Advertisement
ಆ ರಿಮೋಟು ನಮ್ಮ ಕೈಯಲ್ಲೇ ಇದೆ…: ವಿನಾಯಕ ಅರಳಸುರಳಿ ಅಂಕಣ

ಆ ರಿಮೋಟು ನಮ್ಮ ಕೈಯಲ್ಲೇ ಇದೆ…: ವಿನಾಯಕ ಅರಳಸುರಳಿ ಅಂಕಣ

ಅದೇನೋ ಅಸಹನೆ… ಈ ಸಮಾಜದ ಮೇಲೆ. ಜನರ ಮೇಲೆ. ಸುತ್ತಲಿನವರ ಮೇಲೆ. ಕೊನೆಗೆ ನನ್ನ ಮೇಲೆಯೂ. ಇವೆಲ್ಲದರ ಮೂಲ ಎಲ್ಲೆಂದು ನೋಡುತ್ತ ಹೋದಂತೆ ಬಂದು ತಲುಪಿದ್ದು ದಿನದ ಕೆಲವೇ ಕೆಲವು ಕ್ಷಣಗಳ ಬಿಡುವಿನಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾದ ಎದುರು. ನೋಡುವ ಎಂದು ಅದರಲ್ಲಿನ ಜಾಳನ್ನೆಲ್ಲ ‘ನಾಟ್ ಇಂಟರೆಸ್ಟೆಡ್’ ಎಂದು ಬದಿಗೆ ಸರಿಸುತ್ತ ಬಂದೆ.‌ ಕಮೆಂಟು ಸೆಕ್ಷನ್‌ನ‌ ಬಾಗಿಲಿನ ಹಿಡಿಕೆಗೆ ಕೈ ತಗುಲಿಸಲೇ ಇಲ್ಲ. ಪಾಚಿ, ಕೆಸರು, ಕಸವನ್ನೆಲ್ಲ ಆಚೆ ಎಸೆದ ಬಳಿಕ ಕೊಳದ ನೀರು ನಿಧಾನವಾಗಿ ತಿಳಿಯಾದಂತೆ ಹಂತ ಹಂತವಾಗಿ ಸಹೃದಯೀ ಸಂಗತಿಗಳು ಹರಿದು ಬರತೊಡಗಿದವು.
ವಿನಾಯಕ
ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

“ನೀವು ಹಾಡು ಬರೆಯುವಾಗ ಇಂಥಾ ನಾಯಕನಿಗೇ ಅಂತ ವಿಶೇಷವಾಗಿಯೇನಾದರೂ ಬರೆಯುತ್ತೀರ?”

ಮೂಲತಃ ಸಾಹಿತಿಯಾಗಿದ್ದು ಚಲನಚಿತ್ರಗಳಿಗೂ ಹಾಡು ಬರೆಯುತ್ತಿದ್ದ ಕವಿಯೊಬ್ಬರ ಬಳಿ ಸಂದರ್ಶಕರು ಈ ಮಾತು ಕೇಳುತ್ತಾರೆ. ಅದಕ್ಕವರು “ಅಯ್ಯೋ, ಒಮ್ಮೆ ಇದಕ್ಕೆ ಇಂಥವನೇ ನಾಯಕ, ಇವಳೇ ನಾಯಕಿ ಅನ್ನೋದೆಲ್ಲ ಗೊತ್ತಾದರೆ ಅವರ ಮುಖ ಬಂದು ಕಣ್ಮುಂದೆ ನಿಂತು ಬಿಡುತ್ತೆ. ಆಗ ಹುಟ್ಟುವ ಪ್ರತಿಯೊಂದು ಸಾಲೂ ಆ ನಟರ ಪ್ರಭಾವಕ್ಕೊಳಗಾಗಿ ಬರೆಯುವುದೇ ಕಷ್ಟವಾಗುತ್ತೆ. ಅದಕ್ಕೇ ನಾನು ಬರೆಯುವ ಮುನ್ನ ನಟರ ಹೆಸರು ಕೇಳುವುದೇ ಇಲ್ಲ” ಎನ್ನುತ್ತಾರೆ.

