ಪ್ರಕೃತಿ ಜೊತೆಗಿನ ಅವಳ ಪಿಸುಮಾತು ನಮ್ಮನ್ನೆಲ್ಲಾ ಒಂದು ನಳನಳಿಸುವ ಹೂದೋಟದಲ್ಲಿ ನಿಲ್ಲಿಸುತ್ತದೆ. ಮಕ್ಕಳಿಗಾಗಿ ಬರೆದ ಉಪ್ಪು, ರೊಟ್ಟಿ, ನೀರಿನ ಕವಿತೆಗಳು ಬಾಯಾರಿದವರ ದಾಹವನ್ನು ಹಿಂಗಿಸುವಂಥವು. ಅವಳ ತಾಯಿಗರುಳಿನಿಂದ ಉಣಿಸುವ ನೆಲದ ಸೊಗಡಿನ ಅಮೃತದಂತಹ ಕವಿತೆಗಳು ಮನುಕುಲದ ಎದೆ ತುಂಬಿಸುವಂಥವು. ಗ್ರೀಸ್‌ಗೆ ಸಾಫೋ ಆದರೆ ಎಲಿಕ್ಯೂನ ಕಣಿವೆಗೆ ಗೇಬ್ರಿಯಲ್ ಎಂದೂ ಬತ್ತದ ಕಾವ್ಯದೊರತೆಗಳು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಗೇಬ್ರಿಯಲ್ಲ ಮಿಸ್ತ್ರಾಲ್ ಅವರ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ಒಬ್ಬ ತಾಯಿಯ ಕಣ್ಣೀರು ಒಮ್ಮೆ ಇಡೀ ಭಾಷೆಯ ತಿರಸ್ಕಾರಕ್ಕೆ ಕಾರಣವಾಯಿತು. ಕಾವ್ಯದ ಶಕ್ತಿಯ ಮೂಲಕ ಈ ಸಭ್ಯ ಸಮಾಜದಿಂದ ತನ್ನ ಉದಾತ್ತತೆಯನ್ನು ಮತ್ತು ತನ್ನ ವೈಭವವನ್ನು ಮರಳಿ ಪಡೆಯಿತು. ಈ ಜಗತ್ತಿಗೆ ಇಬ್ಬರು ಮಿಸ್ತ್ರಾಲ್. ಒಬ್ಬರು 1904ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಫ್ರೆಡ್ರಿಕ್ ಮಿಸ್ತ್ರಾಲ್ ಫ್ರೆಂಚ್ ಭಾಷೆಯಲ್ಲಿ ಬರೆದವರು. ರೈತಾಪಿ ಮಹಿಳೆಯಾದ ತನ್ನ ತಾಯಿಗೆ ಅರ್ಥವಾಗುವ ತನ್ನ ಮಾತೃಭಾಷೆಯಲ್ಲಿಯೇ ಬರೆಯಲು ನಿರ್ಧರಿಸಿ ಫ್ರೆಂಚ್ ನಲ್ಲಿಯೇ ಬರೆದರು. ಮಣ್ಣಿನ ಮೃದ್ಗಂಧವೂ ಹೂವಿನ ಪರಿಮಳ ಪಸರಿಸುವ ಪ್ರೇಮ ಕವಿತೆ ಬರೆದರು. ಇದಾದ ಹತ್ತು ವರ್ಷಕ್ಕೆ ಫ್ರೆಡ್ರಿಕ್ ತೀರಿ ಹೋದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಗತ್ತಿನ ಇನ್ನೊಂದು ಮೂಲೆಯಲ್ಲಿ ಚಿಲಿ ದೇಶದಲ್ಲಿ ಮತ್ತೊಬ್ಬ ಮಿಸ್ತ್ರಾಲ್ ಉದಯಿಸಿದಳು. ದಕ್ಷಿಣ ಅಮೇರಿಕದಲ್ಲಿ ಮನೆಮಾತಾದ ಗೇಬ್ರಿಯಲ್‌ಳ ಮೂಲ ಹೆಸರು ಲುಸಿಲಾ ಗೊಡೊಯ್ ಅಲ್ಕಯಾಗಾ. ಗೊಡೊಯ್ ಆಕೆಯ ತಂದೆಯ ಹೆಸರು, ಅಲ್ಕಯಾಗಾ ತಾಯಿಯ ಹೆಸರು. ತನ್ನ ಕೆಲಸವನ್ನು ಕಳೆದುಕೊಳ್ಳುವ ಭಯದಲ್ಲಿ ಲುಸಿಯಾ ಗೆಬ್ರಿಯೆಲ್ಲಾ ಮಿಸ್ತ್ರಾಲ್ ಆಗಿ ನಾಮಕರಣಗೊಳ್ಳುತ್ತಾಳೆ. ಆಕೆ ಪುಟ್ಟವಳಿರುವಾಗಲೇ ಅವಳಿಗಾಗಿ ಒಂದು ಸಣ್ಣ ಹೂದೋಟ ಮಾಡಿದ ತಂದೆ ಕುಟುಂಬ ತೊರೆದು ಹೊರಟು ಹೋಗುತ್ತಾರೆ. ಅದೇ ಹೂದೋಟದಲ್ಲಿ ಹೂಗಿಡಮರ ಪಕ್ಷಿಗಳೊಂದಿಗೆ ಮಾತನಾಡುತ್ತ ತಾಯಿಯ ಆಶ್ರಯದಲ್ಲಿ ಬೆಳೆಯುವ ಈಕೆ ಓದಿನಲ್ಲಿ ಅಷ್ಟಕಷ್ಟೆ. ಪೆದ್ದಿ ಎಂದು ಶಾಲೆಯಿಂದ ಹೊರಹಾಕಲ್ಪಡುತ್ತಾಳೆ ಕೂಡ. ಆಗಿನಿಂದ ಮನೆಯೇ ಈಕೆಗೆ ಪಾಠಶಾಲೆ. 1889ರಲ್ಲಿ ಜನಿಸಿದ ಲುಸಿಯಾ, ಎಲ್ಕೂ ನದಿಯ ಕಣಿವೆಯ ಪುಟ್ಟ ಹಳ್ಳಿ, ಕ್ಯಾಂಟೇರಾದ ಹುಡುಗಿ, ಮಕ್ಕಳೊಂದಿಗೆ ಮಕ್ಕಳಾಗಿ ಶಾಲೆಯ ಮಾಸ್ತರಳಾಗಿ ಆ ಮಕ್ಕಳಿಗೆ ತನ್ನೆಲ್ಲ ಪ್ರೀತಿ ಧಾರೆ ಎರೆಯುತ್ತಾಳೆ.

