ಬಿಸಿಲು ಪೇಟೆಯ ವ್ಯಾಪಾರ

ಬಿಸಿಲು ಗರಿಗರಿಯಾಗಿ ಬಿದ್ದುಕೊಂಡಿದೆ.
ಉದ್ದೇಶವೇ ಇಲ್ಲದೆ ಹರಡಿಕೊಂಡಿರುವ
ಇದ್ದಬಿದ್ದ ವಸ್ತುಗಳೆಲ್ಲ ಹಪ್ಪಳಗಳಾಗುವುದಿಲ್ಲ.

ಪೇಟೆಬೀದಿಯಲ್ಲಿ
ವಕ್ರವಕ್ರವಾಗಿ ಬೀಳುವ ಹೆಜ್ಜೆಗುರುತುಗಳಿಗೆ
ಸರಿಯಾಗಿ ಮೂಡಲೂ ಸಮಯವಿಲ್ಲ.

ಏನೇನು ವಹಿವಾಟೋ?
ಹಣೆ ಕುತ್ತಿಗೆ ಕಂಕುಳು ಎದೆ
ಎಲ್ಲೆಂದರಲ್ಲಿ ಹೊರಬರುವ
ಉಪ್ಪುನೀರಿನ ಸಾಂದ್ರತೆಯೂ
ಜನರ ದಟ್ಟಣೆಯೂ
ವಿಮುಖವಾಗದ್ದು ಸಂತೆಯಲ್ಲೊಂದೇ!

ಸಾಮಾನುಗಳೆಲ್ಲ ಬಿಕರಿಯಾಗುವವು;
ಸಂತೆಯಲ್ಲಿ ಗುಡ್ಡೆ ಹಾಕಿದ್ದು
ಹತ್ತೂರಿಗೆ ಹರಿದು ಹಂಚಿಹೋಗಿದೆ
ಬಿಸಿಲಿಗೆ ಬಾಡಿದ್ದನ್ನೂ
ಬಿಡುವುದಿಲ್ಲ ಜನ
ಎಲ್ಲಾ ಕೊಳ್ಳುತ್ತಾರೆ, ಚೌಕಾಸಿ ಮಾಡಿಯಾದರೂ!
ಹಸಿವು ಕಾದಿರುತ್ತದೆ ಹೊಟ್ಟೆಯಲ್ಲಿ
ಬಡತನ ಮನೆಯಲ್ಲಿ!

ನೂಕುನುಗ್ಗಲಿನಲ್ಲೂ ಗದ್ದಲದ್ದೇ ಸದ್ದು
ಮಾತಿಗಿಳಿಯುತ್ತಾರೆ ಜನ
ಸಿಕ್ಕರೆ ಬಂಧುಗಳೋ, ಸ್ನೇಹಿತರೋ;
ಅಪರಿಚಿತರೂ ಪರಿಚಿತರಾಗುವುದೂ ಅಲ್ಲೇ.

ಬಿಸಿಲು ಹತ್ತಿ ಇಳಿಯುವವರೆಗೂ
ದಿನದ ವ್ಯಾಪಾರ ನಡೆಯುತ್ತದೆ.
ಮಾರಿದ್ದೆಷ್ಟೋ? ಕೊಂಡದ್ದೆಷ್ಟೋ?
ಲೆಕ್ಕ ಹಾಕುವವರ್ಯಾರು
ಜೀವನದ ವ್ಯಾಪಾರದಲ್ಲಿ?!

ಬಲಿತಕಾಯಗಳು

ಸಾವು ಗಂಟುಬಿದ್ದವರು
ಮುಖವನ್ನು ಗಂಟಿಕ್ಕಿ ಕುಳಿತಿದ್ದಾರೆ
ಈಗಲೋ ಆಗಲೋ ಎನ್ನುವಂತೆ
ಪರಿವೆಯೇ ಇಲ್ಲದ ಸಮಯದ ಮುಂದೆ
ಕೈಕಟ್ಟಿ, ತಲೆ ತಗ್ಗಿಸಿ ನಿಂತಿದ್ದಾರೆ

ಚರ್ಮದ ಸುಕ್ಕಿನೊಳಗೆ
ಜೀವನವ ದಾಟುವ ಗೆರೆಯನ್ನು
ಹುಡುಕುತ್ತ ಕುಳಿತಿದ್ದಾರೆ
ಇಲ್ಲೋ ಅಲ್ಲೋ ಎನ್ನುವಂತೆ
ಪರಿಧಿಯೇ ಇಲ್ಲದ ಸಾವಿನ ಗಡಿಯ
ಬುಡದಲ್ಲೇ ಕಾಲೊಂದನ್ನೆತ್ತಿ ನಿಂತಿದ್ದಾರೆ

ಮುದ್ದು ಮಾಡಿದ ಮುಖಗಳನ್ನು
ನೆನೆದು- ಮತ್ತೆ ಮರೆಯುತ್ತ ಸಾಗಿದ್ದಾರೆ
ಇವರೋ ಅವರೋ ಎನ್ನುವಂತೆ
ಅಳುವನ್ನೂ ಮೀರಿ ಮುಂದುವರಿಯಲು ತಯಾರಾಗಿ.

 

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ ಅನುಭವ.
ಈಗ  ಗೃಹಿಣಿಯಾಗಿರುವ ಶ್ರೀಕಲಾ ಅವರಿಗೆ ಬ್ಲಾಗ್ ಬರೆಯುವುದು  ಹವ್ಯಾಸ

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)