ಎಲ್ಲಿಂದಲೋ ಯಾರೋ ಇದ್ದಕ್ಕಿದ್ದಂತೆ ಬಂದು ಸಹಜವಾಗಿ ನಿರ್ಮಿತವಾದ ಒಂದು ಸಮಾಜದ ಮೇಲೆ, ಒಂದು ನೆಲದ ಮೇಲೆ ಆಕ್ರಮಣ ಮಾಡಿದರೆ ಅಷ್ಟೇ ಸಹಜವಾಗಿ ಆತಂಕ, ಶಂಕೆ, ಅಪರಾಧೀ ಪ್ರಜ್ಞೆಗಳು ಆಕ್ರಮಣಕಾರರ ರಕ್ತದಲ್ಲಿ ಬೇರೂರಿ ಬೆಸೆದುಹೋಗಿ ಅವರ ಪೀಳಿಗೆಗಳ ವಂಶವಾಹಿನಿಗಳಲ್ಲಿ ಬೇರೂರುತ್ತವೆಯೇನೋ. ತಾವು ಆಕ್ರಮಿಸಿದ ನೆಲವನ್ನು ಮತ್ತೊಬ್ಬರು ತುಳಿಯದಂತೆ ನೋಡಿಕೊಳ್ಳುವ ಭಾವನೆಯೇ ಅವರ ಹಗಲು ಮತ್ತು ರಾತ್ರಿಯ ದುಃಸ್ವಪ್ನವಾಗುತ್ತದೆಯೇನೋ, ಮುಂದುವರೆಯುತ್ತದೇನೋ ಎಂದೆನಿಸುತ್ತದೆ. ಒಂದೊಮ್ಮೆ ತುಳಿದರೂ ಅವರು ತಮ್ಮನ್ನು ಮೀರಿ ಹೋಗದಂತೆ ಕಾಯ್ದುಕೊಳ್ಳುವುದೇ ಅವರ ಅಂತರ್ಪ್ರಜ್ಞೆ, ಅಂತಃಸಾಕ್ಷಿಯಾಗುತ್ತದೇನೋ.
ಡಾ
. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಕನಸುಗಳ ತುಂಬಾ ಅವೇ. ದಿನದ ಗಡಿಬಿಡಿಯಲ್ಲಿ ಮರೆತೇಹೋಗಿದ್ದರೂ, ಧುತ್ತೆಂದು ಅದ್ಯಾವಾಗಲೋ ಅವು ಮನಸಲ್ಲಿ ಪ್ರತ್ಯಕ್ಷವಾಗುತ್ತಿದ್ದವು. ಅರೆರೇ, ಅದನ್ಯಾಕೆ ಮರೆತಿದ್ದೀನಿ, ಇದ್ಹೇಗೆ ಸಾಧ್ಯ ಅಂತ ಆಶ್ಚರ್ಯ. ಬರೋಬ್ಬರಿ ಮೂರು ತಿಂಗಳು ಬಿಟ್ಟು ಮತ್ತೆ ಆ ಬಡಾವಣೆಗೆ ಹೋದಾಗ ಈ ಬಾರಿ ಏನೇ ಆಗಲಿ ಅದನ್ನು ನೋಡಲೇಬೇಕು ಎಂದು ಗಟ್ಟಿ ನಿರ್ಧಾರ ಮಾಡಿಬಿಟ್ಟೆ. ಡ್ರೈವ್ ಮಾಡುತ್ತಾ ಬಾಯಿಬಿಟ್ಟು ಅದನ್ನು ಜೋರಾಗಿ ಹೇಳಿಯೂ ಬಿಟ್ಟೆ. ಕಿರಿಜೀವ ‘ಬಟ್ ಯು ಡೋಂಟ್ ಈಟ್ ಚಿಕನ್ ಡ್ರುಮ್ಸ್ಟಿಕ್ಸ್,’ ಅಂತ ಉಲೀತು. ಅವಳು ಹೇಳಿದ್ದು ಐಸ್ಕ್ರೀಮ್ ಡ್ರುಮ್ಸ್ಟಿಕ್ಸ್ ಬಗ್ಗೆ, ಅಂತ ದೊಡ್ಡಜೀವ ಟಿಪ್ಪಣಿ ಸೇರಿಸ್ತು. ನನ್ನ ಪರದೇಶಿತನ ಭಾರತೀಯ ಸ್ಥಿತಿಗಾಗಿ ನಗು ಬಂತು. ಉಳಿದವರು ಇನ್ನೇನು ಹೇಳುತ್ತಾರೋ ಎಂದು ಮುಖಗಳನ್ನ ನೋಡಿದೆ. ಸರಿ ಉತ್ತರ ಕೊಡದಿದ್ದರೆ ದಿನಪೂರ್ತಿ ಇವಳ ಪರದೇಶಿತನದ ಸಿಡಿಮಿಡಿ ಕೇಳಬೇಕಾಗುತ್ತದೆ ಎಂದೆನಿಸಿತ್ತೆನೋ! ‘Guys, ಶಿ ಈಸ್ ಟಾಕಿಂಗ್ ಅಬೌಟ್ ಹರ್ vege,’ ಅನ್ನೋ ಸಮಜಾಯಿಷಿ ಬಂತು. ಸದ್ಯ ಮೈಯಲ್ಲಿ ಸ್ವಲ್ಪವಾದರೂ ಭಾರತೀಯ ರಕ್ತ ಹರೀತಾ ಇರೋದು ಇವತ್ತು ಗ್ಯಾರಂಟಿ ಆಯ್ತು ಎಂದು ಹಲ್ಲು ಕಿರಿದೆ. ಎಲ್ರೂ ಹರಳೆಣ್ಣೆ ಕುಡಿದ ಮುಖ ಮಾಡಿ ‘ಬದುಕಿದೆವು ನಾವು ಬಡಪ್ರಾಣಿಗಳು’ ಅನ್ನೋ ಥರ ಒಬ್ಬರನೊಬ್ಬರು ನೋಡಿಕೊಂಡರು. ಕಿರಿಜೀವ ಸುಮ್ಮನಿರದೆ ‘ವಾಟ್ vege? ಯು ಮೀನ್ those ಸ್ಟಿಕ್ಸ್?’ ಅಂದ ಕೂಡಲೇ ಆಗಷ್ಟೇ ಸಮಾಧಾನದ ಉಸಿರು ಎಳೆದುಕೊಂಡಿದ್ದ ಎಲ್ಲರೂ ಹಾರಿಬಿದ್ದರು. ಹೇಳಬಾರದ್ದನ್ನ ಹೇಳಿಬಿಟ್ಟೆಯಲ್ಲೋ ಭಡವಾ ಎನ್ನುವಂತೆ ಸರಿಯುತ್ತರ ಕೊಟ್ಟಿದ್ದ ಇನ್ನೊಬ್ಬ ‘ಥೂ ನಿನ್ನ, don’t call it a stick. ಅದರ ಹೆಸರು ಡ್ರಮ್ ಸ್ಟಿಕ್. ಅದು ತರಕಾರಿ. ಹಾಗೆಲ್ಲ ಹೇಳಿದರೆ ಅಮ್ಮನ ತವರುಮನೆ ಆಹಾರ ಸಂಸ್ಕೃತಿಗೆ ಅವಮಾನ ಮಾಡಿದಂತೆ,’ ಅಂತೆಲ್ಲಾ ಉದ್ದನೆ ವಿವರಣೆ ಕೊಡ್ತು. ಭೇಷ್ ಭೇಷ್ ಎಂದೆ.

ನೀವೆಲ್ಲಾ ಕಾರ್ ನಲ್ಲೇ ಕೂತಿರಿ, ನಾನೊಬ್ಬಳೇ ಹೋಗಿ ಯಾರವರು, ನುಗ್ಗೆಕಾಯಿ ಮರ ಅವರ ಮನೇಲಿ ಯಾಕಿದೆ, ಮರದಲ್ಲಿ ನೇತಾಡುತ್ತಿರುವ ಕಡೆ ನಾಲ್ಕು ನುಗ್ಗೆಕಾಯಿ ನಾನು ಹಣಕೊಟ್ಟು ಕೊಳ್ಳಲು ಅವರು ಒಪ್ಪುತ್ತಾರೆಯೇ ಎಂದೆಲ್ಲಾ ವಿಚಾರಿಸಿಬರುತ್ತೀನಿ ಅಂತ ಹೊರಟೆ. ಬಾಗಿಲು ತೆರೆದವನು ಮೀಸೆ ಇದ್ದ ಯುವಕ. ನನ್ನ ನುಗ್ಗೆಕಾಯಿ ವಿಷಯ ಹೇಳಿದೆ. ನಮ್ಮಮ್ಮನನ್ನ ಕರೆತರ್ತೀನಿ, ಅಂತ ಒಳಹೋದ ಎರಡು ನಿಮಿಷದಲ್ಲೇ ಆಕೆ ಪ್ರತ್ಯಕ್ಷವಾದರು. ಸಣ್ಣಗೆ, ಕುಳ್ಳನೆ ಇದ್ದ ಆಕೆ ನಗುಮುಖದವಳು. ಅಷ್ಟೊಂದು ಇಂಗ್ಲಿಷ್ ಬರಲ್ಲ, ತನ್ನ ಮಗ translate ಮಾಡ್ತಾನೆ ಅಂತ ಹೇಳಿದ್ದು ಹಿಂದಿ/ಉರ್ದು ಭಾಷೆಯಲ್ಲಿ. ‘ಆಪ್ ಬತಾಯಿಯೇ, ಮೈ ಭೀ ಹಿಂದಿ ಮೇ ಕುಚ್ ಕುಚ್ ಬಾತ್ ಕರ್ತಿ ಹೂ’ ಅಂತ ನಾನೆಂದರೆ ಆಕೆಯ ಮುಖಾರವಿಂದ ಅರಳಿಬಿಟ್ಟಿತು. ಕಿವಿಗೆ ಕನ್ನಡ ಕೇಳಿಸಿದರೆ ನನಗೂ ಹಾಗೆ ಆಗತ್ತೆ.

