ಖಿಲ್ಜಿಗಳು, ತುಘಲಕರು ಮತ್ತು ಮುಘಲರು ಇಡೀ ಇಂಡಿಯಾವನ್ನು ಒಂದೇ ಹುಕುಮ್ಮತಿನಡಿಯಲ್ಲಿ ತರಲು ಹೆಣಗಿದರಾದರೂ ಈ ಜಂಬೂದ್ವೀಪವೆಂದೂ ಏಕಸ್ವಾಮ್ಯಕ್ಕೀಡಾಗಲಿಲ್ಲ. ದೆಹಲಿಯಲ್ಲಿ ಇಸ್ಲಾಮ್ ರಿಯಾಸತಿರುವ ಕಾಲಕ್ಕೇ ಗುಜರಾತ್, ಬಂಗಾಳ, ಮಾಳವ, ಪಂಜಾಬ್, ಕಾಶ್ಮೀರ ಮತ್ತು ದಖನಿನಲ್ಲಿ ಸ್ವತಂತ್ರ ಮುಸ್ಲಿಮ್ ಪ್ರಾಂತ್ಯಗಳಿದ್ದವೆಂದು ಚರಿತ್ರೆಯ ಉಲ್ಲೇಖ. ದಕ್ಷಿಣದ ಬಿಜಾಪುರ, ಗುಲ್ಬರ್ಗ, ಬೀದರ್ ಮತ್ತು ಗೋಲ್ಕೊಂಡಗಳ ಸುಲ್ತಾನತುಗಳನ್ನು ಹೊರತುಪಡಿಸಿದರೆ, ಈ ಮುಸ್ಲಿಂ ಪ್ರಾಂತ್ಯಗಳಲ್ಲಿ ದೆಹಲಿಗೆ ಸೇರಿಯೂ ಸೇರದ ವಿಭಿನ್ನ ಕಟ್ಟಡಗಾರಿಕೆ ಕಾಣಸಿಗುತ್ತದೆ. ಇಲ್ಲಿನ ಬನಾವಟುಗಳಲ್ಲಿ ಸ್ಥಳೀಯವಾದ ಮೂರ್ತಾಮೂರ್ತತೆಯನ್ನೂ, ಮನುಷ್ಯಕೌಶಲವನ್ನೂ ಒಳಗೊಂಡಿರುವ ತಂತಮ್ಮದೇ ಪ್ರಾದೇಶಿಕತೆಯಿದೆ. ಅಹ್ಮದಾಬಾದ್, ಮಾಂಡು, ಲಾಹೋರ್, ಬಾಂಗ್ಲಾದೇಶಗಳಲ್ಲೊಂದು ಸುತ್ತುಬಂದರೆ ಈ ‘ಆಬಾದು’ಗಳ ಸ್ಥಳೀಯತೆಗೆ ಸಾಕಷ್ಟು ಸಬೂತಾದೀತು. ಈ ಪ್ರಸ್ತಾಪದಲ್ಲಿ ದಖನನ್ನು ಹೊರತುಗೊಳಿಸಿದ್ದಕ್ಕೆ ಇನ್ನೊಂದೇ ಕಾರಣವಿದೆ. ಬಹುಮನಿ ಎನ್ನಲಾಗುತ್ತಿದ್ದ ದೊಡ್ಡ ಸಾಮ್ರಾಜ್ಯ ಮತ್ತು ಆದಿಲ್ ಶಾಹಿ ಎನ್ನಲಾಗುತ್ತಿದ್ದ ದಕ್ಷಿಣದ ಸುಲ್ತಾನತು ತನ್ನ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪೂರ್ತಿಯಾಗಿ ದೆಹಲಿಯ ಜತೆಗಿನ ಲೇವಾದೇವಿಯಿಲ್ಲದೆ ಆಗಿದ್ದಂತೆ. ಯಾಕೆಂದರೆ ಇಲ್ಲಿನ ‘ಇಸ್ಲಾಮು’ ದೆಹಲಿಯ ರಾಜಕೀಯದ ಉಪೋತ್ಪನ್ನವೆಂಬಂತೆ ತಳೆದುಕೊಳ್ಳಲಿಲ್ಲ. ದೆಹಲಿಯ ಆಳ್ವಿಕೆಯಡಿಯಲ್ಲಾದಂತೆ ಇಲ್ಲಿನ ‘ಇಸ್ಲಾಮಿಕ್ ಸಾರ’ ಕಾಲಾಂತರದಲ್ಲಿ ದೇಸೀ ನಾಡು, ನುಡಿಗಳೊಟ್ಟಿಗೆ ಕಲೆತು ತನ್ನಷ್ಟಕ್ಕೆ ತಗ್ಗಲಿಲ್ಲ. ಸರ್ವಶಕ್ತ ಅಲ್ಲಾಹುವಿನ ‘ಇಚ್ಛೆ’ ಇಲ್ಲೆಲ್ಲೂ ಕಲಬೆರಕೆಗೊಳ್ಳಲಿಲ್ಲ. ಕನ್ನಡದ ಉತ್ತರಸೀಮೆಯಲ್ಲಿರುವ ಬಿಜಾಪುರ ಮಾಟದಲ್ಲಿ, ನೋಟದಲ್ಲಿ ತನ್ನ ಒಟ್ಟಂದದ ಬಿತ್ತವನ್ನು ನೇರ ಪರ್ಷಿಯಾದಿಂದಲೇ ಆಮದು ತಂದು ಉತ್ತಿತ್ತಂತೆ. ಗುಲ್ಬರ್ಗ, ಬೀದರ್ ಮತ್ತು ಗೋಲ್ಕೊಂಡಗಳಿಗೆ ಬಿಜಾಪುರದೊಟ್ಟಿಗೆ ಸುಮಾರು ಹತ್ತಿರದ ರಿಶ್ತೇದಾರಿಕೆಯಿದೆ ಅನ್ನಲಾಗುತ್ತದೆ.
