ಪಾಪ, ನಮ್ಮ ಪ್ರೀತಿಯ ತಮ್ಮಂದಿರು ತಟ್ಟೆ ತಿರುಗಿಸುವ ಪ್ರಯತ್ನದಿಂದಿರಲಿ ಅಪ್ಪಿತಪ್ಪಿ ಕೈ ಜಾರಿ ತಟ್ಟೆ ಕೆಳಗೆ ಬೀಳಿಸಿಕೊಂಡರೂ ‘ಕಂಡಲ್ಲಿ ಗುಂಡು’ ಎಂಬಂತೆ ಒಡನೆಯೇ ಒಂದಿನಿತು ಯೋಚಿಸದೇ ಮನಸೋ ಇಚ್ಛೆ ಅವರಿಗೆ ಥಳಿಸಿ ನಮ್ಮ ಮೇಲಿನ ಕೋಪವನ್ನೆಲ್ಲಾ ತಣ್ಣಗಾಗಿಸಿಕೊಳ್ಳುತ್ತಿದ್ದರು. ಆದರೂ ಅವರ ಈ ಕೋಪ ಸಂಪೂರ್ಣವಾಗಿ ತಣ್ಣಗಾದಂತೆ ಕಾಣಲಿಲ್ಲ. ತಣಿಯದ ಈ ಕೋಪದಲ್ಲಿ “ಪಾಪ! ನಮ್ಮ ಪ್ರೀತಿಯ ವಿದ್ಯಾರ್ಥಿಗಳು ವಿಷ್ಣು ಚಕ್ರದಂತೆ ತಟ್ಟೆ ತಿರುಗಿಸುವ ಯಕ್ಷಿಣಿ ವಿದ್ಯೆಯ ಮೋಡಿಗೆ ಸಿಲುಕಿಯೇ ಈ ರೀತಿ ಆಡುತ್ತಿರುವರು” ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಆರನೆಯ ಬರಹ

ನಾವಾಗ ಹನ್ನೆರಡನೇ ತರಗತಿಯಲ್ಲಿದ್ದೆವು. ಹನ್ನೆರಡನೇ ತರಗತಿಯಲ್ಲಿ ಇರುವುದೆಂದರೆ ಅವು ನಮ್ಮ ನವೋದಯ ಜೀವನದ ಕೊನೆಯ ದಿನಗಳಾಗಿದ್ದವು ಎಂದೇ ಹೇಳಬಹುದು.

ಈ ಸಂದರ್ಭದಲ್ಲೇ ನಾವು ನವೋದಯ ನವೋದಯಗಳ ನಡುವೆ ನಡೆಯಲಿದ್ದ ಕ್ಲಸ್ಟರ್ ಮೀಟ್ ಹೆಸರಿನ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದೆವು!

ಸಾಮಾನ್ಯವಾಗಿ ಹನ್ನೆರಡನೆಯ ತರಗತಿಯ ಹುಡುಗರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪದ್ಧತಿ ಅಂದಿನ‌ ಕಾಲಕ್ಕೆ ನಿಂತೇ ಹೋಗಿತ್ತು. ಏಕೆಂದರೆ, ವರ್ಷದ ಕೊನೆಗೆ ನಡೆಯಲಿದ್ದ ಬೋರ್ಡ್ ಎಕ್ಸಾಮ್ ಎಂಬುದು ಕ್ರೀಡಾ ಕೂಟಕ್ಕಿಂತ ಮಹತ್ವದ್ದೆಂಬುದು ಎಲ್ಲರ ತಲೆ ಹೊಕ್ಕಿತ್ತು.

