Advertisement
ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ಈ ದಿನದ ಕವಿತೆ

ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ಈ ದಿನದ ಕವಿತೆ

ಎಸಿ ಬಸ್ಸಿನ ಗುಣ
ಸುಲಭಕ್ಕೆ ಗೋಚರಿಸದ
ಪ್ರಮೇಯ
ಸಮೀಕರಣಕ್ಕೆ ಸಾಲದು
ಗಣಿತದ ಸೂತ್ರಗಳ ಹಾಸುಹೊಕ್ಕು

ಒಳಹೊಕ್ಕಾಗಲೇ
ನೆತ್ತಿ ನೇವರಿಸುವ ತಂಪು
ಉಸಿರಿಗೊಂದು ಮಂದ್ರ ಲಯ
ಮನಸಿಗೊಂದು ಸ್ಥಾಯೀಭಾವದ ಸ್ಥಾಪನೆ

ಕಿಟಕಿಗಳೋ
ಬೃಹದಾಕಾರ
ನಿಚ್ಚಳ ನೀಲಿ ಆಕಾಶದ ದೊಡ್ಡ ತುಂಡನ್ನೇ
ಕನಸು ನೇಯಲು
ಕುಸುರಿ ಮಾಡಲು
ಚಾದರದಂತೆ ಒದಗಿಸುವ
ಮಹಾನುಭಾವ ಬಸ್ಸಿನ
ಮನಸು ಸುಪ್ತ ಕ್ಯಾಪಿಟಲಿಸಂನ ಛಾಯಾಪಾತ್ರೆ

ಸುತ್ತಲಿನ ಗಾಜಿನ ಪರದೆ
ವಿಸ್ತಾರದ ವಿರುದ್ಧ
ಸಂಕುಚಿತ
ಬೆಳಕಿಗೆ ಮಾತ್ರ ಒಳಬರುವ ಅನುಮತಿ
ಗಾಳಿ, ಮಳೆಗೆ ತಡೆ, ಇಲ್ಲ ಸಮ್ಮತಿ

ಕೆಸರಿನ ಪಾದ, ದುಡಿಮೆಯ ಬೆವರ ಗಂಧಕ್ಕೆ ಜಾಣಕುರುಡು.
ದ್ವೀಪದಂತಹ ಜನರಿಗೆ
ತಮ್ಮದೇ ಬಬಲ್ ಎನಿಸುವ
ಈ ಗಾಲಿಯ ಮೇಲಿನ ಜಗತ್ತು,
ಹೊರಹಾಕುವ ಬಿಸಿಗಾಳಿಗೆ ಬಿಗಿಮೌನದ ಕಟ್ಟಪ್ಪಣೆ!

About The Author

ಕ್ಷಮಾ ವಿ. ಭಾನುಪ್ರಕಾಶ್

ವಿಜ್ಞಾನ ಶಿಕ್ಷಕಿ, ಲೇಖಕಿ ಹಾಗೂ ಸಂವಹನಕಾರರಾದ ಕ್ಷಮಾ ಭಾನುಪ್ರಕಾಶ್, ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆ, ವಿಜ್ಞಾನ, ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧಿತ ಯೋಜನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಸಂವಹನ ವೇದಿಕೆಯಾದ Research Matters ನಲ್ಲಿ ಕನ್ನಡ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  i wonder ವಿಜ್ಞಾನ ನಿಯತಕಾಲಿಕೆಗೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಇಂಗ್ಲಿಷ್–ಕನ್ನಡ ಅನುವಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯ ನಿತ್ಯ ವಿಜ್ಞಾನ ಮತ್ತು ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗೆ ಲೇಖಕಿ ಹಾಗೂ ನಿರೂಪಕಿಯಾಗಿ ವಿಜ್ಞಾನ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ 800ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ವಿಜ್ಞಾನಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಇವರ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಗೌರು ಭಟ್ ಪ್ರಶಸ್ತಿ ಲಭಿಸಿದೆ. ಕನ್ನಡದಲ್ಲಿ ಎಂಟು ವಿಜ್ಞಾನ ಪುಸ್ತಕಗಳು ಹಾಗೂ ಒಂದು ಕವನ ಸಂಕಲನದ ಲೇಖಕಿ. ಇವರ 'ಜೀವಿಜ್ಞಾನ' ಕೃತಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ೨೦೨೫-೨೬ನೆ ಸಾಲಿನ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ ಲಭಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI) ಸಾಧನಗಳ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿರುವ ಇವರು ರಂಗಭೂಮಿ ಕಲಾವಿದೆ ಮತ್ತು ಕಂಠದಾನ ಕಲಾವಿದೆಯೂ ಹೌದು.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