ಅಮೂರ್ತತೆಯೆನ್ನುವುದು ನಮ್ಮನ್ನು ಕಾಯಲೆಂದೇ ದೇವರು ಸೃಷ್ಟಿಸಿದ ಸಂಗತಿಯೇನೋ ಎಂದು ಒಮ್ಮೊಮ್ಮೆ ಅನ್ನಿಸುವುದಿದೆ. ನಾನು ಇಂಥವರಿಗಾಗಿ ಬರೆಯುತ್ತಿದ್ದೇನೆ, ಇಂಥವರು ಇದರ ಮೌಲ್ಯಮಾಪನ ಮಾಡಲಿದ್ದಾರೆ, ಈ ಕೆಲಸ ಅವರನ್ನು ಹೀಗೆ ತಾಕಲಿದೆ ಎನ್ನುವುದೆಲ್ಲ ಅತ್ಯಂತ ಸೂಕ್ಷ್ಮವಾಗಿ ನಮ್ಮೆದುರು ಬಂದು ನಿಂತುಬಿಟ್ಟರೆ ನಾವು ಪ್ರತಿದಿನ ಮಾಡುವ ಕೆಲಸಗಳೆಲ್ಲ ಎಸ್ಸೆಎಲ್ಸಿಯ ಪಬ್ಲಿಕ್ ಪರೀಕ್ಷೆಯೇ ಆಗಿಬಿಡುತ್ತವೇನೋ? ಅಂಥಾದ್ದೊಂದು ಪ್ರಭಾವಕ್ಕೊಳಗಾದ ಕೆಲಸಗಳಲ್ಲಿ ನಮ್ಮತನವನ್ನು ಹುಡುಕುವುದೇ ಕಷ್ಟ. ಉದಾಹರಣೆಗೆ ‘ನಿರ್ದಿಷ್ಟವಾಗಿ ಇಂಥಾ ಪ್ರೇಕ್ಷಕರಿಗೋಸ್ಕರವೇ ನಾನು ಸಿನಿಮಾ ಮಾಡುತ್ತಿದ್ದೇನೆ, ಈ ಸಾಲಿಗೆ-ಈ ದೃಶ್ಯಕ್ಕೆ ಅವರು ಸಿಳ್ಳೆ ಹಾಕುತ್ತಾರೆ’ ಎಂದೆಲ್ಲ ತನ್ನ ಪ್ರೇಕ್ಷಕರನ್ನು ಎದುರು ನಿಲ್ಲಿಸಿಕೊಂಡು ಒಂದೊಂದೂ ದೃಶ್ಯವನ್ನು ಸೃಷ್ಟಿಸಿ ಮಾಡಿದ ಸಿನಿಮಾಗಳಿರುತ್ತಾವಲ್ಲ? ಅವುಗಳಲ್ಲಿ 99 ಭಾಗ ಇನ್ಯಾವುದೋ ಸಿನಿಮಾದ ಪಡಿಯಚ್ಚಿನಂತಾಗಿಬಿಟ್ಟಿರುತ್ತವೆ. ತಾನೇನು ಹೇಳಬೇಕೆನ್ನುವ ಸ್ಪಷ್ಟ ಕಲ್ಪನೆಯೇ ಇಲ್ಲದೇ ಕೇವಲ ಯಾರದೋ ಚಪ್ಪಾಳೆಗಾಗಿ ಹೆಣೆದ ಎರಡು ಮೂರು ನಿಮಿಷದ ಬೇರೆ ಬೇರೆ ಸಂಗತಿಗಳ ಹೊಂದಾಣಿಕೆಯಾಗದ ಮಣಿಗಳ ಹಾರದಂತೆ.

