗರು. ಈ ಹಿಂದೆ ನಾಟಕದ ಸಿನಿಮಾದ ಪೋಸ್ಟರ್‌ಗಳನ್ನು ಟೀ ಅಂಗಡಿ ಕಿರಾಣಿ ಅಂಗಡಿ ಸಲೂನ್‌ಗಳಲ್ಲಿ ಅಂಟಿಸಿಕೊಳ್ಳುತ್ತಿದ್ದಂತೆ. ಈಗ ಸವಾಲು ಜವಾಬು ಸ್ಪರ್ಧೆಯ ಹ್ಯಾಂಡ್ ಬಿಲ್ಲುಗಳನ್ನು ಪೋಸ್ಟರ್‌ಗಳನ್ನು ಅಂಟಿಸಿಕೊಳ್ಳಲಾಗುತ್ತಿದೆ.

ಊರ ಅಗಸೆಯಲ್ಲಿ ಎರಡು ಟ್ಯಾಕ್ಟರ್‌ನ ಟೇಲರುಗಳನ್ನು ಜೋಡಿಸಿ ವೇದಿಕೆ ಸಜ್ಜಾಗುತ್ತದೆ. ಎರಡು ತಂಡಗಳು. ಇವರಲ್ಲಿ ಯಾರು ಬಲ ಯಾರು ಎಡ ಎಂದು ಜನರ ನಡುವೆ ಚರ್ಚೆ ವಾಗ್ವಾದಗಳು. ಊರಿಗೆ ಉರೆ ಎರಡು ಬಣವಾಗಿ ಒಬ್ಬರ ಪರವಾಗಿ ವಕಾಲತ್ತು ನಡೆಸುತ್ತದೆ. ಅವನ ಸವಾಲಿಗೆ ಇವನು. ಇವನ ಸವಾಲಿಗೆ ಅವನು ಜವಾಬು ಕೊಡಬೇಕಾಗುತ್ತದೆ. ಬೆಳ್ಳಿಚುಕ್ಕಿ ಮೂಡಿ ಬೆಳಗಾಗುವ ತನಕವೂ ಭಜನೆಯ ಗದ್ದಲವೋ ಗದ್ದಲ. ಭಜನೆ ಮಾಯವಾಗಿ ಬರೆದು ಗದ್ದಲ ಮಾತ್ರ ಉಳಿದುಕೊಂಡಿದೆ. ಇದು ಜನರಿಗೆ ಪ್ರೀತಿಯು ಹೌದು.

ಕರ್ಕಶವಾಗಿ ಒಬ್ಬನು ಯಾವುದೋ ಹಾಡು ಹೇಳುತ್ತಾ ಅಕ್ಷರಶಃ ಒದರುತ್ತ ಕೊನೆಯಲ್ಲಿ ಎಂಥದ್ದೋ ಪ್ರಶ್ನೆ ಕೇಳುತ್ತಾನೆ. ಹಾಡುವುದನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಎರಡೆರಡು ಬಾರಿ ಕೇಳುತ್ತಾನೆ. ಬಹುಶಃ ಆತನ ಪಾಂಡಿತ್ಯ ಪ್ರದರ್ಶನ ಪ್ರಿಯತೆ ಅದಾಗಿರಬಹುದು. ಅದು ಪುರಾಣ ಆಧಾರಿತ ಪ್ರಶ್ನೆಯಂತೆ?! ಅದಕ್ಕೆ ಎದುರಿನವನು ಉತ್ತರ ಹೇಳಬೇಕು. ಅವನು ಸಹ ಉತ್ತರ ಹೇಳುತ್ತಾ ಭಜನೆ ಶುರು ಮಾಡಿಕೊಳ್ಳುತ್ತಾನೆ. ಕೆಳಗೆ ಕೂತವರು ಹೋ ಎಂದು ಕೇಕೆ ಹಾಕುತ್ತಾರೆ. ಇವನು ಭಜನೆಯ ಅಂತ್ಯದಲ್ಲಿ ಮತ್ತೊಂದು ಪುರಾಣ ಆಧಾರಿತ ಪ್ರಶ್ನೆ ಇಟ್ಟು ಮುಗಿಸುತ್ತಾನೆ. ಪರಸ್ಪರ ಬೈಗುಳ ಅವಾಚ್ಯ ನುಡಿಗಳು ಈ ಮೂಲಕ ಒಬ್ಬರು ಮತ್ತೊಬ್ಬರನ್ನು ಕೆಣಕುವುದು ಕುಟುಕುವುದು ಅಪಹಾಸ್ಯ ಮಾಡುವುದು, ಬೆಳಗಿನ ತನಕ ನಡೆಯುವ ಭಜನೆ ಇದು. ಇಲ್ಲಿ ಅವನ ಇವನ ತಾಯಿ ಅಕ್ಕ ಹೆಂಡತಿ ಮನೆ ಮಂದಿ ಎಲ್ಲರೂ ಬೈಗುಳಗಳಲ್ಲಿ ಬಂದು ಹೋಗುತ್ತಾರೆ. ಇದು ಯಾರಿಗೂ ಏನೂ ಅನಿಸುವುದಿಲ್ಲ. ನಮ್ಮ ಹಳ್ಳಿಗಳು ಇಷ್ಟು ಬದಲಾಗಿವೆ.

