ಮಕ್ಕಳನ್ನು, ಅಮೃತಾರನ್ನು ಸ್ಕೂಟರಿನಲ್ಲಿ ಕೂರಿಸಿ ಓಡಿಸಿದ್ದಕ್ಕೆ ಚಲಾನ್ ಆಗಿ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದರು ಇಮರೋಜ್. ಅದಕ್ಕೆ ಯೋಚಿಸಿ ಇಬ್ಬರೂ ಹಣ ಕೂಡಿಸಿ ಅಮೃತಾ ಐದು ಸಾವಿರ, ಇಮರೋಜ್ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡರಂತೆ. ಹೀಗೆ ಬದುಕಿನುದ್ದಕ್ಕೂ ಇಬ್ಬರೂ ಪ್ರತಿಯೊಂದನ್ನೂ ಸಮಭಾವದಿಂದ ಹಂಚಿಕೊಂಡು ಬಾಳಿದ್ದಕ್ಕೆ ನಾಲ್ಕು ದಶಕಗಳು ನಾಲ್ಕು ದಿನಗಳಂತೆ ಕಳೆದುಹೋದವು – ಎನ್ನುತ್ತಾರೆ ಇಮರೋಜ್. ಪ್ರಾಪಂಚಿಕ ಆಮಿಷಗಳು ಯಾವತ್ತೂ ಇಬ್ಬರನ್ನು ಕಾಡಲಿಲ್ಲ.
ಪಂಜಾಬಿನ ಖ್ಯಾತ ಕವಯತಿ ಅಮೃತಾ ಪ್ರೀತಂ ಹುಟ್ಟುಹಬ್ಬ ಇಂದು. ಅವರ ಸಂಗಾತಿ ಇಮ್ರೋಜ್ರ ಕಣ್ಣುಗಳಲ್ಲಿ ಅಮೃತಾರ ಬದುಕು ಹೇಗಿತ್ತು ಎಂಬುದರ ಕುರಿತು ರೇಣುಕಾ ನಿಡಗುಂದಿ ಬರಹ ನಿಮ್ಮ ಓದಿಗೆ
‘ಮೈ ತುಮ್ಹೆ ಫಿರ್ ಮಿಲೂಂಗಿ…..’
‘ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ; ನಾ ಯಾವ ಸ್ವರೂಪದಲ್ಲಾದರೂ ನಿನಗೇ ದಕ್ಕುವೆ’ ಎಂದು ತಮ್ಮ ಸಂಗಾತಿ ಇಮ್ರೋಜ್ರಿಗೆ ಮಾತುಕೊಟ್ಟುಹೋದ ಅಮೃತಾ ಪ್ರೀತಂ ಹೆಸರು ಯಾರಿಗೆ ಗೊತ್ತಿಲ್ಲ! ಸಮಕಾಲೀನ ಭಾರತದ ಶ್ರೇಷ್ಠ ಕವಿಯತ್ರಿ, ಕಾದಂಬರಿಕಾರ್ತಿ, ಕತೆಗಾರ್ತಿಯಾಗಿ ಅಮೃತಾ ಪ್ರೀತಂ ಅಗ್ರಗಣ್ಯರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಪಡೆದ ಪಂಜಾಬಿನ ಮೊದಲ ಬರಹಗಾರ್ತಿ. ಭಾರತ ಹಾಗೂ ಪಾಕಿಸ್ತಾನದ ಸರಹದ್ದಿನಾಚೆ, ಸಪ್ತಸಾಗರದಾಚೆಗೂ, ಸಮಾನವಾಗಿ ಅಪಾರ ಮೆಚ್ಚುಗೆಯನ್ನು, ಕೀರ್ತಿ- ಗೌರವಗಳನ್ನು ಪಡೆದವರು.
ಅವರ ನೆನಪಿನೊಂದಿಗೆ ಅವರ ಖಾಸಗಿ ಬದುಕಿನ ಅನೇಕ ಪುಟಗಳು ಎದುರಿಗೆ ಕೂತು ಮಾತನಾಡುತ್ತವೆ. ಬಹುಚರ್ಚಿತ ಅಮೃತಾ – ಸಾಹಿರ್ ಲೂಧಿಯಾನ್ವಿ ಪ್ರೇಮ ಒಂದುಕಾಲಕ್ಕೆ ಉತ್ಕಟಾವಸ್ಥೆಯಲ್ಲಿದ್ದು ಬಹಳಷ್ಟು ಕುತೂಹಲದ ಅಲೆಗಳನ್ನೆಬ್ಬಿಸಿತ್ತು. ಸಾಹಿರ್ ಅಷ್ಟೇ ಅಲ್ಲ ಶಿವಕುಮಾರ್ ಬಟ್ಲವಿಯಂತ ಖ್ಯಾತ ಪರಿಚಿತ ಪಾಕಿಸ್ತಾನಿ ಕವಿಗಳು, ಪಾಕಿಸ್ತಾನಿ ಆಕಾಶವಾಣಿ ಗೆಳೆಯ ಸಾಜಿದ್ ಹೈದರ್, ಪಂಜಾಬಿ ಕವಿ ಮೋಹನ್ ಸಿಂಗ್ ಮುಂತಾದವರು ಅಮೃತಾರಿಗೆ ಒಳ್ಳೇ ಗೆಳೆಯರಾಗಿದ್ದು ಬಹುತೇಕವಾಗಿ ಆಕೆ ಜನರ ಕೆಟ್ಟ ಟೀಕೆ ಟಿಪ್ಪಣಿಗಳಿಗೆ ಎದುರಾಗಬೇಕಾಯಿತು. ಆದರೆ ಅಮೃತಾ ಯಾವತ್ತೂ ಸ್ನೇಹದಲ್ಲಾಗಲಿ- ಪ್ರೇಮದಲ್ಲಾಗಲಿ ಬೂಟಾಟಿಕೆಯನ್ನು ತೋರಿದವರಲ್ಲ. ಬದುಕಿನುದ್ದಕ್ಕೂ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ನಿಷ್ಠೆಯೆಂಬಂತೆ ಪಾಲಿಸುತ್ತಿದ್ದರು. ಹೃದಯಕ್ಕೆ ಹತ್ತಿರವಾದವರನ್ನು ನಿಸ್ವಾರ್ಥವಾಗಿ ಪ್ರೀತಿಸಿದರು.
ಸ್ವಾತಂತ್ರ್ಯಪೂರ್ವದ ಪಂಜಾಬಿನ ಗುಜರನ್ವಾಲಾದಲ್ಲಿ ಅಗಸ್ಟ್ 31, 1919 ರಲ್ಲಿ ಹುಟ್ಟಿದ ಅಮೃತಾ ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡರು. ತಂದೆ ನಂದ್ ಸಾಧೂ (ಕರತಾರ್ ಸಿಂಗ್) ಸ್ವತಃ ಕವಿಯಾಗಿದ್ದು ಮಗಳಿಗೂ ಕವಿತೆ ಕಟ್ಟಲು ಪ್ರೋತ್ಸಾಹಿಸುತ್ತಿದ್ದರಂತೆ. ಅದೆಲ್ಲ ದೇವರ ಕೀರ್ತನೆ, ಧಾರ್ಮಿಕ ಭಾವದವು. ನಂದ ಸಾಧು ಅವರ ಕಟ್ಟಾ ಸಾಂಪ್ರದಾಯಿಕ ಹಾಗೂ ಧಾರ್ಮಿಕ ನಿಗರಾನಿಯಲ್ಲಿ ತುಂಬಾ ಕಟ್ಟುನಿಟ್ಟಿನಲ್ಲಿ ಬಾಲ್ಯ ಕಳೆದ ಅಮೃತಾ ಮುಂದೆ ತಮ್ಮ ಬದುಕನ್ನು ಯಾವುದೇ ಧಾರ್ಮಿಕ ಕಟ್ಟುಪಾಡುಗಳಲ್ಲಿ ಕಟ್ಟಿಹಾಕಿಕೊಳ್ಳದೇ ತನಗೆ ಒಳಿತೆನಿಸಿದ ಹಾದಿಯನ್ನು ಆರಿಸಿಕೊಂಡಿದ್ದು ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ.
