ದೃಶ್ಯ ಮಾಧ್ಯಮದಲ್ಲಿ ಗಂಡು-ಹೆಣ್ಣಿನ ಪ್ರೇಮವನ್ನು ಕುರಿತಂತೆ ಅಭಿವ್ಯಕ್ತಿಯ ರೂಪದಲ್ಲಷ್ಟೇ ಬದಲಾಗುವ ಹೊಳಹುಗಳನ್ನು ಬಿಟ್ಟರೆ ಹೊಸ ಅನುಭವದ ಮಾತೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ಸ್ವೀಕರಿಸಲು ಒಪ್ಪದೆ, ಆ ವಸ್ತುವಿನ ಬಗ್ಗೆ ತೀರ ಹೊಸ ಬಗೆಯಲ್ಲಿ ತನ್ನೆಲ್ಲ ಪ್ರತಿಭೆ ಮತ್ತು ಕಲ್ಪನೆಗಳ ರಸಪಾಕದ ಹಾಗೆ ಪೆಡ್ರೋ ಅಲ್ಮೊಡಾವರ್ ವ್ಯಕ್ತಪಡಿಸಿದ್ದಾನೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನೆಮಾ ಟಾಕೀಸ್ʼ ನ ಎಂಟನೆಯ ಕಂತು
ಅನೇಕ ಕಾರಣಗಳಿಗಾಗಿ ಸ್ಪೇನಿನ ಪೆಡ್ರೊ ಅಲ್ಮೊಡೊವರ್ ತನ್ನ ದೇಶದ ಸಾಂಸ್ಕೃತಿಕ ಪ್ರತೀಕ ಎನಿಸಿದ್ದಾನೆ. ಕೆಲವು ವಲಯಗಳಲ್ಲಿ ಅವನು ಬೆರಗು ಮೂಡಿಸಿದರೆ, ಇನ್ನಷ್ಟು ವಲಯಗಳಲ್ಲಿ ಅವನನ್ನು ಹೀಗಳೆಯುವ ಗುಂಪು ಕೂಡ ಉಂಟು. ಇದರಿಂದ ತೀರಾ ಘಾಸಿಗೊಂಡ ಅಲ್ಮೊಡೊವರ್ ತನ್ನ ಚಿತ್ರಗಳಲ್ಲಿ ಅಸ್ಮಿತೆ ಎನ್ನುವುದನ್ನೇ ವಸ್ತುವಾಗಿಸಿ ವಿವಿಧ ರೀತಿಗಳಲ್ಲಿ ಪ್ರಸ್ತುತಪಡಿಸುತ್ತಾನೆ. ಅವನು ಈ ಅಂಶವನ್ನು ತನ್ನ ಸಿನಿಮಾಗಳಲ್ಲಿ ಅತ್ಯಂತ ಪ್ರಖರ ಸ್ವರೂಪದಲ್ಲಿ ಮುಂದಿಡುತ್ತಾನೆ. ಸುಮಾರು ನಲವತ್ತು ವರ್ಷಗಳ ಕಾಲ ಮಿಲಿಟರಿ ಆಡಳಿತಕ್ಕೆ ಸಿಕ್ಕು ಸಕಲ ರೀತಿಯಲ್ಲಿ ಕುಗ್ಗಿಹೋಗಿದ್ದ ಸ್ಪೇನಿನ ಜನಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದನ್ನು ನಿಸ್ಸಂಕೋಚವಾಗಿ ಪ್ರಶ್ನಿಸಿ, ಮರುವಿವೇಚನೆಗೆ ತೊಡುಗುವಂತೆ ಪ್ರೇರೇಪಿಸುತ್ತಾನೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ಅಲ್ಮೊಡೊವರ್ ೧೯೬೦ರ ಕೊನೆಗೆ ಮ್ಯಾಡ್ರಿಡ್ ಗೆ ಹೋದ ನಂತರ ಅಲ್ಲಿ ಯಾವುದೇ ಕೆಲಸ ಸಿಗದೆ ತ್ಯಾಜ್ಯ ವಸ್ತುಗಳ ಮಾರಾಟ ಮಾಡುವುದರಲ್ಲಿ ನಿರತನಾಗುತ್ತಾನೆ. ಕೆಲ ಕಾಲದ ತರುವಾಯ ಟೆಲಿಫೋನ್ ಆಪರೇಟರ್ ಕೆಲಸ ಲಭಿಸಿತೆಂದು ಹೇಳಿಕೊಂಡಿದ್ದಾನೆ. ಅಲ್ಲಿ ಗುಂಪು ಕೂಡಿ ಕೆಲಸ ಮಾಡುವ ಹೆಂಗಳೆಯರ ಮಾತು, ವರ್ತನೆ, ಮುಖಚಹರೆ ಇತ್ಯಾದಿಗಳನ್ನು ತೀರ ಕುತೂಹಲದಿಂದ ಹಾಗೂ ಬೆರಗಿನಿಂದ ಕಂಡೆ ಎನ್ನುತ್ತಾನೆ. ಆ ದಿನಗಳಲ್ಲಿ ದೊರೆತ ಅನುಭವವನ್ನು ತನ್ನ ಚಿತ್ರ ನಿರ್ಮಾಣದಲ್ಲಿ ಉಪಯೋಗಿಸಿದ್ದೇನೆ ಎನ್ನುತ್ತಾನೆ ಅಲ್ಮೊಡೊವರ್. ಯಾವುದೇ ರೀತಿಯ ತರಬೇತಿ ಪಡೆಯದೆ ಸೂಪರ್ ೮ ಕ್ಯಾಮೆರಾದಲ್ಲಿ ಬಾಲ್ಯದ ಅನುಭವಗಳನ್ನು ಆಧರಿಸಿ ಕಿರುಚಿತ್ರಗಳನ್ನು ನಿರ್ಮಿಸಿ ಅವುಗಳನ್ನು