ನಿವೃತ್ತಿ ನಂತರವೂ ಇವನು ಸುಮ್ಮನೆ ಕೂಡದೆ ನಿರಂತರ ಕೆಲಸ ಕಾರ್ಯದಲ್ಲಿ ಮಗ್ನನಾಗಿರುತಿದ್ದ. ಮುಂಜಾನೆ ಊಟ ಮುಗಿಸಿಕೊಂಡು ನಡು ಊರ ಕಟ್ಟೆ ಕಡೆ ಬಂದು ಸಮವಯಸ್ಕರ ಜೊತೆ ಮಳೆ ಬೆಳೆ ಊರು ಕೇರಿ ದೇಶಾವರಿ ಚರ್ಚೆ ಮಾಡುತಿದ್ದ. ಪಕ್ಕದ ಹೋಟಲಿನಿಂದ ಚಹಾ ತರಿಸಿ ತಾನೂ ಕುಡಿದು ಅವರಿಗು ಕುಡಿಸಿ ಖುಷಿ ಪಡುತಿದ್ದ. ಆಗಾಗ ಹೊಲ ಗದ್ದೆಗೂ ಹೋಗಿ ಆಳುಗಳಿಗೆ ಸಲಹೆ ಸೂಚನೆ ಕೊಡುತ್ತಿದ್ದ. ಇವನ ಕ್ರಿಯಾಶೀಲತೆ ನೋಡಿ ಅನೇಕರು ಆಶ್ಚರ್ಯ ಹೊರಹಾಕಿ “ಕುಬೇರಪ್ಪ ನಿವೃತ್ತನಾದರು ಸುಮ್ಮನೆ ಕೂಡೋದಿಲ್ಲ ಏನಾದರು ಮಾಡ್ತಿರ್ತಾನೆ ಶ್ರಮಜೀವಿ” ಅಂತ ವರ್ಣನೆ ಮಾಡುತ್ತಿದ್ದರು.
ಶರಣಗೌಡ ಬಿ. ಪಾಟೀಲ, ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ

ಅವನ ಬಟ್ಟೆ ಕೊಳಕಾಗಿದ್ದವು. ತಲೆಗೂದಲು ಅಸ್ತವ್ಯಸ್ತವಾಗಿದ್ದವು. ಕಾಲಲ್ಲಿ ಚಪ್ಪಲಿಯೂ ಇರಲಿಲ್ಲ. ಬೆತ್ತಲೆ ಪಾದದಿಂದ ರಸ್ತೆಯ ಮೇಲೆ ನಡೆದು ಬರುತ್ತಿದ್ದ ಅವನಿಗೆ ನೋಡಿ ಹೋಟಲ್, ಕಿರಾಣಿ ಅಂಗಡಿ, ಗುಡಿಗುಂಡಾರದ ಮುಂದೆ ಕುಳಿತವರೆಲ್ಲ ಗಾಬರಿಯಾಗಿ ಒಬ್ಬರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡಿಕೊಂಡರು.

“ಯಾರಿಗೆ ಬಂದ್ರು ಇವನಿಗೆ ಇಂಥಹ ಸ್ಥಿತಿ ಬರಬಾರದಿತ್ತು, ನಾವೆಲ್ಲ ಇವನಿಗೆ ದೇವಲೋಕದ ಕುಬೇರನಿಗೆ ಹೋಲಿಸಿ ವರ್ಣನೆ ಮಾಡುತಿದ್ದೆವು. ಇವನು ಊರಲ್ಲೇ ಅನುಕೂಲವಂತನಾಗಿದ್ದ. ಇವನ ಹಣೆಬರಹ ಛೊಲೋ ಇದೆ ಅಂತ ಮಾತಾಡುತಿದ್ದೆವು. ಈಗ ನೋಡಿದರೆ ನಮ್ಮ ಕಣ್ಣು ನಾವೇ ನಂಬದಂತಾಗಿವೆ. ಥೇಟ ಭಿಕಾರಿ ಕಂಡಂಗ ಕಾಣಸ್ತಿದ್ದಾನೆ” ಅಂತ ಶಂಕರಪ್ಪ ಹಳಾಳಿಸಿದ.

“ಜೀವನದಲ್ಲಿ ಯಾವ ಸಮಯ ಏನು ಬೇಕಾದರು ಆಗಬಹುದು ಅನ್ನೋದಕ್ಕೆ ಇವನೇ ಉದಾಹರಣೆ. ಇವನು ಹಿಂಗಾಗ್ತಾನಂತ ನಾನೂ ಕನಸು ಮನಸಲ್ಲೂ ಯೋಚನೆ ಮಾಡಿರಲಿಲ್ಲ…” ಅಂತ ವೀರಭದ್ರನೂ ದನಿಗೂಡಿಸಿದ.

