ಕಾಶಿಯಲ್ಲಿ ಗಂಗೆಯಂತೆ ನೇಪಾಲದಲ್ಲಿ ವಾಗ್ಮತೀ ನದಿ. ನದಿಯ ಅಲ್ಲೇ ಆಚೆ ಸ್ಮಶಾನ. ಶಿವನೆಂಬವ ಸ್ಮಶಾನವಾಸಿಯಲ್ಲವೇ? ಅಲ್ಲಿ ಹೊಗೆ ಎದ್ದಾಗೆಲ್ಲ ಶಿವ ಸಂತುಷ್ಟನಾಗುತ್ತಾನೆ ಅಂತ ನಂಬಿಕೆ. ಕಾಶಿಯಷ್ಟು ಇಲ್ಲದಿದ್ದರೂ ದಿನಾ ಕನಿಷ್ಠ ಎರಡೋ ಮೂರೋ ಶವದಹನ ಆಗುತ್ತಲೇ ಇರುತ್ತದೆ ಅಲ್ಲಿ. ಅರ್ಚಕರು ಅದೇ ದಾರಿಯಾಗಿ ಹೋಗುತ್ತ ಬರುತ್ತ ಇರುತ್ತಾರೆ. ಭಾರತದಲ್ಲಾದರೆ ಸ್ಮಶಾನಕ್ಕೆ ಹೋಗಿಬಂದರೆ ಸ್ನಾನ ಮಾಡಬೇಕು, ಹೊಸ ಜನಿವಾರ ತೊಡಬೇಕು. ಅಲ್ಲಿ ಹಾಗಿಲ್ಲ. ಸ್ಮಶಾನದಲ್ಲೇ ವಾಗ್ಮತೀ ದಡದಲ್ಲಿ ಭಸ್ಮೇಶ್ವರ ಘಾಟ್ ಅಂತ, ಅಲ್ಲಿ ಈಶ್ವರ ದೇವಸ್ಥಾನ. ಭಸ್ಮೇಶ್ವರ ಘಾಟಿನಲ್ಲಿ ‘ಶ್ರೀ ಪಾಂಚ್’ರನ್ನು (ರಾಜರನ್ನು) ಸುಡಲಿಕ್ಕೆಂದು ಪ್ರತ್ಯೇಕ ಚಿತೆ ಇದೆ. ರಾಜ ವಂಶದವರು ಶ್ರೀಮಂತ ವರ್ಗದವರು ದುಡ್ಡುಕೊಟ್ಟು ದಹನಕ್ಕಾಗಿ ಮುಡಿಪಾಗಿಟ್ಟುಕೊಂಡ ಸ್ಥಳಗಳಿವೆ. ಪಶುಪತಿ ದೇವಸ್ಥಾನವಿರುವುದು ಭಸ್ಮೇಶ್ವರ ಘಾಟ್ ನಿಂದ ಸುಮಾರು ಇನ್ನೂರು ಮೀಟರ್ ದೂರದಲ್ಲಿ. ಅರ್ಚಕರು ದೇವರ ಪೂಜೆಗೆ ನೀರನ್ನು ಈ ವಾಗ್ಮತೀ ನದಿಯಿಂದಲೇ ಬೆಳ್ಳಿ ಕೊಡಪಾನದಲ್ಲಿ ತುಂಬಿಸಿ ತರಬೇಕು. ಅರ್ಚಕರು ಪಶುಪತಿಯ ಪೂಜೆ ಮಾಡುತ್ತಿರುವಾಗ ಎಷ್ಟೋ ಸಲ ಹೆಣ ಸುಟ್ಟ ವಾಸನೆ ಬರುತ್ತಿರುತ್ತದೆ. ಒಮ್ಮೊಮ್ಮೆ ಅಗರಬತ್ತಿ ವಾಸನೆಯನ್ನು ಹೊಡೆದುಬಿಡುವಷ್ಟು ಕೆಟ್ಟ ವಾಸನೆ ತುಂಬಿಕೊಳ್ಳುತ್ತದೆ. ಸುರುಸುರುವಿಗೆ ಯಾತ್ರಾರ್ಥಿಗಳಾಗಲೀ, ಅರ್ಚಕರಾಗಲೀ- ಅಯ್ಯೋ ಇದೇನಿದು ಅಸಹ್ಯ ಅಂತ ಅಂದುಕೊಳ್ಳುತ್ತಾರೆ. ಕಡೆಕಡೆಗೆ ಅದೇ ಅಭ್ಯಾಸವಾಗುತ್ತದೆ.