ನನ್ನ ನುಗ್ಗೆಕಾಯಿ ಅಪೇಕ್ಷೆ ಹೇಳಿದೆ. ಈಗ ವಿಪರೀತ ಬಿಸಿಲು, ನಾಳೆ ಬೆಳಗ್ಗೆ ಬಾ, ಕಿತ್ತಿಟ್ಟಿರುತ್ತೀನಿ ಅಂದಳು. ಒಂದು ವಾರ ಬಿಟ್ಟು ಹೋದೆ. ಆ ಹೆಂಗಸು, ಅವಳ ಗಂಡ, ಅವರ ದೊಡ್ಡ ಮಗಳು ಇದ್ದರು. ಒಳಕರೆದು, ಫ್ರಿಜ್ ನಲ್ಲಿರಿಸಿದ್ದ ಸುಮಾರು ಇಪ್ಪತ್ತು ನುಗ್ಗೆಕಾಯಿಗಳನ್ನು ತಂದುಕೊಟ್ಟಳು. “ಎರಡು, ಮೂರು ತಿಂಗಳ ಹಿಂದೆಯೇ ಬರಬೇಕಿತ್ತು, ಈಗ ಸೀಸನ್ ಮುಗಿದಿದೆ, ಇವೆಲ್ಲಾ ಒಣಗಿಹೋಗಿವೆ, ಮುಂದಿನ ಡಿಸೆಂಬರ್ ತಿಂಗಳಲ್ಲಿ ಬಂದರೆ ತುಂಬಾ ಚಂದನೆ ಕಾಯಿ ಸಿಗುತ್ತದೆ”, ಅಂದಳು. “ಮೊದಲ ಬಾರಿ ಬಂದಿದ್ದೀಯಾ, ಈ ಬಾರಿ ಹಣ ಕೊಡಬೇಡ”, ಅಂದಳು. “ಮನೆಮುಂದಿನ ಅಂಗಳದಲ್ಲಿ ಅದೇನು ಅಷ್ಟೊಂದು ಮೆಣಸಿನಕಾಯಿ ಬೆಳೆಸಿದ್ದೀರಿ, ಅದನ್ನು ಮಾರುಕಟ್ಟೆಗೆ ಕಳಿಸುತ್ತೀರಾ” ಎಂದೆ. “ಬಾ ಹಿತ್ತಲಿಗೆ ಹೋಗೋಣ, ಅಲ್ಲಿ ನೋಡಲು, ಮಾತನಾಡಲು ಬೇಕಾದಷ್ಟಿದೆ”, ಅಂದಳು. ಕುತೂಹಲವನ್ನು ಧಾರಾಳವಾಗಿ ಪ್ರಕಟಿಸುತ್ತಲೇ ಗಂಡ ಹೆಂಡಿರನ್ನು ಹಿಂಬಾಲಿಸಿದೆ. ನಾವುಗಳು ಒಬ್ಬರಿಗೊಬ್ಬರು ಅಪರಿಚಿತರು ಅಂತ ಅನ್ನಿಸಲೇ ಇಲ್ಲ.

ಹಿತ್ತಲಲ್ಲಿ ನಾನಾ ತರಹದ ತರಕಾರಿ ಗಿಡ, ಚಪ್ಪರ, ಮರಗಳು. ಮಾವು, ಹಲಸು, ಪನ್ನೀರ್ ಹಣ್ಣು, ಸೇಬು, ಪ್ಲಮ್ ಮತ್ತು ಸ್ಥಳೀಯ ಹಣ್ಣಿನ ಮರಗಳು. ಇನ್ನೂ ಮೂರು ನುಗ್ಗೆ ಮರಗಳು!!! ಆಕೆಯೇ ಬೆಳೆಯುವುದು, ಪೋಷಿಸುವುದು, ಮಾರುವುದು ಎಲ್ಲವನ್ನೂ ಮಾಡುತ್ತಾರೆ. ಮನೆ ಹಿತ್ತಲಲ್ಲೇ ಮಿನಿ ತರಕಾರಿ ಮಾರ್ಕೆಟ್!! “ನಿಮ್ಮನ್ನು ಎಷ್ಟು ಮೆಚ್ಚಿಕೊಂಡರೂ ಸಾಲದು” ಅಂದೆ. “ಎಲ್ಲಾ ಮೆಹನತ್ ಆಕೆಯದೇ” ಅಂದರು ಗಂಡ. ಆಕೆಯ ಮುಖದಲ್ಲಿದ್ದ ತೃಪ್ತಿ ಭಾವನೆ ಮನಸ್ಸನ್ನು ತಂಪುಗೊಳಿಸಿತ್ತು.