ಬ್ಲೋ ಅಪ್ ಮಾಡಿ ಪ್ರದರ್ಶಿಸಿದ. ಅವನ ಈ ಪ್ರಯತ್ನಕ್ಕೆ ಅವನಲ್ಲದ್ದ ಶಕ್ತಿ ಪ್ರತಿಭೆಯೇ ಬಂಡವಾಳ. ಪ್ರಾರಂಭದ ದಿನಗಳಲ್ಲಿ ಅವಕ್ಕೆ ದೊರೆತ ಮನ್ನಣೆಯಿಂದ ಉತ್ಸಾಹಗೊಂಡು ತನ್ನ ಸೋದರನ ಜೊತೆಗೂಡಿ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ. ಅವನ ಚಿತ್ರಗಳಲ್ಲಿ ಆಲ್ಮೊಡಾವರ್‍ತನ ಎಂದು ಗುರುತಿಸುವಷ್ಟು ಸಂಕೇತ ಮತ್ತು ರೂಪಕಗಳ ಸರಮಾಲೆ ತಲೆದೋರುತ್ತವೆ. ಸಾಮಾನ್ಯವಾಗಿ ಅವನ ಚಿತ್ರಗಳಲ್ಲಿ ಹೆಣ್ಣು ಪ್ರಮುಖ ಪಾತ್ರ ವಹಿಸುತ್ತಾಳೆ. ಇನ್ನೊಂದು ವಿಶೇಷವೆಂದರೆ ಅವನ ಚಿತ್ರಗಳಲ್ಲಿ ಅವನ ಸೋದರ ಮತ್ತು ತಾಯಿ ಪಾತ್ರವಹಿಸುತ್ತಾರೆ.
ಸಿನಿಮಾರಂಗ ಪ್ರವೇಶ ಮಾಡುವುದಕ್ಕೆ ಮುನ್ನ ಅವನು ನಾಟಕರಂಗದಲ್ಲಿಯೂ ಅನುಭವವನ್ನು ಹೊಂದಿದ್ದ. ಅಲ್ಲಿ ಕಳೆದ ದಿನಗಳಲ್ಲಿ ಪರಿಚಿತಳಾದ ಕಾರ್ಮೆಲ್ ಮೌರ ಎಂಬಾಕೆ ಅವನ ಬಹುತೇಕ ಚಿತ್ರಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾಳೆ. ಅವನ ಮೊದಲ ಚಿತ್ರ ಮ್ಯಾಡ್ರಿಡ್ ನ ರಾತ್ರಿಯ ಜೀವನಾನುಭವವನ್ನು ಕುರಿತದ್ದು. ಅದರಲ್ಲಿ ತನ್ನ ದೇಶದ ಸಾಂಸ್ಕೃತಿಕ ಮತ್ತು ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ವ್ಯಕ್ತಪಡಿಸಿದ ನಿಲುವಿನಿಂದ ಅವನಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ತನ್ನ ದೇಶದ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವ ನಿಲುವನ್ನೂ ಹೊಂದಿರದ ಅವನು ತನ್ನ ದೇಶದ ಇತರ ಪ್ರಮುಖ ನಿರ್ಮಾಪಕರಿಂದ ದೂರವಿರುವಂತೆ ತೋರುತ್ತದೆ.
ಆಲ್ಮೊಡಾವರ್ ನ ಸಿನಿಮಾಗಳ ಪರಿಕಲ್ಪನೆ ೧೯೪೦ರ ದಶಕದ ಎಡ್ಗರ್ ನೆವಿಲ್ಲೆ ಫೆರ್ರೋ ಮತ್ತು ನಂತರದ ಫೆಲಿನಿ ಹಾಗೂ ಲೂಯಿ ಬುನೆಲ್ ರಿಂದ ಪ್ರಭಾವಿತಗೊಂಡಿದೆ. ಸ್ಪೇನಿನವರಾಗಿದ್ದರೂ ಅಲ್ಲವೆನ್ನುವ ಅಲ್ಲಿನವರಿಗೆ ಅವರದೇ ಸಂಗತಿ, ವಿಷಯ, ನಂಬಿಕೆಗಳ ಪುನರಾಲೋಚನೆಗೆ ಗುರಿಪಡಿಸುತ್ತಾನೆ. ಅವನ ಚಿತ್ರಗಳಲ್ಲಿ ಗಂಡು ಅಥವಾ ಹೆಣ್ಣು ಪಾತ್ರಗಳು ಲೈಂಗಿಕತೆಗೆ ಸಂಬಂಧಿಸಿದಂತೆ ಸನ್ನಿವೇಶದ ಮತ್ತು ಪಾತ್ರದ ಗುಣಕ್ಕೆ ತಕ್ಕಂತೆ ವರ್ತಿಸುತ್ತವೆ. ಅದು ಭಿನ್ನಲಿಂಗರತಿ ಆಗಿರಬಹುದು ಅಥವಾ ಸಲಿಂಗರತಿ ಆಗಿರಬಹುದು. ಅವನ ಪ್ರಮುಖ ಚಿತ್ರಗಳಾದ ʻದಿ ಫ್ಲವರ್ ಆಫ್ ಮೈ ಸೀಕ್ರೆಟ್ʼ, ʻಆಲ್ ಅಬೌಟ್ ಮೈ ಮದರ್ʼ ಮುಂತಾದವು ವಸ್ತುವಿನ ದೃಷ್ಟಿಯಿಂದಲೂ ಪ್ರಖ್ಯಾತವಾಗಿವೆ.
