ವಾಸ್ತುಪುರುಷ್, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಣಗಳ ಕುರಿತಾದ ಮಹೋನ್ನತ ಚಿಂತನೆ ಮತ್ತು ಯಾತ್ರೆ. ಸುಮಿತ್ರಾ ಮತ್ತು ಸುನಿಲ್ ನಿರ್ಮಿತ ಸಿನಿಮಾಗಳಲ್ಲೇ ಇದು ಬಹುಪದರಗಳ ಅರ್ಥ, ಅನುಭವ ಮತ್ತು ಶೋಧಗಳನ್ನು, ಕಾಳಜಿಗಳನ್ನು ಒಳಗೊಂಡಿರುವ ಸಿನಿಮಾ. 
ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.

 

“ It is regional cinema that in at the cutting edge of new Indian films it is evident that nowhere is the renegotiation of Indian Identity in this new age of consumerism being better anazed than in the low budge regional cinema”

Asha Kasbekar Richards

ಸಮಕಾಲೀನ ಭಾರತೀಯ ಸಿನಿಮಾರಂಗವೆಂದರೆ ಭಾರತೀಯ ಬಹುಭಾಷೆಗಳ ಸಿನಿಮಾಕ್ಷೇತ್ರ ಪ್ರಭುತ್ವ ಹಿಂದಿಯ ಯಾಜಮಾನ್ಯ ಮಾತ್ರ ಯಾವಾಗಲೂ ಮುನ್ನೆಲೆಯಲ್ಲಿ ಬರುತ್ತಾ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಕೊಲ್ಲುತ್ತಿರುವುದು, ಗ್ರಹಣ ವೇರ್ಪಡಿಸುತ್ತಿರುವುದು ಕೂಡಾ ಒಂದು ವಿಷಾದ. Oscar ಗೆ ಭಾರತಪ್ರತಿನಿಧಿ ಚಿತ್ರವೆಂದು ಪಟ್ಟಿ ಮಾಡುವ ಚಿತ್ರಗಳಲ್ಲಿ ಯಾವಾಗಲೂ ಕೂಡಾ ಹಿಂದಿ ತನ್ನ ಮುನ್ನೆಡೆಯನ್ನು ಕಾಯುತ್ತದೆ. ಒಂದುರೀತಿ ಸಿನಿಮಾ ವಿಮರ್ಶಕ ‘ಸಾರೀ’ ಹೇಳುವ ಹಾಗೆ, “ಈ ಹಿಂದಿ ಅಥವಾ ಬಾಲಿವುಡ್ ಸಿನಿಮಾ ಪ್ರಸಕ್ತ ಪ್ರಾದೇಶಿಕ ಅನನ್ಯತೆಯನ್ನು ಮತ್ತು ಹೊಸ ಸಿನಿಮಾ ಸಾಧ್ಯತೆಯನ್ನು ಹೊಸಕಿ ಹಾಕಿ, ಯಾಜಮಾನ್ಯತನವನ್ನು ದರ್ಶಿಸುತ್ತಾ, ಒಂದು ಸಿನಿ ಇಂಪೀರಿಯಲಿಸಮ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ” ಬಾಲಿವುಡ್ ವ್ಯಾಪಿಸುವ, ಪ್ರಸರಿಸುವಕ್ರಮಎಲ್ಲಾ ಪ್ರಾದೇಶಿಕ ಚಿತ್ರ ಜಗತ್ತನ್ನೇ ಜೊತೆಗೀಡು ಮಾಡಿದೆ.

ಹಾಗೆ ನೋಡಿದರೆ ‘ಬರ್ಫಿ’ ಯಂತಹ ಪ್ರಯತ್ನಗಳು ತುಂಬಾದಶಕದ ಹಿಂದೇನೇ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಬಂದಿದೆ. ಒಟ್ಟಾರೆ ಹಿಂದಿ ಅಥವಾ ಬಾಲಿವುಡ್ ಸಮೀಕ್ಷೆಯನ್ನು ನಡೆಸಿದರೂ ಕೂಡಾ parallal ಅನ್ನುವ ಸಿನಿಮಾ ಪ್ರಕಾರ ಹೆಚ್ಚು ಗಾಢವಾಗಿ ಬೆಳೆದಿರುವುದನ್ನು ಕೂಡಾ ಗಮನಿಸಬಹುದು. ಇಂತಹ ಭಾರೀ ಅಪಾಯಕಾರಿಯಾದ ಬಾಲಿವುಡ್ ಬಗ್ಗೆ ಹಿಂದಿ ಸಿನಿಮಾದ ಏಕಸಾಮ್ಯದ ಬಗ್ಗೆ ಪ್ರಸಿದ್ಧ ಸಿನಿಮಾ ದಿಗ್ಗಜರಾದ ಗಿರೀಶ್ ಕಾಸರವಳ್ಳಿ ಮತ್ತು F.N. Karun ಕೂಡಾ ಇತ್ತೀಚಿಗೆ ಗೋವಾದಲ್ಲಿ ಆತಂಕ ವ್ಯಕ್ತಪಡಿಸಿರುವುದು ಸಹಜವೇ ಆಗಿದೆ.

ಇತ್ತೀಚಿಗೆ ನಾನು ಕನ್ನಡದ ನಿರ್ದೇಶಕ ಅಭಯಸಿಂಹರೊಂದಿಗೆ ಮಾತನಾಡುತ್ತಾ ಇರುವ ಸಂದರ್ಭದಲ್ಲಿ ಮರಾಠೀ ಸಿನಿಮಾಜಗತ್ತಿನ ಬಗ್ಗೆ ಅವರು ಮಾತನಾಡುತ್ತಾ ಮರಾಠಿ ಸಿನಿಮಾ ಈಗಿನ ದಿನಗಳಲ್ಲಿ ಹೊಸತನ್ನು ಅತ್ಯಂತ ವಿಶಿಷ್ಠವಾದುದನ್ನು ಏನಾದರೂ ಮಾಡುತ್ತಿರುವುದು ತನ್ನ ಕೇಂದ್ರ ಪೂನಾದಿಂದ ಸುಮಾರು 30 ಕೀ. ಮೀ ದೂರದಲ್ಲಿರುವ ಮಂಬೈ ಕೇಂದ್ರದ ಬಾಲಿವುಡ್ ನ ಭಯದಿಂದಾಗಿ. ಎಲ್ಲಿ ಬಾಲಿವುಡ್ ಈ ಮರಾಠಾ ಪ್ರದೇಶ ವಿಶಿಷ್ಠ ಕ್ರಮ, ಈ ಕಥನ ಪರಂಪರೆಯನ್ನು ಹೊಸಕಿ ಹಾಕುತ್ತದೋ ಎನ್ನುವ ಆತಂಕದಿಂದ” ಎಂದರು. ಆತಂಕದ ಧನಾತ್ಮಕ ಪರಿಣಾಮ ಭಾರತದಲ್ಲಿ ಪ್ರದೇಶ ವಿಶಿಷ್ಠ ಸಿನಿಮಾಕ್ರಮವನ್ನು ಉಳಿಸುತ್ತದೆ ಎಂದರೆ ಅದು ಆಶ್ಚರ್ಯ ಮತ್ತು ಕುತೂಹಲವೇ ಸರಿ. ಇದು ಬರೀ ಮರಾಠಿ ಸಿನಿಮಾದ ಬಗ್ಗೆ ಮಾತ್ರವಲ್ಲದೇ, ಉಳಿದ ಭಾರತೀಯ ಭಾಷೆಗಳ ಸಂದರ್ಭದಲ್ಲೂ ಕೂಡಾ ಅನ್ವಯವಾಗುತ್ತದೆ ಎಂಬುದೇ ನನ್ನ ಅಂಬೋಣ. ಬಾಲಿವುಡ್ಡಿನ ಮೋಹಕ, ಚುಂಬಕ ಶಕ್ತಿ, ಸತ್ವವೇ ಹಾಗೆ. ಅದು ಆ ರೀತಿ ಭಾರತದ ಬೇರೆ ಬೇರೆ ಪ್ರದೇಶ, ಸಂದರ್ಭಗಳ ಪ್ರತಿಭಾವಂತರನ್ನು ಎಳೆದು ಅವರ ಜನ್ಯ ಪ್ರದೇಶವನ್ನು ಬರಡಾಗಿಸುತ್ತದೆ. ಒಂದು ಸ್ವಾತಂತ್ರೋತ್ತರ ಸಂದರ್ಭದಲ್ಲಿ, ಒಂದು ರಾಷ್ಟ್ರದ ವಿವಿಧ ಸಮುದಾಯ,ಉಪರಾಷ್ಟ್ರೀಯತೆಗಳ ಒಳಿತನ್ನು ಸೆಳೆದು, ಶ್ರೇಷ್ಠತೆಯನ್ನು ಕಸಿದು ತಾನು ಬೆಳೆಯುತ್ತಾ, ಸಾಂಸ್ಕೃತಿಕವಾಗಿ ಸ್ಥಳೀಯ ಅಥವಾ ಉಪರಾಷ್ಟ್ರಗಳ ಸಿನಿಮಾ ಸಂಸ್ಕೃತಿಯನ್ನು u underdevelopment ಗೂ ಒಳಪಡಿಸುತ್ತದೆ.

