ಅವನಿಗೇನು ಗೊತ್ತು ಅವ್ರವ್ವನ ತ್ರಾಸು. ತವರುಮನ್ಯಾಗ ಒಂದು ಕಾಲು ಹೊರಗಾಕಲಾರದ್ಹಂಗ ಕಮ್ಮಗ ಕುಂತಗಂಡು ಬೆಳ್ದಾಕಿ ಇವರಪ್ಪನ ಕಟಿಗೆಂಡು ಏಟು ತ್ರಾಸು ಪಟ್ಟಿನಂತ. ನಮ್ಮ ಅತ್ತಿ ಬೇಗಂ ಏನ್ ಸಣ್ಣಾಗಿ ತ್ರಾಸು ಕೊಟ್ಲಾ ಕುಂತ್ರ ನಿರಮ್ಮಳಿಲ್ಲ ನಿಂತ್ರ ನಿರಮ್ಳಿಲ್ಲ ರಾತ್ರೀ ಮಕ್ಕಾಂಡಾಗೂ ವಟವಟ ಕೇಳಿ ಕೇಳಿ ಮನಿ ಯಾವಾಗ ಬಿಟ್ಟೀನಪೋ ದೇವ್ರೇ ಅನುಸೋದು. ಮನ್ಯಾಗ ನೋಡಿದ್ರ ಸರೀಗಿ ತಿಂಬಾಕ ಕೂಳಿಲ್ಲ ಅಂದ್ರೂ ನನಗಂಡುಂದು ಅತ್ತೀದು ಟಬರು ಬಾಳ.
ಶರಣಬಸವ ಕೆ. ಗುಡದಿನ್ನಿ ಬರೆದ ಚೊಚ್ಚಲ ಸಂಕಲನ “ಧಣೇರ ಬಾವಿ” ಪುಸ್ತಕದ ಒಂದು ಕಥೆ

 

ಮಹಾಂತೇಶ ನವಲಕಲ್ ಬರೆದ ಮುನ್ನುಡಿ

ಅದೇನೋ ಕಾಣೆ ರಾಯಚೂರು ಜಿಲ್ಲೆ ಕಥಾ ಕಣಜವೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿಯ ನೆಲಕ್ಕೆ ಕತೆಗಳು ಬೆಳೆಯುವ ಶಕ್ತಿ ಇದೆ. ತೊಗರಿಯ ಕಣಜವೆಂದು ಪ್ರಸಿದ್ಧಿ ಪಡೆದ ಕಲಬುರ್ಗಿ, ಭತ್ತದ ಕಣಜ ರಾಯಚೂರು ಎನ್ನುವ ಊರಿನ ಶಿರೋನಾಮೆಗಳು ಆ ಊರಿನ ಉತ್ಪಾದನಾ ಹೊರಸುಳಿಗಳಿಂದ ಗುರುತಿಸಲ್ಪಟ್ಟರೆ, ರಾಯಚೂರು ಜಿಲ್ಲೆಯನ್ನು ನಾವು ಭತ್ತದ ಕಣಜವೆನ್ನುತ್ತೇವೆ. ಈಗ ಮೂರು ದಶಕಗಳಿಂದ ರಾಯಚೂರು ಕತೆಗಳ ಕಣಜವೆಂದೇ ಪ್ರಸಿದ್ಧಿ ಪಡೆದಿದೆ. ಯಾಕಂದರೆ ರಾಯಚೂರಿನ ಕತೆಗಳು ಕನ್ನಡ ಕಥಾಪರಂಪರೆಯ ದಿಕ್ಕನ್ನು ಬದಲಿಸಿದವು. ಇಂತಹ ಜಗತ್ತು ನೋಡಿರದ ಓದುಗರು ನಿಬ್ಬೆರಗಾಗಿ ಇಂಥಹ ಬದುಕು ಇದೆಯಾ ಎನ್ನುವ ಜಿಜ್ಞಾಸೆಗೆ ಒಳಗಾದರು.

ಸೂಗೂರು ಶರ್ಮಾ ಅವರ ಸಾರಥ್ಯದಲ್ಲಿ ಆರಂಭವಾದ ಕಥಾಪ್ರಜ್ಞಾ ಕನ್ನಡ ಕಥಾಲೋಕಕ್ಕೆ ಶಾಂತರಸರನ್ನು ಪರಿಚಯಿಸುವದರೊಂದಿಗೆ ತನ್ನ ಔನ್ಯತೆಯನ್ನು ಮೆರೆಯಿತು. ನಿಜಾಂಶಾಹಿಯ ಕ್ರೌರ್ಯ ದಬ್ಬಾಳಿಕೆಯ ಉತ್ಪನ್ನಗಳಾದ ಅತ್ಯಾಚಾರ, ಲೂಟಿ, ಭಾವಸೌಹರ್ದತೆಗಳ ಒಡುಕನ್ನು ಶಾಂತರಸರ ಕಥೆಗಳು ಅದ್ಬುತವಾಗಿ ಚಿತ್ರಿಸಿದವು. ಇಲ್ಲಿಯ ಮನುಷ್ಯರು ಸುಮ್ಮನೆ ಗಾಳಿಯನ್ನು ತಿಂದು ಜೀವಿಸಿದಂತವರು. ಕಾಲವನ್ನು ವಿಸ್ತರಿಸಲು ಹಾಗೆ ಬದುಕಿದವರು ಎನ್ನುವ ಕಥೆಗಳು ನಮ್ಮನ್ನು ಕ್ಷಣ ದಿಗ್ಮೂಢರಾಗುವಂತೆ ಮಾಡುತ್ತವೆ. ಶಾಂತರಸರ ನೀಲಗಂಗಾ ಗುರುಪಾದ ಒಂದು ಆಣೆ ಎನ್ನುವ ಕತೆ, ನೀಲಗಂಗಾಳ ಪ್ರೀತಿ, ಗುರುಪಾದ ಕಳ್ಳ ಎನ್ನುವ ಹಣೆಪಟ್ಟಿ ಅಂಟಿಕೊಂಡಿರುವ ನರ ಬ್ರಾಂಡ್ ಅದಿರಲಿ. ನಾಯಕನ ತೊಳಲಾಟ ಅದರ ಹಿಂದೆ ಆರಂಭದಿಂದ ಅಂತ್ಯದವರೆಗೂ ಬರುವ ಫ್ಲೇಗ್ ಎನ್ನುವ ಮಹಾಮಾರಿ. ಆಮೇಲೆ ನೀರಮಾನ್ವಿಯವರು ಶಾಂತರಸರ ಕಥೆಗಳಲ್ಲಿ ಗೈರುಹಾಜರಿಯಾಗಿದ್ದ ಮನೋವಿಶ್ಲೇಷಣಾತ್ಮಕ ಅಂಶಗಳು ತಮ್ಮ ಕತೆಗಳಲ್ಲಿ ತಂದರು. ನೀರಮಾನ್ವಿಯವರು ಕೇವಲ 15 ಕತೆಗಳನ್ನು ಬರೆದರೂ 15 ಕತೆಗಳು ಇಡೀ ಭಾರತದಾದ್ಯಾಂತ ಚರ್ಚಿಸಲ್ಪಟ್ಟ ಕತೆಗಳು. ಅವರೆ ಹಂಗಿನ ಅರಮನೆಯ ಹೊರಗೆ, ಕರ್ಪೂರದ ಕಾಯದಲಿ, ವೃತ್ತ, ಭೂತ ಎನ್ನುವ ಕತೆಗಳು ಸರ್ವಕಾಲಿಕ ಕತೆಗಳಾಗಿವೆ. ಆಮೇಲೆ ಬಂದ ನುಗಡೋಣಿ, ಶಾಂತರಸ, ನೀರಮಾನ್ವಿ. ಕುಂವೀ. ಹಾಕಿದ ಕಥಾಪರಂಪರೆಯ ಬುನಾದಿಯ ಮೇಲೆ ಮಹಲನ್ನು ನಿರ್ಮಾಣ ಮಾಡಿದರು.