ಈ ವರೆಗಿನ ಅವನ 16 ಚಲನಚಿತ್ರಗಲ್ಲಿ `ಟೈ ಮಿ ಅಪ್, ಟೈ ಮಿ ಡೌನ್’, `ಹೈ ಹೀಲ್ಸ್’ ಮತ್ತು `ಕಿಕಾ’ ಚಿತ್ರಗಳು ಅವುಗಳಲ್ಲಿನ ಲೈಂಗಿಕ ವಿಷಯಗಳಿಗಾಗಿ ವಿವಾದಕ್ಕೆ ಒಳಗಾಗಿವೆ. ಅದೇನಿದ್ದರೂ ಚಿತ್ರಗಳ ಗುಣಮಟ್ಟದ ಕಾರಣದಿಂದ ಸ್ಪೇನ್ ನ ಚಿತ್ರರಂಗದಲ್ಲಿ ಪ್ರಖ್ಯಾತ ನಿರ್ದೇಶಕನಾದ ಲೂಯಿ ಬುನೆಲ್ ನಂತರದ ಸ್ಥಾನವನ್ನು ದೊರಕಿಸಿಕೊಂಡಿದ್ದಾನೆ. ೨೦೦೩ರ ʻಟಾಕ್ ಟು ಹರ್ʼ ಚಿತ್ರದಂತೆಯೇ ೧೯೯೯ರ ʻಆಲ್ ಎಬೌಟ್ ಮೈ ಮದರ್ʼ ಕೂಡ ಆಸ್ಕರ್ ಪ್ರಶಸ್ತಿ ಗಳಿಸಿದೆ. `ವೋಲ್ವರ್’, `ಬ್ರೋಕನ್ ಎಂಬ್ರೇಸಸ್’ ಮತ್ತು `ಐ ಆಮ್ ಸೊ ಎಕ್ಸೈಟೆಡ್’ ಅವನ ಇತರ ಪ್ರಖ್ಯಾತ ಚಿತ್ರಗಳು. ಇವಲ್ಲದೆ ಅವನು `ವಿಮೆನ್ ಆನ್ ದಿ ವರ್ಜ್ ಆಫ್ ನರ್ವಸ್ ಬ್ರೇಕ್‍ಡೌನ್’ ರೀತಿಯ ಹಾಸ್ಯ ಚಿತ್ರವನ್ನೂ ನಿರ್ಮಿಸಿದ್ದಾನೆ.
ದೃಶ್ಯ ಮಾಧ್ಯಮದಲ್ಲಿ ಗಂಡು-ಹೆಣ್ಣಿನ ಪ್ರೇಮವನ್ನು ಕುರಿತಂತೆ ಅಭಿವ್ಯಕ್ತಿಯ ರೂಪದಲ್ಲಷ್ಟೇ ಬದಲಾಗುವ ಹೊಳಹುಗಳನ್ನು ಬಿಟ್ಟರೆ ಹೊಸ ಅನುಭವದ ಮಾತೇ ಇಲ್ಲ ಎನ್ನುವ ಪರಿಸ್ಥಿತಿಯನ್ನು ಸ್ವೀಕರಿಸಲು ಒಪ್ಪದೆ, ಆ ವಸ್ತುವಿನ ಬಗ್ಗೆ ತೀರ ಹೊಸ ಬಗೆಯಲ್ಲಿ ತನ್ನೆಲ್ಲ ಪ್ರತಿಭೆ ಮತ್ತು ಕಲ್ಪನೆಗಳ ರಸಪಾಕದ ಹಾಗೆ ಪೆಡ್ರೋ ಅಲ್ಮೊಡಾವರ್ ವ್ಯಕ್ತಪಡಿಸಿದ್ದಾನೆ. ಆಲ್ಮೊಡಾವರ್ ನ ಅನೇಕ ಚಿತ್ರಗಳಲ್ಲಿ ಹೆಣ್ಣಿಗೇ ಪ್ರಧಾನ ಪಾತ್ರ. ಆದರೆ ʻಟಾಕ್ ಟು ಹರ್ʼ ಚಿತ್ರದಲ್ಲಿ ಗಂಡು ಪಾತ್ರಗಳಿಗೆ ಪ್ರಧಾನ್ಯ. ಪ್ರೇಮದ ಲಹರಿಯಲ್ಲಿ ಮುಳುಗೇಳುತ್ತಿರುವ ಇಬ್ಬರು ಸಾಂದರ್ಭಿಕ ಒತ್ತಡದಿಂದ ಸ್ನೇಹಿತರಾಗುತ್ತಾರೆ. ಪರಸ್ಪರ ಪ್ರಿಯತಮೆಯರ ಬಗ್ಗೆ ತಿಳಿದ ನಂತರ ಒಬ್ಬ ಇನ್ನೊಬ್ಬನಿಗೆ ತನ್ನೊಳಗಿರುವುದನ್ನೆಲ್ಲ ತೋಡಿಕೊಳ್ಳಲು, ʻಟಾಕ್ ಟು ಹರ್ʼ ಎಂದು ಹೇಳುವುದು ಕೊನೆಗೂ ಮಾತಾಗಿ ಮಾತ್ರ ಉಳಿಯುತ್ತದೆ. ಇದು ಈ ಮಾತು ಹೇಳಿದವನಿಗೂ ಅನ್ವಯಿಸುತ್ತದೆ.
