ಎಲ್ಲಿಯೇ ಹೋದರೂ ಅಲ್ಲಿನ ನ್ಯೂಸ್‌ಪೇಪರ್ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ನೋಡುವುದು, ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಮತ್ತೊಂದು ಇಷ್ಟದ ಕೆಲಸ. ಈ ಬಾರಿ ಹಾಗೆ ಹೋಗಿದ್ದು ಲಂಡನ್‌ನ ಹೃದಯ ಭಾಗದಲ್ಲಿ ಪಿಕಡೆಲಿ ರಸ್ತೆಯಲ್ಲಿ ‘ವಾಟರ್‌ಸ್ಟೋನ್ಸ್’ ಎನ್ನುವ ಹೆಸರು ಹೊತ್ತು, ವರ್ಷ ಒಂದಕ್ಕೆ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಪ್ರವಾಸ ಕಥನ.
ಅದೊಂದು ಮೂರಂತಸ್ತಿನ ಕಟ್ಟಡ. ಒಂದು ನೆಲ ಮಾಳಿಗೆ. ಅಲ್ಲೊಂದು ಕಾಫಿ ಶಾಪ್ ಅದರ ಪಕ್ಕದಲ್ಲಿಯೇ ವಿಶಾಲವಾದ, ಚೊಕ್ಕವಾದ ಶೌಚಾಲಯ. ಒಳಗೆಲ್ಲಾ ಅಂತರ್ಜಾಲ ಸೌಲಭ್ಯ, ಮುಂಭಾಗದಲ್ಲಿ ಅಡಿಅಡಿಗಳಷ್ಟು ದೊಡ್ಡದಾದ ಶೋಕೇಸ್‌ಗಳು. ಅವುಗಳಿಗೆ ಗಾಜಿನ ಪರದೆಗಳು, ಎಂದೆಲ್ಲಾ ನಾನು ವರ್ಣಿಸುವಾಗ ಏನಿದು ಯಾವುದೋ ಕಟ್ಟಡ ಕಾಮಗಾರಿ ಮುಗಿಸಿ ಇದೀಗ ಬಂದಂತಿದೆ ಎನಿಸುವುದೇನೋ ಸಹಜ. ಆದರೆ ಇದು ಒಂದು ಪುಸ್ತಕ ಮಾರಾಟ ಮಳಿಗೆ ಎಂದೊಡನೆ, ಮತ್ತೊಮ್ಮೆ ಎಲ್ಲಾ ಸಾಲುಗಳನ್ನು ಓದುತ್ತೀವಲ್ಲ ಇದು ನಿಜಾರ್ಥದ ಸಂಸ್ಕೃತಿ.
ಎಲ್ಲಿಯೇ ಹೋದರೂ ಅಲ್ಲಿನ ನ್ಯೂಸ್‌ಪೇಪರ್ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ನೋಡುವುದು, ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವುದು ಮತ್ತೊಂದು ಇಷ್ಟದ ಕೆಲಸ. ಈ ಬಾರಿ ಹಾಗೆ ಹೋಗಿದ್ದು ಲಂಡನ್‌ನ ಹೃದಯ ಭಾಗದಲ್ಲಿ ಪಿಕಡೆಲಿ ರಸ್ತೆಯಲ್ಲಿ ‘ವಾಟರ್‌ಸ್ಟೋನ್ಸ್’ ಎನ್ನುವ ಹೆಸರು ಹೊತ್ತು, ವರ್ಷ ಒಂದಕ್ಕೆ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ. ಪದೇಪದೇ ಅಲ್ಲಿಗೆ ಹೋಗಬೇಕು ಎನ್ನುವ ತೃಷೆಯನ್ನು ನಮ್ಮೊಳಗೆ ಹುಟ್ಟಿಸುವ ಈ ಪುಸ್ತಕದಂಗಡಿಯದು ನಿಜಾರ್ಥದ ಸಂಸ್ಕೃತಿ ಭಾವ. ಮೊನ್ನೆ ಹೋಗಿದ್ದು ಅಲ್ಲಿಗೆ ನನ್ನ ಮೂರನೆಯ ಭೇಟಿ.