ನುಗಡೋಣಿಯವರ ಕತೆಗಳು ಧೂಳಕಂಟೆಯಂತೆ ಹೊರ ಮೈ ಸವರಿಕೊಂಡು ಹೋಗುವಂತವಲ್ಲ ಅವರ ಕತೆಗಳು. ಮಾಗಿಯಲ್ಲಿ ಆಳವಾಗಿ ಉಳುಮೆ ಮಾಡಿ ಕಬ್ಬಿಣದ ಮಡಕೆಯಂತೆ ನುಗಡೋಣಿಯವರ ಕಥಾ ಶೋಧನೆ ಅನನ್ಯವಾದದ್ದು. ಅವರ ತಮಂಧದ ಕೇಡು, ಸವಾರಿ, ಕಾಗೆ ಅಂತಹ ಅನೇಕ ಕತೆಗಳು ಬಹು ಸಾವಾಧಾನದಿಂದ ಧ್ಯಾನಿಸಿ ಮಂಥಿಸಿದಂತಹವು. ಅವರ ಕತೆಗಳಲಿ ಬರುವ ಪಾತ್ರಗಳ ಹೊರಗೆ ಹೊಂದಾಣಿಕಾತ್ಮಾಕ ಪಾತ್ರ ಅನ್ನಿಸಿದರೂ ಸಹ ಪರೋಕ್ಷವಾಗಿ ಪ್ರತಿಭಟನೆಯನ್ನು ದಾಖಲಿಸುವ ಪಾತ್ರಗಳೇ ಆದರೆ ಅದರ ಸ್ವರೂಪ ಭಿನ್ನವಾಗಿರುವಂತಹುದು. ಅವರ ಸವಾರಿ ಕತೆ ಭವಿಷ್ಯದಲ್ಲಿ ವರ್ತಮಾನ ಹೇಳುವದು. ಅದನ್ನು ನುಗಡೋಣಿಯವರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಆಮೇಲೆ ಬಂದ ಕಲಿಗಣ ನಾನು, ಸಾಲಿ, ಅಬ್ದುಲ್ ರಹೀಮ್ ಗೋನಾಳ ನಮ್ಮ ನಾಡಿನ ಸಾಂಪ್ರಾದಾಯಿಕ ಕಥಾ ಪರಂಪರೆಯಿಂದ ಆಚೆ ಬಂದರೂ ಸೂತ್ರ ಮಾತ್ರ ಅಲ್ಲೇ ಇದೆ.

ಈಚೆಗೆ ಬರೆಯುತ್ತಿರುವ ಶರಣಬಸವ ಗುಡದಿನ್ನಿಯಯವರ ಕತೆಗಳು ಓದಿದ ಮೇಲೆ ಕೆಲವು ವಿಷಯಗಳು ನನ್ನ ಗಮನ ಸೆಳೆಯುತ್ತಿವೆ.

1. ಇಲ್ಲಿಯವರೆಗೆ ಬಂದ ರಾಯಚೂರು ಕಥಾಪರಂಪರೆಯಿಂದ ತಪ್ಪಿಸಿಕೊಂಡು ವಿಭಿನ್ನ ಹಾದಿಗೆ ತಮ್ಮನ್ನು ಶಿಫ್ಟ್ ಮಾಡಿಕೊಂಡಿರುವದು.

2. ಕಥೆಗಳನ್ನು ಪ್ರತಿಶೋಧಿಸುವಾಗಿನ ಚಮಕ ನೋಟಕ್ಕೆ ತಾತ್ವಿಕ, ವೈಜ್ಞಾನಿಕ ಅಂಶಗಳನ್ನು ಆರೋಪಿಸಿಕೊಂಡಿರುವದು.

3. ಭಾಷೆಯನ್ನು ವಿಚಿತ್ರವಾಗಿ ದುಂಡನೆ ಮಾಡಿ ನೀರಿಳಿಯದ ಗಂಟಲೊಳಗೆ ಕಡುಬು ತುರುಕುವ ಕ್ರಿಯೆಯಿಂದ ದೂರ ಉಳಿದು. ಸರಳ ಸುಂದರ ಭಾಷೆ ಬಳಸಿರುವದು. ಇಲ್ಲಿಯ ಭಾಷೆ ಪಾತ್ರಗಳ ಭಾಷೆ ಗ್ರಾಮ್ಯವಾದರೆ ನಿರೂಪಕನ ಭಾಷೆ ಯುನಿವರ್ಸಲ್ ಸಂಹವನವಾಗಿದೆ.

4. ಇಲ್ಲಿಯ ನಿರೂಪಕ ಕತೆಯನ್ನು ದೂರನಿಂತು ದಾಖಲಿಸುತ್ತಾನೆಯೇ ಹೊರತು ಕತೆಯ ಬಳಿಗೆ ಕ್ಷಣಕ್ಷಣಕ್ಕೂ ನುಸುಳಿ ಮೂಗು ತೂರಿಸುವ ಕೆಲಸ ಮಾಡುವುದಿಲ್ಲ.

ಶರಣಬಸವ ಅವರು ಮಾನ್ವಿ ತಾಲೂಕಿನ ಗುಡದಿನ್ನಿ ಕೆ ಎಂಬ ಊರಿನಲ್ಲಿ ಹುಟ್ಟಿದವರು. ಈ ಊರು ತುಂಗಭದ್ರಾ ಕಾಲುವೆ ದಂಡೆಯಲ್ಲಿ ಇರುವ ಒಂದು ಸುಂದರ ಊರು. ಇಲ್ಲಿ ನೀರಾವರಿ ಐವತ್ತು ವರ್ಷಗಳ ಹಿಂದೆ ಬಂದರೂ, ಎಲ್ಲವೂ ಎಲ್ಲಾ ಭೂ ಒಡೆತನ ಆಂಧ್ರದವರ ಕೈಯಲ್ಲಿ ಇದೆ. ಐವತ್ತು ವರ್ಷದಲಿ ನೀರಾವರಿಯಿಂದ ಬದುಕು ಹಸನಾಗಬೇಕಿದ್ದ ಇಂತಹ ಹಳ್ಳಿಗಳ ಜೀವನ ಇನ್ನೂ ಕಷ್ಟಕರವಾಗಿದೆ. ಇಂತಹ ಹಳ್ಳಿಗಳು ನಮ್ಮ ರಾಯಚೂರು ಜಿಲ್ಲೆಯಲ್ಲಿ ನೂರಾರು ಸಿಗುತ್ತವೆ. ನಾನು ಇಂತಹ ಹಳ್ಳಿಯಿಂದ ಬಂದಿದ್ದೆನಾದುದರಿಂದ ಬಹುತೇಕ ಶರಣಬಸವರ ಅನುಭವ ನನ್ನದು ಆಗುತ್ತದೆ. ಶರಣು ಅವರ ಕಥಾ ಪ್ರಪಂಚ ಹೀಗಿದೆ.

******

ಖಂಡದ ಸಾರು..

ಒಲಿಮ್ಯಾಲ ಇಟ್ಟ ಬೋಗಣಿಯೊಳಗಿನ ಖಂಡ ಜಲ್ದಿ ಕುದಿವಲ್ದು. ಏಟೋತ್ತಾಯ್ತು ಇಟ್ಟು, ಒಟ್ಟಿದ ಕಟಿಗೆಲ್ಲ ಉರ್ಕೊಂಡೋದ್ವು. ಅಕ್ಬರಗ ಏಟುಸಲ ಹೇಳೀದ್ರೂ ಅಷ್ಟಾ, ಅವ್ನ ಬಾಯಾಗರ ಮಣ್ಣಾಕ! ಬಲ್ತಮರಿ ಇದ್ರ ತರಬಾಡೊ ಕುದುಸದ್ರಾಗ ಹೆಣಬೀಳತೈತಿ ಅಂದ್ರು ಕೇಳಾಂಗಿಲ್ಲ. ಕಳ್ಳು, ಪಚ್ಚೀ, ಗುಂಡಿಗಿ ಸಾರು ಏಟು ಜಲ್ದಿ ಕುದೀತಿ ಈ ಎಲುಬಿನ ಖಂಡ ಕುದ್ಯಾದ ತಡ. ಅದೊಂದೀಟು ಕುದ್ರ ಪುಟ್ಯಾಗಿಟ್ಕಂಡು ಹೋಗಿ ಈಟೋತ್ತಿಗಿ ಅರ್ದ ಮಾರಿರುತ್ತಿದ್ಯ. ಚೊಲೊ ಹೋತುಮರಿ ಕೊಯ್ದಾಗ ಹೇಳಪ ಅಂದ್ರ ಖಂಡ ಖಲಾಸಾಗಮುಂದ ಹೇಳತಾನ ಕುರುಬರು ನಿಂಗಪ್ಪ. ಹಾಕಿದ ಪಾಲು ನಾಕು ಮಂದಿ ಒಯ್ದು ಖಲಾಸಾಗ ಮುಂದ ಯಾರನಾರ ಕೊಟ್ಟು ಕಳಸ್ತಾನ.