ಇಷ್ಟೂ ಪ್ರವರಕ್ಕೊಂದು ನಿಖರ ನಮೂನೆಯೆಂಬಂತೆ ಬಿಜಾಪುರದ ಗೋಳಗುಮ್ಮಟವನ್ನೀಗ ನಿಮಗೆ ಓದಿಸುತ್ತೇನೆ. ನನ್ನ ಮಟ್ಟಿಗೆ ಯಾವುದೇ ಊರು ತನ್ನ ಮನೆಗಳು, ಬೀದಿಗಳು, ಚೌಕಿಗಳು… ಹೀಗೊಂದಿಷ್ಟು ಹಾಳುಮೂಳನ್ನು ತನ್ನೊಳಗಿನ ಮಂದಿಯೊಟ್ಟಿಗೆ ಸೇರಿಸಿ- ಓದು, ಓದಿಕೋ ಎಂದು ಪುಟಗೆದರುತ್ತದೆ. ಖುದ್ದು ಪಠ್ಯವೆನಿಸುತ್ತದೆ. ನಾವು ಚರಿತ್ರೆಯೆಂದು ಪುಟಗಟ್ಟಲೆ ಬರೆದಿಟ್ಟಿರುವುದೆಲ್ಲ ಯಾರೋ ಹಿಂದೊಮ್ಮೆ ಹೀಗೆ ಓದಿರುವುದರ ದಾಖಲೆಯೇ ತಾನೆ? ಚರಿತ್ರೆಯೆಂದರೆ ಇಸವಿಗಳು, ಸ್ಮಾರಕಗಳೆಂದರೆ ಅದರ ಮೇಲಿನ ಗೊಂಬೆ-ಕುಸುರಿಗಳು, ಅವುಗಳ ಪರಿಮಾಣವೆಂದರೆ ಉದ್ದ, ಅಗಲ, ಎತ್ತರಗಳು… ಇವನ್ನು ನೋಡಿ ಭವ್ಯವೆನಿಸಿದ್ದೇ ಒಂದಿಷ್ಟು ಬೆರಗು… ಗೈಡು ಹೇಳಿದ್ದೆಲ್ಲ ರೋಚಿಸಿದರೆ ಈಗೇಕೆ ಹೀಗಿಲ್ಲವಂತ ಅಷ್ಟಿಷ್ಟು ನಿಟ್ಟುಸಿರು… ಹೀಗಿರುವಾಗ ಎದುರಿಗಿರುವ ಆರ್ಕಿಟೆಕ್ಚರನ್ನು ಇವೆಲ್ಲವನ್ನೂ ಮೀರಿ ಓದುವುದಾದರೂ ಹೇಗೆ? ಮೀರುವುದು ಎಂದರೆ ಇವೆಲ್ಲವನ್ನು ಬದಿಗಿಡುವುದು ಅಂದುಕೊಂಡರೆ ನಷ್ಟ ನಮಗೇ. ಒಂದು ಉದ್ದಾಮ ಓದಿನಲ್ಲಿ ಇವೆಲ್ಲವನ್ನೂ ಕ್ರಮಿಸಿ ಮೀರಬೇಕೆನ್ನುವುದು ಈ ಓದಿನಷ್ಟೇ ಮುಖ್ಯವೇನೋ.
ಗೋಳಗುಮ್ಮಟ ಈ ದೇಶದಲ್ಲಿ ಕಟ್ಟಲಾದ ಅತಿದೊಡ್ಡ ಕಟ್ಟಡಗಳಲ್ಲೊಂದು. ಅದರ ಗುಮ್ಮಟವಂತೂ ನಮ್ಮ ಮಟ್ಟಿಗೆ ಅದ್ವಿತೀಯ. ರೋಮ್ ನಗರದ ಸೇಂಟ್ ಪೀಟರು ಚರ್ಚಿನ ಗುಂಭವನ್ನು ಬಿಟ್ಟರೆ ಇಡೀ ವಿಶ್ವದಲ್ಲಿ ಇದಕ್ಕಿರುವಷ್ಟು ದೊಡ್ಡ ಗುಂಬಜ಼ು ಇಲ್ಲ. ಇಲ್ಲಿನ ಗುಂಭ ಮೈದಳೆಯುವ ಎತ್ತರದಲ್ಲಿರುವ ಒಳಗಿನ ಮೊಗಸಾಲೆಯಲ್ಲಿ ನಿಂತರೆ ಪಿಸುಗುಟ್ಟಿದ್ದೂ ನಿಚ್ಚಳಿಸಿ ಅತ್ತಕಡೆ ಕೇಳಿಸುವ ರಹಸ್ಯವಿದೆ. ಇದು ಆ ಕಾಲದ್ದಷ್ಟೇ ಏಕೆ, ಎಲ್ಲ ಕಾಲಕ್ಕೂ ಸಲ್ಲುವ ಇಂಜಿನಿಯರಿಕೆಯ ದೊಡ್ಡ ಸೋಜಿಗ. ಈಗಿನವರ ಕಟ್ಟಡಗಾರಿಕೆಗೊಂದು ಸವಾಲು!!
ಹೀಗೆ ಉದ್ದಾನುದ್ದ ಬರೆದು ಗೋಳಗುಮ್ಮಟದ ಬಗ್ಗೆ ನಾವು ಉಬ್ಬಬಹುದು. ಬೀಗಬಹುದು. ಗುಂಜ಼ಿನ ಒಳಹೊರಗೆ ನಿಂತು ಅದರೆದುರು ಮಿಕ್ಕಿದ್ದೆಲ್ಲ ಕೀಳೆಂದುಕೊಂಡು, ಎಷ್ಟು ಹೇಳಿದರೂ ಸಾಲದೆನ್ನುವುದೊಂದು ನಿಸ್ಸೀಮ ಕುಬ್ಜತೆಯಲ್ಲಿ ಸಣ್ಣಗಾಗಿ, ತಣ್ಣಗಾಗಿ ಹಾಗೇ ಮೂಕವಾಗಿ ವಿಸ್ಮಯಿಸಬಹುದು. ಹೀಗನ್ನುವಾಗಲೇ- ಇದರಲ್ಲೇನು ಹೆಚ್ಚುಗಾರಿಕೆ ಅಂತ ಈಗ ನಾನೇ ಮೂಗು ಮುರಿಯಬಹುದು. ಹೀಗೆ ಮೊಳಗುವ ಪ್ರವಾಸೋದ್ಯಮದ ಘೋಷಣೆಗಳ ಹುಮ್ಮಸ್ಸನ್ನು ಚಿಟಿಕೆಯಿಟ್ಟು ಠುಸ್ಸೆನಿಸಿಬಿಡಬಹುದು. ನಿಜ ಹೇಳುತ್ತೇನೆ- ಗುಮ್ಮಟದೊಳಗಿನ ಮಾರ್ದನಿಗಳು, ಸದ್ದಿನ ಸೋಜಿಗಗಳು, ಪಿಸುಮಾತಿನ ಕೇಳಿಕೆಗಳು… -ಯಾವುದೂ ಅತಿಶಯವಲ್ಲ ಅನ್ನುತ್ತದೆ ನನ್ನೊಳಗಿನ ಸುಪ್ತಿ ಮತ್ತು ಅಷ್ಟೇ ಹೊರಗಿನ ಕಟ್ಟೆಚ್ಚರ. ಇದು ನನ್ನ ಓದಿನ ಹಮ್ಮೇ ಇರಬಹುದು…. ಇರಲಿ. ಇಷ್ಟಕ್ಕೂ ಗೋಳಗುಮ್ಮಟದ ಬಗ್ಗೆ ಹೊರಗಿನಿಂದ ಮತ್ತು ಅಷ್ಟೇ ‘ಅದರೊಳಗಿನಿಂದ’ ಕೇಳಿಸಿಕೊಳ್ಳಲಿಕ್ಕೆ ಇಲ್ಲೊಂದು ತಯ್ಯಾರಿ ಬೇಕು. ಇಲ್ಲವಾದಲ್ಲಿ, ಅದರೊಳಗೆ ನಿಂತ ನಿಮ್ಮ ಕೂಗು ಮತ್ತದರ ಏಳು ಸರ್ತಿಯ ಪ್ರತಿಧ್ವನಿ- ನಿಮ್ಮ ಮಗ್ಗುಲಿಗಿರುವ ಇತರೆಯವರ ಕೂಗುಗಳೊಟ್ಟಿಗೆ, ಅಷ್ಟೇ ಏಳೇಳು ಸರ್ತಿಯ ‘ಎಕೋ’ಗಳೊಟ್ಟಿಗೆ ಬೆರೆತು ಸದ್ದೇ ಸದ್ದಿನ ಹೊಲಸು ಕಲಸಷ್ಟೇ ಕಿವಿಗೆ ಬಿದ್ದಾವು!! ಸರಳವಾಗಿ- ಈ ಗುಮ್ಮಟ ನೀವು ಕೂಗಿದ್ದನ್ನೇ ಕೂಗುತ್ತದೆ. ಅದೂ ನಿಮ್ಮದೇ ದನಿಯಲ್ಲಿ. ಮತ್ತೆ ಮತ್ತೆ ಸಾರಿ ಸಾರಿ! ಅಲ್ಲದೆ ಗುಮ್ಮಟ ತನ್ನೊಳಬುಡದಲ್ಲಿ ನಿಮ್ಮ ಪಿಸುದನಿಯನ್ನೂ ನೀವು ನಿಂತಿರುವಲ್ಲಿ ನೇರ ಆ ಕಡೆಯಿರುವ ನಿಮ್ಮವರ ಕಿವಿಯಲ್ಲಿ ಪಿಸುಗುಡುತ್ತದೆ!!