ಈ ಕಾರಣಕ್ಕಾಗಿಯೇ ಅದರ ಹಿಂದಿನ ವರ್ಷ ಹನ್ನೊಂದನೆಯ ತರಗತಿಯಲ್ಲಿದ್ದ ನಾವೇ ನಮ್ಮ ಶಾಲೆಯನ್ನು ಕ್ರೀಡಾಕೂಟದಲ್ಲಿ ಪ್ರತಿನಿಧಿಸಿ ಬಂದಿದ್ದೆವು. ಪ್ರತಿನಿಧಿಸಿ ಬಂದಿದ್ದಷ್ಟೇ ಅಲ್ಲ; ಮನು, ಸನ್ನಿ, ರಾಜು, ಶಾಂತ, ರಾಜೇಶ, ಪರಮಿ, ರುದ್ರಸ್ವಾಮಿ, ಚಂದ್ರಕಾಂತ, ಅಪ್ಪಿ‌ ಅನಿಲ ಇನ್ನಿತರ ಗೆಳೆಯರ ಮನಮೋಹಕ ಪ್ರದರ್ಶನದಿಂದ ವಾಲಿಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್‌ಗಳಲೆಲ್ಲಾ ವಿನ್ನರ್‌ಗಳಾಗಿ ಆ ವರ್ಷದ ಸಮಗ್ರ ಚಾಂಪಿಯನ್ ಶಿಪ್ಪನ್ನು ನಮ್ಮ ಚಿಕ್ಕಮಗಳೂರು ನವೋದಯಕ್ಕೆ ಹೊತ್ತು ತಂದಿದ್ದೆವು!

ಹೀಗಾಗಿಯೇ ನಮ್ಮ ದೈಹಿಕ ಶಿಕ್ಷಕರು “ಹನ್ನೊಂದ್ನೆ ಕ್ಲಾಸಲ್ಲೇ ಚಾಂಪಿಯನ್ ಶಿಪ್ ತಂದೋರು ಹನ್ನೆರಡ್ನೆ ಕ್ಲಾಸಲ್ಲಿ ತರದೇ ಇರ್ತಾರಾ!?” ಎಂಬ ಲೆಕ್ಕಾಚಾರವನ್ನು ಶುರು ಹಚ್ಚಿಕೊಂಡಿದ್ದರು. ಅಲ್ಲದೇ ನಾಲ್ಕು ದಿನಗಳ ಮಟ್ಟಿಗೆ ಓದಿಗೆ ವಿರಾಮ ಕೊಟ್ಟು ಮಂಡ್ಯದ ಶಿವಾರಗುಡ್ಡ ಎಂಬಲ್ಲಿನ ನವೋದಯದಲ್ಲಿ ನಡೆಯಲಿದ್ದ ಕ್ಲಸ್ಟರ್ ಮೀಟ್‌ನಲ್ಲಿ ಭಾಗವಹಿಸಿರೆಂದು ಪುಸಲಾಯಿಸಲಾರಂಭಿಸಿದ್ದರು.

ಹನ್ನೊಂದನೆಯ ತರಗತಿ ಎಂಬುದನ್ನು ಪೂರ್ತಿ ಆಟದಲ್ಲಿಯೇ ಕಳೆದಿದ್ದ ನಾವುಗಳೋ ಹನ್ನೆರಡನೆಯ ತರಗತಿಯ ಆರಂಭಿಕ ದಿನಗಳಿಂದ ‘ಹೀನಾಮಾನ’ ಓದಿನಲ್ಲಿ ಮಗ್ನರಾಗಿದ್ದೆವು. ಹಾಗಾಗಿಯೇ ಒಬ್ಬರು ಮನಸ್ಸು ಮಾಡಿದರೆ ಮತ್ತೊಬ್ಬರು ಅರೆ ಮನಸ್ಸು ಮಾಡುವುದು ಮಾಡಿದೆವು. ಅಲ್ಲದೇ ದೈಹಿಕ ಶಿಕ್ಷಕರಿಗೆ ನಮ್ಮ ಸ್ಪಷ್ಟ ನಕಾರವನ್ನು ಸೂಚಿಸಿದೆವು.

ಅವರೋ ಈ ನಮ್ಮ ನಕಾರವನ್ನು ಸ್ವೀಕರಿಸಲು ಸಿದ್ಧರೇ ಇರಲಿಲ್ಲ. ಅದಕ್ಕೆಂದೆ ಆವರ ಪುಸಲಾಯಿಸುವಿಕೆಗೆ ಹೆಚ್ಚುವರಿ ಆಕರ್ಷಣೆಗಳನ್ನು ಸೇರಿಸಲಾರಂಭಿಸಿದ್ದರು.