ಆತಗ ನಮ್ಮ ತ್ರಾಸೆಂಗ ತಿಳೀತದ ಚೂರಿ ಹಾಕಮುಂದಾನ ಇದ್ರ ರಗತ ಒಂದು ತಂಬಿಗ್ಯಾಗ ಇಸಗಮಂದು ರಗುತುಕ ಕಾರ,ಉಪ್ಪಾಕಿ ತೊಟುಗು ಜ್ವಾಳದ ಹಿಟ್ಟಾಕಿದರ ಮಂದಗ ಎಂತ ಸಾರಾತಾದ ಹೊಲ್ದಾಗ ಕೆಲ್ಸಾ ಮಾಡ ಹೆಣ್ನಕ್ಳು,ಗಣ್ಮಕ್ಳು ಎಲ್ಡು ಎಲ್ಡ್ರುಪಾಯ್ದು ಅದನ್ನ ಹಾಕಿಸೆಂಡು ಉಣತಾರ‌.

ಮರೀ ಕೊಯ್ಯಾಮುಂದ ಅಕ್ಬರ್ರಗ ಚೂರೀ ಹಾಕಕ ಚಾನ್ಸು ಸಿಕ್ರಾ ಅದೊಕ್ಕೊಂದು ತೊಟುಗು ಖಂಡ ಸಿಗತಾದ ಹೇಳಿದರೆಲ್ಲಿ ಕೇಳ್ತಾನ ಮಗಾಂಬವ!

ಊರೆಲ್ಲ ತಿರಿಗಿ ಲಾಸ್ಟಿಗಿ ಕೆಲಸದದ್ದಲ್ಲಿಗಿ ಹೋತನ. ಹೊತ್ತಾದಂಗೆಲ್ಲ ಕೈಕಾಲ ಆಡಂಗಿಲ್ಲ ಇನ್ನೊಂತೊಟುಗು ತಡ ಆದ್ರ ಜಾಸ್ತಿ ಗಿರಾಕಿ ಮಾಡ ಆ ಪಾರಾಗಳು ಎಲ್ಲೀ ಹೋತಾವೇನು. ನಾ ಹೋಗಟಿಗಿ ನಾಕೈದು ಲಿಂಗಾಯತರ ಪಾರಾಗಳು ಊರಮುಂದೀನ ಹೊಲ್ದಾಗ ಹಾಕಿದ ಪಂಪ್ಚೆಟ್ಟಿನ ಗುಡಿಸಲ್ದಾಗ ಅನ್ನ ಮಾಡಿಕೆಂಡು ಕಾಯ್ತಿರತಾವ!ನಾ ಹೋದ್ರ ಸಾಕು ಹಿಡಿಕೀದು ಸಣ್ಣ ಬೋಗಣಿ ತಂದು ಹತ್ತು ರುಪಾಯ್ದು ಬೋಟಿಸಾರು, ಹತ್ರುಪಾಯ್ದು ಖಂಡದ ಸಾರು ಹಾಕಿಸಿಗೆಂಡು ಚಪ್ಪರಿಸಿ ಉಣತಾವು.

ಉಣಮುಂದಾ “ಮಕ್ತುಂಬಿ ದೊಡ್ಡಮ್ಮ ಬಾರೀ ಮಾಡ್ತ್ಯವ ಖಂಡ,ನಿನ ಕೈಯಾಗ ಬಾರೀ ರುಚಿ ನೋಡು ಉಣ್ಣಾಕ ಮಾನಿವಿ ಸಿರವಾರದಾಗೂ ಹಿಂಗ್ ಮಾಡಕಿಲ್ನೋಡು”ಅಂತ ಮ್ಯಾಕೇರಿಸಿಗ್ಯಾಂತ ರೊಕ್ಕ ಕೊಡಾಮುಂದಾ ಎಲ್ಡು-ಮೂರು ರೂಪಾಯಿ ಕಮ್ಮೀ ಕೊಡತಾವ,

“ಈಟೈತಿ ತಗಂಗೇ ಉಳಿದಿದ್ದು ದ್ಯಾಸಿಟ್ಗ ರಾಶಿ ಮಾಡ್ಡ್ಯಾಗ ಕವಳೀ ಕೊಡಾಮು” ಅಂತೇಳಿ ನಗತಾವ. ಇರಲಿ ಬುಡು ಚೂರು ರಕ್ಕ ಕಡಿಮಿ ತಗಂಡ್ರೇನತದ ಹೊಟ್ಟಿ ತುಂಬ ಉಂಡವಲ ಸಾಕು ಅನಿಸ್ತದ. ಪುಟ್ಟಿ ಹೊತಗಂಡ ಹೊಲ ಹೊಲ ಅಡ್ಯಾಡಿದ್ರ ಸಂಜೀಕಿ ಹೂಬಿಸ್ಲು ಬೀಳಟಿಗಿ ಪುಟ್ಯಾಗಿಂದು ಖಾಲಿ ಆತದ ಖಂಡದ್ದು, ಮಸಾಲಿದು ಖರ್ಚು ತೆಗದ್ರ ಹತ್ತನ್ನೆಲ್ಡ್ರುಪಾಯಿ ಉಳದ್ರಾಯ್ತು ನನಗರ ಏನು ಅರಮನೀ ಕಟ್ಟದೈತಿ ಅನಿಸುತ್ತಾ. ಆದ್ರಾ ಮಗಾ ಅಕ್ಬರಗಾ ನಾನು ಹಿಂಗಾ ಊರೂರು, ಮನಿ ಮನಿ ತಿರಗಾದು ಬೇಸಿಲ್ಲ.

(ಶರಣಬಸವ ಕೆ. ಗುಡದಿನ್ನಿ)

“ಯಾಕ ಹೊತಗಂಡು ತಿರಗತಿದ್ದಿ ಮನ್ಯಾಗ ಮಾಡು ಹೊರಗೊಂದು ತಗಡಿಂದು ಶೆಡ್ ಹಾಕಾಮು ಬೇಕಾದೋರು ಇಲ್ಗೆ ಬಂದು ಉಂಡು ಕುಂಡಿ ಮುಚಿಗೆಂಡು ರೊಕ್ಕ ಕೊಟ್ಟೋತರ” ಅಂತಾನ.

