ಅಜ್ಜಿಯರು ತಮ್ಮ ಮಕ್ಕಳ ಮೇಲಿನ ಅಕ್ಕರೆಯಿಂದ ವಿವಿಧ ಕೆಲಸ ಮಾಡಿಕೊಂಡು, ಮೊಮ್ಮಕ್ಕಳ ಚಾಕರಿ ಮಾಡಿಕೊಂಡೊ ಅಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ಅಜ್ಜಂದಿರಿಗೆ ಅಲ್ಲಿ ಬೇಜಾರಾಗುತ್ತಿತ್ತು. ಕೆಲವರು ಅಲ್ಲಿನ ಜೀವನ ಶೈಲಿಯನ್ನು ಇಷ್ಟಪಡುತ್ತಿದ್ದರು ಕೂಡ. ಮತ್ತೆ ಕೆಲವರು ಅಲ್ಲಿಯೇ ಹಲವಾರು ಚಟುವಟಿಕೆಗಳನ್ನು ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದರು. ಒಟ್ಟಿನಲ್ಲಿ ಹವ್ಯಾಸಗಳು ಇರುವ ಯಾವುದೇ ಮನುಷ್ಯ ಕೂಡ ವೃದ್ಧಾಪ್ಯಕ್ಕೆ ಅಂಜುವುದಿಲ್ಲ. ಅವರು ಜಗತ್ತಿನ ಯಾವುದೇ ಮೂಲೆಯಲ್ಲೂ ಕೂಡ ಉತ್ಸಾಹದಿಂದಲೆ ಇರಬಲ್ಲರು. ಆರೋಗ್ಯವೊಂದು ಕೈಕೊಡಬಾರದು ಅಷ್ಟೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೊಂದನೆಯ ಬರಹ

ಹಿರಿಯರ ಬಗ್ಗೆ ಯಾವಾಗಲೂ ನನಗೆ ವಿಶೇಷ ಪ್ರೀತಿ ಹಾಗೂ ಗೌರವ ಇದೆ. ವಯಸ್ಸಿನ ಜೊತೆಗೆ ಅವರ ಮನಸ್ಸು ಕೂಡ ಮಾಗಿರುತ್ತದೆ, ಅಹಂ ತುಂಬಾ ಕಡಿಮೆ ಇರುತ್ತದೆ ಎಂಬ ಕಾರಣಗಳ ಜೊತೆಗೆ, ಮಾತಾಡಿಸಿದರೆ ಅವರು ಖುಷಿ ಪಡುತ್ತಾರೆ ಅಂತ ಅವರನ್ನು ಆಗಾಗ ಸಂಭಾಷಣೆಗೆ ಎಳೆಯುತ್ತಿರುತ್ತೇನೆ. ಈಗಿನ ಕಾಲದಲ್ಲಿ ಹಳ್ಳಿಯೇ ಆಗಲಿ ಬೆಂಗಳೂರೆ ಆಗಲಿ ಹಿರಿಯರ ಜೊತೆಗೆ ಕುಳಿತು ಮಾತಾಡುವ ಸಮಯವೇ ತುಂಬಾ ಜನರ ಬಳಿ ಇಲ್ಲ! ಅಥವಾ ಅವರ ಜೊತೆಗೆ ಮಾತಾಡುವುದೇ ವ್ಯರ್ಥ ಎಂಬ ಯೋಚನೆಯೂ ಹಲವರಿಗೆ ಇದೆ. ಹಾಗಂತ ನಾನು ಈ ವಿಷಯದಲ್ಲಿ ತುಂಬಾ ಶ್ರೇಷ್ಟ ಅಂತ ಹೇಳುತ್ತಿಲ್ಲ. ಇದ್ದುದರಲ್ಲೇ ಅವರ ಬಗ್ಗೆ ಕಾಳಜಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಆಗಾಗ ಮಾಡುತ್ತಿರುತ್ತೇನೆ.