ʻಟಾಕ್ ಟು ಹರ್ʼನ ಕಥೆಯ ಪ್ರಮುಖ ಎಳೆಗಳನ್ನು ತಿಳಿದ ಬಳಿಕ ದೃಶ್ಯ ಮಾಧ್ಯದ ಬಗ್ಗೆ ಒಲವುಳ್ಳವರಿಗೆ ತಮ್ಮದೇ ಕಲ್ಪನಾ ಶಕ್ತಿಗೆ ಅನುಗುಣವಾಗಿ ಕಥೆಯಲ್ಲಿ ಪರಿಣಾಮ ಬೀರಿದ ಅಂಶಗಳ ದೃಶ್ಯದ ತುಣುಕುಗಳು ತಮ್ಮಷ್ಟಕ್ಕೆ ಮನಸ್ಸಿನ ಮೇಲೆ ಪಡಿಮೂಡಿ ಸಾಗುವುದು ತೀರ ಸಹಜ. ಚಿತ್ರದ ದೃಶ್ಯ ಸುರುಳಿಗಳು ಬಿಚ್ಚಿಕೊಳ್ಳುತ್ತಿದ್ದಂತೆ ಪ್ರತಿಯೊಂದರಲ್ಲೂ ನಿರ್ದೇಶಕನ ಛಾಪು ಕಾಣಿಸತೊಡಗಿದರೆ ಅಚ್ಚರಿಯ ಜೊತೆ ಅವನ ಕಲ್ಪನಾ ಸಾಮರ್ಥ್ಯದ ಬಗ್ಗೆ ಅತೀವ ಮೆಚ್ಚುಗೆ ಮತ್ತು ಗೌರವ ಉಂಟಾಗುತ್ತದೆ.
ಸ್ಪೇನಿನವರಾಗಿದ್ದರೂ ಅಲ್ಲವೆನ್ನುವ ಅಲ್ಲಿನವರಿಗೆ ಅವರದೇ ಸಂಗತಿ, ವಿಷಯ, ನಂಬಿಕೆಗಳ ಪುನರಾಲೋಚನೆಗೆ ಗುರಿಪಡಿಸುತ್ತಾನೆ. ಅವನ ಚಿತ್ರಗಳಲ್ಲಿ ಗಂಡು ಅಥವಾ ಹೆಣ್ಣು ಪಾತ್ರಗಳು ಲೈಂಗಿಕತೆಗೆ ಸಂಬಂಧಿಸಿದಂತೆ ಸನ್ನಿವೇಶದ ಮತ್ತು ಪಾತ್ರದ ಗುಣಕ್ಕೆ ತಕ್ಕಂತೆ ವರ್ತಿಸುತ್ತವೆ.