ಕುಬೇರಪ್ಪ ಹಿಂಗ ಕಂಡಿದ್ದು ಇದೇ ಮೊದಲು. ಸದಾ ಇಸ್ತ್ರೀ ಬಟ್ಟೆ ತೊಟ್ಟು ಬೈತಲೆ ತೆಗೆದುಕೊಂಡ ಪಾಲೀಷ ಮಾಡಿದ ಚಪ್ಪಲಿ ಹಾಕಿಕೊಂಡು ಕೈಯಾಗ ಬ್ಯಾಗ ಹಿಡಿದು ಶಿಸ್ತಿನಿಂದ ಮುಂಜಾನೆ ಬಸ್ಸಿಗೆ ನೌಕರೀಗಿ ಹೋಗಿ ಸಾಯಂಕಾಲವೇ ಮನಿಗಿ ಬರುತಿದ್ದ. ನಿವೃತ್ತಿಯಾದ ಒಂದೆರಡು ತಿಂಗಳಲ್ಲೇ ಹಿಂಗಾಗಿ ಹೋದ. ಆಗಿನ ಕಾಲದಾಗ ಛೊಲೋ ಸಾಲೀ ಕಲಿತವನು ಅಂದ್ರೆ ಊರಾಗ ಇವನೊಬ್ಬನೇ. ನೌಕರೀಗಿ ಯಾಕ ಹೋಗತಿ? ನಮಗೇನು ಕಮ್ಮೀ ಅದಾ… ನಮ್ಮ ಹೊಲದಾಗೇ ಹತ್ತಾರು ಜನ ನೌಕರೀ ಮಾಡ್ತಾರೆ ಅಂತ ಇವನಪ್ಪ ಉಪದೇಶ ನೀಡಿದ್ದ. ಆದರೂ ಅವನ ಮಾತು ಒಪ್ಪದೆ ಅನಾಯಾಸವಾಗಿ ಮನೆ ಬಾಗಿಲಿಗೆ ಬಂದ ನೌಕರಿ ಯಾಕೆ ಬಿಡೋದು? ಕಲಿತ ವಿದ್ಯೆಗೆ ಫಲ ಸಿಗ್ತಿದೆ ಅಂತ ನೌಕರಿ ಮಾಡತೊಡಗಿದ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ನೌಕರಿ ಮಾಡಿ ಎಲ್ಲರ ಕಡೆಯಿಂದ ಭೇಷ್‌ ಅನಿಸಿಕೊಂಡ ಇವನ ವಾರಿಗೆಯವರೆಲ್ಲ ಹೊಲ ಮನೆ ಕೆಲಸಾ ಮಾಡ್ತಿದ್ದಾರೆ.. ಅಂತ ಶಂಕರಪ್ಪ ವಾಸ್ತವ ಬಿಚ್ಚಿಟ್ಟ.

“ನಾನೂ ಇವನ ಜೊತೆನೇ ಸಾಲೀ ಕಲಿತವನು. ಆದರೆ ಸರಿಯಾಗಿ ಓದಲಿಲ್ಲ. ಪ್ರಯತ್ನ ಮಾಡಲಿಲ್ಲ… ಆವಾಗ ಸರಿಯಾಗಿ ಓದಿದ್ದರ ನೌಕರೀಗಿ ಹೋಗಿ ಹಣ ಸಂಪಾದನೆ ಮಾಡ್ತಿದ್ದೆ..” ಅಂತ ರಾಜಶೇಖರ ಕೂಡ ಹಿಂದಿನ ದಿನಗಳನ್ನು ನೆನಪಿಸಿ ನಿಟ್ಟುಸಿರುಬಿಟ್ಟ.

“ಯಾರ ಹಣೆಬರಹದಾಗ ಏನಿದೆಯೋ ಅದೇ ಆಗೋದು. ಅದು ಯಾರಿಗೂ ತಿಳಿದಿಲ್ಲ, ನಾವು ಅಂದುಕೊಂಡಂಗ ಆಗ್ತಿದ್ದರ ನಾವ್ಯಾಕ ಹಿಂಗ ಇರ್ತಿದ್ದೇವು. ಅದೆಲ್ಲ, ಮಿಂಚಿ ಹೋದ ಮಾತು, ಈಗ ಅದರ ಬಗ್ಗೆ ಚಿಂತಿಸಿದರೆ ಯಾವುದೇ ಫಲವಿಲ್ಲ ಫಲವಿಲ್ಲ… ಇದ್ದಿದ್ದರಲ್ಲೇ ಸಂತೋಷ ಪಡಬೇಕು” ಅಂತ ವೀರಭದ್ರ ಸಮಜಾಯಿಷಿ ನೀಡಲು ಮುಂದಾದ.

“ಹಣೆಬರಹ ಅಂತ ಕುಂತರ ಯಾವದೂ ಆಗೋದಿಲ್ಲ. ಪ್ರಯತ್ನಾನೂ ಬೇಕು ಕುಬೇರಪ್ಪ. ಅಂವಾ ಪ್ರಯತ್ನ ಮಾಡಿದ, ಅದಕ್ಕೆ ಫಲ ಸಿಕ್ಕಿತು. ನಾನು ಮಾಡಲಿಲ್ಲ ನನಗ ಸಿಗಲಿಲ್ಲ. ಈಗ ತಪ್ಪಿನ ಅರಿವಾಗ್ತಿದೆ” ಅಂತ ಮುಖ ಸಪ್ಪಗೆ ಮಾಡಿದ.