ಅವನಿಗೇನು ಗೊತ್ತು ಅವ್ರವ್ವನ ತ್ರಾಸು. ತವರುಮನ್ಯಾಗ ಒಂದು ಕಾಲು ಹೊರಗಾಕಲಾರದ್ಹಂಗ ಕಮ್ಮಗ ಕುಂತಗಂಡು ಬೆಳ್ದಾಕಿ ಇವರಪ್ಪನ ಕಟಿಗೆಂಡು ಏಟು ತ್ರಾಸು ಪಟ್ಟಿನಂತ. ನಮ್ಮ ಅತ್ತಿ ಬೇಗಂ ಏನ್ ಸಣ್ಣಾಗಿ ತ್ರಾಸು ಕೊಟ್ಲಾ ಕುಂತ್ರ ನಿರಮ್ಮಳಿಲ್ಲ ನಿಂತ್ರ ನಿರಮ್ಳಿಲ್ಲ ರಾತ್ರೀ ಮಕ್ಕಾಂಡಾಗೂ ವಟವಟ ಕೇಳಿ ಕೇಳಿ ಮನಿ ಯಾವಾಗ ಬಿಟ್ಟೀನಪೋ ದೇವ್ರೇ ಅನುಸೋದು. ಮನ್ಯಾಗ ನೋಡಿದ್ರ ಸರೀಗಿ ತಿಂಬಾಕ ಕೂಳಿಲ್ಲ ಅಂದ್ರೂ ನನಗಂಡುಂದು ಅತ್ತೀದು ಟಬರು ಬಾಳ. ನಮ್ಮಂದೀ ಪರದ ತೆಗೀಬಾರದು ಮಂದೀ ಹಂತ್ಯಾಕ ಮಾತಾಡಬಾರದು ಒಂದ್ಸಲ ಹೊಸ್ತಲಾ ದಾಟಿ ಒಳಗ ಬಂದ್ರಾ ಮತ್ಯಾ ದಫನಕ್ಕ ಹೆಣ ಸಿಂಗಾರಾಗಿ ಹೋಗಬಕು ಅಂತೆಲ್ಲ ಅನಕೋಂತ ಒಂದು ಹೊತ್ತೀಗಿ ಉಂಡು ಎಲ್ಡು ಹೊತ್ತು ಉಪಾಸ ಬೀಳ್ತಿದ್ವು. ಅತ್ತೀ ಮನೀ ಕಟ್ಟೀಮ್ಯಾಲ ಕಾಯಿಪಲ್ಯ ಮಾರತಿದ್ಲು ಕಾಯಿಪಲ್ಯ ತಗಾಳಾಕ ಬಂದೋರ ಜನುಮ ಜಾಲಾಡಿ ಹಗುರಿಕಿದ್ರ ಲಾಡೀನ ಬಿಚ್ಚೀ ಕಳಸೋಟು ಬೆರಿಕಿ ಮುದ್ಕಿ.

ಇನ್ನ ಗಂಡಾಂಬಾವ ಊರಾಗೆಲ್ಲ ಉದ್ರೀ ಅಡ್ಯಾಡಿ ಚಾ ಕುಡ್ದು ಸಂಜೀ ಮುಂದ ಯಾರ್ದಾರ ಮರಿ ಚೂರೀ ಹಾಕಿ ಅವ್ರು ಕೊಟ್ಟ ಖಂಡಾನ ತಂದು ಕುದಿಸಿಕೊಡು ಅಂತ ಜೀವ ತಿಂತಿದ್ದಾ! ಸಾರು ಮಾಡದಂದ್ರ ಸುಮ್ನ್ಯಾ ಆತದೇನು ತವ್ರುಮನ್ಯಗಾದ್ರ ನಮ್ಮವ್ವ, ನಾನು, ಇಬ್ರೂ ತಮ್ದೋರು ಇರೊ ನಾಕುಮಂದೀಗಿ ಖಂಡ ಮಾಡಾಕಿಟ್ರಾ ಅದೆಷ್ಟು ಮಸಾಲಿ ರುಬ್ಬುತ್ತಿದ್ವಿ.

ಅಲ್ಲಾ ಅಂತ, ಪುದೀನಂತ, ಸಂತ್ಯಾಗ ಸಿಗಾ ಯಾಲಕ್ಕಿ, ಲವಂಗದ ಜೊತೀಗಿ ಸಿಗಾ ಚಕ್ಕಿ, ನೀಲಗಿರಿ ಗಿಡದ್ದು ಇರಾಂಗ ಇರತಾದಲ ಅಂತಾದು ಎಲಿ, ಕೊಬ್ರಿ ಪುಡಿ ಎಲ್ಲಾ ಉರುದು ರುಬ್ಬಿದರ ಅದಾ ಖಂಡದೊಷ್ಟು ಆಗೋದು. ತೆಳ್ಳಗ ಎಣ್ಣಿ ಹಾಕಿ ಒಲೀಮ್ಯಾಲ ಕುದಿಸಿದ್ರ ನಮ್ಮನೀ ಅಡಿಗಿ ವಾಸ್ನಿ ಓಣ್ಯಾಗೆಲ್ಲ ಹಬ್ಬಾದು. ಅಂತ ಅಡಿಗಿ ಮಾಡಿ ತಿಂದ ನನಗ ಹಿಡಿಯೋಟು ಖಂಡ ತಂದು ಖಾರ-ಉಪ್ಪಾಕಿ ಕುದಿಸಿಕೊಡು ಅಂದ್ರ ಹೊಟ್ಟಿ ತೊಳಿಸಿ ಬಂದಾಂಗಾಗಿ ಖಂಡದ ಮರಿಯಾದಿ ತೆಗ್ಯಾಕ ಹುಟ್ಯಾವ ಇವು ಅನುಸೋದು. ಚೂರು ಮಾತೀಗಿ ಊರು ಒಂದು ಮಾಡತಿದ್ದ ಅತ್ತೀ ಅಂಬಾಕಿ ಸತ್ತು ಊರಮುಂದ್ಲಾ ಹೊಲ್ದಾಗ ಗದ್ದಿಗಿ ಆದಮ್ಯಾಲಾನ ಬದುಕು ಚೂರು ದಾರೀಗಿ ಹತ್ತಿದ್ದು.

ಆಟೋತ್ತಿಗಿ ಮಗ ಅಕ್ಬರ್ ಕೈಯಿಗಿ ಬಂದಿದ್ದ. ನನ ಕೈಯಿ ಅಡಿಗಿ ಉಂಡಿದ್ದ ಏಟು ಮಂದಿ ಒಂದು ಹೋಟ್ಲಾರ ಮಾಡಿಬಿಡವ್ವ ಅನ್ನೋರು. ಮನಿವೊಳಗ ಗೊತ್ತಿಲ್ದ ಕಳ್ತನೆಲ್ಯ ತಿಂದು ಮೈತೊಕ್ಕಂಡು ಮನೀಗಿ ಹೋತಿದ್ದ ಅಮ್ರಪ್ಪಗೌಡ ಸಮೇತಿಗಿ
“ಮಕ್ತುಂಬಿ ಅಕ್ಕಾ ನೀ ಮಿಲ್ಟ್ರೀ ಹೋಟ್ಲು ಮಾಡಿಬಿಡಾವ ಏಟು ಚಂದ ಮಾಡ್ತಿದೀ, ಮಾನವೀ ಸಿರವಾರದಾಗ ಫುಲ್ ಅವೇ ಈಗ ಬೇಕರ ಶೆಡ್ ಹಾಕ್ಯಳಾಕ ಅದೇಟು ಖರ್ಚಾತದ ಕೊಡಿತೀನಿ ನಿಧಾನಕ ಕೊಡವಂತಿ” ಅಂತ ಅಂದಿದ್ದ. ಆದ್ರ ನನಗ ಯಾವ್ದೊ ಘಳಿಗ್ಯಾಗ ಕೈಲಾದೋಟು ಖಂಡ ಮಾಡಿಕೆಂಡು ಹೊತಗಂಡು ಮಾರಬೋಕು ಅನಿಸಿಬಿಡ್ತಿ! ಮದುವೀ ಆಗಿ ಒಂಭತ್ತು ವರ್ಸ ಆದ್ರೂ ಮನಿ ಬಿಟ್ಟು ಹೊರಗ ಒಂದು ಹೆಜ್ಜಿ ಹೋಗಲಾರದ ಸಿಟ್ಟೀಗೋ ಏನೋ? ನನ್ನಂಗ ಏಟು ಜೀವಗಳು ಹಂಗಾ ಅತ್ತೀಗಿ ಹೆದ್ರೀ ಮನ್ಯಾಗ ಕುಂತಾವ ನೋಡಾಮು ಅನ್ನೋದುಕೊ, ಹೊಲ್ದಾಗ ಕೆಲಸ ಮಾಡಿ ದಣದ ಜೀವಗಳಿಗಿ ಎಲ್ಡು ತುತ್ತು ಹಾಕಿದಂಗಾತದ ಎಷ್ಟರ ಕೊಡ್ಲಿ ಅನಿಸಿ ಆವಾಗಿಂದ ಇದು ಚಾಲು ಮಡಿದ್ಯಾ.