ಚಿತ್ರವೊಂದರ ಟೈಟಲ್ ಕಾರ್ಡುಗಳನ್ನು ಶೈಲೀಕೃತಗೊಳಿಸುವುದು ಸಾಮಾನ್ಯವಾದ ರೀತಿ. ಅದನ್ನು ಚಿತ್ರದ ಭಾವಚಿತ್ತಾರಕ್ಕೆ ಬಳಸುವುದು ಅಪರೂಪ. ʻಟಾಕ್ ಟು ಹರ್ʼನಲ್ಲಿ ಆಲ್ಮೊಡೊವರ್ ಪ್ರಮುಖ ಜೋಡಿಗಳ ಪ್ರೇಮ ಸಂಬಂಧ ಯಾವುದೇ ರೀತಿಯಲ್ಲಿ ನೆಲೆಕಾಣದೆ ಹೋಗುವುದನ್ನು ಅಕ್ಷರಗಳು ಅಸ್ಪಷ್ಟವಾಗಿ ಉದ್ದಗಲಕ್ಕೆ ಪರದೆಯಲ್ಲಿ ಹರಡಿಕೊಳ್ಳುವುದರ ಮೂಲಕ ವ್ಯಕ್ತಪಡಿಸಿ, ಮೊದಲನೆ ಕ್ಷಣದಿಂದಲೇ ಮುಖ್ಯ ವಿಷಯಕ್ಕೆ ನಮ್ಮನ್ನು ಅಣಿಗೊಳಿಸುತ್ತಾನೆ. ಹಾಗೆಂದೇ ಚಿತ್ರವನ್ನು ರಂಗಮಂದಿರದಲ್ಲಿನ ಅಭಿನಯದ ದೃಶ್ಯದ ರೂಪಕದಿಂದ ಪ್ರಾರಂಭಿಸುತ್ತಾನೆ. ಅಲ್ಲಿ ಹತ್ತಾರು ಖಾಲಿ ಕುರ್ಚಿಗಳು ಎಲ್ಲಂದರಲ್ಲಿ ಹರಡಿದ್ದು, ಕಣ್ಣು ಕಾಣದ ಬಿಳಿಯುಡುಗೆಯ ನಟಿಯೊಬ್ಬಳು ಭಾವ ಪರವಶಳಾಗಿ ಮನಬಂದಂತೆ ಓಡಾಡುತ್ತಿರುತ್ತಾಳೆ. ಅಲ್ಲೊಬ್ಬ ಅವಳು ಬೀಳದಿರುವಂತೆ ಕುರ್ಚಿಗಳನ್ನು ಅವಳ ದಾರಿಯಿಂದ ಜರುಗಿಸುತ್ತಿರುತ್ತಾನೆ. ಅವಳದೇ ಸ್ಥಿತಿಯಲ್ಲಿರುವ ಇನ್ನೊಬ್ಬಳು ರಂಗದ ಮತ್ತೊಂದು ಬದಿಯಲ್ಲಿರುತ್ತಾಳೆ. ಇದನ್ನು ಬೆನಿಗ್ನೋ ಮತ್ತು ಮಾರ್ಕೋ ನೋಡುತ್ತಿರುತ್ತಾರೆ. ಈ ರೂಪಕದ ಗ್ರಹಿಕೆ ಚಿತ್ರ ಮುಂದುವರಿದಂತೆ ನಮಗಾಗುತ್ತದೆ.
ಚಿತ್ರ ವರ್ತಮಾನ ಮತ್ತು ಭೂತಕಾಲಗಳ ತೂಗುಯ್ಯಾಲೆಯನ್ನು ಒಳಗೊಂಡಿದ್ದರೂ ತುಂಬುಗೂದಲಿನ, ಉಬ್ಬಿದ ಕೆನ್ನೆ ಮತ್ತು ಜೋಡಿಗಲ್ಲಗಳ ಬೆನಿಗ್ನೋ ಹರೆಯದ ಮೈತುಂಬಿಕೊಂಡಿರುವ ಅಲಿಸಾಳನ್ನು ಶುಶ್ರೂಷೆ ಮಾಡುವ ವರ್ತಮಾನದಿಂದ ಪ್ರಾರಂಭವಾಗುತ್ತದೆ. ನಮಗೆ ಅವಳು ಅರೆಪ್ರಜ್ಞಾವಸ್ಥೆಯಲ್ಲಿರುವುದು ಅರಿವಾಗುವುದರ ಜೊತೆ ಅವನು ಅವಳನ್ನು ತನ್ನಷ್ಟಕ್ಕೆ ಮಾತನಾಡಿಸುವ ಅಭ್ಯಾಸದ ಬಗ್ಗೆಯೂ ತಿಳಿಯುತ್ತದೆ. ಹೆಚ್ಚಾಗಿ ಹತ್ತಿರದ ಚಿತ್ರಿಕೆ (ಮಿಡ್ ಶಾಟ್)ಗಳ ಇದೇ ದೃಶ್ಯದಲ್ಲಿ ಅಲಿಸಾಳಿಗೆ ಋತುಸ್ರಾವವಾಗುವುದರಿಂದ ಹಿಡಿದು ಪ್ರತಿಯೊಂದು ಸಂಗತಿಯೂ ಮೂಲ ಉದ್ದೇಶದ ಕಡೆ ಮುಖಮಾಡಿರುವುದು ನಮಗೆ ಮನದಟ್ಟಾಗುತ್ತದೆ. ಸಮ್ಮರ್ ಕ್ರಾಪಿನ ಮಾರ್ಕೋ ಪೀಚು ಮೈಯಿನ ಕೋಲು ಮುಖದ ಲಿಡಿಯಾ ಬಗ್ಗೆ ಆಸಕ್ತನಾಗುವುದು ಟೀವಿಯಲ್ಲಿ ಅವಳನ್ನು ನೋಡುವಾಗ. ಹೀಗಾಗಿ ಈ ಎರಡು ಜೋಡಿಗಳ ಪರಿಚಯ, ನೇರ ಮತ್ತು ಸಹಜ ರೀತಿಗೆ ಹೊರತಾಗಿರುವ ರೀತಿಯಲ್ಲಿದ್ದು ಪಾತ್ರ ಪೋಷಣೆಯೂ ಇದಕ್ಕೆ ಹೊಂದಿಕೊಂಡಿರುವುದು ನಮ್ಮ ಗಮನಕ್ಕೆ ಬರುತ್ತದೆ.