ಗಂಡಹೆಂಡತಿ ಇಬ್ಬರೂ ಕಲ್ಕತ್ತಾದವರು. ಮದುವೆಯಾದಾಗ ಅವಳಿಗೆ ಹದಿನಾರು, ಅವನಿಗೆ ಇಪ್ಪತ್ತರ ಹರೆಯ. ಅವ ಹಣಸಂಪಾದನೆಗಾಗಿ ಭಾರತದಿಂದ ಹೊರಟು ಸ್ವಲ್ಪ ಕಾಲ ಕೊಲ್ಲಿ ದೇಶಗಳಲ್ಲಿದ್ದು ಅಲ್ಲಿಂದ ಹೇಗೋ ಆಸ್ಟ್ರೇಲಿಯಾ ಸೇರಿಕೊಂಡಿದ್ದ – ಯಾವುದಾದರೂ ಸರಿ, ಜೀವನೋಪಾಯಕ್ಕಾಗಿ ಏನೋ ಒಂದು ಕೈಕೆಲಸ. ಆಸ್ಟ್ರೇಲಿಯಾದ ರೆಸ್ಟೋರೆಂಟ್ ಗಳಲ್ಲಿ ದುಡಿಯುತ್ತಿದ್ದವನ ಜೊತೆಗೆ ಹೆಂಡತಿ ಬಂದು ಸೇರಿಕೊಂಡಳು. ಗಂಡಹೆಂಡತಿ ಇಬ್ಬರೂ ಬೆವರು ಸುರಿಸಿ ದುಡಿದರು. ಮೂವರು ಮಕ್ಕಳು ಹುಟ್ಟಿದರು. ದುಡಿಮೆ ಹೆಚ್ಚಾಯ್ತು. ಸಾಧ್ಯವಾದಷ್ಟೂ ಉಳಿತಾಯ ಮಾಡಿ ಆ ನಡುವಿನಲ್ಲೇ ಚಿಕ್ಕದಾಗಿ ಭಾರತೀಯ take away (ಆಹಾರ ಪಾರ್ಸೆಲ್ ಅಂಗಡಿ) ಆರಂಭಿಸಿ, ವ್ಯಾಪಾರ ಕೌಶಲಗಳನ್ನು ಕಲಿತರು. ಅದನ್ನು ಕ್ರಮೇಣ ಬೆಳೆಸಿ ರೆಸ್ಟೋರಾಂಟ್ ಮಾಡಿದರು.

ಪರದೇಶದಲ್ಲಿ ಪ್ರಾಮಾಣಿಕವಾಗಿ ಬದುಕಿ ಗೌರವವನ್ನು ಸಂಪಾದಿಸಬೇಕು. ತಮ್ಮಿಬ್ಬರ ದುಡಿಮೆಯಿಂದಲೇ ಬದುಕು ಕಟ್ಟಲು, ಮಕ್ಕಳಿಗೆ ಬದುಕು ಕೊಡಲು ಸಾಧ್ಯ ಎನ್ನುವುದನ್ನು ಅವರಿಬ್ಬರೂ ನಂಬಿದ್ದರು. ಆಕೆ ಹೈಸ್ಕೂಲು ವಿದ್ಯಾಭ್ಯಾಸ ಕೂಡ ಮುಗಿಸಿರಲಿಲ್ಲ, ಆದರೆ ಈಗ ಅವಳ ಮಗ ಇಂಜಿನಿಯರ್, ದೊಡ್ಡ ಮಗಳು ರೆಸ್ಟೋರಾಂಟ್ ನಡೆಸುತ್ತಿದ್ದಾಳೆ, ಚಿಕ್ಕವಳು ಶಾಲೆ ಮುಗಿದ ಮೇಲೆ ಯೂನಿವರ್ಸಿಟಿಗೆ ಹೋಗಿ ಶಿಕ್ಷಣವನ್ನು ಮುಂದುವರೆಸುವ ಮಾತನ್ನಾಡುತ್ತಿದ್ದಾಳೆ ಎಂದು ಹೇಳುವಾಗ ಆಕೆಯ ಮುಖದಲ್ಲಿ ಹೆಮ್ಮೆ, ನನ್ನ ಮುಖದಲ್ಲಿ ಬೆರಗು!

ಮನೆ ಚೆನ್ನಾಗಿದೆ, ಈ ಬಡಾವಣೆ ತುಂಬಾ ದುಬಾರಿಯಲ್ಲವೇ ಅಂದರೆ ಮತ್ತೊಂದು ಉಪಕಥೆ ಬಿಚ್ಚಿಕೊಂಡಿತು. ಮುಖ್ಯ ಭೂಮಿಕೆಯಲ್ಲಿರುವ ನಮ್ಮ ಜೀವನವೇ ನಮ್ಮ ಅತ್ಯಂತ ದೊಡ್ಡ ಕಥೆ, ಅಲ್ಲವೇ! ಅದರಿಂದ ಹುಟ್ಟುವ ಉಪನದಿಗಳು ಉಪಕಥೆಗಳು ಎಲ್ಲವೂ ಮುಖ್ಯ. ಹೆಸರುವಾಸಿ ಬಡಾವಣೆಯಾದರೂ ಖರೀದಿಸಿದಾಗ ಮನೆ ಬಹಳ ಹಳೆಯದಿತ್ತು, ಅದನ್ನು ಪೂರ್ತಿ ದುರಸ್ತಿ ಮಾಡಿ ಈಗ ಇಷ್ಟು ಚೆನ್ನಾಗಾಗಿದೆ, ಇಬ್ಬರದೂ ಸೇರಿ ಮಾಡಿದ್ದು. ಹೆಂಡತಿ ನಗುನಗುತ್ತಾ ನಗರಕ್ಕೆ ಅಂಟಿಕೊಂಡಂತೆ ಇರುವ ಆ ಇನ್ನೊಂದು ಬಡವಾಣೆಯಲ್ಲೂ ಕೂಡ ನಮ್ಮದೊಂದು ಮನೆಯಿದೆ, ಅದನ್ನೂ ಹೀಗೆ ಹಳೆಯದೆಂದು ಖರೀದಿಸಿ ದುರಸ್ತಿ ಮಾಡಿದೆವು. ಈಗ ಮಾರಿದರೆ ಮಿಲಿಯನ್ ಗಟ್ಟಲೆ ಬೆಲೆ ಅಂದಳು. “ಅದೆಲ್ಲಾ ಈಕೆಯದೇ ಬುದ್ಧಿವಂತಿಕೆ”, ಅಂದ ಗಂಡ. ನನ್ನ ಮೈ ನಾನೇ ಚಿವುಟಿಕೊಂಡೆ. ಬಡಾವಣೆಯಲ್ಲಿ ಅವರಿಗೆ ಸ್ಥಳೀಯರು, ವಲಸೆ ಬಂದು ನೆಲೆಸಿದ ಬೇರೆದೇಶದವರು, ಭಾರತೀಯರು, ಎಲ್ಲರೂ ಸ್ನೇಹಿತರೇ! ಬೆಳೆದ ತರಕಾರಿ ಮತ್ತು ಹಣ್ಣು ಎಲ್ಲರಿಗೂ ಒಂದು ಬಾರಿ ಪುಕ್ಕಟೆಯಾಗಿ ಸಿಗುತ್ತದೆ. ಅದಾದ ನಂತರವೇ ಆಕೆ ಅದನ್ನು ಅವರೆಲ್ಲರಿಗೂ ಮಾರುವುದು. ದುರಾಸೆಯಿಲ್ಲದೆ ಕಡಿಮೆಬೆಲೆ ಇಡುವುದರಿಂದ ಸಮುದಾಯದಲ್ಲಿ ಅವರ ಬಗ್ಗೆ ಮೆಚ್ಚುಗೆಯಿದೆ. ಎಲ್ಲರೂ ಕಷ್ಟಸುಖದಲ್ಲಿ ಒಬ್ಬರಿಗೊಬ್ಬರು ಆಗಿಬರುತ್ತಾರೆ. ನನ್ನ ಫೋನ್ ನಂಬರ್ ಪಡೆದುಕೊಂಡು ತರಕಾರಿ ಬೆಳೆದೆಂತೆಲ್ಲಾ ನಿನಗೆ ಮೆಸೇಜ್ ಕಳಿಸ್ತೀವಿ ಅಂದರು.