“ಹಣೆಬರಹ ಛೊಲೋ ಇದ್ದವನೇ ಇವತ್ತು ಇಂಥಾ ಸ್ಥಿತಿ ಬಂದಿದೆ ಅಂದ್ರೆ ಇದಕ್ಕೇನು ಹೇಳೋದು? ಅವನಿಗೆ ನೋಡಿದರ ನಾವೇ ಛೊಲೋ ಅನಿಸ್ತಿದೆ, ಅಲ್ಲವೇ” ಅಂತ ಪ್ರಶ್ನಿಸಿದ.

“ಜೀವನದಾಗ ಯಾವಾಗ ಏನಾಗ್ತದೆ ಅಂತ ಹೇಳಲು ಬರೋದಿಲ್ಲ ಸುಖ ದುಃಖ ಅನ್ನೋದು ನೀರ ಮೇಲಿನ ಗುಳ್ಳೆ ಇದ್ದಂಗ ಯಾವದೂ ಶಾಶ್ವತ ಅಲ್ಲ. ಏಳು ಬೀಳು ಸಹಜ..” ಅಂತ ಶಂಕರಪ್ಪ ವಾಸ್ತವ ಹೇಳಿದಾಗ, ಉಳಿದವರು ತಲೆಯಾಡಿಸಿದರು.

ಕುಬೇರಪ್ಪ ಕೆಲವು ತಿಂಗಳ ಹಿಂದೆ ನಿವೃತ್ತಿಯಾಗಿದ್ದ. ಇವನ ನಿವೃತ್ತಿಯಿಂದ ಸಹ ಸಿಬ್ಬಂದಿಗಳಿಗೆ ಬೇಸರ ಮೂಡಿಸಿತ್ತು

ಕುಬೇರಪ್ಪ ನಮ್ಮಿಂದ ದೂರಾಗ್ತಾನೆ. ಇನ್ನೂ ಸ್ವಲ್ಪ ವರ್ಷ ನಮ್ಮ ಜೊತೆ ಇದ್ದರೆ ಛೊಲೋ ಆಗ್ತಿತ್ತು. ಬಹಳ ಆತ್ಮೀಯನಾಗಿದ್ದ. ಏನು ಮಾಡೋದು? ನಿಯಮದ ಪ್ರಕಾರ ನಿವೃತ್ತಿ ಆಗಲೇಬೇಕು. ಅವನಾದರು ಅಷ್ಟೇ, ನಾವಾದರು ಅಷ್ಟೆ. ವಯಸ್ಸಿಗೆ ಮೀರಿ ಒಂದೇ ಒಂದು ದಿನ ಹೆಚ್ಚಿಗೆ ನೌಕರಿ ಮಾಡಲು ಆಗೋದಿಲ್ಲ. ನಾವೆಲ್ಲ ಬೇರೆ ಬೇರೆ ಕಡೆಯಿಂದ ಬಂದರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡತಿದ್ದೆವು. ಕೂಡುವದು ಆಕಸ್ಮಿಕ. ಅಗಲೋದು ಅನಿವಾರ್ಯ. ವರ್ಗಾವಣೆ, ನಿವೃತ್ತಿ ನಮ್ಮ ಜೀವನದಲ್ಲಿ ಇದ್ದುದ್ದೆ… ಅಂತ ಪರಸ್ಪರ ಸಮಾಧಾನಿಸಿಕೊಂಡು ಒಂದಿನ ಇವನ ನಿವೃತ್ತಿ ಸಮಾರಂಭ ಅದ್ಧೂರಿಯಾಗಿ ಮಾಡಿ ಶಾಲು ಹೊದಿಸಿ ಒಡನಾಟದ ಅನುಭವ ಮೆಲುಕು ಹಾಕಿ ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟರು.

ಅವರನ್ನು ಬಿಟ್ಟು ಬರಲು ಕುಬೇರಪ್ಪನಿಗು ದುಃಖವಾಗಿ ಕಣ್ಣಿಂದ ಒಂದೆರಡು ಹನಿ ನೀರು ಉದುರಿದ್ದವು. ಇವನಿಗೆ ಹಣದ್ದಾಗಲಿ ಮತ್ತೊಂದಾಗಲಿ ಯಾವ ಕೊರತೆಯೂ ಇರಲಿಲ್ಲ. ನಡು ಊರಲ್ಲಿ ಕರಿಕಲ್ಲಿನ ದೊಡ್ಡದಾದ ಮನೆ, ಹೆಂಡತಿ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳ ಜೊತೆ ಖುಷಿ ಖುಷಿಯಾಗಿ ಕಾಲ ಕಳೆದಾಗ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತೆ ಭಾಸವಾಗುತಿತ್ತು. ಕುಟುಂಬದವರ ಮಧ್ಯ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಎಲ್ಲರೂ ಪ್ರೀತಿ ವಿಶ್ವಾಸದಿಂದಿದ್ದರು. ಯಾರಿಗು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತಿದ್ದ. ಎಲ್ಲರ ಖುಷಿಯೇ ತನ್ನ ಖುಷಿ ಅಂತ ಭಾವಿಸುತಿದ್ದ. ನಿವೃತ್ತಿ ನಂತರವೂ ಇವನು ಸುಮ್ಮನೆ ಕೂಡದೆ ನಿರಂತರ ಕೆಲಸ ಕಾರ್ಯದಲ್ಲಿ ಮಗ್ನನಾಗಿರುತಿದ್ದ. ಮುಂಜಾನೆ ಊಟ ಮುಗಿಸಿಕೊಂಡು ನಡು ಊರ ಕಟ್ಟೆ ಕಡೆ ಬಂದು ಸಮವಯಸ್ಕರ ಜೊತೆ ಮಳೆ ಬೆಳೆ ಊರು ಕೇರಿ ದೇಶಾವರಿ ಚರ್ಚೆ ಮಾಡುತಿದ್ದ. ಪಕ್ಕದ ಹೋಟಲಿನಿಂದ ಚಹಾ ತರಿಸಿ ತಾನೂ ಕುಡಿದು ಅವರಿಗು ಕುಡಿಸಿ ಖುಷಿ ಪಡುತಿದ್ದ. ಆಗಾಗ ಹೊಲ ಗದ್ದೆಗೂ ಹೋಗಿ ಆಳುಗಳಿಗೆ ಸಲಹೆ ಸೂಚನೆ ಕೊಡುತ್ತಿದ್ದ. ಇವನ ಕ್ರಿಯಾಶೀಲತೆ ನೋಡಿ ಅನೇಕರು ಆಶ್ಚರ್ಯ ಹೊರಹಾಕಿ “ಕುಬೇರಪ್ಪ ನಿವೃತ್ತನಾದರು ಸುಮ್ಮನೆ ಕೂಡೋದಿಲ್ಲ ಏನಾದರು ಮಾಡ್ತಿರ್ತಾನೆ ಶ್ರಮಜೀವಿ” ಅಂತ ವರ್ಣನೆ ಮಾಡುತ್ತಿದ್ದರು.