ಈಗ ಎಂಭತ್ತು ವಯಸ್ಸಿನ ಆಸುಪಾಸಿನಲ್ಲಿರುವ ಟಿಮ್ ವಾಟರ್‌ಸ್ಟೋನ್ಸ್ ಒಂದೊಮ್ಮೆ ಜಗತ್ತೇ ತಿರುಗಿ ನೋಡುವಂಥಾ ವ್ಯಾಪರಸ್ಥ. ಸಾಧಾರಣ ಮಟ್ಟದ ವಿದ್ಯಾಭ್ಯಾಸ ಪಡೆದು, ಅಮೇರಿಕಾದಲ್ಲಿ W H Smith ಎನ್ನುವ ಮುಂಚೂಣಿಯಲ್ಲಿರುವ ಪುಸ್ತಕ ವ್ಯಾಪಾರೀ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದವ. ಇವನ ನಿರ್ವಹಣೆಯ ಬಗ್ಗೆ ಅಸಮಾಧಾನ ಹೊಂದಿದ ಮಾಲೀಕರು ಈತನನ್ನು ಕೆಲಸದಿಂದ ವಜಾ ಮಾಡಿದಾಗ, ತಾನೇ ಒಂದು ಶ್ರೇಷ್ಠ ಪುಸ್ತಕ ಮಾರಾಟ ಮಳಿಗೆಯನ್ನು ತೆರೆಯುವ ಶಪಥದೊಂದಿಗೆ ಹೊರಬಂದ ವಾಟರ್‍ಸ್ಟೋನ್ ತನ್ನದೇ ಹೆಸರಿನಲ್ಲಿ ಲಂಡನ್ನಿನ ಮಧ್ಯಮವರ್ಗದ ಹಳೇ ಗಲ್ಲಿಯೊಂದರಲ್ಲಿ ಸಣ್ಣದೊಂದು ಅಂಗಡಿ ಶುರು ಮಾಡಿ, ಇಂದು ಈ ಘಳಿಗೆಯಲ್ಲಿ ಯೂರೋಪಿನ ನಂಬರ್ ವನ್ ಪುಸ್ತಕ ಮಾರಾಟ ಮಳಿಗೆ ಎನ್ನುವ ಸಾಧನೆ ಗೈದಿದ್ದಾನೆ.
ಯೂರೋಪಿನ ತುಂಬಾ ಇನ್ನೂರೆಪ್ಪತೈದು ಮಳಿಗೆಗಳನ್ನು ಹೊಂದಿ ನಾಲ್ಕು ಸಾವಿರ ಕೆಲಸಗಾರರಿಗೆ ಬದುಕು ತುಂಬಿಕೊಟ್ಟಿದೆ ವಾಟರ್‍ಸ್ಟೋನ್ ಪುಸ್ತಕೋದ್ಯಮ. ಬರಿಯ ಇಂಗ್ಲೆಂಡಿನಲ್ಲಿ ವರ್ಷವೊಂದರಲ್ಲಿ ಇಪ್ಪತ್ತು ಲಕ್ಷ ಆಂಗ್ಲ ಭಾಷೆಯ ಪುಸ್ತಕಗಳು ಪ್ರಕಟವಾಗುತ್ತವೆ. ಆ ಎಲ್ಲಾ ಪುಸ್ತಕಗಳೂ ಇಲ್ಲಿ ಲಭ್ಯ. ಯೂರೋಪಿನ ಇತರೆ ಭಾಷೆಗಳ ಪುಸ್ತಕಗಳು ಅರೇಬಿಕ್ ಭಾಷಾ ಪುಸ್ತಕಗಳ ಅಕ್ಕಪಕ್ಕದಲ್ಲಿ ಸುಂದರವಾಗಿ ಜೋಡಿಸಿಕೊಂಡು ನಿಂತಿವೆ. ಸ್ಕಾಟ್ಲೆಂಡಿನಲ್ಲಿ ಹುಟ್ಟಿ ಬೆಳೆದ ಟಿಮ್ ಬರಹಗಾರನೂ ಕೂಡ. ನಾಲ್ಕಾರು ಪುಸ್ತಕಗಳನ್ನು, ನೂರಾರು ಲೇಖನಗಳನ್ನು ಬರೆದಿರುವ ಈತ ಬ್ರಿಟನ್ನಿನ ಹಲವಾರು ವಿಶ್ವವಿದ್ಯಾಲಯಗಳಿಗೆ ಗ್ರಂಥಾಲಯ ಸಲಹೆಗಾರನೂ ಹೌದು. ಆತನ ನಾಲ್ಕೂ ಪುಸ್ತಕಗಳ ಶೀರ್ಷಿಕೆ ಬಲು ಆಕರ್ಷಣೀಯವೇ.. ‘Lilley &Chase’ ‘An Imperfect Marriage’ ‘A passage of Lives’ ªÀÄvÀÄÛ ‘ For A Penny in For A Pound’