ಅಂತಹ ಆಕರ್ಷಣೆಗಳಲ್ಲಿ “ನಾಲ್ಕ್ ದಿನ ಆಟ ಆಡಿ ಚಾಂಪಿಯನ್ ಶಿಪ್ ಗೆಲ್ಲಿ ಸಾಕು, ನೀವು ನವೋದಯದಲ್ಲಿ ಇರೋ ಅಷ್ಟು ದಿನಾನು ಮಾರ್ನಿಂಗ್ ಪೀಟಿ ಕ್ಯಾನ್ಸಲ್ ನಿಮಿಗೆ..” ಎಂಬುದು ಪ್ರಮುಖವಾಗಿತ್ತು.

ಸರಿ, ನವೋದಯ ಸೇರಿದ ದಿನದಿಂದಲೂ ಬೆಳಿಗ್ಗೆ ಐದಕ್ಕೆ ಎದ್ದು ಗಾಳಿ, ಮಳೆ, ಚಳಿ ಎನ್ನದೆ ಐದೂವರೆಯ ವೇಳೆಗಾಗಲೇ ಜಾಗಿಂಗ್ ಮಾಡುವ ಅನಿವಾರ್ಯತೆಯಲ್ಲಿದ್ದ ನಾವು “ಬೆಳ್ಗೆ ಜಾಗಿಂಗ್ ಇಲ್ಲ ಅಂದ್ರೆ ಆ ಟೈಮಲ್ಲಿ ಓದ್ತಾ ಕೂರ್ ಬಹುದು, ಇಲ್ಲ ರಾತ್ರಿಯಿಡೀ ಓದಿ ಬೆಳ್ಗೆ ನಿಧಾನಕ್ಕೆ ಏಳ್ ಬಹುದು” ಎಂದೆಲ್ಲಾ ಲೆಕ್ಕ ಹಾಕಿ ಪುಸಲಾಯಿಸುವಿಕೆಗೆ ಸಹಮತ ವ್ಯಕ್ತಪಡಿಸಿದೆವು.

ಮಂಡ್ಯದ ಶಿವಾರಗುಡ್ಡ ನವೋದಯದಲ್ಲಿನ ಕ್ರೀಡಾಕೂಟಕ್ಕೆ ಹೊರಟು ನಿಂತೆವು.

ಶಿವಾರಗುಡ್ಡದ ಹುಡುಗರೋ ಖೋ-ಖೋ ಮತ್ತು ಕಬಡ್ಡಿ ಆಟಗಳಲ್ಲಿ ಎಕ್ಸ್ಪರ್ಟ್‌ಗಳಾಗಿದ್ದರು. ಅವರ ಈ ಎಕ್ಸ್ಪರ್ಟ್ ಗಿರಿಯನ್ನು ನಾವು ಪ್ಲೇ ಗ್ರೌಂಡ್‌ನಲ್ಲಿ ಗಮನಿಸಿದೆವಾದರೂ ಅದು ನಮ್ಮನ್ನೇನು ಬಹುವಾಗಿ ಸೆಳೆಯಲಿಲ್ಲ. ನಮ್ಮನ್ನು ಬಹುವಾಗಿ ಸೆಳೆದದ್ದೋ ಬೆರಳುಗಳ ಮೇಲೆ ವಿಷ್ಣು ಚಕ್ರದಂತೆ ತಟ್ಟೆ ತಿರುಗಿಸುವ ಕಲೆಯಲ್ಲಿನ ಅವರ ಎಕ್ಸ್ಪರ್ಟ್‌ಗಿರಿ!

ಹೌದು, ಅವರುಗಳು ಮೆಸ್‌ನ ಸರದಿ ಸಾಲಿನಲ್ಲಿ ನಿಂತಾಗ, ಮೆಸ್‌ಗೆ ಹೋಗುವಾಗ, ಬರುವಾಗ ಬೆರಳುಗಳ ಮೇಲೆ ಅದೆಷ್ಟು ಚೆನ್ನಾಗಿ ತಟ್ಟೆ ತಿರುಗಿಸುತ್ತಿದ್ದರೆಂದರೆ ನೋಡುವವರು ಅದೇನೋ ಯಕ್ಷಿಣಿ ವಿದ್ಯೆಯನ್ನು ಅವರು ಪ್ರದರ್ಶಿಸುತ್ತಿರುವರೋ ಎಂಬಂತೆ ನೋಡುತ್ತಲೇ ಇರಬೇಕೇನಿಸುತಿತ್ತು.