“ನಾನು ನೌಕರಿಯಿಂದ ನಿವೃತ್ತನಾಗಿದ್ದೇನೆ ಹೊರತು ಜೀವನದಿಂದ ಅಲ್ಲ. ಶಕ್ತಿ ನಿಂತ ಕಾಲಕ್ಕೆ ಕುಂತು ಉಣ್ಣೋದು ಇದ್ದೇ ಇರ್ತಾದೆ. ನಾವೆಲ್ಲ ಕಾಯಕವೇ ಕೈಲಾಸ ಅಂತ ತಿಳಿದು ಕೆಲಸ ಮಾಡಬೇಕು ಅಂದಾಗಲೇ ಬದುಕು ಸುಖವಾಗಿರಲು ಸಾಧ್ಯ…” ಅಂತ ಉಪದೇಶ ನೀಡುತಿದ್ದ. ಇವನ ಮಾತು ಹಸಿ ಗೋಡೆಗೆ ಹಳ್ಳ ಹೊಡೆದಂತಿರುತಿತ್ತು ಕುಬೇರಪ್ಪನ ಮಾತಿಗೆ ಎಲ್ಲರೂ ತಲೆದೂಗುತಿದ್ದರು.

ಕುಬೇರಪ್ಪ ಕೇವಲ ತನ್ನ ಕುಟುಂಬಕ್ಕೆ ಸೀಮಿತವಾಗಿರದೆ ಊರಿನ ಜಾತ್ರಿ ಖೇತ್ರಿ, ಮತ್ತಿತರ ಕೆಲಸ ಕಾರ್ಯದಲ್ಲಿ ಭಾಗಿಯಾಗಿ ನೆರವಾಗುತಿದ್ದ. ಇವನಿಲ್ಲದೆ ಊರಲ್ಲಿ ಯಾವ ಕೆಲಸ ಕಾರ್ಯಗಳು ನಡೆಯುತ್ತಿರಲಿಲ್ಲ. ಇವನ ಮನೆತನ ಊರಲ್ಲಿ ಅಲ್ಲದೆ ಸುತ್ತ ಮುತ್ತ ಊರಲ್ಲೂ ಪ್ರಸಿದ್ಧಿ ಪಡೆದಿತ್ತು. ಸುಮಾರು ತಲೆಮಾರಿನಿಂದ ಅವಿಭಕ್ತ ಕುಟುಂಬವಾಗೇ ನಡೆದು ಬಂದಿತ್ತು. ಕುಟುಂಬ ಗಟ್ಟಿಗೊಳಿಸುವಲ್ಲಿ ಇವನ ಪಾತ್ರವೂ ಪ್ರಮುಖವಾಗಿತ್ತು. ಯಾರ ಕುಟುಂಬ ಒಡೆದರೂ ಕುಬೇರಪ್ಪನ ಕುಟುಂಬ ಒಡೆಯುವುದಿಲ್ಲ. ಊರಿಗೇ ಮಾದರಿ ಕುಟುಂಬ ಅಂತ ಜನ ಮಾತಾಡುತ್ತಿದ್ದರು. ಆದರೆ ಅವರ ಮಾತು ಸ್ವಲ್ಪ ದಿನದಲ್ಲೇ ಹುಸಿಯಾಯಿತು.