ಒಮ್ಮೆ ಒಳ ಹೊಕ್ಕರೆ ಯಾವುದೇ ಅಡ್ಡಿ ಇಲ್ಲದೆ ನಾಲ್ಕಾರು ಗಂಟೆಗಳ ಇಂದ್ರಲೋಕದಂತಹ ಭಾಸ, ವಾಸ ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಬೆಳಗಿನಿಂದ ಮಾರಾಟಗಾರರು ಮನೆಗೆ ಹೋಗುವವರೆಗೂ ಅಲ್ಲಿಯೇ ಇದ್ದು ನಾವುಗಳೂ ಓದಬಹುದು. ಪುಸ್ತಕಗಳಿಂದ ಟಿಪ್ಪಣಿ ಬರೆದುಕೊಳ್ಳಬಹುದು, ಅವುಗಳ ಫೋಟೊ ತೆಗೆದುಕೊಳ್ಳಬಹುದು. ಅಲ್ಲಿಯೇ ಇಟ್ಟಿರುವ ಒಂದು ಆಯತಾಕಾರದ ಪುಸ್ತಕದಲ್ಲಿ ನಾವು ಓದಿದ ಪುಸ್ತಕಗಳ ಬಗ್ಗೆ ಒಂದೆರಡು ಸಾಲಿನ ಅಭಿಪ್ರಾಯವನ್ನೂ ನಮೂದಿಸಬಹುದು. ಮುಖ್ಯ ದ್ವಾರದಲ್ಲಿ ಹೊಸದಾಗಿ ಬಂದ ಪುಸ್ತಕಗಳ ಅಂದವಾದ ಹೆಣಿಗೆಯೊಂದನ್ನು ಇರಿಸಲಾಗಿರುತ್ತದೆ. ಹಿಂದಿರುಗಿ ಬರುವಾಗ ನೋಡೋಣ ಎಂದು ನೀವು ಹೊರಟಿರೆಂದರೆ ಆಗ ಅಲ್ಲಿದ್ದ ಪುಸ್ತಕಗಳು ಮತ್ತ್ಯಾವುದೋ ಗೂಡು ಸೇರಿರುವ ಸಾಧ್ಯತೆ ಇರುತ್ತದೆ, ಕಾರಣ ಪ್ರತೀ ಗಂಟೆಗೊಂದರಂತೆ ಆ ಹೆಣಿಗೆಯಲ್ಲಿ ಹೊಸ ಪುಸ್ತಕಗಳು ರಾರಾಜಿಸುತ್ತಿರುತ್ತವೆ.
ಕಾಲಿನ ಕಿರುಬೆರಳಿಗೆ ಬಣ್ಣ ಬಳಿದುಕೊಳ್ಳುವುದು ಹೇಗೆ, ಯಾಕೆ ಎನ್ನುವುದರಿಂದ ಹಿಡಿದು ಏರೋಪ್ಲೇನಿನ ತಂತ್ರಜ್ಞಾನದವರೆಗೂ ಪುಸ್ತಕಗಳನ್ನು ಬರೆಯುವ ಮತ್ತು ಪ್ರಕಟ ಮಾಡುವ, ಅವುಗಳನ್ನು ಕೊಳ್ಳುವ ಸಂಸ್ಕೃತಿ ಇಲ್ಲಿಯದು. ಎಲ್ಲರ ಕೈಗೆಟುಕುವ ದರದಲ್ಲಿಯೇ, ಉತ್ತಮ ಗುಣಮಟ್ಟದಲ್ಲಿ ಎಲ್ಲಾ ವಿಷಯಗಳ ಮುದ್ರಿತ ಮತ್ತು ಈ-ಪುಸ್ತಕಗಳು ದೊರೆಯುವ ಸೋಜಿಗದ ಅಕ್ಷರಗಳ ಮಾಟ ಇದೆ ಇಲ್ಲಿ. ಆಯಾ ಸಂದರ್ಭಕ್ಕೆ ತಕ್ಕಂತೆ ಬರೆಯಲಾದ ಕಾದಂಬರಿಗಳು, ಮಾಹಿತಿ ಪುಸ್ತಕಗಳು, ಥಟ್ ಅಂತ ಬಂದು ಪಟ್ ಅಂತ ಖಾಲಿಯಾಗಿಬಿಡುವ ಓದಿನ ಓಘ ಇದೆ ಇಲ್ಲಿ.