ಅಂದಿನ ಸ್ವಾತಂತ್ರ್ಯಪೂರ್ವದ ಹಾಗೂ ಸ್ವಾತಂತ್ರ್ಯೋತ್ತರದ ವಿಭಜನೆಯ ಕರಾಳ ಭಾರತದ ಹಿಂಸಾಚಾರದ ಇತಿಹಾಸ ಅಮೃತಾ ಪ್ರೀತಮ್ ಅವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆಯರು ಹಿಂದುಳಿದಿದ್ದ, ತೀರಾ ಕಟ್ಟುಪಾಡುಗಳಿದ್ದ ಕಾಲಘಟ್ಟದಲ್ಲಿ ಅಮೃತಾರ ಬದುಕು ಬಾಲ್ಯದಿಂದಲೂ ಸಂಘರ್ಷಮಯವಾಗಿದ್ದು ಮುಂದೆ ಆಕೆಗೆ ಬದುಕೇ ಬಹಳಷ್ಟನ್ನು ಕಲಿಸಿತು. ಇಷ್ಟವಿಲ್ಲದ್ದನ್ನು ಪ್ರತಿಭಟಿಸುವ, ಬೇಡದ್ದನ್ನು ಪ್ರತಿರೋಧಿಸುವ ಹಾಗೂ ತನ್ನದೇ ಶರತ್ತು, ಸಿದ್ಧಾಂತಗಳ ಮೇಲೆ ಇಚ್ಚಿತ ಬದುಕನ್ನು ರೂಪಿಸಿಕೊಂಡ ಅಗಾಧವಾದ ಆತ್ಮಸ್ಥೈರ್ಯದ ಮಹಿಳೆ.
ಜೀವನವೆಂದರೆ ಪ್ರೀತಿಯ ಹುಡುಕಾಟ! ನಿರಂತರ ಅನ್ವೇಷಣೆ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್ ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಪತಿ ಪ್ರೀತಂ ಸಿಂಗ್ ಅವರೊಂದಿಗೆ ಇನ್ನು ಸಾಧ್ಯವಿಲ್ಲವೆನ್ನುವ ಮನಸ್ಥಿತಿ. ಕೆಲವರು ಹೇಳುವಂತೆ ಅಮೃತಾ ಸಾಹಿರ್ಗಾಗೇ ಪತಿಯೊಂದಿಗೆ ವಿಚ್ಛೇದನ ಪಡೆದರೆಂದು, ಆದರೆ ಅದು ನಿಜವಲ್ಲ. ಇಮ್ರೋಜ್ ಕೂಡ ಈ ಮಾತನ್ನು ಒಪ್ಪುವುದಿಲ್ಲ. ಬದುಕಿಡೀ ಹುಡುಕಾಟ. ಹಿಡಿ ಪ್ರೀತಿಗಾಗಿ ಉಸಿರಾಡಿದ ಜೀವ. ಅಮೃತಾ ಅಪ್ರತಿಮ ಸುಂದರಿ! ಸೌಂದರ್ಯದೊಂದಿಗೆ ತೀಕ್ಷ್ಣಬುದ್ಧಿ, ಪ್ರೇಮಮಯಿ, ಪ್ರಾಮಾಣಿಕ, ನೇರ ನಡೆನುಡಿಯ ವ್ಯಕ್ತಿ ಆಗಿದ್ದರು.
ಪ್ರೇಮವೆಂಬುದು ಈ ಭೂಮಿಯ ಮೇಲಿದ್ದರೆ ಅದು ಅಮೃತಾ -ಇಮ್ರೋಜ್ ಪ್ರೇಮದ ಹಾಗಿರಬೇಕು. ಪ್ರೇಮಿ, ಸಂಗಾತಿ ಇದ್ದರೆ ಇಮ್ರೋಜ್ ಅವರಂತಿರಬೇಕು. ಇದು ಬದುಕಿನಲ್ಲಿ ಪ್ರೇಮವನ್ನು ಹುಡುಕುವ ಪ್ರತಿಯೊಬ್ಬರ ಹೃದಯದ ಬಯಕೆ! ಹೆಣ್ಣು ಗಂಡಿನ ಈ ಪ್ರೀತಿಯ ಹುಡುಕಾಟ ಎಂದೂ ನಿಲ್ಲುವುದಿಲ್ಲ. ನಮ್ಮ ತಲೆಮಾರು ಮುಂದಿನ ಅನೇಕ ತಲೆಮಾರು ಅಮೃತಾ-ಇಮ್ರೋಜ್ರಿಗೆ ಒಲಿದ ಪ್ರೀತಿಗಾಗಿ ಹಂಬಲಿಸುತ್ತದೆ, ಇಮ್ರೋಜ್ ಇಲ್ಲದೇ ಅಮೃತಾ, ಅಮೃತಾ ಇಲ್ಲದೇ ಇಮ್ರೋಜ್ ಎಂದೂ ನಮಗೆ ದಕ್ಕಲಾರರು. ಆತ್ಮಸಂಗಾತವೆನ್ನುವುದು ಕಾಲಾಂತರದಲ್ಲಿ ಪಕ್ವಗೊಂಡು ಫಲಕೊಡುವ ಒಂದು ಕಠಿಣ ತಪಸ್ಸು! ಬದುಕು ಒಡ್ಡುವ ಕಷ್ಟಕಾರ್ಪಣ್ಯಗಳೆಲ್ಲವನ್ನೂ ಸಹಿಸಿ ನೊಂದು – ಬೆಂದು- ಗೆದ್ದು ಬಂದಾಗಲೇ ಪ್ರೇಮದ ಸಾಫಲ್ಯತೆಯ ಅನುಭವಾಗುವುದು.
ಅಮೃತಾ –ಇಮ್ರೋಜ್ ಇಬ್ಬರೂ ನಾಲ್ಕು ದಶಕಗಳ ಕಾಲ ಒಟ್ಟಾಗಿ ಬಾಳಿದರು. ಈಗ ನಾವು ಹೇಳುವ ಲಿವ್ ಇನ್ ಸಂಬಂಧದ ಹಾಗೆ. ಯಾವತ್ತೂ ಒಬ್ಬರಿಗೊಬ್ಬರು ‘ಐ ಲವ್ ಯೂ’ ಹೇಳಬೇಕಾಗಲಿಲ್ಲ. ಇಬ್ಬರೂ ಪರಸ್ಪರರ ವ್ಯಕ್ತಿಗತ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳದೇ, ಖಾಸಗಿತನವನ್ನು ಪ್ರಶ್ನಿಸದೇ, ಯಾವ ನಿರ್ಭಂಧನೆಗಳನ್ನು ಹೇರಿಕೊಳ್ಳದೇ ಒಬ್ಬರಿನ್ನೊಬ್ಬರ ಮನಸ್ಸನ್ನು ಅರಿತುಕೊಂಡು ಬಾಳಿದರು. ತಮ್ಮಲ್ಲಿ ಇದ್ದುದನ್ನು ಹಂಚಿಕೊಳ್ಳುತ್ತ, ಒಳ್ಳೆ ಸ್ನೇಹಿತರಂತೆಯೇ ಇದ್ದರು. ಒಬ್ಬರಿಗೊಬ್ಬರ ಸಾಂಗತ್ಯವನ್ನು ಬಹುವಾಗಿ ಇಷ್ಟಪಡುತ್ತಿದ್ದರಂತೆ ಅಮೃತಾ ಕೊನೆಯುಸಿರಿರುವವರೆಗೂ.