ಪಸ್ಟಿಗೆ ಗಂಡ ಎಗರಾಡಿ ಬೈಲಾಟ ಆಡಿದ
“ನೀ ಊರಾಗೆಲ್ಲ ಪುಟ್ಟಿ ಹೊತಗಂಡು ತಿರಿಗಿ ನಮ್ಮನಿ ಮರಿಯಾದಿ ಕಳೀತಿದಿ”
ಅಂದ ಆತಗೇನು ಗೊತ್ತಿತ್ತು ನಾ ಹಿಂಗಾ ಮನೀ ಮನೀ ತಿರುಗಿ ತಗಳಾಕ ಬಂದೋರು ಜತೀಗಿ ಕುಂತು ನಾಕು ಮಾತಾಡಿ ಅವರ ನಾಕು ಮಾತು ಕೇಳಿ ಈಟು ದಿನ ನಾ ಮರತ ಹೋಗಿದ್ದ ಮಾತಗಳ್ನ ಮತ್ತೆ ನೆನಿಸಿಕೆಳ್ಳಾಕ ಹಚ್ಚೀನಿ ಅಂತ. ಇಷ್ಟು ದಿನ ಎದ್ಯಾಗ ಇಟಗಂಡ ನೋವ್ನೆಲ್ಲ ಸಿಕ್ಕಾ ಮಂದಿ ಮುಂದ ಹೇಳಿ ಅವ್ರು ಗಂಗಾಳದಾಗೀನ ಖಂಡ ಉಣಕಾಂತ ಲೊಚಗುಟ್ಟಿ
“ಎಷ್ಟಾರ ಕಷ್ಟ ಪಟ್ಟಿದ್ಯಾ ಯವ್ವಾ ಹೇಮರಡ್ಡೀ ಮಲ್ಲಮ್ಮ ಇದ್ದಂಗ ನೋಡು” ಅಂದಾಗ ಎದೀ ಹಗುರಾಗಿ ಮನಸು ನಿರಮ್ಮಳ ಆಗೋದು. ಅದೀಟು ಹಗುರಾಗಾಕ ದಾರಿ ಇಲ್ಲಾಂದ್ರ ನಾ ಈಟು ದಿನ ಬದಕದಾರ ಹೆಂಗ್ ಆತಿತ್ತು? ಮೂರಾಮುಂಜ್ಯಾಲ ಸೇದಾ ಬಾಯಾಗ ಬಿದ್ದು ಕುಣೀಗೆ ಹೋತಿದ್ದೆ.

ಖಂಡದ ಪುಟ್ಟಿ ವತಗಂಡು ಹೊಂಟ್ರಾ ದೊಡ್ಡು ಕಾಲೇವು ಮುಟ್ಟತೀಗಿ ಇಬ್ರು ಮೂವ್ವೋರು ಹಾಕಿಸಿಗ್ಯಂತಿದ್ರು ಬ್ಯಾಡರ ಫಕೀರಪ್ಪನ ಅವ್ವಗ ಖಂಡ ಇಲ್ಲ ಅಂದ್ರ ನಡಿಯಾಂಗಿಲ್ಲ. ಗಂಡ ಇದ್ದಾಗ ಹೊಲ್ದಾಗ ಮನೀ ಮಾಡಿಕೆಂಡು ಇದ್ದಾಕಿ ದಿನ ಬೆಳಗಾದರ ಕೋಳಿ, ಕೌಜುಗ, ಮಳಿ ಬಂದ್ರ ಮೊಲದ ಬ್ಯಾಟಿ ಅಂತ ಆಕೀನ ಬಾಯಾಗ ಬರಾಮೊದ್ಲ ಖಂಡಾ ತಿನಿಸ್ತಿದ್ನಂತ ಮುದ್ಯಾತ. ಆತ ಹೋದ ಮ್ಯಾಲ ಊರಾಗಿನ ಸೊಸೀ ಮಕ್ಳತಾಕ ಬಂದು ಅದ್ಯಾಳ. ಫಕೀರಪ್ಪ ಸಿಕ್ಕಾಂಗೆಲ್ಲ
“ಯಕ್ಕಾ ನಮ್ಮವ್ವ ಕೇಳ್ದೋಟು ಹಾಕಿ ಹೋಗಮೋ ಬೇಳೀಗಿ ಎಲ್ಡು ಚೀಲ ನೆಲ್ಲು ತಂದಾಕ್ತೀನಿ ಮನೀಗಿ” ಅಂತಿದ್ದ.

ನೆಲ್ಲು ಬರಾವೇನು ಬಂದು ಬೀಳುತ್ತಿದ್ವು ಮನೀಗಿ ಆದರೆ ನನಗ ನೆಲ್ಲು ಬೀಳದಿದ್ರೂ ಗಂಗಾಳದಾಗ ಕಳ್ಳು, ಗುಂಡೀಗಿ ಹಾಕಿದಾಗ ಮುದ್ಕೀ ಮಾರೀ ಅಳ್ಳೋದು ನೋಡಾಕ ಖುಷಿ ಅನಸೋದು. ನಾ ಏಟು ರಕ್ಕಾಕ ಅಂತ ಮಾಡಿದ್ರು ಉಂಡೋರು ಬೇಸ್ ಮಾಡಿದೀ ಅಂದ್ರ ಮನಸಿಗಿ ಸಮಾಧಾನ.

ಮುದುಕಿಯಂತೂ ಬೊಚ್ಚು ಬಾಯಾಗ ಸೊರ್ರ್ss ಅಂತ ಎಲುಬಿನೊಳಗಿನ ‘ನೆಣ’ ನ ಎಳಕೋಂತ ಚಪ್ಪರಿಸಿ ಉಣಕೋಂತ ಕೈಯಿ, ಬಳ್ಳು ಚೀಪಿ, ನೆಕ್ಕೀ ಗಂಗಾಳ ತೊಳಿಯಾದ ಬೇಕಿಲ್ಲ ಹಂಗ ಉಂಡು ಮುಗುಸುತಿದ್ಲು ಉಣಾಮುಂದ ಏಟು ಕತೀ ಹೇಳಾಕಿ. ಹತ್ತು ಮಂದೀಗಿ ಆಗಲಾರದ ಕಾಡುಹಂದೀನ ತನಗಂಡ ಹೆಂಗ ಬರೀ ಒಂದು ಕೈಗೊಡಲೀಲಿ ಕೊಲ್ಲಿ ಹೆಗಲ ಮ್ಯಾಲ ಹೊತಗಂಡ ಬಂದ ಅಂಬಾದ್ನ ಎದ್ದು ನಿಂತು ನಾಟಗ ಮಾಡಿದಂಗ ಮಾಡಿ ತೋರಸಾಕಿ ಹಂಗ ತೋರಸಾ ಮುಂದಾ ಕಟ್ಟಿದ್ದ ತುರುಬು ಉಚ್ಚಿದ್ರು ಆಕೀಗಿ ದ್ಯಾಸ ಇರತಿದ್ದಿಲ್ಲ. ಎಂತ ಚಂದ ಬಾಳೇವು ಮಾಡ್ಯಾವ ಗಂಡಾ-ಹೆಂಡ್ರಂದ್ರ ಹಿಂಗಿರಬೇಕು ಅನುಸೋದು.