ಹಾಗಂತ ಗೋಳಗುಮ್ಮಟವೆಂದರೆ ಬರೇ ಓದಿನ ಅನುಭವವಲ್ಲ. ಅದನ್ನು ನೋಡಿಯೇ ತಿಳಿಯಬೇಕು. ಅದಕ್ಕೆ ನಿಮಗಿನ್ನೆಲ್ಲೂ ಕಾಣಿಸದ ಗಾತ್ರವಿದೆ. ಅದನ್ನು ಕೇಳಿಯೇ ತಿಳಿಯಬೇಕು. ಇನ್ನೆಲ್ಲೂ ಕೇಳಿಸದ ವಿಚಿತ್ರ ಅದರೊಳಹೊಕ್ಕ ಕಿವಿಗಳಿಗೆ ದಕ್ಕುತ್ತದೆ. ಅದನ್ನು ಆಡಿಯೇ ತಿಳಿಯಬೇಕು. ಆಡಿದ್ದು ಬಾರಿ ಬಾರಿ ಮರುವಾಡಿಕೊಳ್ಳುತ್ತದೆ. ಅದನ್ನು ಮುಟ್ಟಿಯೇ ತಿಳಿಯಬೇಕು. ಆ ಸ್ಪರ್ಶದಲ್ಲಿ ಅದರ ಸುಣ್ಣ, ಗಾರೆಗಳ ವಿಶಾಲ ಮೈಯರಿವಾಗುತ್ತದೆ. ಇಷ್ಟೆಲ್ಲ ಇಂದ್ರಿಯಗಳನ್ನು ತೊಡಗಿಸಿದ ಮೇಲೆ ಮೂಗನ್ನೇಕೆ ಬಿಡುವುದು, ಖಾವಂದ್? ನಂಬಿ. ಗುಮ್ಮಟದೊಳಗೆ ಅದರದೇ ವಾಸನೆಯಿದೆ. ರುಚಿಯೂ ಇದೆ. ಗುಂಬಜ಼ು ನಿಮ್ಮಷ್ಟೂ ಇಂದ್ರಿಯಗಳು ಮಾರುಹೋಗಬಲ್ಲ ಇಂದ್ರಜಾಲ!! ಇಷ್ಟಾದ ಬಳಿಕ ಮನಸ್ಸನ್ನೂ ಹೂಡಿಬಿಟ್ಟರೆ ಅದರ ಗತಿಯೇ ಬೇರೆ! ಈವರೆಗೆ ಆಗಿರದ ಅಚ್ಚ ಸ್ವಚ್ಛಂದ ಅನುಭವ ಅದು.
ಯಾವುದೇ ಕಟ್ಟಡವನ್ನು ಅನುಭವಿಸಿ ನೋಡಬೇಕು ಎನ್ನುವಲ್ಲಿಗೆ ಈ ಪಢಾಯಿ ಸದ್ಯಕ್ಕೆ ಖತಮಿಸುತ್ತದೆ. ಸಶೇಷವೆನ್ನುತ್ತ ಗೋಲಗುಮ್ಮಟವನ್ನು ಈ ಮುಂದೆ ಇನ್ನಷ್ಟು ವಿಶದವಾಗಿ ಓದಿಸುತ್ತೇನೆ.
ಗೋಲಗುಮ್ಮಟ ಫಡಾಯಿ-2:ಗುಂಬಜೊಳಗಿನ ಚೀಜೂ,ಅದರ ಆವಾಜೂ
ಹಾಗಂತ ಗೋಳಗುಮ್ಮಟ ಚಂದವಂತನಿಸುವ ಬನಾವಟೇನಲ್ಲ. ವಿಪರೀತ ಒಳವಸ್ತು, ಹೊರದ್ರವ್ಯ ಮತ್ತು ಇವೆರಡೂ ಜಂಟಿಯಾಗಿ ಕಟ್ಟುವ ಗಾತ್ರದಿಂದ ತೊಪ್ಪೆ ಬಿದ್ದಿರುವಂತೆ ತೋರುವ ಇದನ್ನು ಸೊಬಗೆನ್ನಲಿಕ್ಕೆ ನನಗಂತೂ ತಕಲೀಫು! ಇಷ್ಟಕ್ಕೂ ಇದಕ್ಕೆ ಇಂತಹ ಗಾತ್ರದ ಅಗತ್ಯವಾದರೂ ಏನಿತ್ತು? ಬದುಕಿರುವಾಗಲೇ ಸ್ವಂತಕ್ಕಾಗಿ ಗೋರಿಗಳನ್ನು ಕಟ್ಟಿಕೊಳ್ಳುತ್ತಿದ್ದ ಮುಸಲ್ಮಾನ ‘ಹುಜ಼ೂರು’ತನಕ್ಕೆ- ಬೃಹತ್ತು ಕಟ್ಟಿದರಷ್ಟೇ ಮಹತ್ತೆನ್ನುವ ಖಾಯಿಷಿತ್ತೇನೋ. ತಾಜ್ ಮಹಲು ಜಿದ್ದು ಮಾಡಿ ಚಂದ ಹೊಂದಿತು ಅನ್ನುತ್ತಾರಲ್ಲ- ಹಾಗೆ ಈ ಗುಂಬಜ಼ಿಗೂ ದೊಡ್ಡದಾಗಿಯೇ ತೀರುವ ಹಠವಿದ್ದಿರಬೇಕು. ಇಷ್ಟಿದ್ದೂ ತಾಜ್ ನಷ್ಟು ಸೊಗಸಿಲ್ಲವೆನ್ನುವುದನ್ನು ಬಿಟ್ಟರೆ ಗುಂಬಜ಼ನ್ನು ಸಾಟಿ ಮಾಡುವ ಇಮಾರತು ಈ ದೇಶದಲ್ಲಂತೂ ಇನ್ನೊಂದಿಲ್ಲ.