ತಮ್ಮ ಪತಿ ಪ್ರೀತಂ ಸಿಂಗ್ರನ್ನು ತೊರೆದು ಇಮ್ರೋಜ್ ಹಾಗೂ ಅಮೃತಾ ಯಾವ ಬಂಧನದಲ್ಲೂ ತಮ್ಮನ್ನು ಕಟ್ಟಿಕೊಳ್ಳದೇ ಸ್ನೇಹಿತರಂತೆ ಜೊತೆಯಾಗಿ ಒಂದೇ ಮನೆಯಲ್ಲಿರತೊಡಗಿದಾಗ ಮಕ್ಕಳು ಮೊದಮೊದಲು ಒಪ್ಪಲಿಲ್ಲವಂತೆ. ಆಮೇಲೆ ಯಾವ ವಿರೋಧವನ್ನೂ ಒಡ್ದದೇ ತಾಯಿಯೊಂದಿಗೆ ಉಳಿದರು. ಇಮರೋಜ್ ಮಕ್ಕಳಿಗೂ ತುಂಬಾ ಪ್ರಿಯವಾಗಿದ್ದರು. ಪಟೇಲ್ ನಗರದಲ್ಲಿ ಅಮೃತಾ ಮನೆ ಹತ್ತಿರವೇ ಇಮ್ರೋಜ್ ಕೂಡ ಒಂದು ಬಾಡಿಗೆ ಕೋಣೆಯಲ್ಲಿರುತ್ತಿದ್ದರು. ಇಮ್ರೋಜ್ ಆಗ ಒಂದು ಪತ್ರಿಕೆಯಲ್ಲಿ ವಿನ್ಯಾಸಕಾರರಾಗಿ ಕೆಲಸಮಾಡುತ್ತಿದ್ದರು. ಅಮೃತಾ ಪತಿ ಪ್ರೀತಂಸಿಂಗ್ರೊಂದಿಗೆ ಇದ್ದಾಗಲೂ ಇಮರೋಜ್ ತಾವೇ ಮಕ್ಕಳ ಸ್ಕೂಲ್ ಬಿಟ್ಟನಂತರ ತಮ್ಮ ಕಛೇರಿಯಿಂದ ಹೋಗಿ ಸ್ಕೂಟರ್ ಮೇಲೆ ಕೂರಿಸಿಕೊಂಡು ಮನೆಗೆ ತಂದು ಬಿಡುತ್ತಿದ್ದರಂತೆ. ಅವರಿಗೆ ಯಾರೂ ನೀನು ಈ ಕೆಲಸ ವಹಿಸಿಕೋ ಎಂದು ಹೇಳಲಿಲ್ಲ. ಅವರೇ ಖುದ್ದಾಗಿ ಮಕ್ಕಳನ್ನು ಕರೆತರುವ ಕೆಲಸವನ್ನು ಮಾಡತೊಡಗಿದ್ದರು. ಅಲ್ಲಿವರೆಗೆ ಅಮೃತಾ ಯಾವತ್ತೂ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಮನೆಯ ನೌಕರ್ ಅಡುಗೆ ಮಾಡುತ್ತಿದ್ದ. ಇಮ್ರೋಜ್ ಮಕ್ಕಳನ್ನು ಕರೆತರುವ ಕೆಲಸ ವಹಿಸಿಕೊಂಡ ಮೇಲೆ ಅಮೃತಾ ತಾವೇ ಅಡುಗೆ ಮಾಡತೊಡಗಿದರು. ಇಮ್ರೋಜ್ ಮಕ್ಕಳನ್ನು ಬಿಟ್ಟು ಊಟ ಮಾಡಿ ಮತ್ತೆ ಕಚೇರಿಗೆ ಹೋಗುತ್ತಿದ್ದರಂತೆ. ಆಗೆಲ್ಲ ಅಮೃತಾ ಆಗ್ರಹಪಡಿಸಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದರಂತೆ, ಒಮ್ಮೊಮ್ಮೆ ಪ್ರೀತಂಸಿಂಗರೂ ನಿನ್ನಿಂದಾಗಿ ಅಮೃತಾ ಕೈಊಟ ಸಿಗುತ್ತಿದೆ, ಊಟ ಮಾಡು ಎನ್ನುತ್ತಿದ್ದರಂತೆ. ಅಮೃತಾ ಇಮ್ರೋಜ್ರೊಂದಿಗೆ ನಾಲ್ಕು ದಶಕಗಳ ಕಾಲ ಬಾಳಿದರೂ ಪತಿಯ ಹೆಸರನ್ನು ತಮ್ಮ ಹೆಸರಿನೊಂದಿಗೆ ಉಳಿಸಿಕೊಂಡರು. ಯಾವತ್ತೂ ಪತಿಯ ಬಗ್ಗೆ ಎಲ್ಲೂ ಅಸಮಾಧಾನದ ಶಬ್ಧಗಳನ್ನು ಬಳಸಲಿಲ್ಲ. ಪ್ರೀತಂ ಸಿಂಗ್ ಕೊನೆಗಾಲದಲ್ಲಿ ತುಂಬಾ ಅನಾರೋಗ್ಯದಲ್ಲಿದ್ದಾಗ ಅಮೃತಾ –ಇಮರೋಜ್ ಅವರನ್ನು ತಮ್ಮ ಹೌಸ್ಖಾಸ್ ಮನೆಗೆ ಕರೆತಂದು ಆರೈಕೆ ಮಾಡಿದ್ದನ್ನು ಇಮರೋಜ್ ಈಗಲೂ ನೆನಪಿಸಿಕೊಳ್ಳುತ್ತಾರೆ.