ಕುಟುಂಬದಲ್ಲಿ ಒಡಕು ಮೂಡಿದಾಗ ಮಕ್ಕಳಿಗೆ ಕರೆದು “ನಮ್ಮ ಕುಟುಂಬ ಹತ್ತಾರು ತಲೆಮಾರಿನಿಂದ ಕೂಡಿಯೇ ಬಂದಿದೆ ನಮ್ಮಲ್ಲಿ ಏನಾದರು ಒಡಕು ಮೂಡಿದರೆ ಜನ ನೂರು ಮಾತಾಡತಾರೆ. ಮಕ್ಕಳು ದೊಡ್ಡವರಾಗಿದ್ದಾರೆ ಜವಾಬ್ದಾರಿ ಬರಲಿ ಅಂತ ಆಸ್ತಿ ಪಾಸ್ತಿ ರೊಕ್ಕ ರೂಪಾಯಿ ಎಲ್ಲವೂ ಹಂಚಿ ಕೊಟ್ಟಿದ್ದೇನೆ. ಕುಟುಂಬ ಒಡೆದು ಹೋದರೆ ಮನೆತನದ ಮರ್ಯಾದೆ ಹಾಳಾಗ್ತಾದೆ ಅಂತ ಬುದ್ಧಿವಾದ ಹೇಳಿದ. ಮಕ್ಕಳು ಇವನ ಮಾತಿಗೆ ಬೆಲೆ ಕೊಡದೆ ಹೆಂಡತಿ ಮಕ್ಕಳ ಜೊತೆ ಬೇರೆ ಮನೆ ಮಾಡಿ ಹೊರಟು ಹೋದರು.

“ಜೀವನದಾಗ ಯಾವಾಗ ಏನಾಗ್ತದೆ ಅಂತ ಹೇಳಲು ಬರೋದಿಲ್ಲ ಸುಖ ದುಃಖ ಅನ್ನೋದು ನೀರ ಮೇಲಿನ ಗುಳ್ಳೆ ಇದ್ದಂಗ ಯಾವದೂ ಶಾಶ್ವತ ಅಲ್ಲ. ಏಳು ಬೀಳು ಸಹಜ..” ಅಂತ ಶಂಕರಪ್ಪ ವಾಸ್ತವ ಹೇಳಿದಾಗ, ಉಳಿದವರು ತಲೆಯಾಡಿಸಿದರು.

ಮಕ್ಕಳು ಬೇರೆಯಾದದ್ದು ಕುಬೇರಪ್ಪನ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಯಿತು. ಶತಶತಮಾನದಿಂದ ಕೂಡಿ ಬಂದ ನಮ್ಮ ಕುಟುಂಬ ಒಡೆದು ಹೋಯಿತು ಅಂತ ಅದೇ ಚಿಂತೆಯಲ್ಲಿ ಊಟ ತಿಂಡಿ ಬಿಟ್ಟು ಕೊರಗತೊಡಗಿದ. ಮುಖದ ಮೇಲಿನ ಲವಲವಿಕೆ ಕಡಿಮೆಯಾಯಿತು. ದಿನೇ ದಿನೇ ಸೊರಗಿ ಹೋದ.

ಊರಲ್ಲಿ ಯಾರಾದ್ರು ಬೇರೆಯಾಗುತಿದ್ದರೆ ಕುಬೇರಪ್ಪನ ಕುಟುಂಬ ನೋಡಿ ಕಲೀರಿ.. ತಾತ ಮುತ್ತಾತ ಮುತ್ತಜ್ಜರಿಂದಲೂ ಕೂಡೇ ಬಂದಿದೆ. ಅವರೆಲ್ಲ ಹೇಗೆ ಪ್ರೀತಿ ವಿಶ್ವಾಸದಿಂದ ಬದುಕುತಿದ್ದಾರೆ ಅಂತ ಅನೇಕರು ಉದಾಹರಣೆ ಕೊಟ್ಟು ಬುದ್ದಿ ಹೇಳುತಿದ್ದರು. ಆದರೀಗ ಇವನ ಮನೆಯೇ ಒಡೆದು ಮೂರು ಮನೆಯಾಗಿದ್ದು ಆಶ್ಚರ್ಯದ ಜೊತೆ ಗಾಬರಿಯೂ ತರಿಸಿತು. ಊರಿನ ಏಕೈಕ ಕುಟುಂಬವೂ ಒಡೆದು ಹೋಯಿತು. ಯಾಕೆ ಹಿಂಗಾಯಿತು? ನಾವು ಕನಸು ಮನಸ್ಸಲ್ಲೂ ಯೋಚಿಸಿರಲಿಲ್ಲ, ಮಕ್ಕಳು ಹೀಗೆ ಮಾಡಬಾರದಿತ್ತು. ಕುಬೇರಪ್ಪ ಯಾರಿಗೇನು ಕಡಿಮೆ ಮಾಡಿದ್ದ? ಆಸ್ತಿ ಪಾಸ್ತಿ ಹಣ ಎಲ್ಲವೂ ಸಂಪಾದಿಸಿದ್ದ ಅಂತ ಕನಿಕರ ವ್ಯಕ್ತಪಡಿಸಿದ. ಕುಟುಂಬ ಒಡೆದು ಹೋಗಲು ಏನೋ ಬಲವಾದ ಕಾರಣ ಇದ್ದಿರಬೇಕು. ಸುಮ್ಮನೆ ಯಾವುದೂ ಒಡೆದು ಹೋಗೋದಿಲ್ಲ ಅಂತ ಕೆಲವರು ಅನುಮಾನವೂ ಹೊರ ಹಾಕಿದರು.