ಗಂಭೀರ ಮುಖಮುದ್ರೆಯ ಲಿಡಿಯಾಳ ಸಮೀಪ ಚಿತ್ರಿಕೆಯ(ಕ್ಲೋಸ್ ಶಾಟ್) ಮೂಲಕ ಪ್ರಾರಂಭವಾಗುವ ಹೋರಿಯ ಜೊತೆಗಿನ ಹೋರಾಟದ ದೃಶ್ಯದಲ್ಲಿ ಪತ್ರಕರ್ತ ಮಾರ್ಕೋ ಆಕೆಯನ್ನು ಕಾಣುತ್ತಾನೆ. ಆಕೆಯ ಲಾಸ್ಯಭರಿತ ವರ್ತನೆ ಮತ್ತು ರೋಷ ತಣ್ಣಗಾದ ಹೋರಿಯ ಮೆಲು ಚಲನೆ ಇವುಗಳನ್ನು ಚಿತ್ರಿಸುತ್ತಲೇ ಆಲ್ಮೊಡೊವರ್ ತನ್ನ ದೇಶದ ವಿಶಿಷ್ಟವಾದ ಆಟವನ್ನು ಕಥಾಭಾಗವನ್ನಾಗಿ ಮಾಡಿಕೊಂಡಿರುವುದು ಕಾಣುತ್ತದೆ. ಮೇಲಿನ ರೂಪಕ, ಚಿತ್ರಕಥೆಯ ಬಂಧ ಹಾಗೂ ಸಂಕಲನದ ರೀತಿಗಳೆಲ್ಲ ಒಂದುಗೂಡಿ ಒಟ್ಟಾರೆ ಚಿತ್ರದ `ಟೋನ್’ ಬಗ್ಗೆ ನಾವು ಸಿದ್ಧಗೊಳ್ಳುತ್ತೇವೆ. ಇಂಥದೊಂದು ಯೋಜನಾಬದ್ಧ ಪ್ರಾರಂಭದ ನಂತರ, ಆಲ್ಮೊಡೊವರ್ ಕಥೆಯ ಮುಂದುವರಿಕೆ ಮತ್ತು ಪಾತ್ರ ಪೋಷಣೆಯತ್ತ ಗಮನ ಹರಿಸುತ್ತಾನೆ.
ಮಾರ್ಕೋ ಲಿಡಿಯಾಳನ್ನು ಭೇಟಿಯಾದ ಪ್ರಥಮದಲ್ಲಿ ಅವಳನ್ನು ಮನೆಗೆ ತಲುಪಿಸುವ ಸಂದರ್ಭದಲ್ಲಿ ಮನೆಯೊಳಗೆ ಹಾವು ಹೊಕ್ಕಿದೆ ಎಂದು ಗಾಬರಿಯಾಗುತ್ತಾಳೆ. ನಮ್ಮ ನಿರೀಕ್ಷೆಗೆ ಅನುಗುಣವಾಗಿ ಮಾರ್ಕೋ ಹಾವನ್ನು ಕೊಂದು ಅವಳ ಸ್ನೇಹ ಗಳಿಸುತ್ತಾನೆ. ಅನಂತರ ಅವಳು ಹೋರಿಯ ಕಾಳಗಕ್ಕಾಗಿ ಹೊಸದೊಂದು ಪೋಷಾಕು ಖರೀದಿಸಲು ಹೋದಾಗ ಅದರ ವಿಶೇಷತೆಗಳನ್ನು ಚಿತ್ರೀಕರಿಸಿ ತೋರಿದರೂ ಅದರೊಂದಿಗೇ ಅವಳು ಗಳಿಸಿದ ಮೆಡಲುಗಳನ್ನು ಕಾಣುವ ನಮಗೆ ಆ ಆಟದ ಜೊತೆ ಬೆರೆತುಕೊಂಡಿರುವ ಅವಳ ಅಂತರಂಗದ ಬಗ್ಗೆಯೂ ಅರಿವಾಗುತ್ತದೆ.
ಹಿನ್ನೆಲೆ ಸಂಗೀತಕ್ಕೆ ಸಂಬಂಧಿಸಿದಂತೆ ಕೇವಲ ಸಾಂದರ್ಭಿಕ ಶಬ್ದಗಳನ್ನು ಬಳಸುವ ಆಲ್ಮೊಡೊವರ್, ತನ್ನ ದೇಶದ ಸಂಗೀತದ ಪರಿಚಯ ಮಾಡಿಕೊಡುವ ಉದ್ದೇಶದಿಂದ ಮಾರ್ಕೋ ಮತ್ತು ಲಿಡಿಯಾ ಭಾಗವಹಿಸಿರುವ ಸಮಾರಂಭವೊಂದರಲ್ಲಿ ಸ್ಪೇನಿನ ಪ್ರಖ್ಯಾತ ಗಾಯಕ ಹಾಡುವುದನ್ನು ಚಿತ್ರದಲ್ಲಿ ಅಳವಡಿಸಿದ್ದಾನೆ. ಇಡೀ ಸನ್ನಿವೇಶ ಅವರಿಬ್ಬರೂ ಮತ್ತಷ್ಟು ಸನಿಹಕ್ಕೆ ಬರಲು ಸಹಕಾರಿಯಾಗುತ್ತದೆ.