ಪಟೇಲ್ ನಗರದಲ್ಲಿದ್ದಾಗ ಅಮೃತಾ ಆಗ ರೇಡಿಯೋದಲ್ಲಿ ಪಂಜಾಬಿ ಉದ್ಘೋಷಕಿಯಾಗಿ ಕೆಲಸಮಾಡುತ್ತಿದ್ದರು. ಸಂಬಳ ಕೇವಲ 5 ರೂಪಾಯಿ! ಆಗಲೂ ಇಮ್ರೋಜ್ ಅವರೇ ಸ್ಕೂಟರಿನಲ್ಲಿ ಅವರನ್ನು ಆಕಾಶವಾಣಿಗೆ ಬಿಡುತ್ತಿದ್ದರು. ಇಮ್ರೋಜ್ ಅಮೃತಾ ಹೇಗಿದ್ದರೋ ಆ ರೀತಿಯಲ್ಲೇ ಸ್ವೀಕರಿಸಿಕೊಂಡಿದ್ದರು. ಯಾವತ್ತೂ ಆಕೆ ಬೇರೆಯವಳೆನಿಸಲಿಲ್ಲ. ಮಕ್ಕಳು, ಕುಟುಂಬ ಹೊರಗಿನವರೆನಿಸಲಿಲ್ಲ. 1960 ರಲ್ಲಿ ಪ್ರೀತಂಸಿಂಗರಿಂದ ದೂರವಾಗಿ ಇಬ್ಬರೂ ಒಟ್ಟಿಗೆ ಇರತೊಡಗಿದಾಗಲೂ ಮಕ್ಕಳೂ ಬೇಗ ಬದಲಾವಣೆಯನ್ನು ಒಪ್ಪಿಕೊಂಡರು. ಭಾರತದ ವಿಭಜನೆಯ ನಂತರ ಪಂಜಾಬಿನಿಂದ ದೆಹಲಿಗೆ ವಲಸೆ ಬಂದ ನಿರಾಶ್ರಿತರಿಗೆ ಸರಕಾರದಿಂದ ನೂರು ಗಜದ ಭೂಮಿ ಹಂಚಿಕೆಯಾಗುತ್ತಿತ್ತು. ಹಾಗೆ ಸಿಕ್ಕ ಜಾಗದಲ್ಲಿ ಅಮೃತಾ ಮತ್ತು ಇಮರೋಜ್ ತಮ್ಮಲ್ಲಿದ್ದ ಹಣಹೂಡಿ K-25, ಹೌಜ್ ಖಾಸಿನ ಮನೆಕಟ್ಟಿಕೊಂಡರು. ಕೆಳಗಿನ ಮಜಲು ಮಕ್ಕಳಿಗೆ, ಮೇಲಿನ ಮಜಲಿನಲ್ಲಿ ಅಮೃತಾ ಹಾಗೂ ಇಮರೋಜರಿಗೆ ಪ್ರತ್ಯೇಕ ಕೋಣೆಗಳು. ಮನೆಯ ಒಳವಿನ್ಯಾಸ, ಹೊರ ವಿನ್ಯಾಸ, ಹೆಸರಿನ ಕ್ಯಾಲಿಗ್ರಾಫೀ ಬರಹ ಎಲ್ಲ ಇಮರೋಜ್ ತಾವೇ ಬರೆದಿದ್ದರು. K-25 ಇಬ್ಬರೂ ಸೇರಿ ಕಟ್ಟಿದ ಗೂಡಾಗಿತ್ತು. ಪ್ರೀತಿಯ ಗೂಡು! ಇಬ್ಬರೂ ಸೇರಿ ಪಾರಿಜಾತದ ಮರವನ್ನು ನೆಟ್ಟರು. ಶರದೃತುವಿನ ಮುಂಜಾವಿನಲ್ಲಿ ತಟ್ಟೆತುಂಬಾ ಪಾರಿಜಾತ ಆರಿಸಿ ತಂದು ಅಮೃತಾಳ ಮೇಜಿನ ಮೇಲಿಡುತ್ತಿದ್ದರು ಇಮರೋಜ್. ಆ ಗೂಡಿನಲ್ಲಿ ಇಮರೋಜ್ ಬರೆಯುತ್ತಾರೆ..
ಯೇ ಮೈ -ಔರ್ ಯೇ ತೂ, ಔರ್ ಬೀಚ್ ಮೇ ಸಪನಾ……
ಅಮೃತಾ ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗಲೂ ಅವರದೇ ನಂಬುಗೆಯ ಸಾಹಿತ್ಯಿಕ ವಲಯದಲ್ಲಿ ಅವರ ಬಗ್ಗೆ ಕೆಟ್ಟ ಪ್ರಚಾರಗಳೂ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದರೂ ಇಮ್ರೋಜ್ ಯಾವುದಕ್ಕೂ ಬೆಲೆಕೊಡದೇ ಬೆಂಬಲವಾಗಿ ಬೆನ್ನಿಗೆ ಹಿಮಾಲಯದಂತೆ ಭದ್ರವಾಗಿ ನಿಂತಿದ್ದರು. ಆ ಕಾರಣಕ್ಕಾಗಿಯೇ ಅಮೃತಾ ಹೆಜ್ಜೆ ಮತ್ತಷ್ಟು ಧೃಡವಾಗುತ್ತ ಹೋದವು. ಇಮ್ರೋಜ್ ಆಸರೆಯಾಗಿ ನಿಂತಿರದಿದ್ದರೆ ಅಮೃತಾ ಚೂರುಚೂರಾಗಿರುತ್ತಿದ್ದರು. ಈ ವಿಷಯದಲ್ಲಿ ಆಕೆ ಪುಣ್ಯವಂತೆ. ಒಮ್ಮೆ ಅಮೃತಾ ಮಗ ನವರಾಜ್ ತಾಯಿಯನ್ನು ಕೇಳಿದನಂತೆ….
“ಮಮ್ಮಾ… ನಾನು ಸಾಹಿರ್ ಅಂಕಲ್ ಮಗನಾ?ʼ ಎಂದು
ಅಮೃತಾ ಶಾಂತವಾಗಿ ಹೇಳಿದರಂತೆ, ಇಲ್ಲಾ,… ಆಗಿದ್ದರೆ ಚೆನ್ನಾಗಿತ್ತು!
ಹೀಗೆ ಅಮೃತಾ ಯಾವತ್ತೂ ತಮ್ಮ ಮಾತಿನಲ್ಲಿ, ನಿಲುವಿನಲ್ಲಿ ಅತ್ಯಂತ ಪ್ರಾಮಾಣಿಕರಾಗಿದ್ದರು. ಸಾಹಿರ್ ಜತೆಗಿನ ಪ್ರೇಮವನ್ನೂ ಬಚ್ಚಿಡಲಿಲ್ಲ. ತನ್ನ ಮಗು ಗರ್ಭದಲ್ಲಿದಾಗಲೂ ಕೂಡ ಅದು ಸಾಹಿರ್ನನ್ನೇ ಹೋಲಲಿ ಎಂದು ಬಯಸಿದ್ದನ್ನು ಯಾವ ಮುಲಾಜಿಲ್ಲದೇ ಹೇಳಿಕೊಂಡಿದ್ದಾರೆ. ಯಾವತ್ತೂ ಆಕೆ ಸುಳ್ಳನ್ನು ಬದುಕಲಿಲ್ಲ. ಅದಮ್ಯವಾದ ಜೀವನಪ್ರೀತಿ ಹಾಗೂ ಸತ್ಯವನ್ನೇ ಬದುಕಿನುದ್ದಕ್ಕೂ ಬಾಳಿತೋರಿದರು.
ಇಮ್ರೋಜ್ ಹಿಂದೆ ಸ್ಕೂಟರ್ ಮೇಲೆ ಕುಳಿತಾಗಲೂ ಅಮೃತಾ ಪ್ರೀತಂ ಅವರ ಬೆನ್ನಿನ ಮೇಲೆ ಸಾಹಿರ್… ಸಾಹಿರ್ ಎಂದು ಬೆರಳಿನಿಂದ ಬರೆಯುತ್ತಿದ್ದಳಂತೆ. ಕೂತಲ್ಲಿ ನಿಂತಲ್ಲಿ ಮೇಜು, ಕಾಗದ ಎಲ್ಲೆಂದರಲ್ಲಿ ಸಾಹಿರ್… ಸಾಹಿರ್ ಎಂದು ಬೆರಳಿನಿಂದ ತಿದ್ದುವುದು ಅವರಿಗೆ ಗೀಳಾಗಿ ಹೋಗಿತ್ತು. ಸಾಹಿರ್ ಅಂದರೆ ಅಷ್ಟು ಹುಚ್ಚು! ಅಂಥಾ ಮೋಹ! ಈ ಘಟನೆಯನ್ನು ಇಮ್ರೋಜರಿಗೆ ಕೇಳಿದರೆ …
“ಹಾಂ… ಪೀಠ್ ಮೇರಾ, ವೋಹ್ ಉಸಕಾ ದೋಸ್ತ್….. ಮೇರೆ ಪೀಛೇ ಮೇರೆ ದೋಸ್ತ್… ನಾನ್ಯಾಕೆ ಬೇಸರಪಡಲಿʼ ಎನ್ನುತ್ತಾರೆ. ಸಾಹಿರ್ ಯಾವತ್ತೂ ಅಮೃತಾಳನ್ನು ಮದುವೆಯಾಗುತ್ತಿದ್ದಿಲ್ಲ. ಅವನು ಕೇವಲ ಅವಳ ಭ್ರಮೆ ಅಷ್ಟೇ. ಅವಳು ನನಗೇ ಸಿಗುತ್ತಾಳೆಂದು ನನಗೆ ಗೊತ್ತಿತ್ತು” ಅನ್ನುತ್ತಾರೆ ಇಮ್ರೋಜ್ ಅದೇ ಭರವಸೆಯ ದನಿಯಲ್ಲಿ.