ತೋರು ಬೆರಳಿನಿಂದ ಆರಂಭವಾಗುತ್ತಿದ್ದ ಅವರ ತಿರುಗಿಸುವಿಕೆ ನಡು ಬೆರಳಿಗೆ ದಾಟಿ ಅಲ್ಲಿಂದ ಉಂಗುರ ಬೆರಳು, ಕಿರು ಬೆರಳುಗಳನ್ನು ತಲುಪಿ ಅಲ್ಲಿಂದ ಮತ್ತೆ ರಿವರ್ಸ್ ಆರ್ಡರ್‌ನಲ್ಲಿ ತೋರು ಬೆರಳಿಗೆ ದಾಟುತ್ತಿತ್ತು. ಅಷ್ಟೇ ಅಲ್ಲ, ಹೀಗೆ ತಿರುಗಿಸುವಿಕೆ ಸಾಗಿರುವಾಗಲೇ ನಡು ನಡುವೆ ತಟ್ಟೆಯನ್ನು ಮೇಲಕ್ಕೆ ಹಾರಿಸಿ ಮತ್ತೆ ಚಕ್ಕನೆ ಬೆರಳ ಮೇಲೆಯೇ ಕೂರಿಸಿ, ತಿರುಗಿಸುವುದನ್ನು ಮುಂದುವರೆಸುತ್ತಿದ್ದರು. ಅದೂ ಗಂಟೆಗಳಷ್ಟು ಕಾಲ!

ಅವರ ಈ ಎಕ್ಸ್ಪರ್ಟ್‌ಗಿರಿಯನ್ನು ನಾವು ನಿಜಕ್ಕೂ ಅಚ್ಚರಿಯಿಂದಲೇ ಗಮನಿಸಿದೆವು! ಗಮನಿಸಿದರಷ್ಟೇ ಸಾಕೇ!? ವಿಷ್ಣು ಚಕ್ರದಂತೆ ತಟ್ಟೆ ತಿರುಗಿಸುವ ಆ ಕಲೆಯನ್ನು ನಮ್ಮದೂ ಆಗಿಸಿಕೊಳ್ಳಬೇಡವೇ!?

ಸರಿ, ಆ ನಿಟ್ಟಿನಲ್ಲಿ ಅಲ್ಲಿಯೇ ಆ ಕೂಡಲೇ ಕಾರ್ಯಪ್ರವೃತ್ತರೂ ಆದೆವು!

ಅಲ್ಲಿನ ಹುಡುಗರಿಂದಲೇ ಒಂದೆರಡು ತಟ್ಟೆಗಳನ್ನು ಪಡೆದು, ಮೊದಲು ಬಲಗೈಯ ತೋರು ಬೆರಳ ಮೇಲಿಡಿದು, ಎಡಗೈಯ ಸಪೋರ್ಟ್ ಪಡೆದು ನಿಧಾನವಾಗಿ ನಿಧಾನವಾಗಿ ತಟ್ಟೆ ತಿರುಗಿಸಲಾರಂಭಿಸಿದ್ದೆವು.

ತಟ್ಟೆಗಳೋ ಪದೇ ಪದೇ ಬೀಳುತಲಿದ್ದವು. ಹಾಗೆಂದು ತಟ್ಟೆ ತಿರುಗಿಸುವ ಈ ಯಕ್ಷಿಣಿ ವಿದ್ಯೆಯ ಮೋಡಿಗೆ ಸಿಲುಕಿದವರು ಸುಮ್ಮನಿರುತ್ತೇವೆಯೇ!?
“ಮರಳಿ ಯತ್ನವ ಮಾಡು” “ಪ್ರಯತ್ನದಿಂದ ಪರಮಾರ್ಥ” ಎಂಬೆಲ್ಲಾ ಗಾದೆಗಳನ್ನು ಮತ್ತೆ ಮತ್ತೆ ನೆನೆದು ಪ್ರಯತ್ನ ಮುಂದುವರೆಸಿದೆವು.