ವರ್ಷ ಒಂದಕ್ಕೆ ಎಪ್ಪತ್ತೆರಡು ಸಾವಿರ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಸರಸ್ವತಿ ಪ್ರತಿಮೆಯಂತೆ ಕಂಗೊಳಿಸುತ್ತಿರುವ ಪುಸ್ತಕ ಸ್ವರ್ಗಕ್ಕೆ. ಪದೇಪದೇ ಅಲ್ಲಿಗೆ ಹೋಗಬೇಕು ಎನ್ನುವ ತೃಷೆಯನ್ನು ನಮ್ಮೊಳಗೆ ಹುಟ್ಟಿಸುವ ಈ ಪುಸ್ತಕದಂಗಡಿಯದು ನಿಜಾರ್ಥದ ಸಂಸ್ಕೃತಿ ಭಾವ.
ಬರೀ ಪುಸ್ತಕ ಮಾರಾಟವಲ್ಲ, ಪುಸ್ತಕ ಬರೆಯುವ ಬಗ್ಗೆ, ಪ್ರಕಟಪಡಿಸುವುದರ ಬಗ್ಗೆ ಪರಿಣಿತರು ಮಾಹಿತಿ ಕೊಡುತ್ತಾರೆ ಕೂಡ. ಕವಿತೆ ರಚಿಸುವುದು ಹೇಗೆ, ಚಿತ್ರ ಪುಸ್ತಕ ಬರೆಯುವುದು ಹೇಗೆ, ಪ್ರವಾಸ ಮಾಡುವುದು ಮತ್ತು ಅದರ ಕಥೆ ಹೇಳುವುದು ಹೇಗೆ, ಸಿನೆಮಾ ನಾಟಕಗಳನ್ನು ಬರೆಯುವುದು ಹೇಗೆ, ಸಂಭಾಷಣೆ ಹೇಗಿರಬೇಕು, ವಿದೇಶಿ ಭಾಷೆ ಕಲಿಯಬೇಕಾದ್ದು ಯಾಕೆ, ಮನೆ ಸಂಭಾಳಿಸುವುದು ಹೇಗೆ, ವೃದ್ಧಾಪ್ಯ ನಿಭಾವಣೆ ಹೇಗೆ, ವಿಚ್ಛೇದನ ಹೊಂದಾಣಿಕೆ ಹೇಗೆ, ಮಕ್ಕಳನ್ನು ಬೆಳೆಸುವುದು ಹೇಗೆ, ಚರಿತ್ರೆ ಭೂಗೋಳ ಏನು, ಅಳುವುದೂ ಬೇಕು, ನಗಬೇಕು ಹೇಗೆ, ವಿಜ್ಞಾನದಲ್ಲಿ ಕಲಿಕೆ ಹೇಗೆ, ಪ್ರವಾಸೀ ಗೈಡ್ ಆಗಬೇಕೇ ಅಥವಾ ಅಧ್ಯಾಪಕ ಆಗಬೇಕೆ ಅಥವಾ ಟ್ರಕ್ ಚಾಲಕ ಆಗಬೇಕೆ, ಇಲ್ಲ ತೋಟದ ಮಾಲಿ ಕೆಲಸ ಮಾಡಬೇಕೆ ಎನ್ನುವ “ಹೇಗೆ, ಯಾಕೆ, ಏನು, ಎಲ್ಲಿ” ಇವುಗಳಿಗೆ ಆಗಿಂದಾಗ್ಗೆ ತರಬೇತಿ ನೀಡಲಾಗುತ್ತದೆ ಇಲ್ಲಿ.
ಅವುಗಳ ಕಲಿಕೆಗೆ ಸಂಬಂಧಪಟ್ಟ ಪರಿಕರಗಳನ್ನೂ ಮಾರಾಟ ಮಾಡುತ್ತಾರೆ. ತರಹಾವರಿ ಗುಂಡುಸೂಜಿಯಿಂದ ಬಣ್ಣಬಣ್ಣದ ಪೆನ್, ಪೆನ್ಸಿಲ್, ರಟ್ಟು, ಹಾಳೆ, ಬುಕ್ ಮಾರ್ಕರ್, ಕನ್ನಡಕಗಳು, ಭೂತಗನ್ನಡಿ, ಎಲ್ಲವನ್ನೂ ಮಾರುತ್ತದೆ ಈ ಮಳಿಗೆ.