ಅಮೃತಾ ಸಿಗದಿದ್ದರೆ ಏನು ಮಾಡುತ್ತಿದ್ದಿರಿ?
“ಹೀಗೇ ಒಬ್ಬನೇ ಇರುತ್ತಿದ್ದೆ, ಇಲ್ಲಾ ಸಾಹಿರ್ ಮನೆಯಿಂದ ಹೊತ್ತುಕೊಂಡು ಬರುತ್ತಿದ್ದೆ” ಎಂದು ತಮಾಷೆ ಮಾಡುತ್ತಾರಾದರೂ ಅವರಿಗೆ ಖಚಿತವಾಗಿ ಗೊತ್ತಿತ್ತು……. ಸಾಹಿರ್, ಯಾವತ್ತೂ ಅಮೃತಾಳಿಗೆ ಬದುಕು ನೀಡಲಾರ!” ಎಂದು. ಇಬ್ಬರ ಜಾತಿ ಅಡ್ದವಾಗಿತ್ತು ಅನ್ನುವ ಮಾತನ್ನು ಕೇಳುತ್ತೇವೆ ಆದರೆ ಅದು ಸುಳ್ಳು. ಸಾಹಿರ್ಗೆ ಅಮೃತಾ ಮೊದಲ ಪ್ರೀತಿಯೂ ಅಲ್ಲ, ಕೊನೆ ಪ್ರೀತಿಯೂ ಅಲ್ಲ. ಯಾರೊಂದಿಗೂ ಪ್ರೇಮದಲ್ಲಿ ಬಂಧಿಯಾಗುವುದು ಅವರಿಗೆ ಇಷ್ಟವಿದ್ದಿಲ್ಲ. ಇನ್ನು ಜಾತಿ ಪ್ರಶ್ನೆಯಿದ್ದರೆ ಅದು ಸಾಹಿರ್ ಕಡೆಯಿಂದ ಇದ್ದೀತು, ಅಮೃತಾ ಕಡೆಯಿಂದಲಂತೂ ಅಲ್ಲ. ಅಮೃತಾ ಯಾವತ್ತೂ ಜಾತಿಪಾತಿಗಳಿಗೆ ಪ್ರಾಮುಖ್ಯತೆಯನ್ನೆ ಕೊಟ್ಟಿದ್ದಿಲ್ಲ. ಆಕೆ ಚಿಕ್ಕವಳಿದ್ದಾಗಿನ ಒಂದು ಘಟನೆಯನ್ನು ‘ರಸೀದಿ ಟಿಕೇಟ್’ ನಲ್ಲಿ ಹೇಳುತ್ತಾರೆ.
ಬಹಳಷ್ಟು ಸೀಲ್ ಗ್ಲಾಸುಗಳನ್ನು ಅಜ್ಜಿ ತೊಳೆದು, ಒರೆಸಿ ಶೆಲ್ಫಿನ ಮೇಲೆ ಜೋಡಿಸುತ್ತಿದ್ದಳಂತೆ. ಮೂರು ಗ್ಲಾಸುಗಳು ಮಾತ್ರ ಅಡುಗೆಕೋಣೆಯ ಹೂರಗೆ ಅನಾಥ ಮಕ್ಕಳಂತೆ ಕೂತಿರುತ್ತಿದ್ದವು, ಪುಟ್ಟ ಹುಡುಗಿ ಅಮೃತಾ ಅಜ್ಜಿಗೆ ಕೇಳುತ್ತಾಳೆ, “ಈ ಮೂರು ಗ್ಲಾಸುಗಳು ಇಲ್ಲ್ಯಾಕೆ ಇಟ್ಟಿದ್ದೀ, ಅವೇಕೆ ಒಳಗಿಲ್ಲ?” ಅಂತಾ. ಅಜ್ಜಿ ಹೇಳುತ್ತಾಳೆ, “ಇವು ಮನೆಗೆ ಬರುವ ಮುಸ್ಲಿಮರಿಗೆ ಚಹ ಮತ್ತು ಲಸ್ಸಿ ಕುಡಿಯಲು ಕೊಡೋಕೆ ಇಟ್ಟದ್ದು…” ಅಂತಾ. ಆ ಮಾತು ಅಮೃತಾರಿಗೆ ಚೂರೂ ಹಿಡಿಸುವುದಿಲ್ಲ. ಆಕೆ ಅಜ್ಜಿಯೊಂದಿಗೆ ಜಗಳಕಾದು, ಉಪವಾಸ ಹೂಡಿ, ಮನೆಯಲ್ಲಿ ‘ಹಿಂದೂ’ ಗ್ಲಾಸು, ‘ಮುಸ್ಲಿಂ’ ಗ್ಲಾಸು ಅಂತಾ ಬೇರೆ ಬೇರೆ ಇರಕೂಡದು ಎಂದು ಹಠಹಿಡಿಯುತ್ತಾರೆ. ಕೊನೆಗೆ ಅಜ್ಜಿ ಸೋತು, ಮೊಮ್ಮಗಳು ಗೆಲ್ಲುತ್ತಾಳೆ. ಆಗ ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ ಮೊಮ್ಮಗಳು ಮುಂದೆ ಮುಸ್ಲೀಮನೊಬ್ಬನ ಪ್ರೇಮದಲ್ಲಿ ಬೀಳುತ್ತಾಳೆಂದು.
ಅವರ ಮನೆಯಲ್ಲಿ ಕೂತರೆ ಸಾಕು ಅಮೃತಾ ಮತ್ತು ಇಮ್ರೋಜ್ ಅವರಿಬ್ಬರು ಬಾಳಿದ ಪ್ರೀತಿಯ ಸಿಹಿಗಾಳಿ ತಂತಾನೇ ಹೃದಯಕ್ಕಿಳಿಯುತ್ತದೆ. ಶಬ್ದಗಳೂ ಅಪೂರ್ಣವಾಗುತ್ತವೆ. ಅಕ್ಷರಗಳೂ ಸೋಲುತ್ತವೆ ಬರೆಯಲು. ಅನುಭವಕ್ಕೆ ನಿಲುಕಿದ್ದು ಮಾತಿಗೆ ನಿಲುಕುವುದಿಲ್ಲ. ಇಮ್ರೋಜ್ ಅವರೊಂದಿಗೆ ಗಂಟೆಗಟ್ಟಲೆ ಕೂತು ಮಾತಾಡಿದರೂ ಮನಸ್ಸು ತುಂಬುವುದಿಲ್ಲ. ಎಂಭತ್ತೇಳರ ಹರೆಯದ ಇಮ್ರೋಜ್ರನ್ನು ನೋಡಿದಾಗೆಲ್ಲ ಅವರನ್ನು ದೇವರು ಅಮೃತಾರಿಗಾಗಿಯೇ ರಚಿಸಿದ್ದನೇ ಎನಿಸುತ್ತದೆ. ಅಂಥ ಪ್ರೇಮಮಯ ವ್ಯಕ್ತಿತ್ವ ಅವರದು.

