ಆಗತಾನೇ ನಾನು ಬರೆದಿದ್ದ ‘ಮ್ಯಾಚು’ ಎನ್ನುವ ಕಥೆಯನ್ನು ಅದೊಂದು ಸಂಜೆ ಚಹಾ ಕುಡಿಯುತ್ತಿದ್ದಾಗ ಅವನಿಗೆ ಓದಲು ಕೊಟ್ಟಿದ್ದೆ. ಎರಡು ದಿನ ಬಿಟ್ಟು ಅದನ್ನು ಓದಿ ಬಂದವನು ವಿಪರೀತ ಮೆಚ್ಚುಗೆಯಾಗಿದ್ದಾಗಿ ಹೇಳಿ, ಕಣ್ಣೀರು ಸುರಿಸಿದ್ದ. ಆ ಕಥೆಯಲ್ಲಿ ಭಿನ್ನ ಧರ್ಮಕ್ಕೆ ಸೇರಿದವರ ಗೆಳೆತನದ ಬಗೆಗಿನ ಚಿತ್ರಣವಿತ್ತು. ಜೊತೆಗೆ ಅವರಿಬ್ಬರ ನಡುವೆ ಉಂಟಾಗುವ ದ್ವೇಷವನ್ನು ಅಭಿವ್ಯಕ್ತಿಸುವುದಕ್ಕೆ ಚಹಾದ ರೂಪಕವನ್ನು ನಾನು ಬಳಸಿದ್ದೆ. ನನ್ನ ಕಥೆಯನ್ನೂ ಹಚ್ಚಿಕೊಂಡು ಕಣ್ಣೀರು ಸುರಿಸುವ ಅಂತಃಕರಣ ಇದ್ದವನಾಗಿದ್ದ ಪುನೀತ್‌ನ ಮರಣವಂತೂ ನನಗೆ ಸಹಿಸಿಕೊಳ್ಳುವುದಕ್ಕಾಗಿರಲಿಲ್ಲ. ಅವನು ತೀರಿಕೊಂಡನೆಂದು ಗೊತ್ತಾದಾಗ ನನಗಾದ ದುಃಖ ಎಷ್ಟು ಎನ್ನುವುದು ನನಗೆ ಮಾತ್ರ ಗೊತ್ತು.
ಚಹಾದ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಹಾಗೇ ಸುಮ್ಮನೆ ನಿಮ್ಮ ಕಣ್ಣನ್ನೊಮ್ಮೆ ಮುಚ್ಚಿಕೊಂಡು ಕಲ್ಪಿಸಿಕೊಳ್ಳಿ. ನೀವು ಮನೆಯೊಳಗಿದ್ದೀರಿ. ಹೊರಗೆ ಮಳೆ ಬರುತ್ತಿದೆ. ಬಿಸಿ ಬಿಸಿ ಹಬೆಯೇಳುತ್ತಿರುವ ಲೋಟವೊಂದು ನಿಮ್ಮ ಕೈಯ್ಯಲ್ಲಿದೆ. ಅದರೊಳಗಿರುವುದು ನಾಲ್ಕೇ ನಾಲ್ಕು ಗುಟುಕು ಚಹಾ. ನೀವು ಒಂದು ಗುಟುಕನ್ನು ಕುಡಿಯುತ್ತೀರಿ. ಹೊರಗೆ ಮಳೆ ಜೋರಾದ ಸದ್ದು ಕೇಳುತ್ತದೆ. ಎರಡನೇ ಗುಟುಕು ನಿಮ್ಮ ಬಾಯಿಯನ್ನು ಸೇರಿಯಾಗಿದೆ. ಈಗ ನಿಮ್ಮ ಮೈಯ್ಯನ್ನು ಸ್ಪರ್ಶಿಸುತ್ತಿರುವ ಗಾಳಿ ವಿಪರೀತ ತಣ್ಣಗಿದೆ. ಮೂರನೆಯ ಗುಟುಕು ನಿಮ್ಮ ದೇಹ ಸೇರಿದಾಗ ಶರೀರದೊಳಗೆಲ್ಲ ಬೆಚ್ಚನೆಯ ಭಾವ. ಗಾಳಿಯ ಓಘ ಈಗ ಇನ್ನಷ್ಟೂ ಹೆಚ್ಚಾಗಿದೆ. ಕೊನೆಯ ಗುಟುಕನ್ನು ಒಳಗಿಳಿಸಿಕೊಂಡ ನಿಮ್ಮೊಳಗೇನೋ ನಿರಾಳತೆ. ನೀವು ಹೀಗೆ ಚಹಾ ಕುಡಿಯುವಾಗ ಕುರುಕಲು ತಿಂಡಿ ಇದ್ದರಂತೂ ನೀವು ಸ್ವರ್ಗಕ್ಕೆ ಏಳೇ ಹೆಜ್ಜೆ ದೂರದಲ್ಲಿದ್ದೀರಿ. ಮಲೆನಾಡಿನ ಮಳೆಗಾಲದಲ್ಲಿ ನೀವಿದ್ದುಕೊಂಡು ಚಹಾ ಕುಡಿಯುತ್ತಿದ್ದೀರಿ ಎಂದಾದರೆ ಇನ್ನೂ ಮೂರು ಹೆಜ್ಜೆ ಹತ್ತಿರದಲ್ಲಿಯೇ ಇದ್ದೀರಿ ಎಂದರ್ಥ.

ಮಾಮೂಲಿ ನೀರು ಚಹಾ ಆಗಿ ನಮ್ಮೆದುರಿಗಿದೆಯೆಂದರೆ ಅದು ಹಲವು ಹಂತಗಳನ್ನು ದಾಟಿ ಬಂದಿರುತ್ತದೆ. ಸಾಧಕನೊಬ್ಬನ ಬದುಕಿಗೆ ರೂಪಕವಾಗಿ ಇದನ್ನು ಗಮನಿಸಿಕೊಳ್ಳಬಹುದು. ನೀರು ಕುದಿಯಬೇಕು. ಒಡಲೆಲ್ಲ ಕುದಿದು ಇನ್ನು ಕುದಿಯುವುದಕ್ಕೆ ಅವಕಾಶವೇ ಇಲ್ಲವೇನೋ ಎನ್ನುವಂತೆ ಕುದಿಯಬೇಕು. ಈಗ ನೀರಿಗೆ ಬಿದ್ದ ಚಹಾದ ಹುಡಿ ಬಣ್ಣ ಕಳೆದುಕೊಳ್ಳಬೇಕು. ಇದ್ದ ಬಣ್ಣವನ್ನು ಕಳಚಿಕೊಳ್ಳಬೇಕು. ಕುದಿಯುವ ಗಡಿಬಿಡಿಯನ್ನು ತತ್ಕಾಲಕ್ಕೆ ತೊರೆದು ಸಕ್ಕರೆಯನ್ನು ಅಂತರಂಗದೊಳಕ್ಕೆ ಇಳಿಸಿಕೊಳ್ಳಬೇಕು. ಸಕ್ಕರೆಯ ಸಿಹಿಯೆಲ್ಲ ಮನಸ್ಸಿನಾಳದಲ್ಲಿ ಕರಗಿಹೋಗಬೇಕು. ಈ ಹಂತಗಳನ್ನೆಲ್ಲ ದಾಟಿ ಬಂದ ಮೇಲೆ ಸಾದಾ ನೀರಾಗಿದ್ದದ್ದು ಚಹಾ ಆಗಿ ನಮ್ಮ ಕಣ್ಣಮುಂದೆ ಇರುತ್ತದೆ.