ಇತ್ತೀಚೆಗೆ ಪೀಳಿಗೆಗಳ ನಡುವಿನ ಅಂತರ, ಜಗಳಗಳೂ ಕೂಡ ಅತಿರೇಕಕ್ಕೆ ಹೋಗುತ್ತಿವೆ ಅಂತ ಅನಿಸಿದೆ. ಹಿರಿಯರಿಗೆ ತಾವು ಕೂಡ ಒಮ್ಮೆ ಚಿಕ್ಕವರೆ ಆಗಿದ್ದೆವು ಎಂಬುದು ಮರೆತಿರುತ್ತದೆ; ಹಾಗೂ ಚಿಕ್ಕವರಿಗೆ ತಾವೂ ಮುಂದೊಮ್ಮೆ ಮುದುಕರಾಗುತ್ತೇವೆ ಎಂಬ ಅರಿವಿನ ಕೊರತೆಯೂ ಇದೆ!

ಮೊದಲಿನಿಂದಲೂ ನಾನು ಗಮನಿಸಿದ್ದು ಏನೆಂದರೆ, ಮುಂದಿನ ಪೀಳಿಗೆಗಾಗಿ ಆಸ್ತಿ ಮಾಡಿ ಇಡುವುದೇ ನಮ್ಮ ದೇಶದ ಹಿರಿಯರ ಧ್ಯೇಯ. ಆಸ್ತಿ ಮಾಡಿ ಇಟ್ಟಿಲ್ಲ ಅಂದರೂ ಬೈಯಿಸಿಕೊಳ್ಳಬೇಕು. ಮಾಡಿ ಇಟ್ಟರೂ ಒಂದು ಕಷ್ಟ. ಮಾಡಿದ್ದನ್ನು ಅನುಭವಿಸಿ ನಮ್ಮ ಅಪ್ಪ ಮಾಡಿಟ್ಟ ಅಂತ ಹೇಳುವವರು ಅಪರೂಪ. ಅದೇ ಕೆಟ್ಟದ್ದು ಎಲ್ಲವನ್ನೂ ಅಪ್ಪ ಅಮ್ಮನ ಮೇಲೆಯೇ ಹೊರಸುವುದು ತಮ್ಮ ಆದ್ಯ ಕರ್ತವ್ಯ ಎಂಬುದು ಮಕ್ಕಳ ಧೋರಣೆ. ಅಪ್ಪನಿಗೆ ಮಧುಮೇಹ ಇತ್ತು, ತನಗೂ ಬಂತು ಎಂಬರೆ ಹೊರತು ಅಪ್ಪ ಮಾಡಿಟ್ಟ ಬಂಗಾರ ತನಗೆ ಬಂತು ಎಂಬುವವರು ಕಡಿಮೆ. ಇಷ್ಟೇ ಮಾಡಿಟ್ಟ, ತನಗಿಂತ ಬೇರೆಯವರಿಗೆ ಜಾಸ್ತಿ ಕೊಟ್ಟುಬಿಟ್ಟ ಎಂಬ ಆರೋಪಗಳಿಗೆ ಹಿರಿಯರು ಯಾವಾಗಲೂ ತುತ್ತಾಗುತ್ತಾರೆ. ನಾನೇನೋ ಆಗಬೇಕು ಅಂದುಕೊಂಡಿದ್ದೆ, ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟ ನನ್ನಪ್ಪ ಅನ್ನುವವರೂ ಕೂಡ ಮುಂದೊಮ್ಮೆ ತನ್ನ ಅಪ್ಪನ ಆಸ್ತಿಯನ್ನು ಅನುಭವಿಸುವಾಗ ಅದೆಲ್ಲ ತನ್ನದೇ ಸಾಧನೆ ಅಂತ ಜಂಬ ಕೊಚ್ಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ.