“ಮೊದಲ ಬಾರಿ ಬಂದಿದ್ದೀಯಾ, ಈ ಬಾರಿ ಹಣ ಕೊಡಬೇಡ”, ಅಂದಳು. “ಮನೆಮುಂದಿನ ಅಂಗಳದಲ್ಲಿ ಅದೇನು ಅಷ್ಟೊಂದು ಮೆಣಸಿನಕಾಯಿ ಬೆಳೆಸಿದ್ದೀರಿ, ಅದನ್ನು ಮಾರುಕಟ್ಟೆಗೆ ಕಳಿಸುತ್ತೀರಾ” ಎಂದೆ. “ಬಾ ಹಿತ್ತಲಿಗೆ ಹೋಗೋಣ, ಅಲ್ಲಿ ನೋಡಲು, ಮಾತನಾಡಲು ಬೇಕಾದಷ್ಟಿದೆ”, ಅಂದಳು. ಕುತೂಹಲವನ್ನು ಧಾರಾಳವಾಗಿ ಪ್ರಕಟಿಸುತ್ತಲೇ ಗಂಡ ಹೆಂಡಿರನ್ನು ಹಿಂಬಾಲಿಸಿದೆ.

ಎಲ್ಲರೂ ಕಷ್ಟಪಟ್ಟು ದುಡಿದರೆ, ಪರಸ್ಪರ ಒಗ್ಗಟ್ಟು, ಸಾಮರಸ್ಯವಿದ್ದರೆ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದು ಅನ್ನೋದು ಅವರ ದೃಢ ನಂಬಿಕೆ. ಅದೇ ಅವರು ಅವರ ಮಕ್ಕಳಿಗೆ ತೋರಿಸಿರುವ ದಾರಿದೀಪ. ಭಾರತಕ್ಕೆ ಭೇಟಿಕೊಟ್ಟಾಗಲೆಲ್ಲ ಅಲ್ಲಿನ ಗೊಂದಲ, ಸಮಸ್ಯೆಗಳು, ದ್ವೇಷಗಳನ್ನು ನೋಡಿದರೆ ಬೇಸರವಾಗುತ್ತದೆ, ಪ್ರಾಮಾಣಿಕತೆ ಎನ್ನುವುದೇ ಇಲ್ಲವಾಗಿದೆ; ನೋಡಿ, ದೇಶಭಾಷೆ ಯಾವುದಾದರೇನು ನಿಯತ್ತಿನಿಂದ ಇರಬೇಕು ಎಂದರು.

ಹೆಚ್ಚುಕಡಿಮೆ ಸುಮಾರು ಜನ ವಲಸೆಬಂದವರ ಜೀವನಕಥೆ ಇದೇ ತರವಿರುವುದು ಎಲ್ಲೆಲ್ಲೂ ಕಾಣುತ್ತದೆ. ಮೆಲ್ಬೋರ್ನ್ ನಗರದ ರೆಸ್ಟೋರಾಂಟ್, ಕಾರ್ ವಾಶ್ ಕೇಂದ್ರಗಳಲ್ಲಿ ದುಡಿಯುವ ವಿದ್ಯಾರ್ಥಿಗಳು, ಸಿಡ್ನಿ ನಗರದ ಸೂಪರ್ ಮಾರ್ಕೆಟ್ ಗಳಲ್ಲಿ ದುಡಿಯುವ ಸ್ನಾತಕೋತ್ತರ ಪದವಿಧರರು, ತಮಗಿರುವ ವಿದ್ಯಾರ್ಹತೆ ಮತ್ತು ಉದ್ಯೋಗಾನುಭವಕ್ಕೆ ಕಿಂಚಿತ್ತೂ ಹೊಂದದಿದ್ದರೂ ಹೊಟ್ಟೆಪಾಡಿಗಾಗಿ ಕಡಿಮೆ ಸಂಬಳಕ್ಕೆ ದುಡಿಯುವವರು ಎಲ್ಲರೂ ಸೇರಿಯೇ ಈ ದೇಶವನ್ನು ಬೆಳೆಸುತ್ತಿರುವುದು.