*****

ಚಹಾ ಕುಡಿಯುವಾಗೆಲ್ಲಾ ನನಗೆ ನೆನಪಾಗುವುದು ಪುನೀತ್ ಎನ್ನುವ ನನ್ನ ಸ್ನೇಹಿತ. ಎರಡು ವರ್ಷಗಳ ಕಾಲ ಅವನ ಜೊತೆಗೆ ಚಹಾ ಕುಡಿದ ಅನುಭವ ನನ್ನದು. ನಾನಾಗ ಕನ್ನಡ ಎಂ.ಎ. ಓದುತ್ತಿದ್ದೆ. ಪ್ರತಿದಿನವೂ ಮನೆಯಿಂದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೋಗಿ ಬರುತ್ತಿದ್ದೆ. ಸಂಜೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬರುತ್ತಿದ್ದಾಗ ಮೆಲ್ಕಾರ್ ಎಂಬ ಸ್ಥಳದಲ್ಲಿ ಇಳಿಯುತ್ತಿದ್ದೆ. ಅಲ್ಲೇ ಕೆಲಸ ಮಾಡುತ್ತಿದ್ದವ ಪುನೀತ್. ಅವನು ಕೆಲಸ ಬಿಟ್ಟು ಬರುವ ಸಮಯ ಮತ್ತು ನಾನು ಅಲ್ಲಿ ಬಸ್ಸಿಳಿಯುವ ಸಮಯ ಯಾವಾಗಲೂ ಒಂದೇ ಆಗಿರುತ್ತಿತ್ತು. ಇಬ್ಬರೂ ಸಹ ಅಲ್ಲೇ ಹತ್ತಿರದಲ್ಲಿದ್ದ ಹೋಟೆಲೊಂದಕ್ಕೆ ಹೋಗಿ ಚಹಾ ಕುಡಿಯುತ್ತಿದ್ದೆವು. ನಮಗಿಬ್ಬರಿಗೂ ಚಹಾ ಎಂದರೆ ವಿಪರೀತ ಇಷ್ಟ. ಈ ವಿಷಯದಲ್ಲಿ ನಾವಿಬ್ಬರೂ ಕರಾವಳಿ ಕರ್ನಾಟಕದ ಮಂದಿಗಿಂತ ಸ್ವಲ್ಪ ಭಿನ್ನ. ಕರಾವಳಿಯಲ್ಲಿ ಬಹುತೇಕರು ಚಹಾಕ್ಕಿಂತ ಕಾಫಿಯನ್ನು ಹೆಚ್ಚು ಇಷ್ಟಪಡುತ್ತಾರೆ, ಚಹಾ ಕುಡಿಯುವ ಮಧ್ಯೆ ಅದೆಷ್ಟೋ ಮಾತುಗಳು ಬಂದುಹೋಗುತ್ತಿದ್ದವು. ನಮಗಿಬ್ಬರಿಗೂ ಸಾಹಿತ್ಯ ಪ್ರೀತಿ ಇದ್ದುದರಿಂದ ಓದಿದ ಪುಸ್ತಕಗಳ ಬಗ್ಗೆ ಮಾತನಾಡುತ್ತಿದ್ದೆವು. ನಾನಾಗಲೇ ಬರೆಯಲು ಶುರುಮಾಡಿದ್ದೆ. ಆಗತಾನೇ ನಾನು ಬರೆದಿದ್ದ ‘ಮ್ಯಾಚು’ ಎನ್ನುವ ಕಥೆಯನ್ನು ಅದೊಂದು ಸಂಜೆ ಚಹಾ ಕುಡಿಯುತ್ತಿದ್ದಾಗ ಅವನಿಗೆ ಓದಲು ಕೊಟ್ಟಿದ್ದೆ. ಎರಡು ದಿನ ಬಿಟ್ಟು ಅದನ್ನು ಓದಿ ಬಂದವನು ವಿಪರೀತ ಮೆಚ್ಚುಗೆಯಾಗಿದ್ದಾಗಿ ಹೇಳಿ, ಕಣ್ಣೀರು ಸುರಿಸಿದ್ದ. ಆ ಕಥೆಯಲ್ಲಿ ಭಿನ್ನ ಧರ್ಮಕ್ಕೆ ಸೇರಿದವರ ಗೆಳೆತನದ ಬಗೆಗಿನ ಚಿತ್ರಣವಿತ್ತು. ಜೊತೆಗೆ ಅವರಿಬ್ಬರ ನಡುವೆ ಉಂಟಾಗುವ ದ್ವೇಷವನ್ನು ಅಭಿವ್ಯಕ್ತಿಸುವುದಕ್ಕೆ ಚಹಾದ ರೂಪಕವನ್ನು ನಾನು ಬಳಸಿದ್ದೆ. ನನ್ನ ಕಥೆಯನ್ನೂ ಹಚ್ಚಿಕೊಂಡು ಕಣ್ಣೀರು ಸುರಿಸುವ ಅಂತಃಕರಣ ಇದ್ದವನಾಗಿದ್ದ ಪುನೀತ್‌ನ ಮರಣವಂತೂ ನನಗೆ ಸಹಿಸಿಕೊಳ್ಳುವುದಕ್ಕಾಗಿರಲಿಲ್ಲ. ಅವನು ತೀರಿಕೊಂಡನೆಂದು ಗೊತ್ತಾದಾಗ ನನಗಾದ ದುಃಖ ಎಷ್ಟು ಎನ್ನುವುದು ನನಗೆ ಮಾತ್ರ ಗೊತ್ತು.

ಮುಂದೆ ನಾನು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದೆ. ಅಲ್ಲಿ ಗುಲ್ಬರ್ಗಾ ಕಡೆಯ ಶಿವಶಂಕರ್ ಕೋರೆ ಎನ್ನುವ ಉಪನ್ಯಾಸಕರೊಬ್ಬರು ನನ್ನ ಆತ್ಮೀಯರಾಗಿದ್ದರು. ಕನ್ನಡ ಗೊತ್ತಿರದ ವಿದ್ಯಾರ್ಥಿಗಳಿಗೆ ಸಂಜೆ ಕಾಲೇಜು ಮುಗಿದ ಮೇಲೆ ತರಗತಿಯನ್ನು ನಾನು ತೆಗೆದುಕೊಳ್ಳಬೇಕಾಗುತ್ತಿತ್ತು. ನನ್ನ ಜೊತೆಗಿನ ಆತ್ಮೀಯತೆಯ ಕಾರಣದಿಂದ ಕೋರೆಯವರು ನಾನು ತರಗತಿ ಮುಗಿಸಿ ಬರುವವರೆಗೂ ಕಾಯುತ್ತಾ ಕುಳಿತಿರುತ್ತಿದ್ದರು. ಕಾಲೇಜು ಆವರಣದಿಂದ ಬಸ್‌ಸ್ಟ್ಯಾಂಡಿನವರೆಗೂ ನಾವಿಬ್ಬರೂ ಮಾತನಾಡುತ್ತಾ ಜೊತೆಗೆ ನಡೆಯುತ್ತಿದ್ದೆವು. ಮಧ್ಯದಲ್ಲೊಂದು ಹೋಟೆಲ್ ಕಂ ಅಂಗಡಿ. ವಿಶ್ವಣ್ಣನ ಅಂಗಡಿ ಎಂದೇ ನಾವದನ್ನು ಕರೆಯುತ್ತಿದ್ದದ್ದು. ಅದರೊಳಗಿದ್ದದ್ದು ಎರಡೇ ಎರಡು ಟೇಬಲ್‌ಗಳು. ಸಂಜೆಯಂತೂ ಆ ಎರಡು ಟೇಬಲ್‌ಗಳು ನನಗೂ ಕೋರೆಯವರಿಗೂ ಮೀಸಲು ಎಂಬಂತಿದ್ದವು. ನಾವು ಒಳಹೋಗಿ ಕುಳಿತ ತಕ್ಷಣ ವಿಶ್ವಣ್ಣ ಎರಡು ಲೋಟ ಬಿಸಿ ಬಿಸಿ ಚಹಾ ತಂದು