ಇದೆಲ್ಲದರ ಗೊಡವೆಯೇ ಬೇಡ ಎಂಬಂತೆ ಇರುತ್ತಾರೆ ಅಮೆರಿಕೆಯ ಹಿರಿಯರು ಹಾಗೂ ಕಿರಿಯರು! ಅಲ್ಲಿ ಅಪ್ಪನ ಆಸ್ತಿ ಮಕ್ಕಳಿಗೆ ಹೋಗುವುದೇ ಇಲ್ಲವಲ್ಲ. ಮಕ್ಕಳು ಅಪ್ಪ ಅಮ್ಮಂದಿರನ್ನು ಭೇಟಿಯಾಗುವುದೇ ವಿಶೇಷ ದಿನಗಳಲ್ಲಿ. ಈಗಿನ ಕಾಲಘಟ್ಟದಲ್ಲಿ ಇದೆ ಒಂದು ರೀತಿಯಲ್ಲಿ ಒಳ್ಳೆಯ ಪದ್ಧತಿಯೇನೋ ಅನಿಸುತ್ತದೆ. ಮೊದಲೆಲ್ಲ ನಮ್ಮ ದೇಶದಲ್ಲಿ ಹೆಚ್ಚಿನ ಜನರು ಕೃಷಿ ಮಾಡುತ್ತಿದ್ದರು, ಆಗ ಎಲ್ಲರೂ ಒಟ್ಟಿಗೆ ಇರುತ್ತಿದ್ದರು. ಕ್ರಮೇಣ ಉದ್ಯೋಗಾವಕಾಶ ಹೆಚ್ಚುತ್ತಿದ್ದಂತೆ ಮಕ್ಕಳು ಬೇರೆ ಬೇರೆ ಕಡೆಗೆ ಹೋಗಿ ನೆಲೆಸಿದರು. ಹೀಗಾಗಿ ಇಲ್ಲಿಯೂ ಅಂತದೇ ಪರಿಸ್ಥಿತಿ ಬರುತ್ತಿದೆ. ಆದರೆ ಭಾರತಕ್ಕೆ ಹೋಲಿಸಿದರೆ ಅಮೆರಿಕೆಯ ಹಿರಿಯರು ತುಂಬಾ ಸ್ವತಂತ್ರರು. ಅಥವಾ ಮೊದಲು ಇಲ್ಲಿನಂತೆಯೇ ಇದ್ದ ಪರಿಸ್ಥಿತಿ ಕ್ರಮೇಣ ಈ ರೀತಿಯಾಗಿ ಬದಲಾಗಿದೆಯೇನೋ.

ಹಿರಿಯ ನಾಗರಿಕರಿಗೆ ಅಂತಲೇ ಸುಸಜ್ಜಿತವಾದ ಅಪಾರ್ಟ್ಮೆಂಟ್‌ಗಳೂ ಅಲ್ಲಿ ತುಂಬಾ ಇವೆ. ಎಲ್ಲ ಬಗೆಯ ಸೌಲಭ್ಯಗಳೂ ಕೂಡ ಅಲ್ಲಿ ಇರುತ್ತವೆ. ವೃದ್ಧಾಶ್ರಮ ಅನ್ನುತ್ತಲೇ ನಮಗೆ, ಕೈಲಾಗದ, ಮನೆಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಅಥವಾ ಮನೆಯಿಂದ ಹೊರ ದೂಡಲ್ಪಟ್ಟ ವೃದ್ಧರೇ ಇರುವಂತಹ ಜಾಗ ಅನಿಸುತ್ತದೆಯಾದರೂ ಅಲ್ಲಿನ ವೃದ್ಧಾಶ್ರಮಗಳು ಸ್ವಲ್ಪ ಭಿನ್ನ. ಹಿರಿಯರು ತಮ್ಮ ಸ್ವಂತ ನಿರ್ಧಾರದಿಂದ ಅಲ್ಲಿಗೆ ಹೋಗುವಂತಹ ತಾಣಗಳು ಅವು. ಅವು ತುಂಬಾ ವ್ಯವಸ್ಥಿತವಾಗಿ, ಸತಂತ್ರವಾಗಿ ಇರುವಂತಹ old age home ಗಳು. ಹಾಗಂತ ಅಲ್ಲಿನ ಎಲ್ಲ ವೃದ್ಧರೂ ಅಲ್ಲಿ ಹೋಗಿ ಇರುವುದಿಲ್ಲ. ತುಂಬಾ ಜನರು ತಮ್ಮದೇ ಸ್ವಂತ ಮನೆಯಲ್ಲಿ ತಮಗೆ ಬೇಕಾಗಿದ್ದನ್ನು ಮಾಡಿಕೊಂಡು ಆರಾಮವಾಗಿ ಇದ್ದಾರೆ. ನಮ್ಮ ಮನೆಯ ಕೆಳಗಡೆ ವಾಸವಾಗಿ, ಸಿಗರೇಟು ಸೇದಿಕೊಂಡು ಇದ್ದ ಅಜ್ಜಿಯ ಹಾಗೆಯೇ!