ಗುಮ್ಮಟವು ಒಳಗಿನಿಂದ ಕಲೆಯುವ ಟೊಳ್ಳಿನ ವಸ್ತುವನ್ನು ಅನುಭವಿಸಿದರಷ್ಟೇ ಅದರ ಬುಲಂದಿನ ಅರಿವಾಗುವುದು. ಈ ಕಟ್ಟಡವನ್ನು ಚಚ್ಚೌಕದ ಡಬ್ಬಿಯ ಮೇಲಿಟ್ಟಿರುವ ಅರೆಗೋಳವೆನ್ನುವ ಹಾಗೆ ಊಹಿಸಿಕೊಂಡರೆ, ಕೆಳಗಿನ ಚೌಕಕ್ಕೆ ನೂರರವತ್ತು ಅಡಿಗಳ ಎತ್ತರ ಮತ್ತು ಮೇಲಿನ ಗೋಳಕ್ಕೆ ಮತ್ತೆ ಅರವತ್ತೆರಡು ಅಡಿ- ಹೀಗೆ ನೆಲದಿಂದ ಒಟ್ಟು ಇನ್ನೂರ ಇಪ್ಪತ್ತು ಅಡಿಗಳಷ್ಟು ಮೇಲಿನ ಆಗಸದಲ್ಲಿ ನೆತ್ತಿ ಹೊತ್ತಿರುವ ಅದರ ವಿರಾಟವನ್ನು, ಭರಾಟೆಯನ್ನು ಯಾವುದಕ್ಕೆ ತಾನೇ ಹೋಲಿಸುವುದು?! ತಿಳಿಯುತ್ತಿಲ್ಲ.
ಆರ್ಕಿಟೆಕ್ಚರಿನ ಓದಿನಲ್ಲಿ ಸ್ಕೇಲ್ ಅನ್ನಲಾಗುವ ಅಳತೆಯಲ್ಲದ ಅಳತೆಯಿದೆ. ಸಂಗೀತದಲ್ಲಿ ಆರೋಹಣ, ಅವರೋಹಣಗಳಿವೆಯಲ್ಲ- ಅಂಥದೇ ಮಾನದಂಡ. ಸ್ಕೇಲು ಅಂದರೆ ಸಾಪೇಕ್ಷ ಸ್ಥಾನಮಾನದ ಲೆಕ್ಕ. ಆಳಳತೆಯಲ್ಲಿ ಕಟ್ಟಡವನ್ನು ಅಳೆಯುವ ಪದ್ಧತಿ. ಈ ನಿಟ್ಟಿನಲ್ಲಿ ನೋಡಿದರೆ ನಲವತ್ತು ಆಳುಗಳ ಎತ್ತರ ಈ ಗುಮ್ಮಟಕ್ಕೆ. ಇಲ್ಲಿ ಊಹಿಸಿಕೊಂಡ ಹಾಗೆ, ಗುಂಬಜ಼ು ಒಂದು ಚೌಕದ ಡಬ್ಬಿ ಮತ್ತು ಮೇಲೆ ಅರ್ಧಗೋಳದ ಮುಚ್ಚಿಗೆ ಅಂತಾದಲ್ಲಿ- ಬೆಂಗಳೂರಿನ ಅತಿಯೆತ್ತರದ ಕಟ್ಟಡವನ್ನು ಅದರೊಳಗಿಟ್ಟು ಮುಚ್ಚಿಯೇಬಿಡಬಹುದೇನೋ! ಅಂತಹ ಮಹಾಸ್ಕೇಲು ಅದರದು!!
ಹತ್ತಡಿಯಷ್ಟು ದಪ್ಪದ ನಾಲ್ಕುಗೋಡೆಗಳು ನೂರನಲವತ್ತು ಅಡಿಗಳ ಚೌಕಾವರಣವನ್ನು ಕವಿದು, ಸರಿಸುಮಾರು ಅಷ್ಟೇ ಎತ್ತರಕ್ಕೇರಿದ ಮೇಲೆ ಎಂಟು ಕಮಾನುಗಳಾಗಿ ಕೊನರಿಕೊಳ್ಳುವ ಉತ್ತುಂಗದಲ್ಲಿ- ನೂರಿಪ್ಪತ್ತು ಅಡಿ ವ್ಯಾಸವುಳ್ಳ ಗುಂಭವನ್ನು ಸಲೀಸಾಗಿ ಹೊತ್ತುಬಿಡುತ್ತವೆ. ಸೋಜಿಗವೆನಿಸುವುದು ಬೋರಲು ಕವಿಚಿದಂತಿರುವ ಈ ಗೋಳದ ಗುಂಡಾಲು ತಾನಿರುವ ಎತ್ತರದಲ್ಲಿ ಒಳಗಿನಿಂದ ಹೊಂದಿರುವ ಅವಕಾಶ. ಒಳಗೆ ನಿಂತರೆ ಯಾರಿಗೆ ಯಾರೂ ಗೌಣವೆನಿಸುವುದು ಸಹಜ. ಇನ್ನೂ ಸೋಜಿಗವೆನಿಸುವುದು ಬಯಲಿನಂತಹ ಈ ಒಳಾವರಣದಲ್ಲಿ ನಡುಗಂಭಗಳ ಆಯವಿಲ್ಲದೆ ಸೂರಿನ ಗುಂಭ ನಿಂತಿರುವ ಪರಿ. ಇದಕ್ಕಿಂತಲೂ ಸೋಜಿಗವೆಂದರೆ ಬರೇ ಇಟ್ಟಿಗೆಗಳಿಂದ ಇಡೀ ಬನಾವಟು ಆಗಿಕೊಂಡಿರುವ ರೀತಿ! ಅರರೆ… ಅಕೋ- ಗೋಡೆಯನ್ನು ಮಾಡುವ ಇಟ್ಟಿಗೆಯ ಕಟ್ಟಡವೇ ಕಮಾನುಗಳಾಗಿ ಬಾಗಿ, ಗುಂಭವಾಗಿ ಗುಮ್ಮಗೆ ನಿಂತುಬಿಟ್ಟಿದೆ!! ಕಂಭವಿರದ ಗುಂಭವನ್ನು ಹೀಗೆ ನಿರುಕುತ್ತಲೇ ಅರಳಿಕೊಳ್ಳುವ ಪಾಪೆಗಳನ್ನೂ, ಮೋರೆಚಹರೆಗಳನ್ನೂ ನೋಡಿದರೆ ತಿಳಿದೀತು- ಕನ್ನಡದಲ್ಲಿ ಸರ್ವೇಸಾಮಾನ್ಯ ಅನ್ನಲಾಗುವ ಬೆಕ್ಕಸಬೆರಗು ಅಂತಂದರೆ ಏನೆಂದು?! ಅಥವಾ ಈ ಕುರಿತಿನ್ನೂ ಹೇಳಲಿಕ್ಕೆ ನನ್ನೀ ಕನ್ನಡಕ್ಕೇ ಅರೆಯೆ?!