ಯಾಕಂದ್ರ ಆ ಮುದ್ಯಾತ ಸತ್ತು ಈಟು ದಿನಾದ್ರೂ ಆಕಿ ಆಡ ಎಲ್ಲಾ ಮಾತ್ಯ್ನಾಗು ಇರಾತಾನ. ಮುದುಕೀಗಿ ಕೊಟ್ಟು ನಾಕು ಸುದ್ದಿ ಹೇಳಿ ದೊಡ್ಡ ಕಾಲೇವು ದಾಟಿ ಹಳ್ಳದಂಡೀಗಿ ಹೋಗಟಿಗಿ ಬಿಸಿಲು ಏರತಿತಾದ.

ಏಟು ಬಿಸಿಲಿದ್ರೂ ಹಳ್ಳದಂಡ್ಯಾಗ ಹೋತಿದ್ದಂಗ ಹುಡುಗುರು ದೊಡ್ಡೋರು ಮುಕ್ರಿಕೆಂಡು ಬಿಡತಾರ ಪೂಜಾರೇರ ಮಲ್ಲಮ್ಮನ ಅಂಗಳದಾಗ ಕುಂತ್ರ ಸಾಕು ಅಲ್ಲಿಗೆ ಕೈಯಾಗ ರಕ್ಕದ ಜತೀಗಿ ಗಂಗಾಳ, ಬಟ್ಲಾ ಹಿಡಕಂಡು ಬಂದು ಹಾಸಿಗೆಂಡು ಹೋತಾವ. ಮಲ್ಲಮ್ಮನೂ ನನ್ನಂಗ ಬಂಗಾರದಂತಹ ತೌರು ಮನ್ಯಾಗ ಬೆಳ್ದಾಕಿ ಮದುವ್ಯಾಗಿ ಬಡತನದ ಒಡಲಾಗ ಬಿದ್ದಾಕಿ. ಆಕಿ ಅಪ್ಪ ನೌಕ್ರದಾರ ಏಳನೇತ್ತಿ ಓದಿದ ಮಗಳ್ನ ಹಿಂಗಾ ಕುರಿ ಕಾಯ ಮಾನಯ್ಯಗ ಯಾಕ ಕೊಟ್ಟ ಅಂತ ಇವತ್ತಿಗೂ ತಿಳಿಯಾಂಗಿಲ್ಲ.

ಆದರ ಆಕಿ ಮುಖದ ಮ್ಯಾಲ ಈಟುದಿನದಾಗ ಒಂದೀನಾನು ಖುಷಿ ಕಾಣ್ಲಿಲ್ಲ ನಾಕು ಮಾತು ಚಂದ ನಕ್ಕೋತ ಮಾತಾಡಿದ್ದು ಕಂಡಿಲ್ಲ. ಕೂಲಿ ಹೋದರೇನೇ ಒಲಿಮ್ಯಾಲ ಅನ್ನ ಕುದೀಬೇಕು ಹಂಗೈತಿ ಪರಿಸ್ಥಿತಿ. ಆಕೀ ಮಗಾ ಶಾಣ ನಾ ಹೋತಿದ್ದಂಗಾ ದೊಡಮ್ಮ ಛಾರು.. ಅಂತ ಬರತಾದ. ಮುಂಜಾನಿ ಕೂಲಿ ಕೆಲಸಕ್ಕ ಹೋದಾಕಿ ಬರೋದು ಹೊತ್ತು ಮುಣಗಮುಂದ. ಬಂದಾಕಿನ ಮುಂದಾ ಕುಂತು ಕಣ್ಣೀರು ತೆಗಿತ್ಯಾಳ
“ಯಕ್ಕಾ ನಮ್ ಬದುಕ್ಯಾವಾಗ ಬೇಸಾತವಂಗೇ,ನನಗಂತೂ ಈಸೀ ಈಸೀ ಸಾಕಾಗ್ಯಾದ ಉಂಡ್ರಾ ಉಡಾಕಿಲ್ಲ, ಉಟ್ರಾ ಉಣ್ಣಾಕಿಲ್ಲ ಏನರ ಕುಡುದು ತಣ್ಣಗ ಹೋಗಿಬುಡಾಮು ಅನಸ್ತದಾ ಮಕ್ಳಾ ಮಾರೀ ನೋಡಿ ಉಳ್ಕಂಡೀನೀ” ಅಂತಾಳ.

ತೆಳ್ಳಗ ಎಣ್ಣಿ ಹಾಕಿ ಒಲೀಮ್ಯಾಲ ಕುದಿಸಿದ್ರ ನಮ್ಮನೀ ಅಡಿಗಿ ವಾಸ್ನಿ ಓಣ್ಯಾಗೆಲ್ಲ ಹಬ್ಬಾದು. ಅಂತ ಅಡಿಗಿ ಮಾಡಿ ತಿಂದ ನನಗ ಹಿಡಿಯೋಟು ಖಂಡ ತಂದು ಖಾರ-ಉಪ್ಪಾಕಿ ಕುದಿಸಿಕೊಡು ಅಂದ್ರ ಹೊಟ್ಟಿ ತೊಳಿಸಿ ಬಂದಾಂಗಾಗಿ ಖಂಡದ ಮರಿಯಾದಿ ತೆಗ್ಯಾಕ ಹುಟ್ಯಾವ ಇವು ಅನುಸೋದು.

ಹೋಗಿ ಅಪ್ಪಗ ಹೇಳಿದ್ರ ಏನರ ಕೊಟ್ಟಾನು ಆದರೆ ಕೆಟ್ಟ ಸ್ವಾಭ್ಮಾನದ ಹೆಣ್ಮಗ್ಳು. ಉಪಾಸರ ಬಿದ್ದಾಳು ಕೈಚಾಚ ಪೈಕೆಲ್ಲ.

“ಇದೇಟು ದಿನದ್ದಾ ಕೋಡಿ ನಮ್ಮ ಅತ್ತೆಮ್ಮ ಇರಾತನ ನಾನೇಟ ತ್ರಾಸು ಪಟ್ಟೀನಿ ಗೊತ್ತೈತೇನು ನಿನಗ?
ಇನ್ನಾ ನಿನಗ ಅತ್ತಿಲ್ಲ,ಮಾವಿಲ್ಲ ಕಾಲ ಇಂಗಾ ಇರಾದಿಲ್ಲ ನಿನ ಮಗಾ ಶಾಣ ಬಾಳ ಹುಶಾರಾನ ದೊಡ್ಡಾತ್ನ ಹೆಸರಿಟ್ಟಿದ್ದಿ ಚಂದ ಓದಿ ನೌಕ್ರೀ ತಗಾಂತಾನ ನೋಡವಂತೀಗಿ,ಅವಾಗ ನೀ ಗೌಡಸಾನ್ಯಾಗಿ ನಮ್ಮನ್ನ ಮಾತಾಡ್ಸಾಕಿಲ್ಲ”ಅಂತ ನಗೀ ಚಾಟೀಗಿ ಮಾಡ್ತಿದ್ದೆ.

“ಯಕ್ಕಾ,ನಿನ್ನ ಬಾಯಾರಿಕೀಲಿ ಹಂಗಾರ ಆಗ್ಲೋ ಯವ್ವಾ” ಅಂತೇಳಿ ಸ್ವಾರೀಲಿ ಉಳಿದ ಖಂಡದ ಸಾರು ಗಂಗಾಳಕ ಹಾಕ್ಯಾಂಡು ಒಣರೊಟ್ಟಿ ಮುರಕಂಡು ತಿನ್ನಾಕಿ. ಆಕಿ ಉಟಗಂಡು ಸೀರಿ ನೋಡಿ ಕಳ್ಳು ಚುರ್ರ್ ಅಂಬೋವು ಎಲ್ಡ್ ಮೂರು ಕಡೀ ಹರದು ದಪ್ಪನ ದಾರದ್ಲ್ಯ ಹೊಲಕ್ಕಂಡಾಳ. ಬಣ್ಣ ಚೂರು ಕರ್ರಗ ಇದ್ರು ಉದ್ದನ ಮೂಗು, ಗಣಮಕ್ಳಂಗ ಎತ್ರ ಪಸ್ಟಿಗಿ ಬಂದಾಗ ಕಣ್ಣು ಬಿಡಂಗ ಇದ್ಲು ಈಗೀಗ ಆಕೀನ ನೋಡಿದರ ಪಾಪ ಅನಸ್ತದ.