ಲೇಖಕರು ತಮ್ಮ ಪುಸ್ತಕದ ಬಗ್ಗೆ ಮಾತನಾಡುವುದು ಮತ್ತು ಆ ಪುಸ್ತಕಗಳಿಗೆ ಸಹಿ ಹಾಕಿ ಕೊಡುವುದು ಇಲ್ಲಿನ ಅತ್ಯಂತ ಪ್ರಸಿದ್ಧ ಕಾರ್ಯಕ್ರಮ. ಅದಕ್ಕಾಗಿ ತಿಂಗಳುಗಳ ಮೊದಲೇ ದಿನಾಂಕ ನಿಗದಿಪಡಿಸಿರಲಾಗುತ್ತದೆ. ಆಸಕ್ತಕರು ಮೊದಲೇ ತಮ್ಮ ಹೆಸರನ್ನು ನೊಂದಾಯಿಸಿಟ್ಟುಕೊಂಡಿರುತ್ತಾರೆ. ಲೇಖಕರು ಬರುತ್ತಾರೆ. ಅವರ ಆಗಿನ ಪುಸ್ತದ ರಾಶಿಯೊಂದಕ್ಕೆ ಅಂದವಾದ ಆಕಾರ ಕೊಟ್ಟು ಜೋಡಿಸಲಾಗಿರುತ್ತದೆ. ಅಲ್ಲೇ ಮುಂದಿನ ಖುರ್ಚಿಗಳಲ್ಲಿ ಆಸಕ್ತರು ಕೂರುತ್ತಾರೆ. ಲೇಖಕ ತನ್ನ ಪುಸ್ತಕದ ಬಗ್ಗೆ ಹೇಳುತ್ತಾನೆ, ಓದುಗ ಪ್ರಶ್ನೆ ಕೇಳುತ್ತಾನೆ. ಈ ಕಾರ್ಯಕ್ರಮ ನಡೆಯುವಾಗ ಪುಸ್ತಕ ಕೊಳ್ಳಲು ಬರುವ ಇತರ ಗ್ರಾಹಕರಿಗೆ ಯಾವುದೇ ಅಡ್ಡಿ ಆಗುವುದಿಲ್ಲ. ಲೇಖಕ ಮತ್ತು ಓದುಗನ ನಡುವೆ ಮೈಕ್ ಇಲ್ಲ ಬರೀ ಪಿಸುಮಾತು ಅಂತರಂಗದ ಹಿತಕ್ಕೆ ಕಿವಿ ಬಂದಂತೆ, ಓದು ಎನ್ನುವ ಏಕಾಂತದಂತೆ.
ಹೀಗಿರುವ ಈ ಪುಸ್ತಕದಂಗಡಿಯಲ್ಲಿ ನನ್ನ ಗಮನ ಸೆಳೆದದ್ದು ಮೂವತ್ತು ದಿನದಲ್ಲಿ ಹಿಂದಿ, ಪಂಜಾಬಿ, ತಮಿಳು ಕಲಿಯುವುದು ಹೇಗೆ ಎನ್ನುವ ಪುಸ್ತಕಗಳು. ಅವುಗಳನ್ನು ಹಿಡಿದು ಅವತ್ತಿನ ಸ್ಟೋರ್ ಮ್ಯಾನೇಜರ್ ಆ್ಯನಾಳ ಬಳಿ ಓಡಿದೆ. ಭಾರತೀಯ ಇತರೆ ಭಾಷೆಗಳ ಬಗ್ಗೆ ಮಾತನಾಡುತ್ತಾ ಅವಳಿಂದ ತಿಳಿದು ಬಂದದ್ದು ಈ ಮಾರಾಟ ಸರಪಣಿಯ ಸ್ಥಾಪಕ ಟಿಮ್ ತನ್ನ ಯೌವ್ವನದ ದಿನಗಳಲ್ಲಿ ಕೋಲ್ಕತ್ತಾ ನಗರದ ಷೇರ್ ವ್ಯಾಪಾರ ಮಾಡುವ ಕಂಪನಿಯೊಂದರಲ್ಲಿ ನಾಲ್ಕೈದು ವರ್ಷಗಳ ಕೆಲಸ ಮಾಡಿದ್ದ ಎಂದು. ಬೆಂಗಳೂರಿನ ಬಗ್ಗೆ ಕೇವಲ ಕೇಳಿದ್ದ ಆಕೆಗೆ ತಿಳಿದಿರಲಿಲ್ಲದ ಕನ್ನಡ ಭಾಷೆಯ ಬಗ್ಗೆ ವಿವರಿಸುತ್ತಾ, ‘ಇಲ್ಲಿ ಯಾವುದೇ ರೀತಿಯ ಸೆಕ್ಯುರಿಟಿ ಚೆಕ್ ಇಲ್ಲವಲ್ಲ, ಯಾರೂ ಪುಸ್ತಕಗಳನ್ನು ಕದಿಯುವುದಿಲ್ಲವೇ’ ಎಂದು ಭಾರತೀಯನ ಸಹಜ ಕುತೂಹಲದಿಂದ ಕೇಳಿದೆ. ಅದಕ್ಕವಳು ತೆಳುವಾಗಿ ನಗುತ್ತಾ ಅಷ್ಟೇ ಮೃದು ದನಿಯಲ್ಲಿ ‘ಪುಸ್ತಕ ಓದುವವನ ಮನಸ್ಸು ಎಂದೂ ಕೆಡುಕಿನ ಬಗ್ಗೆ ಯೋಚಿಸದು’ ಎಂದಳು.