ಮುಂದೆ ರೈಲ್ವೆ ಹಳಿ ಹಾಕುವ ಕೂಲಿಯವನೊಂದಿಗೆ ಗಾಢ ಪ್ರೇಮ ಘಟಿಸಿ ಅವನ ಪ್ರೇಮದಲ್ಲಿ ಮುಳುಗಿರುವಾಗಲೇ ಅವನು ಅವಳಿಗೆ ಮೋಸ ಮಾಡಿ ಹೊರಟು ಹೋಗುತ್ತಾನೆ. ತನ್ನೆಲ್ಲ ನೋವನ್ನು ಭೂಮಿಗೆ ಆಕಾಶಕ್ಕೆ ಕೂಗಿ ಹೇಳುತ್ತಾಳೆ, ಅತ್ತು ಅತ್ತು, ತನ್ನೊಳಗಿನ ನೋವನ್ನು ಇಡೀ ಈ ಲೋಕದ ನೋವಾಗಿ ಶ್ರೇಷ್ಠ ಸಾಹಿತ್ಯವಾಗುವುದು. ಎಂದೂ ಹುಟ್ಟದ ತನ್ನ ಮಗುವಿಗಾಗಿ ಬರೆಯುವ ಇವಳ ಕವಿತೆಗಳು ಗೋಧಿ ತೆನೆಯ ತೊಟ್ಟಿಲು ತೂಗುವ ಈ ಲೋಕದ ಮಾತೆಯರೆಲ್ಲರ ಹಾಡಾಗುವುದು. 1922 ರಲ್ಲಿ ಮೊದಲ ಸಂಕಲನ ” Desolación (“Despair”) – 1924 ” “Ternura (Tenderness)- 1938ರ ಸ್ಪಾನಿಷ್ ಆಂತರಿಕ ಯುದ್ಧದ ಸಂದರ್ಭದಲ್ಲಿ “Tala”(destruction), Lagar 1954 (“the wine press”) ಸಂಕಲನ ಹೊರಬರುವವು. 1945ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಳು.