2002 ರ ನಂತರದ ಸಂದರ್ಭ ಮರಾಠಿ ಚಿತ್ರ ಪರಂಪರೆಯಲ್ಲಿ ಮಹತ್ವದ್ದು. ಒಂದು ಹೊಸ ಅಧ್ಯಾಯ ಅಲ್ಲಿಂದ ಆರಂಭವಾಯ್ತು. ಮರಾಠೀ ಸಿನಿಮಾ ಪ್ರಪಂಚ ಅಲ್ಲಿಂದ ಪುನರುಜ್ಜೀವನಗೊಂಡಿತು. ಒಂದು ಹೊಸ ಪ್ರೇಕ್ಷಕವರ್ಗವನ್ನುಅಂದರೆ ಹೊಸ ಸಂವೇದನೆ, ಆಸಕ್ತಿ ಮತ್ತು ಬುದ್ದಿವಂತ ಸಿನಿಮಾ ಪ್ರಿಯರನ್ನು ಮತ್ತು ಒಂದುರೀತಿ ದೇಸಿ ಅನ್ನಬಹುದಾದ, ತಾತ್ವಿಕವಾದ ದೇಸಿ ಅನ್ನಲಾಗದ ಮತ್ತು ಸ್ಥಳೀಯ ಸಂಸ್ಕೃತಿ, ಭಾಷೆಯನ್ನು ಒಪ್ಪುವ ಪ್ರೇಕ್ಷಕಗಣ ಸೃಷ್ಟಿಯಾಯ್ತು. ಈಗಾಗಲೇ ಚರ್ಚಿಸಿದ ಹಾಗೆ ಒಂದು: ಬಾಲಿವುಡ್ ನ ಭಯ, ಎರಡು: ಮರಾಠಾವಾಡಾದ ಸಾಂಸ್ಕೃತಿಕ ನಗರಿಯಾದ ಪುಣೆಯಲ್ಲಿಯೇಇದ್ದ ಭಾರತದ ನಂ.1 Film Institute –FTII, ಅತ್ಯಂತ ತಳಮಟ್ಟದಲ್ಲಿ ಅಂದರೆ socialistic DV ಆಗಿ ಬೇರು ಬಿಟ್ಟು ವ್ಯಾಪಿಸಿ ವೈವಿಧ್ಯತೆಯನ್ನು ಕರಗಿಸಿ ಹೊರಸೂಸುತ್ತಿದ್ದ ಮರಾಠೀ ರಂಗಭೂಮಿ, ಇಡೀ ಭಾರತದಲ್ಲೇ, ಅತ್ಯಂತ ವಿಶಿಷ್ಟ ಭೂಪ್ರದೇಶ– ಮೇಲ್ಮೆ ಲಕ್ಷಣ–ಕೃಷಿ- ಕ್ಷಾಮ- ರೈತರ ಆತ್ಮಹತ್ಯೆಯ ವಾಸ್ತವ ಮತ್ತು ರಾಜಕಾರಣದಂತಹ ಸಮಜೋ-ರಾಜಿಕ-ಆರ್ಥಿಕ ವಾಸ್ತವಗಳು ಮತ್ತು ಅವುಗಳಿಗೆ ಮರಾಠಿ ಜಗತ್ತು ಸ್ಪಂದಿಸುವ ಕ್ರಮ ಹೀಗೆ ಹಲವಾರು ಕಾರಣಗಳಿಂದಾಗಿ ಇದು ನಿರ್ಮಾಣವಾಯ್ತು. ನಾವು ಏಕಮುಖಿ ಕಾರಣಗಳನ್ನು ಇಲ್ಲಿ ಆರೋಪಿಸದೇ, ಅದು ಬಹುಮುಖೀ ಆಯಾಮದ ಕಾರಣ-ಪ್ರಕ್ರಿಯೆಗಳ ಮೊತ್ತವೆಂದೇ ಅದನ್ನು ಅರ್ಥೈಸಬೇಕಾಗುತ್ತದೆ.

ಇಂತಹ ಮರಾಠಿ ಹೊಸಯುಗದ ಚಿತ್ರ ಪರಂಪರೆಯನ್ನು ಅಕ್ಷರಶಃ ತಮ್ಮ ಮೊದಲ ಅಧ್ಯಾಯದಿಂದ, ನಾಂದಿಯಿಂದ ಉದ್ಘಾಟಿಸಿದ್ದು ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕ್ತಂಕರ್ ಜೋಡಿ. ಸುಮಿತ್ರಾ ಕಳೆದ ಕೆಲವು ದಶಕಗಳಿಂದ ಶೋಷಿತರ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದವರು. ವಿಶೇಷವಾಗಿ ಗ್ರಾಮೀಣ ಮಹಿಳೆಯರ ಅಸ್ಥಿತ್ವದ ಸಮಸ್ಯೆಗೆ ಮುಖಾಮುಖಿಯಾದವರು. ಕ್ರಿಯಾತ್ಮಕವಾಗಿ ಸ್ತ್ರೀಯರ ವಾಸ್ತವಗಳನ್ನು ಅಭಿವ್ಯಕ್ತಿ ಮಾಡಬೇಕೆಂಬ ತುಡಿತ, ಕಾಳಜಿಯಿಂದ ಮೊದಲು ಸಾಕ್ಷ್ಯಚಿತ್ರ (Documentaries)ಗಳನ್ನು ಮಾಡಿ ನಂತರ ಪೂರ್ಣ ಪ್ರಮಾಣದ ಕಥಾಚಿತ್ರ (Feature films) ಗಳನ್ನು ಮಾಡಿದವರು.

ಸಾಕ್ಯಚಿತ್ರಗಳ ಮೂಲಕ ವಾಸ್ತವವನ್ನು ಸೆರೆಹಿಡಿದು ಅಭಿವ್ಯಕ್ತಿಸುವ ಇರಾದೆಯನ್ನು ಹೊಂದಿ, ರೂಪಕ ಪ್ರತಿಮೆ- ಕಲ್ಪನೆಗಳ ಮೂಲಕ ಎಲ್ಲರ ಮನಸ್ಸು ಮತ್ತು ಆತ್ಮಾಸಕ್ಕಿಯನ್ನು ಇನ್ನೂ ಪೂರ್ಣವಾಗಿ ತಟ್ಟಬಹುದೆಂಬ ಕಲ್ಪನೆಯಿಂದ ಸಿನಿಮಾ ನಿರ್ಮಾಣಕ್ಕಿಳಿದರು. ಸುಮಿತ್ರಾ ಭಾವೆ ಮುಖ್ಯವಾಗಿ ಸಮಾಜಶಾಸ್ತ್ರಜ್ಞೆ. ಸುನಿಲ್ ಸುಕ್ತಂಕರ್ ಪೂನಾದ FTII ನಲ್ಲಿ ನಿರ್ದೇಶನದಲ್ಲಿ ಪದವಿಯನ್ನು ಪಡೆದವರು. ಸುಮಿತ್ರಾ ಭಾವೆಯವರ ಪ್ರಭಾವದಿಂದ ಸುನಿಲ್ ತಮ್ಮನ್ನು ಚಲನಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡವರು. ಸುಮಾರು 1980ರ ದಶಕದಿಂದಲೇನೇ ಚಿತ್ರ ನಿರ್ಮಾಣದಲ್ಲಿ ಈ ಜೋಡಿ ತೊಡಗಿಕೊಂಡಿದೆ.
ಸಂಪ್ರದಾಯ, ಪರಂಪರೆಯ ದಬ್ಬಾಳಿಕೆಯಿಂದ ಹಿಡಿದು ಆಧುನಿಕರಾಷ್ಷ್ರ – ಪ್ರಭುತ್ವವಾದವು ಭಾರತ ಜನಸಮುದಾಯಗಳನ್ನು ನಾನಾ ಬಗೆಯ ಆದರ್ಶಗಳಿಂದ ಬದುಕುತ್ತಿರವ ವ್ಯಕ್ತಿಗಳನ್ನು ದಮನ ಮಾಡುತ್ತಿರುವ ಹಿಂಸೆ, ಕ್ರೌರ್ಯವನ್ನು ಶೋಧಿಸುವ ಪ್ರಕ್ರಿಯೆಯಲ್ಲಿ ಇವರು ತಮ್ಮ ಸಿನಿಮಾಗಳ ಸೃಜನಶೀಲ ನೆಲೆಯನ್ನು ಕಂಡುಕೊಳ್ಳುತ್ತಾರೆ. ವಿಶಿಷ್ಠವಾದ ಸ್ತ್ರೀ ಪ್ರಜ್ಞೆಯ ಮೂಲಕ ಧರ್ಮ, ಸಂಸ್ಕೃತಿ, ಪರಂಪರೆ, ಆಧುನಿಕತೆ , ನವ ಆರ್ಥಿಕತೆಯ ಪ್ರಗತಿ ಬದಲಾವಣೆ, ಅಭಿವೃದ್ಧಿ, ಗಾಂಧೀವಾದಿಗಳ ನೆಲೆಗಳ ಮಿತಿ ಮುಂತಾದ ವಿಷಯಗಳನ್ನು ಇವರು ಪರೀಕ್ಷಿಸುತ್ತಾರೆ.

ಒಂದು ನಿಖರವಾದ ಏಕಮುಖೀ ಸಿದ್ಧಾಂತ ಮತ್ತು ತಾತ್ವಿಕತೆಗಳು ಭಾರತದ ಬಹುಮುಖೀ ಸಮಾಜದ ಸಮಸ್ಯೆಗಳಿಗೆ ರಾಮಬಾಣ ಎನ್ನುವುದನ್ನು ನಿರಾಕರಿಸುತ್ತಾ ಸಾಗಿದ್ದಾರೆ ಇವರ ಸಿನಿಮಾಗಳಲ್ಲಿ. ಸಮುದಾಯಗಳ, ವ್ಯಕ್ತಿಗಳ ಅಸ್ತಿತ್ವದ ಮೂಲಕ ಒಂದು ಬಹುಮುಖಿಯಾದ ಸೈದ್ಧಾಂತಿಕ ಸಂಘರ್ಷಗಳನ್ನು ಇವರ ರಚನೆಯಲ್ಲಿ ನಾವು ನೋಡಬಹುದು.

ಸುಮಿತ್ರಾ -ಸುನಿಲ್ ಜೋಡಿ ಸುಮಾರು 1983 ರಿಂದ 2012 ರ ವರೆಗೆ ಅತ್ಯಂತ ವೈವಿಧ್ಯಮಯವಾದ ವಸ್ತು , ನಂಬಿಕೆ, ಆಶಯಗಳ ಮೇಲೆ ಅತ್ಯಂತ ವೈವಿದ್ಯದ ಸಿನಿಮಾಗಳನ್ನು ಮಾಡಿದ್ದಾರೆ. ಅವರು ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ಮಾಡಬಹುದು ಎಂಬ ನಂಬಿಕೆ ಹೊಂದಿರುವ ಜನ. ಸಿನಿಮಾಗಳ ಮೂಲಕ ಸಮಾಜವಾದಿ ನೆಲೆಯಲ್ಲಿ ವಾಸ್ತವವನ್ನು ಹೆಚ್ಚು ಕೇಂದ್ರೀಕರಿಸಿ ಎಲ್ಲಾ ವರ್ಗ, ಸಮಾಜಗಳ ನಡುವೆ ಒಂದು ವಾಗ್ವಾದ, ಚರ್ಚೆಯನ್ನು ಹುಟ್ಟುಹಾಕಬಹುದು ಎಂಬ ನಂಬಿಕೆಯಿಂದ ಸಿನಿಮಾ ಮಾಡಲು ಆರಂಭಿಸಿದವರು. ಆರಂಭದಲ್ಲಿ ಮಹಿಳೆಯರ (self image) ಸ್ವ – ಪ್ರತಿಮೆಗಳ ಅಭಿವ್ಯಕ್ತಿಗಾಗಿ ಸಿನಿಮಾ ಮಾಡಲು ಆರಂಭಿಸಿದರೂ ಕೂಡಾ ಕ್ರಮೇಣ, ಸಮಾಜದಲ್ಲಿನ ವೇಶ್ಯೆಯ ನೋವಿನ ಬಗ್ಗೆ ಮತ್ತು ವೇಶ್ಯೆಯೂ ಕೂಡ ತಾಯಿಯಾಗಿ ನಿರ್ವಹಿಸುವ ಪಾತ್ರದ ಬಗ್ಗೆ (ದೋಘಿ) ರೋಗಗ್ರಸ್ಥರಾಗಿ ಸಮಾಜಿಕ ಉಪೇಕ್ಷೆ, ತಿರಸ್ಕಾರ ಅನುಭವಿಸಿದ ಹೆಣ್ಣಿನ ಬಗ್ಗೆ (ನಿತಳ್) ಒಂದು ದೈಹಿಕ, ಜೈವಿಕ, ಮನೋಸಾಮಾಜಿಕ ರೋಗವಾದ ಏಡ್ಸ್ ಕುರಿತ ಚರ್ಚೆ (ಜಿಂಗಿಜಿಂದಾಬಾದ್)ಗ್ರಾಮೀಣ ಮಹಿಳೆಯರ ಕುಡಿಯುವ ನೀರಿನ ಹೋರಾಟ(ಪಾನಿ), ಕೊಂಕಣತೀರದ ದೇವರ ಕಾಡುಗಳ ರಕ್ಷಣೆ ಮತ್ತು ಆದಿವಾಸಿ ಸಮುದಾಯದ ಸಾವಯವ ಪರಿಸರದ ಬದ್ಧತೆಯ ಬಗ್ಗೆ (ದೇವ್ರೈ), ದುಶ್ಚಟ ಬಿಡಿಸುವ ಬಗ್ಗೆ (ಮುಕ್ತಿ), ಬುಡಕಟ್ಟುಜನರ ಬಗ್ಗೆ (ಸಂವಾದ್), ದೆಹಲಿಯ ಕೊಳಗೇರಿಗಳಲ್ಲಿನ ರಾಜಸ್ತಾನಿ ಮಹಿಳೆಯರ ಹಾಲಿನ ಸಹಕಾರಿ ಸಂಘದ ಬಗ್ಗೆ (ಸಹಯೋಗ್), ಮಧ್ಯಮ ವರ್ಗದ ಪ್ರತಿರೋಧಗಳ ಮತ್ತು ಸಮಾಜದಲ್ಲಿನ ಮಹಿಳೆಯ ಮೇಲೆ ಹೇರುವ ಕೆಟ್ಟ ಹೇರಿಕೆಗಳ ಬಗ್ಗೆ (ಬಾಧ), ಬಸ್ ಕಂಡೆಕ್ಟರ್ ತನ್ನ ಮೂಲಭೂತ ಹಕ್ಕುಗಳಿಗೋಸ್ಕರ ಹೋರಾಡುವ ಪ್ರಕ್ರಿಯೆಯ (ಏಕ್ ಕಪ್ ಚಾಯ್), ಶಾಲಾ ಮಕ್ಕಳು ಮತ್ತು ಅಧ್ಯಾಪಕರು ತಮ್ಮ ಹಕ್ಕುಗಳಿಗೋಸ್ಕರ ಹೋರಾಟ ಮಾಡುವ (ದಹಾವಿ ಫ), ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ಊಳಿಗಮಾನ್ಯ ಪದ್ಧತಿಯ ನಾಶ ಮತ್ತು ಭೂ ಸುಧಾರಣೆಯ ಕ್ರಮದಿಂದಾಗಿ ಭೂಮಿ ಕಳೆದುಕೊಂಡು ಒಂದು ಸಂದಿಗ್ಧ ಸಂಕಿರ್ಣ-ಸಾಮಾಜಿಕ-ವಾಸ್ತವ ಮತ್ತು ಮನೋಪಾತಳಿಯಲ್ಲಿ ಬದುಕಬೇಕಾದ ಮರಾಠವಾಡದ, ಒಂದು ಬ್ರಾಹ್ಮಣ ವಾಡೆ ಅಥವಾ ಕುಟುಂಬ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸುವ (ವಾಸ್ತುಪುರುಷ್) ಮತ್ತು ಈ ಬಾರಿಯ ಭಾರತೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ಸಂಹಿತಾದಂತಹ ಚಿತ್ರಗಳನ್ನು ಸೃಷ್ಠಿಸಿದ್ದಾರೆ.