(ಸಾಹಿರ್ ಲೂಧಿಯಾನ್ವಿ)
ಅಮೃತಾ – ಇಮ್ರೋಜ್ ಇಬ್ಬರೂ ಸಮಾಜ, ಜಾತಿ- ಧರ್ಮ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಮೃತಾ ಅವರಿಗೆ ಸಿಕ್ಕಾಗ ಆಕೆ ಎರಡು ಮಕ್ಕಳ ತಾಯಿ, ಪ್ರೀತ್ಂಸಿಂಗರ ಪತ್ನಿ, ಸಾಹಿರ್ ಪ್ರೇಯಸಿ! ಲಾಹೋರಿನಲ್ಲಿ ಸಾಹಿರ್ಗೆ ಮನಸ್ಸುಕೊಟ್ಟ ಅಮೃತಾ ಅವರನ್ನು ಹದ್ದುಮೀರಿ ಹುಚ್ಚಳಂತೆ ಪ್ರೀತಿಸುತ್ತಿದ್ದಳು. ಸಾಹಿರ್ ಸೇದಿಬಿಟ್ಟ ಸಿಗರೇಟ್ ತುಂಡುಗಳನ್ನು ಎತ್ತಿಟ್ಟುಕೊಂಡು ತಮ್ಮ ಏಕಾಂತದಲ್ಲಿ ಕೂತು ಆ ತುಂಡುಗಳನ್ನು ಸೇದುತ್ತಿದ್ದಳಂತೆ. ಆ ಸಿಗರೇಟ್ ತುಂಡುಗಳಲ್ಲಿ ಸಾಹಿರ್ ಸ್ಪರ್ಷದ ಅನುಭೂತಿಯಾಗುತ್ತಿತ್ತು. ಸಾಹಿರ್ ಮಿತಭಾಷಿ. ಗಂಟೆಗಟ್ಟಲೆ ಇಬ್ಬರೂ ಮಾತಿಲ್ಲದೇ ಮೌನದಲ್ಲಿ ಕೂತಿರುತ್ತಿದ್ದರು. ಅಮೃತಾ ಮಾತಾಡು ಮಾತಾಡು ಎಂದರೂ ಹೆಚ್ಚು ಮಾತಾಡುತ್ತಿರಲಿಲ್ಲವಂತೆ. “ರೋಶನೀ ಮೇ ಮೈ ಬಾತ್ ನಹೀ ಕರ್ ಸಕತಾ” ಅಂತಿದ್ದರಂತೆ. ಆಗ ಅಮೃತಾ ರೋಸಿಹೋಗಿ “ಈ ಸೂರ್ಯನನ್ನೇ ಬಚ್ಚಿಡಬೇಕು ಆಗಲಾದರೂ ನೀನು ಮಾತನಾಡುತ್ತೀ” ಅನ್ನೋ ಪದ್ಯ ಬರೆದರು. ಸಾಹಿರ್ಗಾಗಿ ಬಹಳಷ್ಟು ಪದ್ಯಗಳನ್ನು ಬರೆದರು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು.
ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ
ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು!
*****
ಸಾಹಿರ್ “ಚಲೋ ಇಕ ಬಾರ್ ಫಿರ್ ಸೇ ಅಜನಬೀ ಬನ್ ಜಾಯೇ ಹಂ ದೋನೋ” ಗೀತೆಯನ್ನು ಬರೆದಾಗ ಅಮೃತಾ ನೋವಿನಲ್ಲಿ ಹಿಂಡಿಹೋಗಿದ್ದರು. ಸಂಬಂಧ ಹೊರೆಯಾದಾಗ ಅದನ್ನು ಕಳಚಿಕೊಳ್ಳುವುದೇ ಒಳಿತು…” ಇಲ್ಲಾ ಅದಕ್ಕೊಂದು ಸುಂದರವಾದ ತಿರುವನ್ನು ಕೊಟ್ಟು ಬಿಡುವುದೇ ಒಳಿತು.” ಅವರಿಬ್ಬರ ಪ್ರೇಮ ಮುರಿದುಹೋಯಿತು…
ಅಮೃತಾ ಬರೆಯುತ್ತಾರೆ…..
ಆಯುಷ್ಯದ ಸಿಗರೇಟು ಉರಿದುಹೋಯಿತು
ನನ್ನ ಪ್ರೇಮದ ಗಂಧ
ಒಂದಿಷ್ಟು ನಿನ್ನುಸಿರಲ್ಲಿ
ಒಂದಿಷ್ಟು ಗಾಳಿಯಲ್ಲಿ ಬೆರೆಯಿತು!
ಅಮೃತಾಗೆ ಸಾಹಿರ್ ಪ್ರೀತಿ ಸಿಗಲಿಲ್ಲ! ಇಮ್ರೋಜ್ ಕರಾರುವಾಕ್ಕಾಗಿ ಹೇಳುತ್ತಾರೆ- ಸಾಹಿರ್ ಅಮೃತಾ ಕೋ ಕಭೀ ನಹೀ ಮಿಲತಾ! ಕಾಲಕ್ರಮೇಣ ಸಾಹಿರ್ ಬಗೆಗಿನ ಮೋಹವೇನೋ ಬಿಟ್ಟಿತು, ಆದರೆ ಸಿಗರೇಟ್ ಸೇದುವ ಚಟ ಅಮೃತಾಳನ್ನು ಕಚ್ಚಿಹಿಡಿಯಿತು.
ಇಮರೋಜ್ ಸಿಗರೇಟ್ ಸೇದುತ್ತಿರಲಿಲ್ಲ, ಆದರೆ ಅಮೃತಾಳಿಗಾಗಿ ಸಿಗರೇಟ್ ತಂದುಕೊಡುತ್ತಿದ್ದರು. ಯಾಕೇ ಸೇದುತ್ತೀ ಅಂತಲೂ ಅಡ್ದಿಮಾಡಲಿಲ್ಲ. ಅದು ಅವಳ ಇಷ್ಟ. ಅಮೃತಾನೂ ಇಮರೋಜರನ್ನು ನೀನ್ಯಾಕೆ ಕ್ಯಾನವಾಸ್ –ಬಣ್ಣ ಅಂತಾ ದುಡ್ಡು ಪೋಲು ಮಾಡ್ತೀ ಇತ್ಯಾದಿ ಆಕ್ಷೇಪಿಸಲಿಲ್ಲ. ಇಬ್ಬರೂ ಇಬ್ಬರ ಖಾಸಗೀತನವನ್ನು ಪ್ರಶ್ನಿಸುತ್ತಿರಲಿಲ್ಲ. ಅಮೃತಾ ಬೇಗ ಮಲಗಿ ಮತ್ತೆ ಮಧ್ಯರಾತ್ರಿ ನಂತರ ಎದ್ದು ಬರೆಯಲು ಕೂರುತ್ತಿದ್ದರಂತೆ. ಇಮರೋಜ್ ತಮ್ಮ ಚಿತ್ರಕಲೆಯ ಕೆಲಸಮುಗಿಸಿ ಹತ್ತು- ಹನ್ನೊಂದಕ್ಕೆಲ್ಲ ಮಲಗಿಬಿಡುತ್ತಿದ್ದರು. ಆದರೆ ಬೆಳಗಿನ ಜಾವ ಯಾವಾಗಲೋ ನಿದ್ದೆ ತಿಳಿದಾಗ ಅಮೃತಾರ ಬರವಣಿಗೆ ನಡೆದಿರುತ್ತಿತ್ತು. ಇಮರೋಜ್ ಚೂರೂ ಸದ್ದು ಮಾಡದೇ ಚಹ ಮಾಡಿ ಆಕೆಯ ಎದುರು ಇಟ್ಟುಹೋಗುತ್ತಿದ್ದರಂತೆ. ಅಮೃತಾರಿಗೆ ಚಹವೆಂದರೆ ಬಹಳ ಇಷ್ಟ. ಎಷ್ಟು ಬೇಕಾದರೂ ಕುಡಿಯುತ್ತಿದ್ದರು. ಇಮ್ರೋಜ್ರಿಗೆ ಎರಡು ಚಾಯ್ ಸಿಕ್ಕರೆ ಸಾಕು. ಇಬ್ಬರ ವ್ಯಕ್ತಿತ್ವದಲ್ಲಿ ಸಾಕಷ್ಟು ಭಿನ್ನತೆಯಿದ್ದರೂ ಅಭಿರುಚಿ ಒಂದೇ ಆಗಿತ್ತು.
ಇಮರೋಜ್ ಸಂತೆಯಿಂದ ತರಕಾರಿ ಸಾಮಾನು ತರುತ್ತಿದ್ದರು, ಇಮ್ರೋಜ್ ದಿನಸಿಗಳನ್ನು ಗಾಜಿನ ಡಬ್ಬಗಳಲ್ಲಿ ತುಂಬಿಡುತ್ತಿದ್ದರು. ಯಾಕೆಂದರೆ ಅವು ಮುಗಿಯುವ ಮೊದಲೆ ಮತ್ತೆ ತಂದು ತುಂಬಿಸಿಡುತ್ತಿದ್ದರು. ಯಾವತ್ತೂ ಸಣ್ಣ ಆಕ್ಷೇಪಣೆಗೂ ಅವರು ಅವಕಾಶ ನೀಡಲಿಲ್ಲ. ಅಮೃತಾ ಜೊತೆ ಸೇರಿ ಇಬ್ಬರೂ ಅಡುಗೆಮಾಡಿ ಮುಗಿಸುತ್ತಿದ್ದರಂತೆ. ಮಕ್ಕಳ ಊಟ ತಮ್ಮ ಊಟ ಮುಗಿಸಿ ಒಬ್ಬರು ಪಾತ್ರೆ ಉಜ್ಜಿದರೆ, ಒಬ್ಬರು ತೊಳೆದಿಡುತ್ತಿದ್ದರು, ಒಬ್ಬರು ಕಿಚನ್ ಸ್ವಚ್ಛಮಾಡಿದರೆ, ಇನ್ನೊಬ್ಬರು ಪಾತ್ರೆಗಳನ್ನು ಜೋಡಿಸಿಡುತ್ತಿದ್ದರು. ಹೀಗೆ ಜೊತೆಜೊತೆಗೇ ಕೈಜೋಡಿಸುತ್ತಿದ್ದರು. ಇಬ್ಬರೂ ಗಳಿಸಿದ್ದನ್ನು ಒಟ್ಟು ಸೇರಿಸಿ ಮನೆ ಸಾಗಿಸುತ್ತಿದ್ದರು.
ಮಕ್ಕಳನ್ನು, ಅಮೃತಾರನ್ನು ಸ್ಕೂಟರಿನಲ್ಲಿ ಕೂರಿಸಿ ಓಡಿಸಿದ್ದಕ್ಕೆ ಚಲಾನ್ ಆಗಿ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದರು ಇಮರೋಜ್. ಅದಕ್ಕೆ ಯೋಚಿಸಿ ಇಬ್ಬರೂ ಹಣ ಕೂಡಿಸಿ ಅಮೃತಾ ಐದು ಸಾವಿರ, ಇಮರೋಜ್ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡರಂತೆ. ಹೀಗೆ ಬದುಕಿನುದ್ದಕ್ಕೂ ಇಬ್ಬರೂ ಪ್ರತಿಯೊಂದನ್ನೂ ಸಮಭಾವದಿಂದ ಹಂಚಿಕೊಂಡು ಬಾಳಿದ್ದಕ್ಕೆ ನಾಲ್ಕು ದಶಕಗಳು ನಾಲ್ಕು ದಿನಗಳಂತೆ ಕಳೆದುಹೋದವು – ಎನ್ನುತ್ತಾರೆ ಇಮರೋಜ್. ಪ್ರಾಪಂಚಿಕ ಆಮಿಷಗಳು ಯಾವತ್ತೂ ಇಬ್ಬರನ್ನು ಕಾಡಲಿಲ್ಲ. ದೇಶದ ಅತ್ಯುನ್ನತ ಪ್ರಶಸ್ತಿಗಳು ಅರಸಿಬಂದಾಗಲೂ ಹಿಗ್ಗಲಿಲ್ಲ, ಕುಗ್ಗಲಿಲ್ಲ. ಅವರ ಸಂಬಂಧ ಮತ್ಸರ- ಅಸೂಯೆಯಲ್ಲಿ ಸತ್ತುಹೋಗಲಿಲ್ಲ.
ಇಮರೋಜ್ ಅಮೃತಾರಿಗೆ ನನ್ನ ಸಮಾಜ ನೀನು, ನಿನ್ನ ಸಮಾಜ ನಾನು. ನಮ್ಮ ಲೋಕದಲ್ಲಿ ನಾವಿರೋಣ – ಎಂದು ಮುನ್ನಡೆಸಿದರು. ಯೆಹ್ ಸಮಾಜ್ ಕ್ಯಾ ಹೋತಾ ಹೈ? ಸಮಾಜ ನಮಗೇನು ಊಟ ಕೊಡುತ್ತದೆಯೇ? ನೆಮ್ಮದಿ ಕೊಡುತ್ತದೆಯಾ/ ಎಂದು ಪ್ರಶ್ನಿಸುವ ಇಮ್ರೋಜ್ ಅಮೃತಾರಿಗೆ ದೈವವೇ ವರವಾಗಿ ನೀಡಿದ ಪ್ರೇಮದ ಉಡುಗೊರೆ. ದೇವರು ಕೊಟ್ಟ ಈ ಅಮೂಲ್ಯವಾದ ಬದುಕನ್ನು ಇಬ್ಬರೂ ತಮ್ಮ ಉನ್ನತವಾದ ಪ್ರೇಮದಿಂದ ಸಾಕಾರಗೊಳಿಸಿದ್ದು ಇಬ್ಬರಲ್ಲಿನ ಧೃಡವಾದ ಪ್ರೀತಿ, ಭರವಸೆ, ನಿರ್ಬಂಧವಿಲ್ಲದ ಪ್ರೀತಿ ಹಾಗೂ ಸಮರ್ಪಣಾಭಾವ.
ಅಮೃತಾ ಇಮರೋಜರಿಗಿಂತ ಏಳು ವರ್ಷಕ್ಕೆ ದೊಡ್ದವರು. ವಯಸ್ಸು ಅವರ ಮಧ್ಯೆ ಕಿರಿಕಿರಿಯಾಗಲಿಲ್ಲ. ತೀರಾ ಅನಾರೋಗ್ಯದಲ್ಲಿ ಬಳಲುವಾಗಲೂ ಅಮೃತಾ ಇಮರೋಜರನ್ನು ತಮ್ಮ ಹತ್ತಿರವೇ ಕೂರಲು ಆಗ್ರಹಪಡಿಸುತ್ತಿದ್ದರು. ಯಾವ ಆಸ್ಪತ್ರೆಗೂ ದಾಖಲಾಗಲು ಇಷ್ಟಪಡಲಿಲ್ಲವಂತೆ. ಕೊನೆಗಾಲದಲ್ಲಿ ಅವರು ತಮ್ಮ ಪ್ರಿಯ ಇಮರೋಜರಿಗೆ ಮತ್ತೆ ನಾನು ನಿನಗೆ ಸಿಗುತ್ತೇನೆ – ಎಂದು ಪದ್ಯ ಬರೆಯುತ್ತಾರೆ.