ಪ್ರಕೃತಿ ಜೊತೆಗಿನ ಅವಳ ಪಿಸುಮಾತು ನಮ್ಮನ್ನೆಲ್ಲಾ ಒಂದು ನಳನಳಿಸುವ ಹೂದೋಟದಲ್ಲಿ ನಿಲ್ಲಿಸುತ್ತದೆ. ಮಕ್ಕಳಿಗಾಗಿ ಬರೆದ ಉಪ್ಪು, ರೊಟ್ಟಿ, ನೀರಿನ ಕವಿತೆಗಳು ಬಾಯಾರಿದವರ ದಾಹವನ್ನು ಹಿಂಗಿಸುವಂಥವು. ಅವಳ ತಾಯಿಗರುಳಿನಿಂದ ಉಣಿಸುವ ನೆಲದ ಸೊಗಡಿನ ಅಮೃತದಂತಹ ಕವಿತೆಗಳು ಮನುಕುಲದ ಎದೆ ತುಂಬಿಸುವಂಥವು. ಗ್ರೀಸ್‌ಗೆ ಸಾಫೋ ಆದರೆ ಎಲಿಕ್ಯೂನ ಕಣಿವೆಗೆ ಗೇಬ್ರಿಯಲ್ ಎಂದೂ ಬತ್ತದ ಕಾವ್ಯದೊರತೆಗಳು.

ನೆರೂಡಾನ ಅಚ್ಚುಮೆಚ್ಚಿನ ಕವಯಿತ್ರಿ ಗೇಬ್ರಿಯಲಳ ಒಂದಿಷ್ಟು ಅಮೃತದ ಬಿಂದುಗಳನು ಕನ್ನಡಕ್ಕೆ ತರುವ ಪ್ರಯತ್ನಕ್ಕೆ ಹಚ್ಚಿದ ನೆಚ್ಚಿನ ಗುರು ‘ಓಎಲ್ಎನ್’ ರವರಿಗೆ ನನ್ನಿ, ಈ ಕವಿತೆಗಳ ಮೊದಲ ಓದುಗ ಸನ್ಮಿತ್ರ ಸುಮಿತ್ ಗೆ ಧನ್ಯವಾದ. ಸ್ಪಾನಿಷ್‌ನಲ್ಲಿ ಬರೆದ ಈ ತೊಟ್ಟಿಲ ಕವಿತೆಗಳನ್ನು ಲ್ಯಾಂಗ್ಸಟನ್ ಹ್ಯೂಗ್ ರವರ ಇಂಗ್ಲಿಷ್ ಅನುವಾದದ ಆಧಾರದ ಮೇಲೆ ಇಲ್ಲಿ ಕನ್ನಡ ರೂಪ ತಳೆದಿವೆ.

1. ತೊಟ್ಟಿಲ ಹಾಡು
(Cradle Song)

ಕಡಲು ತೂಗುವುದು
ಲಕ್ಷ ದಿವ್ಯ ನಕ್ಷತ್ರ
ಕಡಲ ಹಾಡಿಗೆ ಅಕ್ಕರೆಯ ಕಿವಿಗೊಟ್ಟ
ನಾನು ತೂಗುವೆನು ನನ್ನದೊಂದು ಬಾಳ ಚುಕ್ಕಿ
ಜೋ ಜೋ… ಜೋ ಜೋ… ಜೋ ಜೋ…

ಇರುಳು ಬೀಸುವ ಸುಳಿಗಾಳಿ
ತೂಗುವುದು ಗೋಧಿ ತೆನೆ ತೊಟ್ಟಿಲು
ಗಾಳಿಮಡಿಲ ಹಾಡಿಗೆ ಅಕ್ಕರೆಯ ಕಿವಿಗೊಟ್ಟ
ನಾನು ತೂಗುವುದು ನನ್ನ ಬಾಳ ಸವಿ ಕಾಳು
ಜೋ ಜೋ ಜೋ… ಜೋ ಜೋ ಜೋ…

ನಮ್ಮಪ್ಪ ಶಿವಪ್ಪ
ಸದ್ದುಮಾಡದೆ ತೂಗುವನು ಮೂಜಗವ
ಮಬ್ಬು ಸುರಿವಾಗ ಮುದ್ದು ಕೈ ಸವರಿ
ನಾನು ತೂಗುವುದು ನಾ ಪಡೆದ ಮುದ್ದುಕೃಷ್ಣನ
ಜೋ ಜೋ ಜೋ… ಜೋ ಜೋ ಜೋ…

2. ನಾನು ಒಂಟಿಯಲ್ಲ
(I am not Lonely)