ತೀವ್ರತೆಯಿಂದ ಕೂಡಿದ ಈ ಸಂದರ್ಭವನ್ನು ಆಲ್ಮೊಡೊವರ್ ಕ್ಷಿಪ್ರಗತಿಯಲ್ಲಿ ಭಾವೋದ್ರೇಗಕ್ಕೆ ಅವಕಾಶಕೊಡದಂತೆ ನಿರ್ವಹಿಸುತ್ತಾನೆ. ಅನಂತರ ಲಿಡಿಯಾ ಹೋರಿ ಕಾಳಗದಲ್ಲಿ ಅದರ ಆಕ್ರಮಣಕ್ಕೆ ಸರಿಯಾಗಿ ಸಿದ್ಧಳಾಗಿರದೆ ಹೊಡೆತಕ್ಕೆ ಒಳಗಾಗುತ್ತಾಳೆ ಮತ್ತು ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರುತ್ತಾಳೆ.
ಚಿತ್ರದಲ್ಲಿ ಬೆನಿಗ್ನೋನ ಭೂತಕಾಲದ ದಿನಗಳು ತೆರೆದುಕೊಳ್ಳುತ್ತವೆ. ರಸ್ತೆಯ ಎದುರು ನಡೆಯುತ್ತಿರುವ ಬ್ಯಾಲೆ ನಾಟ್ಯಶಾಲೆಯಲ್ಲಿ ಆಲಿಸಾಳನ್ನು ಮಹಡಿಯ ಕಿಟಕಿಯ ಗ್ಲಾಸಿನಿಂದಾಚೆ ನೋಡುವುದರಿಂದ ಪ್ರಾರಂಭವಾಗಿ ಅವಳು ಬೀಳಿಸಿಕೊಂಡು ಹೋದ ಪರ್ಸ್ ಎತ್ತಿಕೊಡುವುದರಿಂದ ಪರಸ್ಪರ ಪರಿಚಯವಾಗುತ್ತದೆ. ತಾನು ಆಸಕ್ತಿ ವಹಿಸಿದ ಹುಡುಗಿಯ ಮನೆ ಪತ್ತೆ ಮಾಡಲು ಹೋಗಿ ಅವಳ ಅಪ್ಪ ಸೈಕಿಯಾರ್ಟಿಸ್ಟ್ ಎಂದು ತಿಳಿದು ಬೆನಿಗ್ನೋ ಸುಮ್ಮನೆ ಪರೀಕ್ಷಿಸಿಕೊಳ್ಳಲು ಹೋಗಿ ತನ್ನ ತಾಯಿಗೆ ಅನೇಕ ವರ್ಷ ಶುಶ್ರೂಷೆ ಮಾಡಿದ್ದನ್ನು ಹೇಳುವ ಅವನು, ಪರೀಕ್ಷೆಗೆ ಬಂದದ್ದೇಕೆಂದು ಕೇಳಿದಾಗ ತಬ್ಬಿಬ್ಬಾಗುತ್ತಾನೆ. ಇಲ್ಲಿಯ ತನಕ ಮುಖ್ಯ ಪಾತ್ರಗಳ ರೂಪುರೇಷೆಯನ್ನು ನಿರ್ವಹಿಸಿದ ಆಲ್ಮೊಡಾವರ್ ತನ್ನ ಆಶಯಕ್ಕೆ ಪೂರಕವಾಗುವಂತೆ ಅವುಗಳಿಗೆ ಹೂರಣ ತುಂಬುವ ಕಾರ್ಯದಲ್ಲಿ ತೊಡಗುತ್ತಾನೆ. ಅಲಿಸಾ ಕೇಳುತ್ತಿದ್ದಾಳೆನ್ನುವ ಹಾಗೆ ಹೇಳುವ ಬೆನಿಗ್ನೋ ತಾನು ನೋಡಿದ ಮೂಕಿ ಚಿತ್ರವೊಂದನ್ನು ವಿವರಿಸುತ್ತಾನೆ.
ಅದೊಂದು ಅತಿವಾಸ್ತವ ರೂಪದ ಕಪ್ಪು-ಬಿಳುಪಿನ ಕಿರುಚಿತ್ರ. ತನ್ನ ಪ್ರಿಯತಮೆಯನ್ನು ಗಾಢವಾಗಿ ಪ್ರೀತಿಸುವವನೊಬ್ಬ ಅವಳು ಕುದುರೆ ಗಾಡಿಯಲ್ಲಿ ತೆರಳಿದ ನಂತರ ಅವಳ ವ್ಯಾನಿಟಿ ಬ್ಯಾಗ್ ನಲ್ಲಿ ಸಂಕುಚಿತಗೊಂಡ ರೂಪಿನಲ್ಲಿ ಕಾಣಿಸಿಕೊಳ್ಳುತ್ತಾನೆ. ಅನಂತರ ಸಂಕುಚಿತ ರೂಪದ ಅವನು ಅವಳನ್ನು ಬೆತ್ತಲಾಗಿಸಿ ಅವಳ ಗುಪ್ತಾಂಗದಲ್ಲಿ ನುಸುಳಿ ಹೋಗಿ ಅಲ್ಲಿಯೇ ಇದ್ದು ಬಿಡುತ್ತಾನೆ. ಅದನ್ನು ಕಂಡು ತನ್ನ ಮನಸ್ಸು ಕಲಕಿಹೋಗಿದೆ ಎಂದಷ್ಟೇ ಬೆನಿಗ್ನೋ ಹೇಳುತ್ತಾನೆ. ಈ ರೂಪಕ ಅವನ ಮನಸ್ಸು ಮತ್ತು ಕ್ರಿಯೆಯನ್ನು ಬಿಂಬಿಸುತ್ತದೆ. ಆ ಬಳಿಕ ಅಲಿಸಾ ಗರ್ಭವತಿಯಾಗಿದ್ದಾಳೆಂದು ಆಸ್ಪತ್ರೆಯ ಸಿಬ್ಬಂದಿಗೆ ತಿಳಿದಾಗ ಇದು ನಮಗೆ ಅರಿವಾಗುತ್ತದೆ.