“ನಮ್ಮ ಕುಟುಂಬ ಯಾವತ್ತೂ ಒಗ್ಗಟ್ಟಾಗಿರಬೇಕೆಂದು ಬಯಸಿದ್ದೆ. ಆದರೆ ಅದು ಹಾಗಾಗಲಿಲ್ಲ. ನಮ್ಮ ಮನೆ ಸುಖ ಸಂತೋಷದ ಗೂಡಾಗಿತ್ತು. ಮನೆಯಲ್ಲಿ ಖುಷಿ ತುಂಬಿ ತುಳುಕುತಿತ್ತು. ಮನೆಯಂಗಳದಲ್ಲಿ ಮೊಮ್ಮಕ್ಕಳು ಖುಷಿಯಿಂದ ಆಟವಾಡುವದು ನೋಡಿ ಹೊತ್ತು ಹೋದದ್ದೇ ಗೊತ್ತಾಗುತಿರಲಿಲ್ಲ. ನಾನು ಮನೆಗೆ ಬಂದಾಗ ನನ್ನ ನೋಡಿ ತಾತಾ ಬಂದ ತಾತಾ ಬಂದ ಏನೇನು ತಂದ ಕಾಯಿ ಕಬ್ಬು ತಂದ ಅಂತ ಸುತ್ತುವರೆದು ಕೇಕೆ ಹಾಕುತಿದ್ದರು. ಅವರ ಜೊತೆ ಮಕ್ಕಳಂತೆ ಕಾಲ ಕಳೆದು ಅಂಗಡಿಯಿಂದ ಆಗಾಗ ಮಿಠಾಯಿ ಬಿಸ್ಕೀಟ ಚಾಕಲೇಟು ತಂದುಕೊಟ್ಟು ಸಂತೋಷ ಪಡುತಿದ್ದೆ. ಈಗ ಯಾರ ಜೊತೆ ಸಮಯ ಕಳೆಯಲಿ. ಮನೆ ಹಾಳು ಬಿದ್ದಂತೆ ಭಾಸವಾಗ್ತಿದೆ. ಮನೆಗೆ ಬಂದರೆ ಇದು ನಮ್ಮ ಮನೆಯೇ? ಅಂತ ನನ್ನ ನಾನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಮನೆಯಲ್ಲಿ ಕಾಲೇ ನಿಲ್ಲುತಿಲ್ಲ. ಮನೆಯಲ್ಲಿ ಎಲ್ಲರೂ ಪ್ರೀತಿ ಗೌರವ ತೋರುತಿದ್ದರು. ಸೊಸೆಯಂದಿರು ನನಗೆ ಬೇಕಾದ ಬಿಸಿ ಬಿಸಿ ಅಡುಗೆ ಮಾಡಿ ಊಟ ಬಡಿಸುತಿದ್ದರು. ನಮ್ಮ ಸಂಸಾರ ಆನಂದ ಸಾಗರ ಅಂತ ಹಳೆಯ ಚಿತ್ರಗೀತೆ ನೆನಪಿಸಿಕೊಂಡು ಗುಣಗುಣಿಸುತಿದ್ದೆ. ಈಗ ನೋಡಿದರ ದುಃಖ ಉಕ್ಕಿ ಬರ್ತಿದೆ..” ಅಂತ ಕಣ್ಣಂಚಿನಲ್ಲಿ ನೀರು ತಂದ.

“ಮಕ್ಕಳು ಬೇರೆ ಆಗೋದು ಹೊಸದಲ್ಲ. ಇದು ಹಿಂದಿನಿಂದಲೂ ನಡೆದು ಬಂದಿದೆ. ಹುಟ್ಟುತ್ತಲೇ ದಾಯಾದಿ ಬೆಳೆಯುತ್ತಲೇ ಭಾಗಾದಿ ಎಲ್ಲರ ಮನೆಯಲ್ಲೂ ಇದ್ದದ್ದೇ. ರೆಕ್ಕೆ ಬಲಿತ ಹಕ್ಕಿ ಒಂದು ದಿನ ಗೂಡು ತೊರೆದು ಹೋಗುವಂತೆ ಅವರು ಹೋಗಿದ್ದಾರೆ. ಅವರ ಬಗ್ಗೆ ಯಾಕೆ ಚಿಂತೆ ಮಾಡೋದು. ಎಲ್ಲೇ ಇರಲಿ, ಹೇಗೆ ಇರಲಿ, ಸುಖವಾಗಿದ್ದರೆ ಅಷ್ಟೇ ಸಾಕು. ನಮಗಿನ್ನೂ ಕೈಕಾಲಲ್ಲಿ ಶಕ್ತಿ ಇದೆ, ಶಕ್ತಿ ನಿಂತ ಕಾಲಕ್ಕೆ ಚಿಂತೆ ಮಾಡಿದರಾಯಿತು ಅಂತ ಹೆಂಡತಿ ಸಮಜಾಯಿಷಿ ನೀಡಿದಾಗ “ಶಕ್ತಿ ಇನ್ನೂ ಎಲ್ಲಿಯ ತನಕ ಇರ್ತಾದೆ? ದಿನಕಳೆದಂಗ ಹೆಚ್ಚಾಗ್ತಾದಾ ಕಡಿಮೆ ಆಗ್ತಾದಾ? ಮಕ್ಕಳ ಮೇಲೆ ಅವಲಂಬಿತರಾಗಿ ಮೊಮ್ಮಕ್ಕಳ ಜೊತೆ ಕಾಲ ಕಳೆಯುವ ವಯಸ್ಸು ನಮ್ಮದು. ಈ ವಯಸ್ಸಿನ್ಯಾಗ ನಮಗೆ ಇಂಥಹ ಸ್ಥಿತಿ ಬರಬಾರದಿತ್ತು ಅಂತ ಅಳಲು ತೋಡಿಕೊಂಡ.