ಹೂಂ ಇಂತಹ ನಂಬಿಕೆ, ಭರವಸೆಯ ಸಂಸ್ಕೃತಿಯೂ ಅಲ್ಲಿದೆ. ತಕ್ಷಣ ನೆನಪಾಗಿದ್ದು ಒಂದು ಸಂದರ್ಶನದಲ್ಲಿ ಜಯಂತ್ ಕಾಯ್ಕಿಣಿಯವರು ಹೇಳಿದ್ದ ಮಾತುಗಳು. ಅವರು ಚಿಕ್ಕವರಿದ್ದಾಗ, ಅಂದಿನ ಯುವಕರು ಕವನದ ಹೆಸರಿನಲ್ಲಿ ಒಂದಷ್ಟು ಸಾಲುಗಳನ್ನು ಬರೆದು ಇವರ ತಂದೆ ಗೌರೀಶ ಕಾಯ್ಕಿಣಿಯವರ ಎದುರು ಓದಿ, ಅಭಿಪ್ರಾಯ ಕೇಳುತ್ತಿದ್ದರಂತೆ. ಗೌರೀಶರು ತಾಳ್ಮೆಯಿಂದ ವಾಚನವನ್ನು ಕೇಳಿಸಿಕೊಂಡು ಎಲ್ಲರ ಬರಹಗಳನ್ನೂ ಹೊಗಳಿಯೇ ಕಳುಹಿಸುತ್ತಿದ್ದರಂತೆ. ಒಮ್ಮೆ ಜಯಂತ್ ‘ಎಷ್ಟು ಕೆಟ್ಟದಾಗಿ ಬರೆದಿದ್ದರೂ ನೀವ್ಯಾಕೆ ಹೊಗಳುತ್ತೀರಿ’ ಎಂದು ತಂದೆಯನ್ನು ಕೇಳಿದಾಗ, ಹಿರಿಯರು ಹೇಳಿದರಂತೆ ‘ಒಬ್ಬ ವ್ಯಕ್ತಿ ಓದು ಬರಹದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದರೆ ಅವನಲ್ಲಿ ಅಷ್ಟರಮಟ್ಟಿಗೆ ಸಮಾಜಘಾತುಕ ಆಲೋಚನೆ ಇಲ್ಲವಾದಂತೆ’ ಎಂದು. ಇದನ್ನೇ ಆ್ಯನಾಳಿಗೂ ಹೇಳಿ, ಒಂದಷ್ಟು ಪುಸ್ತಕಗಳನ್ನು ಮುದ್ದು ಮಾಡುತ್ತಲೇ ಹೊತ್ತು ಹೊರಬಂದಾಗ ಕನ್ನಡ ನ್ಯೂಸ್ ವಾಹಿನಿಯೊಂದು ಉಲಿಯುತ್ತಿತ್ತು “ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯೇ ಕಾರಣ” ಅಂತ. ಯಾರಿಗೆ ಯಾವುದರ ಬಗ್ಗೆ ತಿಳಿವಳಿಕೆ ಇರುವುದಿಲ್ಲವೋ ಅದರ ಬಗ್ಗೆ ಅಪಪ್ರಚಾರ ಮಾಡುವುದು ಹೆಚ್ಚು ಎನ್ನುವುದನ್ನು ಹೀಗೇ ಯಾವ್ಯಾವುದೋ ಸಂದರ್ಭದಲ್ಲಿ ಓದಿದ ಪುಸ್ತಕಗಳು ತಿಳಿಸಿಕೊಟ್ಟಿವೆ.