ನಿನ್ನ ತೂಗುವ
ನಾನಲ್ಲ ಒಂಟಿ
ಬೆಟ್ಟದಿಂದ ಕಡಲಿವರೆಗಿನ
ಈ ಇರುಳು ಒಂಟಿ

ನಿನಗೆ ಅಂಟಿದ
ನಾನಲ್ಲ ಒಂಟಿ
ಕಡಲಿಗೆ ಜಾರಿ ಬೀಳಲು ಶಶಿ
ಆ ಬಾನ ಬಯಲು ಒಂಟಿ

ನಿನ್ನ ತಬ್ಬುವ
ನಾನಲ್ಲ ಒಂಟಿ
ದುಃಖವನೇ ಹಾಸಿ ಹೊದ್ದ
ಈ ಲೋಕ ಒಂಟಿ

3. ಮ್ಲಾನ ಮಾಯಿ
(Sad Mother)

ಮಲಗು ಮಲಗು ಮಲಗೆನ್ನ ದೊರೆಯೇ
ಅಳುಕು ಅಂಜಿಕೆಯಿಲ್ಲದೆ
ಈ ನನ್ನ ಜೀವ ಮಲಗದಿರೂ
ಈ ಜೀವ ಆರಾಮು ಮಾಡದಿರೂ ಸರಿಯೇ
ಏನಾದರೂ ಮಲಗು ಮಲಗು ಮಗು
ಜೋ ಜೋ ಜೋ… ಜೋ ಜೋ ಜೋ…
ಹುಲ್ಲು ಗರಿಕೆ, ತುಪ್ಪಳದ ಮಿದುವಿಗಿಂತ
ಮಿದುವಾಗಿ ಹಗುರಾಗಿ ಮಲಗು
ನಿನ್ನೊಳಗೆ ಮಲಗಲಿ ಬಿಡು
ನನ್ನೆಲ್ಲ ಕನಸು ಕನವರಿಕೆಯ ಭಯ
ನಿನ್ನೊಳಗೆ ಎವೆಯಿಕ್ಕಲು ಬಿಡು
ನನ್ನೀ ಮನಸು ಮಲಗಲಿ ನಿನ್ನೊಳಗೇ

4. ಇರುಳು
(Night)

ನನ್ನ ಕೂಸೇ,
ನೀನು ಮಲಗುವೆಯೆಂದೇ
ಆಕಾಶಕ್ಕಿನ್ನು ಕಾಂತಿಯ ಲವಲೇಶವೂ ಇಲ್ಲ
ನಿನಗೆ ಗೊತ್ತೇ, ಈಗ ಯಾವುದೂ
ಇಬ್ಬನಿಯ ಹೊರತು ಹೊಳಪಿಲ್ಲ
ನನ್ನ ಮುಖದ ಹೊರತು ಬಿಳುಪಿಲ್ಲ

ನನ್ನ ಕೂಸೇ, ನೀನು ಮಲಗುವೆಯೆಂದೇ
ಮೂಕಾಗಿದೆ ಹೆದ್ದಾರಿ
ಹರಿಯುವ ಹೊಳೆಯು ಮುಲುಕುವುದಿಲ್ಲ
ನನ್ನ ಹೊರತು ಏನೂ ಇಲ್ಲ

ಮಂಜಿನ ಮುಸುಕೆಳೆಯುತಿದೆ ಬಯಲು
ಕೆನ್ನೀಲಿ ಹೂ ಮುರುಟುವುದು
ಲೋಕದ ಮೇಲೆ ಕೈಯೊರಗಿ
ಮಲಗಿದೆ ಮೌನ

ಜೋಗುಳ ಹಾಡಿ ತಪ್ಪಡಿಸಿ
ನಾ ತೂಗುವ ತೊಟ್ಟಿಲ ಜುರುಕಿಗೆ
ಮಲಗುವುದು ನನ್ನ ಮುದ್ದುಕೃಷ್ಣನೊಬ್ಬನೇ ಅಲ್ಲ
ಈ ಲೋಕವೂ…

5. ಭಯ
(Fear)

ಅವರು ನನ್ನ ಮಗಳನ್ನ
ಗುಬ್ಬಿಯನ್ನಾಗಿ ಮಾಡೋದು ಬೇಡ
ಗಗನದ ಬಯಲಲ್ಲಿ ಹಾರಿ ಹೋದವಳು
ಮರಳಿ ಬರಲಾರಳೇನೋ ನನ್ನ ಹೊಸಿಲಿಗೆ
ಅವಳ ಹೆರಳು ಬಾಚಲಾಗದಂತೆ
ಚಜ್ಜದ ಮೇಲೆಲ್ಲೋ ಗೂಡು ಕಟ್ಟಿ ಬಿಡಬಹುದು
ಅವರು ನನ್ನ ಮಗಳನ್ನ
ಗುಬ್ಬಿಯಾಗಿ ಮಾಡೋದು ಬೇಡ