ಈ ಮೋಡಿಯ ಸೆಳೆತ ಹೇಗಿತ್ತೆಂದರೆ ಶಿಕ್ಷಕರು ನಾಲ್ಕು ಅಕ್ಷರ ಹೆಚ್ಚು ಬರೆಯಿರಿ ಎಂದರೆ ಬೆರಳೇ ಸವೆದು ಹೋಯಿತೇನೋ ಎನ್ನುವ ರೇಂಜಿಗೆ ಸಂಕಟ ಪಡುತ್ತಿದ್ದವರು ಕೂಡಾ ಬೆರಳು ನೋವು ಎಂದು ಉಸಿರೆತ್ತದೆ ಅಭ್ಯಾಸ ನಿರತರಾದರು.

ಇನ್ನೂ ಕ್ರೀಡಾ ಕೂಟದಲ್ಲಿ ಒಬ್ಬೊಬ್ಬರೂ ಒಂದೋ ಎರಡೋ ಈವೆಂಟ್‌ಗಳಲ್ಲಿ ಭಾಗವಹಿಸುತ್ತಿದುದರಿಂದ ಸಾಕಷ್ಟು ಸಮಯವೂ ನಮ್ಮ ಬಳಿ ಇತ್ತು. ಅಲ್ಲದೇ, ಕ್ರೀಡಾಕೂಟದ ಗದ್ದಲ, ಗೌಜಿನಲ್ಲಿ ನಮ್ಮ ತಟ್ಟೆ ಬಿದ್ದರೂ ಸಹ ಗಮನಿಸುವವರಾಗಲಿ, ಗದರಿಸುವವರಾಗಲಿ ಇರಲಿಲ್ಲ. ಹಾಗಾಗಿಯೇ ನಮ್ಮ ಪ್ರಯತ್ನವನ್ನು ಸರಾಗವಾಗಿ, ಸಾಂಗವಾಗಿ ಮುಂದುವರೆಸಿದೆವು.

ಇಂತಹ ಸತತ ಪ್ರಯತ್ನದ ಫಲವಾಗಿಯೇ ಕ್ರೀಡಾಕೂಟ ಮುಗಿಸಿ ನಮ್ಮ ನವೋದಯಕ್ಕೆ ಹಿಂದಿರುಗುವ ಮೂರು ಮತ್ತೊಂದು ದಿನಗಳ ಅವಧಿಯಲ್ಲಿ ನಾವು ಆ ವರ್ಷದ ಸಮಗ್ರ ಚಾಂಪಿಯನ್ ಶಿಪ್ ಗೆಲ್ಲುವ ಜೊತೆಗೆ ವಿಷ್ಣು ಚಕ್ರದಂತೆ ತಟ್ಟೆ ತಿರುಗಿಸುವ ಕಲೆಯಲ್ಲೂ ಒಂದು ಹಂತಕ್ಕೆ ಎಕ್ಸ್ಪರ್ಟ್‌ಗಳೇ ಆಗಿ ಬಿಟ್ಟಿದ್ದೆವು!

ಸರಿ, ಯಾವುದೇ ಒಂದು ಮಹತ್ ಕಲೆಯಲ್ಲಿ ಎಕ್ಸ್ಪರ್ಟ್‌ಗಳಾದರಷ್ಟೇ ಸಾಕೇ!? ಆ ಎಕ್ಸ್ಪರ್ಟ್ ಗಿರಿಯನ್ನು ಕಾಯ್ದುಕೊಳ್ಳಲು ಹೆಚ್ಚುವರಿ ಅಭ್ಯಾಸ ಮಾಡ ಬೇಡವೇ!? ಅದನ್ನು ಎಲ್ಲರೆದುರು ಪ್ರದರ್ಶಿಸಬೇಡವೇ!?

ಅದಕ್ಕಾಗಿಯೇ ನಾವು ನಮ್ಮ ಶಾಲೆ ತಲುಪಿದ ದಿನದಿಂದಲೇ ಸಮಯಾವಕಾಶ ಸಿಕ್ಕಾಗಲೆಲ್ಲಾ ತಟ್ಟೆ ತಿರುಗಿಸುವುದನ್ನು ಮುಂದುವರೆಸಿದೆವು. ಅಲ್ಲದೇ, ಡಾರ್ಮಿಟರಿಯಿಂದ ಮೆಸ್‌ವರೆಗೆ, ಮೆಸ್‌ನಿಂದ ಡಾರ್ಮಿಟರಿಯವರೆಗೆ ತಟ್ಟೆ ತಿರುಗಿಸುವ ಕಲೆಯನ್ನು ಪ್ರದರ್ಶಿಸುತ್ತಲೇ ಸಾಗಲಾರಂಭಿಸಿದೆವು. ಊಟಕ್ಕೆಂದು ಸಾಲಿನಲ್ಲಿ ನಿಂತಾಗಲೂ ಈ ಕಲಾ ಪ್ರದರ್ಶನ ತಟ್ಟೆಗೆ ಊಟ ಹಾಕಿಸಿಕೊಳ್ಳುವವರೆಗೆ ಮುಂದುವರೆಯುತ್ತಿತ್ತು.