ಅಂತೆಯೇ ಇಂಥಾ ವಾದವೊಂದರ ತುಷ್ಠಿಗಾಗಿಯೇ ಬರೆಯುತ್ತೇನೆ ಎಂದು ಹೊರಟಾಗಲೂ ಅಷ್ಟೇ. ಅಲ್ಲಿ ಹುಟ್ಟುವ ಪಾತ್ರಗಳೆಲ್ಲ ಈಗಾಗಲೇ ಬರೆದು ಮುಗಿದ ಸಾವಿರಾರು ಕಥೆಗಳ ಒಂದಷ್ಟು ಹೊಳಹುಗಳನ್ನೇ ಮತ್ತೆ ಹೊಸ ಸಾಲಿನಲ್ಲಿ ನಿರೂಪಿಸಿ ತಮ್ಮ ಜನ್ಮವನ್ನು ಮುಗಿಸಿ ಎದ್ದು ನಡೆಯುತ್ತವೆ. ಅಂಥವುಗಳನ್ನು ಬೆಂಬಲಿಸಿ ಎತ್ತಿ ಹಿಡಿಯುವ ಜಾಲ ಎಷ್ಟೇ ಬಲವಾಗಿದ್ದರೂ ಅದರಾಚೆಗಿನ ವಲಯವನ್ನು ತಲುಪಿದಾಗ ಆ ಕಲೆಯ ಅಲೆಗಳು ಅತ್ಯಂತ ದುರ್ಬಲವಾಗಿಹೋಗುತ್ತವೆ. ಕಲೆಯೇ ಆಗಲಿ, ಕೆಲಸವೇ ಆಗಲಿ ಬದುಕಿನ ಅನುಭವಗಳಿಗೆ, ಅವು ಅರ್ಥಮಾಡಿಸಿದ ಸತ್ಯಗಳಿಗೆ ಅಭಿಮುಖವಾಗದೇ ಚಲಿಸಿದಾಗ ಗ್ರಾಹಕನಿಗೆ ತಲುಪಿಸಲು ನಾನಾ ಮಾರುಕಟ್ಟೆ ತಂತ್ರಗಳನ್ನು ಮೈಗೂಡಿಸಿಕೊಂಡು ಬಂದ ಉತ್ಪನ್ನಗಳಂತೆ ಭಾಸವಾಗುತ್ತವೆ.

ಉತ್ಪನ್ನವೊಂದು ಗ್ರಾಹಕನನ್ನು ತಲುಪಬೇಕೆಂದರೆ ಅದು ಅವನ ರುಚಿಗೆ, ಆ ಕ್ಷಣದ ಅಗತ್ಯಕ್ಕೆ, ಆ ನಿಮಿಷದ ಉದ್ವೇಗಕ್ಕೆ ಅನುರೂಪವಾಗಿದ್ದರೆ ಸಾಕು. ಅವನ ದೀರ್ಘಕಾಲದ ಒಳಿತನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ಯಾವ ದರ್ದೂ ಇಂದಿನ ಉತ್ಪನ್ನಗಳಿಗಿಲ್ಲ. ಪ್ರತಿಫಲಕ್ಕಾಗಿ ದುಡಿಯುವ ಹೊತ್ತಿಗೇ ಗ್ರಾಹಕನ ಒಳಿತಿನ ಬಗ್ಗೆಯೂ ಯೋಚಿಸುತ್ತಿದ್ದ ವ್ಯಾಪಾರಗಳಿದ್ದ ಸತ್ಯಯುಗವನ್ನು ಬಿಟ್ಟು ಮನುಷ್ಯ ಬಹಳ ದೂರಕ್ಕೆ ಬಂದಾಗಿದೆ. ಪ್ರತಿಫಲ ಹಾಗೂ ರಿಟರ್ನ್‌ಗಳಷ್ಟನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಮಾಫಿಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೂ ವ್ಯಾಪಿಸುವಷ್ಟು ನಮ್ಮ ನೈತಿಕತೆ ಹಳ್ಳ ಹಿಡಿದಾಗಿದೆ.

ಕಲೆಯೂ ಹಾಗೇ ಆಗಿಬಿಟ್ಟರೆ?