ಈ ಅಷ್ಟ ಪುರಾಣ ಪಾರಂಗತ ಪಂಡಿತಮತಿಗಳು ಪರಸ್ಪರ ಕೇಳುವ ಪ್ರಶ್ನೆ. ನೀಡುವ ಉತ್ತರಗಳನ್ನು ಪರಾಮರ್ಶಿಸಿ ಫಸ್ಟು ಸೆಕೆಂಡ್ ನಿರ್ಧಾರ ಮಾಡಲು ನಿರ್ಣಾಯಕರ ಸ್ಥಳೀಯ ತಂಡವೊಂದಿರುತ್ತದೆ. ಅವರುಗಳೂ ಮೂರೂವರೆ ವಜ್ರಗಳಂತಹ ದೀಡ ಪಂಡಿತರೇ. ಅವನು ಹೇಳಿದ್ದು ಇವನಿಗೆ ಇವನು ಹೇಳಿದ್ದು ಅವನಿಗೆ ಹೇಗೆ ಅರ್ಥವಾಗುವುದಿಲ್ಲವೋ ಹಾಗೆ ಹೇಳಿದ್ದು ಕೇಳಿದ್ದು ನಿರ್ಣಾಯಕರ ಮಂಡಳಿಗೂ ಅರ್ಥವಾಗುವುದಿಲ್ಲ. ಆದರೆ ಹಾಗೆ ಅನ್ನಲಾಗುವುದಿಲ್ಲ?

ಅವನು ಉತ್ತರಕ್ಕೆ ಇವನ ಎದುರು ಪ್ರಶ್ನೆಗೆ ಅವನ ಬೈಗುಳಕ್ಕೆ ವಿರುದ್ಧವಾಗಿ ಮತ್ತೊಬ್ಬನ ಪ್ರಚಂಡ ಬೈಗುಳಗಳ ಕೇಳಿ ಪುನೀತರಾಗುವ ಮಹಾ ಜನೋಸ್ತಮವು ಶಿಳ್ಳೆ ಹೊಡೆದು ಕೇಕೆ ಹಾಕುತ್ತದೆ. ಅವನು ಎಷ್ಟು ಭಯಂಕರವಾಗಿ ಪರಿಣಾಮಕಾರಿಯಾಗಿ ಬೈಗುಳಗಳನ್ನು ಬಳಸುತ್ತಾನೋ ಅವನು ಅಷ್ಟರಮಟ್ಟಿಗೆ ಹೀರೋ ಆಗುತ್ತಾನೆ. ಮತ್ತು ಅದವನ ಕ್ವಾಲಿಟಿ ಆಫ್ ಭಜನಾ ಮಾನದಂಡವು ಆಗುತ್ತದೆ. ಇದನ್ನೆಲ್ಲಾ ನೋಡಲು ಕೇಳಲು ಮಹಿಳಾ ಮಂಡಳಿಗಳು ಗಂಡಸರ ಹಿಂಡಿನಿಂದ ತುಸು ದೂರದಲ್ಲಿ ಶರವು ಹೊತ್ತುಕೊಂಡು ಕೂತಿರುತ್ತದೆ. ಬೆಳಗಾಗುವ ತನಕ!
ಒಬ್ಬರೇ ಇದ್ದು ಮಾಡುವುದಾದರೂ ಏನಿದೆ. ಪಾಪ ಹೆಣ್ಣು ಜೀವಗಳು.

ಕೊನೆಗೆ ಯಾರನ್ನು ಮೊದಲು ಸೆಕೆಂಡ್ ಎಂದು ನಿರ್ಣಯ ಮಾಡದೆ ಉತ್ತರಗಳನ್ನು ಅಂಕಗಳನ್ನು ಕಣ್ಣೆತ್ತಿಯೂ ನೋಡದೆ.. ನಾಕು ಉಪಚಾರದ ಮಾತುಗಳನ್ನು ಆಡಿ ಬಹುಮಾನದ ಮೊತ್ತವನ್ನು ಹಂಚಿ ಕೈ ತೊಳೆದುಕೊಳ್ಳುತ್ತಾರೆ. ಇದು ವಾಡಿಕೆ. ಎಲ್ಲ ಕಡೆಯೂ ಆಗುವುದು ಹೀಗೇ ಅಂತ ಗೊತ್ತಿದ್ದರೂ ಧೂಳು ಪಡುತ್ತಾ ಮನೆ ಹಾದಿ ಹಿಡಿಯುವ ಜನರು ಮಾತ್ರ, ಅಂವ ಬಲ. ಇಂವ ಬಲಾ.. ಎಂದು ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳುತ್ತಾ ಮನೆ ಸೇರುತ್ತಾರೆ. ಈಗೀಗ ಸಿನಿಮಾ ಸ್ಟಾರ್‌ಗಳಂತೆ ಸವಾಲ್ ಜವಾಬ್ ಮಾಸ್ತರಗಳಿಗೂ ಫ್ಯಾನ್‌ಗಳು ಹುಟ್ಟಿಕೊಂಡಿದ್ದಾರೆ. ಬಜನಾಪರಂಪರೆಯ ಪಕ್ಕ ಅವಲಕ್ಷಣದಂತಿರುವ ಈ ಸವಾಲು ಜವಾಬು ಭಜನೆ ಬದಲಾಗುತ್ತಿರುವ ಹಳ್ಳಿಗಳ ಮನಸ್ಥಿತಿಯನ್ನು ಬಿಂಬಿಸುತ್ತದೆ.