ಅಲ್ಲದೇ, ಇದೀಗ ಈ ಕಲಾವೈಭವ ಇನ್ನೊಂದಷ್ಟು ಹೆಜ್ಜೆ ಮುಂದೆ ಹೋಗಿ ತಟ್ಟೆಯನ್ನು ಎಡಗೈಯಿಂದ ರಿಂಗ್ ಎಸೆದಂತೆ ಮೇಲಕ್ಕೆ ಎಸೆದು, ಅದೂ ತಟ್ಟೆ ಡಾರ್ಮಿಟರಿಯ ಇಲ್ಲವೇ ಮೆಸ್‌ನ ರೂಫ್ ಮುಟ್ಟಿ ಬರೋವಷ್ಟು ಮೇಲಕ್ಕೆ ಎಸೆದು ಬಲಗೈ ಬೆರಳ ಮೇಲೆ ಚಕ್ಕನೆ ಹಿಡಿದು ತಿರುಗಿಸುವಷ್ಟು ಇಂಪ್ರೂವೈಸ್ ಆಗಿಬಿಟ್ಟಿತ್ತು.

ಇನ್ನೂ ಒಂದೆರಡು ಗಂಟೆಗಳವರೆಗೆ ತಟ್ಟೆ ತಿರುಗಿಸುವುದೂ ಮಾಮೂಲಿ ರೆಕಾರ್ಡ್ ಆಗಿಬಿಟ್ಟಿತ್ತು. ಕೆಲವು ಭೂಪರು ಭಾನುವಾರದ ದಿನಗಳಲ್ಲಿ ಮೆಸ್‌ನಿಂದ ಮೆಸ್‌ವರೆಗೆ ಅಂದರೆ ಬೆಳಿಗ್ಗೆ ಮೆಸ್‌ನಲ್ಲಿ ತಿಂಡಿಯಾಗಿ ತಟ್ಟೆ ತೊಳೆದ ಕ್ಷಣದಿಂದ ತಟ್ಟೆ ತಿರುಗಿಸುವುದನ್ನು ಆರಂಭಿಸಿದರೆ ಮತ್ತೆ ಮಧ್ಯಾಹ್ನ ಊಟಕ್ಕೆಂದು ಮೆಸ್‌ಗೆ ಬರುವ ಕ್ಷಣದವರೆಗೆ ಸತತವಾಗಿ ತಟ್ಟೆ ತಿರುಗಿಸಿ, ದಾಖಲೆ ಬರೆದು ದಂತಕಥೆಗಳಾಗಿ ಬಿಟ್ಟಿದ್ದರು.

ಈ ಸಂಬಂಧವಾಗಿ ಕಾಂಪಿಟೇಷನ್‌ಗಳೂ ನಡೆಯಲಾರಂಭಿಸಿದವು. ಗೆದ್ದವರಿಗೆ ಬಹುಮಾನಗಳು ಆಯಾ ಆಯೋಜಕರಿಗೆ ಬಿಟ್ಟದ್ದವಾಗಿದ್ದವು. ಬೆಳಗಿನ ಇಡ್ಲಿ, ದೋಸೆಗಳು, ಸಂಜೆ ಬಿಸ್ಕತ್, ಬನ್‌ಗಳು, ರಾತ್ರಿ ಚಪಾತಿ, ಇತ್ಯಾದಿ, ಇತ್ಯಾದಿ. ಹೀಗೆ, ಬಹುತೇಕ ಮೆಸ್‌ನಲ್ಲಿ ಕೊಡುತ್ತಿದ್ದ ತಿಂಡಿ ತಿನಿಸುಗಳೇ ಬಹುಮಾನಗಳಾಗಿರುತ್ತಿದ್ದವು! ಕೆಲವೊಮ್ಮೆ, ಕಾಂಪೌಂಡ್ ಹೊರಗಿನ ನವೀನ್ ಅಂಕಲ್ ಅಂಗಡಿಯ ಹಾಲ್ಕೋವಾ, ಕಡ್ಲೆ ಮಿಠಾಯಿ, ಮೈಸೂರು ಪಾಕ್‌ಗಳೂ ಬಹುಮಾನಗಳಾಗಿ ಬಿಡುತ್ತಿದ್ದವು!