ವಲಸೆಗಾರರಿಗೆ ಕೆಲಸ ಕೊಡಬೇಡಿ, ನಮ್ಮ ಆಸ್ಟ್ರೇಲಿಯನ್ನರಿಗೆ ಮೊದಲ ಹಕ್ಕು ಮತ್ತು ಅರ್ಹತೆ ಎಂಬ ಮಾತು ಪದೇಪದೇ ಕೇಳುತ್ತದೆ. ಆದರೆ ಈ ದೇಶದ ನಾಯಕರಿಗೆ, ವ್ಯಾಪಾರ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿನ ಡಿಗ್ರಿಗಳಿಗೆ ತೆರುವ ದುಬಾರಿ ಫೀಸ್ ಬೇಕೇಬೇಕು. ಅದಕ್ಕಾಗಿ ನಡೆಸುವ ಕಸರತ್ತುಗಳನ್ನ ನೋಡಿದರೆ ಕಳವಳವಾಗುತ್ತದೆ. ಹಾಗೆ ಡಿಗ್ರಿಗಳನ್ನು ಪಡೆದಮೇಲೆ ಇಲ್ಲೇ ಉಳಿದು ಕೆಲಸಗಳನ್ನು ಪಡೆಯುವ ಪ್ರಯತ್ನ ಮಾಡಿದರೆ ಅಂತಹವರ ಮೇಲೆ ಅನುಮಾನ, ಕೋಪ! ಸ್ಥಳೀಯ ಮೂಲನಿವಾಸಿ ಆಸ್ಟ್ರೇಲಿಯನ್ನರ ಮೇಲೂ ಅನುಮಾನ, ಅಸಡ್ಡೆ, ವಲಸೆಗಾರರ ಶಿಕ್ಷಣ ಮತ್ತು ಅರ್ಹತೆಗಳ ಬಗ್ಗೆ ಮೂದಲಿಕೆ, ಅಲ್ಲೋ ಇಲ್ಲೋ ಕಾಣಿಸುವ ರೆಫ್ಯೂಜೀ (refugee) ಗಳ ಬಗ್ಗೆ ಇನ್ನಿಲ್ಲದಷ್ಟು ಆತಂಕ!! ಈ ಎಲ್ಲಾ ಕಲಸುಮೇಲೋಗರದ ಸಾಗರದಲ್ಲೂ ಕಾಣಿಸುವುದು ಈ ನುಗ್ಗೆಕಾಯಿ ಹೆಂಗಸು, ನಿಯತ್ತಾಗಿ ಬಾಳಬೇಕು ಅನ್ನೋ ಆ ದಂಪತಿಯ ಮಾತು.

ಎಲ್ಲಿಂದಲೋ ಯಾರೋ ಇದ್ದಕ್ಕಿದ್ದಂತೆ ಬಂದು ಸಹಜವಾಗಿ ನಿರ್ಮಿತವಾದ ಒಂದು ಸಮಾಜದ ಮೇಲೆ, ಒಂದು ನೆಲದ ಮೇಲೆ ಆಕ್ರಮಣ ಮಾಡಿದರೆ ಅಷ್ಟೇ ಸಹಜವಾಗಿ ಆತಂಕ, ಶಂಕೆ, ಅಪರಾಧೀ ಪ್ರಜ್ಞೆಗಳು ಆ ಆಕ್ರಮಣಕಾರರ ರಕ್ತದಲ್ಲಿ ಬೇರೂರಿ ಬೆಸೆದುಹೋಗಿ ಅವರ ಪೀಳಿಗೆಗಳ ವಂಶವಾಹಿನಿಗಳಲ್ಲಿ ಬೇರೂರುತ್ತವೆಯೇನೋ. ತಾವು ಆಕ್ರಮಿಸಿದ ನೆಲವನ್ನು ಮತ್ತೊಬ್ಬರು ತುಳಿಯದಂತೆ ನೋಡಿಕೊಳ್ಳುವ ಭಾವನೆಯೇ ಅವರ ಹಗಲು ಮತ್ತು ರಾತ್ರಿಯ ದುಃಸ್ವಪ್ನವಾಗುತ್ತದೆಯೇನೋ, ಮುಂದುವರೆಯುತ್ತದೇನೋ ಎಂದೆನಿಸುತ್ತದೆ. ಒಂದೊಮ್ಮೆ ತುಳಿದರೂ ಅವರು ತಮ್ಮನ್ನು ಮೀರಿ ಹೋಗದಂತೆ ಕಾಯ್ದುಕೊಳ್ಳುವುದೇ ಅವರ ಅಂತರ್ಪ್ರಜ್ಞೆ, ಅಂತಃಸಾಕ್ಷಿಯಾಗುತ್ತದೇನೋ. ಅದು ಬದಲಾಯಿಸಬೇಕಾದರೆ ಏನೇನು ಸಾಮಗ್ರಿ, ವಿಧಾನಗಳು ಬೇಕಾಗಬಹುದು?

ನುಗ್ಗೆಕಾಯಿ ಮಾರುವ ಹೆಂಗಸಿಗೆ ಹಂಚಿಕೊಂಡರೆ ಮಾತ್ರ ತನ್ನ ಬದುಕು ಮತ್ತಷ್ಟು ಸಮೃದ್ಧಿಯಾಗುತ್ತದೆ ಅನ್ನೋ ಮೂಲತತ್ವ ತಿಳಿದಿದೆ. ಉದಾರತೆಯೆಂಬುದು ಒಬ್ಬರಿಂದ ಒಬ್ಬರಿಗೆ ಹರಡುವ ಹಬ್ಬವಾಗಬೇಕು, ವರವಾಗಬೇಕು, ಆರೋಗ್ಯವಾಗಬೇಕು. ಅದೇ ಆಕೆಯ ಜೀವನದೃಷ್ಟಿಯೂ ಆಗಿರಬಹುದು. ಆ ಸಮಷ್ಟಿ ಭಾವನೆಗೆ ಜಾತಿ, ಧರ್ಮ, ಮೈಬಣ್ಣ, ಭಾಷೆ ಮೇಲಿನ ಹಿಡಿತ, ಉನ್ನತ ಶಿಕ್ಷಣ, ದೇಶಕೋಶಗಳ ಹಂಗಿಲ್ಲ, ಚೌಕಟ್ಟಿಲ್ಲ. ಆಕೆಯದು ಜೀವನ ಕಲಿಸಿದ ಒಳದೃಷ್ಟಿ. ಆ ಜೀವನಾನುಭವದ ಕೊರತೆಯೇ ನಮ್ಮನ್ನು ಹೊಸಕಿಹಾಕುವ ಹುಳುವಾಗಿ ಬೆಳೆಯುತ್ತಿದೆಯೇ ಅನ್ನಿಸುತ್ತದೆ.