ತಾಜಮಹಲನ್ನು ಗುಂಬಜ಼ಿನೊಟ್ಟಿಗೆ ತೂಗುವುದಾದರೆ- ಮೂಲದಲ್ಲಿ ಎರಡೂ ಗೋರಿಗಳೇ. ಎರಡೂ ತಂತಮ್ಮ ಕರ್ತೃಗಳ ಜೀವಿತಾವಧಿಯಲ್ಲೇ ಆದವುಗಳು. ತಾಜಮಹಲಿಗೂ ಈ ಗುಮ್ಮಟಕ್ಕಿರುವ ಹಾಗೆಯೇ ಗುಂಭವಿದೆ. ಆದರೆ ಅದಕ್ಕೆ ‘ಗುಂಬಜ಼ು’ ಎಂದು ಕರೆಸಿಕೊಳ್ಳದ ಸಾದಾ ಮಹಲುತನವಿದೆ. ಗೋಳಗುಮ್ಮಟದಲ್ಲೋ- ‘ಗುಮ್ಮಟ’ದ್ದೇ ಥೀಮು. ತಾಜಮಹಲಿನ ಗುಮ್ಮಟ ಸದರಿ ಗುಮ್ಮಟಕ್ಕಿಂತ ಎಷ್ಟೋ ಪಾಲು ಚಿಕ್ಕದು ಮತ್ತು ಅದರ ಕಟ್ಟಡದ ಒಟ್ಟು ವಿನ್ಯಾಸದಲ್ಲೊಂದು ಸಾಮಾನ್ಯ ಅಂಶ ಮಾತ್ರ. ತಾಜಮಹಲನ್ನು ಅದರ ಜಗತಿ, ನಾಲ್ಕು ಮಿನಾರುಗಳು, ಎದುರಿಗಿರುವ ನೆಲ-ನೀರುಗಳ ಉದ್ಯಾನ -ಇವೆಲ್ಲವನ್ನೂ ಹೊರತುಪಡಿಸಿ ಬರೇ ‘ಗುಂಭ’ವೆಂದು ಪರಿಗಣಿಸುವುದೇ ಸಾಧುವಲ್ಲ. ಗೋಳಗುಮ್ಮಟ ಹಾಗಲ್ಲ. ಗುಮ್ಮಟವೇ ಇಲ್ಲಿ ಶೋಭಾಯ‘ಮಾನ’.
ಇಲ್ಲಿನ್ನೂ ಒಂದು ಖಯಾಲಿದೆ. ತಾಜಮಹಲಿನ ಗುಂಭ, ಜೊತೆಗೆ ಈ ದೇಶದಲ್ಲಿ ಬಿಜಾಪುರದಾಚೆಗಿನ ಯಾವುದೇ ಗುಂಭಕ್ಕೆ ಈರುಳ್ಳಿಗೆಡ್ಡೆಯನ್ನು ಹೋಲುವ ಶಕಲಿದೆ. ಇದನ್ನು ಆರ್ಕಿಟೆಕ್ಚರು ಗುರುತಿಸುವುದೇ ‘ಅನಿಯನ್ ಡೋಮ್’ ಎಂದು. ಬಿಜಾಪುರದ ಗುಮ್ಮಟಗಳಿಗೋ ಗೋಳಾಕಾರ. ಬಿಲ್ ಕುಲ್ ಗೋಲ್!! ಈ ಗುಂಡನೆ ಅಂಡಾಕಾರದ ಕಲ್ಪನೆಯನ್ನು ನೇರ ಪರ್ಷಿಯಾದಿಂದ ತಂದು ಇಲ್ಲಿ ನೆಟ್ಟಿದ್ದು ಅನ್ನಲಾಗುತ್ತದೆ. ಮುಘಲರ ಗುಮ್ಮಟಗಳು ಇಲ್ಲಿನ ಹಿಂದೂದೇಗುಲಗಳ ವಿನ್ಯಾಸಾಂಶಗಳೊಟ್ಟಿಗೆ ಕಸಿಗೊಂಡು ಆದವುಗಳಂತೆ.
ಒಟ್ಟಿನಲ್ಲಿ ಗೋಳಗುಮ್ಮಟ ಗುಮ್ಮಟವನ್ನು ಮೆರೆಯಲಿಕ್ಕೆಂದೇ ಆದ ಕಟ್ಟಡ. ಜಗತ್ತಿನಲ್ಲಿ ಇನ್ನೆಲ್ಲೂ ಹೀಗೆ ಗುಂಬಜ಼ಿನ ಬಡಾಯಿ ಸಡಗರಿಸುವ ಇಮಾರತೇ ಆಗಿಲ್ಲವೇನೋ. ಯೂರೋಪಿನ ಚರ್ಚು- ಬೆಸಿಲಿಕಾಗಳಲ್ಲಿ, ಅರಮನೆಗಳಲ್ಲಿ ‘ಡೋಮು’ಗಳನ್ನು ಹೂಡಿದ್ದರೂ ಅವುಗಳ ಹೊರರೂಪಕ್ಕೂ, ಒಳಗಿನ ಸ್ವರೂಪಕ್ಕೂ ಸಾಕಷ್ಟು ಅಂತರವಿರುತ್ತದೆ. ಅಲ್ಲದೆ ಈ ಪಾಶ್ಚಿಮಾತ್ಯ ರಚನೆಗಳಲ್ಲಿ- ಇಲ್ಲಿ ತಾಜ್ ನಲ್ಲಿರುವ ಹಾಗೆ ಡೋಮು ಗುಂಪಿನಲ್ಲಿ ಗೋವಿಂದ ಮಾತ್ರ. ಹೀಗಾಗಿಯೇ ರೋಮಿನ ಸೇಂಟ್ ಪೀಟರಿನ ಡೋಮು ನಮ್ಮ ಗುಂಬಜ಼ಿಗಿಂತ ಹಿರಿದಿದ್ದರೂ ಇಲ್ಲಿನಂತೆ ಬರೇ ಗುಮ್ಮಟವಾಗಿ ಹೆಸರು ಮಾಡಲಿಲ್ಲ.