ಕಲೆಯನ್ನು ಬದುಕಿನ ದಾರಿಯಾಗಿ ಆಯ್ಕೆ ಮಾಡಿಕೊಂಡ ಮರುಕ್ಷಣವೇ ನಾವು ಪ್ರತಿಫಲಗಳ ಆಮಿಷವನ್ನು ಒಂದು ಹಂತಕ್ಕೆ ತೊರೆದೆವೆಂದೇ ಅರ್ಥ. ಸಮಾಜದ ಒಟ್ಟಂದದ ಒಳಿತಿನ ಬಗ್ಗೆ ಚಿಂತಿಸುವ ಅಪರೂಪದ ಕೆಲಸವನ್ನು ಕಲೆ ಮಾಡುತ್ತದಾದ್ದರಿಂದ, ಅದಕ್ಕೆ ಉಳಿದ ಕ್ಷೇತ್ರಗಳಂತೆ ತಿಂಗಳ ಸಂಬಳ ಇನ್ಸೆಟಿವ್, ಲಾಭಗಳು ತಳಕು ಹಾಕಿಕೊಂಡಿಲ್ಲವಾದ್ದರಿಂದ, ಆದರೂ ಕಲಾವಿದರಿಗೂ ಬದುಕಿನ ಅಗತ್ಯಗಳಿರುವುದರಿಂದ ಆ ಕ್ಷೇತ್ರವನ್ನೂ ಗುರುತಿಸುವ ಕೆಲಸವನ್ನು ಪ್ರಭುತ್ವಗಳು ಮಾಡಿದವು. ಕಾಲಾಂತರದಲ್ಲಿ ಸಂಘಗಳು ಹುಟ್ಟಿಕೊಂಡವು. ಯಾವಾಗ ತಮ್ಮ ಹಿತ ಕಾಯುವ ಶಕ್ತಿಯೊಂದು ತಮ್ಮನ್ನಾವರಿಸಿಕೊಂಡಿತೋ ಆಗ ಕಲೆಯೂ ನಿಧಾನವಾಗಿ ಅಂಥ ಪ್ರಾಬಲ್ಯದ ದಿಕ್ಕಿನಲ್ಲೇ ಹರಿಯತೊಡಗಿತು. ಕಾಲದಾಚೆಗಿನ ಸತ್ಯಗಳನ್ನು ಅರಿಯಲು ಸಹಾಯಮಾಡುವುದು ಇತಿಹಾಸ. ಅದನ್ನು ರಚಿಸುವುದು ಸಾಹಿತ್ಯ. ನಾನು ಇಂದು ಬರೆಯುವ ಕಥೆ ಮುಂದೊಂದು ದಿನ ಸತ್ಯವಾಗಿ, ದಾಖಲೆಯಾಗಿ ಅಂದಿನ ತಲೆಮಾರನ್ನು ತಾಕಲಿದೆ ಎನ್ನುವುದು ಅರ್ಥವಾದ ಮರುಕ್ಷಣ ಲೇಖನಿಯ ವೈಖರಿ ಬದಲಾಯಿತು. ಅದರ ಚಲನೆಯ ದಿಕ್ಕು ತಿರುಗಿತು. ಸತ್ಯದ ಜೊತೆಗೇ ಸುಳ್ಳೂ ಚರಿತ್ರೆಯ ಪುಟಗಳನ್ನು ಸೇರಿಕೊಂಡಿತು. ರಾಜರು ಅಳಿದ ಮೇಲೂ ರಾಜಾಶ್ರಯಗಳು ಉಳಿದವು. ಅವುಗಳ ಹಿತಾಸಕ್ತಿಗಳ ದಿಕ್ಕಿನಲ್ಲಿ ಮಾತ್ರ ಚಲಿಸಿದ ಪುಟಗಳಿಗಳಿಗೆ ಮಾತ್ರ ಬದಲಾದ ಕಾಲದಲ್ಲೂ ಮನ್ನಣೆ ಸಿಕ್ಕಿತು. ಅತ್ತ ಅದಕ್ಕೆ ಹೊರತಾದ ಸತ್ಯ-ಸುಳ್ಳುಗಳನ್ನೂ ಆಚೆ ತರುವ ಪ್ರಯತ್ನದಲ್ಲಿ ಸಮಾಜ ಗುಂಪುಗಳಾಗಿ ಒಡೆಯಿತು. ಯಾವುದು ಸತ್ಯ, ಯಾವುದು ಸುಳ್ಳು ಎಂದು ಅರಿಯಲೇ ಆಗದಷ್ಟು ಎಲ್ಲ ಗುಂಪುಗಳೂ ತಮ್ಮ ತಮ್ಮ ವಾದಗಳನ್ನು ಸಮರ್ಥಿಸಿಕೊಂಡವು. ಸಾಕ್ಷಿಗಳು ಸೃಷ್ಟಿಯಾದವು. ಯಾವೊಂದು ವಾದವೂ ಪೂರ್ತಿ ಸತ್ಯವಲ್ಲ, ಸುಳ್ಳೂ ಅಲ್ಲ ಎನ್ನುವ ಸಾಮಾನ್ಯ ಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ದೂರ ಇಡಲಾಯಿತು.