ಸುಮಿತ್ರಾ ಮತ್ತು ಸುನಿಲರ ಚಿತ್ರ ನಿರ್ಮಾಣದ ತಂಡದ ಹೆಸರು “ವಿಚಿತ್ರ ನಿರ್ಮಿತಿ” ಈ ತಂಡ ಮೊದಲು ಪೃಥ್ವಿ ಥಿಯೇಟರ್ ಎನ್ನುವ ರಂಗ ಭೂಮಿ ಸಂಬಂಧಿತ ತಂಡವೂ ಕೂಡಾ ಆಗಿತ್ತು. ಒಂದೆರಡು ವರ್ಷಗಳಿಂದ ಮರಾಠಿ ಸಿನಿಮಾರಂಗದಲ್ಲಿ ಸಾಕಷ್ಟು ಚರ್ಚೆಗಳನ್ನು ಸೃಷ್ಟಿಸಿರುವ ಉಮೇಶ್ ಕುಲಕರ್ಣಿ ಮತ್ತು ಸಚಿನ್ ಕುಂದಲ್ಕರ್ ಕೂಡಾ ಈ ತಂಡದ ಸದಸ್ಯರೆ ಆಗಿದ್ದರು. ಇವರ ಸಿನಿಮಾಗಳ ಮೇಲೆ ಮರಾಠಿ ರಂಗಭೂಮಿಯ ಸಾಕಷ್ಟು ಪ್ರಭಾವವಿದೆ. ವಸ್ತು, ರೂಪ , ನಿರೂಪಣಾ ಶೈಲಿಗಳು ಕೆಲವು ಅಂಶಗಳನ್ನು ರಂಗಭೂಮಿಯಿಂದ ಈ ಜೋಡಿ ಪಡೆದಿದೆ. ತಮ್ಮ ಅನೇಕ ಸಿನಿಮಾಗಳ ಸಂದರ್ಭದಲ್ಲಿ ಕೂಡಾ ಇವರು ಮರಾಠಿರಂಗ ಭೂಮಿ ಮತ್ತು ಮರಾಠಿ ಸಿನಿಮಾಗಳನ್ನು ಸಾಂದರ್ಭೀಕರಿಸಿದರು ಕೂಡಾ ಇಂತಹ ಒಂದು ಅನನ್ಯ ಸಿನಿಮಾಜೋಡಿಯ ಹೆಚ್ಚಿನ ಸಿನಿಮಾಗಳು ಮಾದರಿ ಚಿತ್ರಗಳು ಮತ್ತು ಅನನ್ಯವಾದವುಗಳು. ಈ ನೆಲೆಯಲ್ಲಿ ಪ್ರಸ್ತುತ ಸಂದರ್ಭಕ್ಕೆ ಒಗ್ಗುವ ಹಾಗೆ ವಾಸ್ತುಪುರುಷ್ (2002) ಸಿನಿಮಾದ ಚರ್ಚೆಯನ್ನು ಪ್ರಾತಿನಿಧಿಕವಾಗಿ ಚರ್ಚೆ ಮಾಡುವ ಪ್ರಯತ್ನ ಮಾಡುತ್ತೇನೆ.

ವಾಸ್ತುಪುರುಷ್ ಸ್ವತಂತ್ರ ಭಾರತದ ಸಂದರ್ಭದ ಪೂನಾ ಮತ್ತು ಸುತ್ತಲಿನ ಮರಾಠಾವಾಡಾದ ಒಂದು ಬ್ರಾಹ್ಮಣ ಕುಟುಂಬದ ಈ ಕಥೆಯನ್ನು ಕೇಂದ್ರವಾಗಿ ಹೊಂದಿದ್ದರೂ ಕೂಡಾ ಕಥೆಯ ಪರಿಧಿಯಲ್ಲಿ ಮರಾಠಾವಾಡಾದ ದಲಿತ ಬದುಕು, ಹೊಸ ಪೀಳಿಗೆ, ಹೊಸ ಯುಗ, ನ್ಯಾಯದ ಆಕಾಂಕ್ಷೆ ಮತ್ತು ನಿರೀಕ್ಷೆ ಹೊತ್ತ ಆಧುನಿಕ ಭಾರತದ ಸಮುದಾಯಗಳು ಹೀಗೆ ಹಲವು ಸಂಗತಿಗಳೊಂದಿಗೆ ಸಂಕರ್ಣಿ ನೆಲೆಯಲ್ಲಿ ಬೆರೆತ ಕಥೆ. ಈ ಕಥೆ ಸುಮಿತ್ರಾ ಭಾವೆಯವರಿಗೆ ಆತ್ಮಕಥೆಯ ಹಾಗೆ. ಒಮ್ಮೆ ಸುಮಿತ್ರಾ ಅವರ ತಾಯಿ ಸುಮಿತ್ರಾರಿಗೆ “ನೀನು ಯಾಕೆ ನಮ್ಮ ಮನೆಯ ಕಥೆಯನ್ನು ಸಿನಿಮಾ ಮಾಡಬಾರದು”ಎಂದಾಗ ಸುಮಿತ್ರಾ ವಾಸ್ತುಪುರುಷ್ ಈ ಕಥೆಯನ್ನು ಬರೆದರು. ಸುಮಿತ್ರಾ ಭಾವನೆಯವರ ಇಬ್ಬರು ಸೋದರ ಮಾವಂದಿರು ಚಿತ್ರದ ಅಣ್ಣ ಮತ್ತು ಕಾಕ ಪಾತ್ರಗಳು ಇಡೀ ಚಿತ್ರದ ಕಥೆ ಅತ್ಯಂತ ಸಾವಯವ ಬಂಧದಿಂದ ಕೂಡಿದ್ದು ಯಾವುದೇ ರೀತಿಯ ಅಜೆಂಡಾ ಅಥವಾ ಕೃತ್ರಿಮತೆಯನ್ನು ನಾವಿಲ್ಲಿ ನೋಡಲು ಸಾಧ್ಯವಾಗುವುದಿಲ್ಲ.

ಚಿತ್ರದ ಕಥೆ ಆರಂಭವಾಗುವುದು ಹೀಗೆ : ಡಾ ಭಾಸ್ಕರ್ ರಾವ್ ಮುಂಬಯಿ ನಗರದಲ್ಲಿ ವೈದ್ಯ. ಆತ ಮುಂಬಯಿ ನಗರದಲ್ಲಿ ಕೊಳಗೆರಿಯಲ್ಲಿನ ಜನರಿಗೆ ವೈದಕೀಯ ಸೇವೆಯನ್ನು ಮಾನವಿಯ ಕಾಳಜಿಯಿಂದ ನೀಡಿದ ಕಾರಣ ಮ್ಯಾಗ್ಸಸೇ ಪುರಸ್ಕಾರವನ್ನು ಪಡೆಯುತ್ತಾನೆ. ಭಾಸ್ಕರ್ ರಾವ್ ಮಗ ಅಮೆರಿಕದಲ್ಲಿ ವೈದ್ಯ. ಆತ ಅಲ್ಲಿಯ ವೈದ್ಯೆಯೊಬ್ಬಳನ್ನು ಮದುವೆಯಾಗಿರುತ್ತಾನೆ ಮತ್ತು ಆ ಸಂದರ್ಭದಲ್ಲಿ ಆತ ತಂದೆಯನ್ನು ಅಭಿನಂದಿಸಲು ಮುಂಬಯಿಗೆ ಪೂನಾದ ನಂದಗಾಂವ್ ಗೆ ಹೋಗಬೇಕೆಂಬ ಆಶಯ ವ್ಯಕ್ತಪಡಿಸಿದಾಗ ಡಾ. ಭಾಸ್ಕರ್ ಅವರನ್ನು ನಂದಗಾವ್ ಗೆ ಕರೆದೊಯ್ಯಯುತ್ತಾರೆ. ಹಳ್ಳಿಯನ್ನು ಬಿಟ್ಟು ಭಾಸ್ಕರ್ ಹತ್ತಿರ 40 ವರ್ಷಗಳೆ ಕಳೆದಿತ್ತು. ಆದರೂ ಭಾಸ್ಕರ್ ಮನಸ್ಸು ಈಗ ಮೊದಲಿನ ಹಳ್ಳಿ, ಸ್ನೇಹಿತರು, ತನ್ನ ವಾಡೆ, ಆಗಿನ ಸಂದರ್ಭ ಮತ್ತು ಸ್ಮೃತಿ ಚಿತ್ರಗಳನ್ನು ನೆನೆಸಿತ್ತು ತನ್ನ ಪೂರ್ವಿಕರ ಮನೆಯನ್ನು ಮುಟ್ಟಿ ನಮಸ್ಕರಿಸಿ ಒಳಪ್ರವೇಶಿಸಿದ ಡಾ|| ಭಾಸ್ಕರ್ ಸಂಪೂರ್ಣ ಶಿಥಿಲವಾಗಿ ಕಾಡು ಬೆಳೆದಿದ್ದ ಆ ಮನೆಯನ್ನು ಮುಟ್ಟಿ ನಮಸ್ಕರಿಸಿದಾಗಲೇ ಆತನ ಸ್ಮೃತಿ ಸಂಚಿ ಬಿಚ್ಚುತ್ತದೆ.