ಮನೆಯಲ್ಲಿ ಪ್ರಾಣಬಿಟ್ಟರೆ, ಹಿಂದೂಶಾಸ್ತ್ರದ ಪ್ರಕಾರ ಆ ಮನೆ ಅಶುಭವಾಯ್ತು, ಅಲ್ಲಿನ ವಾಸ್ತವ್ಯ ಬಿಡಬೇಕು ಅಂತಿದೆಯಷ್ಟೆ? ವಾಸ್ತವ್ಯ ಬಿಡುವ ಬದಲು ಹೊಸಬಣ್ಣ ಹೊಡೆಸುವುದೋ, ಹೊಸ ಮಾಡು ಹೊದೆಸಿಯೋ, ಒಂದು ರಾಕ್ಪೊಗ್ನ ಹೋಮವನ್ನೋ ಮಾಡುವುದಿದೆ- ಇದೆಲ್ಲ ಹಿಂದೂ ನಿಯಮ. ಮನೆಯ ಒಳಗೆ ಶವ ಇಡಬಾರದು. ಶವವನ್ನು ಹೊರಗಿಂದ ಒಳಗೆ ತರಬಾರದು. ಆದ್ದರಿಂದಲೇ, ಜೀವ ಎಳೆಯಲಿಕ್ಕೆ ತೊಡಗಿದೊಡನೆ ತಡಮಾಡದೆ ಮರಣೋನ್ಮುಖ ವ್ಯಕ್ತಿಯನ್ನು ಎತ್ತಿ ತಂದು ಮನೆಯ ತುಳಸೀಕಟ್ಟೆಯ ಎದುರು ದರ್ಬೆ ಹಾಸಿ ಮಲಗಿಸುತ್ತಾರೆ. ಅಥವಾ ಮುಂಚಿನ ಪ್ರತಿ ಮನೆಗಳಲ್ಲೂ ಚಾವಡಿ, ಪಾತಾಳಂಕಣ ಅಂತಿದ್ದು, ಜೀವಹೋಗುವ ಲಕ್ಷಣ ಕಂಡಾಗ ರೋಗಿಯನ್ನು ತಂದು ಪಾತಾಳಂಕಣದಲ್ಲಿ ಮಲಗಿಸುತ್ತಾರೆ. ಆದರೆ ನೇಪಾಲದಲ್ಲಿ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿರುವ ಮಂದಿಯನ್ನು ಮನೆಯಿಂದ ಹೊರತಂದು ವಾಗ್ಮತೀನದೀ ಘಾಟ್ ನಲ್ಲಿಡುತ್ತಾರೆ. ಹಿಂದೆಲ್ಲ ರಾಜಮಹಾರಾಜರ ಅಂತ್ಯದಿನ ಕಳೆಯಲೆಂದೇ ಈ ನದೀ ತೀರದಲ್ಲಿ ಮಹಲುಗಳಿರುತಿದ್ದವು. ವಾಸ್ತವವಾಗಿ ಅದು ಸಾವಿನ ಮನೆ. ಸಾಧಾರಣ ಜನರಿಗೆಂತಲೂ ಅಲ್ಲಿ ಈ ಬಗೆಯ ಸಾವಿನ ಮನೆಗಳಿದ್ದವು. ಸಾವು ಹತ್ತಿರವಾದಂತೆ ವೈದ್ಯರು ಇಲ್ಲಿಗೇ ಬಂದು ತಮ್ಮ ಅಂತಿಮ ಪ್ರಯತ್ನ ಮಾಡುತಿದ್ದರು. ಸತ್ತರೆ ಶವ ಸಂಸ್ಕಾರ ಅಲ್ಲಿಯೇ ನಡೆಯುತಿತ್ತು. ಪಕ್ಕನೆ ಒಂದು ವೇಳೆ ಜೀವ ಹೋಗಲಿಲ್ಲ, ಹುಶಾರಾದರು ಎಂದರೆ ವಾಪಾಸು ಮನೆಗೆ ಹೋಗಬಹುದು. ಅವರನ್ನು ಸಂತೋಷದಿಂದ, ಮೆರವಣಿಗೆ ಮೇಲೆ ಕರೆದೊಯ್ಯುತಿದ್ದರು. ದೊರೆಗಳನ್ನಂತೂ ಮರ್ಯಾದೆಯಿಂದ ಕರೆದೊಯ್ಯುತಿದ್ದರು. ಇದೆಲ್ಲ ಬಹಳ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ರೀತಿ ರಿವಾಜುಗಳು.
ಅರಮನೆಯ ಸುತ್ತಲೂ ಒಟ್ಟು ಏಳು ಸುತ್ತಿನ ಪ್ರಾಕಾರ. ಪ್ರತೀ ಪ್ರಾಕಾರಕ್ಕೂ ಮೂರು ನಾಕು ಬಾಗಿಲುಗಳು. ಒಳಗೊಳಗೆ ಹೋದ ಹಾಗೂ ಬಾಗಿಲುಗಳ ಸಂಖ್ಯೆ ಹೆಚ್ಚುತ್ತ ಕೊನೆಯ ಪ್ರಾಕಾರದಲ್ಲಿ ಎಂಟು ದ್ವಾರಗಳು. ರಾಜವಂಶದವರು ಅರಮನೆಯಲ್ಲಿಯೇ ತೀರಿಕೊಂಡರೆ, ಶಾಸ್ತ್ರಪ್ರಕಾರ ಶವವನ್ನು ಈ ಎಂಟೂ ದ್ವಾರಗಳಿಂದ ಹೊರತರುವಂತಿಲ್ಲ. ಹಾಗಾಗಿ ಹೊಸತೊಂದು ದ್ವಾರವನ್ನೇ ಒಡೆದು ಅಲ್ಲಿಂದ ಶವವನ್ನು ಹೊರತರುತ್ತಾರೆ. ಶವಯಾತ್ರೆ ಅದು. ಸಣ್ಣದಲ್ಲ. ದೊರೆ ಮಹೇಂದ್ರರು ಎಪ್ಪತ್ತೆರಡನೆಯ ಇಸವಿಯಲ್ಲಿ ಒಂದು ಬೆಳಿಗ್ಗೆ ಹತ್ತು ಗಂಟೆಗೆ ನಿಧನರಾದರು. ಆದರೆ ಸುದ್ದಿ ತಕ್ಷಣ ಹೊರಗೆ ಬರಲಿಲ್ಲ. ರೇಡಿಯೋ ನಿಶ್ಶಬ್ದವಾಯಿತು ಅಷ್ಟೆ. ರಾಜ ತೀರಿಕೊಂಡನೆಂದರೆ, ರಾಜಗುರುಗಳು, ಯುವರಾಜನನ್ನು ಸಿಂಹಾಸನದ ಮೇಲೆ ಕೂಡಿಸಲು ಮುಹೂರ್ತ ನೋಡುತ್ತಾರೆ. ಎಂಥಾ ಕೆಟ್ಟ ದಿನವಾದರೂ ಅಮಾವಾಸ್ಯೆಯಾದರೂ ಒಂದಲ್ಲ ಒಂದು ಒಳ್ಳೆಯ ಮುಹೂರ್ತ ಇದ್ದೇ ಇರುತ್ತದೆ. ಒಮ್ಮೊಮ್ಮೆ ರಾತ್ರಿ ಮುಹೂರ್ತ ಸಿಗುತ್ತದೆ. ಆಗ ರಾತ್ರಿ ಆ ಮುಹೂರ್ತದಲ್ಲಿ ಯುವರಾಜನನ್ನು ಸಿಂಹಾಸನದಲ್ಲಿ ಕೂಡಿಸುವವರೆಗೂ, ರಾಜ ಮೃತನಾದನೆಂಬ ಸುದ್ದಿ ಗುಟ್ಟಾಗಿಯೇ ಇರುತ್ತದೆ. ಪ್ರಚಾರ ಸಾಧ್ಯವೇ ಇಲ್ಲ. ಆ ದಿನದ ಒಳ್ಳೆಯ ಮುಹೂರ್ತದಲ್ಲಿ ಯುವರಾಜನನ್ನು ಕೈಹಿಡಿದು ಕರೆತಂದು ಸಿಂಹಾಸನದಲ್ಲಿ ಕೂಡಿಸಿ, (ಶಾಸ್ತ್ರೋಕ್ತ ಪಟ್ಟಾಭಿಷೇಕವಲ್ಲ ಇದು, ಪಟ್ಟಾಭಿಷೇಕ ನಡೆಯುವುದು ಸೂತಕ ಮುಗಿದು ಶುದ್ಧವಾದ ಮೇಲೆ, ಒಳ್ಳೆಯ ದಿನ ಸಿಕ್ಕಿದಾಗ) ರಾಜಗುರುಗಳು ಆತನಿಗೆ ಮಾತ್ರ ಕೇಳಿಸುವಂತೆ ಕಿವಿಯಲ್ಲಿ `ನಿನ್ನ ತಂದೆ ತೀರಿಕೊಂಡರು. ಇಂದಿನವರೆಗೆ ನೀನು ಯುವರಾಜನಾಗಿದ್ದೆ; ಇಂದಿನಿಂದ ಮಹಾರಾಜನಾಗಿರುವಿ’ ಎಂದು ವಿಧ್ಯುಕ್ತವಾಗಿ ನುಡಿಯಬೇಕು. ಆತನಿಗೆ ವಿಷಯ ಈಗಾಗಲೇ ತಿಳಿದಿದ್ದರೂ ತಿಳಿದಿಲ್ಲವೆಂಬಂತೆ ಹೊಸತಾಗಿ ತಿಳಿಸಬೇಕು. ಅದು ನಿಯಮ.
ದೊರೆ ಮಹೇಂದ್ರರು ನಿಧನರಾದ ದಿನ ಹಾಗೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಹೀಗೆ ರಾಜಗುರುಗಳು ಯುವರಾಜ ವೀರೇಂದ್ರರಿಗೆ ತಂದೆಯ ಮರಣದ ಕುರಿತು ತಿಳಿಸಿ ಸಿಂಹಾಸನದಲ್ಲಿ ಕೂರಿಸಿದರು. ಆ ಮೇಲೆಯೇ ಸುದ್ದಿ ಅರಮನೆಯಿಂದ ಹೊರಗೆ ಬಿತ್ತು.