ಈಗೀಗ ನಮ್ಮ ಬೆಂಗಳೂರಿನಂತಹ ನಗರಗಳಲ್ಲೂ ಇಂತಹ old age home ಗಳು ತಲೆ ಎತ್ತಿವೆ. ಅವಕ್ಕೆ senior citizen home ಅನ್ನುತ್ತಾರೆ. ಇತ್ತೀಚೆಗೆ ನನ್ನ ಪರಿಚಯದ ಒಬ್ಬರು ಅಂತಹ ಒಂದು ಅಪಾರ್ಟ್ಮೆಂಟ್‌ಗೆ ತಮ್ಮ ಸ್ವಯಂ ಇಚ್ಛೆಯಿಂದ ಹೋಗುತ್ತಿದ್ದೇವೆ ಅಂತ ಹೇಳಿದರು. ಅವರ ಒಬ್ಬನೇ ಮಗ ವಿದೇಶದಲ್ಲಿ ಇದ್ದಾನೆ. ಅವನ ಬಗ್ಗೆ ಅವರಿಗೆ ಯಾವುದೇ complaint ಕೂಡ ಇಲ್ಲ. ಅವನು ತನ್ನ ಹೆಂಡತಿಯೊಂದಿಗೆ ಅವನಷ್ಟಕ್ಕೆ ಇರಲಿ. ನಮ್ಮಷ್ಟಕ್ಕೆ ನಾವಿಲ್ಲಿ ಇರುತ್ತೇವೆ ಎಂಬ ಅವರ ಮಾತು ಕೇಳಿ ಖುಷಿಯಾಯಿತು. ಅಂತಹ apartment ಗಳಲ್ಲಿ ತಿಂಗಳಿಗೆ ಇಷ್ಟು ಅಂತ ದುಡ್ಡು ತೆಗೆದುಕೊಳ್ಳುತ್ತಾರೆ. ಯಾವ ರೀತಿಯ ಮನೆ ಬೇಕು ಅದರ ಮೇಲೆ ಬಾಡಿಗೆ ಹೆಚ್ಚು ಕಡಿಮೆ ಆದೀತು. ವೈದ್ಯಕೀಯ ಸೇವೆಯಿಂದ ಹಿಡಿದು ಎಲ್ಲಾ ರೀತಿಯ ಸುಖ ಸೌಕರ್ಯಗಳು ಅಲ್ಲಿ ದೊರೆಯುತ್ತವಂತೆ. ಯಾವುದೇ ರೀತಿಯ ದುಗುಡಗಳು ಹಿರಿಯರಿಗೆ ಅಲ್ಲಿ ಕಾಡಲಾರವು. ವೃದ್ಧರಿಗೆ ಅಂತಹ ಒಂದು ಸೌಲಭ್ಯ ನಮ್ಮ ದೇಶದಲ್ಲೂ ಇರುವುದು ಒಳ್ಳೆಯ ಬೆಳವಣಿಗೆಯೇ ಹೌದು. ಇದೆ ರೀತಿಯ ಸೌಲಭ್ಯ ಹಳ್ಳಿಗಳಿಗೂ ಬೇಕು ಅನಿಸುತ್ತದೆ. ಇಲ್ಲಿನ ಹಳ್ಳಿಗಳಲ್ಲಿ ಎಷ್ಟೋ ಮನೆಗಳಲ್ಲಿ ಬರಿ ವೃದ್ಧರೆ. ಅವರಿಗಾಗಿ ಒಂದು ಇಂತಹ ವ್ಯವಸ್ಥೆ ಮಾಡಬೇಕು ಎಂಬುದು ನನ್ನ ಕನಸು. ನಾನು ವೃದ್ಧನಾಗುವ ಒಳಗಾದರೂ ಅದನ್ನು ಮಾಡಬೇಕು ಅಂದುಕೊಂಡಿರುವೆ ನೋಡೋಣ!