ಡಾ|| ಭಾಸ್ಕರ್ ಇಡೀ, ಮನೆಯನ್ನು ಮನಸ್ಸನ್ನು ವ್ಯಾಪಿಸಿ ತಾನು ಆ ಮನೆಯಲ್ಲಿ ಬೆಳೆದು ಬಂದ ಸ್ಮೃತಿಚಿತ್ರದ ಸಿಂಹಾವಲೋಕನ ಕ್ರಮವನ್ನು ಮಾಡುತ್ತಾನೆ. ಆತನ ವಾಡೆ ಆತನ ಅಣ್ಣ ನಿಶಿ, ಕಾಕಾ ಮತ್ತು ಗಾಂಧೀವಾದೀ ತಂದೆ, ಸಾಂದರ್ಭಿಕ ವಿವೇಕವನ್ನು ಯಾವಾಗಲೂ ಪ್ರದರ್ಶಿಸುವ ತಾಯಿ, ಊಳಿಗಮಾನ್ಯ ವ್ಯವಸ್ಥೆ ನಾಶವಾದ ಆ ಸಂದರ್ಭದಲ್ಲಿ ವಾಡೆಯು ಅಸ್ಥಿತ್ವಕ್ಕಾಗಿ ಹೋರಾಟ ಮಾಡುವ ಸ್ಥಿತಿ ಬಂದಿದ್ದು, ಡಾ|| ಭಾಸ್ಕರ್ನ ಸ್ನೇಹಿತ ದಲಿತ ಹುಡುಗ ಸೋಪಾನ ಮತ್ತವನ ಸಂಬಂಧಗಳು, ಭಾಸ್ಕರ್ ಅಮ್ಮನ ವಿವೇಕ ಮತ್ತು ಚತುರತೆಯನ್ನು ಹೊಂದಿದ್ದ ಮತ್ತು ಜಾತಿಯ ಸಾಮಾಜಿಕ ಸಂರಚನೆಯನ್ನು ವಿರೋಧಿಸುತ್ತಾ ಭಾಸ್ಕರ್ ನನ್ನು ರೂಪಿಸುವಲ್ಲಿ ಶ್ರಮವಹಿಸಿದ ಕೃಷ್ಣಾ ತಾಯಿ, 1950-60 ರದಶಕದ ರಾಜಕೀಯ, ಸಮಕಾಲೀನ ಸಮಾಜದ ಜಾತಿ ಮತ್ತು ವರ್ಗ ವ್ಯತ್ಯಾಸಗಳು ಮತ್ತು ಅಂತಿಮವಾಗಿ ಮಗ ಭಾಸ್ಕರ್ ದೊಡ್ಡವನಾಗಿ ಮುಂಬಯಿ ಮಹಾನಗರಕ್ಕೆ ಹೋಗಿ ಡಾಕ್ಟರ್ ವಿದ್ಯೆ ಕಲಿತು ಹಳ್ಳಿಗೆ ಹಿಂತಿರುಗಿ ಬಡವರಿಗೆ ಸೇವೆಯನ್ನು ಮಾಡಬೇಕೆನ್ನುವ ಆಸೆ, ಕನಸು ಮತ್ತು ಅಣ್ಣ ಮತ್ತು ಕಾಕಾರ ಜೀವನದೃಷ್ಠಿ ಇತ್ಯಾದಿ ಎಲ್ಲವನ್ನೂ ಕೂಡಾ ಸಿಂಹಾವಲೋಕನ ಕ್ರಮದ, ಸ್ಮೃತಿಯನ್ನು ಹಿಂಬಾಲಿಸುವ ನಿರೂಪಣೆಯೇ ಚಿತ್ರದ ಕಥಾವಸ್ತು.

ವಾಸ್ತುಪುರುಷ್ ಸ್ವತಂತ್ರ ಭಾರತದ ಸಂದರ್ಭದ ಪೂನಾ ಮತ್ತು ಸುತ್ತಲಿನ ಮರಾಠಾವಾಡಾದ ಒಂದು ಬ್ರಾಹ್ಮಣ ಕುಟುಂಬದ ಈ ಕಥೆಯನ್ನು ಕೇಂದ್ರವಾಗಿ ಹೊಂದಿದ್ದರೂ ಕೂಡಾ ಕಥೆಯ ಪರಿಧಿಯಲ್ಲಿ ಮರಾಠಾವಾಡಾದ ದಲಿತ ಬದುಕು, ಹೊಸ ಪೀಳಿಗೆ, ಹೊಸ ಯುಗ, ನ್ಯಾಯದ ಆಕಾಂಕ್ಷೆ ಮತ್ತು ನಿರೀಕ್ಷೆ ಹೊತ್ತ ಆಧುನಿಕ ಭಾರತದ ಸಮುದಾಯಗಳು ಹೀಗೆ ಹಲವು ಸಂಗತಿಗಳೊಂದಿಗೆ ಸಂಕರ್ಣಿ ನೆಲೆಯಲ್ಲಿ ಬೆರೆತ ಕಥೆ.

(ಸುಮಿತ್ರಾ ಭಾವೆ ಮತ್ತು ಸುನಿಲ್ ಸುಕ್ತಂಕರ್ )

“ಡಾ|| ಭಾಸ್ಕರ್ ತನ್ನ ಪೂಜ್ಯರ ಮನೆಯಿಂದ ದೂರ ಉಳಿದರೂ ಕೂಡ ದೀನದಲಿತರ, ಶೋಷಿತರ ಸೇವೆ ಮಾಡಬೇಕೆಂಬ ತಾಯಿಯ ಮತ್ತು ಕೃಷ್ಣಾ ತಾಯಿಯ ಆಸೆಯನ್ನು ಮಂಬೈಯಲ್ಲಿನ ಕೊಳಗೇರಿಯಲ್ಲಿ ಸೇವೆಯನ್ನು ಮಾಡುವುದರ ಮೂಲಕ ನೆರವೆರಿಸುತ್ತಾನೆ. ಸಿನಿಮಾ ಕೊನೆಗೊಳ್ಳುವುದು, ಡಾ|| ಭಸ್ಕರ್ ಮತ್ತು ಆತನ ಬಾಲ್ಯ ಸ್ನೇಹಿತ, ಈಗ ಸಕ್ಕರೆ ಸಹಕಾರಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಸೋಪಾನ ಮತ್ತು ಕೃಷ್ಣಾ ತಾಯಿಯ ಮೊಮ್ಮಗಳು ಕಲ್ಯಾಣಿ ಮೂವರೂ ಅಂದರೆ ಬ್ರಾಹಣ, ದಲಿತ ಮತ್ತು ಮರಾಠ ಕುಟುಂಬದ ಸ್ತ್ರೀ ಸೇರಿ ಹಳ್ಳಿಯಲ್ಲಿ ಆಸ್ಪತ್ರೆಯನ್ನು ಕಟ್ಟುವುದರ ಮೂಲಕ. ಇಲ್ಲಿನ ಡಾ|| ಭಾಸ್ಕರ್ ಊಳಿಗಮಾನ್ಯ ವ್ಯವಸ್ಥೆಯಿಂದ, ಗ್ರಾಮ ಪರಿಸರದಿಂದ ಹೊರಬಂದ ಸುಮಿತ್ರಾರ ಪೀಳಿಗೆಯನ್ನು ಪ್ರತಿನಿಧಿಸಿದರೆ ದಲಿತ ಸೋಪಾನ 1950ರ ದಶಕದ ಪ್ರಜಾಪ್ರಭುತ್ವಿಯ ಮತ್ತು ಹೊಸ ರಾಜಕೀಯ ಮೌಲ್ಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಇಚ್ಚಿಸಿ ಪ್ರತಿನಿಧಿಸುವ ಒಂದು ಆಧುನಿಕ ಸಂದರ್ಭವನ್ನು ಪ್ರತಿನಿಧಿಸುತ್ತಾನೆ. ಈ ಮೂರೂ ಪಾತ್ರಗಳೂ ಕೂಡಾ ಮುಖ್ಯವಾಗುವುದು ಕಾಲದ ಸಾಪೇಕ್ಷತೆಯಲ್ಲಿ. ಅವರ ವರ್ತಮಾನ ಮತ್ತು ಅಸ್ಮಿತೆ ಪೂರ್ಣಗೊಳ್ಳುವುದೇ ಕಾಲದ ಕಾರಣದಿಂದ. ಅವರ ವರ್ತಮಾನದ ನಾಣ್ಯ ಪಡೆಯುವುದು ಭೂತಕಾಲದ ಇನ್ನೊಂದು ಮೂಖದಿಂದ. ಚರಿತ್ರೆಯನ್ನು ನಿರ್ಧರಿಸುವುದು ವರ್ತಮಾನ ಮತ್ತು ವರ್ತಮಾನದ ಬೇಡಿಕೆ ಚರಿತ್ರೆಯನ್ನು ಚರ್ಚಿಸುತ್ತದೆ ಹಾಗು ಸಾಪೇಕ್ಷವಾಗಿ ಆಯ್ಧುಕೊಂಡು ಚರ್ಚೆಯನ್ನು ಸೃಷ್ಠಿಸಿ ಚಿಂತನೆಗೆ ಹಚ್ಚುತ್ತದೆ.

ಈ ಚಿತ್ರ ಎರಡು ಕಾಲಘಟ್ಟಗಳ ಅಂದರೆ ಸ್ವತಂತ್ರೋತ್ತರ ಭಾರತದ ಭವಿಷ್ಯದ ಕನಸಿನ ಕಾಲವನ್ನು ತಂದಿಡುತ್ತದೆ. ಜತೆ ಜತೆಯಲ್ಲೇ ಸ್ವತಂತ್ರ ಪೂರ್ವ ಕಾಲದ ಒಂದು ಅತ್ಯಂತ ಅಸಮಾನ ವ್ಯವಸ್ಥೆಯಾದ ಊಳಿಗಮಾನ್ಯ ವ್ಯವಸ್ಥೆ ನಾಶ ಆದ ಕಾಲವನ್ನು ಕೂಡಾ ಪರಸ್ಪರ ಸಂಪರ್ಕಿಸಿ, ಪ್ರಥಕ್ಕರಿಸಿ ತೋರಿಸುತ್ತದೆ. ಮೂರುಪಾತ್ರಗಳೂ ಕೂಡಾ ಹೊಸ ಕಾಲದಲ್ಲಿ ಒಟ್ಟಾಗುವುದು ಕೂಡಾ ಸಾಮಾಜಿಕ ಋಣವನ್ನು ತೀರಿಸಲು ಮತ್ತು ವಾಸ್ತುಪುರುಷನ ಪೂಜೆಗೆಂದು. ಮುಂದಿನ ವಾಸ್ತು ಪುರುಷನ ಪೂಜೆಯಲ್ಲೂ ಕೂಡಾ ರಕ್ತ ಸಂಬಂಧಿಗಳ ಪಾತ್ರವಿಲ್ಲಿ ಬದಲು ಪರಂಪರೆಗಳನ್ನು ಆ ಸಿದ್ಧಾಂತವನ್ನು ಒಪ್ಪಿರುವವರು ನಡೆಸುತ್ತಾರೆ. ಆ ಕಾರಣಕ್ಕಾಗಿಯೇ ಸಿನಿಮಾದ ಕೊನೆಯಲ್ಲಿ ಭಾಸ್ಕರ್ ಮಗ ಪುನಃ ಕ್ಯಾನ್ಸರ್ ಸಂಶೋಧನೆಗೆಂದು ಅಮೇರಿಕಾಕ್ಕೆ ತೆರಳುತ್ತಾರೆ. ಸ್ಮೃತಿ ಚಿತ್ರದ ಕಾಲವನ್ನು ಬಿಚ್ಚುವ ಸಂದರ್ಭದಲ್ಲಿ ಡಾ. ಭಾಸ್ಕರ್ ಎಲ್ಲಾ ಕಡೆ ಇರುವಂತೆ ಮಾಡಿದ ನಿರೂಪಣಾ ತಂತ್ರವೂ ಕೂಡಾ ಕಾಲದ ದೃಶ್ಯಾ ಪರಿಕಲ್ಪನೆ ಮತ್ತು ವಾಸ್ತವಿಕತೆಯ ಆಧಾರದಲ್ಲಿ ಘಟಿಸಿತು. ಮತ್ತು ಎಲ್ಲಿಯೂ ಕೂಡಾ ಆ ದೃಶ್ಯಾ ಪರಿಕಲ್ಪನೆಗಳು ಕಾಲ್ಪನಿಕ ಅಂತ ಅನುಭವಿತವಾಗಲಿಲ್ಲವೆಂಬುದು ಸುನಿಲ್ ಮತ್ತು ಸುಮಿತ್ರಾರವರ ಅಭಿಪ್ರಾಯ.

ಇಡೀ ಚಿತ್ರ ಎಲ್ಲಿಯೋ ಒಂದು ಕಡೆ ಸಾಪೇಕ್ಷ ವೈಚಾರಿಕ ನೆಲೆಯ ಸಾಮಾಜಿಕ, ಸಾಂಪ್ರದಾಯಿಕ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಒಂದು ಸಮಾಜದಲ್ಲಿ ಇವುಗಳ ಅಸ್ತಿತ್ವವಿಲ್ಲದಿದ್ದರೆ, ಮುಗ್ಧತೆ, ಅಮಾಯಕತೆ ಇಲ್ಲದಿದ್ದರೆ, ಪುರುಷತ್ವ, ಜಡತ್ವ, ಮೂಲಭೂತವಾದಗಳು ಉದ್ಭವಿಸುತ್ತವೆ ಎನ್ನುವ ಕಾರ್ಯ-ಕಾರಣ ಸಂಬಂಧವನ್ನು ಕೂಡಾ ವಿವರಿಸಲಾಗಿದೆ. ಕೃಷ್ಣ ತಾಯಿ ಮತ್ತು ನಿಶಿಯ ಪ್ರೇಮ ಮತ್ತು ವಾತ್ಸಲ್ಯವನ್ನು ಕೂಡಾ ನಿರಾಕರಿಸುವ ಕ್ರಮದ ಮೂಲಕ ಹೆಣ್ಣಿನ ವಿವೇಕವನ್ನು ಕಡೆಗಣಿಸಿ ಜಾತಿಯ ದರ್ಪ ಮತ್ತು ಸಾಂಪ್ರದಾಯಿಕ ಆಚರಣೆಗಳ ಹೇರಿಕೆಯ ಯಾಜಮಾನ್ಯವನ್ನು ಕೂಡಾ ಚಿತ್ರ ತಿಳಿಸುತ್ತದೆ. ಮತ್ತು ಪುರುಷಪ್ರಧಾನ ರಾಜಕಾರಣದ ಒಳಗುಟ್ಟನ್ನು ಕೂಡಾ ಕಥಿಸುತ್ತದೆ.


ಅತ್ಯಂತ ನವಿರಾದ ನೆಲೆಯಲ್ಲಿ ಹೊಸ ಸಾಮಾಜಿಕರಿಗೆ ಉಪಭೋಗವಾದ ಮತ್ತು ಕೊಳ್ಳುಬಾಕತನ ಆವರಿಸಿ ಸ್ವಾರ್ಥದ ಮೌಲ್ಯಗಳನ್ನು ಆರೋಪಿಸುವ ಕ್ರಮವನ್ನು ಕೂಡಾ ತಿಳಿಸುತ್ತಾ ಪ್ರಸ್ತುತ ಕಾಲದಲ್ಲಿ ಸಾಮಾಜಿಕ ಅಬದ್ಧತೆ ಮತ್ತು ಆತ್ಮಸಾಕ್ಷಿಯ ಆಪರೀಕ್ಷೆಯ ನಡುವೆ ಹೇಗೆ ಪರ್ಯಾಯವಾಗಿ ಅವುಗಳನ್ನು ಸಾಧಿಸಬೇಕು ಎಂಬ ಎಚ್ಚರವನ್ನು ಕೂಡಾ ಸಿನೆಮಾ ಕಾಣಿಸುತ್ತದೆ. ವಾಸ್ತುಪುರುಷ, ಸೌಂದರ್ಯಾತ್ಮಕ ಪ್ರಜ್ಞೆಯನ್ನು ರೂಢಿಸಿಕೊಳ್ಳುತ್ತಾ ತಾತ್ವಿಕ ಕಾಳಜಿಯನ್ನು ಹೊಂದಿದೆ. ಈ ಸಿನೆಮಾವು ವ್ಯಕ್ತಿಗಳು, ಸಮುದಾಯಗಳ, ಆಧುನಿಕ ಭಾರತದ ಶೋಧನೆಗಳ, ಆಕಾಂಕ್ಷೆಗಳ, ನಿರಾಸೆಗಳ ಮತ್ತು ಆತ್ಮಾವಲೋಕನದ ಪಯಾಣಗಳ ಕುರಿತಾದ ಮಹೋನ್ನತ ಚಿಂತನೆ ಮತ್ತು ಯಾತ್ರೆ. ಸುಮಿತ್ರಾ ಮತ್ತು ಸುನಿಲ್ ನಿರ್ಮಿತ ಸಿನಿಮಾಗಳಲ್ಲೇ ಇದು ಬಹುಪದರಗಳ ಅರ್ಥ, ಅನುಭವ ಮತ್ತು ಶೋಧಗಳನ್ನು, ಕಾಳಜಿಗಳನ್ನು ಒಳಗೊಂಡಿರುವ ಸಿನಿಮಾ. ಒಂದು ಸಮಾನಾಂತರ ಚಲನೆ ಮತ್ತು ಒಂದು ಅನಿಷ್ಠ ಅಸಮಾನ ವ್ಯವಸ್ಥೆಗೆ ಪರ್ಯಾಯ, ಪರಿಹಾರವನ್ನು ಸೂಚಿಸುವ ಚಿಕಿತ್ಸಕ ಮನೋನೆಲೆಯ ದೃಷ್ಠಿ ಕೂಡ ಇಲ್ಲಿದೆ. ಅಂತೆಯೇ ದುರ್ಗತಿಯಲ್ಲಿರುವ ಒಂದು ಮೇಲ್ಜಾತಿಯ ಕುಟುಂಬದ ಈ ದಿನ ಒಂದೆಡೆ ಸಾಗುತ್ತಾ ಮತ್ತು ಅಲ್ಲಿನ ಪಳೆಯುಳಿಕೆಯಲ್ಲಿರುವ ವ್ಯಕ್ತಿಗಳು ಹೊಸತನ್ನು ಅನ್ವೇಷಿಸುತ್ತಾ ಆಧುನಿಕತೆ ಮತ್ತು ಹೊಸ ಮೌಲ್ಯಗಳನ್ನು ಹುಡುಕುವ ಕ್ರಮದಲ್ಲಿ ಸಾಗಿದರೆ ಅದೇ ವ್ಯವಸ್ಥೆಯ ಇನ್ನೊಂದು ಉತ್ಪನ್ನವಾದ ಶೋಷಿತ ಮತ್ತು ದಲಿತರು ಈಗಾಗಲೇ ತಿಳಿಸಿರುವ ಹಾಗೆ ಹೊಸ ಕನಸು, ಸಮಾನತೆ, ನ್ಯಾಯದ ಕಡೆಗೆ ಸಾಗುತ್ತಾ ಇಡೀ ಒಂದು ಘಟಕವೇ ಹೊಸ ಹುಟ್ಟಿನೊಂದಿಗೆ ಸಾಗುವುದನ್ನು ವಾಸ್ತುಪುರಷ ನಮಗೆ ಮನಗಾಣಿಸುತ್ತದೆ.