ಕಲಾರಸಿಕ ಗೊಂದಲಕ್ಕೊಳಗಾದ. ಅವನು ಹರವಿಕೊಂಡ ಪುಟಗಳ ತುಂಬ ಒಂದಕ್ಕೊಂದು ತದ್ವಿರುದ್ಧವಾದ ಹತ್ತಾರು ಸತ್ಯಗಳು. ತನ್ನ ಈ ಕ್ಷಣದ ಅರಿವಿಗನುಸಾರವಾದ, ತನ್ನ ಸೀಮಿತ ಅನುಭವಕ್ಕನುಗುಣವಾದ, ತನ್ನ ಸುತ್ತಮುತ್ತಲು ನಂಬುವಂತೆ ಪ್ರೇರೇಪಿಸಿದ ಸತ್ಯಗಳು ಅವನನ್ನು ಸೆಳೆದವು. ಅವನು ನಂಬಿದ.‌ ನಡೆದ. ಕೆಲ ಸತ್ಯಗಳಿಗೆ ಸಮನಾಂತರವಾಗಿ. ಇನ್ನು ಕೆಲವಕ್ಕೆ ವಿರುದ್ಧವಾಗಿ. ಕವಲು ದಾರಿಗಳೆಡೆ ಹೊರಳಿಯೂ ನೋಡದೆ ಒಮ್ಮುಖ ಹಾದಿಯಲ್ಲಿ ನಡೆದೇ ಬಿಟ್ಟ.

ಸಮಾಜ ಬಣಗಳಾಗಿಯೇ ಉಳಿಯಿತು.

*****

ಯೂಟ್ಯೂಬನ್ನು ತೆರೆದು ಕುಳಿತರೆ ನೂರೆಂಟು ಸಂಗತಿಗಳು. ಧೋನಿ ಗ್ರೇಟಾ ಅಥವಾ ಕೋಹ್ಲಿಯ ಎನ್ನುವ ವಾದಗಳು, ರಾಜಕೀಯ ಪಕ್ಷಗಳ ಕರ್ಮ‌ಕಾಂಡಗಳು ಹಾಗೂ ಅವನ್ನು ಏಕಮುಖವಾಗಿ ಸಮರ್ಥಿಸುವ-ವಿರೋಧಿಸುವ ಬುದ್ಧಿಶಕ್ತಿಗಳು, ಕೇವಲ ವೀಕ್ಷಣೆಗಳಷ್ಟನ್ನೇ ಗುರಿಯಾಗಿಸಿಕೊಂಡ ಕಪಲ್ ರೀಲ್‌ಗಳು, ಏಕಕಾಲಕ್ಕೆ ಈ ದೇಶವನ್ನು ಸ್ವರ್ಗವಾಗಿಯೂ, ನರಕವಾಗಿಯೂ ತೋರಿಸುವ ಟಾಕರ್‌ಗಳು, ತಮ್ಮ ನೆಚ್ಚಿನ ನಟರಿಗಾಗಿ ಬೆರಳ ತುದಿಗೆ ಖಡ್ಗ ಕಟ್ಟಿಕೊಂಡು ಟೈಪಿಸುವ ಅಭಿಮಾನಿಗಳು, ಅರ್ಥವೇ ಆಗದ ಲಾಜಿಕ್‌ಗಳು…