ಮಹಾರಾಜ ಗತಿಸಿದನೆಂದು ಯುವರಾಜನಾದವನು (ಆತ ತನ್ನ ತಂದೆಯಾದರೂ) ಕಣ್ಣಲ್ಲಿ ನೀರು ಹಾಕಬಾರದು. ಎಲ್ಲರಂತೆ ಅಳಬಾರದು. ಈಗ ‘ಪ್ರತ್ಯಕ್ಷದೇವತಾ’ ಅಲ್ಲವೇ ಆತ? ತಂದೆಯ ಕ್ರಿಯಾಕರ್ಮಗಳನ್ನು ಯುವರಾಜನಾಗಿ ಆತ ಮಾಡುವಂತಿಲ್ಲ. ಅದನ್ನು ಅವನ ಉಳಿದ ಅನುಜರೇ ಮಾಡಬೇಕು. ಆ ಕಾರ್ಯಗಳೆಲ್ಲ ಮುಗಿಯುವವರೆಗೆ ಹಂಸತೂಲಿತಾತಲ್ಪ ಇತ್ಯಾದಿ ಸುಖಗಳನ್ನೆಲ್ಲ ಬಿಡಬೇಕು. ನೇಪಾಲದ ರಾಜಮಹಲಿನ ಹೊರಗಡೆ, ಸುಂದರವಾದೊಂದು ತುಲಸೀಕಟ್ಟೆ ಇದೆ. ಅದರೆದುರು ಹುಲ್ಲುಹಾಸಿನಲ್ಲಿ, ಹಾಸಿಗೆ ಬಿಡಿಸಿ ಬಿಳೀ ಹಾಸನ್ನು ಹಾಸಿ, ಮೃತ ಮಹಾರಾಜನ ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡುತ್ತಾರೆ. ಅಲ್ಲಿ ಕುಳಿತಿರುವ ಶೋಕತಪ್ತ ಯುವರಾಜ ಹಾಗೂ ಆತನ ಸಹೋದರರನ್ನು ದುಃಖ ಸೂಚನೆಗೆಂದು ಬರುವವರು ಮಾತಾಡಿಸುವಂತಿಲ್ಲ. ಬಳಿ ಹೋಗಿ ಸಂತೈಸುವಂತೆಯೂ ಇಲ್ಲ. ಔಪಚಾರಿಕ ಮಾತುಗಳೂ ಕೂಡದು. ಅತೀ ಆಪ್ತರಾದರೆ ಸ್ವಲ್ಪ ಹೊತ್ತು ಕೂತುಕೊಂಡಾರು. ಮಾತು ಮಾತ್ರ ಇಲ್ಲ. ಬದಲು ಅಷ್ಟು ದೂರದಿಂದ ಅವರವರ ಕ್ರಮ ಪ್ರಕಾರ ನಮಸ್ಕರಿಸಿ, ಪುಸ್ತಕದಲ್ಲಿ ತಮ್ಮ ದಸ್ಕತು ಹಾಕಿ ಹೋಗಬೇಕು. ರಾಜಪುತ್ರರೂ ಮೌನ ಬಂದವರೂ ಮೌನ. ರಾಜನೀತಿಯ ಕುರಿತು ಮಾತಾಡಬೇಕೆಂದರೆ ಅದು ಬೇರೆ ಹೊತ್ತಿನಲ್ಲಿ, ಬೇರೆ ಸ್ಥಳದಲ್ಲಿ. ದುಃಖಸೂಚಕವಾಗಿ ಅವರು ಕುಳಿತಿರುವಾಗ ಮೌನ ಬಿಟ್ಟು ಬೇರೆ ಇಲ್ಲ. ಪಶುಪತಿ ದೇವಸ್ಥಾನದ ಅರ್ಚಕರೂ ಆ ದಿನಗಳಲ್ಲಿ ಅವರನ್ನು ನೋಡಲು ಹೋಗಬಾರದು. ಸ್ವಸ್ತಿವಾಚನ ಕೂಡದು. ಪಶುಪತಿನಾಥನಿಗೂ ಹತ್ತು ದಿನದವರೆಗೂ ವಾದ್ಯಗಂಟೆ ಏನೂ ಇಲ್ಲದ ಬಾಯಿಮಂತ್ರ ಮಾತ್ರ.