ಇದೇ ಹೊತ್ತಿನಲ್ಲಿ ಇವೆರಡೂ ಚಲನೆಗಿಂತ ಭಿನ್ನವಾದ ಒಂದು ವರ್ಗ, ಅದು ಮಧ್ಯಮ ವರ್ಗ ಅತ್ಯಂತ ಎಚ್ಚರ ಮತ್ತು ಸ್ವಾರ್ಥದ ಅಂತಃಸಾಕ್ಷಿಯಿಂದ ಸಾಗುತ್ತಿರುವುದನ್ನೂ ಕೂಡಾ ನೋಡಬಹುದು. ಅದು ತನ್ನ ಆಯ್ಕೆಗಳನ್ನು ತನ್ನ ಸ್ವಹಿತಾಸಕ್ತಿ ನಿರ್ದೇಶಿಸುವ ಪ್ರಕಾರ ಮಾಡುವ ಮನೋಭಾವ ರೂಪಕವಾಗಿ ಚಲಿಸುತ್ತದೆ. ಇದು ಒಂದು ಸಮಕಾಲೀನ, ಪ್ರಸಕ್ತ, ವಾಸ್ತವ ಕೂಡಾ. ಕಳೆದ ಒಂದೆರಡು ವರ್ಷಗಳಲ್ಲಿ ಭಾರತದಲ್ಲಿ ನಡೆದ ಮಧ್ಯಮ ವರ್ಗಪ್ರೇರಿತ ಭ್ರಷ್ಟಾಚಾರ ವಿರೋಧಿ ಆಂದೋಲನಗಳು ಕೂಡಾ ಹೀಗೆ ಭಾರತೀಯ ಸಮಾಜದ ಕಟುವಾಸ್ತವಗಳನ್ನು, ground realityಗಳನ್ನು ನಿರಾಕರಿಸುತ್ತಾ, ಸ್ವಹಿತಾಸಕ್ತಿಯನ್ನು ಬಿಟ್ಟುಕೊಡದೆ ತನ್ನ ಆಯ್ಕೆಗಳನ್ನು ನಿರ್ದೇಶಿಸುವ ಮತ್ತು ತಥಾಕಥಿತ ಆಂದೋಲನಗಳನ್ನು ವ್ಯಾಖ್ಯಾನಿಸುವ ಪರಿ, ಈ ಮಾದರಿಯದು. ಈ ಸಿನಿಮಾದಲ್ಲಿ ವಾಸ್ತವಿಕ ಮಾದರಿಯೂ ಇದೆ ಮತ್ತು ಒಂದು ನೆಲೆಯ ಕಾವ್ಯಾತ್ಮಾಕತೆ ಕೂಡಾ ಇದೆ. ಇಲ್ಲಿನ ಒಟ್ಟಾರೆ ಕಾಳಜಿಗಳನ್ನು ಸೃಷ್ಠಿ ಮಾಡಿದ್ದು ಕೂಡಾ ಸಿನಿಮಾದ ಸೌಂದರ್ಯಾತ್ಮಕತೆ ಮತ್ತು ಕಾವ್ಯಾತ್ಮಕತೆ.

ಸ್ವಾತಂತ್ರ್ಯ ನಂತರದ Land Reforms ಕಾಯ್ದೆ ಬಂದ ನಂತರದಲ್ಲಿ ಹೇಗೆ ಬ್ರಾಹ್ಮಣ ಮನೆ ಹೊಸಸ್ಥಿತಿಗೆ ಒಗ್ಗಿಕೊಳ್ಳುವಲ್ಲಿ ಸಾಕಷ್ಟು ಸಮಯವನ್ನು ಕಂಡುಕೊಂಡಿತು ಮತ್ತು ಹೊಸ ಸಾಮಾಜಿಕ ಘನತೆಯನ್ನು ಪಡೆಯಲು ಹೇಗೆ ಹೆಣಗಿದರು ಎಂಬುದೂ ಕೂಡಾ ಇಲ್ಲಿ ಬಹಳ ಪ್ರಮುಖ. ಇತ್ತ ಗಂಡಸರಿಗೆ ಹೊಸತನಕ್ಕೆ ಒಗ್ಗುವುದೂ ಕಷ್ಟವಾಯ್ತು ಮತ್ತು 1950ರ ನಂತರದ ಭಾರತದ ಆಡಳಿತದ ಸಂದರ್ಭದಲ್ಲಿ ಗಾಂಧಿಯ ಸತ್ಯಶೋಧನೆಯ ನಿರಂತರವಾದ ಕ್ರಿಯಾತ್ಮಕ ಶೋಧನೆಯೂ ಕೂಡಾ ಕಣ್ಮರೆಯಾದಾಗ ಹೊಸ ಪೀಳಿಗೆ ಕಂಗೆಟ್ಟಿತು ಮತ್ತು ಹೊಸ ಕಾಲಮಾನಕ್ಕೆ ಅವರು ಕಾಲಬಾಧಿತರಾದರು. ಅಂತೆಯೇ ಭಾಸ್ಕರ್ ತಂದೆ ಗಾಂಧಿವಾದಿಯಾಗಿ ತಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಆತ್ಮಗೌರವವನ್ನು ಮಗನಿಗೆ ಲಾಭವಾಗುವ ಹಾಗೆ certificate ಮಾಡಿಸಿ ತನ್ನ ಸ್ವಾರ್ಥಕ್ಕೆ ವಿನಿಮಯ ಮಾಡಲು ನಿರಾಕರಿಸಿದ್ದು, ಇಂತಹ ನಿರಾಕರಣೆಯ ನೈಜತೆಯನ್ನು 1950ರ ನಂತರದ ನೆಹರೂ ಯುಗದ ಧೋರಣೆಗಳು ಬೆಂಬಲಿಸದೆ ಆಷಾಡಭೂತಿತನವನ್ನು ತೋರಿದಾಗಲಂತೂ ನಿಜವಾದ ಬಿಕ್ಕಟ್ಟು ಉಂಟಾಯ್ತು. ತಾತ್ವಿಕವಾಗಿ ಗಾಂಧಿವಾದಿಗಳು ವಿಫಲತೆಯನ್ನು ಕಂಡರು. ವಾಸ್ತುಪುರುಷನಲ್ಲಿ ಭಾಸ್ಕರ್ ತಾಯಿಯ ಪ್ರಜ್ಞೆಯ ಮೂಲಕ ಇದು ವ್ಯಕ್ತವಾಗುತ್ತೆ.