“ಅದನ್ನೇ ತಲ್ಯಾಗ ಇಟ್ಕೊಂಡು ಕುಂತರೆ ಕಟ್ಟಿಗೆಗೆ ಹುಳ ಕೊರೆದಂತೆ ಚಿಂತೆ ಕೊರೀತಾನೇ ಇರ್ತಾದೆ. ಅದೆಲ್ಲ ಕೆಟ್ಟ ಘಳಿಗೆ ಅಂತ ಮರೆತು ಬಿಡಬೇಕು” ಅಂತ ಹೆಂಡತಿ ಸಲಹೆ ನೀಡಿದಳು.

ನನ್ನ ಸಂಕಟ ನನಗೇ ಗೊತ್ತು. ಇಂತಹ ದೊಡ್ಡ ಮನೆ ಇವತ್ತು ಖಾಲಿಯಾಗಿ ಭಣಗುಡುತಿದೆ. ಹಿರಿಯರು ಕಟ್ಟಿಸಿದ ಈ ಮನೆ ನಾನು ಹೊಸದಾಗಿ ಮಾಡಿದ್ದೇನೆ. ಇದರಲ್ಲಿ ಅಪ್ಪ ಅವ್ವ ತಾತ ಅಜ್ಜಿ ಮುತ್ತಾತ ಮುತ್ತಜ್ಜಿ ಹೀಗೆ ಅನೇಕರು ವಾಸಮಾಡಿ ಜೀವನ ಸವೆಸಿ ಕಣ್ಮರೆಯಾಗಿದ್ದಾರೆ. ಅವರ ನೆನಪು ಇನ್ನೂ ಈ ಮನೆಯಲ್ಲಿ ಜೀವಂತವಾಗಿವೆ. ಅವರು ನಮಗಾಗಿಯೇ ಎಲ್ಲಾ ಆಸ್ತಿ ಪಾಸ್ತಿ ಬಿಟ್ಟು ಹೋಗಿದ್ದಾರೆ. ಎಷ್ಟೋ ಜನರಿಗೆ ವಾಸ ಮಾಡಲು ಮನೆಯಿಲ್ಲ. ನಮಗೆ ಎಲ್ಲಾ ಇದ್ದರೂ ನೆಮ್ಮದಿಯಿಲ್ಲದಂತಾಗಿದೆ. ಇಂತಹ ದೊಡ್ಡ ಮನೆ ಬಿಟ್ಟು ನಮ್ಮವರು ಯಾರದೋ ಮನೆಯಲ್ಲಿ ವಾಸ ಮಾಡ್ತಿದ್ದಾರೆ. ಇವರಿಗೆ ನಾನೇನು ಕಡಿಮೆ ಮಾಡಿದ್ದೆ? ಆಸ್ತಿ ಪಾಸ್ತಿ ಹಾಗೇ ಕಾಪಾಡಿಕೊಂಡು ಬಂದಿದ್ದೆ. ಮಕ್ಕಳು ವ್ಯಾಪಾರ ಉದ್ಯೋಗ ಮಾಡಿ ಒಂದೇ ಒಂದು ಪೈಸೆ ಗಳಿಸಿ ಕೊಡಲಿಲ್ಲ. ಹಾಗಿದ್ದರೂ ಇವರಿಗೆ ಧೂಸರಾ ಮಾತಾಡಲಿಲ್ಲ. ಸೊಸೆಯಂದಿರು ಖುಷಿಯಾಗಿರಲಿ ಅಂತ ಅವರು ಬೇಡಿದ ಚಿನ್ನದ ಆಭರಣ ಮಾಡಿಸಿ ಕೊಟ್ಟೆ. ನಾನು ಏನೆಲ್ಲ ಮಾಡಿದರು ಮನೆ ಬಿಟ್ಟು ಹೋಗಿ ನನ್ನ ಗೌರವ ಹಾಳು ಮಾಡಿದರು. ಈಗ ಯಾರೊಬ್ಬರೂ ಇತ್ತ ಕಡೆ ಸುಳಿಯುತಿಲ್ಲ. ಮಕ್ಕಳು ಬಂದಿದ್ರಾ? ಮೊಮ್ಮಕ್ಕಳು ಬಂದಿದ್ರಾ? ಅಂತ ಯಾರಾದ್ರು ವಿಚಾರಿಸಿದರೆ ಮುಜುಗರವಾಗ್ತದೆ. ಹೋಟಲು ಅಂಗಡಿ ಗುಡಿಗುಂಡಾರದ ಮುಂದೆ ಕುಳಿತವರೆಲ್ಲ ನಮ್ಮ ಮನೆತನದ ಬಗ್ಗೆ ನಿತ್ಯ ಮಾತಾಡುವಂತಾಗಿದೆ. ಅನ್ನ ಹೆಚ್ಚಾದರೆ ಆಪತ್ತು ಹೆಚ್ಚಾಗ್ತಾದೆ ಅನ್ನುವ ಮಾತು ಇವರು ನಿಜ ಮಾಡಿದರು. ನಮಗಿಂತ ವಯಸ್ಸಾದ ಎಷ್ಟೋ ಜನ ಊರಲ್ಲಿಲ್ಲವೇ? ಅವರಿಗೆ ನಮ್ಮಂಥ ಸ್ಥಿತಿ ಬಂದಿದೆಯಾ? ಕೆಲವರು ಬೆನ್ನು ಬಾಗಿಸಿಕೊಂಡು ಕಣ್ಣು ಮಂಜಾಗಿಸಿಕೊಂಡು ಕೋಲು ಹಿಡಿದು ಎರಡು ಕಾಲಿಗೆ ಮೂರು ಕಾಲು ಮಾಡಿಕೊಂಡ ತಿರುಗಾಡಿ, ಹೊಟ್ಟೆತುಂಬ ಊಟ, ಕಣ್ತುಂಬ ನಿದ್ದೆ ಮಾಡ್ತಿದ್ದಾರೆ. ನಮಗಿಂತ ಅವರೇ ಮೇಲಲ್ಲವೇ? ಅಂತ ಪ್ರಶ್ನಿಸಿದ.