ಈ ಮಧ್ಯೆ ಬೆನಿಗ್ನೋ ಮಾರ್ಕೋಗೆ ತಾನು ಅಲಿಸಾಳನ್ನು ಮದುವೆಯಾಗುವೆನೆಂದು ಸುದೀರ್ಘವಾಗಿ ಚರ್ಚಿಸುತ್ತ, ಅವಳಿಗೆ ಪ್ರಜ್ಞೆ ಬರುವುದಿಲ್ಲ ಎನ್ನುವ ಮಾರ್ಕೋನ ವಾದವನ್ನು ಒಪ್ಪುವುದಿಲ್ಲ. ಅಲಿಸಾಳ ಗರ್ಭಧಾರಣೆಗೆ ಬೆನಿಗ್ನೋ ಆರೋಪಿಯಾಗಿ ಜೈಲು ಸೇರುತ್ತಾನೆ. ಮಾರ್ಕೋನಿಗಾಗುವಂತೆ ನಮಗೊಂದು ಅಚ್ಚರಿ ಎದುರಾಗುತ್ತದೆ. ಪ್ರಜ್ಞೆ ತಿಳಿದ ಅಲಿಸಾ ಅಶಕ್ತಳಾಗಿದ್ದರೂ ಮತ್ತೆ ತನ್ನ ಪ್ರೀತಿಯ ಬ್ಯಾಲೆ ಶಾಲೆಯಲ್ಲಿ ಕಾಣಿಸಿಕೊಳ್ಳುತ್ತಾಳೆ. ಬೆನಿಗ್ನೋನನ್ನು ಆಗಾಗ ಭೇಟಿ ಮಾಡುವ ಮಾರ್ಕೋ ಅವಳ ಈಗಿನ ಸ್ಥಿತಿಯನ್ನು ಅವನಿಗೆ ತಿಳಿಸಬೇಕೆಂದು ಬಯಸಿದರೂ ಇತರರು ಒಪ್ಪುವುದಿಲ್ಲ. ಈ ದೃಶ್ಯಗಳಲ್ಲಿ ಭಾವದ ಮಟ್ಟ ಕೊಂಚ ಹೆಚ್ಚಿಗೆ ಇದ್ದರೂ ಮುಖ್ಯ ಪಾತ್ರಗಳ ಅಭಿನಯ ಎಲ್ಲೂ ಸಹಜತೆಯನ್ನು ಮೀರುವುದಿಲ್ಲ. ಹುಟ್ಟಿದ ಮಗು ಸತ್ತು ಹೋಗಿ, ಅಲಿಸಾ ಎಂದಿನ ಅರೆಪ್ರಜ್ಞಾ ಸ್ಥಿತಿಯಲ್ಲೇ ಇದ್ದಾಳೆಂದು ಭಾವಿಸುವ ಬೆನಿಗ್ನೋ ಹತಾಶೆಗೊಂಡು ಮಾರ್ಕೋಗೆ ತನ್ನ ನಿರ್ಧಾರವನ್ನು ತಿಳಿಸಲು ಪ್ರಯತ್ನಿಸಿದರೂ ಮಾರ್ಕೋ ತಕ್ಷಣವೇ ಫೋನ್ ತೆಗೆದುಕೊಳ್ಳುವುದಿಲ್ಲ. ಅನಂತರ ಅವನು ವಿದಾಯ ಹೇಳಿದ ಸಂದೇಶ ತಲುಪಿ ಜೈಲಿಗೆ ಧಾವಿಸುತ್ತಾನಾದರೂ ತಡವಾಗಿ ಅವನು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯುತ್ತದೆ.
ಮಾರ್ಕೋಗೆ ಬೆನಿಗ್ನೋ ಬಿಟ್ಟು ಹೋದ ಕಾಗದ ಮತ್ತು ಅಲಿಸಾಳ ಹೇರ್ ಬ್ಯಾಂಡ್ ಮಾತ್ರ. ನಡೆದ ದಾರಿಯಲ್ಲಿ ನಡೆಯದೆ ಪ್ರೇಮವನ್ನು ಕುರಿತು ವಿಶೇಷವಾದ ವಸ್ತುವನ್ನು ಅತ್ಯಂತ ಸಮರ್ಥವಾದ ರೀತಿಯಲ್ಲಿ ಪ್ರಸ್ತುತಪಡಿಸಿ ಯಶಸ್ವಿಯಾದ ಆಲ್ಮೊಡೊವರ್ ನ ಧೀಮಂತಿಕೆಯನ್ನು ಮೆಚ್ಚಬೇಕಾಗುತ್ತದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
Story of the film is told in easy to understand language.