ನಮ್ಮೆದುರಿಗಿಡುತ್ತಿದ್ದರು. ನಾವು ಅದೂ ಇದೂ ಮಾತನಾಡುತ್ತಾ ಆ ದಿನ ನಡೆದದ್ದೆಲ್ಲವನ್ನೂ ಚರ್ಚೆ ಮಾಡುತ್ತಾ ಚಹಾದ ಲೋಟವನ್ನು ಖಾಲಿ ಮಾಡುತ್ತಿದ್ದೆವು. ಕೋರೆಯವರಿಗೆ ರಾಜಕೀಯದ ಬಗ್ಗೆ ಬಹಳ ಚೆನ್ನಾಗಿ ಮಾತನಾಡುವ ಕೌಶಲ್ಯವಿತ್ತು. ಸರ್ಕಾರ ಹೇಗೆ ನಡೆಯುತ್ತಿದೆ? ಅದು ತೆಗೆದುಕೊಂಡ ನಿರ್ಧಾರ ಸರಿಯಿದೆಯೋ ಇಲ್ಲವೋ ಎನ್ನುವುದನ್ನೆಲ್ಲಾ ಅವರು ವಿಶ್ಲೇಷಿಸುತ್ತಿದ್ದದ್ದು ನಾಲ್ಕು ಗುಟುಕು ಚಹಾವನ್ನು ಮುಂದಿರಿಸಿಕೊಂಡು. ನಾನು ಅವರ ಮಾತನ್ನು ಕೇಳುತ್ತಿದ್ದೆ. ಯಾವುದೋ ಕಥೆ ಬರೆಯಲು ಬೇಕಾದ ವಸ್ತು, ವಿಷಯಗಳು ಅದೆಷ್ಟೋ ಸಲ ಅವರ ಮಾತಿನಿಂದಾಗಿ ಮತ್ತು ಚಹಾದ ಸ್ವಾದದಿಂದಾಗಿ ನನಗೆ ಹೊಳೆದದ್ದಿದೆ.

*****

ಚಹಾ ಕುಡಿಯುವುದಕ್ಕೇನಿದ್ದರೂ ಸಂಜೆಯೇ ಪ್ರಶಸ್ತ ಕಾಲ ಎಂಬ ನಂಬುಗೆ ನನ್ನದು. ಅದಕ್ಕಾಗಿ ನಾನು ಬೆಳಗ್ಗೆ ಹೊತ್ತಿಗೆ ಕಾಫಿಯನ್ನೇ ಕುಡಿಯುತ್ತಿದ್ದೆ. ಸಂಜೆಗೆ ಮಾತ್ರ ಚಹಾವೇ ಬೇಕಿತ್ತು. ಆದರೆ ಚಹಾ ಕುಡಿಯುವುದಕ್ಕೆ ಹೊತ್ತುಗೊತ್ತೇನೂ ಇಲ್ಲ; ಯಾವ ಸಮಯದಲ್ಲಿ ಕುಡಿದರೂ ರುಚಿಯಾಗಿರುತ್ತದೆ ಎಂಬ ಭಾವನೆ ನನ್ನಲ್ಲಿ ಮೂಡಿದ್ದು ವಿಜಯನಗರದರಸರ ರಾಜಧಾನಿಗೆ ಹೋಗಿದ್ದಾಗ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣವೊಂದಿತ್ತು. ಅದರಲ್ಲಿ ಪ್ರಬಂಧ ಮಂಡಿಸುವ ಉದ್ದೇಶದಿಂದ ಹೋದ ನಾನು ಹೊಸಪೇಟೆಯಲ್ಲಿ ಬಸ್ಸಿಳಿದಾಗ ಸೂರ್ಯ ಮೂಡುವುದಕ್ಕಿನ್ನೂ ಮೂವತ್ತೈದು ನಿಮಿಷ ಬಾಕಿಯಿತ್ತು. ವಿಶ್ವವಿದ್ಯಾಲಯಕ್ಕೆ ಹೋಗುವ ಬಸ್ಸು ಬರಬೇಕಾದರೆ ಬಹಳಷ್ಟು ಸಮಯ ಕಾಯಬೇಕಾಗಿತ್ತು. ಲಾಡ್ಜ್‌ಗೆ ಹೋಗಿ ಸ್ನಾನ ಮುಗಿಸಿ ಬಂದ ನಾನು ಹೋಟೆಲ್ ಹೊಕ್ಕವನು ದೋಸೆ ಮತ್ತು ಕಾಫಿ ಕೊಡುವಂತೆ ಕೇಳಿದೆ. ನನ್ನೆದುರಿನಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದವನೊಬ್ಬನು ಅವನಾಗಿಯೇ “ನಮ್ಮೂರಲ್ಲಿ ಮಿರ್ಚಿ ಜೊತೆಗೆ ಚಹಾ ಭಾರೀ ಫೇಮಸ್. ಅದನ್ನೇ ತೆಗೆದುಕೊಳ್ಳಿ. ಬಹಳ ಚೆನ್ನಾಗಿರುತ್ತದೆ” ಎಂದು ಸ್ಥಳೀಯ ಭಾಷೆಯ ಗತ್ತಿನಲ್ಲಿ ಹೇಳಿದ. ಪರಿಚಯವೇ ಇಲ್ಲದ ನನ್ನ ಜೊತೆಗೆ ಅವನಾಡಿದ ಆತ್ಮೀಯತೆಯ ಧಾಟಿ ನನಗೆ ಬಹಳ ಹಿಡಿಸಿತು. ಅದೇ ಇರಲಿ ಎಂದೆ ಸಪ್ಲೇಯರ್‌ಗೆ. ಏಳೇ ನಿಮಿಷಗಳಲ್ಲಿ ಬಿಸಿ ಬಿಸಿ ಮಿರ್ಚಿ- ಚಹಾ ತಂದಿಟ್ಟ. ಮಿರ್ಚಿಯಂತೂ ಖಾರವೋ ಖಾರ. ಆ ಖಾರ ಬಾಯಿಯಲ್ಲಿರುವಾಗಲೇ ಗುಟುಕು ಚಹಾ ಕುಡಿದೆ. ನಿಜಕ್ಕೂ ಅದು ಸ್ವರ್ಗಾನುಭವವೇ ಸರಿ. ಮಿರ್ಚಿ ತಿಂದು ಚಹಾ ಕುಡಿಯಲು ಸಲಹೆಯಿತ್ತ ಆ ಮಹಾನುಭಾವನಿಗೆ ಧನ್ಯವಾದ ಹೇಳೋಣವೆಂದುಕೊಂಡು ತಲೆ ಎತ್ತಿ ಆಚೀಚೆ ನೋಡಿದರೆ ಅವನಾಗಲೇ ಅಲ್ಲಿಂದ ಹೊರಟುಹೋಗಿಯಾಗಿತ್ತು.

ಚಹಾ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎನ್ನುವ ಅಭಿಪ್ರಾಯ ಕೆಲವರದ್ದು. ಚಹಾ ಕುಡಿದರೆ ಕೆಲವರಿಗೆ ನಿದ್ದೆ ಬರುವುದಿಲ್ಲವಂತೆ. ಕೆಲವರಿಗೆ ಅಸಿಡಿಟಿ ಆಗುತ್ತದಂತೆ. ಇನ್ನೂ ಕೆಲವರಿಗೆ ಮಲಬದ್ಧತೆ ಉಂಟಾಗುತ್ತದೆಯಂತೆ. ಹೀಗೆಂದು ಹೇಳಿ ಚಹಾ ಕುಡಿಯಲು ಹಿಂದೇಟು ಹಾಕುವವರಿದ್ದಾರೆ. ಆದರೆ ಚಹಾದ ಸ್ವರ್ಗಸಮಾನ ರುಚಿಯ ಮುಂದೆ ಈ ಸಂಗತಿಗಳೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ ಎನ್ನುವುದು ನನ್ನ ಸ್ವಾನುಭವ.