ಇದೇ ಹೊತ್ತಿಗೆ ಗಾಂಧಿವಾದಿಗಳೂ ಕೂಡಾ ತನ್ನ ಮಾಧ್ಯಮದ ಹೋರಾಟ ಕ್ರಮದಲ್ಲಿ ಒಂದು ಹಂತದವರೆಗೆ ಬಂದು ನಿಂತರಷ್ಟೆ ವಿನಃ ಮೀರುವ ಪ್ರಯತ್ನವನ್ನು ಮಾಡಲಿಲ್ಲ. ಮುಖ್ಯವಾಗಿ ಕೃಷ್ಣ ತಾಯಿ ಮತು ಭಾಸ್ಕರನ ಅಣ್ಣ ನಿಶಿಯ ಮದುವೆ ಪ್ರಸ್ತಾಪದಲ್ಲಿ ಕೂಡಾ, ಗಾಂಧಿವಾದಿ ಅಪ್ಪ ಮೀರುವ ಕ್ರಮವನ್ನೇ ಸಾಧಿಸಲಿಲ್ಲ. ಆ ಸಂಧರ್ಭದ ಗೊಂದಲದ, ಗೋಜಲಿನ ಗಾಂಧಿವಾದ ಜಾತಿ, ಮದುವೆಗಳನ್ನು ಸಶಕ್ತವಾಗಿ ಮುಖಾಮುಖಿಗೊಳ್ಳಲಿಲ್ಲ.

“ವಾಸ್ತುಪುರುಷ್” ನಲ್ಲಿನ ಮಹತ್ವದ ಚರ್ಚೆ ನನಗನಿಸಿದ ಹಾಗೆ ವಾಸ್ತು ಪುರುಷನ ಪರಿಕಲ್ಪನೆ. ವಾಸ್ತು ಪುರುಷನ ಕಲ್ಪನೆ ಅಥರ್ವವೇದದಲ್ಲಿ ಬರುವಂತದ್ದು. ವಾಸ್ತು ಪುರುಷ ಮನೆಯನ್ನು ಕಾಯುವ ದೇವತೆ. ಮನೆಯ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಸಾಕ್ಷಿಯಾಗುತ್ತಾ ನಿರಂತರವಾಗಿ ಮನೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಚಲಿಸುತ್ತಿರುತ್ತಾನೆ. ಸಹಜವಾಗಿ ಆತನ ಕಾಲು ನೈರುತ್ಯಕ್ಕಿದ್ದರೆ ತಲೆ ಈಶಾನ್ಯಕ್ಕೆ. ಇಂತಹ ವಾಸ್ತುಪುರುಷ ಪ್ರತೀ ತಿಂಗಳೂ ಕೂಡಾ ಚಲಿಸುತ್ತಾನೆ ಒಂದೊಂದು ದಿಕ್ಕಿಗೆ. ಈತನನ್ನು ಒಳ್ಳೆಯ ಚಟುವಟಿಕೆ, ಕ್ರಿಯೆಯಿಂದ ಒಲಿಸಿಕೊಳ್ಳಬೇಕಾದುದು ಮನೆಯವರ ಕರ್ತವ್ಯ . ಆದರೆ ವಾಸ್ತು ಪುರುಷನ ಪರಿಕಲ್ಪನೆಯೇ ಸಾಪೇಕ್ಷ ಅನ್ನುವ ಸುಮಿತ್ರಾ-ಸುನಿಲ್ ದೃಷ್ಟಿ ನಿಜಕ್ಕೂ ಅದ್ಭುತ.

ಒಂದು : ವಾಸ್ತುಪುರುಷ ಮನೆಗಷ್ಟೇ ಅಲ್ಲದೇ, ಕುಟುಂಬಕಷ್ಟೇ ಅಲ್ಲದೇ ನಗರ, ಹಳ್ಳಿ, ಸಮಾಜ, ದೇಶ ಮತ್ತು ಇಡೀ ಪೃಥ್ವಿಯನ್ನು ವ್ಯಾಪಿಸಿದ ಪರಿಕಲ್ಪನೆಯಾಗಿ ಇದು ಸಾಪೇಕ್ಷ. ಎರಡು : ಭಾಸ್ಕರ್ ಮತ್ತು ಅವನ ತಾಯಿಯ ವಾಸ್ತುಪುರುಷನ ದೃಷ್ಟಿ, ನಿಶಿ ಮತ್ತು ಆತನ ಕಾಕಾನ ದೃಷ್ಠಿ, ಗಾಂಧಿವಾದಿ ತಂದೆಯ ವಾಸ್ತುಪುರುಷನ ದೃಷ್ಟಿ ಕೂಡಾ ಭಿನ್ನ ಮತ್ತು ಸಾಪೇಕ್ಷ . ನಿಶಿ ಮತ್ತು ಕಾಕಾಗೆ ಮನೆಯ ನಾಲ್ಕು ದಿಕ್ಕುಗಳಲ್ಲೂ ಇದೆ ಎಂಬ ಮಿಥ್ಯೆಯ ಹಿಂದಿರುವ ನಿಧಿ ಅಗೆದು, ಕಷ್ಟ ನಿವಾರಿಸಿಕೊಂಡು ವಾಸ್ತು ಪುರುಷನನ್ನು ಕಾಣುವ ಮತ್ತು ತೃಪ್ತಿಪಡಿಸುವ ದೃಷ್ಟಿಯಾಗಿದ್ದರೆ, ಡಾ|| ಭಾಸ್ಕರ್ ತಾಯಿಗೆ ಶ್ರಮ ಮತ್ತು ಶೃದ್ಧೆಯಿಂದ ಕಾರ್ಯ ನಿರ್ವಹಿಸಿ, ಪರಿಶ್ರಮದಿಂದ ಸಾಧಿಸಿದಾಗ ವಾಸ್ತುಪುರುಷ ಸಂತೃಪ್ತಗೊಳ್ಳುತ್ತಾನೆ ಎಂಬ ದೃಷ್ಟಿ. ಗಾಂಧೀವಾದಿ ತಂದೆಯದು ಅಸ್ಪಷ್ಟ ಮನಸ್ಸಿಲ್ಲದ ಮನಸ್ಸಿನ ದೃಷ್ಠಿ.

ಇಂತಹ ಕಾರಣದಿಂದ ಡಾ. ಭಾಸ್ಕರ್ ನ ತಂದೆ, ಅಣ್ಣ, ಕಾಕಾರು ನಿರರ್ಥಕ ಆಚರಣೆ, ನಂಬಿಕೆ, ಸಂಪ್ರದಾಯಗಳಿಗೆ ಜೋತು ಬಿದ್ದರು. ಆದರೆ ಹೆಂಗಸರು ಅಂದರೆ ಡಾ. ಭಾಸ್ಕರ್ ತಾಯಿ ಬದುಕಬೇಕು, ಈಸಬೇಕು ಇದ್ದು ಜೈಸಬೇಕು ಎಂಬ ವಾಸ್ತುಪುರುಷನ ಜೀವನದೃಷ್ಟಿಗೆ ಮಣಿದು ಬಾಳಿ, ಜೀವನವನ್ನು ಗ್ರಹಿಸಿದರು ಮತ್ತು ಸ್ಥಗಿತ ಸಾಂಪ್ರದಾಯಿಕತೆಯಿಂದ, ಅದರ ಸೆರೆಯಿಂದ ಹೊರಬರಲು ಭಾಸ್ಕರನಿಗೆ ಸಹಾಯ ಮಾಡಿದರು.

ಒಂದು ರೀತಿ ವಾಸ್ತು ಪುರುಷ Stagnant Traditionalism (ಸ್ಥಗಿತ ಸಂಪ್ರದಾಯ)ಗಿಂತ ಭಿನ್ನವಾದ Rational Traditionalism ಅಥವಾ ಸಂಪ್ರದಾಯದ Radical Revivalism ಅನ್ನು ಕೂಡಾ ಇದು ಧ್ವನಿಸುತ್ತದ್ದೆಂಬುದು ನನ್ನ ಅಂಬೋಣ. ಸಿನಿಮಾದ ಕೊನೆಯಂತೂ, ವಾಸ್ತುಪುರುಷನನ್ನು ಸಂತೋಷಪಡಿಸುವುದೆಂದರೆ ತನ್ನ ಸಂಪೂರ್ಣ ಸ್ವಾರ್ಥದ ಉದ್ದೇಶಗಳನ್ನು ಮೀರಿದ ಕೆಲಸಗಳನ್ನು ಮಾಡುವುದು ಎಂಬ ಕಥನದಿಂದ ಕೊನೆಗೊಳ್ಳುತ್ತದೆ. ವಾಸ್ತುಪುರುಷ್ ಅಮೂರ್ತವಾಗಿ ಆ ಸಂದರ್ಭದ, ಕಾಲ, ದೇಶದ ಅಂತಹ ಮನೆಗಳ, ಮಹಿಳೆಯರ ಚೈತನ್ಯ ವಿಜೃಂಭಣೆಯ ರೂಪಕವೆನ್ನುವುದನ್ನೂ ತಿಳಿಸುತ್ತದೆ. ಒಟ್ಟಾರೆ ವಾಸ್ತುಪುರುಷ್ ಒಂದು ಬಹುಪದರಗಳ ಅರ್ಥ ಮತ್ತು ಅನುಭವ.