ಇನ್ನೂ ಇದೆಲ್ಲವೂ ನಮ್ಮ ಪ್ರೀತಿಯ ತಮ್ಮಂದಿರ ಕಣ್ಣಿಗೆ ಬೀಳಲು, ಅದರಿಂದ ಅವರು ಆಕರ್ಷಿತರೂ ಪ್ರಭಾವಿತರೂ ಪ್ರೇರಿತರೂ ಆಗಲು, ಹೆಚ್ಚು ಸಮಯವಾಗಲಿಲ್ಲ. ಈ ಯಕ್ಷಿಣಿ ವಿದ್ಯೆಯ ಸೆಳೆತ ಕಾಡ್ಗಿಚ್ಚಿನಂತೆ ಹಬ್ಬಿ, ಅವರನ್ನೂ ಸಂಪೂರ್ಣವಾಗಿ ಆವರಿಸಿಬಿಟ್ಟಿತ್ತು.

ಅವರೋ ನಮಗಿಂತ ಹೆಚ್ಚು ಉತ್ಸುಕರಾಗಿ, ಈ ವಿಷ್ಣುಚಕ್ರದಂತೆ ತಟ್ಟೆ ತಿರುಗಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು, ನಮ್ಮೆಲ್ಲಾ ರೆಕಾರ್ಡ್‌ಗಳನ್ನು ಅಳಿಸಿ ಹೊಸ ಹೊಸ ರೆಕಾರ್ಡ್‌ಗಳನ್ನು ಹುಟ್ಟು ಹಾಕಲು ಅಭ್ಯಾಸ ನಿರತರಾದರು. ಅದರ ಫಲವಾಗಿ ದಾರಿಯ ಉದ್ದಕ್ಕೂ, ಮೆಸ್‌ನ ತುಂಬೆಲ್ಲಾ ತಟ್ಟೆ ಬೀಳುವ ಢಣ್.. ಢಣ್.. ಸದ್ದು!

ಸಹಜವಾಗಿಯೇ ಇದರಿಂದ ನಮ್ಮ ಪ್ರೀತಿಯ ಗುರು ವೃಂದದವರು ರೋಸಿ ಹೋದರು. ಅಲ್ಲದೇ, ಈ ಅವಘಡಕ್ಕೆ ಮೂಲ ಕಾರಣಕರ್ತರಾದ ನಮ್ಮ ಮೇಲೆ ಕೋಪೋದ್ರಿಕ್ತರಾದುದೂ ಸುಳ್ಳಲ್ಲ.

ಆದರೇನು ಮಾಡುವುದು! ಅವರಾಗಲೇ ನಮ್ಮ ಇಂತಹ ಹತ್ತು ಹಲವು ಕಲೆಗಳನ್ನು ನೋಡಿ ನೋಡಿ ಸಾಕಾಗಿ “ಸದ್ಯ ಇವ್ರು ಹೋದ್ರೆ ಸಾಕು, ಇವ್ರು ಹೋದ್ಮೇಲೆ ಶಾಲೆ ಫುಲ್ ಸ್ಟ್ರಿಕ್ಟ್ ಮಾಡಿದ್ರಾಯ್ತು!” ಎಂಬ ಮನಸ್ಥಿತಿಯಲ್ಲಿ ಇದ್ದರಲ್ಲದೇ “ಏನಾದ್ರೂ ಮಾಡ್ಕೊಂಡ್ ಸಾಯಲಿ, ಹೋಗೋತನಕ ಇವರ ತಂಟೆಗೆ ಹೋಗೋದೇ ಬೇಡ…” ಎಂಬ ದೃಢ ನಿರ್ಧಾರವನ್ನೂ ಮಾಡಿದ್ದರಾದ್ದರಿಂದ ನಮಗೆ ಹೆಚ್ಚೇನು ಹೇಳ ಬರಲಿಲ್ಲ. ಹಾಗೆಂದು ಸುಮ್ಮನಿದ್ದು, ಸಹಿಸಿಕೊಂಡರೆಂದು ತಿಳಿಯ ಬೇಡಿ!