ಅದೇನೋ ಅಸಹನೆ… ಈ ಸಮಾಜದ ಮೇಲೆ. ಜನರ ಮೇಲೆ. ಸುತ್ತಲಿನವರ ಮೇಲೆ. ಕೊನೆಗೆ ನನ್ನ ಮೇಲೆಯೂ. ಇವೆಲ್ಲದರ ಮೂಲ ಎಲ್ಲೆಂದು ನೋಡುತ್ತ ಹೋದಂತೆ ಬಂದು ತಲುಪಿದ್ದು ದಿನದ ಕೆಲವೇ ಕೆಲವು ಕ್ಷಣಗಳ ಬಿಡುವಿನಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾದ ಎದುರು. ನೋಡುವ ಎಂದು ಅದರಲ್ಲಿನ ಜಾಳನ್ನೆಲ್ಲ ‘ನಾಟ್ ಇಂಟರೆಸ್ಟೆಡ್’ ಎಂದು ಬದಿಗೆ ಸರಿಸುತ್ತ ಬಂದೆ.‌ ಕಮೆಂಟು ಸೆಕ್ಷನ್‌ನ‌ ಬಾಗಿಲಿನ ಹಿಡಿಕೆಗೆ ಕೈ ತಗುಲಿಸಲೇ ಇಲ್ಲ. ಪಾಚಿ, ಕೆಸರು, ಕಸವನ್ನೆಲ್ಲ ಆಚೆ ಎಸೆದ ಬಳಿಕ ಕೊಳದ ನೀರು ನಿಧಾನವಾಗಿ ತಿಳಿಯಾದಂತೆ ಹಂತ ಹಂತವಾಗಿ ಸಹೃದಯೀ ಸಂಗತಿಗಳು ಹರಿದು ಬರತೊಡಗಿದವು. ಒಣ ಮರವೊಂದನ್ನು ಗಂಟೆಗಟ್ಟಲೆ ಕೆತ್ತಿ ವೀಣೆಯಾಗಿಸುವ ಶಿಲ್ಪಿ, ನಾವೆಂದೂ ಇಳಿಯಲಾಗದ ಕಡಲಾಳದ ಜೀವ ಲೋಕದ ಕತ್ತಲೆಯ ವೈಚಿತ್ರ್ಯಗಳಿಗೆ ಬ್ಯಾಟರಿ ಬಿಡುವ ಕುತೂಹಲಿ ಹುಡುಗ, ಪುಟ್ಟ ಸಿಟ್ಟೌಟ್‌ನಲ್ಲೇ ಹಣ್ಣಿನ ಬಳ್ಳಿಗಳ ಹಬ್ಬಿಸಿದ ಗೃಹಿಣಿ, ವರ್ಷಾಂತರಗಳಿಂದ ಪುಟ್ಟ ಗೂಡಂಗಡಿಯಲ್ಲಿ ಪುಸ್ತಕಗಳ ಮಾರಾಟಕ್ಕಿಟ್ಟುಕೊಂಡು ಕುಳಿತ ತಾತ, ಯಾವ ಆಮಿಷವನ್ನೂ ಗಮನದಲ್ಲಿಟ್ಟುಕೊಳ್ಳದೇ ನಾದದ ಸಾಕ್ಷಾತ್ಕಾರಕ್ಕಾಗಿ ನುಡಿಸುವ ಬಿಸ್ಮಿಲ್ಲ, ಇಂದಿನ ತಂತ್ರಜ್ಞಾನವೂ ನಿರ್ಮಿಸಲಾಗದ ಕ್ಲಿಷ್ಠ ಪಿರಮಿಡ್ಡುಗಳ ಕಟ್ಟಿಹೋದ ನಾಗರೀಕತೆಗಳು, ಅಸಾಧ್ಯ ಒಂಟಿ ಬಂಡೆಯ ಶಿಲ್ಪ-ಗುಡಿಗಳು… ಎಲ್ಲವೂ, ಎಲ್ಲದೂ ಒಂದೊಂದಾಗಿ ಬಂದವು. ವೀಕ್ಷಕ, ಕೇಳುಗ, ಓದುಗ, ಗ್ರಾಹಕ, ಮತದಾರ ಹಾಗೂ ಅಂತಿಮವಾಗಿ ಇವೆಲ್ಲವೂ ಆಗಿರುವ ಜನಸಾಮಾನ್ಯನ ಪ್ರಜ್ಞೆ ಎಚ್ಚರವಾದ ಮರುಕ್ಷಣ ಎಲ್ಲವೂ ಹೇಗೆ ಸೆನ್ಸಿಬಲ್ ಆಗುತ್ತವಲ್ಲವೇ!

ಇಡೀ ಜಗತ್ತು ಸಾಮಾನ್ಯ ಮನುಷ್ಯನನ್ನು ಎದುರಿಟ್ಟುಕೊಂಡಲ್ಲವೇ ತನ್ನ ಯೋಚನೆ, ಉತ್ಪನ್ನ, ತಂತ್ರ, ಸಂಯೋಜನೆಗಳನ್ನು ಸೃಷ್ಟಿಸುವುದು? ನಾವು ಪುರಸ್ಕರಿಸುವುದನ್ನು ನಿಲ್ಲಿಸಿದ ಬಳಿಕವೂ ನಿರಂತರವಾಗಿ ಉತ್ಪತ್ತಿಯಾಗುತ್ತಲೇ ಇರುವ ತಾಕತ್ತು ಯಾವ ಸುಳ್ಳಿಗಿದೆ?

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