ಇನ್ನು ಗುಂಬಜ಼ೊಳಗಿನ ಸದ್ದಿನ ಬೆರಗು. ಈ ಬಗ್ಗೆ ಇನ್ನೊಮ್ಮೆ ವಿವರವಾಗಿ ಓದಿಸುತ್ತೇನೆ. ಸರಳವಾಗಿ ಹೇಳುವುದಾದರೆ- ಶಬ್ದ ಮಾರ್ದನಿಯುವುದು ಯಾವುದೇ ಗೋಲಾಕಾರದೊಳಗೆ ಜರುಗುವ ಸಾಮಾನ್ಯ ವಿದ್ಯಮಾನ. ಎರಡು ಗುಡ್ಡಗಳ ನಡುವೆ ಮರುಕಳಿಸುವ ಕೂಗುಗಳಿಗೆ ಧ್ವನಿಯ ಪ್ರತಿಫಲನವೆಂದು ನಮ್ಮ ಫಿಸಿಕ್ಸು ಅರ್ಥಯಿಸುತ್ತದಲ್ಲ? ಸದ್ದು ಎಲ್ಲಿ, ಹೇಗೆ ಮತ್ತು ಯಾಕೆ ಮರುದನಿಯುತ್ತದೆಯೆನ್ನುವುದಕ್ಕೆ ಫಾರ್ಮುಲಾಗಳನ್ನೇ ಫಿಸಿಕ್ಸು ಮಾಡಿದೆ. ಯಾವುದೇ ಅಂಡದೊಳಗೆ ಕಾಣಸಿಗುವ ಬಾಗು, ನಿಮ್ನಗಳ ಒಳಮೇಲ್ಮೈಯಲ್ಲಿ ಸದ್ದು ತಂತಾನೇ ಬಾರಿ ಬಾರಿ ಪ್ರತಿಫಲಿಸುತ್ತದಂತೆ! ವಿಚಿತ್ರವೆಂದರೆ ಯೂರೋಪಿನಂತಹ ಯೂರೋಪೂ ತನ್ನ ಗುಂಭಗಳಲ್ಲಿ ಹೀಗೆ ಸದ್ದನ್ನೆಂದೂ ದುಡಿಸಿಕೊಂಡಿಲ್ಲ ಅಷ್ಟೆ.
ಗೋಲಗುಮ್ಮಟ: ನಮ್ಮ ದನಿಯೇ ನಮಗೆ ಮರುದನಿಸಿ
ಬಿಜಾಪುರವಲ್ಲದೆ ಬಿದರ್, ಗೊಲ್ಕೊಂಡ, ಗುಲ್ಬರ್ಗಗಳನ್ನೊಳಗೊಳ್ಳುವ ‘ಬಹುಮನೀ’ ದಾಯಾದಿಗಳಿಗೆ ಆವಾಜ಼ಿನ ಬಗ್ಗೆ ಒಂದು ಕಿವಿಯಷ್ಟು ಹೆಚ್ಚೇ ಮರ್ಜಿಯಿದ್ದಿರಬೇಕು. ಹೈದರಾಬಾದಿನ ಗೋಲ್ಕೊಂಡ ಕೋಟೆಯ ದ್ವಾರದಲ್ಲಿ ಚಪ್ಪಾಳೆಯಿಟ್ಟರೆ ಸಪ್ಪಳ ಮತ್ತೆ ಮತ್ತೆ ಆಚೀಚಿನ ಗೋಡೆಗಳನ್ನು ತಟ್ಟಿಕೊಂಡು ಗುಡ್ಡದ ಮೇಲಿನವರೆಗೆ ಸಾಗುವುದು ಕೇಳಿಸುತ್ತದೆ, ನೋಡಿ! ಕೋಟೆಯ ಹೆಬ್ಬಾಗಿಲಿನ ಛಾವಣಿಯಲ್ಲಿ ನಿಲ್ಲಿಸಿಕೊಂಡ ಗೈಡು ನಿಮಗೆ ಈ ಕುರಿತು ರೋಚಕವಾಗಿ ಕತೆ ಹೇಳುತ್ತಾನಲ್ಲ. ಕೂಡಲೆ ನಿಮ್ಮ ಮನಸ್ಸು ಊಹೆಗೆ ತೊಡಗುತ್ತದೆ. ಮೇಲೆ ‘ದಿವಾನಿಖಾಸ್’ನಲ್ಲಿರುವ ಸುಲ್ತಾನನಿಗೆ ದರವಾಜ಼ೆಗೆ ಬಂದವರ ಬಗ್ಗೆ ಬರೇ ಕೇಳಿಕೆಯಿಂದಲೇ ಸುಳಿವು ಹತ್ತುತ್ತದೆ. ಗೋಡೆಯೇ ಗೋಡೆಯಾದ ಖಿಲೆಗಳನ್ನು, ಗೋಡೆ ತಿರುವುವಲ್ಲೆಲ್ಲ ಬುರುಜುಗಳನ್ನು ಕಟ್ಟಿದ ಆ ಮಂದಿಗೆ ಜಾಗರೂಕತೆ ಅಂತ ಬೇರೆ ಕಲಿಸಲಿಕ್ಕುಂಟೆ?! ಇಲ್ಲಿ ಗೋಡೆ-ದೀವಾರಿಗೂ, ಬಂಡೆ-ಚಟ್ಟಾನಿಗೂ ಸದಾ ಹೋಶಿಯಾರಿದ್ದು ಎಚ್ಚರಿಸುವುದೇ ಕೆಲಸ. ಇದಕ್ಕೆ ಆಗಿಬರುವುದೇ ಸದ್ದು ಮತ್ತದರ ಮರುಕಳಿಕೆ.