ಪಾಪ, ನಮ್ಮ ಪ್ರೀತಿಯ ತಮ್ಮಂದಿರು ತಟ್ಟೆ ತಿರುಗಿಸುವ ಪ್ರಯತ್ನದಿಂದಿರಲಿ ಅಪ್ಪಿತಪ್ಪಿ ಕೈ ಜಾರಿ ತಟ್ಟೆ ಕೆಳಗೆ ಬೀಳಿಸಿಕೊಂಡರೂ ‘ಕಂಡಲ್ಲಿ ಗುಂಡು’ ಎಂಬಂತೆ ಒಡನೆಯೇ ಒಂದಿನಿತು ಯೋಚಿಸದೇ ಮನಸೋ ಇಚ್ಛೆ ಅವರಿಗೆ ಥಳಿಸಿ ನಮ್ಮ ಮೇಲಿನ ಕೋಪವನ್ನೆಲ್ಲಾ ತಣ್ಣಗಾಗಿಸಿಕೊಳ್ಳುತ್ತಿದ್ದರು. ಆದರೂ ಅವರ ಈ ಕೋಪ ಸಂಪೂರ್ಣವಾಗಿ ತಣ್ಣಗಾದಂತೆ ಕಾಣಲಿಲ್ಲ. ತಣಿಯದ ಈ ಕೋಪದಲ್ಲಿ “ಪಾಪ! ನಮ್ಮ ಪ್ರೀತಿಯ ವಿದ್ಯಾರ್ಥಿಗಳು ವಿಷ್ಣು ಚಕ್ರದಂತೆ ತಟ್ಟೆ ತಿರುಗಿಸುವ ಯಕ್ಷಿಣಿ ವಿದ್ಯೆಯ ಮೋಡಿಗೆ ಸಿಲುಕಿಯೇ ಈ ರೀತಿ ಆಡುತ್ತಿರುವರು” ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು!

ಬದಲಾಗಿ, “ಈ ಬಡ್ಡಿಮಕ್ಕಳು, ಹೆಣ್ಮಕ್ಕಳ ಎದುರಿಗೆ ಬಿಲ್ಡಪ್ ತೋರಿಸಿ ಅವರನ್ನ ಮೋಡಿಗೆ ಸಿಲುಕಿಸೋಕೆ ಈ ರೀತಿ ಮೆಸ್ಸಲ್ಲಿ ವಿಷ್ಣುಚಕ್ರದಂತೆ ತಟ್ಟೆ ತಿರುಗಿಸೋದು!” ಎಂಬ ಅಪಾರ್ಥದ ತೀರ್ಮಾನಕ್ಕೂ ಬಂದುಬಿಟ್ಟಿದ್ದರು!

ಅದಕ್ಕಾಗಿಯೇ, “ಮುಂದೊಮ್ಮೆ ಈ ಗಂಡು ಮಕ್ಕಳಿಗೇ ಬೇರೆ, ಹೆಣ್ಣು ಮಕ್ಕಳಿಗೇ ಬೇರೆ ಮೆಸ್ ವ್ಯವಸ್ಥೆ ಮಾಡಬೇಕು” ಎಂಬ ತಮ್ಮ ದೂರಾಲೋಚನೆಯನ್ನು ತಕ್ಷಣವೇ ಕಾರ್ಯರೂಪಕ್ಕೆ ತರಲು ಹೊರಟಿದ್ದರು!

ನಾವು ಶಾಲೆ ಬಿಡುವ ವೇಳೆಗಾಗಲೇ “ಗರ್ಲ್ಸ್ ಮೆಸ್” ಕಟ್ಟಡದ ಕಾಮಗಾರಿ ಮುಗಿದು ಮುಂದಿನ ಶೈಕ್ಷಣಿಕ ಸಾಲಿನಿಂದ ಬಾಯ್ಸ್ ಮೆಸ್, ಗರ್ಲ್ಸ್ ಮೆಸ್ ಬೇರೆ ಬೇರೆಯಾಗಿದ್ದವು!