ಆದರೆ ಅಮೆರಿಕೆಗೆ ತಮ್ಮ ಮಕ್ಕಳನ್ನು ಭೇಟಿಯಾಗಲು ಬರುವ ನಮ್ಮ ದೇಸಿ ಹಿರಿಯರದು ಇನ್ನೊಂದು ಕತೆ. ಹಲವಾರು ಕುಟುಂಬಗಳು ಎಷ್ಟೋ ವರ್ಷಗಳಿಂದ ಅಲ್ಲಿಯೇ ನೆಲೆಸಿದವರಾದರೆ ಅದು ಬೇರೆ. ಇತ್ತೀಚೆಗೆ ಅಮೆರಿಕೆಗೆ ಹೋದ ಮಕ್ಕಳನ್ನು ನೋಡಲು ಬರುವ ಹಿರಿಯರು ಅಲ್ಲಿಗೆ ಮೊದಲ ಬಾರಿಗೆ, ಬರಿ ಭೇಟಿಯಾಗಲು ಅಂತಲೆ ಹೋಗಿರುವವರಾದರೆ ಖುಷಿ ಖುಷಿಯಾಗಿ ಇರುತ್ತಾರೆ. ಆಗಾಗ ಅಮೆರಿಕೆಗೆ ಹೋಗುವ ಹಿರಿಯರಲ್ಲಿ ಅನೇಕರು ಅಲ್ಲಿ ತಮಗೆ ತುಂಬಾ ಬೇಜಾರಾಗುತ್ತೆ ಅಂತ ನನ್ನ ಬಳಿ ಅವಲತ್ತು ಹೇಳಿಕೊಳ್ಳುತ್ತಿದ್ದರು. ಯಾರೂ ಮಾತಾಡಲು ಸಿಗೋದಿಲ್ಲ, ತಮ್ಮ ತಮ್ಮ ರೂಮಿನಲ್ಲಿ ಕುಳಿತುಕೊಂಡುಬಿಡುತ್ತಾರೆ, ಅದೂ ಅಲ್ಲದೆ ನಮಗೆ ಮಾಡಲು ಏನು ಕೆಲಸ ಇಲ್ಲ, ಭಾರತಕ್ಕೆ ವಾಪಸ್ಸು ಹೋದರೆ ಸಾಕಾಗಿದೆ ಅನ್ನುತ್ತಿದ್ದರು. ಹಾಗಂತ ಎಲ್ಲರೂ ಹಾಗೆ ಅಲ್ಲ. ಮಗಳ ಬಾಣಂತನಕ್ಕೆ ಅಂತಲೇ ಕೆಲವರು ಬರುತ್ತಿದ್ದರು. ಇನ್ನೂ ಕೆಲವು ಅನಿವಾಸಿಗಳು ತಮ್ಮ ಅಪ್ಪ ಅಮ್ಮಂದಿರನ್ನು ಬೇಸಿಗೆಯಲ್ಲಿ ಶಾಲೆಗೆ ರಜೆ ಇರುವ ಸಮಯದಲ್ಲಿ ಮೊಮ್ಮಕ್ಕಳ day care ಗೆ ಅಂತಲೇ ಕರೆಸುತ್ತಿದ್ದರು. ಯಾಕೆಂದರೆ ಅಲ್ಲಿನ day care ಗಳು ತುಂಬಾ ದುಬಾರಿ!

ಅಜ್ಜಿಯರು ತಮ್ಮ ಮಕ್ಕಳ ಮೇಲಿನ ಅಕ್ಕರೆಯಿಂದ ವಿವಿಧ ಕೆಲಸ ಮಾಡಿಕೊಂಡು, ಮೊಮ್ಮಕ್ಕಳ ಚಾಕರಿ ಮಾಡಿಕೊಂಡೊ ಅಲ್ಲಿ ಸಮಯ ಕಳೆಯುತ್ತಿದ್ದರು. ಆದರೆ ಅಜ್ಜಂದಿರಿಗೆ ಅಲ್ಲಿ ಬೇಜಾರಾಗುತ್ತಿತ್ತು. ಕೆಲವರು ಅಲ್ಲಿನ ಜೀವನ ಶೈಲಿಯನ್ನು ಇಷ್ಟಪಡುತ್ತಿದ್ದರು ಕೂಡ. ಮತ್ತೆ ಕೆಲವರು ಅಲ್ಲಿಯೇ ಹಲವಾರು ಚಟುವಟಿಕೆಗಳನ್ನು ಮಾಡಿಕೊಂಡು ಖುಷಿಯಾಗಿ ಇರುತ್ತಿದ್ದರು. ಒಟ್ಟಿನಲ್ಲಿ ಹವ್ಯಾಸಗಳು ಇರುವ ಯಾವುದೇ ಮನುಷ್ಯ ಕೂಡ ವೃದ್ಧಾಪ್ಯಕ್ಕೆ ಅಂಜುವುದಿಲ್ಲ. ಅವರು ಜಗತ್ತಿನ ಯಾವುದೇ ಮೂಲೆಯಲ್ಲೂ ಕೂಡ ಉತ್ಸಾಹದಿಂದಲೆ ಇರಬಲ್ಲರು. ಆರೋಗ್ಯವೊಂದು ಕೈಕೊಡಬಾರದು ಅಷ್ಟೇ!