ಅವರು ನನ್ನ ಮಗಳನ್ನ
ರಾಜಕುಮಾರಿಯನ್ನಾಗಿ ಮಾಡೋದು ಬೇಡ
ಚಿನ್ನದ ಪುಟಾಣಿ ಕಾಲುಮರಿ ತೊಟ್ಟು
ಬಯಲಲ್ಲಿ ಹೇಗೆ ಆಡಬೇಕವಳು?
ಅಯ್ಯೋ! ರಾತ್ರಿಗಳಲಿ ಇನ್ನೆಂದೂ ನನ್ನ ಮಗ್ಗಲಿಗೆ
ಬಂದು ಮಲಗೋದಿಲ್ಲ ಅವಳು
ಅವರು ನನ್ನ ಮಗಳನ್ನ
ರಾಜಕುಮಾರಿಯನ್ನಾಗಿ ಮಾಡೋದು ಬೇಡ

ರಾಣಿ ಎಂದು ಕಿರೀಟ ತೊಡಿಸುವ
ಆ ದಿನ ಚೂರೂ ಇಷ್ಟವಿಲ್ಲ
ಈ ಕಾಲು ಏರಲಾಗದ ಎತ್ತರದ
ಸಿಂಹಾಸನ ಮೇಲೊಯ್ದು ಕೂರಿಸುವರು
ರಾತ್ರಿ ಹೊತ್ತಾದಾಗ ಚೊ ಬಡಿದು
ಮಲಗಿಸಲು ಆಗದು
ಮಗಳಿಗೆ ರಾಣಿಯ ಪಟ್ಟಕಟ್ಟುವುದು ಬೇಡ ನನಗೆ

6. ಇಬ್ಬನಿ
(Dew)

ಇಬ್ಬನಿ ಮುತ್ತಿಟ್ಟ
ಗುಲಾಬಿ ಹೂ
ಈ ಮೊಲೆ ಮಾತ್ರ
ಗೊತ್ತಿತ್ತು ನನ್ನ ಮಗುವಿಗೆ

ಮರಿ ಎಲೆ ತಬ್ಬುವುವು
ಮಿದುವಾಗಿ ನೋವಾಗದಂತೆ
ಗಾಳಿಯೂ ಸುಳಿಯುವುದು ದೂರ
ಅವನನ್ನು ಎಬ್ಬಿಸದಂತೆ

ಒಂದಿರುಳು ಆಕಾಶದ ಅನಂತದಿಂದ
ಭೂಮಿಗಿಳಿದನಿವ
ಅಳದಿರಲಿ ಅವನೆಂದು
ಉಸಿರು ಬಿಗಿ ಹಿಡಿವಳು ಇವಳು

ನಲಿಯುವ ನೆಮ್ಮದಿ
ಒಂದೂ ಗಲಾಟೆ ಮಾಡದವ
ಗುಲಾಬಿಗಳ ನಡುವೆ ಒಂದು ಗುಲಾಬಿ
ಒಹ್!
ಹಿಂದೆಂದೂ ಕಂಡಿರದ ಸೋಜಿಗವಿದು

ಇಬ್ಬನಿ ಮುತ್ತಿಟ್ಟ
ಗುಲಾಬಿ ಹೂ
ಈ ಮೊಲೆ ಮಾತ್ರ
ಗೊತ್ತಿತ್ತು ನನ್ನ ಮಗುವಿಗೆ

7. ಶೋಧ
(Discovery)

ಈ ಕೂಸು ಸಿಕ್ಕಿತು
ಹಳ್ಳಿಗೆ ಹೋದಾಗ
ಕಾಳು ಕಟ್ಟುವ ತೆನೆಗಳ ನಡುವೆ
ಮಲಗಿದವನ ಹುಡುಕಿಕೊಂಡೆ

ದ್ರಾಕ್ಷಿ ತೋಟದ
ನಡುವೆ ಹಾದು ಹೋಗುವಾಗಲೋ
ಬಳ್ಳಿಗಳ ಮಧ್ಯೆ ತಡಕಾಡುವಾಗಲೋ
ಅವನ ಗಲ್ಲ ಸೋಕಿದೆ

ಇದೇ ಅಂಜಿಕೆ ನನಗೆ,
ಕಣ್ಣು ಹತ್ತಿದಾಗ
ಆ ದ್ರಾಕ್ಷಿ ಬಳ್ಳಿ ಮೇಲೆ
ಕೂತ ಇಬ್ಬನಿಯಂತೆ
ಅವನೂ ಕರಗಿದರೆ..?