ಇವತ್ತು ಇನ್ನಾ ಅಂಗಳದಾಗ ಕಾಲಿಟ್ಟಿಲ್ಲ ಆಗಲೆ ಮಲ್ಲಮ್ಮನ ಮಗಾ ಶಾಣ ಓಡಿಕ್ಯಾಂತ
“ದೊಡ್ಡಮ್ಮಂಗೆ ಐದ್ರುಪಾಯ್ದು ಹಾಕು” ಅಂತ ಕೈಯಾಗ ಹತ್ರುಪಾಯ್ದು ಹೊಸ ನೋಟು ಇಡಕಂಡು ಬಂತು. ಯಪ್ಪ ಅಕ್ಕೀ, ಬ್ಯಾಳಿ ತರಾಕ ಐದ್ರುಪಾಯಿ ಇಲ್ಲ ಅಂತ ಬಡ್ಕಂತಾಳ ಮಲ್ಲಮ್ಮ ಇದೆಲ್ಲಿದು ಅಂತನಿಸಿ ಕೂಸಿಗಿ ಕುಂದ್ರೆಸಿಗೆಂಡು ಕೇಳಿದ್ರ “ಐನೇರು ಅಮ್ರಪ್ಪ ಕೊಟ್ನಂಗೇ ನಾ ಬ್ಯಾಡ ಅಂದ್ರ ಸಮೇತಿಗೀ” ಅಂದಿದ್ದು ಕೇಳಿ ಎದ್ಯಾಗ ಮುಳ್ಳು ಚುಚ್ಚಿದಂಗಾತಿ. ಬಾಳ ಮಂದಿ ಮಾತಾಡಿಕೆಂತಿದ್ರು ಮಲ್ಲಮ್ಮ ಆತನ ಕುಡ್ಯಾಳ ಅಂತ ಆದ್ರ ತಲೀಗಿ ಹಾಕ್ಯಂಡಿದ್ದಿಲ್ಲ ಅಂತ ಹೆಂಗ್ಸೂ ಅಲ್ಲ ಅನಕಂಡಿದ್ಯಾ ಏನೋ ಯಾವ ಹುತ್ಯ್ನಾಗ ಯಾವ ಹಾವಿರತಾವ ಯಾರಿಗೊತ್ತು.

ಐದ್ರುಪಾಯೋಷ್ಟು ಖಂಡ ಹಾಕಿದ್ರೂ ರೊಕ್ಕ ಇಸಗೊಳ್ಳಾಕ ಮನಸು ಬರಲಿಲ್ಲ. ಹಂಗಾ ನಿದಾನಕ್ಕ ಪುಟ್ಟೀ ಹೊತಗಂಡು ಹೆಜ್ಜಿ ಹಾಕಿದ್ರೂ ದಾರಿ ಸಾಗವಲ್ತು ಮನೀಗಿ ಬರಾತನ ಅದಾ ಹತ್ತುರುಪಾಯಿ ನೋಟು ಕಣ್ಣುಮುಂದ ಬರಾಕತ್ತಿತ್ತು. ಈ ಬಡತನಾ ಅನೋದು ಏನರ ಮಾಡಸ್ತದಲ ಅನುಸ್ತು.

ರಾತ್ರೀ ಕುಡುದ ಬಂದಾ ಅಕ್ಬರ ಮನಿ ಮುಂದಾ ನಿಂತು ಒದ್ರಾಕತ್ತಿದ್ದ.
“ನೀ ಖಂಡಾ ಹೊತಗಂಡು ಮನಿ ಮನಿ ತಿರಿಗಿ ನಮ್ಮನೀಗಿ ಮರಿಯಾದಿ ಇಲ್ದಾಂಗ ಮಾಡಿದಿ ನೀ ಹಿಂಗಾ ಹೊಂಟ್ರಾ ನನಗ ನಾಳಿ ಯಣ್ಣು ಯಾರ ಕೊಡತಾರ ಇವತ್ತು ನಾ ಹೇಳಿದ್ದ ಆಗಬೇಕು ಇಲ್ಲ ಇವತ್ತಿಗಿ ನಿನಗ ನನಗ ರುಣ ಮುಗೀತಿ ನಾ ಬೆಂಗ್ಳೂರಿಗಿ ಹೋತಿನಿ ಆಮ್ಯಾಲ ಏನ ಹೊಯ್ಕ್ಯಂಡ್ರು ಬರಂಗಿಲ್ನೋಡು”

ಆವಾಗಿಂದ ಅದಾ ಮಾತಾ ಕೇಳಿ ಕೇಳಿ ತಲೀ ಚಿಟ್ಟಿಡದೈತಿ.
ಪುಟ್ಟಿ, ಸ್ವಾರೀ,
ಚಮಚಾ ತೊಳ್ಕಾಂತ ಕುಂತ್ರಾ ಅಲ್ಲಿಗಿ ಬಂದು ಒದ್ಯರಾಡತಾನ.

“ಲೇ ಅಕ್ಬರಾ ಈ ಚಮಚಾನೋಡು ಹೆಂಗಾ ಸವ್ದಾದ ಹಂಗಾ ನಿಮ್ಮನ್ನ ಬದುಕುಸಾಕ ನನ್ನ ಜೀವಾನು ಸೌದಾದೋ, ದಿನಕ್ಕೇಟು ಸಲ ನಾ ಸ್ವಾರಾಗ ಚಮಿಚೀ ಆಡಿಸಿರಬೇಕು ಈ ಮಟಾ ಸವ್ಯಾಕ, ನನಗ ಮನೀ ಮುಂದಾ ಹೋಟ್ಲಾ ಮಾಡಿ ಊರ ಗಣಮುಕ್ಳು ಬಂದು ಕುಂತು ಬೀಡಿ ಸೇದಿಕ್ಯಾಂತ, ಸರಾಯಿ ಕುಡಕಾಂತ ಮಜಾ ಮಾಡೋರಿಗಿ ಖಂಡಾ ಮಾಡ್ಯಾಕಾಕ ಮನಸಿಲ್ಲೋ ನನ್ನಂಗ ನೊಂದ ನಾಕು ಜೀವಕ ಉಣ್ಣಾಕ ಕೊಡಾಕ ಈ ಕೆಲಸ ಮಾಡತೀನಿ ಇರಾಂಗಿದ್ರ ಇರು ಇಲ್ಲ ಹಾಳಾಗೋಗು”

ಜೀವ ರೋಸಿ ಹೋಗಿತ್ತು ಎಷ್ಟಂತ ತಡಕಲಿ ಗಂಡಂಬಾವ ಇರಾತನ ಜೀವ ತಿಂದು ಜೀರಿಗಿ ಹರದ ಎಗರಾಡಿ ಏನೂ ಕಾಣಲಾರದ್ಹಂಗ ಹೋತಿ ಇವ್ನಾರ ಚೊಲಾತನಂದ್ರ ಇವನ ತಲ್ಯಾಗಿನೂ ತಂದೀದ ಸುಳಿ ಐತಿ ಅನಿಸ್ತು.ಆದ್ರೂ ಹಡದ ಕೂಸು ಬಾಗಿಲಿನ ಅಗಳಿ ಹಾಕದ ಮಕ್ಕಂಡೆ.

ರಾತ್ರೀ ಯಾವತ್ಯ್ನಾಗರ ಬಂದು ಉಂಡು ಮಕ್ಕಂತಾದ ಕೋಡಿ ಅನಕಾಂತ.