*****

ವಯಸ್ಸಿನಲ್ಲಿ ನನಗಿಂತ ತುಂಬಾ ದೊಡ್ಡವಳಾದ ನನ್ನ ಅಕ್ಕ ವಿದ್ಯಾ (ನನ್ನ ದೊಡ್ಡಪ್ಪನ ಮಗಳು) ಅಮೆರಿಕೆಯಲ್ಲಿಯೇ ಇರುತ್ತಾಳೆ. ಅವಳು ಅವಳ ಯಜಮಾನರೂ ಕೂಡ ತುಂಬಾ ಸ್ವತಂತ್ರವಾಗಿ ತಮ್ಮಷ್ಟಕ್ಕೆ ತಾವು ಇದ್ದಾರೆ. ಅವಳು ನನ್ನ ಅಮ್ಮನ ತೀರಾ ಆಪ್ತ ಸ್ನೇಹಿತೆ ಕೂಡ. ಅವಳ ಬಗ್ಗೆ ಗೊತ್ತಿತ್ತು ಹಾಗೂ ಬರಿ ಫೋಟೊದಲ್ಲಿ ನೋಡಿದ್ದೆನೆ ಹೊರತು ಭೇಟಿಯಾಗುವ ಪ್ರಸಂಗವೇ ಬಂದಿರಲಿಲ್ಲ. ಯಾಕಂದರೆ ನಾನು ಹುಟ್ಟುವ ಸಮಯದಲ್ಲೇ ಅವಳು ಕ್ರಿಶ್ (ಕೃಷ್ಣ ಎಂಬ ಅವರ ಸುಂದರ ಹೆಸರು ಅಮೆರಿಕನ್ನರ ನಾಲಿಗೆಯಲ್ಲಿ ಹೇಗೆ ಹೊರಳೀತು?) ಅವರನ್ನು ಮದುವೆಯಾಗಿ ಅಮೆರಿಕೆಗೆ ಹೋಗಿದ್ದಳು.

ಆಗೆಲ್ಲ ಈಗಿನಂತೆ social media ಇರಲಿಲ್ಲ. ಹೀಗಾಗಿ ನನ್ನ ಅಮ್ಮನ ಜೊತೆಗೆ ಆಮೇಲೆ ಅವಳ ಸಂಪರ್ಕ ಕೂಡ ಇರಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಅವಳು ಇದೆ social media ಮೂಲಕ ನನ್ನನ್ನು ಹುಡುಕಿ ನನ್ನ ಜೊತೆಗೆ ಅಮೆರಿಕೆಯಿಂದಲೇ ಮಾತಾಡಿದ್ದಳು! ನನಗೆ ಅವಳ ಜೊತೆಗೆ ಮಾತಾಡಿದ್ದು ನನ್ನ ಅಮ್ಮನ ಜೊತೆಗೆ ಮಾತಾಡಿದಷ್ಟೇ ಖುಷಿ ಆಗಿತ್ತು. ಅವಳ ಬಳಿ ನನ್ನ ಅಮ್ಮನ ಬಗ್ಗೆ ಸವಿ ನೆನಪುಗಳ ಕಂತೆಯೇ ಇತ್ತಲ್ಲ. ಅವಳ ಜೊತೆಗೆ ಮುಂದೆ ಎಷ್ಟೋ ಸಲ ಗಂಟೆಗಟ್ಟಲೆ ಮಾತಾಡಿದ್ದೆ. ಹೀಗಾಗಿ ಅವಳನ್ನು ಒಮ್ಮೆ ಅಮೆರಿಕೆಗೆ ಹೋಗಿ ಭೇಟಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಈಗ ಅಲ್ಲಿಗೆ ಹೇಗೂ ಬಂದಾಗಿತ್ತಲ್ಲ. ಅವಳನ್ನು ಭೇಟಿಯಾಗಲು ಕ್ಯಾಲಿಫೋರ್ನಿಯಾಗೆ ಹೋಗಬೇಕು ಅನಿಸಿತು. ನಾವಿದ್ದದ್ದು ಒಂದು ಕಡೆ, ಅವಳು ಇದ್ದದ್ದು ಇನ್ನೊಂದು ಕಡೆ. ಅಮೆರಿಕೆಯ ವಿಸ್ತಾರ ಎಷ್ಟಿದೆಯೆಂದರೆ, ಹೀಗೆ ಹೋಗಬೇಕೆಂದರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋದಷ್ಟೇ ಸಮ. ಅವಳಿಗೆ ನಾವು ಬರುತ್ತೇವೆ ಅಂತ ಹೇಳಿದಾಗ ಬಹಳ ಖುಷಿ ಪಟ್ಟಳು. ಆಗ ಕ್ರಿಸ್ಮಸ್ ರಜೆ ಕೂಡ ಇತ್ತು. ಅದರ ಜೊತೆಗೆ ಇನ್ನೂ ಒಂದು ವಾರ ಸೇರಿಸಿ ಹತ್ತು ದಿನಗಳ ರಜೆ ಹಾಕಿದೆ! ನೀನು ಹಿಂಗ ತಿರುಗ ಮುರುಗ ರಜಾ ಹಾಕಿದಿ ಅಂದ್ರ, ನಿನ್ನ ಕಂಪೆನಿಯವರು ನಿನ್ನ ವಾಪಸ್ಸು ಕಳಸತಾರ ಮಗನ.. ಅಂತ ಚಂದ್ರು ತಮಾಷೆ ಮಾಡಿದ್ದ. ಕಳಿಸಿದರೆ ನನ್ನಷ್ಟು ಖುಷಿ ಪಡುವವರು ಯಾರೂ ಇರಲಿಲ್ಲ! ಅವಳ ಊರಿಗೆ ಹೋಗಲು ವಿಮಾನವೊಂದರಲ್ಲಿ ಟಿಕೆಟ್ ಬುಕ್ ಮಾಡಿಸಿದೆ. ಓಮಾಹದಿಂದ ಅಲ್ಲಿಗೆ ಹೋಗಲು ಕನಿಷ್ಟ ಮೂರು ಗಂಟೆಗಳ ಪ್ರಯಾಣ. ಅಲ್ಲಿನ ಸ್ಥಳೀಯ ವಿಮಾನಗಳಂತೂ ನಮ್ಮೂರಿನಲ್ಲಿನ ಬಸ್ಸುಗಳಂತೆಯೇ ಓಡಾಡುತ್ತವೆ. ಈಗಾಗಲೇ ಎಷ್ಟೋ ಮೈಲುಗಳಷ್ಟು ಹಾರಾಟ ನಡೆಸಿ ತೀರಾ ಹಳೆಯ ವಿಮಾನಗಳ ಹಾಗೆಯೇ ಕಾಣುತ್ತಿದ್ದವು. ನಮ್ಮನ್ನು ಸುರಕ್ಷಿತವಾಗಿ ಮುಟ್ಟಿಸಿದರೆ ಸಾಕು ಅನ್ನುತ್ತ ದೇವರನ್ನು ನೆನೆಸಿಕೊಂಡು ಕುಳಿತೆವು. Take off ಆದಮೇಲೆ ಗಗನ ಸಖಿ ಎಲ್ಲರಿಗೂ ತಿನ್ನಲು ಉಚಿತ ಶೇಂಗಾ ಪೊಟ್ಟಣಗಳನ್ನು ವಿತರಿಸಿದಳು..!

(ಮುಂದುವರಿಯುವುದು..)
(ಹಿಂದಿನ ಕಂತು: ಹೌಡಿ ನೇಬರ್ಸ್‌!)