ದ ಮೌನಪೂಜೆ. ಇಡೀ ನೇಪಾಲಕ್ಕೇ ಸೂತಕದ ದಿನಗಳು ಅವು. ಯಾರೂ ಯಾವುದೇ ಮಂಗಳಕಾರ್ಯ ಮಾಡುವುದಿಲ್ಲ. ಗತಿಸಿದ ದೊರೆಯ ಸಾವಿರಾರು ಅಭಿಮಾನಿ ಜನರೆಲ್ಲ ದುಃಖ ಸೂಚನೆಯಾಗಿ ತಲೆಮುಂಡನ ಮಾಡಿಕೊಳ್ಳುತ್ತಾರೆ. ದೊರೆ ಎಂದರೇನು? ತಂದೆಯೇ ಅಲ್ಲವೆ ಎಂಬ ಭಾವ. ಅವರ ಅನ್ನದಲ್ಲಿರುವವರಂತೂ, ಮುಖ್ಯವಾಗಿ ಸರ್ಕಾರಿ ಅಧಿಕಾರಿಗಳು ಮುಂಡನ ಮಾಡಿಸಿಕೊಳ್ಳುತ್ತಾರೆ. ಇಡೀ ರಾಜ್ಯ ದುಃಖಸೂತಕವೆಂಬುದು ಢಾಳಾಗಿ ಕಾಣುತಿರುತ್ತದೆ. ಅದೇ ಸೂತಕ ಕಳೆದು ಶುದ್ಧವಾಗಿ ಪಟ್ಟಾಭಿಷೇಕವಾಯಿತೆ? ಸಂಭ್ರಮ ಮರುಕಳಿಸುತ್ತದೆ. ವೀರೇಂದ್ರರ ಪಟ್ಟಾಭಿಷೇಕ ಸಂದರ್ಭದಲ್ಲಿ ಹಾಗೆ ಸಂಭ್ರಮೋಲ್ಲಾಸ ಮರುಕಳಿಸಿದೆ. ಹನ್ನೆರಡು ದಿನ ಶೋಕಾಚರಣೆ ಮಾಡಿದ ಕಾಠ್ಮಂಡೂನಗರ ಪಟ್ಟಾಭಿಷೇಕದ ದಿನ ಇಡೀ ಹಗಲು ರಾತ್ರಿ ಒಂದಾಗಿ ಸಂತೋಷಪಟ್ಟಿತು. ದೊರೆ ಮಹೇಂದ್ರರ ನಿಧನದ ದುಃಖವನ್ನೆಲ್ಲ ಜನರು ಮರೆತಿದ್ದಾರೆ -ಅದುವರೆಗೆ ಮನೆಮನೆಗಳಲ್ಲಿ ಮಹೇಂದ್ರ-ರತ್ನರಾಣಿಯರ ಫೋಟೋ ರಾರಾಜಿಸುತ್ತಿತ್ತು. ಅದು ಇಲ್ಲದಿದ್ದ ಮನೆಯೇ ಇರಲಿಲ್ಲ. ಎಲ್ಲಿಯವರೆಗೆ? ಎಲ್ಲಿಯವರೆಗೆಂದರೆ ವೀರೇಂದ್ರರ ಪಟ್ಟಾಭಿಷೇಕದ ವರೆಗೆ. ಪಟ್ಟಾಭಿಷೇಕ ಆಗಿದ್ದೇ ಅಂಥಾ ದೀಪಹಚ್ಚಿ ಪೂಜೆ ಮಾಡುತಿದ್ದ ಮಹೇಂದ್ರರಾಜ ದಂಪತಿಗಳ ಫೋಟೋ ಕೆಳಗಿಳಿಯಿತು. ಅದೇ ಜಾಗದಲ್ಲಿ ವೀರೇಂದ್ರ ದಂಪತಿಗಳ ಫೋಟೋ ಕುಳಿತಿತು.
ಮತ್ತೇನಲ್ಲ ಇದು, ರಾಜಪೀಠದ ಮೇಲಿನ ಭಕ್ತಿ.
ನೋಡುವವರಿಗೆ ವೈರಾಗ್ಯ ಬರಲು ಇಷ್ಟು ಸಾಲದೆ?
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