(ಮೈ ತುಮ್ಹೆ ಫಿರ್ ಮಿಲೂಂಗಿ
ಕಹಾಂ? ಕಿಸ್ ತರಹಾ? ನಹೀ ಜಾನತೀ
ಶಾಯದ್ ತುಮ್ಹಾರಿ ಕಲ್ಪನಾ ಕೀ ಚಿಂಗಾರಿ ಬನಕರ್
ತುಮ್ಹಾರೆ ಕ್ಯಾನವಾಸ್ ಪರ್ ಉತರೂಂಗಿ
ಯಾ ಶಾಯದ್ ತುಮ್ಹಾರೆ ಕ್ಯಾನವಾಸ್ ಕೇ ಊಪರ್
ಇಕ್ ರಹಸ್ಯಮಯ ರೇಖಾ ಬನಕರ್
ಖಾಮೋಶ್ ತುಮ್ಹೆ ದೇಖತೀ ರಹೂಂಗಿ)
***
ನಾ ನಿನಗೆ ಮತ್ತೆ ಸಿಗುವೆ
ಎಲ್ಲಿ? ಹೇಗೆ? ಗೊತ್ತಿಲ್ಲ
ಬಹುಶಃ ನಿನ್ನ ಕಲ್ಪನೆಯ ಕಿಡಿಯಾಗಿ,
ನಿನ್ನ ಕ್ಯಾನವಾಸಿಗೆ ಇಳಿಯುವೆ
ಅಥವಾ ಬಹುಶಃ ನಿನ್ನ ಕ್ಯಾನವಾಸಿನ್ ಮೇಲೆ
ಒಂದು ರಹಸ್ಯಮಯ ಗೆರೆಯಾಗಿ,
ಮೌನವಾಗಿ ನಿನ್ನನ್ನು ನೋಡ್ತಾ ಇರುವೆ…
(ಮೈ ಔರ್ ಕುಛ್ ನಹೀ ಜಾನತೀ
ಪರ್ ಇತನಾ ಜಾನತೀ ಹೂಂ
ಕಿ ವಕ್ತ್ ಜೋ ಭೀ ಕರೆಗಾ
ಇಸ್ ಜನಮ್ ಮೇರೆ ಸಾಥ್ ಚಲೇಗಾ…)
ಮತ್ತೇನೂ ನಾನರಿಯೆ
ಆದರೆಇಷ್ಟು ಮಾತ್ರ ಗೊತ್ತು
ಕಾಲ ಏನೇ ಮಾಡಿದರೂ
ಈ ಜನ್ಮ ನನ್ನೊಂದಿಗೇ ನಡೆಯುತ್ತದೆ…..
ಅಮೃತಾ ತಮ್ಮನ್ನು ಏಕಾಂಗಿಯಾಗಿ ಬಿಟ್ಟುಹೋಗುವಾಗಲೂ ಇಮರೋಜ್ ಸಮಸ್ಥಿತಿಯಲ್ಲಿದ್ದರು. ಎಲ್ಲರೂ ಹೋಗಬೇಕಾದ್ದೇ. ಅವಳು ದೇಹ ತ್ಯಜಿಸಿದ್ದಾಳೆಯೇ ಹೊರತು ಸಾಂಗತ್ಯವನ್ನಲ್ಲ – ಎನ್ನುತ್ತಿದ್ದರು. ಈಗ ಅವರೂ ಇಲ್ಲ.
ಅಮೃತಾ ಈ ಲೋಕದಿಂದ ದೂರವಾಗಿ ಎರಡು ದಶಕಗಳು ಕಳೆದಿವೆ. ಬದುಕಿನ ಎಲ್ಲಾ ಸ್ತರಗಳಲ್ಲೂ ಅವರ ಅದಮ್ಯವಾದ ಜೀವನಪ್ರೀತಿ, ಬದುಕಿನುದ್ದಕ್ಕೂ ಹಿಡಿ ಪ್ರೀತಿಗಾಗಿ ಬದುಕಿದ ಅವರ ಬದುಕಿನ ಹೋರಾಟಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಆಗಿಬಿಡುವ ಅನನ್ಯತೆಯಲ್ಲೇ ಅಮೃತಾ ಈಗಲೂ ಪ್ರಸ್ತುತರಾಗುತ್ತಾರೆ. ನಾಲ್ಕು ದಶಕಗಳ ಕಾಲ ಬರೆದ ಅವರ ಬರಹಗಳು ಕೇವಲ ಒಂದು ಕಾಲಘಟ್ಟಕ್ಕೆ, ಒಂದು ಸಮುದಾಯಕ್ಕೆ, ಒಂದು ವರ್ಗಕ್ಕೆ, ಒಂದು ಭಾಷೆಗೆ ಬದ್ಧವಾಗಿದ್ದರೂ ಅಷ್ಟಕ್ಕೆ ಸೀಮಿತವಾಗದೇ ಕಾಲಾತೀತವಾಗುವುದರಿಂದಲೇ ಈಗಲೂ ಅಮೃತಾಪ್ರೀತಂ ಪ್ರಸ್ತುತರಾಗುತ್ತಾರೆ. ಅಗಸ್ಟ್ 31 ಅವರ ಜನ್ಮದಿನ. ಅಮೃತಾ ಈಗಿಲ್ಲ ಎನ್ನುವುದು ವರ್ತಮಾನದ ಸತ್ಯವಾದರೆ ಆಕೆ ಇದ್ದಾಳೆ, ಇಲ್ಲೆ ನಮ್ಮೊಳಗೇ, ಅವಳನ್ನು ಪ್ರೀತಿಸುವ ಪ್ರತಿಯೊಬ್ಬರಲ್ಲೂ ಇದ್ದಾಳೆ ಎನ್ನುವ ಆದರದ ಅಭಿಮಾನ ಒಂದೆಡೆ ಗಟ್ಟಿಯಾಗಿ ನಿಲ್ಲುತ್ತದೆ. ಅದನ್ನೇ ಇಮರೋಜರ ಮಾತಿನಲ್ಲಿ ಹೇಳುವುದಾದರೆ,
ಹರ್ ಕೋಯಿ ಕೆಹ್ ರಹಾ ಹೈ
ಕೀ ವೋಹ್ ನಹೀ ರಹೀ,
ಮೈ ಕೆಹತಾ ಹೂಂ,
ವೊಹ್ ಹೈ!
ಕೋಯೀ ಸಬೂತ್?
ಮೈ ಹೂಂ
ಅಗರ್ ವೊಹ್ ನ ಹೋತಿ,
ತೋ ಮೈ ಭೀ ನ ಹೋತಾ ..!!

ಅನ್ನುವ ಇಮ್ರೋಜ್…. ಒಂದಲ್ಲ ಸಾವಿರ ಬಾರಿ ಕೇಳಿದರೂ ಇದನ್ನೇ ಹೇಳುತ್ತಿದ್ದರು. “ಅವಳು ಶರೀರ ತ್ಯಜಿಸಿದ್ದಾಳೆ, ಸಾಂಗತ್ಯವನ್ನಲ್ಲ!” ಅಮೃತಾ ಜೀವಿತವಾಗಿದ್ದಾಗ ನನಗೆ ಅವರ ಒಡನಾಟ ಸಿಗಲಿಲ್ಲ. ಆದರೆ ಇಮ್ರೋಜರ ಆತ್ಮೀಯ ಒಡನಾಟ ಸಿಕ್ಕಿದ್ದು ನನ್ನ ಜೀವನದ ಭಾಗ್ಯಗಳಲ್ಲಿ ಒಂದು. ಅವರ ಮನೆಯ ಹಿಡಿ ನೆರಳು ನನ್ನ ಬದುಕಿಗೊಂದಿಷ್ಟು ಲಭಿಸಿದ್ದು ನನ್ನ ಪುಣ್ಯವೆಂದುಕೊಂಡಿದ್ದೇನೆ. ಇದು ನನ್ನ ಇಡೀ ಜೀವಮಾನದ ಆಸ್ತಿ..!

ರೇಣುಕಾ ನಿಡಗುಂದಿ ಲೇಖಕಿ, ಅನುವಾದಕಿ. ಅಮೃತ ನೆನಪುಗಳು, ಬಾ ಇಂದಾದರೂ…ಅಲೆಮಾರಿಯೊಬ್ಬಳ ಆತ್ಮವೃತ್ತಾಂತ, ಯಾವ ವಿಳಾಸವೂ ಅವಳದಲ್ಲ ಇವರ ಅನುವಾದಿತ ಕೃತಿಗಳು.