ಕೋಳಿ ಗೂಡಿನ್ಯಾಗಿನ ಕೋಳಿ ಕೂಗುವತ್ತಿಗೆ ಎದ್ದು ಕಸ-ಮುಸುರಿ ಮಾಡಿಕ್ಯಾಂತ ಹುಡುಕ್ಯಾಡಿದರೆ ಅಕ್ಬರ ಕಾಣವಲ್ಲ ಆಟೋತ್ತಿಗೆ ಮನೀ ಬತ್ಯಾಕಲ ಅಬ್ದುಲ್ಲಸಾಬನ ಮಗ ಅಮೀರ ಬಂದು,
“ಯಾಕಂಗೇ ಏನರ ಬೈಯ್ದೇನು ಭಯ್ಯಾಗ ಏಟು ಹೇಳಿದ್ರೂ ಕೇಳ್ದಂಗ ಗೌಡ್ರ ಲಾರಿವೊಳಗ ಬೆಂಗ್ಳೂರ್ ಹೊಗ್ಬುಟ್ಟ ಅವ ಏನ್ ಮತ್ಯಾ ಬರಾಂಗಿಲ್ಲ ಅನಿಸ್ತದಾ”

ಎದೀ ಝಲ್ಲಂತೂ ಇದ್ದೊಬ್ಬ ಮಗ ಸುಮ್ಗ ಆಡಾಕ ಅಂತಾದ ಇದೆಲ್ಲಿ ನನ್ನ ಬಿಟ್ಟೋದೀತು ಕೋಡಿ ಅನಕೊಂಡ್ರ ಖರೇವಂದ್ರ ಬಿಟ್ಟೋಗ್ಯಾನಲಪ! ಕೈಕಾಲ ಉಸೂರಂದ್ವು.

ತಿಕ್ಕ ಮುಸುರೀನ ಅರ್ದಕ್ಕ ಬಿಟ್ಟು ಒಂದೆಲ್ಡು ಕಾಳು ಚಾವಾರ ಮಾಡಿಕೆಂಡು ಕುಡುದ್ರಾತು ಅಂತ ಬೋಗಾಣ್ಯಾಗ ಸಕ್ರೀ, ಚಾಪುಡಿ ಹಾಕ್ಯಾಂಡು ಕುಂತ್ರ ಕುರುಬರು ನಿಂಗಪ್ಪ ಮತ್ಯೊಂದಿಬ್ರು ಓಡಿ ಹೋಗಾದ ನೋಡಿ
‘ಏನ ಆಗ್ಯಾದವ ಇವತ್ಯಾಕ ದಿನಾನ ಚೊಲ ಇಲ್ಲ ಯಾಕ ಹಿಂಗ್ ಓಡ್ತಾವ ಖಬರು ತಪ್ಪಿ” ಅನಿಸಿ ಹೊರಗ ಬಂದು

“ಯಾಕ್ಯಣ್ಣ ಹಿಂಗ್ ವಂಟೀರಿ” ಅಂದ್ರ ದಮ್ಮತ್ತಿ ಉಸುರು ಬಿಡ್ತಿದ್ದ ನಿಂಗಪಣ್ಣ
“ಮಕ್ತುಂಬೆಕ್ಕ ಮಾನಯ್ನ ಹೇಣ್ತೀ ಪೂಜಾರೇರ ಮಲ್ಲಮ್ಮ ಎಣ್ಣಿ ಕುಡ್ದಾಳಂತವೋ” ಅಂತೇಳಿಕ್ಯಾಂತ ಹೋಡವತ್ತಿಗೀ ‘ಹೇ ಇರಲಿಕ್ಕಿಲ್ಲ ಆಕಿಯಾಕ ಹಂಗ್ ಮಾಡತಾಳ ನಿನ್ನೆರ ಆಕಿ ಗುಡಿಸಲಕ ಹೋಗಿ ಬಂದೀನಿ’ ಅಂತ ಸಮಧಾನ ಹೇಳ್ಕೊಂಡ್ರೂ ಜೀವ ತಡೀಲಿಲ್ಲ.

ಅವಸರಬೌಸರಲೀ ಎದ್ದು ಓಡಿ ಬಂದರಾ ಕಾಲೇವು ದಾಟಾತಿಗಿ ಗುಂವನಾ ಗುಂಪು ಗೂಡಿದ ಮಂದೀ ತಲೀಗಿ ಒಂದು ಮಾತಾಡಿಕ್ಯಾಂತ ಟ್ರಾಕ್ಟ್ರ ಸುತ್ತ ಸೇರಿದ್ವು.ನಾಕೈದು ಮಂದಿ ಹೊಯ್ಕೇಳದು ಬಡಕೊಳ್ಳೋದು ಮಾಡತಿದ್ವು. ಆಗಲೇ ಕೈಕಾಲು ಸೆಟೆದಿದ್ದ ಮಲ್ಲಮ್ಮನ ಟ್ರಾಕ್ಟರಾಗ ಚೂರು ಹುಲ್ಲು ಹಾಕಿ ಅದರ ಮ್ಯಾಲ ಹಾಕಿ ಸಿರವಾರಕ ಹೊಯ್ಯಮು, ಇಲ್ದ ಕೌತಾಳಕ ಹೊಯ್ಯಮು ಅಂತ ಮಾತಾಡಿಕೆಂತಿದ್ರು.

ಆಕಿಗಂಡ ಸುತ್ಲೂ ಕಾಣ್ಸಿಲಿಲ್ಲ ಎಲ್ಲೀ ದುಡ್ಯಾಕ ಹೋಗೈತೇನು ಪಾಪ ಅನ್ನೋವತ್ತೀಗಿ ನಿನ್ನೀ ನನ ಕೈಯಿಂದ ಹತ್ರುಪಾಯಿ ನೋಟು ಹಿಡ್ದು ಖಂಡದ ಸಾರು ಹಾಕಿಸಿಗೆಂಡಿದ್ದ ಮಲ್ಲಮ್ಮನ ಮಗ ಶಾಣ ಅಳ್ಕೊಂತ ಮೂಲ್ಯಾಗ ನಿಂತಿದ್ದು ನೋಡಿ ಕಳ್ಳು ಚುರ್ರ್ ಅಂದು ಕಣ್ಣಾಗ ನೀರಾ ಬಂದ್ವು ಹೋಗಿ ತಲೀಮ್ಯಾಲಿ ಕೈಯಿಟ್ರ “ದೊಡ್ಡಮ್ಮಂಗೇ ನಮ್ಮಮ್ಮ ಯಾಕ ಹಂಗ ಮಾಡಕತ್ಯಾಳ ಹೇಳಂಗೇ ನಾ ಹೋತೀನಿ ಸಿರವಾರಕ, ಬುಟ್ಟೋತರ ಹೇಳಂಗೇ” ಅಂತೇಳಿ ಬೋರಾಡಿ ಅಳಾಕತ್ತಿತಿ.

‘ಜೀವ ಹೊಯ್ತೀ ಜೀವ ಹೋಯ್ತೀ’ ಜಲ್ದೀ ನಡ್ರೀ ಅನ್ನೋಟಿಗಿ ಟ್ರಾಕ್ಟರ್ ಚಾಲು ಮಾಡಿಕೆಂಡು ಹಂಗೇ ಹೊಂಟ್ರು. ಅಳಾ ಕೂಸುನ ಅಲ್ಲೇ ಬಿಡಾಕ ಮನಸು ಬರವಲ್ತು ಮುಖ ನೋಡಿದ್ರ ಅಕ್ಬರ್ರಾನ ಕಂಡಂಗಾತು.ಹಂಗೇ ಕೈ ಹಿಡ್ದು ಮನೀ ಕಡೆ ನಡೆದೆ..

ಅವನ ಕಣ್ಣಾಗ ನೂರು ಪ್ರಶ್ನಿಗಳಿದ್ವು ನನ್ನಂತ್ಯಾಕ ತಾಯ್ಗರಳು ಬಿಟ್ರಾ ಬ್ಯಾರೇದೇನು ಇರಲಿಲ್ಲ…

 

(ಕೃತಿ: ಧಣೇರ ಬಾವಿ (ಕಥಾ ಸಂಕಲನ), ಲೇಖಕರು: ಶರಣಬಸವ ಕೆ. ಗುಡದಿನ್ನಿ, ಪ್ರಕಾಶಕರು: ಸುಗಮ ಪುಸ್ತಕ, ಹಲಸಂಗಿ ಬೆಲೆ: 90/-)