ಈ ಭೂ ಗ್ರಹದ ಭೂಪಟದಲ್ಲಿ ಇರುವೆಯಂತೆ ಚಿಕ್ಕದಾಗಿರುವ ನ್ಯೂಝಿಲ್ಯಾಂಡ್ ಹೋದ ತಿಂಗಳು ದೊಡ್ಡ ಆನೆಯಂತೆ, ತಿಮಿಂಗಲದಂತೆ ಕಂಡಿತ್ತು. ಮೆಹೆನತ್ ಮಾಡಿದರೆ ಬದುಕು ಸುಖ ಅನ್ನೋ ನಿಜವನ್ನ ಬದುಕಿಯೇ ತೋರಿಸುತ್ತಿರುವ ಅಸಮಾನ್ಯ ಸಾಮಾನ್ಯರನ್ನ ಆ ನಿಜ ತಿಳಿಯದವನೊಬ್ಬ ಹೊಸಕಿಹಾಕಿದ. ತನ್ನ ಜೀವನದಿಂದಲೇ ಪಾಠಗಳನ್ನು ಕಲಿಯುತ್ತಿರುವ ಆ ದೇಶದ ನಾಯಕಿ ತಾನು ತನ್ನ ಜನರೊಟ್ಟಿಗೆ ಇದ್ದೀನಿ ಅನ್ನೋದನ್ನ ನೋವಿನ ಅನುಭೂತಿಯ ಮೂಲಕ ತೋರಿಸಿದರು. ನಡೆದುಹೋದ ತಪ್ಪು ಮರುಕಳಿಸಬಾರದು ಅನ್ನೋ ನಿರ್ಧಾರದಿಂದ ಹೆಜ್ಜೆಯಿಟ್ಟು ಬದಲಾವಣೆಗೆ ಬೇಕಾದ ಸಾಮಗ್ರಿ, ವಿಧಾನಗಳನ್ನ ಎಲ್ಲರ ಮುಂದೆ ಹರಡಿ ಒಪ್ಪಿಸಿದರು. ಈ ಹೆಂಗಳೆಯ ಮುಂದಾಳತ್ವದ ಉದಾಹರಣೆಯಲ್ಲಿ ತಾವು ಕಲಿಯಬೇಕಿರುವುದು ಬಹಳಷ್ಟಿದೆ ಅನ್ನೋದನ್ನ ಪ್ರಪಂಚದ ಗಂಡು ನಾಯಕರುಗಳು ಒಪ್ಪಿಕೊಳ್ಳಬೇಕಿದೆ.

ಪರದೇಶಿಗಳಾದ ನಾನು ಮತ್ತು ಆ ನುಗ್ಗೆಕಾಯಿ ಹೆಂಗಸು ಒಂದು ಡ್ರಮ್ ಸ್ಟಿಕ್ ನಿಂದ ಸಂಧಿಸಿ ನಾನು ಆಕೆಯ ಮೆಹೆನತ್ ಜೀವನದ ಕಥೆಯನ್ನ, ಆಕೆ ಹಂಚಿಕೊಂಡ ಜೀವನದೃಷ್ಟಿಯ ಬಗ್ಗೆ ಇಷ್ಟರಲ್ಲಿ ಹಲವರಿಗೆ ಹೇಳಿದ್ದೀನಿ. ಅಂಥದ್ದೇ ವಲಸೆಗಾರರು ನ್ಯೂಝಿಲ್ಯಾಂಡ್ ದೇಶದ ನಾಯಕಿಗೂ ಕೂಡ ತಮ್ಮ ಕಥೆಯನ್ನ ಹೇಳಿ ಈಗ ಅಲ್ಲಿ ಸಹೃದಯತೆಯ ವಾತಾವರಣ ನಿರ್ಮಾಣವಾಗಿದೆಯಂತೆ.
ವಿನತೆ ಶರ್ಮಾ