“ಅವರಲ್ಲಿ ಹಣವಿಲ್ಲ, ಅದಕ್ಕೆ ನೆಮ್ಮದಿಯಾಗಿದ್ದಾರೆ. ನಮ್ಮಲ್ಲಿ ಹಣ ಇರೋದ್ರಿಂದ ಹೀಗೆಲ್ಲ ಆಗಿದೆ..” ಅಂತ ತೀಕ್ಷ್ಣವಾಗಿ ಹೇಳಿದಳು. ಹೆಂಡತಿಯ ಮಾತು ಕುಬೇರಪ್ಪನಿಗೆ ಕ್ಷಣಕಾಲ ಯೋಚನೆಯಲ್ಲಿ ಮುಳುಗಿಸಿತು. “ಹಣದಿಂದಲೇ ಅಲ್ಲವೇ ಜೀವನ ಸಾಗೋದು. ಅದೇ ಇಲ್ಲದಿದ್ದರೆ ನೆಮ್ಮದಿಯಾಗಿರಲು ಹೇಗೆ ಸಾಧ್ಯ?” ಅಂತ ಪ್ರಶ್ನಿಸಿದ. ಎಲ್ಲ ಸಮಯ ಹಣದಿಂದಲೇ ನೆಮ್ಮದಿ ಸಿಗ್ತಾದೆ ಅನ್ನೋದು ತಪ್ಪು. ಕೆಲವು ಸಲ ಹಣ ನೆಮ್ಮದಿ ಹಾಳು ಮಾಡ್ತಾದೆ ಅನ್ನೋದಕ್ಕೆ ನಮ್ಮ ಕುಟುಂಬವೇ ಸಾಕ್ಷಿ. ನೀವು ಸುಮಾರು ಮುವತ್ತೈದು ವರ್ಷ ನೌಕರಿ ಮಾಡಿ ಪೈಸೆಪೈಸೆ ಹಣ ಜಮಾಯಿಸಿ ಜೇನಿನಂತೆ ಸಂಗ್ರಹ ಮಾಡಿ ನಿವೃತ್ತಿಯಾದ ಮೇಲೆ ಹಿಂದೆ ಮುಂದೆ ನೋಡದೆ ಮಕ್ಕಳಿಗೆ ಹಂಚಿ ಬಿಟ್ಟಿದ್ದೇ ತಪ್ಪು. ಆ ಹಣಾನೇ ಇವರ ಗುಣ ಕೆಡಿಸಿಬಿಟ್ಟಿತು. ಹೆಂಡಿರ ಮಾತಿಗೆ ಕಿವಿಗೊಟ್ಟು ಬೇರೆ ಮನೆ ಮಾಡಿ ಹೊರಟು ಹೋದರು. ಅವರ ಕೈಗೆ ಹಣ ಕೊಡದಿದ್ದರೆ ಯಾರೂ ಮನೆ ಬಿಟ್ಟು ಹೋಗುತಿರಲಿಲ್ಲ. ನಮ್ಮ ಕುಟುಂಬ ಮೊದಲಿನಂತೇ ಒಗ್ಗಟ್ಟಾಗಿ ಇರುತಿತ್ತು” ಅಂತ ಮುಖ ಸಪ್ಪಗೆ ಮಾಡಿ ಹೇಳಿದಳು. ಹೆಂಡತಿಯ ಮಾತು ಕುಬೇರಪ್ಪನಿಗೆ ಜ್ಞಾನೋದಯವಾಗಿ ಶೂನ್ಯ ದಿಟ್ಟಿಸಿದ ಆದರೆ ಕಾಲ ಮಿಂಚಿ ಹೋಗಿತ್ತು.!!