ನಾವು ಈ ತನಕ ಮೂರ್ತಯಿಸಿರುವ ಜಗತ್ತಿಗೆ ಶಬ್ದಸಂವೇದೀ ಕಟ್ಟುಗೆಲಸಗಳು ಹೊಸತೇನಲ್ಲ. ಪುರಾತನ ಗ್ರೀಸಿನಲ್ಲಿಯೇ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳೂ, ಕಟ್ಟಡಗಳೂ ಜರುಗಿರುವುದರ ಪುರಾವೆಗಳಿವೆ. ಇನ್ನು ಈ ಕಾಲದ ಫಿಸಿಕ್ಸೋ- ‘ಅಕೌಸ್ಟಿಕ್ಸ್’ ಎನ್ನುವ ಹೆಸರಿನಲ್ಲಿ ಈ ಅರಿವಿಗೊಂದು ಸ್ಪೆಷಲಿಟಿಯನ್ನೇ ರಚಿಸಿಬಿಟ್ಟಿದೆ. ಸದ್ದನ್ನು ‘ಡೆಸಿಬಲು’ಗಳಲ್ಲಿ ಅಳೆದು- ಕೇಳಿಕೆಯ ಮಟ್ಟವನ್ನು ಹೆಚ್ಚಿಸುವುದು, ತಗ್ಗಿಸುವುದು, ಬರೇ ನಿಶಬ್ದವಾಗಬೇಕೆಂದರೆ ‘ನಿಜವಾಗಿ’ ಸದ್ದಡಗಿಸುವುದು, ಧ್ವನಿಯನ್ನು ಮುದ್ರಿಸಿಕೊಂಡು ಬೇಕೆಂದಾಗ ಕೇಳಿಸುವುದು… ಹೀಗೆ ಹತ್ತಾರು ಸಾಧ್ಯತೆಗಳು ನಮ್ಮೆದುರಿಗಿವೆ. ಇವತ್ತಿನ ಸುಸಜ್ಜಿತ ನಾಟಕರಂಗಗಳು ತಮ್ಮ ಮೇಲ್ಮೈಯಲ್ಲಿ ಶಬ್ದವನ್ನು ಸೂಕ್ಷ್ಮವಾಗಿ ಗ್ರಹಿಸುವ, ಇಲ್ಲಾ ಪ್ರತಿಫಲಿಸುವ ಪದರಗಳನ್ನು ಹೊದ್ದಿರುವುದರಿಂದ ಕುಳಿತ ಶ್ರೋರ್ತೃಗಳಿಗೆ ಆಗುವ ಅನುಭವವೇ ಬೇರೆ. ಮೈಕು, ಸ್ಪೀಕರುಗಳಿಂದ ಸದ್ದು ಹೆಚ್ಚಿಸಿದ ಕೇಳಿಕೆ ಎಷ್ಟಿದ್ದರೂ ಕಳಪೆಯೇ. ಹಾಗೆ ಕೇಳಿಸಿತೆನ್ನುವುದು ಸಮಾಧಾನಕ್ಕೆ ಮಾತ್ರ.
ಕ್ರಿಸ್ತನಿಗೂ ನಾನೂರು ವರ್ಷಗಳಷ್ಟು ಮೊದಲಿನ ಗ್ರೀಸಿನಲ್ಲಿ ಸುಮಾರು ಹದಿನೈದು ಸಾವಿರ ಮಂದಿಯನ್ನು ಕಲೆಹಾಕಿ, ಎಲ್ಲರಿಗೂ ನಿಚ್ಚಳವಾಗಿ ಹಾಡು ಕೇಳಿಸುವ ರಂಗಸಾಲೆಗಳ ‘ಕಟ್ಟಡ’ ಪ್ರತೀತಿಯಿದ್ದಿತು. ಮತ್ತೊಮ್ಮೆ ಓದಿ. ನೂರಿನ್ನೂರಲ್ಲ, ಬರೋಬರಿ- ಹದಿನೈದು ಸಾವಿರ ಮಂದಿ! ಪಂದ್ರಹ್ ಹಜ಼ಾರ್ ಲೋಗ್!! ಹುಡುಗಾಟವೇನಲ್ಲ. ಹಾಗಂತ ಇದು ಅಸಂಭವವೇನಲ್ಲ. ಯೋಚಿಸಿ. ನಮ್ಮೆದುರಿಗಿರುವ ಕಹಳೆಯಂತಹ ಶಬ್ದವರ್ಧಕಗಳು ಈಚೀಚಿನ ರೂಢಿ. ನಾನಿಲ್ಲಿ ಹೇಳುತ್ತಿರುವುದು ಇಪ್ಪತ್ತೈದುನೂರು ವರ್ಷಗಳ ಹಿಂದಿನ ಖಬರು!! ರಂಗದ ಮೇಲಿನ ಆಡುಮಾತಿನ ಕೇಳಿಕೆಯ ಜೋರನ್ನು ಇನಿತೆತ್ತರಿಸದೆಯೇ- ಬರೇ ಕೇಳುಗರ ಸದ್ದನ್ನಷ್ಟೇ ತಗ್ಗಿಸಿ, ಇಡೀ ಸಭಿಕರನ್ನು ಹೆಚ್ಚು ಹೆಚ್ಚು ಆಲಿಕೆಗೆ ಅನುವುಗೊಳಿಸುವುದು ಈ ಗ್ರೀಕ್ ಆಂಫಿಥಿಏಟರುಗಳ ವಿನ್ಯಾಸದಲ್ಲಿನ ದಿಟದ ಮರ್ಮ ಅಂತ ಇವತ್ತು ಅನ್ನಲಾಗುತ್ತದೆ. ಐವತ್ತರಿಂದ ಅರವತ್ತು ಸಾಲುಮೆಟ್ಟಿಲುಗಳಲ್ಲಿ ನೋಡುಗರನ್ನು ನಡುರಂಗದ ಸುತ್ತ ಕುಳ್ಳಿರಿಸಿ, ಅಂತಿಮಪಂಕ್ತಿಯವನಿಗೂ ರಂಗ ಕಾಣುವ ಹಾಗೆ, ಕೇಳಿಸುವ ಹಾಗೆ ವಿನ್ಯಾಸ ಮಾಡುವುದೆಂದರೆ ತಮಾಷೆಯೆ? ಒಂದೊಂದೂ ಸಾಲಿನಲ್ಲಿರುವ ಕಡಿಮೆಯೆಂದರೂ ಇನ್ನೂರು ಮಂದಿಗೆ ಪರ‍್ಫಾರ್ಮೆನ್ಸು ಕಾಣಲೂ ಬೇಕು, ಕೇಳಲೂ ಬೇಕು!! ಪ್ರೇಕ್ಷಕರಲ್ಲಿ ಪರಸ್ಪರ ಪಿಸುಗುಟ್ಟಿ ಹುಟ್ಟುವ ಸದ್ದನ್ನು ಆದಷ್ಟು ಮಟ್ಟಿಗೆ ಅಲ್ಲೇ ಉಳಿಸಿ, ಆಚೀಚೆ ಹಬ್ಬದಂತೆ ಮಟ್ಟ ಹಾಕುವುದು ಯಾವುದೇ ರಂಗವಿನ್ಯಾಸದಲ್ಲಿ ಪ್ರಧಾನ ಅಂಶ. ಅವತ್ತಿನ ಗ್ರೀಕ್ ರಂಗಸಾಲೆಗಳ ಮೆಟ್ಟಿಲುಗಳನ್ನು ಸುಣ್ಣದ ಕಲ್ಲು ಹೊದೆಸಿ ಮಾಡುತ್ತಿದ್ದರಂತೆ. ಲೈಮುಗಲ್ಲಿಗೆ ಇನ್ನಿಲ್ಲದ ಶಬ್ದಗ್ರಾಹೀಗುಣವಿದೆ. ಅಂದರೆ ರಂಗಜನ್ಯ ಉನ್ನತಸ್ಪಂದನಗಳನ್ನು ಎಲ್ಲೆಲ್ಲೂ ಹೊಮ್ಮಿ, ಕೇಳುಗರ ಪಿಸುಗೊಣಗುಗಳ ನಿಮ್ನಸ್ಪಂದನಗಳನ್ನು ಹೀರಿಕೊಳ್ಳುವ ಚಾರಿತ್ರ್ಯ! ಮಾಫಿರಲಿ, ಇದನ್ನಿನ್ನು ಹೆಚ್ಚು ಸಲೀಸಾಗಿ ಹೇಳಲಾರೆ.