ವಿದೇಶ ಯಾತ್ರೆಯಲ್ಲಿ ತಪ್ಪದೆ ಹತ್ತಾರು ಪುಸ್ತಕಮಳಿಗೆಗಳನ್ನು ಭೇಟಿಯಾಗಿದ್ದರೂ ಹೇಳಿಕೊಳ್ಳಬೇಕು ಎನ್ನುವಂಥದ್ದು ಇವುಗಳು. ಗ್ರೀಕ್ ದೇಶದ ಸ್ಸ್ಯಾಂಟೋರಿನಿ ಎನ್ನುವ ದ್ವೀಪದಲ್ಲಿ ನೋಡಿದ “ಅಟ್ಲಾಂಟಿಸ್ ಬುಕ್ಸ್” ಎನ್ನುವ ಮಳಿಗೆ 1870ರಿಂದ ಒಂದಷ್ಟು ಜ್ವಾಲಾಮುಖಿ ಇನ್ನೊಂದಿಷ್ಜ್ಟು ಭೂಕಂಪಗಳನ್ನು ಅನುಭವಿಸಿಯೂ ತನ್ನ ಆಕಾರ ಕಳೆದುಕೊಳ್ಳದೆ ಮೊದಲಿನ ಸೌಂದರ್ಯವನ್ನು ಹಾಗೇ ಉಳಿಸಿಕೊಂಡು ಅದೇ ಕಟ್ಟಡದಲ್ಲಿ ಈಗಲೂ ಇದೆ. ಇತಿಹಾಸ, ಅಧ್ಯಾತ್ಮ, ವಿಜ್ಞಾನ, ಸಾಹಿತ್ಯ ಎಲ್ಲಾ ವಿಭಾಗಗಳ ಪುಸ್ತಕಗಳೂ ಇಲ್ಲಿವೆ ಆದರೆ ಇಂಗ್ಲೀಷ್ ಭಾಷೆಯ ಪುಸ್ತಕ ಒಂದೂ ಇರಲಿಲ್ಲ. ಆಂಗ್ಲ ನಾಡಿನ ಪುರಾತನ ಪುಸ್ತಕ ಅಂಗಡಿಗಳಲ್ಲಿ ಒಂದು ಎನ್ನುವ ಖ್ಯಾತಿಗೆ ಒಳಗಾದ “ಹ್ಯಾಫೆರ್ಸ್ ಬುಕ್ ಶಾಪ್” ಆರಂಭವಾಗಿದ್ದು 1876ರಲ್ಲಿ ಇರುವುದು ಕೇಂಬ್ರಿಡ್ಜ್‌ನಲ್ಲಿ. ಈ ದುಕಾನಿನಲ್ಲಿ ನಾನು ಕೊಂಡ ಪುಸ್ತಕ Becoming Michelle Obama.
ಯುನೈಟೆಡ್ ಕಿಂಗ್ಡಮ್‌ನ ಆಕ್ಸ್ಫರ್ಡ್‌ನಲ್ಲಿ ಅತೀ ದೊಡ್ಡ ಪುಸ್ತಕದ ಅಂಗಡಿ “ಬ್ಲಾಕ್ ವೆಲ್ ಪುಸ್ತಕಮಳಿಗೆ”. ಪುರಾತನ ಕಾಲದಿಂದ ಆಧುನಿಕ ಜಗತ್ತಿನವರೆಗೂ ಯಾವುದೇ ವಿಷಯದ ಸಂಶೋಧನೆ ಮಾಡಬೇಕು ಎಂದುಕೊಳ್ಳುವ ಆಸಕ್ತಾರ್ಥಿ ಆಕರ ಗ್ರಂಥಕ್ಕೆ ತಪ್ಪದೆ ಭೇಟಿ ನೀಡಬೇಕಾದ ಬೃಹತ್ ಪುಸ್ತಕದಂಗಡಿ ಇದು. ಇಸ್ರೇಲಿನ ಟೆಲ್ ಅವೀವ್‌ನಲ್ಲಿ ಹಸಿರು ಗಿಡ ಬಳ್ಳಿಗಳ ಗುಹೆಯ ನಡುವೆ ತೆರೆದುಕೊಳ್ಳುವ “ರಾಬಿನ್ಸನ್ ಪುಸ್ತಕ ಮಳಿಗೆ” 1889ರಿಂದ ಪುಸ್ತಕ ಮಾರಾಟ ಮಾಡುತ್ತಿದೆ. ಆಂಗ್ಲ ಮತ್ತು ಭಾರತೀಯ ಭಾಷೆಗಳನ್ನು ಹೊರತುಪಡಿಸಿ ಜಗತ್ತಿನ ಎಲ್ಲಾ ಭಾಷೆಗಳ ಪುಸ್ತಕಗಳೂ ಇಲ್ಲಿವೆ. ಇಲ್ಲಿನ ವಿಶೇಷತೆ ಎಂದರೆ ಅಂಗಡಿಯ ಹೊರಭಾಗದಲ್ಲಿ ಒಂದೆರೆಡು ಶೆಲ್ಫ್‌ಗಳಲ್ಲಿ ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದಾರೆ. ಆದರೆ ಒಳಗಡೆ ಅದೆಷ್ಟು ಸಾವಿರಸಾವಿರ ಪುಸ್ತಕಗಳು ತುಂಬಿವೆ ಎಂದರೆ ಯಾವ ವಿಷಯಕ್ಕೂ ವಿಭಾಗ ಮಾಡಿ ಒಪ್ಪವಾಗಿ ಓರಣವಾಗಿಸಿಲ್ಲ. ಒಂದರಪಕ್ಕ ಒಂದು ಎಂದು ಒಂದಷ್ಟು ಪುಸ್ತಕಗಳನ್ನು ಇರಿಸಲಾಗಿದೆ. ಇನ್ನೊಂದಷ್ಟನ್ನು ರಾಶಿ ಹಾಕಲಾಗಿದೆ. ಇಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳೂ ಇವೆ. ಅಚ್ಚರಿ ಎಂದರೆ ಬಂದವರು ಕೇಳುತ್ತಿದ್ದ ಪುಸ್ತಕವನ್ನು ಮಾಲೀಕ ಸುಲಭದಲ್ಲಿ ಐದ್ಹತ್ತು ನಿಮಿಷಗಳಲ್ಲಿ ತೆಗೆದುಕೊಡುತ್ತಿದ್ದ. ಪುಸ್ತಕ ಹೆಕ್ಕಿ ಕೊಡುವುದರಲ್ಲಿ ಆತನ ಚುರುಕುತನ ನೋಡುತ್ತಿದ್ದರೆ ಏಳು ಸಮುದ್ರದಾಚೆಯ ಗಿಣಿಮರಿಯಲ್ಲಿ ಪ್ರಾಣ ಹುದುಗಿಸಿಕೊಂಡಿದ್ದ ರಾಜಕುಮಾರಿಯ ಉಸಿರು ತಂದುಕೊಟ್ಟ ಮಾಂತ್ರಿಕನಂತೆ ಕಾಣುತ್ತಿದ್ದ. ಬಹಳವೇ ಕ್ಲಿಷ್ಟವೆನಿಸುವ ಹೀಬ್ರೂ ಭಾಷೆಯಲ್ಲಿ ನಾಲಿಗೆ ಮಾತ್ರವಲ್ಲ ಧ್ವನಿಯನ್ನೂ ಅಷ್ಟದಿಕ್ಕುಗಳಿಗೂ ಹೊರಳಿಸಿ ಮಾತನಾಡುತ್ತಿದ್ದ ಆತನ ಬಳಿ ನನಗೆ ಸಂಜ್ಞೆಯಲ್ಲೂ ಯಾವುದೇ ಸಂವಹನ ಸಾಧ್ಯವಾಗಲಿಲ್ಲ.
ವಾಟರ್ಸ್ಟೋನ್ ಮಳಿಗೆಯ ಮ್ಯಾನೇಜರ್‌ಗೆ ಮಾರಾಟಕ್ಕೆ ಅಲ್ಲದಿದ್ದರೂ ನಮ್ಮ ಕನ್ನಡ ಪುಸ್ತಕಗಳನ್ನು ಪ್ರದರ್ಶಿಸಿ ಎಂದು ಕೇಳಿಕೊಂಡಾಗ ಆಕೆ ಬಹಳ ಸಂತೋಷದಿಂದ ಒಪ್ಪಿದ್ದಾಳೆ. ಮುಂದಿನ ಬಾರಿಯ ಭೇಟಿಯಲ್ಲೋ ಅಥವಾ ನೀವುಗಳು ಹೋದಾಗಲೋ ಒಂದಷ್ಟು ಕನ್ನಡ ಪುಸ್ತಕಗಳನ್ನು ಆ ಅಂಗಡಿಗೆ ನೀಡಬೇಕು ಎನ್ನುವ ಆಸೆ ಈಗಲೂ ಇದೆ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.
In Sanskrit it is said that “Na Gyanen Sadrusham Pavitram Iha Vidyate” means nothing is more sacred than the education (knowledge)..
ಮೈಸೂರು ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯ .
ಕಣ್ತೆರೆಸುವ ಲೇಖನ… ಧನ್ಯವಾದಗಳು