ಹೀಗೆ ಒಂದೊಂದೂ ನಾಗರಿಕತೆ ಸದ್ದಿನ ಭೌತಾಭೌತವನ್ನು ತನ್ನದೇ ನಿಟ್ಟಿನಲ್ಲಿ ದುಡಿಸಿಕೊಂಡಿದೆ. ನಮ್ಮ ದೇಶದ ದೇಗುಲಗಳಲ್ಲಿನ ಹೈಂದವ ಪ್ರತೀತಿಯಲ್ಲಿ ಸದ್ದೆಂದರೆ ನಾದ. ಅದು ಪರಬ್ರಹ್ಮಸ್ವರೂಪ. ಗುಡಿಗಳಲ್ಲಿ ಮೊಳಗುವ ಗಂಟೆ, ಜಾಗಟೆಗಳಿಗೋ- ಢಣಿಸಿ ಮುಗಿದ ಮೇಲೂ ಕಿವಿಗಳಲ್ಲುಳಿಸುವ ಗುಂಗು!! ಇಂತಹ ಮೊಳಗು ನಮ್ಮ ಆರಾಧನೆಗಳಲ್ಲಿ ಪ್ರಧಾನ ಉಪಾಯನವೇ ತಾನೆ?
ಮತ್ತೆ ನಮ್ಮ ಗೋಲಗುಂಬಜ಼ಿಗೆ ವಾಪಸಾಗುವುದಾದರೆ, ಗುಮ್ಮಟದೊಳಗಿನ ಸದ್ದಿನ ಬೆರಗು ಅದೊಂದರಲ್ಲಷ್ಟೇ ಆಗುತ್ತದೆಂಬುದು ಯಕೀನಿನ ಮಾತಲ್ಲ. ಯೂರೋಪಿನ ರಿನೈಸಾನ್ಸಿನಲ್ಲಿ ಚರ್ಚು ಉಳಿದ ಕಟ್ಟಡಗಳಿಗೂ ಮಿಗಿಲೆಂದು ಒತ್ತು ಕೊಡಲಿಕ್ಕಾಗಿ, ಅವನ್ನು ಊರಿನಲ್ಲಿ ಬಲುಯೆತ್ತರಕ್ಕೆ ಕಟ್ಟಿ ಮೇಲೆ ಗುಂಭ ಹೂಡುವ ವಾಡಿಕೆಯಿತ್ತು. ಹಾಗೆ ಮಾಡಿದಾಗಲೆಲ್ಲ ಚರ್ಚಿನೊಳಗಿನ ಸದ್ದು ಗೋಲಗುಂಜ಼ಿನಲ್ಲಾಗುವ ಹಾಗೇ ಹದ್ದಿರದೆ ಮರುದನಿಯುತ್ತಿತ್ತಂತೆ. ಸದ್ದಿನ ಹದ್ದುಬಸ್ತಿನ ಸಲುವಾಗಿ ಒಳಗಿನಿಂದ ಮರದಲ್ಲಿ ‘ಸುಳ್ಳುಸೂರು’ ಅಂದರೆ ಫಾಲ್ಸ್ ಸೀಲಿಂಗ್ ಮಾಡುವ ಪ್ರತೀತಿ ಹುಟ್ಟಿಕೊಂಡಿತು. ಒಳಗಿನಿಂದ ಎತ್ತರವನ್ನು ತಗ್ಗಿಸಿ, ಗುಂಭದ ಒಳಮೈಯಿನ ಬಾಗು, ತಗ್ಗುಗಳನ್ನು ಮುಚ್ಚಿಬಿಡುತ್ತಲೇ ಮರುಸದ್ದು ತಂತಾನೇ ಉಡುಗಿಕೊಂಡು, ಒಳಾವರಣ ಪ್ರಾರ್ಥನೆಗಷ್ಟೇ ಅಣಿಯಾಗುತ್ತಿತ್ತು.
ಆದರೆ ವಿಜಾಪುರೀ ಗುಂಬಜ಼ಿನ ಸಂದರ್ಭವೇ ಬೇರೆ. ಅದು ಗಾತ್ರ ಮತ್ತು ಎತ್ತರದ ಸಲುವಾಗಿಯೇ ಆಗಿದ್ದರಿಂದ ಮತ್ತು ಅದರ ಸಲುವೇ ನಮಾಜ಼ಲ್ಲವಾದ್ದರಿಂದ, ಒಳಗೆ ಉಪೋತ್ಪನ್ನದಂತೆ ಜರುಗುವ ಆವಾಜ಼ಿನ ಬೆರಗನ್ನು ಕರಾರಿಲ್ಲದೆ ಒಪ್ಪಿರಬೇಕು. ಹಾಗೆ ನೋಡಿದರೆ ಗೋಳಗುಮ್ಮಟಕ್ಕೆ ತನ್ನ ಬುಲಂದು ಮೆರೆಯುವುದರ ಹೊರತಾಗಿ ಬೇರೆ ಇರಾದೆಯೇ ಇದ್ದಿರಲಿಕ್ಕಿಲ್ಲ. ಒಳಗೆ ಸಾವಿರಾರು ಸಂಗೀತಗಾರರು ನೆರೆದು ನುಡಿದು, ನುಡಿಸಿ ನಲಿಯುತ್ತಿದ್ದರೆನ್ನುವ ಮಾತಿದೆಯಾದರೂ ಅದಕ್ಕೆ ಸಬೂತಿಲ್ಲವಲ್ಲ?! ಗುಂಬಜ಼ಿನೊಳಗೆ ನಮ್ಮ ಕೂಗುಗಳೇ ಮರು ಮರುದನಿದು ಹೊಲಸೇಳುವಾಗ- ಅಷ್ಟೆಲ್ಲ ಮಂದಿ ಹಾಡಿದ್ದು ಹೇಗೆ ಕೇಳುತ್ತಿರಬಹುದೆಂಬ ಊಹೆ ಸಹ ನನಗೆ ಮುಮಕೀನೆನಿಸುವುದಿಲ್ಲ.
ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.